ಗುರುವಾರ, ಜೂನ್ 9, 2011

ಹಾಡು ಪಠ್ಯದಲ್ಲಿ ಓದು ಪಠ್ಯದ ನೆನಪು


ಡಾ.ಚಿಕ್ಕಣ್ಣ ಯಣ್ಣೆಕಟ್ಟೆ ಅವರು ಸಂಪಾದಿಸಿದ ‘ಬಂಡಿ ಬಂದಾವು ಬಾಳೆ ವನದಾಗೆ’ ಜನಪದ ಗೀತೆ ಸಂಗ್ರಹದ ಪುಸ್ತಕ. ಈ ಕೃತಿಗೆ ೨೦೧೦ ರ ಜಾನಪದ ಅಕಾಡೆಮಿ ಪ್ರಶಸ್ತಿ ಬಂದಿದೆ. ೧೬೩ ಪುಟದ ಈ ಪುಸ್ತಕದಲ್ಲಿ ೩೧ ಜನ ಜನಪದ ಗಾಯಕ, ಗಾಯಕಿಯರು ಹಾಡಿದ ೭೨ ಜನಪದ ಗೀತೆಗಳು, ೨೨ ಪುಟದ ದೀರ್ಘ ಪ್ರಸ್ತಾವನೆಯೂ, ಗೊರುಚ ಅವರ ಮುನ್ನುಡಿಯೂ ಇದೆ. ಈ ಕೃತಿಯನ್ನು ಸಿರಾದ ಗಡಿನಾಡ ಜಾನಪದ ಸಂಪರ್ಕಾಭಿವೃಧ್ಧಿ ಕೇಂದ್ರ ಪ್ರತಿಷ್ಠಾನ ಪ್ರಕಟಿಸಿದೆ.

ಚಿಕ್ಕಣ್ಣ ಅವರು ಹದಿನೈದಕ್ಕೂ ಹೆಚ್ಚಿನ ಜಾನಪದ ಕುರಿತಾದ ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಇದರಲ್ಲಿ ಸಂಪಾದನೆ ಮತ್ತು ಜಾನಪದ ಸಂಶೋಧನೆಗೆ ಸಂಬಂಧಿಸಿದವು. ಇದು ಚಿಕ್ಕಣ್ಣ ಅವರ ಜಾನಪದ ಕ್ಷೇತ್ರದ ದುಡಿಮೆ. ಜಾನಪದದಲ್ಲಿ ಕತೆ, ಗೀತೆ ಮುಂತಾದವುಗಳನ್ನು ಸಂಗ್ರಹಿಸಿ ಆ ಸಂಗ್ರಹದ ಸಾರವನ್ನು ಆಧರಿಸಿ ಚರ್ಚೆ ಮಾಡುವ ಸಾಂಪ್ರಾದಾಯಿಕ ಜಾನಪದ ವಿದ್ವತ್ತು ಕನ್ನಡದಲ್ಲಿದೆ. ಇಂತಹ ವಿದ್ವತ್ತಿನ ಮುಂದುವರಿದ ಭಾಗವಾಗಿ ಚಿಕ್ಕಣ್ಣ ಅವರ ಜಾನಪದ ಕೆಲಸಗಳು ನಡೆದಿವೆ. ಇಂತಹದ್ದೆ ವಿದ್ವತ್ತಿನ ಸಾರವನ್ನು ಹೀರಿ ಬಂದ ಪುಸ್ತಕ ‘ಬಂಡಿ ಬಂದಾವು ಬಾಳೆ ವನದಾಗೆ’.

ಇಲ್ಲಿನ ಸಂಗ್ರಹದ ಗೀತೆಗಳು ಲೇಖಕರು ಹೇಳುವಂತೆ ಎಂಟತ್ತು ವರ್ಷದ ಹಿಂದಿನವು, ಹಾಗಾಗಿ ಈ ಹಾಡುಗಳಲ್ಲಿ ಆಧುನಿಕ ಕಾಲದ ಚಲನೆ ಮಾಯವಾಗಿದೆ. ಚಿಕ್ಕಣ್ಣ ಅವರು ಜಾನಪದ ಕ್ಷೇತ್ರಕಾರ್ಯ ಮಾಡಿ ಇಂತಹ ಸಂಗ್ರಹದ ಕೆಲಸ ಮಾಡುವ ಅವರ ಶ್ರಮವನ್ನು ಗೌರವಿಸಬೇಕು. ತುಮಕೂರು ಜಿಲ್ಲೆಯನ್ನು ಆಧರಿಸಿದ ಅವರ ಜಾನಪದ ಬರಹಗಳು, ಇಲ್ಲಿನ ಸಾಂಸ್ಕೃತಿಕ ಪರಿಸರವನ್ನು ತಿಳಿಯಲು ನೆರವಾಗುತ್ತವೆ. ಈಗಾಗಲೆ ಇರುವ ಜಾನಪದ ತಿಳುವಳಿಕೆಗೆ ಚಿಕ್ಕಣ್ಣ ಅವರು (ಹತ್ರಲ್ಲಿ ಹನ್ನೊಂದ್ನೇದು ಎಂಬ ಗಾದೆಯಂತೆ)ಮತ್ತಷ್ಟು ಪರಿಕರಗಳನ್ನು ಸೇರಿಸುತ್ತಿದ್ದಾರೆ. ಇಂತಹ ಸಂಗ್ರಹದ ಕೆಲಸಕ್ಕೂ ವಿಮುಖರಾದ ಜಾನಪದ ವಿದ್ವಾಂಸರ ನಡುವೆ, ಚಿಕ್ಕಣ್ಣ ಈ ಕಾರಣಕ್ಕೆ ಮುಖ್ಯರಾಗುತ್ತಾರೆ. ಇದಕ್ಕಾಗಿ ಅವರು ಅಭಿನಂದನಾರ್ಹರು.

ಈ ಕೃತಿಗೆ ಸುದೀರ್ಘ ಪ್ರಸ್ತಾವನೆ ಇದೆ. ಇದು ಈತನಕದ ಜಾನಪದ ಗೀತೆಗಳ ಅದ್ಯಯನದ ತುಣುಕುಗಳನ್ನು ಉಲ್ಲೇಖಿಸಿ ಅದರ ಮುಂದುವರಿಕೆಯಂತಿದೆ. ಗೀತೆಗಳಲ್ಲಿರುವ ವಿಷಯಗಳನ್ನು ವಿಷಯವಾರು ವಿಂಗಡಿಸಿ ಚರ್ಚಿಸಿದ್ದಾರೆ. ಈ ಪ್ರಸ್ತಾವನೆ ಜಾನಪದ ಗೀತೆಗಳ ತಿಳುವಳಿಕೆಯನ್ನೇನು ವಿಸ್ತರಿಸುವುದಿಲ್ಲ, ಬದಲಾಗಿ ಹಳೆ ನಂಬಿಕೆಗಳಿಗೆ ಬಲ ಕೊಡುತ್ತದೆ. ಈ ಪುಸ್ತಕದ ನೆಪದಲ್ಲಿ ಕೆಲವು ಪ್ರಶ್ನೆಗಳನ್ನು ಚರ್ಚಿಸಲು ಸಾದ್ಯವಿದೆ. ಜನಪದ ಹಾಡು ಪರಂಪರೆಯ ಮೇಲೆ ಹಲವು ಜನಪ್ರಿಯ ಹಾಡು ಪರಂಪರೆಗಳು ಪ್ರಭಾವ ಬೀರಿವೆ. ಆಧುನಿಕ ಕಾಲದ ಸಂಗತಿಗಳು ಗೀತೆಯ ಒಳಹೊಕ್ಕು ಮನೆಮಾಡಿವೆ. ಅದು ಸಹಜ ಪ್ರಕ್ರಿಯೆ. ಇಂತಹ ಪ್ರಭಾವದ ಹಾಡುಗಳನ್ನು ಶುದ್ಧ ಜನಪದ ಗೀತೆಗಳಲ್ಲ ಎಂದು ತಿರಸ್ಕರಿಸಲಾಗುತ್ತದೆ. ಹಾಗದರೆ ಜಾನಪದ ನಿರಂತರ ಕ್ರಿಯಾಶೀಲವಾದುದು ಎಂಬ ನಂಬಿಕೆ ಸುಳ್ಳೆ? ಅದು ಸುಳ್ಳು ಎನ್ನುವುದಾದರೆ ಶುದ್ದ ಜನಪದ ಗೀತೆಗಳ ಕಲ್ಪನೆ ಬರುತ್ತದೆ. ಚಿಕ್ಕಣ್ಣ ಸಂಗ್ರಹಿಸಿದ ಹಾಡುಗಳನ್ನು ನೋಡಿದರೆ ಜಾನಪದ ಎನ್ನುವುದು ಜಡವಾದುದು ಎಂದು ಹೇಳಬಹುದು. ಹೀಗೆ ತಾತ್ವಿಕವಾಗಿ ಜಾನಪದದ ಜಡತೆಯ ಆಶಯವನ್ನು ದ್ವನಿಸುವ ಪುಸ್ತಕಕ್ಕೆ ಜಾನಪದ ಅಕಾಡೆಮಿ ಪುಸ್ತಕ ಪ್ರಶಸ್ತಿಯನ್ನು ಕೊಡುವುದನ್ನು ನೋಡಿದರೆ ಅಕಾಡೆಮಿಯ ಆಲೋಚನ ಕ್ರಮವೂ ಇದಕ್ಕಿಂತ ಭಿನ್ನವಾಗಿಲ್ಲ ಅನ್ನಿಸುತ್ತದೆ.

ಇಲ್ಲಿನ ಗೀತೆಗಳಲ್ಲಿ ಪ್ರಾದೇಶಿಕ ವಿವರಗಳು ಹೆಚ್ಚಿವೆ. ಆದರೆ ಜನಪದ ಗಾಯಕರ ವಯಕ್ತಿಕ ಬದುಕಿನ ನೋವು ನಲಿವು ಮಾಯವಾಗಿದೆ. ಈ ಕೃತಿಯ ಪ್ರಸ್ತಾವನೆಯಲ್ಲೂ ಕ್ಷೇತ್ರಕಾರ್ಯದ ಅನುಭವವಾಗಲಿ, ಹಾಡು ಪರಂಪರೆಗೆ ಜನಪದರು ಪ್ರತಿಕ್ರಿಯಿಸಿದ ಬಗೆಯಾಗಲಿ, ಬದಲಾದ ಕಾಲದಲ್ಲಿ ಜನಸಂಸ್ಕೃತಿಯಲ್ಲಿ ನಡೆದ ಪಲ್ಲಟಗಳ ಕುರಿತಾಗಲಿ ಇಲ್ಲಿ ಚರ್ಚಿಸಿಲ್ಲ. ಹಾಗಾಗಿ ಇಡೀ ಕೃತಿಯಲ್ಲಿ ವರ್ತಮಾನವೆ ಕಾಣೆಯಾದಂತಿದೆ. ಹಳೆಯ ಜನಪದ ಗೀತೆಗಳ ಸಂಗ್ರಹ ಓದಿದವರಿಗೆ ಇಲ್ಲಿನ ಗೀತೆಗಳು ಹೊಸತೆನ್ನಿಸದೆ, ಕೆಲವು ಭಿನ್ನ ಪಾಠಾಂತರಗಳಿವೆ ಅನ್ನಿಸುತ್ತದೆ.

ಈ ಕೃತಿಯಲ್ಲಿ ಓದು ಪಠ್ಯಗಳ ನೆನಪುಗಳಿವೆ. ವಿದ್ವಾಂಸರು ಶಿಷ್ಟ ಜಾನಪದವನ್ನು ಬೇರೆಬೇರೆಯಾಗಿ ನೋಡುವ ಪರಿಪಾಟವಿದೆ. ಆದರೆ ಮೌಖಿಕ ಪಠ್ಯದಲ್ಲಿಯೆ, ಓದು ಪರಂಪರೆಯನ್ನು ನೆನಪಿಸುವ ಸಂಗತಿಗಳು ಗಮನ ಸೆಳೆಯುತ್ತವೆ. ಈ ಬಗೆಯ ಓದು ಪಠ್ಯಗಳನ್ನು ನೆನಪಿಸುವ ಜನಪದ ಗೀತೆಗಳು ಇಲ್ಲವೆಂತಲ್ಲ, ಆದರೆ ಅದನ್ನು ಆಧರಿಸಿದ ಚಿಂತನೆ ಇಲ್ಲ. ಇದು ಹಾಡು ಪರಂಪರೆ ಮತ್ತು ಓದು ಪರಂಪರೆಯ ನಡುವಣ ಒಂದು ವಿಚಿತ್ರವಾದ ಕೊಡುಕೊಳೆ ನಡೆದಿರುವುದಕ್ಕೆ ಸಾಕ್ಷಿಯಂತಿದೆ. ಶಿಷ್ಟ ಕಾವ್ಯ ಬರೆದ ಕುಮಾರ ವ್ಯಾಸನನ್ನು ಪರಿಚಯಿಸುವ ಕಾವ್ಯವೆ ‘ಕುಮಾರವ್ಯಾಸನು ಹಾಡಿದನೆಂದರೆ..ಎಂದು ಆರಂಭವಾಗುವುದನ್ನು ಗಮನಿಸಬೇಕು. ಇಲ್ಲಿನ ಕೆಲವು ಗೀತೆಯ ತುಣುಕುಗಳನ್ನು ಗಮನಿಸಿ:

ಅಂಗಂದ ಮಾತ ಕೇಳೋಳೆ ಬೊಮ್ಮವ್ವ/ ಮಾರಪ್ಪಗೌಡನ ಕರಿಸೋಳೆ/ಹೆಣ್ಣು ಕೆಟ್ಟರೆ ತೌರುಮನೆಗೆ/ ಹೊನ್ನು ಕೆಟ್ಟರೆ ಅಕ್ಕಸಾಲಿಗನ ಮನೆಗೆ/ತೌರಿಗೊಂದು ಓಲೆಯನೆ ಬರೆಸ್ಯಾನೆ/ ಕಾಲಬೇಗ ತಳವಾರ ಹೋದಾನು/ ಏರಿಯ ಹಿಂದಿನ ಗರಿಯ ಓಲೆಯ ತರುತಾನೆ/ಮಾರಪ್ಪನ ಕೈಲಿ ಕೊಡುತಾನೆ/ಗರಿಯಲ್ಲಿ ಅಕ್ಷರವ ಬರೆದೋರೆ/ ಗರಿಯಲ್ಲಿ ಅಕ್ಷರವ ಏನೆಂದು ಬರೆದೋರೆ/ನಿಮ್ಮ ಮನೆಯ ಮಗಳು ಒಡವಿಗೆ ಹೋಗುತಾಳೆ/ಮಾರಪ್ಪಗೌಡ ತಳವಾರನ ಕೈಗೆ ಓಲೆಯ ಕೊಡುತಾನೆ(ಪುಟ-೧೩೪)

ನಿಮ್ಮ ಪುಸ್ತಕವ ತೆಗಿರಯ್ಯ ಜೋಯಿಸರೆ/ಕಂದಮ್ಮನಿಗೆ ಶಕುನಾವ ಕೇಳಬೇಕು/ಶುಕ್ರವಾರ ನಿಸ್ತ್ರಿ ಮೈನೆರೆದವಳೆ/ತಂದೋರ ಮನೆಗೆ ಜಯಜಯಾ/ಒಂದೆ ಕಂದಮ್ಮನ ಫಲವೈತೆ ಒಡವೀಗೆ/ ಹೋಗುತ್ತಾಳೆ ಹೋಗಿ ಬರೆದವಳೇ ಹಣೆಯಾಗೆ/ನನ್ನ ಬಾಳ ಹೆಣ್ಣಿಗೆ ಏನು ಕುಂದಾ ನುಡಿದಯ್ಯಾ/ ನಿಮ್ಮ ಪುಸ್ತಕವ ಬೆಂಕಿಗೆ ಹಾಕಿ ಚೆಂದ ಚೆಂದ ಉರುವಯ್ಯಾ/ಜೋಯಿಸರೇ ಮುಂದ ಬರುವುದ ಒಬ್ಬರೂ ಅರಿಯಾರು (ಪುಟ-೧೨೬)

ಇಲ್ಲಿನ ಉಲ್ಲೇಖಗಳನ್ನು ನೋಡಿದರೆ, ಬರಹ ಸಂವಹನ ಮಾದ್ಯಮವಾದ ಪಲ್ಲಟವನ್ನು ಮೌಖಿಕ ಪರಂಪರೆಯೆ ಹೇಳುತ್ತಿದೆ. ಅದೇ ಬರಹ ಜೋಯಿಸರ ಬಂಡವಾಳವಾದದ್ದನ್ನು ಗುರುತಿಸಲಾಗಿದೆ. ‘ಮುಂದ ಬರುವುದ ಒಬ್ಬರೂ ಅರಿಯಾರು’ ಎಂದು ಜೋಯಿಸರ ಜ್ಯೋತಿಷ್ಯವನ್ನೇ ಲೇವಡಿ ಮಾಡಿ ‘ಪುಸ್ತಕವ ಬೆಂಕಿಗೆ ಹಾಕಿ ಚೆಂದ ಚೆಂದ ಉರುವಯ್ಯಾ’ ಎನ್ನುವ ಪ್ರತಿರೋದ ಇಲ್ಲಿ ವ್ಯಕ್ತವಾಗಿದೆ. ಹೀಗೆ ಮಾತು ಮತ್ತು ಬರಹದ ಪಲ್ಲಟಗಳನ್ನು ಜನಪದ ಗೀತೆಗಳಲ್ಲಿ ಗುರುತಿಸಲು ಸಾದ್ಯವಿದೆ. ಚಿಕ್ಕಣ್ಣ ಅವರು ಜಾನಪದದ ಸಾಂಪ್ರದಾಯಿಕ ಅಧ್ಯಯನ ವಿಧಾನಗಳಿಂದ ಹೊರ ಬರದೆ, ಸಂಗ್ರಹದಂತಹ ಕೆಲಸಕ್ಕಿಂತ ಹೆಚ್ಚಿನದೇನನ್ನೂ ಅವರಿಂದ ನಿರೀಕ್ಷಿಸಲು ಸಾದ್ಯವಿಲ್ಲ.

ಕಾಮೆಂಟ್‌ಗಳಿಲ್ಲ: