ಶುಕ್ರವಾರ, ಅಕ್ಟೋಬರ್ 14, 2011

ನಾರು ನಂಬಿದ ಊರುಚಳ್ಳಕೆರೆಯಿಂದ ಚಿತ್ರದುರ್ಗಕ್ಕೆ ಹೋಗುವ ಮಾರ್ಗದಲ್ಲಿ ನಂದನಹಳ್ಳಿ ಎಂಬ ಚಿಕ್ಕ ಹಳ್ಳಿ ಸಿಗುತ್ತದೆ. ಈ ಊರನ್ನು ಕುರುಡಿಹಳ್ಳಿ ತಾಂಡ ಎಂತಲೂ ಕರೆಯುತ್ತಾರೆ. ಇಲ್ಲಿ ನೂರ ಐವತ್ತು ಮನೆಗಳಿವೆ. ಲಂಬಾಣಿಗರು ಬಹುಸಂಖ್ಯೆಯಲ್ಲಿದ್ದಾರೆ. ಚಿತ್ರದುರ್ಗ ಮಾರ್ಗವಾಗಿ ಹೋಗುವಾಗ ಈ ಹಳ್ಳಿ ಬರುತ್ತಲೂ ಒಂದು ಬಗೆಯ ಸೊಗಡಿನ ವಾಸನೆ ಮೂಗಿಗೆ ಬಡಿಯುತ್ತದೆ. ವಾಹನಗಳಲ್ಲಿನ ಜನರು ಮೂಗು ಮುಚ್ಚಿ ಈ ಊರನ್ನು ದಾಟುತ್ತಾರೆ. ಈ ವಾಸನೆ ಕೋಳಿಫಾರಂದೋ, ಪ್ಯಾಕ್ಟರಿಯದೋ ಅಂದುಕೊಂಡರೆ, ಅದು ಕತ್ತಾಳೆ ಪಟ್ಟಿಯನ್ನು ಹಿಂಡುವಿಕೆಯಿಂದ ಬಂದ ವಾಸನೆ. ಈ ಊರಿಗೇ ಊರೇ ಕತ್ತಾಳೆ ಪಟ್ಟಿಗಳನ್ನು ಮಿಷನ್ನಿನಲ್ಲಿ ಕಬ್ಬಿನಂತೆ ಹಿಂಡಿ ನಾರು ತೆಗೆಯುವ ಕೆಲಸ ನಂಬಿ ಬದುಕು ಕಟ್ಟಿಕೊಂಡಿದೆ. ಅಂಥ ಊರಿನ ಕಥನವಿದು.

ರಾಕ್ಷಸರ ಭುಜಪಟ್ಟಿಯಂತೆಯೂ, ಸುತ್ತಲೂ ಹಲಗುಳ್ಳ ದೊಡ್ಡ ದೊಡ್ಡ ಕತ್ತಿಯ ಆಕಾರನ್ನೂ ಹೊಂದಿದ ಕತ್ತಾಳೆ ಪಟ್ಟಿಗಳನ್ನು ರಾಕ್ಷಸ ಪಟ್ಟಿ ಎಂತಲೂ ಜನ ಕರೆಯುತ್ತಾರೆ. ಹೊಲಗಳ ಬದುವಲ್ಲಿ ಉಲುಸಾಗಿ ಬೆಳೆವ ಇದನ್ನು ರಕ್ಸಪಟ್ಟಿ, ಕತ್ತಾಳಿ ಎಂತಲೂ ಪ್ರಾದೇಶಿಕವಾಗಿ ಬೇರೆ ಬೇರೆ ಹೆಸರುಗಳಿವೆ. ಈ ಪಟ್ಟಿಯು ಕತ್ತಿಯಂತೆ ಚೂಪಾಗಿರುತ್ತದೆ, ತನ್ನ ಮೈಯ ತುದಿಗೆಲ್ಲಾ ಚಿಕ್ಕ ಚಿಕ್ಕ ಮುಳ್ಳಿನ ಸರಪಳಿ ಹೊಂದಿ, ಕೊಬ್ಬಿದ ಗೂಳಿಯಂತೆ ಮುಟ್ಟಿದವರನ್ನು ಗಾಯ ಗೊಳಿಸಿಬಿಟ್ಟೇನು ಎಂದು ಗುಟುರು ಹಾಕುವಂತೆ ಕಾಣುತ್ತದೆ. ಹಾಗಾಗಿ ಪ್ರಾಣಿಗಳಿಂದ, ಜನರಿಂದ ಬೆಳೆಯ ರಕ್ಷಣೆಗಾಗಿ ಮತ್ತು ಮಣ್ಣಿನ ಸವಕಳಿ ತಡೆಯಲು ಕತ್ತಾಳೆಯನ್ನು ಹೊಲದ ಬದುವಲ್ಲಿ, ಅರಣ್ಯದಲ್ಲಿ ಉಲುಸಾಗಿ ಬೆಳೆಸುತ್ತಾರೆ. ಈಗೀಗ ಇದನ್ನು ಬೆಳೆಸುವಿಕೆಯ ಪ್ರಮಾಣ ಸ್ವಲ್ಪಮಟ್ಟಿಗೆ ಕಡಿಮೆಯಾಗುತ್ತಿದೆ. ಇದೊಂದು ರೀತಿಯಲ್ಲಿ ರಾಕ್ಷಸೀ ಗುಣಗಳಿರುವ ಗಿಡ. ಇದಕ್ಕೆ ಕಲ್ನಾರು ಎಂಬ ಹೆಸರೂ ಇದೆ. ಇದನ್ನು ಹಿಂಡಿದಾಗ ಬರುವ ವಾಸನೆ ಮಾತ್ರ ತಲೆ ಚಿಟ್ ಹಿಡಿಸುವಂತದ್ದು.


ಜನಸಮುದಾಯಗಳಲ್ಲಿ ಈ ಕತ್ತಾಳೆಗೊಂದು ಚರಿತ್ರೆಯೂ ಇದೆ. ಇದು ರೈತರೊಂದಿಗೆ ಸಾವಯವ ಸಂಬಂಧ ಹೊಂದಿದ ಸಸ್ಯಜಾತಿ. ಜನಪದ ವೈದ್ಯದಲ್ಲಿ ಔಷಧಿಗೂ ಬಳಕೆಯಾಗುತ್ತದೆ. ಹಳ್ಳಿಗಳಲ್ಲಿ ಗುಡಿಸಲು ಕಟ್ಟಲು ಸಹ ಬಳಸುತ್ತಾರೆ. ನಾನು ಚಿಕ್ಕವನಾಗಿದ್ದಾಗ ಕಟ್ಟಿಗೆ ತರಲೆಂದು ಹಳ್ಳಕ್ಕೆ ಹೋದಾಗ ಕಟ್ಟಿಗೆ ಹೊರೆ ಕಟ್ಟಲು ಕತ್ತಾಳೆಯ ಒಂದು ಪಟ್ಟಿಯನ್ನು ಕಿತ್ತುಕೊಂಡು ಅದನ್ನು ಸೀಳಿ ಹಗ್ಗ ಮಾಡಿಕೊಳ್ಳುತ್ತಿದ್ದೆವು. ಆಗ ಮನೆಗೆ ಬಂದಾಗ ನಮ್ಮ ಕೈಯ ಕೆಟ್ಟ ವಾಸನೆಯನ್ನು ಮೂಗಿಗೆ ಹಿಡಿಯುತ್ತಾ ಗೆಳೆಯರನ್ನೆಲ್ಲಾ ಓಡಾಡಿಸಿಕೊಂಡು ಖುಷಿ ಪಡುತ್ತಿದ್ದೆವು. ಇನ್ನು ಬುಗುರಿ ಆಡುವಾಗ ಬುಗುರಿಗೆ ಸುತ್ತುವ ಚಾಟಿಯನ್ನು ಇದೇ ನಾರಿನಿಂದ ಹೊಸೆದುಕೊಳ್ಳುತ್ತಿದ್ದೆವು. ಆಗ ಹೊಸೆಯುವಾಗ ತೊಡೆ ಮೇಲೆ ಒತ್ತಿ ಕೆಂಪಗಾಗಿ ತೊಡೆ ಉರಿಯುತ್ತಿತ್ತು. ಒಮ್ಮೆ ನಾನು ಬುಗುರಿಯ ಚಾಟಿಗಾಗಿ ರಾಮಯ್ಯ ಎನ್ನುವವರ ನೆರಕೆಯಲ್ಲಿ ಸಿಕ್ಕಿಸಿದ ನಾರನ್ನು ಕದ್ದು ಸಿಕ್ಕಿಬಿದ್ದು ದೊಡ್ಡ ರಂಪಾಟವಾಗಿತ್ತು.
ಆಗ ನಾವು ನಾರು ತೆಗೆಯಲು ಕತ್ತಾಳೆ ಪಟ್ಟಿಯನ್ನು ಕೊಯ್ದು, ನೀರು ಹರಿವ ಹಳ್ಳದ ಬದುವಲ್ಲಿ ಗುಣಿ ತೋಡಿ ರಾತ್ರಿ ಯಾರಿಗೂ ಗೊತ್ತಾಗದ ಹಾಗೆ ಹೂತಿಡುತ್ತಿದ್ದೆವು. ಕಾರಣ ಹೂತಿಟ್ಟ ಕತ್ತಾಳೆಯನ್ನು ಕದಿಯುವ ಕೆಲಸವನ್ನೂ ಕೆಲವರು ಮಾಡುತ್ತಿದ್ದರು. ಬಹುಪಾಲು ರೈತರು ನಾರಿಗಾಗಿ ಹೀಗೆ ಕತ್ತಾಳೆಯನ್ನು ಹಳ್ಳಗಳ ಬದುವಿನಲ್ಲಿ ಹೂತಿಡುವುದು ಒಂದು ಮುಖ್ಯ ಕೆಲಸವೇ ಆಗಿತ್ತು. ಆಗ ಹಳ್ಳಗಳಲ್ಲಿ ಒರತೆಯನ್ನು ತೋಡಿ ಕುಡಿಯಲು ನೀರು ಬಳಸುತ್ತಿದ್ದರಿಂದ, ಅಂತಹ ಕುಡಿಯುವ ನೀರ ಒರತೆಯ ಅಕ್ಕಪಕ್ಕ ಕತ್ತಾಳೆಯನ್ನು ಹೂತಿಡುವಂತಿರಲಿಲ್ಲ. ಹಾಗೇನಾದರೂ ಹೂತಿಟ್ಟರೆ ಕತ್ತಾಳೆಯ ಕೊಳೆತ ನೀರಿನಂಶ ಕುಡಿಯುವ ನೀರಿನ ಝರಿಯ ಜತೆ ಸೇರಿ ನೀರು ಕೆಟ್ಟ ವಾಸನೆ ಬರುತ್ತಿತ್ತು. ಆಗ ಜನರು ಕತ್ತಾಳೆ ನಾರು ಹೂತಿಟ್ಟ ಜಾಗವನ್ನು ಶೋಧಿಸಿ ತೆಗೆಯುತ್ತಿದ್ದರು. ಹೂತಿಟ್ಟವರು ಯಾರೆಂದು ತಿಳಿದರಂತೂ ಅವರಿಗೆ ಧರ್ಮದೇಟು ತಪ್ಪುತ್ತಿರಲಿಲ್ಲ.ಹೀಗೆ ಹೂತು ಹಾಕಿದ್ದನ್ನು ಹದಿನೈದು ದಿನದ ನಂತರ ಕಿತ್ತಾಗ ಅದು ಕೊಳೆತು ನಾರು ಬಿಟ್ಟಿರುತ್ತಿತ್ತು. ಹೀಗೆ ತೆಗೆದ ಕೊಳೆತ ಕತ್ತಾಳಿಯನ್ನು ಬಟ್ಟೆ ತೊಳೆದಂತೆ, ನೀರಲ್ಲಿ ಅದ್ದಿ ಕಲ್ಲಿಗೆ ಸೆಳೆಯುತ್ತಿದ್ದೆವು. ಅದು ಪೊರೆಯನ್ನೆಲ್ಲಾ ಬಿಟ್ಟುಕೊಂಡು ಮುದುಕಿಯ ಬಿಳಿ ಕೂದಲಿನಂತೆ ಕಂಗೊಳಿಸುತ್ತಿತ್ತು. ಅದನ್ನು ಒಣಗು ಹಾಕಿದರೆ ನಾರು ಸಿದ್ದವಾಗುತ್ತಿತ್ತು. ಹೀಗೆಲ್ಲಾ ಮಾಡುವಾಗ ಅದರ ಕೆಟ್ಟವಾಸನೆಯನ್ನು ಸಹಿಸುವ ಭಂಡ ದೈರ್ಯವೂ ಬೇಕಾಗುತ್ತಿತ್ತು. ಹಾಗೆ ಒಣಗಿದ ನಾರನ್ನು ಹೊಸೆದು ಹಸು, ಕುರಿ, ಎತ್ತು ಮುಂತಾದವುಗಳನ್ನು ಕಟ್ಟಲು ಹಗ್ಗಗಳನ್ನು ಹಿರಿಯ ಅಜ್ಜಂದಿರು ಹೊಸೆಯುತ್ತಿದ್ದರು. ಅಗತ್ಯಕ್ಕೆ ಬೇಕಾದ ತರಾವರಿ ಹಗ್ಗಗಳು ಈ ನಾರಿನಿಂದ ಸಿದ್ದಗೊಳ್ಳುತ್ತಿದ್ದವು.

ದೇಹದ ಮೇಲೆ ಚಿಕ್ಕ ಚಿಕ್ಕ ಕಪ್ಪನೆ ಹುಣ್ಣು ಏಳುವುದನ್ನು ಉತ್ತರ ಕರ್ನಾಟಕದ ಕೆಲ ಭಾಗಗಳಲ್ಲಿ ನಾರುಳ್ಳಿ ಎಂದು ಕರೆಯುತ್ತಾರೆ. ಈ ನಾರುಳ್ಳಿ ನಾರಪ್ಪ ಎಂಬ ದೇವರ ಕೋಪದಿಂದ ಬಂದದ್ದೆಂದು ಈ ಭಾಗದ ಜನ ನಂಬುತ್ತಾರೆ. ದಾವಣಗೆರೆ ಜಿಲ್ಲೆ ಹರಪನಹಳ್ಳಿಯ ಬಳಿಯಿರುವ ಚಿಗಟೇರಿಯ ನಾರದ ಮುನೇಶ್ವರ ದೇವರ ಜಾತ್ರೆಯಲ್ಲಿ ತೇರಿಗೆ ನಾರನ್ನು ಎಸೆಯುವುದಾಗಿ ಹರಕೆಯನ್ನೂ ಹೊರುತ್ತಾರೆ. ತೇರಿಗೆ ಬಾಳೆ ಹಣ್ಣು ಎಸೆಯುವಂತೆ ಈಗಲೂ ಚಿಗಟೇರಿ ನಾರಪ್ಪನಿಗೆ ನಾರು ಎಸೆಯುವುದನ್ನು ಕಾಣಬಹುದು. ಜನ ಎಸೆದ ನಾರು ತೇರು ಎಳೆವ ಮಣಿಯನ್ನು (ದೊಡ್ಡದಾದ, ದಪ್ಪದಾದ ಹಗ್ಗ) ಹೆಣೆಯಲು ಬಳಕೆಯಾಗುತ್ತದೆ. ಇದೆಲ್ಲಾ ಕತ್ತಾಳೆ ನಾರು ಜನರ ಸಂಸ್ಕೃತಿಯ ಭಾಗವೂ ಆದದ್ದರ ಕುರುಹು.ಹೀಗೆ ಕತ್ತಾಳೆಯನ್ನು ಕೊಳೆ ಹಾಕಿ ನಾರು ತೆಗೆವ ಸಾಂಪ್ರದಾಯಿಕ ವಿಧಾನವನ್ನು ಬಿಡಿಸಿಕೊಂಡು, ನಂದನಹಳ್ಳಿ ತಾಂಡದ ಜನ ಯಂತ್ರದ ಮೂಲಕ ನಾರು ತೆಗೆವ ಕೆಲಸ ಮಾಡುತ್ತಿದ್ದಾರೆ. ಈಗ್ಗೆ ಇಪ್ಪತ್ತು ವರ್ಷಗಳ ಹಿಂದಿನಿಂದಲೂ ಇದನ್ನೊಂದು ಮುಖ್ಯ ಉದ್ಯೋಗವನ್ನಾಗಿಸಿಕೊಂಡಿದ್ದಾರೆ. ಹಿಂದೆ ಐವತ್ತಕ್ಕೂ ಹೆಚ್ಚು ಯಂತ್ರಗಳಿದ್ದವಂತೆ, ಈಗ ಇಪ್ಪತ್ತೈದು ಯಂತ್ರಗಳು ನಾರು ತೆಗೆವ ಕೆಲಸ ಮಾಡುತ್ತಿವೆ. ಒಂದು ಯಂತ್ರ ಕನಿಷ್ಟ ಇಪ್ಪತ್ತು ಜನರಿಗೆ ಉದ್ಯೋಗ ಒದಗಿಸುತ್ತದೆ. ಇದೊಂದು ಸಂಚಾರಿಯಂತ್ರ. ಎಲ್ಲೆಲ್ಲಿ ಕತ್ತಾಳೆ ಯಥೇಚ್ಚವಾಗಿ ಬೆಳೆದಿರುತ್ತದೋ ಅಲ್ಲಲ್ಲಿಗೇ ಯಂತ್ರವನ್ನು ಕೊಂಡೊಯ್ದು ನಾರು ತೆಗೆವ ಕೆಲಸ ಮಾಡುತ್ತಾರೆ. ಹಾಗಾಗಿ ಕರ್ನಾಟಕದ ಬಹುಭಾಗಗಳಲ್ಲಿಯೂ, ಮಹರಾಷ್ಟ್ರ, ಆಂದ್ರ, ತಮಿಳು ನಾಡಿನ ಕೆಲ ಭಾಗಗಳಲ್ಲೂ ನಂದನಹಳ್ಳಿಯ ನಾರು ಯಂತ್ರಗಳು ಪಯಣ ಬೆಳೆಸಿವೆ.ಹೊಲದವರೇ ತಮ್ಮ ಬದುವಲ್ಲಿರುವ ಕತ್ತಾಳೆ ಪಟ್ಟಿಯನ್ನು ಕೊಟ್ಟು ಇಂತಿಷ್ಟು ನಾರು ಪಡೆಯಬಹುದು. ಇಲ್ಲದೆ ಹೋದರೆ ೩೦೦ ರೂಪಾಯಿಗೊಂದು ಟ್ರಾಕ್ಟರ್ ಲೋಡ್ ನಂತೆ ಹೊಲಬದುವಿನ ಕತ್ತಾಳೆಯನ್ನು ಕೊಳ್ಳುತ್ತಾರೆ. ಹೀಗೆ ಕೊಯ್ದ ಕತ್ತಾಳೆ ಪಟ್ಟಿಗಳನ್ನು ಮಿಷನ್ನಿನ ಬಾಯಿಗೆ ಇಡುತ್ತಾರೆ, ಅದು ಮಾವಿನ ಹಣ್ಣಿನ ಹೋಳನ್ನು ಚೀಪಿ ಸಿಪ್ಪೆಯನ್ನು ಎಸೆಯುವಂತೆ ಅದರ ಕತ್ತಾಳೆಯ ರಸ ಹೀರಿ ಹಸಿ ನಾರನ್ನು ಹೊರ ಹಾಕುತ್ತದೆ, ಹೀಗೆ ಹೊರ ಹಾಕಿದ ನಾರನ್ನು ಬಿಸಿಲಿಗೆ ಒಣಗು ಹಾಕಲಾಗುತ್ತದೆ. ಹೀಗೆ ಒಣಗು ಹಾಕಿದ ಬಿಳಿ ನಾರು ನೂರಾರು ಅಜ್ಜಿಯರು ತಮ್ಮ ಬಿಳಿ ಕೂದಲನ್ನು ಮಾತ್ರ ಮೇಲೆ ಬಿಟ್ಟು ಭೂಮಿಯ ಒಳಗೆ ಅವಿತಿದ್ದಾರೆಂಬತೆ ಕಾಣುತ್ತದೆ. ಎರಡು ಮೂರು ದಿನ ಒಣಗಿದಾಗ ನಾರು ಸಿದ್ದವಾಗುತ್ತದೆ.ಒಣಗಿದ ನಾರನ್ನು ಪೆಂಡಿಕಟ್ಟುತ್ತಾರೆ. ಅಂತಹ ಪೆಂಡಿಗಳನ್ನು ತೂಕ ಮಾಡಿ ಲಾರಿಗೆ ತುಂಬುತ್ತಾರೆ. ತಿಪಟೂರು ಗುಬ್ಬಿಯ ಬಳಿ ಇರುವ ಹಗ್ಗದ ಪ್ಯಾಕ್ಟರಿಗೆ ಕೆಲವರು ಮಾರಿದರೆ, ಇನ್ನು ಕೆಲವರು ಕೊಲ್ಕತ್ತಾ, ಬಾಂಬೆಯ ಹಗ್ಗದ ಪ್ಯಾಕ್ಟರಿಗಳಿಗೆ ಸಾಗಿಸುತ್ತಾರೆ. ಈಗ ೧೪ ರೂಪಾಯಿಗೆ ಕೆಜಿಯಂತೆ ಮಾರಾಟ ಮಾಡಲಾಗುತ್ತಿದೆ. ಬೆಲೆಯಲ್ಲಿ ಏರುಪೇರಾಗುವ ಸಾದ್ಯತೆಗಳೂ ಇವೆ. ಕತ್ತಾಳೆಯನ್ನು ಹಿಂಡಿ ತೆಗೆದ ರಸ ಮತ್ತು ಅದರ ಪೊರೆಯ ಕಸ ಹೊಲಕ್ಕೆ ಫಲವತ್ತಾದ ಗೊಬ್ಬರವಂತೆ. ಹಾಗಾಗಿ ಈ ಗೊಬ್ಬರವನ್ನು ಕೊಳ್ಳಲು ತುಂಬಾ ಬೇಡಿಕೆ ಇದೆ. ಹೀಗೆ ನಾರು ತೆಗೆವ ಕೆಲಸ ಮಳೆಗಾಲದ ನಾಲ್ಕು ತಿಂಗಳು ಮಾತ್ರ ನಿಲ್ಲುತ್ತದೆ. ಕಾರಣ ಮಳೆಗೆ ಕತ್ತಾಳೆ ನೆನೆದರೆ ಬೆಂಡಾಗುತ್ತದೆ, ನಾರು ನೆನೆದು ಕಪ್ಪಾಗುತ್ತದೆ ಎನ್ನುವುದು ಇಲ್ಲಿನ ಅನುಭವಿಗಳ ಮಾತು.

ನಾರನ್ನು ಒಣಗಿಸುವ, ಕೂಡಿಡುವ ಕೆಲಸಕ್ಕೆ ದಿನಕ್ಕೆ ೧೦೦ ರಿಂದ ೨೦೦ ರೂಪಾಯಿ ಕೊಡ್ತಾರೆ ಸಾರ್ ಎನ್ನುವ ಜಾನುಬಾಯಿ ‘ನಮ್ಮ ಜೀವನ್ಕ ಈ ಕತ್ತಾಳಿ ನಾರು ಆಸರಿ ಆಗೇತ್ರಿ’ ಎನ್ನುತ್ತಾರೆ. ಇದರಲ್ಲಿ ಮಹಿಳೆಯರ ಭಾಗವಹಿಸುವಿಕೆ ಹೆಚ್ಚಿದೆ. ನಂದನಹಳ್ಳಿಯ ರಾಮಾನಾಯ್ಕ ಮುಂತಾದವರು ನಾರಿನ ಮಿಷನ್ ಹೊಂದಿದ್ದಾರೆ. ಇದಕ್ಕೆ ಸರಕಾರದ ನಾರು ಮಂಡಳಿಯಾಗಲಿ, ಇತರೆ ಗುಡಿ ಕೈಗಾರಿಕೆಯ ಯೋಜನೆಗಳಾಗಲಿ ಸಹಾಯ ಮಾಡಿಲ್ರಿ..ನಮಗ ಸಾಲ ಕೊಡೋಕೆ ಬ್ಯಾಂಕುಗಳು ಮುಂದೆ ಬರೋದು ಕಷ್ಟರೀ ಎನ್ನುತ್ತಾರೆ. ನಂದನಹಳ್ಳಿಯಲ್ಲಿರೋ ಹಗ್ಗದ ಸಣ್ಣ ಪ್ಯಾಕ್ಟರಿಯೊಂದು ಕೆಲಸ ಮಾಡದೆ ಹಾಳು ಬಿದ್ದಿರುವುದೂ ಕೂಡ ಹಣಕಾಸಿನ ಕೊರತೆಯಿಂದಲೇ ಎನ್ನುವುದು ಈ ಊರಿನವರ ಅಭಿಪ್ರಾಯ.


ಹೀಗೆ ಹೊಲದ ಬದುವಲ್ಲಿ ಸುಖಾಸುಮ್ಮನೆ ದೈತ್ಯಾಕಾರದಲ್ಲಿ ಬೆಳೆವ ಕತ್ತಾಳೆಯನ್ನು ನಂಬಿ ಒಂದು ಊರು ಬದುಕು ಕಟ್ಟಿಕೊಂಡಿರುವುದು ಅಚ್ಚರಿಯೇ ಸರಿ. ಈ ಪುಟ್ಟ ಹಳ್ಳಿ ನಾರನ್ನು ಕೊಲ್ಕತ್ತಾ ಬಾಂಬೆಯಂತಹ ಮಹಾ ನಗರಗಳ ದೊಡ್ಡ ಪ್ಯಾಕ್ಟರಿಗಳಿಗೆ ಕಳಿಸುತ್ತಿರುವುದಕ್ಕೆ ಹೆಮ್ಮೆ ಪಡುತ್ತಿದೆ. ಆದರೆ ಇಲ್ಲಿನ ನಾರಿನ ಕಚ್ಚಾ ಸಾಮಗ್ರಿಯನ್ನು ಆಧರಿಸಿ ಉತ್ಪನ್ನಗಳನ್ನು ತಯಾರಿಸುವ ಸಣ್ಣ ಕೈಗಾರಿಕೆಯೊಂದು ಸ್ಥಾಪನೆಯಾದರೆ ಈ ಹಳ್ಳಿಯ ಇನ್ನಷ್ಟು ಜನ ಸಂಪೂರ್ಣವಾಗಿ ನಾರೋದ್ಯಮದಲ್ಲೇ ತೊಡಗಿಕೊಳ್ಳುವ ಕನಸು ಕಾಣುತ್ತಿದೆ. ನಂದನಹಳ್ಳಿ ಜನರ ಇಂತಹ ಕನಸು ನನಸಾಗುವುದು ಯಾವಾಗ ಎನ್ನುವುದು ನನ್ನಂತವರಲ್ಲಿ ಪ್ರಶ್ನೆಯಾಗಿ ಕಾಡುತ್ತದೆ.

1 ಕಾಮೆಂಟ್‌:

hudem krishnamurthy ಹೇಳಿದರು...

intha olle story yannu neediddakke thanx