ಬುಧವಾರ, ಜನವರಿ 13, 2016

‘ಆರನೇ ಹೆಂಡತಿ..’ ತೆಹಮಿನಾ ದುರಾನಿ


ಹೆಚ್.ಎಸ್.ಅನುಪಮಾ



‘ಎಷ್ಟೋ ದೇಶದ ಎಷ್ಟೋ ಮಹಿಳೆಯರು ಮೌನದ ಭಾಷೆಯನ್ನೇ ಆಡುತ್ತಾರೆ’ ಎಂದು ಹಿಲರಿ ಕ್ಲಿಂಟನ್ ತನ್ನ ಆತ್ಮಕತೆಯ ಮೊದಲಿಗೆ ಅನಸೂಯಾ ಸೇನ್ ಗುಪ್ತರ ಕವನವನ್ನು ಸುಮ್ಮನೆ ಉಲ್ಲೇಖಿಸಿಲ್ಲ. ತಾವು ಅಸಾಧಾರಣ ಗಂಡಸರೆಂದುಕೊಂಡ ಕೆಲವರ ಅಸಾಧಾರಣ ನಡವಳಿಕೆಗೆ ಅವರ ಹೆಂಡತಿಯರು ಅನುಭವಿಸಿದ ನೋವೂ ಅಸಾಧಾರಣವಾಗಿದೆ. ಮುಕ್ಕಾಲುಪಾಲು ಪತ್ನಿಯರು ಅದು ತಮ್ಮ ವಿಧಿಯೆಂದು ಸುಮ್ಮನಾದರೆ ಪಾಕಿಸ್ತಾನಿ ಕವಿ ಸಾರಾ ಶಗುಫ್ತಾನಂಥವರು ಮತಿಭ್ರಮಣೆಗೆ ಒಳಗಾಗಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಎಲ್ಲೋ ಕೆಲವರು ಹೊಸ ಬದುಕು ದಕ್ಕಿಸಿಕೊಂಡಿದ್ದಾರೆ. ಒಟ್ಟಾರೆ ವೈವಾಹಿಕ ಬದುಕಿನ ಅನುಭವಿಸಲಾಗದ, ಆಡಲಾಗದ ಸಂಕಟಕ್ಕೆ ಅಕ್ಷರ ರೂಪ ಒದಗಿಸಿರುವ ಮಹಿಳೆಯರು ಕಡಿಮೆಯೇ. ಆದರೂ ತೆಹಮಿನಾ ದುರ್ರಾನಿ ಎಂಬ ಪಾಕಿಸ್ತಾನದ ‘ಅತಿ ಗಣ್ಯ’ ಮನೆತನದ ಹೆಣ್ಣುಮಗಳೊಬ್ಬಳು ಮೌನವಾಗಿ ಅನುಭವಿಸಿದ ಅಪರಂಪಾರ ಕಷ್ಟಗಳ, ಅವಮಾನದ, ಕೆಲವೊಮ್ಮೆ ಸ್ವಯಂಕೇಂದ್ರಿತ ಎನಿಸುವ ನಡವಳಿಕೆಗಳ ಬದುಕನ್ನು ‘ಮೈ ಫ್ಯೂಡಲ್ ಲಾರ್ಡ್’ ಎಂಬ ಆತ್ಮಚರಿತ್ರೆಯಲ್ಲಿ ದಿಟ್ಟವಾಗಿ ಬರೆದುಕೊಂಡಿದ್ದಾಳೆ.

ನಿರಂತರ ಗಾಯಗೊಳುವುದು, ನಿರಂತರ ಮುಲಾಮು ಹುಡುಕುತ್ತ ಮಾಯಿಸುವ ಮಾಯಕದ ಗೋಂದಿಗಾಗಿ ಅರಸುವುದು, ಮತ್ತೆ ಗಾಯಗೊಳ್ಳುವುದು, ಮತ್ತೆ ಮಾಯುವುದು; ಕೊನೆಗಂತೂ ಗಾಯಗೊಳಿಸುತ್ತಿದ್ದ ಚೂಪಿನಿಂದ ದೂರ ಸರಿದು ಮಾಯಲೆತ್ನಿಸುವುದು - ಇದು ೫೦೦ಕ್ಕೂ ಮೀರಿದ ಪುಟಗಳಲ್ಲಿ ಹರಡಿಕೊಂಡ ಮೈ ಫ್ಯೂಡಲ್ ಲಾರ್ಡ್ ಪುಸ್ತಕದ ತಿರುಳು. ‘ಗಂಡಸಿನ ಹೊರತಾಗಿ ಅಧಿಕಾರ-ಅಂತಸ್ತು-ಹಕ್ಕು ಯಾವುದೂ ನಿನಗೆ ಸಿಗುವುದಿಲ್ಲ’ವೆನ್ನುವ ಸಮಾಜದಲ್ಲಿ ಬದುಕಿ ಕೊನೆಗೇ ತನ್ನದೇ ಅಸ್ಮಿತೆಯನ್ನು ಬರಹಗಾರ್ತಿಯಾಗಿ ರೂಪಿಸಿಕೊಂಡವಳ ಆತ್ಮಚರಿತ್ರೆ ಅದು. ಆರ್. ಕೆ. ಹುಡಗಿಯವರು ಶ್ರಮವಹಿಸಿ ಮಾಡಿರುವ ಆ ಪುಸ್ತಕದ ಕನ್ನಡಾನುವಾದ ‘ಆರನೆಯ ಹೆಂಡತಿಯ ಆತ್ಮಕತೆ’ ಓದುತ್ತ ಈ ಹೆಣ್ಣುಮಗಳ ಕಷ್ಟ ಈಗ ಮುಗಿದೀತು; ಇನ್ನೊಂದು ಪುಟಕ್ಕೆ ಮುಗಿದೀತು ಎಂದುಕೊಂಡರೆ ಇಲ್ಲ, ಪುಸ್ತಕ ಕೊನೆಯಾಗುತ್ತ ಬಂದರೂ ದಾರುಣ ಸಂಕಟಗಳು ಕೊನೆಯಾಗುವ ಲಕ್ಷಣಗಳೇ ಇಲ್ಲ. ಓದುತ್ತ ಹೋದಂತೆ ಒಂದು ತೆರನ ಅಸ್ವಸ್ಥತೆ ಓದುವವರನ್ನೂ ಅಮರಿಕೊಂಡು ಉಸಿರುಗಟ್ಟಿದಂತಾಗುತ್ತದೆ.

ಜಗತ್ತಿನ ೩೯ ಭಾಷೆಗಳಿಗೆ ಅನುವಾದಗೊಂಡಿರುವ ಈ ಪುಸ್ತಕ ಪಾಕಿಸ್ತಾನದ ಅತಿ ಗಣ್ಯ ಸಮಾಜದೊಳಗಣ ಅಮಾನವೀಯತೆ, ಹುಸಿ ಧರ್ಮಪರತೆ, ಗುಪ್ತ ದುರ್ವ್ಯವಹಾರಗಳನ್ನು ಎಳೆಎಳೆಯಾಗಿ, ಹೆಣ್ಣೊಬ್ಬಳ ನಿವೇದನೆಯಾಗಿ ತೆರೆದಿಡುತ್ತದೆ. ಇಸ್ಲಾಮಿನಲ್ಲಿ ಹೆಣ್ಣಿಗೆ ಕೊಟ್ಟ ಎಲ್ಲಾ ಹಕ್ಕುಗಳನ್ನು ಮೊಟಕುಗೊಳಿಸಿ ಅವಳನ್ನು ಬುರ್ಖಾದೊಳಗೆ, ಮನೆಯೊಳಗೆ ಬಂಧಿಸಿ, ಅಲಂಕಾರಿಕ ಹೆರುವ ಮಶೀನುಗಳಾಗಿಸಿರುವ ಸಮಾಜ ಹೇಗೆ ಇಸ್ಲಾಂ ಧರ್ಮವನ್ನು, ಪ್ರವಾದಿಯವರ ಹೇಳಿಕೆಗಳನ್ನು ಭ್ರಷ್ಟಗೊಳಿಸಿದೆ ಎಂದು ತೆಹಮಿನಾ ಹೇಳಿಕೊಳ್ಳುತ್ತ ಸಾಗಿದ್ದಾರೆ.



ಪಾಕಿಸ್ತಾನ ಏರ್‌ಲೈನ್ಸಿನ ಎಂಡಿ ಆಗಿದ್ದ, ಬ್ಯಾಂಕ್ ಆಫ್ ಪಾಕಿಸ್ತಾನದ ಡೈರೆಕ್ಟರ್ ಆಗಿದ್ದ ಎಸ್. ಯು. ದುರಾನಿ ಎಂಬವರ ಅತಿಗಣ್ಯ ಕುಟುಂಬದಲ್ಲಿ ಉಳಿದ ಮಕ್ಕಳಿಗಿಂತ ಕೊಂಚ ಕಪ್ಪಗೆ, ಕೊಂಚ ಕಡಿಮೆ ರೂಪಸಿಯಾಗಿ ಹುಟ್ಟಿದ ಹುಡುಗಿ ತೆಹಮಿನಾ. ದೇಶವಿದೇಶಗಳಲ್ಲಿ ಬಂಧುಬಾಂಧವರಿದ್ದ ಅವಳು ರೆಸಿಡೆನ್ಶಿಯಲ್ ಶಾಲೆಯಲ್ಲಿ ಕಲಿತ, ಇಂಗ್ಲಿಷ್ ಬಲ್ಲ ಹುಡುಗಿ. ಅವಳ ತಾಯಿಯೂ ಅಂತಹುದೆ ಒಂದು ಗಣ್ಯ ಕುಟುಂಬದಿಂದ ಬಂದ ದರ್ಪದ ಹೆಣ್ಣುಮಗಳು. ತಾಯಿಯ ಅಪ್ಪಚಿಕ್ಕಪ್ಪಂದಿರೆಲ್ಲ ನೈಟ್‌ಹುಡ್ ಪಡೆದ ಅತಿ ಶ್ರೀಮಂತ, ಸುಶಿಕ್ಷಿತ ವ್ಯಕ್ತಿಗಳು. ಕುಲೀನ ಜಮೀನ್ದಾರಿ ಹಿನ್ನೆಲೆಯ ಕುಟುಂಬ ತುಂಬ ಸಂಪ್ರದಾಯವಾದಿಯೂ ಆಗಿತ್ತು.

ಬಾಲ್ಯದಲ್ಲಿ ತಾಯಿಯ ಪ್ರೀತಿ, ಮಾರ್ದವತೆಗಿಂತ ಹೆಚ್ಚಾಗಿ ಕೀಳರಿಮೆ ಹುಟ್ಟಿಸುವ ದಬ್ಬಾಳಿಕೆ-ದರ್ಪದ ನಡವಳಿಕೆಯನ್ನೇ ಅನುಭವಿಸಿದ ತೆಹಮಿನಾ ಒಳಗೊಳಗೇ ಬಂಡಾಯ ಹತ್ತಿಕ್ಕಿಕೊಂಡಳು. ಆದರೆ ಕೊನೆಗೆ ಅಮ್ಮನ ಇಚ್ಛೆಗೆ ವಿರುದ್ಧವಾಗಿ ಅನೀಸನೆಂಬ ಕಡಿಮೆ ಅಂತಸ್ತಿನ, ‘ಅತಿ ಸಾಮಾನ್ಯ’ ಸರ್ಕಾರಿ ನೌಕರಸ್ಥ ವರನನ್ನು ಹದಿವಯದಲ್ಲೇ ಪ್ರೀತಿಸಿ, ಮದುವೆಯಾದಳು. ಅವನಿಂದ ಮಗಳ ಪಡೆದು ವಿವಾಹ, ತಾಯ್ತನಗಳಿನ್ನೂ ಹಸಿಹಸಿಯಾಗಿರುವಾಗಲೇ ಅನಿರೀಕ್ಷಿತವಾಗಿ ಮುಸ್ತಾಫಾ ಖಾರ್ ಎಂಬ ಹೈಪ್ರೊಫೈಲ್ ರಾಜಕಾರಣಿ ಡಿನ್ನರ್ ಪಾರ್ಟಿಯೊಂದರಲ್ಲಿ ಭೇಟಿಯಾಗುತ್ತಾನೆ.

ಮುಸ್ತಾಫಾ ಖಾರ್ ಭೇಟಿ ಅವಳ ಬದುಕಿನ ತಿರುವನ್ನೇ ಬದಲಿಸುತ್ತದೆ.

ತರುಣಿಯರ ಬೇಟೆಯಲ್ಲಿ ನಿಷ್ಣಾತನಾಗಿದ್ದ ಗ್ರಾಮೀಣ ಪಂಜಾಬಿನ ತರುಣ ರಾಜಕಾರಣಿ ಗುಲಾಂ ಮುಸ್ತಾಫಾ ಖಾರ್ ಪ್ರಧಾನಿ ಭುಟ್ಟೋನ ಬಲಗೈ ಬಂಟ, ಆಪ್ತ ಶಿಷ್ಯ. ಅಲ್ಲದೆ ಆ ಕಿರಿಯ ವಯಸ್ಸಿನಲ್ಲೇ ಪಂಜಾಬಿನ ಗವರ್ನರನಾಗಿರುತ್ತಾನೆ. ತೆಹಮಿನಾಳ ಪತಿ ಅನೀಸ್ ಅದೇ ಸರ್ಕಾರದ ಉದ್ಯೋಗಿ. ಗವರ್ನರ್ ತನ್ನ ಅಧಿಕಾರ ಸ್ಥಾನದ ಔಚಿತ್ಯ ಮರೆತು ಬಹು ನಿಧಾನ ಗಣ್ಯಮನೆತನದ ಈ ಹೆಣ್ಣಿನ ಮನವೊಲಿಸಿದರೆ; ವಿವಾಹಿತೆಯಾಗಿದ್ದ ತೆಹಮಿನಾ ಅವನ ಪ್ರಭಾವಳಿ, ಮಾತುಗಾರಿಕೆಯ ಮೋಹಕ್ಕೆ ಸಮಾಜದ ಗೆರೆಗಳ ದಾಟುತ್ತಾಳೆ. ಬಹುಜನಪ್ರಿಯ ಯುವ ರಾಜಕಾರಣಿಯೊಬ್ಬ ತಾನು ನಿನ್ನ ಪಾದಸೇವಕ ಎಂದು ಪಾದದಡಿ ಕುಳಿತು ಬಯಸುವಾಗ ಅವಳ ಒಳಗಣ್ಣು ಕಳೆದುಹೋಗಿ ಏನು ಮಾಡುತ್ತಿರುವೆನೆಂದು ಕ್ಷಣಮಾತ್ರ ಯೋಚಿಸದೆ ಮುಂದೆಮುಂದೆ ನಡೆದೇ ಬಿಡುತ್ತಾಳೆ.

ಅವನ ಮೊದಲ ಪ್ರೇಯಸಿಯರು, ಹೆಂಡತಿಯರು, ಹಿತೈಷಿಗಳು ನೀಡಿದ ಎಚ್ಚರಿಕೆಯನ್ನು ಮುಗ್ಧಳಾಗಿ ಮುಸ್ತಾಫಾ ಬಳಿಯೇ ಆತಂಕದಿಂದ ಹಂಚಿಕೊಳ್ಳುತ್ತಾಳೆ. ಅವನಾದರೋ ಹಾರಿಕೆಯ ಉತ್ತರ ಕೊಡುತ್ತ ಅವಳ ಮೇಲಿನ ಹೊಟ್ಟೆಯುರಿಗೆ ಬೇರೆಯವರು ಹೇಳುವುದನ್ನು ನಂಬಬಾರದೆಂದು ಮನವೊಲಿಸುತ್ತಾನೆ. ಅಮಾಯಕನಾದ ಅನೀಸನನ್ನು, ಎಳೆಯ ಮಗು ತಾನ್ಯಾಳನ್ನು ಬಿಟ್ಟು ಮುಸ್ತಾಫಾನ ಪ್ರೇಮವನ್ನೇ ನಂಬಿ ತೆಹಮಿನಾ ಅವನ ಹಿಂದೆ ನಡೆದಾಗ ತನ್ನದು ಅವಿವೇಕದ, ವಿಶ್ವಾಸ ದ್ರೋಹದ, ಸ್ವಾರ್ಥದ ನಡೆಯಲ್ಲವೆ ಎಂದು ಒಮ್ಮೊಮ್ಮೆ ಅವಳಿಗೂ ಶಂಕೆಯಾಗುತ್ತದೆ. ಆದರೆ ಬಗೆಗಣ್ಣು ಎಚ್ಚರಿಸುವ ಹೊತ್ತಿಗೆ ಹಿಂತಿರುಗಿ ಬರುವುದೇ ಅಸಾಧ್ಯವೆಂಬಷ್ಟು ಮೋಹವಶಳಾಗಿರುತ್ತಾಳೆ.


ವಿವಾಹಬಾಹಿರ ಸಂಬಂಧವನ್ನು ಸಿಂಧುಗೊಳಿಸಲು ಅನೀಸನಿಗೆ ತಲಾಖ್ ನೀಡಿ ಮುಸ್ತಾಫಾನನ್ನು ಮದುವೆಯಾಗುತ್ತಾಳೆ. ಆದರೆ ಕೆಲವೇ ದಿನಗಳಲ್ಲಿ ಅವನ ಪ್ರೇಮ ಏರುತ್ತಿರುವ ಪಾಕಿಸ್ತಾನದ ರಾಜಕೀಯ ಕಾವಿಗೆ ಕರಗತೊಡಗುತ್ತದೆ. ಅವನ ಪೈಶಾಚಿಕ ನಿಜ ಸ್ವರೂಪ ಬಯಲಾಗುತ್ತದೆ. ಅತೀವ ಮುಂಗೋಪ, ಶೀಘ್ರಕೋಪ, ಅನುಮಾನ, ಕ್ರೌರ್ಯಗಳ ಮುಸ್ತಾಫಾ ಹೆಂಡತಿಯನ್ನು ಬಯಸುವುದು ತುದಿಗಾಲಲ್ಲಿ ತನ್ನ ಎಲ್ಲ ತರಹದ ಸೇವೆಗೆ ನಿಂತ ಒಬ್ಬ ಗುಲಾಮಳಾಗಿಯೇ ಹೊರತು ಮತ್ತೇನಕ್ಕೂ ಅಲ್ಲ. ಹಾಗೆ ಅವನ ತೆಕ್ಕೆಗೆ ಬಂದುಹೋದ ಅನೇಕ ಹೆಣ್ಣುಗಳಲ್ಲಿ ತಾನು ಆರನೆಯ ಹೆಂಡತಿ ಎನ್ನುವುದು ಕೆಲವೇ ಸಮಯದಲ್ಲಿ ಅವಳಿಗೆ ತಿಳಿಯುತ್ತದೆ. ಹೆಂಡತಿ, ಮಕ್ಕಳು ಅವನ ಅಹಮನ್ನು ಮೆರೆಸುವ ಶೋಪೀಸುಗಳು; ಅದರಾಚೆ ಅವರಿಗೆ ಅಸ್ತಿತ್ವವಿಲ್ಲ ಎಂದು ಅರಿವಾಗುವುದರಲ್ಲಿ ಸಮಯ ಮೀರಿರುತ್ತದೆ. ಅವನ ಸಲುವಾಗಿ ಮೊದಲ ಪತಿ, ಮಗಳು, ತವರಿನವರು ಎಲ್ಲರನ್ನು ಬಿಟ್ಟುಬಂದಿರುತ್ತಾಳೆ. ಏನಾದರಾಗಲಿ ತನ್ನ ಮೂರ್ಖತನ ಸಾಬೀತಾಗಬಾರದು; ಮರ್ಯಾದೆ ಕಳೆದದ್ದು ಹೊರತೋರಗೊಡಬಾರದು ಎಂದು ನಿರ್ಧರಿಸಿ ಎಲ್ಲವನ್ನು ಸಹಿಸತೊಡಗುತ್ತಾಳೆ.

ಅದೇವೇಳೆ ಸೇನಾ ಕ್ಷಿಪ್ರಕ್ರಾಂತಿ ನಡೆದು ಪ್ರಧಾನಿ ಭುಟ್ಟೊ ಪದಚ್ಯುತಗೊಂಡು ಇದ್ದಕ್ಕಿದ್ದಂತೆ ಮುಸ್ತಾಫಾ ಖಾರ್ ಕುಟುಂಬ ಸಮೇತ ಬ್ರಿಟನ್ನಿಗೆ ಪರಾರಿಯಾಗಬೇಕಾಗುತ್ತದೆ. ಮುಸ್ತಾಫಾನ ಜೊತೆಗೇ ದೇಶಬಿಟ್ಟು ತಾನೂ ಹೊರಡುತ್ತಾಳೆ. ರಾಜಕೀಯ ಅಸ್ಥಿರತೆಯ, ಅಭದ್ರತೆಯ ಅವರ ಇಂಗ್ಲೆಂಡ್ ವಾಸದಲ್ಲಿ ಪಾಕಿಸ್ತಾನದ ರಾಜಕೀಯ ಆಗುಹೋಗುಗಳ ಬಿರುಸಿನ ಪ್ರಭಾವ ಕಾಣುತ್ತಿರುತ್ತದೆ. ಆ ಆತಂಕಗಳಿಂದ ಮತ್ತಷ್ಟು ಪಶುವಿನಂತಾಗುವ ಮುಸ್ತಾಫಾನಿಂದ ತೆಹಮಿನಾ ಭೀಕರ ಹಿಂಸೆ ಅನುಭವಿಸುತ್ತಾಳೆ. ಮುಖಮೋರೆ ನೋಡದೆ ಪ್ರಾಣಿಗಳಿಗೆ ಬಡಿದಂತೆ ಬಡಿಯುವುದು, ಗುದ್ದುವುದು, ಗೋಡೆಗೆ ಜಪ್ಪುವುದು, ಬೆತ್ತಲಾಗಿಸಿ ನಿಲಿಸಿ ತಾನು ಹೇಳಿದಂತೆ ಫೋನಿನಲ್ಲಿ ಹೇಳಲು ಒತ್ತಾಯಿಸುವುದು, ಬೂಟುಕಾಲಲ್ಲಿ ತುಳಿದು ಝಾಡಿಸುವುದು, ಸಿಕ್ಕ ವಸ್ತುವಿನಿಂದ ತುಟಿಮುಖಗಳು ಗಾಯಗೊಂಡು ರಕ್ತ ಹರಿಸುವವರೆಗೆ ಹೊಡೆಯುವುದು, ಯಾರಿಗಾದರೂ ಹೇಳಿದರೆ ಅಥವಾ ಅವನ ಬಿಟ್ಟು ಹೋಗಲೆತ್ನಿಸಿದರೆ ಮಕ್ಕಳ ಪ್ರಾಣ ತೆಗೆಯುತ್ತೇನೆಂದು ಬೆದರಿಸುವುದು; ಬಸುರಿ-ಬಾಣಂತಿಯಾದಾಗ ಅವನ ಆಜ್ಞೆಯಾದಷ್ಟು ಪ್ರಮಾಣದ ಹಾಲುಮೊಟ್ಟೆಮಾಂಸ ತಿನ್ನಲೇಬೇಕೆಂದು ಹೊಡೆಯುತ್ತ ಒತ್ತಾಯಿಸುವುದು - ಒಂದೇ ಎರಡೇ ನೀವು ಊಹಿಸಿಯೇ ಇರದ ಭೀಕರ ದುಷ್ಟತನ, ದೌರ್ಜನ್ಯಗಳನ್ನು ದಿನನಿತ್ಯ, ಪ್ರತಿ ರಾತ್ರಿ ಅನುಭವಿಸುತ್ತಾಳೆ. ಒಂದಾದ ಮೇಲೊಂದು ಅವನ ಮಕ್ಕಳ ಹೆರುತ್ತಾಳೆ. ಎಳೆಯ ಮಕ್ಕಳ ಹಿಂಸಿಸುವ ಅವನ ಪಾಶವೀ ಕೃತ್ಯಕ್ಕೆ, ಎಲ್ಲಿ ಹೋದರೂ ಒದ್ದು ವಾಪಸು ಎಳೆತರುವ ಅವನ ಧಾಡಸೀತನಕ್ಕೆ, ವಿಶ್ವದ ತುಂಬ ಸಂಪರ್ಕ ಜಾಲ ಇರಿಸಿಕೊಂಡು ತಿರುಗುವ ಅವನ ಪ್ರಭಾವಕ್ಕೆ ಅವಳ ಮುಂದೆ ಬೇರೆ ಆಯ್ಕೆಗಳೇ ಇಲ್ಲವಾಗುತ್ತವೆ. ನಿರ್ವಿಣ್ಣಳಾಗಿ ಅವನ ಗುಲಾಮಳಂತೆ ಬದುಕು ಸವೆಸುತ್ತಾಳೆ. ಮನೆಯ ಆಳುಗಳ, ದಾಯಿ-ಡ್ರೈವರ್-ಹೆಲ್ಪರನ ಪರಿಸ್ಥಿತಿ ಇದಕ್ಕಿಂತ ಭಿನ್ನವಲ್ಲ. ಅವರಾರೂ ಅವಳ ಸಹಾಯಕ್ಕೆ ಬರಲಾರರು. ಅವರು ಮುಸ್ತಾಫಾನ ಗೂಢಚಾರರಾಗಿ ಕೆಲಸ ಮಾಡಬೇಕು, ತುಟಿಬಿಚ್ಚದೆ ಗುಲಾಮರಂತಿರಬೇಕು. ಇಲ್ಲದಿದ್ದರೆ ಅವರ ಹೆಣ ಅಥವಾ ಊರುಗಳಲ್ಲಿ ಅವರ ಸಂಬಂಧಿಗಳ ಹೆಣ ಬೀಳುವುದು ಖಚಿತ.

ಆದರೆ ಮನೆಯಲ್ಲಿ ಏನೇ ರಂಪಾಟವಾಗಲಿ, ಹೊರ ಸಮಾಜಕ್ಕೆ; ಪ್ರತಿನಿತ್ಯದ ಡಿನ್ನರ್ ಪಾರ್ಟಿಗಳಿಗೆ ಇದ್ಯಾವುದೂ ತೋರದಂತೆ ಬೇಗಂ ಮುಸ್ತಫಾ ಖಾರ್ ಅಲಂಕರಿಸಿಕೊಂಡು ನಲಿಯುವ ಪೋಸು ಕೊಟ್ಟು ಎಲ್ಲರನ್ನು ಆದರಿಸಬೇಕು. ಬಿಸಿಬಿಸಿ ರಾಜಕೀಯದ ಚರ್ಚೆ, ನಡೆಗಳಲ್ಲಿ ಅವನ ಸಹವರ್ತಿಯಾಗಿ ಮಾತು ಮುಂದುವರೆಸಬೇಕು; ಮರೆತ ಮಾತು ಎತ್ತಿ ಕೊಡಬೇಕು. ಅನುಕೂಲೆಯಾಗಿ ಆಜ್ಞಾನುವರ್ತಿಯಾಗಿರಬೇಕು. ಒಂದಿನಿತು ಆಡುವ ಮಾತು ತಡವರಿಸಿದರೂ, ಸುಮ್ಮನಿದ್ದರೂ, ಯಾರೊಡನೆಯೊ ಒಂದು ಪದ ಹೆಚ್ಚು ಮಾತನಾಡಿದರೂ ಡಿನ್ನರ್ ಮುಗಿದು ಮನೆಗೆ ಬಂದ ಮೇಲೆ ನರಕ ಎದುರಾಗುತ್ತದೆ.

ಅವಳ ತವರಿನವರು ಬ್ರಿಟನ್ನಿನಲ್ಲಿದ್ದರೂ, ಅವರ ಮನೆಯಲ್ಲೇ ತೆಹಮಿನಾ ಕುಟುಂಬ ವಾಸ್ತವ್ಯ ಹೂಡಿದ್ದರೂ ಏನನ್ನೂ ಹೇಳಿಕೊಳ್ಳುವಂತಿಲ್ಲ, ಹಂಚಿಕೊಳ್ಳುವಂತಿಲ್ಲ. ಅವರೊಡನೆ ಮಾತನಾಡಲು, ಹೊರಹೋಗಲು ಮುಸ್ತಾಫಾನ ಅನುಮತಿ ಪಡೆಯಲೇಬೇಕು. ಅವನ ಎಲ್ಲ ಕಟ್ಟಪ್ಪಣೆ ಪಾಲಿಸುತ್ತ, ದೈಹಿಕ ದೌರ್ಜನ್ಯವನ್ನು ಹಲ್ಲುಕಚ್ಚಿ ಸಹಿಸುತ್ತ ಎಂದಿಗೆ ಈ ಬದುಕು ಕೊನೆಯಾಗಿ ನೆಮ್ಮದಿ ಬಂದೀತೋ ಎಂದು ಪ್ರಾರ್ಥಿಸುತ್ತ ಇರುವಾಗಲೇ ಮುಸ್ತಾಫಾನ ಹೆಣ್ಣು ಖಯಾಲಿ ಮಿತಿಮೀರುತ್ತದೆ. ತೆಹಮಿನಾಳ ಹದಿಮೂರು ವರ್ಷದ ಸುಂದರ ತಂಗಿ ಆದಿಲಾಳನ್ನು ಮರುಳುಮಾಡಿ ಲೈಂಗಿಕವಾಗಿ ಬಳಸಿಕೊಳ್ಳತೊಡಗುತ್ತಾನೆ. ಆದಿಲಾಳನ್ನು ಮದುವೆಯಾಗಲು ತೆಹಮಿನಾಗೆ ತಲಾಖ್ ಕೊಡಲು ತುದಿಗಾಲಲ್ಲಿ ನಿಂತ ಮುಸ್ತಾಫಾ ಆಡುವ ಸುಳ್ಳು ನಾಟಕಗಳು, ತಂತ್ರಪ್ರತಿತಂತ್ರಗಳಿಂದ ರೋಸತ್ತ ತೆಹಮಿನಾ ಆತ್ಮಹತ್ಯೆ ಮಾಡಿಕೊಳ್ಳಲು, ಅವನ ಬಿಟ್ಟುಹೋಗಲು ನಡೆಸಿದ ಪ್ರಯತ್ನಗಳೆಲ್ಲ ವಿಫಲವಾಗುತ್ತವೆ. ತವರಿನವರೂ ಮುಸ್ತಾಫಾನ ದುರುಳತನಕ್ಕೆ ಅವಳನ್ನು ದೂರಮಾಡಿದಾಗ ಅವನ ಕ್ರೌರ್ಯ ಮತ್ತಷ್ಟು ಹೆಚ್ಚುತ್ತದೆ. ಅವನಿಂದ ಬಿಡುಗಡೆಯಾಗಲು ನಡೆಸುವ ಎಲ್ಲ ಪ್ರಯತ್ನಗಳು ಮಹಾ ಕಪಟ ತಂತ್ರಗಾರನಾದ ಅವನ ಸೌಜನ್ಯ-ಕಣ್ಣೀರು-ಪಶ್ಚಾತ್ತಾಪದ ನಾಟಕದಲ್ಲಿಯೋ, ಮಕ್ಕಳ ಅಪಹರಣದಲ್ಲಿಯೋ ಅಥವಾ ಅವಳಿಗೇ ತಲೆ ಸರಿಇಲ್ಲ ಎಂದು ಕಟ್ಟಿದ ಹುಚ್ಚಿ ಪಟ್ಟದೊಡನೆಯೋ ಕೊನೆಗೊಂಡು ಅವಳ ವ್ಯಕ್ತಿತ್ವ ದಿನದಿನಕ್ಕೆ ಛಿದ್ರಗೊಳ್ಳುತ್ತದೆ. ಅತಿ ದೀನ, ಅತಿ ಅಸಹಾಯಕ, ಅತಿ ಅವಮಾನದ ಪರಿಸ್ಥಿತಿಯಲ್ಲಿ ಅವನ ವಿನಾ ಮತ್ಯಾವ ನೆಲೆಯೂ ತನಗಿಲ್ಲವೆಂದು ಮತ್ತೆಮತ್ತೆ ಮನದಟ್ಟಾಗುತ್ತ ದೇಶಭ್ರಷ್ಟತೆಯ ಬ್ರಿಟನ್ ಬದುಕು ಕಳೆಯುತ್ತದೆ. ಎದೆಗೆಡ್ಡೆ ಆಪರೇಷನ್ ಆದಾಗಲೇ ಆಗಲಿ, ಹೆತ್ತು ಒಂದು ಗಂಟೆಯ ನಂತರವೇ ಆಗಲಿ ಆಸ್ಪತ್ರೆಗೂ ಬಂದು ಅವನು ನಡೆಸುವ ದೈಹಿಕ ದೌರ್ಜನ್ಯ ಓದಿದವರ ಕಣ್ಣು ಕೆಂಡದುಂಡೆ ಸುರಿಸುವಂತೆ ಮಾಡಿದರೆ, ತೆಹಮಿನಾ ಅವನಂಥವನಿಗೇ ಅಂಟಿ ಕೂತಿರುವುದು ಮೂರ್ಖತನ ಎನಿಸಿಬಿಡುತ್ತದೆ.

ಆದರೆ ಅವಳು ಅವಮಾನ, ಯಾತನೆಗಳ ನಡುವೆಯೂ ಅವನಿಗೇ ಅಂಟಿ ಕೂತಿದ್ದರಲ್ಲಿ ಅವನ ಕರಾಮತ್ತೂ ಇದೆ. ತೆಹಮಿನಾಳ ಚೇತನ ಸಹಿಸಲಾಗದ ಯಾತನೆಯಿಂದ ನಾಶವಾಗುವ ಹೊತ್ತಿನಲ್ಲಿ ಒಮ್ಮೊಮ್ಮೆ ಇದ್ದಕ್ಕಿದ್ದಂತೆ ಅವನು ಭೀತಗೊಂಡು ಅವಳ ಪಾದದಡಿ ಕುಳಿತುಬಿಟ್ಟದ್ದೂ ಇದೆ! ಅಲ್ಲಾಹುವು ತನ್ನನ್ನು ರಕ್ಷಿಸಲೆಂದೇ ಸೃಷ್ಟಿಸಿದ ಬೇಗಮಳು ಅವಳೆನ್ನುತ್ತ; ಅವಳಿಲ್ಲದೆ ತನಗೆ ಜೀವನವೇ ಇಲ್ಲ ಎಂದು ಬುಳುಬುಳು ಅಳುತ್ತ; ಅವಳೇ ತನ್ನನ್ನು ರಕ್ಷಿಸಬಲ್ಲ ಏಕೈಕ ತಾಯಿಯೆಂದು ಆರಾಧಿಸುತ್ತ ಅವಳ ಮಡಿಲ ಮಗುವೋ ಎಂಬಂತೆ ನಾಟಕವಾಡಿದ್ದಿದೆ. ಪದೇಪದೇ ಕ್ಷಮೆಯಾಚಿಸಿ ಇನ್ನೆಂದೂ ಇಂಥ ದಿನಗಳು ಬಾರವೆಂದು ಅಲವತ್ತುಕೊಂಡು ಅವಳನ್ನು ಮತ್ತಷ್ಟು ಹೊಂಡಕ್ಕೆ ಕೆಡವಿದ್ದೂ ಇದೆ. ಒಟ್ಟಾರೆ ಅವನನ್ನು ಅರ್ಥಮಾಡಿಕೊಳ್ಳುವುದೇ ದುಸ್ತರವಾಗಿ ಒಡಕು ಹುಚ್ಚ ವ್ಯಕ್ತಿತ್ವದ ಮುಸ್ತಾಫಾ ಖಾರ್‌ನನ್ನು ಮೌನದಿಂದ ಹದಿನಾಲ್ಕು ವರ್ಷ ತಡೆದುಕೊಳ್ಳುತ್ತಾಳೆ. ಅವ ಇಂದು ಸರಿಯಾದಾನು, ನಾಳೆಗೆ ಸರಿಯಾದಾನು ಎಂದು ದೇವರಲ್ಲಿ, ಸೂಫಿ ಸಂತರಲ್ಲಿ ಪ್ರಾರ್ಥಿಸುತ್ತಾಳೆ. ಭಾರತದ ಅಜ್ಮೇರಿನ ದರ್ಗಾಗೂ ಬಂದುಹೋಗುತ್ತಾಳೆ. ಹಗಲು ರಾತ್ರಿಯೆನದೆ ಅವಳ ಪ್ರಾರ್ಥನೆ ಒಂದೇ; ‘ದಯಾಮಯ ದೇವರೇ, ಮುಸ್ತಾಫಾನಿಗೆ ಶಾಂತಿ ನೀಡು. ಅವನ ಮನ ಶಾಂತಗೊಳ್ಳುವಂತೆ ಮಾಡು.’ ಹೀನಾತಿಹೀನ ಬದುಕು ಶಮನಕಾರಕ ಗುಳಿಗೆಗಳಿಗೆ ಮೊರೆ ಹೋಗುವಂತೆ ಮಾಡುತ್ತದೆ. ಆರೋಗ್ಯ ಕೆಡುತ್ತದೆ.



ಭುಟ್ಟೋ ಗಲ್ಲಿಗೇರಿ, ಅವನ ಮಕ್ಕಳ ರಾಜಕೀಯ ಚಟುವಟಿಕೆ ತೀವ್ರಗೊಂಡಾಗ ಮುಸ್ತಾಫಾ ನಿರಂತರ ಪಕ್ಷಗಳ ಬದಲಿಸುತ್ತಾನೆ. ಭಾರತದ ಪ್ರಧಾನಿ, ಗುಪ್ತಚರ ಅಧಿಕಾರಿಗಳೊಂದಿಗೆ ಸಂಪರ್ಕ ಸಾಧಿಸುತ್ತಾನೆ. ಕೊನೆಗಂತೂ ಇಡೀ ಕುಟುಂಬ ಪಾಕಿಸ್ತಾನಕ್ಕೆ ಹಿಂದಿರುಗುತ್ತದೆ. ಆದರೆ ಕೂಡಲೇ ಮುಸ್ತಾಫಾ ಬಂಧನಕ್ಕೊಳಗಾಗಿ ಜೈಲು ಸೇರಬೇಕಾಗುತ್ತದೆ. ಆ ವೇಳೆಗಾಗಲೇ ರಾಜಕೀಯದ ಆಗುಹೋಗುಗಳನ್ನು ವಿಶ್ಲೇಷಿಸುವಷ್ಟು ಪ್ರಬುದ್ಧ ಚಿಂತನೆ ಹೊಂದಿದ್ದ ತೆಹಮಿನಾ, ಮುಸ್ತಾಫಾ ಜೈಲಿನಲ್ಲಿರುವಾಗ ಅವನ ಬಿಡುಗಡೆಗಾಗಿ ಜನಸಂಘಟನೆ, ಹೋರಾಟ ನಡೆಸುತ್ತಾಳೆ. ಕುಸಿಯುವ ಆರೋಗ್ಯ, ದಣಿವನ್ನು ಲೆಕ್ಕಿಸದೆ ಅವನನ್ನು ಜನನಾಯಕನನ್ನಾಗಿ ಬಿಂಬಿಸುತ್ತ ಅವನ ಬಿಡುಗಡೆಗಾಗಿ, ಚುನಾವಣೆಯಲ್ಲಿ ಪಕ್ಷದ ಗೆಲುವಿಗಾಗಿ ತುಂಬ ಶ್ರಮಿಸುತ್ತಾಳೆ. ಇನ್ನಾದರೂ ಬದುಕು ಹಸನಾದೀತೆಂಬ ಕನಸು ಕಾಣುತ್ತಾಳೆ. ರಾಜಕೀಯವಾಗಿಯೂ ಅವಳಿಗೆ ವರ್ಚಸ್ಸಿನ ಸ್ಥಾನ ಸಿಗುತ್ತದೆ.

ಆದರೆ ಜೈಲಿನಿಂದ ಹೊರಬಂದದ್ದೇ ಮುಸ್ತಾಫಾ ಹಳೆಯ ಚಾಳಿ ಮುಂದುವರೆಸುತ್ತಾನೆ. ಕೊನೆಮೊದಲಿರದ ದೈಹಿಕ ದೌರ್ಜನ್ಯ ಎಸಗುತ್ತ ಅವಳು ಸಾರ್ವಜನಿಕ ಬದುಕಿನಿಂದ ಮಾಯವಾಗುವಂತೆ ನೋಡಿಕೊಳ್ಳುತ್ತಾನೆ. ಎಲ್ಲಕ್ಕಿಂತ ಹೀನವೆಂದರೆ ಗಣ್ಯ ಕುಟುಂಬವೊಂದಕ್ಕೆ ಸೊಸೆಯಾಗಿ ಹೋಗಿದ್ದ ತೆಹಮಿನಾಳ ಕಿರಿಯ ತಂಗಿ ಆದಿಲಾ ಜೊತೆ ಮತ್ತೆ ಪ್ರಣಯ ಸಂಬಂಧ ಶುರುಮಾಡುತ್ತಾನೆ. ಎಲ್ಲ ಖುಲ್ಲಂಖುಲ್ಲಾ! ಅವನಿಗೆ ಯಾವುದನ್ನೂ ಮುಚ್ಚಿಡಬೇಕೆಂಬ ತುರ್ತೇ ಇಲ್ಲ!!

ಮನಸಿರುವವರೆಲ್ಲ ಎಲ್ಲಾದರೊಮ್ಮೆ ಮನೋವ್ಯಾಧಿಗ್ರಸ್ತರಾಗುತ್ತಾರೆ. ಆದರೆ ಹಿಂಸ್ರ ಮನಸ್ಥಿತಿಯ ಮುಸ್ತಾಫಾನಂತಹವರು ರೋಗವೇ ತಾವಾಗಿ ಸಂಪರ್ಕಕ್ಕೆ ಬಂದವರನ್ನೆಲ್ಲ ನಾಶಗೊಳಿಸುತ್ತಾರೆ. ಮುಸ್ತಾಫಾ ಮನೆಯಲ್ಲಿ ಅವನೆಲ್ಲ ಹೆಂಡಿರು, ಮಕ್ಕಳಿಗೆ ಖಾಯಂ ದಾಯಿಯಾಗಿದ್ದ ಆಯೆಶಾ ಎಂಬುವಳ ಕತೆ ನೋಡಿದರೆ ತೆಹಮಿನಾಳ ಸಂಕಟ ಇನ್ನಷ್ಟು ಅರಿವಾಗುತ್ತದೆ. ಮುಸ್ತಾಫಾ ಪಂಜಾಬಿನ ಗವರ್ನರನಾಗಿ ನ್ಯಾಯಪಂಚಾಯ್ತಿ ನಡೆಸುವಾಗ ಇತ್ಯರ್ಥಕ್ಕಾಗಿ ಒಂದು ಪ್ರಕರಣ ಅವನೆದುರು ಬರುತ್ತದೆ. ಮದುವೆಯಾಗಿದ್ದ ಆಯೆಶಾ ಪ್ರಿಯಕರನೊಡನೆ ಓಡಿಹೋಗಿ ದರ್ಗಾವೊಂದರಲ್ಲಿ ಅಡಗಿರುತ್ತಾಳೆ. ಅವಳನ್ನು ಕೂಡಲೇ ಹಿಡಿಸಿ ತರುವ ಮುಸ್ತಾಫಾ ಅವಳ ಪ್ರಿಯಕರನನ್ನು ಹುಚ್ಚರ ಅಸೈಲಮ್ಮಿಗೆ ಕಳಿಸಿ, ಇಪ್ಪತ್ತರ ಹರೆಯದ ಸುಂದರ ತರುಣಿಯನ್ನು ತನ್ನ ಮನೆಗೆಲಸದ ದಾಯಿಯಾಗಿ ಇಟ್ಟುಕೊಳ್ಳುತ್ತಾನೆ. ಜೀವಮಾನ ಪರ್ಯಂತ ಅವಳು ಅವನ ಗುಲಾಮಳು. ಅವನ ಎಲ್ಲ ಅವಶ್ಯಕತೆಗಳ ಪೂರೈಸಬೇಕು. ಕೇಳದಿದ್ದರೆ ಯೋನಿಯೊಳಗೆ ಮೆಣಸಿನಪುಡಿ ತುಂಬುವುದೂ ಇದೆ. ಅವನ ಕುಟುಂಬ ಹೋದ ಕಡೆಗೆಲ್ಲ ಅವಳೂ ಹೋಗುವುದೇ, ಬೇರೆ ಆಯ್ಕೆಯೇ ಇಲ್ಲ. ಅವಳ ಈ ಸೇವೆಗೆ ಪ್ರತಿಯಾಗಿ ಅವಳ ಮನೆಯವರಿಗೆ ವರ್ಷಕ್ಕಿಷ್ಟು ಗೋಧಿ ಕೊಟ್ಟರೆ ಒಡೆಯನ ಜವಾಬ್ದಾರಿ ತೀರಿತು. ಹಾಗೆ ಮನೆಯಾಳಾಗಿ ಬಂದ ಆಯೆಶಾ ಒಡೆಯನ ಎಲ್ಲ ದೌರ್ಜನ್ಯ ಸಹಿಸಿ, ಅವನ ಹೆಂಡಂದಿರ ಆಗಮನ-ನಿರ್ಗಮನವನ್ನು ಬಂಡೆಕಲ್ಲಿನಷ್ಟೆ ನಿರ್ಲಿಪ್ತಳಾಗಿ ನೋಡಿ, ಅವ ಹೇಳಿದ್ದನ್ನು ಕಮಕ್ ಕಿಮಕ್ ಎನ್ನದೆ ಮಾಡುತ್ತ, ಒದೆಸಿಕೊಳ್ಳುತ್ತ, ಸಂಬಳವಿಲ್ಲದೆ, ಸದ್ದಿಲ್ಲದೆ, ಸ್ವತಂತ್ರವೇ ಇಲ್ಲದೆ ಇಡಿಯ ಬದುಕನ್ನು ಸವೆಸುತ್ತಾಳೆ. ಅವಳಂಥ ಬಡವಳಿಗೆ ಬಿಡುಗಡೆಯ ಕನಸು ಬೀಳುವಂತೆಯೇ ಇಲ್ಲ.

ಇದನ್ನೆಲ್ಲ ನೋಡನೋಡುತ್ತ ತೆಹಮಿನಾಳಲ್ಲಿ ಧಾರ್ಮಿಕ ಭಾವ ಜಾಗೃತಗೊಳ್ಳುತ್ತ ಹೋಗುತ್ತದೆ. ತಾನು ಕಟ್ಟಾ ಇಸ್ಲಾಂ ಧರ್ಮಾನುಯಾಯಿ ಎಂದುಕೊಳ್ಳುವ ಮುಸ್ತಾಫಾ ಹೇಗೆ ಧರ್ಮವಿರೋಧಿ ಎಂದು ಗುರುತಿಸಲು ಸಾಧ್ಯವಾಗುತ್ತದೆ. ಅವನಿಗೆ ಪ್ರತಿರೋಧ ಒಡ್ಡಲು ಧಾರ್ಮಿಕತೆಯ ನೆಲೆ ಕಂಡುಕೊಂಡು ಪ್ರಾರ್ಥನೆಯ ಮೊರೆ ಹೋಗುತ್ತಾಳೆ. ಇಸ್ಲಾಂ ಹಾಗೂ ಮಹಿಳಾ ಹಕ್ಕು - ಎರಡರಲ್ಲು ನಂಬಿಕೆಯಿಟ್ಟುಕೊಂಡು ಉಳಿದ ಬದುಕನ್ನು ಕಳೆಯುವ ಧೈರ್ಯ ಮೂಡುತ್ತದೆ. ತಡವಾಗಿಯಾದರೂ ಕೊನೆಗೊಂದು ನಿರ್ಧಾರಕ್ಕೆ ಬರುತ್ತಾಳೆ: ಆತ್ಮನಾಶವಾಗಿರುವ ತಾನು ಇನ್ನುಳಿದ ಬದುಕನ್ನು ಗೌರವಯುತವಾಗಿ ಕಳೆಯಬೇಕು; ಅಂಥ ಬದುಕು ಬೇಕೆಂದರೆ ಅವನಿಂದ ಬಿಡುಗಡೆ ಹೊಂದಲೇಬೇಕು. ತನ್ನ ಹೆಸರಿಲ್ಲದೆ ನಿನಗೆ ಅಸ್ತಿತ್ವವೇ ಇಲ್ಲ ಎಂದು ಬೆದರಿಸುವ ಮುಸ್ತಾಫಾ ಖಾರ್‌ಗೆ ಬೇಗಂ ತೆಹಮಿನಾ ಖಾರ್ ತೆಹಮಿನಾ ದುರಾನಿಯಾಗಿಯೂ ಬದುಕಬಲ್ಲಳು ಎಂದು ತೋರಿಸಬೇಕು..

ಈ ನಿರ್ಧಾರ ಮನದಲ್ಲಿ ಬೇರುಬಿಟ್ಟದ್ದೇ ತಡ, ತನ್ನ ಮಕ್ಕಳು, ಒಡವೆ, ಆಸ್ತಿ, ಬಾಂಧವ್ಯ ಎಲ್ಲವನ್ನು ತೊರೆದು ಬರಿಗೈಯಲ್ಲಿ ಮನೆಬಿಟ್ಟು ಹೊರಡುತ್ತಾಳೆ.

***

ಅದು ಹೆಂಗಸಿನ ಅಹಂಕಾರವೆಂದಾದರೂ ಕರೆಯಿರಿ, ಅತಿ ಆತ್ಮವಿಶ್ವಾಸದ ಮೂರ್ಖತನ ಎಂದಾದರೂ ಕರೆಯಿರಿ - ಅವರಿಗೆ ಕೆಟ್ಟಿದ್ದನ್ನೆಲ್ಲ ತಾನು ರಿಪೇರಿ ಮಾಡಬಲ್ಲೆ ಎಂಬ ಅಚಲ ವಿಶ್ವಾಸವಿರುತ್ತದೆ. ಅದೇ ವಿಶ್ವಾಸವೇ ಉಳಿದ ಜಗತ್ತು ಕೇಡಿಯೆಂದು, ಖೂಳನೆಂದು ಕರೆವವನನ್ನು ಸರಿಪಡಿಸಹೊರಡುತ್ತದೆ. ಬಹುಶಃ ಹೊಟ್ಟೆಯೊಳಗಿರುವ ಪುಟ್ಟ ಚೀಲವೇ ಯಶಸ್ಸು-ವೈಫಲ್ಯ ಎರಡನ್ನೂ ಕಂಡಿರುವ ಹೆಂಗಸಿನ ಈ ನಡವಳಿಕೆಗೆ ಕಾರಣವಿರಬಹುದು. ಎಷ್ಟೋ ಪ್ರೀತಿ, ಪ್ರೇಮ, ಪ್ರಣಯಗಳು ಅಸಾಮಾನ್ಯವಾದುದನ್ನು ಸಾಧಿಸುವ ಈ ಛಲದಿಂದಲೇ ಮೊಳೆತಿರುತ್ತವೆ. ಇಂತಹುದೇ ಒಂದು ವಿಶ್ವಾಸ ಹಾಗೂ ಇರುವುದನ್ನು ಮುಚ್ಚಿಟ್ಟು ಮರ್ಯಾದೆ ಕಾಪಾಡಿಕೊಳ್ಳಬೇಕೆಂದು ತಾನೇ ಹೇರಿಕೊಂಡ ಜವಾಬ್ದಾರಿ - ಇವೆರೆಡರ ನಡುವೆ ತೆಹಮಿನಾ ಸಿಕ್ಕಿಕೊಳ್ಳುತ್ತಾಳೆ. ಸದಾ ಭೀತಿ - ಅವಮಾನದ ಭೀತಿ, ಹಿಂಸೆಯ ಭೀತಿ, ಮಾನನಷ್ಟದ ಭೀತಿ, ಸಂಸಾರ ಮುರಿದುಹೋಗುವ ಭೀತಿ. ಒಟ್ಟಾರೆ ಭೀತಿಯೇ ಬದುಕೆಂಬಂತೆ ಆದಾಗ ಸೀಳು ವ್ಯಕ್ತಿತ್ವ ಕಾಣಿಸಿಕೊಳ್ಳುತ್ತದೆ. ಎಡವುವುದು, ಎಡವಿದ್ದರ ಸಮರ್ಥನೆಗಿಳಿದು ಮತ್ತಷ್ಟು ಎಡವುವಂತಹ ಆತ್ಮಹತ್ಯಾತ್ಮಕ ನಡವಳಿಕೆಗೆ ಕಾರಣವಾಗುತ್ತದೆ.

ಸಾಂಪ್ರದಾಯಿಕ ಮನಸ್ಸು ಈ ಆತ್ಮಚರಿತ್ರೆಯನ್ನು ಓದಿ ವ್ಯಭಿಚಾರಿ ಹೆಣ್ಣೊಬ್ಬಳು ತನ್ನ ತಪ್ಪಿಗೆ ತಕ್ಕುದಾಗಿ ಶಿಕ್ಷೆ ಅನುಭವಿಸಿದಳು ಎಂದು ವಿಲಕ್ಷಣ ಖುಷಿ ಅನುಭವಿಸಬಹುದು. ಏಕೆಂದರೆ ವಿವಾಹಬಾಹಿರ ಸಂಬಂಧಗಳು ಮೊದಲಿನಿಂದಲೂ ಹೀನಾಯ ಮೌಲ್ಯವೆಂದೇ ಪರಿಗಣಿಸಲ್ಪಟ್ಟಿವೆ. ವಾಸ್ತವ ಸಂಗತಿಯೆಂದರೆ ವಿವಾಹ ಚೌಕಟ್ಟು ರೂಪುಗೊಂಡಷ್ಟೇ ದಿನದಿಂದ ಅದನ್ನು ಉಲ್ಲಂಘಿಸುವ ಪ್ರಯತ್ನವೂ ನಡೆಯುತ್ತಿದೆ. ಏಕಪತ್ನೀವ್ರತಸ್ಥ, ಪತಿವ್ರತೆ ಎಂಬ ಕಿರೀಟಗಳು; ಬಹುಪತ್ನಿತ್ವಕ್ಕೆ (ಇಸ್ಲಾಮಿನಲ್ಲಿ ನಾಲ್ಕು ಮದುವೆಗೆ) ಧಾರ್ಮಿಕ ಅವಕಾಶ; ಸ್ವೇಚ್ಛೆಗೆ, ಲೈಂಗಿಕತೆಯ ಪೂರೈಕೆಗೆ ಸಮಾಜ ಸೃಷ್ಟಿಸಿದ ವೇಶ್ಯಾವೃತ್ತಿ - ಇವೆಲ್ಲದರ ಹೊರತಾಗಿಯೂ ವಿವಾಹಬಾಹಿರ ಸಂಬಂಧಗಳನ್ನು ತಡೆಯುವಲ್ಲಿ ಸಮಾಜಗಳು ಸೋತಿವೆ. ಬುದ್ಧ ತನ್ನ ಉಪದೇಶಗಳಲ್ಲಿ ಪರಸ್ತ್ರೀಯರ ಮೋಹಿಸುವುದು ತಪ್ಪೆನ್ನುತ್ತಾನೆ. ನಮ್ಮ ದಾಸರು, ವಚನಕಾರರು, ತತ್ವಪದಕಾರರು, ಚಿಂತಕರು ‘ಛಲ ಬೇಕು ಶರಣಂಗೆ ಪರಸತಿಯನೊಲ್ಲೆನೆಂಬ’ ಎಂದು ಮತ್ತೆಮತ್ತೆ ತಿಳಿ ಹೇಳಿದ್ದಾರೆ.

ಆದರೆ ಬರೀ ಬೋಧನೆಗಳಿಂದ ಮನಸ್ಸು ಬದಲಾಗುವಂತಿದ್ದರೆ ಮನುಷ್ಯ ಸಮಾಜ ಇವತ್ತಿರುವಂತೆ ಇರುತ್ತಲೇ ಇರಲಿಲ್ಲ; ಎಲ್ಲ ಆಮಿಷ, ಕಟ್ಟುಪಾಡು, ಅನೀತಿಯ ಭಯಗಳ ಹೊರತಾಗಿಯೂ ಮನುಷ್ಯ ಮನಸಿನ ಮೋಹದ ಬಿರುಗಾಳಿ ಎಷ್ಟು ಪ್ರಬಲವಾಗಿದೆ ಎಂದರೆ ಅದು ಎಲ್ಲ ಚೌಕಟ್ಟುಗಳಾಚೆಗಿನ ಸಂಬಂಧಗಳನ್ನು ಸೃಷ್ಟಿಸುತ್ತಲೇ ಇದೆ. ವಿವಾಹಬಾಹಿರ ಸಂಬಂಧ ಅವಿವೇಕತನವೆ? ಕಾಮಾತುರವೆ? ಅನೈತಿಕ ಆಸೆಯೆ? ಕ್ಷಣಿಕ ಸೆಳೆತವೇ? ತೆಹಮಿನಾ ಮಾನವೀಯವಾಗಿದ್ದ ಮೊದಲ ಸಂಗಾತಿಯನ್ನೂ, ಪ್ರೀತಿಯ ಮಗುವನ್ನೂ ತೊರೆದು ಬರಲು ಸಾಧ್ಯವಾಗಿಸಿದ ಮಾಯಕ ಯಾವುದು? ಗಂಡನಿಂದ ವಿಚ್ಛೇದನ ಪಡೆದು ಒಬ್ಬ ಖ್ಯಾತಿವೆತ್ತ ವ್ಯಕ್ತಿಯ ಹೆಂಡತಿಯಾಗಬೇಕೆಂಬ ಮಹಾತ್ವಾಕಾಂಕ್ಷೆ ತೆಹಮಿನಾಳಿಂದ ಇಷ್ಟನ್ನೆಲ್ಲ ಮಾಡಿಸಿತೆ? ನಿಷ್ಠೆ, ಅನಿಷ್ಠೆಯ ಮಾತುಗಳ ಅತ್ತ ಸರಿಸಿ ನೋಡಿದರೂ ಕ್ಷಣಿಕ ರೋಮಾಂಚನದ ಸೆಳವಿನ ಅಪಾಯ ತೆಹಮಿನಾಗೆ ತಿಳಿಯಲಿಲ್ಲವೆ? ಅತಿ ಹೀನಾಯ ಬದುಕನ್ನು ಮುಚ್ಚಿಟ್ಟು ಸಂಕೀರ್ಣ ಸಂಬಂಧಗಳ ನಿಭಾಯಿಸುವ ಗೋಜಲು ಇಟ್ಟುಕೊಂಡಿದ್ದಾದರೂ ಯಾವ ಸಾಧನೆ?


ಎಲ್ಲ ಕ್ರೌರ್ಯದ ಹಿಂದೆ ಭಯ, ಕೀಳರಿಮೆಯ ಮನಸಿರುತ್ತದೆ. ಕೀಳರಿಮೆಯೇ ಅಮಾನವೀಯ ಕೃತ್ಯಗಳಿಗೆ, ಅವಿವೇಕದ ನಡವಳಿಕೆಗೆ ಕಾರಣವಾಗುತ್ತದೆ. ಈ ಆತ್ಮಚರಿತ್ರೆಯಲ್ಲಿ ತೆಹಮಿನಾ ಹಾಗೂ ಮುಸ್ತಾಫಾ ಇಬ್ಬರೂ ಎಲ್ಲವೂ ಇದ್ದೂ ವಿಚಿತ್ರ ಕೀಳರಿಮೆಗೆ ಬಲಿಯಾದವರು. ಕೀಳರಿಮೆ ತೆಹಮಿನಾಳಲ್ಲಿ ಖಿನ್ನತೆ ಮತ್ತು ವಿವೇಚನೆಯಿರದ ನಡೆಗಳಿಗೆ ಕಾರಣವಾದರೆ, ಮುಸ್ತಾಫಾನಲ್ಲಿ ತನ್ನ ಅಧಿಕಾರ ಕುಸಿದೀತೆಂಬ ಭಯದೊಡನೆ ಸೇರಿ ನಿರಂಕುಶಾಧಿಕಾರಿಯ ಕ್ರೌರ್ಯಕ್ಕೆ ಕಾರಣವಾಗಿದೆ. ಆದರೆ ಇವೆಲ್ಲದಕ್ಕೆ ಊಹಿಸಲಾಗದಷ್ಟು ಬೆಲೆ ತೆತ್ತವರಾರು? ಅನೀಸ್, ತಾನ್ಯಾ? ತೆಹಮಿನಾ? ಅವಳ ಎಳೆಯ ಮಕ್ಕಳು?

ಬದುಕು ಸರಳವಾಗಿದೆ, ಆದರೆ ಕಟ್ಟುಪಾಡುಗಳ ಗೆರೆಗಳೊಳಗೆ ಅದನ್ನು ಗೋಜಲು ಮಾಡಲಾಗಿದೆ. ಒಂದು ಗಂಟಿನಿಂದ ಬಿಡಿಸಿಕೊಳ್ಳಲು ಅದಕ್ಕಿಂತ ಕಗ್ಗಂಟಿನೊಳಗೆ ಕೈಕಾಲು ತೂರಿಸುವಂತಾಗುತ್ತದೆ. ಆಗ ಮೊದಲಿಗಿಂತ ಹೆಚ್ಚು ಬಿಗಿಗೊಳ್ಳುವುದು ಅನಿವಾರ್ಯವೇ ಆಗುತ್ತದೆ. ಹಾಗಾದರೆ ಯಾವುದು ಬಿಡುಗಡೆ? ಯಾವುದು ಬಂಧನ? ಕೊನೆಗು ಮನುಷ್ಯ ಜೀವಿಗೆ ಸಂಬಂಧಗಳಿಂದ ಬೇಕಿರುವುದಾದರೂ ಏನು?

ಇವು ಸುಲಭದಲ್ಲಿ ಬಗೆಹರಿಸಬಲ್ಲ ದ್ವಂದ್ವಗಳಲ್ಲ. ಇವು ಸಾವು ಬದುಕಿನಂತಹ, ಮನುಕುಲದ ಹುಟ್ಟಿನೊಂದಿಗೇ ಬಂದ ಉತ್ತರವಿಲ್ಲದ ಪ್ರಶ್ನೆಗಳು.

***

ಇಡೀ ಪುಸ್ತಕದಲ್ಲಿ ತನ್ನ ನಡವಳಿಕೆಗಳನ್ನೂ, ಮುಸ್ತಾಫಾನದನ್ನೂ ಇದ್ದದ್ದು ಇರುವಂತೆ ಚಿತ್ರಿಸಿರುವುದು ಎದ್ದು ಕಾಣುತ್ತದೆ. ಅವಿವೇಕದ್ದೆನಿಸುವ ತನ್ನ ಪ್ರತಿ ನಡೆಯನ್ನೂ, ಮೊದಲ ಗಂಡನಿಗೆ ಬಗೆದ ವಿಶ್ವಾಸ ದ್ರೋಹವನ್ನೂ, ಮುಸ್ತಾಫಾ ಸತ್ತರೆ ಸಾಕೆಂದು ತಾನು ಹಂಬಲಿಸುವುದನ್ನೂ, ಆಗೀಗ ನುಸುಳುವ ಈರ್ಷ್ಯೆಯನ್ನೂ ಬಚ್ಚಿಡದೆ ಬರೆಯಲಾಗಿದೆ. ನಡುನಡುವೆ ಶಮನಕಾರಿ ಔಷಧಗಳಿಗೆ ಮಾರುಹೋಗಬೇಕಾದ ಅನಿವಾರ್ಯತೆಗೆ ಈಡಾಗಿರುವುದನ್ನು ಹೇಳಲಾಗಿದೆ. ಸಾಧಾರಣವಾಗಿ ಮಹಿಳಾ ಆತ್ಮಕತೆಗಳು ತೃಪ್ತಭಾವದಿಂದ, ತನ್ನ ಇದುವರೆಗಿನ ಬದುಕು-ಸಾಧನೆಯ ಕುರಿತು ಹೆಮ್ಮೆಯನ್ನು ಪ್ರಕಟಿಸುತ್ತ ಕೊನೆಯಾಗುವುದಿಲ್ಲ. ಬದಲಾಗಿ ನಿರೂಪಣೆಯ ಪ್ರತಿ ಹಂತದಲ್ಲೂ ಅಭದ್ರತೆಯ ತೊಳಲಾಟ, ತನ್ನ ಆತ್ಮಗೌರವಯುಕ್ತ ಬಿಡುಗಡೆಯತ್ತ, ಸ್ವಯಂಪರಿಪೂರ್ಣತೆಯತ್ತ ಸಾಗುವುದು ಹೇಗೆಂಬ ಕಾಳಜಿ ಕಂಡುಬರುತ್ತದೆ. ‘ಆರನೆಯ ಹೆಂಡತಿಯ ಆತ್ಮಕಥೆ’ಯೂ ಇದಕ್ಕಿಂತ ಭಿನ್ನವಾಗಿಲ್ಲ.

ವಿಚ್ಛೇದನಗೊಂಡ ಕೆಲ ವರುಷಗಳವರೆಗೆ ಯಾರಿಗೂ ಬೇಡದವಳಾಗಿ ಮಕ್ಕಳಿಂದ, ತವರಿನವರಿಂದ ದೂರವಾಗಿ ಎಲ್ಲ ಸಂಕಷ್ಟಗಳನ್ನೆದುರಿಸಿದ ತೆಹಮಿನಾ ನಂತರ ತನ್ನ ಬದುಕನ್ನು ದಿಟ್ಟವಾಗಿ ರೂಪಿಸಿಕೊಂಡಳು. ಮಹಿಳೆಯರ ಪರ, ದಮನಿತ ಸಮುದಾಯದ ಪರ ದನಿಯೆತ್ತಲು ನಿರ್ಧರಿಸಿದಳು. ದೇವರ ಮೇಲಿನ ಅಚಲ ವಿಶ್ವಾಸದಿಂದ ಬರಹದ ಹಾದಿ ಹಿಡಿಯುವ ತೆಹಮಿನಾ ೧೯೯೧ರಲ್ಲಿ ‘ಮೈ ಫ್ಯೂಡಲ್ ಲಾರ್ಡ್’ ಬರೆದಳು. ಪಾಕಿಸ್ತಾನದ ರಾಜಕೀಯ, ಸಾಮಾಜಿಕ ವಲಯಗಳಲ್ಲಿ ಈ ಕೃತಿ ಬಿರುಗಾಳಿ ಎಬ್ಬಿಸಲಿರುವ ಸೂಚನೆ ಸಿಕ್ಕೊಡನೆ ಪ್ರಕಾಶಕರು ಪ್ರಕಟಣೆಗೆ ಹಿಂದೇಟು ಹಾಕಿದಾಗ ಎಲ್ಲ ಭಯಗಳ ಮೆಟ್ಟಿನಿಂತು ತೆಹಮಿನಾ ತಾನೇ ಪುಸ್ತಕ ಪ್ರಕಟಿಸಿದಳು.


ತಮ್ಮ ಅಂತರಂಗದ ತುಮುಲಗಳನ್ನು ಬಿಚ್ಚಿಟ್ಟ ಮೈ ಫ್ಯೂಡಲ್ ಲಾರ್ಡ್ ಕೃತಿಯ ಯಶಸ್ಸಿನ ನಂತರ ತೆಹಮಿನಾ ೧೯೯೬ರಲ್ಲಿ ಅಬ್ದುಲ್ ಸತ್ತಾರ್ ಈಧಿ ಎಂಬ ಪಾಕಿಸ್ತಾನದ ನಿಸ್ಪೃಹ ಸಮಾಜ ಸೇವಕರೊಬ್ಬರ ಜೀವನ ಚರಿತ್ರೆ ‘ಎ ಮಿರರ್ ಟು ದ ಬ್ಲೈಂಡ್’ ಬರೆದಳು. ಈಧಿ ಕುರಿತ ಜೀವನ ಚರಿತ್ರೆ ಬರೆಯುವ ಮೂರು ವರ್ಷ ಅವರೊಡನೆ ಅವರ ಆಶ್ರಮಗಳಲ್ಲಿದ್ದಳು. ಗುಜರಾತ್ ಸಂಜಾತ ಈಧಿಯವರ ಈಧಿ ಫೌಂಡೇಷನ್ ಪಾಕಿಸ್ತಾನದ ಅತಿ ದೊಡ್ಡ ಸ್ವಯಂಸೇವಾ ಸಂಸ್ಥೆ. ವಯೋವೃದ್ಧರು, ರೋಗಿಗಳು, ಪರಿತ್ಯಕ್ತ ಮಹಿಳೆ-ಮಕ್ಕಳಿಗಾಗಿ ೩೩೦ ಆಶ್ರಮ, ಶಾಲೆ, ಆಸ್ಪತ್ರೆ, ಪುನರ್ವಸತಿ ಕೇಂದ್ರಗಳನ್ನು ಪಾಕಿಸ್ತಾನದಾದ್ಯಂತ ನಾನಾ ಕಡೆಗಳಲ್ಲಿ ಹೊಂದಿರುವ ಈಧಿ ಫೌಂಡೇಷನ್ ಸಾವಿರಾರು ಅನಾಥ ಮಕ್ಕಳನ್ನು ಬೆಳೆಸಿದೆ. ೧೯೯೮ರಲ್ಲಿ ತೆಹಮಿನಾ ಬ್ಲಾಸ್ಫೆಮಿ ಎಂಬ ಕಾದಂಬರಿ ಬರೆದು ಇಸ್ಲಾಮಿಕ್ ಪುರೋಹಿತಶಾಹಿಯ, ಆಧ್ಯಾತ್ಮಿಕ ಗುರುಗಳಾದ ಪೀರರ ಗುಪ್ತ ಬದುಕು ಮತ್ತು ಹಗರಣಗಳನ್ನು ಬಯಲಿಗೆಳೆದು ಹಲವರ ಕೆಂಗಣ್ಣಿಗೆ ಗುರಿಯಾದಳು. ಅದು ಕಾಲ್ಪನಿಕ ಕತೆಯಾಗಿದ್ದರೂ ನೈಜ ಘಟನೆಗಳನ್ನಾಧರಿಸಿದ್ದು ಎಂದು ಹೇಳುವ ಮೂಲಕ ಅಂತಹ ದೌರ್ಜನ್ಯದ ಘಟನೆಗಳು ಈಗಲೂ ನಡೆಯುತ್ತಿವೆ ಎಂದು ನೇರವಾಗಿ ಆರೋಪಿಸಿದಳು. ನಂತರ ‘ಹ್ಯಾಪಿ ಥಿಂಗ್ಸ್ ಇನ್ ಸಾರೋ ಟೈಮ್ಸ್’ ಪುಸ್ತಕ ೨೦೧೩ರಲ್ಲಿ ಹೊರಬಂತು.

೨೪ ವರ್ಷ ಕೆಳಗೆ ಪ್ರಕಟವಾದ ಆಕೆಯ ಆತ್ಮಕತೆ ಇವತ್ತಿಗೂ ಪ್ರಸ್ತುತವೇ. ಶಕ್ತಿ, ಅಧಿಕಾರಗಳು ವಂಶಪಾರಂಪರ್ಯವಾಗಿ ಬರುವುದಿಲ್ಲ; ಯಾರೋ ನಮಗೆ ಒದಗಿಸುವುದೂ ಇಲ್ಲ. ಯಾವುದೇ ಸಹಾಯ ಒದಗದ ಒಂದು ನಿಸ್ಸಹಾಯಕ ಸ್ಥಿತಿಯಲ್ಲಿ ಅಸಹಾಯಕ ಚೇತನಗಳೂ ದಿಟ್ಟ ನಿರ್ಧಾರಗಳಿಗೆ ಬರುತ್ತವೆ. ಹಾಗೆ ತೆಹಮಿನಾಗೆ ಒದಗಿಬಂದಿದ್ದು ಬರವಣಿಗೆ. ಹತ್ತಾರು ಜನ್ಮಕ್ಕಾಗುವಷ್ಟು ಅವಮಾನ, ಹಿಂಸೆ, ನೋವು ಅನುಭವಿಸಿರುವ ತೆಹಮಿನಾ, ಬರವಣಿಗೆಯನ್ನೇಕೆ ಆಯ್ದುಕೊಂಡೆ ಎಂದು ಮಾರ್ಮಿಕವಾಗಿ ಹೇಳುತ್ತಾರೆ. ‘ಬಹಳ ಜನ ನನ್ನ ಪ್ರತೀಕಾರ ಮನೋಭಾವದಿಂದ ಮೈ ಫ್ಯೂಡಲ್ ಲಾರ್ಡ್ ಪುಸ್ತಕ ಬರೆದೆನೆಂದು ತಿಳಿದಿದ್ದಾರೆ. ಆದರೆ ನಾನು ಬರೆದದ್ದು ನನಗೋಸ್ಕರ, ನನಗೇನಾಯಿತೆಂದು ತಿಳಿಯುವುದಕ್ಕೋಸ್ಕರ. ಅದು ಕೇವಲ ನನ್ನ ಕತೆಯಲ್ಲ. ನನ್ನಂತೆ ದೌರ್ಜನ್ಯ ಅನುಭವಿಸುವ ಎಷ್ಟೋ ಹೆಣ್ಮಕ್ಕಳ ಹೇಳಿಕೊಳ್ಳಲಾಗದ ಕತೆ. ಅಸಾಧ್ಯ ಏಕಾಂಗಿತನ ಕಾಡುವಾಗ ಅಂತಹ ಒಂದು ಕತೆಯನ್ನು ನನ್ನೊಳಗಿಟ್ಟುಕೊಂಡು ಸುಮ್ಮನಿರುವುದು ಸಾಧ್ಯವೇ ಇರಲಿಲ್ಲ. ಅದು ಪ್ರಾಮಾಣಿಕವಾಗಿ ಹೊರದಾರಿ ಕಂಡುಕೊಂಡ ಆಕ್ರೋಶ. ಹೀಗೆ ಬರೆದೆನೆಂದು ನನ್ನ ಕುಟುಂಬ ನನ್ನನ್ನು ೧೩ ವರ್ಷಗಳ ಕಾಲ ದೂರ ಮಾಡಿತು. ಮನೆಯ ಯಾವ ಮಹಿಳೆಯೂ ನನ್ನನ್ನು ಭೇಟಿಯಾಗಬಾರದೆಂದು ಕಟ್ಟಾಜ್ಞೆ ವಿಧಿಸಲಾಯಿತು. ಆದರೆ ಬರವಣಿಗೆ ಒಂದು ಸಬಲೀಕರಣ ಯತ್ನ. ಹರಿದು ಛಿದ್ರಗೊಂಡ ಬದುಕನ್ನು ಕೂಡಿಸಿ ನೋಡಲು ಬರವಣಿಗೆಯಿಂದ ಸಾಧ್ಯವಾಗಿದೆ. ಆತ್ಮವನ್ನು ನಾನಾ ಸ್ತರಗಳಲ್ಲಿ ಬಂಧಿಸಿರುವ ಎಲ್ಲವನ್ನು ಕಿತ್ತೊಗೆಯಲು ನಾನಾ ಅಭಿವ್ಯಕ್ತಿಗಳ ಅವಶ್ಯಕತೆಯಿದೆ. ಬರವಣಿಗೆ ಮತ್ತು ಪೇಂಟಿಂಗ್ ಅಂತಹ ಎರಡು ದಾರಿಗಳಾಗಿ ನನಗೆ ಒದಗಿವೆ’ ಎನ್ನುತ್ತಾರೆ. ಈಗ ಪೇಂಟಿಂಗ್‌ನಲ್ಲಿ ತೀವ್ರವಾಗಿ ತೊಡಗಿಸಿಕೊಂಡಿರುವ ತೆಹಮಿನಾ ಒಂದು ಕಾಫಿ ಟೇಬಲ್ ಬುಕ್ ಪ್ರಕಟಿಸಲಿದ್ದಾರೆ.

‘ಆರನೇ ಹೆಂಡತಿಯ ಆತ್ಮಕತೆ’ ಓದುತ್ತ ಮೊದಮೊದಲಿಗೆ ಟಾಲ್‌ಸ್ಟಾಯ್ ಬರೆದ ಅನ್ನಾ ಕರೆನಿನಾ ನೆನಪಿಗೆ ಬರುತ್ತದೆ. ಆದರೆ ದುರಂತ ಸಾವಿಗೆ ಈಡಾಗುವ ಅನ್ನಾಳ ಬದುಕಿಗಿಂತ ಭಿನ್ನವಾದ ಹಾದಿಯನ್ನು ತೆಹಮಿನಾ ಆಯ್ದುಕೊಂಡಿದ್ದಾರೆ. ತನ್ನ ಬದುಕಿನ ಆರಂಭದ ದಿನಗಳಲ್ಲಿ ಸ್ವಯಂಕೇಂದ್ರಿತ ಸಿರಿವಂತ ಖಯಾಲಿ ಬದುಕನ್ನು ಬದುಕಿದ ತೆಹಮಿನಾ ತಡವಾಗಿಯಾದರೂ ಸಮಾಜಕ್ಕೆ ತೆರೆದುಕೊಳುವ ಮೂಲಕ ಬಿಡುಗಡೆಯ ಸಾರ್ಥಕ ದಾರಿಯತ್ತ ನಡೆದಿದ್ದಾರೆ.

ಬರವಣಿಗೆಯ ಆಚೆಗೂ ತೆಹಮಿನಾ ಚಟುವಟಿಕೆಗಳು ವಿಸ್ತರಿಸಿಕೊಂಡಿವೆ. ಮಹಿಳೆಯರ ಪರ ಮಾತನಾಡುವ ದಿಟ್ಟ ದನಿಯಾಗಿ ವಿಸ್ತೃತ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದಾರೆ. ಮುಸ್ತಫಾ ಖಾರ್‌ನ ಮೂರನೆಯ ಹೆಂಡತಿಯ ಮಗ ಬಿಲಾಲ್ ತನ್ನ ಹೆಂಡತಿ ಫಕ್ರಾ ಯೂನಸ್‌ಳನ್ನು ತಂದೆಯಂತೆಯೇ ಹಿಂಸಿಸುತ್ತಿದ್ದ. ಹೆಂಡತಿ ಬೇಸತ್ತು ಮನೆ ತೊರೆದುಹೋದಾಗ ಅವಳ ಮೇಲೆ ಬಿಲಾಲ್ ಆಸಿಡ್ ದಾಳಿ ನಡೆಸಿ ವಿಕೃತಳನ್ನಾಗಿಸಿದ. ಆಗವಳ ಸಹಾಯಕ್ಕೆ ನಿಂತು ವಿದೇಶದಲ್ಲಿ ಚಿಕಿತ್ಸೆ ಕೊಡಿಸಲು ನೆರವಾದದ್ದು ತೆಹಮಿನಾರೇ. ೧೦ ವರ್ಷಗಳಲ್ಲಿ ಫಕ್ರಾಗೆ ೩೬ ಸರ್ಜರಿಗಳು ನಡೆದವು. ಆದರೆ ಕೊನೆಗು ತಾನು ಬದುಕಿ ಉಪಯೋಗವಿಲ್ಲವೆಂದು ಖಿನ್ನತೆಗೊಳಗಾದ ಫಕ್ರಾ ಮನೆಯ ಮಹಡಿಯಿಂದ ಕೆಳಬಿದ್ದು ೨೦೧೩ರಲ್ಲಿ ಆತ್ಮಹತ್ಯೆಗೆ ಶರಣಾದಳು.


ತೆಹಮಿನಾ ೨೦೦೩ರಲ್ಲಿ ಈಗಿನ ಪಾಕ್ ಪ್ರಧಾನಿ ನವಾಜ್ ಶರೀಫರ ತಮ್ಮ ಶಹಬಾಜ್ ಶರೀಫರನ್ನು ಮದುವೆಯಾದರು. ಶಹಬಾಜ್ ಶರೀಫ್ ಈಗ ಪಂಜಾಬಿನ ಮುಖ್ಯಮಂತ್ರಿ. ಆದರೆ ಪಾಕಿಸ್ತಾನದ ರಾಜಕೀಯ ಗಣ್ಯರ ಅತಿ ಅದ್ದೂರಿ ಒಣ ಠೇಂಕಾರವನ್ನು ಕಂಡಿರುವ ಆಕೆ ಜೂನ್ ೨೦೧೫ರಲ್ಲಿ ಪತಿಯೊಡನೆ ಸಣ್ಣ ಮನೆಯೊಂದಕ್ಕೆ ಹೋಗಿದ್ದಾರೆ. ಪಾಕಿಸ್ತಾನದಲ್ಲಿ ಬಡವರು, ಸಿರಿವಂತ ಗಣ್ಯರ ನಡುವಿನ ಅಂತರ ಅಪಾರವಾಗಿದ್ದು ಅದನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಜನರ ಗಮನ ಸೆಳೆಯುವ ಪ್ರಯತ್ನ ಇದು ಎಂದು ತನ್ನ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ.



ಕೊನೆಗೊಂದು ಪ್ರಾರ್ಥನೆ ಮನದಲ್ಲಿ ಸುಳಿಯುತ್ತಿದೆ: ತೆಹಮಿನಾ ನಂಬುವ ದೇವರೇ, ನೀ ಸರ್ವಶಕ್ತ ಹೌದಾದಲ್ಲಿ ಮುಸ್ತಫಾ ಖಾರನಂಥವನನ್ನು, ಬಾಯಿ ಹೊಲೆದುಕೊಂಡ ತೆಹಮಿನಾರನ್ನು ಇನ್ನು ಸೃಷ್ಟಿಸದಿರು..

ಸೋಮವಾರ, ಜನವರಿ 4, 2016

ಗೋವಿನ ಚರ್ಮವೂ..ಸಂಗೀತ ವಾದ್ಯಗಳೂ

  
-ಟಿ.ಕೆ.ದಯಾನಂದ

  ಇಂಡಿಯಾದ ಸಂಗೀತ ಪರಂಪರೆಗೆ ಬಹುದೊಡ್ಡ ಚರಿತ್ರೆಯಿದೆ. ಅಂತೆಯೇ ಇಲ್ಲಿನ ಸಂಗೀತವಾದ್ಯಗಳು ಸಹ. ಈ ವಾದ್ಯಗಳ ಪಟ್ಟಿಯಲ್ಲಿ ಚರ್ಮವಾದ್ಯಗಳು ಅತಿಹೆಚ್ಚಿನ ಜನಪ್ರಿಯತೆ, ಖ್ಯಾತಿಗಳಿಸಿವೆ. ಸಂಗೀತವನ್ನು ಎಲ್ಲರೂ ಪ್ರೀತಿಸಬೇಕೇನೋ ಹೌದು, ಆದರೆ ಜೀವಪರತೆಯನ್ನು ಪ್ರತಿಪಾದಿಸೋ ಸಂಗೀತವು ಅದಕ್ಕೆಂದು ಬಳಸಿಕೊಳ್ಳುವ ಸಾಧನ ಸಲಕರಣೆಗಳಲ್ಲು ಅದೇ ಜೀವಪ್ರೀತಿಯನ್ನು ತೋರಿಸಬೇಕಲ್ವ..? 

ಕೇರಳ, ಮಧುರೈ, ನಮ್ಮದೇ ದಕ್ಷಿಣ ಕನ್ನಡದ ಬಹುಪಾಲು ದೇವಳಗಳಲ್ಲಿ ಚಂಡೆವಾದ್ಯ ಜನಪ್ರಿಯ, ದೇವಳಗಳ ಚಂಡೆ ವಾದ್ಯಗಾರರು ಒಂದೇ ತಾಳದಲ್ಲಿ ಚಂಡೆ ಬಾರಿಸಲು ಶುರುವಿಟ್ಟರೆ ಶಿವ ತಾಂಡವ ನೃತ್ಯ ನೆನಪಾಗದೆ ಇರದು. ಒಂಚೂರು ಕ್ಷಮಿಸಿ.. ಇಂಥ ಚಂಡೆಯನ್ನು ಎಮ್ಮೆ ಹಸು ಮೇಕೆಗಳ ಚರ್ಮವನ್ನು ಬಳಸಿ ತಯಾರಿಸ್ತಾರೆ.. ನಾಗಮಂಡಲದ ಪೂಜಾಸಮಯದಲ್ಲಿ ಬಳಸುವ ಢಮರುಗದ ಎರಡೂ ಬದಿಯ ಚರ್ಮ ಪಶು-ಜಾನುವಾರುಗಳದ್ದು. ಕಥಕ್ಕಳಿ ಮತ್ತು ಯಕ್ಷಗಾನಕ್ಕೆ ಬಳಸುವ ವಾದ್ಯಗಳಿಗೂ ಹಸುವಿನ ಚರ್ಮವೇ ಬೇಕು. ದೇವಸ್ಥಾನಗಳ ಪ್ರಾಂಗಣದೊಳಗೇ ಸತ್ತ ಹಸುದನಗಳ ಚರ್ಮ ಪ್ರವೇಶಿಸಿ ಆಗಿದೆ. ದೇವರಿಗೂ ಈ ಬಗ್ಗೆ ತಕರಾರು ಇದ್ದಂತಿಲ್ಲ, ಏಕಂದ್ರೆ ಚಂಡೆ-ಢಮರುಗ ನುಡಿಸುವವರಿಗೆ ಯಾವ ದೇವರ ಶಾಪವೂ ತಟ್ಟಿಲ್ಲ.

ಚಂಡೆ ತಯಾರಿಸುವ ವಿಧಾನ
https://www.youtube.com/watch?v=oa8EqWvIxts


ಇನ್ನು ನಮ್ಮ ಮದುವೆ-ಮುಂಜಿಗಳಲ್ಲಿ ಇಡೀ ಸಮಾರಂಭಕ್ಕೆ ಕಳೆ ತಂದುಕೊಡುವ ವಾದ್ಯಗಾರರು ಬಳಸುವ ವಾದ್ಯಗಳಲ್ಲಿ ಅರ್ಧಕ್ಕರ್ಧ ಚರ್ಮವಾದ್ಯಗಳು. ಮೃದಂಗಂ, ತಬಲ.. ಇವೆಲ್ಲವೂ ತಾಳಮೇಳದೊಡನೆ ನಮ್ಮನ್ನು ಮಂತ್ರಮುಗ್ಧಗೊಳಿಸಲು ಸತ್ತ ಜಾನುವಾರುಗಳ ಚರ್ಮವೇ ಬೇಕು.. ಎಂಥ ಕರ್ಮ ರೀ..

(ಮೃದಂಗಂ -ತಬಲ ಮಾಡುವ ವಿಧಾನ) 
https://www.youtube.com/watch?v=yBQ8AT4ip0w


ಕರ್ನಾಟಕ ಸಂಗೀತ ಮತ್ತು ಹಿಂದುಸ್ಥಾನಿ ಸಂಗೀತಗಳಲ್ಲಿ ಬಳಸಲಾಗುವ ಪಕ್ಕವಾದ್ಯ, ರಥಯಾತ್ರೆ, ಜಾತ್ರೆ, ದೇವರುತ್ಸವಗಳಲ್ಲಿ ಬಳಸುವ ದೊಡ್ಡ ತಮಟೆ, ಹಲಗೆವಾದ್ಯಗಳು.. ಎಲ್ಲದಕ್ಕು ಹಸುಆಕಳು ಎಮ್ಮೆದನಗಳ ಸಂಸ್ಕರಿಸಿದ ಚರ್ಮವೇ ಬೇಕು. ಇಲ್ಲಿ ನನಗೊಂದು ಪ್ರಶ್ನೆಯಿದೆ. 

ಜಾನುವಾರುಗಳ ಚರ್ಮದ ವ್ಯಾಪಾರಕ್ಕೆ ಒಂದು ಕಾರಣವಾಗಿರುವ ಈ ಬಗೆಯ ಚರ್ಮವಾದ್ಯಗಳನ್ನೇ ಬಳಸಿ ಅಂತ ಯಾವ ದೇವರಾದ್ರೂ ಭಕ್ತರಿಗೆ ದೇವಸ್ಥಾನದವರಿಗೆ ಹೇಳಿದ್ದಾನ? ಮತ್ಯಾಕೆ ಈ ಹಿಂಸಾವಾದ್ಯಗಳು ದೇವಸ್ಥಾನಗಳೊಳಗೆ ಮೊಳಗಬೇಕು ನುಡಿಯಬೇಕು? ಈ ಚರ್ಮವಾದ್ಯಗಳಿಗೆ ಪರ್ಯಾಯ ಪತ್ತೆ ಮಾಡಿಕೊಳ್ಳುವತ್ತ ನಮ್ಮ ಆಲೋಚನೆ ಹೋಗೋದ್ಯಾವಾಗ?

ನಮ್ಮ ಕಾಮಧೇನು ಇನ್ನು ಏನೇನು ನರಕಗಳನ್ನು ನೋಡಬೇಕೋ ಗೊತ್ತಿಲ್ಲ.
‪#‎ಪವಿತ್ರ_ಗೋಮಾತೆ_ಉಳಿಸಿ_ಆಂದೋಳನ‬

ಹಳತು ಕಳಚಿ ಹೊಸತು ಧರಿಸುವ ಜನಪದ ಕಲೆಗಳು






- ಅರುಣ್ ಜೋಳದಕೂಡ್ಲಿಗಿ


ಸಾಮಾನ್ಯವಾಗಿ ಜಾನಪದ ವಿದ್ವಾಂಸರು, ಜನಸಾಮಾನ್ಯರು ಆಧುನಿಕತೆಯಿಂದ ಜನಪದ ಕಲೆಗಳು ನಾಶವಾಗುತ್ತಿವೆ ಎಂದು ಆತಂಕ ಪಡುತ್ತಾರೆ. ಹೀಗೆ ನಾಶವಾಗುವ ಕಲೆಗಳನ್ನು ಉಳಿಸಿಕೊಳ್ಳುವ ಬಗ್ಗೆ ಉಪಾಯಗಳನ್ನು ಹುಡುಕುತ್ತಾರೆ. ಈ ಆತಂಕ ಸುಳ್ಳಲ್ಲವಾದರೂ, ಪೂರ್ಣ ನಿಜವಲ್ಲ. ಇದನ್ನು ಮೂರು ನೆಲೆಯಿಂದ ನೋಡಬಹುದು. ಒಂದು: ಜನಪದ ಕಲೆಗಳು ಕಡಿಮೆಯಾಗುವುದಕ್ಕೆ ಕಾರಣಗಳನ್ನು ಶೋಧಿಸುವುದು. ಎರಡು: ಆಧುನಿಕ ಬದಲಾವಣೆ ಜತೆ ಜನಪದ ಕಲೆಗಳು ಮಾಡಿಕೊಂಡ ಹೊಂದಾಣಿಕೆಯನ್ನು ಗುರುತಿಸುವುದು. ಮೂರು: ಜನಪದ ಕಲೆಯ ಹೊಸ ಸಾದ್ಯತೆಗಳನ್ನು ಊಹಿಸುವುದು.

ಮುಖ್ಯವಾಗಿ ಹಳ್ಳಿಗಳು ಇಂದು ಕೇವಲ ಹಳ್ಳಿಗಳಾಗಿ ಉಳಿದಿಲ್ಲ. ಸಹಜವಾಗಿ ನಗರದ ಕೆಲವು ಲಕ್ಷಣಗಳು ಹಳ್ಳಿಗಳನ್ನೂ ಪ್ರವೇಶಿಸಿವೆ. ಹಾಗಾಗಿ ಹಳ್ಳಿಗಳ ಯುವ ಪಡೆ ನಗರ ವಲಸೆಗೆ ಉತ್ಸುಕವಾಗಿರುತ್ತದೆ. ಇನ್ನು ಶಿಕ್ಷಣ ಪಡೆಯುವುದು ಹಳ್ಳಿಗಳಿಂದ ದೂರವಾಗಲು ಎನ್ನುವಂತಾಗಿದೆ. ಇದಕ್ಕೆ ಶಿಕ್ಷಣ ಪದ್ದತಿಯೂ ಕಾರಣವಾಗಿದೆ. ಜನಪದ ಕಲೆ ಎನ್ನುವುದು ಕಲಿಯದ ಅನಕ್ಷರಸ್ತರ ಸಂಕೇತ ಎಂಬಂತಾಗಿದೆ. ಹಾಗಾಗಿ ಕಲಿತ ಗ್ರಾಮೀಣ ಯುವಕರು ಸಹಜವಾಗಿ ಜನಪದ ಕಲೆಗಳ ಕಡೆ ಹೆಚ್ಚು ಒಲವು ತೋರುವುದು ಕಡಿಮೆ. ಮುಖ್ಯವಾಗಿ ಜನಪದ ಕಲೆಗಳು ಕೃಷಿ ಪರಂಪರೆಯ ಜತೆ ಸಾವಯವ ಸಂಬಂಧವನ್ನು ಹೊಂದಿರುವಂಥದ್ದು.

ಆದರೆ ಇಂದು ಕೃಷಿ ಕೆಲಸ ಮಾಡುವುದು ಲಾಭದಾಯಕವಾದ ಕಸುಬಲ್ಲ, ಹಾಗಾಗಿ ಕೃಷಿಯೇತರ ಚಟುವಟಿಕೆಗಳಲ್ಲಿ ಹಳ್ಳಿಗರು ಆಸಕ್ತಿ ತೋರುತ್ತಿದ್ದಾರೆ. ಈ ಕಾರಣಕ್ಕೆ ಉದ್ಯೋಗ ಅರಸಿ ನಗರಕ್ಕೆ ವಲಸೆ ಹೋಗುತ್ತಿದ್ದಾರೆ. ಹೀಗಾಗಿ ಹಳ್ಳಿಯ ಕೃಷಿ, ಆಚರಣ ಲೋಕ ದಿನದಿಂದ ದಿನಕ್ಕೆ ನಂಬಿಕೆ ಕಳೆದುಕೊಂಡ ಕೃತಕ ಆಚರಣಾ ಲೋಕವಾಗಿ ಪರಿವರ್ತನೆ ಆಗುತ್ತಿದೆ. ಈ ಬಗೆಯ ಕೃಷಿ ಮತ್ತು ಗ್ರಾಮೀಣ ಆಚರಣಾ ಲೋಕದ ಜತೆ ಸಂಬಂಧವಿಟ್ಟುಕೊಂಡ ಜನಪದ ಕಲೆಗಳು ಸಹಜವಾಗಿ ಮಂಕಾಗುತ್ತಿವೆ.

ಇಂದು ಜನಪದ ಕಲೆಗಳ ವೃತ್ತಿನಿರತ ತಂಡಗಳು ರೂಪುಗೊಳ್ಳುತ್ತಿವೆ. ಉದಾಹರಣೆಗೆ ಇಡೀ ಕರ್ನಾಟಕವನ್ನು ಪ್ರತಿನಿಧಿಸುವ ಕೆಲವು ಡೊಳ್ಳು ತಂಡಗಳು. ಕೆಲವು ವೀರಗಾಸೆ ತಂಡಗಳು, ಕೆಲವು ಪೂಜಾ ಕುಣಿತದ ತಂಡಗಳಿವೆ. ಈ ತಂಡಗಳು ಕರ್ನಾಟಕದ ಬೇರೆ ಬೇರೆ ಕಡೆಗಳಲ್ಲಿ ಪ್ರದರ್ಶನ ಕೊಡುತ್ತಿವೆ. ಹೀಗಾಗಿ ಪ್ರತಿ ಹಳ್ಳಿಗಳಲ್ಲಿ ಇರುವ ಡೊಳ್ಳಿನ ಕುಣಿತದ ವೈವಿದ್ಯತೆ ನಾಶವಾಗಿ ಒಂದು ಮಾದರಿ ಪ್ರಚಾರಕ್ಕೆ ಬರುತ್ತಿದೆ. ಜಾಗತೀಕರಣದ ಮಾರುಕಟ್ಟೆ ಮನಸ್ಸು ಹೇಗೆ ವೈವಿದ್ಯತೆಗಳನ್ನು ನಾಶ ಮಾಡುತ್ತದೆಯೋ ಹಾಗೆ ಜನಪದ ಕಲಾಪ್ರಕಾರಗಳ ನಾಶವೂ ಆಗುತ್ತಿದೆ. ಇನ್ನು ಇಂತಹ ವೃತ್ತಿನಿರತÀ ತಂಡದ ಕಲಾವಿದರು ನಿಜವಾದ ಕಲೆಯ ಹಿನ್ನೆಲೆಯಿಂದ ಬಂದ ಕಲಾವಿದರಾಗಿರುವುದೂ ಕಡಿಮೆ. ಅನೇಕರು ಫೇಕ್ ಕಲಾವಿದರಾಗಿರುತ್ತಾರೆ. ತಮ್ಮ ರಾಜಕೀಯ ಪ್ರಭಾವ ಬಳಸಿ ಸರಕಾರದ ಎಲ್ಲಾ ಕಾರ್ಯಕ್ರಮಗಳಲ್ಲೂ ಅವಕಾಶ ಪಡೆಯುತ್ತಿರುತ್ತಾರೆ. ಇಂತಹ ಸಂದರ್ಭದಲ್ಲಿ ನಿಜವಾಗ ಕಲಾವಿದರು ಅಂಚಿಗೆ ಸರಿಯುತ್ತಾರೆ.

ಕರ್ನಾಟಕದಲ್ಲಿ ಜನಪದ ಪ್ರದರ್ಶನಾತ್ಮಕ ಕಲೆಗಳಿಗೆ ಮಹಿಳೆಯರ ಪ್ರವೇಶವಾಗುತ್ತಿದೆ. ಹೀಗಾಗಿ ಅದು ನಾವು ಜನಪದ ಕಲೆಗಳನ್ನು ಪುರುಷರ ನೆಲೆಯಲ್ಲಿ ಕಟ್ಟಿಕೊಂಡ ವ್ಯಾಖ್ಯಾನಗಳನ್ನೆಲ್ಲಾ ಬದಲಿಸುತ್ತಿದೆ. ಇದೊಂದು ದೊಡ್ಡ ಚಲನೆ. ಈಗ ಹತ್ತಾರು ಮಹಿಳಾ ಡೊಳ್ಳಿನ ತಂಡಗಳಿವೆ. ಚಿತ್ರದುರ್ಗದ ಬಳಿ ಹಳ್ಳಿಯೊಂದರಲ್ಲಿ ಹಲಗೆಯನ್ನು ಬಾರಿಸುವ ಮಹಿಳಾ ತಂಡವಿದೆ. ಕೂಡ್ಲಿಗಿ ಮತ್ತು ಕೂಡ್ಲಿಗಿ ಸಮೀಪದ ವಿರುಪಾಪುರ ಎಂಬ ಹಳ್ಳಿಯಲ್ಲಿ ಮಹಿಳೆಯರು ದೊಡ್ಡಾಟ, ಸಣ್ಣಾಟಗಳನ್ನು ಪ್ರಯೋಗ ಮಾಡುತ್ತಿದ್ದಾರೆ. ಗಂಡಸರಿಗೆ ಮಾತ್ರ ಸೀಮಿತವಾದ ಬಯಲಾಟ ಪರಂಪರೆಯಲ್ಲಿ ಮಹಿಳೆಯ ಪ್ರವೇಶವಾಗಿದೆ. ಕರ್ನಾಟಕದ ಹಳ್ಳಿಗಳಲ್ಲಿ ಮಹಿಳಾ ಉಳಿತಾಯ ಸಂಘಟನೆಗಳು ಸ್ಥಾಪನೆಯಾಗಿವೆ. ಹೀಗೆ ಸಂಘಟಿತ ಮಹಿಳೆಯರು ಜನಪದ ಕಲಾತಂಡಗಳನ್ನು ರಚಿಸಿಕೊಳ್ಳುವ ಹೊಸ ಸಾಹಸಕ್ಕೆ ಕೈ ಹಾಕಿದ್ದಾರೆ. ಇದು ಜಾಗತೀಕರಣದ ಸಕಾರಾತ್ಮಕ ಪರಿಣಾಮ.

ಮುಖ್ಯವಾಗಿ ಶಾಲಾ ಮಕ್ಕಳಲ್ಲಿ ಜನಪದ ಪ್ರದರ್ಶನಾತ್ಮಕ ಕಲೆಗಳ ಕಲಿಸುವಿಕೆಯ ಪ್ರಯೋಗವೂ ವಿರಳವಾಗಿದೆ. ಈ ಪ್ರಯೋಗ ಹೆಚ್ಚಾಗಿ ಸರಕಾರಿ ಶಾಲೆಗಳಿಗಿಂತ ಧಾರ್ಮಿಕ ಸಂಸ್ಥೆಗಳು (ಮಠಗಳು) ನಡೆಸುವ ಶಾಲೆಗಳಲ್ಲಿ ಈ ಪ್ರಮಾಣ ಹೆಚ್ಚಾಗಿರುವುದನ್ನು ನೋಡಬಹುದು. ಇಲ್ಲಿ ಮಠಗಳು ಜನಪದ ಕಲೆಗಳನ್ನು ಧಾರ್ಮಿಕ ಸಂವಹನದ ಮಾದ್ಯಮಗಳನ್ನಾಗಿ ಬಳಸಿಕೊಳ್ಳುತ್ತಿರುವುದು ಕಾಣುತ್ತದೆ.
ಉದಾಹರಣೆಗೆ: ಆದಿ ಚುಂಚನಗಿರಿ ಮಠ (ವಕ್ಕಲಿಗ ಸಮುದಾಯದ ಮಠ), ಸುತ್ತೂರು ಮಠ (ಮೈಸೂರು) ಸಿರಿಗೆರೆ ಮಠ (ಚಿತ್ರದುರ್ಗ) ಇವು ಲಿಂಗಾಯತ ಸಮುದಾಯದ ಮಠಗಳು. ಇಲ್ಲಿ ನಡೆಸುವ ಶಾಲೆಗಳಲ್ಲಿ ಮುಖ್ಯವಾಗಿ ವೀರಗಾಸೆ, ಸಮಾಳ, ಭಜನೆ, ಕೋಲಾಟ ಮುಂತಾದ ಪ್ರದರ್ಶನ ಕಲೆಗಳನ್ನು ಕಲಿಸಲಾಗುತ್ತದೆ. ಇಲ್ಲಿ ಮೇಲು ಜಾತಿಯ ಕಲೆಗಳನ್ನು ಮಾತ್ರ ಕಲಿಸಲಾಗುತ್ತದೆ. ಈ ಕಲೆಗಳಿಗೆ ಮಠ ಪರಂಪರೆಯ ಧಾರ್ಮಿಕ ಸ್ವರೂಪವನ್ನು ಕೊಡುತ್ತಿವೆ. ಈ ಮೂಲಕ ಮಠಗಳು ಜನಸಾಮಾನ್ಯರ ಕಲೆಗಳನ್ನು ಉಳಿಸುತ್ತಿವೆ ಎನ್ನುವ ಭಾವನೆಯನ್ನು ಉದ್ದೀಪಿಸುವುದೂ ಇದೆ. ಈ ಮಠಗಳು ದಲಿತರ ಕಲೆಯನ್ನು ಕಲಿಸಲು ಉತ್ಸುಕವಾಗಿಲ್ಲದಿರುವುದೂ ಕೂಡ ಈ ಬಗೆಯ ಮನಸ್ಥಿತಿಯ ಹಿಂದಿನ ಧೋರಣೆಯನ್ನು ಸ್ಪಷ್ಟಪಡಿಸುತ್ತದೆ.poojkuni

ಕರ್ನಾಕಟದ ಕೆಲವು ಪ್ರದರ್ಶನಾತ್ಮಕ ಕಲೆಗಳ ಜತೆ ಜನಪದ ಕಾವ್ಯವೋ, ಜನಪದ ಕಥನ ಕಾವ್ಯವೋ, ಮಹಾಕಾವ್ಯವೋ ಇರುತ್ತದೆ. ಈ ಕಲೆಗಳಿಗೂ ಆಯಾ ಪ್ರದರ್ಶನಾತ್ಮಕ ಕಲೆಗೂ ಸಾವಯವ ಸಂಬಂಧವಿರುತ್ತದೆ. ಕೆಲವೊಮ್ಮೆ ಆಯಾ ಕಾವ್ಯದ ಏರಿಳಿತಕ್ಕೆ ತಕ್ಕ ಹಾಗೆ ಜನಪದ ಪ್ರದರ್ಶನಾತ್ಮಕ ಕಲೆಗಳ ಲಯವೂ ಬದಲಾಗುತ್ತದೆ. ಇಲ್ಲಿನ ಜನಪದ ಕಾವ್ಯದಲ್ಲಿ ಜನರ ಚರಿತ್ರೆಯೋ, ಜನರ ಪ್ರತಿರೋಧವೋ ದಾಖಲಾಗುತ್ತದೆ. ಇದು ಮೌಖಿಕ ಚರಿತ್ರೆಯನ್ನು ದಾಖಲಿಸುತ್ತಾ ಹೋಗುತ್ತದೆ. ಹಾಗೆಯೇ ಒಂದು ತಲೆಮಾರಿನಿಂದ ಮತ್ತೊಂದು ತಲೆಮಾರಿಗೆ ಪ್ರಸಾರವಾಗುತ್ತಿರುತ್ತದೆ.

ಆದರೆ ಇಂದು ಹೀಗೆ ಹಾಡುಪರಂಪರೆಯ ಭಾಗವಾಗಿದ್ದ ಪ್ರದರ್ಶನಾತ್ಮಕ ಕಲೆಗಳು ಆಯಾ ಹಾಡು ಗೀತೆ, ಸಾಹಿತ್ಯವನ್ನು ಕಳಚಿಕೊಂಡು ಕೇವಲ ಪ್ರದರ್ಶನ ನೀಡಬಲ್ಲ ಕಲೆಗಳಾಗಿವೆ. ಹೀಗೆ ಈ ಬಗೆಯ ಸಾಹಿತ್ಯದ ಗೈರು ಹಾಜರಿಯಿಂದ ಆಯಾ ಜನಪದ ಕಲಾವಿದ ಈ ಕಲೆಯ ಮೂಲಕ ಏನನ್ನು ಹೇಳಲು ಬಯಸುತ್ತಾನೆ ಎನ್ನುವುದು ತಿಳಿಯುವುದಿಲ್ಲ. ಅಥವಾ ಈ ಮೂಲಕ ಜನಪದ ಕಲಾವಿದನೊಬ್ಬನು ಈ ಸಮಾಜದ ಬಗ್ಗೆ ತಾನು ಹೇಳಬೇಕಾದ್ದನ್ನು ಹೇಳದೆ ಮೌನವಾಗುತ್ತಾನೆ. ಹೀಗೆ ದೃಶ್ಯ ಮುಂದೆ ಬಂದು ಮಾತು ಮೌನವಾಗುತ್ತಿರುವ ಚಲನೆಯು ಕಾಣುತ್ತಿದೆ.

ಜನಪದ ಕಲಾವಿದರಿಗೆ ತಮ್ಮ ಕಲೆಯನ್ನು ಮಾರುಕಟ್ಟೆಯ ಸರಕಿನ ಹಾಗೆ ಆಕರ್ಷಕವಾಗಿ ಕಾಣಿಸುವಲ್ಲಿ ಹೆಚ್ಚು ಉತ್ಸುಕರಾಗಿದ್ದಾರೆ. ಮುಖ್ಯವಾಗಿ ಜನಪದ ಪ್ರದರ್ಶನಾತ್ಮಕ ಕಲೆಗಳ ವೇಷಭೂಷಣಗಳಲ್ಲಿ ತುಂಬಾ ಬದಲಾವಣೆಗಳು ಆಗಿವೆ. ಈ ವೇಷಭೂಷಣಗಳು ಸಂಸ್ಕøತಿಯ ಯಾವುದೋ ಸಾಂಕೇತಿಕೆ ಆಗಿರದೆ, ಅದು ಕೇವಲ ನೋಡುಗರನ್ನು ಆಕರ್ಷಿಸುವ ಉದ್ದೇಶವನ್ನು ಮಾತ್ರ ಹೊಂದಿರುತ್ತವೆ. ಇನ್ನು ಈಚೆಗೆ ಜನಪದ ಕಲೆಗಳಲ್ಲಿ ಸಾಹಸದ ಪ್ರದರ್ಶನ ಮಾಡಲಾಗುತ್ತಿದೆ. ಹೀಗೆ ಸಾಹಸದ ಪ್ರದರ್ಶನ ಆಯಾ ಕಲೆಯ ಭಾಗವಾಗಿ ಬಂದದ್ದಲ್ಲ. ಬದಲಾಗಿ ಜನರನ್ನು ಅಚ್ಚರಿಗೊಳಿಸುವ, ಜನರನ್ನು ಮೈನೆವರೇಳಿಸುವ, ಅಥವಾ ಅದೇ ಕಲೆಯ ಬೇರೊಂದು ತಂಡಕ್ಕಿಂತ ಭಿನ್ನವಾಗಿ ಕಾಣುವ ಒತ್ತಾಯಗಳು ಇದ್ದಂತಿದೆ.goravaru

ಪ್ರದರ್ಶನ ಕೊಡುವ ಸಂದರ್ಭದಲ್ಲಿ ರಾಜಕಾರಣಿಗಳಿಗೆ, ಸರಕಾರದ ಪ್ರಭಾವಿಗಳ ಎದುರು ತಮ್ಮನ್ನು ತಾವು ಜಾಹೀರಾತು ಮಾಡಿಕೊಳ್ಳುವ ಗುಣ ಬೆಳೆಯುತ್ತಿದೆ. ಕಾರಣ ಮುಂದಿನ ಕಾರ್ಯಕ್ರಮಗಳಿಗೆ ತಮ್ಮನ್ನು ಆಹ್ವಾನಿಸುವ ಹಾಗೆ ಪ್ರಭಾವಿಸುವ ಮನಸ್ಥಿತಿ ಇದರ ಹಿಂದೆ ಇದ್ದಂತಿದೆ. ಇನ್ನು ತಮ್ಮ ಪ್ರದರ್ಶನಾತ್ಮಕ ಕಲೆಯ ಬಗ್ಗೆ ಮಾಧ್ಯಮಗಳಲ್ಲಿ ಸುದ್ದಿ ಮಾಡುವ ಹಪಾಹಪಿ ಹೆಚ್ಚುತ್ತಿದೆ. ಈ ಕಾರಣಕ್ಕೆ ಮಾಧ್ಯಮದವರ ಮುಂದೆ ಹಲ್ಲು ಗಿಂಜುವ ಕೀಳು ಪ್ರವೃತ್ತಿಯೂ ಬೆಳೆಯುತ್ತಿದೆ. ಬಹುಶಃ ಈ ಬೆಳವಣಿಗೆ ನೇರವಾಗಿ ಜಾಗತೀಕರಣದ ಪ್ರಭಾವವನ್ನು ತೋರಿಸುತ್ತಿದೆ.

ಹೀಗೆ ಜನಪದ ಕಲೆಗಳು ಆಧುನಿಕತೆಯಿಂದಾಗಿ ನೇರ ಪ್ರಭಾವಕ್ಕೆ ಒಳಗಾಗಿವೆ. ಇದರ ಕೆಲವು ಅಂಶಗಳನ್ನು ಮಾತ್ರ ಇಲ್ಲಿ ಹೇಳಲು ಸಾದ್ಯವಾಗಿದೆ. ಇದನ್ನು ಇನ್ನಷ್ಟು ಗಂಭೀರವಾಗಿ ಯೋಚಿಸುವ ಅಗತ್ಯವಿದೆ. ಜನಪದ ಕಲೆಗಳು ನಾಶವಾಗಿವೆ ಎನ್ನುವುದಕ್ಕಿಂತ ಅವುಗಳ ಹೊಸ ಚಲನೆ ಏನಾಗಿದೆ ಎಂದು ನೋಡುವುದು ಸರಿ. ಈ ಬಗೆಯ ಹೊಸ ಚಲನೆಗಳು ಕಾಲದ ಜತೆ ಸಾವಯವ ಸಂಬಂಧವನ್ನು ರೂಪಿಸಿಕೊಳ್ಳುವ ಕಲೆಯೊಂದರ ಜಿಗುಟುತನವನ್ನು ಕಾಣಿಸುತ್ತದೆ.

ಮುಳ್ಳಿನ ಗಿಡ ನೆಟ್ಟು ಮಾಯವಾಗುತ್ತಿದ್ದ ಮೊಗಳ್ಳಿ ಗಣೇಶ್ ಕಥೆಗಳು

-ಚಂದ್ರಶೇಖರ್ ಐಜೂರ್.






‘ನನ್ನಜ್ಜನಿಗೊಂದಾಸೆಯಿತ್ತು’ ಕತೆಯನ್ನು ನನ್ನದೇ ದನಿಯಲ್ಲಿ 48 ನಿಮಿಷಗಳ ಕಾಲ ರೆಕಾರ್ಡ್ ಮಾಡಿಟ್ಟುಕೊಂಡಿದ್ದೆ

1998ರ ಆಗಸ್ಟ್ ತಿಂಗಳ ಯಾವುದೋ ಒಂದು ದಿನ ಆ ಸಂಕಲನದಲ್ಲಿದ್ದ ಎಂಟು ಕತೆಗಳನ್ನು ಒಂದೇ ಗುಕ್ಕಿಗೆ ಓದಿ ಮುಗಿಸಿದ್ದೆ. ಮತ್ತೆರಡು ದಿನಗಳಲ್ಲಿ ಇನ್ನೆರಡು ಸಲ ಆ ಕತೆಗಳನ್ನು ಓದಿದ್ದೆ. ಇನ್ನು ಚೇತರಿಸಿಕೊಳ್ಳಲಾರೆ ಅನ್ನಿಸಿ ಆ ಕತೆಗಳ ಕತೆಗಾರನಿಗೆ ಆರು ಪುಟಗಳ ದೀರ್ಘಪತ್ರವೊಂದನ್ನು ಬರೆದು ಸುಮ್ಮನಾಗಿದ್ದೆ. ಆ ಕಥಾ ಸಂಕಲನದ ಹೆಸರು ‘ಬುಗುರಿ’ ಅದರ ಕತೆಗಾರ ಮೊಗಳ್ಳಿ ಗಣೇಶ್.

ಅಷ್ಟು ತೀವ್ರವಾಗಿ ‘ಬುಗುರಿ’ ಸಂಕಲನದಲ್ಲಿದ್ದ ಅಷ್ಟೂ ಕತೆಗಳನ್ನು ಓದಲು ಕಾರಣ ಅವು ನನ್ನ ಕತೆಗಳಾಗಿದ್ದವು. ಅವು ನಾನು ಹುಟ್ಟಿದೂರಿನ ಕತೆಗಳಾಗಿದ್ದವು, ನನ್ನ ತಾಯಿನೆಲದ ಕತೆಗಳಾಗಿದ್ದವು, ನನ್ನ ಬೇರುಗಳ ಕತೆಗಳಾಗಿದ್ದವು, ನಾನು ನಡೆದಾಡಿದ ನೆಲದ ಕತೆಗಳಾಗಿದ್ದವು ಮತ್ತು ಅವು ನನ್ನವಷ್ಟೇ ಕತೆಗಳಾಗಿದ್ದವು. ಜಗತ್ತಿನ ಯಾವುದೇ ದೇಶದ ಯಾವುದೇ ನೆಲದ ಶ್ರೇಷ್ಠ ಕತೆಗಳ ಸಮಕ್ಕೆ ನಿಲ್ಲಬಲ್ಲ ಕತೆಗಳು ಮೊಗಳ್ಳಿ ಗಣೇಶರ ‘ಬುಗುರಿ’ ಸಂಕಲನದಲ್ಲಿ ಕಂಡವು.

1998ರಲ್ಲಿ ಶುರುಮಾಡಿದವನು ಅವರನ್ನು ಭೇಟಿಯಾಗುವ ತನಕ ಅಂದರೆ 2003ರವರೆಗೆ ಮೊಗಳ್ಳಿಯವರಿಗೆ ಪತ್ರ ಬರೆಯುತ್ತಲೇ ಇದ್ದೆ. ‘ಬುಗುರಿ’ ಸಂಕಲನದಲ್ಲಿ ‘ನನ್ನಜ್ಜನಿಗೊಂದಾಸೆಯಿತ್ತು’ ಎಂಬ ಕತೆಯೊಂದಿದೆ. ಆ ಕತೆ ನನ್ನ ಎಷ್ಟೋ ರಾತ್ರಿಗಳನ್ನು ಕೊಂದುಹಾಕಿತ್ತು. ನಿದ್ರೆಬಾರದ ರಾತ್ರಿಗಳಲ್ಲಿ ಮೊಗಳ್ಳಿ ಕತೆಗಳು ಮೈಮನಸ್ಸುಗಳನ್ನು ಆವರಿಸಿಕೊಂಡು ಮುಳ್ಳಿನ ಗಿಡ ನೆಟ್ಟು ಮಾಯವಾಗುತ್ತಿದ್ದವು. ‘ನನ್ನಜ್ಜನಿಗೊಂದಾಸೆಯಿತ್ತು’ ಕತೆಯನ್ನು ನನ್ನದೇ ದನಿಯಲ್ಲಿ 48 ನಿಮಿಷಗಳ ಕಾಲ ರೆಕಾರ್ಡ್ ಮಾಡಿಟ್ಟುಕೊಂಡು ಸರಿರಾತ್ರಿಯಲ್ಲಿ ಕೇಳುತ್ತಾ ದಿನ ಕಳೆಯುತ್ತಿದ್ದೆ. 1998ರಿಂದ 2003ರವರೆಗೆ ನನ್ನ ಬದುಕನ್ನು ಮೊಗಳ್ಳಿ ಗಣೇಶರ ಕತೆಗಳು ಯಾವ ಪರಿ ಆವರಿಸಿಕೊಂಡಿತ್ತೆಂದರೆ ಅವರ ‘ಬುಗುರಿ’ ಸಂಕಲನದ ಎಲ್ಲ ಕತೆಗಳನ್ನು ಹತ್ತಾರು ಪ್ರತಿಗಳಲ್ಲಿ ಝರಾಕ್ಸ್ ಮಾಡಿಸಿಟ್ಟುಕೊಂಡು ನನ್ನ ಹಾಸ್ಟೆಲ್ ರೂಮ್, ನನ್ನ ಬ್ಯಾಗ್, ನನ್ನ ಮನೆ, ಗೆಳೆಯ ರವಿಚಂದ್ರನ ರೂಮ್, ಜ್ಞಾನಭಾರತಿಯ ಲೈಬ್ರರಿ ಎದುರಿಗಿದ್ದ ಕೆಂಪಣ್ಣನ ಟೀ ಅಂಗಡಿ… ಹೀಗೆ ಎಲ್ಲೆಂದರಲ್ಲಿ ಒಂದೊಂದು ಪ್ರತಿ ಇಟ್ಟಿದ್ದೇ. ಕೈಗೆಟುಕಿದ ಕಡೆ ಮೊಗಳ್ಳಿ ಕತೆಗಳು.

‘ನನ್ನಜ್ಜನಿಗೊಂದಾಸೆಯಿತ್ತು’ ಕತೆ ನನ್ನ ಪಾಲಿಗೆ ಕೇವಲ ಕತೆ ಮಾತ್ರ ಆಗಿರಲಿಲ್ಲ. ನನ್ನ ಬದುಕಿನ ತಾರುಣ್ಯದ ದಿನಗಳನ್ನು ಕತ್ತರಿಸಿ ಹಾಗೇ ಹಸಿಹಸಿಯಾಗಿ ಬಿಳಿ ಹಾಳೆಯ ಮೇಲೆ ಚೆಲ್ಲಿದಂತಿತ್ತು… ಪ್ರತಿಸಲ ‘ನನ್ನಜ್ಜನಿಗೊಂದಾಸೆಯಿತ್ತು’ ಓದುವಾಗ ಎಲ್ಲಿಂದಲೋ ಕಣ್ಣೀರು ಒತ್ತರಿಸಿಕೊಂಡು ಬರುತ್ತಿತ್ತು. ಅದು ಈಗಲೂ ನಿಂತಿಲ್ಲ. ಕತೆಗಾರನ ಸ್ವಗತವೇ ನನ್ನನ್ನು ಇಕ್ಕುಳದಿಂದ ಅದುಮಿ ಹಿಡಿದು ಹಿಚುಕುವಂತಿತ್ತು:

“ನಾನು ಹುಡುಗರ ಸಹವಾಸದಿಂದ ಒಂಟಿಯಾಗುತ್ತಾ ಬಂದೆ. ಕಾರಣಗಳೇ ಇಲ್ಲದೆ ಖಿನ್ನತೆಗೆ ಈಡಾಗುವ ರೋಗವನ್ನು ಪಾರಂಪರಿಕವಾಗಿ ನನ್ನ ಮನೆ ನನಗೆ ಆಗಲೇ ಚಿರಾಸ್ತಿಯ ಹಾಗೆ ಕೊಟ್ಟುಬಿಟ್ಟಿತ್ತು. ಕಳೆದ ಕಾಲದ ಕವಣೆಕಲ್ಲಿನ ಬೀಸಿನಲ್ಲಿ ನಾನು ಎಲ್ಲರಿಂದ ದೂರವಾಗಬೇಕಾಯ್ತು. ಪತನದ ತುದಿಯೇರುವ ಮನೆತನದ ಹುಡುಗ ಇವನೊಬ್ಬನಾದರೂ ನಮ್ಮ ದುರಂತಗಳಿಂದ ಬದುಕುಳಿಯಲಿ ಎಂದು ತಾತ ನಿರ್ಧರಿಸಿದ್ದ.

ನನ್ನ ಓದಿನ ದಾಹ ಹೆಚ್ಚಾಗುತ್ತಾ ಹೋದಂತೆ ನಿರಾಯಾಸವಾಗಿ ಎಲ್ಲರೂ ಎಲ್ಲವೂ ದೂರವಾದವು. ಕೊನೆಕೊನೆಗೆ ತಾತ ಕೂಡ ಮಸುಕಾಗತೊಡಗಿದ. ಅಂಕಿ ಅಂಶಗಳ ಪ್ರಕಾರ ಮನೆಯಲ್ಲಿ ಐದು ಜನ ಸತ್ತು ಏಳು ಮಕ್ಕಳು ಹೊಸದಾಗಿ ಹುಟ್ಟಿದ್ದವು. ಪ್ರೀತಿಯ ಅಜ್ಜಿಯರು ನನ್ನ ಜೊತೆ ಅವರ ಯೌವ್ವನದ ಪ್ರೇಮಗಳನ್ನು ಹೇಳಿಕೊಂಡಿದ್ದವರು ಮರೆಯಾಗಿದ್ದರು. ಹುಟ್ಟುಸಾವುಗಳೆಲ್ಲ ನನಗೆ ತಿಳಿಯುತ್ತಿದ್ದುದು ಎಷ್ಟೋ ದಿನಗಳ ನಂತರಕ್ಕೆ
ಅಂತೂ ವರ್ಷಗಳು ನಿರರ್ಥಕವಾಗಿ ಕರಗಿಹೋದವು. ಊರಿನ ಎಷ್ಟೋ ನೆನಪುಗಳೆಲ್ಲವನ್ನೂ ನಾನೇ ಸಾಯಿಸಿದ್ದೆ.”

2005ರಲ್ಲಿ ಒಂದು ರಾತ್ರಿ ಮೊಗಳ್ಳಿ ಗಣೇಶರನ್ನು ರೈಲು ನಿಲ್ದಾಣಕ್ಕೆ ಬೀಳ್ಕೊಡಲೆಂದು ಹೋಗುತ್ತಿದ್ದಾಗ ಅವರು ನನ್ನ ಕತೆಗಳಲ್ಲಿ ನಿನಗೆ ಇಷ್ಟವಾದ ಕತೆ ಯಾವುದು ಎಂದು ಕೇಳಿದ್ದರು. ನಾನು ಕ್ಷಣಕೂಡ ತಡಮಾಡದೆ ‘ನನ್ನಜ್ಜನಿಗೊಂದಾಸೆಯಿತ್ತು’ ಎಂದಿದ್ದೆ. ಅದಕ್ಕೆ ನನ್ನವೇ ಆದ ಕಾರಣಗಳನ್ನು ಕೊಟ್ಟಿದ್ದೆ. ಮೊಗಳ್ಳಿ ಎಷ್ಟು ಖುಷಿಯಾದರೆಂದರೆ ಮುಂದೆ ಅವರ ಅನೇಕ ಕತೆಗಳು ಜರ್ಮನಿ, ಸ್ಪ್ಯಾನಿಷ್, ಸ್ವೀಡಿಷ್, ಲ್ಯಾಟಿನ್ ಅಮೇರಿಕನ್ ಭಾಷೆಗಳಿಗೆ ಅನುವಾದಗೊಳ್ಳುವ ಸಂದರ್ಭಗಳು ಬಂದಾಗಲೆಲ್ಲ ಅವರು ‘ನನ್ನಜ್ಜನಿಗೊಂದಾಸೆಯಿತ್ತು’ ಕತೆಯನ್ನು ಅನುವಾದ ಮಾಡಲು ತಮ್ಮ ಮೊದಲ ಆಯ್ಕೆ ಎನ್ನುವಂತೆ ಪರಿಗಣಿಸಿದ್ದರು.

ಮೊಗಳ್ಳಿ ಅವರ ಕತೆಗಳು ಹುಟ್ಟಿದ ನೆಲ ಚೆನ್ನಪಟ್ಟಣ ನನ್ನ ನೆಲವೂ ಆಗಿರುವುದರಿಂದ ಅಲ್ಲೆಲ್ಲ ಬರಿಗಾಲಲ್ಲಿ ದಣಿವರಿಯದೆ ನಡೆದಾಡಿದ್ದೇನೆ. ಆ ಕತೆಗಳ ಬೇರುಗಳ ಹಿಡಿಯಲೆತ್ನಿಸಿ ನಡೆಯುವಾಗ ಅಂಗಾಲಿಗೆ ಮುಳ್ಳನ್ನು ಚುಚ್ಚಿಸಿಕೊಂಡಿದ್ದೇನೆ. ಮೊಗಳ್ಳಿ ಕತೆಗಳ ಮೇಲಿನ ನನ್ನ ತೀವ್ರ ಪ್ರೀತಿ ಮತ್ತು ತೀವ್ರ ಹಸಿವು ಮಾತ್ರ ಇನ್ನೂ ಹಿಂಗಿಲ್ಲ.

ಮೊಗಳ್ಳಿಯವರ ಇನ್ನೊಂದು ಕತೆ ‘ಪ್ರಾಣಿಗಳು’ –ಆ ಕತೆಯ ಮೊದಲ ಮಾತುಗಳನ್ನು ಬರೆದು ಇಲ್ಲಿಗೆ ಸುಮ್ಮನಾಗುವೆ:

“ಅವರು ದುಃಖಿಸಲು ಸುಖಿಸಲು ಹಾಡಲು ಯೋಚಿಸಲು ಬೇಕಾದಷ್ಟು ಸಮಸ್ಯೆಗಳಿರುತ್ತಿದ್ದವು. ಆದರೆ ಯಾರೂ ಅಂತಹದ್ದಕ್ಕೆ ಹೆಚ್ಚು ಗಮನ ಕೊಡುತ್ತಿರಲಿಲ್ಲ. ಅಲ್ಲಿ, ಊರಲ್ಲಿ ಭಯಂಕರ ಸಾವುಗಳಿದ್ದವು. ಸತ್ತವರ ದುಃಖಗಳು ಜಗತ್ತನ್ನು ಸುಡಬಲ್ಲಂತಾಗಿದ್ದವು. ಹಸುಳೆಗಳ ಎಳೆ ಕನಸುಗಳ ಹಿಚುಕುವ ಕ್ರೂರತೆಗಳಿದ್ದವು. ಬೆನ್ನು ಮೂಳೆಯ ಸವೆಸುವ ಕುಯುಕ್ತಿಗಳಿದ್ದವು. ಮನುಷ್ಯನ ಎಲ್ಲ ನೀಚತನಗಳನ್ನು ಧ್ವಂಸಮಾಡಬಹುದಾದವೆಲ್ಲ ಚೈತನ್ಯವೂ ಅಲ್ಲಿ ಅವರಲ್ಲಿ ಎಲ್ಲವೂ ಇತ್ತು. ಇದ್ದರೂ ಅವೆಲ್ಲ ಉಪಯೋಗಕ್ಕೆ ಬರುತ್ತಿರಲಿಲ್ಲ. ಯಾವುದಕ್ಕೆ ದುಃಖಿಸಬೇಕೋ ಅದಕ್ಕೆ ನಗುತ್ತಿದ್ದರು, ಯಾವುದಕ್ಕೆ ನಗಬೇಕೋ ಅದಕ್ಕೆ ವ್ಯಗ್ರರಾಗುತ್ತಿದ್ದರು. ಮನುಷ್ಯ ತನ್ನ ದುಃಖಕ್ಕೆ ಸೋಲಿಗೆ ಕಾರಣ ಕಂಡುಕೊಳ್ಳದೇ ಹೋದಾಗ ಏನೆಲ್ಲ ಆಗಬಹುದೋ ಅಂತಹದೆಲ್ಲ ಸರಾಗವಾಗಿ ಊರಲ್ಲಿ ಜರುಗುತ್ತಿತ್ತು.”

ಭಾವೈಕ್ಯ ಶಾಂತಿ ಸಮ್ಮೇಳನ

ಕನ್ನಡದ ಕಬೀರ ಎಂದು ಗುರುತಿಸುವ ಬಾಗಲಕೋಟೆ ಜಿಲ್ಲೆಯ ಮಹಾಲಿಂಗಪುರದ ಹಿಬ್ರಾಹಿಂ ಸುತಾರ ಅವರಿಗೆ ೭೫ ವರ್ಷ ತುಂಬಿದ ನೆಪದಲ್ಲಿ ಅವರ ಅಭಿನಂದನೆ ಜೊತೆ ಭಾವೈಕ್ಯ ಶಾಂತಿ ಸಮ್ಮೇಳನ ನಡೆಯುತ್ತಿದೆ. ಸಾವಿರಾರು ಜನರು ಜಾತಿ ಧರ್ಮ ಮರೆತು ಈ ಭಾವೈಕ್ಯದಲ್ಲಿ ಒಂದಾಗಿದ್ದರು. ಇಂತಹ ಮಹತ್ವದ ಕಾರ್ಯಕ್ರಮದಲ್ಲಿ ಭಾಗವಹಿಸಿದ ನನಗೆ ನಿಜಕ್ಕೂ ಸಾರ್ಥಕವೆನ್ನಿಸಿತು. ಧಾರ್ಮಿಕ ಮೂಲಭೂತವಾದ ಎಲ್ಲೆಲ್ಲೂ ವ್ಯಾಪಿಸುತ್ತಿರುವ ಈ ಹೊತ್ತು ಜನರನ್ನು ಬೆಸೆಯುವ ಇಂತಹ ಭಾವೈಕ್ಯ ಸಮಾವೇಶಗಳು ಎಲ್ಲೆಡೆಯೂ ನಡೆಯಬೇಕಾಗಿದೆ.













ಜಾನಪದ ಅಕಾಡೆಮಿಯ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭ ಮತ್ತು ಸೂಫಿ-ದರ್ವೇಶಿ-ಫಕೀರ್ ಕುರಿತ ಚರ್ಚೆ ಸಂವಾದ


ಕಲಬುರ್ಗಿಯಲ್ಲಿ 10.1.2016 ರಂದು ಜಾನಪದ ಅಕಾಡೆಮಿಯ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭ ಮತ್ತು ಸೂಫಿ-ದರ್ವೇಶಿ-ಫಕೀರ್ ಕುರಿತ ಚರ್ಚೆ ಸಂವಾದ.








ಶನಿವಾರ, ಜನವರಿ 2, 2016

ಕರಾವಳಿ ಕರ್ನಾಟಕದ ಕೋಮುವಾದ


-ಪ್ರೊ.ಚಂದ್ರಪೂಜಾರಿ


 ಕೋಮುವಾದ ಬಲಗೊಳ್ಳಬೇಕಾದರೆ ಒಂದು ಕೋಮಿಗೆ ಸೇರಿದವರು ನಾವೆಲ್ಲ ಒಂದೇ ಎನ್ನುವ ಭಾವನೆ ಸದಾ ಜಾಗ್ರತೆ ಇರಬೇಕು. ಕೋಮು ಭಾವನೆಯನ್ನು ಸದಾ ಎಚ್ಚರ ಇಡಬೇಕಾದರೆ ದಿನನಿತ್ಯದ ಬದುಕಿನಲ್ಲಿ ಅನುಭವಕ್ಕೆ ಬರುವ ಆರ್ಥಿಕ ಮತ್ತು ಸಾಮಾಜಿಕ ಏಣಿಶ್ರೇಣಿಗಳನ್ನು ಕಡೆಗಣಿಸಿ ವ್ಯವಹರಿಸುವ ಸ್ಥಿತಿ ನಿರ್ಮಾಣವಾಗಬೇಕು. ಸಾಮಾಜಿಕ/ಆರ್ಥಿಕ ಏಣಿಶ್ರೇಣಿಗಳನ್ನು ಕಡೆಗಣಿಸಿ ವ್ಯವಹರಿಸಬೇಕಾದರೆ ಸಾಮಾಜಿಕ ವಿಂಗಡನೆಗಳನ್ನು (ಹಿಂದೆ ಮೇಲ್ಜಾತಿ ಮತ್ತು ಕೆಳಜಾತಿ ಎನ್ನುವ ವಿಂಗಡನೆ) ಈಗ ಹಿಂದೂ ಮತ್ತು ಮುಸ್ಲಿಂ ವಿಂಗಡನೆ ಹಲವಾರು ಸಂಕೇತಗಳ, ಆಚರಣೆಗಳ, ಮೌಲ್ಯಗಳ ಮೂಲಕ ಜನಸಾಮಾನ್ಯರ ಪ್ರಜ್ಞೆಯ ಭಾಗವಾಗಿಸಬೇಕಾಗುತ್ತದೆ. ಕರಾವಳಿ ಕರ್ನಾಟಕದ ಕೋಮುವಾದದ ಅಭಿವೃದ್ಧಿ ಕೂಡ ಹೆಚ್ಚು ಕಡಿಮೆ ಇದೇ ಮಾರ್ಗವನ್ನು ಅನುಸರಿಸಿದೆ. ಆಂತರಿಕವಾಗಿ ವಿರೋಧಭಾಸಗಳಿಂದ ತುಂಬಿರುವ ಹಲವಾರು ಜಾತಿಗಳನ್ನು ‘ನಾವೆಲ್ಲ ಒಂದೇ ಎನ್ನುವ ಅಖಂಡತೆಯೊಳಗೆ’ ತುರುಕಿಸಲಾಗಿದೆ. ಇದಕ್ಕಾಗಿ ಅಖಂಡವಾದ ‘ಅನ್ಯ’ವನ್ನು (ಮುಸ್ಲಿಮರನ್ನು) ಸೃಷ್ಟಿಸಲಾಗಿದೆ. ಅನ್ಯರನ್ನು ಅಖಂಡವಾಗಿ ಪರಿಗಣಿಸುವಾಗ ‘ಸ್ವ’ದ ಕಲ್ಪನೆಯೂ ಅಖಂಡ (ಹಿಂದೂಗಳು ನಾವೆಲ್ಲ ಒಂದೇ) ಎನ್ನುವ ಸಂದೇಶ ರವಾನೆಯಾಗುತ್ತದೆ. ಅಷ್ಟು ಮಾತ್ರವಲ್ಲ ಕಲ್ಪಿತ ಅಖಂಡತೆಯನ್ನು ಜನ ಸಾಮಾನ್ಯರ ಪ್ರಜ್ಞೆಯ ಭಾಗವಾಗಿಸಲು ಹಲವಾರು ಸಂಕೇತಗಳ, ಆಚರಣೆಗಳ, ಮೌಲ್ಯಗಳ ಅನ್ವಯಿಕೆಯ ಪರಿಧಿಯನ್ನು ಹಿಗ್ಗಿಸಲಾಗುವುದು. ವೈದಿಕ ಗುಡಿಗೋಪುರಗಳಿಗೆ ಸೀಮಿತವಾಗಿದ್ದ ‘ಓಂ’ ಸಂಕೇತ ಇಂದು ಭೂತಸ್ಥಾನಗಳಲ್ಲೂ ರಾರಾಜಿಸುತ್ತಿದೆ. ಹಿಂದೆ ಶೇಂದಿ ಕುಡಿಯುವ, ಮೀನು, ಮಾಂಸ ತಿನ್ನುವುದರ ಬಗೆಗಿದ್ದ ಹೀನತಾ ಭಾವನೆಯನ್ನು ಇಂದು ದನದ ಮಾಂಸ ಮಾರಾಟ ಮತ್ತು ಬಳಕೆಗೆ ವರ್ಗಾಯಿಸಲಾಗಿದೆ. ಮೇಲಿನ ಸಂಕೇತಗಳು ಜತೆಗೆ ಹಿಂದುತ್ವದ ಶಾಖೆಗಳಲ್ಲಿ, ಸತ್ಯನಾರಾಯಣ  ಪೂಜೆಗಳಲ್ಲಿ, ಹಿಂದುತ್ವಕ್ಕೆ ಸಂಬಂಧಿಸಿದ ಇತರ ಕಾರ್ಯಕ್ರಮಗಳಲ್ಲಿ ಭಾಗವಹಿಸುವವರಿಗೆ ತಮ್ಮ ಆರ್ಥಿಕ ಏಕಶ್ರೇಣಿಗಳು ಸೃಷ್ಟಿಸುವ ಭಿನ್ನತೆಗಳು ತಾತ್ಕಾಲಿಕವಾಗಿ ಮರೆಯಾಗಿ ಹಿಂದುಗಳು ನಾವೆಲ್ಲ ಒಂದೇ ಎನ್ನುವ ಭಾವನೆ ಜಾಗ್ರತೆಗೊಳ್ಳುವುದು.
ಆರ್ಥಿಕ ಏಣಿಶ್ರೇಣಿಗಳನ್ನು ಅಲ್ಲಗಳೆಯಲು ಸಾಂಪ್ರದಾಯಿಕ ಗುರುತನ್ನು (ಧರ್ಮವನ್ನು) ಬಳಸುವುದರಿಂದ ಸಹಜವಾಗಿಯೇ ಆ ಸಾಂಪ್ರದಾಯಿಕ ಗುರುತಿನೊಂದಿಗೆ ಸಂಬಂಧ ಹೊಂದಿರುವ ಇತರ ಗುರುತುಗಳು (ಮುಖ್ಯವಾಗಿ ಜಾತಿ) ಕೂಡ ಬಲಗೊಳ್ಳುತ್ತವೆ. ಮೇಲ್ನೋಟಕ್ಕೆ ನಾವೆಲ್ಲ ಒಂದೇ ಎನ್ನುವ ಸಂದರ್ಭದಲ್ಲಿಯೇ ಆಳದಲ್ಲಿ ಜಾತಿಗಳ ನಡುವಿನ ಗೆರೆಗಳು ಇನ್ನೂ ಬಲಿಷ್ಠಗೊಳ್ಳುತ್ತಿವೆ. ಪಬ್ಲಿಕ್ ಡೊಮೈನ್‌ನಲ್ಲಿ ಇರುವವರು, ಸಾಮಾಜಿಕ ನಾಯಕತ್ವ, ಆರ್ಥಿಕ ನಾಯಕತ್ವ, ಸಾಂಸ್ಕೃತಿಕ ನಾಯಕತ್ವ, ಉನ್ನತ ಶಿಕ್ಷಣ, ಉನ್ನತ ಉದ್ಯೋಗಗಳು ಇತ್ಯಾದಿ ಸೂಚ್ಯಾಂಕಗಳ ಮೂಲಕ ಸಾಂಪ್ರದಾಯಿಕ ಏಣಿಶ್ರೇಣಿಗಳ ಜೀವಂತಿಕೆಯನ್ನು ಅರ್ಥಮಾಡಿಕೊಳ್ಳಬಹುದು. ಸ್ಥಳೀಯ ಸಾಂಪ್ರದಾಯಿಕ ಮೇಲ್ವರ್ಗ ಈಗಲೂ ಮೇಲಿನ ಎಲ್ಲ ಸೂಚ್ಯಂಕಗಳಲ್ಲೂ ಮುಂದಿದ್ದು ತಳಸ್ತರದ ಸಮುದಾಯಗಳು ಹಿಂದಿವೆ. ತಳಸ್ತರದ ಸಮುದಾಯಗಳು ಆರ್ಥಿಕವಾಗಿ ಮತ್ತು ರಾಜಕೀಯವಾಗಿ ದಾರಿತಪ್ಪುವುದರ ಜತೆಗೆ ಈ ಬಗೆಯ ಅಖಂಡತೆಯ ಸೃಷ್ಟಿ ಎರಡೂ ಸಮುದಾಯಗಳ (‘ಅನ್ಯ’ ಮತ್ತು ‘ಸ್ವ’ಕ್ಕೆ ಸೇರಿದ) ತಳಸ್ತರದ ಜನರ ಬದುಕನ್ನು ಅಅಸಹನೀಯಗೊಳಿಸಬಹುದು. ಕೋಮುಗಲಭೆಯಂತಹ ಹಿಂಸಾತ್ಮಕ ಘಟನೆಗಳು ಹಾದು ಹೋಗುವ ಸಂಗತಿಗಳು ಶಾಶ್ವತ ಅಲ್ಲ. ಆದರೆ ವಿರೋಧಿ ಕೋಮುಗಳನ್ನು ಸೃಷ್ಟಿಸಲು ಮತ್ತು ಅವುಗಳು ಹಿಂಸಾತ್ಮಕವಾಗಿ ವ್ಯವಹರಿಸಲು ಜನರ ಮನಸ್ಸನ್ನು ಹದಗೊಳಿಸಲು ಸೃಷ್ಟಿಸುವ ಚಿಂತನೆಗಳ ಮತ್ತು ಆಚರಣೆಗಳ ಪ್ರಭಾವ ಒಂದು ಗಳಿಗೆ ಬಂದು ಹೋಗುವ ಸಂಗತಿಗಳಲ್ಲಿ. ಅದು ಜನ ಸಾಮಾನ್ಯರ ಬದುಕನ್ನು ನಿರಂತರವಾಗಿ ಕಾಡುವ ಸಂಗತಿಗಳಾಗುತ್ತವೆ. ಇವುಗಳಿಂದಾಗಿ ಎರಡೂ ಸಮುದಾಯಗಳ ತಳಸ್ತರದ ಜನರು ತಮ್ಮದೇ ಬೇರುಗಳ ಬಗ್ಗೆ (ಊಟ, ಪಾನೀಯ, ಕಸುಬು, ಭಾಷೆ, ಉಡುಗೆ ತೊಡುಗೆ ಇತ್ಯಾದಿಗಳ ಬಗ್ಗೆ) ಒಂದು ಬಗೆಯ ಕೀಳರಿಮೆಯನ್ನು ರೂಢಿಸಿಕೊಂಡು ಇಬ್ಬಂದಿತನದಿಂದ ಬದುಕಬೇಕಾದ ಸ್ಥಿತಿ ನಿರ್ಮಾಣವಾಗುವ ಸಾಧ್ಯತೆನೂ ಇದೆ. ಇದಕ್ಕಿಂತಲೂ ಹೆಚ್ಚಾಗಿ ಮೇಲ್ವರ್ಗಗಳ ಅಧಿಕಾರದ ಹೋರಾಟಗಳಲ್ಲಿ ಎರಡೂ ಸಮುದಾಯಗಳ ಯುವಕರು ಗನ್‌ಪೌಡರ್ ತರಹ ಬಳಕೆಯಾಗುತ್ತಾರೆ. ಇದರಿಂದಾಗಿ ಈ ಜನರು ಅನುಭವಿಸಬೇಕಾದ ಇಬ್ಬಂದಿತನ ಮತ್ತು ಖಾಯಂ ಆಗಿ ಮೇಲ್ವರ್ಗ ಸೃಷ್ಟಿಸಿದ ಟ್ರ‍್ಯಾಪ್ ಒಳಗೆ ಬಂಧಿಯಾಗುವುದರ ಚಿತ್ರಣವನ್ನು ಈ ಭಾಗದಲ್ಲಿ ನೋಡಬಹುದು.
ಐವತ್ತರ ದಶಕದಲ್ಲಿ ಆರಂಭವಾದ ವಿಜ್ಞಾನ ಮತ್ತು ತಂತ್ರಜ್ಞಾನಗಳ ಅಡಿಪಾಯ ಹೊಂದಿರುವ ಅಭಿವೃದ್ಧಿ ಪ್ರಕ್ರಿಯೆಯನ್ನು ಜೀರ್ಣಿಸಿಕೊಳ್ಳಬೇಕಾದರೆ ಒಂದೋ ಸಾಕಷ್ಟು ಬಂಡವಾಳದ ಒಡೆತನ ಬೇಕು ಇಲ್ಲವೇ ಆಧುನಿಕ ತಂತ್ರಜ್ಞಾನವನ್ನು ಜೀರ್ಣಿಸಿಕೊಳ್ಳಬೇಕು. ತಳಸ್ತರದ ಸಮುದಾಯಗಳಿಗೆ ಬಂಡವಾಳದ ಒಡೆತನ ಇಲ್ಲ. ಜಿಲ್ಲೆಯ ಬಹುತೇಕ ತಾಂತ್ರಿಕ ಶಿಕ್ಷಣ ನೀಡುವ ಸಂಸ್ಥೆಗಳು ಖಾಸಗಿ ಒಡೆತನದಲ್ಲಿದ್ದು ಕ್ಯಾಪಿಟೇಶನ್ ಕೊಡಲು ಶಕ್ತವಾಗಿದ್ದವರಿಗೆ ಮಾತ್ರ ಲಭ್ಯವಾಗಿತ್ತು. ಆದುದರಿಂದ ಆಧುನಿಕ ತಂತ್ರಜ್ಞಾನವನ್ನು ಜೀರ್ಣಿಸಿಕೊಳ್ಳಲು ತಳಸ್ತರದ ಸಮುದಾಯಗಳಿಗೆ ಸಾಧ್ಯವಾಗಿಲ್ಲ. ಇದರಿಂದಾಗಿ ಅವರು ತಮ್ಮ ಸಾಂಪ್ರದಾಯಿಕ ಕಸುಬುಗಳಿಗೆ ಅಂಟಿಕೊಳ್ಳುವುದು ಅನಿವಾರ್ಯವಾಯಿತು. ಕೆಲವೊಂದು ಸಾಂಪ್ರದಾಯಿಕ ಕಸುಬುಗಳು ಫ್ಯಾಕ್ಟರಿ ಉತ್ಪಾದನೆಯಿಂದ ಮೂಲೆಗುಂಪಾದರೆ (ಕುಂಬಾರಿಕೆ, ಕಮ್ಮಾರಿಕೆ ಇತ್ಯಾದಿಗಳು) ಇನ್ನು ಕೆಲವು ಸಾಂಪ್ರದಾಯಿಕ ಕಸುಬುಗಳು ಆಧುನಿಕ ತಂತ್ರಜ್ಞಾನದ ನಡುವೆಯೂ ಉಸಿರಾಡುತ್ತಿದ್ದವು. ಆದರೆ ಕೋಮುವಾದ, ಮುಖ್ಯವಾಗಿ ಕರಾವಳಿ ಕರ್ನಾಟಕದ ಕೋಮುವಾದಿ ಚಿಂತನೆಗಳು, ಆಚರಣೆಗಳು ತಳಸ್ತರದ ಜನರಿಗಿದ್ದ ಈ ಸಣ್ಣಪುಟ್ಟ ಜೀವನಾವಕಾಶವನ್ನು ಇಲ್ಲದಾಗಿಸಿದೆ. ಇದು ಹೇಗೆಂದು ಕರಾವಳಿ ಕರ್ನಾಟಕದ ಎರಡು ಸಮುದಾಯಗಳ (ಬಿಲ್ಲವರು ಮತ್ತು ಬೆಸ್ತರು) ಉದಾಹರಣೆಯೊಂದಿಗೆ ಅರ್ಥಮಾಡಿಕೊಳ್ಳಲು ಪ್ರಯತ್ನಿಸುವ. ದಕ್ಷಿಣ ಕನ್ನಡದ ಜನಸಂಖ್ಯೆಯಲ್ಲಿ ಶೇ. ೧೯ರಷ್ಟು ಬಿಲ್ಲವರು, ಶೇ. ೪ ರಷ್ಟು ಬೆಸ್ತರಿದ್ದಾರೆ. ಕೃಷಿ, ವೈದ್ಯಕೀಯ, ಪೂಜಾರಿ ವೃತ್ತಿಗಳೊಂದಿಗೆ ಶೇಂದಿ ಇಳಿಸುವುದು ಬಿಲ್ಲವರ ಸಾಂಪ್ರದಾಯಿಕ ಕಸುಬು. ಅದೇ ರೀತಿಯಲ್ಲಿ ಕೃಷಿ, ವ್ಯಾಪಾರಗಳೊಂದಿಗೆ ಮೀನು ಹಿಡಿಯುವುದು ಬೆಸ್ತರ ಸಾಂಪ್ರದಾಯಿಕ ಕಸುಬು. ಸಾಂಪ್ರದಾಯಿಕ ಸಮಾಜ ಈ ಎರಡೂ ಕಸುಬುಗಳನ್ನು ಗೌರವಾನ್ವಿತ ಕಸುಬುಗಳೆಂದು ಪರಿಗಣಿಸಿಲ್ಲ ಎನ್ನುವುದು ಹಿಂದಿನ ಪುಟಗಳಲ್ಲಿ ನೋಡಿದ್ದೇನೆ. ಕಸುಬಿನ ಕಾರಣಕ್ಕಾಗಿ ಎರಡೂ ಸಮುದಾಯಗಳು ಹಲವಾರು ಬಗೆಯ ಬಹಿಷ್ಕಾರಗಳನ್ನು ಸಾಂಪ್ರದಾಯಿಕ ಸಮಾಜದಲ್ಲಿ ಅನುಭವಿಸಬೇಕಿತ್ತು.[1] ಸ್ಥಳೀಯ ಮೇಲ್ಜಾತಿಗಳು ಆರಂಭಿಸಿದ ಮೆಡಿಕಲ್, ಎಂಜಿನಿಯರಿಂಗ್ ಇತ್ಯಾದಿ ತಾಂತ್ರಿಕ ಶಿಕ್ಷಣ ಸಂಸ್ಥೆಗಳಲ್ಲಿ ಕ್ಯಾಪಿಟೇಶನ್‌ನಿಂದಾಗಿ ಜಿಲ್ಲೆಯ ಕೆಳವರ್ಗ ಅವಕಾಶ ಪಡೆದಿಲ್ಲ.[2] ಸುಮಾರು ಎಪ್ಪತ್ತರ ದಶಕದವರೆಗೆ ಹಲವಾರು ಕಾರಣಗಳಿಂದಾಗಿ ಬಿ.ಎ., ಬಿಕಾಂಗಳಂಥ ಸಾಮಾನ್ಯ ಡಿಗ್ರಿ ಕೂಡ ತಳಸಮುದಾಯಗಳಿಗೆ ಎಟಕುವಂತಿರಲಿಲ್ಲ. ಹೀಗೆ ಶಿಕ್ಷಣದ ಮೂಲಕ ಆಧುನಿಕ ತಂತ್ರಜ್ಞಾನ ಪಡೆಯುವ ಸಾಧ್ಯತೆಯಿಂದ ತಳಸಮುದಾಯಗಳು ವಂಚಿತವಾದುವು. ಎರಡನೇ ಸಾಧ್ಯತೆ ಬಂಡವಾಳ ವಿನಿಯೋಜಿಸಿ ಆಧುನಿಕ ತಂತ್ರಜ್ಞಾನಗಳನ್ನು ಖರೀದಿಸುವುದು. ಇದಕ್ಕೆ ಸಾಕಷ್ಟು ಬಂಡವಾಳದ ಒಡೆತನಬೇಕು. ಎರಡು ಮೂಲಗಳಿಂದ ಬಂಡವಾಳ ಶೇಖರಣ ಸಾಧ್ಯವಾಗಿತ್ತು. ಒಂದು, ವ್ಯಾಪಾರ ಮತ್ತೊಂದು ದೊಡ್ಡ ಪ್ರಮಾಣದ ಕೃಷಿ. ಆಧುನೀಕರಣದ ಆರಂಭದ ದಿನಗಳಲ್ಲಿ ವ್ಯಾಪಾರ ಮಾತ್ರ ಬಂಡವಾಳ ಶೇಖರಣೆಯ ಮುಖ್ಯ ಮೂಲ. ನಂತರದ ದಿನಗಳಲ್ಲಿ ಅದರಲ್ಲೂ ವಾಣಿಜ್ಯ ಬೆಳೆಗಳು ಪ್ರಾಮುಖ್ಯತೆ ಪಡೆಯುವುದರೊಂದಿಗೆ ದೊಡ್ಡ ಕೃಷಿಕರು ಕೂಡ ಬಂಡವಾಳ ಶೇಖರಣೆ ಮಾಡಿ ಆಧುನಿಕ ತಂತ್ರಜ್ಞಾನಗಳ ಮಾಲಿಕರಾಗಲು ಸಾಧ್ಯವಾಯಿತು.[3]ಈ ಎರಡು  ಮೂಲಗಳಿಲ್ಲದ ತಳಸಮುದಾಯಕ್ಕೆ ತಮ್ಮ ಸಾಂಪ್ರದಾಯಿಕ ಕಸುಬುಗಳೇ ಜೀವನಾಧಾರ.
ಆದರೆ ಕೋಮುವಾದದ ಆಳದಲ್ಲಿ ಜೀವಂತವಾಗಿದ್ದ ಸಾಂಪ್ರದಾಯಿಕ ಸಮಾಜದ ಕೆಲವೊಂದು ಮೌಲ್ಯಗಳು ತಳಸಮುದಾಯದ ಸಣ್ಣಪುಟ್ಟ ಜೀವನಾವಕಾಶವನ್ನು ಕಿತ್ತುಕೊಳ್ಳುತ್ತಿದೆ. ಕೆಲವೊಂದು ಉದಾಹರಣೆಯ ಮೂಲಕ ಇದನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುವ. ಬಿಲ್ಲವ ಸಮುದಾಯಕ್ಕೆ ಸೇರಿದ ಪ್ರಮುಖ ನಾಯಕರೊಬ್ಬರು ತಮ್ಮ ಸಾಂಪ್ರದಾಯಿಕ ಕಸುಬಿನ ಬಗ್ಗೆ ಹೊಂದಿರುವ ಅಭಿಪ್ರಾಯ ಇಂತಿದೆ. ಅವರು ಶಿಕ್ಷಣ ಮುಗಿಸಿ ಕೆಲಸಕ್ಕೆ ಹೋಗುವ ಬದಲು ವ್ಯಾಪಾರ ಆರಂಭಿಸಬೇಕೆಂದು ತೀರ್ಮಾನಿಸಿದರು. ವ್ಯಾಪಾರ ಮಾಡುವ ಆಲೋಚನೆಯನ್ನು ತಮ್ಮ ತಂದೆಯೊಂದಿಗೆ ಹಂಚಿಕೊಂಡರು. ಅವರ ತಂದೆ, ‘ನೀನು ಏನು ವ್ಯಾಪಾರ ಮಾಡಿದರೂ ನನ್ನ ಅಭ್ಯಂತರವೇನಿಲ್ಲ. ಆದರೆ ಸಾರಾಯಿ ಶೇಂದಿ ವ್ಯಾಪಾರ ಮಾಡಿ ನೂರಾರು ಸಂಸಾರಗಳನ್ನು ಹಾಳುಮಾಡಬೇಡ’, ಎಂದು ಹೇಳಿದರಂತೆ. ಅದರಂತೆ ಅವರು ಬೇರೆ ವ್ಯಾಪಾರ ಮಾಡಿದರು. ಬಿಲ್ಲವ ಸಂಘಗಳ ಬಹುತೇಕ ಸಭೆಗಳಲ್ಲಿ ಬಿಲ್ಲವ ನಾಯಕರು ಶೇಂದಿ ತೆಗೆಯುವ ಕಸುಬಿನಿಂದ ಆದಷ್ಟು ಬೇಗ ಬಿಲ್ಲವರು ಕಳಚಿಕೊಳ್ಳಬೇಕೆನ್ನುವ ಸಲಹೆ ನೀಡುತ್ತಿದ್ದರು. ತಮ್ಮ ಸಾಂಪ್ರದಾಯಿಕ ಕಸುಬಿನೊಂದಿಗೆ ಗುರುತಿಸಿಕೊಳ್ಳುವುದು ಬಿಲ್ಲವರಿಗೆ ಕೀಳರಿಮೆಯಾಗಿದೆ. ಅದೇ ರೀತಿಯಲ್ಲಿ ಬೆಸ್ತರಿಗೆ ತಮ್ಮ ಸಾಂಪ್ರದಾಯಿಕ ಕಸುಬಿನೊಂದಿಗೆ ಗುರುತಿಸಿಕೊಳ್ಳುವುದು ಸಮಸ್ಯೆಯಾಗಿದೆ. ಹಾಗೆಂದು ಮೀನು ತಿನ್ನುವವರು ಮತ್ತು ಶೇಂದಿ ಅಥವಾ ಇತರ ಪಾನೀಯಗಳನ್ನು ಕುಡಿಯುವವರ ಸಂಖ್ಯೆ ಕಡಿಮೆಯಾಗಿಲ್ಲ; ಜಾಸ್ತಿಯಾಗಿದೆ. ಕೆಲವು ನೂರು ಮೀಟರಿಗೊಂದು ಬಾರ್ ಮತ್ತು ಮೀನಿನ ಊಟದ ಹೊಟೇಲುಗಳಿವೆ. ಬಾರ್‌ನಲ್ಲಿ ಬೀರ್, ಬ್ರಾಂಡಿ, ವಿಸ್ಕಿಗಳು ದೊರೆಯುತ್ತವೆ. ಇವುಗಳು ಶೇಂದಿಗೆ ಹೋಲಿಸಿದರೆ ಹೆಚ್ಚು ಅಮಲು ಪಾನೀಯ ಮತ್ತು ಆರೋಗ್ಯಕ್ಕೆ ಹಾನಿಕಾರಕ. ಬಾರ್ ಒಂದನ್ನು ಆರಂಭಿಸಲು ಕೆಲವು ಲಕ್ಷ ರೂಪಾಯಿಗಳು ಬೇಕು. ಜತೆಗೆ ಬಾರ್‌ ಮಾಲೀಕ ಶೇಂದಿ ವ್ಯಾಪಾರಿಯ ನಿಕೃಷ್ಟತೆಯನ್ನು ಸಮಾಜದಲ್ಲಿ ಎದುರಿಸಬೇಕಾಗಿಲ್ಲ. ಆದರೆ ಕೆಲವೇ ಕೆಲವು ನೂರು ರೂಪಾಯಿಗಳ ವಿನಿಯೋಜನೆಯಲ್ಲಿ ಮಾಡಬಹುದಾದ ಕುಲಕಸುಬನ್ನು ಮಾಡಲಾರದ ಸ್ಥಿತಿಯಲ್ಲಿ ಸ್ಥಳೀಯ ಬಿಲ್ಲವರ ಯುವಕರಿದ್ದಾರೆ.[4] ಇದೆಂತಹ ವಿಪರ್ಯಾಸ ಮತ್ತು ಎಂತಹ ಶಾಪಗ್ರಸ್ತ ಸಮಾಜ. ಸಾವಿರಾರು ಕುಟುಂಬಗಳಿಗೆ ಏನೇನೂ ಬಂಡವಾಳದ ವಿನಿಯೋಜನೆ ಇಲ್ಲದೆ ಬದುಕನ್ನು ನೀಡುತ್ತಿದ್ದ ಒಂದು ಕಸುಬನ್ನು ಕನಿಷ್ಠವಾಗಿ ಕಂಡ ಸಮಾಜ ಅದೇ ಬಗೆಯ ಅಥವಾ ಅದಕ್ಕಿಂತಲೂ ಹೆಚ್ಚು ಅಪಾಯಕಾರಿ ಮತ್ತು ಕೇವಲ ಬಂಡವಾಳ ಇದ್ದವರು ಮಾತ್ರ ಮಾಡಬಹುದಾದ ಬಾರ್ ಸಂಸ್ಕೃತಿಯನ್ನು ಚಕಾರವೆತ್ತದೆ ಸಹಿಸಿಕೊಂಡಿದೆ.
ಬೆಸ್ತರ ಸ್ಥಿತಿ ಕೂಡ ಹೆಚ್ಚು ಕಡಿಮೆ ಇದೇ ರೀತಿ ಇದೆ. ಕೆಲವು ನೂರು ಅಥವಾ ಸಾವಿರ ರೂಪಾಯಿ ವಿನಿಯೋಜನೆ ಮಾಡಿ (ಬಲೆ ಮತ್ತು ಮರದ ಸಣ್ಣ ಬೋಟ್ ಖರೀದಿಗೆ) ಸಮುದ್ರದ ಭಯ ಇಲ್ಲದ ಯಾರು ಕೂಡ ಆರಂಭಿಸಬಹುದಾದ ಕಸುಬು ಮೀನುಗಾರಿಕೆ. ಪುರುಷರು ಹಿಡಿದು ತಂದ ಮೀನನ್ನು ಮಾರಲು ಬೆಸ್ತರ ಮಹಿಳೆಗೆ ಸಂತೆಯಲ್ಲಿ ಕುಳಿತುಕೊಳ್ಳಲು ಒಂದು ಸಣ್ಣ ಸ್ಥಳವಿದ್ದರೆ ಸಾಕು. ಈ ಕಸುಬು ಕೂಡ ಸಾವಿರಾರು ಕುಟುಂಬಗಳಿಗೆ ಬದುಕನ್ನು ನೀಡಿದೆ. ನಮ್ಮ ಸಾಂಪ್ರದಾಯಿಕ ಸಮಾಜದ ಮೌಲ್ಯಗಳು ಈ ಕಸುಬನ್ನು ಕೂಡ ಅಸಹ್ಯವಾಗಿ ಕಂಡದ್ದು ನಿಜ. ಹಾಗಾಗಿ ಬೆಸ್ತರು ಕೂಡ ತಮ್ಮ ಸಾಂಪ್ರದಾಯಿಕ ಕಸುಬಲ್ಲಿ ಮುಂದುವರಿಯಲು ಇಷ್ಟಪಡುವುದಿಲ್ಲ. ಹಾಗೆಂದು ಮೀನುಗಾರಿಕೆ ನಿಂತಿಲ್ಲ. ಹಿಂದಿನ ಕೆಲವು ಸಾವಿರ ವಿನಿಯೋಜಿಸಿ ಶುರು ಮಾಡುವ ಮೀನುಗಾರಿಕೆಯ ಸ್ಥಳದಲ್ಲಿ ಲಕ್ಷಗಟ್ಟಲೆ ವಿನಿಯೋಜಿಸಿ ಮೆಕಾನೈಸ್ಡ್ ಬೋಟ್ ಮೂಲಕ ಮೀನು ಹಿಡಿಯುವುದು ನಡೆಯುತ್ತಿದೆ.[5] ಇಂತಹ ಸಂದರ್ಭದಲ್ಲಿ ಕಡಿಮೆ ಬಂಡವಾಳ ವಿನಿಯೋಜಿಸಿ ಆರಂಭಿಸಬಹುದಾದ ಅವರ ಸಾಂಪ್ರದಾಯಿಕ ಕಸುಬನ್ನು ಆರಂಭಿಸುವ ಸ್ಥಿತಿಯಲ್ಲಿ ಬೆಸ್ತರ ಯುವಕರಿಲ್ಲ. ಯಾಕೆಂದರೆ ನಮ್ಮ ಕಾಲಕ್ಕೆ ಇದು ಸಾಕು ಮಗನೇ, ನೀನು ಇದೇ ಕಸುಬು ಮಾಡಿ ಮಾನ ಕಳೆದುಕೊಳ್ಳಬೇಡವೆಂದು’ ಅವರ ಹಿರಿಯರೇ ಬುದ್ಧಿವಾದ ಹೇಳುತ್ತಿರುತ್ತಾರೆ. ಆಧುನಿಕ ಸಮಾಜದಲ್ಲಿ ಮಾನ ಕಸುಬಿನಿಂದ ಬರುವುದಲ್ಲ ದುಡ್ಡಿನಿಂದ ಬರುವುದೆಂದು ಬಹುತೇಕ ಯುವಕರಿಗೆ ತಿಳಿದಿದೆ. ಬಾರ್ ಅಥವಾ ಮೆಕಾನೈಸ್ಡ್ ಬೋಟ್‌ ಆರಂಭಿಸಿದರೆ ಮಾನ ತನ್ನಿಂದತಾನೇ ಬರುತ್ತದೆಂದು ಅವರಿಗೂ ತಿಳಿದಿದೆ. ಆದರೆ ಬಾರ್ ಅಥವಾ ಮೆಕಾನೈಸ್ಡ್‌ ಬೋಟ್ ಆರಂಭಿಸಲು ಬಂಡವಾಳ ಎಲ್ಲಿದೆ? ಈ ಬಗೆಯಲ್ಲಿ ಉದ್ಯೋಗ ದೊರಕಿಸಬಹುದಾದ ಶಿಕ್ಷಣ ಇಲ್ಲದವರು ಮತ್ತು ಬಂಡವಾಳ ಹೂಡಿ ತಮ್ಮದೇ ಆಧುನಿಕ ವ್ಯಾಪಾರ ವಹಿವಾಟು ಆರಂಭಿಸಲು ಶಕ್ತರಲ್ಲದ ಸಾವಿರಾರು ಯುವಕರು ಊರಲ್ಲೇ ಉಳಿಯುವುದು ಅನಿವಾರ್ಯವಾಗಿದೆ. ತಮ್ಮ ಜತೆಗೆ ಪ್ರಾಥಮಿಕ ಅಥವಾ ಪ್ರೌಢಶಾಲೆಗಳಲ್ಲಿ ಓದಿದ ತಮ್ಮ ವಾರಗೆಯ ಕೆಲವರ ಸಾಧನೆ (ವಲಸೆ, ಶಿಕ್ಷಣ, ಪಾರಂಪರಿಕ ಸಂಪತ್ತು, ಸಾಮಾಜಿಕ/ರಾಜಕೀಯ ನೆಟ್‌ವರ್ಕ್‌ ಇತ್ಯಾದಿಗಳಿಂದ ಸಾಧ್ಯವಾದ ಸಾಧನೆ) ಊರಲ್ಲೇ ಉಳಿದ ಯುವಕರಲ್ಲಿ ಒಂದು ಕಡೆಯಿಂದ ಹತಾಶೆ ಹೆಚ್ಚಿಸಿದರೆ ಮತ್ತೆ ಕೆಲವರಲ್ಲಿ ನಾವು ಕೂಡ ಸಾಧಿಸಬೇಕೆಂಬ ಛಲವನ್ನು ಸೃಷ್ಟಿಸುತ್ತದೆ. ಆದರೆ ಮೇಲೆ ವಿವರಿಸಿದ ಅಭಿವೃದ್ಧಿ ಮಾದರಿ ಬಂಡವಾಳ ಮತ್ತು ತಂತ್ರಜ್ಞಾನ ಆಧಾರಿತ ಅಭಿವೃದ್ಧಿ (ಮಾದರಿ) ಈ ಯುವಕರಿಗೆ ಅವರು ಬಯಸುವ ಬದುಕಿನ ಅವಕಾಶ ನೀಡುತ್ತಿಲ್ಲ. ಹಾಗೆಂದು ತಮ್ಮ ಸಾಂಪ್ರದಾಯಿಕ ಕಸುಬನ್ನು ಮಾಡಲು ಮಾನ ಮರ್ಯಾದೆ ಅಡ್ಡ ಬರುತ್ತದೆ. ಇಂತಹ ಸ್ಥಿತಿ ಯುವಕರನ್ನು ಇನ್ನೂ ಹತಾಶರನ್ನಾಗಿಸುತ್ತದೆ ಮತ್ತು ಅವರುಗಳು ಸುಲಭದಲ್ಲಿ ಕೋಮುವಾದದ ವಿಷವರ್ತುಲದಲ್ಲಿ ಸಿಕ್ಕಿಕೊಳ್ಳುತ್ತಾರೆ.
ಇತ್ತೀಚಿನ ದಿನಗಳಲ್ಲಿ ಕೋಮುವಾದಿಗಳು ಮತ್ತೊಂದು ರಾಗ ಆರಂಭಿಸಿದ್ದಾರೆ. ದನದ ಮಾಂಸ ತಿನ್ನುವುದು ಮತ್ತು ಮಾರಾಟ ಮಾಡುವುದರ ವಿರುದ್ಧ ಹೋರಾಟ ಆರಂಭಿಸಿದ್ದಾರೆ. ಒಂದು ಕಾಲದಲ್ಲಿ ಪ್ರತಿ ಹಳ್ಳಿಯಲ್ಲಿ ಹಾಲು ಕೊಡದ (ಗೊಡ್ಡು) ದನ ಅಥವಾ ಎಮ್ಮೆಯನ್ನು, ಮುದಿ ಎತ್ತು ಅಥವಾ ಕೋಣವನ್ನು ವ್ಯಾಪಾರಿ ಮಾರುವುದು ಸಾಮಾನ್ಯ ಸಂಗತಿ. ವ್ಯಾಪಾರಿ ಅದನ್ನು ಒಯ್ದು ಏನು ಮಾಡುತ್ತಾನೆ ಎನ್ನುವುದರ ಬಗ್ಗೆ ಯಾರು ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ. ಹಳ್ಳಿಯಲ್ಲಿ ದನ ಅಥವಾ ಎಮ್ಮೆ ಸತ್ತರೆ ಹರಿಜನ ಕೇರಿಗೆ ಸುದ್ದಿ ಹೋಗುತ್ತಿತ್ತು. ಅವರು ಬಂದು ಸತ್ತ ದನ ಅಥವಾ ಎಮ್ಮೆಯನ್ನು ಕೊಟ್ಟಿಗೆಯಿಂದ ಹೊರಗೆ ಒಯ್ದು ದೂರದ ಗಿಡದ ಮರೆಯಲ್ಲಿ ಚರ್ಮ ಸುಲಿದು ಮಾಂಸ ಮಾಡಿ ಅಳಿದುಳಿದ ಭಾಗವನ್ನು ಮಣ್ಣು ಮಾಡಿ ಹೋಗುತ್ತಿದ್ದರು. ಉತ್ತರ ಕರ್ನಾಟಕದ ಹಲವು ಹಳ್ಳಿಗಳಲ್ಲಿ ದಲಿತರು ಮುಂದಿಡುತ್ತಿದ್ದ ಹಲವು ಬೇಡಿಕೆಗಳಲ್ಲಿ ದನದ ಮಾರ್ಕೆಟ್ ದೂರ ಇರುವದರಿಂದ ಮಾಂಸಕ್ಕಾಗಿ ಬಸ್ ಪ್ರಯಾಣ ಮಾಡುವ ವೆಚ್ಚ ಒಂದು ಕಡೆ ಆದರೆ ಇವರು ಮಾರ್ಕೆಟ್ ತಲುಪುವ ಹೊತ್ತಿಗೆ ಉತಮ ಮಾಂಸ ಮಾರಾಟ ಆಗಿ ಎಲುಬು ತುಂಬಿದ ಮಾಂಸ ಉಳಿಯುವುದು ಮತ್ತೊಂದು ಕಡೆ.[6]ಟ್ಯುಬರ್‌ಕ್ಯುಲಾಸಿಸ್ (ಟಿಬಿ) ಇರುವವರಿಗೆ ಮಾತ್ರೆಯೊಂದಿಗೆ ಹೆಚ್ಚು ಕ್ಯಾಲ್ಸಿಯಂ ತೆಗೆದುಕೊಳ್ಳಬೇಕೆಂದು ವೈದ್ಯರು ಸಲಹೆ ಮಾಡುವುದು ಸಾಮಾನ್ಯ. ಅತೀ ಕಡಿಮೆ ದರದಲ್ಲಿ ಹೆಚ್ಚು ಕ್ಯಾಲ್ಸಿಯಂ ದೊರೆಯುವುದು ದನದ ಮಾಂಸದಲ್ಲಿ ಮಾತ್ರ. ಕಡಿಮೆ ಆದಾಯ ಇದ್ದು ಹಾಲು, ಮೊಟ್ಟೆ, ಕುರಿ ಕೋಳಿ ಇತ್ಯಾದಿಗಳನ್ನು ಖರೀದಿಸಲು ಸಾಧ್ಯವಾಗದ ಜನರು ದನದ ಮಾಂಸ ತಿನ್ನುವುದು ಅನಿವಾರ್ಯ. ಹೀಗೆ ದನದ ಮಾಂಸವನ್ನು ಕೇವಲ ಮುಸ್ಲಿಮರು ಮಾತ್ರ ತಿನ್ನುತ್ತಾರೆ ಆದುದರಿಂದ ಮುಸ್ಲಿಂ ವಿರೋಧಿ ಕೋಮುವಾದದ ಹೆಸರಿನಲ್ಲಿ ದನದ ಮಾಂಸ ಮಾರಾಟವನ್ನು ವಿರೋಧಿಸಿದರೆ ಕೇವಲ ಮುಸ್ಲಿಮರಿಗೆ ಮಾತ್ರ ನೋವಾಗುವುದಲ್ಲ. ಕಡಿಮೆ ಆದಾಯ ಇರುವ ಪ್ರತಿಯೊಬ್ಬರ ಆಹಾರ ಪದ್ಧತಿಗೆ ಕೋಮುವಾದಿಗಳ ಈ ಧೋರಣೆ ವಿರುದ್ಧ ಇದೆ. ಸಂವಿಧಾನದಲ್ಲಿ ಅಥವಾ ದೇಶದ ಅಥವಾ ರಾಜ್ಯದ ಯಾವುದೇ ಕಾನೂನು ಕೂಡ ದನದ ಮಾಂಸ ತಿನ್ನುವುದನ್ನು ನಿಷೇಧಿಸಿಲ್ಲ. ಇಂತಹ ಸಂದರ್ಭದಲ್ಲಿ ಸರಕಾರಕ್ಕೆ ಕೋಮುವಾದಿಗಳ ದನದ ಮಾಂಸ ವಿರೋಧಿ ಕಾರ್ಯಕ್ರಮಗಳನ್ನು ಹತ್ತಿಕ್ಕಲು ಸಾಧ್ಯವಾಗಿಲ್ಲವೆಂದರೆ ಇದೊಂದು ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವಲ್ಲಿ ಸರಕಾರದ ವಿಫಲತೆಯಲ್ಲವೇ?
ಕೋಮುವಾದದ ಬೆಳವಣಿಗೆ ಕೇವಲ ವ್ಯಕ್ತಿ ಅಥವಾ ಸಮುದಾಯಗಳನ್ನು ಮಾತ್ರ ಕಾಡುವುದಿಲ್ಲ. ಇಡೀ ಪ್ರದೇಶದ ವಿದ್ಯಮಾನಗಳನ್ನು ಮೇಲ್ವರ್ಗದ ಪರವಾಗಿ ಮತ್ತು ಕೆಳವರ್ಗದ ವಿರುದ್ಧವಾಗಿ ತಿರುಚುವ ಸಾಧ್ಯತೆ ಇದೆ. ಯಾಕೆಂದರೆ ಕೋಮುವಾದ ಬಲಗೊಳ್ಳುವುದರಿಂದ ಇಡೀ ಸಮಾಜ ಹಿಂದೂ ಮುಸ್ಲಿಮ್ ಎಂದು ಧ್ರುವೀಕರಣಗೊಂಡು ಸಮಾಜದೊಳಗಿನ ಇತರ ವೈರುಧ್ಯಗಳು ಮರೆಯಾಗುತ್ತಿವೆ. ಜಿಲ್ಲೆಯಲ್ಲಿ ಶೇಕಡಾ ಇಪ್ಪತ್ತೈದರಿಂದ ಮೂವತ್ತರಷ್ಟು ರೈತರಿದ್ದಾರೆ. ಅವರಲ್ಲಿ ಶೇಕಡಾ ತೊಂಬತ್ತರಷ್ಟು ಸಣ್ಣ ಮತ್ತು ಅತೀ ಸಣ್ಣ ರೈತರು. ಸಂಘಟಿತ ರೈತ ಹೋರಾಟ ಇಲ್ಲದ ಕಾರಣ ರೈತರ ಯಾವತ್ತು ಸಮಸ್ಯೆಗಳು (ಹಣಕಾಸು, ಮಾರುಕಟ್ಟೆ, ನೀರಾವರಿ ಇತ್ಯಾದಿ) ಸಾಮಾಜಿಕ ಸಮಸ್ಯೆಗಳಾಗಿಲ್ಲ. ಇತ್ತೀಚಿನ ರಾಜ್ಯ ಸರಕಾರದ ಸಾಲ ಮನ್ನಾದ ಲಾಭವನ್ನು ಕೂಡ ಜಿಲ್ಲೆಯ ರೈತರು ಪಡೆಯಲಾಗಲಿಲ್ಲ. ಕಾರಣ ಅವರೆಲ್ಲ ಹೊಸ ಸಾಲ ಮಾಡಿ ಸೊಸೈಟಿಗಳಿಂದ ಪಡೆದ ಹಳೇ ಸಾಲವನ್ನು ಸಂದಾಯ ಮಾಡಿದ್ದರು.[7] ಸತತ ಸಾಲಗಾರರಾಗಿರುವ ಸಂದರ್ಭದಲ್ಲೇ ಸರಕಾರ ಕೊಟ್ಟ ಸಾಲಮನ್ನಾ ಸೌಲಭ್ಯವನ್ನು ಬಳಸಿಕೊಳ್ಳಲಾಗದ ನತದೃಷ್ಟರು. ಅತೀ ಜನ ಸಾಂದ್ರತೆಯುಳ್ಳ ಕೆಲವೇ ಕೆಲವು ಪ್ರದೇಶಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಕೂಡ ಒಂದು. ಜನರು ವಸತಿಗಾಗಿ, ಕೃಷಿಗಾಗಿ, ಸಾರ್ವಜನಿಕ ಸವಲತ್ತುಗಳ ಸೃಷ್ಟಿಗಾಗಿ ಭೂಮಿ ಕೊರತೆಯನ್ನು ಸತತವಾಗಿ ಅನುಭವಿಸುತ್ತಾ ಬಂದಿದ್ದಾರೆ. ಇಂತಹ ಪರಿಸರದಲ್ಲಿ ಸಾವಿರಾರು ಎಕರೆ ಭೂಮಿಗಳನ್ನು ಬಲತ್ಕಾರದಿಂದ ರೈತರಿಂದ ವಶಪಡಿಸಿ ಕೈಗಾರಿಕಾ ಬಳಕೆಗೆ (ಸ್ಪೆಷಲ್ ಎಕಾನಮಿಕ್ ಜೋನ್‌ಗಾಗಿ, ಹೈಡಲ್ ಪವರ್‌ ಯೋಜನೆಗಾಗಿ ಇತ್ಯಾದಿಗಳಿಗಾಗಿ) ಕಡಿಮೆ ದರದಲ್ಲಿ ನೀಡಲಾಗುತ್ತಿದೆ. ಇಂತಹ ಬೆಳವಣಿಗೆಗಳ ವಿರುದ್ಧ ನಡೆಯುವ ಹೋರಾಟಗಳು ಭೂಮಿ ಕಳಕೊಂಡವರ ಸಣ್ಣಪುಟ್ಟ ಹೋರಾಟಗಳಾಗಿವೆ.
ಬಹುತೇಕರ ಸಾಮಾನ್ಯ ಸಮಸ್ಯೆಗಳಾದ ನಿರುದ್ಯೋಗ, ಕುಡಿಯುವ ನೀರು, ವಸತಿ ಇತ್ಯಾದಿ ಮೂಲಭೂತ ಸವಲತ್ತುಗಳ ಕೊರತೆ, ಖಾಸಗಿ ಬಸ್ಸು ಮಾಲಿಕರ ದುಬಾರಿ ದರ ನಿಗದಿ, ಖಾಸಗಿ ಹಾಸ್ಪಿಟಲ್‌ಗಳ ಹಗಲು ದರೋಡೆ ಇತ್ಯಾದಿ ದಿನನಿತ್ಯದ ಸಮಸ್ಯೆಗಳ ವಿರುದ್ಧ ಹೋರಾಟಗಳ ಹಿಂದೆ ಜನರೇ ಇಲ್ಲ. ಮೇಲಿನ ದಿನನಿತ್ಯದ ಸಮಸ್ಯೆಗಳ ವಿರುದ್ಧ ಬಳಸಬೇಕಾದ ಸಿಟ್ಟು, ಅಸಹನೆ, ಆಕ್ರೋಶ, ಆವೇಶ, ಉದ್ವೇಗ ಇತ್ಯಾದಿಗಳನ್ನು ಜನಸಾಮಾನ್ಯರು ಕೋಮುಗಲಭೆಯಲ್ಲಿ ವ್ಯರ್ಥ ವ್ಯಯ ಮಾಡುತ್ತಿದ್ದಾರೆ. ಕ್ರಾಂತಿಯ ಕನಸು ಕಾಣುವ ಮತ್ತು ಸುತ್ತಮುತ್ತ ನಡೆಯುವ ಅನ್ಯಾಯಗಳ ವಿರುದ್ಧ ಸಿಡಿದೇಳುವ ಲಕ್ಷಣಗಳೆಲ್ಲ ವಿದ್ಯಾರ್ಥಿ ಜೀವನದಲ್ಲಿ ಕಂಡಷ್ಟು ನಂತರ ಇರುವುದಿಲ್ಲ. ಆದರೆ ಹಲವಾರು ವರ್ಷಗಳಿಂದ ಕೋಮುಗಲಭೆಯ ಹೆಸರಲ್ಲಿ ಇಲ್ಲಿ ನೆಯುವ ಮಾರಣಹೋಮದ ಬಗ್ಗೆ ಜಿಲ್ಲೆಯ ವಿದ್ಯಾರ್ಥಿ ಸಂಘಟನೆಗಳು ಪ್ರತಿಭಟಿಸಿದ್ದು ಅಪರೂಪ. ಪ್ರತಿಭಟಿಸುವ ಬದಲು ಈ ಬಗೆಯ (ಹಿಂದೂ ಮುಸ್ಲಿಮ್) ದ್ರುವೀಕರಣವನ್ನು ಅಂತಿಮ ಸತ್ಯವೆಂದು ಬಗೆದು ಅವುಗಳೊಂದಿಗೆ ತಮ್ಮ ಶಕ್ತಿಯನುಸಾರ ಗುರುತಿಸಿಕೊಳ್ಳುವುದು ತಮ್ಮ ಜೀವನದ ಪರಮ ಸಾಧನೆ ಎಂದು ತಿಳಿದುಕೊಂಡು ವ್ಯವಹರಿಸುವ ವಿದ್ಯಾರ್ಥಿಗಳು ಮತ್ತು ಅವರಿಗೆ ಪಾಠ ಮಾಡುವ ಮೇಸ್ಟ್ರುಗಳನ್ನು ಇಲ್ಲಿ ಕಾಣಬಹುದು. ಎಲ್ಲದರಲ್ಲೂ ಬಹುತ್ವವನ್ನು ಬಯಸುವುದು ಮತ್ತು ಬೆಳೆಸುವುದು ಆರೋಗ್ಯವಂತ ಸಮಾಜದ ಲಕ್ಷಣ. ಆದರೆ ಕೋಮುವಾದದ ಬೆಳವಣಿಗೆಯಿಂದಾಗಿ ಇಡೀ ಪ್ರದೇಶವೇ ಏಕಮುಖವಾಗಿ ಚಿಂತಿಸುವ ಮತ್ತು ಪ್ರತಿಕ್ರಿಯಿಸುವ ಒಂದು ವಿಚಿತ್ರ ಸನ್ನಿವೇಶ ಜಿಲ್ಲೆಯಲ್ಲಿದೆ. ಇದರಿಂದಾಗಿ ಇಲ್ಲಿನ ಮೇಲ್ವರ್ಗ ತನ್ನ ಸಂಪತ್ತನ್ನು ಹೆಚ್ಚಿಸಿಕೊಳ್ಳುವ ಮತ್ತು ಆ ಮೂಲಕ ತನ್ನ ಯಜಮಾನಿಕೆಯನ್ನು ವಿಸ್ತರಿಸಿಕೊಳ್ಳುವುದು ಸುಲಭವಾಗಿದೆ. ಆದರೆ ಇಂತಹ ಏಕಮುಖ ಚಿಂತನೆ ಮತ್ತು ವ್ಯವಹಾರ ಜಿಲ್ಲೆಯ ತಳಸಮುದಾಯಗಳಿಗೆ ಶಾಪವಾಗಿದೆ. ತಮ್ಮ ದಿನನಿತ್ಯದ ಬದುಕಿನಲ್ಲಿ ಎದುರಾಗುವ ಅನ್ಯಾಯಗಳನ್ನು, ಶೋಷಣೆಗಳನ್ನು, ದಬ್ಬಾಳಿಕೆಗಳನ್ನು ಎದುರಿಸಲು ಜನಸಾಮಾನ್ಯರಿಗೆ ಅಸಂಖ್ಯಾತ ರಾಜಕೀಯ ಪ್ರಕ್ರಿಯೆಗಳ ಅವಶ್ಯಕತೆ ಇದೆ. ಆದರೆ ಕೋಮುವಾದ ವರ್ಗ, ಲಿಂಗ, ಭಾಷೆ, ಪ್ರದೇಶ, ಸಮುದಾಯ ಇತ್ಯಾದಿ ನೆಲೆಗಳಲ್ಲಿ ಕಟ್ಟಿಕೊಳ್ಳಬಹುದಾದ ಹೋರಾಟಗಳನ್ನು ನಾಶ ಮಾಡಿದೆ. ಇಂತಹ ಅಸಂಖ್ಯಾತ ಹೋರಾಟಗಳ ನೆಲೆಗಳ ಬದಲು ಇಂದು ಜಿಲ್ಲೆಯ ತಳಸಮುದಾಯಕ್ಕೆ ದಕ್ಕಿರುವುದು ಕೇವಲ ಕೋಮು ನೆಲೆಯ ಹೋರಾಟ ಮಾತ್ರ. ಈ ಹೋರಾಟವನ್ನು ಮಾಡುವ ಮೂಲಕ ತಳಸಮುದಾಯದ ಜನರು ತಮ್ಮ ಜೀವ ಸೆಲೆಗಳಾದ ಪ್ರೀತಿ ಪ್ರೇಮಗಳನ್ನು ಶಾಂತಿ ಸಮಾಧಾನಗಳನ್ನು ನಂಬಿಕೆಗಳನ್ನು ಬಲಿಕೊಡಬೇಕಾಗಿದೆ. ಮತ್ತು ಈ ಬಲಿ ಕೂಡ ಯಾರ ಆಸಕ್ತಿಯನ್ನು ಈಡೇರಿಸುವುದಕ್ಕಾಗಿ? ಖಂಡಿತವಾಗಿಯೂ ತಳಸಮುದಾಯದ ಜನರ ಭವಿಷ್ಯಕ್ಕಾಗಿ ಅಲ್ಲ.
ಸುಮಾರು ಎಪ್ಪತ್ತರ ದಶಕದವರೆಗೂ ಕರಾವಳಿ ಕರ್ನಾಟಕದಲ್ಲಿ ಸಮಾಜವನ್ನು ಜಾತಿಯ ಗೆರೆಗಳ ಮೇಲೆ ಪ್ರಧಾನ ಮತ್ತು ಅಧೀನ ಎಂಬ ಸ್ತರಗಳಲ್ಲಿ ವಿಭಜಿಸಿದ್ದು ಬಹಳ ಸ್ಪಷ್ಟವಾಗಿ ಕಂಡು ಬರುತ್ತದೆ. ಈ ಪ್ರಧಾನ ಜಾತಿಗಳನ್ನು ಕೆಲವು ನಿರ್ದಿಷ್ಟಪಡಿಸಿದ ಗುಣಲಕ್ಷಣಗಳ ಮೂಲಕ ಗುರುತಿಸಲಾಗುತ್ತಿತ್ತು. ಅಧೀನ ಜಾತಿಗಳ ಲಕ್ಷಣಗಳು ಈ ಪ್ರಧಾನ ಜಾತಿಗಳ ಲಕ್ಷಣಗಳಿಗೆ ಹೆಚ್ಚು ಕಡಿಮೆ ವಿರೋಧವಾಗಿದ್ದವು. ಈ ಸ್ತರೀಕರಣಗೊಳಿಸುವ ಮತ್ತು ಗುರುತಿಸುವ ಪ್ರಕ್ರಿಯೆಗಳು ಸಂಕಥನದೊಂದಿಗೆ ಸಮಾಜದ ಭೌತಿಕ ಸ್ಥಿತಿಗತಿಗಳ ಮೇಲೆ ಅವಲಂಬಿತವಾಗಿದ್ದವು. ಪ್ರಧಾನ ಜಾತಿಗಳನ್ನು ಗುರುತಿಸಲಾಗುವ ಲಕ್ಷಣಗಳು ಸಹಜವೆಂದು ಭಾವಿಸುವುದು ಆ ಜಾತಿಗಳ ಪ್ರಾಬಲ್ಯಕ್ಕೆ ಮತ್ತು ಯಥಾಸ್ಥಿತಿಯ ಮುಂದುವರಿಕೆಗೆ ಅವಶ್ಯವಾಗಿದ್ದವು. ಸಾಂಸ್ಕೃತಿಕ ಮತ್ತು ಸಾಮಾಜಿಕ ಲೋಕದ ವ್ಯವಹಾರಗಳ ಮೂಲಕ ಆರ್ಥಿಕ ಕ್ಷೇತ್ರದ ಬಲಾಢ್ಯತೆಗೆ ಯಜಮಾನಿಕೆಯ ಮೆರಗನ್ನು ಕಂಡುಕೊಳ್ಳಲಾಯಿತು. ಈ ಬಗೆಯ ಮನುಷ್ಯ ನಿರ್ಮಿತ ಮೇಲು ಕೀಳುಗಳನ್ನು, ಉಚ್ಚನೀಚತೆಯನ್ನು ದೈವ/ದೇವರ ಸೃಷ್ಟಿಯೆಂದು ತಳಸ್ತರದ ಸಮುದಾಯಗಳು ಮೇಲ್ವರ್ಗಗಳ ದಬ್ಬಾಳಿಕೆಯನ್ನು, ಯಜಮಾನಿಕೆಯನ್ನು ಸಹಜವೆಂದು ನಂಬಿ ವ್ಯವಹರಿಸುವ ಕಾಲವಿತ್ತು. ಹೀಗೆ ಸ್ಥಳೀಯ ಸಮಾಜಕ್ಕೆ ‘ಸ್ವ’ ಮತ್ತು ‘ಅನ್ಯ’ದ  ಕಲ್ಪನೆಗಳನ್ನು ಪರಿಣಾಮಕಾರಿಯಾಗಿ ಕಟ್ಟಿಕೊಳ್ಳುವ ಮತ್ತು ಆ ಕಲ್ಪನೆಗಳಿಗನುಗುಣವಾಗಿ ದಿನನಿತ್ಯದ ಬದುಕನ್ನು ನಡೆಸುವ ಅಭ್ಯಾಸ ಹಿಂದಿನಿಂದಲೇ ಇತ್ತು. ಹಿಂದೆ ಜಾತಿ ನೆಲೆಯಲ್ಲಿ ‘ಸ್ವ’ ಮತ್ತು ‘ಅನ್ಯ’ವನ್ನು ಕಟ್ಟಿಕೊಳ್ಳಲಾಗಿತ್ತು. ಹಿಂದಿನ ವಿಂಗಡನೆಯಲ್ಲಿ ಸ್ಥಳೀಯ ಕೆಳಜಾತಿಗಳು ‘ಅನ್ಯ’ದ ಸ್ಥಾನದಲ್ಲಿದ್ದವು. ಆ ಕಾರಣಕ್ಕಾಗಿ ಅವರುಗಳು ಆರ್ಥಿಕ ಅಸಮಾನತೆಯ ಜತೆಜತೆಗೆ ಸಾಮಾಜಿಕ, ಸಾಂಸ್ಕೃತಿಕ ಹಾಗೂ ರಾಜಕೀಯ ಅಸಮಾನತೆಗಳನ್ನು ಅನುಭವಿಸಬೇಕಿತ್ತು. ಇಂತಹ ಒಂದು ಪರಿಸರದಲ್ಲಿ ವಸಾಹತು ಆಡಳಿತ ಮತ್ತು ನಂತರದ ಪ್ರಭುತ್ವ ನೇತೃತ್ವದಲ್ಲಿ ನಡೆದ ತಾಂತ್ರಿಕ ಆಧುನೀಕರಣಗಳು ಮಧ್ಯ ಪ್ರವೇಶಗೈದವು.
ವಸಾಹತು ಆಡಳಿತ ಸಂದರ್ಭದಲ್ಲಿ ಸಾಂಪ್ರದಾಯಿಕ ರಾಜಕೀಯ ಅಧಿಕಾರ ಕೇಂದ್ರಗಳು ಪಲ್ಲಟಗೊಂಡು ಹೊಸ ಅಧಿಕಾರ ಕೇಂದ್ರಗಳು ಸ್ಥಾಪಿತವಾದವು. ವಸಾಹತು ಆಡಳಿತ ಸ್ಥಳೀಯ ಸಾಮಾಜಿಕ, ಸಾಂಸ್ಕೃತಿಕ ಹಾಗೂ ಆರ್ಥಿಕ ಸಂಬಂಧಗಳನ್ನು ನೇರವಾಗಿ ಪ್ರಶ್ನಿಸಲು ಪ್ರಯತ್ನಿಸಲಿಲ್ಲ. ಆದರೆ ಇದೇ ಸಂದರ್ಭದಲ್ಲಿ ಕ್ರಿಶ್ಚಿಯನ್ ಧರ್ಮ ಕರಾವಳಿ ಕರ್ನಾಟಕದಲ್ಲಿ ತಳವೂರಲು ಪ್ರಯತ್ನ ಮಾಡಿತು. ಸ್ಥಳೀಯರನ್ನು ತಮ್ಮ ಧರ್ಮಕ್ಕೆ ಆಕರ್ಷಿಸಲು ಮತ್ತು ಯಾವುದೋ ಕಾರಣಕ್ಕೆ ಮತಾಂತರಗೊಂಡವರನ್ನು ತಮ್ಮದೇ ಧರ್ಮದಲ್ಲಿ ಉಳಿಸಿಕೊಳ್ಳುವುದು ಕ್ರಿಶ್ಚಿಯನ್ನರಿಗೆ ಅನಿವಾರ್ಯವಾಗಿತ್ತು. ಜತೆಗೆ ವಸಾಹತು ಆಡಳಿತ ಹುಟ್ಟು ಹಾಕಿದ ಅಧಿಕಾರ ಕೇಂದ್ರಗಳಲ್ಲಿ ತಳಸ್ತರದ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಲು ಮಾನವ ಸಂಪನ್ಮೂಲದ ತರಬೇತುಗೊಳಿಸಬೇಕಿತ್ತು. ಈ ಎಲ್ಲ ಉದ್ದೇಶಗಳನ್ನು ಗಮನದಲ್ಲಿಟ್ಟುಕೊಂಡು ಕ್ರಿಶ್ಚಿಯನ್ ಮೆಷಿನರಿಗಳು ಶಿಕ್ಷಣ ಸಂಸ್ಥೆಗಳನ್ನು ಆರಂಭಿಸಿದವು. ಹೀಗೆ ಆರಂಭಗೊಂಡ ಶಿಕ್ಷಣ ಸಂಸ್ಥೆಗಳು ಅವುಗಳ ಮೂಲ ಉದ್ದೇಶಕ್ಕೆ ಅಥವಾ ಅವುಗಳು ‘ಸಾರ್ವಜನಿಕವಾಗಿ ಘೋಷಿಸಿಕೊಂಡ ಉದ್ದೇಶಕ್ಕಿಂತ ಭಿನ್ನವಾದ ಕೆಲವೊಂದು ಪರಿಣಾಮಗಳನ್ನು ಸ್ಥಳೀಯ ಸಾಮಾಜಿಕ ಮೌಲ್ಯಗಳ ಮೇಲೆ ಮಾಡಲಾರಂಭಿಸಿದವು. ಲಿಂಗ, ಜಾತಿ ನೆಲೆಯಲ್ಲಿ ವ್ಯಕ್ತಿ ವ್ಯಕ್ತಿಗಳ ನಡುವೆ ಅಸಮಾನತೆ ಆಚರಣೆಗೆ ಪೂರಕವಾಗಿರುವ ಹಲವಾರು ಸಾಮಾಜಿಕ ಆಚರಣೆಗಳನ್ನು ಈ ಕ್ರಿಶ್ಚಿಯನ್ ಮೆಶಿನರಿಗಳ ಕಾರ್ಯಕ್ರಮಗಳು ಮುರಿದವು. ಈ ಬೆಳವಣಿಗೆಗೆ ಸ್ಥಳೀಯ ಸಮಾಜದ ಮೇಲ್ವರ್ಗ ಮಿಶ್ರ ಪ್ರತಿಕ್ರಿಯೆ ನೀಡಿದೆ. ಮೇಲ್ವರ್ಗದ ಒಂದು ಗುಂಪು ಕ್ರಿಶ್ಚಿಯನ್ ಮೆಶಿನರಿಗಳು ಪ್ರತಿಪಾದಿಸುವ ಆಧುನಿಕ ಮೌಲ್ಯಗಳನ್ನು ಬೆಂಬಲಿಸಿದರೆ ಮತ್ತೊಂದು ಗುಂಪು ವಿರೋಧಿಸಲಾರಂಭಿಸಿತು. ಪರ ವಿರೋಧಗಳು ಮೇಲ್‌ಸ್ತರದಲ್ಲೇ ಇದ್ದುದರಿಂದ ವಸಾಹತು ಸಂದರ್ಭದಲ್ಲಿ ಸ್ಥಳೀಯವಾಗಿ ದಕ್ಕಿಸಿಕೊಂಡ ಕೆಲವೊಂದು ಲಾಭಗಳು (ಆಧುನಿಕ ಶಿಕ್ಷಣ, ಅದು ಕೊಡಮಾಡಿದ ಹುದ್ದೆಗಳು, ವ್ಯಾಪಾರ ವಹಿವಾಟು ನಡೆಸಲು ಅನುಕೂಲತೆಗಳು, ಭೂಮಿ ಇತ್ಯಾದಿಗಳು) ಕೂಡ ಮೇಲಸ್ತರದಲ್ಲೇ ಉಳಿದವು. ಕೆಲವೊಂದು ಬಾರಿ ಮತಾಂತರಗಳ ಮೂಲಕ (ಸ್ಥಳೀಯ ಸಮಾಜದ ತಳ ಸಮುದಾಯಗಳ ಜನರು ಮತಾಂತರಗೊಂಡ ಸಂದರ್ಭದಲ್ಲಿ) ವಸಾಹತು ಆಡಳಿತದ ಲಾಭಗಳು ತಳ ಸಮುದಾಯಗಳ ಜನರಿಗೂ ತಲುಪಿದೆ. ವಸಾಹತು ಆಡಳಿತ ಮತ್ತು ಮೆಶಿನರಿಗಳ ಮಧ್ಯಪ್ರದೇಶದಿಂದ ಆದ ಲಾಭನಷ್ಟದ ಲೆಕ್ಕಾಚಾರಕ್ಕಿಂತ ಹೆಚ್ಚು ಆ ಸಂದರ್ಭದಲ್ಲಿ ಸ್ಥಳೀಯ ಮೇಲ್ವರ್ಗ ಅಂದಿನ ಬೆಳವಣಿಗೆಗಳಿಗೆ ಪ್ರತಿಕ್ರಿಯಿಸಿದ ವಿಧಾನ ಇಂದಿನ ಕೋಮುವಾದವನ್ನು ಅರ್ಥಮಾಡಿಕೊಳ್ಳಲು ತುಂಬಾ ಉಪಯುಕ್ತ. ಅಂದು ಕೂಡ ಒಂದು ಕಡೆ ನಮ್ಮಲ್ಲಿನ ಕೊರತೆಗಳನ್ನು ಲೋಪಗಳನ್ನು ಸರಿಪಡಿಸಿಕೊಂಡು ಎಲ್ಲರೂ ಸಮಾನತೆಯಿಂದ ಬಾಳಲು ಅಗತ್ಯವಿರುವ ಮೌಲ್ಯಗಳ, ಸಂಸ್ಥೆಗಳ ಹುಡುಕಾಟಕ್ಕೆ ಪ್ರಾಮಾಣಿಕ ಪ್ರಯತ್ನಗಳು ನಡೆದವು. ಆದರೆ ಅದೇ ಸಂದರ್ಭದಲ್ಲಿ ಮತ್ತೊಂದೆಡೆ ಬಹುತೇಕರಿಗೆ ಮನುಷ್ಯರಾಗಿ ಸಮಾನರಾಗಿ ಬದುಕುವ ಅವಕಾಶಗಳನ್ನು ಸೃಷ್ಟಿಸುವ ಬಗ್ಗೆ ವಿಶೇಷ ಚಿಂತಿಸದೆ ಕ್ರಿಶ್ಚಿಯನ್ ಮೆಶಿನರಿಗಳನ್ನು ‘ಆನ್ಯ’ದ ಸ್ಥಾನದಲ್ಲಿ ನಿಲ್ಲಿಸಿ ಸ್ಥಳೀಯರು ನಾವೆಲ್ಲ ಒಂದೇ ಎನ್ನುವ ‘ಸ್ವ’ದ ಕಲ್ಪನೆಯನ್ನು ಪ್ರಚಾರ ಪಡಿಸಲು ಸ್ಥಳೀಯ ಮೇಲ್ಜಾತಿಗಳ ಒಂದು ಗುಂಪು ಪ್ರಯತ್ನ ನಡೆಸಿತು. ಆದರೆ ಅಂದಿನ ದಿನನಿತ್ಯದ ಬದುಕಿನ ಜಾತಿ, ಲಿಂಗ, ವರ್ಗ ಬೇಧಗಳ ತೀವ್ರತೆ ಎಷ್ಟಿತ್ತೆಂದರೆ ನಾವೆಲ್ಲ ಒಂದೇ ಎನ್ನುವ ಮೇಲ್ಜಾತಿಗಳ ಘೋಷಣೆ ಹುಸಿಯೆಂದು ತಳಸಮುದಾಯಗಳಿಗೆ ಮನವರಿಕೆಯಾಗಲು ವಿಶೇಷ ಕಾಲ ಹಿಡಿಯಲಿಲ್ಲ. ಜತೆಗೆ ವಸಾಹತು ಅಧಿಕಾರ ಕೂಡ ಮೆಶಿನರಿಗಳ ಪರ ಇತ್ತು. ದಿನನಿತ್ಯದ ಬದುಕಿನಲ್ಲಿ ಆಚರಣೆಗೆ ಬಾರದ ‘ನಾವೆಲ್ಲ ಒಂದೇ’ ಎನ್ನುವ ಈ ಘೋಷಣೆಯಿಂದ ನಮಗೆ ಮೋಕ್ಷವಿಲ್ಲವೆಂದು ತಳ ಸಮುದಾಯಗಳ ಹಲವಾರು ಜನರು ಮತಾಂತರಗೊಂಡರು.
ಸ್ವಾತಂತ್ರ‍್ಯ ನಂತರ ನಡೆದ ತಾಂತ್ರಿಕ ಆಧುನೀಕರಣ ಆರಂಭಿಕ ಹಂತಗಳಲ್ಲಿ ವಸಾಹತು ಆಡಳಿತದ ಸುಧಾರಿತ ರೂಪದಲ್ಲೇ ಪರಿಣಾಮ ಬೀರಿದೆ. ಆಧುನಿಕ ಪ್ರಭುತ್ವ ಜಾರಿಗೊಳಿಸಿದ ತಾಂತ್ರಿಕ ಆಧುನೀಕರಣ ಜೊತೆಗೆ ಈ ಪ್ರದೇಶಗಳಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣವನ್ನು ಮಿಷನರಿಗಳು ಮತ್ತು ಸ್ಥಳೀಯ ಮೇಲ್ಜಾತಿಗಳು ಕೊಡಮಾಡಿದ್ದನ್ನು ಆರಂಭದ ದಿನಗಳಲ್ಲಿ ಮೇಲ್ಜಾತಿ ಜನರು ತಮ್ಮದಾಗಿಸಿಕೊಂಡರು. ಇದರಿಂದಾಗಿ ಮತ್ತು ಬಹುತೇಕ ಬ್ಯಾಂಕ್‌ಗಳನ್ನು, ಶಾಲಾ ಕಾಲೇಜುಗಳನ್ನು, ಸೊಸೈಟಿಗಳನ್ನು ಸ್ಥಳೀಯ ಮೇಲ್ಜಾತಿ ಜನರು ಆರಂಭಿಸಿದ್ದರಿಂದ ಐವತ್ತು ಎಪ್ಪತ್ತರ ದಶಕಗಳಲ್ಲಿ ಬ್ಯಾಂಕ್‌ಗಳಲ್ಲಿ, ಇನ್ಸೂರೆನ್ಸ್ ಆಫೀಸುಗಳಲ್ಲಿ, ಶಾಲೆ ಕಾಲೇಜುಗಳಲ್ಲಿ ಸ್ಥಳೀಯ ಮೇಲ್ಜಾತಿ ಜನರು ಹೆಚ್ಚಿನ ಸಂಖ್ಯೆಯಲ್ಲಿ ಉದ್ಯೋಗ ಪಡೆದರು. ಕೆಳಜಾತಿ ಜನರು ತಮ್ಮ ಅತ್ಯಲ್ಪ ಶಿಕ್ಷಣದಿಂದ ಸಮಾಜದ ಕೆಲವು ಅಧೀನ ಉದ್ಯೋಗಗಳಲ್ಲಿ ಅಂದರೆ ಡ್ರೈವರ್, ಪ್ಲಂಬರ್, ಟೈಲರ್, ಮೆಕಾನಿಕ್ ಇತ್ಯಾದಿಗಳಲ್ಲಿ ಸಮಾಧಾನಪಟ್ಟು ಕೊಳ್ಳಬೇಕಾಯಿತು. ಉಳಿದ ಅವಕಾಶ ವಂಚಿತರು ಪರ ಊರುಗಳಿಗೆ (ಆರಂಭದಲ್ಲಿ ಮುಂಬಯಿ ನಂತರ ಕೊಲ್ಲಿ ರಾಷ್ಟ್ರಗಳಿಗೆ) ವಲಸೆ ಹೋದರು. ತಾಂತ್ರಿಕ ಆಧುನೀಕರಣದ ಭಾಗವಾಗಿ ಬಂದ ರಾಜಕೀಯ ಅಧಿಕಾರ ಕೇಂದ್ರಗಳನ್ನು ಪ್ರಜಾಪ್ರಭುತ್ವ ತತ್ವಗಳಿಗನುಸಾರ ರೂಪಿಸಲು ಮಾಡಿದ ಪ್ರಯತ್ನಗಳು ದೂರಗಾಮಿ ಪರಿಣಾಮ ಬೀರಲು ಆರಂಭಿಸಿದವು. ಪ್ರಜಾಪ್ರಭುತ್ವ ಪ್ರತಿಪಾದಿಸುವ ಆಧುನಿಕ ನಾಗರಿಕ ಜಗತ್ತಿನ ಮನುಷ್ಯರೆಲ್ಲರೂ ಸಮಾನರು ಎಂಬ ತಿಳುವಳಿಕೆ ಏನಿದೆ ಅದು ಬ್ರಾಹ್ಮಣವಾದದ ತಾತ್ವಿಕತೆಯಲ್ಲಿ ಬೆಳೆದು ಬಂದ ಜಾತಿ ಬದ್ಧವಾದ ತಾತ್ವಿಕತೆಗೆ ವಿರುದ್ಧ ಇದೆ. ಯಾಕೆಂದರೆ ಜಾತಿಬದ್ಧತೆ ಹುಟ್ಟಿನಿಂದಲೇ ಮನುಷ್ಯರೆಲ್ಲರೂ ಸಮಾನರು ಎನ್ನುವ ಕಲ್ಪನೆಯನ್ನು ತಿರಸ್ಕರಿಸುತ್ತಿದೆ. ಆದರೆ ಪ್ರಜಾಪ್ರಭುತ್ವದ ತಾತ್ವಿಕ ನೆಲೆಗಳು ಜಾತಿ ಅಥವಾ ಲಿಂಗ ಅಥವಾ ಧರ್ಮದ ನೆಲೆಯಲ್ಲಿ ವ್ಯಕ್ತಿಯೊಬ್ಬರ ಸ್ಥಾನಮಾನಗಳನ್ನು ಅಲ್ಲುಗಳೆಯುವುದಕ್ಕೆ ವಿರುದ್ಧ ಇದೆ.[8] ಈ ಎಲ್ಲ ಬೆಳವಣಿಗೆಗಳು ಸಾಂಪ್ರದಾಯಿಕ ಸಮಾಜದ ಯಜಮಾನಿಕೆ ವರ್ಗಗಳಿಗೆ ನುಂಗಲಾರದ ತುತ್ತಾಯಿತು. ಒಂದು ಕಾಲದಲ್ಲಿ ಮೇಲ್‌ವರ್ಗದ ಜನರು ಕಾಲಲ್ಲಿ ತೋರಿಸಿದ ಕೆಲಸವನ್ನು ತಲೆಯಲ್ಲಿಟ್ಟು ಕೊಂಡು ಮಾಡುತ್ತಿದ್ದ ಜನರು ಇಂದು ಸಾಕಷ್ಟು ಕೂಲಿ ಕೊಟ್ಟು ನಿಗದಿತ ಅವಧಿಗೆ ಕೆಲಸ ಮಾಡಿ ಎಂದು ಮನೆಬಾಗಿಲಿಗೆ ಹೋಗಿ ಕರೆದರೂ ಬರುವುದಿಲ್ಲ. ಹಾಗೆಂದು ಹಿಂದಿನ ರೀತಿಯಲ್ಲಿ ಹೊಡೆದು ಬಡಿದು ಕೂಲಿ ಮಾಡಿಸುವಂತಿಲ್ಲ; ಯಾವುದೋ ಬಗೆಯಲ್ಲಿ ಓಲೈಸಿಯೇ ಕೂಲಿ ಮಾಡಸಬೇಕಾಗಿದೆ. ಒಂದು ಕಾಲದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಮೇಲ್ಜಾತಿ ಜನರು ಬರುವಾಗ ದಾರಿಯಿಂದ ದೂರ ಸರಿದು ಗೌರವ ತೋರಿಸುತ್ತಿದ್ದವರು, ಸಾರ್ವಜನಿಕ ಸ್ಥಳಗಳಲ್ಲಿ ಮೇಲ್ಜಾತಿ ಜನರ ಅಸಮಾನ ನಡವಳಿಕೆಯನ್ನು ಒಪ್ಪಿಕೊಂಡವರು, ಎಲ್ಲ ಬಗೆಯ ಅಸಮಾನತೆಗಳನ್ನು ಮೌನವಾಗಿ ಸಹಿಸುತ್ತಿದ್ದ ಜನರು ಎಲ್ಲ ರಂಗಗಳಲ್ಲೂ ಸಮಾನತೆಯನ್ನು ಕೇಳುವುದು ಎಂದಾದರೆ ಮೇಲ್ವರ್ಗದ ಅಹಂಗೆ ಬಾರಿ ಪೆಟ್ಟಲ್ಲವೇ? ಹೀಗೆ ಆಧುನೀಕರಣ ಮಾಡಿದ ಸಿಂಬಾಲಿಕ್ ಬದಲಾವಣೆಗಳು ಸ್ಥಳೀಯ ಮೇಲ್ವರ್ಗದ ಜನರ ಅಹಂಗೆ ದೊಡ್ಡ ಆಘಾತವನ್ನು ನೀಡಿದೆ.
ಈ ಸಿಂಬಾಲಿಕ್ ಬದಲಾವಣೆಗಿಂತ ಹೆಚ್ಚು ಮೇಲ್ಜಾತಿ ಜನರ ಸ್ಥಾನಮಾನವನ್ನು ಮೂಲಭೂತವಾಗಿ ಬದಲಿಸಿದ್ದು ಸಮಷ್ಟಿಯ ಸಂಪನ್ಮೂಲಗಳನ್ನು ಶತಮಾನಗಳಿಂದ ಕುಶಿ ಬಂದಂತೆ ಬಳಸುವ ಅವರ ಹಕ್ಕಿಗೆ ಬಂದ ವಿಪತ್ತು. ಜಲ ಸಂಪನ್ಮೂಲ, ಭೂಮಿ, ಅರಣ್ಯ ಸಂಪನ್ಮೂಲ, ಖನಿಜ ಸಂಪನ್ಮೂಲ ಇತ್ಯಾದಿಗಳ ಬಳಕೆ ತೀರ್ಮಾನದ ಹಕ್ಕನ್ನು ಮೇಲ್ಜಾತಿ ಜನರು ಶತಮಾನಗಳಿಂದ ಅನುಭವಿಸುತ್ತಾ ಬಂದಿದ್ದರು. ಮೇಲ್ಜಾತಿ ಜನರು ಬಳಸಿ ಉಳಿಸಿದ್ದನ್ನು ಕೆಳಜಾತಿ ಜನರಿಗೆ ವಿತರಿಸಲಾಗುತ್ತಿತ್ತು ಮತ್ತು ಅವರು (ಕೆಳಜಾತಿ ಜನರು) ತಮ್ಮ ಪಾಲಿಗೆ ಬಂದುದರಲ್ಲಿ ತೃಪ್ತರಾಗಬೇಕಿತ್ತು, ಹೆಚ್ಚು ಸಂಖ್ಯೆಯಲ್ಲಿರುವ ನಮಗ್ಯಾಕೆ ಕಡಿಮೆ? ಕಡಿಮೆ ಸಂಖ್ಯೆಯಲ್ಲಿರುವ ನಿಮಗ್ಯಾಕೆ ಹೆಚ್ಚು? ಎಂದು ಪ್ರಶ್ನಿಸುವ ಸ್ಥಿತಿ ಇರಲಿಲ್ಲ. ಹೀಗೆ ಸಮಷ್ಟಿಯ ಸಂಪನ್ಮೂಲ ವಿತರಣೆಯನ್ನು ತೀರ್ಮಾನಿಸುವ ಮೇಲ್ಜಾತಿ ಜನರ ಹಕ್ಕು ಸಾಂಪ್ರದಾಯಿಕ ಸಮಾಜದಲ್ಲಿ ಪ್ರಶ್ನಾತೀತವಾಗಿತ್ತು. ಆದರೆ ತಾಂತ್ರಿಕ ಆಧುನೀಕರಣದೊಂದಿಗೆ ಈ ಸ್ಥಿತಿ ಸಂಪೂರ್ಣವಾಗಿ ಬದಲಾಯಿತು. ಸಮಷ್ಟಿಯ ಸಂಪನ್ಮೂಲ (ಭೌತಿಕ ಹಾಗೂ ಸಾಂಸ್ಕೃತಿಕ ಸಂಪನ್ಮೂಲಗಳ) ವಿತರಣೆ ತೀರ್ಮಾನದಾರರು ಕೂಡ ಬದಲಾದರು. ಆಧುನೀಕರಣದೊಂದಿಗೆ ಸಮಷ್ಟಿಯ ಸಂಪನ್ಮೂಲ ವಿತರಣೆ ತೀರ್ಮಾನ ಆಧುನಿಕ ಸಂಸ್ಥೆಗಳಿಗೆ (ಸೊಸೈಟಿ, ಪಂಚಾಯತ್, ವಿಧಾನ ಸಭೆ, ಲೋಕ ಸಭೆ ಇತ್ಯಾದಿಗಳಿಗೆ) ವರ್ಗಾಯಿಸಲ್ಪಟ್ಟಿತು. ಈ ಆಧುನಿಕ ಸಂಸ್ಥೆಗಳ ಸದಸ್ಯತ್ವ ಹುಟ್ಟಿನಿಂದ ಬರುವುದಿಲ್ಲ; ಓಟಿನಿಂದ ಬರುವಂತಾಯಿತು. ಅತೀ ಹೆಚ್ಚು ಓಟು ಪಡೆದ ಯಾರು ಕೂಡ ಈ ಆಧುನಿಕ ಸಂಸ್ಥೆಗಳ ಸದಸ್ಯರಾಗಬಹುದು. ಕೆಳಜಾತಿ ಜನರು ಸಂಖ್ಯೆಯಲ್ಲಿ ಹೆಚ್ಚು ಇದ್ದುದರಿಂದ ಸಹಜವಾಗಿಯೇ ಅವರು ಹೆಚ್ಚು ಓಟು ಪಡೆಯುವುದು ಸುಲಭವಾಯಿತು. ಇದರಿಂದಾಗಿ ಹೆಚ್ಚು ಹೆಚ್ಚು ಕೆಳಜಾತಿ ಜನರು ಮೇಲಿನ ಸಂಸ್ಥೆಗಳಲ್ಲಿ (ಸೊಸೈಟಿ, ಪಂಚಾಯತ್, ವಿಧಾನ ಸಭೆ, ಲೋಕಸಭೆ ಇತ್ಯಾದಿಗಳಲ್ಲಿ) ಸದಸ್ಯರಾಗಲು ಸಾಧ್ಯವಾಯಿತು. ಈ ಬೆಳವಣಿಗೆಯಿಂದಾಗಿ ಸಮಷ್ಟಿಯ ಸಂಪನ್ಮೂಲಗಳ ವಿತರಣೆ ಮೇಲೆ ಮೇಲ್ಜಾತಿ ಜನರ ಹಿಡಿತ ಕಡಿಮೆ ಆಗುವುದರ ಜೊತೆಗೆ ಕೆಳಜಾತಿ ಜನರ ಹಿಡಿತ ಬಲಗೊಳ್ಳುತ್ತಾ ಬಂತು. ಈ ಎಲ್ಲ ಬದಲಾವಣೆಗಳು ಮೇಲ್ವರ್ಗದ ಜನರಿಗೆ ನುಂಗಲಾರದ ತುತ್ತಾಯಿತು. ಹಾಗೆಂದು ಈ ಎಲ್ಲ ಆಘಾತಗಳಿಂದ ಹೊರಬರಲು ಹಿಂದಿನ ರೀತಿಯಲ್ಲಿ ಕೆಳವರ್ಗದ ಜನರ ಮೇಲೆ ನೇರ ದಬ್ಬಾಳಿಕೆ ಅಥವಾ ಯಜಮಾನಿಕೆ ಸಾಧ್ಯವಾಗಿಲ್ಲವಾಗಿತ್ತು.
ಇಂತಹ ಸಂದಿಗ್ಧ ಪರಿಸ್ಥಿತಿಯಿಂದ ಹೊರಬರಲು ಮೇಲ್ವರ್ಗದ ಜನರು ಕಂಡುಕೊಂಡ ಸುಲಭ ದಾರಿಯೆಂದರೆ ಕೋಮುವಾದ. ಮತ್ತೊಂದು ಜಾತಿ ಅಥವಾ ಧರ್ಮದ (ಮುಸ್ಲಿಮರು) ಜನರನ್ನು ಖಳನಾಯಕರನ್ನಾಗಿ ಚಿತ್ರಿಸಿ ನಮ್ಮಲ್ಲೇ ಕುಂದು ಕೊರತೆಗಳಿಗೆ ಈ ಖಳನಾಯಕರೇ ಕಾರಣ ಎಂದು ಕೋಮುವಾದ ಹೇಳುತ್ತದೆ. ಮತ್ತು ಈ ಕೋಮುವಾದ ಕಟ್ಟಿಕೊಡುವ ಚಿತ್ರಣವನ್ನು ನಂಬುವಂತೆ ಮಾಡಲು ಹಲವು ಬಗೆಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಯಿತು. ಈ ಎಲ್ಲ ಕಾರ್ಯಕ್ರಮಗಳಲ್ಲೂ ಖಳನಾಯಕರಾಗಿ ಚಿತ್ರಿಸಲ್ಪಟ್ಟ ಸಮುದಾಯದ ಜನರ ಬದುಕು, ಆಚರಣೆಗಳು ಬಹುಸಂಖ್ಯಾತರ ಬದುಕು, ಆಚರಣೆಗಳಿಗೆ ಎಷ್ಟು ಭಿನ್ನ ಮಾತ್ರವಲ್ಲ ವಿರುದ್ಧ ಇವೆ ಎಂದು ಸಾಬೀತುಪಡಿಸಲಾಯಿತು. ಅಷ್ಟು ಮಾತ್ರವಲ್ಲ ಬಹುಸಂಖ್ಯಾತರ ಏಳಿಗೆಗೆ ಅಥವಾ ಅಭಿವೃದ್ಧಿಗೆ ಅಲ್ಪಸಂಖ್ಯಾತ ಕೋಮಿನ ನಾಶ ಎಷ್ಟು ಅಗತ್ಯ ಎಂದು ಸತತವಾಗಿ ಹೇಳಲಾಯಿತು. ಈ ಎಲ್ಲ ಅಂಶಗಳು ಕೋಮುವಾದವನ್ನು ನಂಬುವ ಜನರ ಅರಿವಿಗೆ ಬಾರದೆ ಅವರ ಪ್ರಜ್ಞೆಯ ಭಾಗವಾಗುತ್ತವೆ ಮತ್ತು ಕೋಮು ಗಲಭೆ ಸಂದರ್ಭದಲ್ಲಿ ಅವರೆಲ್ಲ ನೇರ (ಹೊಡೆತ ಬಡಿತ, ಕೊಲೆ ಸುಲಿಗೆಗಳಲ್ಲಿ ಭಾಗವಹಿಸುವುದು) ಮತ್ತು ಪರೋಕ್ಷವಾಗಿ (ಕೋಮುಗಲಭೆಗಳನ್ನು ಹಬ್ಬಿಸುವ ಮಾಹಿತಿಗಳಿಗೆ ವಾಹಕರಾಗುವುದು, ಗಲಭೆಗಳನ್ನು ವಿರೋಧಿಸದಿರುವುದು, ಗಲಭೆಗೆ ಗುರಿಯಾದವರಿಗೆ ರಕ್ಷಣೆ ನೀಡದಿರುವುದು)  ಕೋಮುಗಲಭೆಗಳಲ್ಲಿ ಭಾಗವಹಿಸುವಂತೆ ಮಾಡಿವೆ. ಈ ಬಗೆಯ ಕೋಮುವಾದದಿಂದ ಮೇಲ್ವರ್ಗಕ್ಕೆ ಎರಡು ಲಾಭ. ಒಂದು, ಅಲ್ಪಸ್ವಲ್ಪ ಬಲಗೊಳ್ಳುವ ಅಲ್ಪಸಂಖ್ಯಾತರನ್ನು ಹತೋಟಿಯಲ್ಲಿಟ್ಟುಕೊಳ್ಳುವುದು. ಎರಡು, ಕೆಳಜಾತಿ ಜನರು ಜಾತಿ ನೆಲೆಯಲ್ಲಿ ಒಗ್ಗೂಡಿಸಿದರೆ ಸಾಂಪ್ರದಾಯಿಕ ಯಜಮಾನಿಕೆ ವರ್ಗದ ಯಜಮಾನಿಕೆಗೆ ತೊಂದರೆ. ಕೆಳಜಾತಿ ಜನರನ್ನು ಧರ್ಮದ ನೆಲೆಯಲ್ಲಿ ಒಗ್ಗೂಡಿಸಿದರೆ ಸಾಂಪ್ರದಾಯಿಕ ಯಜಮಾನಿಕೆ ವರ್ಗದ ಆಸಕ್ತಿಗಳನ್ನು ಮುಂದುವರಿಸಲು ತೊಂದರೆಯಾಗುವುದಿಲ್ಲ. ಈ ಉದ್ದೇಶಗಳನ್ನು ಗಮನದಲ್ಲಿಟ್ಟುಕೊಂಡು ಸಾಂಪ್ರದಾಯಿಕ ಯಜಮಾನಿಕ ಜಾತಿಗಳು ಧರ್ಮದ ನೆಲೆಯಲ್ಲಿ ಕೆಳಜಾತಿ ಜನರನ್ನು ಒಗ್ಗೂಡಿಸುವುದು ಕೋಮುವಾದದ ಮತ್ತೊಂದು ಉದ್ದೇಶವಾಯಿತು. ಹೀಗೆ ಮಾಡುವುದರಿಂದ ತಮ್ಮದೇ ಕೋಮಿಗೆ ಸೇರಿದ ಆಧುನೀಕರಣದಿಂದ ಪ್ರಭಾವಿತಗೊಂಡು ಸಾಂಪ್ರದಾಯಿಕ ಸಮಾಜದ ಯಜಮಾನಿಕ ವರ್ಗದ ಮೌಲ್ಯಗಳನ್ನು ಪ್ರಶ್ನಿಸುವ ಕೆಳಜಾತಿ ಜನರನ್ನು ಅಲ್ಪಸಂಖ್ಯಾತ ಕೋಮಿನವರನ್ನು ಸದೆಬಡಿಯಲು ಪ್ರೇರೇಪಿಸಲಾಯಿತು. ಕೆಳಜಾತಿ/ವರ್ಗದ ಜನರು ತಮ್ಮ ಜಾತಿ/ವರ್ಗದ ನೆಲೆಯಲ್ಲಿ ಒಟ್ಟಾಗದಿರುವುದರಿಂದ ಸಮಷ್ಟಿಯ ಸಂಪನ್ಮೂಲ ವಿತರಿಸುವ ಸಂಸ್ಥೆಗಳಲ್ಲಿ ಸದಸ್ಯತ್ವ ಸಾಧ್ಯವಿಲ್ಲದಾಯಿತು. ಇದೇ ಸಂದರ್ಭದಲ್ಲಿ ಹಿಂದುಗಳು ನಾವೆಲ್ಲ ಒಂದೇ ಎಂದು ಹೇಳುತ್ತಾ  ಹಿಂದುಗಳಲ್ಲಿನ ಮೇಲ್ ಜಾತಿಗಳು ಮೇಲಿನ ಎಲ್ಲ ಸಂಸ್ಥೆಗಳಲ್ಲಿ ತಮ್ಮ ಸ್ಥಾನ ಭದ್ರಪಡಿಸಲು ಕೋಮುವಾದ ಸಹಕರಿಸುತ್ತಿದೆ.
____
(ಈ ಲೇಖನವು ಪೋರ್ಮ್‌‌ಡ್/ಕನ್‌ಸ್ಟ್ರಟೆಡ್ ಕಮ್ಯುನಿಟೀಸ್ ಆಂಡ್ ಕಮ್ಯುನಲಿಸಂ ಎ ಸ್ಟಡಿ ಆಫ್ ಗ್ರೋತ್ ಆಫ್ ಕಮ್ಯುನಲಿಸಂ ಇನ್ ಕೋಸ್ಟಲ್ ಕರ್ನಾಟಕ ಎನ್ನುವ ಎಂಚಂದ್ರ ಪೂಜಾರಿಯವರ ಇಂಗ್ಲೀಷ್ ಲೇಖನದ ಭಾಷಾಂತರಅನುವಾದಿತ ಲೇಖನವನ್ನು ಈಗಿನ ಸಂದರ್ಭಕ್ಕೆ ಹೊಂದಾಣಿಕೆ ಮಾಡುವ ಪ್ರಯತ್ನದಲ್ಲಿ ಲೇಖನ ಅದರ ಮೂಲ ರೂಪದಲ್ಲಿ ಉಳಿದಿಲ್ಲಪ್ರತ್ಯೇಕ ಲೇಖನವಾಗಿದೆಅನುವಾದಿಸಲು ಸಹಕರಿಸಿದ ಡಾನಿತ್ಯಾನಂದ ಶೆಟ್ಟಿಯವರನ್ನು ಸಹಲೇಖಕರೆಂದು ಗುರುತಿಸಿದ್ದಾರೆ.)

[1]ಹಾಗೆಂದು ಆ ಸಮುದಾಯಗಳು ತಮ್ಮ ಕಸುಬನ್ನು ಬಿಟ್ಟು ಬದುಕಲು ಸಾಧ್ಯವಿರಲಿಲ್ಲ. ಜತೆಗೆ ತಮ್ಮ ಉತ್ಪಾದನೆಗೆ ಸಾಕಷ್ಟು ಬೇಡಿಕೆ ಇದ್ದುದರಿಂದ (ಶೇಂದಿ ಕುಡಿಯುವವರು ಮತ್ತು ಮೀನು ತಿನ್ನುವವರು ಇದ್ದುದರಿಂದ) ಸಾಂಪ್ರದಾಯಿಕ ವೃತ್ತಿಗಳನ್ನು ಮಾಡಿ ತಮ್ಮ ಜೀವನಾಂಶ ಭರಿಸಿಕೊಳ್ಳುತ್ತಿದ್ದರು.
[2]ಆಧುನೀಕರಣದ ಆರಂಭದ ದಿನಗಳಲ್ಲೇ ತಾಂತ್ರಿಕ ಶಿಕ್ಷಣ ನೀಡುವ ಸಂಸ್ಥೆಗಳನ್ನು ಆರಂಭಿಸಿದ ಜಿಲ್ಲೆಗಳಲ್ಲಿ ದಕ್ಷಿಣ ಕನ್ನಡ ಕೂಡ ಒಂದು. ಮೆಡಿಕಲ್, ಎಂಜಿನಿಯರಿಂಗ್ ಕಾಲೇಜುಗಳು ತುಂಬಾ ಹಿಂದಿನಿಂದಲೇ ಇದ್ದವು. ಇತ್ತೀಚಿನವರೆಗೆ ಜಿಲ್ಲೆಯ ತಳಸಮುದಾಯಗಳ ಬೆರಳೆಣಿಕೆಯಷ್ಟು ಮಂದಿಗೆ ಈ ವಿದ್ಯಾಲಯಗಳಲ್ಲಿ ಓದಲು ಅವಕಾಶ ದೊರೆಯಲಿಲ್ಲ. ಅದಕ್ಕೆ ಬಹುಮುಖ್ಯ ಕಾರಣ ಈ ಸಂಸ್ಥೆಗಳು ಕೇಳುತ್ತಿದ್ದ ಕ್ಯಾಪಿಟೇಶನ್. ಕೆಲವು ಲಕ್ಷಗಳಲ್ಲಿ ಇದ್ದ ಕ್ಯಾಪಿಟೇಶನ್ ಕೊಟ್ಟು ಓದಿಸುವಷ್ಟು ಶಕ್ತಿ ಮೂರು ಹೊತ್ತಿನ ಊಟಕ್ಕೆ ಪರದಾಡುತ್ತಿದ್ದ ತಳಸಮುದಾಯಗಳಿಗೆ ಇರಲಿಲ್ಲ. ಆದುದರಿಂದ ಹೊರಗಿನ ಅನುಕೂಲಸ್ಥರೊಂದಿಗೆ ಸ್ಥಳೀಯ ಅನುಕೂಲಸ್ಥರು ಮಾತ್ರ ಈ ಸಂಸ್ಥೆಗಳ ಲಾಭ ಪಡೆಯಲು ಸಾಧ್ಯವಾಯಿತು.
[3]ಎಂ. ಚಂದ್ರ ಪೂಜಾರಿ, ಟ್ರೆಂಡ್ಸ್ ಇನ್ ಎಂಟರ್‌ಪ್ರನರ್‌ಶಿಪ್‌ ಆಂಡ್ ರೀಜನಲ್ ಡೆವಲಪ್‌ಮೆಂಟ್- ಎ ಸ್ಟಡಿ ವಿದ್‌ ಸ್ಪೇಷಲ್ ರೆಫರೆನ್ಸ್‌ ಟು ದಕ್ಷಿಣ ಕನ್ನಡ ಡಿಸ್ಟ್ರಿಕ್ಟ್, ಮಂಗಳೂರು ವಿಶ್ವವಿದ್ಯಾಲಯಕ್ಕೆ ಸಲ್ಲಿಸಿದ ಅಪ್ರಕಟಿತ ಪಿಹೆಚ್.ಡಿ. ಮಹಾಪ್ರಬಂಧ, ೧೯೯೫.
[4]ಮರ ಹತ್ತುವ (ಸ್ಕಿಲ್ ಇದ್ದವರು) ಕಲೆ ಗೊತ್ತಿರುವ ಯಾರು ಕೂಡ ಶೇಂದಿ ತೆಗೆಯಬಹುದು. ಹರಿತವಾದ ಕತ್ತಿ (ಇದನ್ನು ತುಳುವಿನಲ್ಲಿ ತಾರ್ಕತ್ತಿ ಎನ್ನುತ್ತಾರೆ). ಮರ ಹತ್ತಲು ಬಿದಿರಿನ ಏಣಿ (ಇದನ್ನು ತುಳುವಿನಲ್ಲಿ ಕೇರ್ಪು ಎನ್ನುತ್ತಾರೆ) ಮತ್ತು ಶೇಂದಿ ಶೇಖರಿಸಲು ಕೆಲವು ಮಡಿಕೆಗಳು ಶೇಂದಿ ತೆಗೆಯುವ ಕೆಲಸಕ್ಕೆ ಬೇಕಾದ ತಯಾರಿ. ಈ ಎಲ್ಲದಕ್ಕೆ ಈಗ ಹೆಚ್ಚೆಂದರೆ ಕೆಲವು ನೂರು ರೂಪಾಯಿಗಳು ಸಾಕು. ತೆಗೆದ ಶೇಂದಿಯನ್ನು ಮಾರಲು ರಸ್ತೆ ಬದಿಯೇ ಆಗಬೇಕೆಂದಿಲ್ಲ. ಸುಸಜ್ಜಿತ ಕಟ್ಟಡ ಬೇಕೆಂದಿಲ್ಲ. ಕುರ್ಚಿ ಮೇಜುಗಳ ಅವಶ್ಯಕತೆಯಿಲ್ಲ, ದುಬಾರಿ ಗ್ಲಾಸುಗಳು ಬೇಕಿಲ್ಲ. ಶೇಂದಿ ಮರದ ಬುಡದಲ್ಲಿ ಮಣ್ಣಿನ ಮಡಿಕೆಯಲ್ಲಿ ಕುಡಿಯುವ ಗ್ರಾಹಕರು ಎಲ್ಲ ಕಡೆ ಇದ್ದಾರೆ.
[5]ಬೆಸ್ತರು ಅಥವಾ ಬಿಲ್ಲವರು ತಮ್ಮ ಸಾಂಪ್ರದಾಯಕ ಕಸುಬಿಗೆ ಅಂಟಿಕೊಳ್ಳಬೇಕೆನ್ನುವ ವಾದ ಇದಲ್ಲ. ಖಂಡಿತವಾಗಿಯೂ ಅವರು ಕೂಡ ಡಾಕ್ಟರು, ಎಂಜಿನೀಯರ್, ಕಂಪ್ಯೂಟರ್ ಸೈಂಟಿಸ್ಟ್‌ಗಳು ಆಗಬೇಕು. ಆದರೆ ಬಹುತೇಕ ಬಿಲ್ಲವರ ಅಥವಾ ಬೆಸ್ತರ ಅಥವಾ ತಳಸ್ತರದ ಸಮುದಾಯಗಳ ಜನರಿಗೆ ಡಾಕ್ಟರ್, ಎಂಜಿನಿಯರ್ ಆಗುವುದು ಬಿಡಿ ಅವರ ಆರ್ಥಿಕ ಹಿನ್ನೆಲೆಯಿಂದ ಬಿಎ, ಬಿಕಾಂ ಓದುವುದೇ ಕಷ್ಟವಾಗಿದೆ. ಬಿಎ ಬಿಕಾಂ ಓದಿದವರಿಗೆ ಉದ್ಯೋಗದ ಮಾರುಕಟ್ಟೆಯಲ್ಲಿ ಯಾವ ಅವಕಾಶ ಕಾದಿದೆ ಎಂದು ನಮಗೆಲ್ಲ ತಿಳಿದಿದೆ. ಇದನ್ನು ಸರಕಾರಿ ಕೆಲಸ ಸಿಗಬೇಕಾದರೆ ಯೋಗ್ಯತೆಗಿಂತ ಹೆಚ್ಚು ದುಡ್ಡು ಮತ್ತು ಪ್ರಭಾವದ ಅಗತ್ಯ ಇದೆ ಎಂದು ಎಲ್ಲರಿಗೂ ತಿಳಿದ ವಿಷಯ.
[6]ಹೆಚ್ಚಿನ ವಿವರಗಳಿಗೆ ಎಂ. ಚಂದ್ರಪೂಜಾರಿಯವರ, ಜನಾಯೋಜನೆ ಹೈದರಾಬಾದ್ ಕರ್ನಾಟಕದ ಅನುಭವಗಳು, (ವಿದ್ಯಾರಣ್ಯ: ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ-ಹಂಪಿ, ೨೦೦೪) ಪುಸ್ತಕ ನೋಡಬಹುದು.
[7]ಜಿಲ್ಲೆಯ ಬಹುತೇಕ ಕಡೆ ಇಂದು ಕೂಡ ಸೊಸೈಟಿಗಳು ಸಮಾಜದ ಮೇಲ್ವರ್ಗದ ಹಿಡಿತದಲ್ಲಿವೆ. ಇವರಿಗೆ ತಮ್ಮ ಸೊಸೈಟಿಗಳು ವ್ಯವಸ್ಥಿತವಾಗಿ ನಡೆಯುತ್ತಿವೆ ಎಂದು ಹೊರಗಿನ ಪ್ರಪಂಚಕ್ಕೆ ತೋರಿಸುವುದು ಮುಖ್ಯ. ಇದಕ್ಕಾಗಿ ಪ್ರತಿ ವರ್ಷ ಸಾಲ ಕಟ್ಟಲಾಗದ ರೈತರನ್ನು ಪುಸಲಾಯಿಸಿಯೋ ಅಥವಾ ಒತ್ತಡದಿಂದಲೋ ಹೊಸ ಸಾಲ ಮಾಡಿ ಹಳೇ ಸಾಲವನ್ನು ತೀರಿಸಲು ಒಪ್ಪಿಸುತ್ತಾರೆ.
[8]ಲಿಖಿತ ಸಂವಿಧಾನವನ್ನು ಲೋಕಸಭೆ ಸ್ವೀಕರಿಸಿದ ನಂತರ ಕಾನೂನು ಪ್ರಕಾರ ಜಾತಿ, ಧರ್ಮ, ಲಿಂಗ, ಇತ್ಯಾದಿ ನೆಲೆಗಳಲ್ಲಿ ಸಾರ್ವಜನಿಕವಾಗಿ ಅಸಮಾನತೆ ಆಚರಿಸುವುದು ಕಾನೂನು ಬಾಹಿರ. ಜಾತಿ, ಧರ್ಮ, ಲಿಂಗ ಇತ್ಯಾದಿಗಳ ನೆಲೆಯಲ್ಲಿ ನಡೆಯುವ ಅಸಮಾನತೆಯನ್ನು ತಡೆಗಟ್ಟಲು ಅಸ್ಪೃಶ್ಯತೆ ನಿವಾರಣೆ ಕಾಯಿದೆ, ವರದಕ್ಷಿಣೆ ತಡೆ ಕಾಯಿದೆ, ಮಹಿಳೆಯರಿಗೆ ಆಸ್ತಿಯಲ್ಲಿ ಸಮಪಾಲು, ಕೌಟುಂಬಿಕ ದೌರ್ಜನ್ಯಗಳನ್ನು ತಡೆಯುವ ಕಾಯಿದೆ ಇತ್ಯಾದಿಗಳು ಜಾರಿಗೆ ಬಂದಿವೆ.