ಡಾ. ನಾ.ಡಿಸೋಜ
ಜನವರಿಯಲ್ಲಿ ನವ ದೆಹಲಿಯಲ್ಲಿ ನಡೆದ ಗಣರಾಜ್ಯೋತ್ಸವ ಪರೇಡಿನಲ್ಲಿ ಭಾಗವಹಿಸಿದ ದಕ್ಷಿಣ ಕನ್ನಡ ಜಿಲ್ಲೆಯ ಟ್ಯಾಬ್ಲೋಗೆ ಮೂರನೆ ಬಹುಮಾನ ದೊರೆತಿದೆ ಅನ್ನುವುದು ಸಂತಸದ ಸುದ್ದಿಯೇ. ದಕ್ಷಿಣ ಕನ್ನಡದ ಭೂತಗಳು ದೆಹಲಿಯ ರಾಜಪಥದಲ್ಲಿ ಮೆರೆದವು ಅನ್ನುವುದು, ಬಹುಮಾನವನ್ನೂ ಪಡೆದವು ಅನ್ನುವುದು ಹೆಮ್ಮೆಯ ವಿಷಯ. ಆದರೆ ಇದರ ಹಿಂದೆಯೇ ಮತ್ತೊಂದು ಸುದ್ದಿ ಕೂಡ ಕೇಳಿ ಬಂದಿದೆ. ಈ ಟ್ಯಾಬ್ಲೋದಲ್ಲಿ ಭಾಗವಹಿಸಲು ಮೂಲತಃ ಈ ಭೂತಗಳ ವೇಷಹಾಕುವವರು ಒಪ್ಪಲಿಲ್ಲವೆಂದೂ, ಈ ಕಾರಣಕ್ಕೆ ಬೇರೆ ಕಲಾವಿದರನ್ನ ಬಳಸಿಕೊಂಡು ಈ ಟ್ಯಾಬ್ಲೋಗಳನ್ನ ಸಿದ್ಧಪಡಿಸಲಾಯಿತು ಎಂದು ಹೇಳಲಾಗಿದೆ. ಈ ಭೂತಗಳನ್ನ ಆರಾಧಿಸುವವರು ತಮ್ಮ ಕಲೆಯನ್ನ ಒಂದು ಪ್ರದರ್ಶನದ ವಸ್ತುವನ್ನಾಗಿಸಲು ತಯಾರು ಇರಲಿಲ್ಲ ಅನ್ನುವುದು ಈ ಮಾತಿಗೆ ದೊರೆತ ಸಮಜಾಯಿಶಿ.
ಈ ಸಂದರ್ಭದಲ್ಲಿ ನನಗೆ ಬಹಳ ವರ್ಷಗಳ ಹಿಂದೆ ಆದ ಒಂದು ಅನುಭವ ನೆನಪಿಗೆ ಬರುತ್ತದೆ. ಆಗ ನಾನು ಹೊಸದಾಗಿ ಕ್ಯಾಮೆರಾ ಕೊಂಡಿದ್ದೆ. ಕಣ್ಣಿಗೆ ಬಿದ್ದುದನೆಲ್ಲ ಕ್ಯಾಮರಾದಲ್ಲಿ ಸೆರೆ ಹಿಡಿಯುವ ಚಟ. ಒಂದು ದಿನ ನಮ್ಮ ಮನೆಯ ಮುಂದೆ ದುರಗ ಮುರುಗಿಯವನೊಬ್ಬ ತನ್ನ ಮಾರಮ್ಮನ ಪಡಲಿಗೆಯನ್ನ ಹೊತ್ತು ಬಂದವನು ಎದಿರು ಮನೆಯ ಮುಂದೆ ಮಾರಮ್ಮನನ್ನ ಇರಿಸಿಕೊಂಡು ತನ್ನ ಪೂಜೆ ಪ್ರಾರಂಭಿಸಿದ. ಒಂದು ಸಂದರ್ಭದಲ್ಲಿ ಆತ ಒಂದು ಮುಖವಾಡ ಧರಿಸಿ ವಿಶೇಷ ನೃತ್ಯ ಒಂದನ್ನ ಮಾಡ ತೊಡಗಿದ. ನಾನು ಈ ನೃತ್ಯದಿಂದ ಆಕರ್ಷಿತನಾಗಿ ಕ್ಯಾಮರಾ ಹಿಡಿದು ಹೊರ ಬಂದೆ. ಬಿಸಿಲು ಈ ನರ್ತಕನ ಹಿಂದೆ ಇದ್ದುದರಿಂದ ನಾನು ಅವನನ್ನ ಕೊಂಚ ಈ ದಿಕ್ಕಿಗೆ ತಿರುಗಿಕೊಂಡು ನೃತ್ಯ ಮಾಡಲು ವಿನಂತಿ ಮಾಡಿಕೊಂಡೆ. ಆದರೆ ಆತ ತಟ್ಟನೆ ನನ್ನ ಮೇಲೆ ರೇಗಿ ‘ಇದೆಲ್ಲ ನಿಮಗೆ ಬೇಕಾದಂತೆ ಮಾಡುವುದಲ್ಲ’ ಎಂದ. ಆ ಕ್ಷಣದಲ್ಲಿ ನನಗೆ ಬೇಸರವಾದರೂ ಕೊಂಚ ಯೋಚಿಸಿದ ನಂತರ ಅವನ ಮಾತು ಸರಿ ಅನಿಸಿತು.
ಇದಕ್ಕೆ ಸಂಬಂಧಪಟ್ಟ ಮತ್ತೂ ಒಂದು ಸಂದರ್ಭ ಇದೆ. ಒಂದು ಕಾಲೇಜಿನವರು ‘ಪ್ರಾದೇಶಿಕ ಉಡುಗೆಯ ಹಬ್ಬ’ ಎಂದೊಂದು ಸ್ಪರ್ದೆ ಏರ್ಪಡಿಸಿದರು. ಇದಕ್ಕೆ ತೀರ್ಪುಗಾರನನ್ನಾಗಿ ನನ್ನನ್ನ ಕರೆಸಿಕೊಂಡಿದ್ದರು. ಅಂದಿನ ದಿನ ಕಾಲೇಜಿನ ಬಹುತೇಕ ತರುಣ ತರುಣಿಯರು ಪ್ರಾದೇಶಿಕವಾದ ಉಡುಗೆ ತೊಡುಗೆ ಧರಿಸಿ ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಅದೊಂದು ಸುಂದರ ನೋಟ. ಜರಿ, ರೇಶಿಮೆ ಸೀರೆಗಳು, ಜರಿ ಅಂಚಿನ ಪಂಚೆಗಳು, ಅಂಗಿ, ರುಮಾಲು, ಪೇಟ, ಶಾಲು, ಅಂಗವಸ್ತ್ರ, ಹಾಳೆ ಟೋಪಿ. ತುಂಡು ಪಂಚೆ ಇತ್ಯಾದಿ ಇತ್ಯಾದಿ ಸ್ಥಳೀಯ ಉಡುಪೆಲ್ಲ ಹೊರಬಂದಿತ್ತು. ದಿನ ನಿತ್ಯ ಜೀನ್ಸು ಸ್ಕರ್ಟು, ಪಂಚಾಬಿ ಎಂದು ನೋಡಿ ಬೇಸರವಾಗಿದ್ದ ಕಣ್ಣುಗಳಿಗೆ ಅಂದು ಹಬ್ಬ. ನಾನು ಗಮನಿಸಿದಹಾಗೆ ಆ ಪ್ರದೇಶದ ಹಿನ್ನೆಲೆಗೆ ಈ ಉಡುಗೆ ತುಂಬಾ ಚೆನ್ನಾಗಿ ಹೊಂದುಕೊಂಡದ್ದು. ಈ ಯುವಕ ಯುವತಿಯರು ಅದೇ ಮಣ್ಣಿನಿಂದ ಎದ್ದು ಬಂದವರೇನೋ ಅನ್ನುವ ಹಾಗೆ ನನಗೆ ಕಂಡರು. ಸ್ಪರ್ದೆ ಮುಗಿಯಿತು. ಎಲ್ಲ ಸ್ಪರ್ಧಿಗಳೂ ಒಂದೆರಡು ಕೊಠಡಿಗಳಲ್ಲಿ ಹಂಚಿ ಹೋಗಿ, ತಾವು ಮನೆಯಿಂದ ಬರುವಾಗ ಧರಿಸಿಕೊಂಡು ಬಂದ ಎಂದಿನ ಉಡುಗೆಯನ್ನ ಧರಿಸಿ ಹೊರ ಬಂದಾಗ ನನಗೆ ನಿರಾಶೆ ಆಯಿತು. ‘ಏಕೆ ನೀವೆಲ್ಲ ಅದೇ ಉಡುಪನ್ನ ಧರಿಸಬಹುದಿತ್ತು. ಅದನ್ನೇ ಧರಿಸಿ ಮನೆಯಿಂದ ಬರಬಹುದಿತ್ತು, ಮನೆಗೂ ಹೋಗಬಹುದಿತ್ತು’ ಎಂದೆ. ಅವರೆಲ್ಲ ಗಾಬರಿಯಾದರು. ನಾಚಿದರು. ಛೆ ಛೆ ಎಂದು ತಲೆಯಾಡಿಸಿದರು. ಅದೇನೋ ಅಪರಾಧ ಅನ್ನುವಹಾಗೆ ವರ್ತಿಸಿದರು.
ಇನ್ನು ನಾಲ್ಕನೆಯದಾಗಿ ಮತ್ತೊಂದು ಸಂದರ್ಭ. ಓರ್ವ ಜಾನಪದ ವಿದ್ವಾಂಸ ಎಂದೇ ಹೆಸರು ಮಾಡಿದವರು. ಜಾನಪದ ಗೀತೆಗಳನ್ನ ಹಾಡುವುದರಲ್ಲಿ, ಜಾನಪದ ಸಾಹಿತ್ಯವನ್ನ ಪ್ರಚಾರ ಮಾಡುವುದರಲ್ಲಿ ಮುಂದಿದ್ದವರು. ಇವರ ಮಗನ ಮದುವೆ. ಭಾರೀ ಚಪ್ಪರ. ಭಾರೀಜನ. ನಾಗಸ್ವರದವರಿಗಾಗಿ ವಿಷೇಷ ವೇದಿಕೆ. ಅಲ್ಲಿ ಕುಳಿತು ಆ ವಿದ್ವಾಂಸರು ನಾಗಸ್ಬರ ನುಡಿಸುತ್ತಿದ್ದಾರೆ. ಪುರೋಹಿತರು ಮಂತ್ರ ಘೋಷಗಳ ನಡುವೆ ಮದುವೆಯ ಎಲ್ಲ ಕಾರ್ಯಗಳನ್ನ ಮುಗಿಸುತ್ತಿರುವಾಗ ನಾಗಸ್ವರದವರೂ ಹಿಂದುಳಿಯಲಿಲ್ಲ. ಆದರೆ ಒಂದು ಸಂದರ್ಭದಲ್ಲಿ ಮದುವೆ ಚಪ್ಪರದ ಮೂಲೆಯಲ್ಲಿ ಮೈಮುದುಡಿ ಕೊಂಡು ಕುಳಿತ ಕೆಲ ಹಳ್ಳಿ ಹೆಣ್ಣು ಮಕ್ಕಳು ಒಮ್ಮೆ ಆಸ್ಫೋಟಗೊಂಡರು. ಅವರ ಬಾಯಿಂದ ಮದುವೆ ಹಾಡುಗಳು ಕೇಳಿ ಬಂದು ಜನ ತಿರುಗಿ ನೋಡಿದರು. ಆಗಾಗ್ಗೆ ಆಗಾಗ್ಗೆ ಇವರು ಹಾಡುತ್ತಲೇ ಇದ್ದರು. ಆದರೆ ನಾಗಸ್ವರದವರಿಗೆ ನೀಡಲಾದ ಧ್ವನಿವರ್ಧಕ ಇವರಿಗೆ ಇರಲಿಲ್ಲ.
ಈ ನಾಲ್ಕೂ ಅಂಶಗಳ ಹಿಂದೆ ಇರುವ ಮನೋಭಾವವನ್ನ ಗ್ರಹಿಸಿದರೆ ನಮ್ಮನ್ನ ಈ ಜಾನಪದ ಅನ್ನುವುದು ಎಲ್ಲೋ ಒಂದು ಕಡೆ ಕಾಡುತ್ತಿದೆಯೇನೋ ಎಂದು ನನಗೆ ಅನಿಸುತ್ತದೆ.
ಜಾನಪದದ ಮೇಲೆ ನಮಗಿರುವ ಭಕ್ತಿ ಭಯ ಒಂದು ಕಡೆಯಾದರೆ ಇದನ್ನ ಕಂಡಲ್ಲಿ ಪ್ರದರ್ಶಿಸಬಾರದು ಅನ್ನುವ ಮನೋಭಾವ ಮತ್ತೊಂದು ಕಡೆ. ಹಾಗೆಯೇ ಅದನ್ನ ನಾವು ಉಳಿಸುತ್ತೇವೆ. ಅಭಿವೃದ್ಧಿಪಡಿಸುತ್ತೇವೆ ಅನ್ನುವ ಅನಿಸಿಕೆ. ಇನ್ನು ಜನಪದವನ್ನ ಪ್ರದರ್ಶಿಸುವುದು ಒಂದು ಫ್ಯಾಷನ್. ಅದರ ಪ್ರದರ್ಶನದ ಮೂಲಕ ಹೆಸರು ಬಹುಮಾನ ಪಡೆಯಬೇಕು ಅನ್ನುವ ಹಂಬಲ. ಹಾಗೆಯೇ ಅದನ್ನ ಒಂದು ಅಧ್ಯಯನದ ವಸ್ತುವನ್ನಾಗಿಸಿಕೊಂಡು ಹೆಸರು ಪದವಿ ಪಡೆಯಬಹುದು ಆದರೆ ಅದು ನಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಲು ಅರ್ಹವಾದುದಲ್ಲ ಅನ್ನುವ ನಂಬಿಕೆ.
ನಾವು ಜಾನಪದ ಕಲೆ ಎಂದು ಕರೆಯುವ ಕಲೆ ಏನಿದೆ, ಅದರಲ್ಲಿ ಹಲವಾರು ಬಗೆಗಳಿವೆ. ವಿಧಾನಗಳಿವೆ. ನೃತ್ಯ, ಕುಣಿತ, ವಾದ್ಯ, ವೇಷಭೂಷಣ, ಹಾಡುಗಾರಿಕೆ, ವರ್ಣಾಲಂಕಾರ, ಹಿಮ್ಮೇಳ ಇತ್ಯಾದಿ ಇತ್ಯಾದಿ; ಇದೆಲ್ಲ ನೋಡಲು ಚೆಂದ, ಸುಂದರ, ಅರ್ಥಪೂರ್ಣ, ಕಲಾಪೂರ್ಣ, ಎಲ್ಲವೂ ಸರಿ. ಈ ಕಲೆಗಳನ್ನ ಸೃಷ್ಟಿಸಿದವರು ನಮ್ಮ ಅನಕ್ಷರಸ್ಥರು. ಗ್ರಾಮೀಣ ಜನ, ಆಧುನಿಕತೆಯ ಗಂಧಗಾಳಿ ಇಲ್ಲದವರು. ಒಂದು ವೇಳೆ ಆಧುನಿಕತೆಯ ಪ್ರಭಾವಕ್ಕೆ ಇವರು ಒಳಗಾದವರಾಗಿದ್ದರೆ ಇಂತಹಾ ಅಪೂರ್ವ ಕಲೆಯನ್ನ ಇವರು ಖಂಡಿತ ಸೃಷ್ಟಿ ಮಾಡುತ್ತಿರಲಿಲ್ಲ. ಆದರೂ ತಮ್ಮ ಹಂತದಲ್ಲಿಯೇ ತಮ್ಮ ಅನಿಸಿಕೆ, ಕಲ್ಪನೆ, ಅನುಭವ, ಸುತ್ತಲಿನ ಪರಿಕರ, ದೇವರ ಮೇಲಿನ ನಂಬಿಕೆ, ದೈವ ಭೀತಿ ಮೊದಲಾದವನ್ನ ಇರಿಸಿಕೊಂಡು ಇದನ್ನ ಅವರು ಸೃಷ್ಟಿ ಮಾಡಿದರು. ಕೆಲ ಜಾನಪದ ಕಲೆಗಳ ಸೃಷ್ಟಿಗೆ ಮಾನಸಿಕ ನೋವು, ದೇವರಲ್ಲಿ ತಮ್ಮ ಕಷ್ಟವನ್ನ ಅರಿಕೆ ಮಾಡಿಕೊಳ್ಳಬೇಕೆಂಬ ಹಂಬಲ ಇತ್ಯಾದಿ ಕಾರಣಗಳೂ ಇರಬಹುದು. ಇವೆ.
ಅಂದರೆ ಈ ಕಲೆಗಳ ಪ್ರದರ್ಶನದ ಹಿಂದೆ, ಒಂದು ಉದ್ದೇಶ ಇರುತ್ತದೆ. ಒಂದು ಗುರಿ ಇರುತ್ತದೆ. ಒಂದು ಹರಕೆಯೋ ಮತ್ತೊಂದೋ ಇರುತ್ತದೆ. ಬಹುತೇಕ ಕಲೆಗಳು ದೇವಾರಾಧನೆಯನ್ನೇ ಗುರಿಯಾಗಿ ಇರಿಸಿಕೊಂಡವುಗಳು. ಗುಡಿಗಳಲ್ಲಿ, ಭೂತಾರಾಧನೆಯ ಸ್ಥಳಗಳಲ್ಲಿ ಮಾಡುವಂತಹವು. ಇವುಗಳು ಇದೀಗ ತಮ್ಮ ಆವರಣದಿಂದ ಹೊರಬಿದ್ದು ಮತ್ತೆಲ್ಲೋ ಪ್ರದರ್ಶನ ಗೊಳ್ಳುತ್ತಿವೆ. ನಾವು ಈ ಕಲೆಗಳನ್ನ ರಾಜ ಬೀದಿಗೆ, ರಸ್ತೆಗಳಿಗೆ, ಮಂತ್ರಿಗಳ ಮೆರವಣಿಗೆಗೆ ಕರೆತಂದಿದ್ದೇವೆ. ಈ ನಮ್ಮ ಕೆಲಸ ಎಷ್ಟು ಸರಿ ನಾವು ವಿಚಾರ ಮಾಡಬೇಕು.
ಈ ಕಲೆಗಳ ಪ್ರದರ್ಶನದ ಉದ್ದೇಶ ಬೇರೆಯಾಗಿ ಈ ಕಲೆಗಳು ಕೇವಲ ಮನರಂಜನೆಯ ಸಾಧನಗಳಾಗಿ ಪರಿವರ್ತನೆ ಹೊಂದಿರುವುದು, ವೀರಗಾಸೆ, ಭೂತಕೋಲ, ಪಟಕುಣಿತ, ಕರಗ ಕುಣಿತ, ಸೋಮನ ಕುಣಿತ ಮೊದಲಾದವು ಮತ್ತೆಲ್ಲೋ ಫಿಟ್ ಆಗಲು ಪರದಾಡುತ್ತಿರುವುದು ನಮ್ಮ ಜಾನಪದ ತಜ್ಞರ ಗಮನಕ್ಕೆ ಬಂದಿಲ್ಲವೆ, ಇಲ್ಲ ಇದರಲ್ಲಿ ಇವರ ಪಿತೂರಿಯೂ ಇದೆಯೆ?
ಜಾನಪದ ಅನ್ನುವುದು ನಮ್ಮ ಗ್ರಾಮೀಣ ಜನರ ಬದುಕಿನ ಒಂದು ಅಂಗವಾಗಿ ಉಳಿದುದಲ್ಲ. ಅದು ಅವರ ಸಮಗ್ರ ಜೀವನದಲ್ಲಿ ಸೇರಿಕೊಂಡದ್ದು. ಅವರ ಸಮಗ್ರ ಬದುಕೇ ಇವತ್ತಿನ ದಿನ ಬದಲಾಗಿ ಹೋಗಿರುವಾಗ ಅವರ ಜೀವನದ ಒಂದು ಅಂಶ ಉಳಿಯಬೇಕು ಅನ್ನುವುದಾಗಲಿ, ಅದು ಹೊರಟು ಹೋಗಿದೆ ಎಂದು ಅಳುವುದೇ ಆಗಲಿ ಎಷ್ಟು ಸರಿ? ನಮ್ಮ ಹಳ್ಳಿಗಳೆಲ್ಲ ಅತ್ಯಾಧುನಿಕವಾದ ವೇಷ ತೊಟ್ಟು ಮೆರೆಯುವಾಗ, ಆಧುನಿಕ ಸೌಲಭ್ಯಗಳು ನಮ್ಮ ಹಳ್ಳಿಗಳನ್ನ ಆಕ್ರಮಿಸಿಕೊಂಡಿರುವಾಗ ಜನಪದವನ್ನ ಉಳಿಸಬೇಕು ಎಂದು ನಮ್ಮ ಹಳ್ಳಿ ಹೆಂಗಸರು ರಾಗಿ ಬೀಸಬೇಕು, ರಾಗಿ ಬೀಸೋ ಪದ ಹೇಳಬೇಕು ಎಂದು ನಾವು ಬಯಸುವುದು ಎಷ್ಟು ಸರಿ? ತಮ್ಮ ಮಕ್ಕಳನ್ನ ಇಂಗ್ಲೀಷ್ ಕಾನ್ವಂಟಿಗೆ ಕಳುಹಿಸಿ ಉಳಿದವರಿಗೆ ಕನ್ನಡ ಅಭಿಮಾನವನ್ನ ಬೋಧಿಸುವ ನಮ್ಮ ಸಾಹಿತಿಗಳ ಹಾಗೆ ಜಾನಪದವನ್ನ ಉಳಿಸಿ ಬೆಳೆಸಿ ಎಂದು ಹೇಳುತ್ತ ತಾವು ಮಾತ್ರ ಅತ್ಯಾಧುನಿಕರಾಗಲು ಹಾತೊರೆಯುವ ಜಾನಪದ ತಜ್ಞರ ಬಗ್ಗೆ ಸಾಮಾನ್ಯ ಜನರಲ್ಲಿ ಒಂದು ಬಗೆಯ ಹೇವರಿಕೆ ಬಂದಿದೆ ಅನ್ನುವುದರಲ್ಲಿ ಅನುಮಾನವಿಲ್ಲ. ಜಾನಪದವನ್ನ ಕೇವಲ ಸ್ಪರ್ದೆಗಳಲ್ಲಿ ಬಹುಮಾನ ಪಡೆಯಲು, ಪ್ರದರ್ಶಿಸಲು ಮಾತ್ರ ಮೀಸಲಿರಿಸಿ ನಾವು ಅತ್ಯಾಧುನಿಕತೆಯ ಆರಾಧಕರಾಗುವುದರಲ್ಲಿ ಜಾನಪದದ ಉದ್ಧಾರ ಇದೆಯೇ? ಜಾನಪದವನ್ನ ಹೀಗೆ ಉಳಿಸಲು ಆಗುತ್ತದೆಯೇ?
ಮೊನ್ನೆ ಉಡುಪಿ ಹತ್ತಿರದ ಮೇರಿ ಐಲ್ಯಾಂಡ್ ದ್ವೀಪದ ರೇವು ಪಾರ್ಟಿಯಲ್ಲಿ ಕೆಲ ಜಾನಪದ ಕಲೆಗಳ ಪ್ರದರ್ಶನ ನಡೆಯಿತು ಎಂದು ಹೇಳಲಾಗಿದೆ. ಅದನ್ನು ಅದೆಷ್ಟು ಜನ ವಿದೇಶೀಯರು ನೋಡಿದರೋ ನನಗೆ ಮಾಹಿತಿ ಇಲ್ಲ, ಆದರೆ ಇದರಿಂದ ನಿಜವಾಗಿಯೂ ಈ ಕಲೆಗೆ ಏನಾದರೂ ಪ್ರಯೋಜನ ದೊರಕೀತೆ ನಾವು ಯೋಚಿಸಬೇಕು. ನಾವು ಜನಪದ ಕಲೆ ಎಂದು ಕರೆಯುವುದರಲ್ಲಿ ಎಷ್ಟೋ ಕಲೆಗಳಲ್ಲಿ ಸತ್ವವಿದೆ ಅನ್ನುವುದರಲ್ಲಿ ಅನುಮಾನ ಇಲ್ಲ. ಜೊತೆಗೆ ಇಂದಿನ ದಿನಕ್ಕೆ ಹೇಳದಂತಹಾ ಮೌಢ್ಯ, ಅಂಧಾನುಕರಣೆ, ಹಿಂಸೆ, ಅಮಾನವೀಯತೆ, ಅವೈಜ್ಙಾನಿಕತೆ, ಇವುಗಳಲ್ಲಿ ಸೇರಿಕೊಂಡಿದೆ. ಇಂತಹ ಅಂಶಗಳನ್ನ ಇದರಿಂದ ತೊಡೆದು ಹಾಕಿ, ಅದರಲ್ಲಿಯ ಶುದ್ಧ ಕಲೆಯನ್ನ ಮಾತ್ರ ಉಳಿಸುವ, ಬೆಳೆಸುವ ಕೆಲಸ ಆಗಬೇಕಾಗಿದೆ. ಇದನ್ನ ಮಾಡಲು ಮುಂದೆ ಬರುವ ಜಾನಪದ ವಿದ್ವಾಂಸರು ನಮ್ಮ ಕಣ್ಣಿಗೆ ಬೀಳುತ್ತಿಲ್ಲ ಅಂದರೆ ನನ್ನ ಮಾತನ್ನ ಎಲ್ಲರೂ ಒಪ್ಪುತ್ತಾರೆ ಅಂದು ಕೊಳ್ಳುತ್ತೇನೆ.
ಉದಾಹರಣೆಗೆ ಮಲೆನಾಡಿನಲ್ಲಿ ಚಿತ್ತಾರ ಎಂದು ಒಂದು ಗೋಡೆ ಕಲೆ ಇದೆ. ಮಲೆನಾಡಿನ ದೀವರು, ಮಡಿವಾಳರು, ಹಿಂದುಳಿದವರು ರೂಢಿಗತ ಮಾಡಿಕೊಂಡಿರುವ, ಮದುವೆ, ಭೂ ಹುಣ್ಣಿಮೆ ಮೊದಲಾದ ಸಂದರ್ಭಗಳಲ್ಲಿ ಬರೆಯುವಂತಹ ಅಪೂರ್ವ ಕಲೆ. ಇದನ್ನ ಹೋಲುವಂತಹ ಮತ್ತೊಂದು ಕಲೆಯೇ ವರ್ಲಿವ ಕಲೆ. ಮುಂಬಯಿಯ ವರ್ಲಿಗ ಜನಾಂಗದವರು ಅಭಿವೃದ್ಧಿಪಡಿಸಿರುವ ಕಲೆ. ಈ ಕಲೆಯ ಏಳಿಗೆಗಾಗಿ ಸರಕಾರ ಒಂದು ಸಂಸ್ಥೆಯನ್ನ ಸ್ಥಾಪಿಸಿದರೆ, ಖಾಸಗಿಯಾಗಿ ಕೆಲ ಸಂಸ್ಥೆಗಳಿವೆ. ಮಹಾರಾಷ್ಟ್ರದ ಕೆಲ ಕಲಾವಿದರು ಇದನ್ನ ತಮ್ಮ ಕಲಾ ಮಾಧ್ಯಮವನ್ನಾಗಿ ಇರಿಸಿಕೊಂಡು ಇದನ್ನ ಬೇರೆ ಬೇರೆ ಮಾಧ್ಯಮಗಳ ಮೂಲಕ ಅಭಿವ್ಯಕ್ತಿಸುತ್ತ ಇದು ಇಡೀ ದೇಶದಲ್ಲಿ, ಹೊರದೇಶಗಳಲ್ಲಿ ಕೂಡ ಜನಪ್ರಿಯಗೊಳ್ಳುವ ಹಾಗೆ ಮಾಡಿದ್ದಾರೆ. ಆದರೆ ಯಾವ ದೃಷ್ಟಿಯಲ್ಲೂ ವರ್ಲಿುಗಿಂತಲೂ ಕಡಿಮೆ ಇಲ್ಲದ ಚಿತ್ತಾರಕ್ಕೆ ಯಾವುದೇ ಸ್ಥಾನಮಾನಗಳು ಈವರೆಗೆ ದೊರೆತಿಲ್ಲ. ಚರಕದ ಪ್ರಸನ್ನ ಈ ಹೆಸೆ ಚಿತ್ತಾರವನ್ನ ಬೇರೆ ಮಾಧ್ಯಮಗಳ ಮೂಲಕ ಜನಪ್ರಿಯಗೊಳಿಸಲು ಯತ್ನಿಸಿದರೂ ಅದಕ್ಕೆ ಸಿಗ ಬೇಕಾದ ಸ್ಥಾನಮಾನ ಈವರೆಗೂ ದೊರೆತಿಲ್ಲ. ಜಾನಪದ ಅನ್ನುವುದು ಉಳಿಯಲು ಬೆಳೆಯಲು ಒಂದು ವಾತಾವರಣ, ಅದರದ್ದೇ ಆದ ಕೆಲ ಕಾರಣಗಳು ಹಿಂದೆ ಇದ್ದವು. ಜನರ ಬದುಕೇ ಜನಪದಕ್ಕೆ ಪೂರಕವಾಗಿತ್ತು. ಆದರೆ ಇಂದು ಅಂತಹ ಪರಿಸರ, ವಾತಾವರಣ ಇಲ್ಲದಿರುವಾಗ ಜಾನಪದವನ್ನ ಉಳಿಸುವುದು ಬೆಳೆಸುವುದು ಕಷ್ಟದ ಕೆಲಸ. ಆದರೂ ಜಾನಪದವನ್ನ ಉಳಿಸಲು ಕೆಲ ಪ್ರಯತ್ನಗಳು ನಡೆದಿರುವುದು ಸುಳ್ಳಲ್ಲ.
ಆದರೆ ಈ ಕೆಲಸದಲ್ಲಿ ಒಂದು ಗೊಂದಲ, ಒಂದು ಅನುಮಾನ, ಸ್ವಾರ್ಥಕ್ಕಾಗಿ ಅದನ್ನು ಆರಾಧಿಸುವುದು, ತಮ್ಮ ಬದುಕಿನಲ್ಲಿ ಅದನ್ನ ಹೊಂದಿಸಿಕೊಳ್ಳಲಾಗದ ಮನೋಭಾವ. ಅದರ ಬಗ್ಗೆ ಇರುವಂತಹ ಅನಾದರ, ಅದರ ಹುಟ್ಟಿಗೆ ದೊರಕದ ಪರಿಸರ, ಈ ಎಲ್ಲ ಈ ಗೊಂದಲಗಳಿಂದ ನಾವು ಹೊರ ಬಂದರೆ ಜಾನಪದ ಅನ್ನುವುದು ಉಳಿದೀತು.
ಇದೀಗ ಹುಟ್ಟಿ ಕೊಂಡಿರುವ ಜಾನಪದ ವಿಶ್ವವಿದ್ಯಾಲಯ ಇಂತಹ ಕೆಲ ಅಂಶಗಳನ್ನ ಗಮನಿಸಬಹುದು ಎಂದು ನನಗೆ ಅನಿಸುತ್ತದೆ.
ಕೃಪೆ: ಕೆಂಡಸಂಪಿಗೆ
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
-
- ಡಾ. ಎಚ್.ಜೆ. ಲಕ್ಕಪ್ಪಗೌಡ ನಾಡು-ಮೊದಲ ನೋಟ ಹಸಿರು ವನಗಳ ನಾಡು, ಬೆಟ್ಟ ಘಟ್ಟಗಳ ಬೀಡು. ಶ್ರೀಗಂಧ ಬೀಟೆ ತೇಗ ಹೊನ್ನೆ ನಂದಿ ಮತ್ತಿ ಆಲ ಬೇಲ ಸಂಪಿಗೆ ನೇರಳೆ ಬ...
-
ಎ ಸಿಂಹದಂಥಾ ಸಂಗೊಳ್ಳಿ ರಾಯಾ ಭೂಮಿಗಿ ಬಿದ್ದಂಗ ಸೂರ್ಯನ ಛಾಯಾ ನೆತ್ತರ ಕಾವಲಿ ಹರಿಸಿದಾನೊ ಕಿತ್ತೂರ ನಾಡಾಗ ಭಾಳ ಬಂಟಸ್ತಾನ ಪದವಿ ಇತ್ತ ಅವನ ಹೊಟ್ಟೆಯೊಳಗ ಸೃ...
-
ಶಿಕ್ಷಣ! ಸಂಘಟನೆ!! ಹೋರಾಟ!!! ಎಂದು ಡಾ.ಅಂಬೇಡ್ಕರರು ಹೇಳಿದ್ದಾರೆಯೇ ??? -ಡಾ.ಶಿವಕುಮಾರ್ ಇಂದು ಬಹುತೇಕ ದಲಿತರು ತಾವು ಮಾಡುವ ಕಾರ್ಯಕ್ರಮಗಳಲ್ಲಿ ಶಿಕ್ಷಣ...
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