ಗುರುವಾರ, ಮಾರ್ಚ್ 3, 2016

ಜನಸಾಮಾನ್ಯರೊಂದಿಗೆ ಮಾತನಾಡುವ ಭಾಷೆಯನ್ನು ಕಲಿಯಬೇಕು- ಯೋಗೇಂದ್ರ ಯಾದವ

ಯೋಗೇಂದ್ರ ಯಾದವ್ ಭಾಷಣದಿಂದ
"...ಸಂಘರ್ಷದ ತಾಣವಾಗಿ ಸಾರ್ವಜನಿಕ ಅಭಿಪ್ರಾಯದ ಮೇಲೆ ಗಮನ ಕೇಂದ್ರೀಕರಿಸುವ ಅಗತ್ಯವಿದೆ. ಚುನಾವಣೆ ಇಲ್ಲಿ ಪ್ರಧಾನ ತಾಣವಲ್ಲ. ಸಾರ್ವಜನಿಕ ಅಭಿಪ್ರಾಯವೇ ಕದನ ನಡೆಯುವ ಪ್ರಧಾನ ನೆಲೆ. ಇದನ್ನು ನಾವು ಬಹಳ ಬಹಳ ಕಾಲದಿಂದ ಕಡೆಗಣಿಸಿದ್ದೇವೆ. ಇದಕ್ಕೆ ನಾವು ಮರಳುವ ಅಗತ್ಯವಿದೆ. ಈ ಪ್ರಕ್ರಿಯೆಯಲ್ಲಿ ನಾವು ಹೊಸ ಮಿತ್ರರೊಂದಿಗೆ ಗುರುತಿಸಿಕೊಳ್ಳಲು ಕಲಿಯಬೇಕು. ಬಹಳ ಬಹಳ ಕಾಲದಿಂದ ನಾನು ನೋಡಿರುವಂತೆ ಈ ತೆರನಾದುದನ್ನು ನಾವು ಉಲ್ಲೇಖಿಸಿದಾಗಲೆಲ್ಲ ನಮ್ಮಂತಹ ಪ್ರಜಾಸತ್ತಾತ್ಮಕ, ಪ್ರಗತಿಪರ, ಉದಾರವಾದಿ ವ್ಯಕ್ತಿಗಳು ಒಗ್ಗೂಡುತ್ತಿದ್ದೇವೆ. ನಿಜ, ಆದರೆ ನಾವೆಲ್ಲ ಹಳೆಯ ಮಿತ್ರರು. ಕಳೆದ 20 ವರ್ಷಗಳಿಂದ ನಾವು ಒಂದೇ ತೆರನ ವೇದಿಕೆಯಲ್ಲಿದ್ದೇವೆ. ಹೊಸ ಮಿತ್ರರನ್ನು ಹುಡುಕಿಕೊಳ್ಳಲು ಕಾಲ ಕೂಡಿಬಂದಿದೆ.

ನನ್ನನ್ನು ನಂಬಿ, ಲೆಕ್ಕ ಇಲ್ಲದಷ್ಟು ಮಿತ್ರರನ್ನು ಗಳಿಸುವುದು ನಮಗೆ ಸಾಧ್ಯ. ಅವರು ನಮ್ಮ ಭಾಷೆಯನ್ನು ಮಾತನಾಡದಿರಬಹುದು. ಅವರು ಉನ್ನತ ಮಟ್ಟದ ಸೆಕ್ಯುಲರಿಸಂ ನ ಭಾಷೆ ಮಾತನಾಡದಿರಬಹುದು. ಅವರು ಸಂವಿಧಾನದ ಭಾಷೆ ಮಾತನಾಡದಿರಬಹುದು. ಆದರೆ ಚಲನಚಿತ್ರ ಕ್ಷೇತ್ರದ ಬಗ್ಗೆ ಯಾವ ಜ್ಞಾನವೂ ಇಲ್ಲದ ವ್ಯಕ್ತಿಯೊಬ್ಬನನ್ನು ಎಫ್‍ಟಿಐಐ ನಿರ್ದೇಶಕನನ್ನಾಗಿ ನೇಮಿಸಿದಾಗ ಅವರು ನೋವು ಅನುಭವಿಸಿರಬಹುದು. ಲವ್ ಜಿಹಾದ್‍ ಬಗ್ಗೆ ಯಾವ ರೀತಿಯಲ್ಲಿ ಮಾತನಾಡಲಾಗುತ್ತಿದೆಯೋ ಹಾಗೆ ಮಾತನಾಡುತ್ತಿರುವ ಬಗ್ಗೆ ಅವರಲ್ಲಿ ಆಕ್ಷೇಪವಿರಬಹುದು. ಆದ್ದರಿಂದ ಈ ಜನರೊಂದಿಗೆ ಸಂಪರ್ಕ ಸಾಧಿಸೋಣ. ನಾವು ಸಂಪರ್ಕ ಇರಿಸಿಕೊಳ್ಳಬಹುದಾದ ಅನೇಕ ಭಾರತೀಯರು, ಅವರು ‘ನಿಮ್ಮ ಬೈಬಲ್’ ಅನ್ನು, ನಿಮ್ಮ ಸಂಪೂರ್ಣ ಸಂವಿಧಾನವನ್ನು, ನಿಮ್ಮ ಸಂಪೂರ್ಣ ಸೆಕ್ಯುಲರಿಸಂ ಅನ್ನು ಒಪ್ಪಿಕೊಳ್ಳಬೇಕು ಎಂದು ಆಗ್ರಹಿಸಬೇಡಿ.

ನಮಗೆ ಅಸಂಖ್ಯ ಮಿತ್ರರಿದ್ದಾರೆ. ಆದರೆ ಅದಕ್ಕಿಂತಲೂ ಮುಖ್ಯವಾಗಿ ನಾವು ಹೊಸದೊಂದು ಭಾಷೆಯನ್ನು ಕಲಿಯಬೇಕು; ಅದೇ ಸಂಪ್ರದಾಯಗಳಿಗೆ (ಟ್ರೆಡಿಶನ್) ಸಂಬಂಧಿಸಿದ ಭಾಷೆ. ನನ್ನ ಅನೇಕ ಗೆಳೆಯರಿಗೆ ಇದು ಇಷ್ಟವಾಗದಿರಬಹುದು. ತುಂಬಾ ತುಂಬಾ ಯೋಚನೆ ಮಾಡಿದ ಬಳಿಕ ನಾನು ಇದನ್ನು ಹೇಳುತ್ತಿದ್ದೇನೆ. ನನಗೆ ಇದು ಮನವರಿಕೆಯಾದುದು ಡಿಸೆಂಬರ್ 6, 1992 ರಂದು. ಬಾಬ್ರಿ ಮಸೀದಿ ‍ಧ್ವಂಸಗೊಳಿಸಿದ ಸಂದರ್ಭ. ನಾನಾಗ ಚಂದೀಗಢದ ಹೊರವಲಯದ ಒಂದು ಪುಟ್ಟ ಕಾಲನಿಯಲ್ಲಿ ವಾಸವಾಗಿದ್ದೆ. ಮಸೀದಿ ಧ‍್ವಂಸಗೊಳಿಸಿದಾಗ ಎಲ್ಲರಂತೆ ನನ್ನಲ್ಲೂ ಆಕ್ರೋಶ ಉಂಟಾಯಿತು. ನಾನು ಅತ್ತೆ. ನನ್ನ ನೆರೆಹೊರೆಯವರೊಂದಿಗೆ ಮಾತನಾಡಬೇಕು ಎಂದು ನನಗನಿಸಿತು. ಅದು ಕೊಳೆಗೇರಿಗಿಂತ ಕೊಂಚವೇ ಉತ್ತಮ ಮಟ್ಟದ, ಕಾರ್ಮಿಕರು ವಾಸವಾಗಿದ್ದ ಕಾಲನಿಯಾಗಿತ್ತು. ನನ್ನ ನೆರೆಯಲ್ಲಿ ರಿಕ್ಷಾ ಓಡಿಸುವವರಿದ್ದರು, ಟಾಂಗಾ ಓಡಿಸುವವರಿದ್ದರು… ನಾನು ಅವರಲ್ಲಿ ಮಾತನಾಡುತ್ತಾ ‘ಎಂತಹ ಕೆಟ್ಟ ಕೆಲಸ ನಡೆಯಿತಲ್ಲವೇ’ ಅಂದೆ. ಆಗ ಅವರೆಲ್ಲರೂ , ‘ಅರೇ, ರಾಮ ಮಂದಿರ ಇಲ್ಲಿ, ಆಗದಿದ್ದರೆ ಇನ್ನೇನು ಇಂಗ್ಲೆಂಡ್ ನಲ್ಲಿ ಆಗುತ್ತದೆಯೇ?’ ಎಂದು ಕೇಳಿದರು. ‘ಒಳ್ಳೆಯದೇ ಆಯಿತಲ್ಲ, ರಾಮಮಂದಿರ ನಿರ್ಮಾಣವಾಗುತ್ತದಲ್ಲ, ಇದರಲ್ಲಿ ತಪ್ಪೇನು?’ ಅಂದರು. ನಾನು ನನ್ನ ಸಂವಿಧಾನದ ಭಾಷೆ ಮಾತನಾಡಿದೆ. ಅದು ಅವರನ್ನು ತಲಪಲಿಲ್ಲ. ನಾನು ಹಕ್ಕುಗಳ ಭಾಷೆ ಮಾತನಾಡಿದೆ. ಅವರು ಜೋರಾಗಿ ನಕ್ಕು ‘ಬಾಬೂಜಿ ದೊಡ್ಡ ದೊಡ್ಡ ಪುಸ್ತಕ ಓದಿ ದೊಡ್ಡ ದೊಡ್ಡ ಮಾತನಾಡುತ್ತಿದ್ದಾರೆ’ ಎಂದು ಹಂಗಿಸಿದರು. ನನ್ನ ಮಾತಿಗೆ ಬೆಲೆಯೇ ಇರಲಿಲ್ಲ.

ಮಾರನೆ ದಿನ ‘ಜನಸತ್ತಾ’ ಪತ್ರಿಕೆಯ ದಿವಂಗತ ಸಂಪಾದಕ ಪ್ರಭಾತ್ ಜೋಷಿ ಮುಖಪುಟ ಲೇಖನವೊಂದನ್ನು ಬರೆದರು. ಅದರಲ್ಲಿ ‘ಮರ್ಯಾದಾ ಪುರುಷೋತ್ತಮ ಕೀ ನಾಮ್ ಪರ್ ಕಲಂಕ್’ ಎಂದು ಕರೆಯಲಾಗಿತ್ತು. ಮರ್ಯಾದಾ ಪುರುಷೋತ್ತಮ ರಾಮನ ಬಗೆಗಿನ ಲೇಖನವದು. ರಾಮ ಅಂದರೆ ಏನು? ರಾಮ ಹೇಗೆ ಮರ್ಯಾದಾ ಪುರುಷೋತ್ತಮನಾಗಿದ್ದ ಎನ್ನುವುದನ್ನು ಅದರಲ್ಲಿ ಸರಳವಾಗಿ ಹೇಳಲಾಗಿತ್ತು. ಪ್ರತಿಯೊಂದು ವಾಕ್ಯದ ಕೊನೆಯ ಸಾಲಿನಲ್ಲಿಯೂ ಆರ್ ಎಸ್ ಎಸ್ ಮತ್ತು ಬಿಜೆಪಿಯ ಮಂದಿ ‘ಈ ಮರ್ಯಾದೆಯನ್ನು ಉಲ್ಲಂಘಿಸಿದ್ದಾರೆ’, ‘ಅವರು ಈ ಮರ್ಯಾದೆಯನ್ನು ಉಲ್ಲಂಘಿಸಿದ್ದಾರೆ’, ‘ಅವರು ಈ ಮರ್ಯಾದೆಯನ್ನು ಉಲ್ಲಂಘಿಸಿದ್ದಾರೆ’ ಎಂದು ಹೇಳಲಾಗಿತ್ತು. ಇದು ನನಗೊಂದು ಭಾಷೆಯನ್ನು ಕೊಟ್ಟಿತು. ನಾನು ಮರಳಿ ಹೋಗಿ ‘ಇದು ರಾಮನ ಮರ್ಯಾದೆ’ ಎಂದು ಹೇಳಿದೆ. ಅವರಿಗೆ ಅದು ಸುಲಭದಲ್ಲಿ ಅರ್ಥವಾಯಿತು. ಅವರೊಡನೆ ಮಾತನಾಡಲು ನನಗೊಂದು ಹೊಸ ಭಾಷೆ ಸಿಕ್ಕಿತು.

ಜನಸಾಮಾನ್ಯರೊಂದಿಗೆ ಮಾತನಾಡುವ ಭಾಷೆಯನ್ನು ಸೆಕ್ಯುಲರ್ ಮಂದಿ ಕಳೆದುಕೊಂಡುಬಿಟ್ಟಿದ್ದಾರೆ. ನಾವು ಚೇತರಿಸಿಕೊಳ್ಳಬೇಕಾದುದು ಕಾರ್ಯತಂತ್ರ ರೂಪದಲ್ಲಿ ಅಲ್ಲ. ನಾವು ವಿವೇಕಾನಂದರ ಮಾತುಗಳಲ್ಲಿ ನಂಬಿಕೆ ಇಲ್ಲದೆ ಒಂದು ಕಾರ್ಯತಂತ್ರವಾಗಿ ಪದೇ ಪದೇ ಅವರ ಮಾತನ್ನು ಉದ್ಧರಿಸಿ ಪ್ರಯೋಜನವಿಲ್ಲ. ಮಹಾತ್ಮಾ ಗಾಂಧಿ ಮಾಡಿದಂತೆ ಮಾಡಬೇಕು. ಆತ ‘ರಾಮ’ ಎಂದು ಹೇಳಿದಾಗ ಅದು ಕೇವಲ ಕಾರ್ಯತಂತ್ರದ ಸಂಗತಿಯಾಗಿರಲಿಲ್ಲ. ಆತ ಅದರಲ್ಲಿ ನಂಬಿಕೆ ಇರಿಸಿದ್ದ. ನಾವು ಆ ಭಾಷೆಯನ್ನು ಕಲಿಯಬೇಕು ಮತ್ತೆ ಮತ್ತೆ ಕಲಿಯಬೇಕು. ಆ ಭಾಷೆಯನ್ನು ಕಲಿಯುವುದು ಕಷ್ಟಕರ ಮತ್ತು ಇಂಗ್ಲಿಷ್ ಮಾತನಾಡುವ ಸೆಕ್ಯುಲರಿಸಂ ಆಚರಿಸುವ ನಮಗಂತೂ ಅದು ಇನ್ನೂ ಕಷ್ಟ. ಆದರೆ ಅದೆಷ್ಟೋ ಜನರು ಅಂತಹ ಕಷ್ಟವನ್ನು ಪಡಬೇಕು ಎಂದು ನಾವೂ ಬಯಸುತ್ತೇವಲ್ಲ! ಮತ್ತು ಈಗ ಅಪಾಯ ಎದುರಿಸುತ್ತಿರುವುದು ಸಣ್ಣ ಸಂಗತಿಯೇನಲ್ಲ. ಇಂಡಿಯಾ ಎಂಬ ಪರಿಕಲ್ಪನೆಯೇ ಅಪಾಯ ಎದುರಿಸುತ್ತಿದೆ." 

ಕಾಮೆಂಟ್‌ಗಳಿಲ್ಲ: