ಬುಧವಾರ, ಜೂನ್ 13, 2012

16ರಂದು ಜಾನಪದ ವಿವಿ ಉದ್ಘಾಟನೆ


16ರಂದು ಜಾನಪದ ವಿವಿ ಉದ್ಘಾಟನೆ


ಕೃಪೆ: ಪ್ರಜಾವಾಣಿ

ಕರ್ನಾಟಕ ಜಾನಪದ ವಿಶ್ವವಿದ್ಯಾಲಯವು ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲ್ಲೂಕಿನ ಗೊಟಗೋಡಿಯಲ್ಲಿ ಈ ತಿಂಗಳ 16ರಿಂದ ವಿಧ್ಯುಕ್ತವಾಗಿ ಕಾರ್ಯಾರಂಭ ಮಾಡಲಿದೆ.

`ಅಂದು ನಡೆಯುವ ಸಮಾರಂಭದಲ್ಲಿ ಜಾನಪದ ವಿ.ವಿ.ಯನ್ನು ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಉದ್ಘಾಟಿಸುವರು` ಎಂದು ಕುಲಪತಿ ಪ್ರೊ.ಅಂಬಳಿಕೆ ಹಿರಿಯಣ್ಣ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

`ಗೊಟಗೋಡಿಯಲ್ಲಿ ಪ್ರವಾಸೋದ್ಯಮ ಇಲಾಖೆಯು ನಿರ್ಮಿಸಿರುವ ಹೆದ್ದಾರಿ ಸೌಲಭ್ಯ ಕಟ್ಟಡವನ್ನು ಬಾಡಿಗೆ ಆಧಾರದ ಮೇಲೆ ಪಡೆದುಕೊಂಡಿದ್ದು, ಆ ಕಟ್ಟಡದಲ್ಲಿ ವಿ.ವಿ.ಯ ಕೇಂದ್ರ ಕಾರ್ಯಾಲಯದ ಚಟುವಟಿಕೆಗಳಿಗೆ ಚಾಲನೆ ನೀಡಲಾಗುವುದು.
ಅದೇ ದಿನ ವಿ.ವಿ.ಯ ಕಟ್ಟಡಗಳ ನಿರ್ಮಾಣ ಕಾರ್ಯಕ್ಕೆ ಶಂಕುಸ್ಥಾಪನೆ ನೆರವೇರಿಸಲಾಗುವುದು. 45.35 ಎಕರೆ ಜಾಗದಲ್ಲಿ ವಿ.ವಿ.ಯ ವಿವಿಧ ಕಟ್ಟಡಗಳ ನಿರ್ಮಾಣ ಕಾರ್ಯವನ್ನು ಹದಿನಾರು ತಿಂಗಳಲ್ಲಿ ಪೂರ್ಣಗೊಳಿಸುವ ಗುರಿ ಇದೆ. ಇದಕ್ಕಾಗಿ ಮೊದಲ ಹಂತದಲ್ಲಿ ಸರ್ಕಾರ ರೂ. 7.5 ಕೋಟಿ ಅನುದಾನ ಮಂಜೂರು ಮಾಡಿದೆ` ಎಂದು ಅವರು ಹೇಳಿದರು.

`ನಮ್ಮ ವಿ.ವಿ.ಯು ವಿಶ್ವದಲ್ಲೇ ಮೊದಲ ಬಾರಿಗೆ ಅಸ್ತಿತ್ವಕ್ಕೆ ಬಂದಿರುವ ಜಾನಪದ ವಿ.ವಿ. ಆಗಿದೆ. ಆರು ವಿಭಾಗಗಳ ಅಡಿಯಲ್ಲಿ 17 ಸ್ನಾತಕೋತ್ತರ (ಎಂ.ಎ., ಎಂ.ಎಸ್ಸಿ, ಎಂ.ಬಿ.ಎ.) ಕೋರ್ಸ್‌ಗಳನ್ನು ಪ್ರಾರಂಭಿಸುವ ಉದ್ದೇಶವಿದೆ. ಈ ಕೋರ್ಸುಗಳ ಪಠ್ಯಕ್ರಮಗಳನ್ನು ವಿಶ್ವವಿದ್ಯಾಲಯ ಧನಸಹಾಯ ಆಯೋಗದ ಮಾರ್ಗಸೂಚಿ ಅಂಶಗಳ ಆಧಾರದಲ್ಲಿ ಸಿದ್ಧಪಡಿಸಿ, ಕುಲಾಧಿಪತಿಯವರ ಅಂಕಿತಕ್ಕೆ ಕಳುಹಿಸಿಕೊಡಲಾಗಿದೆ` ಎಂದು ಅವರು ವಿವರಿಸಿದರು.

`ಸ್ನಾತಕೋತ್ತರ ಕೋರ್ಸ್‌ಗಳಲ್ಲದೇ 10 ಸರ್ಟಿಫಿಕೇಟ್, 3 ಡಿಪ್ಲೊಮಾ ಕೋರ್ಸುಗಳಿಗೂ ಪಠ್ಯಕ್ರಮವನ್ನು ಸಿದ್ಧಪಡಿಸಿಟ್ಟುಕೊಳ್ಳಲಾಗಿದೆ. ವಿ.ವಿ.ಯು ಪಾರಂಪರಿಕ ಜ್ಞಾನ ಪದ್ಧತಿಗಳನ್ನು ಪುನಶ್ಚೇತನಗೊಳಿಸುವ ಹಾದಿಯಲ್ಲಿ ಅಂತಹ ಜ್ಞಾನಗಳ ರಕ್ಷಣೆ ಮತ್ತು ಸಂವರ್ಧನೆಗಾಗಿ ಶ್ರಮಿಸಲಿದೆ. 

ಜಿಲ್ಲೆಗೊಂದರಂತೆ 30 ಕಿರು ಸಂಶೋಧನೆ ನಡೆಸಲು ಆಸಕ್ತರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಕಿರು ಸಂಶೋಧನಾರ್ಥಿಗಳನ್ನು ಪ್ರವೇಶ ಪರೀಕ್ಷೆ ಮೂಲಕ ಆಯ್ಕೆ ಮಾಡಲಾಗುವುದು` ಎಂದು ಅವರು ಹೇಳಿದರು.

`ಒಟ್ಟು 449 ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ನೇಮಕಾತಿಗೆ ಅನುಮೋದನೆ ನೀಡುವಂತೆ ಸರ್ಕಾರವನ್ನು ಕೇಳಿಕೊಳ್ಳಲಾಗಿತ್ತು. 

ಆದರೆ ಸರ್ಕಾರ 21 ಬೋಧಕ ಮತ್ತು 35 ಬೋಧಕೇತರ ನೌಕರರ ನೇಮಕಾತಿಗೆ ಮಂಜೂರಾತಿ ನೀಡಿದೆ. ವಿ.ವಿ.ಯೇ ನೇರವಾಗಿ ವರ್ಷಕ್ಕೆ ಮೂವರು ಜನಪದ ಕಲಾವಿದರನ್ನು ನೇಮಕ ಮಾಡಿಕೊಳ್ಳಬಹುದಾಗಿದೆ. ಬೀದರ್, ಉಡುಪಿ ಸೇರಿದಂತೆ ರಾಜ್ಯದ ಆರು ಕಡೆ ಪ್ರಾದೇಶಿಕ ಕೇಂದ್ರಗಳನ್ನು ಸ್ಥಾಪಿಸಲಾಗುವುದು` ಎಂದು ಅವರು ತಿಳಿಸಿದರು.

ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಗೊ.ರು.ಚನ್ನಬಸಪ್ಪ, ಕುಲಸಚಿವ ಪ್ರೊ.ಸಿ.ಎ.ಸೋಮಶೇಖರಪ್ಪ ಸೇರಿದಂತೆ ಇತರರು ಗೋಷ್ಠಿಯಲ್ಲಿ ಹಾಜರಿದ್ದರು.

ಕಾಮೆಂಟ್‌ಗಳಿಲ್ಲ: