ಶನಿವಾರ, ಜೂನ್ 4, 2011

ಜನಪದ ವೈದ್ಯಕ್ಕೆ ಹೊಸ ಆಯಾಮ ನೀಡಿದ ಲಕ್ಷ್ಮಣ್


(ಜನಪದ ವೈದ್ಯ ಲಕ್ಷ್ಮಣ್ )

ಜನಪದ ವೈದ್ಯವನ್ನು ಅವಲಂಬಿಸುವವರ ಸಂಖ್ಯೆ ಇಂದು ಇಳಿಮುಖವಾಗುತ್ತಿದೆ. ಕಾರಣ ನಾಟಿ ವೈದ್ಯರ ಸಂಖ್ಯೆಯೂ ಕಡಿಮೆಯಾಗುತ್ತಿದೆ. ಆಧುನಿಕ ವೈದ್ಯ ನಾಟಿ ವೈದ್ಯಕ್ಕಿಂತ ನಂಬಿಕೆಯನ್ನು ಇಮ್ಮಡಿಗೊಳಿಸಿಕೊಂಡಿದೆ. ಕಾರಣ ನಾಟಿ ವೈದ್ಯದ ನೆರವು ಪಡೆಯುವವರು ಅನಕ್ಷರಸ್ತರು, ಹಳ್ಳಿಗರು ಆಧುನಿಕತೆಗೆ ತೆರೆದುಕೊಂಡಿಲ್ಲದವರು ಎಂಬ ಗುಮಾನಿಗಳು ಹುಟ್ಟಿಕೊಂಡಿವೆ. ಹಾಗಾಗಿ ನಾಟಿ ವೈದ್ಯ ನಂಬಿಕೆಗೆ ಅರ್ಹವಲ್ಲವೆಂಬ ನಂಬಿಕೆ ನಗರಿಗರಲ್ಲಿ, ಮತ್ತು ಹಳ್ಳಿಗಳ ಅಕ್ಷರಸ್ತ ಸಮುದಾಯಗಳಲ್ಲಿ ಬಲವಾಗುತ್ತಿದೆ.

ಈಗ ನಾಟಿ ವೈದ್ಯ ಸಂಪೂರ್ಣ ನಾಶವಾಗಿದೆ ಅಂತಲ್ಲ. ಕಾಮಲೆ, ಜಾಂಡಿಸ್, ಸರ್ಪಹುಣ್ಣು, ಮೂಲವ್ಯಾಧಿ ಮುಂತಾದ ರೋಗಗಳಿಗೆ ನಾಟಿ ವೈದ್ಯ ಆಧುನಿಕ ವೈದ್ಯಕ್ಕೆ ಸವಾಲಾಗಿದೆ. ಹಾಗಾಗಿ ಇಂದು ನಾಟಿ ವೈದ್ಯ ಎಲ್ಲ ರೋಗಕ್ಕೂ ಮದ್ದಾಗದೆ, ಕೆಲವೇ ಕೆಲವು ರೋಗಗಳಿಗೆ ಮದ್ದಾಗಿ ಪ್ರಚಲಿತ ಕಾಲದಲ್ಲಿ ಮುಂದುವರಿಯುತ್ತಿದೆ. ಇಂದು ವ್ಯಾಪಕ ಕ್ಷೇತ್ರ ಕಾರ್ಯ ಮಾಡಿದರೆ, ಜನಪದ ವೈದ್ಯದ ಹೊಸ ಮುಂದುವರಿಕೆ ಹೇಗೆಂಬುದನ್ನು ತಿಳಿಯಬಹುದಾಗಿದೆ.

(ಶ್ರೀದೇವಿ ಮೂಳೆ ಚಿಕಿತ್ಸಾಲಯ)

ಈಚೆಗೆ ಚಳ್ಳಕೆರೆಯಲ್ಲಿರುವ ಒಬ್ಬ ಜನಪದ ಮೂಳೆ ವೈದ್ಯನನ್ನು ಬೇಟಿಯಾದೆ. ಆತ ಮುರಿದ, ಒಳಕಿದ ಮೂಳೆಯನ್ನು ಸರಿಪಡಿಸುವ, ನರಸಮಸ್ಯೆಯನ್ನು ವಾಸಿ ಮಾಡುವಂತಹ ಒಬ್ಬ ಯುವ ಜನಪದ ವೈದ್ಯ ಲಕ್ಷ್ಮಣ್ ಅವರಿಗೆ ಈಗ ಮುವತ್ನಾಲ್ಕು ವರ್ಷ. ಚಿತ್ರದುರ್ಗ ಜಿಲ್ಲೆ, ಚಳ್ಳಕೆರೆ ತಾಲೂಕಿನ ಪರುಷರಾಂಪುರ ಓಬಳಿಯ ಪಿ. ಮಹಾದೇವಪುರದ ನಾಟಿ ವೈದ್ಯ ನರಸಿಂಹಪ್ಪ ಅವರ ಮಗ. ಈತ ಜನಪದ ವೈದ್ಯದ ಹಿಂದೆ ಬಿದ್ದ ಕತೆ ಕುತೂಹಲಕಾರಿಯಾಗಿದೆ. ಲಕ್ಷ್ಮಣವರು ಪಿಯುಸಿ ಪೇಲಾಗಿ ನಗರಕ್ಕೆ ಹೋಗಿ ಏನಾದರೂ ಸಾದಿಸಿಬಿಡುತ್ತೇನೆ ಎಂಬ ಉತ್ಸಾಹದಲ್ಲಿ ಎಲ್ಲಾ ಹಳ್ಳಿ ಹುಡುಗರಂತೆ ಉದ್ಯೋಗ ಅರಸಿ ಬೆಂಗಳೂರಿಗೆ ಹೋದರು. ಅಲ್ಲಿ ತರಾವರಿ ಕೆಲಸ ಮಾಡಿಕೊಂಡು ಅಲೆದರು. ಒಂದು ದಿನ ಆಕಸ್ಮಿಕವಾಗಿ ಅಪಘಾತದಲ್ಲಿ ಕಾಲು ಮುರಿದುಕೊಂಡು ಮನೆಗೆ ಬಂದರು. ಆಗ ಲಕ್ಷ್ಮಣ್ ತಂದೆ ತನ್ನ ಮಗನ ಮುರಿದ ಕಾಲನ್ನು ನೀವಿ ಮೊದಲಿನ ಸ್ಥಿತಿಗೆ ತಂದರು. ಕಾಲು ಸರಿಯಾಗುವ ಹೊತ್ತಿಗೆ ಲಕ್ಷ್ಮಣ್ ನಾನೆ ಯಾಕೆ ಅಪ್ಪ ಮಾಡುವ ಮೂಳೆ ವೈದ್ಯವನ್ನು ಕಲಿಯಬಾರದು ಅನ್ನಿಸಿದೆ, ಅದನ್ನು ಮನಸ್ಸಿಗೆ ತಂದುಕೊಂಡು ಶ್ರದ್ಧೆಯಿಂದ ಕಲಿಯತೊಡಗಿದ್ದಾನೆ. ನಂತರ ಲಕ್ಷ್ಮಣ್ ಸ್ವತಃ ಮೂಳೆ ಸಂಬಂಧಿ ರೋಗಗಳಿಗೆ ಚಿಕಿತ್ಸೆ ನೀಡಲು ಶುರುಮಾಡಿಕೊಂಡಿದ್ದಾನೆ.



ಆಗ ಲಕ್ಷ್ಮಣ್‌ಗೆ ತನ್ನ ಓದು ಸಹಾಯಕ್ಕೆ ಬಂದಿದೆ. ತಾನು ಅಪ್ಪ ಕಲಿತದ್ದಷ್ಟೆ ಅಲ್ಲದೆ, ಮೂಳೆ ನರಕ್ಕೆ ಸಂಬಂದಿಸಿದ ಪುಸ್ತಕಗಳನ್ನು ಓದಿ ಹೆಚ್ಚಿನ ತಿಳುವಳಿಕೆಯನ್ನು ಪಡೆದಿದ್ದಾನೆ. ಅಂತೆಯೇ ಆರ್ಥೋಪೆಡಿಕ್ಸ ವೈದ್ಯರುಗಳನ್ನು ಭೇಟಿ ಮಾಡಿ ಮೂಳೆ ನರದ ಬಗ್ಗೆ ತನ್ನ ಸಮಸ್ಯೆಗಳನ್ನು ಚರ್ಚಿಸಿ ತಿಳಿದುಕೊಂಡಿದ್ದಾನೆ. ಆಯುರ್ವೇದದಲ್ಲಿ ಮೂಳೆ ಮತ್ತು ನರ ಸಮಸ್ಯೆಗೆ ನೀಡುವ ಚಿಕಿತ್ಸೆ ಬಗ್ಗೆ ಅರಿತಿದ್ದಾರೆ. ಹೀಗೆ ಹಲವು ನೆಲೆಗಳಿಂದ ಪಡೆದ ಜ್ಞಾನ ಅವರನ್ನು ಒಬ್ಬ ಪರಿಪಕ್ವ ನಾಟಿ ವೈದ್ಯರನ್ನಾಗಿ ರೂಪಿಸಿದೆ.

ಚಳ್ಳಕೆರೆಯ ವೀರಭದ್ರೇಶ್ವರ ದೇವಸ್ಥಾನದ ಪಕ್ಕ ಪುಟ್ಟದೊಂದು ರೂಮಿನಲ್ಲಿ ಶ್ರೀದೇವಿ ಮೂಳೆ ಚಿಕಿತ್ಸಾಲಯವನ್ನು ಆರಂಭಿಸಿ ಇಲ್ಲಿಗೆ ಹದಿಮೂರು ವರ್ಷಗಳೆ ಕಳೆದಿವೆ. ಈತನಕ ಲಕ್ಷ್ಮಣ್ ಕನಿಷ್ಠ ಇಪ್ಪತ್ತೈದು ಸಾವಿರಕ್ಕೂ ಹೆಚ್ಚಿನ ರೋಗಿಗಳನ್ನು ತನ್ನ ಚಿಕಿತ್ಸೆಯಿಂದ ವಾಸಿ ಮಾಡಿದ್ದಾರೆ. ತಾತ ಈರಜ್ಜನಿಂದ ಮಗ ನರಸಿಂಹಪ್ಪ ಮೂಳೆ ವೈದ್ಯವನ್ನು ಕಲಿತಿದ್ದಾರೆ, ನಂತರ ಇವರ ಮಗ ಲಕ್ಷ್ಮಣ್ ವಂಶಪಾರಂಪರಿಕವಾಗಿ ಬಂದ ನಾಟಿ ವೈದ್ಯವನ್ನು ಈಗ ಮುಂದುವರಿಸಿದ್ದಾರೆ. ನಾಟಿ ವೈದ್ಯದಲ್ಲಿ ಕಾಲಕ್ಕೆ ತಕ್ಕ ಕೆಲವು ಬದಲಾವಣೆಗಳನ್ನು ಮಾಡಿಕೊಂಡಿದ್ದಾರೆ. ಹಾಗಾಗಿ ಚಳ್ಳಕೆರೆಯ ಆರ್ಥೋಪೆಡಿಕ್ಸ ಡಾಕ್ಟರುಗಳಿಗಿಂತ ಲಕ್ಷ್ಮಣ್ ಬಿಡುವಿಲ್ಲದೆ ಮೂಳೆ ರೋಗಿಗಳಿಗೆ ಚಿಕಿತ್ಸೆ ನೀಡುವುದರಲ್ಲಿ ನಿರತರಾಗಿರುತ್ತಾರೆ. ಮುಖ್ಯವಾಗಿ ಇಲ್ಲಿಗೆ ಚಿಕಿತ್ಸೆಗೆ ಬರುವುದು ಹಳ್ಳಿಗರು, ಕೃಷಿಕರು, ಆರ್ಥಿಕವಾಗಿ ಇಂದುಳಿದ ಬಡವರು. ಲಕ್ಷಣ್ ಚಿಕಿತ್ಸೆಗಾಗಿ ವಿಧಿಸುವ ಮೊತ್ತ ಕೂಡ ಜನಸಾಮಾನ್ಯರಿಗೆ ನಿಲುಕುವಂತದ್ದು. ಹಾಗಾಗಿ ಈ ವೈದ್ಯಕೀಯ ಸೇವೆಗೆ ಒಂದು ಮಾನವೀಯ ಆಯಾಮವೂ ಇದೆ. ಇದು ಜನಪದ ವೈದ್ಯದ ಬಗ್ಗೆಯ ಜತೆ ಹೊಸ ನಂಬಿಕೆಯನ್ನು ಹುಟ್ಟಿಸಿದ್ದರ ಫಲ.

ಇಂದು ಜನಪದ ವೈದ್ಯಕ್ಕೆ ಮರುಜೀವ ನೀಡುವ ಅಗತ್ಯವಿದೆ. ಹಾಗಾಗಿ ಲಕ್ಷ್ಮಣ್ ಅಂತವರು ಜನಪದ ವೈದ್ಯದ ಮುಂದುವರಿಕೆಗೆ ಮಾದರಿಯಾಗಿದ್ದಾರೆ. ಇಂತವರನ್ನು ಹುಡುಕಿ ಅವರ ಅನುಭವವನ್ನು ಆಧರಿಸಿ ಜನಪದ ವೈದ್ಯವನ್ನು ಸುಧಾರಿಸಬೇಕಿದೆ. ಈ ಕೆಲಸವನ್ನು ಜಾನಪದ ಅಕಾಡೆಮಿ ಮತ್ತು ಜಾನಪದ ವಿಶ್ವವಿದ್ಯಾಲಯ ಕೈಗೆತ್ತಿಕೊಳ್ಳಬೇಕಿದೆ.

3 ಕಾಮೆಂಟ್‌ಗಳು:

ಅನಾಮಧೇಯ ಹೇಳಿದರು...

nice..janapada vydykke maru jeeva needuva agatyavide. PRAKASH

Dr.Prakash G. Khade ಹೇಳಿದರು...

Tumbaa Chennagide.Namma naduvina nijavaada vyadyare janapada vyadyaru.evarannu ulisikollabekaagide.

Ragu Kattinakere ಹೇಳಿದರು...

ರೋಗಿಗೆ ಗುಣವಾಗುವುದು ಮುಖ್ಯ, ವಿಧಾನ ಗೌಣ. ನಾಟಿವೈದ್ಯರಲ್ಲಿನ ಕಲೆ, ತಿಳುವಳಿಕೆ ಆಧುನಿಕ ವೈದ್ಯ ಪದ್ದತಿಯನ್ನನುಸರಿಸುವವರಿಗೆ ದೊರಕುವ೦ತೆ ಸಿದ್ದವಾದ ಕೌಶಲಗಳು ವೈದ್ಯಗ್ರ೦ಥಗಳಿಗೆ ಸೇರ್ಪಡೆಯಾಗಬೇಕು. ಆದರೆ ಬಡವರು ನಾಟಿವೈದ್ಯರಲ್ಲಿ ಹೋಗಿ ಸಾಯುವುದು, ಮೂಳೆ ವಕ್ರವಾಗುವುದು ಅತಿಸಾಮಾನ್ಯ. ನಾಟಿವೈದ್ಯಮಾಡುವ ಸ್ವಾತ೦ತ್ರ್ಯ ಇರಬೇಕಾದರೂ ಅದರ ಮಿತಿ ಮತ್ತು ಸಮಸ್ಯೆಗಳ ತಿಳುವಳಿಕೆ ಜನರಿಗೂ ಮತ್ತು ನಾಟಿವೈದ್ಯರಿಗೂ ಬರುವ೦ತೆ ಮಾಡುವುದು ಮುಖ್ಯ. ನಾಟಿ ವೈದ್ಯ ಉದ್ದಾರ ಮಾಡಲು ಹೋಗಿ, ಬಡವರು ಹೆಪಟೈಟಿಸ್ ರೋಗಕ್ಕೆ ಕಾಮಾಲೆಯ ಕೊರಡು ತೆಯ್ದುತಿ೦ದು ಪ್ರಾಣಕಳೆದುಕೊಳ್ಳುವ೦ತಾಗಬಾರದು.