ಭಾನುವಾರ, ನವೆಂಬರ್ 27, 2011

ಶಿಯಾ ಮೊಹರಂ: ರಕ್ತಪಾತ ಮತ್ತು ಕಾವ್ಯ




ಮೊಹರಂ ಆಚರಣೆಗೆ ಇಂದಿನಿಂದ (ನ.27) ಚಾಲನೆ. ಡಿಸೆಂಬರ್ 6 ಮೊಹರಂ ಕಡೇ ದಿನ. ಅಂದಹಾಗೆ, ಈ ಮೊಹರಂ ಎನ್ನುವುದು ಒಂದು ಹಬ್ಬವಷ್ಟೇ ಅಲ್ಲ. ಅದು ರಕ್ತಪಾತ ಮತ್ತು ಕಾವ್ಯ ಎರಡನ್ನೂ ಒಳಗೊಂಡ ಒಂದು ವಿಶಿಷ್ಟ ಆಚರಣೆ.

ಶಿಯಾ-ಸುನ್ನಿ: ಇವು ಮುಸ್ಲಿಮರಲ್ಲಿರುವ ಎರಡು ಪಂಗಡಗಳ ಹೆಸರು. ಇವುಗಳ ನಡುವೆ ನಿಡುಗಾಲದ ಸಂಘರ್ಷವಿದೆ. ಇದೊಂದು ದಾಯಾದಿ ಕಲಹದ ಚರಿತ್ರೆ. ವಿಶೇಷವೆಂದರೆ, ಈ ಚರಿತ್ರೆಗೆ ರಕ್ತಪಾತದ ಮುಖವಿರುವಂತೆ ಕಾವ್ಯದ ಮುಖವೂ ಇದೆ ಮಹಾಭಾರತಕ್ಕಿರುವಂತೆ.

ಇದರ ಹಿನ್ನೆಲೆ ಹೀಗಿದೆ: ಮಹಮ್ಮದ್ ಪೈಗಂಬರರ ನಿಧನದ ಬಳಿಕ, ಅರಬ್ಬರು ಪೈಗಂಬರರ ಪಥದಲ್ಲೇ ನಡೆಯಬಲ್ಲ ಒಬ್ಬರನ್ನು ತಮ್ಮ ಖಲೀಫನಾಗಿ ಆಯ್ಕೆ ಮಾಡಿಕೊಳ್ಳಲಾರಂಭಿಸಿದರು.

ಇವರೇ ಸುನ್ನಿ (=ಪಥಿಕರು) ಎನಿಸಿಕೊಂಡರು. ಆದರೆ ಈ ವ್ಯವಸ್ಥೆ ಇನ್ನೊಂದು ಬಣಕ್ಕೆ ಸಮ್ಮತವಾಗಲಿಲ್ಲ. ಪೈಗಂಬರರ ಬಳಿಕ ಅರಬ್ಬರ ಆಧ್ಯಾತ್ಮಿಕ ನಾಯಕ ಹಾಗೂ ಖಲೀಫ ಆಗಬೇಕಿದ್ದುದು, ಅವರ ಅಳಿಯ ಅಲಿ ಎಂದು ಅವರ ಅಭಿಮತ.

ತಮ್ಮನ್ನು ಅಲಿಯವರ ಅನುಯಾಯಿಗಳೆಂದು ಘೋಷಿಸಿಕೊಂಡ ಅವರು ಜನರೇ ಆರಿಸಿದ ಖಲೀಫರನ್ನು ಒಪ್ಪಿಕೊಳ್ಳಲಿಲ್ಲ.

ಬದಲಿಗೆ ಅಲಿ ಹಾಗೂ ಅವರ ಮಕ್ಕಳಾದ ಹಸನ್-ಹುಸೇನರನ್ನೂ ಒಳಗೊಂಡಂತೆ 12 ಜನ ಇಮಾಮರನ್ನು ತಮ್ಮ ಆಧ್ಯಾತ್ಮಿಕ ನಾಯಕರೆಂದು ಸ್ವೀಕರಿಸಿದರು. ಅವರೇ ಶಿಯಾ (=ಅನುಯಾಯಿ)ಗಳು.

ಈ ತಾತ್ವಿಕ ಭಿನ್ನಮತವು ಪಂಗಡ ಭೇದಕ್ಕೆ ಕಾರಣವಾಗಿದ್ದರೆ ಸಮಸ್ಯೆಯಿರಲಿಲ್ಲ. ಶತಮಾನಗಳ ಕಾಲ ನಾಗರಿಕ ಕದನಗಳಿಗೂ ಕಾರಣವಾಯಿತು.

ಚರಿತ್ರೆಯಲ್ಲಿ ಅತಿ ಹಿಂಸಾತ್ಮಕ ತಿಕ್ಕಾಟಗಳು ನಡೆದಿರುವುದು, ದಾಯಾದಿಗಳ ನಡುವೆಯೇ ಎಂದು ತೋರುತ್ತದೆ. ಶೈವ-ವೈಷ್ಣವ ಸಂಘರ್ಷಗಳನ್ನು ನೆನಪಿಸುವ ಈ ಯಾದವಿ ಕಲಹಗಳು ಈಗಲೂ ನಿಂತಿಲ್ಲ.

ಶಿಯಾಗಳನ್ನು ಕೊಂದ ವರದಿಗಳು ಪಾಕಿಸ್ತಾನದಿಂದ ಈಗಲೂ ಬರುತ್ತಿರುತ್ತವೆ. ಇರಾನ್-ಇರಾಕ್ ಯುದ್ಧಗಳ ಕೆಲಸ ಮಾಡಿದ ಅಂಶಗಳಲ್ಲಿ ಈ ಬಣಭೇದವೂ ಒಂದಾಗಿತ್ತು. ಹೆಚ್ಚಿನ ಸಂಘರ್ಷಗಳಲ್ಲಿ ಹಲ್ಲೆಗೊಳಗಾಗಿದ್ದು ಶಿಯಾಗಳೇ. ಮಧ್ಯಕಾಲದ ಕರ್ನಾಟಕವೂ ಶಿಯಾ-ಸಂಘರ್ಷಗಳಿಗೆ ಸಾಕ್ಷಿಯಾಯಿತು.

ಕರ್ನಾಟಕಕ್ಕೆ ಶಿಯಾ ಪಂಥೀಯರ ಆಗಮನವು ಪ್ರಾಯಶಃ 14ನೇ ಶತಮಾನದಲ್ಲಿ ಶುರುವಾಯಿತು.

ಮಹಮದ್ ಬಿನ್ ತುಘಲಕನು ದಖನ್ನಿಗೆಂದು ನೇಮಿಸಿದ್ದ ರಾಜ್ಯಪಾಲ ಹಸನ ಗಂಗೂ ಒಬ್ಬ ಶಿಯಾ ಆಗಿದ್ದ. (ಇವನ ಹೆಸರಲ್ಲಿರುವ ಗಂಗೂ ಬಹಮನಿ ಎಂಬುದು ಗಂಗೂ ಬ್ರಾಹ್ಮಣ ಎಂಬ ಅವನ ನೆರವಿಗೆ ಬಂದ ಗೆಳೆಯನ ಹೆಸರೆಂದು ಹೇಳಲಾಗುತ್ತದೆ).
ಮುಂದೆ ಹಸನನು ದೆಹಲಿ ಆಳಿಕೆ ವಿರುದ್ಧ ಬಂಡೆದ್ದು, ಸ್ವಾತಂತ್ರ್ಯ ಘೋಷಿಸಿಕೊಂಡು, ಬಹಮನಿ ರಾಜ್ಯ ಸ್ಥಾಪನೆಗೈದನು.

ಬಹಮನಿ ರಾಜ್ಯವು ಪತನಗೊಂಡ ಬಳಿಕ ಅದರ ಹೊಟ್ಟೆಯೊಳಗಿಂದ ಬಿಜಾಪುರದ ಆದಿಲಶಾಹಿ, ಬೀದರಿನ ಬರೀದಶಾಹಿ, ಗೋಲ್ಕೊಂಡದ ಕುತುಬುಶಾಹಿ ಸುಲ್ತಾನರಲ್ಲಿ ಬಹುತೇಕ ಸುಲ್ತಾನರು ಶಿಯಾಗಳಾಗಿದ್ದರು.

ಶಿಯಾ-ಸುನ್ನಿ ಎನ್ನುವುದು ಜನ್ಮಜಾತವಾದ ಕುರುಹೇನಲ್ಲ. ಅದು ವೈಯಕ್ತಿಕ ನಿಷ್ಠೆಗೆ ಅನುಗುಣವಾಗಿ ಬದಲಾಗಬಲ್ಲದು. ಆದಿಲಶಾಹಿ ರಾಜ್ಯದ ಸ್ಥಾಪಕ ಯೂಸೂಫ್‌ಖಾನನು ಶಿಯಾ ಆಗಿದ್ದರೆ, ಅವನ ಮೊಮ್ಮಗ ಒಂದನೇ ಇಬ್ರಾಹಿಂ ಕಟ್ಟಾ ಸುನ್ನಿ.

ಇದೇ ಇಬ್ರಾಹೀಮನ ಮಗ 1ನೇ ಅಲಿ ಆದಿಲಶಹ ಅಪ್ಪನಿಷ್ಟಕ್ಕೆ ವಿರುದ್ಧವಾಗಿ ಶಿಯಾ ಆದನು. ಹೈದರಾಲಿ ಶಿಯಾ ಒಲವಿನವನಾದರೆ, ಅವನ ಮಗ ಫತೇಹ್ ಅಲಿಖಾನ್ ಟಿಪ್ಪು ಸುನ್ನಿ. ಶಿಯಾ ಹೆಸರುಗಳಲ್ಲಿ ಅಲಿ ಹಸನ್ ಹುಸೇನ್ ಎಂಬ ಹೆಸರುಗಳು ಸಾಮಾನ್ಯ.

ಟಿಪ್ಪು ಸುನ್ನಿಯಾದರೂ, ಅವನಿಗೆ ತನ್ನ ಹೆಸರಲ್ಲಿದ್ದ `ಅಲಿ` ಎಂಬ ಶಿಯಾ ಕುರುಹಿನಿಂದ ತಪ್ಪಿಸಿಕೊಳ್ಳಲಾಗಲಿಲ್ಲ. ಗೋಲ್ಕೊಂಡದ ಕುತುಬಶಾಹಿ, ಹೈದರಾಬಾದಿನ ಆಸಫಜಾ ಸುಲ್ತಾನರ ಹಾಗೂ ಅವಧದ (ಲಖನೊ) ನವಾಬರ ಹೆಸರುಗಳಲ್ಲಿ ಕಡ್ಡಾಯವಾಗಿ `ಅಲಿ` ಶಬ್ದವಿದೆ.

ಈ ಮೂರೂ ರಾಜವಂಶಗಳ ಬಳ್ಳಿ ಹುಡುಕುತ್ತಾ ಹೋದರೆ, ಅದು ಶಿಯಾಗಳ ದೇಶವಾದ ಇರಾನನ್ನು ಮುಟ್ಟುತ್ತದೆ. ನಾಲ್ವಡಿ ಕೃಷ್ಣರಾಜ ಒಡೆಯರ ಸಹಪಾಠಿಯೂ ದಿವಾನರೂ ಆಗಿದ್ದ ಸರ್ ಮಿರ್ಜಾ ಇಸ್ಮಾಯಿಲ್ ಕೂಡ ಶಿಯಾ ಆಗಿದ್ದರು.

ಅವರ ಅಜ್ಜ ಅಲಿ ಅಸಘರ್ ಇರಾನಿನಿಂದ ಬಂದವರಾಗಿದ್ದು, ಮೈಸೂರು ಒಡೆಯರಿಗೆ ಕುದುರೆ ಸರಬರಾಜು ಮಾಡುತ್ತ ಅಶ್ವದಳದ ತರಬೇತಿದಾರರಾಗಿದ್ದವರು. ಬೆಂಗಳೂರಿನಲ್ಲಿರುವ ಅಲಿಅಸ್ಕರ್ ರಸ್ತೆ ಅವರ ನೆನಪಿಗಾಗಿ ಇಟ್ಟಿದ್ದು.

ಸಮಸ್ಯೆ ಎಂದರೆ, ಶಿಯಾ ಸುನ್ನಿಗಳ ಮಧ್ಯ ಭುಗಿಲೇಳುತ್ತಿದ್ದ ಪಂಥೀಯ ಕದನಗಳು. ಬಹಮನಿ-ಆದಿಲಶಾಹಿ ಆಳ್ವಿಕೆಗಳಲ್ಲಿ ಮತೀಯ ಗಲಭೆಗಳೇನಾದರೂ ನಡೆದಿದ್ದರೆ, ಅವು ಹಿಂದೂ ಮುಸ್ಲಿಮರ ನಡುವೆ ಅಲ್ಲ; ಬದಲಿಗೆ ವಿದೇಶಿಯರ-ಸ್ಥಳೀಯರ ನಡುವೆ ಅಥವಾ ಶಿಯಾ-ಸುನ್ನಿಗಳ ನಡುವೆ. ಅವುಗಳ ಸ್ವರೂಪವೂ ವೈವಿಧ್ಯಮಯವಾಗಿರುತ್ತಿತ್ತು.

ಉದಾಹರಣೆಗೆ, ಶಿಯಾ ಒಲವಿನ ಸುಲ್ತಾನರು ನಮಾಜಿನ ಕರೆಯಲ್ಲಿ ಅಲಿಯವರ ಹೆಸರನ್ನು ಸೇರಿಸಲು ಕ್ರಮ ಕೈಗೊಳ್ಳುತ್ತಿದ್ದರು ಅಥವಾ ಮಸೀದಿಯಲ್ಲಿ ನಮಾಜು ನಂತರದ ಪ್ರವಚನವನ್ನು ಪೈಗಂಬರರ ಅನುಯಾಯಿಗಳ ಹೆಸರ ಬದಲಾಗಿ, ಶಿಯಾಗಳ 12 ಇಮಾಮರ ಹೆಸರಲ್ಲಿ ಏರ್ಪಡಿಸುತ್ತಿದ್ದರು.

ಆಗ ಸುನ್ನಿಗಳಿಂದ ಪ್ರತಿರೋಧ ಭುಗಿಲೇಳುತ್ತಿತ್ತು. ನಿರ್ದಿಷ್ಟ ಪಂಥದ ಅಧಿಕಾರಿ ಅಥವಾ ಧಾರ್ಮಿಕ ಗುರು ದೊಡ್ಡ ಸ್ಥಾನ ಪಡೆದಾಗ, ಅವರ ಅನುಯಾಯಿಗಳ ದಬ್ಬಾಳಿಕೆ ಶುರುವಾಗಿ, ಆಡಳಿತದಲ್ಲಿ ಅರಾಜಕತೆ ಮೈದೋರುತ್ತಿತ್ತು.

ಆಗ ಸರ್ವ ಪಂಥಗಳ ಧಾರ್ಮಿಕ ಸ್ವಾತಂತ್ರ್ಯವನ್ನು ಮತ್ತು ಆಡಳಿತದಲ್ಲಿ ಸಮಾನತೆಯನ್ನು ಉಳಿಸಲು ಸುಲ್ತಾನರು ಹೆಣಗಾಡುತ್ತಿದ್ದರು.

2ನೇ ಇಬ್ರಾಹಿಮನ ಕಾಲದಲ್ಲಿ, ಸುನ್ನಿ ಧಾರ್ಮಿಕ ನಾಯಕರೊಬ್ಬರು, ಆಡಳಿತದ ಉನ್ನತ ಸ್ಥಾನಗಳಲ್ಲಿ ಶಿಯಾಗಳಿರಬಾರದು ಎಂದು ಅಪ್ಪಣೆ ಮಾಡಿದರು; ಆಗ ಸುಲ್ತಾನನು ಅವರನ್ನು ಕೂಡಲೇ ಮದೀನಾಕ್ಕೆ ತೆರಳುವ ವ್ಯವಸ್ಥೆ ಮಾಡುವ ಮೂಲಕ, ಬಿಜಾಪುರ ಬಿಟ್ಟುಹೋಗುವಂತೆ ನಿರೂಪ ಕೊಟ್ಟ ಪ್ರಸಂಗವು ನಡೆಯಿತು.

ಶಿಯಾ-ಸುನ್ನಿ ಘರ್ಷಣೆಗಳಲ್ಲೆಲ್ಲ ಭೀಷಣವಾದುದು, ಬಹಮನಿ ಮಹಮ್ಮದ್ ಗವಾನನ ಕೊಲೆ. ಪ್ರತಿಭಾವಂತನೂ ವಿದ್ವಾಂಸನೂ ಆಗಿದ್ದ ಗವಾನನು ಇರಾನಿನಿಂದ ಭಾರತಕ್ಕೆ ಪ್ರವಾಸ ಬಂದವನು. ಅವನ ಪ್ರತಿಭೆಗೆ ಬೆರಗಾಗಿ ಬಹಮನಿ ಸುಲ್ತಾನರು ಅವನನ್ನು ಪ್ರಧಾನಿಯಾಗಿಸಿದರು.

ಗವಾನ್ ನಿಜಕ್ಕೂ ದಕ್ಷ ಆಡಳಿತಗಾರನಾಗಿದ್ದ. ಆದರೆ ಅವನಲ್ಲಿ ತುಸು ಶಿಯಾ ಅಭಿಮಾನ ಹೆಚ್ಚಿತ್ತು. ಅವನ ಜನಪ್ರಿಯತೆ ಸಹಿಸದ ಸ್ಥಳೀಯ ಮುಸ್ಲಿಮರು, ಅವನ ವಿರುದ್ಧ ಪಿತೂರಿ ಮಾಡಿದರು. ರಾಜದ್ರೋಹ ಮಾಡುತ್ತಿದ್ದಾನೆ ಎಂದು ಶಂಕೆಪಟ್ಟ ಸುಲ್ತಾನನು ಗವಾನನ ಶಿರಚ್ಛೇದ ಮಾಡಿಸಿದನು.

ಬಳಿಕ ತನ್ನ ತಪ್ಪನ್ನರಿತು ಪರಿತಾಪದಿಂದ ತಾನೂ ನರಳಿ ಸತ್ತನು. ಆದರೆ ಗವಾನನ ಕೊಲೆ ಸೃಷ್ಟಿಸಿದ ರಾಜಕೀಯ ಅರಾಜಕತೆಯ ಸುನಾಮಿಯಲ್ಲಿ ಬಹಮನಿ ರಾಜ್ಯವು ಸಂಪೂರ್ಣ ಪತನಗೊಂಡಿತು.

ಸ್ವಾರಸ್ಯಕರವೆಂದರೆ, ಟಿಪ್ಪು ಸುನ್ನಿಯಾದರೂ ಶಿಯಾ ದ್ವೇಷಿಯಾಗಿರಲಿಲ್ಲ. ಅಲಿ ಕುರಿತು ಅವನಿಗೆ ಬಲುಭಕ್ತಿ. ಅವನು ಅಲಿಯವರ ಶೌರ್ಯಸೂಚಕ ಬಿರುದುಗಳನ್ನು ಶಸ್ತ್ರಗಳ ಮೇಲೆ ಕೆತ್ತಿಸಿದ್ದನು; ಪುಸ್ತಕ ಭಂಡಾರಗಳಿಗೆ ಹಸನ್ ಹುಸೇನರ ಹೆಸರನ್ನಿಟ್ಟಿದ್ದನು; 12 ಇಮಾಮರ ಹೆಸರಲ್ಲಿ ನಾಣ್ಯಗಳನ್ನು ಹೊರಡಿಸಿದನು;

ಇರಾನಿನ ರಾಜಕುಮಾರ ಶ್ರೀರಂಗಪಟ್ಟಣದಲ್ಲಿ ತನ್ನ ಅತಿಥಿಯಾಗಿರುವ ಹೊತ್ತಲ್ಲಿ ಇರಾನಿನ ಜತೆ ವಾಣಿಜ್ಯ ಸಂಬಂಧಗಳನ್ನು ಬಲಗೊಳಿಸುವ ಯೋಜನೆ ರೂಪಿಸಿದನು; ಇರಾನಿನ ದೊರೆ ಶಹಾನ ಬಳಿಗೆ ತನ್ನ ದೂತನನ್ನು ಅಟ್ಟಿದನು.

ಆದರೆ ಬ್ರಿಟಿಷರು ಜಾಣ್ಮೆಯಿಂದ ಈ ಹೊಸ ರಾಜತಾಂತ್ರಿಕ ಸಂಬಂಧದ ಕುಡಿಯನ್ನು ಶಿಯಾ ಸುನ್ನಿ ಭೇದ ಬಳಸಿ ಚಿವುಟಿ ಹಾಕಿದರು.

ತನ್ನ ವಿರುದ್ಧ ಬ್ರಿಟಿಷರ ಜತೆಗೆ ಕೈಜೋಡಿಸಿದ್ದ ಹೈದರಾಬಾದ್ ನಿಜಾಮರ ಜತೆ ರಕ್ತ ಸಂಬಂಧ ಬೆಳೆಸಲು ಟಿಪ್ಪು ಯತ್ನಿಸಿದಾಗಲೂ, ಇದೇ ಪಂಥೀಯ ತರತಮದ ನೆಲೆಯಲ್ಲಿ ಆಂಗ್ಲರು ಗೈದ ತಂತ್ರಗಾರಿಕೆ, ಅದನ್ನು ವಿಫಲಗೊಳಿಸಿತು.

ನಿಜಾಮರು ತನ್ನ ಹಗೆಗಳ ಬೆನ್ನು ಕಟ್ಟಿದ್ದುದರಿಂದ ಟಿಪ್ಪು ಶಿಯಾಗಳ ಮೇಲೆ ಕೊನೆಯ ದಿನಗಳಲ್ಲಿ ನಂಬಿಕೆ ಕಳೆದುಕೊಂಡನೇ? ತಿಳಿಯದು. ಈ ಸನ್ನಿವೇಶದಲ್ಲಿ ಕೆಲವು ಚಾರಿತ್ರಿಕ ವ್ಯಂಗ್ಯಗಳು ಎದ್ದು ಗೋಚರಿಸುತ್ತಿವೆ:

1. ತಮ್ಮ ಮತಭೇದಕ್ಕಾಗಿ ಚರಿತ್ರೆಯುದ್ದಕ್ಕೂ ಹಿಂಸೆ ಅನುಭವಿಸಿದ ಶಿಯಾಗಳ ಆಧ್ಯಾತ್ಮಿಕ ನಾಯಕರ ಚರಿತ್ರೆ ಕೂಡ ರಕ್ತಪಾತ ಮತ್ತು ಹಿಂಸೆಯ ಮೂಲಕವೇ ಆರಂಭವಾಗುತ್ತದೆ. ಅಲಿ, ಹಸನ್, ಹುಸೇನ್ ಮೂವರೂ ಹಗೆಗಳ ಪಿತೂರಿಯಿಂದ ಕೊಲ್ಲಲ್ಪಟ್ಟವರು.

ಅದರಲ್ಲೂ ಹುಸೇನ್ ಮತ್ತು ಅವರ ಕುಟುಂಬದವರು ಕೊಲೆಯಾದ ಕರ್ಬಲಾ ಯುದ್ಧವು, ಎಳೆಯ ಕೂಸುಗಳನ್ನೂ ಒಳಗೊಂಡಂತೆ ಭೀಕರ ನರಹತ್ಯೆಯಲ್ಲಿ ಮುಗಿಯಿತು. ಈ ಹುತಾತ್ಮರ ಸಾವಿನಾಚರಣೆಯನ್ನು ಶಿಯಾಗಳು ಆರಂಭಿಸಿದರು. ಅದುವೇ ಮೊಹರಂ.

2. ಟಿಪ್ಪು ಸುನ್ನಿಯಾಗಿದ್ದರೂ ಶಿಯಾಗಳ ನಾಯಕರಂತೆ ರಣರಂಗದಲ್ಲೇ ಕೊಲ್ಲಲ್ಪಟ್ಟನು.

3. ಅವನಿಗೆ ವಿಶ್ವಾಸಘಾತ ಮಾಡಿದ ಮಂತ್ರಿ ಮೀರಸಾದಿಕ್ ಶಿಯಾ ಪಂಥೀಯನಾಗಿದ್ದನು.

ಹಾಗೆ ಕಂಡರೆ, ಕರ್ನಾಟಕದಲ್ಲಿ ಶಿಯಾಗಳ ಸಂಖ್ಯೆ ತೀರಾ ಕಡಿಮೆ. ಧಾರ್ಮಿಕ - ಸಾಂಸ್ಕೃತಿಕ ಆಕ್ರಮಣಕ್ಕೆ ಒಳಗಾಗುವ ಅಭದ್ರತೆ ಅನುಭವಿಸುವ ಸಮುದಾಯಗಳಲ್ಲಿ ಸಹಜವಾಗಿರುವ ಪಂಥೀಯ ಒಗ್ಗಟ್ಟು ಶಿಯಾಗಳಲ್ಲೂ ಇದೆ.

ಅವರು ಕರ್ನಾಟಕದ ಅನೇಕ ಊರುಗಳಲ್ಲಿ ಗುಂಪಾಗಿ ನೆಲೆಸಿದ್ದಾರೆ. ಅವುಗಳಲ್ಲಿ ಗೌರಿಬಿದನೂರು ತಾಲೂಕಿನ ಅಲಿಪುರ, ಕೊರಟಗೆರೆ ತಾಲೂಕಿನ ಹೊಳವನಹಳ್ಳಿ ಹಾಗೂ ದೊಡ್ಡಬಳ್ಳಾಪುರ ಮುಖ್ಯ ನೆಲೆಗಳು.

ಕಟು ಸುನ್ನಿಯಾಗಿದ್ದ ಔರಂಗಜೇಬನು ಬಿಜಾಪುರವನ್ನು ಆಕ್ರಮಿಸಿಕೊಂಡಾಗ, ಕೆಲವು ಶಿಯಾಗಳು ದಕ್ಷಿಣದತ್ತ ಬಂದು ಈಗಿರುವ ಅಲ್ಲೆಪುರದಲ್ಲಿ ನೆಲೆನಿಂತರು. ಅಲ್ಲೆಪುರವು ಇರಾನಿನ ನೆರಳಚ್ಚಿನಂತಿಹ ಹಳ್ಳಿ.

ಅಲ್ಲಿ ಮೊಹರಮ್ಮಿನಲ್ಲಿ ಕರ್ಬಲಾ ಯುದ್ಧದ ಪ್ರತಿಕೃತಿಯನ್ನೇ ನಿರ್ಮಿಸಲಾಗುತ್ತದೆ. ದೊಡ್ಡಬಳ್ಳಾಪುರದಲ್ಲೂ ಹೈದರಾಲಿ ಕಟ್ಟಿಸಿಕೊಟ್ಟ ಶಿಯಾಗಳ ದೊಡ್ಡ ಸಂಕೀರ್ಣವಿದೆ.

ಅದರ ಎತ್ತರದ ಪೌಳಿಯೊಳಗಿರುವ ಮಸೀದಿ ಮತ್ತು ಆಶೂರಖಾನೆಗಳು, ಶಿಯಾಗಳು ತಮ್ಮ ಸಾಂಸ್ಕೃತಿಕ ವಿಶಿಷ್ಟತೆ ಉಳಿಸಿಕೊಂಡಿರುವ ಸಂಕೇತದಂತೆಯೇ, ಅಳಿವಿನಂಚಿನಲ್ಲಿರುವ ಜೀವಿಗಳಂತೆ ಬದುಕುತ್ತಿರುವ ದಾರುಣ ಗುರುತಿನಂತಿದೆ.

ಯಾಕೆಂದರೆ, ಅವರ ಆಚರಣೆಗಳಲ್ಲಿ ಬಹುಸಂಖ್ಯಾತ ಸುನ್ನಿಗಳು ಭಾಗವಹಿಸುವುದಿಲ್ಲ. ಮಾತ್ರವಲ್ಲ ಅವರನ್ನು ಧಾರ್ಮಿಕವಾಗಿ ಪರಕೀಯರಂತೆಯೂ ಸಾಂಸ್ಕೃತಿಕವಾಗಿ ಅಸ್ಪೃಶ್ಯರಂತೆಯೂ ಕಾಣುತ್ತಾರೆ. ನಿರ್ದಿಷ್ಟ ಧರ್ಮಕ್ಕೆ ಸೇರಿದವರೆಲ್ಲ ಒಂದಾಗಿರುತ್ತಾರೆ ಎಂಬುದು ಯಾವತ್ತೂ ದೊಡ್ಡ ಹುಸಿ.

`ಮೊಹರಂ` ಎಂದರೆ ನಿಷೇಧಿತ, ಅಶುಭ ಎಂದರ್ಥ. ಈ ಮಾಸದಲ್ಲಿ ಶಿಯಾಗಳು ಶುಭಕಾರ್ಯ ಮಾಡುವುದಿಲ್ಲ. ಕಪ್ಪು ಬಟ್ಟೆ ಧರಿಸಿ, ಮನೆಯ ಮೇಲೆ ಕಪ್ಪು ನಿಶಾನೆ ಹಾರಿಸುತ್ತಾರೆ.

ಎದೆ ಬಡಿದುಕೊಳ್ಳುತ್ತ ಶೋಕ ಆಚರಿಸುತ್ತಾರೆ; ಹುತಾತ್ಮರ ಹೆಸರಿನಲ್ಲಿ ಪಂಜಾ (ಹಸ್ತ) ಮತ್ತು ಆಲಂ (ಮೆರೆಸುವ ಚಿಹ್ನೆ)ಗಳಿಗೆ ಕಪ್ಪುಬಟ್ಟೆ ಉಡಿಸಿ ಆರಾಧಿಸುತ್ತಾರೆ; ಹುತಾತ್ಮರ ಶವಪೆಟ್ಟಿಗೆಯ (ಡೋಲಿ) ಮೆರವಣಿಗೆ ಮಾಡುತ್ತಾರೆ.

ಹೈದರಾಬಾದಿನ ಚಾರ್‌ಮಿನಾರ್ ಮೂಲತಃ ಮೊಹರಂ ಡೋಲಿಯ ಪ್ರತೀಕ. ಅದರ ಗೋಡೆಗಳ ಮೇಲೆ ಮೊಹರಂ ಚಿಹ್ನೆಗಳ ಶಿಲ್ಪವಿದೆ. ಗೋಲ್ಕೊಂಡ, ಹೈದರಾಬಾದುಗಳ ನಿಜಾಮರ ಹಾಗೂ ಲಖನೋದ ನವಾಬರ ಕಾಲಗಳಲ್ಲಿ ಶಿಯಾ ರಾಜಧರ್ಮವಾಗಿತ್ತು.

ಹೀಗಾಗಿ ಇಲ್ಲಿನ ಮೊಹರಂ ಆಚರಣೆಗಳಿಗೆ ರಾಗವೈಭವದ ಪರಂಪರೆಯಿದೆ. ಅವನ್ನು ನೋಡಲು ನಾನು ಹೈದರಾಬಾದ್ ಹಾಗೂ ಲಖನೋಗಳಿಗೆ ಹೋಗಿದ್ದುಂಟು.

ಅಲ್ಲಿನ ಮೆರವಣಿಗೆಗಳಲ್ಲಿ ಗಂಡಸರು, ಅದರಲ್ಲೂ ತರುಣರು ಆಯುಧಗಳಿಂದ ತಮ್ಮನ್ನು ಹೊಡೆದುಕೊಳ್ಳುವರು. ಅವರ ಮೈಯಿಂದ ಸುರಿವ ನೆತ್ತರಿಂದ ರಸ್ತೆಯೇ ಕೆಂಪಾಗುತ್ತದೆ. ಲಖನೋದಲ್ಲಿ ಮೆರವಣಿಗೆ ನಡೆದ ಬಳಿಕ ಇಡೀ ರಸ್ತೆಯನ್ನು ನೀರು ಹಾಕಿ ತೊಳೆಯಲಾಗುತ್ತದೆ.

ಹುತಾತ್ಮರ ನೆನಪಿನಲ್ಲಿ ದೇಹದಂಡನೆ ಮಾಡಿಕೊಳ್ಳುವವರನ್ನು ಕಂಡು ಮಹಿಳೆಯರು ಮೊಹರಂ ವೀರರನ್ನು ನೆನೆದು ಶೋಕಿಸುವರು. ಹಾದಿಬದಿಯಲ್ಲಿ ನಿಂತವರು ಈ ದೇಹದಂಡಕರನ್ನು ನಾನಾಬಗೆಯಲ್ಲಿ ಉಪಚರಿಸುವರು.

ಹೊಳವನಹಳ್ಳಿಯಲ್ಲಿ (2009) ಸುಮಾರು 500 ಜನ ಗಂಡಸರು-ಮಕ್ಕಳು, ತಮ್ಮ ಬೆನ್ನು ತಲೆ ಎದೆಗಳಿಗೆ ಹರಿತವಾದ ಆಯುಧಗಳಿಂದ ಹೊಡೆದುಕೊಂಡು `ಮಾತಂ` (ದುಃಖ) ಆಚರಿಸಿದರು.

ಮೆರವಣಿಗೆಯ ಬೀದಿಯೇ ರಕ್ತದ ಹಸಿವಾಸನೆಯಿಂದ ಉಸಿರುಕಟ್ಟಿಹೋಯಿತು. ಕರ್ನಾಟಕದ ಅನೇಕ ಕಡೆಯ ಮೊಹರಮ್ಮಿನಲ್ಲಿ ಶಿಯಾಗಳಲ್ಲದವರೂ ದೇಹದಂಡಿಸಿಕೊಳ್ಳುವ ಆಚರಣೆಗಳಿವೆ.

ಗೋಕಾಕ ಮತ್ತು ರಾಮದುರ್ಗ ತಾಲೂಕುಗಳಲ್ಲಿ ಮೈಗೆ ಚಾಬಕದಿಂದ ರಕ್ತಬರುವಂತೆ ಬಡಿದುಕೊಳ್ಳುವರು. ಅದನ್ನು `ಲಡ್ಡಾಡುವುದು` ಎನ್ನುವರು. ಧಾರ್ಮಿಕ ಆಚರಣೆಗಳಲ್ಲಿ ರಕ್ತಸುರಿಸುವ ಪ್ರಸಂಗಗಳು ಮೂರು ಬಗೆಯಲ್ಲಿವೆ.

1. ತಮ್ಮ ಪ್ರಿಯ ದೈವಕ್ಕೆ ತಮ್ಮನ್ನು ಬಲಿಪಶುವನ್ನಾಗಿ ಮಾಡಿ ಅರ್ಪಿಸಿಕೊಳ್ಳುವುದು. ಉದಾಹರಣೆಗೆ, ತಮ್ಮ ಶಿರವನ್ನು ಹರಿದು ಅರ್ಪಿಸುವ, ಅಂಗಾಂಗ ಕತ್ತರಿಸಿ ಸಮರ್ಪಿಸುವ ಆಚರಣೆಗಳು. ಮೈಲಾರಲಿಂಗನಿಗೂ ವೀರಭದ್ರನಿಗೂ ದೇಹದಂಡನೆ ಮಾಡಿಕೊಳ್ಳುವ ಭಕ್ತರೂ ಈ ನೆಲೆಯವರು.

2. ಪ್ರಿಯ ದೈವಕ್ಕೆ ಪ್ರಾಣಿಗಳನ್ನು ಬಲಿಗೊಡುವ ಆಚರಣೆಗಳು.

3. ತಮ್ಮ ಧಾರ್ಮಿಕ ನಾಯಕರು ಪಟ್ಟ ಹಿಂಸೆಯನ್ನು ತಾವೂ ಅನುಭವಿಸುವ ಮೂಲಕ ಅವರ ದುಃಖಕ್ಕೆ ಮಿಡಿಯುವ ಆಚರಣೆಗಳು. ಮೊಹರಂ ಮೂರನೆಯ ಮಾದರಿಯ ಆಚರಣೆ. ವಿಶೇಷವೆಂದರೆ, ಈ ದೇಹದಂಡನೆ ಮತ್ತು ರಕ್ತಪಾತದ ಆಚರಣೆಯ ಭಾಗವಾಗಿಯೇ ಕಾವ್ಯದ ಪರಂಪರೆಯೊಂದು ಸೃಷ್ಟಿಯಾಗಿರುವುದು.

ಮೊಹರಂ ತಿಂಗಳಲ್ಲಿ ಕೆಲವರು ಹುತಾತ್ಮರ ನೆನಪಿನಲ್ಲಿ ಕಾವ್ಯ ರಚಿಸುವರು. ಇಲ್ಲವೇ ಇತರರು ರಚಿಸಿದ ಕಾವ್ಯವನ್ನು ಹಾಡುವರು. ಈ ಶೋಕಕಾವ್ಯಕ್ಕೆ `ಮರ್ಸಿಯಾ` ಎನ್ನಲಾಗುತ್ತದೆ.

ಕೆಲವು ಕವಿಗಳು ತಾವು ಬರೆದ ಶೋಕಗೀತೆಗಳನ್ನು ಕಪ್ಪು ಪರದೆಯ ಮೇಲೆ ಬರೆಸಿ, ಬೀದಿಗಳಲ್ಲಿ ಕಟ್ಟುವ ಪದ್ಧತಿಯಿದೆ. ಲಖನೋ-ಹೈದರಾಬಾದುಗಳಲ್ಲಿ ಇಡೀ ತಿಂಗಳು ಇಂತಹ ಕಪ್ಪುಕಾವ್ಯದ ಪರದೆಗಳು ಇಳಿಬಿದ್ದಿರುತ್ತವೆ.

ಕರ್ನಾಟಕದ ಅನೇಕ ಉರ್ದು ಕವಿಗಳು ಮರ್ಸಿಯಾ ಬರೆದರು. ಈ ಮರ್ಸಿಯಾಗಳ ಪ್ರಭಾವ ಕನ್ನಡದಲ್ಲಿ ದುಃಖಗೀತೆಗಳ ಮೇಲಾಯಿತೋ, ಕನ್ನಡ ದುಃಖಗೀತೆಗಳ ಪ್ರಭಾವ ಮರ್ಸಿಯಾದ ಮೇಲಾಯಿತೋ, ತಿಳಿಯದು.

ಆದರೆ ಕನ್ನಡದ ಮೊಹರಂ ಹಾಡುಗಳಲ್ಲಿ, ಹುಸೇನ್ ಕಾಸಿಂ ಮುಂತಾದ ಕರ್ಬಲಾ ವೀರರ ಜತೆ, ಬಲಾಢ್ಯ ಹಗೆಯೆದುರು ಸೋತು ಜೀವ ಕಳೆದುಕೊಂಡ ಟಿಪ್ಪು, ಕಿತ್ತೂರ ಚನ್ನಮ್ಮ, ಸಂಗೊಳ್ಳಿರಾಯಣ್ಣ ಸಮೀಕರಣಗೊಂಡರು;

ಹಸನ ಹುಸೇನರನ್ನು ಕಳೆದುಕೊಂಡ ಬೀಬಿ ಫಾತಿಮಾರ ಜತೆ, ತಮ್ಮ ಮಕ್ಕಳನ್ನು ಕಳೆದುಕೊಂಡ `ಕಡ್ಲಿಮಟ್ಟಿ ಸ್ಟೇಶನ್ ಮಾಸ್ತರ` ಡಪ್ಪಿನಾಟದ ತಾಯಂದಿರು ಲಗತ್ತುಗೊಂಡರು; ಗಂಡನನ್ನು ಕಳೆದುಕೊಂಡ ಅಳುವ ಎಳೆಯ ವಿಧವೆ ಸಕೀನಾಳ ಜತೆ, ಅಭಿಮನ್ಯು ಮನ್ಮಥರನ್ನು ಕಳೆದುಕೊಂಡ ಉತ್ತರೆ ಮತ್ತು ರತಿಯರು ಏಕೀಭವಿಸಿದರು.

ಹಲಸಂಗಿಯ ಮಧುರಚೆನ್ನರ ಗೆಳೆಯರಾದ ಪಿ.ಧೂಲಾ, ಕಾಸಿಮನನ್ನು ಕುರಿತು ಬರೆದ `ಅರೇಬಿಯಾದ ಅಭಿಮನ್ಯು` ಗೀತೆ ಇಲ್ಲಿ ನೆನಪಾಗುತ್ತದೆ. ಉತ್ತರ ಕರ್ನಾಟಕದ ಸಾವಿರಾರು ಹಳ್ಳಿಗಳಲ್ಲಿ ಆಚರಿಸುವ ಮೊಹರಮ್ಮಿಗೆ ಅರಬಸ್ಥಾನದ ಚರಿತ್ರೆ ಪುರಾಣಗಳ ಸ್ಮೃತಿಗಳಿವೆ, ನಿಜ.

ಆದರೆ ಇಲ್ಲಿ ಶಿಯಾ-ಸುನ್ನಿ ಎಂಬ ಭೇದವಿಲ್ಲ; ಬದಲಿಗೆ ಶೋಕಪ್ರಧಾನ ಕಾವ್ಯವಿದೆ. ಆದರೆ ಅದು ಸಂಭ್ರಮವನ್ನು ಸೇರಿಸಿಕೊಂಡು ಸಂಪೂರ್ಣವಾಗಿ ಸ್ಥಳೀಕರಣಗೊಂಡಿದೆ; ಟಿಪ್ಪು, ಸುನ್ನಿಯಾಗಿ ಮೊಹರಂ ಆಚರಣೆಗಳನ್ನು ಉತ್ತೇಜಿಸಲಿರಲಿಕ್ಕಿಲ್ಲ; ಆದರೆ ಅವನ ಸಾವಿನ ದುರಂತವನ್ನು ವಸ್ತು ಮಾಡಿಕೊಂಡು ಕನ್ನಡದ ಮೊಹರಂ ಕವಿಗಳು ಹಾಡುಕಟ್ಟಿ ಹಾಡಿದರು;
ಮೊಹರಮ್ಮಿನ ಮೂಲ ಒಂದೇ ಧರ್ಮದೊಳಗಿನ ಎರಡು ಪಂಗಡಗಳ ನಡುವಣ ಮತಭೇದ; ಆದರೆ ಕನ್ನಡ ಮತ್ತು ಉರ್ದುಗಳಲ್ಲಿ ಏಕಕಾಲಕ್ಕೆ ಹಾಡು ಕಟ್ಟಿ ಹಾಡುವ ಮೊಹರಂ, ಹಿಂದೂ-ಮುಸ್ಲಿಮರ ಮಿಲನದ ಅಪೂರ್ವ ಸನ್ನಿವೇಶವಾಯಿತು.

ಅದರಲ್ಲೂ ರಾಯಚೂರು ಜಿಲ್ಲೆಯ ಅರವಲಿಯ ಬಿಜಲಿಯು ಮರ್ಸಿಯಾಗಳನ್ನು ಹಾಡುತ್ತಾ ಒಂದು ತಂಡವನ್ನು ಕರೆದುಕೊಂಡು ಮಟಮಾರಿಯ ದೈವವಾದ ವೀರಭದ್ರನ ಜಾತ್ರೆಗೆ ಹೋಗುತ್ತಿದ್ದನು. ವೀರಭದ್ರನ ಪುರಾಣದಲ್ಲಿಯೂ ಇರುವುದು ಶೈವ-ವೈಷ್ಣವ ಸಂಘರ್ಷ ತಾನೇ?

ಈ ರೂಪಾಂತರ ಮತ್ತು ವೈರುಧ್ಯಗಳನ್ನೆಲ್ಲ ಹೇಗೆ ಅರ್ಥಮಾಡಿಕೊಳ್ಳುವುದು? ಚರಿತ್ರೆಯ ಮೇಲೆ ವರ್ತಮಾನವು, ಮಾಡುವ ಸವಾರಿಯೆಂದೇ? ಸಂಘರ್ಷ ರಕ್ತಪಾತಗಳ ಮೇಲೆ ಕಾವ್ಯವು ತೀರಿಸಿಕೊಳ್ಳುತ್ತಿರುವ ಮುಯ್ಯಿ ಎಂದೇ? ಪುರಾಣವಾಗಲಿ ಚರಿತ್ರೆಯಾಗಲಿ ದೇಶಾಂತರಗೊಂಡರೆ ಅಥವಾ ಕಾಲಾಂತರಗೊಂಡರೆ, ಹೊಸ ಸಮಾಜದ ಬದುಕಿನಲ್ಲಿ ಅದು ಹಾದು ಅದು ಕಾವ್ಯವಾದರೆ, ಕಂಬಳಿಹುಳು ಚಿಟ್ಟೆಯಾದಂತೆ ಸಾಂಸ್ಕೃತಿಕ ಮರುಹುಟ್ಟನ್ನೇ ಪಡೆದುಬಿಡುತ್ತದೆ.

ಅದರ ಮೂಲಕ ಮೂಲವನು ಶೋಧಿಸುವುದೇ ವ್ಯರ್ಥ ಎನಿಸುವಷ್ಟು ಅದು ಸ್ವಾಯತ್ತತೆಯನ್ನು ಪಡೆದುಬಿಡುತ್ತದೆ.

ಕೊನೆಗೂ ಕಾವ್ಯವು ತನ್ನದೇ ಆದ `ಸತ್ಯ`ವನ್ನು ಹೇಳುವ ಹಕ್ಕನ್ನು ಚಲಾಯಿಸಿಬಿಡುತ್ತದೆ. ಜನರ ಮಾನಸದಲ್ಲಿ ಕೊನೆಗೂ ಉಳಿಯುವುದು ಕಾವ್ಯಸತ್ಯವೇ!

1 ಕಾಮೆಂಟ್‌:

ಅನಾಮಧೇಯ ಹೇಳಿದರು...

The university website lack aesthetic sense. many pages have converted as images and uploaded thus the visibility of Photos on the home page not seems to be very good. They should have used Unicode for creating websites in kannada.

Organization of information also not seems to be right. They should have done in a much better way.