ಬುಧವಾರ, ಮೇ 11, 2011

ಜಾನಪದ ಸಮ್ಮೇಳನ ಹುಟ್ಟಿಸಿದ ಪ್ರಶ್ನೆಗಳು

(ಈ ಬರಹ 12.05.2011 ರ ಪ್ರಜಾವಾಣಿ ಸಂಗತ ಕಾಲಂ ನಲ್ಲಿ ಪ್ರಕಟವಾಗಿದೆ. ಮೊದಲನೆಯದಾಗಿ ಪ್ರಜಾವಾಣಿ ಸಂಪಾದಕ ವರ್ಗಕ್ಕೆ ಧನ್ಯವಾದಗಳು. ಈ ಬರಹ ಓದಿ ತರಾವರಿ ಪ್ರತಿಕ್ರಿಯೆಗಳು ಬಂದವು. ಹೆಚ್ಚಿನವು ಮೆಚ್ಚಿಗೆ ಸೂಚಿಸಿದವು.ಇನ್ನು ಕೆಲವು ಇಷ್ಟು ಒರಟಾಗಿ ಬರೆಯಬಾರದಿತ್ತು ಎನ್ನುವಂತಹ ಮಾತುಗಳು. ಇರಲಿ ನನಗೆ ಅನ್ನಿಸಿದ್ದನ್ನು ಪ್ರಾಮಾಣಿಕವಾಗಿ ಬರೆದಿದ್ದೇನೆ ಎಂದಷ್ಟೆ ನಾನೀಗ ಹೇಳಬಯಸುವುದು.-ಅರುಣ್)


ಈಚೆಗೆ ಬೀದರಿನಲ್ಲಿ ನಡೆದ ಮೊದಲ ಅಖಿಲ ಭಾರತ ಜಾನಪದ ಸಮ್ಮೇಳನ ಹೆಚ್ಚು ಸುದ್ದಿಯಾಗಲಿಲ್ಲ. ನಾಲ್ಕು ದಿನದ ಸಮ್ಮೇಳನದಲ್ಲಿ ಎಪ್ಪತ್ತಕ್ಕೂ ಹೆಚ್ಚು ಜಾನಪದ ವಿದ್ವಾಂಸರು, ನೂರಕ್ಕೂ ಹೆಚ್ಚು ಜನಪದ ಕಲಾ ತಂಡಗಳು ಭಾಗವಹಿಸಿದ್ದವು. ಅಂತೆಯೇ ಹೊರ ರಾಜ್ಯದ ಕಲಾವಿದರೂ ವಿದ್ವಾಂಸರೂ ಭಾಗಿಯಾಗಿದ್ದರು. ಹಾಗಾಗಿ ಈ ಸಮ್ಮೇಳನದಲ್ಲಿ ಕರ್ನಾಟಕದ ಮತ್ತು ಹೊರರಾಜ್ಯಗಳ ಜಾನಪದ ಪರಿಸರದ ಪರಿಚಯವಾಯಿತು. ಜೊತೆಗೆ ಕೆಲವು ಮುಖ್ಯ ಪ್ರಶ್ನೆಗಳನ್ನು ಹುಟ್ಟಿಸಿತು.

ಇಂದು ಕರ್ನಾಟಕದಲ್ಲಿ ಜಾನಪದ ವಿದ್ವತ್ತು ಅಷ್ಟು ಚಲನಶೀಲವಾಗಿಲ್ಲ. ಹಿಂದೆ ಜಾನಪದ ವಿದ್ವತ್ತು ಅಂದರೆ ಕೇವಲ ಸಂಗ್ರಹ ಎನ್ನುವ ಧೋರಣೆ ಇತ್ತು. ಈ ಧೋರಣೆಯ ಕಾರಣಕ್ಕೆ ಒಂದೆರಡು ಜಾನಪದ ಸಂಗ್ರಹದ ಪುಸ್ತಕ ಪ್ರಕಟಿಸಿದವರು ಕೂಡ ಜಾನಪದ ವಿದ್ವಾಂಸರಾಗಿ ಮಾನ್ಯತೆ ಪಡೆದರು. ಈಗ ಅಂತಹ ವಿದ್ವಾಂಸರ ಸಂಖ್ಯೆಯೇ ಜಾನಪದ ಕ್ಷೇತ್ರದಲ್ಲಿ ಹೆಚ್ಚಾಗಿದೆ. ಹಾಗಾಗಿ ಇರುವುದನ್ನು ಸಂಗ್ರಹಿಸಬೇಕು, ನಶಿಸುತ್ತಿರುವ ಜಾನಪದವನ್ನು ಉಳಿಸಬೇಕು ಎನ್ನುವ ಆಲೋಚನಾ ಕ್ರಮದಿಂದ ಕನ್ನಡದ ಜಾನಪದ ಚಿಂತನೆ ತುಂಬಾ ದೂರವನ್ನು ಕ್ರಮಿಸಿಲ್ಲ. ಆದ್ದರಿಂದ ಜಾನಪದವನ್ನು ಉಳಿಸಬೇಕು ಎನ್ನುವ ಕೂಗು ಈಗಲೂ ದೊಡ್ಡದಾಗಿ ಕೇಳುತ್ತಿರುತ್ತದೆ. ಈ ಧ್ವನಿ ಜಾನಪದ ಸಮ್ಮೇಳನದಲ್ಲಿಯೂ ಮೊಳಗಿತು.

ವಾಸ್ತವವೆಂದರೆ ಆಯಾ ಕಾಲದ ಒಡನಾಡಿಯಾಗಿ ಹುಟ್ಟಿದ ಜಾನಪದವನ್ನು ಬದಲಾದ ಕಾಲದಲ್ಲಿ ಮೊದಲಿನಂತೆ ಉಳಿಸಬೇಕು ಎನ್ನುವ ಹಟ ಕೂಡ ಜಾನಪದದ ಮೂಲಭೂತವಾದಿ ಗುಣ. ಅಂತಹ ಗುಣ ಕರ್ನಾಟಕದ ಜಾನಪದ ವಿದ್ವತ್ತಿನಲ್ಲಿ ಢಾಳಾಗಿದೆ. ಇದರ ಕುರಿತು ಸಮ್ಮೇಳನದಲ್ಲಿ ಚರ್ಚೆಯಾಗಲಿಲ್ಲ.ಬಹುಪಾಲು ಜಾನಪದ ಸಾಹಿತ್ಯ ಮತ್ತು ಜನಪದ ಪರಂಪರೆಯಲ್ಲಿ ಜಾತಿ ವ್ಯವಸ್ಥೆಯನ್ನು ಉಳಿಸುವ ಬಿಗಿಯಾದ ಕಟ್ಟುಗಳಿವೆ. ಜಾತಿ ಜಾತಿಗಳ ನಡುವೆ ತರತಮ ಭಾವನೆಗಳನ್ನು ಮತ್ತೆ ಜೀವಂತಗೊಳಿಸುವ ಆಚರಣೆಗಳಿವೆ. ಅಂತೆಯೇ ಹೆಣ್ಣನ್ನು ದಮನಗೊಳಿಸುವ ರಚನೆಗಳಿವೆ. ಇದಕ್ಕೆ ಅಪವಾದವಾದ ಕೆಲವು ಸಂಗತಿಗಳೂ ಜಾನಪದದಲ್ಲಿಯೇ ಇವೆ.

ಹೀಗಿರುವಾಗ ಜಾನಪದವನ್ನು ಉಳಿಸಬೇಕು ಎನ್ನುವವರಿಗೆ ಇಂತಹ ಪ್ರಶ್ನೆಗಳು ಕಾಡದಿರುವುದು ಆಶ್ಚರ್ಯ. ಜಾನಪದವನ್ನು ಉಳಿಸಬೇಕು ಎನ್ನುವ ಭಾವನಾತ್ಮಕ ಹೇಳಿಕೆಗಳು ಪರೋಕ್ಷವಾಗಿ ಜಾತಿವ್ಯವಸ್ಥೆಯನ್ನೂ, ಕೆಳಜಾತಿ, ಮತ್ತು ಹೆಣ್ಣನ್ನು ದಮನಗೊಳಿಸುವಿಕೆಯನ್ನೂ ಜೀವಂತಗೊಳಿಸುವುದನ್ನು ಪೋಷಿಸುತ್ತವೆ.ಜಾನಪದ ಒಂದು ಪ್ರತ್ಯೇಕ ವಿಷಯವಾದರೂ ಅದು ಬೇರೆ ಬೇರೆ ಅಧ್ಯಯನ ಶಿಸ್ತಿನ ಜತೆ ಒಡನಾಟ ಮತ್ತು ಕೊಡು ಕೊಳೆಯಿಂದ ಅದರ ಅರ್ಥವ್ಯಾಪ್ತಿ ಹಿಗ್ಗಿಸಿಕೊಂಡಿದೆ.

ಆದರೆ ಇಡೀ ಸಮ್ಮೇಳನದಲ್ಲಿ ಹಾಗೆ ಅಂತರಶಿಸ್ತೀಯ ಕ್ಷೇತ್ರದಲ್ಲಿ ಜಾನಪದವನ್ನು ದುಡಿಸಿಕೊಂಡು ಚಿಂತನೆ ನಡೆಸಿದ ಕನ್ನಡದ ವಿದ್ವಾಂಸರನ್ನು ಈ ಸಮ್ಮೇಳನ ಆಹ್ವಾನಿಸಿರಲಿಲ್ಲ. ಇದು ಒಂದು ಅಧ್ಯಯನ ಶಿಸ್ತಿಗೆ ಭದ್ರವಾಗಿ ಬೇಲಿ ಹಾಕಿಕೊಂಡು ಬೇರೆಯವರು ಬರದಂತೆ ತಡೆಯುವಂತಿತ್ತು. ಹಾಗೆಯೇ ಮಹಿಳಾ ಅಧ್ಯಯನ ಕಾರ್ತಿಯರ ಭಾಗವಹಿಸುವಿಕೆಯೂ ಕೂಡ ಬಡವಾಗಿತ್ತು. ಇನ್ನು ಜಾನಪದ ಕ್ಷೇತ್ರವನ್ನು ಗಂಭೀರವಾಗಿ ಪರಿಗಣಿಸಿ ಅಧ್ಯಯನ ಕ್ಷೇತ್ರಕಾರ್ಯವನ್ನು ಮಾಡುತ್ತಿರುವ ಯಾವುದೇ ಜಾನಪದ ಯುವ ವಿದ್ವಾಂಸರನ್ನು ಈ ಸಮ್ಮೇಳನ ಸೇರಿಸಿಕೊಂಡಿರಲಿಲ್ಲ. ಇವೆಲ್ಲವೂ ಜಾನಪದ ಅಧ್ಯಯನ ಕ್ಷೇತ್ರವನ್ನು ಹೊಸ ಕಾಲ, ಹೊಸ ಸಂಗತಿಗಳ ಕಾರಣದಿಂದಲೂ ಹೊಸ ಜಾನಪದ ಹುಟ್ಟುತ್ತಿದೆ.

ಈ ಆಲೋಚನೆ ಕನ್ನಡದಲ್ಲಿ ಇನ್ನೂ ಹೇಳಿಕೆ ರೂಪದಲ್ಲಿದೆ. ಹೊಸ ಕಾಲದ ಜಾನಪದ, ಕಥೆ ಗೀತೆ ಲಾವಣಿಯ ರೂಪದಲ್ಲಿ ಹುಟ್ಟುತ್ತಿಲ್ಲ. ಬದಲಾಗಿ ಅದು ಹೊಸ ರೂಪಗಳಲ್ಲಿದೆ. ಅಂತಹ ರೂಪಗಳು ಈ ಕಾಲದ ಕೇಡುಗಳನ್ನೂ ಅದರ ಅಪಾಯಗಳನ್ನೂ ಹೇಳುತ್ತಿವೆ. ಆದರೆ ಅಂತಹವುಗಳನ್ನು ಜಾನಪದ ವಿದ್ವಾಂಸರು ಗಮನಿಸುತ್ತಿಲ್ಲ. ಇಂತಹ ಹೊತ್ತಲ್ಲಿ ಕರ್ನಾಟಕದಲ್ಲಿ ಜಾನಪದ ವಿಶ್ವವಿದ್ಯಾಲಯ ಸ್ಥಾಪನೆಯಾಗಿದೆ. ಇದು ಭಾರತದಲ್ಲಿ ಮೊದಲನೆಯದು. ಈ ಸಮ್ಮೇಳನದಲ್ಲಿ ಈ ಜಾನಪದ ವಿವಿಯ ಸ್ಥಾಪನೆ ಒಂದು ಚಾರಿತ್ರಿಕ ಘಟನೆ ಎನ್ನುವ ಸಂಭ್ರಮ ವ್ಯಕ್ತವಾಯಿತು. ಅಂತೆಯೇ ಕೆಲವರು ಜಾನಪದ ವಿವಿಯನ್ನು ಕಟ್ಟುವ ಬಗ್ಗೆ ಸಲಹೆಗಳನ್ನು ನೀಡಿದರು.

ಜಾನಪದ ವಿವಿಯ ವಿಶೇಷಾಧಿಕಾರಿಗಳಾದ ಅಂಬಳಿಕೆ ಹಿರಿಯಣ್ಣನವರು ಜಾನಪದ ವಿವಿಯನ್ನು ಜನತಾ ವಿಶ್ವವಿದ್ಯಾಲಯವನ್ನಾಗಿ ರೂಪಿಸುವ, ಸಮಾನತೆಯ ಆಧಾರದಲ್ಲಿ ಸಮತಾ ವಿಶ್ವವಿದ್ಯಾಲಯವನ್ನಾಗಿಸುವ ಕನಸುಗಳನ್ನು ಹೇಳಿಕೊಂಡರು.ಇವರ ಹೇಳಿಕೆಗಳು ನಿಜವಾದರೆ ನಿಜಕ್ಕೂ ಜಾನಪದ ವಿವಿಯದು ಒಳ್ಳೆಯ ಆರಂಭ. ಆದರೆ ಜಾನಪದ ಕ್ಷೇತ್ರಕ್ಕೆ ಬೇಲಿ ಹಾಕಿಕೊಂಡು ಕಾಯುವ ಗುಣದಿಂದ ವಿವಿ ಬಿಡಿಸಿಕೊಳ್ಳಬೇಕಿದೆ.

ಇಂದು ಭ್ರಷ್ಟಾಚಾರದ ಬಗ್ಗೆ ವ್ಯಾಪಕ ಚರ್ಚೆಯಾಗುತ್ತಿದೆ. ಸಮ್ಮೇಳನದ ಸರ್ವಾಧ್ಯಕ್ಷರಾದ ದೇಜಗೌ ಅವರು ತಮ್ಮ ಮಗ ಶಶಿಧರ ಪ್ರಸಾದ್ ಅವರ ಭ್ರಷ್ಟಾಚಾರವನ್ನು ಸಮರ್ಥಿಸಿಕೊಂಡು, ಪವಿತ್ರ ಉಪವಾಸ ಸತ್ಯಾಗ್ರಹನ್ನು ಅಪವಿತ್ರ ಕೆಲಸಕ್ಕೆ ಬಳಸಿಕೊಂಡಿದ್ದರು. ಆದರೆ ಅವರ ಹಿರಿತನವನ್ನೇ ಆಧರಿಸಿ ಜಾನಪದ ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ನೇಮಿಸಿದ್ದು ಸಹ ಒಳ್ಳೆಯ ನಿರ್ಧಾರವಲ್ಲ.ಸಮ್ಮೇಳನದ ಮೊದಲ ದಿನ ಇಡೀ ಜಾನಪದ ಕಲಾಲೋಕ ದೇಜಗೌ ಅವರನ್ನು ಮೆರವಣಿಗೆಯಲ್ಲಿ ಮೆರೆಸಿತು. ಅಂದರೆ ಭ್ರಷ್ಟಾಚಾರವನ್ನು ಸಮರ್ಥಿಸುವ ಪ್ರಯತ್ನ ಮಾಡಿದವರನ್ನು ಜಾನಪದ ಕಲೆಗಳು ಮೆರೆಸುವಂತೆ ಮಾಡುವುದು ಸಹಾ ಕನ್ನಡ ಜಾನಪದ ವಿದ್ವತ್ತಿನ ಅಸೂಕ್ಷ್ಮತೆಗೆ ನಿದರ್ಶನ.

ಚಾರಿತ್ರಿಕ ಮುಖ್ಯ ಘಟನೆಯಾಗಿ ಅಖಿಲ ಭಾರತ ಜಾನಪದ ಸಮ್ಮೇಳನ ಸಂಭವಿಸಿದ್ದಕ್ಕೆ ಗೊ.ರು.ಚನ್ನಬಸಪ್ಪ ಅವರನ್ನು ಅಭಿನಂದಿಸಬೇಕು. ಆದರೆ ಇಡೀ ಸಮ್ಮೇಳನವನ್ನು ರೂಪಿಸುವಲ್ಲಿ ಅವರು ಎಡವಿದ್ದಾರೆ. ಬೀದರ್‌ನಲ್ಲಿ ‘ವೋಚರ್’ ಹೆಸರಲ್ಲಿ ಕುಖ್ಯಾತಿ ಪಡೆದ ವ್ಯಕ್ತಿಯೊಬ್ಬರನ್ನು ಸಮ್ಮೇಳನದ ಸಂಘಟನೆಯ ಕೆಲಸಕ್ಕೆ ಆಯ್ಕೆ ಮಾಡಿದ್ದು ಸರಿಯಾಗಲಿಲ್ಲ. ಈ ಕಾರಣದಿಂದಾಗಿಯೇ ಸಮ್ಮೇಳನ ಅವ್ಯವಸ್ಥೆಯ ಆಗರವೇ ಆಗಿತ್ತು. ಈ ಸಮ್ಮೇಳನಕ್ಕಾಗಿ ಮುಂಜೂರಾದ ಹಣದ ಮೊತ್ತ ಮತ್ತು ಈ ಸಮ್ಮೇಳನದ ವ್ಯವಸ್ಥೆಯನ್ನು ನೋಡಿದರೆ ಲಕ್ಷಗಳಷ್ಟು ಹಣವನ್ನು ಸಮ್ಮೇಳನದ ಹೆಸರಲ್ಲಿ ಗುಳುಂ ಮಾಡಿರುವ ಸಾಧ್ಯತೆ ಇದೆ. ಸರಳ ಸಜ್ಜನಿಕೆಯ ಗೊ.ರು.ಚ ಜಾನಪದ ಅಕಾಡೆಮಿಯ ಹಣವನ್ನು ಪ್ರಾಮಾಣಿಕವಾಗಿ ವಿನಿಯೋಗಿಸಿರಬಹುದು, ಆದರೆ ಈ ಸಮ್ಮೇಳನದ ಹೆಸರಲ್ಲಿ ಬೀದರ್‌ನಲ್ಲಿ ಎತ್ತಿದ ಹಣದ ವಿನಿಯೋಗದ ಮೇಲೆ ಅವರ ನಿಯಂತ್ರಣ ತಪ್ಪಿಹೋಗಿದೆ. ಹಾಗಾಗಿಯೇ ಜಾನಪದ ಕಲಾವಿದರು, ವಿದ್ವಾಂಸರು, ಆಯೋಜಕರು ಕೊಟ್ಟ ಕೆಟ್ಟ ಊಟವನ್ನೇ ಉಂಡು, ಕೆಟ್ಟ ವಸತಿಯಲ್ಲೇ ಉಳಿದು ಮರಳಬೇಕಾಯಿತು.

ಸಮಾರೋಪದಲ್ಲಿ ಬಿ.ಎ.ವಿವೇಕ ರೈ ಅವರು ‘ದ್ವೀಪಗಳಂತೆ ಬದುಕುವ ವಿದ್ವಾಂಸರುಗಳಿಗೆ ಜನಪದರ ಸಮುದಾಯಿಕತೆ ಬಗ್ಗೆ ಮಾತನಾಡುವ ಅರ್ಹತೆ ಇಲ್ಲ’ ಎನ್ನುವಂತಹ ಮಾತುಗಳನ್ನಾಡಿದರು. ಇದು ಈ ಹೊತ್ತಿನ ವಿದ್ವತ್ ವಲಯಕ್ಕೆ ಹಿಡಿದ ಕನ್ನಡಿ. ಜಾನಪದ ಸಮ್ಮೇಳನ ಮುಗಿದು ಚರಿತ್ರೆಯಲ್ಲಿ ದಾಖಲಾಗಿದೆ. ಆದರೆ ಅದು ಉಳಿಸಿಹೋದ ಪ್ರಶ್ನೆಗಳು ಮಾತ್ರ ನನ್ನಂತವರನ್ನು ಕಾಡುತ್ತಿವೆ.

1 ಕಾಮೆಂಟ್‌:

~rAGU ಹೇಳಿದರು...

ಜವರೆಗೌಡರು ಜಾನಪದ ಕವಿಗಳೇ? ಮುಖ್ಯವಾಹಿನಿಯ ಸಾಹಿತ್ಯದ ಸಮ್ಮೇಳನಗಳಿಗೆ ಬೇರೆಯವರನ್ನು ಮೂಸಿನೋಡುವ ಪರಿಪಾಠವೂ ಇಲ್ಲ. ಹಾಗಿರುವಾಗ ಜಾನಪದ ಕಲಾವಿದರನ್ನೋ ಕವಿಗಳನ್ನೋ ಏಕೆ ಆಯ್ಕೆಮಾಡಬಾರದು?