ಮೇಟಿ ಮಲ್ಲಿಕಾರ್ಜುನ ಅವರುಇತ್ತೀಚೆಗೆ ಅಂಬೇಡ್ಕರ್ ಜಯಂತಿಯಲ್ಲಿ ಭಾಷಣ ಮಾಡಿದ್ದರು. ಆ ಭಾಷಣದಲ್ಲಿ ದೇಶದ್ರೋಹಿ ಮಾತನಾಡಿದ್ದಾರೆ ಅವರನ್ನು ಬಂಧಿಸಬೇಕು ಎಂದು ಕೆಲವರು ಪೋಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ. ಹಾಗಾದರೆ ಭಾಷಣದಲ್ಲಿ ಏನಿತ್ತು.? ಇಲ್ಲಿದೆ ಅವರ ಭಾಷಣದ ಪೂರ್ಣ ರೂಪ.
ರೂಪಪ್ರಕಾಶ್, ಗೌರಿ ಶಂಕರ್ ಬಿ.ಆರ್, ಭಾಸ್ಕರ ಟಿ.ಪಿ, ಕಿರಣ್ ಗಾಜನೂರುಎಲ್ಲರಿಗೂ ನಮಸ್ಕಾರ ಹಿರಿಯರೇ ಮತ್ತು ಸ್ನೇಹಿತರೆ, ಅಂಬೇಡ್ಕರ್ ಅವರ 125ನೇ ಜಯಂತಿಯ ಶುಭಾಷಯಗಳು. ಇವತ್ತು ಭಾರತಾದ್ಯಂತ ಅಂಬೇಡ್ಕರ್ ಜಯಂತಿಯನ್ನು ಆಚರಿಸುತ್ತಿದ್ದೇವೆ.ಉತ್ಸವ ಎನ್ನುವುದು ಕೇವಲ ಉತ್ಸವವಾಗಿರದೆ ನಾವು ನಮ್ಮಸಮುದಾಯಗಳ ಮತ್ತು ನಮ್ಮ ಜನಸಾಮಾನ್ಯರ ಬದುಕಿನ ಒಂದುವಿಶಿಷ್ಟ ವಿದ್ಯಮಾನವಾಗಿ, ಕಾರ್ಯಕ್ರಮವಾಗಿ ಅಂಬೇಡ್ಕರ್ ಜಯಂತಿಯನ್ನು ಆಚರಿಸಬೇಕಾಗಿದೆ.
ಬಹುತೇಕ ವರ್ಷಗಳಿಂದ ನಾನು ನೋಡಿದ ಹಾಗೆ ಅಂಬೇಡ್ಕರರ ಕುರಿತು ಆಚರಿಸುವ ದಿನಾಚರಣೆಗಳಾಗಿರಬಹುದು ಅಥವಾ ಸರ್ಕಾರಿ ಕಾರ್ಯಕ್ರಮಗಳಾಗಿರಬಹುದು ಒಂದು ಸಂಪ್ರದಾಯವಾಗಿ ಆಚರಿಸುತ್ತಾ ಬಂದಿದ್ದೇವೆ. ಅಂದರೆ ಅಂಬೇಡ್ಕರರ ಬಗೆಗೆ ನಮಗೆ ಇರಬಹುದಾದ ಗೌರವ ತೋರಿಕೆಯ ಗೌರವವಾಗಿ ಅಥವಾ ನಾವು ಅದನ್ನು ಅಂಬೇಡ್ಕರ್ ರವರಿಗೆ ನಮಗೆ ಗೌರವ ಇದೆ ಎನ್ನುವುದನ್ನು ತೋರ್ಪಡಿಸುವುದಕ್ಕಾಗಿ ನಾವು ಈ ದಿನಾಚರಣೆಯನ್ನು ಆಚರಿಸುವ ಒಂದು ಪರಿಪಾಠವನ್ನು ನೋಡುತ್ತಿದ್ದೇವೆ.ದಯವಿಟ್ಟು ನಾವು ಅರ್ಥ ಮಾಡಿಕೊಳ್ಳಬೇಕಾಗಿರುವುದೇನೆಂದರೆ ಅಂಬೇಡ್ಕರ್ ಅವರ ದಿನಾಚರಣೆಯನ್ನು ಆಚರಿಸುವ ಮತ್ತು ಅಂಬೇಡ್ಕರ್ ಅವರನ್ನು ಕುರಿತು ಉಪನ್ಯಾಸಗಳನ್ನು ಮಾಡುವ, ಅಂಬೇಡ್ಕರ್ ಅವರನ್ನು ಕುರಿತು ಚರ್ಚೆ ಮಾಡುವ ಹೊತ್ತಿನಲ್ಲಿ ಯಾಕೆ ನಾವು ಅಂಬೇಡ್ಕರ್ ಅವರನ್ನು ಕುರಿತು ಚರ್ಚೆ ಮಾಡಬೇಕು? ಮತ್ತು ಅವರ ವಿಚಾರಗಳನ್ನು ತಿಳಿಯಬೇಕು ಎಂದು ಹೇಳಿದರೆ ಅದು ಇವತ್ತು ನಾವು ಬದುಕುವುದಕ್ಕೆ ಬೇಕಾಗಿರುವ ದಾರಿಗಳನ್ನು ಅಲ್ಲಿ ಕಂಡುಕೊಳ್ಳಬಹುದು.
ಅಂಬೇಡ್ಕರ್ ಅವರು ಚಿಂತಿಸಿದಂತಹ ವಿಚಾರಗಳು, ಅವರು ನಮ್ಮ ಭಾರತದ ಬಗೆಗೆ, ಇಲ್ಲಿಯ ಜನಸಾಮಾನ್ಯರ ಬಗೆಗೆ, ಇಲ್ಲಿಯ ಜನಸಮುದಾಯಗಳ ಬಗೆಗೆ ಇಲ್ಲಿಯ ಹಿಂದುಳಿದ ದಲಿತ ಆದಿವಾಸಿಗಳ ಹೆಣ್ಣುಮಕ್ಕಳ ಬಗೆಗೆ ಬಹಳ ಖಚಿತವಾಗಿ ಅತ್ಯಂತ ವಿಶಿಷ್ಟವಾದ ರೀತಿಯಲ್ಲಿ ಬದುಕನ್ನು ಕಟ್ಟಿಕೊಳ್ಳುವ ದಾರಿಯನ್ನು ತೋರಿಸಿದ್ದಾರೆ. ಹಾಗಾಗಿ ಆ ವಿಷಯಗಳನ್ನು ಮರೆಮಾಚಿ ನಾವು ಕೇವಲ ರಾಜಕೀಯವಾಗಿ ಅಥವಾ ರಾಜಕಾರಣದ ಬಗೆಯಾಗಿ ನಾವು ಅಂಬೇಡ್ಕರ್ ಜಯಂತಿಯನ್ನು ಆಚರಿಸುವುದು ಸರಿಯಲ್ಲ. ಹಾಗಾಗಿ ಹಿರಿಯರು ಮತ್ತು ಎಳೆಯರು ಇವರೆಲ್ಲರೂ ಸೇರಿ ಅಂಬೇಡ್ಕರರನ್ನು ಕುರಿತು ಅರ್ಥ ಮಾಡಿಕೊಳ್ಳುವ ತುರ್ತು ಒದಗಿದೆ.ನಮ್ಮ ಭಾರತದ ರಾಜಕಾರಣವನ್ನು ಮತ್ತು ಭಾರತದ ರಾಜಕಾರಣದ ಮುಖ್ಯ ಚುಕ್ಕಾಣಿ ಹಿಡಿದಂತಹ ವ್ಯವಸ್ಥೆ ನಮ್ಮ ದೇಶದ ಶಾಂತಿಯನ್ನು ಕದಡುವ, ನಮ್ಮ ದೇಶದ ಸೌಹಾರ್ದತೆಯನ್ನು ಕದಡುವ, ನಮ್ಮ ದೇಶದ ಸಮುದಾಯಗಳಲ್ಲಿರುವ ಮನಃಶಾಂತಿಯನ್ನು ಕೆಡಿಸುವ ನಿಟ್ಟಿನಲ್ಲಿ ಇವತ್ತು ಆ ರಾಜಕಾರಣ ನಡೀತಾ ಇದೆ. ಅದು ಧರ್ಮದ ಹೆಸರಿನಲ್ಲಿ, ರಾಷ್ಟ್ರೀಯತೆಯ ಹೆಸರಿನಲ್ಲಿ ನಡೀತಾ ಇದೆ.
ರಾಷ್ಟ್ರೀಯತೆ ಎನ್ನುವುದು, ಧರ್ಮ ಎನ್ನುವುದು ನಮ್ಮ ಬದುಕಿಗೆಹೊರತಾಗಿರುವ ಮತ್ತು ದಿನನಿತ್ಯದ ಬದುಕಿಗೆ ಸಂಬಂಧ ಪಡದಿರುವಂತಹ ವಿಚಾರಗಳನ್ನು ತಿಳುವಳಿಕೆಗಳನ್ನು ಅದು ಹರಡುತ್ತಿದೆ. ಹಾಗಾಗಿ ಯಾವುದು ನಮ್ಮ ಬದುಕಿಗೆ ಅಗತ್ಯವಾಗಿಲ್ಲವೋ, ಸಂಬಂಧ ಇಲ್ಲವೋ ಮತ್ತು ನಮ್ಮ ಬದುಕಿಗೆ ನೇರವಾಗಿ ಸಂಬಂಧಿಸಿಲ್ಲವೋ ಅಂತಹ ವಿಷಯಗಳ ಬಗೆಗೆ ಇವತ್ತಿನ ನಮ್ಮ ಕೇಂದ್ರ ಸರ್ಕಾರವನ್ನು ನಡೆಸುತ್ತಿರುವಂತಹ ಪಕ್ಷವು ಆ ಕೆಲಸವನ್ನು ಮಾಡುತ್ತಿದೆ.ಅಂದರೆ ಸಾಮಾಜಿಕ ನೆಮ್ಮದಿಯನ್ನು ಹಾಳುಮಾಡುವ, ಸಾಮಾಜಿಕ ಒಡಕನ್ನುಂಟು ಮಾಡುವ ಮತ್ತುಸಮಾಜದ ಸೌಹಾರ್ದತೆಯನ್ನು ಕೆಡಿಸುವ ನಿಟ್ಟಿನಲ್ಲಿ ನಮ್ಮನ್ನು ಆಳುವ ಸರ್ಕಾರ, ನಮ್ಮನ್ನು ಆಳುವ ಪ್ರಭುತ್ವಮುಂದಾದರೆ ಸಮಾಜಗಳ ಬದುಕು ಏನಾಗಬಹುದು ಅಥವಾ ಸಮಾಜದಲ್ಲಿ ಬದುಕುತ್ತಿರುವಂತಹ ಜನರ ಬದುಕುವ ಸ್ಥಿತಿ ಏನಾಗಬಹುದು ಎನ್ನುವುದನ್ನು ನಾವು ಯೋಚಿಸಬೇಕಾಗಿದೆ.
ಅಂಬೇಡ್ಕರ್ ಅಂಥವರು ಯಾವತ್ತೂ ಕೂಡಾ ಧರ್ಮವನ್ನುಹದಗೆಡಿಸುವ, ಸಮಾಜದ ಮೌಲ್ಯಗಳನ್ನು ಅಪಮೌಲ್ಯಗೊಳಿಸುವಂತಹ ಹುನ್ನಾರದಲ್ಲಿ ಪಾಲ್ಗೊಳ್ಳಲಿಲ್ಲ. ಅವರು ಈ ಸಮುದಾಯಗಳಲ್ಲಿ ಬದುಕುವ ಪ್ರತಿಯೊಬ್ಬ ಮನುಷ್ಯ, ಪ್ರತಿಯೊಂದು ಸಮುದಾಯ, ಪ್ರತಿಯೊಂದು ಜಾತಿ, ಪ್ರತಿಯೊಂದು ಧರ್ಮ ಸೌಹಾರ್ದತೆಯಿಂದ ಬದುಕುವುದಕ್ಕೆ ಹೊಂದಿಕೊಂಡು ಬದುಕುವುದಕ್ಕೆ, ಸಹಜೀವನ ಮಾಡುವುದಕ್ಕೆ ಬೇಕಾಗಿರುವಂತಹ ಚಿಂತನೆಗಳನ್ನು ಮಾಡಿದರು, ದಾರಿಗಳನ್ನು ತೋರಿಸಿದರೇ ಹೊರತಾಗಿ ನಮ್ಮ ನಮ್ಮೊಳಗೆ ಒಡಕನ್ನುಂಟು ಮಾಡುವಂತಹ, ನಾವು ನಾವೇ ಮನಸ್ತಾಪ ಮಾಡಿಕೊಳ್ಳುವ, ನಾವು ಒಬ್ಬರಿಗೊಬ್ಬರು ಬೆನ್ನು ಮಾಡಿ ಬದುಕುವ ಯಾವುದೇ ಚಿಂತನೆಯನ್ನು ಅಂಬೇಡ್ಕರ್ ಅವರು ಮಾಡಿರಲಿಲ್ಲ.
ನಮಗೆ ಅಪನಂಬಿಕೆ ಏನು ಅಂದರೆ ಅಂಬೇಡ್ಕರ್ ಅವರು ದಲಿತರನ್ನು ಕುರಿತು ಹೆಚ್ಚು ಚಿಂತನೆಗಳನ್ನು ಮಾಡಿದ್ದಾರೆ, ದಲಿತರ ಪರವಾಗಿ ಚಿಂತನೆಗಳನ್ನು ಮಾಡಿದ್ದಾರೆ ಮತ್ತು ಕೇವಲ ದಲಿತರಿಗಾಗಿಯೇ ಮೀಸಲಿರುವ ಒಬ್ಬ ವ್ಯಕ್ತಿ ಎನ್ನುವ ಅಪನಂಬಿಕೆ ನಮಗೆಲ್ಲರಿಗೂ ಇದೆ.ಅವರು ಹುಟ್ಟಿನಿಂದ ದಲಿತ ಕುಟುಂಬದಲ್ಲಿ ಹುಟ್ಟಿರಬಹುದು ಆದರೆ ಅವರುಒಬ್ಬ ಭಾರತೀಯನಾಗಿ ಒಬ್ಬ ವಿಶ್ವಮಾನವನಾಗಿ ಬೆಳೆದಿದ್ದಾರೆ. ಕೇವಲ ಮಹಾರಾಷ್ಟ್ರದ ಯಾವುದೋ ಒಂದು ಹಳ್ಳಿಯಲ್ಲಿ ಹುಟ್ಟಿಬೆಳೆದು ಈ ಜಗತ್ತಿನಾದ್ಯಂತಸುತ್ತಿ ಮತ್ತು ಬೇರೆ ಬೇರೆ ದೇಶಗಳಲ್ಲಿ ವಿದ್ಯಾಭ್ಯಾಸವನ್ನು ಪಡೆದು ಜಗತ್ತಿನಲ್ಲಿ ಚಿಂತಿಸುತ್ತಾ ಇರುವಂತಹ ಮಹಾನ್ ತತ್ವಶಾಸ್ತ್ರಜ್ಞರಿಂದ, ಚಿಂತಕರಿಂದ ಪ್ರಭಾವಿತರಾಗಿ ಮತ್ತು ಇಲ್ಲಿ ಕಬೀರ, ಸಂತರಿಂದ ಪ್ರಭಾವಿತರಾಗಿ ನಮ್ಮ ಭಾರತದಲ್ಲಿ ಎಲ್ಲಾ ಸಮುದಾಯಗಳೂ ಒಂದಾಗಿ ಬಾಳಲುಮತ್ತು ಸಹಬಾಳ್ವೆ ಹೇಗಿರಬೇಕು, ಸಮಾನತೆ ಹೇಗಿರಬೇಕು ಮತ್ತು ಸಹೋದರತೆಯಿಂದ ಹೇಗೆ ಬದುಕಿರಬೇಕು, ನಾವೆಲ್ಲರೂ ಒಟ್ಟಾಗಿ ಹೇಗೆ ಬದುಕಬೇಕು ಅನ್ನುವುದರ ಬಗೆಗೆ ಚಿಂತನೆಯನ್ನು ನಡೆಸಿದಂತವರು.
ಹಾಗಾಗಿ ಅಂಬೇಡ್ಕರ್ ಅವರು ಕೇವಲ ದಲಿತ ನಾಯಕರಲ್ಲ, ದಲಿತರ ಪರವಾಗಿ ಮಾತನಾಡಿದವರಲ್ಲ, ಅವರು ಪ್ರತಿಯೊಬ್ಬ ಭಾರತೀಯನೂ ಕೂಡಾ ಸ್ವತಂತ್ರವಾಗಿ ಸಮಾನತೆಯಿಂದ ಮತ್ತು ಎಲ್ಲರೊಟ್ಟಿಗೆ ಸಹಬಾಳ್ವೆಯನ್ನು ನಡೆಸುವುದಕ್ಕೆ ಬೇಕಾಗಿರುವಂತಹ ಚಿಂತನೆಯನ್ನು ಮಂಡಿಸಿದವರು ಮತ್ತು ಹಾಗೆ ಬದುಕಿದವರು.ಹಾಗಾಗಿ ಇವತ್ತಿಗೂ ಕೂಡಾ ಧರ್ಮದ ಹೆಸರಿನಲ್ಲಿ, ಜಾತಿಯ ಹೆಸರಿನಲ್ಲಿ, ಲಿಂಗದ ಹೆಸರಿನಲ್ಲಿ ದೇಶದ ಸೌಹಾರ್ದತೆಯನ್ನು, ಸಮಾನತೆಯ ಹಕ್ಕುಗಳನ್ನು ನಾಶ ಮಾಡುವ, ಹದಗೆಡಿಸುವ, ಅಪಮಾನಗೊಳಿಸುವಂತಹ ನಿಟ್ಟಿನಲ್ಲಿ ಅವರು ಯಾವತ್ತೂ ಬದುಕಲಿಲ್ಲ. ಅಂಬೇಡ್ಕರ್ ಅವರಂತಹ ವ್ಯಕ್ತಿ ನಮ್ಮ ದೇಶಕ್ಕೆ ಸಿಕ್ಕಿರುವುದು ನಮ್ಮ ಪುಣ್ಯ. ಪುಣ್ಯ-ಪಾಪದ ಬಗ್ಗೆ ನಿಮಗೆ ನಂಬಿಕೆಯಿದ್ದರೆ ಅಂಬೇಡ್ಕರ್ ಅವರಂತಹ ವ್ಯಕ್ತಿತ್ವ ಒಂದು ಪುಣ್ಯದವ್ಯಕ್ತಿತ್ವ. ಅವರು ಎಲ್ಲವನ್ನೂ ಕುರಿತು ಮಾತನಾಡಿದ್ದಾರೆ. ಹಿಂದುತ್ವದ ಬಗ್ಗೆ ಮಾತನಾಡಿದ್ದಾರೆ, ಸಮಾನತೆಯ ಬಗ್ಗೆ ಮಾತನಾಡಿದ್ದಾರೆ, ರಾಜಕಾರಣದ ಬಗ್ಗೆ ಮಾತನಾಡಿದ್ದಾರೆ, ಸಂಸ್ಕೃತಿ ಬಗ್ಗೆ ಮಾತನಾಡಿದ್ದಾರೆ, ಅಲ್ಪಸಂಖ್ಯಾತರ ಬಗ್ಗೆ ಮಾತನಾಡಿದ್ದಾರೆ, ಪಾಕಿಸ್ತಾನ ಮತ್ತು ಭಾರತ ವಿಂಗಡನೆಯಾಗುವ ಸ್ವರೂಪದ ಬಗ್ಗೆ ಮಾತನಾಡಿದ್ದಾರೆ, ಅಸ್ಪೃಶ್ಯತೆಯನ್ನು ತೊಡೆದುಹಾಕುವ ಬಗ್ಗೆ ಮತ್ತು ಅಸ್ಪೃಶ್ಯತೆಯನ್ನು ನಾವು ಹೇಗೆ ನಿರ್ಮೂಲನೆಗೊಳಿಸಬೇಕು ಅನ್ನುವುದರ ಬಗ್ಗೆ ಮಾತನಾಡಿದ್ದಾರೆ.
ಅವರ 125ನೇ ಜಯಂತಿಯನ್ನು ಆಚರಿಸುತ್ತಾ ಇದ್ದೇವೆ, ಅವರು ಭಾರತಕ್ಕೆ ಸಂವಿಧಾನವನ್ನು ಕೊಟ್ಟು 6 ದಶಕಗಳು ಕಳೆದರೂ ಕೂಡಾ ಅಸ್ಪೃಶ್ಯತೆಯನ್ನು ನಿರ್ಮೂಲನೆ ಮಾಡುವ ಕುರಿತುಯಾವ ರಾಜಕೀಯ ಪಕ್ಷವೂ ಕೂಡಾ ತುದಿಗಾಲಲ್ಲಿ ನಿಂತು ಯೋಚನೆ ಮಾಡುತ್ತಿಲ್ಲ. ಅದು ಯಾವ ಪಕ್ಷವೇ ಇರಬಹುದು. ಇಂದು ಬಿಜೆಪಿ ಅತಿಯಾಗಿ ನಡೆದುಕೊಳ್ಳುತ್ತಾ ಇದೆ ಮತ್ತು ಬೇರೆ ಪಕ್ಷಗಳು ಸೌಮ್ಯವಾಗಿ ನಡೆದುಕೊಳ್ಳುತ್ತಾ ಇವೆ. ಇರುವ ವ್ಯತ್ಯಾಸ ಇಷ್ಟೆ, ಬೇರೆ ರಾಜಕೀಯ ಪಕ್ಷಗಳು ದಲಿತರ ಬಗೆಗೆ, ಹಿಂದುಳಿದವರ ಬಗೆಗೆ, ಮಹಿಳೆಯರ ಬಗೆಗೆ ಸೌಮ್ಯವಾಗಿ ನಡೆದುಕೊಂಡರೆ ಬಿಜೆಪಿಯಂತಹ ಪಕ್ಷಗಳು ಅತಿರೇಕದಿಂದ ತೀವ್ರವಾಗಿ ಮತ್ತು ಪ್ರತಿಗಾಮಿಯಾಗಿ ನಡೆದುಕೊಳ್ಳುತ್ತಿವೆ. ಅಂದರೆ ಮೇಲ್ವರ್ಗದವರು ದಲಿತರ ಬಗೆಗೆ, ಹಿಂದುಳಿದವರ ಬಗೆಗೆ ಯೋಚನೆಮಾಡುವುದನ್ನು ನೋಡಿದರೆ ಅಂದರೆ ಮೇಲ್ವರ್ಗದಲ್ಲಿ ಹುಟ್ಟಿ ಬೆಳೆದಂತಹ ವ್ಯಕ್ತಿಗಳು ವಿಚಾರ ಮಾಡುವಕ್ರಮವನ್ನು ಕುರಿತು ಯೋಚನೆಮಾಡಿದರೆ ಅವರು ದಲಿತರ ಪರವಾಗಿ ಮಾತನಾಡುತ್ತಾ ಇರುತ್ತಾರೆ ಮತ್ತು ಅವರಿಗೆದಲಿತರ ಬಗ್ಗೆ ಕಾಳಜಿ ಇರುತ್ತೆ, ಅವರ ಅಧಿಕಾರವನ್ನು ಮತ್ತು ಅವರ ರಾಜಕಾರಣವನ್ನು ಸಮರ್ಥಿಸಿಕೊಳ್ಳುವ ಒಂದು ಭಾವನೆಯನ್ನು ಹೊಂದಿರುತ್ತಾರೆ.
ಆದರೆ ಬಿಜೆಪಿ ಆಲೋಚನಾ ಕ್ರಮ ಅಥವಾ ಆರ್ ಎಸ್ ಎಸ್ ನ ಆಲೋಚನಾ ಕ್ರಮ ಹೊಂದಿದಂತಹವರು ಇದನ್ನು ವಿರೋಧಿಸಿ ಮಾತನಾಡುತ್ತಾರೆ. ಇವರಿಬ್ಬರ ನಡುವಿನ ವ್ಯತ್ಯಾಸ ಏನೂ ಅಂದರೆ ಯಾರು ಉದಾರವಾಗಿ ಚಿಂತಿಸುವಮೇಲ್ವರ್ಗದ ಉದಾರವಾದಿಗಳಾಗಿ ಯಾರು ನಟಿಸ್ತಾ ಇರ್ತಾರೋ ಅವರು ಇವರ ಬಗೆಗೆ ಒಂದು ಸೌಮ್ಯ ಭಾವನೆಯನ್ನು ಹೊಂದಿರುತ್ತಾರೆ. ಇವರ ಬಗೆಗೆ ಒಂದು ಸಮರ್ಥನೆಯ ಭಾವನೆಯನ್ನು ಹೊಂದಿರುತ್ತಾರೆ. ಅಷ್ಟನ್ನು ಹೊರತುಪಡಿಸಿದರೆ ಇವರನ್ನು ಉದ್ದಾರ ಮಾಡುವ, ಇವರನ್ನು ಮುಖ್ಯಧಾರೆಗೆ ತರುವ ತುಡಿತದಲ್ಲಿ ಯಾವ ವರ್ಗದ ವ್ಯಕ್ತಿಗಳೂ ಪಾಲ್ಗೊಳ್ಳುವುದಿಲ್ಲ. ಹಾಗಾಗಿ ದಲಿತರು, ಹಿಂದುಳಿದವರು, ಮಹಿಳೆಯರು ಈ ದೇಶದಲ್ಲಿ ಹೆಚ್ಚು ಜನಸಂಖ್ಯೆಯಲ್ಲಿ ಇರುವುದರಿಂದ ಈ ದೇಶದ ಸಂಪನ್ಮೂಲ ಇರಬಹುದು, ಸಂಸ್ಕೃತಿ ಇರಬಹುದು, ರಾಜಕಾರಣ ಇರಬಹುದು, ಸಾಮಾಜಿಕತೆ ಇರಬಹುದು, ಸಾಹಿತ್ಯ ಇರಬಹುದು, ಇದರೆಲ್ಲದರಿಂದ ಹೊರಗುಳಿದಿದ್ದಾರೆ. ಇದರೆಲ್ಲದರ ಲಾಭವನ್ನು ಅವರು ಪಡೆದುಕೊಳ್ಳದೆ ಇನ್ನೊಬ್ಬರ ಲಾಭಕ್ಕಾಗಿ ಅವರು ದುಡಿಯುವ ಜನರಾಗಿ ಇಲ್ಲಿ ಕೆಲಸ ಮಾಡುತ್ತಿದ್ದಾರೆ.
ಇದಕ್ಕೆ ಒಂದು ಉದಾಹರಣೆಯನ್ನು ನಾವು ಕುವೆಂಪು ಅವರ ಸಾಹಿತ್ಯದಲ್ಲಿ ಹೇಳುವುದಾದರೆ ಶ್ರೀ ರಾಮಾಯಣ ದರ್ಶನಂನಲ್ಲಿ ಒಂದು ಮಾತು ಬರುತ್ತೆ. ಅಂದ್ರೆ ಕುವೆಂಪು ಬರೀತಾರೆ, ರಾಮ ಸೀತೆಯನ್ನು ಗೆದ್ದು ಮದುವೆಯಾಗುವುದಕ್ಕೆ ಪುಷ್ಪಕವಿಮಾನದಲ್ಲಿ ಹೋಗ್ತಾ ಇರ್ತಾನೆ, ಹೋಗ್ತಾ ಇರುವಾಗ ಕಾರ್ಮಿಕರು, ಕೃಷಿ ಕಾರ್ಮಿಕರು, ರೈತರು ಗದ್ದೆಯಲ್ಲಿ ಕೆಲ್ಸಾ ಮಾಡ್ತಾ ಇರ್ತಾರೆ. ಕೆಲ್ಸಾ ಮಾಡ್ತಾ ಇರುವಾಗ ಬೆಳಗಿನ ಜಾವ ಪುಷ್ಪಕವಿಮಾನದಲ್ಲಿ ಅವರೆಲ್ಲಾ ಹೋಗ್ತಾ ಇರುವಾಗಅವರ ವಜ್ರ, ವೈಢೂರ್ಯ, ಬಂಗಾರ ಇವೆಲ್ಲವನ್ನೂ ಬೆರೆಸಿ ಆ ಸೂರ್ಯನ ಪ್ರಖರತೆಗೆ ಅದರ ಛಾಯೆ ಇವರ ಮೇಲೆ ಬೀಳುತ್ತೆ. ಇವರೆಲ್ಲ ಬಾಯಿ ತೆರ್ಕಂಡು ನೋಡ್ತಾ ಇರ್ತಾರೆ, ಹೊಲದಲ್ಲಿ ಕೆಲಸ ಮಾಡುವವರು ಅಯ್ಯೋ ಇದೇನು ಅದ್ಭುತವಾಗಿದೆ, ಏನು ಬೆರಗು, ನಮ್ಮ ರಾಜ ಹೀಗೆ ಹಾಗೆ ಅಂತ ಬಹಳ ಉತ್ಸಾಹದಿಂದ, ಬೆರಗಿನಿಂದ ನೋಡ್ತಾ ಇರ್ತಾರೆ.ಆಗ ಕುವೆಂಪು ಒಂದು ಮಾತನ್ನು ಹೇಳ್ತಾರೆ. ಇದು ಈ ಸಂಭ್ರಮ ಮತ್ತು ಈ ವೈಭವ ಇದ್ಯಲ್ಲಾ ಅದು ನಿಮ್ಮ ಬೆವರಿನ ಫಲ ಅಂತ ಒಂದು ಮಾತನ್ನು ಹೇಳ್ತಾರೆ ಅಂದರೆಇವತ್ತು ಮೇಲ್ವರ್ಗದವರು, ರಾಜಕಾರಣಿಗಳು ಮತ್ತು ಈ ದೇಶದ ಕ್ಯಾಪಿಟಲಿಸ್ಟ್ ಸೆಕ್ಟರ್ ಇದೆಯಲ್ಲ ಎಲ್ಲವೂ ಅನುಭವಿಸ್ತಾ ಇರುವಂತಹ ಈ ಸಂಪನ್ಮೂಲ, ಸವಲತ್ತು, ಸೌಕರ್ಯ ನಮ್ಮ ಕೆಳಸ್ತರದ, ಹಿಂದುಳಿದ, ಬಡವರ, ರೈತರ, ಕೂಲಿಕಾರ್ಮಿಕರ ಬೆವರಿನ ಫಲಅದು.
ಆ ಬೆವರಿನ ಫಲದಿಂದ ಇವರೆಲ್ಲರೂ ತಮ್ಮ ಸುಪ್ಪತ್ತಿಗೆಯಲ್ಲಿ ಕುಳಿತು ಇವೆಲ್ಲವನ್ನೂ ಸುಖಿಸ್ತಾ ಇದ್ದಾರೆ, ಅನುಭವಿಸ್ತಾ ಇದ್ದಾರೆ ಆದರೆ ಯಾರಿಗೆ ಈ ಬೆವರಿನ ಫಲ ದಕ್ಕಬೇಕಾಗಿತ್ತೋ ಅವರು ಸಂಕಷ್ಟದಲ್ಲಿ ಬಾಳ್ತಾ ಇದ್ದಾರೆ, ಸಂಕಷ್ಟದ ಜೀವನ ನಡೆಸ್ತಾ ಇದ್ದಾರೆ.ನಮ್ಮ ಬಹುತೇಕ ಹೆಣ್ಣು ಮಕ್ಕಳಿಗೆ ತಾವು ಸ್ವತಂತ್ರವಾಗಿ ಯೋಚಿಸುವ, ಸ್ವತಂತ್ರವಾಗಿ ಬದುಕುವ ಹಕ್ಕುಗಳು ಇವತ್ತಿಗೂ ಸಿಕ್ಕಿಲ್ಲ. ಸಿಗಬೇಕು ಎನ್ನುವುದು ಅಂಬೇಡ್ಕರರ ಮುಖ್ಯವಾದ ಚಿಂತನೆಯಾಗಿತ್ತು. ಆದರೆ ಇವತ್ತಿಗೂ ಯಾಕೆ ಸಿಕ್ಕಿಲ್ಲ ಎಂದರೆ ಅಧಿಕಾರಗಳು ಸಮನಾಗಿ ಹಂಚಿಕೆಯಾಗದೆ ಅಧಿಕಾರದ ಸೂತ್ರಗಳು ಎಲ್ಲರಿಗೂ ಸಿಕ್ಕದೆ ಇಲ್ಲಿ ಈ ತಾರತಮ್ಯ ಇದೆಯಲ್ಲ, ಈ ಶ್ರೇಣೀಕರಣ ಇದೆಯಲ್ಲ ಅದು ಯಾವತ್ತೋ ಅಳಿಸಿ ಹೋಗ್ತಾ ಇತ್ತು. ಆ ತಾರತಮ್ಯ ಯಾವತ್ತಿಗೂ ಅಳಿಸಿ ಹೋಗಬಾರದು, ಆ ತಾರತಮ್ಯ ಮುಂದುವರೆಯಬೇಕು. ಮೇಲು-ಕೀಳು ಎನ್ನುವುದು ಹಾಗೇ ಮುಂದುವರೆದರೆ ಈ ಸವಲತ್ತುಗಳು ಕೆಲವರ ಪರವಾಗಿರುತ್ತೆ, ಸುಖ ಅನ್ನೋದು ಕೆಲವರ ಪರವಾಗಿರುತ್ತೆ, ಬದುಕು ಅನ್ನೋದು ಕೆಲವರಿಗೆ ಮಾತ್ರಸಿಗುತ್ತೆ, ಅದು ಕೆಲವರಿಗೆ ಮಾತ್ರ ಇರಬೇಕು, ಕೆಲವರ ಸ್ವತ್ತಾಗಿ ಮಾತ್ರ ಈ ದೇಶದ ರಾಜಕಾರಣ, ಸಂಪನ್ಮೂಲ ಇರಬೇಕು ಅನ್ನುವ ಕಾರಣಕ್ಕಾಗಿ ಅಂಬೇಡ್ಕರರ ಚಿಂತನೆಗಳನ್ನು ನೆಪವಾಗಿ ಮಾತ್ರ ಚರ್ಚೆ ಮಾಡ್ತಾ ಇದ್ದೇವೆ ಹೊರತು ಅವುಗಳನ್ನು ನಮ್ಮ ಬದುಕಿನ ಭಾಗವಾಗಿ ಒಂದು ಸಮಾಜದ ವಿವೇಕವಾಗಿ, ಒಂದು ಸಾಮಾಜಿಕ ವಾಸ್ತವವಾಗಿ ನಾವು ಅದನ್ನು ಪರಿಗಣಿಸ್ತಾಇಲ್ಲ.
ಅದು ಸಾಮಾಜಿಕ, ವಾಸ್ತವ ಮತ್ತು ಸಾಮಾಜಿಕ ವಿವೇಕ ಅಂತ ಹೇಳಿದರೆ ಒಬ್ಬ ರೈತನಿಗೆ ಯಾವಾಗ ಮಳೆಯಾಗುತ್ತೆ, ಯಾವಾಗ ಬೆಳೆಯಾಗುತ್ತೆ, ಭೂಮಿಯ ಸ್ಥಿತಿಗತಿಯೇನು, ಅದರ ಫಲವಂತಿಕೆಯೇನು, ಅದರ ಸ್ವರೂಪವೇನು ಅನ್ನೋದು ಅವನಿಗೆ ಅರ್ಥ ಆಗುತ್ತಲ್ವಾ? ಅದು ಯಾವುದೇ ಶಿಕ್ಷಣದ ಒಂದು ಛಾಯೆ ಅಂದರೆ ಶಿಕ್ಷಣದ ಒಂದು ಸ್ಪರ್ಶವಿಲ್ಲದೆ ಒಬ್ಬ ರೈತಆಯಾ ಕುಶಲಕರ್ಮಿಗಳು ಎಷ್ಟುನಿಷ್ಠೆಯಿಂದ, ಶ್ರದ್ಧೆಯಿಂದ, ಅಷ್ಟೇ ವಿಚಾರವಂತಿಕೆಯಿಂದ ಆ ಕೆಲಸವನ್ನು ಮಾಡುವ ಶಕ್ತಿ ದಕ್ಕಿರುತ್ತಲ್ವಾ, ಅದು ಸಾಮಾಜಿಕ ವಿವೇಕ ಮತ್ತು ಸಾಮಾಜಿಕ ವಾಸ್ತವ. ಅಂಬೇಡ್ಕರರ ಚಿಂತನೆ ಆ ಬಗೆಯ ಚಿಂತನೆಯಾಗಿ ನಮ್ಮಲ್ಲಿ ಮೂಡಬೇಕು ಅಂದ್ರೆ ನಮ್ಮ ಬದುಕಿನ ದಾರಿಗಳು ಸ್ಪಷ್ಟವಾಗುತ್ತವೆ ಮತ್ತು ಒಂದು ಊರುಗೋಲಾಗಬೇಕು ಅಂತ ಪ್ರತಿಯೊಬ್ಬ ಮನುಷ್ಯನಿಗೆ, ಪ್ರತಿಯೊಂದು ಸಮುದಾಯಕ್ಕೆ ಊರುಗೋಲಾಗಬೇಕು. ಆ ಊರುಗೋಲು ಮೂಲಕ ನಾವು ನಮ್ಮ ಬದುಕನ್ನು ನಡೆಸಲಿಕ್ಕೆ ಮತ್ತು ಆ ಊರುಗೋಲಿನ ಮೂಲಕ ನಮ್ಮ ಬದುಕಿನ ದಾರಿಗಳನ್ನುಕಂಡುಕೊಳ್ಳುವುದಕ್ಕೆ ಸಾಧ್ಯವಾಗುತ್ತೆ.
ಈ ನಿಟ್ಟಿನಲ್ಲಿ ಅಂಬೇಡ್ಕರರನ್ನು ಗ್ರಹಿಸುವ, ತಿಳಿದುಕೊಳ್ಳುವ ಮತ್ತು ಅಂಬೇಡ್ಕರರ ಬಗೆಗೆ ನಮ್ಮ ನಂಬಿಕೆಯೇನಾದರೂ ಉಂಟಾದರೆ ಅದು ಖಂಡಿತವಾಗಿಯೂ ಕೂಡಾ ಅಂಬೇಡ್ಕರ್ ಅವರಿಗೆ ಸಲ್ಲಿಸುವ ಗೌರವಕ್ಕಿಂತ ನಾವು ಭಾರತೀಯರು, ಭಾರತ ಅನ್ನುವುದು ಮಹಾನ್ ರಾಷ್ಟ್ರ, ಭಾರತ ಅನ್ನುವಂತಹದ್ದು ವಿಶ್ವಕ್ಕೆ ಮಾದರಿಯಾಗುವಂತಹ ರಾಷ್ಟ್ರ ಅಂತ ಏನು ಬೊಂಬಡ ಕೊಚ್ತಾ ಇದ್ದೀವಲ್ಲಾ ನಾವು ಅದಕ್ಕೆಒಂದು ಸರಿಯಾದ ಜಸ್ಟಿಸ್ ಕೊಡಲು ಸಾಧ್ಯವಾಗುತ್ತದೆ. ಅದು ಅಂಬೇಡ್ಕರರಿಗೆ ಗೌರವ ಕೊಡಬೇಕಾದರೆ ನಾವು ಸರಿಯಾಗಿ ಬದುಕಿ ಸರಿಯಾಗಿ ಬಾಳುವುದಕ್ಕೆ ದಾರಿಗಳನ್ನು ಹುಡುಕಿಕೊಂಡರೆ ನಿಜವಾದ ಗೌರವ ಅವರಿಗೆ ಸಿಗುತ್ತದೆ. ಅದು ಕೇವಲ ಅವರ ಫೋಟೋಗೆ ಹೂ ಹಾಕುವ, ಅವರ ಬಗೆಗೆ ಮೆಚ್ಚುಗೆ ಮಾತನಾಡುವ ಅಥವಾಅವರನ್ನು ಕುರಿತು ಒಂದಷ್ಟುಮಾತಾಡಿದರೆ ಅದು ಅಂಬೇಡ್ಕರರಿಗೆ ಗೌರವ ಸಲ್ಲಿಸುವುದಲ್ಲ, ಅವಮಾನ ಮಾಡಿದ ಸಂಗತಿಯಾಗುತ್ತದೆ.ಯಾಕೆ ಅಂತ ಹೇಳಿದರೆ ಅಂಬೇಡ್ಕರ್ ಅವರು ಏನ್ ಆಗಬೇಕು ಮತ್ತು ಈ ದೇಶದಲ್ಲಿ ಏನ್ ನಡೀಬೇಕು, ಯಾವ ಬಗೆಯ ಪ್ರಾಂತ್ಯ ಆಗಬೇಕು ಅನ್ನುವುದರ ಬಗೆಗೆಅವರು ಹೆಚ್ಚು ಚರ್ಚೆಗಳನ್ನು ಮಾಡಿದ್ದಾರೆ.
ಅದು ನಿಜವಾಗಿಯೂ ಬದುಕಿನಲ್ಲಿ ನಡೆದರೆ ಅವರಿಗೆ ಖಂಡಿತವಾಗಿಯೂ ಸಂತೋಷವಾಗುತ್ತೆ ಮತ್ತು ಆ ಸಂತೋಷ ಸಮುದಾಯಕ್ಕೆ ಸಿಗುತ್ತದೆ. ಆ ನಿಟ್ಟಿನಲ್ಲಿ ನಾವು ಅಂಬೇಡ್ಕರರನ್ನು ಪರಿಗಣಿಸಬೇಕು ಮತ್ತು ಅಂಬೇಡ್ಕರರ ಚಿಂತನೆಗಳನ್ನು ಪರಿಗಣಿಸಬೇಕು. ಹಾಗಾಗಿ ಅಂಬೇಡ್ಕರ್ ಸಾಮಾಜಿಕ ನ್ಯಾಯದ ಬಗೆಗೆ ಯೋಚನೆ ಮಾಡಿದ್ದಾರೆ. ಎಲ್ಲರಿಗೂ ಎಲ್ಲಾ ಹಕ್ಕುಗಳು ಸಿಗಬೇಕು, ಎಲ್ಲರಿಗೂ ಎಲ್ಲಾ ಸಂಪನ್ಮೂಲಗಳೂ ಸಿಗಬೇಕು, ಎಲ್ಲರೂ ಸಮಾನರಾಗಿ ಬದುಕಬೇಕು ಎನ್ನುವ ನಿಟ್ಟಿನಲ್ಲಿ ಯೋಚನೆ ಮಾಡಿದ್ದಾರೆ. ಆ ನಿಟ್ಟಿನಲ್ಲಿ ನಾವು ಕೆಲಸ ಮಾಡಬೇಕು. ನಿನ್ನೆ ದಲಿತ ಕೇರಿಗೆ ಹೋಗಿ ನಮ್ಮ ಸ್ವಾಮೀಜಿಯೊಬ್ಬರು ಊಟ ಮಾಡಿದ್ದಾರೆ. ಅವರ ಮನೆಗೆ ಹೋಗಿ ಅವರ ಬಚ್ಚಲು ಕೋಣೆಗೆ ಹೋಗಿ ಸ್ನಾನ ಮಾಡಿದ್ದಾರೆ, ಅವರ ನಡುಮನೆಯಲ್ಲಿ ಕುಳಿತುಇಷ್ಟಲಿಂಗ ಪೂಜೆ ಮಾಡಿದ್ದಾರೆ, ಎಲ್ಲರೂ ಕೆಳಗಡೆ ಕುಳಿತಿದ್ದಾರೆ, ಸ್ವಾಮೀಜಿ ಮಂಚದ ಮೇಲೆ ಕೂತಿದ್ದಾರೆ. ಅಲ್ಲಿಯೂ ಕೂಡಾ ಒಂದು ಶ್ರೇಣೀಕರಣ. ದಲಿತರ ಮನೆಗೆ ಹೋಗಿ ದಲಿತರ ಮಧ್ಯೆ ಮತ್ತು ನಮ್ಮ ಮಧ್ಯೆ ಯಾವುದೇ ವ್ಯತ್ಯಾಸವಿಲ್ಲ ಅನ್ನುವುದನ್ನು ಸಾಬೀತುಪಡಿಸುವುದಕ್ಕೆ ಹೋಗಿರುವ ಸ್ವಾಮಿಯು ಶ್ರೇಣೀಕರಣವನ್ನೇ ಮಾಡಿದ್ದಾರೆ.ಅಂದ್ರೆ ನಾವು ಮಾಡ್ತಾಯಿರೋದೇನಂದ್ರೆ ದಲಿತರ ಕೇರಿಗೆ ನಾವು ಹೋಗ್ತೀವಿ, ದಲಿತರ ಮನೆಯಲ್ಲಿ ನಾವು ಊಟ ಮಾಡ್ತೀವಿ, ದಲಿತರ ಪರವಾಗಿ ಮಾತನಾಡ್ತೀವಿ ಆದ್ರೆ ದಲಿತರನ್ನು ನಮ್ಮ ಲೋಕದೊಳಗೆ ನಮ್ಮ ಜಗತ್ತಿನೊಳಗೆ ನಾವು ಬಿಟ್ಕೊಳೋದಿಲ್ಲ.
