ಗುರುವಾರ, ಏಪ್ರಿಲ್ 14, 2016

ಅಂಬೇಡ್ಕರ್‌ ಆಶಯಗಳ ಪ್ರಸ್ತುತತೆ


-ಡಾ.ಹೆಚ್.ಡಿ.ಉಮಾಶಂಕರ್
ಸೌಜನ್ಯ:ಪ್ರಜಾವಾಣಿ
ಅಂಬೇಡ್ಕರ್ 1951ರಲ್ಲಿ ಕಾನೂನು ಮಂತ್ರಿ ಪದವಿಗೆ ರಾಜೀನಾಮೆ ಇತ್ತರು. ಮೀಸಲಾತಿಯನ್ನು ಎಲ್ಲ ಹಿಂದುಳಿದ ವರ್ಗಗಳಿಗೂ ವಿಸ್ತರಿಸಬೇಕು.  ಹಿಂದೂ ಕೋಡ್‌ ಬಿಲ್ ಕಡ್ಡಾಯವಾಗಿ ಜಾರಿಗೆ ಬರಬೇಕು ಮತ್ತು ಸಂಪುಟದಲ್ಲಿನ ತಮ್ಮ ಸ್ಥಾನವನ್ನು ಗೌಣಗೊಳಿಸುವುದರ ಮೂಲಕ ಮುಖ್ಯ ಯೋಜನೆಗಳ ಚರ್ಚೆಯಿಂದ ಆಚೆ ಉಳಿಸಬಾರದು. ಇದು ಅಂಬೇಡ್ಕರ್ ಅವರ ಗಟ್ಟಿ ನಿಲುವು.
ಈ ನಿಲುವುಗಳನ್ನು ಅಂದಿನ ಸರ್ಕಾರ ಮೂಲೆಗುಂಪಾಗಿಸುವಲ್ಲಿ ಪ್ರಮುಖ ಪಾತ್ರ ವಹಿಸಿತು. ಇವುಗಳನ್ನೇ ತಮ್ಮ ರಾಜೀನಾಮೆ ಪತ್ರದಲ್ಲಿ ಉಲ್ಲೇಖಿಸಿ ಅಂಬೇಡ್ಕರ್ ಸಂಪುಟದಿಂದ ಹೊರನಡೆದರು. ಇದು ಜನತೆಯ ಪರ ದಿಟ್ಟ ನಿಲುವು. ಇಂತಹ ಮನುಷ್ಯಪರ ಚಿಂತನೆ ತೋರಿಸಿಕೊಟ್ಟ ಅಂಬೇಡ್ಕರ್ ಅವರ  125ನೇ ಜಯಂತಿ ಇಂದು.  ಈ ಜಯಂತಿಯ ಸಂದರ್ಭದಲ್ಲಿ ನಾವು ಇಡಬೇಕಾದ ಹೆಜ್ಜೆ ಮತ್ತು ತೊಡಬೇಕಾದ ಪ್ರತಿಜ್ಞೆಗಳ ಬಗ್ಗೆ ಒಂದು ಸಣ್ಣ ನೋಟ ಇಲ್ಲಿದೆ.
ಅಂಬೇಡ್ಕರ್ ಜಯಂತಿ 70ರ ದಶಕದಲ್ಲಿ ದಲಿತರ ಸ್ವಾಭಿಮಾನದ ಸೆಲೆ. ಇಂದು ಹಲವು ಹೋರಾಟಗಾರರ ಒಳಗೆ ಇದು ತನ್ನ ಬಾಹುಗಳನ್ನು ಬಹುವಿಧದಲ್ಲಿ ವಿಸ್ತರಿಸಿಕೊಳ್ಳುತ್ತಿದೆ. ದಲಿತ ಮತ್ತು ದಲಿತೇತರ ಎನ್ನುವ ಭಿನ್ನಭೇದವಿಲ್ಲದೆ ಇವರೊಳಗಿನ ಪ್ರಗತಿಪರರಲ್ಲಿ ಅಂಬೇಡ್ಕರ್ ಎನ್ನುವ ಶಕ್ತಿ ಪ್ರವೇಶ ಪಡೆದುಕೊಳ್ಳುತ್ತಿದೆ.
ಇಂದು ಜಾಗತೀಕರಣದ ಕೊಳ್ಳುಬಾಕ ಸಂಸ್ಕೃತಿ ಜಗತ್ತನ್ನು ನುಂಗಿ ನೀರು ಕುಡಿಯುತ್ತಿದೆ. ಅದರಲ್ಲೂ ಭಾರತದಂತಹ ತೃತೀಯ ಜಗತ್ತಿನ ರಾಷ್ಟ್ರದಲ್ಲಿರುವ ಬಡವರನ್ನು ಇದು ನಿರ್ನಾಮದೆಡೆಗೆ ಸಾಗಿಸುತ್ತದೆ. ಇದಕ್ಕೂ ಮಿಗಿಲೆಂಬಂತೆ ಈ ದೇಶದ ಜಾತಿಯ ಕ್ರೌರ್ಯ ತುಂಬಿದ ಇತಿಹಾಸವನ್ನೇ ಬುಡಮೇಲು ಮಾಡಲು ಹಲವರು ಸಂಚು ರೂಪಿಸುತ್ತಿದ್ದಾರೆ. ಇಂತಹ ಬಿಕ್ಕಟ್ಟಿನ ಸಂದರ್ಭದಲ್ಲಿ ಅಂಬೇಡ್ಕರ್ ಅವರ ಪ್ರಸ್ತುತತೆ ಇನ್ನಿಲ್ಲದಂತೆ ಕಾಡಲಿಕ್ಕೆ ಶುರುಮಾಡಿದೆ.
ಏಪ್ರಿಲ್ 14 ಬಂತೆಂದರೆ ದಲಿತರು ಹೊಸ ವರ್ಷದ ರೀತಿ ಸಂಭ್ರಮಿಸುತ್ತಿದ್ದರು. ಈ ಸಂಭ್ರಮದಲ್ಲೇ ಜಯಂತಿ ಸಾಗಿತ್ತು. ಊರೂರು ಕೇರಿಕೇರಿಗಳಲ್ಲಿ ಅಂಬೇಡ್ಕರ್ ಅವರನ್ನು ಪರಿಚಯಿಸುವ ಧ್ಯೇಯದೊಂದಿಗೆ ದಲಿತ ಸಂಘರ್ಷ ಸಮಿತಿ ಇದಕ್ಕಾಗಿ ಶ್ರಮಿಸುತ್ತಿತ್ತು. 90ರ ದಶಕದಿಂದೀಚೆಗೆ ಸರ್ಕಾರಗಳು ಅಂಬೇಡ್ಕರ್ ಜಯಂತಿಯನ್ನು ಗುತ್ತಿಗೆ ತೆಗೆದುಕೊಂಡವು.
ಅಲ್ಲಿಂದೀಚೆಗೆ ಕೆಲವು ಅರ್ಥಪೂರ್ಣ ಕಾರ್ಯಕ್ರಮಗಳನ್ನು ಸರ್ಕಾರಿ ಕೃಪಾಪೋಷಿತ ಜಯಂತಿಗಳು ಆಯೋಜಿಸಲಿಲ್ಲ. ಬದಲು ನಾಮಕಾವಸ್ತೆಗೆ ಜಯಂತಿ ಮಾಡುವ ತಯಾರಿ ನಡೆಸುತ್ತಾ ಬಂದವು. ದಲಿತರ ಮನೆಮನೆಯ ಹಬ್ಬವನ್ನು ಸರ್ಕಾರಿ ಹಬ್ಬವನ್ನಾಗಿ ಮಾಡಿದ ಕೀರ್ತಿ ಇದುವರೆಗೆ ಆಳಿದ ಸರ್ಕಾರಗಳಿಗೆ ಸಲ್ಲುತ್ತದೆ. 90ರ ದಶಕದಲ್ಲಿ ಅಂಬೇಡ್ಕರ್ ಅವರಿಗೆ ಮರಣೋತ್ತರ ಭಾರತ ರತ್ನ ನೀಡಿ ಜಾಗತೀಕರಣವನ್ನು ನುಸುಳಿಸಿತು ಅಂದಿನ ಕೇಂದ್ರ ಸರ್ಕಾರ.
ಇದರ ಹಾದಿಯಲ್ಲಿ ‘ಪಂಚತೀರ್ಥ ಯೋಜನೆ’ ಘೋಷಿಸಿರುವ ಇಂದಿನ ಸರ್ಕಾರಗಳವರೆಗೂ ಅಂಬೇಡ್ಕರ್ ಅವರನ್ನು ವಸ್ತುನಿಷ್ಠವಾಗಿ ಪರಿಚಯಿಸುವ ಕಾರ್ಯಕ್ರಮಗಳು ಮೂಡಿಬರುತ್ತಲೇ ಇಲ್ಲ. ಸರ್ಕಾರದ ಈ ತಂತ್ರಗಳನ್ನು ಕೆಲವು ದಲಿತ ಸಂಘಟನೆಗಳು ಅರಿಯದಾದವು. ಇದರಿಂದ ಸರ್ಕಾರದ ಈ ಹುಸಿ ಕಾರ್ಯಕ್ರಮಗಳನ್ನು ನಂಬಿ ಅದರೊಂದಿಗೆ ಕೈಜೋಡಿಸಿದವು. ಆ ಮೂಲಕ ತಮ್ಮ ಸ್ವಾಭಿಮಾನದ ಪ್ರಶ್ನೆ ಮರೆಮಾಚಿ ನಿಂತವು.
ಇನ್ನು ಕೆಲವು ಸಂಘಟನೆಗಳು ಮತ್ತು ಜಯಂತಿ ಸಂದರ್ಭದಲ್ಲಿ ಹುಟ್ಟುವ ಜಯಂತ್ಯುತ್ಸವ ಸಮಿತಿಗಳು ಅದ್ಧೂರಿಯಾಗಿ ಅಂಬೇಡ್ಕರ್ ಜಯಂತಿಯನ್ನು ಆಚರಿಸಲು ಮುಂದಾಗಿವೆ. ಆರ್ಕೆಸ್ಟ್ರಾ ಮತ್ತು ಅದ್ಧೂರಿ ಮೆರವಣಿಗೆಗೆ ತಯಾರಿ ನಡೆಸಿಕೊಳ್ಳುತ್ತಿವೆ. ಮಾರವ್ವನ ಹಬ್ಬದಲ್ಲಿ ಪೂಜಾರಿ ಸಹಿತ ಮೆರವಣಿಗೆ ಹೊರಡುವ ಪಲ್ಲಕ್ಕಿಯಂತೆ ಅಂಬೇಡ್ಕರ್ ಪ್ರತಿಮೆ ಸಾಗಿಸಲು ತಯಾರಿ ನಡೆಸಿವೆ.
ಇದು ಒಂದು ಕಾಲದಲ್ಲಿ ಅತ್ಯಂತ ಅಗತ್ಯವಾದ ಕಾರ್ಯಕ್ರಮವಾಗಿದ್ದುದೇನೊ ನಿಜ. ಅದರಲ್ಲೂ ದಲಿತರೊಳಗೆ ಮತ್ತು ಸಮಾನತೆ ಬಯಸುವವರಿಗೆ ಅಂಬೇಡ್ಕರ್ ಅವರನ್ನು ಪರಿಚಯಿಸುವ ನಿಟ್ಟಿನಲ್ಲಿ ಇದು ಅಂದಿಗೆ ಸರಿಯಾದ ಕಾರ್ಯಕ್ರಮವೆ. ಇದರ ತೀವ್ರತೆಯಿಂದ ಹಳ್ಳಿಯಿಂದ ದಿಲ್ಲಿಯವರೆಗೆ ಕೇರಿಕೇರಿ ಗಲ್ಲಿಗಲ್ಲಿಗಳಲ್ಲಿ ನಡೆದ ಅಂಬೇಡ್ಕರ್ ಕುರಿತ ಯಾವುದೇ ಕಾರ್ಯಕ್ರಮ ದಲಿತರ ಸ್ವಾಭಿಮಾನವನ್ನು ಬಡಿದೆಬ್ಬಿಸಿರಬಹುದು.
ಆದರೆ ಇಂದು ಹಿಂದಿನ ಪರಿಸ್ಥಿತಿ ಇಲ್ಲ. ಅಪಾಯದ ಕರೆಗಂಟೆ ಮತ್ತೆ ಮತ್ತೆ ಎಚ್ಚರಿಸುತ್ತಿದೆ. ಈ ಸಂದರ್ಭದಲ್ಲಿ ಎಚ್ಚೆತ್ತುಕೊಂಡು ಇಂತಹ ಜನಪ್ರಿಯ ಕಾರ್ಯಕ್ರಮಗಳಿಂದ ಹೊರಬರಬೇಕು. ಇಲ್ಲದಿದ್ದರೆ ಈ ದೇಶದ ಬಡವರ, ದಮನಿತರ, ಅಸಹಾಯಕರ, ಮಹಿಳೆಯರ ವಿನಾಶಕ್ಕೆ ಮುನ್ನುಡಿ ಬರೆದಂತೆಯೇ ಸರಿ.
125ನೇ ವರ್ಷದ ಮಹತ್ವದ ಜಯಂತಿಯ ಈ ಸಂದರ್ಭದಲ್ಲಿ ಬಲಪಂಥೀಯರು  ಅಂಬೇಡ್ಕರ್ ಕುರಿತು ಮಾತನಾಡಲು ಶುರುಮಾಡಿದ್ದಾರೆ. ಇದು ಸ್ವಾಗತಾರ್ಹ. ಆದರೆ ಇದ್ದಕ್ಕಿದ್ದಂತೆ ಮಾತನಾಡುತ್ತಿರುವುದರ ಹಿಂದಿನ ಉದ್ದೇಶವನ್ನು ಸ್ಪಷ್ಟಪಡಿಸಿಕೊಳ್ಳಬೇಕು. ಅವರು ಮಾತನಾಡುತ್ತಿರುವುದರ ಪದಪದಗಳ ನಡುವಿನ ಇತಿಹಾಸದಲ್ಲೇ ಹಿಂದಿನ ಧೋರಣೆಯನ್ನು ಸ್ಪಷ್ಟವಾಗಿ ಗುರುತಿಸಬೇಕು.
ಇದನ್ನು ಗುರುತಿಸುತ್ತಾ ಅದರ ಸುತ್ತ ಚರ್ಚೆ ಮಾಡುವುದು ನಮ್ಮ ಕೆಲಸವಲ್ಲವೆಂದು ಅಂಬೇಡ್ಕರ್‌ವಾದಿ ಎನಿಸಿಕೊಂಡವರು ಭಾವಿಸಬಹುದು. ಹೀಗೆ ಉಪೇಕ್ಷೆ ಮಾಡಿದರೆ ಮುಂದೊಂದು ದಿನ ಇವರ ಹೇಳಿಕೆಗಳೇ ದೇಶವನ್ನಾಳುತ್ತವೆ. ಇದು ಅಪಾಯದ ಸರಮಾಲೆಯನ್ನು ತಂದೊಡ್ಡುತ್ತದೆ. ಇದಕ್ಕೆ ಮೊದಲು ಎಚ್ಚೆತ್ತುಕೊಳ್ಳಬೇಕು.
ಇದರೊಂದಿಗೆ ನೀಲಿ ಮತ್ತು ಕೆಂಪು ಒಂದಾಗಬೇಕು ಎನ್ನುವ ಸಣ್ಣ ಚರ್ಚೆ ಇಂದು ಶುರುವಾಗಿದೆ. ಇದೇ ಸಂದರ್ಭದಲ್ಲಿ ಮಾರ್ಕ್ಸ್‌ವಾದಿಗಳು ಮತ್ತು ಎಡಪಂಥೀಯರು ಅಂಬೇಡ್ಕರ್ ಅವರ ಜಾತಿ ವಿನಾಶ, ವರ್ಗ ಸಿದ್ಧಾಂತ, ಪ್ರಭುತ್ವ ಕುರಿತಾದ ನಿಲುವು ಮುಂತಾದವುಗಳ ಬಗ್ಗೆ ಮಾತನಾಡಲು ಮುಂದಾಗಿದ್ದಾರೆ. ಇದು ಕೂಡ ಸ್ವಾಗತಾರ್ಹ. ಇಷ್ಟೇ ಸಾಲದೆಂಬಂತೆ ಕೆಲವರು ಸಂಸದೀಯ ರಾಜಕಾರಣವನ್ನಷ್ಟೇ ಕೇಂದ್ರೀಕರಿಸುತ್ತಿದ್ದಾರೆ.
ಅಂಬೇಡ್ಕರ್ ಅವರು ಇವತ್ತಿನ ಸಂಸದೀಯ ರಾಜಕಾರಣದ ಅಪಾಯವನ್ನು ಮೊದಲೇ ಗ್ರಹಿಸಿದ್ದರಿಂದ ಪ್ರತ್ಯೇಕ ಮತದಾನದ ಹಕ್ಕನ್ನು ಪಡೆಯಲು ಶತಾಯಗತಾಯ ಶ್ರಮಿಸಿದ್ದರು. ಆದರೆ ಇದು ಇಂದು ಮುಖ್ಯ ಚರ್ಚೆಯಾಗುವ ಬದಲು ಗೌಣವಾಗಿದೆ. ಇದನ್ನು ತೀವ್ರ ಚರ್ಚೆಗೆ ಒಳಪಡಿಸಬೇಕಿದೆ.
ಈ ಹಿನ್ನೆಲೆಯಲ್ಲಿ ಅಂಬೇಡ್ಕರ್ ಅವರ ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವದ ಆಶಯಗಳು ಮತ್ತೊಮ್ಮೆ ಮಗದೊಮ್ಮೆ ಪ್ರಭಾವ ಬೀರಬೇಕಾದ ಅನಿವಾರ್ಯ ಇದೆ. ಇದಕ್ಕಾಗಿ ಈ ಹೊತ್ತಿನಲ್ಲಿ ಸಮಾನತೆ ಬಯಸುವ ಮನಸ್ಸುಗಳು ಒಂದಾಗುವ ಪರಿಕಲ್ಪನೆಯ ಸುತ್ತ ಚರ್ಚೆ ಶುರುವಾಗುತ್ತಲೇ ಅಂಬೇಡ್ಕರ್ ಆಶಯಕ್ಕೆ ಮತ್ತೆ ಮತ್ತೆ ಹಿಂದಿರುಗಬೇಕಿದೆ.
ಇನ್ನು ವಿಶ್ವವಿದ್ಯಾಲಯಗಳಲ್ಲಿ ನಡೆದ ರೋಹಿತ್ ವೇಮುಲ, ಕನ್ಹಯ್ಯಾ ಅವರ ವಿಚಾರ ಅಭಿವ್ಯಕ್ತಿ ಸ್ವಾತಂತ್ರ್ಯದ ಪ್ರಶ್ನೆಯನ್ನು ಮತ್ತೊಮ್ಮೆ ಎದ್ದು ನಿಲ್ಲಿಸಿದೆ. ಸಂವಿಧಾನವು ದೇಶದ ನರನಾಡಿಯಾಗಿ, ರಕ್ತ, ಮೆದುಳು, ಹೃದಯವಾಗಿ ಕೆಲಸ ಮಾಡಬೇಕಿದ್ದ ಸಂದರ್ಭದಲ್ಲಿ ಅಘೋಷಿತ ಸಂವಿಧಾನವೊಂದು ಮೆದುಳನ್ನು ನಿಯಂತ್ರಿಸುವಲ್ಲಿ ಫಲ ಕಾಣುತ್ತಿದೆ.
ರೈತರ ಆತ್ಮಹತ್ಯೆ ನಿಂತಿಲ್ಲ. ಮರ್ಯಾದೆಗೇಡು  ಹತ್ಯೆ ಜಾತಿಯ ಪೆಂಡಭೂತವಾಗಿ ಭಾರತದ ಉದ್ದಕ್ಕೂ ಹರಡುತ್ತಿದೆ. ಅಸ್ಪೃಶ್ಯತೆ ಈ ದೇಶಕ್ಕೆ ಅಂಟಿದ ರೋಗವಾಗೇ ಮುಂದುವರಿಯುತ್ತಿದೆ. ಈ ಎಲ್ಲವಕ್ಕೂ ಪರಿಹಾರ ಅಂಬೇಡ್ಕರ್ ಅವರ ಚಿಂತನೆಗಳಲ್ಲಿದೆ. ಇದನ್ನು ಜನಕ್ಕೆ ಮುಟ್ಟುವ ಹಾಗೆ ಕಾರ್ಯಕ್ರಮ ರೂಪಿಸಬೇಕಿದೆ.
ಒಂದು ಕಡೆ ಸರ್ಕಾರದ ವತಿಯಿಂದ ಅಂಬೇಡ್ಕರ್ ಹೆಸರಿನ ಪಂಚತೀರ್ಥ ಯೋಜನೆ ಸಾಗಿದೆ. ವಾಸ್ತವದಲ್ಲಿ ಅಂಬೇಡ್ಕರ್ ಕನಸಿದ ಸಮಸಮಾಜದ ಪರಿಕಲ್ಪನೆಯು ಮಣ್ಣುಪಾಲಾಗುತ್ತಿದೆ. ಇನ್ನೊಂದು ಕಡೆ ದಲಿತರ ಕೊಲೆ, ಸುಲಿಗೆ, ಅತ್ಯಾಚಾರ ಮತ್ತು ಮಹಿಳೆಯರ ಮೇಲಿನ ದಬ್ಬಾಳಿಕೆ ನಿಲ್ಲುತ್ತಿಲ್ಲ. ಮಗದೊಂದು ಕಡೆ ಸಂಸ್ಕೃತಿ ಹೆಸರಿನಲ್ಲಿ ಹೊಡಿ, ಬಡಿ, ತಲೆ ತೆಗಿ ಮುಂತಾದ ಕೊಲ್ಲುವ ಪರಿಭಾಷೆಗಳು ಅಸ್ತಿತ್ವಕ್ಕೆ ಬರುತ್ತಿವೆ.
ಇದರೊಂದಿಗೆ ಸಂವಿಧಾನದಿಂದಾಗಿ ತಳಸಮುದಾಯದವರು ಮೇಲೆ ಬಂದಿದ್ದಾರೆ, ಇದನ್ನು ಸಹಿಸದವರು ಇವರ ವಿರುದ್ಧ ಸಂಚು ನಡೆಸುತ್ತಿದ್ದಾರೆ. ಇವುಗಳನ್ನು ಗಂಭೀರವಾಗಿ ತೆಗೆದುಕೊಳ್ಳುವ ಅನಿವಾರ್ಯ ಇದೆ. ಈ ಅನಿವಾರ್ಯ ಜನತೆಯ ಪರ ದಿಟ್ಟ ಹೋರಾಟ ಕಟ್ಟುತ್ತಿರುವವರು ಒಂದಾಗಬೇಕಾದ ತುರ್ತನ್ನೂ ಮುಂದಿಟ್ಟಿದೆ.
ಏಕೆಂದರೆ, ಅಂಬೇಡ್ಕರ್ ಆಶಿಸಿದ ಸಂವಿಧಾನವಾಗಲಿ, ಅವರ ಚಿಂತನೆಗಳಲ್ಲಿ ಅಡಗಿರುವ ವಸ್ತುಸ್ಥಿತಿಯಾಗಲಿ, ಆಳುವ ವರ್ಗಕ್ಕೆ ಬೇಕಿಲ್ಲ. ಇವರ ಹಾದಿಯಾಗಿ ಈ ದೇಶದ ಬಂಡವಾಳಶಾಹಿಗಳು ಅಂಬೇಡ್ಕರ್ ಆಶಯಗಳನ್ನು ಪ್ರಾಯೋಗಿಕವಾಗಿ ಮೂಲೆಗುಂಪು ಮಾಡುತ್ತಲೇ ಬರುತ್ತಿದ್ದಾರೆ. ಇದಕ್ಕೆ ತಕ್ಕನಾಗಿ ಕೋಮುವಾದ ತನ್ನ ಕರಾಳ ಛಾಯೆಯನ್ನು ಇನ್ನಷ್ಟು ಅಗಲಿಸುತ್ತಿದೆ.
ಇದೇ ಸಂದರ್ಭದಲ್ಲಿ ಈ ದೇಶವನ್ನು ಪ್ರೀತಿಸುವ ಬಗೆಯನ್ನು ಹೇಳಿಕೊಟ್ಟ ಅಂಬೇಡ್ಕರ್ ನೆನಪನ್ನು ಮಸುಕಾಗಿಸುವ ಯತ್ನ ಸಾಗುತ್ತಿದೆ. ಇದಕ್ಕೆ ಪೂರಕವೆಂಬಂತೆ ದೇಶಪ್ರೇಮದ ಚರ್ಚೆ ಕಾವೇರಿದೆ. ಇದೂ ಸಾಲದೆಂಬಂತೆ ‘ದೇಶ ಮತ್ತು ಸಮುದಾಯದ ಹಿತಾಸಕ್ತಿಯಲ್ಲಿ ಯಾವುದು ಮುಖ್ಯ ಎಂದರೆ ನನಗೆ ದೇಶವೇ ಮೊದಲು’ ಎಂದ ಅಂಬೇಡ್ಕರ್‌ರನ್ನು ತಮಗೆ ಬೇಕಾದ ಹಾಗೆ ರಾಜಕೀಯ ದಾಳಕ್ಕೆ ಬಳಸಿಕೊಳ್ಳಲಾಗುತ್ತಿದೆ. ಹೀಗಿರುವಾಗ 125ನೇ ಜಯಂತಿಯನ್ನು ವಸ್ತುಸ್ಥಿತಿಯ ತಳಪಾಯದಲ್ಲೇ ಕಟ್ಟಬೇಕಾದ ತುರ್ತಿದೆ.
ಇದೆಲ್ಲಕ್ಕಿಂತ ಮುಖ್ಯವಾಗಿ ದಲಿತರ ಆರ್ಕೆಸ್ಟ್ರಾಗಳಿಂದ ಮತ್ತು ಆಳುವ ವರ್ಗದ ನೆಪಮಾತ್ರದ ಜಯಂತಿಗಳಿಂದ ಅಂಬೇಡ್ಕರ್ ಅವರನ್ನು ಹೊರತರಬೇಕಿದೆ. ಬಹುಶಃ ಇತಿಹಾಸ, ಅರ್ಥಶಾಸ್ತ್ರ, ರಾಜಕೀಯ ಮತ್ತು ಸಾಂಸ್ಕೃತಿಕ ನೆಲೆಯಲ್ಲಿ ಈ ಮಣ್ಣಿನ ಮೂಲನೆಲೆಗೆ ಅನುಗುಣವಾಗಿ ಅಂಬೇಡ್ಕರ್ ಚಿಂತನೆ ಸಾಗಿದೆ. ಈ ಚಿಂತನೆಯ ಸಾರವನ್ನು ಗ್ರಹಿಸುವ ಯುವಪಡೆಯನ್ನು ಇಂದು ರೂಪಿಸಬೇಕಿದೆ.
ಇದಾಗಬೇಕಾದರೆ ಒಂದನೇ ತರಗತಿಯಿಂದಲೇ ಪಠ್ಯದ ಮೂಲಕ ಪರಿಚಯಿಸುವ ಅನಿವಾರ್ಯ ಇದೆ. ಕನಿಷ್ಠ ಇದನ್ನಾದರೂ ಆಳುವ ವರ್ಗ ದಿಟ್ಟವಾಗಿ ನಿರ್ಧರಿಸಬೇಕು. ಆದರೆ ಆಳುವ ವರ್ಗ ‘ಅಂಬೇಡ್ಕರ್ ಅವರು ಅಸ್ಪೃಶ್ಯತೆಯಿಂದ ನೊಂದು ಬೆಂದರು’ ಎಂದು ಹೇಳುವುದರಲ್ಲೇ ಪಠ್ಯ ರೂಪಿಸುತ್ತಾ ಬಂದಿದೆ. ಇದು ಬದಲಾಗಲೇಬೇಕು.
ಇದರ ಜೊತೆಗೆ ಗಾಂಧಿ ಮತ್ತು ಅಂಬೇಡ್ಕರ್ ಅವರನ್ನು ಮುಖಾಮುಖಿಯಾಗಿಸುವ ಚಿಂತನೆ ಇಂದು ಹೆಚ್ಚೇ ನಡೆಯುತ್ತಿದೆ. ಇನ್ನು ಕೆಲವರಲ್ಲಿ ಅರುಣ್ ಶೌರಿಯಂತಹವರು ಅಂಬೇಡ್ಕರ್ ಅವರ ಬಗ್ಗೆ ಇಲ್ಲಸಲ್ಲದ್ದನ್ನು ಚರ್ಚಿಸುತ್ತಲೇ ಜನರನ್ನು ದಿಕ್ಕು ತಪ್ಪಿಸುವ ಹಾದಿಗೆ ಎಳೆಯುತ್ತಿದ್ದಾರೆ. ಇಂತಹ ಗೊಂದಲಗಳಿಂದ ಹೊರಬಂದು ಅಂಬೇಡ್ಕರ್ ಅವರ ಸ್ವತಂತ್ರ ಚಿಂತನೆಗಳನ್ನು ಜನತೆಯ ಮುಂದೆ ತಂದಿಡಬೇಕಿದೆ.
ಇವತ್ತು ಎಲ್ಲಾ ವಲಯಗಳಿಂದ ಅಂಬೇಡ್ಕರ್ ಅವರು ಪ್ರಸ್ತುತವಾಗಿದ್ದರೂ ಉಳ್ಳವರ ಬುಡಕ್ಕೆ ಕೊಡಲಿ ಕಾವಾಗುವ ಕಾರಣ ಅವರ ಚಿಂತನೆಗಳನ್ನು ಗೌಣವಾಗಿಸುತ್ತಲೇ ಬರಲಾಗುತ್ತಿದೆ. ಇದು ಈ ದೇಶದ ಏಕತೆಯ ದೃಷ್ಟಿಯಿಂದ ಅಪಾಯಕಾರಿ ಬೆಳವಣಿಗೆ.
ಈ ನಿಟ್ಟಿನಲ್ಲಿ ಅಂಬೇಡ್ಕರ್ ಜಯಂತಿಯನ್ನು ಅರ್ಥಪೂರ್ಣಗೊಳಿಸಬೇಕಿದೆ. ಅವರ ವಿಚಾರಧಾರೆಯನ್ನು ಮನಮುಟ್ಟಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕಿದೆ. ಪ್ರಭುತ್ವ ಮತ್ತು ಅಲ್ಪಸಂಖ್ಯಾತರನ್ನು ಕುರಿತ ಅಂಬೇಡ್ಕರ್ ಬರಹಗಳು, ಭೂಮಿ ರಾಷ್ಟ್ರೀಕರಣದ ಪ್ರಶ್ನೆ ಹಾಗೂ ರೈತರ ಸರಣಿ ಆತ್ಮಹತ್ಯೆಯ ಹಿನ್ನೆಲೆಯಲ್ಲಿ ಅವರು ಅಂದೇ ಸೂಚಿಸಿದ ಪರಿಹಾರ.
ಸರ್ಕಾರ ರೈತರ ಪರ ವಿಮೆ ಮಾಡಿಸಬೇಕೆನ್ನುವ ಅವರ ನಿರ್ಧಾರ, ಕೃಷಿಯನ್ನು ಸರ್ಕಾರಿ ಉದ್ದಿಮೆಯನ್ನಾಗಿ ಪರಿಗಣಿಸಿ ಗೇಣಿ ರೂಪದಲ್ಲಿ ಕೃಷಿಗೆ ನೀಡಿ ಸಲಕರಣೆಗಳನ್ನು ಸರ್ಕಾರವೇ ಒದಗಿಸಬೇಕೆನ್ನುವುದರ ಹಿಂದಿನ ಕಾಳಜಿ, ಎಲ್ಲ ಅಸಮಾನತೆಗಳ ಮೂಲವಾಗಿರುವ ಜಾತಿಯ ಬುಡಕ್ಕೆ ಬೆಂಕಿ ಇಡಬೇಕೆನ್ನುವ ಅವರ ಖಚಿತ ನಿಲುವು, ಸಂಪತ್ತಿನ ಅಸಮಾನ ಹಂಚಿಕೆಯಿಂದ ಉಂಟಾಗುವ ಭೀಕರ ಪರಿಣಾಮ,
ರಾಜಕೀಯ ಅಧಿಕಾರದಲ್ಲಿ ಮೇಲುಗೈ ಸಾಧಿಸುತ್ತಿರುವ ಬಂಡವಾಳಶಾಹಿ ಮತ್ತು ಜಾತಿ ಕುರಿತ ಅವರ ನಿಲುವುಗಳು, ಸತತ ಸಂಶೋಧನೆಯ ಫಲವಾಗಿ ಹಿಂದೂ ಧರ್ಮದಿಂದ ಬೇಸತ್ತು ಬುದ್ಧ ಧಮ್ಮದೆಡೆಗಿನ ಅವರ ಖಚಿತ ಪಯಣದ ಹಿಂದಿನ ನೋವು, ಕಾಶ್ಮೀರಿ ಸಮಸ್ಯೆಗೆ ಪರಿಹಾರ ಇವೆಲ್ಲವುಗಳ ಹಿನ್ನೆಲೆಯಲ್ಲಿ ಅಂಬೇಡ್ಕರ್ ಅವರನ್ನು ಮತ್ತೊಮ್ಮೆ ವಸ್ತುನಿಷ್ಠವಾಗಿ ಪರಿಚಯಿಸಬೇಕು.
ಆ ಮೂಲಕ ಇಂದಿನ ಪರಿಸ್ಥಿತಿಯಲ್ಲಿ ಅಂಬೇಡ್ಕರ್ ಅವರ ಪ್ರಸ್ತುತತೆಯನ್ನು ಹೆಚ್ಚು ಸನಿಹಗೊಳಿಸಬೇಕು.  ಇದು ಇಂದು ನಾವು ಬಹುಮುಖ್ಯವಾಗಿ ಇಡಬೇಕಾದ ಹೆಜ್ಜೆ. ಈ ಚಿಂತನೆಗಳನ್ನು ಜನತೆಯ ಬರೀ ಮೆದುಳಿಗಲ್ಲದೆ ಹೃದಯಕ್ಕೆ ತಲುಪಿಸುತ್ತೇವೆಂಬ ಪ್ರತಿಜ್ಞೆಯನ್ನೂ ಇಂದೇ ಕೈಗೊಳ್ಳಬೇಕಿದೆ.

ಕಾಮೆಂಟ್‌ಗಳಿಲ್ಲ: