ಅನು: ಶಿವಸುಂದರ್
ರಾಷ್ಟ್ರೀಯ ಕೌಟುಂಬಿಕ ಆರೋಗ್ಯ ಸಮೀಕ್ಷೆ-೪ (ನ್ಯಾಷನಲ್ ಫ್ಯಾಮಿಲಿ ಹೆಲ್ತ್ ಸರ್ವೆ- ಎನ್.ಎಫ್.ಎಚ್.ಎಸ್.-೪ )ರ ಅಂಕಿಅಂಶಗಳು ಆರೋಗ್ಯದ ಸ್ಥಿತಿಗತಿಗಳಲ್ಲಿ ಸುಧಾರಣೆಯನ್ನು ತೋರಿಸುತ್ತಿದ್ದರೂ ಒಟ್ಟಾರೆ ಪರಿಸ್ಥಿತಿ ಕಳವಳಕಾರಿಯೇ ಆಗಿದೆ.
ದೇಶದ ಆರೋಗ್ಯ ನೀತಿಯು ಭಾರತದ ಆರೋಗ್ಯದ ಸ್ಥಿತಿಗತಿಗಳ ಬಗೆಗಿನ ಅಂಕಿಅಂಶಗಳನ್ನೇ ಆಧರಿಸಿರಬೇಕು. ದುರದೃಷ್ಟವಶಾತ್ ಬಹಳಷ್ಟು ಸಾರಿ ಹೀಗೆ ಆಗುವುದಿಲ್ಲ. ಭರ್ತಿ ಹತ್ತು ವರ್ಷಗಳ ನಂತರ ನಡೆಸಿದ ರಾಷ್ಟ್ರೀಯ ಕೌಟುಂಬಿಕ ಆರೋಗ್ಯ ಸಮೀಕ್ಷೆ-೪ ರ ವರದಿಯನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬಿಡುಗಡೆ ಮಾಡಿದೆ. ಈ ಹಿಂದೆ, ೨೦೦೫-೦೬, ೧೯೯೮-೯೯ ಮತ್ತು ೧೯೯೨-೯೩ರಲ್ಲಿ ನಡೆದ ಸಮೀಕ್ಷೆಗಳ ವರದಿಗಳಂತೆ ಈ ವರದಿಯೂ ಸಹ ವಯಸ್ಕರ ಮತ್ತು ಮಕ್ಕಳ ಬಗೆಗಿನ ಸಂಖ್ಯಾವಾರು, ಆರೋಗ್ಯ ಮತ್ತು ಪೌಷ್ಟಿಕತೆಗಳ ಕುರಿತಾದ ಅಂಕಿಅಂಶಗಳನ್ನು ಒಟ್ಟಾರೆಯಾಗಿ ಅಖಿಲ ಭಾರತದ ಮಾಹಿತಿಗಳನ್ನೂ ಮತ್ತು ರಾಜ್ಯವಾರು ಮಾಹಿತಿಗಳನ್ನು ನೀಡುತ್ತದೆ. ಈ ಬಾರಿಯ ಸಮೀಕ್ಷೆಯು ಜಿಲ್ಲಾಮಟ್ಟದ ಮಾಹಿತಿಗಳನ್ನೂ ಒಳಗೊಂಡಿದೆ. ರಾಜ್ಯದೊಳಗಿನ ವ್ಯತ್ಯಾಸಗಳನ್ನು ಅರ್ಥಮಾಡಿಕೊಳ್ಳಲು ಇದು ಸಾಕಷ್ಟು ಸಹಾಯ ಮಾಡುತ್ತದೆ.
ಬಿಡುಗಡೆ ಮಾಡಿರುವ ಅಂಕಿಅಂಶಗಳನ್ನು ಎನ್.ಎಫ್.ಎಚ್.ಎಸ್.-೩ರ ಸಮೀಕ್ಷೆಯ ಅಂಕಿಅಂಶಗಳ ಜೊತೆಗಿಟ್ಟು ಆರೋಗ್ಯ ಸ್ಥಿತಿಗತಿಗಳ ಬಗ್ಗೆ ಕೆಲವು ಪ್ರಾಥಮಿಕ ಹೋಲಿಕೆಗಳನ್ನು ಮಾಡಲು ಸಾಧ್ಯವಿದೆ. ಉದಾಹರಣೆಗೆ ೨೦೦೫-೦೬ರಲ್ಲಿ ಕೆಳಗೆ ಐದುವರ್ಷ ಮೇಲ್ಪಟ್ಟಿರದ ಶೇ.೪೮ ರಷ್ಟು ಮಕ್ಕಳ ದೈಹಿಕ ಬೆಳವಣಿಗೆ ಕುಂಠಿತಗೊಂಡಿತ್ತು. ಈಗ ಅದು ಶೇ.೩೮ ಕ್ಕೆ ಇಳಿದಿದೆ. ಇದು ಅಪೌಷ್ಟಿಕತೆಯ ಪ್ರಮಾಣ ಕಡಿಮೆಯಾಗಿರುವುದನ್ನು ಸೂಚಿಸುತ್ತದೆ. ಆದರೆ ಜಾಗತಿಕ ಅಂಕಿಆಂಶಗಳಿಗೆ ಹೋಲಿಸಿದಲ್ಲಿ ಅಪೌಷ್ಟಿಕತೆಯು ಮುಂದುವರೆದಿರುವುದನ್ನು ಎತ್ತಿತೋರಿಸುತ್ತದೆ. ಮತ್ತೊಂದು ಸಕಾರಾತ್ಮಕ ಅಂಶವೆಂದರೆ ರೋಗ ಸೋಂಕಿನಿಂದ ಕಾಪು (ಇಮೂನೈಸಷನ್) ಪಡೆದ ಮಕ್ಕಳ ಸಂಖ್ಯೆ ಶೇ.೪೪ ರಿಂದ ಶೇ.೬೨ಕ್ಕೇರಿದೆ. ಅಲ್ಲದೆ ಒಟ್ಟಾರೆ ಫಲವತ್ತತೆ ದರ (ಟೋಟಲ್ ಫರ್ಟಿಲಿಟಿ ರೇಟ್- ಮಹಿಳೆಯೊಬ್ಬಳು ಜನ್ಮ ನೀಡುವ ಸರಾಸರಿ ಮಕ್ಕಳ ಸಂಖ್ಯೆ- ಅನುವಾದಕನ ಟಿಪ್ಪಣಿ) ವು ೨.೭ ರಿಂದ ೨.೨ಕ್ಕೆ ಇಳಿದಿದೆ. ಈ ಫಲವತ್ತತೆ ದರವು ಜನಸಂಖ್ಯಾ ಬದಲು ಮಟ್ಟಕ್ಕೆ (ರಿಪ್ಲೇಸ್ಮೆಂಟ್ ಲೆವೆಲ್- ಎಂದರೆ ಒಂದು ದೇಶವು ತದನಂತರದ ಪೀಳಿಗೆಯಲ್ಲೂ ಈಗಿರುವಷ್ಟೇ ಜನಸಂಖ್ಯೆಯನ್ನು ಉಳಿಸಿಕೊಳ್ಳಲು ಬೇಕಾದ ಫಲವತ್ತತೆಯ ಮಟ್ಟ- ಅನುವಾದಕನ ಟಿಪ್ಪಣಿ ) ಬೇಕಿರುವಷ್ಟಿದೆ.
ಮತ್ತೊಂದು ಭರವಸೆದಾಯಕ ಬೆಳವಣಿಗೆಯೆಂದರೆ ಸಾಂಸ್ಥಿಕವಾಗಿ ಹೆರಿಗೆಗಳಲ್ಲಿ (ಮನೆಮಾರುಗಳಲ್ಲಿ ವೈದ್ಯಕೀಯ ಆರೈಕೆಯಿಲ್ಲದೆ ಆಗುತ್ತಿದ್ದ ಹೆರಿಗಳ ಬದಲಿಗೆ ಸೂಕ್ತ ವೈದ್ಯಕೀಯ ಆರೈಕೆಯಿರುವಂಥ ಆಸ್ಪತ್ರೆಗಳಂಥಾ ಕಡೆಗಳಲ್ಲಿ ಆಗುವ ಹೆರಿಗೆಗಳು- ಅನುವಾದಕನ ಟಿಪ್ಪಣಿ) ಆಗಿರುವ ಹೆಚ್ಚಳ. ಕಳೆದ ಸಮೀಕ್ಷೆಯಲ್ಲಿ ಇದರ ಸರಾಸರಿ ಪ್ರಮಾಣ ಶೇ.೩೯ ರಷ್ಟಿತ್ತು (ಅತ್ಯಂತ ಶ್ರೀಮಂತರ ಕುಟುಂಬಗಳಲ್ಲಿ ಶೇ.೮೪ರಷ್ಟು ಮತ್ತು ಅತ್ಯಂತ ಬಡವರ ಕುಟುಂಬಗಳಲ್ಲಿ ಶೇ.೧೩ ರಷ್ಟು.). ಈಗ ಆ ಸರಾಸರಿ ಶೇ.೭೯ಕ್ಕೆ ಜಿಗಿದಿದೆ (ಅತ್ಯಂತ ಶ್ರೀಮಂತರ ಕುಟುಂಬಗಳಲ್ಲಿ ಶೇ.೯೫ ಮತ್ತು ಅತ್ಯಂತ ಬಡವರಲ್ಲಿ ಶೇ. ೬೦). ಹಿಂದಿನ ಅವಧಿಯಲ್ಲಿ ಶೇ.೧೮ರಷ್ಟು ಮಹಿಳೆಯರು ಸಾರ್ವಜನಿಕ ಆಸ್ಪತ್ರೆಗಳನ್ನು ಬಳಸಿದ್ದರೆ ಈ ಅವಧಿಯಲ್ಲಿ ಆದು ಶೇ. ೫೨ಕ್ಕೇರಿದೆ. ಇದರರ್ಥವಿಷ್ಟೆ. ಸರ್ಕಾರಿ ಸೌಲಭ್ಯಗಳು ಲಭ್ಯವಿದ್ದಲ್ಲಿ ಮಹಿಳೆಯರು ಖಾಸಗಿ ಆಸ್ಪತ್ರಗಳ ಬದಲಿಗೆ ಸರ್ಕಾರಿ ಆಸ್ಪತ್ರೆಗಳನ್ನೇ ಬಳಸುತ್ತಾರೆ. ತನ್ನೆಲ್ಲಾ ಮಿತಿಗಳ ನಡುವೆಯೂ ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಮಿಷನ್ (ನ್ಯಾಷನ್ ರೂರಲ್ ಹೆಲ್ತ್ ಮಿಷನ್- ಎನ್ಆರ್ಎಚ್ಎಮ್) ಮತ್ತು ಜನನಿ ಸುರಕ್ಷಾ ಯೋಜನೆಗಳು ಈ ವಿಸ್ತರಣೆ ಮತ್ತು ಹೆಚ್ಚಳಕ್ಕೆ ತಮ್ಮದೇ ಆದ ಕೊಡುಗೆಗಳನ್ನು ನೀಡಿವೆ.
ಈ ಕೆಲವು ಸಕಾರಾತ್ಮಕ ಅಂಶಗಳನ್ನು ಹೊರತುಪಡಿಸಿ, ಎನ್.ಎಫ್.ಎಚ್.ಎಸ್.-೪ರ ಸಮೀಕ್ಷೆಯು ತುರ್ತು ಗಮನ ಮತ್ತು ನಿರಂತರ ಕ್ರಿಯೆಗಳನ್ನು ಬೇಡುವ ಹಲವಾರು ಹಳೆಯ ಮತ್ತು ಹೊಸ ಕ್ಷೇತ್ರಗಳನ್ನು ಗುರುತಿಸಿದೆ. ಮೊದಲನೆಯದಾಗಿ ವರ್ಗ, ಜಾತಿ ಮತ್ತು ಲಿಂಗಗಳನ್ನೆಲ್ಲಾ ಗಮನದಲ್ಲಿಟ್ಟುಕೊಂಡರೆ ಹಲವು ಸೂಚ್ಯಂಕಗಳಲ್ಲಿ ಸುಧಾರಣೆಗಳು ಕಂಡುಬಂದಿದ್ದರೂ ಅಂತರಗಳು ಮಾತ್ರ ಇನ್ನೂ ಅಗಾಧವಾಗಿಯೇ ಇವೆ. ಉದಾಹರಣೆಗೆ ಈ ಸಮೀಕ್ಷೆಯು ಕಂಡುಕೊಂಡಿರುವಂತೆ ಸಮಾಜದ ಕೆಳಸ್ಥರಗಳಲ್ಲಿ ಪ್ರತಿ ಎರಡನೇ ಮಗುವಿನ ದೈಹಿಕ ಬೆಳವಣಿಗೆಯು (ಶೇ.೫೧) ಕುಂಠಿತಗೊಂಡು ಕಡಿಮೆತೂಕ (ಶೇ.೪೯) ಹೊಂದಿದ್ದರೆ ಮೇಲ್ಸ್ಥರಗಳಲ್ಲಿ ಇದು ಐದರಲ್ಲಿ ಒಂದು ಮಗುವಿನಲ್ಲಿ ಮಾತ್ರ ಕಂಡು ಬರುತ್ತದೆ. ಅದೇರೀತಿ ಪ್ರಸವಪೂರ್ವದಲ್ಲಿ ಆಸ್ಪತ್ರೆಗಳಿಗೆ ಕನಿಷ್ಟ ನಾಲಕ್ಕು ಭೇಟಿ ಕೊಟ್ಟವರ ಸಂಖ್ಯೆ ಸಮಾಜದ ಕೆಳಸ್ಥರಗಳಲ್ಲಿ ಶೇ.೨೫ರಷ್ಟಿದ್ದರೆ ಉನ್ನತಸ್ಥರಗಳಲ್ಲಿ ಶೇ.೭೩ರಷ್ಟಿದೆ. ಹೀಗೆ ಈ ಸಮೀಕ್ಷೆಯು ಪ್ರಾದೇಶಿಕ ಮತ್ತು ಸಮಾಜೋ -ಆರ್ಥಿಕ ವ್ಯತ್ಯಾಸಗಳು ಮುಂದುವರೆದಿರುವುದನ್ನು ತೋರಿಸುತ್ತದೆ. ಬಿಹಾರದಲ್ಲಿ ಒಟ್ಟಾರೆ ಫಲವತ್ತತೆ ದರ (ಟೋಟಲ್ ಫರ್ಟಿಲಿಟಿ ರೇಟ್) ಈಗಲೂ ೩.೭ರಷ್ಟಿದ್ದರೆ (ಇದು ೧೯೯೨-೯೩ರಲ್ಲಿ ಅಖಿಲ ಭಾರತ ಮಟ್ಟದಲ್ಲಿದ್ದ ದರ) ತಮಿಳುನಾಡಿನಲ್ಲಿ ೧.೭ಕ್ಕಿಳಿದಿದೆ. ಅದೇ ರೀತಿ ಉತ್ತರ ಪ್ರದೇಶದಲ್ಲಿ ಶಿಶು ಮರಣ ದರ ೬೪ರಷ್ಟಿದ್ದರೆ ಕರ್ನಾಟಕದಲ್ಲಿ ಅದು ಕೇವಲ ೨೮ ಮಾತ್ರ.
ಈ ಸಮಿಕ್ಷೆಯು ಒದಗಿಸಿರುವ ಅಂಕಿಅಂಶಗಳನ್ನು ಗಮನಿಸಿದಾಗ ಆರೋಗ್ಯ ನೀತಿಗಳನ್ನು ರೂಪಿಸುವಾಗ ನಾವು ಈವರೆಗೆ ಕಡೆಗಣಿಸಿದ್ದ ಹಲವಾರು ಅಂಶಗಳನ್ನು ಮೊದಲಿಗಿಂತ ಗಂಭೀರವಾಗಿ ಪರಿಗಣಿಸಬೇಕಾದ ಅಗತ್ಯಗಳನ್ನು ಎತ್ತಿತೋರಿಸುತ್ತದೆ. ಉದಾಹರಣೆಗೆ ನಗರಪ್ರದೇಶದ ಆರೋಗ್ಯದ ಪರಿಸ್ಥಿತಿ ತುಂಬಾ ಕೆಟ್ಟದಾಗಿದ್ದರೂ ಅಲ್ಲಿ ಆರೋಗ್ಯ ಸೇವೆಯ ಮಧ್ಯಪ್ರವೇಶ ಕಡೆಗಣಿಸಲ್ಪಟ್ಟಿದೆ. ಒಂದು ದಶಕದ ನಂತರವೂ ನಗರ ಪ್ರದೇಶದಲ್ಲಿ ರೋಗ ನಿರೋಧಕ ಲಸಿಕೆ ಪಡೆದವರ ದರ ಶೇ. ೬೪ ರಷ್ಟು ಮಾತ್ರ ಇದೆ. (ಗ್ರಾಮೀಣ ಪ್ರದೇಶದಲ್ಲಿ ಅದು ಶೇ.೬೨ ರಷ್ಟಾಗಿದೆ). ಎನ್.ಎಫ್.ಎಚ್.ಎಸ್.-೩ರ ಸಮೀಕ್ಷೆಯಲ್ಲಿ ಈ ದರ ಶೇ.೫೮ ರಷ್ಟಿತ್ತೆಂಬುದನ್ನು ಗಮನಿಸಿದಾಗ ಆಗಿರುವ ಏರಿಕೆ ಎಷ್ಟು ಅತ್ಯಲ್ಪ ಎಂಬುದು ಅರ್ಥವಾಗುತ್ತದೆ. ಹುಟ್ಟಿದ ಒಂದು ಗಂಟೆಯ ಒಳಗೆ ಮೊಲೆಯೂಡಿಸಿಕೊಳ್ಳುವ ಮಕ್ಕಳ ಸಂಖ್ಯೆಯಲ್ಲಿ ನಗರ ಮತ್ತು ಗ್ರಾಮಗಳಲ್ಲಿ ಹೆಚ್ಚು ವ್ಯತ್ಯಾಸವೇನಿಲ್ಲ (ನಗರ ಶೇ.೪೩ ಮತ್ತು ಗ್ರಾಮ ಶೇ.೪೧). ಆದರೆ ಆರು ತಿಂಗಳ ಕಾಲ ಕೇವಲ ಮೊಲೆಹಾಲು ಉಣಿಸುವ ಸಂಖ್ಯೆ ನಗರಕ್ಕಿಂತ ಗ್ರಾಮಗಳಲ್ಲೇ ಜಾಸ್ತಿ ಇದೆ. (ನಗರ ಶೇ. ೫೨ ನಗರ ನಗರ ಶೇ. ೫೬). ಎತರಕ್ಕೆ ತಕ್ಕ ತೂಕವಿಲ್ಲದಿರುವ ಸಮಸ್ಯೆ ನಗರ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ಏಕಸಮನಾಗಿದೆ (ಶೇ.೭.೫). ನಗರೀಕರಣದ ದರವನ್ನು ಗಮನಿಸಿದಾಗ ನಗರ ಸಂದರ್ಭವನ್ನು ಗಮನದಲ್ಲಿಟ್ಟುಕೊಂಡು ಆರೋಗ್ಯ ಸೇವೆಯ ಮಧ್ಯಪ್ರವೇಶವನ್ನು ಯೋಜಿಸುವುದು ತುರ್ತಾಗಿದೆ.
ಅಪೌಷ್ಟಿಕತೆಯ ಜೊತೆಜೊತೆಗೆ ಭಾರತವು ಅತಿತೂಕ ಮತ್ತು ಬೊಜ್ಜುಗಳ ಸಮಸ್ಯೆಯನ್ನೂ ಎದುರಿಸುತ್ತಿದೆ. ಈ ಸಮಸ್ಯೆಯು ಮಧುಮೇಹ ಮತ್ತು ಅತಿ ಒತ್ತಡದಂಥ ಸಾಂಕ್ರಾಮಿಕವಲ್ಲದ ರೋಗಗಳ ಹುಟ್ಟಿಗೆ ಬೇಕಾದ ಪರಿಸ್ಥಿತಿಯನ್ನು ಒದಗಿಸುತ್ತದೆ. ಎನ್.ಎಫ್.ಎಚ್.ಎಸ್.-೪ರ ಸಮೀಕ್ಷೆಯ ಪ್ರಕಾರ ಶೇ.೨೧ ರಷ್ಟು ವಯಸ್ಕ ಮಹಿಳೆಯರು ಮತ್ತು ಶೇ.೧೯ರಷ್ಟು ವಯಸ್ಕ ಪುರುಷರು ಅಧಿಕ ತೂಕ ಅಥವಾ ಬೊಜ್ಜಿನಿಂದ ಬಳಲುತ್ತಿದ್ದು ಈ ಸಮಸ್ಯೆ ನಗರ ಪ್ರದೇಶದಲ್ಲಿ ಹೆಚ್ಚಾಗಿದೆ. ವಾಸ್ತವವಾಗಿ ಈ ಅಪೌಷ್ಟಿಕತೆ ಮತ್ತು ಅಧಿಕ ತೂಕಗಳಿಗೆ ಸಮಾನವಾದ ಕಾರಣಗಳಿವೆ. ಆಹಾರ ಪದ್ಧತಿಗಳ ಜಾಗತೀಕರಣ. ಆಹಾರಗಳ ಉತ್ಪಾದನೆ, ವಿತರಣೆ ಮತ್ತು ವ್ಯಾಪಾರಗಳ ಮೇಲಿನ ನಿಯಂತ್ರಣ ಸ್ಥಳೀಯ ಸಮುದಾಯಗಳ ಕೈತಪ್ಪಿ ದೊಡ್ಡ ಕಾರ್ಪೊರೇಷನ್ಗಳ ಕೈ ಸೇರಿದೆ. ಭಾರತವು ಈವರೆಗೆ ತನ್ನ ಆಹಾರ ವೈವಿಧ್ಯತೆಯನ್ನು ರಕ್ಷಿಸಿಕೊಳ್ಳಲಾಗಲೀ, ಮಾರುಕಟ್ಟೆಯ ಮೇಲೆ ದಾಳಿ ಇಡುತ್ತಿರುವ ಅತಿ ಸಂಸ್ಕರಿತ ಆಹಾರ ಸಾಮಗ್ರಿಗಳನ್ನು ನಿಯಂತ್ರಿಸಲಾಗಲೀ ಯಾವುದೇ ಕ್ರಮಗಳನ್ನು ತೆಗೆದುಕೊಂಡಿಲ್ಲ.
ಈ ಅಂಕಿಅಂಶಗಳ ಹಿನ್ನೆಲೆಯಲ್ಲಿ ನೋಡಿದಾಗ ೨೦೧೭ರ ರಾಷ್ಟ್ರೀಯ ಆರೋಗ್ಯ ನೀತಿಯು ಸಾಂಕ್ರಾಮಿಕವಲ್ಲದ ರೋಗಗಳ (ನಾನ್-ಕಮ್ಯುನಿಕಬಲ್ ಡಿಸೀಸಸ್) ನಿಯಂತ್ರಣದ ಪ್ರಸ್ತಾಪವನ್ನು ಮಾಡಿದ್ದರೂ ಅದನ್ನು ಹೇಗೆ ಸಾಧಿಸುತ್ತದೆಂಬ ಬಗ್ಗೆ ಯಾವುದೇ ಕಾರ್ಯಸೂಚಿಯನ್ನು ಮುಂದಿಟ್ಟಿಲ್ಲ. ವಾಸ್ತವವಾಗಿ ಪೌಷ್ಟಿಕತೆ, ನೈರ್ಮಲ್ಯ, ಲಿಂಗ ಮತ್ತು ಬಡತನಗಳಂಥ ಸಾಮಾಜಿಕ ನಿರ್ಣಾಯಕ ಅಂಶಗಳಿಗೂ ಆರೋಗ್ಯ ಪರಿಸ್ಥಿತಿಗೂ ಇರುವ ಸಂಬಂಧಗಳನ್ನು ಪರಿಗಣಿಸುವಲ್ಲಿ ಎನ್.ಎಫ್.ಎಚ್.ಎಸ್.-೪ ತುಂಬಾ ಹಿಂದೆ ಬಿದ್ದಿದೆ. ಅದೇರೀತಿ ಖಾಸಗಿ ಆರೋಗ್ಯ ಸೌಕರ್ಯಗಳನ್ನು ಸರಿಯಾಗಿ ನಿಯಂತ್ರಿಸುವ ಅಗತ್ಯವನ್ನು ಸಹ ಅದು ಸಾಕಷ್ಟು ಗುರುತಿಸುವುದಿಲ್ಲ. ಅಗತ್ಯವಿರುವಷ್ಟು ಸಾರ್ವಜನಿಕ ಆರೋಗ್ಯ ಸೌಕರ್ಯಗಳ ಲಭ್ಯತೆಯಿಲ್ಲದಿರುವುದರಿಂದ ಹೆಚ್ಚೆಚ್ಚು ಜನರು ಖಾಸಗಿ ಆರೋಗ್ಯ ಸೇವೆಗೆ ಮೊರೆಹೋಗುತ್ತಿದ್ದಾರೆ. ಇಂಥಾ ಸನ್ನಿವೇಶದಲ್ಲಿ ಖಾಸಗಿ ಆರೋಗ್ಯ ಸಂಸ್ಥೆಗಳು ನೀತಿಬದ್ಧ ಮತ್ತು ಗುಣಮಟ್ಟದ ಆರೋಗ್ಯ ಸೇವೆಗಳನ್ನು ಒದಗಿಸುವುದನ್ನು ಖಾತರಿಪಡಿಸಿಕೊಳ್ಳಲು ಬೇಕಾದ ಕಾನೂನು ಮತ್ತು ಸಾಂಸ್ಥಿಕ ಚೌಕಟ್ಟನ್ನು ಜಾರಿಯಲ್ಲಿಡುವುದು ಅತ್ಯಗತ್ಯವಾಗಿದೆ. ಭಾರತದ ಆರೋಗ್ಯ ವ್ಯವಸ್ಥೆಯನ್ನು ಕೇವಲ ಲಾಭವನ್ನು ಗಮನದಲ್ಲಿಟ್ಟುಕೊಂಡು ನಡೆಸಲು ಸಾಧ್ಯವಿಲ್ಲ. ಆದ್ದರಿಂದಲೇ ಎಲ್ಲಾ ಹಂತದ ಆರೋಗ್ಯ ಸೇವೆಗಳನ್ನು ಸಾರ್ವಜನಿಕ ಆರೋಗ್ಯ ವ್ಯವಸ್ಥೆಯೇ ಒದಗಿಸುವ ರೀತಿ ವಿಸ್ತರಣೆ ಮಾಡುವುದು ಅತ್ಯುತ್ತಮವಾದದ್ದು.
ಕೃಪೆ: Economic and
Political Weekly
April 8, 2017.
Vol 52. No. 14
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