ಸೋಮವಾರ, ಮಾರ್ಚ್ 20, 2017

ಹೊರಲಾಗದಷ್ಟು ನಿರೀಕ್ಷೆಗಳ ಭಾರವನ್ನು ಹೊರಿಸಿರುವ ಉತ್ತರ ಪ್ರದೇಶದ ಫಲಿತಾಂಶ ಅನುಶಿವಸುಂದರ್
uttar pradesh election ಗೆ ಚಿತ್ರದ ಫಲಿತಾಂಶ

ಇಲ್ಲಸಲ್ಲದ ಭರವಸೆಗಳ ಮೂಲಕ ಬಡವರ ನಿರೀಕ್ಷೆಗಳನ್ನು ಮುಗಿಲೆತ್ತರಕ್ಕೆ ಏರಿಸಿರುವ ಮೋದಿ ಅನಿವಾರ್ಯವಾಗಿ ಸಂಘಪರಿವಾರದ ಬಹುಸಂಖ್ಯಾತ ದುರಭಿಮಾನಿ ಕಾರ್ಯಸೂಚಿಗೆ ಮರಳಲೇಬೇಕಾಗುತ್ತದೆ.

ಉತ್ತರ ಪ್ರದೇಶ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ (ಬಿಜೆಪಿ) ಸಾಧಿಸಿರುವ ಅದ್ಭುತ ಚುನಾವಣಾ ವಿಜಯವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿಯವರ ವೈಯಕ್ತಿಕ ಗೆಲುವೆಂದೇ ಪರಿಗಣಿಸಲಾಗುತ್ತಿದೆ. ಅದು ಬಡವರಲ್ಲಿ ಉತ್ತಮ ನಾಳೆಗಳ ಬಗೆಗಿನ ನಿರೀಕ್ಷೆಗಳನ್ನು ಮುಗಿಲೆತ್ತರಕ್ಕೆ  ಏರಿಸಿದೆ. ಆದರೆ ಆಳುವ ಸರ್ಕಾರದ ಆರ್ಥಿಕ ನೀತಿಗಳನ್ನು ಗಮನಿಸಿದಲ್ಲಿ ಹೊಸ ಉದ್ಯೋಗ ಸೃಷ್ಟಿಯು ದೊಡ್ಡ ಸವಾಲಿನ ವಿಷಯವೇ ಆಗಲಿದೆ. ಹೀಗಾಗಿ ಮೋದಿಯವರಿಗೆ ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರೆಸ್ಸೆಸ್ಸ್) ಪಾರಂಪರಿಕ ಹಿಂದೂ ಬಹುಸಂಖ್ಯಾತ ಮತ್ತು ತೀವ್ರಗಾಮಿ ರಾಷ್ಟ್ರೀಯವಾದಿ ಕಾರ್ಯಸೂಚಿಯನ್ನು ಆಶ್ರಯಿಸುವುದು ಅನಿವಾರ್ಯವಾಗಲಿದೆ. ೨೦೧೯ರ ಸಾರ್ವತ್ರಿಕ ಚುನಾವಣೆಗಳಲ್ಲಿ ಭಾರತದ ಎರಡನೇ ಗಣರಾಜ್ಯದ ಏಕಮೇವಾದ್ವಿತೀಯ ನಾಯಕನಾಗಿ ಹೊರಹೊಮ್ಮುತ್ತೇನೆಂಬ ಆತ್ಮವಿಶ್ವಾದಲ್ಲಿ ಮೋದಿಯವರಿದ್ದಾರೆ. ಆದರೆ ಅತ್ಮವಿಶ್ವಾಸ ನೆಲೆನಿಂತಿರುವುದು, ಅವರ ಸೈದ್ಧಾಂತಿಕ ಯಜಮಾನಿಕೆಯ ಪ್ರಭಾವದ ವಿರುದ್ಧದ ಪ್ರತಿರೋಧದ ನೆಲೆಗಳನ್ನು ಗುರುತಿಸಿ ಒಂದಾಗಿ ಹೋರಾಡಲಾಗದಷ್ಟು ದಿಕ್ಕೆಟ್ಟು ಚೆಲ್ಲಾಪಿಲ್ಲಿಯಾಗಿರುವ ವಿರೋಧಪಕ್ಷಗಳ ದೌರ್ಬಲ್ಯದ ನೆಲೆಯ ಮೇಲೆ.  

ಪ್ರತಿ ಆರು ಭಾರತೀಯರಲ್ಲಿ ಒಬ್ಬರು ವಾಸ ಮಾಡುವ ಭಾರತದ ಅತ್ಯಂತ ಜನಸಾಂದ್ರಿತ ರಾಜ್ಯವಾದ ಉತ್ತರ ಪ್ರದೇಶದಲ್ಲಿ ಬಿಜೆಪಿಯು ಶೇ.೮೦ರಷ್ಟು ಶಾಸನಾಸಭಾ ಕ್ಷೇತ್ರಗಳನ್ನು ಗೆದ್ದುಕೊಂಡಿದೆ. ಉತ್ತರಪ್ರದೇಶದ ಬಹಳಷ್ಟು ಮತದಾರರಿಗೆ ಮೋದಿ ಭರವಸೆಯ ಆಶಾಕಿgಣವಾಗಿ ಕಂಡಿದ್ದಾರೆ. ಮೋದಿಯ ಸುತ್ತಾ ಸೃಷ್ಟಿಸಲಾಗಿದ್ದ ರಣೋತ್ಸಾಹಿಯೆಂಬ ಮತ್ತು ಯಾವ ಬಗೆಯ ಸ್ವಜನಹಿತಾಸಕ್ತಿ ಅಥವಾ ಕೌಟುಂಬಿಕ ಹಿತಾಸಕ್ತಿ ಇಲ್ಲದ ನಿಷ್ಕಳಂಕ ರಾಜಕಾರಣಿಯೆಂಬ ಇಮೇಜು ಅಸಂಖ್ಯಾತ ಬಡಜನರ ಮನಗೆದ್ದಿರುವುದು ಸ್ಪಷ್ಟವಾಗಿದೆ. ೧೯೭೧ರಲ್ಲಿ ಬಾಂಗ್ಲಾದೇಶದ ನಿರ್ಮಾಣದ ನಂತರದ ಇಂದಿರಾಗಾಂಧಿಯವರಿಗೆ ದಕ್ಕಿದ್ದ ಜನಪ್ರಿಯತೆಯ ನಂತರದಲ್ಲಿ ಭಾರತದ ರಾಜಕಾರಣದಲ್ಲಿ ಇನ್ಯಾವ ರಾಜಕಾರಣಿಯೂ ಮೋದಿಯವರ ರೀತಿ ಇಡೀ ರಾಜಕಾರಣದ ಮೇಲೆ ಬಗೆಯ ಅಧಿಪತ್ಯವನ್ನು ಸಾಧಿಸಿರಲಿಲ್ಲ. ಅದೇ ರೀತಿ ಯಾವೊಬ್ಬ ಪ್ರಧಾನಮಂತ್ರಿಯೂ ಒಂದು ರಾಜ್ಯ ಮಟ್ಟದ ಚುನಾವಣೆಗಳಲ್ಲಿ ಇಷ್ಟೊಂದು ಸಕ್ರಿಯವಾಗಿ ಮತ್ತು ಅತ್ಯುತ್ಸಾಹದಿಂದ ಪಾಲ್ಗೊಂಡಿರಲಿಲ್ಲ. ಹಾಗೆಯೇ ಬಾರಿ ಬಿಜೆಪಿ ಮಾಡಿದಂತೆ  ಯಾವೊಂದು ಚುನಾವಣಾ ಪಕ್ಷವು ರಾಜ್ಯದ ಐದನೇ ಒಂದರಷ್ಟು ಜನಸಂಖ್ಯೆ ಹೊಂದಿರುವ ಮುಸ್ಲಿಮರನ್ನು ಹೊರಗಿಟ್ಟಿರಲಿಲ್ಲ. ಅದು ಮುಸ್ಲಿಮರಿಗೆ ನೀಡಿದ ಸಂದೇಶ ಸ್ಪಷ್ಟವಾಗಿತ್ತು: ಹೇಗಿದ್ದರೂ ನೀವು ನಮಗೆ ಓಟು ಹಾಕುವುದಿಲ್ಲ ಎಂದಾದ ಮೇಲೆ ಏಕೆ ಒಬ್ಬನೇ ಒಬ್ಬ ಮುಸ್ಲಿಂ ಅಭ್ಯರ್ಥಿಯನ್ನಾದರೂ ನಮ್ಮ ಪಕ್ಷದಿಂದ ಚುನಾವಣೆಗೆ ನಿಲ್ಲಿಸಬೇಕು

ಉಪ್ರ ಚುನಾವಣೆಗಳ ಸೂಕ್ಷ್ಮಾತಿಸೂಕ್ಷ್ಮ ಸಂಗತಿಗಳನ್ನು ಯಶಸ್ವಿಯಾಗಿ ನಿರ್ವಹಿಸಿದ ಮೋದಿಯವರ ನಿಷ್ಟಾವಂತ ದಳಪತಿಯಾದ ಬಿಜೆಪಿಯ ಅಧ್ಯಕ್ಷ ಅಮಿತ್ ಶಾ ರವರಿಗೆ ಉಳಿದವರಿಗಿಂತ ಹೆಚ್ಚು ಓಟು ಪಡೆದು ಮೊದಲು ಗುರಿಮುಟ್ಟುವ (ಫಸ್ಟ್ ಪಾಸ್ಟ್ ಪೋಸ್ಟ್ ಸಿಸ್ಟಮ್)ವವರು ಗೆಲ್ಲುವ ಭಾರತದ ಚುನಾವಣಾ ವ್ಯವಸ್ಥೆಯ ಹುಚ್ಚಾಟಗಳೆಲ್ಲದರ ಪರಿವಿತ್ತು. ಚುನಾವಣಾ ಪದ್ಧತಿಯಲ್ಲಿ ಗೆದ್ದವರು ಎಲ್ಲವನ್ನೂ ಕೊಂಡೊಯ್ಯುತ್ತಾರೆ ಮತ್ತು ಸೋತವರು ಎಲ್ಲವನ್ನೂ ಕಳೆದುಕೊಳ್ಳುತ್ತಾರೆ.

ಉತ್ತರಾಖಾಂಡ್ ಬಿಜೆಪಿಯ ವಿಜಯವೂ ಸಹ ಉತ್ತರಪ್ರದೇಶದಷ್ಟೇ ನಿರ್ಣಾಯಕವಾಗಿದೆ. ಉತ್ತರಾಖಾಂಡ್ ರಾಜ್ಯವು ಉತ್ತರಪ್ರದೇಶಕ್ಕಿಂತ ಭಿನ್ನ. ೨೦೦೦ದಲ್ಲಿ ಪ್ರತ್ಯೇಕ ರಾಜ್ಯವಾಗಿ ರೂಪುಗೊಂಡ ನಂತರದಲ್ಲಿ ಅದು ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳ ನೇರ ಸೆಣೆಸಾಟದ ಕಣವಾಗಿಯೇ ಮುಂದುವರೆದಿದೆ. ಮತ್ತು  ಪ್ರತಿ ಚುನಾವಣೆಯಲ್ಲೂ ಕಾಂಗ್ರೆಸ್ ಅಥವಾ ಬಿಜೆಪಿ ಪಕ್ಷಗಳು ಒಬ್ಬರಾದ ನಂತರ ಮತ್ತೊಬ್ಬರಂತೆ ಅಧಿಕಾರವನ್ನು ದಕ್ಕಿಸಿಕೊಳ್ಳುತ್ತಾ ಬಂದಿದ್ದಾರೆ.

