ಅನು: ಶಿವಸುಂದರ್
ಬಂಡವಾಳ, ಸಂಪುಟ-೧ ಅನ್ನು ಒಳಗೊಂಡಂತೆ ಮಾರ್ಕ್ಸರು ಬರೆದ ಇತರ ಹಲವಾರು ಬರಹಗಳಲ್ಲಿ ಇರುವ ಯಾವ ಅಂಶಗಳು ಜಾಗತಿಕ ಬಂಡವಾಳಶಾಹಿ ವ್ಯವಸ್ಥೆಯೊಳಗೆ ಸೆಳೆಯಲ್ಪಟ್ಟಿರುವ ಒಂದು ಶೋಷಿತ ದೇಶದಲ್ಲಿ ನಡೆಯುವ ಬಂಡವಾಳಶಾಹಿ ಪ್ರಕ್ರಿಯೆಯ ಮೇಲೆ ಬೆಳಕು ಚೆಲ್ಲಲು ನಮಗೆ ಸಹಾಯ ಮಾಡುತ್ತದೆ?
ಇಪಿಡಬ್ಲ್ಯೂ ಸಂಪಾದಕೀಯ ತಂಡದ ಸದಸ್ಯರಾದ ಬೆರ್ನಾರ್ಡ್ ಡೆಮೆಲ್ಲೋ ಬರೆಯುತ್ತಾರೆ:
ಇದೇ ಸೆಪ್ಟೆಂಬರ್ ೨೦೧೭ಕ್ಕೆ ಕಾರ್ಲ್ ಮಾರ್ಕ್ಸರು ಬರೆದ ದಾಸ್ ಕ್ಯಾಪಿಟಲ್ (ಬಂಡವಾಳ) ಕೃತಿಯ (ಜರ್ಮನಿಯ ಹ್ಯಾಂಬರ್ಗ್ನಲ್ಲಿ) ಮೊಟ್ಟ ಮೊದಲ ಪ್ರಕಟಣೆಗೆ ೧೫೦ ವರ್ಷವಾಗುತ್ತದೆ. (ಬಂಡವಾಳ- ಸಂಪುಟ ೧ರ ಇಂಗ್ಲೀಷ್ ಅನುವಾದ ಮೊದಲು ಪ್ರಕಟಗೊಂಡದ್ದು ೧೮೮೭ರಲ್ಲಿ. ಇದರ ರಷಿಯನ್ ಆವೃತ್ತಿ ೧೮೭೨ರಲ್ಲಿ ಪ್ರಕಟವಾಯಿತು.) ೧೮೬೭ರ ಸೆಪ್ಟೆಂಬರ್ನಲ್ಲಿ ಪ್ರಕಟವಾದ ಈ ಕೃತಿಯು ರಾಜಕೀಯ ಆರ್ಥಿಕತೆ ಮತ್ತು ಸಮಾಜ ವಿಜ್ನಾಗಳ ಚಿಂತನೆಯಲ್ಲೇ ಮಹತ್ತರ ಬದಲಾವಣೆಯನ್ನು ತಂದಿತು. ಏಕೆಂದರೆ ಜಾಗತಿಕ ಬಂಡವಾಳಶಾಹಿ ವ್ಯವಸ್ಥೆಯಲ್ಲಿ ಶೋಷಕ ದೇಶಗಳಲ್ಲಿನ ಬಂಡವಾಳಶಾಹಿ ಬೆಳವಣಿಗೆಯ ಪ್ರಕ್ರಿಯೆಯನ್ನು ಅರ್ಥಮಾಡಿಕೊಳ್ಳುವ ನಿಟ್ಟಿನಲ್ಲಿ ಪ್ರಪ್ರಥಮ ಬಾರಿಗೆ ಅತ್ಯಂತ ಯಶಸ್ವಿಯಾಗಿ ಗತಿತಾರ್ಕಿಕ ಭೌತಿಕ ವಿಧಾನವನ್ನು ಆ ಕೃತಿಯಲ್ಲಿ ಅನ್ವಯಿಸಲಾಗಿತ್ತು. ಆವರೆಗೆ ಅಸ್ಥಿತ್ವದಲ್ಲಿದ್ದ ಶಾಸ್ತ್ರೀಯ ರಾಜಕೀಯ-ಆರ್ಥಿಕತೆಯ (ಪೊಲಿಟಿಕಲ್ ಎಕಾನಮಿ) ಜ್ನಾನ ಶಿಸ್ತಿಗೆ ತನ್ನ ಗತಿತಾರ್ಕಿಕ ಭೌತಿಕ ವಿಧಾನವನ್ನು ಅನ್ವಯಿಸುವ ಮೂಲಕ ಮಾರ್ಕ್ಸ್ರವರು ರಾಜಕೀಯ ಅರ್ಥಶಾಸ್ತ್ರವನ್ನು ಅಸ್ಥಿತ್ವದಲ್ಲಿದ್ದ ಶಾಸ್ತ್ರೀಯ ಆರ್ಥಿಕ ತಾತ್ವಿಕತೆಯ ಕಟು ವಿಮರ್ಶಕನಂತೆ ಪರಿವರ್ತಿಸಿದರು. ’ಬಂಡವಾಳ’
ಕೃತಿಯಲ್ಲಿ ಒಂದು ಇತಿಹಾಸವಿದೆ ಮತ್ತು ಒಂದು ಸಿದ್ಧಾಂತವಿದೆ. ಒಂದು ಅಮೂರ್ತವಾದದ್ದು ಮತ್ತೊಂದು ಮೂರ್ತವಾದದ್ದು. ಹಾಗೂ ಆದ್ದರಿಂದಲೇ ಅವೆರಡರ ನಡುವೆ ಅನಿವಾರ್ಯ ಸಂಘರ್ಷವೂ ಕಾಣುತ್ತದೆ. ಇದರ ಬಗ್ಗೆ ಸಂಪೂರ್ಣ ಅರಿವಿದ್ದ ಮಾರ್ಕ್ಸ್ ಅವರು ಅವುಗಳಿಗೆ ನಿಡಬೇಕಾದ ಮಹತ್ವವನ್ನು ಕೊಡುತ್ತಲೇ ಒಂದರ ಬಳಿಕ ಮತ್ತೊಂದರ ಮೇಲೆ ಸತತ ಒತ್ತನ್ನು ನೀಡಿದ್ದಾರೆ.
ಕಾಲನುಕ್ರಮದಲ್ಲಿ ’ಬಂಡವಾಳ’
ಕೃತಿಯಲ್ಲಿ ಮೂರು ಸಂಪುಟಗಳು ಸೇರಿಕೊಂಡವು. ಮೊದಲನೆಯದ್ದು ೧೮೬೭ರಲ್ಲಿ ಪ್ರಕಟಗೊಂಡು ಅದರ ಪರಿಷ್ಕೃತ ಎರಡನೇ ಆವೃತ್ತಿ ೧೮೭೨ರಲ್ಲಿ ಪ್ರಕಟವಾಯಿತು; ’ಬಂಡವಾಳ’ದ ಎರಡನೇ ಮತ್ತು ಮೂರನೇ ಸಂಪುಟವನ್ನು ಮಾರ್ಕ್ಸ್ ಅವರ ನಿಧನಾನಂತರ ಫ್ರೆಡರಿಕ್ ಎಂಗೆಲ್ಸ್ ಅವರು ಅನುಕ್ರಮವಾಗಿ ೧೮೮೫ ಮತ್ತು ೧೮೯೪ರಲ್ಲಿ ಪ್ರಕಟಿಸಿದರು. ’ಬಂಡವಾಳ’
ಕೃತಿಯಲ್ಲಿ ಮಾರ್ಕ್ಸ್ ಅವರು ಮಾಡಿರುವ ಬಂಡವಾಳಶಾಹಿ ವ್ಯವಸ್ಥೆಯ ವಿಶ್ಲೇಷಣೆಯು ಸಾರಾಂಶದಲ್ಲಿ ಅದು ಹೇಗೆ ಇತಿಹಾಸದಲ್ಲಿ ಒಂದು ಐತಿಹಾಸಿಕ ವ್ಯವಸ್ಥೆಯಾಗಿ ಬೆಳೆದುಬಂದಿತು ಎಂಬುದನ್ನು ವಿವರಿಸುತ್ತದೆ- ಅದರ ಹುಟ್ಟು, ಅದರ ಕಾರ್ಯ ಪದ್ಧತಿ, ಮತ್ತು ಅದರ ಗಮನದ ದಿಕ್ಕು ಇತ್ಯಾದಿ. ಮಾರ್ಕ್ಸ್ ಅವರು ಬಂಡವಾಳಶಾಹಿಯ ವಿಶ್ಲೇಷಣೆಯಲ್ಲಿ ಮೌಲ್ಯ, ಹೆಚ್ಚುವರಿ ಮೌಲ್ಯ, ಶೋಷಣೆಯದ ದರ (ಅಥವಾ ಹೆಚ್ಚುವರಿ ಮೌಲ್ಯದ ದರ), ಬಂಡವಾಳದ ಸಾವಯವ ಅಂಶಗಳು, ಲಾಭದ ದರ, ಸಾಪೇಕ್ಷ ಹೆಚ್ಚುವರಿ ಜನಸಂಖ್ಯೆ (ಅಥವಾ ನಿರುದ್ಯೋಗಿಗಳ ಮೀಸಲು ಸೇನೆ), ಇತ್ಯಾದಿ ಪರಿಕಲ್ಪನಾತ್ಮಕ ಪರಿಕರಗಳನ್ನು ಬಳಸುವ ಮೂಲಕ ಬಂಡವಾಳಶಾಹಿ ವ್ಯವಸ್ಥೆಯಲ್ಲೇ ಅಡಕವಾಗಿರುವ ಹಲವು ವ್ಯವಸ್ಥಾಗತ ವೈರುಧ್ಯಗಳನ್ನು ಪತ್ತೆ ಹಚ್ಚಿದರು. ಬಂಡವಾಳಶಾಹಿ ವ್ಯವಸ್ಥೆಯೊಳಗಿರುವ ಇತಿಹಾಸದ ಶಕ್ತಿಗಳು ಬದಲಾವಣೆಯ ಕಡೆಗೆ ವ್ಯವಸ್ಥೆಯನ್ನು ತಳ್ಳುತ್ತಿದ್ದರೆ ವ್ಯವಸ್ಥೆಯೊಳಗಿನ ಶಕ್ತಿಗಳು ಯಥಾಸ್ಥಿತಿಯನ್ನು ಮತ್ತು ಸಮತೋಲನವನ್ನೂ ಕಾಪಾಡಿಕೊಳ್ಳಲು ಪ್ರಯತ್ನಿಸುತ್ತಿರುತ್ತವೆ. ಮತ್ತು ಅವೆರೆಡರ ನಡುವೆ ಬಿಗುವಾದ ಸಂಘರ್ಷವಿರುತ್ತದೆ. ಈ ಸೈದ್ಧಾಂತಿಕ ಪರಿಕಲ್ಪನೆಯನ್ನು ಬಳಸಿಕೊಂಡು ಮಾರ್ಕ್ಸ್ ಅವರು ಬಂಡವಾಳದ ಒಡೆತನ ಹೊಂದಿರುವ/ನಿಯಂತ್ರಿಸುವ ವರ್ಗಗಳು ಕಾರ್ಮಿಕರನ್ನು ಹೇಗೆ ಶೋಷಿಸುತ್ತಾರೆಂದು ಅರ್ಥಮಾಡಿಕೊಳ್ಳಲು ಮೌಲ್ಯದ ಹಿಂದಿನ ಶ್ರಮದ ಸಿದ್ಧಾಂತವನ್ನು ರೂಪಿಸಿದರು ಮತ್ತು ಆ ಮೂಲಕ ಹೆಚ್ಚುವರಿ ಮೌಲ್ಯವು ಸೃಷ್ಟಿಯಾಗುವ ಮತ್ತು ಅದನ್ನು ಹೆಚ್ಚೆಚ್ಚು ಮಾಡಲಾಗುವ ವಿಧಾನಗಳನ್ನು ಬಿಚ್ಚಿಟ್ಟರು.
ಹಾಗೆಯೇ ಬಂಡವಾಳವು ಕ್ರೂಢೀಕರಣಗೊಳ್ಳುವ ಪ್ರಕ್ರಿಯೆಯ ಬಗ್ಗೆ ಇಂಗ್ಲೆಂಡಿನ ಶಾಸ್ತ್ರೀಯ ಅರ್ಥಶಾಸ್ತ್ರದ ವಿದ್ವಾಂಸರಲ್ಲೇ ಶ್ರೇಷ್ಠರಾದ ಡೇವಿಡ್ ರಿಕಾರ್ಡೋಗಿಂತ ಸಂಪೂರ್ಣವಾಗಿ ಭಿನ್ನವಾದ ನಿಲುವನ್ನು ತಾಳಿದರು. ಇಲ್ಲಿ ಅವರು ಕಾಲಾನುಕ್ರಮವಾದ ಆರ್ಥಿಕ ಚಕ್ರಗಳಿಗೆ ಮತ್ತು ಬಿಕ್ಕಟ್ಟುಗಳಿಗೆ ಕಾರಣವಾಗುವ ಹಾಗೂ ಲಾಭದ ದರಗಳು ಕುಸಿಯುವ ಧೋರಣೆಗಳಿಗೆ ಮತ್ತು ಬಳಕೆ ಶಕ್ತಿಗಿಂದ ಹೆಚ್ಚಾಗಿ ಉತ್ಪಾದಕಾ ಶಕ್ತಿಗಳು ಹೆಚ್ಚಾಗುವಂಥ ಧೋರಣೆಗಳಿಗೆ ಕಾರಣವಾಗುವ ಶಕ್ತಿಗಳನ್ನು ಬಯಲುಗೊಳಿಸಿದರು. ಅದೇ ಸಮಯದಲ್ಲಿ ಬಂಡವಾಳದ ಸಾಂದ್ರೀಕರಣ ಮತ್ತು ಕೇಂದ್ರೀಕರಣಕ್ಕೆ ಕಾರಣವಾಗುವ ಮತ್ತು ಆ ಮೂಲಕ ಇತರ ಕಂಪನಿಗಳ ಕಬಳಿಕೆಗೆ ಮತ್ತು ವಿಲೀನಗಳಿಗೆ ಕಾರಣವಾಗುವ ಪ್ರಕ್ರಿಯೆಗಳ ಮೇಲೂ ಬೆಳಕು ಚೆಲ್ಲಿದರು. ಮಾರ್ಕ್ಸರ ಬಂಡವಾಳಶಾಹಿ ಚಲನಾಕ್ರಮದಲ್ಲಿ ಉತ್ಪಾದನೆ ಹಾಗೂ ನಗದು ಮತ್ತು ಹಣಕಾಸು ವ್ಯವಸ್ಥೆಗಳೆರಡೂ ಕೇಂದ್ರೀಯ ಅಂಶಗಳಾಗಿದ್ದವು. ಹಾಗೂ ಅಷ್ಟೇ ಮಟ್ಟಿಗೆ ಯಾವುದನ್ನೂ ಮಾರ್ಕ್ಸ್ ಅವರು ಕ್ರಾಂತಿಕಾರಿ ಕಾರ್ಮಿಕ ವರ್ಗವೆಂದು ಭಾವಿಸಿದ್ದರೋ ಅದರ ವಿಕಾಸ ಮತ್ತು ಬೆಳವಣಿಗೆಯೂ ಕೇಂದ್ರ ಸ್ಥಾನವನ್ನು ಪಡೆದಿತ್ತು.
ಮಾರ್ಕ್ಸರ ವಿಶ್ಲೇಷಣೆಯ ಪ್ರಕಾರ ಪರಸ್ಪರ ಬೆಸೆದುಕೊಂಡಿರುವ ಈ ಎಲ್ಲಾ ಪ್ರಕ್ರಿಯೆಗಳು ಬೆಳೆಯುತ್ತಾ ಬೆಳೆಯುತ್ತಾ "ನಿಧಾನವಾಗಿ ಇವೆಲ್ಲವನ್ನೂ ಒಟ್ಟಾಗಿ ಹಿಡಿದಿಟ್ಟುಕೊಂಡಿರುವ ಬಂಡವಾಳಶಾಹಿ ಹೊರಕವಚದೊಡನೆ ಹೊಂದಾಣಿಕೆಯಾಗದಂಥ" ಸ್ಥಿತಿಯನ್ನು ಮುಟ್ಟುತ್ತವೆ. ಅಂಥಾ ಪರಿಸ್ಥಿಯಲ್ಲಿ ವ್ಯವಸ್ಥೆಯು ಸ್ಪೋಟಗೊಂಡು "ಛಿದ್ರಗೊಳ್ಳುತ್ತದೆ" ಮತ್ತು "ಖಾಸಗಿ ಆಸ್ತಿಯ ಸಾವಿನ ಕಹಳೆಯು ಮೊಳಗುತ್ತದೆ. ಲೂಟಿಕೋರರೇ ಲೂಟಿಯಾಗುತ್ತಾರೆ."
ಮಾರ್ಕ್ಸ್ ಅವರ ದೃಷ್ಟಿಯಲ್ಲಿ ಕಾರ್ಮಿಕ ವರ್ಗವು ಒಂದು ಕ್ರಾಂತಿಕಾರಿ ವರ್ಗವಾಗಿ ಬೆಳೆದು ಬಂಡವಾಳದ ಆಳ್ವಿಕೆಯನ್ನು ಕಿತ್ತೊಗೆಯುವುದು ಐತಿಹಾಸಿಕವಾಗಿ ಸಂಭವಿಸಲೇಬೇಕಾದ ಅನಿವಾರ್ಯತೆ. ಸ್ವತಃ ತಾನೇ ಗತಿತಾರ್ಕಿಕ ಭೌತಿಕ ವಿಧಾನವನ್ನು ಅನುಸರಿಸಿದರೂ ಮಾರ್ಕ್ಸ್ ಕೂಡಾ ಒಂದು ಪೊಳ್ಳು ’ಐತಿಹಾಸಿಕ ನಿಯತಿವಾದ’ದ (ಹಿಸ್ಟಾರಿಕಲ್ ಡಿಟರ್ಮಿನಿಸಂ) ಕಡೆ ತೇಲಿಹೋದರೆಂದು ಕಾಣುತ್ತದೆ. ಬಂಡವಾಳ ಕೃತಿಯಲ್ಲಿ ಕಂಡು ಬರುವ ಶೈಲಿ, ರೂಪಕಗಳು, ಗದ್ಯವೈಭವ, ಬಂಡವಾಳವನ್ನು ಶೂಲಕ್ಕೇರಿಸುವ ರೀತಿ ಅನನ್ಯವಾಗಿದೆ. ಉದಾಹರಣೆಗೆ ಬಂಡವಾಳದ ಬಗ್ಗೆ ಒಂದು ಕಡೆ ಹೀಗೆ ಬರೆಯುತ್ತಾರೆ; "ಬಂಡವಾಳವೆಂಬುದು ಸತ್ತ ಶ್ರಮವಾಗಿದ್ದು ತಾನು ಬದುಕುಳಿಯಲು ರಕ್ತಪಿಶಾಚಿಯಂತೆ ಜೀವಂತ ಶ್ರಮವನ್ನು ಹೆಚ್ಚೆಚ್ಚು ಹೀರಲು ಅರಸುತ್ತಾ ಇರುತ್ತದೆ ಮತ್ತು ಹೆಚ್ಚೆಚ್ಚು ಜೀವಂತ ಶ್ರಮವನ್ನು ಹೀರಿದಷ್ಟೂ ಹೆಚ್ಚೆಚ್ಚು ಬದುಕುತ್ತದೆ"- ಇಂಥಾ ಬರಹವು ಖಂಡಿತವಾಗಿ ಓದುಗರನ್ನು ಹಿಡಿದಿಡುವುದಲ್ಲದೆ ಕ್ರಾಂತಿಕಾರಿ ಬದಲಾವಣೆಯೊಂದರ ಅಗತ್ಯದ ಬಗ್ಗೆಯೂ ಮನವರಿಕೆ ಮಾಡಿಸುತ್ತದೆ. ಆದರೆ ಲೇಖಕನ ಈ ಉದ್ದೇಶವೇ ಅವರನ್ನು ತೇಲಿಹೋಗುವಂತೆ ಮಾಡಿ ಕ್ರಾಂತಿಕಾರಿ ಬದಲಾವಣೆಯ ಸಾಧ್ಯತೆ ಬಗ್ಗೆ ಅತಿ ಅಂದಾಜನ್ನು ಮತ್ತು ಅದಕ್ಕೆ ಅಡ್ಡಿಯಾಗಬಹುದಾದ ಸಂಗತಿಗಳ ಬಗ್ಗೆ ಕೆಳ ಅಂದಾಜನ್ನು ಮಾಡುವಂತೆ ಮಾಡಿದೆ.
ಹಾಗಿದ್ದರೂ ’ಬಂಡವಾಳ’ವು
"ರಾಜಕೀಯ ಅರ್ಥಶಾಸ್ತ್ರದ ಒಂದು ಪರಾಮರ್ಶೆ" ಮಾತ್ರವಲ್ಲ; ಅದರಲ್ಲಿ ಅರ್ಥಶಾಸ್ತ್ರ ಮತ್ತು ಸಮಾಜಶಾಸ್ತ್ರಗಳು ಗಹನವಾಗಿ ಹಾಸುಹೊಕ್ಕಾಗಿವೆ. ಉದಾಹರಣೆಗೆ ಮಾರ್ಕ್ಸ್ ಅವರ ಪರಿಕಲ್ಪನೆಯಾದ ಸರಕು ಗೀಳಾರಾಧನೆಯನ್ನು (ಕಮಾಡಿಟಿ ಫೆಟಿಷಿಸಮ್) ಹೀಗೆ ವ್ಯಾಖ್ಯಾನಿಸಬಹುದು- ಒಂದು ಸರಕು ಆಧಾರಿತ ಪ್ರಪಂಚದಲ್ಲಿ ವ್ಯಕ್ತಿಗಳ ಸಂಬಂಧಗಳೂ ಸಹ ವಸ್ತುಗಳ ನಡುವಿನ ಸಂಬಂಧದಂತೆ ಮೂರ್ತಗೊಳ್ಳುತ್ತವೆ. ನನ್ನಂಥ ಹಳೆಯ ಕಾಲದ ಮನುಷ್ಯನಿಗೆ ಸಂಪತ್ತೆಂಬುದು ಶ್ರಮ ಮತ್ತು ಪ್ರಕೃತಿಯ ಶೋಷಣೆಯಿಂದ ಸೃಷ್ಟಿಯಾಗುತ್ತದೆಂಬುದು ಸಾರಭೂತ ಸತ್ಯವಾಗಿದೆ. ವಾಸ್ತವವಾಗಿ ಪರಿಸರದ ಬಗ್ಗೆ ಮಾರ್ಕ್ಸ್ ತೋರುವ ಕಾಳಜಿಗಳು ಇಂದಿನ ಸಮಕಾಲೀನ ಪರಿಸರ- ಸಮಾಜವಾದಿಗಳ ಕಾಳಜಿಗಳನ್ನೇ ಪ್ರತಿಫಲಿಸುತ್ತವೆ. ಇಂದು ಜೀವಪರಿಸರ ವ್ಯವಸ್ಥೆ ಎಂದು ವಿಕಸಿತಗೊಂಡಿರುವ ವ್ಯವಸ್ಥೆಯನ್ನು ಬೆಳೆಸಲು ತನ್ನ ಕಾಲದಲ್ಲಿ ಆಗುತ್ತಿದ್ದ ಪ್ರಯತ್ನಗಳಿಂದ ಮಾರ್ಕ್ಸ್ ಅವರು ತುಂಬಾ ಪ್ರಭಾವಿತರಾಗಿದ್ದರು. ಅಂಥಾ ಚಿಂತನೆಗಳ ಮೂಲ ಧಾತು ಸಮಾಜ ಮತ್ತು ಪ್ರಕೃತಿಗಳ ನಡುವೆ ಸಾವಯವ ಜೀವ ಸಂಬಂಧಗಳಿವೆ ಎಂಬುದನ್ನು ಆಧರಿಸಿತ್ತು. ಹೀಗಾಗಿಯೇ ಅವರು ’ಬಂಡವಾಳ’
ಕೃತಿಯಲ್ಲಿ : "ಬಂಡವಾಳಶಾಹಿ ಉತ್ಪಾದನೆಯು ಎಲ್ಲಾ ಸಂಪತ್ತುಗಳ ಸೃಷ್ಟಿಯ ಮೂಲವಾಗಿರುವ ಕಾರ್ಮಿಕರನ್ನು ಮತ್ತು ಭೂಮಿಯನ್ನು ಏಕಕಾಲದಲ್ಲಿ ಕಡೆಗಣಿಸುತ್ತಾ ಹೋಗುತ್ತದೆ" ಎಂದು ಬರೆದದ್ದು ಕಾರಣವಿಲ್ಲದೆ ಏನಲ್ಲ. ಇದಲ್ಲದೆ ಸಂಪುಟ ೧ ರ ೮ನೇ ಭಾಗದಲ್ಲಿ ಬಂಡವಾಳದ "ತಥಾಕಥಿತ ಪ್ರಾಥಮಿಕ ಕ್ರೂಢೀಕರಣ" ಎಂಬ ಭಾಗವಿದೆ. ಅದು ಇತಿಹಾಸದ ಆ ನಿರ್ದಿಷ್ಟ ಕಾಲಘಟ್ಟದಲ್ಲೆ ಬಂಡವಾಳವು ತಲೆ ಎತ್ತಿದ ಬಗೆಯನ್ನು ವಿವರಿಸುತ್ತದೆ. ಈ ಅಧ್ಯಾಯದಲ್ಲಿ ಮಾರ್ಕ್ಸ್ ಅವರು ಬ್ರಿಟನ್ನಿನ ರೈತಾಪಿಯನ್ನು ಎನ್ಕ್ಲೋಸರ್ಗಳ ಮೂಲಕ ಲೂಟಿ ಮಾಡಿದ ಬಗೆಯನ್ನೂ ಮತ್ತು ಜಾಗತಿಕ ಬಂಡವಾಳಶಾಹಿ ವ್ಯವಸ್ಥೆಯ ಅಂಚುಗಳಲ್ಲೇ ಉಳಿದುಹೋದ ದೇಶಗಳ ಪರಿಸರವನ್ನೂ ನಾಶಗೊಳಿಸುತ್ತಾ ಅಲ್ಲಿನ ಸಂಪತ್ತನ್ನೂ ಹೇಗೆ ಸೂರೆ ಹೊಡೆಯಲಾಯಿತೆಂಬುದನ್ನು ವಿವರಿಸುತ್ತಾರೆ. ಈ ಎಲ್ಲಾ ವಿನಾಶಗಳ ಮೂಲಕವೇ "ಬಂಡವಾಳಶಾಹಿ ಉತ್ಪಾದನೆಯ ಅರುಣೋದಯವಾಯಿತೆಂದು" ಮಾರ್ಕ್ಸ್ ಬರೆಯುತ್ತಾರೆ.
ಆದರೆ ಮಾರ್ಕ್ಸ್ ಅವರು "ಬೂರ್ಜ್ವಾ ಆರ್ಥಿಕ ವ್ಯವಸ್ಥೆ"ಯ ಭಾಗವೆಂದೇ ಪರಿಗಣಿಸಿದ್ದ ಬಂಡವಾಳಶಾಹಿ ಪ್ರಭುತ್ವ, ವಿದೇಶೀ ವ್ಯಾಪಾರ, ಮತ್ತು ಜಾಗತಿಕ ಮಾರುಕಟ್ಟೆ ಇತ್ಯಾದಿಗಳ ಬಗ್ಗೆ ತಮ್ಮ ವ್ಯವಸ್ಥಿತ ನಿರೂಪಣೆಗಳನ್ನು ಪೂರ್ಣಗೊಳಿಸಲಿಲ್ಲ. ಹೀಗಾಗಿ ಒಂದು ಬಂಡವಾಳಶಾಹಿ ಜಾಗತಿಕ ವ್ಯವಸ್ಥೆಯ ಬಗ್ಗೆ ಅವರು ಯಾವುದೇ ಸೈದ್ಧಾಂತಿಕ ಚೌಕಟ್ಟನ್ನು ನೀಡಿಲ್ಲ. ಆದರೂ ಈಗಾಗಲೇ ಸಂಪುಟ ೧ರಲ್ಲಿನ "ಪ್ರಾಥಮಿಕ ಬಂಡವಾಳದ ಕ್ರೂಢೀಕರಣದ" ಬಗ್ಗೆ ಬರೆಯುವಾಗ ವಿಕಸಿತವಾಗುತ್ತಿದ್ದ ಬಂಡವಾಳಶಾಹಿಯು ಹೇಗೆ ನಂತರ ಜಾಗತಿಕ ಬಂಡವಾಳಶಾಹಿ ವ್ಯವಸ್ಥೆಯ ಅಂಚಿನಲ್ಲಿ ಉಳಿದುಹೋದ ದೇಶಗಳ ಮೇಲೆ ವಿನಾಶಕಾರಿ ಪರಿಣಾಮಗಳನ್ನು ಬೀರಿತೆಂಬುದರ ಬಗ್ಗೆ ವಿಷದವಾಗಿ ಬರೆದಿದ್ದಾರೆ. ಮತ್ತು ’ಯಂತ್ರಗಳು ಮತ್ತು ಆಧುನಿಕ ಕೈಗಾರಿಕೆಗಳು" ಎಂಬ ಅಧ್ಯಾಯದಲ್ಲಿ ಹೇಗೆ ಆಧುನಿಕ ಕೈಗಾರಿಕೆಗಳಲ್ಲಿ ಬಳಕೆಯಾಗುವ ಆಧುನಿಕ ತಂತ್ರಜ್ನಾನದಿಂದ ಸ್ಪರ್ಧಾತ್ಮಕ ಸೌಲಭ್ಯವು ಬಂಡವಾಳಶಾಹಿ ದೇಶಗಳಿಗೆ ಲಭ್ಯವಾಗುತ್ತದೆ ಎಂಬುದನ್ನೂ ಮತ್ತು ವಸಾಹತು ದೇಶಗಳ ಮೇಲಿನ ಅಧಿಪತ್ಯಗಳಿಂದಾಗಿ ಹೇಗೆ ಐರೋಪ್ಯ ಪ್ರಭುತ್ವಗಳು "ತಮ್ಮ ಅವಲಂಬಿತ ದೇಶಗಳಲ್ಲಿ ಎಲ್ಲಾ ಬಗೆಯ ಉದ್ಯಮಗಳನ್ನು ಬಲವಂತದಿಂದ ನಾಶಗೊಳಿಸಿದವು" ಎಂಬುದನ್ನೂ ವಿವರಿಸುತ್ತಾರೆ. ಹೀಗೆ ಬಂಡವಾಳಶಾಹಿಯು ಒಂದು ಜಾಗತಿಕ ವ್ಯವಸ್ಥೆಂiದಾಗ ಕೇಂದ್ರ ಮತ್ತು ಅಂಚುಗಳ ನಡುವೆ ರೂಪುಗೊಳ್ಳುವ ಶೋಷಕ ಸಂಬಂಧಗಳ ಬಗ್ಗೆ ಮಾರ್ಕ್ಸ್ಗೆ ಸ್ಪಷ್ಟ ಕಲ್ಪನೆಯಿತ್ತು ಎಂದು ಹೇಳಬಹುದು.
ಕಳೆದ ೧೫೦ ವರ್ಷಗಳಲ್ಲಿ ಬಂಡವಾಳವು ಒಂದು ಜಾಗತಿಕ ವ್ಯವಸ್ಥೆಯಾಗಿ ಬೆಳೆದಿದೆ. ವಾಸ್ತವಿಕ ಅನುಭವದ ಹಿನ್ನೆಲೆಯಲ್ಲಿ ನೋಡುವುದಾದರೆ ಬಂಡವಾಳಶಾಹಿ ದೇಶಗಳೆಂಬ ಕೇಂದ್ರದಲ್ಲಿ ಬಂಡವಾಳಶಾಹಿ ವ್ಯವಸ್ಥೆಯು ಅಭಿವೃದ್ಧಿಗೊಂಡಂತೆ ಅಂಚಿನ ದೇಶಗಳಲ್ಲಿ ಅಭಿವೃದ್ಧಿ ಹೀನತೆಯು ಬೆಳೆಯುತ್ತಾ ಹೋಯಿತು. ಈ ವಿದ್ಯಮಾನವನ್ನು ’ಬಂಡವಾಳ’
ಕೃತಿಯ ಚೌಕಟ್ಟಿನಲ್ಲಿ ಅರ್ಥಮಾಡಿಕೊಳ್ಳಲು ಈ ಕೆಳಗಿನ ಅಂಶಗಳು ಪ್ರಮುಖವಾಗುತ್ತವೆ. ಈ ಅಂಚಿನ ದೇಶಗಳಲ್ಲಿ "ಕಾರ್ಮಿಕ ವರ್ಗ" ವೆಂಬ ವ್ಯಾಖ್ಯಾನವು ಬಡ ರೈತಾಪಿಯನ್ನು ಒಳಗೊಳ್ಳಬೇಕು. ಏಕೆಂದರೆ ಈ ರೈತಾಪಿಯು ತಮ್ಮ ಉದ್ಯಮದ ಲಾಭವನ್ನೂ ಬಂಡವಾಳಶಾಹಿಗಳಿಗೆ ಒಪ್ಪಿಸುವುದು ಮಾತ್ರವಲ್ಲದೆ, ತಾವು ಉಳುವ ಜಮೀನಿನ ಮೇಲೆ ಬಾಡಿಗೆಯನ್ನೂ ಕೊಡುತ್ತಾರೆ ಮತ್ತು ತಮ್ಮ ಸಂಚಯಿತ ಸಾಲದ ಮೇಲೆ ಬಡ್ಡಿಯನ್ನೂ ತೆರುವುದು ಮಾತ್ರವಲ್ಲದೆ ತಮ್ಮ "ಕೂಲಿ"ಯ ಒಂದು ಭಾಗವನ್ನು ಸಹ ತೆತ್ತುತ್ತಾರೆ. ಈ "ಕಾರ್ಮಿಕ ವರ್ಗ"ದ ವ್ಯಾಖ್ಯಾನದಡಿಯಲ್ಲಿ ವ್ಯಾಪಾರಿ ಬಂಡವಾಳದ ಶೋಷಣೆಯಡಿ ನರಳುತ್ತಿರುವ ಸಣ್ಣ ಉತ್ಪಾದಕರು ಮಾತ್ರವಲ್ಲದೆ ಮಾರುಕಟ್ಟೆಯಲ್ಲಿನ ಅಸಮಾನ ವ್ಯಾಪಾರ ನೀತಿಯಿಂದಾಗಿ ಹೆಚ್ಚುವರಿಯಿಂದ ವಂಚಿತರಾಗುವವರನ್ನೂ ಸೇರಿಸಿಕೊಳ್ಳಬೇಕು.
ಸಾರಾಂಶದಲ್ಲಿ ಹೇಳುವುದಾದರೆ "ಕಾರ್ಮಿಕ ವರ್ಗೀಕರಣ"ದ ಪ್ರಕ್ರಿಯೆಯು ಅದರ ಶಾಸ್ತ್ರಿಯ ಅರ್ಥದಲ್ಲಿ ಕಡಿಮೆ ಪ್ರಮಾಣದಲ್ಲಿ ನಡೆಯುತ್ತಿರುವುದರಿಂದ ಉದ್ಯೋಗ ನಿರತ ಕಾರ್ಮಿಕ ವರ್ಗಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿರುವ ನಿರುದ್ಯೋಗಿ ಕೈಗಾರಿಕಾ ಮೀಸಲು ಸೇನೆಯು ಉದ್ಯೋಗದಲ್ಲಿರುವ ಮತ್ತು ಗುತ್ತಿಗೆ ಕೆಲಸದಲ್ಲಿರುವ ಕಾರ್ಮಿಕರ ಕೂಲಿ ಹೆಚ್ಚಳ ಮತ್ತಿತರ ಬೇಡಿಕೆಗಳಿಗೆ ಪರೋಕ್ಷ ನಿಯಂತ್ರಣವನ್ನು ಹೇರುತ್ತದೆ. ಮಾತ್ರವಲ್ಲದೆ ಸಣ್ಣ ಉತ್ಪಾದಕರ ಉತ್ಪನ್ನಗಳ ಬೆಲೆಯನ್ನು ಕಡಿತವಾಗುವಂತೆ ಮಾಡುತ್ತದೆ. ಹೀಗಾಗಿ ಅವರ ಲಾಭದ ಮೇಲೂ ಮಿತಿಯನ್ನೂ ಹೇರುತ್ತದೆ. ಇದು ಈಗಾಗಲೇ ಅತ್ಯಂತ ಸಂದಣಿಯಿಂದ ಕೂಡಿದ್ದು ತೀವ್ರವಾದ ಕತ್ತುಕೊಯ್ಯುವ ಸ್ಪರ್ಧೆಯಿರುವ ಸಣ್ಣ ಉತ್ಪಾದಕ ಕ್ಷೇತ್ರದ ಸಂಕಷ್ಟಗಳನ್ನು ಮತ್ತಷ್ಟು ಹೆಚ್ಚಿಸುತ್ತದೆ. ಈ ವಿದ್ಯಮಾನವೇ ಒಟ್ಟಾರೆಯಾಗಿ ಜಾಗತಿಕ ಬಂಡವಾಳಶಾಹಿ ವ್ಯವಸ್ಥೆಯ ಸಂಭಾವ್ಯ ಲಾಭದಾಯಕತೆಯನ್ನು ಮತ್ತಷ್ಟು ಹೆಚ್ಚಿಸುತ್ತದೆ. ಆದರೆ ಈ ವಿದ್ಯಮಾನದಿಂದ ಹೆಚ್ಚುವ ದಾರಿದ್ರ್ಯ ಮತ್ತು ಬಡತನಗಳಿಂದಾಗಿ ಬಹುಸಂಖ್ಯಾತ ಜನತೆಯ ಕೊಳ್ಳುವ ಶಕ್ತಿಯೂ ಸಹ ಸಾಪೇಕ್ಷವಾಗಿ ಕಡಿತವಾಗುತ್ತದೆ. ಇದರಿಂದ ಕೈಗಾರಿಕಾ ಸರಕುಗಳ ಬಳಕೆಯೂ ಕಡಿಮೆಯಾಗುತ್ತದೆ. ಅದರಿಂದ ಉದ್ಯಮಗಳ ಉತ್ಪಾದಕ ಸಾಮರ್ಥ್ಯಗಳ ಬಳಕೆ ಮತ್ತಷ್ಟು ಕುಗ್ಗುತ್ತದೆ. ಇದು ಹೊಸ ಹೂಡಿಕೆಗಳ ಮೇಲಿನ ನಿರೀಕ್ಷಿತ ಲಾಭವನ್ನು ಕುಗ್ಗಿಸುತ್ತದೆ. ಇದರಿಂದ ಹೂಡಿಕೆಯು ಮತ್ತಷ್ಟು ಕುಗ್ಗುತ್ತದೆ.
ಕೃಪೆ: Economic and Political Weekly, Sep
16, 2017. Vol. 52. No. 37
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