ಜಾನಪದ ಅಕಾಡೆಮಿಯ ಮುಂದಿರುವ ಪ್ರಶ್ನೆಗಳು
ಹಿಂದಿನ ಅಧ್ಯಕ್ಷರಾದ ಗೋ.ರು. ಚನ್ನಬಸಪ್ಪ ಅವರು ಜಾನಪದದ ಸಾಂಪ್ರದಾಯಿಕ ತಿಳುವಳಿಕೆಯ ಚೌಕಟ್ಟಿನಲ್ಲೇ ಕೆಲವು ಒಳ್ಳೆಯ ಕೆಲಸಗಳನ್ನು ಮಾಡಿದ್ದಾರೆ. ಜಾನಪದ ಕಲಾವಿದರ ಕ್ಷೇಮಾಭಿವೃದ್ಧಿ ನಿಧಿ ಒಳಗೊಂಡಂತೆ, ಜಾನಪದ ವಿಶ್ವವಿದ್ಯಾಲಯ ಸ್ಥಾಪನೆ, ಅಖಿಲ ಭಾರತ ಜಾನಪದ ಸಮ್ಮೇಳನ, ಜಾನಪದ ನಿಘಂಟು ರಚನೆ ಮುಂತಾದವುಗಳನ್ನು ಹೆಸರಿಸಬಹುದು. ಒಟ್ಟಾರೆ ಜಡವಾಗಿದ್ದ ಅಕಾಡೆಮಿಗೆ ಒಂದು ಚಲನೆಯನ್ನು ಗೊ.ರು.ಚ ತಂದಿದ್ದರು.
ಜಾನಪದದ ಬಗೆಗಿನ ಸಾಂಪ್ರದಾಯಿಕ ತಿಳುವಳಿಕೆಯಲ್ಲೇ ಅಕಾಡೆಮಿಯ ಬಹುಪಾಲು ಕೆಲಸ ಕಾರ್ಯಗಳು ನಡೆದಿವೆ. ಆದರೆ ಇಂದು ಜಾನಪದ ಬಗೆಗಿನ ಸಾಂಪ್ರದಾಯಿಕ ತಿಳುವಳಿಕೆಯಿಂದ ಹೊರಬರುವ ಅಗತ್ಯವಿದೆ. ಜನಸಮುದಾಯಗಳ ಒಡನಾಟದ ಹೊಸ ವಲಯಗಳ ಒಳಗೂ ಹೊಸ ಜಾನಪದ ಹುಟ್ಟುತ್ತಿದೆ.
ಉದಾ: ಬೆಂಗಳೂರಿನಲ್ಲಿ ಬೇರೆ ಬೇರೆ ಕೆಲಸಗಳಿಗೆ ವಲಸೆ ಬಂದ ಉತ್ತರ ಕರ್ನಾಟಕ, ಹೈದರಾಬಾದ್ ಕರ್ನಾಟಕದ ಜನರನ್ನು ಮಾತನಾಡಿಸಿದರೆ, ಅವರದೇ ಆದ ಬೆಂಗಳೂರು ಕಥನವನ್ನು ಕಟ್ಟಿಕೊಡುತ್ತಾರೆ. ಇದು ಮಿರಿಮಿರಿ ಮಿಂಚುವ ಬೆಂಗಳೂರಿನ ಅಬ್ಬರದ ಚಿತ್ರಕ್ಕಿಂತ ಬೇರೆಯದೇ ಆದ ಚಿತ್ರವನ್ನು ಕೊಡುತ್ತದೆ. ಇಂತಹದ್ದೇ ಅನೇಕ ಉದಾಹರಣೆಗಳನ್ನು ಕೊಡಬಹುದು.
ಜಾಗತಿಕವಾಗಿಯೂ ಜಾನಪದ ಅಧ್ಯಯನಗಳು ಈ ಬಗೆಯ ಸಾಂಪ್ರದಾಯಿಕ ಸಂಗತಿಗಳಾಚೆಯೂ ಚಲಿಸಿದೆ. ಇಂಟರ್‌ನೆಟ್‌ನಲ್ಲಿ ಹುಟ್ಟುವ ಜಾನಪದ, ಮಾಧ್ಯಮಗಳಲ್ಲಿ ಹುಟ್ಟುವ `ಸುದ್ದಿ ಜಾನಪದ` ಮುಂತಾದ ಹೊಸ ಸಂಗತಿಗಳ ಕಡೆ ಗಮನ ನೆಟ್ಟಿವೆ. `ಫೋಕ್ ಹೈಸ್ಕೂಲ್` ಮೂಲಕ ಒಂದು ಜನಪದ ಶಿಕ್ಷಣ ಪದ್ದತಿಯನ್ನೇ ರೂಪಿಸಿವೆ. ಇಂತಹ ಎಲ್ಲಾ ಬಗೆಯ ಚಲನೆಗಳನ್ನು ಗಮನಿಸುತ್ತಲೇ ಕನ್ನಡ ಜಾನಪದದ ತಿಳುವಳಿಕೆಯನ್ನು ಪುನರ್ ನಿರ್ವಚಿಸಿಕೊಳ್ಳಬೇಕಿದೆ.
ಜಾನಪದ ಕಲಾವಿದರಿಗೂ, ಶಾಸ್ತ್ರೀಯ ಕಲಾವಿದರಿಗೂ ಇರುವ ಸಂಭಾವನೆಯ ನೆಲ ಮುಗಿಲಿನಂತರವನ್ನು ಬದಲಿಸಬೇಕಾಗಿದೆ. ಜನಪದ ಕಲಾವಿದರನ್ನು ಕಾರ್ಯಕ್ರಮಗಳಿಗೆ ಆಹ್ವಾನಿಸುವವರಿಗೆ ಒಂದು ಕಲೆಗೆ, ಕಲಾವಿದರಿಗೆ ಈ ಕಾಲಮಾನಕ್ಕೆ ತಕ್ಕ ಹಾಗೆ ಇಂತಿಷ್ಟು ಗೌರವಯುತವಾದ ಸಂಭಾವನೆಯನ್ನು ನಿಗದಿ ಮಾಡಬೇಕಾಗಿದೆ. ಅವರನ್ನು ನಡೆಸಿಕೊಳ್ಳುವ ಬಗ್ಗೆಯೂ ನೀತಿ ಸಂಹಿತೆಯನ್ನು ರೂಪಿಸಬೇಕಿದೆ.
ಅಂತೆಯೇ ಒಂದು ಕಲೆಯ ಒಂದೇ ತಂಡವನ್ನೇ ಎಲ್ಲಾ ಕಡೆ ಸವಲತ್ತೀಕರಿಸುವ ಬದಲು ಅದೇ ಕಲಾಪ್ರಕಾರದ ಪ್ರಾದೇಶಿಕ ಭಿನ್ನತೆಗಳನ್ನು ಆಯ್ದುಕೊಳ್ಳಬೇಕಾಗಿದೆ. ಮುಖ್ಯವಾಗಿ ಜಾನಪದ ಕಲಾವಿದರಿಗೆ ಮಾಸಾಶನ ದೊರೆಯುವ ವಯಸ್ಸನ್ನು ಕಡಿತಗೊಳಿಸುವ ಅಗತ್ಯವಿದೆ. ಕಾರಣ ಈಗಿರುವ ಅರವತ್ತು ವರ್ಷದ ಅವಧಿಯನ್ನು ಪೂರೈಸುವುದೇ ದೊಡ್ಡ ಸಂಗತಿಯಾಗಿದೆ.
ಕರ್ನಾಟಕದಲ್ಲಿಯೇ ಜಾನಪದ ಭಿನ್ನವಾಗಿ ಹೊಸ ನಡಿಗೆ ಕಂಡಿದೆ. ಮಹಿಳೆಯರು ಜನಪದ ಕಲೆಗಳಿಗೆ ಪ್ರವೇಶ ಪಡೆಯುತ್ತಿದ್ದಾರೆ. ಅಂತೆಯೇ ಕೆಲವು ಹಳ್ಳಿಗಳ ಮಹಿಳಾ ಸಂಘಗಳು ಒಂದೊಂದು ಜನಪದ ಕಲೆಯನ್ನು ಕಲಿತು ಬೇರೆ ಬೇರೆ ಕಡೆ ಪ್ರದರ್ಶನ ಮಾಡುತ್ತಿವೆ. ಮುಖ್ಯವಾಗಿ ಗ್ರಾಮೀಣ ಯುವ ಪಡೆ ಜಾನಪದಕ್ಕೆ ಪ್ರವೇಶಿಸುತ್ತಿದೆ.
ಈ ಬಗೆಯ ಜಾನಪದದ ಹೊಸ ಚಲನೆಯನ್ನು ಗಮನದಲ್ಲಿಟ್ಟುಕೊಂಡು ಕಾರ್ಯಕ್ರಮಗಳನ್ನು ರೂಪಿಸಬೇಕಾಗಿದೆ. ಗುಡಿಕೈಗಾರಿಕೆಯನ್ನು ಅಭಿವೃದ್ಧಿಪಡಿಸುವ ಹಾಗೆ ಯುವಕರಿಗೆ ಜನಪದ ಕಸಬುಗಳನ್ನು ಆಧರಿಸಿದ ಸ್ವಉದ್ಯೋಗ ತರಬೇತಿಗಳನ್ನು ಮಾಡಿಸಬಹುದಾಗಿದೆ.
ನಾಟಕದ ರೆಪರ್ಟರಿಗಳ ಹಾಗೆ ರಾಜ್ಯದಾದ್ಯಂತ ಸಂಚರಿಸುವ ವಿವಿಧ ಜನಪದಕಲೆಗಳ ರೆಪರ್ಟರಿಗಳನ್ನು ಮಾಡುವ ಅಗತ್ಯವಿದೆ. ಮುಖ್ಯವಾಗಿ ಜಾನಪದವನ್ನು ಮೋಹಿಸುವ ಸಂಶೋಧನೆಗಿಂದ ಜಾನಪದವನ್ನು ವಿಮರ್ಶಾತ್ಮಕವಾಗಿ ಮಂಡಿಸುವ ಸಂಶೋಧನೆಗಳಿಗೆ, ಜಾನಪದವನ್ನು ಮ್ಯೂಜಿಯಂ ನ ಐಟಮ್ ಆಗಿ ನೋಡುವ ಚಿಂತನಾ ಕ್ರಮಗಳಿಗಿಂತ ಅದನ್ನೊಂದು ಚಲನಶೀಲ ಸಂಗತಿಯನ್ನಾಗಿ ನೋಡುವ ಸಂಶೋಧನೆಗಳಿಗೆ ಸೆಮಿನಾರುಗಳಲ್ಲಿ ಹೆಚ್ಚಿನ ಆದ್ಯತೆ ಕೊಡಬೇಕಾಗಿದೆ. ಆಯಾ ಜಿಲ್ಲಾ ಸಂಸ್ಕೃತಿ ಇಲಾಖೆಯನ್ನು ಆಯಾ ಭಾಗದ ಜಾನಪದದ ಹೊಸ ಚಲನೆಯನ್ನು ಗುರುತಿಸುವ ಹಾಗೆ ಕಾರ್ಯಕ್ರಮಗಳನ್ನು ರೂಪಿಸಬೇಕಾಗಿದೆ.
ಜಾನಪದ ಅಕಾಡೆಮಿಯ ವೆಬ್‌ಸೈಟ್ ಇದೆ. ಇದು ಆರಂಭವಾದದ್ದು ಬಿಟ್ಟರೆ ಈವರೆಗೂ ಅದು ಅಪ್‌ಡೇಟ್ ಆಗಿಲ್ಲ. ಅಕಾಡೆಮಿಯ ಎಲ್ಲಾ ಬಗೆಯ ಕೆಲಸ ಕಾರ್ಯಗಳನ್ನು ಬಿಂಬಿಸುವಂತೆ ವೆಬ್‌ಸೈಟ್‌ನ್ನು ಅಭಿವೃದ್ಧಿಪಡಿಸಬೇಕಿದೆ. ಜಾನಪದ ಅಕಾಡೆಮಿ ಪ್ರಕಟಿಸಿದ ಪುಸ್ತಕಗಳ ಇ ಪ್ರತಿಗಳು ವೆಬ್‌ಸೈಟಿನಲ್ಲಿ ಸಿಗುವಂತಾಬೇಕು. ಈಗಿರುವ ತಂತ್ರಜ್ಞಾನದ ಎಲ್ಲಾ ಅವಕಾಶಗಳನ್ನು ಅಕಾಡೆಮಿ ಜರೂರಾಗಿ ಬಳಸಿಕೊಳ್ಳುವ ಅಗತ್ಯವಿದೆ. ಜಾನಪದ ಕಲೆಗಳ ವಿಡಿಯೋ ಕ್ಲಿಪಿಂಗ್‌ನ್ನು `ಯೂಟ್ಯೂಬ್` ನಲ್ಲಿ ಸಿಗುವಂತೆ ಮಾಡಬಹುದಾಗಿದೆ.
ಅಂತೆಯೇ ಪ್ರತಿ ಕಲೆಯ ಕಲಾವಿದರ ಮಾಹಿತಿಯನ್ನು ನೀಡಬಹುದಾಗಿದೆ. ಕರ್ನಾಟಕ ಜಾನಪದ ವಿಶ್ವವಿದ್ಯಾಲಯವು ಆರಂಭವಾಗಿರುವುದರಿಂದ, ಪುನರಾವರ್ತನೆಯಾಗದಂತೆ ಪ್ರತ್ಯೇಕವಾಗಿ ಜಾನಪದ ಅಕಾಡೆಮಿಯ ಕೆಲಸಗಳ ಸ್ವರೂಪದ ಬಗ್ಗೆಯೂ ಖಚಿತಪಡಿಸಿಕೊಳ್ಳಬೇಕಿದೆ.
ಕರ್ನಾಟಕದ ಜನಪದ ಕಲೆಗಳಿಗೆ ಯುನೆಸ್ಕೋ ಮನ್ನಣೆ ದೊರೆಯುವಂತೆ ಮಾಡಬೇಕಾಗಿರುವುದು ಇಂದಿನ ಅಗತ್ಯಗಳಲ್ಲಿ ಒಂದಾಗಿದೆ. ವಿಶ್ವಸಂಸ್ಥೆಯ ಭಾಗವಾದ ಯುನೆಸ್ಕೋ ಅಳಿದು ಹೋಗುತ್ತಿರುವ ಕಲೆಗಳ ಪುನರುಜ್ಜೀವನಕ್ಕೆ ವಿಶೇಷ ಅನುದಾನ ನೀಡುತ್ತಿದೆ. ಈ ಅನುದಾನವು ಜಗತ್ತಿನ ಅನೇಕ ನತದೃಷ್ಟ ಕಲೆಗಳಿಗೆ ಜೀವದಾನ ಮಾಡಿದೆ.
ಭಾರತದ ಪೂರ್ವ ಭಾಗದಲ್ಲಿ ವಿಶೇಷವಾಗಿ ಪಶ್ಚಿಮ ಬಂಗಾಳ-ಓಡಿಶಾ ಗಡಿಪ್ರಾಂತದಲ್ಲಿ ಪ್ರಚಲಿತದಲ್ಲಿರುವ ಆಕರ್ಷಕ ಚಾವು ಕುಣಿತ, ಕೇರಳದ ಚಿತ್ತಾಕರ್ಷಕ ಮುಡಿಯೇಟ್ಟು, ಮತ್ತು ರಾಜಸ್ಥಾನದ ಕಲಬೇಲಾ ಜನಪದ ಕಲೆಗಳನ್ನು ಯುನೆಸ್ಕೊ ಈಚೆಗೆ ಮನುಕುಲ ಸೃಜಿಸಿದ ಅಪೂರ್ವ ಕಲಾಪ್ರಕಾರಗಳು ಎಂದು ಗುರುತಿಸಿ, ಅವುಗಳ ಪುನರುತ್ಥಾನಕ್ಕೆ ಮಾರ್ಗಸೂಚಿಯನ್ನು ಸಿದ್ಧಪಡಿಸುತ್ತಿದೆ.
ಕೇರಳದ ಕುಟಿಯಾಟ್ಟಂ` ಎಂಬ ಪ್ರಾಚೀನ ಕಲೆಗೆ 2000ನೇ ಇಸವಿಯಲ್ಲಿ ಯುನೆಸ್ಕೋ ಮನ್ನಣೆ ನೀಡಿ, ಮನುಕುಲದ ಅತ್ಯಂತ ಪ್ರಶಸ್ತ ಕಲೆ` ಎಂದು ಘೋಷಿಸಿತು.10 ವರ್ಷಗಳಲ್ಲಿ ಕುಟಿಯಾಟ್ಟಂನ ಸಂರಕ್ಷಣೆಗೆ ಸುಮಾರು 90 ಕೋಟಿ ರೂಪಾಯಿಗಳಷ್ಟು ಬಿಡುಗಡೆ ಆಗಿದೆ.
ಆದರೆ ಕರ್ನಾಟಕದ ಯಾವುದೇ ಕಲೆಗೆ ಇಂಥ ಮನ್ನಣೆ ದೊರೆತಿಲ್ಲ. ಹಾಗೆ ದೊರೆಯುವಂತೆ ಮಾಡುವ ಗಂಭೀರ ಪ್ರಯತ್ನಗಳೂ ನಡೆದಿಲ್ಲ. ಹೀಗೆ ಮಾಡಲು ಯುನೆಸ್ಕೊ ಬಿಡುಗಡೆ ಮಾಡಿದ ನಿಗದಿತ ಅರ್ಜಿ ಫಾರಂ ಒಂದನ್ನು ಬಹಳ ಎಚ್ಚರಿಕೆಯಿಂದ ತುಂಬುವುದು. ಮತ್ತು ಯಾವ ಕಲೆಯ ಬಗ್ಗೆ ಬೇಡಿಕೆ ಸಲ್ಲಿಸಲಾಗುವುದೋ ಆ ಕಲೆಯ ಬಗ್ಗೆ ಐದರಿಂದ ಆರು ನಿಮಿಷಗಳ ಅವಧಿಯ ಒಳ್ಳೆಯ ಸಾಕ್ಷ್ಯಚಿತ್ರವೊಂದನ್ನು ಅರ್ಜಿ ಜೊತೆ ಲಗತ್ತೀಕರಿಸುವುದು.
ಇದು ಸರಳವಾದ ಕೆಲಸವೇನಲ್ಲ, ಸವಾಲಿನದ್ದು. ಇಂತಹ ಕೆಲಸವನ್ನು ಜಾನಪದ ಅಕಾಡೆಮಿಯು ಮಾಡಬೇಕಾಗಿದೆ. ಈ ಬಗ್ಗೆ ಜಾನಪದ ವಿದ್ವಾಂಸ ಡಾ.ಪುರುಷೋತ್ತಮ ಬಿಳಿಮಲೆ ಅವರು ಕೆಲ ತಿಂಗಳುಗಳ ಹಿಂದೆ ಗಮನ ಸೆಳೆದಿದ್ದರು.
ಹೀಗೆ ಕರ್ನಾಟಕ ಜಾನಪದ ಅಕಾಡೆಮಿಯ ನೂತನ ಅಧ್ಯಕ್ಷರಾದ ಬಾನಂದೂರು ಕೆಂಪಯ್ಯ ಅವರ ಮುಂದೆ ಇಂತಹ ಹತ್ತಾರು ಪ್ರಶ್ನೆಗಳು ಎದುರಾಗುತ್ತವೆ. ಅದನ್ನು ಅವರು ಹೇಗೆ ನಿಭಾಯಿಸುತ್ತಾರೆಂದು ಕಾಯ್ದು ನೋಡಬೇಕಾಗಿದೆ.