ಚುನಾವಣೆಗಳು ನಡೆದ ಐದುರಾಜ್ಯಗಳ ಹಿನ್ನೆಲೆ ಬೇರೆಬೇರೆಯಾಗಿದ್ದರೂ ಎಲ್ಲಾ ಫಲಿತಾಂಶಗಳಲ್ಲಿರುವ ಒಂದು ಸಾಮ್ಯತೆಯೇನೆಂದರೆ ಅಧಿಕಾರದಲ್ಲಿದ್ದ ಪಕ್ಷ ಚುನಾವಣೆಯಲ್ಲಿ ಸೋಲುಕಂಡಿದೆ. ಆದರೂ ಮಣಿಪುರದಲ್ಲಿ ಮಾತ್ರ ಅಧಿಕಾರರೂಢ ಪಕ್ಷ ವಿರೋಧಿ ಅಲೆ ಅತ್ಯಂತ ಕಡಿಮೆ ಇತ್ತು. ಅಲ್ಲಿ ಕಾಂಗ್ರೆಸ್ಸಿನ ಮುಖ್ಯಮಂತ್ರಿ ಒಕ್ರಾಂ ಇಬೋಬಿ ಸಿಂಗ್ ಅವರು ಸತತ ಮೂರು ಬಾರಿ ಪೂರ್ಣ ಐದೈದು ವರ್ಷಾವಧಿಗಳ ಕಾಲ ಅಧಿಕಾರದಲ್ಲಿದ್ದರು. ಆದರೆ ಮಣಿಪುರದಲ್ಲಾಗಲೀ ಅಥವಾ ಗೋವಾದಲ್ಲಾಗಲೀ ಕಾಂಗ್ರೆಸ್ ಪಕ್ಷದ ನಾಯಕತ್ವವು (ಅಥವಾ ಅಳಿದುಳಿದಿರುವ ನಾಯಕತ್ವವು) ವಿಜಯದ ದವಡೆಯಿಂದ ಸೋಲನ್ನು ಕಿತ್ತುಕೊಂಡರೆಂದೇ ಹೇಳಬೇಕು! ಏಕೆಂದರೆ ಶತಾಯ ಗತಾಯ ಅಧಿಕಾರವನ್ನು ಪಡೆಯಲು ಅನುಸರಿಸುವ ತಂತ್ರ ಕುತಂತ್ರಗಳನ್ನು ಸ್ವತಃ ಕಾಂಗ್ರೆಸ್ಸಿನಿಂದಲೇ ಕಲಿತು ಅರಗಿಸಿಕೊಂಡಿರುವ  ಬಿಜೆಪಿಯು ರಾಜ್ಯದಲ್ಲಿ ಬಾರಿ ಅನುಸರಿಸಿದ ತಂತ್ರೋಪಾಯಗಳನ್ನು ಎದಿರಿಸುವಲ್ಲಿ  ಕಾಂಗ್ರೆಸ್ ಹೀನಾಯವಾಗಿ ಸೋತಿತು. ಕೇವಲ ತನ್ನ ದೌರ್ಬಲ್ಯ ಮತ್ತು ಅದಕ್ಷತೆಗಳ ಕಾರಣದಿಂದ ಪಡೆದುಕೊಳ್ಳಬಹುದಾಗಿದ್ದ  ಅಧಿಕಾರವನ್ನು ಶೋಚನೀಯವಾಗಿ ಕಳೆದುಕೊಂಡಿತು.
uttar pradesh election ಗೆ ಚಿತ್ರದ ಫಲಿತಾಂಶ

ಪಂಜಾಬಿನಲ್ಲಿ ಎಲ್ಲರೂ ಊಹಿಸಿದಂತೆ ಸತತ ೧೦ ವರ್ಷಗಳ ಕಾಲ ಅಧಿಕಾರದಲ್ಲಿದ್ದ ಶಿರೋಮಣಿ ಅಕಾಲಿ ದಳ-ಬಿಜೆಪಿ ಕೂಟ ಚುನಾವಣೆಯಲ್ಲಿ ಸೋಲೊಪ್ಪಿತು. ಆದರೆ, ಅವು ಆಮ್ ಆದ್ಮಿ ಪಕ್ಷಕ್ಕಿಂತ ಕಡಿಮೆ ಸೀಟುಗಳನ್ನು ಪಡೆದುಕೊಂಡರೂ ಒಂದು ಕೂಟವಾಗಿ ಆಪ್ ಪಕ್ಷಕ್ಕಿಂತ ಹೆಚ್ಚಿನ ಓಟುಗಳನ್ನು ಪಡೆದುಕೊಂಡಿವೆ. ಪಂಜಾಬಿನ ರಾಜಕಾರಣದಲ್ಲಿ ಹೊಸದಾಗಿ ಪ್ರವೇಶ ಮಾಡಿದ್ದ ಆಮ್ಆದ್ಮಿ ಪಕ್ಷ (ಆಪ್)ಕ್ಕೆ ಫಲಿತಾಂಶದಿಂದ ತುಂಬಾ ನಿರಾಶೆಯಾಗಿದೆ. ಕಳೆದೆರಡು ಚುನಾವಣೆಗಳಿಂದ ಅಕಾಲಿದಳ ಮತ್ತು ಬಿಜೆಪಿ ಕೂಟಕ್ಕೆ ಓಟು ಹಾಕುತ್ತಿದ್ದ ಬಹುಪಾಲು ಮತದಾರರು ಬಾರಿ ಆಪ್ ಗಿಂತ ಕಾಂಗ್ರೆಸ್ಗೆ ಓಟು ಹಾಕುವುದು ಉತ್ತಮ ಎಂದು ಭಾವಿಸಲು ಪ್ರಮುಖ ಕಾರಣ ಆಪ್ ಪಕ್ಷ ಮಿಲಿಟೆಂಟ್ಗಳ ನಿಕಟವರ್ತಿಯಾಗಿದೆಯೆಂಬ ಆರೋಪ, ಅದರ ಅನುಭವದ ಕೊರತೆ ಮತ್ತು ಪಕ್ಷದ ಅಧಿಕಾರ ಕೇಂದ್ರ ದೆಹಲಿಯಲ್ಲಿರುವುದು. ಕೂತೂಹಲದ ವಿಷಯವೆಂದರೆ ನೋಟು ನಿಷೇಧದ ವಿಷಯ ಪಂಜಾಬಿನ ಮತದಾರರ ಮೇಲೆ ಯಾವುದೇ ಪರಿಣಾಮ ಬೀರದಿದ್ದದ್ದು. ಆದರೆ ಉತ್ತರ ಪ್ರದೇಶದಲ್ಲಿ ಮಾತ್ರ ಇದು ಭಿನ್ನವಾಗಿತ್ತು. ಯಾವ ನೋಟು ನಿಷೇಧದ ಮೂಲಕ ಆರ್ಥಿಕ ಹೊರೆಯನ್ನು ಸೃಷ್ಟಿಸಿದ ಅಪರಾಧವನ್ನು ಮೋದಿ ಸುಖಾಸುಮ್ಮನೆ ಮೈಮೇಲೆ ಎಳೆದುಕೊಂಡರೆಂದು ಎಣಿಸಲಾಗುತ್ತಿತ್ತೋ ಅದನ್ನು ಮೋದಿ ರಾಜಕೀಯ ಲಾಭವನ್ನಾಗಿಸಿಕೊಂಡರು.

ಇದು ಹೇಗೆ ಸಾಧ್ಯವಾಯಿತು?

