ಮಂಗಳವಾರ, ಏಪ್ರಿಲ್ 24, 2012

ಜನಭಾಷೆಗಳ ಕೂಡುಸಂಬಂಧದ ಶೋಧ

(22 ಏಪ್ರಿಲ್ ಭಾನುವಾರ ಪ್ರಜಾವಾಣಿ ಸಾಪ್ತಾಹಿಕ ಪುರವಣಿಯಲ್ಲಿ ಈ ಬರಹ ಪ್ರಕಟಗೊಂಡಿದೆ. ಹಾಗಾಗಿ ಸಂಪಾದಕರಿಗೆ ಕೃತಜ್ಞತೆಗಳು. ಬ್ಲಾಗ್ ಓದಿಗಾಗಿ ಇಲ್ಲಿ ಪ್ರಕಟಿಸಲಾಗುತ್ತಿದೆ)

ಡಾ.ಅರುಣ್ ಜೋಳದಕೂಡ್ಲಿಗಿ


    ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ಲಭಿಸಿ, ಈ ನೆಲೆಯಲ್ಲಿ ಒಂದಷ್ಟು ಕೆಲಸಗಳು ನಡೆಯುತ್ತಿವೆ. ಇದರಲ್ಲಿ ಪುನರಾವರ್ತನೆಯ ಸವಕಲು ಅಧ್ಯಯನಗಳದ್ದು ದೊಡ್ಡ ಪಾಲು. ಪ್ರತಿ ವಿಶ್ವವಿದ್ಯಾಲಯಕ್ಕೆ ಒಂದು ಕೋಟಿ ರೂಗಳನ್ನು ಸಂಶೋಧನೆಯ ಕಾರಣಕ್ಕೆ ನೀಡಲಾಗಿದೆ. ಇದಕ್ಕೆ ಪ್ರತಿಯಾಗಿ ಸಂಶೋಧನೆಗಳು ನಡೆದದ್ದು ಬೆರಳೆಣಿಕೆಯವು. ಈ ಯೋಜನೆಯಲ್ಲಿ ಕನ್ನಡ ವಿಶ್ವವಿದ್ಯಾಲಯ ಪ್ರಕಟಿಸಿದ ರಹಮತ್ ತರೀಕೆರೆ ಅವರ ‘ನುಡಿಸಂಕರ ಸಾಹಿತ್ಯ’ ಕೃತಿ ಹಲವು ಕಾರಣಗಳಿಗೆ ಮಹತ್ವದ್ದಾಗಿದೆ.

    ಪ್ರತಿಸಂಸ್ಕೃತಿ, ಸೂಫಿ, ನಾಥಪಂಥಗಳ ಮೂಲಕ ಕರ್ನಾಟಕವನ್ನು ಜನಸಮುದಾಯದ ಮಗ್ಗಲುಗಳಿಂದ ಭಿನ್ನವಾಗಿ ವಿವರಿಸಿದ ತರೀಕೆರೆ ಅವರು, ಜನಭಾಷೆಗಳ ಕೂಡು ಸಂಬಂಧದ ನೆಲೆಯಲ್ಲಿ ಕನ್ನಡವನ್ನು ಕರ್ನಾಟಕವನ್ನು ಎದುರುಗೊಂಡಿದ್ದಾರೆ. ಇದು ಕನ್ನಡ ಶಾಸ್ತ್ರೀಯ ಭಾಷೆಯ ನೆಲೆಯಲ್ಲಿ ಮಾಡಬಹುದಾದ ಅಧ್ಯಯನಗಳಿಗೆ ಒಂದು ವಿಶಿಷ್ಠ ಮಾದರಿ.

     ಹಲವು ಭಾಷೆಗಳು ಒಂದೇ ರಚನೆಯಲ್ಲಿ ಹೊರಳಿಕೊಳ್ಳುತ್ತ ನಿರ್ದಿಷ್ಟ ತಾತ್ವಿಕ ಆಶಯಕ್ಕಾಗಿ ಬಳಕೆಯಾಗುವ ವಿನ್ಯಾಸವನ್ನು ‘ನುಡಿಸಂಕರ’ ಎಂದು ಕರೆಯಬಹುದು. ಇದು ವರ್ತಮಾನದಲ್ಲಿ ಜನರು ಬಹುಭಾಷೆಗಳ ಜತೆ ಒಡನಾಡುವ ಸಂಕೀರ್ಣ ಸಂಬಂಧವನ್ನು ತೋರಿಸುತ್ತದೆ. ಹಾಗಾಗಿ ಭಾಷೆಯನ್ನು ಆಧಾರವಾಗಿಟ್ಟುಕೊಂಡು ಮಾಡಲಾದ ಸಾಂಸ್ಕೃತಿಕ ವಿಶ್ಲೇಷಣೆಯ ಯತ್ನವಿದು.

    ಈ ಕೃತಿಯಲ್ಲಿ ಒಟ್ಟು ನಲವತ್ತು ಸಂಕರ ಪಠ್ಯಗಳು, ಇಪ್ಪತ್ತಕ್ಕೂ ಹೆಚ್ಚು ಪೂರಕ ಪಠ್ಯಗಳನ್ನು ಜೋಡಿಸಿ ಚರ್ಚೆಯನ್ನು ಬೆಳೆಸಲಾಗಿದೆ. ಇಲ್ಲಿನ ಸಂಕರ ಪಠ್ಯಗಳನ್ನು, ಕಥೆ ಕಥನ ಪದ ಹಾಡು ಆಟ ದಾಖಲೆ-ಎಂದು ವಿಂಗಡಿಸಲಾಗಿದೆ. ಪ್ರತಿ ಲೇಖನದಲ್ಲೂ ನಾಲ್ಕು ಭಾಗಗಳಿದ್ದು, ಅವು-ಪಠ್ಯ ಪ್ರವೇಶದ ಮುನ್ನಿನ ಪರಿಚಯಾತ್ಮಕ ಪೀಠಿಕೆ; ಚರ್ಚೆಗೆ ಆರಿಸಿಕೊಂಡ ಪಠ್ಯಭಾಗದ ಉಲ್ಲೇಖ; ಪಠ್ಯದಲ್ಲಿರುವ ಕನ್ನಡೇತರ ಭಾಗದ ತರ್ಜುಮೆ; ಉಲ್ಲೇಖಿತ ಪಠ್ಯದ ವಿಶ್ಲೇಷಣೆ_ ಈ ಅನುಕ್ರಮದಲ್ಲಿ ಕೃತಿಯ ಬರಹದ ಚೌಕಟ್ಟಿದೆ.

   ಕರ್ನಾಟಕದಲ್ಲಿ ಕಳೆದ ೧೧ ಶತಮಾನಗಳಿಂದ ನೂರಾರು ನುಡಿಸಂಕರ ಪಠ್ಯಗಳು ಸೃಷ್ಟಿಯಾಗಿವೆ. ಇವುಗಳಲ್ಲಿ ಶಾಸನ, ವಚನ, ತತ್ವಪದ, ಲಾವಣಿ, ರಿವಾಯತ್ ಪದ, ಕತೆ, ಕಾದಂಬರಿ, ಬಯಲಾಟ, ಸಿನಿಮಾಗೀತೆ, ಲಾಲಿಹಾಡು, ಖಾಸಗಿಪತ್ರ, ಕರಪತ್ರ ಇತ್ಯಾದಿ ಪ್ರಕಾರಗಳಿದ್ದು, ಇವು ಬಹುರೂಪಿಯಾಗಿವೆ. ಇಲ್ಲಿ ವಡ್ಡಾರಾಧನೆಯಿಂದ ಆರಂಭವಾಗಿ ಈಚಿನ ಜನಪ್ರಿಯ ಕೊಲವರಿ ಡಿ ತನಕ ನುಡಿಸಂಕರದ ಭಿನ್ನ ಆಯಾಮಗಳನ್ನು ಚರ್ಚಿಸಲಾಗಿದೆ.

   ತರೀಕೆರೆ ಅವರು ವಿವರಿಸುವಂತೆ ‘ಇಲ್ಲಿ ಸಂಸ್ಕೃತದಿಂದ ಆರಂಭಗೊಂಡು ಕನ್ನಡದಲ್ಲಿ ಬೆಳೆದು ತೆಲುಗಿನಲ್ಲಿ ಮುಗಿಯುವ ಶಾಸನವಿದೆ; ೧೯ನೇ ಶತಮಾನದಲ್ಲಿ ಹುಬ್ಬಳ್ಳಿಯ ಸಿದ್ದಲಿಂಗಕವಿ ವಿರಚಿತ ಕನ್ನಡ ಉರ್ದು ಮರಾಠಿ ಲಂಬಾಣಿ(?)ಗಳಿಂದ ಕೂಡಿರುವ ‘ಆದಾಯ ತೆರಿಗೆ’ ಲಾವಣಿಯಿದೆ; ಹಲವು ಸಮುದಾಯವರು ತಂತಮ್ಮ ಭಾಷೆಗಳಲ್ಲೇ ಅರ್ಜುನ ಜೋಗಿಯನ್ನು ಕರೆದು ಉಪಚರಿಸುವ ಮೈಸೂರು ಸೀಮೆಯ ‘ಜನಪದ ಮಹಾಭಾರತ’ವಿದೆ; ಕನ್ನಡ ಮತ್ತು ಉರ್ದು ಸಂಕರವಿರುವ ‘ಪಿರಿಯಾಪಟ್ಟಣದ ಕಾಳಗ’ದಂತಹ ಕಾವ್ಯಗಳಿವೆ; ಮರಾಠಿ ಕನ್ನಡ ಹಿಂದಿ ಸಂಕರವುಳ್ಳ ಗೊಂದಲಿಗರ ಹಾಡುಗಳಿವೆ; ಮಹಿಪತಿರಾಯನನ್ನೂ ಒಳಗೊಂಡಂತೆ ಕೈವಾರ ನಾರೇಯಣ, ಗುಡೇಕಲ್ಲಿನ ಅಲ್ಲಿಪೀರಾ ಸಾಹೇಬ, ಚನ್ನೂರ ಜಲಾಲ ಸಾಹೇಬ, ಬೇನೂರ ಹಜರತ್ ಕಾಕಿಪೀರಾ, ಮಂಜರ್ಲಾ ಖಾದರಸಾಹೇಬ, ಕೂಡಲೂರ ಬಸವಲಿಂಗ, ಶಿಶುನಾಳ ಶರೀಫ, ಸಾಲಗುಂದಿಯ ಗುರುಖಾದರಿ ಪೀರಾ ಮುಂತಾದವರು, ಕನ್ನಡ-ತೆಲುಗು-ಉರ್ದು ಮರಾಠಿಗಳನ್ನು ಬೆರೆಸುತ್ತ ರಚಿಸಿರುವ ತತ್ವಪದಗಳಿವೆ, ಎಂದು ವಿವರಿಸುತ್ತಾ ಪ್ರಸ್ತುತ ಕೃತಿಯಲ್ಲಿ, ಮೇಲೆ ನಮೂದಿಸಿದ ವಿವಿಧ ಭಾಷಿಕ ಅಭಿವ್ಯಕ್ತಿಗಳನ್ನು ನುಡಿಸಂಕರ ಎಂಬ ವಿಶಾಲ ಅರ್ಥದಲ್ಲಿ ಪರಿಗ್ರಹಿಸಿ ಸಂಕಲಿಸಲಾಗಿದೆ ಹಾಗೂ ಅವನ್ನು ಸಾಂಸ್ಕೃತಿಕ ದೃಷ್ಟಿಕೋನದಲ್ಲಿ ವಿಶ್ಲೇಷಿಸಲು ಯತ್ನಿಸಲಾಗಿದೆ’ ಎನ್ನುತ್ತಾರೆ.

    ನುಡಿಸಂಕರದ ಮೂಲಕ ಕನ್ನಡ ಸಾಹಿತ್ಯದ ಒಳಗಿನ ಬಹುಭಾಷೆಯ ಒಡನಾಟವನ್ನೂ, ಈ ಒಡನಾಟ ಹುಟ್ಟಿಸಿದ ಕನ್ನಡದ ಭಿನ್ನ ವ್ಯಕ್ತಿತ್ವದ ಚಹರೆಯನ್ನೂ ಗುರುತಿಸಲು ಯತ್ನಿಸಿದ್ದಾರೆ. ಹಲವು ಬಾಷೆಯ ಮೂಲಕ ಕನ್ನಡವನ್ನೂ, ಕನ್ನಡದ ಮೂಲಕ ಬಹುಭಾಷೆಗಳನ್ನೂ ನೋಡುವ ನೋಟಕ್ರಮ ವಿಶಿಷ್ಠವಾಗಿದೆ. ಭಾಷೆಯ ಸಂಕರ, ಬದುಕಿನ ಸಂಕರವಾಗಿಯೂ, ಸಂಸ್ಕೃತಿಯ ಸಂಕರವಾಗಿಯೂ, ಕನ್ನಡತ್ವದ ಸಂಕರವಾಗಿಯೂ ದಾಟುವ ಕಾರಣಕ್ಕೆ ಈ ಕೃತಿ ಮುಖ್ಯವಾಗುತ್ತದೆ.

   ಕನ್ನಡ ಭಾಷೆಯ ಮತ್ತು ಕರ್ನಾಟಕ ಸಂಸ್ಕೃತಿಯ ಬಹುತ್ವವು ದುರಭಿಮಾನಿಯಾದ ಏಕರೂಪಿ ಗ್ರಹಿಕೆಗಳಲ್ಲಿ ಕಳೆದುಹೋಗುವ ಆತಂಕವಿದೆ. ಈ ಆತಂಕ ಕರ್ನಾಟಕದಲ್ಲಿ ಹೆಚ್ಚುತ್ತಿರುವ ಭಾವೋದ್ವೇಗವಾದಿ ಕನ್ನಡ ಸಂಘಟನೆಗಳಲ್ಲಿ ಮಾತ್ರವಲ್ಲ, ಕನ್ನಡದ ಅಧ್ಯಯನಗಳಲ್ಲೂ ಕಾಣಬರುತ್ತಿದೆ. ಅದರಲ್ಲೂ ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ಬಂದ ಮೇಲೆ ಬಗೆಬಗೆಯಾಗಿ ಆರಂಭವಾಗುತ್ತಿರುವ ಅಧ್ಯಯನಗಳ ಹೊತ್ತಲ್ಲಿ, ಈ ಆತಂಕ ಸಣ್ಣಗೆ ಗೋಚರವಾಗುತ್ತಿದೆ. ಅಂದರೆ- ಕರ್ನಾಟಕದಲ್ಲಿ ಕನ್ನಡದ ಮೇಲೆ ಹೆಚ್ಚು ಕಾಳಜಿ ವ್ಯಕ್ತವಾಗಿ, ಕನ್ನಡದ ಅಸ್ತಿತ್ವ ಕುರಿತ ಆತಂಕದ ಚರ್ಚೆಗಳೂ ಸಂಭ್ರಮದ ಸಮ್ಮೇಳನಗಳೂ ಜತೆಗೆ ನಡೆಯುತ್ತಿವೆ.

  ಆದರೆ ಕನ್ನಡದ ಜತೆ ಬದುಕುತ್ತಿರುವ ಜನಭಾಷೆಗಳ ಕೂಡುಸಂಬಂಧದ ಚಿಂತನೆ ಅಷ್ಟಾಗಿ ನಡೆಯುತ್ತಿಲ್ಲ; ಕನ್ನಡ ಸಾಹಿತ್ಯದ ಬಗ್ಗೆ ಹೆಚ್ಚು ಚರ್ಚೆ ಆಗುತ್ತಿದೆ. ಆದರೆ ಸಾಹಿತ್ಯವನ್ನು ಒಳಗೊಂಡಂತೆ ಜನರ ಬದುಕನ್ನೇ ಆಧರಿಸುವ ಕರ್ನಾಟಕ ಸಂಸ್ಕೃತಿಯ ಮೇಲೆ ಕಡಿಮೆ ಚರ್ಚೆಯಾಗುತ್ತಿದೆ; ಗತಕಾಲದ ಗೆರೆ ಕೊರೆದುಕೊಂಡು ಕರ್ನಾಟಕ ಕುರಿತ ಚರ್ಚೆಗಳು ಜಾಸ್ತಿ ಕಾಣುತ್ತಿವೆ. ಆದರೆ ಗತವನ್ನೂ ಒಳಗೊಂಡಂತೆ ವರ್ತಮಾನ ವಿದ್ಯಮಾನಗಳ ಬಗ್ಗೆ ಕಡಿಮೆ ಗಮನ ಹೋಗುತ್ತಿದೆ. ಈ ಬಗೆಯ ಮಿತಿಗಳನ್ನು ಮೀರಲು ಈ ಅಧ್ಯಯನ ಪ್ರಯತ್ನಿಸಿದೆ.

    ಈ ಹಿನ್ನೆಲೆಯಲ್ಲಿ ನುಡಿಸಂಕರ ಸಾಹಿತ್ಯ ಕೃತಿಯ ಆಲೋಚನ ಕ್ರಮ ಕನ್ನಡವನ್ನೂ ಒಳಗೊಂಡಂತೆ ಕರ್ನಾಟಕದ ಹಲವು ಭಾಷೆ ಮತ್ತು ಸಂಸ್ಕೃತಿಗಳತ್ತ ಹೊರಳಿದೆ; ಚರಿತ್ರೆಯ ಪ್ರಜ್ಞೆಯನ್ನು ಬಿಟ್ಟುಕೊಡದೆ ಕರ್ನಾಟಕದ ವರ್ತಮಾನ ಮತ್ತು ಭವಿಷ್ಯದತ್ತ ತನ್ನ ಕಾಳಜಿ ವಹಿಸಿದೆ. ಇಲ್ಲಿನ ಸಂಕರ ಪಠ್ಯಗಳಲ್ಲಿ ಬಳಕೆಯಾಗಿರುವ ವಿಭಿನ್ನ ಭಾಷೆಗಳ ನಡುವಣ ಅಂತರ್ ಸಂಬಂಧವು ಸಮಾನತೆ, ನಿರ್ಲಿಪ್ತತೆ, ಶ್ರೇಣೀಕರಣ, ಸಂಘರ್ಷ, ಕೊಡುಕೊಳೆ, ಸಾಮರಸ್ಯ ಮುಂತಾಗಿ ಹಲವು ನೆಲೆಗಳಲ್ಲಿದೆ. ಈ ಅಂತರ್ ಸಂಬಂಧಗಳ ಸ್ವರೂಪವು ಎಲ್ಲ ಕಾಲದಲ್ಲೂ ಏಕರೂಪಿಯಾಗಿಲ್ಲದಿರುವುದು ತಿಳಿಯುತ್ತದೆ.

     ಹೀಗಾಗಿ, ನುಡಿಸಂಕರ ಪಠ್ಯಗಳು ಯಾಕೆ ಮತ್ತು ಹೇಗೆ ಸೃಷ್ಟಿಯಾಗುತ್ತವೆ ಎನ್ನುವುದು ಕೇವಲ ಭಾಷಾಶಾಸ್ತ್ರೀಯ ಸಂಗತಿಯಾಗದೆ, ಸಾಮಾಜಿಕ ರಾಜಕೀಯ ಸಂಗತಿ ಕೂಡ ಆಗಿರುವುದನ್ನು ನೋಡಬಹುದು. ನುಡಿಸಂಕರ ಪಠ್ಯಕ್ಕೂ ಅದರದ್ದೇ ಆದ ಅರ್ಥ, ಉದ್ದೇಶ ಮತ್ತು ತಾತ್ವಿಕತೆಗಳಿದ್ದು, ಅವನ್ನೆಲ್ಲ ಒಂದು ಸಾಮಾನ್ಯ ಚೌಕಟ್ಟಿನೊಳಗಿಟ್ಟು ಅರ್ಥೈಸುವುದು ಸಾಧ್ಯವಿಲ್ಲ ಎನ್ನುವ ಮಿತಿಯನ್ನು ತರೀಕೆರೆ ಅವರು ಒಪ್ಪುತ್ತಾರೆ. ಅಂತೆಯೇ ಈಗಿನ ಇಂಗ್ಲೀಶ್ ಮಿಶ್ರಣವು ಜಾಗತಿಕ ಮಾರುಕಟ್ಟೆ ಶಕ್ತಿಗಳು ಮಾಡುತ್ತಿರುವ ಸಾಂಸ್ಕೃತಿಕ ಸಂಕರದ ಭಾಗವಾಗಿ ಬರುತ್ತಿರುವ ಬಗ್ಗೆ ಆತಂಕವನ್ನೂ ವ್ಯಕ್ತಪಡಿಸಿದ್ದಾರೆ.

   ಈ ಅಧ್ಯಯನ ಕರ್ನಾಟಕದ ಭಾಷೆ ಸಾಹಿತ್ಯ ಸಂಸ್ಕೃತಿಗಳ ಸಮೃದ್ಧಿ ವೈವಿಧ್ಯಗಳ ವೈಭವೀಕರಣಕ್ಕಿಂತ, ಅದರ ಇಕ್ಕಟ್ಟುಗಳತ್ತ ಗಮನಹರಿಸಿದೆ. ಹಾಗಾಗಿ ಕನ್ನಡದ ಬಗ್ಗೆ ಪ್ರಚಲಿತದಲ್ಲಿರುವ ಜನಪ್ರಿಯ ಗ್ರಹಿಕೆಗಳನ್ನು ಒಡೆಯುವುದಕ್ಕೂ; ಕನ್ನಡವು ಇತರ ಭಾಷೆಗಳ ಜತೆಗೆ ಇಟ್ಟುಕೊಂಡಿರುವ ಕೊಡುಕೊಳು ಸಂಬಂಧದ ಮೇಲೆ ಹೊಸಚಿಂತನೆ ಮಾಡುವುದಕ್ಕೂ ಈ ಕೃತಿ ಪ್ರೇರಣೆಯಾಗಿದೆ. ಗಡಿ ಭಾಷೆ ಧರ್ಮಗಳ ವಿಷಯದಲ್ಲಿ ಇರುವ ಸಂಘರ್ಷಗಳ ಮೇಲೆ ಮರುಚಿಂತನೆ ಮಾಡುವಂತೆ ಈ ಅಧ್ಯಯನ ಒತ್ತಾಯಿಸುತ್ತದೆ. ಮತ್ತಷ್ಟು ನುಡಿಸಂಕರ ಪಠ್ಯಗಳನ್ನು ಹುಡುಕಿ, ಕನ್ನಡ ಭಾಷೆ, ಸಾಹಿತ್ಯ ಮತ್ತು ಕರ್ನಾಟಕ ಸಂಸ್ಕೃತಿಗಳ ಜತೆ ಅವು ಇಟ್ಟುಕೊಂಡಿರುವ ಸಂಗಾತಿ ಸಂಬಂಧವನ್ನು ಶೆಧಿಸುವ ನೆಲೆಯಲ್ಲಿ ಹೊಸ ತಲೆಮಾರಿನ ಸಂಶೋಧಕರನ್ನು ಈ ಕೃತಿ ಪ್ರೇರೇಪಿಸುವಂತಿದೆ.

    ತರೀಕೆರೆ ಅವರ ಆಳವಾದ ಅಧ್ಯಯನ ಮತ್ತು ನಿರಂತರ ತಿರುಗಾಟದ ಅನುಭವಗಳು ಇಲ್ಲಿನ ಆಲೋಚನಕ್ರಮವನ್ನು ರೂಪಿಸಿದೆ. ಹೀಗೆ ಹೊಸ ಆಲೋಚನೆಗಳನ್ನು ಬಿತ್ತುವ ಕಾರಣಕ್ಕೆ, ರಹಮತ್ ತರೀಕೆರೆ ನಮ್ಮ ಕಾಲದಲ್ಲಿ ಮತ್ತೆ ಮತ್ತೆ ಪ್ರಸ್ತುತರಾಗುತ್ತಾರೆ.

ನುಡಿಸಂಕರ ಸಾಹಿತ್ಯ
ರಹಮತ್ ತರೀಕೆರೆ
೨೦೧೨, ಪುಟ ೫೧+೨೧೨, ಬೆಲೆ: ೧೬೦.೦೦,
ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ ಹಂಪಿ.

ಕಾಮೆಂಟ್‌ಗಳಿಲ್ಲ: