ಬುಧವಾರ, ಮೇ 4, 2011

ಗುಳೆಲಕ್ಕಮ್ಮ ಎಂಬ ಜಾತ್ರೆಯೂ, ಪಟ್ಟಣ ಖಾಲಿಯಾಗುವ ಪ್ರಕ್ರಿಯೆಯೂ

-ಸಿದ್ಧರಾಮ ಹಿರೇಮಠ.

(ಕೂಡ್ಲಿಗಿ ಪಟ್ಟಣದಲ್ಲಿ ಗುಳೆಲಕ್ಕಮ್ಮನ ಜಾತ್ರೆಯಂದು ಪಟ್ಟಣ ತೊರೆಯುತ್ತಿರುವ ಜನತೆ)

ಇಡೀ ಪಟ್ಟಣವೇ ಖಾಲಿಯಾಗುವ ವಿಶೇಷ ಗುಳೆಲಕ್ಕಮ್ಮನ ಜಾತ್ರೆ ಇತ್ತೀಚೆಗೆ ಬಳ್ಳಾರಿ ಜಿಲ್ಲೆಯ ಕೂಡ್ಲಿಗಿಯಲ್ಲಿ ಸಂಭ್ರಮದಿಂದ ಜರುಗಿತು. ಜಾತ್ರೆಯಂದು ಎಲ್ಲೆಲ್ಲಿಂದಲೋ ಬಂದು ಊರು ಸೇರಬೇಕಾದ ಜನ, ಊರ ದೇವತೆಯೊಂದಿಗೆ ಊರನ್ನೇ ಬಿಟ್ಟರು. ಇದರೊಂದಿಗೆ ಇಡೀ ಪಟ್ಟಣವೇ ಖಾಲಿಯಾಯಿತು. ಕಳೆದ ಹಲವಾರು ದಶಕಗಳಿಂದ ಅನೂಚಾನವಾಗಿ, ಸಂಪ್ರದಾಯದಂತೆ ನಡೆದುಕೊಂಡು ಬಂದಿರುವ ಈ ಜಾತ್ರೆಯ ದಿನ ಪಟ್ಟಣದಲ್ಲಿ ಒಂದು ನರಪಿಳ್ಳೆ ಅಥವಾ ಸಾಕುಪ್ರಾಣಿಗಳಾವವೂ ಕಣ್ಣಿಗೆ ಬೀಳುವುದಿಲ್ಲ. ಇಡೀ ಊರು ಬಿಕೋ ಅನ್ನುತ್ತಿತ್ತು. ಇಲ್ಲಿ ಯಾವುದೇ ರೀತಿಯ ಕರ್ಫ್ಯೂ ವಿಧಿಸದಿದ್ದರೂ ಜನತೆ ತಮ್ಮ ಮನೆಗಳಿಗೆ ಬೀಗ ಹಾಕಿ ಊರ ಹೊರಗೆ ತೋಟಗಳಲ್ಲಿ ನೆಮ್ಮದಿಯಾಗಿ ಸೇರಿದರು.

(ಕೂಡ್ಲಿಗಿ ಪಟ್ಟಣದಲ್ಲಿ ಗುಳೆಲಕ್ಕಮ್ಮನ ಜಾತ್ರೆಯಂದು ಪಟ್ಟಣ ತೊರೆಯುತ್ತಿರುವ ಜನತೆ)

ಗುಳೆಲಕ್ಕಮ್ಮನ ಜಾತ್ರೆಯ ಹೆಸರೇ ಸೂಚಿಸುವಂತೆ ಇಡೀ ಊರಿನ ಜನರು ಒಂದು ದಿನದ ಮಟ್ಟಿಗೆ ಗುಳೆ ಹೋಗುತ್ತಾರೆ. ಊರನ್ನು ಖಾಲಿ ಮಾಡುವುದರಿಂದ ಊರು ಸ್ವಚ್ಛವಾಗಿ, ಜಾನುವಾರುಗಳಿಗೆ, ಜನತೆಗೆ ಯಾವುದೇ ರೀತಿಯ ಕಾಯಿಲೆಗಳು ಬರಲಾರವೆಂಬುದು ಜನಪದರ ನಂಬಿಕೆ. ಹಿಂದೆ ಪ್ಲೇಗ್ ಮಾರಿ ಬರುತ್ತಿದ್ದ ಸಂದರ್ಭಗಳನ್ನು ನಾವಿಲ್ಲಿ ನೆನೆಯಬಹುದಾಗಿದೆ. ಆಗ ಇಡೀ ಗ್ರಾಮಗಳೇ ಖಾಲಿಯಾಗಿ ಹೊರಭಾಗದಲ್ಲಿ ಟೆಂಟ್ ಹಾಕಿಕೊಂಡು ವಾಸ ಮಾಡುತ್ತಿದ್ದರು. ಪ್ಲೇಗ್ ಮಾರಿ ಹೋದರೂ ಈ ಆಚರಣೆ ಸಾಂಪ್ರದಾಯಿಕವಾಗಿ ಉಳಿದುಕೊಂಡೇ ಬಂದಿರುವುದು ಇದರ ವಿಶೇಷ.

(ಕೂಡ್ಲಿಗಿ ಪಟ್ಟಣದಲ್ಲಿ ಗುಳೆಲಕ್ಕಮ್ಮನ ಜಾತ್ರೆಯಂದು ಪಟ್ಟಣ ತೊರೆಯುತ್ತಿರುವ ಜನತೆ)

ಜಾತ್ರೆ ಆರಂಭದ ಮುನ್ನ ದಿನ ರಾತ್ರಿ ದೇವಿಯನ್ನು ಪಟ್ಟಣದ ಊರಮ್ಮ ಬಯಲಿನಲ್ಲಿರುವ ಗುಳೆಲಕ್ಕಮ್ಮನ ಕಟ್ಟೆಯ ಮೇಲೆ ದೇವಿಯನ್ನು ತಂದು ಕೂಡಿಸಲಾಯಿತು. ಮರುದಿನ ಬೆಳಗಿನ ಜಾವ ೩ ಗಂಟೆಯಿಂದ ಪಟ್ಟಣ ಮಹಿಳೆಯರೆಲ್ಲ ದೇವಿಗೆ ಉಡಿಯನ್ನು(ಕಾಯಿ, ಅಕ್ಕಿ, ಬೇಳೆ, ಬೆಲ್ಲ, ಹಸಿರುಬಳೆ, ದಕ್ಷಿಣೆ ತುಂಬಿದ ಮೊರ) ತೆಗೆದುಕೊಂಡು ಹೋಗಿ ಆರ್ಪಿಸಿದರು. ಬೆಳಿಗ್ಗೆ ೮ ಗಂಟೆಗೆ ಬಂದಂತಹ ದವಸ ಧಾನ್ಯಗಳನ್ನು ಊರಿನ ಪ್ರಮುಖರ‍್ಲೆಲ ಸೇರಿ ಬೇರ್ಪಡಿಸಿದರು. ಈ ಕಾರ್ಯಕ್ರಮ ಮುಗಿಯುವ ಹೊತ್ತಿಗೆ ಪಟ್ಟಣದಲ್ಲಿ ಎಲ್ಲ ಮನೆಗಳು ಖಾಲಿಯಾಗ್ದಿದವು. ನಂತರ ಸಕಲ ವಾದ್ಯಗಳೊಂದಿಗೆ ಗುಳೆಲಕ್ಕಮ್ಮ ಊರಲ್ಲಿ ಒಂದು ಸುತ್ತು ಹಾಕಿ ಬಂದಳು. ಪಟ್ಟಣದಲ್ಲಿ ಯಾರೂ ಇಲ್ಲ ಎಂಬುದನ್ನು ಖಚಿತಪಡಿಸಿಕೊಂಡ ನಂತರ ಊರ ಬಾಗಿಲಿಗೆ ಬೇಲಿಯನ್ನು ಹಾಕಲಾಯಿತು.
(ಗುಳೆಲಕ್ಕಮ್ಮನ ಜಾತ್ರೆಯಂದು ಅಜ್ಜಿಯನ್ನು ಕರೆದೊಯ್ಯುತ್ತಿರುವ ದೃಶ್ಯ)

ಲಕ್ಕಮ್ಮನು ಊರ ಹೊರಗೆ ಹೋಗುವಾಗ ಊರಿನ ಆಯಗಾರರ ಮನೆಯವರು ದೇವಿಯ ಜೊತೆಗೆ ತಮಗೆ ಬೇಕಾದ ಸಾಮಾನುಗಳನ್ನು ಕಟ್ಟಿಕೊಂಡ ಪುಟ್ಟಿಯನ್ನು ತಲೆಯ ಮೇಲೆ ಹೊತ್ತುಕೊಂಡು ಹೊರಟರು. ಊರಮ್ಮನ ಬಾವಿಯ ಹಾದಿಯಲ್ಲಿ ಹೊರಟ ಗುಳೆಲಕ್ಕಮ್ಮನನ್ನು ಊರ ಹೊರಗೆ ಹಾಕಿರುವ ಪೌಳಿಗಳಲ್ಲಿ ಹಾದು ಪಟ್ಟಣದಿಂದ ಸುಮಾರು ೪ ಕಿ.ಮೀ. ದೂರದಲ್ಲಿರುವ ಗೋವಿಂದಗಿರಿ ಬಳಿ ಇರುವ ಅಲದ ಮರದ ಬಳಿ ಸ್ಥಾಪಿಸಲಾಯಿತು. ಬಾಣಂತಿಯರು, ಅಂಗವಿಕಲರು, ಮುದುಕರು, ಸಾಕು ಪ್ರಾಣಿಗಳು ಸೇರಿದಂತೆ ಒಂದನ್ನು ಬಿಡದೇ ಮನೆಗಳಿಗೆ ಬೀಗ ಹಾಕಿಕೊಂಡು ಎಲ್ಲವನ್ನೂ ತಮ್ಮೊಂದಿಗೆ ಕರೆದುಕೊಂಡು ಬೆಳಿಗ್ಗೆ ಊರನ್ನು ಖಾಲಿ ಮಾಡಿದರು.
(ಗುಳೆಲಕ್ಕಮ್ಮನ ಜಾತ್ರೆಯಂದು ಬಿಕೋ ಎನ್ನುತ್ತಿರುವ ಪಟ್ಟಣದ ಪ್ರಮುಖ ಬೀದಿಗಳು)

ತಮ್ಮೊಂದಿಗೆ ಬೇಕಾಗುವ ಸರಕು-ಸಾಮಾನುಗಳು, ಆಡುಗೆ ಮಾಡಲು ಬೇಕಾಗುವ ಪಾತ್ರೆ-ಪಡುಗಗಳುನ್ನು ಕಟ್ಟಿಕೊಂಡು ಊರನ್ನು ಖಾಲಿ ಮಾಡಿದರು. ಹೀಗೆ ಗುಳೆ ಹೊರಟ ಜನ ಊರ ಹೊರೆಗಿನ ತೋಟಗಳಲ್ಲಿ, ತಮ್ಮ ಸ್ವಂತ ತೋಟಗಳಲ್ಲಿ ಅಥವಾ ತಮಗೆ ಅನುಕೂಲವಾದ ಸ್ಥಳಗಳಲ್ಲಿ ಬಿಡಾರವನ್ನು ಹಾಕಿಕೊಂಡು, ಅಡುಗೆ ಮಾಡಿ, ಸುತ್ತಮುತ್ತಲಿನ ಊರಿನ ಜನರನ್ನು, ತಮ್ಮ ಸ್ನೇಹಿತರು, ಸಂಬಂಧಿಕರೊಂದಿಗೆ ಊಟ ಮಾಡಿ ಜಾತ್ರೆಯ ಸಂಪ್ರದಾಯದಂತೆ ನಡೆದುಕೊಂಡರು.
(ಗುಳೆಲಕ್ಕಮ್ಮನ ಜಾತ್ರೆಯಂದು ಪಟ್ಟಣದ್ಲಲಿ ಸಾಕು ಪ್ರಾಣಿಗಳನ್ನೂ ತಮ್ಮೊಂದಿಗೆ ಕರೆದೊಯ್ಯಲಾಗುತ್ತದೆ)

ಮತ್ತೆ ಗೋಧೂಳಿ ಸಮಯಕ್ಕೆ ದೇವಿಯನ್ನು ಪಟ್ಟಣಕ್ಕೆ ಕರೆತರಲಾಯಿತು. ಪಟ್ಟಣಕ್ಕೆ ಬರುವಾಗ ಗುಳೆ ಹೋದ ಜನರೆಲ್ಲ ದೇವಿಯ ಹಿಂದೆಯೇ ಬರುವುದರೊಂದಿಗೆ ಜಾತ್ರೆ ಪೂರ್ಣಗೊಂಡಿತು. ಗುಳೆಲಕ್ಕಮ್ಮನ ಜಾತ್ರೆಯಂದು ಇಡೀ ಪಟ್ಟಣ ಜನಸಂಚಾರವಿಲ್ಲದೆ ಬಿಕೋ ಅನ್ನುತ್ತಿತ್ತು. ಬಸ್‌ಗಳ, ಇತರ ವಾಹನಗಳ ಸಂಚಾರ ವಿರಳವಾಗಿತ್ತು. ಬ್ಯಾಂಕ್, ಕಚೇರಿಗಳು ಎಂದಿನಂತೆ ಕಾರ್ಯನಿರ್ವಹಿಸಿದವಾದರೂ ಜನಸಂಪರ್ಕವಿರಲಿಲ್ಲ. ಖಾಲಿಯಾಗಿರುವ ಪಟ್ಟಣದಲ್ಲಿ ಮುಂಜಾಗ್ರತೆಯಾಗಿ ಪೊಲೀಸ್‌ರು ಗಸ್ತು ತಿರುಗುವ ವ್ಯವಸ್ಥೆಯನ್ನೂ ಮಾಡಲಾಗಿತ್ತು.
(ಗುಳೆಲಕ್ಕಮ್ಮನ ಜಾತ್ರೆಯಂದು ಬಿಕೋ ಎನ್ನುತ್ತಿರುವ ಪಟ್ಟಣದ ಪ್ರಮುಖ ಬೀದಿಗಳು)

1 ಕಾಮೆಂಟ್‌:

DR.Prakash Khade ಹೇಳಿದರು...

Aatmiyare,
Siddaram Hiremata avara lekhanavu Chitragala aadhaaradinda hecchu Priyavenisitu.uru bittu hogi marali baruvalli e habbadinda ondu begeyalli Bhandavy besuvuttade.Dhanyavaadagalu.-Dr. Prakash Khade