ಮಂಗಳವಾರ, ಜೂನ್ 12, 2012

ಹಾಲು, ಹುತ್ತ, ಲಿಂಗ ಮತ್ತು ಹಸುಗಳ ಕತೆ


  
– ಪುರುಷೋತ್ತಮ ಬಿಳಿಮಲೆ
 ನನ್ನ ಹುಟ್ಟೂರಾದದಕ್ಷಿಣಕನ್ನಡಜಿಲ್ಲೆಯ ಸುಳ್ಯ ತಾಲೂಕಿನಲ್ಲಿ ಪಂಜ ಎಂಬ ಪುಟ್ಟಊರಿದೆ. ಅಲ್ಲಿನಎಡಮಂಗಲ ಎಂಬ ಹಳ್ಳಿಯಲ್ಲಿ ಹರಿಯುವ ನದಿಯಒಂದು ಭಾಗಕ್ಕೆ ನಾಕೂರುಗಯ ಎಂದು ಹೆಸರು. ಅಲ್ಲಿಜನಪ್ರಿಯವಾಗಿರುವಐತಿಹ್ಯವೊಂದುಇಂತಿದೆ-
    ಬಹಳ ಹಿಂದೆಇಲ್ಲಿದನಕಾಯುವ ಹುಡುಗನೊಬ್ಬನಿದ್ದ.ದನಗಳನ್ನು ಮೇಯಿಸಿ ಸಾಯಂಕಾಲ ಹಟ್ಟಿಗೆ ದನಗಳನ್ನು ಹೊಡೆದುಕೊಂಡು ಬರುವುದು ಅವನ ದಿನನಿತ್ಯದ ಕೆಲಸ. ಒಂದು ದಿನ ದನಗಳ ಯಜಮಾನ ಕಾವಲಿನ ಹುಡುಗನನ್ನು ಗದರಿಸಿ-’ಕಪಿಲೆ ದನದ ಕೆಚ್ಚಲು ಬರಿದಾಗಿದೆ. ಕಾಡಿನಲ್ಲಿ ದನಗಳನ್ನು ಮೇಯಿಸುವುದು ಬಿಟ್ಟು ಹಾಲು ಕುಡಿಯಲುಕಲಿತಿದ್ದೀಯಾ….?’ಎಂದು ನಾಲ್ಕು ಬಾರಿಸುತ್ತಾನೆ. ಮೂರನೇ ದಿವಸ ಹುಡುಗದನದ ಬೆನ್ನು ಹಿಡಿದು ಕಾಡೊಳಕ್ಕೆ ಸಾಗುತ್ತಾನೆ. ಕಪಿಲೆ ಕಾಡೊಳಕ್ಕೆ ಮುನ್ನುಗುತ್ತದೆ. ಹುಡುಗ ಮುಂದೆ ನೋಡುತ್ತಿರುವಂತೆದನವು ಪೊದರಿನಲ್ಲಿಅವಿತಿದ್ದ ಹುತ್ತವೊಂದಕ್ಕೆ ಹಾಲೂಡಿಸತೊಡಗುತ್ತದೆ. ಛಂಗನೆ ನೆಗೆದ ಹುಡುಗ ಕಪಿಲೆಯ ಬಾಲ ಹಿಡಿಯುತ್ತಾನೆ. ಆಗ ನೆಗೆದೋಡಿದ ಕಪಿಲೆಯು ನೇರವಾಗಿ ನಾಕೂರು ಹೊಳೆಗೆ ಹಾರಿತು. ಜೊತೆಗೆ ಹುಡುಗನನ್ನೂಕೊಂಡೊಯ್ದಿತು. ಹಾಗೆ ಕಪಿಲೆ ದನವು ಹುಡುಗನೊಡನೆ ಮರೆಯಾದಜಾಗದಲ್ಲಿ ಲಿಂಗರೂಪೀದೈವವೊಂದಿತ್ತು. ಆ ದೈವಕ್ಕೆಒಂದುಚಾವಡಿ (ಗುಡಿ)ಯೂಇತ್ತು. ಆದರೆ ಈಗ ಅದು ನದಿಯ ನಡುವೆ ಮುಳುಗಿ ಹೋಗಿರುವುದರಿಂದ ಬೇರೆಯವರಿಗೆಕಾಣಿಸುವುದಿಲ್ಲ. ಆದರೆ ನದಿಯಲ್ಲಿ ನೀರುಕಡಿಮೆಆದಾಗ, ಮಡಿವಂತರಿಗೆ ದೇವಳದ ಕಳಶ ಕಾಣಿಸುವುದುಂಟು. ಬೇಸಗೆಯಲ್ಲಿ ನಾನು ಏನಡ್ಕಕ್ಕೆ ಹೋದಾಗಲೆಲ್ಲ ಹೊಳೆಯಲ್ಲಿ ಗುಡಿಕಾಣಿಸುವಿದೇಅಂತಇಣಿಕಿ ನೋಡಿದ್ದುಂಟು.

    ಈಗಲೂ ಈ ಕತೆ ಹೇಳುವ ಜನರು ‘ನಾಕೂರುಗಯ’ವನ್ನು ಬೆರಳಿಂದ ತೋರಿಸಿ, ಲಿಂಗ-ಕಳಶ ಇರುವ ಸ್ಥಳವನ್ನು ನಿಸ್ಸಂಶಯವಾಗಿತೋರಿಸುತ್ತಾರೆ. ಕಪಿಲೆ, ಹಾಲು, ಹುಡುಗ, ಲಿಂಗ, ನೀರು, ಕಳಶಗಳ ನಿರೂಪಣೆಯು ನಮ್ಮ ಗಮನ ಸೆಳೆಯುತ್ತದೆ. ಯಾವುದೋ ಕೆಲಸಕ್ಕೆ ಹಾವೇರಿಗೆ ಹೋಗಿದ್ದಾಗಅಲ್ಲೊಂದುಇಂತದ್ದೇಕತೆ ಕೇಳಿದ್ದೆ- ದನವೊಂದು ಮೇಯಲು ಹೋದಾಗ, ಕಾಡಿನಲ್ಲಿತನ್ನ ಕೆಚ್ಚಲನ್ನು ಹುತ್ತವೊಂದಕ್ಕೆಒಡ್ಡುತ್ತದೆ. ಹುತ್ತದಲ್ಲಿದ್ದಕರಿನಾಗರವೊಂದು ಹಸುವಿನ ಕೆಚ್ಚಲಿನಿಂದ ಹಾಲು ಕುಡಿಯುತ್ತದೆ. ಈ ಮಹಿಮೆಯನ್ನು ತಿಳಿದ ಜನರು ನಾಗಪ್ಪನಿಗೊಂದುಗುಡಿಕಟ್ಟಿಸುತ್ತಾರೆ. ಗುಡಿಯೊಳಗೆ ಈಗಲೂ ಕರಿಯಪ್ಪದೈವ ವಾಸವಾಗಿದ್ದಾನೆ, ಈ ಕತೆಯು ಮೊದಲನೆಯದಕ್ಕಿಂತ ಸ್ವಲ್ಪ ಬೇರೆಯಾಗಿದೆ. ಉತ್ತರಕನ್ನಡಜಿಲ್ಲೆಯ ಸಿದ್ಧಾಪುರದ ಬಳಿಯ ದೊಡ್ಡಮನೆ ಎಂಬಲ್ಲಿರುವ ನಂಬಿಕೆಯ ಪ್ರಕಾರ ಕರು ಹಾಕದ, ಗರ್ಭಧರಿಸದ ಎಳೆಯ ಹೆಣ್ಣುಕರುವೊಂದುಕಾಡಿನಲ್ಲಿರುವ ಹುತ್ತದ ಬಳಿ ಸುಳಿದಾಡುತ್ತದೆ. ಆಗ ಇದ್ದಕ್ಕಿದ್ದಂತೆಅದರ ಕೆಚ್ಚಲು ತುಂಬುತ್ತದೆ. ಕರು ಕೆಚ್ಚಲ ಹಾಲನ್ನು ಪೊದರಲ್ಲಿರುವ ಹುತ್ತಕ್ಕೆಎರೆಯುತ್ತದೆ. ಜನರುಅದಕ್ಕೆ ಗುಡಿಕಟ್ಟಿಸಿ ಪೂಜೆ ಮಾಡುತ್ತಾರೆ. ದಕ್ಷಿಣಕನ್ನಡಜಿಲ್ಲೆ ಪುತ್ತೂರುತಾಲೂಕಿನ ಬಿಳಿನೆಲೆಯಲ್ಲಿ ಲಭ್ಯವಿರುವಕತೆಯ ಪ್ರಕಾರ, ಗೊಡ್ಡಿದನವೊಂದುಕಾಡಿನಲ್ಲಿರುವ ಲಿಂಗಕ್ಕೆ ಕ್ಷೀರಾಭಿಷೇಕ ಮಾಡುತ್ತದೆ. ಹಾಸನ ಜಿಲ್ಲೆಯ ಸಕಲೇಶಪುರತಾಲ್ಲೂಕಿನಕೂಡುರಸ್ತೆ ಎಂಬಲ್ಲಿ ಜನಜನಿತವಾಗಿರುವಐತಿಹ್ಯದ ಪ್ರಕಾರ, ‘ಗೊಡ್ಡಿದನ ಹುತ್ತಕ್ಕೆ ಹಾಲೆರೆದಆನಂತರ ಹಟ್ಟಿಗೆ ಹಿಂದಿರುಗಿ, ತನ್ನಯಜಮಾನನಿಗೂ ಹಾಲು ಕೊಡುತ್ತದೆ”
   ಕೊಡಗುಜಿಲ್ಲೆಯ ಸೋಮವಾರಪೇಟೆತಾಲೂಕಿನಐಗೂರು ಎಂಬಲ್ಲಿ ಪ್ರಚಲಿತದಲ್ಲಿರುವ ಹೇಳಿಕೆಯ ಪ್ರಕಾರ ಹಸುವೊಂದು ಹಟ್ಟಿಯಲ್ಲಿಕರುವಿಗೆ ಹಾಲೂಡಿಸುವುದೇಇಲ್ಲ. ಅದುತನ್ನಕರುವನ್ನುಕರೆದುಕೊಂಡುಕಾಡಿಗೆ ಹೋಗುತ್ತದೆ. ಕಾಡಿನಲ್ಲಿಕರು ಹಾಲು ಕುಡಿಯುವಾಗ, ಅದರದವಡೆಯಿಂದ ಹಾಲು ತೊಟ್ಟಿಕ್ಕುತ್ತದೆ. ಹೀಗೆ ತೊಟ್ಟಿಕ್ಕಿದ ಹಾಲು ಹುತ್ತದೊಳಗಣ ಲಿಂಗಕ್ಕೆ ಅಭಿಷೇಕವಾಗುತ್ತದೆ. ಬೆಳಗಾವಿ ಜಿಲ್ಲೆಯಕಿತ್ತೂರಿನಲ್ಲಿರುವಐತಿಹ್ಯದ ಪ್ರಕಾರ ಹಸು ಕಾಡಿಗೆ ಹೋಗಿ ಲಿಂಗಕ್ಕೆ ಹಾಲೂಡಿಸಿದ ಆನಂತರ ಹಟ್ಟಿಗೆ ಹಿಂದಿರುಗಿ ಬಂದುತನ್ನಕರುವಿಗೆಕೂಡಾ ಹಾಲೂಡಿಸುತ್ತದೆ.

    ಹುತ್ತದೊಳಗೆ ಕರಿಯಪ್ಪ ( ಹಾವು) ಮತ್ತು ಲಿಂಗಪ್ಪ ( ಶಿವಲಿಂಗ) ವಾಸವಾಗಿರುವಂತೆ, ಮುನಿಗಳೂ, ವೆಂಕಟೇಶ್ವರ, ಶ್ರೀಕೃಷ್ಣ ಮತ್ತಿತರರು ವಾಸವಾಗಿರುವಕುರಿತು ಕತೆಗಳು ಲಭಿಸುತ್ತವೆ. ಪ್ರಖ್ಯಾತವಾದ ಶ್ರೀ ಎಡೆಯೂರಿನಲ್ಲಿ ಬಿಳಿ ದನವೊಂದು ಹುತ್ತದೊಳಗೆ ಧ್ಯಾನಸ್ಥರಾಗಿದ್ದ ಸಿದ್ಧಲಿಂಗಯತಿಗಳಿಗೆ ಹಾಲು ಕುಡಿಸುತ್ತದೆ. ಕೋಲಾರಜಿಲ್ಲೆಯ ಬಂಗಾರಪೇಟೆಯ ತಮಿಳರ ನಡುವೆ ಪ್ರಚಲಿತರದಲ್ಲಿರುವ ನಂಬಿಕೆಯಂತೆ, ಶ್ರೀ ವಿಷ್ಣುವೇ ಕರುವಿನ ರೂಪದಲ್ಲಿ ಬಂದು ಕಪಿಲೆಯ ಹಾಲು ಕುಡಿಯುತ್ತಾನೆ.
   ಮಂಗಳೂರು ತಾಲ್ಲೂಕಿನ ಮುಡಿಪು ಎಂಬಲ್ಲಿರುವಐತಿಹ್ಯದ ಪ್ರಕಾರ-’ ದಲಿತ ಹೆಂಗಸೊಬ್ಬಳು ನೇಜಿ ನೆಡುತ್ತಿರುವಾಗ ಮಗುವಿನ ಅಳುವನ್ನು ಆಲಿಸುತ್ತಾಳೆ. ತಕ್ಷಣಆಕೆಯ ಮೊಲೆಯಿಂದ ಹಾಲು ಒಸರಲುಆರಂಭವಾಗುತ್ತದೆ. ಆಕೆ ಓಡೋಡಿ ಬಂದು ಮಗುವನ್ನುಎತ್ತಿಕೊಂಡುಅದಕ್ಕೆ ಹಾಲೂಡಿಸುತ್ತಾಳೆ. ಆಗ ಏಳು ಹೆಡೆಯ ಸರ್ಪವೊಂದುತಾಯಿ-ಮಗುವಿಗೆ ನೆರಳಾಗುತ್ತದೆ. ಇಲ್ಲಿದನದಜಾಗದಲ್ಲಿದಲಿತ ಮಹಿಳೆಯಿದ್ದಾಳೆ. ತುಮಕೂರುಜಿಲ್ಲೆಯಲ್ಲಿರುವ ಕತೆಗಳಲ್ಲಿ ಹಾಲು ಮಾರಲು ಹೋಗುತ್ತಿದ್ದ ಗೊಲ್ಲತಿಯೊಬ್ಬಳಿಗೆ, ಹುತ್ತದೊಳಗಿನಿಂದ ಮಗುವಿನ ಅಳು ಕೇಳಿಸುತ್ತದೆ. ಆಗ ಆಕೆ ಹಾಲನ್ನು ಹುತ್ತಕ್ಕೆ ಎರೆಯುತ್ತಾಳೆ. ದಕ್ಷಿಣಕನ್ನಡಜಿಲ್ಲೆಯಗುತ್ತಿಗಾರುಗ್ರಾಮದ ಒಳಲಂಬೆ ಎಂಬಲ್ಲಿ ದೊರಕುವಐತಿಹ್ಯವುಇನ್ನೂರೋಚಕವಾಗಿದೆ. ಅದರ ಪ್ರಕಾರ ಬ್ರಾಹ್ಮಣ ಹುಡುಗಿಯೊಬ್ಬಳು ಮದುವೆಗೆ ಮುನ್ನ ಮುಟ್ಟಾಗುತ್ತಾಳೆ. ಇದು ಸಂಪ್ರದಾಯಕ್ಕೆ ವಿರುದ್ಧವಾಗಿರುವುದರಿಂದ, ನಿಯಮದಂತೆತಂದೆಆಕೆಯನ್ನು ನದಿಯ ಮಧ್ಯದಲ್ಲಿ ನಿಲ್ಲಿಸಿ, ನೀರುಕೊಚ್ಚಿಕೊಂಡು ಹೋಗಲಿ ಎಂದು ಪ್ರಾಥರ್ಿಸಿ ಹಿಂದಿರುಗುತ್ತಾನೆ. ಆದರೆ ಹೊಳೆ ಕೊಚ್ಚಿಕೊಂಡು ಹೋಗುವುದಿಲ್ಲ. ನಿಧಾನವಾಗಿ ಹುಡುಗಿಯ ಸುತ್ತ ಹುತ್ತ ಬೆಳೆಯುತ್ತದೆ. ಹುತ್ತದೊಳಗೊಂದು ಲಿಂಗ ಮೂಡುತ್ತದೆ. ಹುಡುಗಿ ಲಿಂಗಕ್ಕೆ ಹಾಲೂಡಿಸುತ್ತಾಳೆ. ರಾಯಚೂರುಜಿಲ್ಲೆಯ ಲಿಂಗಸುಗೂರು ಎಂಬಲ್ಲಿನಐತಿಹ್ಯದಂತೆ ಹುಡುಗಿಯೊಬ್ಬಳು ತನ್ನಅಣ್ಣಂದಿರಇದಿರಿಗೆ ನಗ್ನಳಾಗಿ ನಿಲ್ಲುತ್ತಾಳೆ. ಕೋಪಗೊಂಡಅಣ್ಣಂದಿರುಆಕೆಯಎರಡೂ ಮೊಲೆಗಳನ್ನು ಕತ್ತರಿಸಿ ಕಳ್ಳಿ ಗಿಡದತ್ತಎಸೆದು ಬಿಡುತ್ತಾರೆ. ತುಂಡಾದ ಮೊಲೆಗಳು ಕಳ್ಳಿ ಗಿಡದ ಬುಡದಲ್ಲಿರುವ ಲಿಂಗಕ್ಕೆ ಕ್ಷೀರಾಭಿಷೇಕ ಮಾಡುತ್ತವೆ. ಇನ್ನು ಕೆಲವೆಡೆಗಳಲ್ಲಿ ಪೊದರು ಸವರುವಾಗಕತ್ತಿತಾಗಿ ಲಿಂಗದಿಂದರಕ್ತಒಸರುತ್ತದೆ. ಆಶ್ಚರ್ಯದ ಸಂಗತಿಎಂದರೆ, ಲಿಂಗವು ‘ಪುರುಷ’ನೇ ಆಗಿರಬೇಕಾಗಿಲ್ಲಎನ್ನುವುದು. ಅದು ‘ಸ್ತ್ರೀ’ಯನ್ನು ಕೂಡಾ ಪ್ರತಿನಿಧಿಸುತ್ತದೆ. ಮಲೆನಾಡಿನಲ್ಲಿ ಮಾರಿಯಮ್ಮ, ದುಗರ್ಾದೇವಿ, ಹೊಲೇರಮ್ಮ, ಮಹಾಂಕಾಳಿಯಮ್ಮಂದಿರನ್ನು ಲಿಂಗದರೂಪದಲ್ಲಿ ಕಲ್ಪಿಸಿ ಆರಾಧಿಸಲಾಗುತ್ತದೆ.
   ಇಂಥ ಅನೇಕ ಕತೆಗಳನ್ನು ನಾವು ಕೇಳಿದ್ದೇವೆ. ಈ ಕತೆಗಳ ಸುತ್ತಇನ್ನಷ್ಟು ನಂಬಿಕೆಗಳೂ ಆಚರಣೆಗಳೂ ಸೇರಿಕೊಂಡುತುಂಬ ಸಂಕೀರ್ಣವಾದ ಮತ್ತು ವೈವಿಧ್ಯಮಯವಾದರಚನೆಯೊಂದು ಪ್ರತೀತಗೊಂಡಿದೆ. ಈಚಿಗೆತೀರಿಕೋಡ ನನ್ನತಾಯಿ ಹಾಲು ಕರೆದು ಬರುವಾಗ, ಮನೆಯ ಮೆಟ್ಟಿಲು ಹತ್ತುವ ಮುನ್ನ, ಸೊಪ್ಪಿನತುದಿಯಲ್ಲಿ ಹನಿ ಹಾಲನ್ನಿರಿಸಿ ಕೈಮುಗಿಯುತ್ತಾಳೆ. ಯಾಕಮ್ಮಾ? ಎಂದು ಕೇಳಿದ್ರೆ ಅಂಗಾರ ಎಂಬ ದೈವಕ್ಕೆ ಹಾಲು ನೀಡಿದರೆ, ದನದ ಕೆಚ್ಚಲಲ್ಲಿ ಹಾಲು ಹೆಚ್ಚುತ್ತದೆ ಎನ್ನುತ್ತಿದ್ದಳು.
   ಈ ಹಾಲು, ಹುತ್ತ, ಲಿಂಗ ಮತ್ತು ಹಸುಗಳ ಕತೆರೋಚಕವಾಗಿದೆ. ಅವುಗಳ ವೈವಿಧ್ಯಅಸಾಧಾರಣವಾದುದು. ಈ ಕತೆ ನಮ್ಮ ದೇವಾಲಯಗಳಲ್ಲಿ ನಿರೂಪಣೆಗೊಂಡದ್ದನ್ನುಚಿತ್ರದಲ್ಲಿ ಗಮನಿಸಬಹುದು.