ನಮ್ಮ ಮನೆಗೆ ದಲಿತರನ್ನು ಕರೆದು ನಮ್ಮ ಮಠಕ್ಕೆ ದಲಿತರನ್ನು ಕರೆದು ಅಲ್ಲಿ ಅವರನ್ನು ಸ್ನಾನ ಮಾಡಿಸಿ ನಡುಮನೆಯಲ್ಲಿ ಊಟ ಮಾಡಿಸಿ ನಾವೆಲ್ಲರೂ ಸಹಭೋಜನವನ್ನು ಮಾಡುವುದಾದರೆ ಆವಾಗ ಅಂಬೇಡ್ಕರರ ಚಿಂತನೆಗಳು ನಮಗೆ ಪ್ರಸ್ತುತವಾಗುತ್ತವೆ. ಇಲ್ಲದೆ ಹೋದರೆ ಅಂಬೇಡ್ಕರ್ನಮಗೆ ಪ್ರಸ್ತುತವಾಗುವುದಿಲ್ಲ. ಇವು ಕೇವಲ ನೆಪಗಳು ಮಾತ್ರ. ನಾವು ಕೇವಲ ಏನ್ಮಾಡ್ತಾ ಇದೀವಿ ಅಂದ್ರೆ ಇಲ್ಲಿ ನಾವೆಲ್ಲ ಒಟ್ಟಾಗಿ ಬದುಕ್ತಾ ಇದೀವಿ ಅನ್ನೋದಕ್ಕೆ ನಾವು ಅವರ ಬಾಗಿಲಿಗೆ ಹೋಗ್ತಾ ಇದೀವಿ ಅಂದ್ರೆ ಅಸ್ಪೃಶ್ಯತೆ ಅನ್ನೋದು ಅಲ್ಲೇ ಇರುತ್ತೆ, ನಾವು ಹತ್ತಿರ ಹೋಗಿ ವಾಪಸ್ ಬರ್ತಾ ಇದೀವಿ. ಅಸ್ಪೃಶ್ಯತೆಯನ್ನು ನಮ್ಮೊಳಗೆ ಬಿಟ್ಕೊಳ್ತಾ ಇಲ್ಲ. ಅವರಿ ಸ್ಪೃಶ್ಯರಾಗುವುದು ಯಾವಾಗ? ಮುಟ್ಟಿಸ್ಕೊಳೋರಾಗೋದು ಯಾವಾಗ? ಅವರು ನಮ್ಮ ಮನೆಗೆ ಬಂದಾಗ ನಮ್ಮ ದೇವರ ಮನೆಗೆ ಬಂದಾಗ, ನಮ್ಮ ಬಚ್ಚಲು ಮನೆಗೆ ಬಂದಾಗ, ನಮ್ಮ ಅಡುಗೆಮನೆಗೆ ಬಂದಾಗ ಮಾತ್ರಸ್ಪೃಶ್ಯರಾಗ್ತಾರೆ ಹೊರತಾಗಿ ಅವರ ಅಡುಗೆಮನೆಗೆನಾವು ಹೋದರೆ ಅವರು ಸ್ಪೃಶ್ಯರಾಗುವುದಿಲ್ಲ.ಈ ಚಾಳಿಗಳನ್ನು, ಈ ಅಭ್ಯಾಸಗಳನ್ನು ದೂರ ಇಡುವುದಕ್ಕೆ ಬೇಕಾಗಿರುವಂತಹ ಕ್ರಾಂತಿಯನ್ನು ನಾವು ಮಾಡಬೇಕು. ಆ ಕ್ರಾಂತಿ ಮಾಡಿದರೆ ಮಾತ್ರ ಅಂಬೇಡ್ಕರರಿಗೆ ಗೌರವ ಸಲ್ಲುತ್ತೆ, ಅವರ ಚಿಂತನೆಗೆ ಅರ್ಥ ಸಿಗುತ್ತೆ. ಇಲ್ಲದೆ ಹೋದರೆ ಖಂಡಿತವಾಗಿಯೂ ಅಂಬೇಡ್ಕರರ ಚಿಂತನೆಗಳನ್ನು ನಾವು ಅವರ ಜನ್ಮದಿನದ ಅಥವಾ ಪುಣ್ಯತಿಥಿಯ ದಿವಸ ಮಾತಾಡ್ಬಿಟ್ಟು ಕೈತೊಳೆದುಕೊಂಡು ಹೋಗ್ತಾ ಇರ್ತೀವಿ.
ಈ ಸಕರ್ಾರ ಕೂಡಾ ಜವಾಬ್ದಾರಿಯಿಂದ ಕೆಲಸ ಮಾಡಬೇಕು, ಹಾಗಾಗಿ ಈ ದಿನಾಚರಣೆಗಳನ್ನು ಆಚರಿಸಬೇಕು. ಈ ಜವಾಬ್ದಾರಿಯ ಕಾರಣಕ್ಕಾಗಿ ಅವರು ಮಾಡ್ತಾ ಇರ್ತಾರೆ, ಕೆಲವರು ನಿಷ್ಠೆಯಿಂದ ಮಾಡ್ತಾ ಇರಬಹುದು ಆದರೆ ನಿಷ್ಠೆಯು ವ್ಯಕ್ತಿಗತವಾಗಿರುತ್ತದೆ ಹೊರತಾಗಿ ಸಾಂಸ್ಥಿಕವಾಗಿರುವುದಿಲ್ಲ. ಇಡೀ ಸರ್ಕಾರಕ್ಕೆ ನಿಷ್ಠೆಯಿರಬೇಕು, ಇಡೀ ಸರ್ಕಾರಕ್ಕೆ ಆ ತರಹದ ಒಂದು ಬದ್ಧತೆಯಿದ್ದು ಕೆಲಸ ಮಾಡುವುದಾದರೆ ಅದು ಖಂಡಿತವಾಗಿಯೂ ನಿಷ್ಠೆಯಿಂದ, ಬದ್ಧತೆಯಿಂದ ಈ ದಿನಾಚರಣೆಯನ್ನು ಆಚಾರಿಸ್ತಾಯಿದಾರೆ ಅನ್ನೋದು ನಮಗೆ ಗೊತ್ತಾಗುತ್ತೆ. ಅದು ಕೇವಲ ಯಾವುದೋ ಒಬ್ಬ ವ್ಯಕ್ತಿಗೆ ಆ ಬದ್ಧತೆಯಿದ್ದು ಸಾಮಾಜಿಕನ್ಯಾಯದ ಪ್ರಜ್ಞೆಯಿತ್ತು ಅಂದ್ರೂ ಕೂಡಾ ಅದು ಖಂಡಿತವಾಗಿಯೂ ಸಮುದಾಯದ ಪ್ರಜ್ಞೆಯಾಗಿ, ಸಮುದಾಯದ ಜವಾಬ್ದಾರಿಯಾಗಿ ನಮಗೆ ಕಾಣಿಸೋದಿಲ್ಲ.ಇವತ್ತು ಜವಾಬ್ದಾರಿ ಬೇಕಾಗಿರೋದು ರಾಜಕಾರಣಿಗಳಿಗೆ, ಜವಾಬ್ದಾರಿ ಬೇಕಾಗಿರೋದು ಸಂಸ್ಥೆಗಳಿಗೆ, ಕಛೇರಿಗಳಿಗೆ ಅದು ಕೇವಲ ವ್ಯಕ್ತಿಗಲ್ಲ, ಕೆಲಸ ಮಾಡುವ ಯಾವುದೋ ಒಬ್ಬ ವ್ಯಕ್ತಿಗಲ್ಲ. ಆ ಒಟ್ಟು ವಾತಾವರಣದಲ್ಲಿ ಪರಿಸರದಲ್ಲಿ ಜವಾಬ್ದಾರಿ ಎನ್ನುವುದು ಇರಬೇಕು. ಇದು ನಮ್ಮೆಲ್ಲರ ಕೆಲಸ, ನಾವೆಲ್ಲರೂ ಮಾಡಬೇಕಾಗಿರುವುದು. ಇದು ನಾವು ಹೀಗೆ ಮಾಡಬೇಕು, ಹೀಗೆ ಮುನ್ನಡೆಸಬೇಕು, ನಾವೆಲ್ಲರೂ ಒಂದು ಎನ್ನುವ ಭಾವನೆಯನ್ನು ಅದು ಏಕತ್ರವಾಗಿ ಎಲ್ಲರಲ್ಲಿಯೂ ಮೂಡಿದರೆ ಮಾತ್ರ ಅಂಬೇಡ್ಕರ್ ಯೋಚಿಸಿದ ದಾರಿಯಲ್ಲಿ ನಾವು ನಡೀತಾ ಇದೀವಿ ಅನ್ನೋದು ನಮಗೆ ಗೋಚರವಾಗುತ್ತೆ. ಮತ್ತು ಅಂಬೇಡ್ಕರರ ಬಗೆಗೆ ನಾವು ಭಜನೆ ಮಾಡುವ, ದಿನಾಚರಣೆ ಮಾಡುವ ಅಗತ್ಯವೂ ಕೂಡಾ ಇರೋದಿಲ್ಲ.
ನಮಗೆ ಅಂಬೇಡ್ಕರರ ಬಗೆಗೆ ನಾವು ನೆನಪು ಮಾಡಿಕೊಳ್ಳಬೇಕಾದುದು ನಮ್ಮ ಜವಾಬ್ದಾರಿ ಸರಿ ಆದರೆ ನೆನಪು ಮಾಡಿಕೊಂಡು, ನೆನಪು ಮಾತ್ರವಾಗಿ ಅಂಬೇಡ್ಕರ್ ರನ್ನು ಉಳಿಸೋದಾದ್ರೆ ಇದನ್ನು ಯಾತಕ್ಕಾಗಿ ಮಾಡಬೇಕು ಅನ್ನುವಂತಹ ಪ್ರಶ್ನೆ ನಮ್ಮೆಲ್ಲರನ್ನೂ ಕಾಡುತ್ತೆ.ಹಾಗಾಗಿ ನಾವು ಹೆಣ್ಣು ಮಕ್ಕಳನ್ನು ನಡೆಸಿಕೊಳ್ಳುವ ಕ್ರಮ, ದಲಿತರನ್ನು, ಆದಿವಾಸಿಗಳನ್ನು ನಡೆಸಿಕೊಳ್ಳುವಂತಹ ಕ್ರಮ, ಹಿಂದುಳಿದವರನ್ನು, ಜನಸಾಮಾನ್ಯರನ್ನು ನಡೆಸಿಕೊಳ್ಳುವಂತಹ ಕ್ರಮ ಇದೆಯಲ್ಲ ಅದು ಅಮಾನುಷವಾದಂತಹ ಮತ್ತು ಜೀವವಿರೋಧಿಯಾಗಿರುವ ಸಮಾಜವನ್ನು ವಿಘಟಿಸುವ ಚಟುವಟಿಕೆಗಳು ಎಲ್ಲಾ ಪ್ರಕ್ರಿಯೆಗಳು ದೇಶದಾದ್ಯಂತ ನಡೀತಾ ಇದೆ.
ಈಗ ನಮ್ಮ ವಿದ್ಯಾರ್ಥಿ ಮಿತ್ರ ರೋಹಿತ್ ವೇಮುಲ ಅನ್ನುವಂತಹ ವಿದ್ಯಾರ್ಥಿ ಅಂಬೇಡ್ಕರರ ಬಗೆಗೆ ಅಪಾರ ಕಾಳಜಿ ಹೊಂದಿ ತನ್ನ ವಿದ್ಯಾರ್ಥಿ ಬದುಕಿನಲ್ಲಿಯೇ ಆ ಚಿಂತನೆಗಳನ್ನು ರೂಢಿಸಿಕೊಂಡು ಅದು ಎಲ್ಲರಲ್ಲಿಯೂ ಬರಬೇಕು ಎನ್ನುವಂತಹ ಆಶಯವನ್ನು ಹೊಂದಿರುವಂತಹ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೆ ಏನು ಕಾರಣ ಅಂತ ಹೇಳಿದ್ರೆ ದುಷ್ಟಶಕ್ತಿಗಳು ನಮ್ಮನ್ನು ನಿಯಂತ್ರಿಸುತ್ತಾ ಇದ್ದಾವಲ್ಲಾ, ಆ ದುಷ್ಟಶಕ್ತಿಗಳು ನಿಯಂತ್ರಿಸುತ್ತಾ ಇರುವ ಆ ಕ್ರಮವನ್ನು, ಬಗೆಯನ್ನು ನೋಡಿ ಜಿಗುಪ್ಸೆಯಿಂದ ತನ್ನಪ್ರಾಣತ್ಯಾಗ ಮಾಡಿದ್ದಾನೆಯೇ ಹೊರತು ತನ್ನ ಇಚ್ಛೆಯಿಂದ ತನ್ನ ವೈಯುಕ್ತಿಕ ಸಮಸ್ಯೆಯಿಂದ ಆತ್ಮಹತ್ಯೆ ಮಾಡಿಕೊಂಡಿಲ್ಲ.ಅಂದರೆ ಈ ದೇಶ ಎದುರಿಸುತ್ತಾ ಇರುವ ಈ ಸಮಸ್ಯೆಗಳಿದ್ದಾವಲ್ಲಾ ನಮ್ಮ ಯುವಕರನ್ನು, ನಮ್ಮ ಯುವಜನತೆಯನ್ನು ಹೇಗೆ ಕಾಡ್ತಾ ಇದ್ದಾವೆ ಮತ್ತು ಹೇಗೆ ದಿಕ್ಕುಗೆಡುಸ್ತಾ ಇದ್ದಾವೆ ಅನ್ನೋದಕ್ಕೆ ಇದುಒಂದು ದೊಡ್ಡ ಜ್ವಲಂತ ನಿದರ್ಶನ. ಹಾಗಾಗಿ ಕನ್ನಯ್ಯ ಇವತ್ತು ಅಷ್ಟು ಕ್ರಾಂತಿಕಾರಿಯಾಗಿ ಮಾತನಾಡೋದನ್ನು ಬಹುತೇಕ ಪ್ರತಿಶತ 90ರಷ್ಟು ಜನ ಅದಕ್ಕೆ ಸಪೋರ್ಟ್ ಮಾಡ್ತಾರೆ. ಏಕೆ ಅಂತ ಹೇಳಿದ್ರೆ ನಮ್ಮೆಲ್ಲ ಧ್ವನಿಯಾಗಿ ನಮ್ಮ ಯುವಜನತೆಯ ಆಕ್ರೋಶದ ಧ್ವನಿಯಾಗಿ ಮತ್ತು ಅದರ ಸೂಚ್ಯಕವಾಗಿ ನಮಗೆ ಕಾಣಿಸ್ತಾ ಇದ್ದಾನೆ. ನಾವೆಲ್ಲರೂ ಅದನ್ನು ಬೆಂಬಲಿಸ್ತಾ ಇದೀವಿ ಮತ್ತುಅದೆಲ್ಲವನ್ನೂ ನೋಡ್ತಾ ಇದೀವಿ.
ಹಾಗಾಗಿ ರಾಷ್ಟ್ರೀಯತೆ ಅನ್ನೋದು, ರಾಷ್ಟ್ರ ವಿರೋಧ ಅನ್ನೋದು ಅದು ನಮ್ಮ ಸಂಸ್ಕೃತಿಯ ಬದುಕಿಗೆ ಹೊರತಾಗಿರುವ ಕಲ್ಪನೆ. ಯಾವುದು ರಾಷ್ಟ್ರೀಯತೆಯ ಬಗೆಗೆ ಮಾತಾಡ್ತಾ ಇದಾರೋ ಅದು ಯಾವುದು ರಾಷ್ಟ್ರ ವಿರೋಧ ಕಲ್ಪನೆಗಳನ್ನು ಅಂತ ಕಲ್ಪನೆಗಳನ್ನು ಕುರಿತು ಮಾತಾಡ್ತಾ ಇದಾರೋ ಅದು ನಮ್ಮ ಬದುಕಿಗೂ ನಮ್ಮ ಬದುಕಿನ ಕ್ರಮಕ್ಕೂ ನಾವು ಉಣ್ಣುವ ಅನ್ನಕ್ಕೂ, ನಾವು ಮಾಡುವ ಕೆಲಸಕ್ಕೂ ಹೊರತಾಗಿರುವ ತಿಳುವಳಿಕೆಯಾಗಿದೆ. ಆ ತಿಳುವಳಿಕೆಗೆ ಹೊರತಾಗಿರುವ ನಿಟ್ಟಿನಲ್ಲಿ ಇವರೆಲ್ಲ ಯೋಚನೆ ಮಾಡ್ತಾ ಇದ್ದಾರೆ.ರಾಷ್ಟ್ರೀಯತೆ ಅನ್ನೋದು ಮನುಷ್ಯನ ಬದುಕಿಗೆ ಮೀರಿದ ಸಂಗತಿಯಲ್ಲ. ಮನುಷ್ಯನ ಬದುಕಿಗೆ ಬದ್ಧವಾಗಿರುವ ಮನುಷ್ಯನ ಬದುಕನ್ನು ಹಸನಾಗಿಸಲಿಕ್ಕೆ ಬೇಕಾಗಿರುವ ಒಂದು ಕಲ್ಪನೆಯಾಗಿದ್ದರೆ ರಾಷ್ಟ್ರೀಯತೆಯ ಬಗೆಗೆ ಭಾರತ್ ಮಾತಾ ಕಿ ಜೈ ಎನ್ನುವ ಬಗೆಗೆ ಒಕ್ಕೊರಲಿನಿಂದ, ಒಗ್ಗಟ್ಟಿನಿಂದ ಕೂಗುವುದರಲ್ಲಿ ಅರ್ಥವಿದೆ. ನಮ್ಮೆಲ್ಲರನ್ನು ದಿಕ್ಕೆಡಿಸುವ, ಹಾಳುಮಾಡುವ ನಮ್ಮ ಬದುಕನ್ನು ನಾಶಗೊಳಿಸುವುದಕ್ಕೆ ಭಾರತ್ ಮಾತಾ ಕಿ ಜೈ ಅನ್ನೋದು ಯಾಕೆ ಬೇಕಾಗಿದೆ. ಯಾವ ಪುರುಷಾರ್ಥಕ್ಕಾಗಿ ಕೂಗಬೇಕು? ಯಾಕೆ ಹಾಗೆ ನಾವುಮಾತಾಡಬೇಕು ಅನ್ನೋದನ್ನು ನಾವು ಪ್ರಶ್ನೆ ಮಾಡಬೇಕಾಗಿದೆ ಅಲ್ವಾ? ಆ ಪ್ರಶ್ನೆ ಮಾಡುವ ಒಂದು ಧ್ವನಿಯಾಗಿ ಈ ಕನ್ನಯ್ಯನಂತಹ ಹುಡುಗ ನಮ್ಮಮುಂದೆ ಇರೋದ್ರಿಂದ ಅವನಿಗೆಆ ಬೆಂಬಲ ಸಿಗ್ತಾ ಇದೆ ಮತ್ತು ಆ ವಿದ್ಯಾರ್ಥಿ ಕೇವಲ ವಿದ್ಯಾರ್ಥಿಯಾಗಿಲ್ಲ.
ಅವನು ನಮ್ಮ ಸಾಮಾಜಿಕ ವಿವೇಕ ಮತ್ತು ಸಾಮಾಜಿಕ ಪ್ರಜ್ಞೆಯ ರೂಪಕವಾಗಿ ನಮಗೆಅವನು ಕಾಣಿಸ್ತಾ ಇದ್ದಾನೆ.ಅವನು ಆವೇಶದಲ್ಲಿ ಕೆಲವು ಮಾತುಗಳನ್ನು ಅಪ್ಪಿತಪ್ಪಿ ಮಾತಾಡಿರಬಹುದು, ನಾವೆಲ್ಲರೂ ಮಾತಾಡ್ತಾ ಇರ್ತೀವಿ, ಈಗಷ್ಟೇ ಮಾತಾಡಿದಂತಹ ಹಿರಿಯರಾದ ಕಾಗೋಡು ತಿಮ್ಮಪ್ಪನವರು ಅಂತಹ ಮಾತನ್ನು ಆಡಬಹುದು, ಅಷ್ಟು ವಯಸ್ಸಾದವರು. ಅದು ಮಾತು ಅದು ತಪ್ಪಿ ಆಡುವುದು ಬೇರೆ, ತಪ್ಪು ಮಾತಾಡುವುದೇ ಬೇರೆ, ತಪ್ಪಿ ಆಡಿದ ಮಾತನ್ನು ತಪ್ಪು ಮಾತಾಗಿ ಬದಲಾಯಿಸೋದಿದೆಯಲ್ಲಾ ಅದು ನಿಜವಾದ ದ್ರೋಹ ಮತ್ತು ಅದು ರಾಷ್ಟ್ರವಿರೋಧಿಯಾದಂತಹ ನಿಲುವು. ಹಾಗಾಗಿ ಈ ತಪ್ಪು ಮಾತನಾಡುವವರನ್ನು ಬಿಟ್ಟು ತಪ್ಪಿ ಆಡಿದ ಮಾತಿನ ಬಗೆಗೆ ತಪ್ಪಿಸ್ಥರನ್ನಾಗಿ ಮಾಡುವ ತಪ್ಪು ಅಂತ ತೋರಿಸುವಂತಹ ಮನೋಧರ್ಮ ಇದೆಯಲ್ಲಾ ಅದನ್ನು ಖಂಡಿಸಬೇಕು, ಅದನ್ನು ವಿರೋಧಿಸಬೇಕು.
ಆ ನಿಟ್ಟಿನಲ್ಲಿ ಅಂಬೇಡ್ಕರ್ ನಮಗೆ ಮುಖ್ಯವಾಗಬೇಕು. ಅಂಬೇಡ್ಕರರ ತಿಳುವಳಿಕೆ ನಮಗೆ ಮುಖ್ಯವಾಗಬೇಕು ಮತ್ತು ಹಾಗೆ ನಾವು ಬದುಕಬೇಕು. ಹಾಗೆ ಬದುಕುವುದಕ್ಕೆ ಬೇಕಾಗಿರುವ ಚಿಂತನೆಗಳನ್ನು ದಾರಿಗಳನ್ನು ಅಂಬೇಡ್ಕರರು ನಮಗೆ ಕಲ್ಪಿಸಿ ಕೊಟ್ಟಿದ್ದಾರೆ. ಹಾಗಾಗಿ ಅಂಬೇಡ್ಕರರು ನಮಗೆ ಹೆಚ್ಚುಪ್ರಸ್ತುತವಾಗ್ತಾ ಇದ್ದಾರೆ. ಅವರ ಚಿಂತನೆಗಳು ಹೆಚ್ಚು ಪ್ರಸ್ತುತವಾಗ್ತಾ ಇವೆ. ಅವರು ಇನ್ನು ಮುಂದೆ ನಮ್ಮ ದೇಶಕ್ಕೆ ಮತ್ತು ಬಹುತೇಕ ಜಗತ್ತಿನ ಬೇರೆ ಬೇರೆ ದೇಶಗಳಿಗೆ ಮಾದರಿಯಾಗಬಲ್ಲರು. ಅವರ ಚಿಂತನೆಗಳು ಮಾದರಿಯಾಗಬಲ್ಲವು.ಹಾಗಾಗಿ ಅವರೆಲ್ಲರಿಗೂ ಮಾದರಿಯಾಗುವುದಕ್ಕಿಂತ ಮೊದಲು ನಾವು ಅಂಬೇಡ್ಕರರ ದಾರಿಯಲ್ಲಿ ನಡೆಯುವ ಅಂಬೇಡ್ಕರರ ಚಿಂತನೆಗಳನ್ನು ರೂಢಿಸಿಕೊಳ್ಳೋಣ. ಆ ಚಿಂತನೆಗಳನ್ನು ರೂಢಿಸಿಕೊಳ್ಳೋದಕ್ಕೆ ಆ ದಾರಿ ಕಂಡುಕೊಳ್ಳುವುದಕ್ಕೆ ಕೇವಲ ಈ ತರಹದ ಬಯಲಿನಲ್ಲಿ ಷಾಮಿಯಾನ ಹಾಕಿ ಚಿಂತನೆಗಳನ್ನು ಮಾಡುವುದಕ್ಕಿಂತ ಶಾಲೆಗಳಿಗೆ, ಕಾಲೇಜುಗಳಿಗೆ ಹೋಗಿ ಅಂಬೇಡ್ಕರರ ಬಗ್ಗೆ ವಿಶೇಷ ಉಪನ್ಯಾಸ ಕೊಡುವ ಅಂಬೇಡ್ಕರರ ವ್ಯಕ್ತಿತ್ವ ಪರಿಚಯಿಸುವ ಅವರ ಚಿಂತನೆಗಳನ್ನು ಹರಡುವ ನಿಟ್ಟಿನಲ್ಲಿ ಈ ದಿನಾಚರಣೆಗಳು, ಕಾರ್ಯಕ್ರಮಗಳು ಹೆಚ್ಚು ಸೂಕ್ತ, ಹೆಚ್ಚು ಪ್ರಸ್ತುತ ಮತ್ತು ಸಮಂಜಸವಾದ ಕ್ರಿಯೆ.
ಏಕೆಂದರೆ, ಈ ದಿನವನ್ನು ವಿಶ್ವದ ಜ್ಞಾನದ ದಿನವನ್ನಾಗಿ ಪರಿಗಣಿಸಿದ್ದಾರೆ. ಕಾರಣ ವಿಶ್ವದ ಜ್ಞಾನವನ್ನು ವೃದ್ಧಿಸುವ, ವಿಶ್ವದ ಜ್ಞಾನವನ್ನು ಬೆಳೆಸುವ, ವಿಶ್ವದ ಜ್ಞಾನದ, ವಿವೇಕದ ಪರಿಧಿಯನ್ನು ವಿಸ್ತರಿಸುವ ಕ್ರಮವಾಗಿ ಅವರು ನಮಗೆ ಸಿಕ್ಕಿರುವುದರಿಂದ ಅದನ್ನು ನಾವು ಹಾಗೆ ಪರಿಗಣಿಸಬೇಕು.ಅವರು ಕೇವಲ ನಮ್ಮ ನಿಮ್ಮಂತೆ ಭಾಷಣ ಮಾಡಿಲ್ಲ. ಸ್ಥೂಲವಾಗಿ ಸಂಶೋಧನೆ ಮಾಡಿಅಧ್ಯಯನ ಶಿಸ್ತಿನಿಂದ ಶ್ರದ್ಧೆಯಿಂದ ಅಧ್ಯಯನ ಮಾಡಿ ಎಲ್ಲ ಚಿಂತನೆಗಳನ್ನುಹರಡಿದ್ದಾರೆ. ಅವರು ಕೇವಲ ಒಂದು ರಾಜಕೀಯ ಭಾಷಣ ಮಾಡಿದ ಚಿಂತನೆಗಳಲ್ಲ. ಅದಕ್ಕೆ ಹೆಚ್ಚು ಶ್ರಮವಿದೆ, ಹೆಚ್ಚು ಅಧ್ಯಯನವಿದೆ ಮತ್ತು ಹೆಚ್ಚು ಸಂಶೋಧನೆಯನ್ನು ಮಾಡಿ ತಮ್ಮೆಲ್ಲ ಚಿಂತನೆಗಳನ್ನು ಮಾಡಿದ್ದಾರೆ. ಅದು ಅಸ್ಪೃಶ್ಯತೆ ನಿವಾರಣೆಯಿರಬಹುದು, ಅಲ್ಪಸಂಖ್ಯಾತರು ಮತ್ತು ಪ್ರಭುತ್ವವಿರಬಹುದು, ಕ್ರಾಂತಿ ಮತ್ತು ಪ್ರತಿಕ್ರಾಂತಿಯಿರಬಹುದು,ಮತ್ತು ಹೆಣ್ಣುಮಕ್ಕಳ ಬಗೆಗಿನ ಚಿಂತನೆಯಿರಬಹುದು, ಬುದ್ಧನ ಬಗೆಗಿನ ಚಿಂತನೆಯಿರಬಹುದು, ಧರ್ಮದ ಬಗೆಗಿನ ಚಿಂತನೆಯಿರಬಹುದು, ಒಟ್ಟು ಈ ದೇಶದ ರಾಜಕಾರಣದ ಬಗೆಗಿನ ಚಿಂತನೆಯಿರಬಹುದು, ಸಂವಿಧಾನದ ತತ್ವಗಳಿರಬಹುದು, ನಿಯಮಗಳಿರಬಹುದು ಈ ಎಲ್ಲವೂಗಳು ಕೂಡಾ ಅವರ ಅಧ್ಯಯನದ ಫಲ ಮತ್ತು ಶ್ರಮದ ಫಲ. ಆ ಶ್ರಮ ಮತ್ತು ಅಧ್ಯಯನದಫಲ ನಮ್ಮೆಲ್ಲರಿಗೂ ದಕ್ಕಬೇಕು, ಆ ನಿಟ್ಟಿನಲ್ಲಿ ನಾವೆಲ್ಲರೂ ಬದುಕಬೇಕು, ಆ ರೀತಿ ಬದುಕುವುದಕ್ಕೆ ಅದು ಒತ್ತಾಸೆಯಾಗಿರಬೇಕು, ಊರುಗೋಲಾಗಿರಬೇಕು ಅಂತ ಹೇಳಿ ನನ್ನ ಮಾತುಗಳನ್ನು ಮುಗಿಸುತ್ತೇನೆ.ಎಲ್ಲರಿಗೂ ಧನ್ಯವಾದಗಳು.
#supportಮೇಟಿಮಲ್ಲಿಕಾರ್ಜುನ