ಮಂಗಳವಾರ, ಏಪ್ರಿಲ್ 19, 2016

ಅಂಬೇಡ್ಕರ್ ಅಭಿಯಾನ ಮತ್ತು ಭೀಮಯಾತ್ರೆ ಎತ್ತುವ ಪ್ರಶ್ನೆಗಳು

ಜನಕಥನ-೪


-ಡಾ.ಅರುಣ್ ಜೋಳದಕೂಡ್ಲಿಗಿ.

 ಡಾ.ಬಿ.ಆರ್.ಅಂಬೇಡ್ಕರ್ ರವರ ೧೨೫ ಜನ್ಮ ದಿನಾಚರಣೆ ಅಂಗವಾಗಿ ದೇಶದಾದ್ಯಾಂತ ವಿವಿಧ ಬಗೆಗಳಲ್ಲಿ ಅಂಬೇಡ್ಕರ್ ಜಾಗೃತಿ ನಡೆಯುತ್ತಿವೆ. ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೇಸ್ ಮತ್ತು ಬಿಜೆಪಿ ಈ ಕುರಿತ ಚಟುವಟಿಕೆಗಳಿಗಾಗಿ ಪ್ರತ್ಯೇಕ ರಾಷ್ಟ್ರೀಯ ಸಮಿತಿಗಳನ್ನು ರಚಿಸಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಿವೆ. ಅಂತೆಯೇ ದೇಶವ್ಯಾಪಿ ಎಲ್ಲಾ ಅಂಬೇಡ್ಕರವಾದಿಗಳು ಈ ಜನ್ಮದಿನಾಚರಣೆಯನ್ನು ಸಾರ್ಥಕಗೊಳಿಸಲು ವಿವಿಧ ಬಗೆಯಲ್ಲಿ ಸಿದ್ಧತೆ ನಡೆಸುತ್ತಿದ್ದಾರೆ. ಪುಟ್ಟ ಪುಟ್ಟ ಕೇರಿಗಳಲ್ಲಿಯೂ ಅಂಬೇಡ್ಕರ್ ಬೆಳಕನ್ನು ಕಾಣಿಸುವ ಪ್ರಯತ್ನಗಳು ನಡೆಯುತ್ತಿವೆ. ಈ ನಡುವೆ ಕೆಲವು ದೂರದೃಷ್ಠಿಯ ಯೋಜನೆಗಳು ೨೦೧೫ ಏಪ್ರಿಲ್ ೧೪ ರಿಂದಲೇ ವರ್ಷಪೂರ್ತಿ ನಡೆಯುವ ಚಟುವಟಿಕೆಗಳನ್ನು ಆಯೋಜಿಸಿವೆ. ಈ ನೆಲೆಯಲ್ಲಿ ಕರ್ನಾಟಕ ಮತ್ತು ದೇಶವ್ಯಾಪಿ ಆಯೋಜನೆಗೊಂಡ ಎರಡು ಪ್ರಮುಖ ಕೆಲಸಗಳ ಕಡೆ ನಿಮ್ಮ ಗಮನ ಸೆಳೆಯುತ್ತೇನೆ.
**
 ಜೆ.ಎನ್.ಯುನ ಸಂಗಾತಿ ಕನ್ನಯ್ಯ ಕುಮಾರ್ `ಜೈಭೀಮ್ ಲಾಲ್ ಸಲಾಮ್' ಎನ್ನುವ ಮೂಲಕ ಇಂಡಿಯಾದಲ್ಲಿ ಕಮ್ಯುನಿಷ್ಟ್ ಚಳವಳಿ ಮತ್ತು ಅಂಬೇಡ್ಕರ್‌ವಾದಿ ಹೋರಾಟಗಳನ್ನು ಏಕತ್ರಗೊಳಿಸುವ ಅಥವಾ ಬೆಸೆಯುವ ಕೂಗನ್ನು ಎತ್ತಿದ್ದಾನೆ. ಈ ಕೂಗು ಮೊದಲಲ್ಲವಾದರೂ ಸದ್ಯಕ್ಕೆ ಇದು ಹೊಸ ರಾಜಕೀಯ ಪರಿಭಾಷೆಯಾಗಿ ಜೀವಪರ ಸಂಗಾತಿಗಳನ್ನು ಆಕರ್ಶಿಸಿದೆ. ಈ ಕೂಡುವಿಕೆಯು ಚಾರಿತ್ರಿಕ ಅಗತ್ಯದಂತೆ ಪರವಾಗಿಯೂ, ಅಸಾದ್ಯವೆಂಬಂತೆ ವಿರೋಧವಾಗಿಯೂ ಚರ್ಚೆ ನಡೆದಿದೆ. ಆದರೆ ಇದರ ಅಗತ್ಯದ ಬೆಂಬಲ ಒಕ್ಕೊರಲಿನ ಧ್ವನಿಯಾಗಿ ಹೊಮ್ಮುತ್ತಿದೆ. ಜೆ.ಎನ್.ಯು ಈ ಘಟನೆಗೂ ಮುಂಚೆ ಕರ್ನಾಟಕದಲ್ಲಿಯೂ `ಜೈಭೀಮ್ ಲಾಲ್ ಸಲಾಮ್' ಬೆಸೆಯುವ ಮಹತ್ವಪೂರ್ಣ ಯೋಜನೆಯೊಂದು ಅಘೋಷಿತವಾಗಿ ಆರಂಭವಾಯಿತು. ಆ ಯೋಜನೆಯೇ ಬೆಂಗಳೂರಿನ ರಾಷ್ಟ್ರೀಯ ಕಾನೂನು ಶಾಲೆಯ ಅಂಬೇಂಡ್ಕರ್ ಅಧ್ಯಯನ ಕೇಂದ್ರವು ಆಯೋಜಿಸಿದ `ಯುವಜನತೆ ಮತ್ತು ಪ್ರಜಾತಂತ್ರಕ್ಕಾಗಿ ಅಂಬೇಡ್ಕರ್' ಎಂಬ ಅಭಿಯಾನ.
 ಈ ಅಭಿಯಾನದಲ್ಲಿ ಅಂಬೇಡ್ಕರ್ ಅವರ ಚಾರಿತ್ರಿಕ ಮಹತ್ವದ ಪುಸ್ತಕಗಳಾದ `ಪ್ರಾಚೀನ ಭಾರತದಲ್ಲಿ ಕ್ರಾಂತಿ ಮತ್ತು ಪ್ರತಿಕ್ರಾಂತಿ' `ಜಾತಿ "ನಾಶ' `ಪ್ರಭುತ್ವ ಮತ್ತು ಅಲ್ಪಸಂಖ್ಯಾತರು' ಕೃತಿಗಳನ್ನು ವರ್ತಮಾನದ ಕಣ್ಣೋಟದಿಂದ ಪರಿಚುಸುವ ಕೆಲಸ ನಡೆಯಿತು. ಅಂತೆಯೇ ಈ ಮೂರು ಪುಸ್ತಕಗಳ ಸಾರಸಂಗ್ರಹದ ಪುಟ್ಟ ಪುಸ್ತಕವನ್ನು ವಿದ್ಯಾರ್ಥಿಗಳಿಗೆ ಐದು ರೂಪಾಯಿಗೆ ಕೊಡಲಾಯಿತು. ಅಭಿಯಾನ ರಾಜ್ಯದ ೫೦೦ ಪದವಿ ಕಾಲೇಜುಗಳಲ್ಲಿ ನಡೆದು ಇದೀಗ ಜಿಲ್ಲಾವಾರು ಸಮಾರೋಪ ನಡೆಯುತ್ತಿವೆ. ಈ ಯೋಜನೆಯ ಸಂಚಾಲಕರುಗಳಲ್ಲಿ ಹೆಚ್ಚು ಕಮ್ಯುನಿಷ್ಟರಿದ್ದಾರೆ ಎಂಬ ಕಾರಣಕ್ಕೆ ದಲಿತಪರ ಸಂಘಟನೆಯ ಕೆಲವು ನಾಯಕರು ಟೀಕಿಸಿದರು.  ಅಂತೆಯೇ ಗಾಢವಾದ ಅನುಮಾನವೂ ವ್ಯಕ್ತವಾಯಿತು. 

  ಈ ಬಗೆಯ ವಿರೋಧವನ್ನು ಬದಿಗಿಟ್ಟು ನೋಡಿದರೆ, ಈ ಯೋಜನೆ ನಿಜಕ್ಕೂ ಮಹತ್ವಪೂರ್ಣವಾದುದು. ಪದವಿ ಕಾಲೇಜು ವಿದ್ಯಾರ್ಥಿಗಳ ಎದೆಯಲ್ಲಿ ಅಂಬೇಡ್ಕರ್ ಕ್ರಾಂತಿಯ ಬೀಜ ಬಿತ್ತುವ ಪ್ರಕ್ರಿಯೆಯ ಭಾಗವಾಗಿ ಅದರ ಮಹತ್ವವಿದೆ. ಆಶಾವಾದವೆಂದರೆ ಈ ಬೀಜಗಳು ಇಂದಲ್ಲಾ ನಾಳೆ ಮೊಳಕೆಯೊಡೆಯುತ್ತವೆ. ಈ ಅರ್ಥದಲ್ಲಿ ಕರ್ನಾಟಕದ ಪದವಿ ಕಾಲೇಜುಗಳ ಯುವಜನತೆಯಲ್ಲಿ ಅಂಬೇಂಡ್ಕರರ ಮರುಹುಟ್ಟು ಸಂಭವಿಸಿದೆ. ಈ ಯೋಜನೆಯ ಕೊಪ್ಪಳ ಜಿಲ್ಲಾ ಸಂಚಾಲಕನಾಗಿದ್ದ ನಾನು ಕೊಪ್ಪಳ ಬಳ್ಳಾರಿ ಜಿಲ್ಲೆಗಳಲ್ಲಿ ನಡೆದ ಅಭಿಯಾನದ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದೆ. 

 ಈ ಅಭಿಯಾನದಲ್ಲಿ ಮುಖ್ಯವಾಗಿ ವಿದ್ಯಾರ್ಥಿಗಳಲ್ಲಿದ್ದ ಅಂಬೇಡ್ಕರ್ ಮತ್ತು ಮೀಸಲಾತಿ ಬಗೆಗಿನ ತಪ್ಪು ತಿಳುವಳಿಕೆಯನ್ನು ತಿದ್ದುವ ಪ್ರಯತ್ನ ನಡೆದಿದೆ. ಅಂತೆಯೇ ಅಂಬೇಡ್ಕರ್ ಬಗೆಗೆ ಹೊಸ ಬಗೆಯ ಅಭಿಮಾನ ಮೂಡುವಂತೆ ಅವರ ಚಿಂತನೆಗಳನ್ನು ವರ್ತಮಾನದ ಸಂಕಟಗಳ ಬಿಡುಗಡೆಯ ಆಕರಗಳಂತೆ ವಿವರಿಸಲಾಗಿದೆ. ಹಾಗಾಗಿ ಅಭಿಯಾನದ ದೂರದೃಷ್ಠಿಯ ಕಾರಣಕ್ಕೆ ರಾಷ್ಟ್ರೀಯ ಕಾನೂನು ಶಾಲೆಯ ಅಂಬೇಡ್ಕರ್ ಅಧ್ಯಯನ ಕೇಂದ್ರದ ಪ್ರೊ.ಜಾಫೆಟ್, ವಿ.ಎಸ್.ಶ್ರೀಧರ್, ಶಿವಸುಂದರ್, ಲಕ್ಷ್ಮಿನಾರಾಯಣ, ರಮಾಕಾಂತ ಮತ್ತು ರಾಜ್ಯವ್ಯಾಪಿ ಕಾರ್ಯಕ್ರಮಗಳನ್ನು ಆಯೋಜಿಸಿದ ವಲಯ ಸಂಚಾಲಕರು ಮತ್ತು ಜಿಲ್ಲಾ ಸಂಚಾಲಕರುಗಳು ಅಭಿನಂದನಾರ್ಹರು. ಅಂತೆಯೇ ಈ ಅಭಿಯಾನವನ್ನು ೨೦೧೬-೧೭ ರಲ್ಲಿಯೂ ಮತ್ತಷ್ಟು  ಕಾಲೇಜುಗಳಿಗೆ ವಿಸ್ತರಿಸುವ ಅಗತ್ಯವಂತೂ ಇದೆ.
 ೨೦೧೬-೧೭ ರ ಸಾಲಿನಲ್ಲಿ ಕಾನೂನು ಶಾಲೆ ಈ ಅಭಿಯಾನವನ್ನು ಮುಂದುವರೆಸುವುದಾದರೆ ಈಗಿನ `ಭಾಷಣ-ಸಂವಾದ' ಮಾದರಿಗಿಂತ ಕಮ್ಮಟದ ಮಾದರಿ ಹೆಚ್ಚು ಉಪಯುಕ್ತ. ಕುವೆಂಪು ಭಾಷಾ ಭಾರತಿ ಪ್ರಾಧೀಕಾರವು ಈಗ್ಗೆ ಎರಡು ವರ್ಷದಿಂದ ಆಯೋಜಿಸುವ `ಕುವೆಂಪು ಓದು' ಮಾದರಿ ಹೆಚ್ಚು ಪರಿಣಾಮಕಾರಿಯಾಗಬಲ್ಲದು. ಪ್ರೊ. ಕೆ.ವಿ ನಾರಾಯಣ ಅವರು ಇದನ್ನು ತುಂಬಾ ವೈಜ್ಞಾನಿಕವಾಗಿ ರೂಪಿಸಿದ್ದಾರೆ. ವಯಕ್ತಿಕವಾಗಿಯೂ ಕುವೆಂಪು ಓದುವಿನ ಎರಡು ಕಮ್ಮಟವನ್ನು ಸಂಚಾಲಕನಾಗಿ ನಿರ್ವಹಿಸಿದ ಕಾರಣ ಇದರ ಮಹತ್ವ ಅರಿವಿಗೆ ಬಂದಿದೆ. ಇದರ ಸ್ವರೂಪ ಹೀಗಿದೆ, ಕನಿಷ್ಠ ಇನ್ನೂರು ಪುಟದ ಅಂಬೇಡ್ಕರರ ಪ್ರಮುಖ ಬರಹಗಳನ್ನು ಆಯ್ದು `ಅಂಬೇಡ್ಕರ್ ಓದು' ಕೃತಿಯನ್ನು ಎಡಿಟ್ ಮಾಡಿ, ಕನಿಷ್ಠ ಒಂದು ಕಾಲೇಜಿನಿಂದ ೩೦ ರಿಂದ ೫೦ ವಿದ್ಯಾರ್ಥಿಗಳನ್ನು ಆಯ್ದು ಆ ಆಯ್ದ ವಿದ್ಯಾರ್ಥಿಗಳಿಗೆ ಅಂಬೇಡ್ಕರ್ ಓದು ಕೃತಿಯನ್ನು ಒಂದು ತಿಂಗಳು ಮುಂಚೆಯೇ ಓದಲು ಕೊಡಬೇಕು. ನಂತರ ಈ ವಿದ್ಯಾರ್ಥಿಗಳಿಗೆ ಎರಡು ದಿನದ ಕಮ್ಮಟ ಮಾಡಿ ಅದರಲ್ಲಿ ವಿದ್ಯಾರ್ಥಿಗಳೇ ಅಂಬೇಡ್ಕರ್ ಬಗ್ಗೆ ಮಾತನಾಡಲು ಚರ್ಚಿಸಲು ವೇದಿಕೆ ಕಲ್ಪಿಸಬೇಕು. ಈ ಕಮ್ಮಟದ ಸಂಚಾಲಕರು ವಿದ್ಯಾರ್ಥಿಗಳ ಚರ್ಚೆಯನ್ನು ತಿಳಿವನ್ನು ವಿಸ್ತರಿಸುವ ಕೆಲಸವನ್ನಷ್ಠೇ ಮಾಡಬೇಕು. ಇದು ಈಗಿನ ಅಭಿಯಾನದ ಭಾಷಣ-ಸಂವಾದ ಮಾದರಿಗಿಂತಲೂ ಹೆಚ್ಚು ಪರಿಣಾಮಕಾರಿಯಾಗಬಲ್ಲದು. ಈ ಮಾದರಿಯನ್ನು ಕಾನೂನು ಶಾಲೆಯಲ್ಲದೆ ಇತರೆ ವಿವಿಗಳಲ್ಲಿರುವ ಅಂಬೇಡ್ಕರ್ ಅಧ್ಯಯನ ಸಂಸ್ಥೆಗಳೂ ಕೈಗೊಳ್ಳಬಹುದಾದ ಪರಿಣಾಮಕಾರಿ ಯೋಜನೆಯಾಗಿದೆ.
**
 ಅಂಬೇಡ್ಕರ್ ಅವರ ೧೨೫ ನೇ ಜನ್ಮ ದಿನಾಚರಣೆಯ ಅಂಗವಾಗಿ ದೇಶವ್ಯಾಪಿ ಸಂಚರಿಸಿದ ಭೀಮಯಾತ್ರೆ ನನ್ನನ್ನು ಕಾಡಿದ ಒಂದು ಬಗೆಯ ಯಾತನಾಮಯ ಪಯಣ. ಭೀಮಯಾತ್ರೆಯ ಬಗ್ಗೆ ಪ್ರಕಟವಾದ ಪತ್ರವೊಂದನ್ನು ನಾನು ಎಕನಾಮಿಕ್ ಅಂಡ್ ಪೊಲಿಟಿಕಲ್ ವೀಕ್ಲಿ ಯಲ್ಲಿ ಗಮನಿಸಿದೆ. ಕೂಡಲೆ ಈ ಪತ್ರದಲ್ಲಿದ್ದ ವೆಬ್ ವಿಳಾಸದಿಂದ ಸಂಪರ್ಕಿಸಿದೆ. ಯಾತ್ರೆಯ ಮತ್ತಷ್ಟು ಮಾಹಿತಿಗಳು ಲಭ್ಯವಾದವು. ಅಂತೆಯೇ ಆಯೋಜಕರು ತತಕ್ಷಣವೇ ಪ್ರತಿಕ್ರಿಯಿಸಿ ಯಾತ್ರೆಯ ರೂಟ್ ಮ್ಯಾಪನ್ನು ಕಳಿಸಿ ಸಕಾರಾತ್ಮಕವಾಗಿ ಸ್ಪಂದಿಸಿದರು. 

  ದೆಹಲಿ ಮೂಲದ  ಸಫಾಯಿ ಕರ್ಮಚಾರಿ ಆಂದೋಲನ ಸಮಾನಾಸಕ್ತ ದಲಿತಪರ ನಿಜ ಕಾಳಜಿ ಇರುವ ಕೆಲವರ ಹಣಕಾಸಿನ ನೆರವಿನಿಂದ ನಡೆಯುತ್ತಿರುವ ಒಂದು ಸಂಸ್ಥೆ. ಇದು ಸಫಾಯಿ ಕರ್ಮಚಾರಿಗಳ ಪರವಾದ ಹಕ್ಕೊತ್ತಾಯಗಳಿಗಾಗಿ ಪ್ರಭುತ್ವವನ್ನು ಒತ್ತಾಯಿಸುವ ಮತ್ತು ಸಫಾಯಿ ಕರ್ಮಚಾರಿಗಳಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ೧೯೮೨ ರಿಂದ ಸಕ್ರಿಯವಾಗಿ ಮಾಡುತ್ತಾ ಬಂದಿದೆ.  ಈ ಆಂದೋಲನದ ಭಾಗವಾಗಿ ೨೦೧೦ ರಲ್ಲಿ ಸಾಮಾಜಿಕ ಪರಿವರ್ತನಾ ಬಸ್‌ಯಾತ್ರೆಯನ್ನು ಕೈಗೊಂಡಿತ್ತು. ಹೀಗಾಗಿ ಈ ಸಂಸ್ಥೆಯ ಸ್ವರೂಪವೇ ಸಫಾಯಿ ಕರ್ಮಚಾರಿಗಳ ಸಮಸ್ಯೆಗಳ ಪರಿಹಾರಕ್ಕಾಗಿ ಹಕ್ಕೊತ್ತಾಯದ ಹೋರಾಟಗಳನ್ನು ಜೀವಂತಗೊಳಿಸುವುದು ಮತ್ತು ದೇಶದ ಜನತೆಯ ಗಮನಸೆಳೆಯುತ್ತಲೇ ಪ್ರಭುತ್ವದ ಮುಂದೆ ದೊಡ್ಡ ಪ್ರತಿರೋಧವನ್ನು ದಾಖಲಿಸುವುದಾಗಿದೆ. 

 ದೇಶವ್ಯಾಪಿ ಆಚರಣೆಯಲ್ಲಿರುವ ಒಣಶೌಚಾಲಯ, ಒಳಚರಂಡಿ, ಮಲದಗುಂಡಿ ಸ್ವಚ್ಚಮಾಡುವ ಸಫಾಯಿ ಕರ್ಮಚಾರಿಗಳ `ಕೊಲೆ ನಿಲ್ಲಿಸಿ' ಎಂದು ಆಗ್ರಹಿಸುವ `ಸಫಾಯಿ ಕರ್ಮಚಾರಿ ಆಂದೋಲನ' ಆಯೋಜಿಸಿದ `ಭೀಮಯಾತ್ರೆ'  ದೇಶವ್ಯಾಪಿ ನಡೆಯುತ್ತಿದೆ. ಈ ಬರಹ ಬರೆಯುವ ಹೊತ್ತಿಗೆ ೧೦೦ ನೇ ದಿನದ ಯಾತ್ರೆಯು ಉತ್ತರ ಭಾರತದಲ್ಲಿತ್ತು. ಇದೀಗ ಈ ಯಾತ್ರೆ ೩೦ ಸಾವಿರ ಕಿಲೋಮೀಟರ್ ಕ್ರಮಿಸಿದೆ. ಇದು ಸಫಾಯಿ ಕರ್ಮಚಾರಿಗಳ ರಾಷ್ಟ್ರಮಟ್ಟದ ಬಸ್‌ಯಾತ್ರೆ. ಈ ಯಾತ್ರೆಯ ಒಕ್ಕೊರಲಿನ ಕೂಗೊಂದೆ `ನಮ್ಮ ಕೊಲೆಯನ್ನು ನಿಲ್ಲಿಸಿ' ಎನ್ನುವುದು. ಇದೊಂದು ಯಾತನೆ ಮತ್ತು ದುಃಖದ ಪಯಣವಾಗಿದೆ. ೨೦೧೫ ಡಿಸೆಂಬರ್ ೧೦ ರಂದು ಆರಂಭವಾಗಿ ೨೦೧೬ ಏಪ್ರಿಲ್ ೧೩ ರವರೆಗೆ ದೇಶದ ೨೫ ರಾಜ್ಯಗಳ ೫೦೦ ಜಿಲ್ಲೆಗಳಲ್ಲಿ ಬಸ್ ಯಾತ್ರೆ ಮೂಲಕ ಪ್ರಚಾರ ಮಾಡಲಾಗುತ್ತಿದೆ. ಏಪ್ರಿಲ್ ೧೪ ರಂದು ದೆಹಲಿಯಲ್ಲಿ ದೊಡ್ಡಮಟ್ಟದಲ್ಲಿ ಸಮಾವೇಶ ಆಯೋಜಿಸಿ ಸರಕಾರಕ್ಕೆ ಹಕ್ಕೊತ್ತಾಯದ ವರದಿಯೊಂದನ್ನು ಸಲ್ಲಿಸಲಿದೆ.
  ಈ ಯಾತ್ರೆ ಕರ್ನಾಟಕದಲ್ಲಿಯೂ ಸದ್ದಿಲ್ಲದೆ ಚಲಿಸಿತು. ಕರ್ನಾಟಕದ ದಲಿತ ಹೋರಾಟಗಳ ನೆಲೆಯಲ್ಲಿ ಈ ಯಾತ್ರೆಗೆ ದೊಡ್ಡಮಟ್ಟದ ಬೆಂಬಲ ವ್ಯಕ್ತವಾಗಬೇಕಿತ್ತು. ವಿಪರ್ಯಾಸವೆಂದರೆ ಈ ಯಾತ್ರೆ ಸದ್ದುಗದ್ದಲವಿಲ್ಲದೆ ಆಯಾ ಭಾಗಗಳ ದಲಿತ ಕೇರಿಗಳಿಗೆ ಹೋಗಿ ಕಾರ್ಯಕ್ರಮಗಳನ್ನು ಆಯೋಜಿಸಿ ಹಾಸ್ಟೆಲ್ ಮೊದಲಾದ ಕಡೆಗಳಲ್ಲಿ ಉಳಿದು ಹೋದರು. ಈ ಯಾತ್ರೆಯ ಬಗ್ಗೆ ಕನಿಷ್ಠ ರಾಜ್ಯಮಟ್ಟದ ಒಂದು ಸುದ್ದಿ ಕೂಡ ಆಗಲಿಲ್ಲ. ಇದು ರಾಜ್ಯ ಸಂಚಾಲಕರ ದಲಿತಪರ ಸಂಘಟನೆಗಳ ಒಡನಾಟದ ಕೊರತೆಯೋ, ಅಥವಾ ಈ ಯಾತ್ರೆಯ ಸ್ವರೂಪವೇ ಈ ನೆಲೆಯದಾಗಿತ್ತೋ ತಿಳಿಯದು. 

 ಕರ್ನಾಟಕದಲ್ಲಿ ಯಾತ್ರೆಯ ಮೊದಲ ಸುತ್ತು ೪೩ ನೇ ದಿನ ಜನವರಿ ೨೧ ರಂದು ಆಂದ್ರದ ಮೂಲಕ ಕೋಲಾರ ಗೋಲ್ಡ್ ಫೀಲ್ಡ್‌ನ ಕೃಷ್ಣಗಿರಿುಂದ ಆರಂಭವಾಗಿ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು, ರಾಮನಗರ, ಮಂಡ್ಯ, ಮೈಸೂರು, ಕೃಷ್ಣರಾಜ ಸಾಗರ, ಕುಷಾಲನಗರ, ಸೋಮವಾರ ಪೇಟೆ, ಕೂಡ್ಲಿಪೇಟೆ, ಹಾಸನ, ಚಿಕ್ಕಮಗಳೂರು, ಕಡೂರು, ಭದ್ರಾವತಿ, ಶಿವಮೊಗ್ಗ, ದಾವಣಗೆರೆ, ಹಾವೇರಿ, ಹುಬ್ಬಳ್ಳಿ, ನವಲಗುಂದ, ನರಗುಂದ, ಬಾದಾಮಿ, ರೋಣ, ಗದಗ, ಕೊಪ್ಪಳ, ಹೊಸಪೇಟೆ, ಕೂಡ್ಲಿಗಿ, ಜಗಲೂರು, ಚಿತ್ರದುರ್ಗ, ಚಳ್ಳಕೆರೆ, ಪಾವಗಡದ ಮೂಲಕ ಆಂದ್ರದ ಹಿಂದೂಪುರವನ್ನು ಪ್ರವೇಶಿಸಿತು. ಎರಡನೇ ಸುತ್ತು: ೫೧ ನೇ ದಿನದ ಯಾತ್ರೆಯಲ್ಲಿ ಫೆಭ್ರವರಿ ೧ ರಿಂದ ಬೀದರಿನ ಹುಮನಾಬಾದ್ ಮೂಲಕ ಗುಲ್ಬರ್ಗಾ, ಚಿತಾಪುರ, ಯಾದಗಿರಿ, ದೇವದುರ್ಗ, ಶಾಹಾಪೂರ, ಸಿಂಧಗಿ, ಬಿಜಾಪುರ, ಅಥಣಿ ಮೂಲಕ ಸಾಂಗಲಿುಂದ ಮಹರಾಷ್ಟ್ರವನ್ನು ಪ್ರವೇಶಿಸಿತು. ಸಫಾು ಕರ್ಮಚಾರಿ ಆಂದೋಲನ ಬೆಂಗಳೂರು ಕಛೇರಿಯ ಡಿ.ಬಾಬುಲಾಲ, ಆರ್.ಸಿ.ಗವಾರಿಯ, ಪುಷ್ಪಲತಾ, ಮೋಸೆಸ್ ಅವರುಗಳು ಆಯಾ ಸ್ಥಳೀಯ ದಲಿತಪರ ಸಂಘಟನೆಗಳ ಸಹಾಯ ಪಡೆದು ಯಾತ್ರೆಯನ್ನು ಬರಮಾಡಿಕೊಂಡು ಅಲ್ಲಲ್ಲಿ ಸಭೆಗಳನ್ನು ಮಾಡಿ ಕಾರ್ಯಕ್ರಮವನ್ನು ಆಯೋಜಿಸಿದ್ದರು.

 ಈ ದೇಶದಲ್ಲಿ ಜಾತಿಪದ್ದತಿಯ ಅಮಾನವೀಯ ಪಾಲನೆ ಕೆಲವು ವಲಯಗಳಲ್ಲಿ ಈಗಲೂ ಜೀವಂತವಾಗಿದೆ. ಮಲಸ್ವಚ್ಚತ ಸಫಾಯಿ ಕೆಲಸಗಳನ್ನು ತಲೆತಲಾಂತರದಿಂದ ದಲಿತರಿಂದಲೇ ಮಾಡಿಸಲಾಗುತ್ತಿದೆ. ಈ ಕೆಲಸ ಇವರದು ಮಾತ್ರ ಎಂದು ಗಾಢವಾಗಿ ನಂಬಿಸಲಾಗಿದೆ. ಪ್ರಭುತ್ವ ಕೂಡ ವ್ಯವಸ್ಥಿತವಾಗಿ ಈ ಕೆಲಸವನ್ನು ದಲಿತರಿಂದಲೇ ಮಾಡಿಸುತ್ತಿದೆ. ಇದು ಉದ್ದೇಶ ಪೂರ್ವಕವಾಗಿ ನಡೆಯುತ್ತಿರುವ ದೌರ್ಜನ್ಯ ಮತ್ತು ತಾರತಮ್ಯ. ಅಂತೆಯೇ ಸಂವಿಧಾನದತ್ತವಾದ ಬದುಕುವ ಹಕ್ಕು ಮತ್ತು ಘನತೆಯ ಮೇಲಾಗುತ್ತಿರವ ನಿರಂತರ ಹಲ್ಯೆ ಎನ್ನುವುದನ್ನು ದೊಡ್ಡ ಧ್ವನಿಯಲ್ಲಿ ಹೇಳಬೇಕಾಗಿದೆ. ಇಂತಹ ಸಕ್ರಿಯಾತ್ಮಕ ಹೋರಾಟವನ್ನು ಸಫಾು ಕರ್ಮಚಾರಿ ಆಂದೋಲನ ಜೀವಂತವಾಗಿಟ್ಟಿದೆ. ಅಂತೆಯೇ ಇಂತಹ ಅಮಾನವೀಯ ಪ್ರಕರಣಗಳು ನಡೆದಾಗಲೆಲ್ಲ ಖಂಡಿಸುತ್ತಾ ಬಂದಿದೆ. 

  ೧೯೯೩ ರಲ್ಲಿ ಮಲಬಾಚುವ ಪದ್ದತಿಯನ್ನು ನಿಷೇಧಿಸಿದ ಕೇಂದ್ರ ಸರಕಾರದ ಕಾಯ್ದೆ ಸುಮಾರು ೨೦ ವರ್ಷಗಳು ಜಾರಿಯಲ್ಲಿತ್ತು, ಆದರೆ ಕಾಯ್ದೆಯ ಅಂತರ್ಗತ ಲೋಪದೋಷಗಳಿಂದ ಮತ್ತು ರಾಜಕೀಯ ಇಚ್ಚಾಶಕ್ತಿ ಕೊರತೆಯ ಕಾರಣಕ್ಕೆ ಇದು ಅನುಷ್ಟಾನಕ್ಕೆ ಬರಲಿಲ್ಲ. ನಂತರ ೨೦೧೩ ರಲ್ಲಿ ಮಲಬಾಚುವ ಪದ್ದತಿಯ ನಿಷೇಧ ಮತ್ತು ಪುನರ್ವಸತಿ ಯೋಜನೆಯನ್ನು ಒಳಗೊಂಡ ಹೊಸ ಕಾಯ್ದೆಯನ್ನು ಜಾರಿಮಾಡಲಾುತು. ದುರಾಧೃಷ್ಟವೆಂದರೆ, ಮಲದ ಗುಂಡಿಗಳಿಗೆ ಬಿದ್ದು ಸಾವನ್ನಪ್ಪುವ ಪ್ರಕರಣಗಳು ದಾಖಲಾಗುತ್ತಲೇ ಇವೆ. ಈ ಸಾವಿನ ಸಂಖ್ಯೆ ಏರುತ್ತಲೇ ಇವೆ. 
  
 ೧೯೯೩ ರ ಕಾನೂನನ್ನು ಸರಿಯಾಗಿ ಜಾರಿ ಮಾಡಲು ಕೇಂದ್ರ ಮತ್ತು ರಾಜ್ಯ ಸರಕಾರಗಳಿಗೆ ನಿರ್ದೇಶನ ಕೊಡಬೇಕು ಎಂದು ಕೋರಿ ಕಲಮು ೩೨ ರ ಪ್ರಕಾರ `ಸಫಾಯಿ ಕರ್ಮಚಾರಿ ಆಂದೋಲನ್' ೨೦೦೩ ರಲ್ಲಿ ರಿಟ್(ಸಂಖ್ಯೆ ೫೮೩) ಸಲ್ಲಿಸಿತ್ತು. ಈ ರಿಟ್ ಅರ್ಜಿಯ ದೀರ್ಘ ವಿಚಾರಣೆಯ ಫಲವಾಗಿ ೨೭ ಮಾರ್ಚ್೨೦೧೪ ರಲ್ಲಿ ಸುಪ್ರೀಂ ಕೋರ್ಟ್ ಕೇಂದ್ರ ಮತ್ತು ರಾಜ್ಯ ಸರಕಾರಗಳಿಗೆ ಕಟ್ಟುನಿಟ್ಟಿನ ಆದೇಶವನ್ನು ಹೊರಡಿಸಿ ತೀರ್ಪು ನೀಡಿತು. ಮುಖ್ಯವಾಗಿ ೧೯೯೩ ರಿಂದ ಈತನಕ ಮಲದ ಗುಂಡಿಗೆ ಬಿದ್ದು ಸಾವನ್ನಪ್ಪಿದವರ ಕುಟುಂಬಗಳಿಗೆ ತಲಾ ೧೦ ಲಕ್ಷ ಪರಿಹಾರವನ್ನು ಕೂಡಲೇ ನೀಡುವುದು ಮತ್ತು ೨೦೧೩ರ ಕಾಯ್ದೆಯ ಎಲ್ಲಾ ಯೋಜನೆಗಳನ್ನು ಅನುಷ್ಠಾನಗೊಳಿಸುವುದಾಗಿದೆ. ಸಫಾಯಿ ಕರ್ಮಚಾರಿಗಳು ಮಲದ ಗುಂಡಿಗೆ ಬಿದ್ದು ಸಾವನ್ನಪ್ಪದಂತೆ ಸೂಕ್ತ ಕ್ರಮ ಕೈಗೊಳ್ಳಲು ಮತ್ತು ಮುಂಜಾಗ್ರತೆ ವಹಿಸಲು ಸಹ ಆದೇಶ ನೀಡಿದೆ.

 ಈ ತೀರ್ಪಿನ ನಂತರವೂ ಮಲದ ಗುಂಡಿಯಲ್ಲಿ ಸಾವನ್ನಪ್ಪುವ ಪ್ರಕರಣಗಳು ನಿಂತಿಲ್ಲ. ದೇಶವ್ಯಾಪಿ ೧೩೨೭ ಸಾವುಗಳು ಸಂಭವಿಸಿವೆ. ಹೀಗೆ ಸತ್ತವರ ಪೈಕಿ ಶೇ ೩ ರಷ್ಟು ಮಾತ್ರ ಪರಿಹಾರ ಸಿಕ್ಕಿದೆ. ಇದು ಸುಪ್ರೀಂ ಕೋರ್ಟ್ ಆದೇಶದ ಉಲ್ಲಂಘನೆಯ ಕನ್ನಡಿಯಾಗಿದೆ. ಈ ನೆಲೆಯಲ್ಲಿ ಜಾತಿ ದೌರ್ಜನ್ಯ ಮತ್ತು ತಾರತಮ್ಯ ನಿಂತಿಲ್ಲ ಎನ್ನುವುದು ನಾಚಿಕೆಗೇಡಿನ ಸಂಗತಿ. ದುರಂತವೆಂದರೆ, ಈ ಎಲ್ಲಾ ವಿದ್ಯಮಾನಗಳ ನಡುವೆ ರಾಜಕಾರಣಿಗಳು ಮತ್ತು ಸಂಸದರು ಅಂಬೇಡ್ಕರರನ್ನು ಹಾಡಿ ಹೊಗಳುವುದು ವರದಿಯಾಗುತ್ತಿದೆ. ಬಲಪಂಥೀಯರು ಅಂಬೇಡ್ಕರರನ್ನು ಹೈಜಾಕ್ ಮಾಡಿ ಅವರ ಚಿಂತನೆಗಳನ್ನು ತಿದ್ದಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಆಂಧೋಲನ, ದಲಿತರು ಮಲದ ಗುಂಡಿಗೆ ಬಿದ್ದು ಸಾವನ್ನಪ್ಪುತ್ತಿರುವುದಕ್ಕೆ ಸರಕಾರ ಹೊಣೆಯಲ್ಲವೇ? ಇದು ಪ್ರಭುತ್ವದ ವ್ಯವಸ್ಥಿತ ಕೊಲೆಯಲ್ಲವೆ? ಈ ಯಾತನಾಮಯ ಬದುಕಿಗೆ ಕೊನೆಯಿಲ್ಲವೇ? ಈ ಸಂಕೋಲೆಯಿಂದ ಬಿಡುಗಡೆಯಿಲ್ಲವೇ? ಈ ದೇಶದ ಪ್ರಜ್ಞಾವಂತ ಸುಶಿಕ್ಷಿತ ನಾಗರಿಕ ಬಂಧುಗಳು ಈ ಬಗ್ಗೆ ಬಾಯಿಮುಚ್ಚಿ ಕೂರುವುದು  ಸರಿಯೇ? ಎನ್ನುವಂಥಹ ಬಹುಮುಖ್ಯ  ಪ್ರಶ್ನೆಗಳನ್ನು ಭೀಮಯಾತ್ರೆ ತನ್ನ ಪಯಣದಲ್ಲಿ ದೇಶವ್ಯಾಪಿ ಎತ್ತುತ್ತಿದೆ.

 ಈ ದೌರ್ಜನ್ಯ ಸಾಕು, ಇನ್ನು ಮುಂದೆ ಸಹಿಸಲಾರೆವು. ಅಂಬೇಡ್ಕರ್ ಹೇಳಿದ `ಶಿಕ್ಷಣ, ಸಂಘಟನೆ, ಹೋರಾಟ' ವನ್ನು ಮೈಗೂಡಿಸಿಕೊಂಡು ಜಾತಿ ಕ್ರೌರ್ಯಗಳನ್ನು ಇಲ್ಲವಾಗಿಸೋಣ. ಮಲದಗುಂಡಿಗೆ ಇಳಿಯುವ ಅನಿವಾರ್ಯ ಬದುಕಿನ ನಮ್ಮ ದಿಕ್ಕನ್ನು ಬದಲಾಯಿಸೋಣ ಎಂದು ಭೀಮಯಾತ್ರೆ ಮನವರಿಕೆ ಮಾಡಿಕೊಡುತ್ತಲೇ ಹೊಸ ಬಗೆಯ ಆತ್ಮವಿಶ್ವಾಸವನ್ನೂ ದೈರ್ಯವನ್ನೂ ತುಂಬುತ್ತಿದೆ. ಇತ್ತ ಕಡೆ ದೇಶದ ಪ್ರಧಾನಿ ನರೇಂದ್ರ ಮೋದಿಯವರು `ಡಿಜಟಲೀಕರಣ' ಮಂತ್ರವನ್ನು ಬಹುರಾಷ್ಟ್ರೀಯ ಕಂಪನಿಗಳ ದೊರೆಗಳ ಮುಂದೆ ಮಂಡಿಯೂರಿ ಉಲಿಯುತ್ತಿದ್ದಾರೆ. ಬೀಮಯಾತ್ರೆ ಪ್ರಧಾನಿಯವರಿಗೆ, ಈ ದೇಶದ ನೈರ್ಮಲ್ಯದ ವ್ಯವಸ್ಥೆ ಯಾಂತ್ರೀಕರಣವಾಗುವುದು ಯಾವಾಗ? ಸ್ವಚ್ಛಭಾರತದ ಮಾತುಗಳಲ್ಲಿ ಮಲದಗುಂಡಿಯಲ್ಲಿನ ಸಾವುಗಳು ಯಾವ ಲೆಕ್ಕಕ್ಕೆ ಸೇರುತ್ತವೆ? ಯಾಕೆ ಸಫಾಯಿ ಕರ್ಮಚಾರಿಗಳನ್ನು ಸ್ವಚ್ಛಭಾರತ ಮಿಷನ್ನಿನ ವ್ಯಾಪ್ತಿಯಲ್ಲಿ ತರುತ್ತಿಲ್ಲ? ಮುಂದೊಂದು ದಿನ ಮಲದಗುಂಡಿಯಲ್ಲಿನ ಸಾವುಗಳು ನಿಮ್ಮ ಡಿಜಿಟಲೀಕರಣದ ಕನಸನ್ನು ಭಗ್ನಗೊಳಿಸುತ್ತವೆ ಎನ್ನುವುದು ತಿಳಿದಿರಲಿ. ಮುಂತಾದ ಪ್ರಶ್ನೆಗಳನ್ನು ಕೇಳುತ್ತಿದೆ. ಈ ಎಲ್ಲಾ ಸಂಗತಿಗಳನ್ನು ಒಳಗುಮಾಡಿಕೊಂಡು ಕೇಂದ್ರ ಸರಕಾರದ ನೀತಿ ಮತ್ತು ಆದ್ಯತೆಗಳನ್ನು ಭೀಮಯಾತ್ರೆ ಪ್ರಶ್ನಿಸುತ್ತದೆ ಮತ್ತು ಖಂಡಿಸುತ್ತದೆ.

ಭೀಮಯಾತ್ರೆಯು ಮಂಡಿಸಿದ ಆಗ್ರಹಪೂರ್ವಕ ಹಕ್ಕೊತ್ತಾಯಗಳು ಹೀಗಿವೆ:
೧.ಶತಶತಮಾನಗಳಿಂದಲೂ ದಲಿತ ಮತ್ತು ಅಸ್ಪೃಶ್ಯ ಸಮುದಾಯಗಳನ್ನು ಮಲಬಾಚುವ ಸಫಾು ಕೆಲಸಕ್ಕೆ ಸೀಮಿತಗೊಳಿಸಿ ಐತಿಹಾಸಿಕ ಅವಮಾನ ಅನುಭ"ಸುವಂತೆ ಮಾಡಿರುವ ಕಾರಣಕ್ಕಾಗಿ ಕೇಂದ್ರ ಸರಕಾರ ಭೇಷರತ್ ಕ್ಷಮೆ ಯಾಚಿಸಬೇಕು.

೨.ಇನ್ನಾದರೂ ಆಗ್ರಹಪೂರಕವಾಗಿ ೨೦೧೩ರ ಸಫಾುಕರ್ಮಚಾರಿ ಪುನರ್ವಸತಿ ಕಾಯ್ದೆ ಅನುಷ್ಠಾನಗೊಳಿಸಬೇಕು. ಆ ಮೂಲಕ ಮಲ ಎತ್ತುವ ದಾಸ್ಯದ ವಿಮೋಚನೆಯಾಗಬೇಕು.

೩.ಸಫಾಯಿ ಕರ್ಮಚಾರಿಗಳ ಕೊಲೆ ಕೂಡಲೇ ನಿಲ್ಲಬೇಕು. ಇನ್ನುಮುಂದೆ ಮಲದ ಗುಂಡಿ, ಒಳಚರಂಡಿಗಳಿಗೆ ಬಿದ್ದು ಸಾಯುವ ಪ್ರಕರಣಗಳನ್ನು ನಾವು ಸಹಿಸುವುದಿಲ್ಲ. ನೈರ್ಮಲ್ಯ ವ್ಯವಸ್ಥೆಯನ್ನು ಕೂಡಲೇ ಯಾಂತ್ರಿಕರಣಗೊಳಿಸಬೇಕು.

೪.ಪ್ರಭುತ್ವದ ದಿವ್ಯ ನಿರ್ಲಕ್ಷ್ಯದಿಂದ ೧೯೯೩ರಿಂದ ಈತನಕ ಮಲದ ಗುಂಡಿಗೆ ಬಿದ್ದು ಸಾವನ್ನಪ್ಪಿದವರ ಕುಟುಂಬಗಳಿಗೆ ಪರಿಹಾರ ಲಬ್ಯವಾಗಿಲ್ಲ. ಹಾಗಾಗಿ ಸುಪ್ರೀಂ ಕೋರ್ಟ್ ಆದೇಶದಂತೆ ತಲಾ ೧೦ ಲಕ್ಷ ರೂಪಾಯಿ ಪರಿಹಾರವನ್ನು ಕೂಡಲೇ ವಿತರಿಸುವ ವ್ಯವಸ್ಥೆಯಾಗಬೇಕು.

೫.ಸಫಾಯಿ ಕರ್ಮಚಾರಿಗಳಿಗೆ ಸರಕಾರ ನೀಡುತ್ತಿರುವ ಒಂದು ಬಾರಿಗೆ (ಒನ್ ಟೈಂ) ನೀಡುವ ಪರಿಹಾರ ಧನ ೪೦ ಸಾವಿರ ರೂಗಳಿಂದ ೨ ಲಕ್ಷರೂಗಳಿಗೆ ಹೆಚ್ಚಿಸಿ ತತಕ್ಷಣವೇ ಪಾವತಿಯಾಗುವಂತೆ ಕ್ರಮವಹಿಸಬೇಕು.

 ಹೀಗೆ `ಭೀಮಯಾತ್ರಾ ಜಿಂದಾಬಾದ್/ಸಹಿಸುವುದಿಲ್ಲ/ಸಹಿಸುವುದಿಲ್ಲ/ನಮ್ಮ ಮೇಲಿನ ದೌರ್ಜನ್ಯವನು ಸಹಿಸುವುದಿಲ್ಲ' ಎಂಬ ಘೋಷಣೆಯೊಂದಿಗೆ ಭೀಮಯಾತ್ರೆ ತನ್ನ ಪಯಣವನ್ನು ಬೆಳೆಸಿದೆ. ಇದೀಗ ರಾಷ್ಟ್ರಪತಿ ಪ್ರಣವ ಮುಖರ್ಜಿ ಅವರಿಗೆ ಈ ಯಾತ್ರೆಯ ವರದಿಯೊಂದಿಗೆ ಹಕ್ಕೊತ್ತಾಯದ ಪತ್ರವನ್ನು ಕೊಟ್ಟಿದೆ. ದೇಶದ ಗಮನ ಸೆಳೆಯುವಂತೆ ಏಪ್ರಿಲ್ ೧೪ ರಂದು ದೆಹಲಿಯಲ್ಲಿ ದೊಡ್ಡಮಟ್ಟದ ಸಮಾವೇಶವನ್ನೂ ಆಯೋಜಿಸಿದೆ. ಅಂಬೇಡ್ಕರರ ಜಾತಿ ವಿನಾಶ ಮತ್ತು ತಾರತಮ್ಯ ವಿರೋಧಿ ನಿಲುವಿಗೆ ಬದ್ಧರಿರುವ ಎಲ್ಲರೂ ಇನ್ನು ಮುಂದೆಯೂ ಭೀಮ ಯಾತ್ರೆಯನ್ನು ಆಯಾ ರಾಜ್ಯಗಳಲ್ಲಿ ನಡೆಸಲು ಕರೆ ನೀಡುತ್ತಾ, ಸಫಾಯಿ ಕರ್ಮಚಾರಿಗಳ ಯಾತನಾಮಯ ಪಯಣಕ್ಕೆ ಅಂತ್ಯವಾಡುವ ಆಶಯದ ಬೀಜಗಳನ್ನೂ ಈ ಯಾತ್ರೆ ಬಿತ್ತುತ್ತಾ ಹೋಗಿದೆ.
**
 ಕೇಂದ್ರದ ಸಾಮಾಜಿಕ, ಆರ್ಥಿಕ ಹಾಗೂ ಜಾತಿ ಗಣತಿ-೨೦೧೧ರ ಪ್ರಕಾರ ರಾಜ್ಯದ ಗ್ರಾಮೀಣ ಪ್ರದೇಶಗಳಲ್ಲಿ ೧೫,೪೩೦ ಸಫಾಯಿ ಕರ್ಮಚಾರಿ ಕುಟುಂಬಗಳಿವೆ. ಅದರಂತೆ ತುಮಕೂರಿನಲ್ಲಿ ಅತಿಹೆಚ್ಚು ೩,೨೮೭ ಹಾಗೂ ಚಿಕ್ಕಮಗಳೂರು ಮತ್ತು ಉತ್ತರ ಕನ್ನಡ ಜಿಲ್ಲೆಯಲ್ಲಿ ತಲಾ ೨ ರಂತೆ ಅತಿ ಕಡಿಮೆ ಸಫಾಯಿ ಕರ್ಮಚಾರಿ ಕುಟುಂಬಗಳಿವೆ. ಉಳಿದಂತೆ ವಿಜಯಪುರ ಜಲ್ಲೆ ೨,೪೫೧,  ಬೀದರ್ ೧,೮೪೧,  ಚಿಕ್ಕಬಳ್ಳಾಪುರ ೧,೭೨೫, ರಾಮನಗರ೧,೪೯೯, ರಾಯಚೂರು ೧,೪೬೬, ಬೆಂಗಳೂರು ನಗರ ೨೮೯,  ಬಾಗಲಕೋಟೆ ೨೭೩, ಚಾಮರಾಜನಗರ ೨೩೦, ಗದಗ ೧೬೫,  ಕೋಲಾರ ೧೩೯,  ಬಳ್ಳಾರಿ ೬೧, ಕೊಪ್ಪಳ ೫೧,  ಮೈಸೂರು ೪೭, ಬೆಳಗಾ" ೪೧,  ಹಾವೇರಿ ೩೩, ಕೊಡಗು ೩೦, ಮಂಡ್ಯ ೧೧, ಬೆಂಗಳೂರು ಗ್ರಾಮಾಂತರ ೯,  ಶಿವಮೊಗ್ಗ ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ೯  ಸಫಾಯಿ ಕರ್ಮಚಾರಿ ಕುಟುಂಬಗಳಿವೆ. ಈ ಅಂಕೆಸಂಖ್ಯೆಯ ಮರು ಸಮೀಕ್ಷೆ ಇದೀಗ ನಡೆಯುತ್ತಿದೆ. ಇದರಲ್ಲಿ ಶೇ ೯೫ ರಷ್ಟು ದಲಿತರ ಕುಟುಂಬಗಳು ಎನ್ನುವುದನ್ನು ಗಮನಿಸಬೇಕು. ದಲಿತ ಕೆಳಜಾತಿಗಳಿಗೆ ಶಿಕ್ಷಣ ರಾಜಕೀಯ ಉದ್ಯೋಗದ ಮೀಸಲಾತಿಯ ಬಗ್ಗೆ ಸಿನಿಕರಾಗಿ ಮೀಸಲಾತಿಯನ್ನು ವಿರೋಧಿಸುವವರು ಸಫಾಯಿ ಕರ್ಮಚಾರಿಗಳ ಕೆಲಸದಲ್ಲಿನ ಶೇ ೯೫% "ುಸಲಾತಿಯನ್ನು ಇತರರಿಗೂ ಹಂಚುವ ಮಾತನಾಡಬೇಕಿದೆ. 

 ಕರ್ನಾಟಕದಲ್ಲಿಯೂ ಮಲದ ಗುಂಡಿಗೆ ಬಿದ್ದು  ಸಾವನ್ನಪ್ಪುವ ಪ್ರಕರಣಗಳು ದಾಖಲಾಗುತ್ತವೇ ಇವೆ. ಆಯಾ ಸಾ"ನ ಸಂದರ್ಭದಲ್ಲಿ ಧರಣಿ ಹೋರಾಟ ಪ್ರತಿಭಟನೆಗಳು ನಡೆದು ಈ ಸಾವಿಗೆ ಕಾರಣವಾದ ಇಡೀ ವ್ಯವಸ್ಥೆಯ ವಿರುದ್ಧ ಧ್ವನಿ ಎತ್ತಲಾಗುತ್ತದೆ. ವಿಪರ್ಯಾಸವೆಂದರೆ ಇಂತಹ ಧ್ವನಿಗೆ ವ್ಯಾಪಕತೆ ದೊರಕುವುದಿಲ್ಲ. ಈ ಸಾವು ಸೈನಿಕರ ಸಾವಿನಂತೆ, ಸರಕಾರಿ ಅಧಿಕಾರಿಗಳ ಸಾವಿನಂತೆ, ಕನಿಷ್ಠ ರೈತರ ಸಾವಿನಂತೆ ರಾಜ್ಯಮಟ್ಟದ ಸುದ್ದಿಯೂ ಆಗದೆ ಮರೆಯಾಗುತ್ತವೆ. ಈ ಸಾವುಗಳು ನ್ಯಾಯವೇ ಎಂಬ ಪ್ರಶ್ನೆಯೊಂದಿಗೆ ಪ್ರಜ್ಞಾವಂತರೂ ವ್ಯಾಪಕವಾಗಿ ಚರ್ಚೆ ಮಾಡದಿರುವುದೂ ಈ ಕಾಲದ ದುರಂತ. ಇನ್ನಾದರೂ ಈ ಸಾವುಗಳು ನಮ್ಮನ್ನು ಕಾಡಬೇಕಿದೆ, ಈ ಸಾವಿನ ವಿರುದ್ಧದ ಧ್ವನಿಗೆ ವ್ಯಾಪಕತೆ ದೊರಕಬೇಕಿದೆ.

ಕಾಮೆಂಟ್‌ಗಳಿಲ್ಲ: