ಸೋಮವಾರ, ಮಾರ್ಚ್ 20, 2017

ಹೋರಾಟದ ಮೇಲ್ಪಂಕ್ತಿ ಹಾಕಿಕೊಟ್ಟ ಮಾರುತಿ ಸುಜುಕಿ ಕಾರ್ಮಿಕರು




-ಶಿವಸುಂದರ್
suzuki employees strike ಗೆ ಚಿತ್ರದ ಫಲಿತಾಂಶ
ಮಾರುತಿ ಸುಜುಕಿ ಕಾರ್ಮಿಕರು ದಮನಕಾರಿ ಆಡಳಿತ ವರ್ಗ ಮತ್ತು ಅವರೊಂದಿಗೆ ಕೈಜೋಡಿಸಿದ ಪ್ರಭುತ್ವವನ್ನು ವೀರೋಚಿತವಾಗಿ ಎದುರಿಸಿದ್ದಾರೆ.

ಗುತ್ತಿಗೆ ಕಾರ್ಮಿಕರ ನೇಮಕಾತಿ ವಿಷಯದಲ್ಲಿ ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್ (ಎಂಎಸ್ಐಎಲ್)  ಕಾರ್ಮಿಕರು ಮತ್ತು ಮೇಲುಸ್ತುವಾರಿ ಸೂಪರ್ವೈಸರ್ ಒಬ್ಬರ ನಡುವೆ ನಡೆದ ಘರ್ಷಣೆ ಮತ್ತು ಘರ್ಷಣೆಯಲ್ಲಿ ೨೦೧೨ರಲ್ಲಿ ಕಾರ್ಖಾನೆಯ ಮಾನವ ಸಂಪನ್ಮೂಲ ವಿಭಾಗದ ಜನರಲ್ ಮ್ಯಾನೇಜರ್ ಒಬ್ಬರು ಸಾವನ್ನಪ್ಪಿದ ಪ್ರಕರಣ ಕೋರ್ಟಿನ ಮೆಟ್ಟಿಲನ್ನೇರಿದ್ದು ದೇಶದೆಲ್ಲೆಡೆ ಸುದ್ದಿಯಾಗಿತ್ತು. ಆದರೆ ಎಲ್ಲರ ಗಮನವು ಘರ್ಷಣೆ ಮತ್ತು ಕೋರ್ಟು ಕೇಸಿನ ಮೇಲೆ ಮಾತ್ರ ಕೇಂದ್ರೀಕೃತವಾಗಿದ್ದರಿಂದ ಕಾರ್ಮಿಕರು ಎಂಥಾ ಶೋಚನೀಯ ಪರಿಸ್ಥಿತಿಯಲ್ಲಿ ಅಲ್ಲಿ ಕೆಲಸ ಮಾಡುತ್ತಿದ್ದಾರೆಂಬ ವಾಸ್ತವ ಸಂಗತಿಗಳ ಮೇಲೆ ಮತ್ತು ಅವರು ಯೂನಿಯನ್ ಕಟ್ಟಿಕೊಳ್ಳುವ ಮೂಲಭೂತ ಹಕ್ಕಿಗಾಗಿಯೂ ಹೋರಾಡಲೇಬೇಕಾದ ಪರಿಸ್ಥಿತಿ ಇತ್ತೆಂಬ ಮೂಲಭೂತ ವಿಷಯಗಳ ಮೇಲೆ ಸಮಾಜದ ಗಮನ ಹರಿಯಲೇ ಇಲ್ಲ. ಇದೇ ಮಾರ್ಚ್ ೧೦ರಂದು ಗುರ್ಗಾಂನ  ಜಿಲ್ಲಾ ಕೋರ್ಟೊಂದು ದೇಶದ ಅತಿ ದೊಡ್ಡ ಕಾರು ಉತ್ಪಾದಕನಾದ ಮಾರುತಿ ಸುಜುಕಿಯ ೧೧೭ ಕಾರ್ಮಿಕರನ್ನು ದೋಷಮುಕ್ತರನ್ನಾಗಿ ಖುಲಾಸೆ ಮಾಡಿತು. ಉಳಿದ ೩೧ ಜನ ಕಾರ್ಮಿಕರನ್ನು ಕೊಲೆ, ಕೊಲೆ ಪ್ರಯತ್ನ, ದೊಂಬಿ, ಖಾಸಗಿ ಆಸ್ತಿಗೆ ಹಾನಿ ಇತ್ಯಾದಿ ಆರೋಪಗಳಡಿ ಶಿಕ್ಷೆಗೆ ಗುರಿಪಡಿಸಿತು. ಲೇಖನವು ಅಚ್ಚಿಗೆ ಹೋಗುವ ವೇಳೆಗೆ ಶಿಕ್ಷೆಯ ಪ್ರಮಾಣವನ್ನು ಮಾರ್ಚ್ ೧೮ರಂದು ಘೊಷಿಸಲಾಗುವುದೆಂದು ತಿಳಿದುಬಂದಿದೆ. ಅತ್ಯಂತ ಬಲಿಷ್ಠ ಬಹುರಾಷ್ಟ್ರೀಯ ಕಂಪನಿ ಮತ್ತು ಅದರ ಜೊತೆಗೆ ಯಾವುದೇ ಮುಚ್ಚುಮರೆಯಿಲ್ಲದೆ ಬಹಿರಂಗವಾಗಿ ಕೈಜೋಡಿಸಿದ ಪ್ರಭುತ್ವದ ವಿರುದ್ಧ ಅತ್ಯಂತ ಕಷ್ಟದ ಸಮಯದಲ್ಲೂ ವೀರೋಚಿತವಾಗಿ ಹೋರಾಟವನ್ನು ಮುನ್ನಡೆಸಿದ್ದ ಮಾರುತಿ ಸುಜುಕಿ ಕಾರ್ಮಿಕರ ಸಂಘಟನೆ (ಎಂಎಸ್ಡಬ್ಲ್ಯೂಯು) ಇಡೀ ನಾಯಕತ್ವ ಇದೀಗ ಶಿಕ್ಷೆಗೆ ಗುರಿಯಾಗಿದೆ.
suzuki employees strike ಗೆ ಚಿತ್ರದ ಫಲಿತಾಂಶ
ಘರ್ಷಣೆಯ ಇತಿಹಾಸ ೨೦೧೧ರಿಂದ ಪ್ರಾರಂಭವಾಗುತ್ತದೆ. ಆಗ ಮಾರುತಿ ಸುಜುಕಿ ಕಾರ್ಮಿಕರು ಕಾರ್ಮಿಕ ಸಂಘಟನೆ ಮಾಡಿಕೊಳ್ಳಲು ನಿರಂತರವಾಗಿ ಪ್ರಯತ್ನಿಸುತ್ತಾ ಸತತ ದಮನಕ್ಕೆ ಗುರಿಯಾಗುತ್ತಿದ್ದರು. ಕೆಲಸದಿಂದ ವಜಾ ಆಗುತ್ತಿದ್ದರು. ಅವರನ್ನು ಮೂಲಭೂತ ಹಕ್ಕುಗಳಿಗಾಗಿ ಹೋರಾಡುತ್ತಿರುವ ಕಾರ್ಮಿಕರನ್ನಾಗಿ ಕಾಣದೆ ಕಂಪನಿಯನ್ನು ಹಾಳುಮಾಡಲು ಪಣತೊಟ್ಟಿರುವ ಶತ್ರುಗಳೆಂಬಂತೆ ಕಾಣಲಾಗುತ್ತಿತ್ತು. ತಾವು ಕೆಲಸ ಮಾಡುತ್ತಿದ್ದ ಹೀನಾಯ ಪರಿಸ್ಥಿತಿಗಳ ವಿರುದ್ಧ ಅದೇ ವರ್ಷ ಕಾರ್ಮಿಕರು ಮೂರು ಮುಷ್ಕರಗಳನ್ನು ಮಾಡಿದ್ದರು. ಆದರೆ ಆಡಳಿತ ವರ್ಗವು ಯಾವುದೇ ಸಂಧಾನ ಮಾತುಕತೆ ನಡೆಸುವ ಮೊದಲು ಕಾರ್ಮಿಕ ಸಂಘಟನೆಯುಕಾರ್ಮಿಕ ಕಲ್ಯಾಣ ಮತ್ತು ಕುಂದುಕೊರತೆ ನಿವಾರಣಾ ಸಮಿತಿಯನ್ನು ರಚಿಸಿಕೊಳ್ಳಬೇಕೆಂದು ಶರತ್ತು ಹಾಕಿತ್ತು. ಕ್ರಮವು ಒಂದು ಕಾರ್ಮಿಕ ಸಂಘಟನೆಯ ನೈಜ ಸ್ವರೂಪವನ್ನು ದುಬಲಗೊಳಿಸುವ ಹುನ್ನಾರವೆಂದು ಕಾರ್ಮಿಕರು ಪರಿಗಣಿಸಿದ್ದರು. ಅಷ್ಟು ಮಾತ್ರವಲ್ಲದೆ ಕಾರ್ಮಿಕ ನಾಯಕರ ಮೇಲೆ ಆಡಳಿತ ವರ್ಗವು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಸುಳ್ಳು ಮೊಕದ್ದಮೆಗಳನ್ನು ದಾಖಲಿಸಲು ಪ್ರಾರಂಭಿಸಿದರು. ಕಾರ್ಖಾನೆಯು ಪ್ರತಿ ೫೦ ಸೆಕೆಂಡಿಗೆ ಒಂದು ಹೊಸ ಕಾರನ್ನು ಉತ್ಪಾದಿಸುತ್ತಿತ್ತು; ಖಾಯಂ ಕೆಲಸಗಾರರಿಗೆ ಹೋಲಿಸಿದಲ್ಲಿ ಗುತ್ತಿಗೆ ಕಾರ್ಮಿಕರಿಗೆ ಅತ್ಯಂತ ಕಡಿಮೆ ಸಂಬಳವನ್ನು ನೀಡಲಾಗುತ್ತಿತ್ತು (ಇವರನ್ನು ಖಾಯಂಗೊಳಿಸುವುದು ಮಾರುತಿ ಸುಜುಕಿ ಕಾರ್ಮಿಕ ಸಂಘಟನೆಯ ಪ್ರಮುಖ ಬೇಡಿಕೆಗಳಲ್ಲಿ ಒಂದಾಗಿತ್ತು.); ಎಲ್ಲಾ ಕಾರ್ಮಿಕರು ಎಂಥದೇ ದೈಹಿಕ ಮತ್ತು ಮಾನಸಿಕ ಪರಿಸ್ಥಿತಿಯಲ್ಲಿದ್ದರೂ ಉತ್ಪಾದನಾ ಗುರಿಗಳನ್ನು ಮುಟ್ಟಲೇಬೇಕಿತ್ತು; ಮತ್ತು ಪ್ರಭುತ್ವವು ತೋರಿಕೆಗೂ ಸಹ ಒಂದು ನಿಷ್ಪಕ್ಷಪಾತಿ ಮಧ್ಯಸ್ತಿಕೆದಾರನ ಪಾತ್ರ ವಹಿಸಲೇ ಇಲ್ಲ. ಸ್ಥಳೀಯ ಪೊಲೀಸರಂತೂ ಬಹಿರಂಗವಾಗಿಯೇ ಆಡಳಿತವರ್ಗದ ಪರ ವಹಿಸಿದ್ದರು
suzuki employees strike ಗೆ ಚಿತ್ರದ ಫಲಿತಾಂಶ
ಜಿಲ್ಲಾ ನ್ಯಾಯಾಲಯದಲ್ಲಿ ನಡೆದ ವಿಚಾರಣೆಯುದ್ದಕ್ಕೂ ಕಾರ್ಮಿಕರ ಪರ ವಕೀಲರು ಹೇಗೆ ೨೦೧೨ರ ಜುಲೈ ೧೮ರ ಘರ್ಷಣೆಯ ಪ್ರಕರಣದಲ್ಲಿ ನಡೆದಿರುವ ಆರೋಪಿಗಳ ಪತ್ತೆ ಹಚ್ಚುವ ವಿಧಿ ವಿಧಾನಗಳು ದೋಷಪೂರಿತವಾಗಿವೆ ಮತ್ತು ಪ್ರಮಾದಗಳಿಂದ ಕೂಡಿವೆ ಎಂಬುದನ್ನೂ, ಹೇಗೆ ಶಸ್ತಾಸ್ತ್ರಗಳನ್ನು ತಮ್ಮ ಕಕ್ಷಿದಾರರ ಸುಫರ್ದಿಯಲ್ಲಿದ್ದಂತೆ ತೋರಿಸಲು ಕುತಂತ್ರದಿಂದ  ತಂದಿರಿಸಲಾಗುತ್ತಿದೆಯೆಂದೂ, ಪೊಲೀಸರು ಹೇಗೆ ಸಾಕ್ಷಿಗಳನ್ನು ಸೃಷ್ಟಿಸುತ್ತಿದ್ದಾರೆಂಬುದನ್ನೂ, ಮತ್ತು ತನಿಖಾಧಿಕಾರಿಯೂ ಯಾವುದೇ ಪೂರಕ ಸಾಕ್ಷ್ಯಗಳಿಲ್ಲದಿದ್ದರೂ  ಕೇವಲ ಮೌಖಿಕ ಹೇಳಿಕೆಯನ್ನು ಆಧರಿಸಿ ದೋಷಾರೋಪ ಮಾಡುತ್ತಿದ್ದಾರೆಂಬುದನ್ನೂ ಸಮರ್ಥವಾಗಿ ನಿರೂಪಿಸುತ್ತಾ ಹೋದರು. ಇಲ್ಲಿ ಗಮನಿಸತಕ್ಕ ವಿಷಯವೆಂದರೆ ೨೦೧೩ರಲ್ಲಿ  ನ್ಯಾಯಾಂಗ ಬಂಧನದಲ್ಲಿದ್ದ ಕಾರ್ಮಿಕರ ಜಾಮೀನು ಅಹವಾಲನ್ನು ತಿರಸ್ಕರಿಸುತ್ತಾ ಪಂಜಾಬ್ ಮತ್ತು ಹರ್ಯಾಣ ಉಚ್ಚ ನ್ಯಾಯಾಲಯವು ಬಗೆಯಲ್ಲಿ ಕಾರ್ಮಿಕ ಅಶಾಂತಿ ಪಸರಿಸಿದರೆ ವಿದೇಶಿಯರು ಬಂಡವಾಳ ಹೂಡಲು ಹಿಂದೆ ಸರಿಯಬಹುದೆಂದು ಬಹಿರಂಗವಾಗಿ ಟಿಪ್ಪಣಿ ಮಾಡಿತ್ತು. ಇದಕ್ಕಿಂತ ಹೆಚ್ಚಿನ ಉಲ್ಲೇಖಾರ್ಹ ಅಂಶವೊಂದಿದೆಕಾರ್ಮಿಕ ಸಂಘmನೆಯನ್ನು ಮಾಡಿಕೊಳ್ಳಲು ಅವಕಾಶ ಕೊಡಬೇಕೆಂಬ ಕಾರ್ಮಿಕರ ಬೇಡಿಕೆಗೆ ಪ್ರತಿಕ್ರಿಯಿಸುತ್ತಾ ಕಂಪನಿಯ ಅಧ್ಯಕ್ಷರು ಕಾರ್ಮಿಕರು ಯಾವ ಗಣನಾರ್ಹ ಬೇಡಿಕೆಯನ್ನೂ ಮುಂದಿಟ್ಟಿಲ್ಲವೆಂದೂ ಯಾವುದೇ ಬಗೆಯ ರಾಜಿ ಸಂಧಾನ ಸಾಧ್ಯವಿಲ್ಲವೆಂದು ಘೊಷಿಸಿದರು.
suzuki employees strike ಗೆ ಚಿತ್ರದ ಫಲಿತಾಂಶ
ಮಾರುತಿ ಕಾರ್ಮಿಕರ ಸಂಘಟನೆಯ ಹೋರಾಟ ದೇಶದೆಲ್ಲೆಡೆ ಕಾರ್ಮಿಕ ಹೋರಾಟಗಳು ಇಳಿಮುಖದಲ್ಲಿದ್ದಾಗ ಸಂಭವಿಸಿದ್ದು ಅತ್ಯಂತ ಮಹತ್ವದ್ದಾಗಿದೆ. ಬೇರೆಲ್ಲಾ ಸರ್ಕಾರಗಳಿಗಿಂತ ಈಗಿನ ಎನ್ಡಿಎ ಸರ್ಕಾರವು ಪ್ರಮುಖ ಕಾರ್ಮಿಕ ಸುಧಾರಣೆಗಳನ್ನು ತರುವ ಮೂಲಕ ಹೆಚ್ಚೆಚ್ಚು ವಿದೇಶಿ ಬಂಡವಾಳವನ್ನು ಆಕರ್ಷಿಸಲು ತನ್ನೆಲ್ಲಾ ಗಮನವನ್ನು ಕೇಂದ್ರೀಕರಿಸಿರುವ ಹಿನ್ನೆಲೆಯಲ್ಲೂ ಹೋರಾಟ ಮತ್ತಷ್ಟು ಮಹತ್ವವನ್ನು ಪಡೆದುಕೊಳ್ಳುತ್ತದೆ. ಭಾರತದ ಕೈಗಾರಿಕೋದ್ಯಮಿಗಳು ಸಹ ಭಾರತದ ಕಾರ್ಮಿಕ ಕಾನೂನುಗಳಿಂದಾಗಿಯೇ ಭಾರತ ಹೆಚ್ಚು ಅಭಿವೃದ್ಧಿಯನ್ನು ಸಾಧಿಸಲು ಸಾಧ್ಯವಾಗುತ್ತಿಲ್ಲವೆಂದು ಆರೋಪಿಸುತ್ತಾರೆ. ಆದರೆ ವಾಸ್ತವವೆಂದರೆ ಉದ್ಯಮಿಗಳು ಕಾರ್ಮಿಕ ಕಾನೂನನ್ನು ಪಾಲನೆ ಮಾಡುವುದಕ್ಕಿಂತ ಉಲ್ಲಂಘನೆ ಮಾಡುವುದೇ ಹೆಚ್ಚು. ಹೀಗಾಗಿಯೇ ಉದ್ಯೋಗಗಳಲ್ಲಿ ಗುತ್ತಿಗೆ ಕಾರ್ಮಿಕರ ಸಂಖ್ಯೆಯೇ ಪ್ರಧಾನವಾದ ಬಗೆಯಾಗುತ್ತಾ ಹೋಗುತ್ತಿದೆ. ಸರ್ಕಾರದ ಮತ್ತು ಕೈಗಾರಿಕೋದ್ಯಮಿಗಳ ಧೋರಣೆಯ ಕಾರಣದಿಂದಾಗಿಯೂ ಎಂಎಸ್ಐಎಲ್ ಕಾರ್ಮಿಕರ ಹೋರಾಟವನ್ನು ಇನ್ನಷ್ಟು ಗಂಭೀರವಾಗಿ ಪರಿಗಣಿಸಬೇಕಾಗುತ್ತದೆ.
suzuki employees strike ಗೆ ಚಿತ್ರದ ಫಲಿತಾಂಶ
ನ್ಯಾಯಯುತವಾದ ಕೆಲಸದ ಅವಧಿಯನ್ನು ಮತ್ತು ತಮ್ಮ ಶ್ರಮಕ್ಕೆ ತಕ್ಕ ಪ್ರತಿಫಲವನ್ನು ಕೇಳುವ ಕಾರ್ಮಿಕರ ಬೇಡಿಕೆಗಳ ಮೇಲೆ  ವಿದೇಶೀ ಹೂಡಿಕೆಯನ್ನು ಹಿಮ್ಮೆಟ್ಟಿಸುತ್ತಿರುವ ಆರೋಪವನ್ನು ಹೊರಿಸಲು ಸಾಧ್ಯವಿಲ್ಲ. ಹೀಗಿದ್ದರೂ ಸುಧಾರಣೆ ಆಧಾರಿತ ಕಾರ್ಮಿಕ ಕಾನೂನಿನ ತಿದ್ದುಪಡಿಗಳೆಲ್ಲವೂ ಕಾರ್ಮಿಕರ ಹಕ್ಕುಗಳನ್ನು ಮತ್ತು ಕಾರ್ಮಿಕ ಕಲ್ಯಾಣ ಕ್ರಮಗಳನ್ನು ಕಡಿತಗೊಳಿಸುವ ಉದ್ದೇಶವನ್ನೇ ಹೊಂದಿವೆ. ಇದರ ಅರ್ಥ ಬದಲಾಗುತ್ತಿರುವ ಸಂದರ್ಭ ಮತ್ತು ಪ್ರಕ್ರಿಯೆಗಳಿಗೆ ತಕ್ಕ ಹಾಗೆ ಕಾರ್ಮಿಕ ಕಾನೂನುಗಳಲ್ಲಿ ತಿದ್ದುಪಡಿ ಬರಬಾರದೆಂಬುದಲ್ಲ. ಆದರೆ ಸುರಳೀತ ಉತ್ಪಾದನಾ ಪ್ರಕ್ರಿಯೆಯ ಹೊರೆಯನ್ನು ಅಸಂಘಟಿvರಾದ, ಅವಧಿಗಿಂತ ಹೆಚ್ಚು ದುಡಿಯು ಆದರೆ ಎಲ್ಲರಿಗಿಂತ ಕಡಿಮೆ ಪ್ರತಿಫಲ ಪಡೆಯುವ ಕಾರ್ಮಿಕರ ಮೇಲೆ ಹೊರಿಸುವುದನ್ನು ಒಪ್ಪಲಾಗದು. ಇತ್ತೀಚೆಗೆ ಬ್ಲೂಮ್ಬರ್ಗ್ ಎಂಬ ಪತ್ರಿಕೆಯೊಂದು ವರದಿ ಮಾಡಿದಂತೆ ಮಾರುತಿ ಕಂಪನಿಯಲ್ಲಿ ೨೦೧೩-೧೪ರಲ್ಲಿ ೬೫೭೮ ಗುತ್ತಿಗೆ ಕಾರ್ಮಿಕರಿದ್ದರು. ಆದರೆ ಅವರ ಸಂಖ್ಯೆ ೨೦೧೬ರಲ್ಲಿ ೧೦,೬೨೬ಕ್ಕೆ ಏರಿತ್ತು. ಈಗಾಗಲೇ ಎಲ್ಲಾ ಕಡೆಯಿಂದಲೂ ದಾಳಿಗೆ ಗುರಿಯಾಗಿ ನಿತ್ರಾಣವಾಗಿರುವ ಭಾರತದ ಕಾರ್ಮಿಕ ಸಂಘಟನೆಗಳು, ವಿದ್ಯಮಾನಗಳನ್ನು, ಅತ್ಯಗತ್ಯವಾಗಿ  ಎದುರಿಸಲೇ ಬೇಕಾಗಿದೆ.
ಕಾರ್ಮಿಕರು ಎದುರಿಸುತ್ತಲೇ ಇರುವ ಅನ್ಯಾಯದ ಇತಿಹಾಸಕ್ಕೆ ಸೇರುತ್ತಿರುವ ಮತ್ತೊಂದು ಸಂಗತಿಯೆಂದರೆ ನಿರಪರಾಧಿಗಳಾಗಿದ್ದರೂ ವರ್ಷ ಜೈಲಲ್ಲಿ ಕೊಳೆಯಬೇಕಾಗಿ ಬಂದ ೧೧೭ ದೋಷಮುಕ್ತ ಕಾರ್ಮಿಕರ ಹಕ್ಕುಗಳ ಉಲ್ಲಂಘನೆಯ ಪ್ರಶ್ನೆ. ಅವರ ಮೇಲೆ ಹೊರಿಸಲಾಗಿದ್ದ ಯಾವೊಂದು ಅಪರಾಧವೂ ಸಾಬೀತಾಗಲಿಲ್ಲ. ಸತ್ಯವೇ  ತಮಗೆ ಚಿತ್ರಹಿಂಸೆ ನೀಡಲೆಂದೇ ಸುಳ್ಳು ಮೊಕದ್ದಮೆಯನ್ನು ಹೂಡಲಾಯಿತೆಂಬ ಕಾರ್ಮಿಕರ ಪ್ರತಿಪಾದನೆಗೆ ಪುಷ್ಟಿಯನ್ನು ಒದಗಿಸುತ್ತದೆ. ಮತ್ತೊಂದು ಗಮನಾರ್ಹ ಸಂಗತಿಯೆಂದರೆ, ಅಲ್ಲಲ್ಲಿ ಕೆಲವು ಅಲ್ಪ ಸ್ವಲ್ಪ ಏರಿಳಿತಗಳಿದ್ದರೂ, ೨೦೧೧ರ ನಂತರದಲ್ಲಿ ಅದರಲ್ಲೂ ವಿಶೇಷವಾಗಿ ಕಳೆದ ನಾಲ್ಕು ವರ್ಷಗಳಲ್ಲಿ ಮಾರುತಿ ಸುಜುಕಿ ಕಾರ್ಮಿಕ ಸಂಘಟನೆಯ ನೇತ್ರೂತ್ವದಲ್ಲಿ ಎಲ್ಲಾ ಕಾರ್ಮಿಕರು ಅಭೂತಪೂರ್ವ ಐಕ್ಯತೆ ಮತ್ತು ಸೋದರತ್ವನ್ನು ತೋರಿದ್ದಾರೆ. ಅಷ್ಟು ಮಾತ್ರವಲ್ಲ ಪ್ರತಿಕೂಲ ಸಂದರ್ಭದಲ್ಲೂ ಓಕ್ಲಾ-ಫರೀದಾಬಾದ್-ನೋಯಿಡಾ-ಗುರ್ಗಾಂ-ಮನೇಸರ್ ಕೈಗಾರಿಕಾ ಪ್ರಾಂತ್ಯದ ಇತರ ಕಾರ್ಮಿಕರನ್ನು ಮಾತ್ರವಲ್ಲದೆ ಸುತ್ತಮುತ್ತಲಿನ ಬಹುಪಾಲು ಗ್ರಾಮಸ್ಥರನ್ನೂ, ನಾಗರಿಕ ಸಮಾಜದ ಸಂಘಟನೆಗಳನ್ನೂ ಮಾಧ್ಯಮದಲ್ಲಿರುವ ಹಿತೈಷಿಗಳನ್ನೂ ತಲುಪಿ ಒಂದು ಪ್ರಬಲವಾದ ನೆರವಿನ ಜಾಲವನ್ನು ಕಟ್ಟಿಕೊಳ್ಳುವ ಅಸಾಧಾರಣ ಸಾಮರ್ಥ್ಯವನ್ನು ಪ್ರದರ್ಶಿಸಿದ್ದಾರೆ.
ಮಾರುತಿ ಸುಜುಕಿ ಕಾರ್ಮಿಕ ಸಂಘಟನೆಯ ಸ್ಪೂರ್ತಿದಾಯಕ ಹೋರಾಟಗಳು ಮತ್ತು ಇತರ ವರ್ಗಗಳಿಗೂ ತಲುಪಿದ ಅವರ ಸಾಮರ್ಥ್ಯವು ಸ್ಪಷ್ಟ ಕಣ್ಣೋಟವುಳ್ಳ ಒಂದು ಕಾರ್ಮಿಕ ಐಕ್ಯತೆ ಏನನ್ನು ಸಾಧಿಸಬಹುದೆಂಬುದಕ್ಕೆ ನಿದರ್ಶನವಾಗಿದೆ. ಬರಲಿರುವ ದಿನಗಳಲ್ಲಿ ಪ್ರಭುತ್ವ ಮತ್ತು ಕೈಗಾರಿಕೋದ್ಯಮಿಗಳು ಹಿಂದಿಗಿಂತಲೂ ಹೆಚ್ಚಿನ ರೀತಿಯಲ್ಲಿ ಜೊತೆಗೂಡಿ ಕಾರ್ಮಿಕರ ಹಕ್ಕುಗಳ ಮೇಲೆ ದಾಳಿ ಮಾಡುವುದು ಸ್ಪಷ್ಟವಾಗಿರುವಾಗ ಮಾರುತು ಸುಜುಕಿ ಕಾರ್ಮಿಕ ಸಂಘಟನೆಯು ಭವಿಷ್ಯದ ಸಂಘರ್ಷಕ್ಕೆ ಮಾದರಿಯೊಂದನ್ನು ಒದಗಿಸಿದೆ.
                                                                        ಕೃಪೆ: Economic and Political Weekly
                                                                                March 18, 2017. Vol.52. No.11

                                                                                                                                



ಕಾಮೆಂಟ್‌ಗಳಿಲ್ಲ: