ಸೋಮವಾರ, ನವೆಂಬರ್ 21, 2011

ವರ್ಷ ತುಂಬಿದ ಕನ್ನಡ ಜಾನಪದ ಬ್ಲಾಗ್

ಕನ್ನಡ ಜಾನಪದ ಬ್ಲಾಗ್ ಜತೆಗಿನ ಪಯಣದ ಕಥೆ..

2010 ಸೆಪ್ಟಂಬರ್ 7 ಕ್ಕೆ ಬ್ಲಾಗ್ ಆರಂಭಿಸಿದ್ದೆ. ನವಂಬರ್ 7 ಕ್ಕೆ ಹದಿನಾಲ್ಕು ತಿಂಗಳು ತುಂಬಿದೆ. ಒಂದು ವರ್ಷ ಪೂರೈಸಿದ ಈ ಹೊತ್ತಲ್ಲಿ ನಿಮ್ಮೊಂದಿಗೆ ನಾಲ್ಕು ಮಾತು. ಬ್ಲಾಗ್ ಆರಂಬಿಸಿ ಮೊದಲಿಗೆ ಉತ್ಸಾಹದಿಂದ ಬರೆದು ನಂತರ ಅಪ್ ಡೇಟ್ ಮಾಡುವುದನ್ನು ಮರೆಯುತ್ತಾರೆ. ಆ ಉತ್ಸಾಹವನ್ನು ನಿರಂತವಾಗಿಟ್ಟುಕೊಂಡು, ಬ್ಲಾಗ್ ಗೆ ಬರೆಯುವುದೂ ಕೂಡ ಒಂದು ಸವಾಲು. ಹಾಗಾಗಿ ಕನ್ನಡದಲ್ಲಿ ಸಾವಿರಾರು ಬ್ಲಾಗ್ ಗಳಿದ್ದರೂ ನಿರಂತರವಾಗಿ ಅಪ್ ಡೇಟ್ ಆಗುವ ಬ್ಲಾಗ್ ಗಳ ಸಂಖ್ಯೆ ಕಡಿಮೆ. ಅಂತಹ ಕಡಿಮೆ ಸಂಖ್ಯೆಯಲ್ಲಿ ಕನ್ನಡ ಜಾನಪದವೂ ಒಂದು.

ಕಂಪ್ಯೂಟರ್ ಮುಟ್ಟಿದರೆ ಚೇಳು ಕಡಿದಂತಹ ಭಯವಾಗಿ, ಅದರಿಂದ ದೂರವೆ ಉಳಿದಿದ್ದ ನನಗೆ ಕಂಪ್ಯೂಟರ್ ಸಹವಾಸ ದೊರಕಿದ್ದು ಆಕಸ್ಮಿಕ. ವರ್ಡನೆಟ್ ಪ್ರಾಜೆಕ್ಟ(ಅಮೃತ ವಿವಿ ಕೊಯಮತ್ತೂರು) ನಲ್ಲಿ ಕೆಲಸ ಮಾಡಲು ಭಾರತಿದೇವಿಯ ಸಹಾಯ ಸಿಗದಿದ್ದರೆ, ಕಂಪ್ಯೂಟರ್ ಮತ್ತು ಅಂತರ್ಜಾಲದ ಸಹವಾಸ ಇನ್ನಷ್ಟು ದಿನ ಮುಂದೆ ಹೋಗುತ್ತಿತ್ತೋ ಏನೊ. ಹಾಗಾಗಿ ಭಾರತಿದೇವಿಯನ್ನು ಈ ಹೊತ್ತು ನೆನೆವೆ.

ಅಂತರ್ಜಾಲದಲ್ಲಿ ಕನ್ನಡ ಜಾನಪದ, ಕರ್ನಾಟಕ ಫೋಕ್ಲೋರ್ ಎಂದು ಹುಡುಕಿದರೆ ಬರುವ ಫಲಿತಾಂಶ ನಿರಾಸೆ ಹುಟ್ಟಿಸುತ್ತಿತ್ತು. ಹಾಗಾಗಿ ಜಾನಪದಕ್ಕೆಂದೇ ಬ್ಲಾಗ್ ಒಂದನ್ನು ಆರಂಭಿಸಿದರೆ ಹೇಗೆಂಬ ಯೋಚನೆ ಹೊಳೆದು ಅದು ಕಾರ್ಯರೂಪಕ್ಕೆ ಬಂತು. ನಂತರ ಒಳ್ಳೆಯ ಪ್ರತಿಕ್ರಿಯೆಯೂ ಸಿಕ್ಕಿತು. ಈಗ ಕನ್ನಡ ಜಾನಪದ ಓದುವಿಕೆಯ ಸಂಖ್ಯೆ ಹತ್ತು ಸಾವಿರದ ಹತ್ತಿರ ಇದೆ. ಬ್ಲಾಗ್ ನಲ್ಲಿ ಪ್ರಕಟವಾದ ಬರಹಗಳ ಸಂಖ್ಯೆ ನೂರನ್ನು ದಾಟಿದೆ. ಇನ್ನು ಕನ್ನಡ ಜಾನಪದ ಪೇಸ್ ಬುಕ್ ನಲ್ಲಿ ಸಾವಿರಕ್ಕಿಂತ ಹೆಚ್ಚಿನ ಸ್ನೇಹ ಬಳಗವಿದೆ. ಈಗ ಗೂಗಲ್ ನಲ್ಲಿ ಕನ್ನಡ ಜಾನಪದ, ಕರ್ನಾಟಕ ಫೋಕ್ ಲೋರ್ ಎಂದು ಹುಡುಕಿದರೆ ಕನ್ನಡ ಜಾನಪದ ಬ್ಲಾಗ್ ನ ಅಷ್ಟೂ ಬರಹಗಳ ಲಿಂಕ್ ಸಿಕ್ಕುತ್ತದೆ, ಅದು ಸಮಾಧಾನಕರ ಸಂಗತಿ. ಹಾಗಾಗಿ ಈ ಹೊತ್ತು ಬ್ಲಾಗ್ ಪಯಣದಲ್ಲಿ ಸಿಕ್ಕವರನ್ನು ನೆನೆಯಬೇಕು.

ಬ್ಲಾಗ್ ಆರಂಭಿಸಿ ಸ್ವಲ್ಪ ದಿನಕ್ಕೆ ದೆಹಲಿಯಿಂದ ಪುರುಷೋತ್ತಮ ಬಿಳಿಮಲೆಯವರು ಪೋನ್ ಮಾಡಿ ಪ್ರೋತ್ಸಾಹದಾಯಕ ಮಾತುಗಳನ್ನಾಡಿದರು, ಜರ್ಮನಿಯಲ್ಲಿದ್ದ ಪ್ರೊ.ಬಿ.ಎ ವಿವೇಕ ರೈ ಅವರು ತಮ್ಮ ಬ್ಲಾಗ್ ನಲ್ಲಿ ಕನ್ನಡ ಜಾನಪದ ಬ್ಲಾಗ್ ಬಗ್ಗೆ ಟಿಪ್ಪಣಿ ಬರೆದು ಗಮನ ಸೆಳೆದರು. ಜಿ.ಎನ್.ಮೋಹನ್ ಅವರು ಜಾನಪದಕ್ಕೇ ಬ್ಲಾಗ್ ಆರಂಭಿಸಿದ್ದು ಒಳ್ಳೆಯ ಬೆಳವಣಿಗೆ ಎಂದು ಮೆಚ್ಚಿ ಮಾತನಾಡಿದರು, ನಂತರ ಅವಧಿಯಲ್ಲಿ ಕನ್ನಡ ಜಾನಪದದಲ್ಲಿ ಪ್ರಕಟವಾದ ಬರಹಗಳನ್ನು ಪ್ರಕಟಿಸಿ ಲಿಂಕ್ ತೋರಿಸಿದರು, ಅಂತೆಯೇ ಅವಧಿಯ ದಿನದ ಬ್ಲಾಗ್ ನಲ್ಲಿ ಟೀನಾ ಶಶಿಕಾಂತ ಅವರು ಜಾನಪದ ಬ್ಲಾಗ್ ಬಗ್ಗೆ ಉತ್ತಮ ಮಾತುಗಳನ್ನು ಬರೆದರು, ಹಾಗೆಯೇ ಅನೇಕ ಸ್ನೇಹಿತ/ತೆ ಬ್ಲಾಗಿಗರು ತಮ್ಮ ಬ್ಲಾಗ್ ಪಟ್ಟಿಯಲ್ಲಿ ಕನ್ನಡ ಜಾನಪದವನ್ನು ಸೇರಿಸಿ ಸಹಕರಿಸಿದ್ದಾರೆ, ಅವರೆಲ್ಲರನ್ನೂ ನೆನೆವೆ.

ಅರಣ್ಯ ಜಾನಪದ ಸೆಮಿನಾರ್ ಬಗ್ಗೆ ವಿಮರ್ಶಾತ್ಮಕ ಟಿಪ್ಪಣಿ ಬರೆದಾಗ ಯು.ಆರ್. ಅನಂತಮೂರ್ತಿ,ರಹಮತ್ ತರೀಕೆರೆ, ಬಿಳಿಮಲೆ , ಅಂಬಳಿಕೆ ಹಿರಿಯಣ್ಣ, ಬಂಜಗೆರೆ ಜಯಪ್ರಕಾಶ್ ಮುಂತಾದವರೆಲ್ಲಾ ಪ್ರತಿಕ್ರಿಯಿಸಿದರು. ಇದು ನನಗೆ ಬರೆಯಲು ಮತ್ತಷ್ಟು ಉತ್ಸಾಹವನ್ನು ಹೆಚ್ಚಿಸಿತು. ಇಲ್ಲಿನ ಎಲ್ಲಾ ಬರಹಗಳು ನನ್ನವಲ್ಲ, ಬದಲಾಗಿ ಹಲವರ ಬರಹಗಳು ಇಲ್ಲಿವೆ. ಕೂಡ್ಲಿಗಿಯ ಸಿದ್ದರಾಮ ಹಿರೇಮಠ, ಭೀಮಣ್ಣ ಗಜಾಪುರ, ಸ್ವರೂಪಾನಂದ, ಬಾಗಲಕೋಟೆಯ ಪ್ರಕಾಶ್ ಖಾಡೆ, ಪ್ರೊ.ವೀರಣ್ಣ ದಂಡೆ, ಬಸವರಾಜ ಮಲಶೆಟ್ಟರು, ಪ್ರೊ. ರಾಜೇಂದ್ರ ಚೆನ್ನಿ, ಹೆಚ್,ಎಸ್.ರೋಹಿಣಿ, ಮುಂತಾದವರ ಬರಹಗಳು ಇಲ್ಲಿ ಪ್ರಕಟವಾಗಿವೆ, ಅವರೆಲ್ಲರಿಗೂ ಧನ್ಯವಾದಗಳು.

ಇಲ್ಲಿನ ಕೆಲವು ಬರಹಗಳನ್ನು ಎರವಲು ಪಡೆದೂ ಪ್ರಕಟಿಸಲಾಗಿದೆ ತರೀಕೆರೆ ಸಾರ್ ಪ್ರಜಾವಾಣಿ ಅಂಕಣದ ಕೆಲವು ಬರಹಗಳನ್ನು ಇಲ್ಲಿ ಪ್ರಕಟಿಸಲಾಗಿದೆ. ಸಿರಾಜ್ ಅಹಮದ್, ಮೇಟಿ ಮಲ್ಲಿಕಾರ್ಜುನ ಅವರ ಡಿ.ಎನ್. ಶಂಕರಭಟ್ಟರ ಧೀರ್ಘ ಸಂದರ್ಶನವನ್ನು ಪ್ರಕಟಿಸಲಾಗಿದೆ. ಅಂತೆಯೇ ಜಾನಪದದ ಬಗ್ಗೆ ಪತ್ರಿಕೆಗಳಲ್ಲಿ ಬಂದ, ಬೇರೆ ಬೇರೆ ಬ್ಲಾಗ್ ಗಳಲ್ಲಿ ಪ್ರಕಟವಾದ ಕೆಲವಾದರೂ ಒಳ್ಳೆಯ ಬರಹಗಳನ್ನು ಇಲ್ಲಿ ಪ್ರಕಟಿಸಲು ಪ್ರಯತ್ನಿಸಲಾಗಿದೆ. ಅಂತಹ ಬರಹಗಳ ಎಲ್ಲಾ ಬರಹಗಾರರಿಗೂ ಧನ್ಯವಾದಗಳು. ಕನ್ನಡ ಜಾನಪದದಲ್ಲಿ ಪ್ರಕಟವಾದ ಕೆಲವು ಬರಹಗಳನ್ನು ಪ್ರಕಟಿಸಿದ ಅವಧಿ, ಲಡಾಯಿ ಪ್ರಕಾಶನ , ಕನ್ನಡ ನೆಟ್ ಮುಂತಾದ ತಾಣದ ಹಿಂದಿರುವವರನ್ನೂ ನೆನೆವೆ.

ಈ ಬ್ಲಾಗ್ ಗಾಗಿ ಗೊ.ರು.ಚನ್ನಬಸಪ್ಪ, ಪ್ರೊ.ಹಿರಿಯಣ್ಣ, ಡಾ.ಟಿ.ಆರ್. ಚಂದ್ರಶೇಖರ್, ಡಾ. ರಹಮತ್ ತರೀಕೆರೆ, ಕಿಕ್ಕೇರಿ ನಾರಾಯಣ ಮೊದಲಾದವರೊಂದಿಗೆ ಪ್ರಶ್ನೆಕಳುಹಿಸಿ ಉತ್ತರ ಪಡೆದ ಸಂದರ್ಶನ ಪ್ರಕಟಿಸಿದ್ದೇನೆ, ಆ ಎಲ್ಲಾ ಹಿರಿಯರನ್ನು ನೆನೆವೆ.

ಕೆಲ ದಿನಗಳ ಹಿಂದೆ ಕನ್ನಡ ಜಾನಪದದ ಜತೆ ಕರ್ನಾಟಕ ಪೋಕ್ ಲೋರ್ ಎಂದು ಇಂಗ್ಲೀಷ್ ನಲ್ಲಿ ಸೇರಿಸಿದೆ, ಈ ಸಲಹೆಯನ್ನು ನೀಡಿದವರು ನಟರಾಜ ಹುಳಿಯಾರ ಅವರು. ಕಾರಣ ಹೊರಗಿನವರು ಸಾಮಾನ್ಯವಾಗಿ ಕರ್ನಾಟಕ ಪೋಕ್ ಲೋರ್ ಎಂದು ಹುಡುಕುತ್ತಾರೆ, ಅಂತವರಿಗೂ ಈ ಬರಹದ ಲಿಂಕ್ ಗಳು ಸಿಗಲೆಂದು ಹೀಗೆ ಬದಲಾಯಿಸಲಾಯಿತು.

ಈ ಬ್ಲಾಗ್ ನಲ್ಲಿ ಬರೆದ ಬರಹಗಳು ಮಹತ್ವದ ಸಂಶೋಧನೆಗಳೇನೂ ಅಲ್ಲ, ಬದಲಾಗಿ ಜಾನಪದವನ್ನು ಹೊಸದಾಗಿ ವಿಶ್ಲೇಷಿಸಬಹುದಾದ ಕೆಲವು ಟಿಪ್ಪಣಿ ತರಹದ, ಪ್ರವೇಶಿಕೆಯ ರೂಪದ ಬರಹಗಳು. ಅಂತಹ ಬರಹಗಳ ವಿಸ್ತರಣಾ ರೂಪಗಳು ಜಾನಪದ ಹೊಸ ನಡಿಗೆ ಎನ್ನುವ ನನ್ನ ಹೊಸ ಪುಸ್ತಕದಲ್ಲಿ ಪ್ರಕಟವಾಗಲಿವೆ. ಜಾನಪದ ಕುರಿತ ಸೆಮಿನಾರು, ಚರ್ಚೆ ಸಂವಾದಗಳು ನಡೆವ ಬಗ್ಗೆ ನನಗೆ ದೊರಕಿದ ಕೆಲವಾದರೂ ಮಾಹಿತಿಗಳನ್ನು ಪ್ರಕಟಿಸಲಾಗಿದೆ.

ಬೀದರ್ ನಲ್ಲಿ ನಡೆದ ಅಖಿಲ ಭಾರತೀಯ ಜಾನಪದ ಸಮ್ಮೇಳನಕ್ಕೆ ಆಹ್ವಾನವಿಲ್ಲದೆ ಸ್ವ ಇಚ್ಚೆಯಿಂದ ತೆರಳಿ ನಾಲ್ಕು ದಿನ ಇದ್ದು ವರದಿ ಮಾಡಿದ್ದೇನೆ. ಕನ್ನಡ ಜಾನಪದ ಬ್ಲಾಗ್ ಕರ್ನಾಟಕ ಜಾನಪದ ಕ್ಷೇತ್ರಕ್ಕೆ ಸಣ್ಣ ಸೇರ್ಪಡೆಯಷ್ಟೆ. ಬ್ಲಾಗ್ ನ್ನು ವೆಬ್ ಸೈಟ್ ಮಾಡುವ ಆಲೋಚನೆಯೂ ಇತ್ತು. ಅದಕ್ಕೆ ತಗಲುವ ಹಣಕಾಸನ್ನು ಭರಿಸುವ ಶಕ್ತಿ ಸದ್ಯಕ್ಕೆ ಇಲ್ಲವಾದ್ದರಿಂದ ವೆಬ್ ಸೈಟ್ ಮಾಡುವ ಯೋಚನೆಯನ್ನು ಸ್ವಲ್ಪ ಮುಂದೂಡಿದ್ದೇನೆ. ಅಲ್ಲಿಯವರೆಗೂ ನಿರಂತರವಾಗಿ ಬ್ಲಾಗ್ ನಲ್ಲಿ ಬರವಣಿಗೆ ಮಾಡುತ್ತೇನೆ.

ಬ್ಲಾಗ್ ರೂಪಿಸುವಲ್ಲಿ ಜತೆಗಾತಿ ಕಾವ್ಯಳ ಸಹಕಾರ ದೊಡ್ಡದು. ವರ್ಷ ತುಂಬಿದ ಈ ಹೊತ್ತಿನಲ್ಲಿ ತಕ್ಷಣಕ್ಕೆ ನೆನಪಾಗದ ಹಲವಾರು ಗೆಳೆಯ ಗೆಳತಿಯರು ಸಹಕರಿಸಿದ್ದಾರೆ ಅವರೆಲ್ಲರನ್ನೂ ನೆನೆವೆ.

-ಅರುಣ್ ಜೋಳದಕೂಡ್ಲಿಗಿ, ಕನ್ನಡ ಜಾನಪದ ಬ್ಲಾಗಿಗ.

7 ಕಾಮೆಂಟ್‌ಗಳು:

siddha ಹೇಳಿದರು...

ಪ್ರೀತಿಯ ಅರುಣ್, ಕನ್ನಡ ಜಾನಪದ ಬ್ಲಾಗ್ ಆರಂಭಗೊಂಡಾಗ ಕುತೂಹಲದಿಂದ ನೋಡಿದೆ. ವಿಶೇಷ ಮತ್ತು ಹೊಸದೆನಿಸಿತು. ಅಲ್ಲದೆ ಬ್ಲಾಗ್ ನಲ್ಲಿ ಬರೆಯುವ ನನಗೂ ಖುಷಿ ಎನಿಸಿತು. ಜಾನಪದ ವಿದ್ವಾಂಸರ ಬರಹಗಳು ಇಲ್ಲಿ ಪ್ರಕಟಗೊಂಡಿರುವುದು, ಸಂದರ್ಶನ, ಚರ್ಚೆಗಳು ಎಲ್ಲವೂ ಗಮನೀಯ. ನೆಟ್ ಮುಂದೆ ಕುಳಿತಾಗ ಒಮ್ಮೆ ಜಾನಪದ ಬ್ಲಾಗ್ ಸಂದರ್ಶಿಸದೇ ಬಿಡುವುದಿಲ್ಲ. ನನ್ನ ಬರಹಗಳನ್ನು ಪ್ರೀತಿಯಿಂದ ಪ್ರಕಟಿಸಿರುವಿರಿ. ನಿಮ್ಮ ಪ್ರಯತ್ನ, ಜಾನಪದ ಬ್ಲಾಗ್ ಹೀಗೇ ಮುಂದುವರೆಯಲಿ. ವರ್ಷದ ಮಗು ಜಾನಪದ ಬ್ಲಾಗ್ ಬೆಳೆದು ಯುವಶಕ್ತಿ ಪಡೆಯಲಿ ಎಂಬುದು ನನ್ನ ಹಾರೈಕೆ. ಶುಭವಾಗಲಿ. -ಸಿದ್ಧರಾಮ ಹಿರೇಮಠ.

bayalubhoomiya bhavapoora ಹೇಳಿದರು...

just read ur blog. ur commitment towards folk has impressed me a lot.i must appriciate ur effort.if u r thinking seriously to build up a website, money may not be a problem. good luck.wish u all success.Sudha ChidanandaGowd

ಅನಾಮಧೇಯ ಹೇಳಿದರು...

ಅರುಣ್ ಮೊದಲಿಗೆ ಅಭಿನಂದನೆಗಳು
ಜಾನಪದ ಬ್ಲಾಗ್ ನೋಡಿದೆ. ವರ್ಷ ತುಂಬಿದ ಈ ಸಂದರ್ಭದಲ್ಲಿ ಮತ್ತೊಮ್ಮೆ ಅಭಿನಂದನೆಗಳು
ಇದು ಕನ್ನಡದ ಕೆಲಸ... ನಿಮ್ಮ ಕನ್ನಡ ಜಾನಪದ ಕೈಂಕರ್ಯಕ್ಕ ನಮ್ಮದು ಕಿರು ಕಾಣಿಕೆ ಇರಲಿ ಎಂದು ಇಲ್ಲೆರಡು ಲೇಖನಗಳನ್ನು ಕಳುಹಿಸಿತ್ತಿರುವೆ
ಸಾಧ್ಯವಾದರೆ ನಿಮ್ಮ ಬ್ಲಾಗಿಗೆ ಸೇರ್ಪಡೆ ಮಾಡಿಕೊಳ್ಳಿ
ವಂದನೆಗಳು.
-ಡಾ.ಎಂ.ಬೈರೇಗೌಡ, ಬೆಂಗಳೂರು

ಅನಾಮಧೇಯ ಹೇಳಿದರು...

ಪ್ರಿಯ ಅರುಣ,
ಅಭಿನಂದನೆಗಳು.
ವಿಶ್ವಾಸದಿಂದ
ಬೇಳೂರು ಸುದರ್ಶನ

ಅನಾಮಧೇಯ ಹೇಳಿದರು...

ಇನ್ನ ಮುಂದಿನದು ಇನ್ನೆಷ್ಟೋ! happy blogging year arun!


-ಎಚ್.ಎನ್.ಈಶ ಕುಮಾರ್

ಅನಾಮಧೇಯ ಹೇಳಿದರು...

ಇನ್ನ ಮುಂದಿನದು ಇನ್ನೆಷ್ಟೋ! happy blogging year arun!


-ಎಚ್.ಎನ್.ಈಶ ಕುಮಾರ್

ಅನಾಮಧೇಯ ಹೇಳಿದರು...

ವರ್ಷ ತುಂಬಿದ ಕನ್ನಡ ಜಾನಪದ ನಿರಂತರವಾಗಿ ಸಾಗಲಿ. ನಿಜಕ್ಕೂ ಜಾನಪದದ ಹೊಸ ಆಯಾಮಗಳ ಹುಡುಕಾಟದ ಅಗತ್ಯವಿದೆ. ಜೊತೆಗೆ ಜನಪದರ ನಂಬಿಕೆಗಳು ಅಷ್ಟು ಸುಲಭವಾಗಿ ಮಾಯವಾಗುವಂತಹುವಲ್ಲ.ನಗರಗಳಾಗಿ ಪರಿವರ್ತನೆಯಾಗುತ್ತಿರುವ ಹಳ್ಳಿಗಳು ಇನ್ನೂ ಹಬ್ಬ ಜಾತ್ರೆ ಮುಂತಾದ ಆಚರಣೆಗಳನ್ನು ಇನ್ನು ತಪ್ಪದೆ ಆಚರಿಸುತ್ತಿದ್ದಾರೆ. ನಗರ ಬೆಳೆದ ಮಾತ್ರಕ್ಕೆ ನಂಬಿಕೆಗಳು ಕಣ್ಮರೆಯಾಗದು. ಅನ್ನದ ದಾರಿಗಳನ್ನು ಹಳ್ಳಿಗಳಲ್ಲೇ ಹುಡುಕಿಕೊಳ್ಳದೆ ನಗರಗಳತ್ತ ಮುಖಮಾಡುವುದು ತಪ್ಪು. ಜಾನಪದ ವಿವಿ ಇಂಥದ್ದನ್ನೆಲ್ಲಾ ಗಮನದಲ್ಲಿಟ್ಟುಕೊಳ್ಳಬೇಕಾಗುತ್ತದೆ. ತರಗತಿಗಳಲ್ಲಿ ಐಟಿ ಬಿಟಿ ಸಂಬಳ ಕೊಟ್ಟರೆ ಹಳ್ಳಿಗಳಲ್ಲಿ ದುಡಿಯಲು ಎಷ್ಟು ಜನ ತಯಾರಿದ್ದೀರಿ ಎಂದರೆ ಸುಮಾರು ಹಳ್ಳಿ ಹಿನ್ನೆಲಿಯಿಂದ ಬಂದವರೊಂದಿಗೆ ನಗರದ ವಿಧ್ಯಾರ್ಥಿಗಳು ಕೈ ಎತ್ತುತ್ತಾರೆ. ಅಂದರೆ ಎಲ್ಲವನ್ನೂ ಹಣದ ಮೂಕಲ ನೋಡುತ್ತಿರುವ ಈ ಹೊತ್ತಲ್ಲಿ ಜಾನಪದರ ದುಡಿಮೆಯ ಬದುಕಿನ ಬಗ್ಗೆಯೂ ಆಲೋಚಿಸಬೇಕಿದೆ ಅರುಣ್.
ಧನ್ಯವಾದಗಳು
-ಡಿ.ಸಿ.ಗೀತ ಬೆಂಗಳೂರು.