ಗುರುವಾರ, ಅಕ್ಟೋಬರ್ 6, 2011

ಬಂಗಾಳದ ಶಕ್ತಿದೇವತೆಗಳ ನೆನಪಿನಲ್ಲಿ

ಬಂಗಾಳವನ್ನು ಕಾಳಿ ದುರ್ಗೆ ಮುಂತಾದ ಶಕ್ತಿದೇವತೆಗಳ ನಾಡೆಂದು ಕರೆಯಲಾಗುತ್ತದೆ. ಅದರ ರಾಜಧಾನಿ ಕೋಲ್ಕತ್ತೆಯ ಹೆಸರು ಬಂದಿದ್ದೇ `ಕಾಳಿಘಾಟ್` ಎಂಬ ಪದದಿಂದ.

ವಿಶೇಷವೆಂದರೆ, ಬಂಗಾಳದ ಈ ಕಾಳಿ ಮೂಲತಃ ಕರ್ನಾಟಕದವಳೆಂದೂ, ಬಂಗಾಳವನ್ನಾಳಿದ ಕರ್ನಾಟಕ ಮೂಲದ ದೊರೆಗಳಾದ ಸೇನರ ಮೂಲಕ ಅಲ್ಲಿಗೆ ಹೋದವಳೆಂದೂ ಒಂದು ಅಭಿಪ್ರಾಯವಿದೆ. ಇದು ನಿಜವೇ ಆಗಿದ್ದಲ್ಲಿ, ನಾನು ಚಾಮುಂಡಿಯ ನಾಡಿನಿಂದ ಕಾಳಿಯ ನಾಡಿಗೆ ಹೋದವನು.

ಕಾಳಿಯ ಗುಡಿ ಕೋಲ್ಕತ್ತೆಯ ನಡುಮಧ್ಯದಲ್ಲಿದೆ. ನಾನಲ್ಲಿಗೆ ಹೋದಾಗ, ಯಾವುದೊ ಸಾರ್ವಜನಿಕ ರಜೆ; ಗುಡಿಯ ಮುಂದೆ ಮೈಲುದ್ದದ ಪಾಳಿ. ಕೋಲ್ಕತ್ತೆಯ ಜನ ರಜೆ ಬಂದರೆ ಬೆಳಬೆಳಗ್ಗೆಯೇ ಕಾಳಿಗುಡಿಯ ಮುಂದೆ-ಸಂಜೆಯಾದರೆ ರವೀಂದ್ರ ಸದನದಲ್ಲಿ ನಡೆಯುವ ನಾಟಕ ಸಿನಿಮಾ ನೋಡಲು- ಪಾಳಿ ನಿಲ್ಲುತ್ತಾರೆಯೊ ಏನೊ? ಗುಡಿಯ ಆವರಣದ ಅಂಗಡಿಗಳಲ್ಲಿ ದೇವಿಗರ್ಪಿಸಲು ಕೆಂಪು ದಾಸವಾಳದ ಮಾಲೆಗಳು ಹೊರೆಗಟ್ಟಲೆ ಇಳಿಬಿದ್ದಿದ್ದವು; ಬಲಿಕೊಡಲು ತಂದ ಗಿಡ್ಡತಳಿಯ ಹೋತಗಳನ್ನು ಬಗಲಲ್ಲಿ ಅವುಚಿಕೊಂಡು ಕೆಲವು ಭಕ್ತರು ನಿಂತಿದ್ದರು.

ಬಂಗಾಳದ ಬೀರಭೂಂ ಜಿಲ್ಲೆಯಲ್ಲಿ ಮತ್ತೊಂದು ಶಾಕ್ತಪೀಠವಿದೆ. ಅದುವೇ ಸಿದ್ಧಪೀಠವೆಂದು ಹೆಸರಾಗಿರುವ ತಾರಾಪೀಠ. ಈ ಕಾಳಿಯ ಹೆಸರು ತಾರಾ. ತಾಂತ್ರಿಕ ಸಾಧಕರ ಪ್ರಿಯವಾದ ದೇವತೆಯಾದ ಈಕೆ ಸ್ಮಶಾನವಾಸಿನಿ. 19ನೇ ಶತಮಾನದಲ್ಲಿ ರಾಮಕೃಷ್ಣ ಪರಮಹಂಸರ ಸಮಕಾಲೀನನಾಗಿದ್ದ ವಾಮಖೇಪ ಎಂಬ ದೊಡ್ಡ ತಾಂತ್ರಿಕ ಸಾಧಕ ಇಲ್ಲಿದ್ದನು. ತಾರಾಪೀಠದಲ್ಲಿಯೂ ಪ್ರಾಣಿಬಲಿಯಿದೆ.

ದೇವಿಯ ಎದುರಾ ಎದುರು, ಕೊಂಚ ದೂರದಲ್ಲಿ, ಬಲಿಗಂಬವಿದ್ದು, ಥಳಥಳಿಸುವ ಖಡುಗದಿಂದ ಹೋತವನ್ನು ಒಂದೇ ಏಟಿಗೆ ವಧಿಸುವಾಗ, ಜನ `ಲಲಲಲಲ` ಎಂದು ಕೂಗು ಹಾಕುವರು. ಬಲಿಯ ರಕ್ತವನ್ನು ಭಕ್ತರು ನೊಸಲಿಗೆ ತಿಲಕವಾಗಿ ಧರಿಸುವರು.

ಬಂಗಾಳ, ಅಸ್ಸಾಂ ಹಾಗೂ ನೇಪಾಳಗಳಲ್ಲಿ ಶಾಕ್ತ ದೇವತೆಗಳಿಗೆ ಪ್ರಾಣಿಬಲಿಯೂ ಬಲಿಪ್ರಾಣಿಯ ಮಾಂಸದ ಸೇವನೆಯೂ ಸಾಮಾನ್ಯ. ದೈವಗಳಿಗೂ ಅವುಗಳ ಪೂಜಾಚರಣೆಗಳಿಗೂ ಜನರ ಆಹಾರಪದ್ಧತಿಗೂ ನೇರ ಸಂಬಂಧವಿದೆಯಷ್ಟೆ.

ಅಸ್ಸಾಮಿನಲ್ಲಿದ್ದ ಕನ್ನಡ ಲೇಖಕ ಪ್ರಭಾಕರ್ (ಕಾಮರೂಪಿ) ಈ ಕುರಿತು ನನಗೆ ಹೇಳಿದ್ದರು. ಕೋಲ್ಕತ್ತೆಯಲ್ಲಿ ಕಾಲು ಶತಮಾನದಿಂದ ಇರುವ ಮಿತ್ರರಾದ ಕುಮಾರಪ್ಪನವರು, ಬಂಗಾಳದಲ್ಲಿ ಮಾಂಸಾಹಾರವಿಲ್ಲದ ಮದುವೆಗಳನ್ನೇ ನಾನು ನೋಡಲಿಲ್ಲ ಎಂದರು. ಕರ್ನಾಟಕದಲ್ಲಿ ಶುದ್ಧ ಸಸ್ಯಾಹಾರದ ಹೋಟೆಲುಗಳಿವೆ ಎಂದರೆ ಬಂಗಾಳದ ಜನ ಸೋಜಿಗ ಪಡುತ್ತಾರಂತೆ.

ಕೋಲ್ಕತ್ತೆ ಮತ್ತು ತಾರಾಪೀಠಗಳಷ್ಟು ಪ್ರಾಚೀನವಲ್ಲವಾದರೂ ಐತಿಹಾಸಿಕವಾಗಿ ಹೆಸರು ಪಡೆದಿರುವ ಕಾಳಿಯ ಕ್ಷೇತ್ರವೆಂದರೆ, ದಕ್ಷಿಣೇಶ್ವರ. ಕೋಲ್ಕತ್ತೆಯಿಂದ ಕೊಂಚ ದೂರ ಹೂಗ್ಲಿ ಹೊಳೆಯ ಆಚೆ ದಡದಲ್ಲಿ ದಕ್ಷಿಣೇಶ್ವರವಿದೆ. ಇಲ್ಲಿನ ಕಾಳಿಗೆ ಸ್ವತಃ ರಾಮಕೃಷ್ಣ ಪರಮಹಂಸರೇ ಅರ್ಚಕರಾಗಿದ್ದರು.

ಈ ಗುಡಿಯನ್ನು ಕಟ್ಟಿಸಿದವಳು ರಾಣಿ ರಾಶಮಣಿ ಎಂಬ ಸಿರಿವಂತ ವಿಧವೆ. ವಿಧವೆ ಕಟ್ಟಿಸಿದ ಗುಡಿಯೆಂದು ಯಾರೂ ಅರ್ಚನೆ ಮಾಡಲು ಮುಂದಾಗದಿದ್ದಾಗ, ರಾಮಕೃಷ್ಣರೂ ಅವರ ಅಣ್ಣನೂ ಇಲ್ಲಿಗೆ ಅರ್ಚಕರಾಗಿ ಬಂದರು. ಕರ್ನಾಟಕದ ನಮಗೆ ದಕ್ಷಿಣೇಶ್ವರವು ಕುವೆಂಪು ಕಾರಣಕ್ಕೆ ಮುಖ್ಯವಾಗಿದೆ.

ರಾಮಕೃಷ್ಣ ಆಶ್ರಮದಲ್ಲಿ ಬೆಳೆದ ಹಾಗೂ ಪರಮಹಂಸರ ಆಧ್ಯಾತ್ಮಿಕತೆಯಿಂದ ಪ್ರಭಾವಿತರಾಗಿದ್ದ ಕುವೆಂಪು, ಕಾಳಿಯನ್ನು ಬೇರೆಬೇರೆ ರೂಪಗಳಲ್ಲಿ ತಮ್ಮ ಬರೆಹಗಳಲ್ಲಿ ತರುತ್ತಾರೆ. ದಕ್ಷಿಣೇಶ್ವರಕ್ಕೆ ಹೋದವರ್ಷವೇ (1929) ಅವರು `ಕಾಳಿ ಬರುವಳು` ಕವನ ರಚಿಸಿದರು. ಬಳಿಕ `ಕ್ರಾಂತಿಕಾಳಿ` ಕವನ ಬಂದಿತು. `ಮಲೆಗಳಲ್ಲಿ ಮದುಮಗಳು` ಕಾದಂಬರಿಯಲ್ಲಿ ಚಿನ್ನಮ್ಮ ದಿಕ್ಕೆಟ್ಟು ತನ್ನ ಪ್ರಿಯತಮನಿಗಾಗಿ ಕಾಯುತ್ತಾ, ಮಲೆನಾಡಿನ ಒಂದು ಪಾಳುಗುಡಿಯಲ್ಲಿರುವ ಮಾರಿಯ ಮುಂದೆ ಅಡ್ಡಬಿದ್ದು ಬೇಡಿಕೊಳ್ಳುವ ಪ್ರಸಂಗವಿದೆ. ಅದೇ ಹೊತ್ತಿಗೆ ದಕ್ಷಿಣೇಶ್ವರದಲ್ಲಿ ಧ್ಯಾನಮಗ್ನನಾಗಿದ್ದ ಒಬ್ಬ ತರುಣ ಸನ್ಯಾಸಿಗೆ, ಕನಸಿನಲ್ಲೆಂಬಂತೆ, ಭವತಾರಿಣಿಯ ಮುಂದೆ ಹುಡುಗಿಯೊಬ್ಬಳು ಅಡ್ಡಬಿದ್ದು ಬೇಡಿಕೊಳ್ಳುತ್ತಿರುವ ದೃಶ್ಯವು ಕ್ಷಣಕಾಲ ಗೋಚರಿಸಿ ಮರೆಯಾಗುತ್ತದೆ.

ಭಕ್ತಿತುಂಬಿ ಶ್ರದ್ಧೆಯಿಂದ ಹೊಮ್ಮಿದ ಆರ್ತ ಜೀವದ ಪ್ರಾರ್ಥನೆಗೆ ಜಗನ್ಮಾತೆ- ಅವಳು ಆಖ್ಯಾತ ಹೂವಳ್ಳಿ ಹಾಡ್ಯದ ಮಾರಿಯಮ್ಮನ ರೂಪದಿಂದಿರಲಿ ಅಥವಾ ದಕ್ಷಿಣೇಶ್ವರದ ಜಗದ್‌ವಿಖ್ಯಾತ ಭವತಾರಿಣಿಯ ರೂಪದಿಂದಿರಲಿ-ಓಕೊಳ್ಳದಿರುತ್ತಾಳೆಯೇ? ಎಂದು ಕಾದಂಬರಿ ವ್ಯಾಖ್ಯಾನಿಸುತ್ತದೆ.

ಮಲೆನಾಡಿನ ವೈಷ್ಣವ ಹಿನ್ನೆಲೆಯ ಸಮುದಾಯದಲ್ಲಿ ಹುಟ್ಟಿದ ಕುವೆಂಪು, ಬಂಗಾಳದ ಪ್ರಭಾವದಿಂದ ಮಲೆನಾಡಿಗೂ ಬಂಗಾಳಕ್ಕೂ ಶಾಕ್ತಸಂಸ್ಕೃತಿಯ ಸೇತು ಕಟ್ಟಿಸಿದರು.

ದಕ್ಷಿಣೇಶ್ವರದ ಕಾಳಿಗೆ ಭವತಾರಿಣಿ ಎಂಬ ಹೆಸರೂ ಇದೆ. ತಮ್ಮ ಮಗಳು ತಾರಿಣಿಗೆ ಹೆಸರಿಡುವಾಗ ಕುವೆಂಪು ಅವರ ಮನಸ್ಸಲ್ಲಿದ್ದುದು ಈ ಭವತಾರಿಣಿಯೆ. ಸೇನರ ಮೂಲಕ ಹೋದ ಬಂಗಾಳಕ್ಕೆ ಹೋದ ಕಾಳಿ, ಕುವೆಂಪು ಮೂಲಕ ಕರ್ನಾಟಕಕ್ಕೆ ಹೊರಳಿ ಬಂದಳು.
ಬಂಗಾಳದಲ್ಲಿ ಕಾಳಿಯ ಇನ್ನೊಂದು ರೂಪವಾದ ದುರ್ಗೆಯ ಆರಾಧನೆಯೂ ಇದೆ.

ನಮ್ಮಲ್ಲಿ ನವರಾತ್ರಿಯ ಶಕ್ತಿಪೂಜೆಯಂತೆ, ಅಲ್ಲಿ ದುರ್ಗಾಪೂಜೆ ಪ್ರಸಿದ್ಧ. ತನ್ನ ಹಲವು ಕೈಗಳಲ್ಲಿ ಬಗೆಬಗೆಯ ಆಯುಧಗಳನ್ನು ಹಿಡಿದು, ಮಹಿಷಾಸುರನನ್ನು ಕೊಲ್ಲುತ್ತ, ನಿಮೀಲಿತ ನೇತ್ರಳಾಗಿ ನಿಂತಿರುವ ದುರ್ಗೆಯ ಪ್ರತಿಮೆಗಳನ್ನು ತಯಾರಿಸುತ್ತಿರುವ ನೂರಾರು ಕಲಾವಿದರನ್ನು ಬಂಗಾಳದಲ್ಲಿ ನೋಡಬಹುದು. ದುರ್ಗಾಷ್ಟಮಿಯಲ್ಲಿ ಇಡೀ ಬಂಗಾಳ ದುರ್ಗೆಯ ಮೆರವಣಿಗೆಗಳಿಂದ ತುಂಬಿಹೋಗುತ್ತದೆ.

ನಾಸ್ತಿಕರಾದ ಕಮ್ಯುನಿಸ್ಟರು ಸಹ ಈ ಜನೋತ್ಸವಗಳನ್ನು ನಿರಾಕರಿಸಲಿಲ್ಲ. ಅವರೂ ಉಮೇದಿನಿಂದ ಭಾಗವಹಿಸುತ್ತಾರೆ. ಕೋಲ್ಕತ್ತೆಯ ಕಾಳಿಘಾಟಿನ ಕಾಳಿಗುಡಿಯ ಆವರಣದೊಳಗೇ ಸಿಪಿಎಂ ಕಛೇರಿಯಿದೆ. ಬಂಗಾಳದಲ್ಲಿ ದುರ್ಗಾಪೂಜೆಯು ಧಾರ್ಮಿಕ ಆಚರಣೆಯಾಚೆ ಹೋಗಿ, ಒಂದು ನಾಡಹಬ್ಬವಾಗಿದೆ.

ಅನುಭಾವಿಗಳಾದ ರಾಮಕೃಷ್ಣ ಪರಮಹಂಸರಿಂದ ಹಿಡಿದು ಅವರ ಸಂಗಾತಿ ಶಾರದಾದೇವಿಯ ತನಕ, `ಆನಂದಮಠ` ಕಾದಂಬರಿ ಬರೆದ ಬಂಕಿಮಚಂದ್ರರಿಂದ ಹಿಡಿದು ಕಮ್ಯುನಿಸ್ಟರ ತನಕ, ಬಂಗಾಳದ ಎಲ್ಲರೂ ದೇವಿ ಆರಾಧಕರೇ. ಬಂಗಾಳದ ಚಿತ್ರಕಲಾವಿದರಿಗಂತೂ ಕಾಳಿ ಮತ್ತು ದುರ್ಗೆಯರನ್ನು ಚಿತ್ರಿಸುವುದರಲ್ಲಿ ದಣಿವೇ ಇಲ್ಲ.

ತಲೆಗೂದಲನ್ನು ಕೆದರಿಕೊಂಡು, ಕೆಂಗಣ್ಣನ್ನು ಅರಳಿಸಿ, ಮೊಳದುದ್ದ ನಾಲಗೆ ಚಾಚಿ, ಕೈಯಲ್ಲಿ ನೆತ್ತರು ಸುರಿವ ರಕ್ತಬೀಜಾಸುರನ ರುಂಡವನ್ನು ಹಿಡಿದು, ರಕ್ತಸಿಕ್ತ ಖಡ್ಗವನ್ನು ಎತ್ತಿ ಹಿಡಿದು, ಕೊರಳಲ್ಲಿ ಹಸಿಹಸೀ ರುಂಡಮಾಲೆ ಧರಿಸಿ, ನೆಲದಮೇಲೆ ಅಂಗಾತ ಬಿದ್ದಿರುವ ಶಿವನೆದೆಯ ಮೇಲೆ ಕಾಲನ್ನು ಮೆಟ್ಟಿ ನಿಂತಿರುವ ಕಾಳಿ; ಶಿವನನ್ನು ಹಸುಗೂಸನ್ನಾಗಿ ಮಾಡಿ ಎದೆಯೂಡುತ್ತಿರುವ ಕಾಳಿ; ಪ್ರಸನ್ನಳಾಗಿರುವ ಭದ್ರಕಾಳಿ; ವಾಮಾಚಾರದವರಿಗೆ ಪ್ರಿಯವಾದ ಸ್ಮಶಾನ ಕಾಳಿ-ಎಷ್ಟೊಂದು ರೂಪಗಳಲ್ಲಿ ಕಾಳಿಯನ್ನು ಅವರು ಚಿತ್ರಿಸಿದ್ದಾರೆ!

ವಿಕ್ಟೋರಿಯಾ ಮೆಮೋರಿಯಲ್ ಹಾಲಿನಲ್ಲಿ ಶತಮಾನಗಳ ಕಾಲದಿಂದ ಬಂಗಾಳದ ಕಲಾವಿದರು ಚಿತ್ರಿಸಿರುವ ಈ ಚಿತ್ರಪಟಗಳಿವೆ. ಸ್ತ್ರೀಯನ್ನು ದೇವಿ ತಾಯಿ ದೀದಿ ಮುಂತಾದ ರೂಪಗಳಲ್ಲಿ ಕಲ್ಪಿಸಿಕೊಂಡು ಆರಾಧಿಸುವ ಮನೋಧರ್ಮವೊಂದು ಬಂಗಾಳದ ಸಂಸ್ಕೃತಿಯಲ್ಲಿ ಆಳವಾಗಿ ಬೇರು ತಳೆದಂತಿದೆ.

ದಕ್ಷಿಣೇಶ್ವರದಲ್ಲಿದ್ದಾಗ ಶಾರದಾದೇವಿಯವರು ಸ್ಮಶಾನ ಕಾಳಿಯ ಆರಾಧನೆ ಮಾಡುತ್ತಿದ್ದರು. 5 ವರ್ಷದ ಚಿಕ್ಕವಯಸ್ಸಿನಲ್ಲಿ 23ರ ಹರೆಯದ ರಾಮಕೃಷ್ಣರಿಗೆ ಮದುವೆಯಾದ ಶಾರದಾದೇವಿಯವರು, ಸ್ವತಃ ತಮ್ಮ ಗಂಡನಿಂದಲೇ ಪೂಜೆಗೆ ಒಳಗಾದವರು. ಲಗ್ನವಾದರೂ ವಿರಕ್ತ ಬದುಕನ್ನು ನಡೆಸುತ್ತಿದ್ದ ಪರಮಹಂಸರು, ಕಾಳಿಯ ಪೀಠದಲ್ಲಿ ಅವರನ್ನು ಕೂರಿಸಿ `ತಾಯೀ` ಎಂದು ಕರೆಯುತ್ತ ಕುಮಾರಿಪೂಜೆ ಮಾಡುತ್ತಿದ್ದರು. ಕಾಳಿ ದುರ್ಗೆಯರನ್ನು ಬಿಟ್ಟು ಬಂಗಾಳದ ಸಂಸ್ಕೃತಿಯನ್ನು ಕಲ್ಪಿಸಿಕೊಳ್ಳುವಂತಿಲ್ಲ.

ನಂತರ ದಿನಗಳಲ್ಲಿ ಬಂಗಾಳಕ್ಕೆ ಭೂಮಿಕೆಗೆ ಬೇರೆಬೇರೆ ನಮೂನೆಯ ತಾಯಂದಿರ ಮತ್ತು ದೇವಿಯರ ಪ್ರವೇಶವಾಯಿತು. ಅವರಲ್ಲಿ ಮದರ್ ತೆರೇಸಾ ಮತ್ತು ರಾಣಿ ವಿಕ್ಟೋರಿಯಾ ಮುಖ್ಯರು. ಕೋಲ್ಕತ್ತೆಯ ಕಾಳಿಗುಡಿಯ ಮುಂಭಾಗದಲ್ಲೇ ಮದರ್ ತೆರೇಸಾ ಅವರ ಚಾರಿಟಿ ಆಫ್ ಮಿಶನ್‌ನ ಹಳೇ ಕಟ್ಟಡವಿದೆ. ಅದರ ಮುಂದೆ ಉಪ್ಪರಿಗೆಯಲ್ಲಿ ಕಿರೀಟ ಧರಿಸಿದ ಮೇರಿಯದೊಂದು ಪ್ರತಿಮೆಯಿದೆ.

ಗುಡಿಯ ಒಳಗೆ ಕಾಳಿಮಾತೆ. ಹೊರಗೆ ಮಾತೆಮೇರಿ. ಮದರ್ ತೆರೇಸಾಗಿಂತ ಕೊಂಚ ಮುಂಚೆ, ಬಂಗಾಳಕ್ಕೆ ಆಗಮಿಸಿದ `ತಾಯಿ`ಯೆಂದರೆ ರಾಣಿ ವಿಕ್ಟೋರಿಯಾ. ಈಕೆಯ ನೆನಪಿಗೆ ಕೋಲ್ಕತ್ತೆಯಲ್ಲಿ ವಿಕ್ಟೋರಿಯಾ ಮೆಮೊರಿಯಲ್ ಹಾಲ್ ನಿರ್ಮಾಣವಾಯಿತು. ಬಿಎಂಶ್ರೀಯವರು `ಕಡಲರಾಣಿ ಬ್ರಿಟಾನಿಯಾ`ಳನ್ನು ಭರತಮಾತೆಯ ನೆರವಿಗೆ ಬಂದ `ಇನಿಯ ತಂಗಿ` ಎಂದು (`ಭರತಮಾತೆಯ ನುಡಿ`) ಕರೆದರು; ಅದರಂತೆ ಕೆಲವು ಬಂಗಾಳಿಗಳು ವಿಕ್ಟೋರಿಯಾ ರಾಣಿಯನ್ನು ಭಾರತವನ್ನು ಉದ್ಧರಿಸಲು ಬಂದ ತಾಯಸ್ವರೂಪಿಣಿ ಎಂದು ಭಾವಿಸಿದರು.

ಈಸ್ಟ್ ಇಂಡಿಯಾ ಕಂಪನಿಯ ಆಳಿಕೆ ಮುಗಿದು (1857), ರಾಣಿ ಆಡಳಿತವು ಶುರುವಾದ ಬಳಿಕ, ತನ್ನ ಚಕ್ರಾಧಿಪತ್ಯಕ್ಕೆ ಸೇರಿದ ದೇಶಗಳನ್ನೆಲ್ಲ ತನ್ನ ಸ್ವಂತ ಮಕ್ಕಳಂತೆ ಭಾವಿಸಿ ಆಕೆ ಸಲಹುತ್ತಾಳೆ ಎಂದು ಬಿಂಬಿಸುವುದು, ವಸಾಹತುಶಾಹಿ ಆಡಳಿತಕ್ಕೂ ಜರೂರಾದ ಕೆಲಸವಾಗಿತ್ತು. ಹೀಗಾಗಿಯೇ ಇರಬೇಕು, ಕೋಲ್ಕತ್ತೆಯ ವಿಕ್ಟೋರಿಯ ಮೆಮೋರಿಯಲ್ ಕಟ್ಟಡದ ಮೇಲೆಲ್ಲ ತಾಯಂದಿರ ಮೂರ್ತಿಗಳಿವೆ. ಈ ತಾಯಂದಿರು ಮಕ್ಕಳನ್ನು ಮಡಿಲಲ್ಲಿಟ್ಟು ಮಲಗಿಸುತ್ತಿರುವ, ಎದೆತೆರೆದು ಹಾಲೂಡಿಸುತ್ತಿರುವ, ಆಡಿಸುತ್ತಿರುವ ಮುಂತಾದ ಬಗೆಬಗೆಯ ಕೆಲಸಗಳಲ್ಲಿ ತೊಡಗಿದ್ದಾರೆ.

ಮೆಮೋರಿಯಲ್ ಹಾಲಿನ ಮುಂದೆ ರಾಣಿಯ ದೊಡ್ಡದೊಂದು ಕಂಚಿನ ಮೂರ್ತಿಯಿದೆ. ಜನ ಗಿಜಿಗುಡುವ ಜನಸಂದಣಿಯಲ್ಲಿ, ತುಸು ಕಸಮುಸುರೆಯ ಇಕ್ಕಟ್ಟಿನಲ್ಲಿ, ಕೋಲ್ಕತ್ತೆಯ ಕಾಳಿಯ ಗುಡಿಯಿದ್ದರೆ, ವಿಕ್ಟೋರಿಯಾ ಸ್ಮಾರಕ ಕಟ್ಟಡವು, ಹೂಗಿಡ ಬೆಳೆಸಿ, ಹುಲ್ಲು ಕತ್ತರಿಸಿ ನೀಟಾಗಿರುವ ಉದ್ಯಾನದಲ್ಲಿದೆ. ಎರಡೂ ವಿಭಿನ್ನ ಜಗತ್ತುಗಳು.

ಕಾಳಿಯ ಕೈಯಲ್ಲಿ ರಕ್ಕಸರನ್ನು ಕೊಂದ ಆಯುಧಗಳಿದ್ದರೆ, ಕಂಚಿನ ಮೂರ್ತಿ ವಿಕ್ಟೋರಿಯಾ ರಾಣಿಯ ಕೈಯಲ್ಲಿ ಭೂಮಂಡಲವನ್ನೇ ಗೆದ್ದದ್ದರ ದ್ಯೋತಕವೆಂಬಂತೆ ಚೆಂಡಿನಾಕಾರದ ಭೂಗೋಳವಿದೆ. ಅದರ ಮೇಲೆ ಒಬ್ಬ ಸೈನಿಕ ತುಪಾಕಿ ಹಿಡಿದು ನಿಮಿರಿ ನಿಂತಿದ್ದಾನೆ. ರಾಣಿಯ ಸಿಂಹಾಸನದ ಬೆನ್ನಿಗೆ ಒಂದು ಸಿಂಹವೂ ಸೂರ್ಯವೂ ಇವೆ.

ಸೂರ್ಯ ಮುಳುಗದ ಸಾಮ್ರೋಜ್ಯವನ್ನು ಸೈನಿಕ ಬಲದಿಂದ ಗಳಿಸಿದ ಹೆಮ್ಮೆ ಮತ್ತು ಗಾಂಭೀರ್ಯದಲ್ಲಿ ಈ `ಪಶ್ಚಿಮ ದುರ್ಗೆ` ಆಸೀನಳಾಗಿದ್ದಾಳೆ. ಸಿಂಹಾಸನದ ಕೆಳಗಿನ ಫಲಕಗಳಲ್ಲಿ ರಾಣಿಯನ್ನು ಅಂಬಾರಿಯಲ್ಲಿ ಕೂರಿಸಿಕೊಂಡು ಮೆರವಣಿಗೆ ತೆಗೆದಿರುವ -ಹೊಸ ದೇವಿಗೆ ಸ್ವಯಂ ಬಲಿಯಾಗಲು ಹೊರಟಂತಹ ಬಲಿಪಶುಗಳಂತೆ ತೋರುವ-ಭಾರತೀಯ ಬ್ರಿಟಿಷ್ ಸೈನಿಕರ ವೈಹಾಳಿಯಿದೆ. ಆದರೆ, ಈ ರಾಣಿಯ ಗರ್ವರಸಕ್ಕೆ ಭಂಗ ತರುವಂತೆ, ಚರಿತ್ರೆಯ ಹಂಗು ಮತ್ತು ಕಾಲದ ಪರಿವೆಯೇ ಇಲ್ಲದಂತೆ, ಹೊಸ ಜನಾಂಗದ ತಂದೆ ತಾಯಿಗಳಂತೆ, ವಿಕ್ಟೋರಿಯಾ ಪಾರ್ಕಿನ ತುಂಬ ಕೋಲ್ಕತ್ತೆಯ ತರುಣ ಪ್ರೇಮಿಗಳು ಪರಸ್ಪರ ತಬ್ಬಿ ಕುಳಿತಿರುವ ದೃಶ್ಯಾವಳಿಯಿದೆ.

ಬಂಗಾಳಕ್ಕೆ ಇನ್ನೊಬ್ಬ ತಾಯಿಯೂ ಇದ್ದಾಳೆ. ಆಕೆಯೆಂದರೆ, ಕೋಲ್ಕತ್ತೆ ಮತ್ತು ಹೌರಾಗಳನ್ನು ವಿಭಜಿಸಿ ಹರಿಯುವ ಗಂಗೆ; ಬಂಗಾಳದೊಳಕ್ಕೆ ಸಮುದ್ರದಿಂದ ಇಂಗ್ಲೆಂಡಿನ ಹಡಗುಗಳು ಒಳಗೆ ಬರಲು ನೀರಹಾದಿ ಹಾಸಿಕೊಟ್ಟ ಭಾಗೀರಥಿ. ವಿಶೇಷವೆಂದರೆ, ಬಂಗಾಳವನ್ನು ಬಗೆಬಗೆಯಲ್ಲಿ ಪ್ರಭಾವಿಸಿದ ಒಂದರ್ಥದಲ್ಲಿ ದೇವಿಯರು ಮತ್ತು ತಾಯಂದಿರು ಹೊರಗಿನಿಂದ ಬಂದವರು.

ಕಾಳಿ ಕರ್ನಾಟಕದಿಂದ; ಮದರ್ ತೆರೆಸಾ ಮೆಸಿಡೋನಿಯಾದಿಂದ; ವಿಕ್ಟೋರಿಯಾ ರಾಣಿ ಇಂಗ್ಲೆಂಡಿನಿಂದ; ಭಾಗೀರಥಿ ಹಿಮಾಲಯದಿಂದ. ಇವರ ಸಾಲಿಗೆ ಈಗ ಬಂಗಾಳದ ಮಣ್ಣಿನಿಂದಲೇ ಬಂದ ಹೊಸ ದೀದಿ (ಅಕ್ಕ) ಒಬ್ಬಳು ಸೇರಿಕೊಂಡಿದ್ದಾಳೆ. ಈಕೆ ಮಮತಾ ದೀದಿ. ಪಕ್ಕದ ಪೂರ್ವ ಬಂಗಾಳ ಉರುಫ್ ಬಾಂಗ್ಲಾದೇಶದ ಆಳಿಕೆಯಲ್ಲಿಯೂ ಶೇಖ್ ಹಸೀನಾ-ಖಾಲಿದಾಜಿಯಾ ಎಂಬ ಇಬ್ಬರು ಮಹಿಳೆಯರದೇ ಕಾರುಭಾರಷ್ಟೆ.

ಕೇರಳವನ್ನು ಸ್ತ್ರೀಮಲೆಯಾಳ ಎಂದು ಕರೆಯಲಾಗುತ್ತದೆ. ಪೌರಾಣಿಕ ಕತೆಗಳ ಪ್ರಕಾರ, ಯೋಗಿ ಮಚ್ಚೇಂದ್ರನಾಥನು ಮೈಮರೆತು ಇರುವಷ್ಟು ಮಹಿಳೆಯರು ಅವನನ್ನು ತಮ್ಮ ವಶದಲ್ಲಿ ಬಂಧಿಸಿದ್ದರು. ಆದರೆ ಮಹಿಳೆಯರು ಬಂಗಾಳವನ್ನು ಹಲವು ರೂಪಗಳಲ್ಲಿ ಆವರಿಸಿರುವ ಪರಿಯನ್ನು ಕಂಡರೆ, ಇದನ್ನು ಸ್ತ್ರೀಬಂಗಾಳ ಎಂದು ಕರೆಯಬಹುದು.

ವೈರುಧ್ಯವೆಂದರೆ, ದೇವಿ, ಮಾತೆ, ರಾಣಿ, ದೀದಿಗಳ ಪೂಜೆ ಮತ್ತು ಆಳಿಕೆಗೆ ಒಳಪಟ್ಟಿರುವ ಬಂಗಾಳವು, ಒಂದು ಕಾಲಕ್ಕೆ ಸ್ತ್ರೀವಿರೋಧಿಯಾಗಿತ್ತು; ಅದು ಬಾಲ್ಯ ವಿವಾಹಕ್ಕೂ ವಿಧವೆಯರನ್ನು ಜೀವಂತ ಸುಡುವುದಕ್ಕೆ ಹೆಸರಾಗಿತ್ತು. ಬ್ರಿಟಿಷರು ಸತಿಪದ್ಧತಿ ನಿಷೇಧಿಸಲು (1829), ಅವರ ಬಂಗಾಳದ ಅನುಭವವೂ ಒಂದು ಕಾರಣ. ನಂತರ ವಿಧವಾ ವಿವಾಹ ಮತ್ತು ಸ್ತ್ರೀಶಿಕ್ಷಣದಂತಹದ ಸಮಾಜ ಸುಧಾರಣೆಗಳು ಇದೇ ಬಂಗಾಳದಿಂದ ಹುಟ್ಟಿಕೊಂಡು ಭಾರತದ ತುಂಬ ಅಲೆಗಳಾಗಿ ಹರಡಿದವು.

ಈ ಸುಧಾರಣೆಗಳು ಬಂಗಾಳದಲ್ಲಿ ಮಹಿಳೆಯರ ಹೊಸದೊಂದು ಧೀಮಂತ ಪೀಳಿಗೆ ಬೆಳೆಯಲು ಕಾರಣವಾಯಿತು. ಈ ಪೀಳಿಗೆಯ ಪ್ರತಿಬಿಂಬಗಳನ್ನು ಶರಚ್ಚಂದ್ರ, ಟ್ಯಾಗೋರ್ ಮುಂತಾದವರ ಬರೆಹದಲ್ಲಿಯೂ, ಸತ್ಯಜಿತ್ ರೇ ಅವರ ಸಿನಿಮಾಗಳಲ್ಲಿಯೂ ಕಾಣಬಹುದು.

ನನಗೆ ಬಂಗಾಳದ ನಿಜವಾದ ಶಕ್ತಿದೇವತೆ ಲೇಖಕಿ ಮಹಾಶ್ವೇತಾದೇವಿ ಎಂದು ಅನಿಸುತ್ತದೆ. ಧೀಮಂತ ಹೋರಾಟಗಾರ್ತಿ ಈಕೆ ಬಂಗಾಳದ ಎಲ್ಲ ದಮನಿತ ಜನರ ನೋವಿಗೆ ಮಿಡಿಯುವ ತಾಯಿ. ಕರ್ನಾಟಕವನ್ನು ಪ್ರೀತಿಸುವ ಮಹಾಶ್ವೇತಾದೇವಿ ಇಲ್ಲಿಗೆ ಬಹಳ ಸಲ ಬಂದಿದ್ದಾರೆ. ಅವರೊಮ್ಮೆ ಬೆಂಗಳೂರಿಗೆ ಬಂದಿದ್ದಾಗ, ರವೀಂದ್ರ ಕಲಾಕ್ಷೇತ್ರದಲ್ಲಿ, `ಅಭೋಕ್ ಪೃಥಿವಿ` (ಮಲಗಿರುವ ಭೂಮಿಯೇ ಮೇಲಕ್ಕೇಳು) ಎಂಬ ತಮ್ಮ ಕವನವನ್ನು ಇಡೀ ಸಭೆಯೇ ಹಾಡುವಂತೆ ಹೇಳಿಕೊಟ್ಟಿದ್ದರು.

ಶಕ್ತಿದೇವತೆಗಳು ಬಂಗಾಳದ ಪ್ರಧಾನ ದೈವಗಳಾಗಿದ್ದರೂ, ಅಲ್ಲಿನ ವಾಸ್ತವ ಬದುಕಿನಲ್ಲಿ ಮಹಿಳೆಯರು ಎಷ್ಟು ಮೇಲಕ್ಕೆ ಎದ್ದಿದ್ದಾರೆ ಎಂಬ ಪ್ರಶ್ನೆ ಖಂಡಿತಾ ಎದುರಾಗುತ್ತದೆ.

ಬಂಗಾಳದ ತಿರುಗಾಟ ಮಾಡುವ ಯಾರಿಗೂ, ಮನೆಗಳಿಗೆ ಲಗತ್ತಾಗಿರುವ ಕೊಳಗಳಲ್ಲಿ ಮೀಯುವ, ಬಟ್ಟೆ ಒಗೆಯುವ, ಮಾರುಕಟ್ಟೆಗಳಲ್ಲಿ ಮೀನು ತರಕಾರಿ ಮಾರುವ, ಹೊಲಗದ್ದೆಗಳಲ್ಲಿ ಕಷ್ಟಪಟ್ಟು ಕೆಲಸ ಮಾಡುವ, ಪಟ್ಟಣದ ರಸ್ತೆಗಳಲ್ಲಿ ಗರಿಗರಿಯಾದ ಕಾಟನ್ ಸೀರೆ ಉಟ್ಟು ಸೈಕಲ್ ಹೊಡೆಯುವ ಮಹಿಳೆಯರು ಗೋಚರಿಸುತ್ತಾರೆ. ಇದರೊಟ್ಟಿಗೆ ಕೋಲ್ಕತ್ತೆಯ ಬೀದಿಗಳಲ್ಲಿ ಭಿಕ್ಷುಕಿಯರೂ ಮತ್ತು ವೇಶ್ಯೆಯರೂ ಸಾಕಷ್ಟು ಕಾಣಸಿಗುತ್ತಾರೆ.

ರಾಜಕೀಯ, ಆಧ್ಯಾತ್ಮಿಕ, ಧಾರ್ಮಿಕ ಲೋಕವನ್ನು ದೈವಗಳಾಗಿಯೋ ಆಳಿಕೆಗಾರರಾಗಿಯೋ ಕೆಲವು ಸ್ತ್ರೀಯರು ಎಷ್ಟೇ ಆವರಿಸಿದ್ದರೂ ಅದು ಸಾಂಕೇತಿಕ. ಉಳಿದಂತೆ ಬಂಗಾಳದ ಬಹುತೇಕ ಸಾಮಾನ್ಯ ಮಹಿಳೆಯರ ಅವಸ್ಥೆ ಭಾರತದ ಇತರ ಭಾಗದ ಮಹಿಳೆಯರಿಗಿಂತ ಬಹಳ ಬೇರೆಯಲ್ಲ.

ಕಾಳಿಯು ಬೀಜಾಸುರನನ್ನು ಕೊಂದು ಮಾಡುವ ರಣರಂಗದಲ್ಲಿ ಮಾಡುವ ಉನ್ಮತ್ತ ನೃತ್ಯದಲ್ಲಿ ಶಿವನೆದೆಯ ಮೇಲೆ ಮೈಮರೆತು ಕಾಲಿಟ್ಟಿರಬಹುದು; ಆದರೆ ವರ್ತಮಾನದಲ್ಲಿ ಬಂಗಾಳದ ಮಹಿಳೆ ಪುರುಷ ಪ್ರಜ್ಞಾಪೂರ್ವಕ ಪದಾಘಾತದಿಂದ ಹೊರಬಂದಿಲ್ಲ.

ಬಂಗಾಳ ಮೂಲದ ಚಿಂತಕ ಆಶೀಶ್ ನಂದಿಯವರು, ಬಂಗಾಳದ ಸತಿಪದ್ಧತಿ ಕುರಿತ ತಮ್ಮದೊಂದು ಲೇಖನದಲ್ಲಿ, ಬಂಗಾಳದ ಸಮಾಜದಲ್ಲಿ ಹುಟ್ಟುತ್ತಿದ್ದ ಹೊಸ ಪುರುಷ ಪ್ರಧಾನ ಸಮಾಜ ಮತ್ತು ಸಾಂಪ್ರದಾಯಕ ಸ್ತ್ರೀತ್ವಗಳ ನಡುವಣ ಸಂಘರ್ಷವನ್ನು ವಿಶ್ಲೇಷಿಸುತ್ತಾರೆ; ಮಹಾಶ್ವೇತಾದೇವಿ ಅವರ ಪ್ರಸಿದ್ಧ `ಹಜಾರ್ ಚೌರಾಶಿರ್ ಮಾ` (1084ರ ತಾಯಿ) ಕಾದಂಬರಿಯಲ್ಲಿ ಮಗನನ್ನು ಕಳೆದುಕೊಂಡು ಹೆಣಕ್ಕಾಗಿ ಹುಡುಕುವ ತಾಯಿಯೊಬ್ಬಳ ಸಂಕಟದ ಕತೆಯನ್ನು ಚಿತ್ರಿಸುತ್ತಾರೆ.

ಇದನ್ನೆಲ್ಲ ನೋಡುವಾಗ, ತಮ್ಮ ಅಸ್ತಿತ್ವ ಮತ್ತು ಸ್ವಂತಿಕೆಯನ್ನು ಸಾಬೀತುಪಡಿಸಲು ಯತ್ನಿಸುವ ಸ್ತ್ರೀಜಗತ್ತಿನ ಎದೆಯ ಮೇಲೆ ಕಾಲಿಟ್ಟು ನಿಂತಿರುವ ಪುರುಷವಾದಿ ಸಮಾಜದಲ್ಲೇ, ಆಕೆಯನ್ನು `ಶಕ್ತಿ`ಯೆಂದು ಆರಾಧಿಸುವ ಆಚರಣೆಗಳು ಹೆಚ್ಚು ವಿಜೃಂಭಣೆಯಿಂದ ಜರುಗುತ್ತವೆಯೊ ಏನೋ ಎಂದು ಭಾಸವಾಗುತ್ತದೆ. ಬಂಗಾಳವನ್ನು ಕಾಳಿ ದುರ್ಗೆ ಮುಂತಾದ ಶಕ್ತಿದೇವತೆಗಳ ನಾಡೆಂದು ಕರೆಯಲಾಗುತ್ತದೆ. ಅದರ ರಾಜಧಾನಿ ಕೋಲ್ಕತ್ತೆಯ ಹೆಸರು ಬಂದಿದ್ದೇ `ಕಾಳಿಘಾಟ್` ಎಂಬ ಪದದಿಂದ.

ಇದನ್ನೆಲ್ಲ ನೋಡುವಾಗ, ತಮ್ಮ ಅಸ್ತಿತ್ವ ಮತ್ತು ಸ್ವಂತಿಕೆಯನ್ನು ಸಾಬೀತುಪಡಿಸಲು ಯತ್ನಿಸುವ ಸ್ತ್ರೀಜಗತ್ತಿನ ಎದೆಯ ಮೇಲೆ ಕಾಲಿಟ್ಟು ನಿಂತಿರುವ ಪುರುಷವಾದಿ ಸಮಾಜದಲ್ಲೇ, ಆಕೆಯನ್ನು `ಶಕ್ತಿ`ಯೆಂದು ಆರಾಧಿಸುವ ಆಚರಣೆಗಳು ಹೆಚ್ಚು ವಿಜೃಂಭಣೆಯಿಂದ ಜರುಗುತ್ತವೆಯೊ ಏನೋ ಎಂದು ಭಾಸವಾಗುತ್ತದೆ.

ಕಾಮೆಂಟ್‌ಗಳಿಲ್ಲ: