ಶುಕ್ರವಾರ, ಏಪ್ರಿಲ್ 13, 2012

ಅವಸಾನದತ್ತ ಸಾಗುತ್ತಿರುವ ರೇಷ್ಮೆ ಕೈಮಗ್ಗ

ಸಿದ್ದರಾಮ ಹಿರೇಮಠ, ಕೂಡ್ಲಿಗಿ.
(ರೇಷ್ಮೆ ಸೀರೆ ಸಿದ್ಧಪಡಿಸುತ್ತಿರುವ ಕೂಡ್ಲಿಗಿ ತಾಲೂಕಿನ ಹೂಡೇಂ ಗ್ರಾಮದ ಎಂ.ಟಿ.ನಾಗರಾಜ)

ಯಂತ್ರಗಳ ಭರಾಟೆ ಹೆಚ್ಚಿದಂತೆಲ್ಲ ದೇಸಿ ಉದ್ದಿಮೆಯಾಗಿದ್ದ ಕೈಮಗ್ಗಗಳು ಅವಸಾನದತ್ತ ಸಾಗುತ್ತಿವೆ. ಇದಕ್ಕೆ ಉತ್ತಮ ಉದಾಹರಣೆಯೆಂದರೆ ರೇಷ್ಮೆ ಕೈಮಗ್ಗ. ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲೂಕಿನಲ್ಲಿ ಮೊದಲು ಸಾಕಷ್ಟು ನೇಕಾರಿಕೆಯ ಮನೆಗಳಿದ್ದವು, ಇದೀಗ ಅವುಗಳೆಲ್ಲ ಅವಸಾನದಂಚಿನತ್ತ ಸಾಗಿ ಇದೇ ವೃತ್ತಿಯನ್ನವಲಂಬಿಸಿ ಕೇವಲ ಬೆರಳೆಣಿಕೆಯಷ್ಟು ಮಾತ್ರ ಮನೆಗಳು ಉಳಿದಿವೆ.
ತಾಲೂಕಿನಲ್ಲಿ ಹೊಸಹಳ್ಳಿ, ರಾಂಪುರ, ಹೂಡೇಂಗಳಲ್ಲಿ ರೇಷ್ಮೆ ಕೈಮಗ್ಗಗಳಿವೆ. ಹೂಡೇಂ ಗ್ರಾಮದಲ್ಲಿಯೇ ಈ ಮೊದಲು ೩೦ ಕೈಮಗ್ಗಗಳಿದ್ದವುಗಳು ಈಗ ಕೇವಲ ೩ ಮಗ್ಗಗಳು ಉಳಿದಿರುವುದು ವಿಪರ್ಯಾಸ. ತಾಲೂಕು ಕೇಂದ್ರದಿಂದ ೩೫ ಕಿ.ಮೀ ದೂರವಿರುವ ಗಡಿಗ್ರಾಮ ಹೂಡೇಂ. ಹಲವಾರು ತಲೆಮಾರುಗಳಿಂದ ಇಲ್ಲಿ ರೇಷ್ಮೆ ಕೈಮಗ್ಗಗಳು ಉಳಿದುಕೊಂಡು ಬಂದಿದ್ದವು. ಆದರೆ ಕಾಲ ಬದಲಾದಂತೆ, ಯಂತ್ರಗಳಿಂದ ಸಿದ್ಧಗೊಂಡ ರೇಷ್ಮೆ ಸೀರೆಗಳಿಗೇ ಜನ ಮಾರುಹೋಗುತ್ತಿರುವುದರಿಂದ ಕೈಮಗ್ಗದ ರೇಷ್ಮೆ ಸೀರೆಗಳು ಹಿಂದುಳಿಯತೊಡಗಿದವು.
(ಕೈಮಗ್ಗದಲ್ಲಿ ಸಿದ್ಧಗೊಳ್ಳುತ್ತಿರುವ ರೇಷ್ಮೆ ಸೀರೆ)

ಇಲ್ಲಿನ ಎಂ.ಟಿ.ನಾಗರಾಜ ಎಂಬವರು ಹಲವಾರು ವರ್ಷಗಳಿಂದ ಇದೇ ವೃತ್ತಿಯನ್ನವಲಂಬಿಸಿದ್ದಾರೆ. ಕೊಂಡ್ಲಹಳ್ಳಿ, ಮೊಳಕಾಲ್ಮೂರು, ರಾಯದುರ್ಗಗಳಿಂದ ತಮಗೆ ಬೇಕಾದ ಬಣ್ಣದ ರೇಷ್ಮೆ ನೂಲನ್ನು ತರುತ್ತಾರೆ. ಮಗ್ಗವನ್ನು ತಾವೇ ಸಿದ್ಧಪಡಿಸಿಕೊಳ್ಳಬೇಕು, ಇವರಿಗೆ ಕೂಲಿ ಹಣ ಕೊಡುವ ಮಾಲಕರು ಯಾವ ಡಿಸೈನ್ ಹೇಳುವರೋ ಆ ಡಿಸೈನ್‌ಗಳನ್ನು ಇವರೇ ಸಿದ್ಧಪಡಿಸಿಕೊಂಡು ನೇಯಬೇಕು. ೬ ರೇಷ್ಮೆ ಸೀರೆ ನೇಯಲು ಕನಿಷ್ಟ ೧೮,೦೦೦ ರೂ.ಗಳಾದರೂ ಬೇಕಾಗುತ್ತದೆ. ತಿಂಗಳಿಗೆ ಹಗಲು ಇರುಳು ದುಡಿದರೆ ೪ ಸೀರೆಗಳನ್ನು ನೇಯಬಹುದೆಂದು ನಾಗರಾಜ್ ಹೇಳುತ್ತಾರೆ. ಮನೆಯ ಸದಸ್ಯರೆಲ್ಲ ನೂಲು ಸಿದ್ಧಪಡಿಸುವುದು, ಮಗ್ಗವನ್ನು ಸಿದ್ಧಪಡಿಸುವುದು, ಎಳೆಗಳನ್ನು ಜೋಡಿಸುವುದು, ಎಲ್ಲ ಕೆಲಸಗಳಲ್ಲೂ ಪಾಲ್ಗೊಳ್ಳಬೇಕು. ಎಲ್ಲ ಸಿದ್ಧಗೊಂಡ ನಂತರ ನಾಗರಾಜ್ ಹಗಲಿರುಳು ಮಗ್ಗದಲ್ಲಿ ಕುಳಿತು ಸೀರೆಯನ್ನು ನೇಯುತ್ತಾರೆ.
(ರೇಷ್ಮೆ ಕೈಮಗ್ಗ)


‘ಇಷ್ಟೆಲ್ಲ ಕಷ್ಟಪಟ್ಟರೂ ದಿನಕ್ಕೆ ಸಿಗುವುದು ಕೇವಲ ೭೫ ರೂ.ಗಳ ಕೂಲಿ. ಬೆಂಗಳೂರಿನಂತಹ ನಗರ ಪ್ರದೇಶಗಳಲ್ಲಿ ದಿನಕ್ಕೆ ೫೦೦ ರೂ.ಗಳ ಕೂಲಿ ಸಂಪಾದಿಸಬೇಕಾದಲ್ಲಿ ಮಗ್ಗದಲ್ಲಿ ಕುಳಿತು ಯಾರು ಕಷ್ಟಪಡುತ್ತಾರೆ ?’ ಎಂದು ಅವರು ಪ್ರಶ್ನಿಸುತ್ತಾರೆ. ತಮಗಿದ್ದ ಆಸಕ್ತಿ ತಮ್ಮ ಮಕ್ಕಳಿಗೇ ಇಲ್ಲ ಎಂದು ಅವರು ವಿಶಾದ ವ್ಯಕ್ತಪಡಿಸುತ್ತಾರೆ. ‘ಗ್ರಾಮದ ಬಹುತೇಕ ಜನ ಬೆಂಗಳೂರು, ತುಮಕೂರು, ಚಿಕ್ಕಮಗಳೂರಿನೆಡೆ ಕೂಲಿಯನ್ನರಸಿ ಹೋಗಿದ್ದಾರೆ. ನನಗೆ ಕಷ್ಟವಾಗಲಿ, ನಷ್ಟವಾಗಲಿ ಇದನ್ನೇ ದೇವರೆಂದು ನಂಬಿದ್ದೇನೆ ಇದರಲ್ಲಿಯೇ ತೃಪ್ತಿ ಕಾಣುತ್ತೇನೆ’ ಎಂದು ನಾಗರಾಜ್ ಹೇಳುತ್ತಾರೆ. ಅಂದಹಾಗೆ ಇಲ್ಲಿ ಸಿದ್ಧಗೊಂಡ ಡಿಸೈನ್ ಇಲ್ಲದ ರೇಷ್ಮೆ ಸೀರೆ ಬೆಲೆ ೩,೫೦೦ ರೂ.ಗಳು, ಡಿಸೈನ್ ಇದ್ದವುಗಳಾದಲ್ಲಿ ೪,೫೦೦ ರೂ.ಗಳು. ಸಿದ್ಧಗೊಂಡ ರೇಷ್ಮೆ ಸೀರೆಗಳು ಮೊಳಕಾಲ್ಮೂರು, ರಾಯದುರ್ಗಗಳಿಗೆ ಹೋಗುತ್ತವೆ. ಯಂತ್ರದಲ್ಲಿ ಸಿದ್ಧಗೊಂಡ ಸೀರೆಗಳ್ಲಲಿ ನೂಲು ಬಿಗಿಯಾಗಿರುವುದಿಲ್ಲ, ಬಾಳಿಕೆಯೂ ಕಡಿಮೆ, ಕೈಮಗ್ಗದಲ್ಲಿ ಮನಸುಕೊಟ್ಟು ಸಿದ್ಧಪಡಿಸಿದ ಸೀರೆಗಳ ನೂಲು ಬಿಗಿಯಾಗಿರುತ್ತದೆ, ಬಾಳಿಕೆಯೂ ಹೆಚ್ಚು ಎನ್ನುವುದು ನೇಕಾರರ ನಿಲುವು.
(ಕೈಮಗ್ಗದ ಸಲಕರಣೆಗಳು)

ಹೊಸಮಗ್ಗಗಳಿಗೆ ೧೫,೦೦೦ ರೂ.ಗಳಷ್ಟು ಬೆಲೆ ಇದೆ. ಸರ್ಕಾರ ಕೈಮಗ್ಗಗಳನ್ನಾದರೂ ಒದಗಿಸಿದಲ್ಲಿ ನೇಕಾರರಿಗೆ ಪ್ರೋತ್ಸಾಹ ದೊರೆತಂತಾಗುವುದು ಎಂದು ಅವರು ಹೆಳುತ್ತಾರೆ. ೧೯೯೮ರಲ್ಲಿ ಶ್ರಿ ಗುರು ತಿಪ್ಪೇಸ್ವಾಮಿ ರೇಷ್ಮೆ ಕೈಮಗ್ಗ ನೇಕಾರರ ಉತ್ಪಾದನಾ ಮತ್ತು ಮಾರಾಟದ ಸಹಕಾರ ಸಂಘವನ್ನು ರಚಿಸಲಾಗಿತ್ತು. ಆಗ ೩೦-೪೦ ಜನ ನೇಕಾರರಿದ್ದರು. ಆದರೆ ಇದೀಗ ಸಂಖ್ಯೆ ೩ಕ್ಕಿಳಿದಿದೆ. ಇನ್ನು ಸಂಘದ ಗತಿಯೇನು? ಎಂದು ಪದಾಧಿಕಾರಿಗಳು ಕೇಳುತ್ತಾರೆ. ಎಂ.ಟಿ.ತಿಪ್ಪೇಸ್ವಾಮಿ ಅಧ್ಯಕ್ಷರು, ಎನ್.ಆರ್.ರಾಜಣ್ಣ ಕಾರ್ಯದರ್ಶಿಯಾಗಿದ್ದಾರೆ. ಮೂರೇ ಕೈಮಗ್ಗಗಳ ಸಹಕಾರ ಸಂಘದ ಪದಾಧಿಕಾರಿಗಳು ಕೇಳುವ ಪ್ರಶ್ನೆಗೆ ಉತ್ತರಿಸುವವರಾದರೂ ಯಾರು? ಬೇರೆ ಕೈಮಗ್ಗಗಳಿಗೆ ಸಾಲ ಸೌಲಭ್ಯ ಇತರೆ ಅವಕಾಶಗಳಿವೆ, ರೇಷ್ಮೆ ಮಗ್ಗಗಳಿಗೇಕಿಲ್ಲ? ಎಂದು ಅವರು ಕೇಳುತ್ತಾರೆ.
(ಕೈಮಗ್ಗದಲ್ಲಿ ಸಿದ್ಧಗೊಂಡಿರುವ ರೇಷ್ಮೆ ಸೀರೆ)

ಈ ಕುರಿತು ಸರ್ಕಾರಕ್ಕೆ ಸಾಕಷ್ಟು ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ, ಕೊನೆಗೆ ಸಾಲದ ರೂಪದಲ್ಲಿಯಾದರೂ ಕೈಮಗ್ಗಗಳು ಒದಗಿಸಿದ್ಲಲಿ ನಾವು ಹೇಗೋ ಬದುಕುತ್ತೇವೆ ಎಂದು ನೇಕಾರರು ಹೇಳುತ್ತಾರೆ. ಶ್ರಮಕ್ಕೆ ಬೆಲೆ ಕಟ್ಟಲಾಗದು ಎನ್ನುವಂತೆ ಇಲ್ಲಿ ಸಿದ್ಧಗೊಂಡ ಸೀರೆಗಳನ್ನು ಕೊಳ್ಳುವುದೇ ನೇಕಾರರನ್ನು ಪ್ರೋತ್ಸಾಹಿಸಿದಂತೆ, ಸಂಬಂಧಿಸಿದ ಇಲಾಖೆಯೂ ನೇಕಾರರ ಅಳಲನ್ನು ಗಮನಿಸಿ ಸಹಾಯವನ್ನು ಒದಗಿಸಬೇಕಾಗಿದೆ.

1 ಕಾಮೆಂಟ್‌:

ದಿವ್ಯಪ್ರಕಾಶ ಹೇಳಿದರು...

ನಮಸ್ಕಾರ ಅರುಣ್. ಜಾನಪದದ ಇತರ ಕಲೆ (ಉದ್ಯೋಗಗಳಂತೆ) ನೇಕಾರಿಕೆಯೂ ಅಳಿವಿನಂಚಿನಲ್ಲಿದೆ. ನಾನು ಬೆಳಗಾವಿಯಲ್ಲಿ ಓದುತ್ತಿದ್ದಾಗ ಅಲ್ಲಿನ ರಾಮದುರ್ಗ ತಾಲೂಕಿನ ನನ್ನ ನೇಕಾರ ಗೆಳೆಯರ ಮನೆಗಳಿಗೆ ಭೇಟಿ ನೀಡಿದ್ದೆ. ಯಾಂತ್ರೀಕರಣದ ಹಾವಳಿಗೆ ಸಿಕ್ಕಿ ಅಲ್ಲಿನ ಕೈಮಗ್ಗ ನೇಕಾರರೂ ದಿವಾಳಿ ಎದ್ದಿದ್ದನ್ನು ನಾನು ಕಣ್ಣಾರೆ ನೋಡಿದ್ದೇನೆ. ರಾಜ್ಯದ ಇತರ ಭಾಗಗಳಲ್ಲೂ ಪರಿಸ್ಥಿತಿ ಇದಕ್ಕಿಂತ ಭಿನ್ನವಿರಲಿಕ್ಕಿಲ್ಲ. ನಿಮ್ಮ ಲೇಖನ ಅದನ್ನು ಅಧಿಕ್ರತವಾಗಿ ಹೇಳುತ್ತಿದೆ.