-ಅರುಣ್ ಜೋಳದ ಕೂಡ್ಲಿಗಿ
ಇಂದು ಸಂಶೋಧನೆ ಎನ್ನುವ ಸಿದ್ಧತಿಳುವಳಿಕೆಯಲ್ಲಿ ದಲಿತ ಅಧ್ಯಯನಗಳನ್ನು ನೋಡುವಂತಿಲ್ಲ. ದಲಿತ ಬದುಕಿನ ನೆಲೆಯಲ್ಲಿ ಪುನರ್ ವ್ಯಾಖ್ಯಾನ ಮಾಡಿಕೊಂಡು ಪರಿಶೀಲಿಸಬೇಕಾಗಿದೆ. ಕಾರಣ, ದಲಿತ ಬದುಕಿನ ಸಂಶೋಧನೆ, ಸದ್ಯದ ಮತ್ತು ಭವಿಷ್ಯದ ದಲಿತ ಬದುಕನ್ನು ರೂಪಿಸುವಿಕೆಯ ಶಕ್ತ ಆಕರಗಳೂ ಆಗಬೇಕಿದೆ.
ಕರ್ನಾಟಕದಲ್ಲಿ ಬಹುಪಾಲು ದಲಿತ ಸಂಶೋಧನೆಗಳು ಪದವಿಗಾಗಿ, ಅಕಡೆಮಿಕ್ ಕಾರಣಕ್ಕಾಗಿ ನಡೆಯುತ್ತಿವೆ. ಇವುಗಳಲ್ಲಿ ಹೆಚ್ಚಿನವು ದಲಿತ ಸಾಹಿತ್ಯ ಕೇಂದ್ರಿತ ಅಧ್ಯಯನಗಳು. ಸದ್ಯದ ದಲಿತ ಬದುಕಿನ ಕಡುವಾಸ್ತವಗಳನ್ನು ಹುಡುಕುವ ಅಧ್ಯಯನಗಳ ಸಂಖ್ಯೆ ವಿರಳ.
ಇಂತಹ ಅಧ್ಯಯನಗಳು, ಪದವಿಯ ಅಕಡೆಮಿಕ್ ಚೌಕಟ್ಟಿನ ಮಿತಿಯೊಳಗೆ ದಲಿತ ಬದುಕನ್ನು ತುರುಕುತ್ತವೆ. ಹೀಗೆ ಬಲವಂತವಾಗಿ ತುರುಕಿದ ಕಾರಣ, ಸಾಂಪ್ರದಾಯಿಕ ಅಧ್ಯಯನಗಳು ನೀಡುವ ಫಲಿತವನ್ನೇ ದಲಿತ ಸಂಶೋಧನೆಗಳೂ ನೀಡುತ್ತಿವೆ. ಹಾಗಾಗಿ ದಲಿತರ ನಿಜ ಬದುಕನ್ನು ಕಾಣಿಸುವಲ್ಲಿ ಇಂತಹ ಸಂಶೋಧನೆಗಳು ಸೋಲುತ್ತಿವೆ.
ಗ್ರಾಮೀಣ ಪ್ರದೇಶಗಳು ಬದಲಾಗಿವೆ. ಈ ಬದಲಾವಣೆ ಒಳಗೇ ದಲಿತ ಶೋಷಣೆಯ ಹೊಸ ರೂಪಗಳು ಅಡಗಿಕೊಂಡಿವೆ. ಮೊದಲಿಗಿಂತ ನೇರ ದೌರ್ಜನ್ಯ ಮತ್ತು ಬಹಿಷ್ಕಾರಗಳ ಪ್ರಮಾಣ ಕಡಿಮೆಯಾಗಿದೆ. ಶೋಷಣೆ ಎಂದು ಹಿಡಿದು ತೋರಿಸಲಾಗದ, ದಮನಕಾರಿ ಎಂದು ಕಟ್ಟಿಹಾಕಲು ಕೈಗೆ ಸಿಗದ ಹಾಗೆ ಹೊಸ ಬಗೆಯ ರೂಪಗಳು ಬರುತ್ತಿವೆ.
ಇಂತಹ ಹೊಸ ಬಗೆಯ ದಮನಕಾರಿ, ಶೋಷಣೆಗಳ ಒಳಹೊಕ್ಕು ಅದರ ಮುಂದುವರಿಕೆಯ ರೂಪವನ್ನು ತೋರಿಸಬೇಕಾಗಿದೆ. ಹಾಗೆಯೆ ಸ್ಪಷ್ಟ ಮುಖವಿರದ ಶೋಷಕ ಚಿತ್ರಗಳಿಗೆ ಮುಖ ನೀಡಿ, ಶಿಕ್ಷೆಯಾಗುವಷ್ಟು ಶಕ್ತಿಯನ್ನು ಒದಗಿಸುವ ಒಳನೋಟಗಳ ಸಂಶೋಧನೆಗಳು ನಡೆಯಬೇಕಾಗಿದೆ.
ಸದ್ಯದ ಹಳ್ಳಿಗಳ ದಲಿತ ಕೇರಿಯಲ್ಲಿ ಬೆಳೆದು ಶಿಕ್ಷಣ ಪಡೆದು ನಗರಗಳನ್ನು ಸೇರಿ, ತಾವು ಹತ್ತಿದ ಏಣಿಯನ್ನೇ ಒದೆಯುವ ರೂಪದಲ್ಲಿ ಬಹುಪಾಲು ಶಿಕ್ಷಿತ ದಲಿತ ಯುವಕರು ತಮ್ಮ ಕೇರಿಗಳಿಗೆ ಮರಳುತ್ತಿಲ್ಲ. ಇದು ಇಂದಿನ ಬಹುತೇಕ ಗ್ರಾಮೀಣ ದಲಿತ ಕೇರಿಗಳ ವಾಸ್ತವ. ಹಾಗಾಗಿ ಗ್ರಾಮೀಣ ಕೇರಿಗಳು ಹೆಚ್ಚು ಬದಲಾವಣೆ ಇಲ್ಲದೆ ಮೂಲಕ್ಕೆ ನಿಷ್ಠವಾಗಿವೆ.
ಇಂದು ದಲಿತಪರ ಹೋರಾಟಗಳು ನಿಂತಿಲ್ಲ.
ಆದರೆ ಹೋರಾಟದ ಆದ್ಯತೆಯು ಸಮಗ್ರ ದಲಿತ ಸಮುದಾಯವನ್ನು ಒಳಗೊಳ್ಳುವ ಹಾಗಿರದೆ, ಸಣ್ಣ ಸಣ್ಣ ಗುಂಪುಗಳ, ವೈಯಕ್ತಿಕ ನೆಲೆಯ ಲಾಭ ನಷ್ಟದ ಆದ್ಯತೆಯನ್ನು ಗಮನದಲ್ಲಿರಿಸಿಕೊಳ್ಳುವ ಮಟ್ಟಕ್ಕೆ ಇಳಿದಿವೆ. ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ನೌಕರ ಸಂಘಗಳ ಹೋರಾಟಗಳು ನೌಕರರ ಹಿತ ಕಾಯುವಲ್ಲಿ ತೃಪ್ತವಾಗುತ್ತಿವೆ. ಈ ಕುರಿತ ಅಧ್ಯಯನದ ಅಗತ್ಯವೂ ಇದೆ.
ದಲಿತ ಸಮುದಾಯದಲ್ಲೂ ನವ ಶ್ರೇಣೀಕರಣವಿದೆ. ದಲಿತರಲ್ಲಿಯೇ ಅಕ್ಷರಸ್ಥ, ಅನಕ್ಷರಸ್ಥರ ಭೇದ ಉಂಟಾಗಿದೆ. ಅಂತೆಯೇ ಕಡಿಮೆ ಕಲಿತವರು, ಹೆಚ್ಚು ಕಲಿತವರು, ಆಧುನಿಕ ತಂತ್ರಜ್ಞಾನವನ್ನು ಕಲಿತವರು, ಸಾಮಾನ್ಯ ಓದು ಬರಹ ಕಲಿತವರು, ನಗರದ ಸ್ಥಿತಿವಂತ ದಲಿತರು, ನಿರ್ಗತಿಕ ದಲಿತರು, ಎಡವಾದಿಗಳು, ಬಲವಾದಿಗಳು, ಸರ್ಕಾರಿ ನೌಕರ ದಲಿತರು, ಕೂಲಿಕಾರ ದಲಿತರು ಹೀಗೆ ಬಹುರೂಪಿ ತರತಮಗಳು ದಲಿತ ಲೋಕದೊಳಗೇ ರೂಪುಗೊಂಡಿವೆ. ಈ ತರತಮಗಳನ್ನು ಒಂದೇ ದಾರದಲ್ಲಿ ಪೋಣಿಸಿಡುವುದೂ ಕೂಡ ಇಂದಿನ ದಲಿತ ಸಂಶೋಧನೆಯ ದೊಡ್ಡ ಸವಾಲಾಗಿದೆ.
ಈ ಬಗೆಯ ತರತಮದ ಜನರನ್ನು ಒಡೆಯುವ ಮೂಲಕ, ಶ್ರೇಣೀಕೃತ ದಲಿತರ ಮಧ್ಯೆ ಒಂದಾಗುವ ಅವಕಾಶವನ್ನು ಸೃಷ್ಟಿ ಮಾಡದಿರುವ ರಾಜಕಾರಣದ ಬಗ್ಗೆಯೂ ಇಂದು ಶೋಧಿಸುವ ಅಗತ್ಯವಿದೆ.
ಕರ್ನಾಟಕದಲ್ಲಿ ಇಂದು ಅರೆ ವಿದ್ಯಾವಂತ ದಲಿತ ಯುವಕರ ಸಂಖ್ಯೆ ಹೆಚ್ಚಿದೆ. ಈ ಅರೆವಿದ್ಯಾವಂತರು ಹುದ್ದೆಗಳನ್ನು ಹಿಡಿಯಲೂ ಆಗದೆ, ಸಾಂಪ್ರದಾಯಿಕ ಕುಲಕಸಬಿನಲ್ಲಿ ತೊಡಗಿಕೊಳ್ಳಲೂ ಆಗದೆ ಹೆಣಗಾಡುತ್ತಿದ್ದಾರೆ. ದಲಿತರಾದ ಕಾರಣಕ್ಕೆ ಪಡಬಹುದಾದ ಅಪಮಾನಗಳ ಅರಿವು ಬಂದು ಮೇಲ್ಜಾತಿಯ ವಿದುದ್ಧದ ಸಿಟ್ಟಿನ ಕಾರಣಕ್ಕೆ ಸಹನೆ ಕಳೆದುಕೊಂಡ ಘಟನೆಗಳಿಗೂ ಈ ವರ್ಗ ತೆರೆದುಕೊಂಡಿದೆ.
ಈ ಬಗೆಯ ಅರೆ ವಿದ್ಯಾವಂತ ದಲಿತ ಯುವಕರ ನಡೆ ಏನಾಗಿದೆ? ಇಂತಹ ವಿದ್ಯಾವಂತರನ್ನು ಸಮಾನತೆಯ ನೆಲೆಯಲ್ಲಿ ಒಳಗೊಳ್ಳುವ ಬಗೆ ಹೇಗೆ ಎನ್ನುವುದನ್ನು ಶೋಧಿಸಬೇಕಿದೆ.
ಕೆಲವು ಅರೆ ವಿದ್ಯಾವಂತ ದಲಿತ ಯುವಕರು ಸ್ಥಳೀಯ ಪತ್ರಿಕೆಗಳನ್ನು ಶುರು ಮಾಡಿದ್ದಾರೆ. ಹಾಗೆ ನೋಡಿದರೆ ಕರ್ನಾಟಕದಲ್ಲಿ ದಲಿತ ವಿದ್ಯಾವಂತರು ಆರಂಭಿಸಿರುವ ಪತ್ರಿಕೆಗಳ ಸಂಖ್ಯೆಯೂ ಹೆಚ್ಚಿದೆ. ಹಾಗಾದರೆ ದಲಿತ ಶೋಷಣೆಯ ಬಗ್ಗೆ ಹೆಚ್ಚು ವರದಿಗಳು ಅಧ್ಯಯನಗಳು ಆಗಬೇಕಿತ್ತಲ್ಲವೇ? ಎನ್ನುವ ಪ್ರಶ್ನೆ ಮೂಡುವುದು ಸಹಜ.
ಆದರೆ ಅದು ಹಾಗಾಗದೆ ವಿರುದ್ಧ ದಾರಿಯಲ್ಲಿ ಪಯಣಿಸುತ್ತಿದೆ. ವ್ಯವಸ್ಥೆಯೇ ರೂಪಿಸಿದ ಕೆಲವು ಯುವಕರ ತಪ್ಪು ನಡೆಗಳನ್ನು ಇಡೀ ದಲಿತ ಸಮುದಾಯದ ಗುಣವಾಗಿ ಸಮೀಕರಿಸುವ ಅಪಾಯಗಳೂ ಇವೆ.
ದಲಿತಪರ ಸಂಶೋಧನೆಗಳು ಪುಸ್ತಕದಿಂದ ಹೊರಜಿಗಿಯುವ ಶಕ್ತಿಯನ್ನು ಪಡೆಯಬೇಕಾಗಿದೆ. ಅಂದರೆ ಅದು ದಲಿತ ಬದುಕಿಗೆ ನೆರವಾಗುವ, ಅವರ ಪರವಾದ ರಾಜಕೀಯ ಶಕ್ತಿಯಾಗಬೇಕಿದೆ. ಕೆಲವೊಮ್ಮೆ ದಲಿತ ಶೋಷಿಣೆಯನ್ನು ಅತಿರೇಕದ ವಿವರಣೆಯಿಂದ ಅವುಗಳ ಬಗ್ಗೆ ನಂಬಿಕೆಯನ್ನು ಹುಟ್ಟಿಸುವಲ್ಲಿ ಸೋಲುತ್ತಿವೆ.
ಇನ್ನೊಂದೆಡೆ ದಲಿತ ಪರವಾಗಿರುವ ಕಾಳಜಿಯ ಹೊರ ಮುಖಗಳನ್ನು ಜಗತ್ತಿಗೆ ತೋರಿಸಲು ಸವೆದು ನಿತ್ರಾಣವಾದ ಸವಕಲು ಸಂಶೋಧನಾ ಕೃತಿಗಳು ಬರುತ್ತಿವೆ. ಮತ್ತೊಂದೆಡೆ ತೀರಾ ಅಕಡೆಮಿಕ್ ಆಗಿದ್ದ ಕೇರಿಯಿಂದ ಸಾವಿರ ಕಿಲೋಮೀಟರ್ ದೂರ ನಿಂತಿವೆ. ಇಂತಹ ಮಿತಿಗಳನ್ನು ಇಂದಿನ ದಲಿತ ಸಂಶೋಧನೆಗಳು ಮೀರಲೇಬೇಕಾಗಿದೆ.
ಕೆಲವರು ದಲಿತ ಸಂಶೋಧನೆಯ ಅವಕಾಶಗಳನ್ನು ಬಳಸಿಕೊಂಡೂ ಸವಕಲು ಅಧ್ಯಯನಗಳನ್ನು ಒಂದರ ಮೇಲೊಂದರಂತೆ ಹೊಸೆಯುತ್ತಲೇ ಇರುತ್ತಾರೆ. ಇತ್ತ ದಲಿತ ಸಂಶೋಧನೆಯ ಅವಕಾಶ ಭರ್ತಿಯಾದಂತೆ ಕಂಡರೂ ಅದರ ಪರಿಣಾಮ ಮಾತ್ರ ಶೂನ್ಯ.
ದಲಿತ ಬದುಕಿನ ಬಗ್ಗೆ ಇರುವ ಸಾಮಾಜಿಕ ನಂಬಿಕೆಗಳ ಪೂರ್ವಾಗ್ರಹಗಳನ್ನು ಒಡೆಯುವ ಹಾಗೆ, ಸಾಮಾನ್ಯ ಹೇಳಿಕೆಗಳ ಬುಡವನ್ನು ಅಲ್ಲಾಡಿಸುವ ಹಾಗೆ, ಮುಚ್ಚಿಹೋದ ಸತ್ಯಗಳನ್ನು ಅಗೆದು ತೋರಿಸಿ ವ್ಯವಸ್ಥೆಯ ತರತಮದ ಮುಖಗಳನ್ನು ಬಯಲುಗೊಳಿಸುವ ಹಾಗೆ, ಆಧುನಿಕ ವೇಷದ ಹೈಟೆಕ್ ಶೋಷಣೆಯ ಮುಖಗಳನ್ನು ಕಳಚುವ ಹಾಗೆ ದಲಿತ ಸಂಶೋಧನೆಯ ಹೊಸ ತಾತ್ವಿಕತೆ ರೂಪುಗೊಳ್ಳಬೇಕಿದೆ.
ಪ್ರಾದೇಶಿಕವಾಗಿ ಆಯ್ದ ಕರ್ನಾಟಕದ ಕನಿಷ್ಠ ನೂರು ದಲಿತ ಕೇರಿಗಳನ್ನು ಎರಡು ಮೂರು ವರ್ಷ ಗಂಭೀರವಾಗಿ ಅಧ್ಯಯನ ಮಾಡಿದರೂ ಸದ್ಯದ ದಲಿತ ಬದುಕಿನ ಭಿನ್ನ ಆಯಾಮಗಳು ಗೋಚರಿಸಲಿವೆ. ಆದರೆ ಶಿಕ್ಷಣಕ್ಕೆ ತೆರೆದುಕೊಂಡ, ವಿಶ್ವವಿದ್ಯಾಲಯಗಳಲ್ಲಿ ಅಧ್ಯಾಪಕರಾಗಿಯೂ ಕೆಲಸ ನಿರ್ವಹಿಸುವ ಎಷ್ಟು ಜನ ದಲಿತ ಪ್ರಜ್ಞಾವಂತರು, ದಲಿತ ಪರ ಕಾಳಜಿಯ ಚಿಂತಕರು ಇಂತಹ ಸಂಶೋಧನೆಗೆ ಸಿದ್ಧರಾಗುತ್ತಾರೆ? ಎನ್ನುವುದು ಮುಂದಿರುವ ಪ್ರಶ್ನೆ.
1 ಕಾಮೆಂಟ್:
ನಿಮ್ಮ ಲೇಖನಗಳು ವೈಚಾರಿಕವಾಗಿರುತ್ತವೆ. ಆದುದರಿಂದ ದಲಿತ ವೈಚಾರಿಕತೆಯ ಬಗ್ಗೆ ಒಂದು ಉತ್ತಮ ಲೇಖನವನ್ನು ಬರೆದು ನನ್ನ ಮೇಲ್ ಗೆ ಕಳುಹಿಸಿಕೊದಿ ನಾನು ಒಂದು ಲೇಖನ ಸಂಗ್ರಹ ಪುಸ್ತಕವನ್ನು ಪ್ರಕಟಿಸಬೇಕೆಂದಿದ್ದೇನೆ.ನನ್ನ ಮೇಲ್ ಅಡ್ರಸ್ drindreshm@gmail.com ದಯವಿಟ್ಟು ಕಳುಹಿಸಿ
ಕಾಮೆಂಟ್ ಪೋಸ್ಟ್ ಮಾಡಿ