ಶನಿವಾರ, ನವೆಂಬರ್ 5, 2011

ಜಾನಪದ ವಿಶ್ವವಿದ್ಯಾಲಯ ದೃಢವಾದ ಹೆಜ್ಜೆಗಳನ್ನಿಡಬೇಕಿದೆ



ಈ ಬರಹ ಅಕ್ಟೋಬರ್ ತಿಂಗಳ ಮಯೂರದ-ವೇದಿಕೆ ವಿಭಾಗದಲ್ಲಿ ಪ್ರಕಟವಾಗಿದೆ. ಪ್ರಕಟವಾದ ನಂತರ ಒಳ್ಳೆಯ ಪ್ರತಿಕ್ರಿಯೆಯೂ ಬಂತು. ಬರಹ ಪ್ರಕಟಿಸಿದ ಸಂಪಾದಕರಿಗೆ ದನ್ಯವಾದಗಳು. ಬ್ಲಾಗ್ ನ ಓದಿಗಾಗಿ ಈ ಬರಹವನ್ನು ಇಲ್ಲಿ ಪ್ರಕಟಿಸುತ್ತಿರುವೆ.

ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಸ್ಥಾಪನೆ ಚಾರಿತ್ರಿಕವಾಗಿ ಮುಖ್ಯ ಘಟನೆ. ಕಾರಣ ಅದು ಇತರ ವಿವಿಗಳಿಗಿಂತಲೂ ಭಿನ್ನ. ಬೇರೆ ವಿವಿಗಳಲ್ಲಿ ಎದುರಿಗೆ ವಿದ್ಯಾರ್ಥಿಗಳಿರುತ್ತಾರೆ, ಅವರು ಆಧುನಿಕ ಕಾಲದ ಚೌಕಟ್ಟಿನಲ್ಲಿ ಕೂರುವುದು ಹೇಗೆಂದು ಕಲಿಯುತ್ತಿರುತ್ತಾರೆ. ಈ ವಿವಿಯ ಎದುರಿಗೆ ಜನಸಾಮಾನ್ಯರಿರುತ್ತಾರೆ, ಅವರ ತಿಳುವಳಿಕೆಯ ಮೂಲಕವೆ, ಅವರ ಬದುಕನ್ನು ಹಸನು ಮಾಡುವುದು ಹೇಗೆಂದು ಹುಡುಕಬೇಕಾಗುತ್ತದೆ, ಅಂತೆಯೇ ಅವರ ತಿಳುವಳಿಕೆಯ ಚೌಕಟ್ಟಿಗೆ ಆಧುನಿಕತೆಯನ್ನು, ಸರಕಾರಿ ಯೋಜನೆಗಳನ್ನು ಎಡಮುರಿಗೆ ಕಟ್ಟಿ ಹೇಗೆ ಒಗ್ಗಿಸಬೇಕೆನ್ನುವುದನ್ನು ಶೋಧಿಸಬೇಕಾಗುತ್ತದೆ.

ಭಾರತದಲ್ಲಿ ಇದು ಮೊದಲ ವಿಶ್ವವಿದ್ಯಾಲಯ. ಹಾಗಾಗಿ ಅನುಕರಣೆಗೆ ಸಿದ್ಧ ಮಾದರಿಗಳಿಲ್ಲ. ಸ್ವತಃ ಈ ವಿವಿ ಹೊಸ ಮಾದರಿಗಳನ್ನು ಹುಟ್ಟಿಸಬೇಕಾಗಿದೆ. ಇದೊಂದು ದೊಡ್ಡ ಸವಾಲು. ಹಾಗಾಗಿ ಈ ವಿವಿ ರೂಪುಗೊಳ್ಳುವ ಬಗೆಗೆ ವಿಪರೀತ ಕುತೂಹಲಗಳೂ, ನಿರೀಕ್ಷೆಗಳು ಇವೆ. ಇಂತಹ ಒತ್ತಡವೇ ಜಾನಪದ ವಿವಿಯನ್ನು ದೃಢವಾದ ಹೆಜ್ಜೆಗಳನ್ನಿಡುವಂತೆ ಒತ್ತಾಯಿಸುತ್ತಿದೆ.


ಈ ಬರಹ ಬರೆವ ಹೊತ್ತಿಗೆ ಜಾನಪದ ವಿಶ್ವವಿದ್ಯಾಲಯದ ಕುಲಪತಿಗಳಾದ ಅಂಬಳಿಕೆ ಹಿರಿಯಣ್ಣ ಅವರನ್ನು ಮಾತಾಡಿಸಬೇಕಾಯಿತು. ಈಗ ವಿಶ್ವವಿದ್ಯಾಲಯ ಉದ್ಘಾಟನೆಗಾಗಿ ಕಾಯುತ್ತಿದೆ. ಬೇಕಾದ ತಯಾರಿಯೂ ನಡೆಯುತ್ತಿದೆ. ಜಾನಪದದ ಸಮಗ್ರ ಸರ್ವೇಕ್ಷಣೆಯ ಭಾಗವಾಗಿ ತಲಾ ಹತ್ತು ಸಂಪುಟಗಳಲ್ಲಿ ಜಾನಪದ ವಿಶ್ವಕೋಶ, ಜಾನಪದ ನಿಘಂಟು, ಗ್ರಾಮ ಮಾಹಿತಿಕೋಶ ಮತ್ತು ಭಾಷಾಂತರ ಯೋಜನೆಗಳನ್ನು ರೂಪಿಸುತ್ತಿರುವುದಾಗಿ ಅವರು ಹೇಳಿದರು.

ಬಹುಶಃ ಜಾನಪದ ವಿವಿಯ ಮೊದಲ ಹಂತದ ಮಹತ್ವಾಕಾಂಕ್ಷೆಯ ಯೋಜನೆಗಳು ಇವೆಂದು ತಿಳಿಯೋಣ. ಇದರಲ್ಲಿ ಕೆಲಮಟ್ಟಿನ ಪುನರಾವರ್ತನೆಯ ಸಂಭವವಿದೆಯಾದರೂ, ಆಗಬೇಕಾದ ಕೆಲಸವೂ ಹೌದು. ಈ ಯೋಜನೆಗಳೇ ವಿಶ್ವವಿದ್ಯಾಲಯದ ತೋರುಬೆರಳುಗಳು ಅಂದುಕೊಳ್ಳುವುದಾದರೆ, ಜಾನಪದ ವಿವಿ ಮಾಹಿತಿಗಳನ್ನು ಕಲೆಹಾಕುವಲ್ಲಿ, ಮತ್ತು ಅವುಗಳನ್ನು ಪುಸ್ತಕಗಳಾಗಿ ಅಚ್ಚು ಹಾಕಿಸುವಲ್ಲಿ, ಹೆಚ್ಚು ಉತ್ಸುಕವಾಗಿದೆ ಎಂದಂತಾಯಿತು.

ಈ ಹಿಂದೆ ಜಾನಪದ ವಿವಿಯನ್ನು ಕಟ್ಟುವ ಬಗ್ಗೆ ವ್ಯಾಪಕ ಚರ್ಚೆ ನಡೆದಿದೆ. ಜಾನಪದ ವಿವಿ ಮಂಗಳೂರು, ದಾವಣಗೆರೆ, ದಾರವಾಡ, ಗುಲ್ಬರ್ಗಾಗಳಲ್ಲಿ ಆಯಾ ಭಾಗದ ಎಲ್ಲಾ ವಯೋಮಾನದ ವಿದ್ವಾಂಸರನ್ನು ಕರೆಸಿ ಅಭಿಪ್ರಾಯಗಳನ್ನು ಸಂಗ್ರಹಿಸಿದೆ. ಮುಂದುವರೆದು ವಿವಿ ಆರಂಭಿಕ ಕೆಲಸಗಳನ್ನೂ ನಡೆಸಿದೆ. ಈ ಹೊತ್ತಲ್ಲಿ ಜಾನಪದ ವಿವಿಯನ್ನು ಮುಂದೆ ಹೇಗೆ ರೂಪಿಸಬಹುದು ಎನ್ನುವ ಸಾಧ್ಯತೆಗಳ ಬಗ್ಗೆ ಯೋಚಿಸಬಹುದು.

ಜಾನಪದ ವಿವಿ ಮುಖ್ಯವಾಗಿ ಎರಡು ನೆಲೆಗಳಲ್ಲಿ ರೂಪುಗೊಳ್ಳಬೇಕಿದೆ. ಅವುಗಳೆಂದರೆ ಸೈದ್ಧಾಂತಿಕ ನೆಲೆ ಮತ್ತು ಪ್ರಾಯೋಗಿಕ ನೆಲೆ. ಒಂದು: ವಿವಿ ತನ್ನದೇ ಆದ ಆಲೋಚನ ವಿನ್ಯಾಸವನ್ನು, ಸೈದ್ಧಾಂತಿಕ ಖಚಿತತೆಯನ್ನು ಸ್ಪಷ್ಟಪಡಿಸಿಕೊಳ್ಳಬೇಕು. ಅದು ಬುಡಮಟ್ಟದ ಜನಸಮುದಾಯಗಳ ತಿಳುವಳಿಕೆಯ ಪಕ್ಷಪಾತಿಯಾಗಿರಬೇಕು. ಜನ ಸಾಮಾನ್ಯರ ಲೋಕದೃಷ್ಠಿಯನ್ನು ಆಧರಿಸಿ, ಗ್ರಾಮ ಜಗತ್ತಿನ ನಿಜದ ಬದುಕಿನ ನೆಲೆಯಲ್ಲಿ ಈ ಲೋಕದ ತಿಳಿವನ್ನು ಭಿನ್ನನೆಲೆಯಲ್ಲಿ ಅರ್ಥಮಾಡಿಸಬೇಕು. ಇದಕ್ಕಾಗಿ ಸಂಗ್ರಹಿತ ಜಾನಪದವನ್ನು ಮತ್ತೆ ಎದುರುಗೊಂಡು ಹೊಸದಾಗಿ ವಿಶ್ಲೇಷಿಸುವುದು, ಮುಖ್ಯವೆನಿಸುವ ಜಾನಪದವನ್ನು ಸಂಗ್ರಹಿಸುವುದು ಅಗತ್ಯವಿದೆ.

ಮೊದಲು ಜಾನಪದ ಕುರಿತ ವ್ಯಾಖ್ಯಾನಗಳನ್ನು ಈ ಕಾಲಕ್ಕೆ ಹಿಗ್ಗಿಸಬೇಕಿದೆ. ಹಳೆ ವ್ಯಾಖ್ಯಾನಗಳಿಗೆ ವಿವಿ ತನ್ನ ಕಾರ್ಯಸೂಚಿಯನ್ನು ರೂಪಿಸಿಕೊಂಡರೆ ಹೊಸತನ್ನು ನಿರೀಕ್ಷಿಸಲಾಗದು. ಜಾನಪದವೆಂದರೆ ಕಥೆ, ಗೀತೆ, ಗಾದೆ, ಒಗಟು, ಪ್ರದರ್ಶಕ ಕಲೆಗಳು ಎಂಬ ನಂಬಿಕೆ ಬಲವಾಗಿದೆ. ಅದು ಅನಕ್ಷರಸ್ತರದ್ದು, ಹಳ್ಳಿಗರದ್ದು, ಕೆಳಸಮುದಾಯಗಳದ್ದು, ಮೌಖಿಕವಾದದ್ದು ಮುಂತಾದ ಲಕ್ಷಣಗಳನ್ನು ಅದರ ಬೆನ್ನಿಗೆ ಬಿಗಿಯಾಗಿ ಕಟ್ಟಲಾಗಿದೆ. ಇವೆಲ್ಲಾ ಜಾನಪದದ ವ್ಯಾಪ್ತಿಗೆ ಬರುತ್ತವಾದರೂ ಇದಷ್ಟೆ ಅಲ್ಲ. ಇವುಗಳಾಚೆಗೆ ಬಹು ದೂರವನ್ನು ಜಾನಪದ ಕ್ರಮಿಸಿದೆ. ಈಗ ಗುರುತಿಸುವ ಜನಪದ ಪ್ರಾಕಾರಗಳಲ್ಲಿಯೂ ಹೊಸ ಚಲನೆ ಇದೆ.

ಈ ಹಿಂದೆ ಡೊಳ್ಳು ಕಲೆಯನ್ನು ಕುರುಬ ಸಮುದಾಯದ ಕಲೆಯೆಂದೂ, ಗಂಡು ಕಲೆಯೆಂದೂ ವಿಶ್ಲೇಷಿಸಲಾಗಿದೆ. ಈಗ ಬಹುಸಮುದಾಯಗಳಲ್ಲಿ ಆ ಕಲೆ ವಿಸ್ತರಿಸಿಕೊಂಡಿದೆ, ಹತ್ತಾರು ಮಹಿಳಾ ಡೊಳ್ಳು ತಂಡಗಳು ಹುಟ್ಟಿಕೊಂಡಿವೆ. ಹಾಗಾಗಿ ಅದರ ಹಿಂದಿನ ವಿಶ್ಲೇಷಣೆ ಈಗ ಬದಲಾಗಬೇಕಾಗುತ್ತದೆ. ಪುರುಷರ ಜನಪದ ಕಲೆಗಳನ್ನು ಇಂದು ಮಹಿಳೆಯರು ಪ್ರವೇಶಿಸುತ್ತಿದ್ದಾರೆ. ಹೀಗೆ ಆಯಾ ಜನಪದ ಪ್ರಕಾರಗಳು ವಿಸ್ತರಿಕೊಂಡ ನೆಲೆಗಳನ್ನು ಆಧರಿಸಿ ಹೊಸ ಬಗೆಯ ಆಲೋಚನಾ ಕ್ರಮವನ್ನು ರೂಪಿಸಿಕೊಳ್ಳಬೇಕಾದೆ.
ಇಂದು ಕರ್ನಾಟಕದಲ್ಲಿ ಸಾಂಸ್ಕೃತಿಕ ಅಧ್ಯಯನ ಮಾದರಿ ರೂಪುಗೊಳ್ಳುತ್ತಿದೆ. ಜಾನಪದ ವಿವಿಯೂ ಈ ಮಾದರಿಯನ್ನು ಗಟ್ಟಿಗೊಳಿಸುವ ಅಗತ್ಯವಿದೆ. ಅದಕ್ಕಾಗಿ ಬಹುಶಿಸ್ತೀಯ ನೆಲೆಯಲ್ಲಿ ವಿವಿಯನ್ನು ರೂಪಿಸಬೇಕು. ಅಲ್ಲಿ ಇತಿಹಾಸ, ಸಮಾಜಶಾಸ್ತ್ರ, ಮಾನವಶಾಸ್ತ್ರ, ಅಭಿವೃದ್ಧಿ ಅಧ್ಯಯನ, ಮಹಿಳಾ ಅಧ್ಯಯನ, ಸಾಹಿತ್ಯ ಅಧ್ಯಯನ, ಭಾಷಾದ್ಯಯನ, ತಂತ್ರಜ್ಞಾನ, ವಿಜ್ಞಾನದಂತಹ ಅನ್ಯಜ್ಞಾನ ಶಿಸ್ತುಗಳ ಮೂಲಕ ಜಾನಪದವನ್ನು ಆನ್ವಯಿಕವಾಗಿ ನೋಡುವಂತಾದಲ್ಲಿ ಅದರ ವಿಸ್ತರಣೆಯಾಗುತ್ತದೆ.

ಅಂತೆಯೆ ಜಾನಪದದಲ್ಲಿ ಜಾತಿ ಶ್ರೇಣೀಕರಣದ ಬಿಗಿಯಾದ ಕಟ್ಟುಗಳಿವೆ, ಕೆಳಜಾತಿ ಕೆಳವರ್ಗಗಳನ್ನು ಹಿಡಿತದಲ್ಲಿಟ್ಟುಕೊಳ್ಳಲು ಮೇಲ್ಜಾತಿ ಮೇಲ್ವರ್ಗಗಳು ಕಟ್ಟಿದ ಆಚರಣೆ ನಂಬಿಕೆಯ ಲೋಕಗಳಿವೆ. ಮಹಿಳೆಯನ್ನು ದಮನಗೊಳಿಸುವ ಮಾದರಿಗಳಿವೆ, ಪ್ರಭುತ್ವವನ್ನು ಕೊಂಡಾಡುವಿಕೆ, ಮೌಢ್ಯವನ್ನು ಮುಂದುವರೆಸುವಿಕೆ , ಗುಲಾಮಿ ಪ್ರವೃತ್ತಿಯನ್ನು ಬೆಳೆಸುವಿಕೆ ಮುಂತಾದ ಕೇಡುಗಳನ್ನು ಬಿಡಿಸಿಕೊಂಡು ವಿಶ್ಲೇಷಣೆ ಮಾಡುವ ಸವಾಲು ಜಾನಪದ ವಿವಿಯ ಮುಂದಿದೆ. ಅದನ್ನು ಅದು ಹೇಗೆ ನಿರ್ವಹಿಸುತ್ತದೆ ಎನ್ನುವುದನ್ನು ಕಾಯ್ದು ನೋಡಬೇಕು. ಇದಕ್ಕೆ ಪ್ರತಿಯಾಗಿ ಜಾನಪದದಲ್ಲಿಯೇ ಪ್ರತಿರೋಧಕ ಅಂಶಗಲೂ ಇವೆ. ಜನಸಮುದಾಯಗಳು ಪ್ರತಿಸಂಸ್ಕೃತಿಯನ್ನು ಕಟ್ಟಿಕೊಂಡ ಮಾದರಿಗಳೂ ಇವೆ, ಬಹುಶಃ ಇಂತಹ ಮಾದರಿಗಳನ್ನು ಆಧರಿಸಿದ ವಿಶ್ಲೇಷಣೆಯ ಅಗತ್ಯ ಹೆಚ್ಚಿದೆ. ಜಾನಪದದಲ್ಲಿ ಬಹು ಸಂಸ್ಕೃತಿ, ಬಹುಪರಂಪರೆಗಳ ಆಶಯವಿರುವ ಕಾರಣ ಧಾರ್ಮಿಕ ಮೂಲಭೂತವಾದಿ ಚಿಂತನೆಗಳಿಗೆ ಯಾವತ್ತೂ ಪ್ರತಿರೋಧಕ ಶಕ್ತಿಯಾಗಿಯೇ ಜಾನಪದ ವಿವಿ ಕೆಲಸಮಾಡಬೇಕು.

