ಮಂಗಳವಾರ, ಮಾರ್ಚ್ 28, 2017

ಮೋದಿ ಮತ್ತು ಯೋಗಿ
    ಅನುಶಿವಸುಂದರ್
modi and yogi adityanath ಗೆ ಚಿತ್ರದ ಫಲಿತಾಂಶ

ಅವರಿಬ್ಬರೂ ಒಂದೇ ಗುರಿಗೆ ಬದ್ಧರಾಗಿರುವ ಒಂದೇ ನಾಣ್ಯದ ಎರಡು ಮುಖಗಳು


ಇತ್ತೀಚಿನ ಚುನಾವಣೆಗಳಲ್ಲಿ ಗೆದ್ದ ನಂತರ ಭಾರತೀಯ ಜನತಾ ಪಕ್ಷ (ಬಿಜೆಪಿ)ವು ಉತ್ತರ ಪ್ರದೇಶವನ್ನು ಮುನ್ನೆಡೆಸಲು ಹಿಂದೂತ್ವದ ಬೆಂಕಿಯುಗುಳುವ ಯೋಗಿ ಆದಿತ್ಯನಾಥ್ ರನ್ನು ಆಯ್ಕೆ ಮಾಡಿದ್ದಕ್ಕೆ ಜನರು ಅಷ್ಟೊಂದು ಗಾಬರಿಯಾಗಿದ್ದೇಕೆ? ಭಾರತವನ್ನು ಒಂದು ಹಿಂದೂ ರಾಷ್ಟ್ರವಾಗುವತ್ತ ಕೊಂಡೊಯ್ಯಬೇಕೆಂಬುದೇ ಬಿಜೆಪಿಗೆ ಮಾರ್ಗದರ್ಶನ ಮಾಡುವ ಆರೆಸ್ಸೆಸ್ ಘೋಷಿತ ಗುರಿಯಾಗಿರುವಾಗ ದೇಶದ ಅತ್ಯಂತ ಜನಸಾಂದ್ರಿತ ರಾಜ್ಯದ ಮುಖ್ಯಸ್ಥನನ್ನಾಗಿ ಆದಿತ್ಯನಾಥನಂತ ವ್ಯಕ್ತಿಯನ್ನು ಆಯ್ಕೆ ಮಾಡಿರುವುದು ತರ್ಕಬದ್ಧವಾಗಿಯೇ ಇದೆ. ಸಾರ್ವಜನಿಕವಾಗಿ ತಾನು ಎಷ್ಟೇ ಒಳಗೊಳ್ಳುವ  ರಾಜಕಾರಣದ ಬಗ್ಗೆ ಮಾತನಾಡಿದರೂ ಪಕ್ಷದ ಅಂತಿಮ ಗುರಿಯಲ್ಲಿ ಯಾವುದೇ ರಾಜಿಯಿಲ್ಲವೆಂಬುದನ್ನು ಅದು ಸ್ಪಷ್ಟವಾಗಿ ಘೋಷಿಸುತ್ತದೆ. ಹೀಗಾಗಿ ಗೋರಖನಾಥ್ ಮಠದ ಕಡು ಹಿಂದೂತ್ವವಾದಿಯಾದ ಆದಿತ್ಯನಾತನಂಥ ವ್ಯಕ್ತಿ ೨೦೧೯ರ ಸಾರ್ವತ್ರಿಕ ಚುನಾವಣೆಗೆ ಮುನ್ನ ಹಿಂದೂ ಓಟುಗಳನ್ನು ಮತ್ತಷ್ಟು ಧೃವೀಕರಣಗೊಳಿಸಿ ಬಿಜೆಪಿ ಜಯವನ್ನು ಖಾತರಿಗೊಳಿಸುವುದಾರೆ ಯಾಕಾಗಬಾರದು?

ಸಮಸ್ಯೆ ಇರುವುದು ಬಿಜೆಪಿಯ ಆಯ್ಕೆಯ ಹಿಂದಿನ ತರ್ಕದಲ್ಲಲ್ಲ. ಬದಲಿಗೆ ಮೋದಿಯವರು ಅಧಿಕಾರಕ್ಕೆ ಬಂದ ನಂತರ ಮೃದುವಾಗಿದ್ದಾರೆ ಎಂಬ ನಂಬಿಕೆಯತ್ತ ಹಲವು ಜನರು ಮಾತ್ರವಲ್ಲ ಮಾಧ್ಯಮದ ಬಹುಪಾಲು ಮಂದಿ ಸೆಳೆಯಲ್ಪಟ್ಟಿರುವುದರಲ್ಲಿ; ಒಂದು ರಾಜ್ಯದ ಮುಖ್ಯಮಂತ್ರಿಯಾಗಿದ್ದಾಗ ಬೇರೆ, ಆದರೆ ಈಗ ಇಡೀ ದೇಶದ ಪ್ರಧಾನಿಯಾದ ಮೇಲೆ ಮೋದಿಯವರು ಒಡೆದು ಆಳುವ ಹಿಂದೂತ್ವದ ರಾಜಕಾರಣವನ್ನು ಬಿಟ್ಟು ಅಭಿವೃದ್ಧಿಯನ್ನು ಗುರಿಯಾಗಿರಿಸಿಕೊಂಡಿದ್ದಾರೆ ಎಂದು ನಂಬಿಕೊಂಡಿರುವುದರಲ್ಲಿ ನಿಜವಾದ ಸಮಸ್ಯೆ ಇದೆ. ಅಪ್ರಾಮಾಣಿಕ ಸಂದೇಶವನ್ನು ನಂಬಿಕೊಂಡಿದ್ದವರು ಕೇವಲ ಭ್ರಮೆಯಲ್ಲಿ ಮುಳುಗಿದ್ದರು. ಏಕೆಂದರೆ ಪ್ರಧಾನಿಯಾಗಿ ಅಧಿಕಾರಕ್ಕೇರಿದ ನಂತರದ ಮೂರು ವರ್ಷಗಳಲ್ಲಿ ಅವರ ಮೂಲಭೂತ ದೃಷ್ಟಿಕೋನವು ಬದಲಾಗಿದೆ ಎಂಬ ನಂಬಿಕೆಗೆ ಪುಷಿಕೊಡಬಲ್ಲಂಥ ಯಾವುದೇ ಕ್ರಮವನ್ನು ಮೋದಿಯವರು ತೆಗೆದುಕೊಂಡಿಲ್ಲ. ತಾನು ಹಾಗೂ ತನ್ನ ಪಕ್ಷ ಇಡೀ ಭಾರತೀಯರೆಲ್ಲರಿಗೂ ಪಥ್ಯವಾಗಬೇಕೆಂದರೆ ಬಲಪಂಥೀಯದಿಂದ ಒಂದಷ್ಟು ನಡುಪಂಥದೆಡೆಗೆ ಸರಿಯಬೇಕೆಂದು ಅವರು ಭಾವಿಸಿದ್ದೇ ಆಗಿದ್ದಲ್ಲಿ ಮುಸ್ಲಿಮರ ವಿರುದ್ಧ ದ್ವೇಷವನ್ನು ಉಗುಳುತ್ತಿದ್ದ ಆದಿತ್ಯನಾಥರನ್ನು ಬಹಳಷ್ಟು ಹಿಂದೆಯೇ ನಿಯಂತ್ರಿಸುತ್ತಿದ್ದರುಆದರೂ ಅಂಥ ಯಾವುದೇ ಕ್ರಮಗಳನ್ನು ಅವರು ತೆಗೆದುಕೊಳ್ಳಲಿಲ್ಲ. ಅಂಥಾ ಅಪ್ಪಟ ದ್ವೇಷದ ಹೇಳಿಕೆಗಳ ಬಗ್ಗೆ ಮೋದಿ ತೋರಿದ ಮೌನದ ಅರ್ಥವಾದರೂ ಏನು? ಅದು ಸ್ಪಷ್ಟ. ಪಕ್ಷದ ಅಂಚಿನ ಲ್ಲಿರುವ ಶಕ್ತಿಗಳು ವಾಸ್ತವವಾಗಿ ಸೇಬಿನ ಸಿಪ್ಪೆಯಂತೆ ಪಕ್ಷದ ಅಂತರ್ಗತ ಭಾಗವೇ ಆಗಿದ್ದಾರೆ. ತಮ್ಮ ಉದ್ದೇಶ, ಅದಕ್ಕೆ ಬೇಕಿರುವ ಶಕ್ತಿ ಸಾಮರ್ಥ್ಯ ಮತ್ತು ಅದಕ್ಕೆ ಬೇಕಿರುವ ಮಾನ್ಯತೆಯನ್ನು ಅವರು ಮೋದಿಯಂಥವರಿಂದಲೇ ಪಡೆದುಕೊಂಡಿದ್ದಾರೆ ಮತ್ತು ಪ್ರತಿಯಾಗಿ ಮೋದಿ ಮತ್ತು ಪಕ್ಷ ಅವರ ರಾಜಕೀಯ ಗುರಿಗಳನ್ನು ಸಾಧಿಸಲು ಸಹಕರಿಸುತ್ತಿದ್ದಾರೆ.

ಇನ್ನೊಂದು ವಾದವಿದೆ. ಬಗೆಯ ತೀವ್ರಗಾಮಿ ಶಕ್ತಿಗಳನ್ನು ನಿರ್ಲಕ್ಷಿಸುವುದು ಬಿಜೆಪಿಯ ರಾಜಕೀಯ ವ್ಯೂಹತಂತ್ರವೆಂದು ಒಪ್ಪಿಕೊಂಡರೂ ಅಂಥವರಲ್ಲೇ ಒಬ್ಬರನ್ನು ದೇಶದ ಅತಿ ದೊಡ್ಡ ರಾಜ್ಯವನ್ನು ಆಳಲು ಆಯ್ಕೆ ಮಾಡಿರುವುದು ಬಿಜೆಪಿಯ ಲೆಕ್ಕಾಚಾರಕ್ಕೆ ತದ್ವಿರುದ್ಧ ಪರಿಣಾಮವನ್ನುಂಟುಮಾಡಬಹುದೆಂಬುದು ಇನ್ನೂ ಕೆಲವರ ಅಂದಾಜು. ಆದರೆ ಯೋಗಿ ಆದಿತ್ಯನಾಥರು ತನ್ನ ಅತ್ಯಂತ ಹೀನ ಮುಸ್ಲಿಂ ವಿರೋಧಿ ಹೇಳಿಕೆಗಳ ಮೂಲಕ ಮತ್ತು ಹಿಂದೂ ಯುವ ವಾಹಿನಿಯೆಂಬ ತನ್ನದೇ ಆದ ಗೂಂಡಾ ಪಡೆಗಳ ಮೂಲಕ ನಡೆಸಿದ ಅತ್ಯಂತ ವಿಧ್ವಂಸಕ ಕಾರ್ಯಾಚರಣೆಯ ಮೂಲಕ ಸತತ ಐದುಬಾರಿ ಸಂಸತ್ ಸದಸ್ಯನಾಗಿ ಆಯ್ಕೆಯಾಗಿದ್ದಾರೆ. ಆದರೆ ಅವ್ಯಾವುದು ಅತ್ಯಂತ ಶ್ರಮಪಟ್ಟು ಪೋಷಿಸಲಾಗಿರುವ ಮೋದಿಯ ಸ್ವಲ್ಪ ಮಟ್ಟಿಗೆ ಸೌಮ್ಯವಾದಿ ಎಂಬ ಇಮೇಜಿಗೆ ಧಕ್ಕೆ ತರಲಿಲ್ಲವಲ್ಲ?

ಆದರೆ ಆತನ ಹಿಂದಿನ ವಿದ್ವೇಷಕಾರಿ ಹೇಳಿಕೆಗಳು ಮೋದಿಯವರ ಈಗಿನ ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಘೊಷಣೆಯ ಜೊತೆ ಹೇಗೆ ಬೆರೆಯಲು ಸಾಧ್ಯ?

ಅವರೆಡರ ನಡುವೆ ಯಾವುದೇ ತಾಳಮೇಳ ಇಲ್ಲದಿರುವುದು ಈಗಾಗಲೇ ವ್ಯಕ್ತವಾಗುತ್ತಿದೆ. ಅಧಿಕಾರ ವಹಿಸಿಕೊಂಡ ಮರುದಿನವೇ ಆದಿತ್ಯನಾಥ್ ಅವರು ದನದ ಮಾಂಸವನ್ನು ಸಂಸ್ಕರಿಸುತ್ತಿದಾರೆಂದು ಸಾಬೀತು ಮಾಡಲು ಯಾವುದೇ ಪುರಾವೆ ಇಲ್ಲದಿದ್ದರೂ ಅನುಮಾನಾಸ್ಪದವಾದ ಎಲ್ಲಾ ಅಕ್ರಮ ಕಸಾಯಿಖಾನೆಗಳನ್ನು ಮುಚ್ಚುವುದಾಗಿ ಘೋಷಿಸಿದರು. ಒಂದು ದಿನದ ನಂತರ ಹತ್ರಾಸ್ ಜಿಲ್ಲೆಯಲ್ಲಿ ಮೂರು ಮಾಂಸದಂಗಡಿಗಳನ್ನು ಸುಟ್ಟುಹಾಕಲಾಯಿತು. ಗಾಜಿಯಾಬಾದ್ನಲ್ಲಿ ೧೫ ಅಕ್ರಮ ಕಸಾಯಿಖಾನೆಗಳಿಗೆ ಬೀಗಹಾಕಲಾಯಿತು. ಕಾನ್ಪುರ್, ಮೀರಟ್ ಮತ್ತು ಅಜಂಗರ್ಗಳಲ್ಲೂ ಕಸಾಯಿಖಾನೆಗಳ ಮೇಲೆ ದಾಳಿ ನಡೆಸಲಾಯಿತು. ಅಧಿಕಾರಕ್ಕೆ ಬಂದ ಕೂಡಲೇ ದಾಳಿಗಳನ್ನು ನಡೆಸುವುದು ಬಿಜೆಪಿ ಸರ್ಕಾರದ ಪ್ರಮುಖ ಕಾರ್ಯಕ್ರಮವಾಗಲು ಕಾರಣ ಅವುಗಳೆಲ್ಲಾ ಮುಸ್ಲಿಂ ಒಡೆತನದ ಅಂಗಡಿಗಳಾಗಿದ್ದವು ಎಂಬುದರಲ್ಲಿ ಯಾರಿಗೂ ಸಂಶಯವಿರಬೇಕಿಲ್ಲ. ಬೀದಿ ಕಾಮಣ್ಣರ ಲೈಂಗಿಕ ಉಪಟಳದಿಂದ ಯುವತಿಯರನ್ನು ರಕ್ಷಿಸುವ ಹೆಸರಲ್ಲಿ ಆಂಟಿ ರೋಮಿಯೋ ಸ್ಕ್ವಾಡ್  (ಬೀದಿ ಕಾಮಣ್ಣ ವಿರೋಧಿ ಪಡೆ) ಅನ್ನು ರಚಿಸಬೇಕೆಂದು ಮುಖ್ಯಮಂತ್ರಿಗಳು ಅಧಿಕಾರಕ್ಕೆಬಂದ ಕೂಡಲೇ ಪೊಲೀಸರಿಗೆ ಸೂಚಿಸಿದರು. ಆದರೆ ಅವು ಹೆಚ್ಚಾಗಿ ಮುಸ್ಲಿಂ ಯುವಕರಿಗೆ ಕಿರುಕುಳ ನೀಡುವುದಕ್ಕೇ ಬಳಕೆಯಾಗಬಹುದು. ಹಿಂದೆ ಬಾಬ್ರಿ ಮಸೀದಿ ಇದ್ದ ವಿವಾದಸ್ಪದ ಪ್ರದೇಶದಲ್ಲಿ ರಾಮ ಮಂದಿರ ಕಟ್ಟಬೇಕೆಂಬ ಚಳವಳಿಗೆ ಮತ್ತೊಮ್ಮೆ ಕಸುವು ತುಂಬುವುದು ಹೇಗೆ ಎಂಬುದು ಯೋಗಿ ಎದುರಿಸಬೇಕಾಗಿ ಬರುವ ದೊಡ್ಡ ಸವಾಲು. ನ್ಯಾಯಾಲಯಗಳಲ್ಲಿ ವರ್ಷಾನುಗಟ್ಟಲೇ ಕೊಳೆಯುತ್ತಿದ್ದ ಪ್ರಕರಣ ದಿಢೀರನೇ ಮತ್ತೆ ಮುಂಚೂಣಿಗೆ ಬಂದಿದೆ. ಇದಕ್ಕೆ ಕಾರಣ ಸುದೀರ್ಘ ಕಾಲ ನೆನೆಗುದಿಗೆ ಬಿದ್ದಿರುವ ಪ್ರಕರಣವನ್ನು ತ್ವರಿತವಾಗಿ ಬಗೆಹರಿಸಬೇಕೆಂದು, ಬಿಜೆಪಿಯ ಸಂಸತ್ ಸದಸ್ಯ ಸುಬ್ರಹ್ಮಣ್ಯ ಸ್ವಾಮಿಯವರು ಇತ್ತೀಚೆಗೆ ಸುಪ್ರಿಂ ಕೋರ್ಟಿನಲ್ಲಿ ಅಹವಾಲನ್ನು ಸಲ್ಲಿಸಿದ್ದು ಮತ್ತು ಅದಕ್ಕೆ ವರಿಷ್ಠ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರು  ಪ್ರಕರಣವನ್ನು ನ್ಯಾಯಾಲಯದಾಚೆಯೇ ಬಗೆಹರಿಸಿಕೊಳ್ಳಲು ಸಲಹೆ ನೀಡಿದ್ದು

ಯೋಗಿಯವರನ್ನು ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿ ಆಯ್ಕೆಮಾಡಿರುವುದರಿಂದ ಮೋದಿಯ ಇಮೇಜಿಗೆ ಧಕ್ಕೆ ಉಂಟಾಗುವುದೇ? ಇದಕ್ಕೆ ಉತ್ತರ ಪಡೆಯಲು ಹಿಂದೂ ರಾಷ್ಟ್ರದ ಭರವಸೆಗೂ ಹಾಗೂ ಕೇಸರಿ ಬಣ್ಣದ ಅಭಿವೃದ್ಧಿಯ ಭರವಸೆಗೂ ನಡುವೆ ಯಾವುದಾದರೂ ವೈರುಧ್ಯವಿದೆಯೇ ಎಂಬ ಪ್ರಶ್ನೆಯನ್ನು ಹಾಕಿಕೊಳ್ಳಬೇಕಾಗುತ್ತದೆ. ಗುಜರಾತಿನಲ್ಲಿ ೨೦೦೨ರಲ್ಲಿ ನಡೆದ ಮುಸ್ಲಿಮರ ಮಾರಣಹೋಮದಿಂದ ಜನರ ಗಮನವನ್ನು ತಪ್ಪಿಸಲು ಗುಜರಾತ್ ಮಾದರಿ ಅಭಿವೃದ್ಧಿ ಯನ್ನು ಪ್ರಚಾರಕ್ಕೊಡಿದ್ದ ಮೋದಿಯವರ ಇತಿಹಾಸವನ್ನು ಜನರು ಇಷ್ಟು ಬೇಗ ಮರೆಯಲು ಸಾಧ್ಯವೇ? ಇಂದಿನಷ್ಟೇ ಅಂದೂ ಸಹ ಮೋದಿಯವರ ಘೋಷಣೆಗಳು-ಸಂದೇಶಗಳು ಮೋಸಪೂರಿತವಾಗಿದ್ದವು. ಬಗೆಯ ಅಭಿವೃದ್ಧಿಯು ಪಕ್ಷಕ್ಕೆ ಮತ್ತು ವ್ಯಕ್ತಿಗೆ ಸನ್ನಿಹಿತರಾದ ಕೆಲವೇ ಕೆಲವು ಬಂಡವಾಳಶಾಹಿಗಳ ಅಭಿವೃದ್ಧಿಯನು ಸಾಧಿಸಿದ್ದು ಬಿಟ್ಟರೆ ಬಡಜನರಿಗೆ ಯಾವ ಭಾಗ್ಯವನ್ನು ತರಲಿಲ್ಲ. ಆದರೆ ವಾಸ್ತವವನ್ನು ಅವರು ಗುಜರಾತ್ ಮಾದರಿ ಅಭಿವೃದ್ಧಿ ಯೆಂಬ ಪ್ರಚಾರದ ಗಾರುಡಿಯಲ್ಲಿ ಮರೆಮಾಚಿಬಿಟ್ಟರು. ಇದು ಮುಸ್ಲಿಮರನ್ನು ಎಷ್ಟರ ಮಟ್ಟಿಗೆ ಅಂಚಿಗೆ ಸರಿಸಿಬಿಟ್ಟಿತೆಂದರೆ ಅವರು ಧ್ವನಿಯನ್ನೇ ಕಳೆದುಕೊಂಡರು. ಮೋದಿ ಬ್ರಾಂಡಿನ ಅಭಿವೃದ್ಧಿಯೆಂಬುದು ಮತದಾರರನ್ನು ಹಿಂದೂ ರಾಷ್ಟ್ರದ ಬಲೆಗೆ ಬೀಳಿಸಿಕೊಳ್ಳಲು ಬಳಸುತ್ತಿರುವ ಗಾಳವೇ ಹೊರತು ಬೇರೇನಲ್ಲ.

೨೦೧೫ರಲ್ಲಿ ದೆಹಲಿ ಮತ್ತು ಬಿಹಾರದ ಚುನಾವಣೆಗಳಲ್ಲಿ ಸೋತ ನಂತರದಲ್ಲಿ ಬಿಜೆಪಿ ತನ್ನ ಚುನಾವಣ ತಂತ್ರಗಳನ್ನು ಮರು ರೂಪಿಸಿಕೊಳ್ಳುವುದು ಅತ್ಯಗತ್ಯವಾಗಿತ್ತು. ಇದಕ್ಕಾಗಿ ಅವರು ೨೦೧೪ರ ಚುನಾವಣೆಯಲ್ಲಿ ಮೋದಿ ಯಶಸ್ವೀಯಾಗಿ ಬಳಸಿದ ಅಭಿವೃಧಿ ಮಂತ್ರವನ್ನು ಉಳಿಸಿಕೊಳ್ಳುತ್ತಲೇ, ಮತ್ತೊಂದೆಡೆ ಏಕಕಾಲದಲ್ಲಿ ಹಿಂದೂ ಓಟನ್ನು ಧೃವೀಕರಿಸಲು  ಮುಸ್ಲಿಮರ ವಿರುದ್ಧ ಅನುಮಾನ ಮತ್ತು ದ್ವೇಷವನ್ನು ಬಿತ್ತುತ್ತಾ ಹೋದರು. ಉತ್ತರಪ್ರದೇಶದಲ್ಲಿ ಯೋಗಿ ಆದಿತ್ಯನಾಥ ಎರಡನೇ ಬಗೆಯ ಪ್ರಚಾರಕ್ಕೆ ತುಂಬಾ ಉಪಯುಕ್ತವಾದರು. ಉತ್ತರಪ್ರದೇಶವನ್ನು ಜಯಿಸಿದ ನಂತರ ಅಭಿವೃದ್ಧಿ ಮತ್ತು ಹಿಂದೂತ್ವದ ಜುಗಲ್ಬಂದಿ ಹೆಚ್ಚು ಪ್ರಯೋಜನಕಾರಿ ಎಂಬ ಬಗ್ಗೆ ಬಿಜೆಪಿಯ ವಿಶ್ವಾಸ ಹೆಚ್ಚಿದೆ. ತಮ್ಮದು ಎಲ್ಲರಿಗೂ ಸೇರಿದ ಪಕ್ಷವೆಂಬ ನಾಟಕಕ್ಕೆ ತೆರೆ ಎಳೆದು ತಮ್ಮ ವಿದ್ವೇಷದ ಅಜೆಂಡಾವನ್ನೇ ಈಗ ಅವರು ಬಹಿರಂಗವಾಗಿ ಮುಂದಿಟ್ಟುಕೊಂಡು ಹೋಗಬಹುದು. ಅದನ್ನು ಸಾಧಿಸಲು ಉತ್ತರ ಪ್ರದೇಶದಲ್ಲಿ ಯೋಗಿ ಮತ್ತು ದೆಹಲಿಯಲ್ಲಿ ಮೋದಿ ಅತ್ಯುತ್ತಮ ಜೋಡಿಯಾಗಿದ್ದಾರೆ. ಏಕೆಂದರೆ ಇಬ್ಬರು ಸಹ ಅವರವರ ರೀತಿಯಲ್ಲಿ ವಿದ್ವೇಷದ ಕಾರ್ಯಸೂಚಿಯ ಮೇಲೆ ಜನರನ್ನು ಧೃವೀಕರಿಸುವ ವ್ಯಕ್ತಿಗಳೇ ಆಗಿದ್ದಾರೆ.


                                                                            ಕೃಪೆ: Economic and Political Weekly
                                                                                    March 25, 2017. Vol. 52. No. 12

                                                                                                                                            

ಕಾಮೆಂಟ್‌ಗಳಿಲ್ಲ: