ಬುಧವಾರ, ಸೆಪ್ಟೆಂಬರ್ 6, 2017

ಖಾಸಗಿತನದ ಹಕ್ಕಿನ ತೀರ್ಪು:ಅಂತ್ಯವಲ್ಲ-ಆರಂಭ

 ಅನುಶಿವಸುಂದರ್
Image result for The right to privacy judgment

ಖಾಸಗಿತನದ ಹಕ್ಕಿನ ತೀರ್ಪು ವ್ಯಕ್ತಿಯ ಘನತೆ ಮತ್ತು ಸ್ವಾತಂತ್ರ್ಯದ ಹಕ್ಕುಗಳನ್ನು ಎತ್ತಿಹಿಡಿದಿದೆ.

ದೇಶದ ವರಿಷ್ಠ ನ್ಯಾಯಾಲಯದ ಒಂಭತ್ತು ನ್ಯಾಯಾಧೀಶರ ಪೀಠವು  ಕೆ. ಎಸ್. ಪುಟ್ಟಸ್ವಾಮಿ ಮತ್ತು ಭಾರತ ಸರ್ಕಾರದ ನಡುವಿನ ಪ್ರಕರಣದ ಬಗ್ಗೆ  ಆಗಸ್ಟ್ ೨೪ರಂದು ನೀಡಿರುವ ತೀರ್ಪಿನಿಂದಾಗಿ, ಭಾರತೀಯ ನಾಗರಿಕರಿಗೆ ೨೧ನೇ ಶತಮಾನದ ನಾಗರಿಕ ಹಕ್ಕುಗಳ ಹೊಸ ಸನ್ನದೇ ದೊರಕಿದಂತಾಗಿದೆ. ತೀರ್ಪಿನ ಮೂಲಕ ಅದು ಖಾಸಗಿತನದ ಹಕ್ಕಿನ ಬಗ್ಗೆ ಇದೇ ನ್ಯಾಯಾಲಯವು ಹಿಂದೆ ನೀಡಿದ್ದ ತೀರ್ಪುಗಳನ್ನು ಬದಲಾಯಿಸಿದೆ. ಅಲ್ಲದೆ ನಾಗರಿಕ ಹಕ್ಕುಗಳಿಗೆ ಸಂಬಂಧಪಟ್ಟಂತೆ ಇದೇ ನ್ಯಾಯಾಲಯದ ಇತರ ಪೀಠಗಳು ನೀಡಿದ್ದ ಕೆಲವು ಅತ್ಯಂತ ಅಪಮಾನಕಾರಿ ಆದೇಶಗಳನ್ನೂ (.ಡಿ.ಎಮ್ ಜಬಲ್ಪುರ್ ಮತ್ತು ಎಸ್ಎಸ್ ಶುಕ್ಲಾ ಪ್ರಕರಣ ಹಾಗೂ ಸುರೇಶ್ ಎನ್ ಕೌಶಲ್ ಮತ್ತು ನಾಜ್ ಪ್ರತಿಷ್ಠಾನ ಪ್ರಕರಣ)ಸಹ ಸರಿತಿದ್ದುಕೊಂಡಿದೆ. ಜೊತೆಗೆ ಸಂವಿಧಾನದ ಹಿನ್ನೆಲೆಯಲ್ಲಿ ನಾಗರಿಕ - ರಾಜಕೀಯ ಹಕ್ಕುಗಳನ್ನು ಪ್ರಗತಿಪರವಾಗಿ ಮತ್ತು ಪರಿಣಾಮಕಾರಿ ವ್ಯಾಖ್ಯಾನಿಸುವ ಪರಿಪಾಠಕ್ಕೂ ದಾರಿಮಾಡಿಕೊಟ್ಟಿದೆ.

ತೀರ್ಪು ನಾಗರಿಕರ ಖಾಸಗಿತನದ ಹಕ್ಕಿಗೆ ಕೇವಲ ನಮ್ಮ ಸಂವಿಧಾನದ ನೆಲೆಗಟ್ಟನ್ನು ಮಾತ್ರವಲ್ಲದೆ ಜಗತ್ತಿನ ಇತರ ಉದಾರವಾದಿ ಪ್ರಜಾತಾಂತ್ರಿಕ ದೇಶಗಳನ್ನು ಒಪ್ಪಿಕೊಂಡಿರುವಂಥ ಅಂತರರಾಷ್ಟ್ರೀಯ ಕಾನೂನು ಮತ್ತು ತತ್ವಗಳ ಹಿನ್ನೆಲೆಯನ್ನೂ ಒದಗಿಸಿದೆ. ಜಗತ್ತಿನೆಲ್ಲೆಡೆ ನಡೆಯುತ್ತಿರುವ ಆಡಳಿತಾತ್ಮಕ ಮತ್ತು ತಾಂತ್ರಿಕ ಬೆಳವಣಿಗೆಗಳನ್ನು ಗಮನದಲ್ಲಿಟ್ಟುಕೊಂಡು ಹಕ್ಕುಗಳ ಬಗೆಗಿನ ಭಾರತೀಯ ನ್ಯಾಯಪ್ರಣಾಲಿಯನ್ನು ಜಾಗತಿಕ ಮಟ್ಟಕ್ಕೇರಿಸಿದೆ. ಹಿಂದೆ ಇದೇ ಸುಪ್ರೀಂ ಕೋರ್ಟು ಖರಕ್ ಸಿಂಗ್ ಮತ್ತು ಉತ್ತರಪ್ರದೇಶ ಸರ್ಕಾರದ ಪ್ರಕರಣದಲ್ಲಿ ನಾಗರಿಕರ ಮೇಲೆ ಸರ್ಕಾರವು ನಡೆಸುವ ಬೇಹುಗಾರಿಕೆಯು ನಾಗರಿಕರ ಮೂಲಭೂತ ಹಕ್ಕಿಗೆ ಭಂಗ ತರುತ್ತದೆಂಬ ವಾದವನ್ನು ತಿರಸ್ಕರಿಸಿತ್ತು. ಆದರೆ ಈಗ ಒಂಭತ್ತು ನ್ಯಾಯಾಧೀಶರ ಉನ್ನತ ಪೀಠವು ನೀಡಿರುವ ತೀರ್ಪು ನಾಗರಿಕರ ಮೇಲೆ ನಡೆಸಲಾಗುವ ಯಾವುದೇ ಅಸಮರ್ಥನೀಯ ಬೇಹುಗಾರಿಕೆಯನ್ನು ಪರಿಣಾಮಕಾರಿಯಾಗಿ ತಡೆಗಟ್ಟುತ್ತದೆ. ತಂತ್ರಜ್ನಾನವು ನಾಗರಿಕರ ಬಗೆಗಿನ ಮಾಹಿತಿಗಳನ್ನು ಪಡೆದುಕೊಳ್ಳಲು ಹಲವು ಬಗೆಯ ದಾರಿಗಳನ್ನು ಸರ್ಕಾರಕ್ಕೆ ಒದಗಿಸುತ್ತಿರುವ ಸಂದರ್ಭದಲ್ಲಿ ತೀರ್ಪು  ಪ್ರಜಾತಂತ್ರದಲ್ಲಿರಬೇಕಾದ ಪ್ರತಿರೋಧಿಸುವ ಮತ್ತು ಪಾಲಿಸದಿರುವ ಸ್ವಾತಂತ್ರ್ಯವನ್ನು ಎತ್ತಿಹಿಡಿಯುತ್ತದೆ.

ತೀರ್ಪನ್ನು ಕೇವಲ ದತ್ತಾಂಶ ಸಂರಕ್ಷಣೆ ಮತ್ತು ಪ್ರಭುತ್ವ ಬೇಹುಗಾರಿಕೆಯ ಕಣ್ಣುಗಳಿಂದ ಮಾತ್ರ ವಿಶ್ಲೇಷಿಸುವುದು ಸಹ ತಪ್ಪಾಗುತ್ತದೆ. ಸುಪ್ರೀಂ ಕೋರ್ಟು ಖಾಸಗಿತನವೆಂದರೆ ತನ್ನ ಬಗೆಗಿನ ಮಾಹಿತಿಗಳು ತನ್ನ ನಿಯಂತ್ರಣದಲ್ಲೇ ಇರುವ ಅಧಿಕಾರವೆಂದು ಹೇಳಿದೆ. ಅದೇರೀತಿ ಖಾಸಗಿತನದ ಹಕ್ಕೆಂದರೆ ವ್ಯಕ್ತಿಯ ಶಾರೀರಿಕ ಸ್ವಾಯತ್ತತೆಯನ್ನು ಖಾತರಿಗೊಳಿಸುವ ಮತ್ತು ತನಗೆ ಬೇಕಿರುವ ಆಯ್ಕೆಗಳನ್ನು ಮಾಡಿಕೊಳ್ಳುವ ಸ್ವಾತಂತ್ರ್ಯವೆಂಬುದನ್ನು ಸಹ ಎತ್ತಿಹಿಡಿದಿದೆ. ಮೂಲಕ  ಸರ್ಕಾರವು ವ್ಯಕ್ತಿಯ ಬದುಕಿನ ಮೇಲೆ ಮಾಡಬಹುದಾದ ಆಕ್ರಮಣಕಾರಿ ಮಧ್ಯಪ್ರವೇಶವನ್ನು ಪ್ರಶ್ನಿಸಲು ಬೇಕಾದ ಪ್ರಬಲವಾದ ಆಯುಧವನ್ನು ನ್ಯಾಯಾಲಯವು ನಾಗರಿಕರಿಗೆ ಒದಗಿಸಿದೆ. ಹೀಗಾಗಿ ವ್ಯಾಖ್ಯಾನವು  ಸಲಿಂಗ ಕಾಮವನ್ನು ಅಪರಾಧೀಕರಿಸುವ ೧೮೯೦ರ ಭಾರತೀಯ ದಂಡ ಸಂಹಿತೆಯ  ೩೭೭ನೇ ಕಲಮಿನ ಮೇಲೆ ತಕ್ಷಣದ ಪರಿಣಾಮವನ್ನೂ ಬೀರಲಿದೆ. ಅಷ್ಟು ಮಾತ್ರವಲ್ಲದೆ, ದನದ ಮಾಂಸ ಮತ್ತು ಮದ್ಯವನ್ನು ಹೊಂದಿರುವುದನ್ನೇ ಅಪರಾಧೀಕರಿಸುವ ಹಲವಾರು ರಾಜ್ಯ ಸರ್ಕಾರಗಳ ಕಾನೂನುಗಳ ಮೇಲೆಯೂ ವ್ಯಾಖ್ಯಾನವು ಪರಿಣಾಮ ಬೀರುವ ಸಾಧ್ಯತೆಗಳಿವೆ. ಹಾಗೂ ಗರ್ಭಪಾತ ಮತ್ತು ಬಾಡಿಗೆ ತಾಯ್ತನದ ಸಂದರ್ಭಗಳಲ್ಲಿ ಮಹಿಳೆಗಿರುವ ಪ್ರಸವ ಸಂಬಂಧೀ ಹಕ್ಕುಗಳ ಮೇಲೂ, ಸಮ್ಮತಿಯಾಧಾರಿತ ಸಹಜೀವನ, ಮಾನಸಿಕ ಆರೋಗ್ಯ ಹಾಗೂ ಅಂಗವೈಕಲ್ಯದ ಹಕ್ಕುಗಳಿಗೆ ಸಂಬಂಧಪಟ್ಟ ಕಾನೂನುಗಳ ಮೇಲೂ ತೀರ್ಪು ದೂರಗಾಮಿ ಪರಿಣಾಮಗಳನ್ನು ಬೀರುವ ಸಾಧ್ಯತೆಗಳಿವೆ. ನಿರ್ದಿಷ್ಟವಾಗಿ ಹೇಳುವುದಾದರೆ, ತಮಗೆ ಯಾವುದು ಹಿತವೆಂದು ನಾಗರಿಕರು ಭಾವಿಸುತ್ತಾರೋ ಅದನ್ನು ಆಯ್ಕೆ ಮಾಡಿಕೊಳ್ಳಲು ನಾಗರಿಕರಿಗೆ ಅವಕಾಶವನ್ನು ನಿರಾಕರಿಸುತ್ತಾ ಸರ್ಕಾರವೇ ತನ್ನ ಪಿತೃಸ್ವಾಮ್ಯ ಯಾಜಮಾನಿಕ ಧೋರಣೆಗಳನ್ನು ಹೇರುವಂಥ ಕಾನೂನುಗಳ ಮೇಲೆ ತೀರ್ಪು ನೇರ ಪರಿಣಾಮ ಬೀರಲಿದೆ.

ಇನ್ನು ತೀರ್ಪುಆಧಾರ (ಹಣಕಾಸು ಮತ್ತಿತರ ಅನುದಾನ, ಸೌಲಭ್ಯ ಮತ್ತು ಸೇವೆಗಳನ್ನು ನಿರ್ದಿಷ್ಟ ಜನವರ್ಗಗಳಿಗೆ ವಿತರಿಸುವ) ಕಾಯಿದೆ-೨೦೧೬ ಮತ್ತು ಅದನ್ನು ಆಧರಿಸಿ ಹಲವಾರು ಭಿನ್ನಭಿನ್ನ ಕಾರಣಗಳಿಗೆ ಆಧಾರ್ ಬಳಕೆಯನ್ನು ಕಡ್ಡಾಯ ಮಾಡುತ್ತಿರುವುದನ್ನು  ವಿರೋಧಿಸಿ ಸುಪ್ರೀಂ ಕೋರ್ಟಿನಲ್ಲಿ ಸಲ್ಲಿಕೆಯಾಗಿರುವ ಅಹವಾಲಿನ ಮೇಲೆ ಯಾವರೀತಿ ಪರಿಣಾಮ ಬೀರಬಹುದೆಂಬುದು ಅಷ್ಟು ಸ್ಪಷ್ಟವಾಗಿಲ್ಲ. ಆಧಾರ್ ಕಾಯಿದೆಯ ಅಂಶಗಳು ನಾಗರಿಕರ ಖಾಸಗಿತನದ ಹಕ್ಕನ್ನು ಉಲ್ಲಂಘಿಸುತ್ತದೆಯೇ ಎಂಬ ಅಂಶವನ್ನು ಸಂವಿಧಾನದ ನೆಲಗಟ್ಟಿನಲ್ಲಿ ವ್ಯಾಖ್ಯಾನಿಸಲಾಗುವುದೆಂದು ತೀರ್ಪು ಹೇಳಿದೆ. ಆದರೆ ವಿಷಯದ ಬಗ್ಗೆ ಪೀಠದಲ್ಲಿದ್ದ ಒಂಭತ್ತು ನ್ಯಾಯಾಧೀಶರು ಬಿಡಿಬಿಡಿಯಾಗಿ ನೀಡಿರುವ ಆರು ಅಭಿಪ್ರಾಯಗಳಲ್ಲಿ ಒಂದು ಅಭಿಪ್ರಾಯವು ಸರ್ಕಾರದಿಂದ ಪಡೆದುಕೊಳ್ಳುವ ಸಂಕ್ಷೇಮ ಸೌಲಭ್ಯಗಳು ಖಾಸಗಿತನದ ಮೇಲೆ ವಿಧಿಸಬಹುದಾದ ಒಂದು ಸಕಾರಣವಾದ ನಿರ್ಭಂಧವಾಗಿರುತ್ತದೆಂದು ಹೇಳಿದೆ. ಹಾಗಿದ್ದರೂ, ಸರ್ಕಾರಕ್ಕೆ ಎಂಥದೇ ಕಡ್ಡಾಯ ಒತ್ತಡಗಳಿದ್ದರೂ ಕಾನೂನು ಮತ್ತದರ ಬಳಕೆಯೇ  ನ್ಯಾಯ, ಸಮದೃಷ್ಟಿ ಮತ್ತು ಸಕಾರಣಗಳಿಂದ ಕೂಡಿಲ್ಲವೆಂದು ಅಹವಾಲುದಾರರು ವಾದಿಸಬಹುದು. ವಿಷಯದ ಬಗ್ಗೆ ಅಂತಿಮ ಆದೇಶವೇನೇ ಬಂದರೂ, ಒಂಭತ್ತು ನ್ಯಾಯಾಧೀಶರ ಪೀಠದ ಖಾಸಗಿತನದ ಹಕ್ಕಿನ ತೀರ್ಪಿನ ಕಾರಣದಿಂದಾಗಿ ಆಧಾರ್ ಯೋಜನೆಯ ಕಾನುನು ಬದ್ಧತೆ ಮತ್ತು ನ್ಯಾಯಸಮ್ಮತತೆಯ ಬಗ್ಗೆ ನ್ಯಾಯಾಲಯವು ಮೊದಲಿಗಿಂತಲೂ ಹೆಚ್ಚಿನ ಪರಿಶೀಲನೆಯನ್ನಂತೂ ಮಾಡಲಿರುವುದು ಖಚಿತ

ಇಷ್ಟಾದರೂ, ಪುಟ್ಟಸ್ವಾಮಿ ಪ್ರಕರಣದ  ತೀರ್ಪು ಸಕಾರಣವಾದ ಪರಿಣಾಮವನ್ನು ಉಂಟುಮಾಡಿಯೇ ತೀರುತ್ತದೆಂದು ಖಚಿತವಾಗಿ ಭಾವಿಸಿಕೊಳ್ಳಲು ಸಾಧ್ಯವಿಲ್ಲ. ತತ್ವದ ಆಧಾರದ ಮೇಲೆ ತಾನು ನೀಡಿದ ಎಷ್ಟೋ ಮಹತ್ವದ ತೀರ್ಮಾನಗಳನ್ನು ನಂತರದಲ್ಲಿ ಸುಪ್ರೀಂ ಕೋರ್ಟು ಪ್ರಾಯೋಗಿಕ ಹಾಗೂ ಇನ್ನಿತರ ಕಾರಣಗಳನ್ನು ಮುಂದೊಡ್ಡಿ ಹಿಂತೆಗೆದುಕೊಂಡಿರುವ ಸಾಕಷ್ಟು ಉದಾಹರಣೆಗಳಿವೆ. ಇತ್ತೀಚೆಗೆ ಶ್ರೇಯಾ ಸಿಂಗಲ್ ಪ್ರಕರಣದಲ್ಲಿ  ಸುಪ್ರೀಂ ಕೋರ್ಟು ಮಾಹಿತಿ ತಂತ್ರಜ್ನಾನ ಕಾಯಿದೆ-೨೦೦೦ಕ್ಕೇ ಸೇರಿದ ೬೬- ಕಲಮನ್ನು ಸಾಂವಿಧಾನಿಕವಾಗಿ ಅಸಿಂಧು ಎಂದು ರದ್ದುಪಡಿಸಿತು. ಆದರೆ ಯಾವ ತತ್ವದ ಆಧಾರದ ಮೇಲೆ ಅದನ್ನು ರದ್ದುಗೊಳಿಸಲಾಯಿತೋ ಅದೇ ತತ್ವವನ್ನು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಸಂಬಂಧಪಟ್ಟ ಇತರ ಪ್ರಕರಣಗಳಿಗೆ ಅನ್ವಯಿಸಬೇಕೆಂಬ ಮನವಿಯನ್ನು ಅದು ಸತತವಾಗಿ ನಿರಾಕರಿಸುತ್ತಿದೆ. ಅಷ್ಟು ಮಾತ್ರವಲ್ಲ. ಸಂವಿಧಾನದಲ್ಲಿ ಸೂಚಿಸಲಾಗಿರುವ ಸೀಮಿತ ಕಾರಣಗಳಿಂದಾಚೆಗೂ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಮೊಟಕುಗೊಳಿಸಬಹುದಾದ ಹೊಸಹೊಸ ಆಧಾರಗಳನ್ನು ನ್ಯಾಯಾಲಯವು ಹುಡುಕಿದೆ!

ಖಾಸಗಿತನದ ಹಕ್ಕನ್ನು ಬಳಸಿಕೊಂಡು ಆಡಳಿತದಲ್ಲಿ ಪಾರದರ್ಶಕತೆ ತರುವ ಸಲುವಾಗಿ ನಡೆಯುತ್ತಿರುವ ಪ್ರಯತ್ನಗಳನ್ನು ಸೋಲಿಸಲು ಆಡಳಿತ ವರ್ಗಕ್ಕೆ ನ್ಯಾಯಾಲಯವು ಅವಕಾಶ ಮಾಡಿಕೊಡಬಾರದು. ಹಾಗಾದಲ್ಲಿ ತೀರ್ಪಿನ ಸಕಾರಾತ್ಮಕ ಪರಿಣಾಮಗಳು ದುರ್ಬಲಗೊಳ್ಳುತ್ತವೆ. ಸಾರ್ವಜನಿಕ ವ್ಯಕ್ತಿಗಳಿಗೆ ಅನ್ವಯವಾಗುವ ಖಾಸಗಿತನದ ಮಾನದಂಡಗಳು ಹೇಗೆ ಭಿನ್ನವಾಗಿರಬೇಕೆಂಬ ಬಗ್ಗೆ ಕಳೆದ ಹಲವು ವರ್ಷಗಳಲ್ಲಿ ಸ್ಪಷ್ಟವಾದ ಕಾನೂನು ದೃಷ್ಟಿಯು ರೂಪಿತಗೊಂಡಿದೆ. ಆದರೆ ತೀರ್ಪಿನಲ್ಲಿ ವ್ಯಕ್ತವಾಗಿರುವ ತಾತ್ವಿಕತೆಯ ವಿಶಾಲ ಹರಹನ್ನು ಬಳಸಿಕೊಂಡು ಅಧಿಕಾರಸ್ಥರು ನಡೆಸುವ ದುರಾಚಾರ ಮತ್ತು ಅಪರಾಧಗಳ ಬಗ್ಗೆ ವರದಿ ಮಾಡುವುದನ್ನೂ ಸಹ ತಡೆಗಟ್ಟುವ ಪ್ರಯತ್ನಗಳು ನಡೆಯಬಹುದು. ಹೀಗಾಗಿ ಸಾರ್ವಜನಿಕ ಹಿತಾಸಕ್ತಿಯ ದೃಷ್ಟಿಯಿಂದ ಅತ್ಯಂತ ಪ್ರಮುಖವಾಗಿರುವ ಎರಡೂ ಕಾಳಜಿಗಳ ನಡುವೆ ಯಾವುದೇ ವೈರುಧ್ಯ ಬರದಂತೆ ಸೂಕ್ಷ್ಮವಾದ ಸಮತೋಲನವನ್ನು ಕಾಪಾಡಿಕೊಂಡು ಬರುವುದು ಸಹ ನ್ಯಾಯಾಲಯದ ಹೊಣೆಗಾರಿಕೆಯಾಗಿದೆ. ತೀರ್ಪಿನ ಅತ್ಯಂತ ಮಹತ್ವದ ಅಂಶವೆಂದರೆ ಭಾರತದ ನಾಗರಿಕರು ಪ್ರಭುತ್ವದ ಪಹರೆಯಲ್ಲಿ ಬದುಕುವ ಪ್ರಜೆಗಳೇನಲ್ಲ ಎಂಬ ಮಹತ್ವದ ಸಾಂವಿಧಾನಿಕ ತತ್ವವನ್ನು ಮತ್ತೊಮ್ಮೆ ಎತ್ತಿಹಿಡಿರುವುದು. ವ್ಯಕ್ತಿಗಳು ಘನತೆ ಮತ್ತು ಸ್ವಾತಂತ್ರ್ಯದಿಂದ ಬದುಕುವ ಹಕ್ಕನ್ನು ಪ್ರಭುತ್ವವು ದಯಪಾಲಿಸಿರುವುದಲ್ಲ. ಬದಲಿಗೆ ಅವರು ಮನುಷ್ಯರಾಗಿರುವುದರಿಂದಲೇ ಪಡೆದುಕೊಂಡಿರುವ ಮೂಲಭೂತ ಹಕ್ಕೆಂಬುದನ್ನು ತೀರ್ಪು ಮತ್ತೊಮ್ಮೆ ಧೃಢಿಕರಿಸಿದೆ. ಹೀಗಾಗಿ ವ್ಯಕ್ತಿಗಳಿಗೂ ಮತ್ತು ಭಾರತದ ಪ್ರಭುತ್ವಕ್ಕೂ ನಡುವೆ ಇರುವ ಸಂಬಂಧಗಳನ್ನು ಮೂಲಭೂತವಾಗಿ ಮರುಹೊಂದಾಣಿಕೆ ಮಾಡಿಕೊಳ್ಳುವೆಡೆ ತೀರ್ಪು ಪ್ರಮುಖವಾದ ಮೊದಲ ಹೆಜ್ಜೆಯೇ ವಿನಃ ಕೊನೆಯದಲ್ಲ.

 ಕೃಪೆ: Economic and Political Weekly,Sep 2, 2017. Vol. 52. No. 35 

                                                                                                            
ಕಾಮೆಂಟ್‌ಗಳಿಲ್ಲ: