ಶುಕ್ರವಾರ, ಜುಲೈ 1, 2011

ಕುಲುಮೆ ಜತೆಗಿನ ಬದುಕು



ಬೆಳಗ್ಗೆ ಐದು ಗಂಟೆಗಾಗಲೆ ಎದ್ದು, ಲ್ಯಾಪ್ ಟಾಪ್ ಆನ್ ಮಾಡಿ ಲೇಖನವೊಂದನ್ನು ಟೈಪ್ ಮಾಡುತ್ತಾ ಕುಳಿತಿದ್ದೆ. ಐದು ಮುವತ್ತರ ಹೊತ್ತಿಗೆ ಜುರ್ರರ್ರಾ.. ಎನ್ನುವ ಶಬ್ದ ಕೇಳತೊಡಗಿತು. ಆಗ ಎದ್ದವನೇ ಶಬ್ದ ಬಂದ ಕಡೆಗೆ ನಡೆದೆ. ಅಲ್ಲಿ ಕಮ್ಮಾರ ಚಂದ್ರಪ್ಪ ಆಗಲೆ ಕುಲುಮೆ ಪೂಜೆ ಮಾಡಿ, ಕುಲುಮೆಯಲ್ಲಿ ಒಂದಷ್ಟು ಒಣ ಕಸ, ಚೂರುಪಾರು ಹಾಳೆ ಮುಂತಾದವನ್ನು ತುರುಕಿ ಬೆಂಕಿ ಕಡ್ಡಿ ಗೀರಿ, ಸುತ್ತಲೂ ಇದ್ದಿಲು ತುಂಬಿ..ಮೆಲ್ಲಗೆ ಪಂಕವನ್ನು ತಿರುಗಿಸತೊಡಗಿದ್ದ. ಆಗ ಜುರ್ರರ್ರಾ.. ಎನ್ನುವ ಶಬ್ದ ಮಲ್ಲಗೆ ನೀರವ ಮೌನವನ್ನು ಸೀಳಿ ಎಳೆ ಎಳೆಯಾಗಿ ಬರತೊಡಗಿತ್ತು. ಚಂದ್ರಪ್ಪನ ದಿನದ ಕಾಯಕ ಈ ಶಬ್ದದ ಸುಪ್ರಭಾತದೊಂದಿಗೆ ಆರಂಭವಾಗಿತ್ತು.



ನಾನು ಹೋದುದನ್ನು ನೋಡಿದ ಆತ ‘ಓ ಬಾರಪ್ಪ ನೀ ಯಾವಾಗ ಬಂದಿದ್ದೆ, ತಂಗಿ ಅರಾಮಿದಾಳ’ ಎಂದು ಕುಶಲೋಪರಿಯನ್ನು ವಿಚಾರಿಸಿದರು. ನಾನು ಹೂಂ..ಎಂದು ಕುಲುಮೆಯ ಪಕ್ಕ ಆತ ಬೆಂಕಿ ಹೊತ್ತಿಸುತ್ತಿದ್ದನ್ನು ನೋಡುತ್ತಾ ಕೂತೆ. ಸ್ವಲ್ಪ ಹೊತ್ತು ಆಗುತ್ತಿದ್ದಂತೆ ಹರಿಜನ ಭರಮಪ್ಪ ಒಂದೆರಡು ಕುಳ ತಂದ, ಪೂಜಾರ ಪಕ್ಕೀರಪ್ಪ ಕೊಡಲಿಯನ್ನು ಹಿಡಿದು ಅಣಿಯಲೆಂದು ತಂದ. ಹೀಗೆ ಒಬ್ಬೊಬ್ಬರು ನಿಧಾನಕ್ಕೆ ಸೇರುತ್ತಾ ಊರಿನ ಕುಶಲೋಪರಿಯ ಜತೆ ಕುಲುಮೆಗೆ ಜೀವಂತಿಕೆ ಬರತೊಡಗಿತು. ಕೆಲವರು ಕುಲುಮೆಯ ಬೆಂಕಿಯಲ್ಲಿ ಬೀಡಿ ಹಚ್ಚಿಕೊಂಡು ಹೊಗೆ ಬಿಡತೊಡಗಿದರು.



ಪಕ್ಕೀರಜ್ಜ ನನ್ನ ನೋಡುತ್ತಾ.. ಅರುಣಪ್ಪಾ..ನಿನ್ನೆ ನಮ್ಮ ದೇಶ ಗೆಲ್ತಂತೆ ಅಲಾ..ಟಿವ್ಯಾಗ ರಾತ್ರಿ ಹನ್ನೊಂದು ಗಂಟ್ಯಾಗ ಹೇಳಕತ್ತಿದ್ರು. ಎಂದು ಕೇಳಿದ. ನಾನು ಔದು ಎಂದು ತಲೆ ಅಲ್ಲಾಡಿಸಿದೆ. (ಹಿಂದಿನ ದಿನ ರಾತ್ರಿ ವಿಶ್ವಕಪ್ ಕ್ರಿಕೆಟ್ ನಲ್ಲಿ ೨೪.೦೩.೨೦೧೧ ಭಾರತ ಆಷ್ಟ್ರೇಲಿಯಾದ ವಿರುದ್ಧ ಐದು ವಿಕೆಟ್ ಗಳ ಜಯ ಗಳಿಸಿತ್ತು) ಉಳಿದವರು ಏನೂ ಅರ್ಥವಾಗದಂತೆ ಆ ವಿಷಯ ನಮಗೆ ಸಂಬಂಧಿಸಿದ್ದಲ್ಲ ಎನ್ನುವಂತೆ ನೋಡುತ್ತಿದ್ದರು. ತಕ್ಷಣ ಭರಮಪ್ಪ ..‘ಅಲ್ಲಪ್ಪಾ ಏನೋ ಪ್ರಳಯ ಆಗತತಿ ಅಂತ ಟೀವ್ಯಾಗ ಹೇಳತಿದ್ರಲ್ಲ ನಿಜ ಏನು? ಎಂದು ಕೇಳಿದ. ಆಗ ಎಲ್ಲರ ಕಿವಿ ನನ್ನ ಬಳಿ ತಿರುಗಿದವು. ಎಲ್ಲರ ಆಸಕ್ತಿ ನಾನು ಏನು ಹೇಳುತ್ತಿದ್ದೇನೆ ಎನ್ನುವ ಕಡೆಗೇ ಇತ್ತು. ನಾನು ನಿಧಾನಕ್ಕೆ ಮಾತು ಆರಂಭಿಸಿ ‘ವಿಜ್ಞಾನಿಗಳ ಪ್ರಕಾರ ನಮ್ಮ ಕಡೆ ಏನೂ ಅಗೊಲ್ಲ ಅಂತ ಹೇಳ್ಯಾರ, ಸಮುದ್ರದ ಹತ್ರ ಇದ್ದವರಿಗೆ ಸುನಾಮಿ ಲಕ್ಷಣಗಳು ಕಾಣಿಸಿಕೊಳ್ಬಹುದು’ ಅಂದೆ.



ಅದಕ್ಕೆ ಚಂದ್ರಪ್ಪ ತಕ್ಷಣ ಪ್ರತಿಕ್ರಿಯೆ ನೀಡಿ..‘ನಮಿಗೆ ಕುಡಿಯಾಕ ನೀರಿಲ್ಲ, ಇನ್ನ ನಮ್ಮನ್ನ ಮುಳುಗ್ಸಿ ಸಾಯ್ಸೋ ನೀರೆಲ್ಲಿಂದ ಬರ‍್ತಾತಿ ಬಿಡು’ ಎಂದಾಗ ಎಲ್ಲರ ಮುಖದಲ್ಲಿ ಸಣ್ಣದಾಗಿ ನಗು ಹುಕ್ಕಿತು. ಆಗ ಚಂದ್ರಪ್ಪನ ಮಕ್ಕಳು ಮಲ್ಲೇಶ್. ಕಾಳಪ್ಪ ಬಂದರು. ಮಲ್ಲೇಶ್ ಬಂದವನೇ ಅಪ್ಪನ ಕೆಲಸಕ್ಕೆ ಸಹಾಯಕನಾಗಿ ಕೆಲಸ ಮಾಡತೊಡಗಿದ. ನಾನು ಮಲ್ಲೇಶನ ಹತ್ತಿರ ಮಾತಿಗೆ ಕೂತೆ. ಕಾರಣ ಚಂದ್ರಪ್ಪನ ಕಿವಿ ಕೇಳುತ್ತಿಲ್ಲವಾದ್ದರಿಂದ ಆತನ ಜತೆ ಮಾತಾಡಿ ಆತನಿಂದ ಉತ್ತರ ಪಡೆಯುವುದು ಕಷ್ಟವಾಗಿತ್ತು.



ಚಂದ್ರಪ್ಪ ಕಮ್ಮಾರಿಕೆ ಮತ್ತು ಬಡಿಗಿತನ ಎರಡನ್ನು ಮೂವತ್ತು ವರ್ಷಗಳಿಂದ ಬಳ್ಳಾರಿ ಜಿಲ್ಲೆ ಕೂಡ್ಲಿಗಿ ತಾಲೂಕಿನ ಜೋಳದ ಕೂಡ್ಲಿಗಿಯಲ್ಲಿ ಮಾಡುತ್ತಾ ಬಂದಿದ್ದಾನೆ. ಈಗ ಆತನೊಂದಿಗೆ ಆತನ ಇಬ್ಬರು ಮಕ್ಕಳು ಅದೇ ವೃತ್ತಿಯನ್ನು ಮುಂದುವರಿಸುತ್ತಿದ್ದಾರೆ. ಕಮ್ಮಾರಿಕೆಗೆ ಒಂದೇ ಜಾತಿಗೆ ಸೀಮಿತವಾದ ಉದ್ಯೋಗವಲ್ಲ. ಅದು ಹಲವಾರು ಜಾತಿ ಧರ್ಮದವರನ್ನು ಒಳಗೊಂಡಿದೆ. ಹಾಗಾಗಿ ಒಂದೊಂದು ಊರಲ್ಲಿ ಬೇರೆ ಬೇರೆಯ ಜಾತಿಯವರು ಕಮ್ಮಾರಿಕೆಯನ್ನು ಮಾಡುತ್ತಾ ಬರುತ್ತಿದ್ದಾರೆ. ಕಮ್ಮಾರಿಕೆಯನ್ನು ಆಧರಿಸಿದ ರೈತಾಪಿ ಕೆಲಸಗಳಲ್ಲಿ ಕಮ್ಮಾರಿಕೆಯನ್ನು ನಿಲ್ಲಿಸುವಂತಹ ತೀವ್ರ ಬದಲಾವಣೆಗಳೇನು ಸಂಭವಿಸಿಲ್ಲ. ಹಾಗಾಗಿ ಜಾನಪದ ವಿದ್ವಾಂಸರು ವೃತ್ತಿ ಕಸಬುಗಳು ಅವನತಿಯ ಹಾದಿ ತಲುಪಿವೆ ಎನ್ನುವ ಮಾತು ಸ್ವಲ್ಪ ಮಟ್ಟಿಗೆ ಹುಸಿ ಎನ್ನಿಸಿತು.



ಬಹುತೇಕ ವೃತ್ತಿ ಕಸಬಿನಿಂದ ಸಂಕಷ್ಟ ಅನುಭವಿಸಿದವರು ಸಹಜವಾಗಿ ತಮ್ಮ ಮಕ್ಕಳು ಅದೇ ವೃತ್ತಿಯಲ್ಲಿ ಮುಂದುವರೆಯಲು ಇಷ್ಟಪಡುವುದಿಲ್ಲ. ಆದರೆ ಕಮ್ಮಾರ ಚಂದ್ರಪ್ಪ ಹೆಚ್ಚು ಓದದ ತನ್ನ ಮಕ್ಕಳನ್ನೂ ಕಮ್ಮಾರಿಕೆಯಲ್ಲಿಯೇ ಮುಂದುವರಿಯುವಂತೆ ತರಬೇತಿ ನೀಡುತ್ತಿದ್ದಾರೆ. ಚಂದ್ರಪ್ಪನದೇ ಮಾತಿನಲ್ಲಿ ಹೇಳುವುದಾದರೆ, ‘ಹಿಂದಿನ ಕಾಲ್ದಾಗ ಹಗ್ಲು ರಾತ್ರಿ ಕತ್ತಿ ಮಾಡಿದಂಗ ಮಾಡಿದ್ರು..ಹೊಟ್ಟಿಗೆ ಬಟ್ಟಿಗೆ ಸಾಕಾಗ್ತಿರ‍್ಲಿಲ್ಲ..ಈಗ್ಲೇ ವಾಸಿ ದಿನ ಪೂರ್ತಿ ದುಡಿದ್ರೆ ಕಡಿಮೆ ಅಂದ್ರೂ ಆರುನೂರಾದ್ರೂ ಆಗ್ತಾತಿ..ಈಗಿನ ದುಬಾರಿ ಕಾಲ್ದಾಗೂ ನಾವು ಅರಾಮಾಗಿದಿವಿ’ ಎಂದರು. ಇದು ಹೇಗೆಂದು ಕೇಳುತ್ತಾ ಹೋದಂತೆ ಕಮ್ಮಾರಿಕೆಯ ಹೊಸ ಚಲನೆಗಳು ಕಾಣತೊಡಗಿದವು.



ಇಂದು ಗ್ರಾಮೀಣ ಭಾಗದಲ್ಲಿ ಕೃಷಿ ಕೆಲಸಕ್ಕೆ ಟ್ರಾಕ್ಟರ್ ಮೇಲಿನ ಅವಲಂಬನೆ ಹೆಚ್ಚಾಗುತ್ತಿದೆ. ಟ್ರಾಕ್ಟರ್ ಮಡಕೆ ಹೊಡೆಯಲು, ಹರಗಲು ಬಳಸುವ ಕುಳಗಳು ಮೊಂಡಾದಾಗ ಅವುಗಳನ್ನು ಅಣಿದು ಚೂಪು ಮಾಡಲು ಕಮ್ಮಾರರ ಹತ್ತಿರವೆ ಬರಬೇಕು. ಒಂದು ಟ್ರಾಕ್ಟರ್ ಕುಳವನ್ನು ಅಣಿಯಲು ಕಮ್ಮಾರರು ಇನ್ನೂರ ಐವತ್ತು ರೂಪಾಯಿಯ ಚಾರ್ಜಮಾಡುತ್ತಾರೆ. ಅಂದರೆ ಹತ್ತಾರು ಎತ್ತಿನ ಮಡಕೆ ಕುಳ ಅಣಿಯುವುದರಿಂದ ಬರುವ ಹಣ ಒಂದು ಟ್ರಾಕ್ಟರ್ ಮಡಕೆ ಅಣಿಯುವುದರಿಂದ ಬರುತ್ತದೆ. ಅಂದರೆ ಅತ್ಯಾಧುನಿಕ ಯಂತ್ರವಾದ ಟ್ರಾಕ್ಟರ್ ಕೂಡ ಕಮ್ಮಾರನ ಕುಲುಮೆಯನ್ನು ಆಶ್ರಯಿಸಿರುವುದು ಇದರಿಂದ ತಿಳಿಯುತ್ತದೆ. ಹೀಗೆ ಅಧುನಿಕ ಎನ್ನುವ ಪರಿಕರಗಳು ಕುಲುಮೆಗೆ ಬರತೊಡಗಿರಿವುದರಿಂದ ಅದರ ಆದಾಯವೂ ಹೆಚ್ಚಿದೆ. ಹೀಗೆ ಸಾಂಪ್ರದಾಯಿಕ ವೃತ್ತಿ ಕಸಬುಗಳ ಹೊಸ ಚಲನೆಯನ್ನು ನೋಡುತ್ತಾ ಹೋದರೆ, ಅದರ ಆದಾಯದ ಹೊಸ ಮೂಲಗಳು ಹುಟ್ಟಿಕೊಂಡಿರುವುದು ಗೋಚರಿಸುತ್ತರದೆ


ಚಂದ್ರಪ್ಪ ಬದುಕಿನ ಆಸರೆಯಾದ ಕುಲುಮೆಯನ್ನು ದೇವರೆಂದೇ ನಂಬಿದ್ದಾರೆ. ತಮ್ಮ ಭಾವನೆಗಳನ್ನು ಕೆಲವು ನಂಬಿಕೆ ಆಚರಣೆಯ ಮೂಲಕ ವ್ಯಕ್ತಪಡಿಸುತ್ತಾರೆ. ದಿನಾಲು ಕುಲುಮೆಯಲ್ಲಿ ಬೆಂಕಿ ಹೊತ್ತಿಸುವ ಮೊದಲು ಸೂರ್ಯನಿಗೆ (ಪೂರ್ವದಿಕ್ಕಿಗೆ)ಪೂಜೆ ಮಾಡುತ್ತಾರೆ. ಅಮವಾಸ್ಯೆ ಹುಣ್ಣಿಮೆಯ ದಿನ ವಿಶೇಷ ಪೂಜೆ ಮಾಡುತ್ತಾರೆ. ದಸರಾ ಹಬ್ಬದಲ್ಲಿ ಕಮ್ಮಾರಿಕೆಯ ಎಲ್ಲಾ ಪರಿಕರಗಳನ್ನು ಇಟ್ಟು ಆಯುಧ ಪೂಜೆ ಮಾಡುತ್ತಾರೆ. ಆಗ ಒಂದು ವಾರಗಳ ಕಾಲ ಕುಲುಮೆಯಲ್ಲಿ ಬೆಂಕಿ ಹತ್ತಿಸುವುದಿಲ್ಲ. ಇದೊಂದು ರೀತಿಯ ವಾರ್ಷಿಕ ರಜೆ. ಕುಲುಮೆಯಲ್ಲಿ ಚಾನು ಬಿದ್ದರೆ, ಕೈ ಕಾಲು ಸುಟ್ಟರೆ ಏನಾದರೂ ಅಪಶಕುನವಾಗಿದೆ ಎನ್ನುವ ನಂಬಿಕೆ ಇವರಿಗಿದೆ.



ಒಂದೆಡೆ ಜನಸಾಮಾನ್ಯರ ಹೆಸರಲ್ಲಿ ಕೋಟಿ ಕೋಟಿ ರೂಗಳ ಯೋಜನೆಗಳನ್ನು ಆರಂಭಿಸಿ ಹಣ ದೋಚುವ ಬಂಡ ರಾಜಕಾರಣಿಗಳಿದ್ದರೆ, ಇನ್ನೊಂದೆಡೆ ಚಂದ್ರಪ್ಪನಂತಹ ಕಮ್ಮಾರರು ಕುಲುಮೆ, ಪಂಕ, ಚಕ್ರ, ಅಡಿಗಲ್ಲು, ಸುತ್ತಿಗಿ, ಇಕ್ಕಳ, ನೀರಬಾನಿ, ಮಸಗಲ್ಲು, ಚಾನು ಮುಂತಾದ ಪರಿಕರಗಳೊಂದಿಗೆ ನಿತ್ಯವೂ ಒಡನಾಡುತ್ತಾ ಬದುಕಿಗೆ ಹೊಸ ಚೈತನ್ಯವನ್ನು ಪಡೆಯುತ್ತಿರುತ್ತಾರೆ.

3 ಕಾಮೆಂಟ್‌ಗಳು:

siddha ಹೇಳಿದರು...

ಅರುಣ್, ಕುಲುಮೆಯೊಂದಿಗೆ ಕುದಿಯುವ ಕಮ್ಮಾರರ ಬದುಕಿನ ಸುಂದರ ನೋಟವನ್ನು ಹಿಡಿದಿಟ್ಟಿದ್ದೀರಿ. ಹಣ ಬರುವ ಮೂಲವನ್ನು ಹುಡುಕಿ ಭ್ರಷ್ಟತನದಿಂದ ಹಣ ನುಂಗುವವರಿಗಿಂತ ಕಮ್ಮಾರ ಚಂದ್ರಪ್ಪನ ಬದುಕು ಅನುಕರಣೀಯ ಹಾಗೂ ಪರಿಶುದ್ಧವಾಗಿದೆ. ಬಹುಶ: ಕುಲುಮೆಯಲ್ಲಿ ಕಾಯ್ದು ಕಮ್ಮಾರರು ಪರಿಶುದ್ಧರಾಗಿಯೇ ಇರುತ್ತಾರೇನೋ. ದುಡಿಮೆಯ ಮತ್ತೊಂದು ಮಗ್ಗುಲನ್ನೂ ಅಂದರೆ ಕಮ್ಮಾರಿಕೆಯ ಹೊಸ ಚಲನೆಗಳನ್ನೂ ಗುರುತಿಸಿರುವುದು ಈ ಲೇಖನದ ವೈಶಿಷ್ಟ್ಯತೆಯಾಗಿದೆ.-ಸಿದ್ಧರಾಮ ಹಿರೇಮಠ. ಕೂಡ್ಲಿಗಿ

ಅನಾಮಧೇಯ ಹೇಳಿದರು...

kammarara kulumeya badukannu avru niraaLavagisikoMdannu channaagi grahisiddiiri.
ii tarahada vrutti kasabugaLa badalaavaNe kuritu bareyiri,
-raghu, hassan

DVK ಹೇಳಿದರು...

ಮಾನ್ಯರೇ,
ಗೂಗಲ್‌ದಲ್ಲಿ ಹಾಗೇ ತಡಕಾಡುತ್ತಿದ್ದಾಗ ನಿಮ್ಮ ಬ್ಲಾಗ್ ಕಣ್ಣಿಗೆ ಬಿತ್ತು. ನಮ್ಮ ಕುಲಕಸುಬಿನ ಬಗ್ಗೆ ನೀವು ಬರೆದ ಲೇಖನ ನೋಡಿ ನನ್ನ ಬಾಲ್ಯದ ದಿನಗಳು ನೆನಪಿಗೆ ಬಂದವು. ತುಂಬಾ ಚನ್ನಾಗಿ ಬರದಿದ್ದೀರಾ. ಆದರೂ ಕೆಲವೆಡೆ ಇಂದು ಕಂಬಾರಿಕೆ ನಡೆಯುತ್ತಿಲ್ಲ. ಹೀಗಾಗಿ ನಮ್ಮಂತಹವರು ಕಮ್ಮಾರಿಕೆ ಗೊತ್ತಿದ್ದರೂ ಸುತ್ತಿಗೆ ಬಿಟ್ಟು ಪೆನ್ ಹಿಡಿಯಬೇಕಾಯಿತು. ಆದರೂ ಇವತ್ತಿಗೂ ಊರಿಗೆ ಹೋದರೆ ಕಾಳಮ್ಮನ ಮುಂದೆ ಕುಳಿತು ಏನಾದರೂ ಕಬ್ಬಿಣದ ಕೆಲಸ ಮಾಡಿದಾಗ ಮಾತ್ರ ಮನಸ್ಸಿಗೆ ಸಮಾಧಾನ ಅನ್ಸುತ್ತೆ.
ನಿಮ್ಮ ಲೇಖನ ನನ್ನ ಹಲವು ನೆನಪುಗಳಿಗೆ ಪುನರ್‌ಜನ್ಮ ನೀಡಿತು. ಧನ್ಯವಾದಗಳು.

ಡಿ.ವಿ. ಕಮ್ಮಾರ
ವರದಿಗಾರ
ಸಂಯುಕ್ತ ಕರ್ನಾಟಕ ಬೆಳಗಾವಿ