ಹೊಸ ಕಾಲದ ಹೊಸ ಜಾನಪದ ಹುಟ್ಟುತ್ತಿದೆ, ಆದರೆ ಅದನ್ನು ಗುರುತಿಸುವಿಕೆ ಕನ್ನಡದಲ್ಲಿ ಅಷ್ಟು ಕ್ರಿಯಾಶೀಲವಾಗಿಲ್ಲ. ಜನರ ಒಡನಾಟಕ್ಕೆ ಬರುವ ಯಾವುದೇ ವಸ್ತು ಅಥವಾ ಸಂಗತಿ ಕೂಡ ಜಾನಪದವನ್ನು ಹುಟ್ಟಿಸುತ್ತದೆ. ಉದಾ: ಗ್ರಾಮೀಣ ಭಾಗದಲ್ಲಿರುವ ಓಸಿ ಅಥವ ಮಟ್ಕಾ ಎಂಬ ಜೂಜಾಟ ಹುಟ್ಟಿಸಿದ ಜಾನಪದ ಅಚ್ಚರಿಹುಟ್ಟಿಸುವಂತಿದೆ. ಮೊಬೈಲ್ ಕೂಡ ವಿಚಿತ್ರ ರೀತಿಯಲ್ಲಿ ಜಾನಪದವನ್ನು ಹುಟ್ಟಿಸುತ್ತಿದೆ. ಸಮೂಹ ಮಾದ್ಯಮಗಳಿಂದಾಗಿ ನವಮೌಖಿಕತೆ ಹುಟ್ಟುತ್ತಿದೆ. ಹೀಗೆ ಹೊಸಕಾಲ ಮತ್ತು ಹೊಸ ಸಂಗತಿಗಳ ಕಾರಣಕ್ಕೆ ಹುಟ್ಟಿದ ಜಾನಪದವನ್ನು ಈ ವಿವಿ ಗುರುತಿಸುವಂತಾಗಬೇಕು. ಅಮೇರಿಕ, ಜರ್ಮನ್, ಫಿನ್ಲೆಂಡ್ ಮುಂತಾದ ಕಡೆ ಜಾನಪದವನ್ನು ಈ ನೆಲೆಯಲ್ಲಿ ವಿಸ್ತರಿಸಲಾಗುತ್ತಿದೆ. ‘ಫೋಕ್‌ಲೋರ್ ಅಂಡ್ ದ ಇಂಟರ್‌ನೆಟ್ : ವರ್ನಾಕುಲರ್ ಎಕ್ಸಪ್ರೆಷನ್ ಇನ್ ಎ ಡಿಜಿಟಲ್ ವರ್ಲ್ಡ’ ‘ನಿವ್ಸ್‌ಲೋರ್: ಕಂಟೆಂಪರರಿ ಫೋಕ್ ಲೋರ್ ಆನ್ ದ ಇಂಟರ್‌ನೆಟ್’ ಮುಂತಾದ ಕೃತಿಗಳಲ್ಲಿ ಇಂತಹ ಪ್ರಯತ್ನವನ್ನು ಕಾಣಬಹುದು.

ಎರಡನೆಯದಾಗಿ ಜಾನಪದ ವಿವಿ ಪ್ರಾಯೋಗಿಕ ನೆಲೆಯಲ್ಲಿ ರೂಪುಗೊಳ್ಳುವ ಅಗತ್ಯವಿದೆ. ಅದು ಹೆಚ್ಚು ಪ್ರಸ್ತುತ ಕೂಡ. ಸೌಥ್ ಈಸ್ಟರ್ನ ಯುನಿಟೆಡ್ ಸ್ಟೇಟ್ಸನ ಫ್ಲೊರಿಡಾದ ಲರ್ಗೋದಲ್ಲಿ ೧೯೯೮ ರಲ್ಲಿ ಸ್ಥಾಪನೆಯಾದ ಫೋಕ್ ಯುನಿವರ್ಸಿಟಿ ಕೂಡ ಪ್ರಾಯೋಗಿಕ ನೆಲೆಯಲ್ಲಿ ಅಭಿವೃದ್ಧಿಯಾದದ್ದು. ಹಾಗಾಗಿ ಜನಸಮುದಾಯದ ಜ್ಞಾನವನ್ನು ಆಧರಿಸಿ ಆಧುನಿಕ ಮಾದರಿಗಳಿಗೆ ಪರ್ಯಾಯ ದೇಸಿ ಮಾದರಿಗಳನ್ನು ಸೃಷ್ಟಿಸುವ ಸಾದ್ಯತೆಗಳಿವೆ. ಏಕ ವಸ್ತುಗಳನ್ನು ಜಾಗತಿಕವಾಗಿ ಮಾರುವ ಮಾರುಕಟ್ಟೆಗೆ ಪರ್ಯಾಯವಾಗಿ ಬಹು ವೈವಿದ್ಯದ ಜನಪದ ಗ್ರಾಮೀಣ ಉತ್ಪನ್ನಗಳನ್ನು ಒಳಗೊಂಡ ದೇಸಿ ಮಾರುಕಟ್ಟೆಯನ್ನು ಅಭಿವೃದ್ದಿಪಡಿಸಬೇಕಿದೆ. ಈ ನೆಲೆಯಲ್ಲಿ ವೃತ್ತಿ ಕಸಬುಗಳು ಮತ್ತು ಗುಡಿ ಕೈಗಾರಿಕೆಗಳ ಚೇತರಿಕೆಗಾಗಿ ಶ್ರಮಿಸಬೇಕಿದೆ. ಜನಪದ ವೈದ್ಯವನ್ನು ಆಧುನಿಕ ಅಗತ್ಯಗಳಿಗೆ ಬದಲಿಸಿ ಪೋಕ್ ಡಾಕ್ಟರುಗಳನ್ನೂ, ಜನಪದರ ಮನೆಕಟ್ಟುವ ಮಾದರಿ, ಕೃಷಿ ಮುಂತಾದ ಮಾದರಿಗಳನ್ನಾಧರಿಸಿ ಎಂಜಿನಿಯರುಗಳನ್ನು ರೂಪಿಸಬೇಕಿದೆ.

ಸ್ಕ್ಯಾಂಡಿನೇವಿಯಾ ಮುಂತಾದ ದೇಶಗಳಲ್ಲಿ ಫೋಕ್ ಹೈಸ್ಕೂಲ್ ಕುರಿತಂತೆ ದೊಡ್ಡ ಚಳವಳಿ ನಡೆದಿದೆ. ನೂರಾರು ಪೋಕ್ ಹೈಸ್ಕೂಲುಗಳು ಆರಂಭವಾಗಿ ವಯಸ್ಕರ ಶಿಕ್ಷಣಕ್ಕೆ ಹೊಸ ದಿಕ್ಕು ದೆಸೆ ಸಿಕ್ಕಿದೆ. ಫೋಕ್ ಮೀಡಿಯಂ ಸ್ಕೂಲುಗಳು ಆರಂಭವಾಗಿವೆ. ಪೋಕ್ ಎಂಜಿನಿಯರಿಂಗ್, ಪೋಕ್ ಮೆಡಿಸನ್, ಪೋಕ್ ಪ್ಯಾಷನ್ ಡಿಸೈನಿಂಗ್, ಪೋಕ್ ಅಪ್ಲೈಡ್ ಸೈನ್ಸ್, ಪೋಕ್ ಹೋಟೆಲ್ ಮೇನೇಜ್‌ಮೆಂಟ್ ಮುಂತಾದ ಜಾನಪದವನ್ನು ಆಧರಿಸಿದ ಆಧುನಿಕ ಶೈಕ್ಷಣಿಕ ಕೋರ್ಸುಗಳು ಆರಂಭವಾಗಿವೆ. ಹೊಸ ಕಾಲದ ವಿದ್ಯಾರ್ಥಿಗಳು ಇದನ್ನು ಕಲಿಯುತ್ತಿದ್ದಾರೆ. ಅದಕ್ಕೆ ಪೂರಕವಾದ ಉದ್ಯೋಗಗಳು ಸೃಷ್ಟಿಯಾಗಿವೆ. ಹಾಗಾಗಿ ಬಹಳ ಮುಖ್ಯವಾಗಿ ಶೈಕ್ಷಣಿಕವಾಗಿಯೂ ಜಾನಪದವನ್ನು ಅಳವಡಿಸುವ ಅಗತ್ಯವಿದೆ. ಅದಕ್ಕೆ ಪೂರಕವಾದ ಉದ್ಯೋಗವಕಾಶಗಳನ್ನು ಸೃಷ್ಟಿಸುವಂತಹ ಹೊರ ಆವರಣವನ್ನು ರೂಪಿಸಬೇಕಿದೆ.


ಜಾನಪದ ವಿಶ್ವವಿದ್ಯಾಲಯ ಗ್ರಾಮೀಣ ಅಭಿವೃದ್ಧಿಯನ್ನು ಪ್ರಧಾನ ಆಶಯವನ್ನಾಗಿಸಿಕೊಳ್ಳುವ ಅಗತ್ಯವಿದೆ. ಹಾಗಾದಲ್ಲಿ ನಗರಗಳತ್ತ ಮುಖಮಾಡಿ ವಲಸೆಹೋಗುತ್ತಿರುವ ಜನತೆಯನ್ನು ಹಳ್ಳಿಗಳಲ್ಲಿ ಹಿಡಿದಿಟ್ಟುಕೊಳ್ಳುವ ಆಕರ್ಷಕಣೆಯನ್ನು ಹೆಚ್ಚಿಸಬಹುದಾಗಿದೆ. ಸರಕಾರಿ ಉತ್ಸವ ಮುಂತಾದ ಕಡೆ ಜನಪದರು ಕಲಾಪ್ರದರ್ಶನ ನೀಡಿ ಹಲ್ಲು ಕಿರಿದು ಕೊಡುವ ಸಂಭಾವನೆಗಾಗಿ ಕಾಯುವ ಗುಲಾಮರನ್ನಾಗಿ ಮಾಡುವುದಕ್ಕಿಂತ, ಅವರನ್ನು ಸ್ವಾವಲಂಬಿಗಳಾಗಿ ಬದುಕ ಕಟ್ಟಿಕೊಳ್ಳಲು ಅನುವಾಗುವಂತೆ ಪ್ರಾಯೋಗಿಕ ನೆಲೆಗಳನ್ನು ಜಾನಪದ ವಿಶ್ವವಿದ್ಯಾಲಯವನ್ನು ವಿಸ್ತರಿಸಬೇಕಿದೆ

ಈಗ ನಾವು ಕೇಳಿಕೊಳ್ಳುವ ಪ್ರಶ್ನೆ, ಜಾನಪದವನ್ನು ಈ ಕಾಲಕ್ಕೆ ಮರು ಜೋಡಣೆ ಮಾಡಬಲ್ಲ ಕ್ರಿಯಾಶೀಲ ವಿದ್ವಾಂಸರು ವಿವಿಗೆ ಬರುತ್ತಾರೆಯೆ ಎನ್ನುವುದು. ಕುಲಪತಿಗಳಾದ ಪ್ರೊ. ಹಿರಿಯಣ್ಣನವರು ಜಾನಪದ ವಿವಿಯನ್ನು ಈ ಮೇಲಿನ ಆಶಯಗಳಿಗೆ ಪೂರಕವಾಗಿ ಕಟ್ಟುವ ಸಾಮರ್ಥ್ಯವಿರುವ ಯುವ ವಿದ್ವಾಂಸರನ್ನು ಆಯ್ಕೆ ಮಾಡಿಕೊಳ್ಳುವಲ್ಲಿ ಹೆಚ್ಚು ಸ್ವಾತಂತ್ರ್ಯವನ್ನು ವಹಿಸಬೇಕಿದೆ. ಪ್ರತಿಭೆಯಿಲ್ಲದೆ ಕೇವಲ ಅನ್ಯಪ್ರಭಾವ ಬಳಸಿ ವಿಶ್ವವಿದ್ಯಾಲಯಗಳಲ್ಲಿ ಪ್ರವೇಶ ಪಡೆಯುವವರನ್ನು ದೈರ್ಯದಿಂದ ಹೊರಗಿಡುವ ಛಾತಿಯನ್ನೂ ತೋರಬೇಕಿದೆ. ಇದರಾಚೆಗೂ ಈಗಾಗಲೇ ಜಾನಪದದ ಹಳೆ ಮಾದರಿಗಳಿಂದ ಹೊರಬರದ ಅಧ್ಯಾಪಕರು ವಿವಿಗೆ ಬಂದರೆ, ಹಾಡು ಕತೆ ಸಂಗ್ರಹಿಸಿಕೊಂಡು ಹೆಚ್ಚೆಂದರೆ ವಿವಿಯನ್ನು ದೊಡ್ಡ ಮ್ಯೂಜಿಯಂ ಮಾಡುವ ಅಪಾಯವಿದೆ. ಇಂತಹ ಮಿತಿಗಳನ್ನು ಮೀರುವ ಹಾಗೆ ಜಾನಪದ ವಿವಿ ರೂಪಗೊಳ್ಳಬೇಕಾದ ಅಗತ್ಯವಿದೆ.
.

ಕಾಮೆಂಟ್‌ಗಳಿಲ್ಲ: