ಬುಧವಾರ, ಜನವರಿ 12, 2011

ಊರಿಗೆಷ್ಟು ಹೆಸರು ?

ಪ್ರೊ.ಕೆ.ವಿ.ನಾರಾಯಣ. (ಕೆ.ವಿ. ನಾರಾಯಣ ಅವರು ನಿರ್ವಹಿಸುತ್ತಿರುವ ಮತ್ತೊಂದು ಬ್ಲಾಗ್ ‘ಪದಗತಿ’(http://padagati.blogspot.com) . ಇವರು ಈ ಬ್ಲಾಗ್ ನಲ್ಲಿ ಕನ್ನಡದ ಪದಗತಿಯ ಚಲನೆಯ ಬೇರೆ ಬೇರೆ ನೆಲೆಗಳನ್ನು ಹುಡುಕುತ್ತಿದ್ದಾರೆ. ಊರಿಗೆಷ್ಟು ಹೆಸರು ಅನ್ನುವ ಬರಹ ಕೂಡ ಅಂತಹ ಹುಡುಕಾಟದ್ದೆ. ಈ ಪುಟ್ಟ ಬರಹ ಊರಿನ ಹೆಸರ ಚರಿತೆಯಂತೆ ಬೆಳಯುತ್ತಾ ಹೋಗಿದೆ. ಇಲ್ಲಿ ಹೆಸರ ಚರಿತೆ ಸದ್ಯದ ಕಾಲದ ತನಕವೂ ಚಾಚಿಕೊಂಡಿದೆ. ನೀವೊಮ್ಮೆ ಓದಿ.- ಅರುಣ್) ಊರಿಗೆಷ್ಟು ಹೆಸರು? ನಾಡಿನ ತಿಳಿದ ಮಂದಿ ಊರುಗಳ ಹೆಸರು ಬದಲಾಯಿಸುವ ಉಮೇದನ್ನು ತೋರುತ್ತಿದ್ದಾರೆ.ಇದರಿಂದ ನಾಡಿನ ಜನರಿಗೆ ತಮ್ಮತನವನ್ನು ಕಾಯ್ದುಕೊಳ್ಳುವ ದಾರಿ ಸಿಗುತ್ತದೆ ಎನ್ನುತ್ತಿದ್ದಾರೆ. ಬೇರೆಯವರು ಬದಲಾಯಿಸಿದ ಹೆಸರನ್ನು ನಾವು ಮತ್ತೆ ಮೊದಲಿನಂತೆ ಮಾಡುವುದರಿಂದ ಕನ್ನಡದ ಚಹರೆಯನ್ನು ಕಾಯ್ದುಕೊಂಡಂತೆ ಆಗುವುದೆಂದು ಹೇಳುತ್ತಿದ್ದಾರೆ. ಹೀಗೆ ಹೆಸರು ಬದಲಾಯಿಸಬೇಕಾದ ಊರುಗಳ ಪಟ್ಟಿಯನ್ನು ಜನರು ತಮ್ಮಪಾಡಿಗೆ ತಾವು ತಯಾರಿಸುತ್ತಿದ್ದಾರೆ. ಈ ಹೊತ್ತಿನಲ್ಲಿ ಕೊಂಚ ಈ ಬಗ್ಗೆ ಬೇರೊಂದು ಕಡೆಯಿಂದ ನೋಡುವುದು ಆಗುವಂತಿದ್ದರೆ ಹಾಗೆ ಮಾಡಬೇಕಲ್ಲವೇ? ನಾಡಿನ ಊರುಗಳಿಗೆ ಯಾರು ಹೆಸರನ್ನಿಟ್ಟರೋ ಯಾರಿಗೂ ಗೊತ್ತಿಲ್ಲ. ಆ ಊರಿನಲ್ಲಿ ನೆಲೆ ನಿಂತವರಿಗೂ ಗೊತ್ತಿರುವುದಿಲ್ಲ. ಆದರೆ ಎಲ್ಲ ಊರುಗಳ ಹೆಸರಿಗೂ ಒಂದೊಂದು ಕತೆ ಇರುತ್ತದೆ. ಕೆಲವೊಮ್ಮೆ ಒಂದಕ್ಕಿಂತ ಹೆಚ್ಚು ಕತೆಗಳೂ ಇರುತ್ತವೆ. ಈ ಕತೆಗಳು ಹೆಸರಿಟ್ಟ ಮೇಲೆ ಹುಟ್ಟಿದವು. ಅದಕ್ಕಾಗಿ ಬೇರೆ ಬೇರೆ ಕತೆಗಳು ಒಂದೇ ಹೆಸರಿಗೆ ಅಂಟಿಕೊಂಡಿರುತ್ತವೆ. ಈ ಹೆಸರುಗಳು ಜನರ ಬಾಯಲ್ಲಿ ಬಳಕೆಯಾಗುವಾಗ ಬದಲಾಗುತ್ತಾ ಹೋಗುತ್ತವೆ. ನೂರಾರು ವರುಷಗಳು ಕಳೆದ ಹಾಗೆ ಹೆಸರುಗಳು ಮೊದಲಿನ ಹಾಗೆ ಇರದೇ ಗುರುತಿಸಲೂ ಆಗದ ಹಾಗೆ ಬದಲಾಗಿಬಿಟ್ಟಿರುತ್ತವೆ. ಜನರ ಬಾಯಲ್ಲಿ ಬದಲಾಗುವ ಹಾಗೆಯೇ ಆಗಾಗ ಬದಲಾಗುತ್ತಿದ್ದ ಅರಸರು ಊರುಗಳ ಹೆಸರನ್ನು ಬದಲಾಯಿಸುತ್ತಿದ್ದರು.ಇಂದಿನ 'ಚಾಮರಾಜ ನಗರ' ಹಿಂದೆ 'ಅರಿಕೊಠಾರ'ವಾಗಿತ್ತು. ಮೈಸೂರು ಅರಸರು ಅದನ್ನು ಬದಲಾಯಿಸಿದರು. ನಾಡಿನ ಕಲ್ಬರಹಗಳಲ್ಲಿ ಒಂದು ಊರಿನ ಹೆಸರಿನ ಜೊತೆಗೆ ಅದಕ್ಕಿರುವ ಇನ್ನೊಂದು ಹೆಸರನ್ನು 'ಪ್ರತಿನಾಮ' ಎಂದು ಗುರುತಿಸಿ ಹೇಳಿರುವುದುಂಟು. ಕೆಲವೊಮ್ಮೆ ಕನ್ನಡದ ಹೆಸರುಗಳನ್ನು ಸಂಸ್ಕೃತಕ್ಕೆ ಅನುವಾದಿಸಿರುವುದೂ ಇದೆ. 'ಅತ್ತಿಬೆಲೆ'ಯು "ಔದುಂಬರಪುರ'ವಾಗುತ್ತದೆ;'ನಂಜನಗೂಡು' 'ಗರಳಪುರಿ'ಯಾಗುತ್ತದೆ;'ಹಾಡುವಳ್ಳಿ' 'ಸಂಗೀತಪುರ'ವಾಗುತ್ತದೆ.ಇನ್ನೂ ಕೆಲವೊಮ್ಮೆ ಊರುಗಳ ಹೆಸರುಗಳು ಕಳೆದುಹೋಗುವುದೂ ಉಂಟು. ಈಗ ನಾವು ಬೆಂಗಳೂರು ಎಂದು ಕರೆಯುತ್ತಿರುವ ಊರಿನಲ್ಲಿ ಸರಿಸುಮಾರು ಐವತ್ತು ಊರ ಹೆಸರುಗಳು ಕಳೆದುಹೋಗಿವೆ. ಗವಿಪುರ,ಸಿದ್ಧಾಪುರ,ಗುಟ್ಟಹಳ್ಳಿ,ಮಾರತ್ ಹಳ್ಳಿ,ಜಕ್ಕಸಂದ್ರ, ಸಾರಕ್ಕಿ,ಶಿವನ ಹಳ್ಳಿ, ಸಾಣೇ ಗುರವನ ಹಳ್ಳಿ, ಹೆಣ್ಣೂರು, ಬಾಣಸವಾಡಿ, ಹಲಸೂರು,ನಾಗಸಂದ್ರ, ಗಂಗೇನ ಹಳ್ಳಿ ಹೀಗೆ ಪಟ್ಟಿ ಇದೆ. ಇವುಗಳಲ್ಲಿ ಕೆಲವು ಹೆಸರುಗಳು ಬಡಾವಣೆಗಳ ಹೆಸರುಗಳಾಗಿ ಉಳಿದಿವೆ. ಆದರೆ ಊರ ಹೆಸರುಗಳಾಗಿ ಅಲ್ಲ. ಇದೇನೇ ಇರಲಿ. ಹೆಸರುಗಳನ್ನು ಬಾಯಲ್ಲಿ ಹೇಳುವುದೂ ಅವನ್ನು ಬರೆಯುವುದೂ ಬೇರೆಬೇರೆ. ನಮ್ಮ ಸಾವಿರಾರು ಊರುಗಳ ಹೆಸರನ್ನು ಬರೆಯ ಬೇಕಾಗಿ ಬಂದದ್ದೇ ಈಚಿನ ವರುಷಗಳಲ್ಲಿ. ಅದರಲ್ಲೂ ಆ ಯ್ ಊರಿನ ದಾಖಲೆಗಳನ್ನು ಜತನವಾಗಿ ಇರಿಸಲು ಸರಕಾರದ ಬೇರೆ ಬೇರೆ ಇಲಾಖೆಗಳು ಮುಂದಾಗಿರುವುದರಿಂದ ಹೀಗೆ ಹೆಸರನ್ನು ಬರೆಯಬೇಕಾಗಿ ಬಂದಿದೆ. ಹೀಗೆ ಬರೆಯುವಾಗ ಒಂದೇ ಬಗೆಯಲ್ಲಿ ಬರೆಯುತ್ತಿಲ್ಲ ಎನ್ನುವುದು ಹೆಚ್ಚು ಜನರಿಗೆ ಗೊತ್ತಿಲ್ಲ. ಅಂಚೆ ಇಲಾಖೆಯವರು ಒಂದು ಬಗೆಯಲ್ಲಿ ಬರೆದಿದ್ದರೆ,ಕಂದಾಯ ಇಲಾಖೆಯವರು ಮತ್ತೊಂದು ಬಗೆಯಲ್ಲಿ ಬರೆದಿರುತ್ತಾರೆ. ಪಂಚಾಯತ್ ರಾಜ್ಯ ಇಲಾಖೆಯವರು,ಪೋಲಿಸಿನವರು,ಮರಾಮತ್ ಇಲಾಖೆಯವರು,ಸಮಾಜ ಕಲ್ಯಾಣ ಇಲಾಖೆಯವರು ಹೀಗೆ ಹತ್ತು ಹಲವು ಕಡೆಗಳಲ್ಲಿ ಊರಿನ ಹೆಸರನ್ನು ಬರೆಯುವುದು ಈಗ ಬೇಕಾಗಿದೆ. ಒಮ್ಮೆ ಹೀಗೆ ಬರೆಯಲು ಮೊದಲು ಮಾಡಿದ ಮೇಲೆ ಊರಿನ ಹೆಸರುಗಳಿಗೆ ಎರಡು ರೂಪಗಳು ಉಳಿದುಕೊಳ್ಳುತ್ತವೆ. ಮಾತಿನ ರೂಪ ಮತ್ತು ಬರೆಹದ ರೂಪ. ಮಾತಿನ ರೂಪ ಮೊದಲಿನಂತೆ ಜನರ ನೆನಪನ್ನು ಹೊಂದಿಕೊಂಡು ಬದಲಾಗುವುದಿಲ್ಲ. ಬರೆದ ಬಗೆಯನ್ನು ಅನುಸರಿಸಿ ತನ್ನದೇ ಆದ ನೆಲೆಯೊಂದನ್ನು ಕಂಡುಕೊಳ್ಳುತ್ತದೆ. ಬರಹದ ರೂಪವಂತೂ ಈಗಿನ ದಾಖಲಾತಿ ಚೌಕಟ್ಟಿನಲ್ಲಿ ಹೆಚ್ಚು ಬದಲಾಗದೇ ಉಳಿಯಬಹುದಾಗಿದೆ. ಜನರು ಊರಿನ ಹೆಸರನ್ನು ಬಾಯಲ್ಲಿ ಹೇಳುವಾಗ ಬದಲಾವಣೆ ಮಾಡಿಕೊಳ್ಳುತ್ತಾರೆ ಎಂದು ಹೇಳಿದೆನಷ್ಟೆ. ಈ ಬದಲಾವಣೆ ಎರ್ರಾಬಿರ್ರಿಯಾಗಿರುವುದಿಲ್ಲ. ಊರಿನ ಹೆಸರಿನಲ್ಲಿ ಬಹುಮಟ್ತಿಗೆ ಎರಡು ಭಾಗ ಇರುತ್ತವೆ. ಎರಡನೆಯ ಭಾಗದಲ್ಲಿ 'ಊರು" ಎಂಬುದನ್ನು ಹೇಳುವಂತಿರುವ ಪದವಿರುತ್ತದೆ. ಊರು, ಪುರ, ನಗರ, ಕಲ್ಲು, ಗಾಲ, ಗಿ, ಹಾಳು, ಹಳ್ಳಿ, ವಾಡಿ, ಪಟ್ಟಣ, ಹಟ್ಟಿ, ಸಂದ್ರ, ಕೇರಿ, ಕೆರೆ, ಪೇಟೆ ಹೀಗೆ ಇಂತಹವು. ಮೊದಲ ಭಾದದಲ್ಲಿ ಚಿಕ್ಕ ಪದದಿಂದ ಹಿಡಿದು ಹಲವಾರು ಪದಗಳು ಇರುವುದೂ ಉಂಟು. ಜನರು ಈ ಎರಡು ಭಾಗಗಳನ್ನು ಚಿಕ್ಕದು ಮಾಡಿಕೊಳ್ಳುತ್ತಾರೆ. ಹೀಗೆ ಚಿಕ್ಕದು ಮಾಡಿಕೊಳ್ಳುವಾಗ ಮೊದಲ ಭಾಗದಲ್ಲಿ ಎರಡಕ್ಕಿಂತ ಹೆಚ್ಚು ಸ್ವರಗಳನ್ನು ಇರಿಸಿಕೊಳ್ಳುವುದಿಲ್ಲ.ಹಾಗೆಯೇ ಎರಡನೆಯ ಭಾಗದಲ್ಲಿ ಕೂಡ ಒಂದು ಅಥವಾ ಎರಡು ಸ್ವರಗಳನ್ನು ಮಾತ್ರ ಉಳಿಸಿಕೊಳ್ಳುತ್ತಾರೆ. ಇದೇಕೆ ಹೀಗೆ ಎಂದು ಯಾರಾದರೂ ಕೇಳಬಹುದು. ಅದಕ್ಕೆ ಕನ್ನಡ ನುಡಿಯ ಜಾಯಮಾನ ಎಂದಷ್ಟೇ ಹೇಳಬಹುದು. ಕೆಲವು ಊರುಗಳ ಹೆಸರು ಮಾತಿನಲ್ಲಿ ಏನಾಗುತ್ತದೆ ನೋಡಿ. ಕೃಷ್ಣರಾಜ ನಗರ ಕೆ.ಆರ್.ನಗರ, ತಿರುಮಕೂಡಲು ನರಸೀಪುರ, ಟಿ. ನರ್ಸಿಪುರ ಆಗುತ್ತವೆ.ಊರ ಹೆಸರಿನಲ್ಲಿ ಒಟ್ಟು ನಾಲ್ಕಕ್ಕಿಂತ ಹೆಚ್ಚು ಸ್ವರಗಳಿದ್ದರೆ ಆ ಸ್ವರಗಳನ್ನು ನಾಲ್ಕಕ್ಕೆ ಇಳಿಸಿಕೊಳ್ಳುವುದು ಕಂಡು ಬರುತ್ತದೆ.ಕೆಲವೊಮ್ಮೆ ಈ ಸಂಖ್ಯೆಯನ್ನು ಇನ್ನೂ ಕಡಿಮೆ ಮಾಡಿಕೊಳ್ಳುವುದೂ ಉಂಟು. ಇರುವಷ್ಟು ವ್ಯಂಜನಗಳನ್ನು ಮಾತ್ರ ಹಾಗೇ ಉಳಿಸಿಕೊಳ್ಳುತ್ತಾರೆ.'ಚಿಕ್ಕನಾಯಕನ ಹಳ್ಳಿ'ಯಲ್ಲಿ ಎಂಟು ಸ್ವರಗಳಿವೆ. ಜನರ ಬಾಯಲ್ಲಿ ಅದು 'ಚಿಕ್ ನಾಯ್ಕ್ ನಳ್ಳಿ' ಎಂದು ಆಗುವುದು.ಬದಲಿಗೆ ಕೆಲವೊಮ್ಮೆ 'ಸಿ.ಎನ್.ಹಳ್ಳಿ' ಆದರೂ ಅಲ್ಲಿ ನಾಲ್ಕು ಸ್ವರಕ್ಕೆ ಇಳಿಯುತದೆ.'ಹಾಸನ' 'ಹಾಸನ್' ಅಥವಾ 'ಹಾಸ್ನ' ಆಗುತ್ತದೆ. 'ಚಾಮರಾಜನಗರ' 'ಚಾಮ್ರಾಜ್ ನಗ್ರ' ಎಂದಾಗುತ್ತದೆ. ಹೀಗೇ ಪಟ್ಟಿ ಬೆಳೆಸಬಹುದು. ಈ ಮಾತು ಹೇಳಿದ್ದೇಕೆಂದರೆ, ಜನರಿಗೆ ಊರಿನ ಬರಹ ರೂಪ ಹೇಗಿದೆ ಎನ್ನುವುದು ಅದರ ಹೆಸರನ್ನು ಹೇಳುವಾಗ ಅಷ್ಟು ಗಮನಿಸಬೇಕಾದ ಸಂಗತಿಯಾಗಿ ತೋರುವುದಿಲ್ಲ ಎಂದು ತಿಳಿಸುವುದು. ಇನ್ನೂ ಒಂದು ಮಾತಿದೆ. ಬಲ್ಲವರು ನಮ್ಮ ಊರುಗಳ ಹೆಸರುಗಳನ್ನು 'ಕುಲಗೆಡಿಸಿ'ದವರು ಇಂಗ್ಲಿಶಿನವರು ಎನ್ನುತ್ತಾರೆ. ಇಂಗ್ಲಿಶಿನವರು ನಮ್ಮ ಊರುಗಳ ಹೆಸರುಗಳನ್ನು ನಾವು ಬರೆದಂತೆ ಬರೆಯಲಿಲ್ಲ. ಏಕೆಂದರೆ ಎಷ್ಟೋ ಊರುಗಳ ಹೆಸರನ್ನು ನಾವು ಬಾಯಲ್ಲಿ ಹೇಳುತ್ತಿದ್ದುದನ್ನು ಅವರು ಕೇಳಿಸಿಕೊಂಡಂತೆ ಬರೆದರು. ಹೀಗಾಗಿ ಅವರು ಕೇಳಿಸಿಕೊಂಡದ್ದು ಹೇಗೋ ಹಾಗೆ ಊರ ಹೆಸರುಗಳು ಬರಹದಲ್ಲಿ ದಾಖಲಾದವು. ಆದರೆ ಸಾವಿರಾರು ಊರುಗಳ ಹೆಸರುಗಳನ್ನು ಮೊದಲು ಬರೆದವರು ನಾವೇ ಆಗಿದ್ದೇವೆ. ಅವುಗಳಿಗೆ ನಮ್ಮ ನುಡಿಯಲ್ಲಿ, ಜತೆಗೆ ಇಂಗ್ಲಿಶಿನಲ್ಲಿ ಬರೆಹ ರೂಪವನ್ನು ಕೊಟ್ಟವರು ನಾವೇ. ಹಾಗಾಗಿ ಏನಾದರೂ ಗೊಂದಲಗಳಿದ್ದರೆ ಅದಕ್ಕೆ ನಾವು ಹೊಣೆಗಾರರಾಗಿದ್ದೇವೆ. ಹಿಗೆ ಅಡ್ಡಾದಿಡ್ಡಿ ಹೆಸರುಗಳನ್ನು ಬರೆಯುವುದನ್ನು ಬದಲಾಯಿಸಿ ಒಂದು ಸರಿಯಾದ ಬಗೆಯಲ್ಲಿ ಬರೆಯುವುದು ಮತ್ತು ಅದೇ ರೂಪವನ್ನು ಎಂದೂ, ಎಲ್ಲೆಲ್ಲೂ ಬಳಸುವುದು ಈಗ ಆಗ ಬೇಕಾಗಿರುವ ಕೆಲಸ; ಹೆಸರುಗಳ ಹಳೆಯ ರೂಪಗಳಿಗೆ ಮರಳಿ ಹೋಗುವುದಕ್ಕಿಂತ ಇದು ಮೊದಲು ಆಗ ಬೇಕಾದ ಕೆಲಸ. ಮತ್ತೆ ಕೆಲವರು ಇಂಗ್ಲಿಶಿನವರು ಕುಲಗೆಡಿಸಿದ ಹೆಸರುಗಳಿಗೆ ಕೊನೆಯಲ್ಲಿ 'ಉ' ಸೇರಿಸಿ ಬಿಟ್ಟರೆ ಅದು ಕನ್ನಡದ ಹೆಸರಾಗಿಬಿಡುವುದೆಂದು ಹೇಳುವುದುಂಟು. ಇದು ಸರಿಯಾದ ಮಾತಲ್ಲ. ಕನ್ನಡ ಮಾತಾಡುವ ಕೆಲವರು ಕೆಲವೊಮ್ಮೆ ಮತ್ತು ಕೆಲವು ಕಡೆಗಳಲ್ಲಿ ಹೀಗೆ ಕೊನೆಯಲ್ಲಿ 'ಉ' ಸೇರಿಸುವುದುಂಟು. ಕನ್ನಡ ಮಾತಾಡುವವರೆಲ್ಲ ಹೀಗೆ ಮಾಡುವುದಿಲ್ಲ. ತುಂಗಭದ್ರೆಯ ಉತ್ತರಕ್ಕೆ ಹೋದರೆ ಅಲ್ಲಿ ವ್ಯಂಜನದಿಂದ ಕೊನೆಯಾಗುವ ಪದಗಳನ್ನು ಬರೆಯುವಾಗ ಕೊನೆಗೆ 'ಅ' ಸೇರಿಸುತ್ತಾರೆ.ಆ ಕಡೆಯಿಂದ ಬರುವ ಎಷ್ಟೋ ಬಸ್ಸುಗಳಲ್ಲಿ 'ಬೆಂಗಳೂರ','ಮೈಸೂರ''ಮಂಗಳೂರ' ಎಂದು ಬರೆದಿರುವುದನ್ನು ನೋದಬಹುದು. ಆದರೆ ಅಲ್ಲಿ ಕನ್ನಡ ಮಾತನಾಡುವವರು ಈ ಊರುಗಳ ಹೆಸರನ್ನು ಹೇಳುವಾಗ ಕೊನೆಯಲ್ಲಿ 'ಅ' ಹೇಳುವುದಿಲ್ಲ. ಕೊನೆಯಲ್ಲಿ ವ್ಯಂಜನವನ್ನೇ ಹೇಳುತ್ತಾರೆ. ಅಲ್ಲದೆ ವ್ಯಂಜನದಿಂದ ಕೊನೆಯಾಗುವ ಎಲ್ಲ ಕಡೆಯಲ್ಲೂ "ಉ' ಸೇರಿಸಲು ಬರುವುದಿಲ್ಲ. 'ಹೊಸ್ ಪೇಟ್','ಬಾಗಲ್ ಕೋಟ್'.'ಕೋಲಾರ್','ರಾಮ್ ನಗರ್' ಮುಂತಾದವನ್ನು ಏನು ಮಾಡುವುದು. ಎಲ್ಲ ಕಡೆಗೂ ಉಕಾರವೇ ಸಲ್ಲುವುದೆಂದು ಹೇಳಬಹುದೇ? ಜನರು ಒಂದು ಕಡೆಯಿಂದ ಇನ್ನೊಂದು ಕಡೆಗೆ ಹೋಗಿ ನೆಲೆಸುವುದು ಎಂದಿಗಿಂತಲೂ ಈಗ ಹೆಚ್ಚಾಗಿದೆ. ಬೇರೆಬೇರೆ ನುಡಿಗಳನ್ನಾಡುವವರು ಒಂದೆಡೆ ನೆಲಸುತ್ತಿದ್ದಾರೆ. ಇದರಿಂದ ಊರುಗಳ ಹೆಸರನ್ನು ಬರೆಯುವ ಬಗೆಯಲ್ಲಿ ಒಂದು ಚೌಕಟ್ಟನ್ನು ತರಬಹುದೇ ಹೊರತು ಆ ಹೆಸರುಗಳನ್ನು ಜನರು ಹೇಳುವ ಬಗೆಯಲ್ಲಿ ಅಲ್ಲ. ಹೀಗೆ ಹೆಸರನ್ನು ಹೇಳುವ ಬಗೆಯಲ್ಲೂ ನಾವು ಅಂದುಕೊಳ್ಳುವಂತೆ ಏರುಪೇರುಗಳು ಇರುವುದಿಲ್ಲ. ಬೇರೆ ಬಗೆಯಲ್ಲಿ ಹೆಸರನ್ನು ಹೇಳುತ್ತಿದ್ದರೂ ಅದರಲ್ಲೂ ಒಂದು ಚೌಕಟ್ಟು ಇರುತ್ತದೆ. ಮತ್ತು ಹಾಗೆ ಹೇಳುವುದಕ್ಕೆ ಜನರಿಗೆ ಅವರದ್ದೇ ಆದ ಕಾರಣಗಳಿರುತ್ತವೆ. ಕೊನೆಗೊಂದು ಮಾತು: ಲೋಕದಲ್ಲಿ ಅತಿ ದೊಡ್ಡ ಹೆಸರಿರುವ ಊರು ಯಾವುದು? ಆ ಊರಿನ ಹೆಸರನ್ನು ರೋಮನ್(ಇಂಗ್ಲಿಶ್) ಲಿಪಿಯಲ್ಲಿ ಬರೆದರೆ ಅದರಲ್ಲಿ ೮೪ ಅಕ್ಷರಗಳಿರುತ್ತವೆ.

1 ಕಾಮೆಂಟ್‌:

Indira Hegde ಹೇಳಿದರು...

ನಿಮ್ಮ ಪಟ್ಟಿಗೆ ಒಂದೇ ಒಂದು ಪದ ಸೇರಿಸಿಲಿಚ್ಚಿಸುತ್ತೇನೆ.

ಕೂಡುವ ಆಲ> ಕೊಡಿಯಾಲ ಕುಡ್ಲ(ತುಳು) ನೇತ್ರವಾತಿ ಮತ್ತು ಗುರುಪುರ ನದಿಗಳು ಇಲ್ಲಿ ಸಮುದ್ರವನ್ನು ಸೇರುವ ಪ್ರದೇಶ ಕೂಡುವ ಆಲ ಮಂಗಳೂರು.