ಉತ್ತರಪ್ರದೇಶದಲ್ಲಿ ಮೋದಿ ಮಾಡಿದ ಅಂತಿಮ ಚುನಾವಣಾ ಭಾಷಣದಲ್ಲಿ ತಾನು ತಪ್ಪುಗಳನ್ನು ಮಾಡಿರಬಹುದಾದರೂ ತನ್ನ
ಉದ್ದೇಶಗಳನ್ನು ಅನುಮಾನಿಸಲು ಸಾಧ್ಯವಿಲ್ಲವೆಂಬ ವಿಷಯವನ್ನು ಪ್ರಮುಖವಾಗಿ ಪ್ರಸ್ತಾಪಿಸುತ್ತಿದ್ದರು. ನೋಟು ನಿಷೇಧವು ಕಪ್ಪು ಆರ್ಥಿಕತೆಯ ಮೇಲೆ ಎಳ್ಳಷ್ಟೂ ಪ್ರಭಾವ ಬೀರುವುದಿಲ್ಲ ಅಥವಾ ಭಯೋತ್ಪಾದನೆಗೆ ಒದಗುತ್ತಿರುವ ಹಣಕಾಸು ನೆರವನ್ನೂ ಅಥವಾ ನಕಲಿ ನೋಟು ಬಳಕೆಯನ್ನೂ ತಡೆಗಟ್ಟುವುದಿಲ್ಲ. ಅಲ್ಲದೆ ಭಾರತವು ಅಲ್ಪ ನಗದಿನ (ಲೆಸ್ ಕ್ಯಾಷ್) ಆರ್ಥಿಕತೆಯಾಗಲು ಸಾಕಷ್ಟು ಸಮಯ ಬೇಕು. ಇವೆಲ್ಲಾ ನಿಜವೇ ಆಗಿದ್ದರೂ ತಮ್ಮ ನಿಲುವನ್ನು ಜನರಿಗೆ ತಲುಪಿಸಿ ಒಪ್ಪಿಸುವ ಮೋದಿಯವರ ಸಂವಹನಾ ಚಾತುರ್ಯದ ಮುಂದೆ ಅವರ ವಿರೋಧಿಗಳು ಕಂಗಾಲಾಗಿಬಿಟ್ಟರು. ನೋಟು ನಿಷೇಧದ ವಿರೋಧಿಗಳಿಗೆ ಅದೊಂದು ಬಗೆಯ ಸತ್ಯದ ಸಾಕ್ಷಾತ್ಕಾರದ ಗಳಿಗೆಯೂ ಆಗಿಬಿಟ್ಟಿತ್ತು. ಪ್ರಕ್ರಿಯೆಯಲ್ಲಿ ಪ್ರಧಾನಮಂತ್ರಿಗಳ ಭಾವೋದ್ರೇಕದ ಶೈಲಿಯ ಮಾತುಗಳು ಅದರ ಉತ್ತುಂಗವನ್ನು ತಲುಪಿತ್ತು. ನೋಟುನಿಷೇಧವು ಎಲ್ಲಾ ಬಗೆಯ ವರ್ಗ ವ್ಯತ್ಯಾಸಗಳನ್ನು ಅಳಿಸಿಹಾಕಿ ಬಡವರನ್ನು, ಮಧ್ಯಮವರ್ಗದವರನ್ನು ಮತ್ತು ಕೆಲವು ಶ್ರೀಮಂತರನ್ನೂ ಬ್ಯಾಂಕಿನ ಶಾಖೆಗಳ ಮುಂದೆ ಒಂದೇ ಸಾಲಿನಲ್ಲಿ ನಿಲ್ಲಿಸುವ ಸಮಾನತಾ ಕ್ರಮವಾಗಿಬಿಟ್ಟಿತು. ನೋಟು ನಿಷೇಧದ ವಿನಾಶಕಾರಿ ಆರ್ಥಿಕ ಪ್ರಭಾವಗಳ ಮೇಲೆ ಮಾತ್ರ ಗಮನ ಕೇಂದ್ರೀಕರಿಸಿದ ನಮ್ಮಂಥವರು ಅದರಲ್ಲಿದ್ದ ರಾಜಕೀಯ ಸಂಕೇತ-ಸಂದೇಶಗಳನ್ನು ಗ್ರಹಿಸಲಾಗಲಿಲ್ಲ. ಬಡವರ ಮಟ್ಟಿಗೆ ಬದುಕು ಯಾವಾಗಲೂ ಸಂಕಷ್ಟಗಳಿಂದಲೇ ಕೂಡಿರುತ್ತದೆ. ಆದರೆ ನೋಟುನಿಷೇಧದ ಕ್ರಮದಿಂದ ಶ್ರೀಮಂತರೂ ಕಷ್ಟಗಳನ್ನು ಅನುಭವಿಸುವಂತಾಗಿದೆಯೆಂಬ ಭಾವನೆಗಳನ್ನು ಮೋದಿ ಹುಟ್ಟುಹಾಕಿದರು. ಮತ್ತು ಅವನ್ನು ಇನ್ನಷ್ಟು ಗಟ್ಟಿಯಾಗಿ ಚಾಲ್ತಿಯಲ್ಲಿಟ್ಟರು. ಇದು ಕೃಷಿಯಲ್ಲಿ ಸಮೃದ್ಧವಾಗಿರುವ ರಾಜ್ಯವಾದ ಪಂಜಾಬಿಗಿಂತ ಸಾಪೇಕ್ಷವಾಗಿ ಹಿಂದುಳಿದಿರುವ ಮತ್ತು ಆಶೋತ್ತರಗಳು ಇನ್ನಷ್ಟು ವ್ಯಕ್ತಸ್ವರೂಪದಲ್ಲಿರುವ ಉತ್ತರಪ್ರದೇಶದಲ್ಲಿ ಹೆಚ್ಚು ಫಲಿತಾಂಶಗಳನ್ನು ನೀಡಿತು. ನೋಟುನಿಷೇಧsವು ಶ್ರೀಮಂತರಿಗಿಂತ ಎಷ್ಟೋಪಟ್ಟು ಹೆಚ್ಚು ಬಡವರ ಬದುಕಿನ ಮೇಲೆ ತೀವ್ರ ಪರಿಣಾಮವನ್ನುಂಟುಮಾಡಿದೆ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಕ್ರಮದ ಟೀಕಾಕಾರರು ( ಪತ್ರಿಕೆಗೆ ಅದರ ಬಗ್ಗೆ ಬರೆದ ಹಲವು ಲೇಖಕರನ್ನೂ ಒಳಗೊಂಡಂತೆ) ಗಣನೆಗೆ ತೆಗೆದುಕೊಳ್ಳದೆ ಕಡೆಗಣಿಸಿದ ಪ್ರಮುಖ ಸಂಗತಿಯೆಂದರೆ ಅಸಾಧಾರಣ ಕ್ರಮವನ್ನು ಬಡಜನರ ಹಿತಕ್ಕಾಗಿಯೇ ಜಾರಿಗೆ ತರಲಾಗಿದೆ ಎಂದು ನಂಬಿಸಲು ಅಪಾರ ಶ್ರದ್ಧೆ ಮತ್ತು ಉತ್ಸಾಹದಿಂದ ನಡೆದ ಪ್ರಚಾರ.

ಬಂಡವಾಳಶಾಹಿ ಮೋದಿಯ ನಿರಂಕುಶ ಮಾದರಿ ಮತ್ತು ಸಮಾಜವಾದಿ ಇಂದಿರಾಗಾಂಧಿಯವರ ನಿರಂಕುಶ ಮಾದರಿಗಳ ನಡುವಿನ ಸಾಮ್ಯತೆಗಳ ಬಗ್ಗೆ ಸಾಕಷ್ಟು ಚರ್ಚೆ ನಡೆದಿದೆ. ಆದರೆ ಅವುಗಳ ನಡುವೆ ಸಾಕಷ್ಟು ವ್ಯತ್ಯಾಸಗಳಿವೆ. ತನ್ನ ಪಕ್ಷವನ್ನು ಎರಡು ಸಾರಿ ಒಡೆದು, ದೇಶದ ಬಹುಪಾಲು ಬ್ಯಾಂಕಿಂಗ್ ವ್ಯವಸ್ಥೆಯನ್ನು ರಾಷ್ಟ್ರೀಕರಿಸಿದ ಮತ್ತು ರಾಜಪ್ರತಿನಿಧಿಗಳಿಗೆ ರಾಜಧನವನ್ನು ರದ್ದುಮಾಡಿದ, ಕಾಂಗ್ರೆಸ್ ಪಕ್ಷದಲ್ಲಿದ್ದ ಏಕೈಕ ಗಂಡಸಿನ ಜನಪ್ರಿಯತೆಯನ್ನು  ಗರೀಬಿ ಹಠಾವೋ ಕಾರ್ಯಕ್ರಮ ತುತ್ತತುದಿಗೇರಿಸಿತು. ಆದರೆ ಇಂದಿನ ಪ್ರಧಾಮಂತ್ರಿಯ  ಘೋಷಣೆ ಇರುವುದು ಬಡತನವನ್ನು ಅಳಿಸುವ ಬಗ್ಗೆ ಅಲ್ಲ. ಇರುವುದರಲ್ಲೇ ಉತ್ತಮ ಜೀವನದ ಅವಕಾಶಗಳನ್ನು ಕಲ್ಪಿಸಿಕೊಡುವುದರ ಬಗ್ಗೆ. ಯಾವರೀತಿ ಸಂಘಪರಿವಾರದ ರಾಷ್ಟ್ರೀಯತೆಯು ದೇಶದ ಶೇ.೮೦ರಷ್ಟು ಹಿಂದೂಗಳ ಧಾರ್ಮಿಕತೆಯ ಜೊತೆ ತಳುಕುಹಾಕಿಕೊಂಡಿದೆಯೋ ಅದೇ ರೀತಿ ಇತ್ತೀಚಿನ ದಿನಗಳಲ್ಲಿ ಸಂಘಪರಿವಾರದ ಹಿಂದೂತ್ವ ಕಾರ್ಯಸೂಚಿಯನ್ನು ಅತ್ಯಂತ ಚತುರತೆಯಿಂದ  ಅಭಿವೃದ್ಧಿಯ ಜೊತೆ ಬೆಸೆಯಲಾಗುತ್ತಿದೆ. ಬಡವರಿಗೆ ದಾನದ ರೀತಿ ಭತ್ಯೆಗಳನ್ನು ಕೊಡುವ ಬದಲು ಅವರಿಗೆ ಉದ್ಯೋಗಾವಕಾಶಗಳನ್ನು ಕಲ್ಪಿಸುವುದು ತನ್ನ ಗುರಿಯೆಂದು ಮೋದಿ ಸರ್ಕಾರ ಹೇಳಿಕೊಳ್ಳುತ್ತದೆ. ಆದರೆ ಹಿಂದಿನ ಸರ್ಕಾರವು ಜಾರಿಗೆ ತಂದ ಹಲವು ಕಲ್ಯಾಣ ಯೋಜನೆಗಳನ್ನು (ರಿಯಾಯತಿ ದರದಲ್ಲಿ ಅಡುಗೆ ಅನಿಲ ಒದಗಿಸುವುದರಿಂದ ಮೊದಲುಗೊಂಡು ಶೂನ್ಯ ಉಳಿತಾಯದ ಬ್ಯಾಂಕ್ ಖಾತೆಗಳನ್ನು ತೆರೆಯುವುದರವರೆಗೆ) ಉತ್ತಮವಾಗಿ ಅನುಷ್ಠಾನಕ್ಕೆ ತರುವ ಹಲವು ಕ್ರಮಗಳಿಗೆ ಅದು ಮುಂದಾಗಿದೆ. ಒಂದರಲ್ಲಿ ಮಾತ್ರ ವ್ಯತ್ಯಾಸವಿದೆ. ಅವನ್ನು ಕಣ್ಕಟ್ಟಿನ ಘೊಷಣೆಗಳಲ್ಲಿ ಕಟ್ಟಿಕೊಡುವುದರಲ್ಲಿ.

ದೇಶದಲ್ಲೂ ಮತ್ತು ಜಗತ್ತಿನ ಎಲ್ಲಾ ಕಡೆಗಳಲ್ಲೂ ಬಂಡವಾಳಶಾಹಿಯ ಅಂತರ್ಗತ ರಾಚನಿಕ ನಿಯಮಗಳಿಗೆ ಅನುಸಾರವಾಗಿ ಕಂಡುಬರುತ್ತಿರುವ ಎರಡು ಕೆಟ್ಟ ಪರಿಣಾಮಗಳೆಂದರೆ ಅಸಮಾನತೆಗಳ ತೀವ್ರತೆ ಮತ್ತು ಉದ್ಯೋಗರಹಿತ ಅಭಿವೃದ್ಧಿ. ಹಣದುಬ್ಬರದ ಒತ್ತಡವು ಹೆಚ್ಚುತ್ತಿದ್ದಂತೆ ಖಾಸಗಿ ಕ್ಷೇತ್ರವು ಉದ್ಯೋಗವನ್ನು ಸೃಷ್ಟಿಸಲು ಅಸಮರ್ಥವಾಗುತ್ತದೆ. ಏಕೆಂದರೆ ಅದು ಎಲ್ಲೆಡೆ ಶ್ರಮಶಕ್ತಿಯ ಮೇಲೆ ಹೂಡಿಕೆ ಮಾಡುವದಕ್ಕಿಂತ ತಂತ್ರಜ್ನಾನದ ಮೇಲೆ ಬಂಡವಾಳ ಹೂಡಿಕೆಯನ್ನು ಮಾಡುವುದರಲ್ಲಿ ಹೆಚ್ಚಿನ ಲಾಭವಿದೆಯೆಂಬುದನ್ನು ಕಂಡುಕೊಂಡಿದೆ. ಹೀಗಾಗಿ ಮೋದಿ ಸರ್ಕಾರಕ್ಕೆ  ತನ್ನ ಅಚ್ಚೇದಿನ್ ಭರವಸೆಯನ್ನು ಈಡೇರಿಸುವುದು ಕಷ್ಟವೆಂಬುದು ಅರಿವಾಗುತ್ತಾ ಹೋಗುತ್ತದೆ. ಇದರಿಂದಾಗಿ ಹೆಚ್ಚೆಚ್ಚು ಜನ ಅಚ್ಚೇದಿನ ಘೊಷಣೆಯ ಪೊಳ್ಳುತನವನ್ನು ಅರ್ಥಮಾಡಿಕೊಳ್ಳುತ್ತಿದ್ದಂತೆ ಮೋದಿಯವರು ತಮ್ಮ ಪಕ್ಷದ  ಒಂದೋ ನೀವು ನಮ್ಮ ಕಡೆ, ಇಲ್ಲವೇ ಶತ್ರುವಿನ ಕಡೆ ಎಂಬ ಧ್ರೂವೀಕರಣಗೊಳಿಸುವ ನೀತಿಯನ್ನು ತೀವ್ರಗೊಳಿಸುವುದು ಖಂಡಿತ. ಮುಕ್ತ ಅಭಿಪ್ರಾಯಗಳ ದಮನವನ್ನು ದೇಶಪ್ರೇಮಿ/ ದೇಶವಿರೋಧಿ ಎಂಬ ವ್ಯಾಖ್ಯಾನಗಳ ಮೂಲಕ ತರ್ಕಬದ್ದಗೊಳಿಸಲಾಗುವುದು. ತನ್ನ ಜನಪ್ರಿಯತೆಯನ್ನು ಹೆಚ್ಚಿಸಿಕೊಳ್ಳುವ ಸಲುವಾಗಿ ತಲಾಖಿನ ದಮನದಿಂದ ಮುಸ್ಲಿಂ ಮಹಿಳೆಯರನ್ನು ಉಳಿಸುವ ಹೆಸರಿನಲ್ಲಿ ಏಕರೂಪ ನಾಗರಿಕ ಕಾಯಿದೆಯನ್ನು ಮತ್ತು ಶಾಸನ ಸಭೆಗಳಲ್ಲಿ ಮಹಿಳೆಯರಿಗೆ ಮೀಸಲಾತಿಯನ್ನು ಜಾರಿ ಮಾಡುವಂಥ ಕ್ರಮಗಳಿಗೂ ಮೋದಿ ಮುಂದಾಗಬಹುದು. ೨೦೧೯ರ ಸಾರ್ವತ್ರಿಕ ಚುನಾವಣೆಯ ನಂತರದಲ್ಲಿ ಬಿಜೆಪಿಗೆ ರಾಜ್ಯಸಭೆಯಲ್ಲೂ ಬಹುಮತ ದೊರೆಯುವ ಸಾಧ್ಯತೆಯಿದ್ದು ಆಗ ಸಂವಿಧಾನದ ಮುನ್ನುಡಿಯಲ್ಲಿರುವ ಧರ್ಮ ನಿರಪೇಕ್ಷತೆ ಮತ್ತು ಸಮಾಜವಾದ ಎಂಬ ಪದಗಳನ್ನು ತೆಗೆದುಹಾಕುವ ಕ್ರಮಗಳಿಗೂ ಮುಂದಾಗಬಹುದು.

ಬಿಜೆಪಿಯ ಸಮರ್ಥಕರು ಉತ್ತರಪ್ರದೇಶದ ಚುನಾವಣಾ ಫಲಿತಾಂಶಗಳು ಜಾತಿ ಆಧಾರಿತ ಅಸ್ಮಿತೆ ರಾಜಕಾರಣದ ಸೋಲನ್ನು ಸೂಚಿಸುತ್ತದೆಂದು ಅಬ್ಬರದಿಂದ ಪ್ರತಿಪಾದಿಸುತ್ತಿದ್ದಾರೆ. ಇದು ಬಹಳ ಸರಳಿಕೃತ ಗ್ರಹಿಕೆ. ಬಾರಿ ಜಾತವ್ ಅಲ್ಲದ ಹಲವು ದಲಿತ ಜಾತಿಗಳು ಬಹುಜನ ಸಮಾಜ ಪಕ್ಷದೊಂದಿಗೆ ಗುರುತಿಸಿಕೊಳ್ಳಲಿಲ್ಲ. ಹಲವು ಯಾದವೇತರ ಹಿಂದುಳಿದ ಜಾತಿಗಳು ಸಮಾಜವಾದಿ ಪಕ್ಷವು ಕೇವಲ ಯಾದವರ ಪಕ್ಷಪಾತಿ ಎಂದು ಆರೋಪಿಸುತ್ತಿದ್ದವು. ಒಂದೆಡೆ ಬಹುಜನ್ ಸಮಾಜ ಪಕ್ಷದ ಮತ್ತು ಸಮಾಜವಾದಿ ಪಕ್ಷದ ಪಾರಂಪರಿಕ ಮತದಾರರು ಆಯಾ ಪಕ್ಷಗಳನ್ನು ತೊರೆಯದಿದ್ದರೂ ಬಿಜೆಪಿ ಸೂಕ್ಷ್ಮವಾಗಿ ನಿರ್ವಹಣೆ ಮಾಡಿದ ಜಾತಿ ಸಮೀಕರಣಗಳು ಪಕ್ಷಕ್ಕೆ ಫಲವನ್ನು ನೀಡಿವೆ. ನಿಕಟಭವಿಷ್ಯದಲ್ಲಿ ಬಹುಜನ್ ಸಮಾಜ ಪಕ್ಷದ ಅಧಿನಾಯಕಿ ಮಾಯಾವತಿಯವರ ಭವಿಷ್ಯ ಪ್ರಕಾಶಮಾನವಾಗಿಲ್ಲ. ಅವರು ತಮ್ಮ ರಾಜ್ಯಸಭಾ ಸ್ಥಾನವನ್ನೂ ಕಳೆದುಕೊಳ್ಳಬಹುದು. ಉಪ್ರ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರು ಸಹ ನೋಡುನೋಡುತ್ತಲೇ ತಾನು ಕಳೆದುಕೊಂಡ ಜನಬೆಂಬಲವನ್ನು ಮತ್ತೆ ಗಳಿಸಿಕೊಳ್ಳಲು ಮತ್ತು ಕುಟುಂಬದೊಳಗಿನ ದಾಯಾದಿ ಕಲಹದಿಂದ ಉಂಟಾಗಿರುವ ಹಾನಿಯನ್ನು ತಡೆಗಟ್ಟಲು ಇನ್ನೂ ಸಾಕಷ್ಟು ಸಮಯ ಬೇಕಾಗಬಹುದು.

ಇನ್ನು ಕಾಂಗ್ರೆಸ್ಸಿನ ಉಪಾಧ್ಯಕ್ಷ ರಾಹುಲ್ ಗಾಂಧಿಯವರ ಬಗ್ಗೆ ಕಡಿಮೆ ಹೇಳಿದಷ್ಟೂ ಒಳ್ಳೆಯದು. ಏಕೆಂದರೆ ತನ್ನ ಪಕ್ಷದ ಪರಿಯ ಹೀನಾಯ ಸೋಲಿನ ಹಿಂದಿನ ಕಾರಣಗಳನ್ನೂ ಮತ್ತು ದೇಶದಲ್ಲಿ ತನ್ನ ಪಕ್ಷವನ್ನು ಹಿಂದಿಕ್ಕಿ ಬಿಜೆಪಿಯು ದೇಶದ ಮುಂಚೂಣಿ ಪಕ್ಷವಾಗಿ ಬೆಳೆಯುವುದಕ್ಕೆ ಕಾರಣವಾದ ಸಂಗತಿಗಳನ್ನು ಅರ್ಥಮಾಡಿಕೊಳ್ಳುವ ಕನಿಷ್ಟ ಪ್ರಯತ್ನವನ್ನು ಮಾಡಲು ಅವರು ಸಿದ್ಧರಿಲ್ಲ. ಅವರ ಪಕ್ಷ ಪಂಜಾಬಿನಲ್ಲಿ ಪಡೆದ ಗೆಲುವಿನ ಯಾವ ಹಿರಿಮೆಯನ್ನು ರಾಹುಲ್ ಗಾಂಧಿಯವರಿಗೆ ಆರೋಪಿಸಲು ಸಾಧ್ಯವಿಲ್ಲ. ಕಾಂಗ್ರೆಸ್ ಪಕ್ಷ ಮತ್ತೆ ಪುನರುಜ್ಜೀವಗೊಳ್ಳಬಹುದೇ? ಗಾಂಧಿ-ನೆಹರೂ ಕುಟುಂಬವನ್ನು ಕಟು ವಾಸ್ತವ ಮತ್ತು ವಿಮರ್ಶೆಗಳಿಗೆ ಎದುರಾಗದಂತೆ  ರಕ್ಷಿಸುತ್ತಿರುವ ಪಟ್ಟಭದ್ರರ ಬಾಹುಗಳಿಂದ ಹೊರತಂದು ತಳಮಟ್ಟದಿಂದ ಮತ್ತೆ ಮೊದಲಿಂದ ಪಕ್ಷವನ್ನು ಕಟ್ಟಲು ಪ್ರಾರಂಭಿಸಬಹುದೇ? ಅಂಥಾ ಸಾಧ್ಯತೆಗಳು ಕಡಿಮೆ. ಆದರೆ ತಾನು ಇನ್ನೂ ವೇಗವಾಗಿ ಕಳೆಗುಂದುತ್ತಾ ನೇಪಥ್ಯಕ್ಕೆ ಸರಿಯುವುದನ್ನು ತಡೆಯಬೇಕೆಂದರೆ ಅದಕ್ಕೆ ಇದನ್ನು ಬಿಟ್ಟರೆ ಬೇರೆ ಆಯ್ಕೆಯಿಲ್ಲ. ಆದರೆ ಒಂದು ನಿಮಿಷ ನಿಲ್ಲಿ! ಬಿಜೆಪಿ ಎಷ್ಟೇ ಕಾಂಗ್ರೆಸ್ ಮುಕ್ತ ಭಾರತದ ಬಗ್ಗೆ ಮಾತನಾಡಿದರೂ ತಾನು ಹೇಗೆ ಪ್ರಮುಖ ಎದುರಾಳಿಗಿಂತ ಭಿನ್ನ ಎಂದು ತೋರಿಸಲು ಕಾಂಗ್ರೆಸ್ ಮತ್ತು ರಾಹುಲ್ ಅದಕ್ಕೆ ಬೇಕೇ ಬೇಕು!

ಬಿಜೆಪಿಯ ರಾಜಕೀಯ ವಿರೋಧಿಗಳ ಪಯಣ ಇಲ್ಲಿಂದ ಎತ್ತ ಕಡೆ ಸಾಗಬಹುದು?

ಪಂಜಾಬಿನಲ್ಲಿ ತನ್ನ ಕಳಪೆ ಪ್ರದರ್ಶನದಿಂದ ಮತ್ತು ಗೋವಾದಲ್ಲಿ ಖಾತೆಯನ್ನೇ ತೆಗೆಯಲಾಗದೇ ಇದ್ದಿದ್ದರಿಂದ ಆಮ್ ಆದ್ಮಿ ಪಕ್ಷದ ಭವಿಷ್ಯವು ಬರಲಿರುವ ದೆಹಲಿ ನಗರಸಭಾ ಚುನಾವಣೆಗಳಲ್ಲಿ ತೀವ್ರವಾದ ಪರೀಕ್ಷೆಗೆ ಗುರಿಯಾಗಲಿದೆ. ಏಕೆಂದರೆ ಚುನಾವಣೆಗೆ ಬಿಜೆಪಿ ಪಕ್ಷವು ತನ್ನ ಯಾವೊಬ್ಬ ಹಾಲಿ ಕಾರ್ಪೊರೇಟರ್ಗೂ ಟಿಕೆಟನ್ನು ನೀಡಿಲ್ಲ. ಆಮ್ ಆದ್ಮಿ ಪಕ್ಷದ ನಾಯಕ ಕೇಜ್ರಿವಾಲ್ ತನ್ನ ಅಖಿಲ ಭಾರತ ಮಟ್ಟದ ಮಹತ್ವಾಕಾಂಕ್ಷೆಯ ಬಗ್ಗೆ ಗಂಭೀರವಾಗಿ ಪುನರ್ ವಿಚಾರ ಮಾಡಬೇಕುಅವರ ಭ್ರಮಾತ್ಮಕ ಮತು ಸ್ವಕೇಂದ್ರಿತ ನಡೆವಳಿಕೆಗಳ ಬಗ್ಗೆ ವಿಮರ್ಶೆ ಮಾಡುತ್ತಾ ಪಕ್ಷದಿಂದ ಹೊರಹೋದವರ ಜೊತೆ ಸಂಧಾನ ಮತ್ತು ಹೊಂದಾಣಿಕೆಗಳ ಸಾಧ್ಯತೆಯನ್ನು ಪರಿಗಣಿಸಬೇಕು. ಪಶ್ಚಿಮ ಬಂಗಾಳದಲ್ಲಿ ಬಿಜೆಪಿಯು ಎಡಪಕ್ಷವನ್ನು ಹೊರತಳ್ಳಿ ಮಮತಾ ಬ್ಯಾನರ್ಜಿ ನಾಯಕತ್ವದ ತೃಣಮೂಲ ಕಾಂಗ್ರೆಸ್ಸಿಗೆ ತಾನೇ ಪ್ರಧಾನ ವಿರೋಧಪಕ್ಷವಾಗಿ ಬೆಳೆಯಲು ತನ್ನೆಲ್ಲಾ ಪ್ರಯತ್ನಗಳನ್ನೂ ಹಾಕುವುದು ಶತಸ್ಸಿದ್ಧ. ರಾಜ್ಯವು ಹೀನ ರಾಜಕೀಯ ಹಿಂಸಾಚಾರಗಳ ಮುಂದಿನ ತಾಣವಾಗಲೂಬಹುದು ಮತ್ತು ಅದು ಕೋಮುವಾದಿ ಬಣ್ಣವನ್ನು ಪಡೆದುಕೊಳ್ಳಬಹುದು. ಬಿಹಾರದಲ್ಲಿ ಆದಂತೆ ಬಿಜೆಪಿಯನ್ನು ವಿರೋಧಿಸುವ ಎಲ್ಲಾ ವಿರೋಧಪಕ್ಷಗಳೂ ಒಂದು ಮಹಾಘಟ್ಬಂಧನ್ ಅಥವಾ ಬೃಹತ್ ಐಕ್ಯರಂಗದ ರೂಪದಲ್ಲಿ ಒಂದಾಗಬಹುದೆಂದು ಎಣಿಸುವುದು ಅತ್ಯಂತ ಸರಳೀಕೃತ ತಿಳವಳಿಕೆಯಾಗುತ್ತದೆ. ಎಸ್ಪಿ ಮತ್ತು ಬಿಎಸ್ಪಿಗಳು, ಎಡಪಕ್ಷಗಳು ಮತ್ತು ತೃಣಮೂಲ ಕಾಂಗ್ರೆಸ್, ಅಖಿಲ ಭಾರತ ಅಣ್ಣಾ ದ್ರವಿಡ ಮುನ್ನೇತ್ರ ಕಳಗಂನ ಬಣಗಳು ಮತ್ತು ದ್ರವಿಡ ಮುನ್ನೇತ್ರ ಕಳಗಂಗಳು ತಮ್ಮ ತಮ್ಮ ನಡುವಿನ ಎಲ್ಲಾ ಭಿನ್ನಾಭಿಪ್ರಾಯಗಳನ್ನು ಬದಿಗೆ ಸರಿಸಿ ಸಮಾನ ರಾಜಕೀಯ ಶತ್ರುವಿನ ವಿರುದ್ಧ ಒಂದಾಗಲು ಕಷ್ಟವಿದೆ. ಬಿಹಾರದ ಮುಖ್ಯಮಂತ್ರಿ ನಿತೀಶ್ಕುಮಾರ್ ಅವರು ಅಂಥಾ ಒಂದು ಬಿಜೆಪಿ ವಿರೋಧಿ ಕೂಟಕ್ಕೆ ಸರ್ವಸಮ್ಮತ ನಾಯಕರಾಗಬಲ್ಲರು. ಇದೀಗ ಅವರು ನೋಟು ನಿಷೇಧವನ್ನು ಟೀಕಿಸಲು ಸಮಯವನ್ನು ತೆಗೆದುಕೊಂಡಿದ್ದಕ್ಕೆ ಮತ್ತು ಅದನ್ನು ಮೃದುವಾಗಿ ಮಾತ್ರ ಖಂಡಿಸಿದ್ದಕ್ಕೆ ತನ್ನನ್ನು ತಾನೇ ಅಭಿನಂದಿಸಿಕೊಳ್ಳುತ್ತಿರಬಹುದು.

ಮೋದಿ ವಿರೋಧಿಗಳು ಈಗ ಎದುರಿಸುತ್ತಿರುವ ವಿಷಣ್ಣತೆಯನ್ನು ಮೀರಿ ಹೊರಬರುವುದು ದೊಡ್ಡ ಸವಾಲಿನ ಮಾತೇ ಸರಿ. ಬರಲಿರುವ ಗುಜರಾತ್, ಮಧ್ಯಪ್ರದೇಶ, ಛತ್ತೀಸ್ಘಡ್, ಮತ್ತು ರಾಜಸ್ಥಾನದ ಚುನಾವಣೆಗಳಲ್ಲೂ ಬಿಜೆಪಿ ಉತ್ತಮವಾದ ಫಲಿತಾಂಶಗಳನ್ನು ಪಡೆಯುವ ಎಲ್ಲಾ ಸಾಧ್ಯತೆಗಳಿವೆ. ಮೋದಿಯವರು ಹಿಂದೂತ್ವದ ಬಗ್ಗೆ ಮರುಒತ್ತು ನೀಡುತ್ತಾ ಭವಿಷ್ಯದ ಬಗ್ಗೆ ಭ್ರಮೆಗಳನ್ನು ಬಿತ್ತುತ್ತಾ ತಾವೂ ಪೂರೈಸಲಾಗದ ಭರವಸೆಗಳಿಂದ ಜನರ ಗಮನವನ್ನು ಬೇರೆಡೆಗೆ ಸೆಳೆಯುವ ಪ್ರಯತ್ನ ಮಾಡುವುದು ಒಂದು ಕಡೆ ಇದ್ದರೆ ವಿರೋಧಿಗಳು ಒಂದಾಗಲು ಇರುವ ಅಡೆತಡೆಗಳೂ ಸಹ ಮೋದಿಗೆ ಪೂರಕವಾಗಲಿದೆ.


                                                                                                ಕೃಪೆ: Economic and Political Weekly  
                                              March 18, 2017. Vol. 52, No.11

                                                                                                                             


ಕಾಮೆಂಟ್‌ಗಳಿಲ್ಲ: