ಗುರುವಾರ, ಮಾರ್ಚ್ 24, 2016

‪ಗಾಂಧಿಯೊಬ್ಬರೇ‬ ‪ಸಾಕಾಗಲ್ಲ‬

-ದಿನೇಶ್‌‬ ಅಮಿನಮಟ್ಟು‬

‪#‎ಕೃಪೆ‬:‪#‎ಪ್ರಜಾವಾಣಿ‬ ‪#‎ಸಂಗತ‬ #25/03/2016


ಕೋಮುವಾದಕ್ಕೆ ಮೊದಲ ಬಾರಿ ಸೈದ್ಧಾಂತಿಕ ಮುಖವಾಡ ತೊಡಿಸಿದವರು ಸಾವರ್ಕರ್ ಅಲ್ಲವೇ?
ಹಿಂದುತ್ವವನ್ನು ಎದುರಿಸಲು ಗಾಂಧಿವಾದವೇ ಸೂಕ್ತ ಎಂದು ಪ್ರಸನ್ನ ತಮ್ಮ ಎಂದಿನ ಗಾಂಧಿವಾದದ ಪ್ರೀತಿಯಿಂದ ಪ್ರತಿಪಾದಿಸಿದ್ದಾರೆ. (ಅಭಿಮತ, ಮಾರ್ಚ್‌ 12) ಇದನ್ನು ಹೇಳುವ ಭರದಲ್ಲಿ ಕಮ್ಯುನಿಸ್ಟರು, ಅಂಬೇಡ್ಕರ್‌ವಾದಿಗಳು ಮತ್ತು ಸಮಾಜವಾದಿಗಳನ್ನು ಕೆಲಸಕ್ಕೆ ಬಾರದವರು ಎಂದು ಮೂಲೆಗೆ ತಳ್ಳಿದ್ದಾರೆ.

ನನ್ನ ಪ್ರಕಾರ ಕೋಮುವಾದದ ಹೆಸರಲ್ಲಿ ಬಲಗೊಳ್ಳುತ್ತಿರುವ ಪುರೋಹಿತಶಾಹಿಯನ್ನು ಎದುರಿಸಲು ನಮಗೆ ಬುದ್ಧ, ಬಸವ, ಗಾಂಧೀಜಿ, ಅಂಬೇಡ್ಕರ್, ರಾಮಮನೋಹರ ಲೋಹಿಯಾ, ಕಾರ್ಲ್ ಮಾರ್ಕ್ಸ್, ಪೆರಿಯಾರ್, ನಾರಾಯಣ ಗುರು, ಜ್ಯೋತಿಬಾ ಫುಲೆ, ಕನಕದಾಸ, ಕಬೀರ ಮಾತ್ರವಲ್ಲ, ಮಂಟೆಸ್ವಾಮಿ ಬೇಕು. ಜುಮಾದಿ, ಕೋರ್ದಬ್ಬು ಭೂತಗಳೂ ಬೇಕು.
ಇವರಲ್ಲಿ ಯಾರೂ ದೋಷಾತೀತರಲ್ಲ, ಎದುರಾಳಿಯಾಗಿ ವಾದಕ್ಕೆ ನಿಂತರೆ ಇವರನ್ನು ಒಂದೆರಡು ಸುತ್ತು ಸೋಲಿಸಿಯೂ ಬಿಡಬಹುದು. ಅಂತಹ ವೈರುಧ್ಯ ಪ್ರತಿಯೊಂದು ವಾದದಲ್ಲಿಯೂ ಇದೆ.

ಈ ವೈರುಧ್ಯಗಳನ್ನು ಸುಧಾರಕರು ಆರಿಸಿಕೊಂಡ ದಾರಿಯಲ್ಲಿ ಮತ್ತು ಅವರ ಅನುಯಾಯಿಗಳೆನಿಸಿಕೊಂಡವರ ಆತ್ಮವಂಚಕ ನಡವಳಿಕೆಯಲ್ಲಿ ನಾವು ಕಾಣಬಹುದು, ಅವರು ಆರಿಸಿಕೊಂಡ ಗುರಿಯಲ್ಲಿ ಅಲ್ಲ ಎನ್ನುವುದನ್ನು ನಾವೆಲ್ಲ ತಿಳಿದುಕೊಳ್ಳಬೇಕಾಗಿದೆ. ದಾರಿ ಬಗ್ಗೆ ಜಗಳವಾಡುವುದು ಇದ್ದೇ ಇದೆ, ಮೊದಲು ಗುರಿ ಬಗ್ಗೆ ಇರುವ ಸಾಮ್ಯತೆಯನ್ನು ಕಂಡುಕೊಳ್ಳಬೇಕಾಗಿದೆ.

ಈ ಹಿನ್ನೆಲೆಯಲ್ಲಿ ನನ್ನಲ್ಲಿ ಅಚ್ಚರಿ ಮೂಡಿಸಿದ್ದು ಪ್ರಸನ್ನ ತಮ್ಮ ಚರ್ಚೆಯಲ್ಲಿ ವಿನಾಯಕ ದಾಮೋದರ ಸಾವರ್ಕರ್ ಅವರನ್ನು ಅನಗತ್ಯವಾಗಿ (ದುರುದ್ದೇಶದಿಂದ ಎಂದು ಹೇಳಲಾರೆ) ಎಳೆದು ತಂದಿರುವುದು. ಜತೆಯಲ್ಲಿ ಮಹಮ್ಮದ್ ಅಲಿ ಜಿನ್ನಾ ಮತ್ತು ವಿ.ಡಿ.ಸಾವರ್ಕರ್ ಅವರನ್ನು ಒಂದೇ ತಕ್ಕಡಿಯಲ್ಲಿ ಕೂರಿಸಿದ್ದು. ಹೌದು ಇಬ್ಬರೂ ನಾಸ್ತಿಕರಾಗಿದ್ದರೆನ್ನುವುದು ನಿಜ. ಆದರೆ ಇಬ್ಬರೂ ಧಾರ್ಮಿಕ ರಾಜಕಾರಣಿಗಳಾಗಿದ್ದರು ಎನ್ನುವ ಲೇಬಲ್ ಹಚ್ಚುವ ಮುನ್ನ ಪ್ರಸನ್ನ ಒಮ್ಮೆ ಯೋಚಿಸಬೇಕಾಗಿತ್ತು.

ಜಿನ್ನಾ ಒಬ್ಬ ಅಪ್ರಾಮಾಣಿಕ ಧಾರ್ಮಿಕ ರಾಜಕಾರಣಿ. ಧರ್ಮ ಜಿನ್ನಾ ಅವರಿಗೆ ರಾಜಕೀಯದ ಗದ್ದುಗೆಯನ್ನೇರುವ ಮೆಟ್ಟಿಲಾಗಿತ್ತು. ಅವರು ಇಸ್ಲಾಂ ಧರ್ಮವನ್ನು ಪ್ರಾಣಕ್ಕಿಂತ ಹೆಚ್ಚಾಗಿ ಇಲ್ಲವೇ ಅಧಿಕಾರಕ್ಕಿಂತ ಹೆಚ್ಚು ಪ್ರೀತಿಸಿರಲಿಲ್ಲ. ಈ ಹಿನ್ನೆಲೆಯಲ್ಲಿ ಜಿನ್ನಾ ಅವರನ್ನು ಅಟಲ್‌ ಬಿಹಾರಿ ವಾಜಪೇಯಿ, ಲಾಲ್‌ಕೃಷ್ಣ ಅಡ್ವಾಣಿ ಇಲ್ಲವೇ ನರೇಂದ್ರ ಮೋದಿಯವರಿಗೆ ಹೋಲಿಸಬಹುದು ಅಷ್ಟೇ.

ಗೋಲ್‌ವಾಲ್ಕರ್, ಬಾಳಾಸಾಹೇಬ್ ದೇವರಸ್, ಭಾಗವತ್ ಅವರಂತೆ ವಿ.ಡಿ.ಸಾವರ್ಕರ್ ಒಬ್ಬ ಪ್ರಾಮಾಣಿಕ ಹಿಂದೂ ಪುರೋಹಿತಶಾಹಿ ನಾಯಕ. ಜಿನ್ನಾ, ವಾಜಪೇಯಿ, ಅಡ್ವಾಣಿ, ಮೋದಿ ಮೊದಲಾದವರು ರಾಜಕೀಯಕ್ಕಾಗಿ ಧರ್ಮವನ್ನು ಬಳಸಿಕೊಂಡರೆ ಸಾವರ್ಕರ್ ಮತ್ತು ಸಂಗಾತಿಗಳು ತಾವು ನಂಬಿರುವ ಹಿಂದೂ ಪುರೋಹಿತಶಾಹಿ ವ್ಯವಸ್ಥೆಯನ್ನು ಧರ್ಮದ ಹೆಸರಲ್ಲಿ ಬಲಗೊಳಿಸಲು ರಾಜಕೀಯವನ್ನು ಬಳಸುತ್ತಾ ಬಂದಿದ್ದಾರೆ. ಸಾವರ್ಕರ್ ಮತ್ತು ಸಂಗಾತಿಗಳಿಗೆ ರಾಜಕೀಯ ಗುರಿ ಅಲ್ಲ, ಅದು ದಾರಿ.

ರಾಜಕೀಯ ಮತ್ತು ಧರ್ಮಗಳ ಈ ಸೂಕ್ಷ್ಮವನ್ನು ಅರಿಯದೆ ಹೋದರೆ ಕೋಮುವಾದದ ವಿರುದ್ಧದ ಹೋರಾಟ ಮುಖವಾಡಗಳ ಜತೆ ಗುದ್ದಾಟವಾಗುತ್ತದೆ, ಮುಖಗಳ ಜತೆ ಅಲ್ಲ.

ಪ್ರಸನ್ನ ಅವರು ಸಾವರ್ಕರ್ ಅವರಿಗೆ ‘ಅಪ್ರತಿಮ ಬುದ್ಧಿಜೀವಿ’ ಎಂಬ ಸರ್ಟಿಫಿಕೇಟ್ ನೀಡಿರುವುದು ನನ್ನ ಇನ್ನೊಂದು ಅಚ್ಚರಿ. ಬುದ್ಧಿವಂತಿಕೆಯ ವ್ಯಾಖ್ಯಾನ ಏನು? ತಥಾಕಥಿತ ಬುದ್ಧಿವಂತರು ಸಮಾಜಕ್ಕೆ ಮಾಡಿದಷ್ಟು ಅನ್ಯಾಯವನ್ನು ದಡ್ಡರು ಮಾಡಿಲ್ಲ. ಇದರಿಂದಾಗಿಯೇ ‘ಬುದ್ಧಿ ಇಲ್ಲದ’ ದಡ್ಡ ರೈತ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದು, ‘ಬುದ್ಧಿವಂತ’ ಮಲ್ಯ ಬ್ಯಾಂಕ್ ಮುಳುಗಿಸಿ ವಿದೇಶದಲ್ಲಿ ಮಜಾ ಮಾಡುತ್ತಿರುವುದು.

ಸಾವರ್ಕರ್ ಅವರಿಗೆ ಸರ್ಟಿಫಿಕೇಟ್ ನೀಡಲು ಪ್ರಸನ್ನ ಸಿಪಾಯಿ ದಂಗೆ ಮತ್ತು ದೇಸಿವಾದದ ಬಗೆಗಿನ ಬರವಣಿಗೆಗಳನ್ನು ಉಲ್ಲೇಖಿಸಿದ್ದಾರೆ. ‘ಅಪ್ರತಿಮ ಬುದ್ಧಿಜೀವಿ’ಯನ್ನು ಅರ್ಥಮಾಡಿಕೊಳ್ಳಬೇಕಾದರೆ ನಾವು ಓದಬೇಕಾಗಿರುವುದು ಅವರು ಬರೆದಿರುವ ‘ಹಿಂದುತ್ವ’ ಪುಸ್ತಕವನ್ನಲ್ಲವೇ?
‘ಹಿಂದುತ್ವ ಎನ್ನುವುದು ದೇಶ, ಗಡಿ ಮೀರಿದ ಪ್ರಶ್ನೆ, ಕೇವಲ ವಾಸದ ಬಲದಿಂದಲೇ ಒಬ್ಬ ಹಿಂದೂ ಆಗಲು ಸಾಧ್ಯ ಇಲ್ಲ, ಪ್ರತಿಯೊಬ್ಬ ಹಿಂದೂವಿಗೂ ಈ ಸಿಂಧೂಸ್ಥಾನ ಪಿತೃಭೂಮಿಯೂ ಹೌದು, ಪುಣ್ಯಭೂಮಿಯೂ ಹೌದು. ಇದರಿಂದಾಗಿ ಮುಸ್ಲಿಮ್ ಇಲ್ಲವೇ ಕ್ರಿಶ್ಚಿಯನ್ನರಿಗೆ ವಂಶಪಾರಂಪರ್ಯವಾಗಿ ಭಾರತ ಪಿತೃಭೂಮಿಯಾಗಿದ್ದರೂ ಭಾಷೆ, ಸಂಸ್ಕೃತಿ, ಆಚಾರ, ಜನಪದ, ಇತಿಹಾಸಗಳಿಂದಾಗಿ ಅವರನ್ನು ಹಿಂದೂಗಳೆನ್ನಲು ಸಾಧ್ಯ ಇಲ್ಲ. ಅವರ ಪುಣ್ಯಭೂಮಿ ಅರೇಬಿಯಾ ಇಲ್ಲವೆ ಪ್ಯಾಲೆಸ್ಟೀನ್‌ನಲ್ಲಿದೆ.

ಅವರು ಹಿಂದೂ ಧರ್ಮವನ್ನು ಒಪ್ಪಿಕೊಂಡರೆ ಮಾತ್ರ ಹಿಂದೂಗಳು’ ಎಂದು ಮೊದಲ ಬಾರಿ ಈ ನೆಲದಲ್ಲಿ ಕೋಮುವಾದಕ್ಕೆ ಸೈದ್ಧಾಂತಿಕ ಮುಖವಾಡ ತೊಡಿಸಿದವರು ಸಾವರ್ಕರ್ ಅಲ್ಲವೇ? ಹಿಂದುತ್ವವನ್ನು ಎದುರಿಸುವ ಚರ್ಚೆಯಲ್ಲಿ ಪ್ರತಿವಾದಿಯಾಗಿ ಕಾಣಿಸಿಕೊಳ್ಳಬೇಕಾದ ಸಾವರ್ಕರ್ ಅವರನ್ನು ಗಾಂಧೀಜಿ ಜತೆಯಲ್ಲಿ ಕಕ್ಷಿದಾರರ ಸ್ಥಾನದಲ್ಲಿ ಪ್ರಸನ್ನ ನಿಲ್ಲಿಸಿದಂತಾಗಿದೆ.

ಕೊನೆಯದಾಗಿ, ಪ್ರಸನ್ನ ಗಾಂಧಿವಾದದಲ್ಲಿ ಬಡತನ, ಸತ್ಯ, ಅಹಿಂಸೆಗಳು ಉಡುಪಿಯ ಶ್ರೀಕೃಷ್ಣನ ಮೂರ್ತಿಯಂತೆ ತನ್ನ ಕಾಲುಗಳನ್ನು ಭದ್ರವಾಗಿ ನೆಲಕ್ಕೆ ಊರಿ ನಿಂತಿವೆ ಎಂದು ಹೇಳುವ ಮೂಲಕ ಗಾಂಧಿವಾದದ ಬಗೆಗಿನ ನಮ್ಮಂತಹವರ ತಕರಾರನ್ನು ತಮಗರಿವಿಲ್ಲದೆ ಒಪ್ಪಿಕೊಂಡಂತಿದೆ. ಜಗತ್ತಿನ ಎಲ್ಲ ದೇವಾಲಯಗಳ ಮೂರ್ತಿಗಳ ಕಾಲುಗಳು ಭದ್ರವಾಗಿ ನೆಲಕ್ಕೆ ಊರಿಬಿಟ್ಟಿವೆ ಎಂದು ಹೇಳಿಬಿಡಬಹುದು, ಆದರೆ ಉಡುಪಿಯ ಕೃಷ್ಣನದ್ದಲ್ಲ. ಅವು ಕನಕನ ಭಕ್ತಿಗೆ ಒಲಿದು ಹಿಂದಕ್ಕೆ ತಿರುಗಿದ ಕಾಲುಗಳು ಅಲ್ಲವೇ?

ಗಾಂಧೀಜಿ ಮತ್ತು ಬಿ.ಆರ್. ಅಂಬೇಡ್ಕರ್ ಅವರ ನಡುವಿನ ತಕರಾರಿನ ಮೂಲವೇ ಉಡುಪಿ ಕೃಷ್ಣ ನೆನಪಿಸುತ್ತಲೇ ಇರುವ ಜಾತಿ ವ್ಯವಸ್ಥೆ. ಗಾಂಧಿ ಅವರಿಗೆ ಜಾತಿ ಕುರುಡುತನ ಇತ್ತು. ಇದು 1925ರಲ್ಲಿ ನಡೆದ ಗಾಂಧೀಜಿ-ನಾರಾಯಣ ಗುರು ನಡುವಿನ ಭೇಟಿಯಲ್ಲಿಯೂ ಕಂಡಿತ್ತು.
ವೈವಿಧ್ಯತೆ ಪ್ರಕೃತಿ ಸಹಜ ಎಂದು ಮರದಲ್ಲಿನ ವಿಭಿನ್ನ ಆಕಾರಗಳ ಎಲೆಗಳನ್ನು ತೋರಿಸಿ ವರ್ಣಾಶ್ರಮ ವ್ಯವಸ್ಥೆಯನ್ನು ಗಾಂಧೀಜಿ ಸಮರ್ಥಿಸಿದ್ದರು. ನಾರಾಯಣ ಗುರುಗಳು ಅದೇ ಮರದ ಎಲೆಗಳನ್ನು ಕಿತ್ತು ತಂದು ಜಜ್ಜಿ ಹಿಂಡಿ ರಸವನ್ನು ಗಾಂಧೀಜಿ ಬೊಗಸೆಗೆ ಸುರಿದು ‘ಆಕಾರ ಬೇರೆಯಾದರೂ ರಸದ ಬಣ್ಣ, ರುಚಿ ಒಂದೇ ಅಲ್ಲವೇ?’ ಎಂದು ಬಾಯಿಮುಚ್ಚಿಸಿದ್ದರು.

ವರ್ಣಾಶ್ರಮ ವ್ಯವಸ್ಥೆಯನ್ನು ವಿರೋಧಿಸಲಾಗದೆ, ಜಾತಿ ವ್ಯವಸ್ಥೆ ಬಗ್ಗೆ ಸ್ಪಷ್ಟತೆಯನ್ನು ಪಡೆಯಲಾಗದೆ ಕೊನೆಯವರೆಗೂ ಒದ್ದಾಡಿದ ಗಾಂಧಿ ಅವರ ವಿಳಂಬವಾದ ಮನಪರಿವರ್ತನೆ ಕೂಡಾ ಅಂಬೇಡ್ಕರ್ ಎಂಬ ಪ್ರತಿನಾಯಕನನ್ನು ಎದುರಿಸುವ ಕಾರ್ಯತಂತ್ರವೇನೋ ಎಂಬ ಅನುಮಾನ ಹುಟ್ಟಿಸುವಂತಿದೆ. ಇದು ಇಂದಿಗೂ ಗಾಂಧಿವಾದದ ಕೆಲವು ಮಿತಿಗಳಲ್ಲಿ ಒಂದಾಗಿ ಉಳಿದಿದೆ.

ಈ ಕಾರಣದಿಂದಾಗಿಯೇ ಗಾಂಧಿ ಅವರಂತೆ ರೊಮ್ಯಾಂಟಿಕ್ ಆಗಿ ಗ್ರಾಮಗಳನ್ನು ಅದೇ ಗ್ರಾಮದಲ್ಲಿ ಜಾತೀಯತೆ ಮತ್ತು ಊಳಿಗಮಾನ್ಯ ವ್ಯವಸ್ಥೆಯ ಬಲಿಪಶುಗಳಾಗಿ ಬದುಕುತ್ತಿರುವವರಿಗೆ ನೋಡಲು ಸಾಧ್ಯವೇ ಇಲ್ಲ. ಗ್ರಾಮಸ್ವರಾಜ್ಯದ ಬಹುದೊಡ್ಡ ಸಾಮಾಜಿಕ ಶತ್ರುವೇ ಜಾತಿ ವ್ಯವಸ್ಥೆ. ಜಾತಿಗಿಂತ ದೊಡ್ಡ ಹಿಂಸೆ ಈ ಜಗತ್ತಿನಲ್ಲಿ ಯಾವುದಿದೆ? ಇವೆಲ್ಲದರ ಬಗ್ಗೆ ಹೇಳಬೇಕಾದಷ್ಟು ಸ್ಪಷ್ಟವಾಗಿ ಗಾಂಧೀಜಿ ಹೇಳಲೇ ಇಲ್ಲ.
ಕೋಮುವಾದವನ್ನು ಎದುರಿಸಲು ಗಾಂಧೀಜಿ ಪ್ರತಿಪಾದಿಸಿದ ಹಿಂದೂ-ಮುಸ್ಲಿಮ್ ಸೌಹಾರ್ದ ಒಂದು ಪ್ರಮುಖ ಸಾಧನ ಎನ್ನುವುದು ಒಪ್ಪಿಕೊಳ್ಳುವಂತಹದ್ದೇ ಆಗಿದೆ.

ಇದಕ್ಕಿಂತ ಮೊದಲು ಈ ಸೌಹಾರ್ದಕ್ಕೆ ಅಡ್ಡಿಯಾಗಿರುವ ಒಳಗಿನ ಶತ್ರುಗಳನ್ನು ವಿಚಾರಿಸಿಕೊಳ್ಳುವುದು ಬೇಡವೇ? ಧರ್ಮದ ನಶೆಯುಣಿಸುವ ಮೂಲಕ ಜಾತಿಯ ನೋವು ಮರೆಸಿ ಅದು ಶಾಶ್ವತವಾಗಿ ಇರುವಂತೆ ನೋಡಿಕೊಳ್ಳುತ್ತಿರುವ ಕೋಮುವಾದಿಗಳ ಮುಖವಾಡ ಕಳಚಲು ಗಾಂಧಿ ಅವರಿಗಿಂತಲೂ ಅಂಬೇಡ್ಕರ್, ಲೋಹಿಯಾ, ಪೆರಿಯಾರ್, ನಾರಾಯಣ ಗುರು ನಮಗೆ ಹೆಚ್ಚು ಸಹಕಾರಿ.
-ಲೇಖಕ ಮುಖ್ಯಮಂತ್ರಿಯವರ ಮಾಧ್ಯಮ ಸಲಹೆಗಾರ

ಕಾಮೆಂಟ್‌ಗಳಿಲ್ಲ: