ಮಂಗಳವಾರ, ಮಾರ್ಚ್ 6, 2012

ಜನರ ಆಲೋಚನಾ ವಿನ್ಯಾಸ ಮತ್ತು ಸಾಂಸ್ಕೃತಿಕ ಅನನ್ಯತೆಯ ಶೋಧ ಮುಖ್ಯ- ಡಾ. ಕೆ. ಚಿನ್ನಪ್ಪ ಗೌಡ


ಸಂಡೆ ಇಂಡಿಯನ್ ಪತ್ರಿಕೆಯಲ್ಲಿ ಹಿರಿಯ ವರದಿಗಾರರಾದ ಎನ್. ಕೆ. ಸುಪ್ರಭ ಅವರು ಡಾ. ಕೆ.ಚಿನ್ನಪ್ಪಗೌಡ ಅವರೊಂದಿಗೆ ನಡೆಸಿದ ಮಾತುಕತೆಯನ್ನು ಇಲ್ಲಿ ಪ್ರಕಟಿಸಲಾಗಿದೆ. ಸಂಡೆ ಇಂಡಿಯನ್ ನಲ್ಲಿ ಪ್ರಕಟವಾದ ಈ ಮಾತುಕತೆಯನ್ನು ಕನ್ನಡ ಜಾನಪದ ಬ್ಲಾಗ್ ಗೆ ಕಳಿಸಿಕೊಟ್ಟ ಎನ್. ಕೆ. ಸುಪ್ರಭ ಅವರಿಗೆ ಕೃತಜ್ಞತೆಗಳು. ಚಿನ್ನಪ್ಪ ಗೌಡರು ಕನ್ನಡದ ಸೂಕ್ಷ್ಮ ಜಾನಪದ ಅಧ್ಯಯನ ಕಾರರಲ್ಲಿ ಒಬ್ಬರು. ಅವರ ಭೂತಾರಾಧನೆ ಕುರಿತ ಸಂಶೋಧನೆ ಕನ್ನಡ ಜಾನಪದ ಕ್ಷೇತ್ರದ ಬಹುಮುಮುಖ್ಯ ಸಂಶೋಧನೆಗಳಲ್ಲಿ ಒಂದು. ಚಿನ್ನಪ್ಪ ಗೌಡದ ಸಂಸ್ಕೃತಿ ಸಿರಿ ಪುಸ್ತಕ ಅವರ ಜಾನಪದದ ಬಗೆಗಿನ ಆಲೋಚನ ವಿನ್ಯಾಸಗಳನ್ನು ಸ್ಪಷ್ಟವಾಗಿ ಕಾಣಿಸುತ್ತದೆ. ಇಲ್ಲಿನ ಮಾತುಕತೆ ಕೂಡ ಜಾನಪದ ಅಧ್ಯಯನ ತುಳು ಪ್ರಾದೇಶಿಕ ಅಧ್ಯಯನದ ಬಗ್ಗೆ ಸೂಕ್ಷ್ಮತೆಗಳಿವೆ-ಅರುಣ್

ಸಂದರ್ಶನ: ಎನ್.ಕೆ.ಸುಪ್ರಭ

ಮಂಗಳೂರು ವಿಶ್ವವಿದ್ಯಾಲಯದ ಕುಲಸಚಿವರಾಗಿರುವ ಜಾನಪದ ವಿದ್ವಾಂಸರಾದ ಡಾ. ಕೆ. ಚಿನ್ನಪ್ಪ ಗೌಡ ಅವರು ತುಳುನಾಡಿನ ಜಾನಪದ ಸಂಸ್ಕೃತಿ ಮತ್ತು ನಗರೀಕರಣದಿಂದ ಬದಲಾದ ಜಾನಪದದ ಸ್ವರೂಪ ಕುರಿತು ಎನ್.ಕೆ. ಸುಪ್ರಭಾ ಜೊತೆ ನಡೆಸಿದ ವಿಸ್ತೃತ ಚರ್ಚೆ...

ಜಾನಪದ ಸಂಸ್ಕೃತಿ ಮತ್ತು ಸಾಹಿತ್ಯದ ಪ್ರಾಮುಖ್ಯತೆ ಏನು?

ಜಾನಪದ ಎಂಬುದು ಜಾಗತಿಕ ನೆಲೆಯ ಅಂತರಾಷ್ಟ್ರೀಯ ಶಿಸ್ತು. ಜನಪದ ಸಾಹಿತ್ಯ, ಭೌತಿಕ ಸಂಸ್ಕೃತಿ, ಸಾಮಾಜಿಕ ಆಚರಣೆಗಳು ಮತ್ತು ರಂಗಪ್ರದರ್ಶನಗಳು... - ಈ ನಾಲ್ಕು ಘಟಕಗಳು ಒಟ್ಟು ಸೇರಿ ಜಾನಪದ ಎನ್ನುವ ಶಿಸ್ತು ರೂಪುಗೊಂಡಿದೆ. ಸರಳವಾಗಿ ಹೇಳುವುದಾದರೆ ಬೇರೆ ಬೇರೆ ಜನಸಮುದಾಯಗಳ ಸಂಸ್ಕೃತಿಯನ್ನು ಜಾನಪದದಲ್ಲಿ ಅಧ್ಯಯನ ಮಾಡಲಾಗುತ್ತದೆ. ಭಾಷೆ ಮೂಲಕ, ಭೌತಿಕ ವಿವರಗಳ ಮೂಲಕ, ರಂಗ ಸಂಪ್ರದಾಯಗಳು ಮತ್ತು ಪ್ರದರ್ಶನಗಳ ಮೂಲಕ ಜನ ಸಂಸ್ಕೃತಿ ಪ್ರಕಟವಾಗಬಹುದು. ಹೀಗೆ ಪ್ರಕಟವಾಗುವ ವಿವರಗಳ ಮೂಲಕ ಒಂದು ಜನಾಂಗದ ಆಲೋಚನಾ ವಿನ್ಯಾಸ ಮತ್ತು ಅವರ ಲೋಕದೃಷ್ಟಿಯ ಸ್ವರೂಪವನ್ನು ನಾವು ಜಾನಪದದಲ್ಲಿ ಕಾಣಬಹುದು. ಬೇರೆ ಬೇರೆ ದೇಶಗಳ ಬೇರೆ ಬೇರೆ ಕಾಲಘಟ್ಟದ ಜೀವನ ವಿವರಗಳನ್ನು ಸಂಗ್ರಹ ಮಾಡಿ ಆ ವಿವರಗಳ ಮೂಲಕ ಪ್ರಕಟವಾಗುವ ಜನರ ಆಲೋಚನಾ ವಿನ್ಯಾಸ ಏನು ಮತ್ತು ಅವರ ಸಾಂಸ್ಕೃತಿಕ ಅನನ್ಯತೆ ಏನು ಎನ್ನುವ ಶೋಧನೆ ಬಹಳ ಮುಖ್ಯವಾಗುತ್ತದೆ. ಜಾನಪದಕ್ಕೆ ಚಾರಿತ್ರಿಕ ನೆಲೆಗಟ್ಟು ಇದೆ. ವರ್ತಮಾನದ ಸಂಸ್ಕೃತಿಯ ಅಧ್ಯಯನವೂ ಅದರಲ್ಲಿ ಸೇರಿದೆ.

ಜಾನಪದದ ಅಧ್ಯಯನ ಮತ್ತು ದಾಖಲೀಕರಣ ಹೇಗೆ ನಡೆಯುತ್ತದೆ?

ಅಧ್ಯಯನಕ್ಕೆ ಅವಶ್ಯಕವಾಗಿರುವುದು ಕ್ಷೇತ್ರಕಾರ್ಯ. ಕ್ಷೇತ್ರಕಾರ್ಯಗಳ ಮೂಲಕ ಮಾಹಿತಿಗಳನ್ನು ಸಂಗ್ರಹಿಸಬೇಕು. ಟಿಪ್ಪಣಿಗಳನ್ನು ಮಾಡಿಕೊಳ್ಳುವ ಮೂಲಕ ಮಾಹಿತಿ ಸಂಗ್ರಹಿಸಬಹುದು ಅಥವಾ ಆಧುನಿಕ ಯಂತ್ರಗಳನ್ನು ಬಳಸಿಕೊಳ್ಳಬಹುದು. ಆಡಿಯೋ ಮತ್ತು ವಿಡಿಯೋ ದಾಖಲಾತಿ ನಡೆಸಬಹುದು. ಹಾಗೆ ಸಂಗ್ರಹಿಸಿದ ಮಾಹಿತಿಗಳನ್ನು ವಿಶ್ಲೇಷಣೆ ಮಾಡಲಾಗುತ್ತದೆ. ಜಾನಪದ ಅಧ್ಯಯನದಲ್ಲಿ ಪ್ರಕಟಿತ ಪಠ್ಯಕೇಂದ್ರಿತ ವಿಶ್ಲೇಷಣೆ ಮಾಡುವುದಾದರೆ ಕ್ಷೇತ್ರಕಾರ್ಯದ ಅವಶ್ಯಕತೆ ಇಲ್ಲ. ಈ ನಿಟ್ಟಿನಲ್ಲಿ ಕಳೆದ ೨೦ ವರ್ಷಗಳಿಂದ ಸಾಕಷ್ಟು ಕ್ಷೇತ್ರಕಾರ್ಯಧಾರಿತ ಅಧ್ಯಯನಗಳು ನಡೆದಿವೆ ಮತ್ತು ಈಗಲೂ ನಡೆಯುತ್ತಿವೆ. ಒಂದು ಕಾಲದಲ್ಲಿ ಮಾಹಿತಿ ಸಂಗ್ರಹಕ್ಕೆ ವಿಶೇಷ ಗಮನ ನೀಡಲಾಗುತ್ತಿತ್ತು. ಆದರೆ ಈಗ ಮಾಹಿತಿ ಕಲೆ ಹಾಕಿ, ವಿಶ್ಲೇಷಣೆ ಮಾಡುವ ಮೂಲಕ ಜಾನಪದದ ಅರ್ಥ, ಉದ್ದೇಶ ಮತ್ತು ಕಾರ್ಯದ ಬಗ್ಗೆ ತಿಳಿದುಕೊಳ್ಳಲು ಪ್ರಯತ್ನಿಸಲಾಗುತ್ತಿದೆ. ಜಾನಪದ ಅಧ್ಯಯನದಲ್ಲಿ ವಿದ್ವಾಂಸರ ಅಭಿಪ್ರಾಯದಷ್ಟೇ ಕಲಾವಿದರ ಅಭಿಪ್ರಾಯವೂ ಮುಖ್ಯ. ಏಕೆಂದರೆ ಜನಪದರೇ ಜಾನಪದದ ಅಧಿಕೃತ ಒಡೆಯರು.

ಇಂದಿನ ಕಾಲ ಘಟ್ಟದಲ್ಲಿ ಜನಪದದ ಪ್ರಸ್ತುತತೆ ಏನು?

ಬೇರೆ ಬೇರೆ ಜನಸಮುದಾಯಗಳ ಜಾನಪದ ಇಂದಿಗೂ ಜೀವಂತವಾಗಿದೆ; ಕ್ರಿಯಾತ್ಮಕವಾಗಿದೆ. ಎಲ್ಲಾ ಸಮುದಾಯಗಳಲ್ಲೂ ಹಾಡುಗಳು, ಕುಣಿತಗಳು, ಕತೆಗಳು ಹೀಗೆ ಜನಪದ ಸಾಹಿತ್ಯದ ಎಲ್ಲಾ ಪ್ರಕಾರಗಳಿವೆ. ಬಹಳ ಮುಖ್ಯವಾದುದೆಂದರೆ ಇಂದು ಶಿಕ್ಷಣ ಹೆಚ್ಚು ಸಾರ್ವತ್ರಿಕಗೊಂಡಿದೆ. ನಗರಗಳು, ಉದ್ಯೋಗಗಳು ಹೆಚ್ಚಾಗಿವೆ. ಒಟ್ಟಾರೆ ನಮ್ಮ ಬದುಕಿನ ಸ್ಥಿತಿಗತಿ ಬದಲಾಗಿದೆ. ಇಂಥ ಬದಲಾದ ಕಾಲಘಟ್ಟದಲ್ಲಿ ಆಧುನಿಕ ಒತ್ತಡಗಳಿಗೆ ಒಳಗಾಗುವ ಜನರು ಬದಲಾದ ಸನ್ನಿವೇಶಕ್ಕೆ ಅನುಗುಣವಾಗಿ ತಮ್ಮ ಬದುಕನ್ನು ಹೇಗೆ ರೂಪಿಸಿಕೊಳ್ಳುತ್ತಾರೆ, ತಮ್ಮ ಬದುಕನ್ನು ಹೇಗೆ ಪರಿಷ್ಕರಿಸಿಕೊಳ್ಳುತ್ತಾರೆ ಎನ್ನುವುದು ಈ ಜಾನಪದದ ಅಧ್ಯಯನದಿಂದ ನಮಗೆ ಗೊತ್ತಾಗುತ್ತದೆ. ಉದಾಹರಣೆಗೆ ಮದುವೆಯ ಸ್ವರೂಪದಲ್ಲಿ ಆಧುನಿಕ ಕಾಲದಲ್ಲಿ ಆಗಿರುವ ಬದಲಾವಣೆ.


ಜಾನಪದ ವಿಶ್ವವಿದ್ಯಾನಿಲಯ ರಚನೆಯಾದ ಮೇಲೆ ಜಾನಪದ ಅಧ್ಯಯನ ಯಾವ ದಿಕ್ಕಿನಲ್ಲಿ ಸಾಗುತ್ತಿದೆ? ಮುಂದಿರುವ ಸವಾಲು ಹಾಗೂ ಸಾಧ್ಯತೆಗಳೇನು?

ಈಗ ಜಾನಪದ ಅಧ್ಯಯನಕ್ಕೆಂದೇ ವಿಶ್ವವಿದ್ಯಾನಿಲಯ ಸ್ಥಾಪನೆಯಾಗಿದೆ ನಿಜ. ಇದರರ್ಥ ಈವರೆಗೆ ಜಾನಪದ ಅಧ್ಯಯನ ನಡೆದಿಲ್ಲ ಎಂದಲ್ಲ. ಮಂಗಳೂರು, ಮೈಸೂರು, ಧಾರವಾಡ, ಹಂಪಿ, ಗುಲ್ಬರ್ಗ ಹೀಗೆ - ಹಲವು ವಿಶ್ವವಿದ್ಯಾನಿಲಯಗಳಲ್ಲಿ ಹಾಗೂ ಕೆಲವು ಜಾನಪದ ಕೇಂದ್ರಗಳಲ್ಲಿ ಅಧ್ಯಯನ ನಡೆಯುತ್ತಾ ಬಂದಿದೆ. ಉಡುಪಿಯ ಪ್ರಾದೇಶಿಕ ರಂಗಕಲೆಗಳ ಅಧ್ಯಯನ ಕೇಂದ್ರ ಅಥವಾ ಮಂಗಳೂರು ವಿಶ್ವವಿದ್ಯಾನಿಲಯದ ತುಳು ಅಧ್ಯಯನ ಪೀಠ ಇಲ್ಲೆಲ್ಲಾ ಅಧ್ಯಯನ ನಡೆಯುತ್ತಿದೆ. ಇಡೀ ಕರ್ನಾಟಕದ ಬಹುಮುಖೀ ಜಾನಪದವನ್ನು ಅಧ್ಯಯನ ಮಾಡುವ ಬೃಹತ್ ಉದ್ದೇಶದಿಂದ ಜಾನಪದ ವಿಶ್ವವಿದ್ಯಾನಿಲಯವನ್ನು ಸ್ಥಾಪಿಸಲಾಗಿದೆ. ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಕರಾವಳಿ-ಕರ್ನಾಟಕ ವ್ಯಾಪ್ತಿಯೊಳಗಿನ ಜಾನಪದ ಅಧ್ಯಯನಕ್ಕೆ ವಿಶೇಷ ಒತ್ತು. ಆದರೆ ಜಾನಪದ ವಿಶ್ವವಿದ್ಯಾನಿಲಯದ ಉದ್ದೇಶ ಮತ್ತು ವ್ಯಾಪ್ತಿ ಬಹಳ ದೊಡ್ಡದು. ಅಖಿಲ ಕರ್ನಾಟಕ ಜಾನಪದದ ಅಧ್ಯಯನ ಅದರ ಉದ್ದೇಶ ಮತ್ತು ಗುರಿ. ಇದೀಗ ಜಾನಪದ ವಿಶ್ವವಿದ್ಯಾನಿಲಯ ಕರ್ನಾಟಕದ ಎಲ್ಲಾ ಗ್ರಾಮಗಳ ಮಾಹಿತಿಗಳನ್ನು ಸಂಗ್ರಹ ಮಾಡಿ ಗ್ರಾಮ ಕೋಶ ಅಥವಾ ಗ್ರಾಮ ಇತಿಹಾಸವನ್ನು ಕಟ್ಟುವ ಕಾಯಕಕ್ಕೆ ಕೈ ಹಾಕಿದೆ. ಈ ಯೋಜನೆಯನ್ನು ಪ್ರಾದೇಶಿಕ ಕೇಂದ್ರದ ಮಟ್ಟದಲ್ಲಿ ಮಾಡುವುದು ಸ್ವಲ್ಪ ಕಷ್ಟವೇ. ಅಧ್ಯಯನ, ಬೋಧನೆ, ಸಂಶೋಧನೆ, ಪ್ರಕಟಣೆ ಮತ್ತು ಪ್ರಸಾರ ಈ ಎಲ್ಲವನ್ನೂ ಜಾನಪದ ವಿಶ್ವವಿದ್ಯಾನಿಲಯ ಮಾಡಬೇಕಾಗಿದೆ. ಇದೇ ಉದ್ದೇಶದಿಂದ ಈ ವಿಶ್ವವಿದ್ಯಾನಿಲಯ ಸ್ಥಾಪನೆಯಾಗಿದೆ. ಅಲ್ಲದೆ ಇತರ ರಾಜ್ಯಗಳ ಜಾನಪದದ ತೌಲನಿಕ ಅಧ್ಯಯನಕ್ಕೂ ಅವಕಾಶವಿದೆ. ಅಂತರಾಷ್ಟ್ರೀಯ ಮಟ್ಟದಲ್ಲೂ ಅಧ್ಯಯನ ನಡೆಯಬೇಕು.

ಗ್ರಾಮಕೋಶದ ಕಲ್ಪನೆಯನ್ನು ವಿವರಿಸಬಹುದೆ?

ಜಾನಪದ ವಿಶ್ವವಿದ್ಯಾನಿಲಯವು ಗ್ರಾಮ ಇತಿಹಾಸವನ್ನು ಹೊಸ ಬಗೆಯಲ್ಲಿ ಕಟ್ಟುವುದಕ್ಕೆ ಸಿದ್ಧತೆ ನಡೆಸುತ್ತಿದೆ. ಇತ್ತೀಚೆಗಿನವರೆಗೂ ರಾಜರು, ಉಳ್ಳವರ ಮತ್ತು ಮೇಲ್ವರ್ಗದವರ ಇತಿಹಾಸವನ್ನು ಮಾತ್ರ ಅಧ್ಯಯನ ಮಾಡುತ್ತಿದ್ದೆವು. ಆದರೆ ಈಗ ಬಡವರು, ದಲಿತರು ಮತ್ತು ಮಹಿಳೆಯರು ಸೇರಿ ಜನಸಾಮಾನ್ಯರ ಇತಿಹಾಸವನ್ನು ದಾಖಲೀಕರಿಸುವುದು ಗ್ರಾಮಕೋಶದ ಉದ್ದೇಶ ಎಂದು ನಾನು ಭಾವಿಸಿದ್ದೇನೆ. ಒಂದು ಇತಿಹಾಸ ಸಮಗ್ರವಾಗಬೇಕೆಂದರೆ ರಾಜರ ಇತಿಹಾಸದ ಜೊತೆಗೆ ಜನರ ಅಂದರೆ ರೈತರ, ಗ್ರಾಮೀಣರ, ಮಹಿಳೆಯರ ಮತ್ತು ಹಳ್ಳಿಗರ ಇತಿಹಾಸವೂ ರಚನೆಯಾಗಬೇಕು. ಗ್ರಾಮ ಇತಿಹಾಸ ಶೋಧಿಸಬೇಕೆಂದರೆ ಹಳ್ಳಿಗಳ ಅಧ್ಯಯನ ನಡೆಯಬೇಕು. ಇದು ನಮ್ಮ ಗ್ರಾಮದ ಚರಿತ್ರೆ ಮಾತ್ರವಲ್ಲ, ಇಡೀ ನಾಡಿನ ಮತ್ತು ದೇಶದ ಚರಿತ್ರೆ ಕಟ್ಟುವುದಕ್ಕೆ ಅಗತ್ಯವಿರುವ ತಳಹದಿ ನಿರ್ಮಿಸುವ ಕೆಲಸ. ಈ ಉದ್ದೇಶದಿಂದಲೇ ಜಾನಪದ ವಿಶ್ವವಿದ್ಯಾನಿಲಯ ಈ ವಿಷಯವನ್ನು ಕೈಗೆತ್ತಿಕೊಂಡಿದೆ. ಇದು ಮಹತ್ವಾಕಾಂಕ್ಷೆಯ ಯೋಜನೆ.

ಅಭಿವೃದ್ಧಿ ಹೊಂದಿದ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಉನ್ನತ ಶಿಕ್ಷಣದ ಕಲಿಕಾ ಗುಣಮಟ್ಟ ಎಲ್ಲಿದೆ? ಸ್ನಾತಕೋತ್ತರ ಪದವಿಗಳು ಉದ್ಯೋಗ ಪಡೆದುಕೊಳ್ಳುವ ಮಟ್ಟಿಗೆ ಗುಣಮಟ್ಟದ ಕಲಿಕೆ ನೀಡುತ್ತಿಲ್ಲವೆ?

ಈ ಪ್ರಶ್ನೆಗೆ ನೇರವಾದ ಸರಳ ಉತ್ತರ ಕೊಡುವುದು ಕಷ್ಟ. ವಿಶ್ವವಿದ್ಯಾನಿಲಯದ ಸಂಶೋಧನೆ ಅಥವಾ ಶಿಕ್ಷಣದ ಗುಣಮಟ್ಟ ಕುಸಿದಿದೆ ಎನ್ನುವುದನ್ನು ನಾನು ಒಪ್ಪುವುದಿಲ್ಲ. ಇಂದು ಉನ್ನತ ಶಿಕ್ಷಣದ ವ್ಯಾಪ್ತಿ ವಿಸ್ತಾರಗೊಂಡಿದೆ. ಆದರೂ ಉನ್ನತ ಶಿಕ್ಷಣಕ್ಕೆ ಬರುವವರ ಸಂಖ್ಯೆ ಕೇವಲ ಶೇ. ೧೨.೪. ಬೇರೆ ದೇಶಗಳಲ್ಲಿ ಇದರ ಮೂರು ಪಟ್ಟು ಇದೆ. ಕೆಲವೆಡೆ ಶೇ. ೩೦ ರಿಂದ ಶೇ. ೪೦ ರವರೆಗೆ ಇದೆ. ನಾವು ನಮ್ಮ ಉನ್ನತ ಶಿಕ್ಷಣದ ಪ್ರಮಾಣವನ್ನು ಶೇ. ೧೨ರಿಂದ ಶೇ. ೨೦ ಅಥವಾ ಶೇ. ೨೫ಕ್ಕೆ ಹೆಚ್ಚಿಸಬೇಕಾದರೆ ಈಗ ಇರುವ ವಿಶ್ವವಿದ್ಯಾನಿಲಯಗಳ ಸಂಖ್ಯೆಯನ್ನು ದ್ವಿಗುಣಗೊಳಿಸಬೇಕಾಗುತ್ತದೆ. ಕಾಲೇಜುಗಳ ಸಂಖ್ಯೆಯನ್ನು ಸುಮಾರು ೨೯,೦೦೦ ದಿಂದ ೫೮,೦೦೦ಕ್ಕೆ ಏರಿಸಬೇಕಾಗುತ್ತದೆ. ಅದೇ ಕಾರಣದಿಂದ ಉನ್ನತ ಶಿಕ್ಷಣಕ್ಕೆ ೧೨ನೇ ಪಂಚವಾರ್ಷಿಕ ಯೋಜನೆಯಲ್ಲಿ ದೊಡ್ಡ ಪ್ರಮಾಣದ ಮೊತ್ತವನ್ನು ಸರ್ಕಾರ ಕಾಯ್ದಿರಿಸಿದೆ. ಆದರೆ ವಿಸ್ತರಣೆಯ ಜೊತೆ ಸೇರ್ಪಡೆಯೂ ಆಗಬೇಕು. ಅಂದರೆ ಉನ್ನತ ಶಿಕ್ಷಣದಲ್ಲಿ ಆಸಕ್ತಿ ಮತ್ತು ಅರ್ಹತೆ ಇರುವ ಎಲ್ಲರಿಗೂ ಅವಕಾಶವನ್ನು ಕಲ್ಪಿಸಿಕೊಡಬೇಕು. ಎಲ್ಲಕ್ಕಿಂತ ಮುಖ್ಯವಾಗಿ ಗುಣಾತ್ಮಕ ಶಿಕ್ಷಣ ಕೊಡಬೇಕು. ಅದಕ್ಕೆ ಮೂಲಭೂತ ಸೌಕರ್ಯ ಇರಬೇಕು. ಅತ್ಯುತ್ತಮ ವ್ಯವಸ್ಥೆ, ಅಧ್ಯಾಪಕರು ಹಾಗೂ ಗ್ರಂಥಾಲಯ, ಗಣಕ ತಂತ್ರಜ್ಞಾನ ಮೊದಲಾದ ಸವಲತ್ತುಗಳು ಇರಬೇಕು. ಅನೇಕ ವಿಶ್ವವಿದ್ಯಾನಿಲಯಗಳಲ್ಲಿ ಈ ಗುಣಮಟ್ಟ ನಿರ್ವಹಣೆ ಸಾಧ್ಯವಾಗುತ್ತಿಲ್ಲ. ಸರ್ಕಾರ ಸ್ಥಾಪಿಸಿದ ಕೇಂದ್ರೀಯ ವಿಶ್ವವಿದ್ಯಾನಿಲಯಗಳಲ್ಲಿ ಸಾಕಷ್ಟು ಮೂಲಭೂತ ಸೌಕರ್ಯಗಳಿವೆ. ರಾಜ್ಯಗಳ ವಿಶ್ವವಿದ್ಯಾನಿಲಯಗಳಿಗೆ ಇರುವಂತೆ ಕೇಂದ್ರೀಯ ವಿಶ್ವವಿದ್ಯಾನಿಲಯಗಳಿಗೆ ಹಣದ ಕೊರತೆ ಇಲ್ಲ. ಇನ್ನು ಗ್ಯಾಟ್ ಒಪ್ಪಂದದ ಪ್ರಕಾರ ವಿದೇಶಿ ವಿಶ್ವವಿದ್ಯಾನಿಲಯಗಳು ಭಾರತಕ್ಕೆ ಬರುವಾಗ ನಾವು ನಮ್ಮ ವಿಶ್ವವಿದ್ಯಾಲನಿಯಗಳನ್ನು ಬಲಪಡಿಸದೆ ಇದ್ದಲ್ಲಿ ನಮ್ಮದು ದ್ವಿತೀಯ ಅಥವಾ ತೃತೀಯ ದರ್ಜೆಯ ವಿಶ್ವವಿದ್ಯಾನಿಲಯಗಳಾಗಿ ಬಿಡುತ್ತವೆ. ಆದರೆ ಪ್ರಮಾಣ ಹೆಚ್ಚಾದಾಗ ಜೊಳ್ಳುಗಳೂ ಕಂಡು ಬರಬಹುದು. ಗುಣಮಟ್ಟ ಕುಸಿಯದ ಹಾಗೆ ಕಾಪಾಡಿಕೊಳ್ಳುವುದು ಶಿಕ್ಷಣ ರಂಗದ ಬಹಳ ದೊಡ್ಡ ಜವಾಬ್ದಾರಿ.


ನಾಟಕಗಳು ಪೌರಾಣಿಕ ಕಥೆಗಳಿಂದ ಆಧುನಿಕ ಶೈಲಿಗೆ ಮರುಹುಟ್ಟು ಪಡೆದಿವೆ. ಆದರೆ ಯಕ್ಷಗಾನ ಈ ರೂಪ ಯಾಕೆ ಪಡೆದುಕೊಂಡಿಲ್ಲ?

ನಾಟಕ ಮತ್ತು ಯಕ್ಷಗಾನದ ಬಗ್ಗೆ ಮಾತನಾಡುವಾಗ ನಾಟಕ ಬೇರೆ, ಯಕ್ಷಗಾನ ಬೇರೆ ಎನ್ನುವುದನ್ನು ಗಮನದಲ್ಲಿಟ್ಟುಕೊಳ್ಳಬೇಕು. ನಾಟಕದಲ್ಲಿ ಸಾಹಿತ್ಯ ಕೃತಿ ಮತ್ತು ರಂಗಕೃತಿ ಎಂಬ ಎರಡು ಆಯಾಮಗಳಿವೆ. ಸಾಹಿತ್ಯ ಮತ್ತು ರಂಗ ಕೃತಿಯಾಗಿ ಬಹಳಷ್ಟು ಬದಲಾವಣೆಗಳನ್ನು ನಾಟಕ ಪಡೆದುಕೊಂಡಿದೆ. ಈಗ ಐತಿಹಾಸಿಕ ನಾಟಕಗಳಿಗಿಂತ ಸಾಮಾಜಿಕ ನಾಟಕಗಳೇ ಹೆಚ್ಚು ಜನಪ್ರಿಯ. ಆದರೆ ಯಕ್ಷಗಾನ ಎನ್ನುವುದು ಒಂದು ಧಾರ್ಮಿಕ ರಂಗಪ್ರದರ್ಶನ. ಅಲ್ಲಿ ಪೌರಾಣಿಕ ಕಥಾನಕಗಳೇ ಇರುತ್ತವೆ. ನಾಟಕಕ್ಕೆ ಸಾಹಿತ್ಯ ಕೃತಿ ಇರುವ ಹಾಗೆ ಯಕ್ಷಗಾನಕ್ಕೆ ಸಾಹಿತ್ಯ ಪ್ರಸಂಗ ಇರುತ್ತದೆ. ಆ ಪ್ರಸಂಗ ಕೃತಿಯ ಹಾಡನ್ನು ಆಧರಿಸಿ ಯಕ್ಷಗಾನ ರಂಗದ ಮೇಲೆ ಅರಳುತ್ತದೆ. ಈ ಪ್ರಸಂಗಗಳು ಪೌರಾಣಿಕ ಕಥೆಗಳನ್ನು ಆಧರಿಸಿವೆ. ಹಾಗೆಯೇ ಪರಿಸರದ ಕುರಿತ, ಏಡ್ಸ್ ಮಾರಕ ಎನ್ನುವ ಆಶಯಗಳಿರುವ ಸಾಮಾಜಿಕ ಯಕ್ಷಗಾನಗಳಿವೆ. ಆದರೆ ಪುರಾಣಗಳನ್ನು ಆಧರಿಸಿ ನಡೆಯುವ ಯಕ್ಷಗಾನ ಪ್ರದರ್ಶನಗಳ ಪ್ರಮಾಣದಲ್ಲಿ ಇವು ಬೆಳೆದಿಲ್ಲ. ಸಾಮಾಜಿಕ ಆಶಯಗಳುಳ್ಳ ಪ್ರದರ್ಶನಗಳು ಕಡಿಮೆ. ಪ್ರಯತ್ನಗಳು ಮತ್ತು ಪ್ರಯೋಗಗಳು ಆಗಿವೆ. ಅಮೃತ ಸೋಮೇಶ್ವರ ಅವರ ಅನೇಕ ಪ್ರಸಂಗಗಳನ್ನು ನಾವು ಇಲ್ಲಿ ಉಲ್ಲೇಖಿಸಬಹುದು. ಹಾಗಿದ್ದರೂ ಪುರಾಣದ ಕಥೆಗಳ ಜೊತೆಗೆ ಆಧುನಿಕ ಕಾಲಘಟ್ಟಕ್ಕೆ ಸಂಬಂಧಿಸಿದ ವಿಷಯಗಳನ್ನು ಜೋಡಿಸುವ ಮೂಲಕ ಯಕ್ಷಗಾನಕ್ಕೆ ಪ್ರಸ್ತುತತೆ ತರುವ ಪ್ರಯತ್ನಗಳೂ ನಡೆದಿವೆ. ಕಥೆ, ಪ್ರಸಂಗ ಪುರಾಣದ್ದೇ ಆದರೂ ಸಮಕಾಲೀನ ವಿಷಯವನ್ನು ಚರ್ಚಿಸುವ ಮೂಲಕ ಪ್ರಸ್ತುತತೆ ಬರುತ್ತದೆ.

ಯಕ್ಷಗಾನಕ್ಕೆ ಆಧುನಿಕತೆ ತಂದುಕೊಡುವ ಮಟ್ಟಿನ ಪ್ರತಿಭೆ ಈ ಕ್ಷೇತ್ರದಲ್ಲಿ ಬೆಳೆದಿಲ್ಲ ಎಂದು ನಿಮಗೆ ಅನಿಸುತ್ತಿದೆಯೆ?

ಈಗಲೂ ಹೊಸ ಪ್ರಸಂಗಗಳ ರಚನೆಯಾಗುತ್ತಿದೆ. ಅಮೃತರೇ ಸುಮಾರು ಹದಿನೈದರಷ್ಟು ನವೀನ ಆಶಯಗಳುಳ್ಳ ಪ್ರಸಂಗಗಳನ್ನು ಬರೆದಿದ್ದಾರೆ. ಪ್ರಾಚೀನ ಯಕ್ಷಗಾನ ಕವಿಗಳ ದೊಡ್ಡ ಯಾದಿ ಇದೆ. ಪ್ರದರ್ಶನದಲ್ಲಿ ಹೊಸತನ ತರುವುದು ಇಲ್ಲಿ ಮುಖ್ಯ. ಪುರಾಣ ಕಥೆ ಬಳಸುವಾಗಲೂ ಆಧುನಿಕ ಸಂವೇದನೆ ತುಂಬುವುದು ಅಗತ್ಯ. ಒಂದು ಕಾಲದಲ್ಲಿ ಇಡೀ ರಾತ್ರಿ ನಡೆಯುತ್ತಿದ್ದ ಯಕ್ಷಗಾನ ಈಗ ಮೂರು ಗಂಟೆಯಲ್ಲೂ ಮುಗಿಯುತ್ತದೆ ಮತ್ತು ಒಂದೂವರೆ ಗಂಟೆಯಲ್ಲೂ ಮುಗಿಯುವುದಿದೆ. ವೇಷಭೂಷಣಗಳಲ್ಲೂ ಬದಲಾವಣೆಯಾಗಿದೆ. ಮಾತಿನಲ್ಲಿ, ಕುಣಿತದಲ್ಲಿ ಅನೇಕ ಪ್ರಯೋಗಗಳನ್ನು ಕಾಣಬಹುದು. ಇವೆಲ್ಲಾ ಪ್ರಯೋಗಗಳು. ಯಕ್ಷಗಾನಕ್ಕೆ ಒಂದು ಸ್ಥಿರವಾದ ಪರಂಪರೆಯಿದೆ. ಈ ಪರಂಪರೆಯ ವರ್ತುಲದಲ್ಲಿ ಪ್ರದರ್ಶನವಾಗಬೇಕು. ಈ ಪರಂಪರೆಯೂ ಚಲನಶೀಲವೇ. ಹೊಸ ಪ್ರಯೋಗ ಎಂದರೆ ಪರಂಪರೆಯನ್ನು ಇಟ್ಟುಕೊಂಡು ನಡೆವ ಪ್ರಯೋಗವಾಗಿರುತ್ತದೆ. ಹೀಗಾಗಿ ಪ್ರತೀ ಪ್ರದರ್ಶನವೂ ಭಿನ್ನವಾಗಿರುತ್ತದೆ. ರಾಷ್ಟ್ರೀಯ ಕಲಾವಿದರೆಂಬ ಮನ್ನಣೆಯ ಯಕ್ಷಗಾನ ಪ್ರತಿಭೆಗಳು ಸಾಕಷ್ಟಿವೆ.

ತುಳು ಭಾಷೆ ಮತ್ತು ಸಂಸ್ಕೃತಿ ಬೆಳವಣಿಗೆ ಯಾವ ದಿಕ್ಕಿನಲ್ಲಿ ಸಾಗುತ್ತಿದೆ?

ತುಳು ಭಾಷೆ ಮತ್ತು ಸಾಹಿತ್ಯ ರಚನೆಗೆ ಈಗ ಚಾಲನೆ ಸಿಕ್ಕಿದೆ. ತುಳು ಮಾತನಾಡುವುದು ಅವಮಾನಕರ ಎಂಬ ಕಾಲ ಹೋಗಿದೆ. ತುಳು ಮಾತನಾಡುವುದು ಹೆಮ್ಮೆಯ ವಿಷಯವಾಗಿದೆ. ತುಳು ಒಂದು ಸಂಪನ್ನವಾದ ಭಾಷೆ ಎನ್ನುವುದು ಸಾಬೀತಾಗಿದೆ. ಹೀಗಾಗಿ ತುಳುವಿಗೆ ಸಂಬಂಧಪಟ್ಟಂತೆ ಸಂಘ ಸಂಸ್ಥೆಗಳು ಕೆಲಸ ಮಾಡುತ್ತಿವೆ. ತುಳು ಈಗ ಹಿಂದೆಂದಿಗಿಂತಲೂ ಹೆಚ್ಚು ಮನ್ನಣೆ ಪಡೆದುಕೊಳ್ಳುತ್ತಿದೆ. ತುಳುವನ್ನು ಈಗ ಕಲಿಕೆಯ ಭಾಷೆಯನ್ನಾಗಿಯೂ, ಶಿಕ್ಷಣದ ವಿಷಯವಾಗಿ, ಭಾಷಾ ಪತ್ರಿಕೆಯಾಗಿ ಕಲಿಸುವಂತಹ ಪ್ರಯತ್ನಗಳು ನಡೆಯುತ್ತಿವೆ.

ತುಳುನಾಡು ಸಾಂಸ್ಕೃತಿಕವಾಗಿ ಶ್ರೀಮಂತ ನಾಡು. ಆದರೆ ಈಗ ಮೂಲದಲ್ಲೇ ಭಿನ್ನಾಭಿಪ್ರಾಯ ಕಾಣಿಸುತ್ತಿದೆ.. ಸಾಂಸ್ಕೃತಿಕವಾಗಿ ಶ್ರೀಮಂತವಾದ ದಕ್ಷಿಣ ಕನ್ನಡ ಇಂದು ಕೋಮುದ್ವೇಷಕ್ಕೆ ನೆಲೆಯಾಗಿರಲು ಕಾರಣವೇನು?

ನಾವು ದಕ್ಷಿಣ ಕನ್ನಡದ ಹಿನ್ನೆಲೆ ನೋಡಬೇಕು. ಅನೇಕ ಆಚರಣೆಗಳು, ಆರಾಧನೆಗಳು - ಒಟ್ಟು ತುಳು ಜಾನಪದ ಕೃಷಿಯನ್ನಾಧರಿಸಿದ್ದಾಗಿವೆ. ವ್ಯವಸಾಯ ಹಿಂದೆ ಸರಿದಾಗ ಅದನ್ನು ಆಧರಿಸಿದ ಅನೇಕ ಆಚರಣೆಗಳೂ ಹಿಂದೆ ಸರಿದವು. ಉದಾಹರಣೆಗೆ ಕಬಿತೆಗಳನ್ನು ಹಾಡಬೇಕೆಂದರೆ ವ್ಯವಸಾಯ ಸಂಸ್ಕೃತಿ ಅಗತ್ಯ. ಭತ್ತದ ಬೆಳೆಯೇ ಇಲ್ಲವೆಂದಾಗ ಕಬಿತೆಗಳನ್ನು ವೇದಿಕೆ ಮೇಲೆ ಹಾಡಬೇಕಷ್ಟೆ. ಹೀಗಾಗಿ ನಗರೀಕರಣದಿಂದಾಗಿ ಆಚರಣೆಗಳು ಸಂದರ್ಭಗಳನ್ನು ಕಳೆದುಕೊಂಡಿವೆ. ಆಟಿಕಳೆಂಜ, ಕರಂಗೋಲು, ಮಾದಿರ, ಪುರುಷವೇಷ, ಚೆನ್ನುಕುಣಿತ, ಮಾಯಂದಾಳ್ ಹೀಗೆ ೫೦-೬೦ ಜನಪದ ಕುಣಿತಗಳಿದ್ದವು. ಜಾತ್ಯಾಧಾರಿತ ವ್ಯವಸ್ಥೆಯ ಭಾಗವಾಗಿದ್ದ ಕುಣಿತಗಳಿವು. ಆದರೆ ಈಗ ಜಾತ್ಯಾಧಾರಿತ ವ್ಯವಸ್ಥೆ ಶಿಥಿಲಗೊಂಡಿರುವ ಸಂದರ್ಭದಲ್ಲಿ ನಾವು ಅವರನ್ನು ಅದೇ ಕುಣಿತವನ್ನು ಮುಂದುವರಿಸಿಕೊಂಡು ಹೋಗುವಂತೆ ಒತ್ತಡ ಹೇರುವುದು ಸರಿಯಲ್ಲ. ಹಾಗಾಗಿ ಇಂದು ಆಟಿ ಕಳೆಂಜವನ್ನು ಯುವಕ ಮಂಡಲಗಳು ಆಯೋಜಿಸುವಾಗ ನಾವು ಅದನ್ನು ಒಪ್ಪಿಕೊಳ್ಳಬೇಕಾಗುತ್ತದೆ. ಅಂದರೆ ಬದಲಾದ ವ್ಯವಸ್ಥೆಯಲ್ಲಿ ಬದಲಾದ ಸ್ವರೂಪವನ್ನು ನಾವು ಒಪ್ಪಿಕೊಳ್ಳಬೇಕಾಗುತ್ತದೆ. ಹಾಗಾಗಿ ಹಲವು ಕುಣಿತಗಳು ಮರೆಯಾಗಿವೆ ಎಂದರೆ ಅವುಗಳಿಗೆ ಸಂದರ್ಭಗಳಿಲ್ಲ ಎಂದರ್ಥ. ಕೃಷಿ ಸಂಸ್ಕೃತಿಯ ಬಹಳ ಮುಖ್ಯವಾದ ಸಾರವೆಂದರೆ ಸಹಬಾಳ್ವೆ, ಸಮಬಾಳ್ವೆ ಮತ್ತು ಹಂಚಿ ಬದುಕಬೇಕು ಎನ್ನುವುದು. ಪ್ರಾಣಿ- ಪಕ್ಷಿ- ಮನುಷ್ಯ ಎಲ್ಲರಿಗೂ ಬದುಕುವ ಅವಕಾಶ. ಇಂತಹ ತುಳುನಾಡು ಕೋಮು ದ್ವೇಷ, ಗಲಭೆಗಳಿಗೆ ತುತ್ತಾಗಿರುವುದು ದುರಂತ. ಜಾತಿ ರಾಜಕಾರಣ, ಧರ್ಮ ರಾಜಕಾರಣ ಇದಕ್ಕೆ ಕಾರಣ.ಮಂಗಳೂರು ಇಂದು ಸಾಂಸ್ಕೃತಿಕವಾಗಿ ಛಿದ್ರ ಛಿದ್ರವಾದ ನಾಡು ಎಂದು ನಿಮಗೆ ಅನಿಸುತ್ತಿದೆಯೆ? ನಿಮ್ಮ ಪ್ರಕಾರ ತುಳುನಾಡಿನ ಜನರು ಮತ್ತೆ ಒಂದಾಗಬೇಕಾದರೆ ಏನು ಮಾಡಬೇಕು?

ನಮ್ಮ ಅನೇಕ ಆಚರಣೆಗಳು ಸರ್ವಧರ್ಮೀಯ ಸಮನ್ವಯಕ್ಕೆ ಹೆಸರಾಗಿವೆ. ಆಲಿಭೂತ ಆಚರಣೆಯಲ್ಲಿ ಮುಸ್ಲಿಂ ಮತ್ತು ಹಿಂದೂ ಸಂಸ್ಕೃತಿಯ sಸಮನ್ವಯವಿದೆ. ತುಳು ಜಾನಪದದಲ್ಲಿ ಸಂಘರ್ಷಗಳಿಲ್ಲ, ಪ್ರತಿಭಟನೆಗಳಿಲ್ಲ ಎಂದೇನಲ್ಲ. ಉದಾಹರಣೆಗೆ ಕೊರಗ-ತನಿಯ ಹಾಗೂ ಕೋರ್ದಷಬ್ಬು, ತನ್ನಿಮಾನಿಗ ಪಾಡ್ದನಗಳಲ್ಲಿ ಪ್ರತಿಭಟನೆಯ ಅಂಶಗಳಿವೆ. ಪಾಡ್ದನ ಮತ್ತು ಭೂತಾರಾಧನೆಯಲ್ಲಿ ಸಾಕಷ್ಟು ಪ್ರತಿಭಟನೆಗಳಿವೆ. ಆದರೆ ಇವುಗಳ ಅಂತಿಮ ಧ್ಯೇಯ ನ್ಯಾಯ ಮತ್ತು ಸಾಮರಸ್ಯದ ಪ್ರತಿಪಾದನೆ. ದೈವಗಳು ಸಾಂಸ್ಕೃತಿಕ ನಾಯಕರು. ಅನ್ಯಾಯದ ವಿರುದ್ಧ, ಶೋಷಣೆಯ ವಿರುದ್ಧ ಹೋರಾಡಿದವರು. ಯಾವುದೋ ಜಾತಿಯಲ್ಲಿ ಹುಟ್ಟಿದ್ದರೂ ಜಾತಿ ಮತ್ತು ಅದರಾಚೆ ನಡೆಯುವ ದೌರ್ಜನ್ಯ-ಅನ್ಯಾಯಗಳನ್ನು ಪ್ರತಿಭಟಿಸಿದವರು. ಇದು ಅಂತಿಮವಾಗಿ ನ್ಯಾಯ ಧರ್ಮದ ಪರವಾಗಿ ನಡೆದ ಹೋರಾಟ. ಹೀಗಾಗಿ ಅವರು ಇಡೀ ವಲಯದ ಆರಾಧ್ಯ ದೈವಗಳಾಗಿ, ಸಾಂಸ್ಕೃತಿಕ ವೀರರಾಗಿ ಮೆರೆದಿದ್ದಾರೆ. ಆದರೆ ಇತ್ತೀಚೆಗಿನ ದಿನಗಳಲ್ಲಿ ಜಾತಿ ಸಂಘಟನೆಗಳು ರೂಪುಗೊಳ್ಳುತ್ತಿವೆ. ಜಾತಿ ಸಂಘಟಕರು ನಿರ್ದಿಷ್ಟ ವೀರರನ್ನು ತಮ್ಮ ಜನಾಂಗದ ಸಾಂಸ್ಕೃತಿಕ ನಾಯಕ ಎಂದು ಪ್ರತ್ಯೇಕಿಸಿಕೊಳ್ಳುತ್ತಿದ್ದಾರೆ. ಇದು ಸಾಂಸ್ಕೃತಿಕ ಅನನ್ಯತೆಯ ಪ್ರಶ್ನೆ. ಆದರೆ ಸಾಂಸ್ಕೃತಿಕ ಅನನ್ಯತೆ ಎನ್ನುವುದು ಪ್ರತ್ಯೇಕತೆ ಮೂಡಿಸಬಾರದು. ಅದೊಂದು ಭಿನ್ನತೆ ಅಷ್ಟೇ. ಪ್ರತೀ ಜನಾಂಗವೂ ಇತರ ಜನಾಂಗಗಳ ಭಿನ್ನತೆಗಳನ್ನು ಅರ್ಥಮಾಡಿಕೊಂಡು, ಗೌರವಿಸಬೇಕು. ಅವುಗಳನ್ನು ಒಪ್ಪಿಕೊಂಡೇ ನಾವು ನಮ್ಮ ಸಾಂಸ್ಕೃತಿಕ ಸಂಬಂಧವನ್ನು ಬೆಳೆಸಿಕೊಳ್ಳಬೇಕು. ಸಾಂಸ್ಕೃತಿಕ ಅನನ್ಯತೆ ಪ್ರತ್ಯೇಕತೆಗೆ ಕಾರಣವಾದಾಗ ಒಡಕು ಮೂಡುತ್ತದೆ. ಹೀಗೆ ಜಾನಪದ ಅಧ್ಯಯನ ಸಂಸ್ಕೃತಿಗಳಲ್ಲಿ ಒಡಕು ತರುವ ಬದಲು, ವಿಶಿಷ್ಟತೆಗಳನ್ನು ಪರಿಚಯಿಸುತ್ತಾ ಪ್ರಜಾಪ್ರಭುತ್ವದ ವ್ಯವಸ್ಥೆಯ ತಳಹದಿಯಾಗಬೇಕು. ಪ್ರಜಾಪ್ರಭುತ್ವದ ತಳಹದಿ ಇರುವುದೇ ಭಿನ್ನತೆಗಳಲ್ಲಿ. ಹೀಗಾಗಿ ಕರಾವಳಿಯಲ್ಲಿ ಇಂದು ಇರುವ ಬಹುಸಂಸ್ಕೃತಿ, ಬಹು ಭಾಷೆ, ಬಹು ಜೀವನ ಕ್ರಮಗಳನ್ನು ಗೌರವಿಸುವ ವಾತಾವರಣ ಮುಂದುವರಿಯಬೇಕು.

ತುಳುನಾಡಿನ ಜನಪದ ಕಲೆಗಳ ನೆರವಿಗೆ ಸಾಮಾನ್ಯವಾಗಿ ದೈವ- ದೇವಸ್ಥಾನಗಳೇ ವೇದಿಕೆಯಾಗಿವೆ. ಅದರಿಂದ ಹೊರತಾಗಿ ಇವುಗಳ ಪೋಷಣೆ ಸಾಧ್ಯವಿಲ್ಲವೇ? ಆ ನಿಟ್ಟಿನಲ್ಲಿ ಏನಾದರೂ ಕ್ರಮಗಳು ಜರುಗಿವೆಯೇ?

ಕುಣಿತಗಳು ಭೂತಾರಾಧನೆಯಷ್ಟು ಧಾರ್ಮಿಕವಲ್ಲ. ಆಟಿ ಕಳೆಂಜದಂತಹ ಕುಣಿತವು ಊರಿಗೆ ಬಂದ ಮಾರಿಯನ್ನು ಓಡಿಸಲು ಇರುವ ಸಾಂಕೇತಿಕ ರೂಪ. ಒಂದು ಮಾಂತ್ರಿಕ ಶಕ್ತಿಯ ಕುಣಿತವಾಗಿ ನಾವು ಅದನ್ನು ನೋಡುತ್ತೇವೆ. ಭೂತಾರಾಧನೆಯು ಗುಡಿಕೇಂದ್ರಿತ, ಗ್ರಾಮ ಕೇಂದ್ರಿತ. ಜನಪದ ಕುಣಿತಗಳು ಮತ್ತು ಇತರ ಪ್ರದರ್ಶನ ಕಲೆಗಳ ಸಂರಕ್ಷಣೆಯ ದಾರಿ ಹಲವು. ಉಜಿರೆಯಲ್ಲಿ ತುಳು ಸಮ್ಮೇಳನ ನಡೆದಾಗ ವಲಯ ಮಟ್ಟದಲ್ಲಿ ಹಳ್ಳಿಯ ಆಟಗಳನ್ನು, ಸ್ಪರ್ಧೆಗಳನ್ನು ನಡೆಸಲಾಗಿತ್ತು. ಹೀಗೆ ಅನೇಕ ಜನಪದ ಸ್ಪರ್ಧೆಗಳನ್ನು ಏರ್ಪಡಿಸಿ ಚದುರಿರುವ ಜನಪದ ಆಟ, ಕುಣಿತಗಳನ್ನು ಹೊಸ ಬಗೆಯಲ್ಲಿ ಸಂರಕ್ಷಿಸಬೇಕಾಗುತ್ತದೆ. ಹೀಗಾಗಿ ಕೆಲವೊಮ್ಮೆ ಶಾಲೆಗಳು, ದೈವಸ್ಥಾನಗಳ ಆವರಣದಲ್ಲಿ ಪ್ರದರ್ಶನಕ್ಕೆ ಅವಕಾಶನ್ನು ಕಲ್ಪಿಸಲಾಗುತ್ತಿದೆ.

ಮಂಗಳೂರು ಈಗ ರಾಜ್ಯದ ಪ್ರಮುಖ ಕೇಂದ್ರವಾಗಿ ಬೆಳೆಯುತ್ತಿದೆ. ಕೈಗಾರಿಕೆ, ಬಹು ಸಂಸ್ಕೃತಿಯ ನೆಲೆವೀಡಾಗುತ್ತಿದ್ದು ಮೆಟ್ರೋ ಸಂಸ್ಕೃತಿಯನ್ನು ಮೈಗೂಡಿಸಿಕೊಳ್ಳುತ್ತಿದೆ. ಇದು ಜನಜೀವನದ ದೃಷ್ಟಿಯಿಂದ ಉತ್ತಮ ಬೆಳವಣಿಗೆಯೇ ಅಥವಾ ಅಲ್ಲವೇ?
ಇದು ನಗರೀಕರಣದ ಪ್ರಶ್ನೆ. ಆಧುನಿಕದ ಬೆಳವಣಿಗೆಗಳಿಂದ ಒಟ್ಟಾರೆ ಮನುಷ್ಯ ಸಂಬಂಧಗಳು ನಾಶವಾಗುತ್ತವೆ ಮತ್ತು ಮನುಷ್ಯ ಯಂತ್ರವಾಗುತ್ತಿದ್ದಾನೆ. ಎಲ್ಲವೂ ವ್ಯಾವಹಾರಿಕವಾಗಿ, ಮನುಷ್ಯ ಸಂಬಂಧ ಎನ್ನುವುದು ಲೆಕ್ಕಾಚಾರ ಮತ್ತು ವ್ಯಾಪಾರೀಕರಣಕ್ಕೆ ಒಳಗಾಗುತ್ತಿದೆ. ನಗರಗಳಲ್ಲಿ ಸೌಕರ್ಯಗಳು, ಸೌಲಭ್ಯಗಳು, ಶಿಕ್ಷಣ ಸಂಸ್ಥೆಗಳು, ಆರೋಗ್ಯ ಸೇವೆ - ಹೀಗೆ ಸಕತ್ ಚೆನ್ನಾಗಿರಬಹುದು. ಆದರೆ ಆಡಳಿತದ ಶಕ್ತಿ ಈ ನಗರವನ್ನು ಕಾಪಾಡಿಕೊಳ್ಳಲು ದಿನದ ೨೪ ಗಂಟೆಯೂ ಎಚ್ಚರವಾಗಿರಬೇಕು. ಇದನ್ನು ಮರೆಯಬಾರದು. ನಗರ ಸ್ವರ್ಗ ಮತ್ತು ಹಳ್ಳಿ ನರಕ ಎಂದು ಭಾವಿಸುವ ಜನರಿದ್ದಾರೆ. ಕ್ಷಣಮಾತ್ರದಲ್ಲಿ ನಗರಗಳು ನರಕವಾಗಬಹುದೆಂಬ ಆತಂಕದ ಅರಿವಿರಬೇಕು ಮತ್ತು ಹಳ್ಳಿಗಳನ್ನು ಸ್ವರ್ಗವಾಗಿ ಪರಿವರ್ತಿಸಬೇಕೆಂಬ ಆಶಾದಾಯಕ ಯೋಚನೆ ಹೊಂದಿರಬೇಕು.
___________

ಕಾಮೆಂಟ್‌ಗಳಿಲ್ಲ: