-ಪುರುಷೋತ್ತಮ ಬಿಳಿಮಲೆ
ಈಗ ಕಾಲ ಬದಲಾಗಿದೆ.ಬಲಪಂಥೀಯ ಶಕ್ತಿಗಳು ಭಾರತದಲ್ಲಿ ಅಧಿಕಾರ ಹಿಡಿದಿವೆ. ಈ ಜನವಿರೋಧಿ ಶಕ್ತಿಗಳೊಡನೆ ಅಂತಾರಾಷ್ಟ್ರೀಯ ಬಂಡವಾಳಶಾಹೀ ಶಕ್ತಿಗಳೂ ಕೈಜೋಡಿಸಿವೆ. ಪ್ರಜಾಪ್ರಭುತ್ವದ ಹೆಸರಿನಲ್ಲಿ ಮತ್ತೆ ಪರಮಾಧಿಕಾರ ರೂಪುಗೊಳ್ಳುತ್ತಿದೆ. ಅಸಹನೆ ಮತ್ತು ಆಕ್ರಮಣಶೀಲತೆಗಳು ನಮ್ಮ ಕಾಲದ ಪ್ರಮುಖ ಗುಣಗಳಾಗಿ ಕಾಣಿಸಿಕೊಳ್ಳುತ್ತಿವೆ. ಇಂಥ ಸಂದರ್ಭಗಳಲ್ಲಿ ಬಹಳ ಎಚ್ಚರದಿಂದ ಕೆಲಸಮಾಡಬೇಕಾಗಿದ್ದ ಮಾಧ್ಯಮಗಳು ದಯನೀಯವಾಗಿ ಸೋತಿವೆ, ಕಾರ್ಪೊರೇಟ್ ಜಗತ್ತಿನ ಕೈಗೊಂಬೆಗಳಾಗಿರುವ ಅವು ತಮ್ಮ ಕರ್ತವ್ಯದಿಂದ ಬಹಳ ದೂರ ಸರಿದಿವೆ. ಪ್ರಜಾಪ್ರಭುತ್ವ ಎಲ್ಲೆಡೆಯೂ ದಣಿದಂತೆ ಭಾಸವಾಗುತ್ತಿದೆ. ನೆಲದ ಗುಣದ ಬಗೆಗೆ ಭಾವುಕವಾದ ಮಾತುಗಳು, ಗಡಿಯ ರಕ್ಷಣೆಯ ಬಗೆಗೆ ಆವೇಶಭರಿತ ಭಾಷಣಗಳು, ತನ್ನದೇ ಶ್ರೇಷ್ಠವೆಂಬ ಅಹಂಕಾರ ಮತ್ತು ಅನ್ಯರ ಬಗೆಗಣ ಅಸಾಧ್ಯ ಅಸಹನೆಗಳು ಇಂದು ವಿಶ್ವದಾದ್ಯಂತ ಸರ್ವಾಧಿಕಾರಿಗಳ ನಿರ್ಮಾಣಕ್ಕೆ ಕಾರಣವಾಗುತ್ತಿದೆ. ಭಾರತದ ಘಟನಾವಳಿಗಳಂತೂ ನಮ್ಮ ಕಣ್ಣೆದುರೇ ಇವೆ.
ಹಾಗೆ ನೋಡಿದರೆ, ಪ್ರಬಲ ನಾಯಕ ಹಾಗೂ ಸರ್ವಾಧಿಕಾರಿಯೊಬ್ಬನ ನಡುವಣ ವ್ಯತ್ಯಾಸವನ್ನು ಸರಿಯಾಗಿ ವಿವರಿಸಿದವರಿಲ್ಲ. ಇವರಿಬ್ಬರೂ ಜನರ ಉದ್ಧಾರಕ್ಕಾಗಿ ದೇವರೇ ತನ್ನನ್ನು ಭೂಮಿಗೆ ಕಳಿಸಿದ್ದಾರೆ ಎಂದು ಅಮಾಯಕರನ್ನು ನಂಬಿಸುತ್ತಾರೆ, ಜನರ ಮುಗ್ಧ ಭಾವನೆಗಳೊಡನೆ ಇವರು ಚೆಲ್ಲಾಟವಾಡುತ್ತಾರೆ. ಎಲ್ಲರಿಗೂ ನ್ಯಾಯ ಒದಗಿಸಬೇಕಾದ್ದು ತನ್ನ ಕರ್ತವ್ಯವೆಂದು ಆಣೆ ಮಾಡುತ್ತಾರೆ.ಜನರ ಧಾರ್ಮಿಕ ಭಾವನೆಗಳನ್ನು ಬಡಿದೆಬ್ಬಿಸುತ್ತಾರೆ. ಅಧಿಕಾರ ಹಿಡಿದ ಮೇಲೆ ಇದೇ ಮಾತುಗಳನ್ನು ಆಧರಿಸಿ ಸರ್ವಾಧಿಕಾರಿಗಳಾಗಿ ಮಾರ್ಪಾಡು ಹೊಂದುತ್ತಾರೆ.ದೇಶ, ಭಾಷೆ, ಜನಾಂಗವನ್ನು ಆಧರಿಸಿಯೇ ಹಿಟ್ಲರನು ಬೆಳೆದದ್ದು ಮತ್ತು ಲಕ್ಷಾಂತರ ಜನರನ್ನು ಕೊಂದದ್ದು.ರಾಬರ್ಟ್ ಮುಗಾಬೆಯು ತಾನು ಬಡಜನರ ಉದ್ದಾರಕ್ಕೆ ಭೂಮಸೂದೆಯನ್ನು ಜ್ಯಾರಿಗೆ ತರುತ್ತೇನೆ ಎಂದು ಹೇಳಿ ಲಕ್ಷಾಂತರ ಜನರನ್ನು ಸಾಯಿಸಿದ, ಅಭಿವೃದ್ಧಿ ಮತ್ತು ಸಾಮಾಜಿಕ ನ್ಯಾಯದ ಹೆಸರಲ್ಲಿ ೩೦ ಲಕ್ಷಕ್ಕೂ ಹೆಚ್ಚು ಜನರನ್ನು ಬೀದಿಗೆ ತಳ್ಳಿದ. ಉಗಾಂಡಾದ ಇದಿ ಅಮಿನ್ನು ನ್ಯಾಯದ ಹೆಸರಿನಲ್ಲಿ ಸುಮಾರು ೫೦ ಸಾವಿರ ಜನರನ್ನು ಕೊಂದಿದ್ದ.ಸರ್ವಾಧಿಕಾರಿಗಳು ಪ್ರಜಾಪ್ರಭುತ್ವದ ಹೆಸರಿನಲ್ಲಿಯೇ ಹುಟ್ಟಿಕೊಳ್ಳುತ್ತಿರುದು ಇಂದಿನ ವಿಪರ್ಯಾಸಗಳಲ್ಲಿ ಒಂದು.
ಈ ಕುರಿತು ನಿಜವಾಗಲೂ ಎಚ್ಚರ ವಹಿಸಬೇಕಾದ್ದು ಬರೆಹಗಾರರು.ಆಳುವ ವರ್ಗವನ್ನು ಓಲೈಸಿ ಲಾಭ ಪಡೆದುಕೊಳ್ಳುವ ವಂದಿ ಮಾಗಧರು ಎಲ್ಲ ಕಾಲಕ್ಕೂ ಇರುತ್ತಾರೆ.ಆದರೆ ಒಳ್ಳೆಯ ಬರಹಗಾರರು ಮುಂದಾಗುವ ಅಪಾಯಗಳನ್ನು ಸೂಕ್ಷ್ಮವಾಗಿ ಬಹಳ ಬೇಗನೆ ಗ್ರಹಿಸುತ್ತಾರೆ. ಪಂಪನು ತನಗೆ ಅನ್ನ ಕೊಡುತ್ತಿದ್ದ ಅರಿಕೇಸರಿಯ ಆಸ್ಥಾನದಲ್ಲಿ ಕುಳಿತೇ ’ ತಲೆಗೆ ಅಭಿಷೇಕ ಮಾಡಿಕೊಂಡ ಅರಸರು ಅಧಿಕಾರ ಸಿಕ್ಕೊಡನೆ, ತಮ್ಮನ್ನು ತಾವೇ ಮರೆತು, ಧರ್ಮವೆಂಬ ದೋಣಿಯಿಂದ ಜಾರಿ ಬೀಳುತ್ತಾರೆ’ ಎಂದು ಆದಿ ಪುರಾಣದಲ್ಲಿ ಬರೆದ. ಬಸವಣ್ಣ ತನ್ನ ಆಶ್ರಯದಾತನಾದ ಬಿಜ್ಜಳನನ್ನು ಪ್ರಶ್ನಿಸಿದ. ಕುಮಾರವ್ಯಾಸನು ’ಅರಸು ರಾಕ್ಷಸ, ಪರಿವಾರ ಹದ್ದಿನ ನೆರವಿ’ ಎಂದು ಕರೆದ. ವಿಜಯನಗರದ ಅರಸರು ರಸ್ತೆ ಬದಿಯಲ್ಲಿ ಚಿನ್ನ ಬೆಳ್ಳಿ ಮಾರುತ್ತಿದ್ದಾಗ, ನಮ್ಮ ದಾಸರು ಲಂಗೋಟಿ ಉಟ್ಟುಕೊಂಡು ’ಇದೆಲ್ಲಾ ಲೊಳಲೊಟ್ಟೆ’ ಎಂದು ಹಾಡುತ್ತಾ ಅದೇ ಬೀದಿಯಲ್ಲಿ ಓಡಾಡಿದರು. ೨೦ ನೇ ಶತಮಾನದ ಕನ್ನಡದ ಮುಖ್ಯ ಬರೆಹಗಾರರು ಎಲ್ಲ ಬಗೆಯ ಸರ್ವಾಧಿಕಾರೀ ಶಕ್ತಿಗಳ ವಿರುದ್ಧ ಸಮರ ಸಾರುತ್ತಲೇ ಬಂದಿದ್ದಾರೆ. ಅಧಿಕಾರಕ್ಕೆ ಏರಿದವರನ್ನು ಅನುಮಾನದಿಂದ ನೋಡುತ್ತಾ ಬಂದಿರುವುದು ಕನ್ನಡದ ಪ್ರಮುಖ ಬರೆಹಗಾರರ ಒಂದು ಗುಣ.ಈ ಪರಂಪರೆ ನಮ್ಮ ಜಾನಪದ ಅಧ್ಯಯನಗಳಲ್ಲಿ ಮುಂದುವರಿಯಬೇಕಾದ್ದು ಇಂದಿನ ತುರ್ತು ಅಗತ್ಯಗಳಲ್ಲಿ ಒಂದಾಗಿದೆ.ಬಲಪಂಥೀಯ ಶಕ್ತಿಗಳನ್ನು ಮತ್ತು ಸರ್ವಾಧಿಕಾರೀ ಪ್ರವೃತ್ತಿಗಳನ್ನು ನಾವು ನಮ್ಮ ಅಧ್ಯಯನಗಳ ಮೂಲಕ ನಿರಾಕರಿಸಬೇಕಾಗಿದೆ.ಹೀಗೆ ಮಾಡಲು ನಮಗೆ ಜಾನಪದದ ಬಗೆಗೆ ತಿಳುವಳಿಕೆ ಹೇಗೆ ಅಗತ್ಯವೋ ಹಾಗೇಯೇ ನಮ್ಮ ಕಾಲದ ರಾಜಕೀಯ ಬೆಳವಣಿಗೆಗಳ ಕುರಿತಾದ ಎಚ್ಚರವೂ ಅಗತ್ಯ. ಒಂದು ಮುಗ್ಧವಾದ ವಾತಾವರಣದಲ್ಲಿ ಕುಳಿತು ಜಾನಪದವನ್ನು ಭಾವುಕವಾಗಿ ಗ್ರಹಿಸಿ ಮಂಡಿಸುವ ಕಾಲ ಮುಗಿದಿದೆ.
ಒಂದೆರಡು ಉದಾಹರಣೆಗಳ ಮೂಲಕ ಇದನ್ನು ಇನ್ನಷ್ಟು ವಿವರಿಸಬಯಸುತ್ತೇನೆ.
ಹಲವು ಪಠ್ಯಗಳ ಮರು ಅಧ್ಯಯನ:
ಬ್ರಿಟಿಷರು ಭಾರತಕ್ಕೆ ಕಾಲಿರಿಸಿದಾಗ ಅವರಿಗೆ ಇಲ್ಲಿಯ ವೈವಿಧ್ಯಗಳನ್ನು ಕಂಡು ಆಶ್ಚರ್ಯವಾಗಿತ್ತು. ಬಗೆಬಗೆಯ ಭಾಷೆ, ಸಮುದಾಯಗಳು, ಆಚರಣೆಗಳು, ಭೌಗೋಳಿಕತೆ ಇತ್ಯಾದಿಗಳನ್ನೆಲ್ಲ ಒಂದು ಬಲವಾದ ಚೌಕಟ್ಟಿನೊಳಗೆ ತಾರದ ಹೊರತು ಸ್ಥಿರವಾದ ಆಳ್ವಿಕೆ ಕೊಡುವುದು ಅಸಾಧ್ಯ ಎಂಬುದನ್ನು ಅವರು ಮನಗಂಡಿದ್ದರಲ್ಲದೆ ಭಾರತವನ್ನು ಯಾವುದಾದದರೂ ಒಂದು ನಿರ್ದಿಷ್ಟ ಪರಿಭಾಷೆಯಲ್ಲಿ ವಿವರಿಸಲು ಅವರು ಹೆಣಗುತ್ತಿದ್ದರು. ಭಾರತಕ್ಕೆ ಹೋಲಿಸಿದರೆ ಬಹುಮಟ್ಟಿಗೆ ಏಕರೂಪದಲ್ಲಿರುವಂತೆ ಕಾಣುತ್ತಿದ್ದ ಯುರೋಪಿನ ವಿದ್ವಾಂಸರಿಗೆ ಭಾರತದ ಬಹುರೂಪತೆಯೇ ದೊಡ್ಡ ಸಮಸ್ಯೆಯಾಗಿತ್ತು.ಇಲ್ಲಿನ ’ಅವ್ಯವಸ್ಥೆ’ ಯ ಗರ್ಭದಿಂದ ’ಸುವ್ಯವಸ್ಥೆ’ ಯ ಒಂದು ವಿವರಣೆಯನ್ನು ಪ್ರತೀತಗೊಳಿಸುವುದು ಅವರ ಆ ಕಾಲದ ರಾಜಕೀಯ ಮತ್ತು ಬೌದ್ಧಿಕ ಅಗತ್ಯಗಳಲ್ಲಿ ಒಂದಾಗಿತ್ತು.ಭಾರತೀಯ ಸಂಸ್ಕೃತಿಯೆಂದರೆ ಅವರಿಗೆ ’ವಿವರಿಸಲಾಗದ ಒಂದು ಗೊಂದಲದ ಗೂಡು’.ಉದಾಹರಣೆಗೆ ಅವರು ಮಹಾಭಾರತ ಮಹಾಕಾವ್ಯವನ್ನು ಗ್ರಹಿಸಿದ ಬಗೆ ನೋಡಿ.ಮಹಾಭಾರತ ಮಹಾಕಾವ್ಯದ ಬಗ್ಗೆ ೧೮೯೭, ೧೮೯೮ ಮತ್ತು ೧೮೯೯ರಲ್ಲಿ ಮೂರು ಅಂತಾರಾಷ್ಟ್ರೀಯ ಸಮ್ಮೇಳನಗಳನ್ನು ಯುರೋಪಿನ ವಿವಿಧ ನಗರಗಳಲ್ಲಿ ನಡೆಸಲಾಯಿತು.ಪ್ಯಾರೀಸ್ನಲ್ಲಿ ನಡೆದ ೧೧ನೇ " ಇಂಟರ್ ನ್ಯಾಶನಲ್ ಕಾಂಗ್ರೆಸ್ ಆಫ್ ಓರಿಯಂಟಲಿಸ್ಟ್’ ನಲ್ಲಿ ಸಂಸ್ಕೃತ ಪಂಡಿತನಾಗಿದ್ದ ಎಂ. ವಿಂಟರ್ ನೀಟ್ಜ ಅವರು ದಕ್ಷಿಣ ಭಾರತದಲ್ಲಿ ಲಭ್ಯವಿರುವ ಹಲವು ಮಹಾಭಾರತ ಪಠ್ಯಗಳ ಬಗ್ಗೆ ಪ್ರಬಂಧ ಮಂಡಿಸಿ, ಪ್ರಬಂಧದ ಕೊನೆಯಲ್ಲಿ ’ ಅಗತ್ಯಬೇಕಾಗಿರುವ ಒಂದು ಅಧಿಕೃತ ಪಠ್ಯದ’ ಬಗ್ಗೆ ವಾದ ಮಂಡಿಸಿದ. ಮುಂದಿನ ಒಂದು ವರ್ಷಗಳ ಕಾಲ ಇದರ ಕುರಿತು ಚರ್ಚೆ ನಡೆದು, ವಿಂಟರ್ ನೀಟ್ಜ ಅವರೇ ’ ಸಂಸ್ಕೃತ್ ಎಪಿಕ್ ಟೆಕ್ಸ್ಟ್ ಸೊಸಾಯಿಟಿ’(Sanskrit epic texts
society)ಯನ್ನು ರಚಿಸಿ ರೋಮ್ ನಲ್ಲಿ ನಡೆದ ೧೨ನೇ ಇಂಟರ್ ನ್ಯಾಶನಲ್ ಕಾಂಗ್ರೆಸ್ ಆಫ್ ಓರಿಯಂಟಲಿಸ್ಟ್’ ನಲ್ಲಿ ಅಧಿಕೃತ ಪಠ್ಯ ಸಂಪಾದನೆಯ ಕುರಿತ ತಮ್ಮ ವಾದ ಮಂಡನೆ ಮಾಡಿದ. ಮತ್ತೆ ಸುದೀರ್ಘ ಚರ್ಚೆ ನಡೆದು, ಮೂರು ವರ್ಷಗಳ ಆನಂತರ ೧೯೦೨ರಲ್ಲಿ ಹಂಬರ್ಗನಲ್ಲಿ ನಡೆದ ಸಮ್ಮೇಳನದಲ್ಲಿ ವಿಂಟರ್ ನೀಟ್ಜ ಅವರ ವಾದವನ್ನು ಅಧಿಕೃತವಾಗಿ ಒಪ್ಪಿಕೊಳ್ಳಲಾಯಿತು.
ಪರಿಣಾಮವಾಗಿ ಸಂಸ್ಕೃತ ವಿದ್ವಾಂಸ ಶ್ರೀ ವಿಷ್ಣು ದಿಗಂಬರ ಸೂಕ್ತಂಕರ್ ಅವರ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸಲಾಯಿತು. ವ್ಯಾಸರು ಬರೆದ ಮಹಾಭಾರತದ ನೂರಾರು ಪಠ್ಯಗಳನ್ನು ಸಂಗ್ರಹಿಸಿ, ಅವುಗಳಿಂದ ’ಒಂದು ಅಧಿಕೃತ’ ಮಹಾಭಾರತವನ್ನು ಸಿದ್ಧಪಡಿಸಿಕೊಡುವುದು ಈ ಸಮಿತಿಯ ಕೆಲಸ. ಸೂಕ್ತಂಕರ್ ಅವರು ಪಿ.ವಿ ಕಾಣೆ, ಆರ್ ಡಿ.ಕರಮರ್ಕರ್, ವಿ.ಜಿ.ಪರಾಂಜಪೆ, ವಿಂಟರ್ನೀಟ್ಜ ಮೊದಲಾದ ಸಮರ್ಥ ವಿದ್ವಾಂಸರ ತಂಡದೊಂದಿಗೆ ಸುಮಾರು ೧೫ ವರ್ಷಗಳ ಕಾಲ ದುಡಿದು, ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ವಿವಿಧ ಪ್ರದೇಶಗಳಲ್ಲಿ ಲಭ್ಯವಿದ್ದ ಸುಮಾರು ೧೬೦ ಹಸ್ತ ಪ್ರತಿಗಳನ್ನು ಸಂಗ್ರಹಿಸಿದರು. ಅವೆಲ್ಲವುಗಳನ್ನು ಅಧ್ಯಯನ ಮಾಡಿ ಮೂಲಕ್ಕೆ ಹತ್ತಿರ ಅನ್ನಬಹುದಾದ ಪಠ್ಯವೊಂದನ್ನು ಸಿದ್ಧಪಡಿಸಿ, ಅದನ್ನು ಪೂನಾದ ಭಂಡಾರ್ಕಾರ್ ಓರಿಯಂಟಲ್ ರಿಸರ್ಚ ಇನ್ಸ್ಟಿಟ್ಯೂಟ್ನಿಂದ ಪ್ರಕಟಿಸಿದರು( ೧೯೩೩). ಆದರೆ ಹಾಗೆ ಪ್ರಕಟಿಸುವಾಗ "ವ್ಯಾಸರು ಬರೆದ ಮೂಲ ಪಠ್ಯ ಹೇಗಿದ್ದಿರಬಹುದೆಂದು ಸಾಧಿಸುವುದು ಸಾಧ್ಯವಿಲ್ಲದ ಕೆಲಸ, ಈಗ ನಾವು ಸಿದ್ಧಪಡಿಸಿದ್ದು ಮಹಾಭಾರತದ ಇನ್ನೊಂದು ಪಠ್ಯ ಅಷ್ಟೆ’ ಅಂತ ಹೇಳಿ ಪ್ರಸ್ಥಾವನೆಯನ್ನು ಕೊನೆಗೊಳಿಸಿಬಿಟ್ಟರು.
ಆನಂತರದ ಕಾಲಘಟ್ಟದಲ್ಲಿ ಇಂಥ ಒಂದು ಪ್ರಯತ್ನದ ಪರಿಣಾಮವಾಗಿ ಸಾಹಿತ್ಯ ಮತ್ತು ಜಾನಪದ ಕ್ಷೇತ್ರಗಳಲ್ಲಿ ಗ್ರಂಥ ಸಂಪಾದನಾ ಶಾಸ್ತ್ರ ಬೆಳೆಯಿತು. ಲಭ್ಯವಿರುವ ಹಲವು ಪಠ್ಯಗಳಿಂದ ಒಂದು ಪಠ್ಯವನ್ನು ಪ್ರತೀತಗೊಳಿಸಿ, ಅದನ್ನು ಅಧಿಕೃತಗೊಳಿಸುವುದು ವಸಾಹತು ಕಾಲದ ಗ್ರಂಥ ಸಂಪಾದನಾ ಶಾಸ್ತ್ರದ ಮುಖ್ಯ ಕೆಲಸ. ೧೯ನೇ ಶತಮಾನದ ವಿದೇಶೀ ವಿದ್ವಾಂಸರು ಈ ಕೆಲಸವನ್ನು ದೇಶದಾದ್ಯಂತ ಬಹಳ ಅದ್ಭುತವಾಗಿ ಮಾಡಿದರು.ಗೊತ್ತಿದ್ದೋ ಗೊತ್ತಿಲ್ಲದೆಯೋ ನಾವೆಲ್ಲ ಈಗ ಮಾಡುತ್ತಿರುವುದು ಅದೇ ಕೆಲಸ. ಪಠ್ಯಗಳಿಗೂ ಸಮಾಜಕ್ಕೂ ಏಕ ರೂಪ ಕೊಡುವುದು, ಮತ್ತು ಅದರ ಬಹುರೂಪತೆಯನ್ನು ನಿರಾಕರಿಸುವುದು.
ವಸಾಹತು ಕಾಲದ ಇಂಥ ಚಿಂತನಾ ಕ್ರಮವನ್ನು ಇದೀಗ ನಿರ್ದಯವಾಗಿ ಮುಂದುವರೆಸುತ್ತಿರುವವರು ಬಲಪಂಥೀಯ ಸಂಘಟನೆಗಳು.ವಿಶ್ವ ಹಿಂದೂ ಪರಿಷತ್ತು, ಭಜರಂಗ ದಳ, ಶ್ರೀ ರಾಮ ಸೇನೆ ಮೊದಲಾದ ಹಿಂದೂ ಸಂಘಟನೆಗಳು ಭಾರತದ ವೈವಿಧ್ಯವನ್ನು ಅಲ್ಲಗಳೆದು ಅದಕ್ಕೊಂದು ಏಕ ರೂಪವನ್ನು ಕೊಡಲು ಹೋರಾಡುತ್ತಿವೆ. ಈ ಏಕ ರೂಪಕ್ಕೆ ಬೇಕಾದ ತಳಹದಿಯನ್ನು ಅವು ವೈದಿಕ ಪರಂಪರೆಯಿಂದ ನಿಷ್ಪನ್ನಗೊಳಿಸಿಕೊಳ್ಳುತ್ತಿದ್ದಾರೆ. ಹೀಗಾಗಿ ಭಾರತದ ಅವೈದಿಕ ಲೋಕದ ಅತಿ ದೊಡ್ಡ ಪರಂಪರೆ ಇಂದು ಅಪಾಯಕ್ಕೆ ಸಿಕ್ಕಿಕೊಂಡಿದೆ.ಯಾರೂ ಓದದ, ಓದಬಾರದೆಂದು ನಿಷೇಧ ಹೇರಲಾಗಿದ್ದ, ಶೇಕಡಾ ೯೯ ಭಾರತೀಯರಿಗೆ ಅನ್ಯವಾಗಿದ್ದ ಭಗವದ್ಗೀತೆಗೆ ರಾಷ್ಟ್ರೀಯ ಮನ್ನಣೆ ತಂದುಕೊಡುವ ಇಂದಿನ ಪ್ರಯತ್ನಗಳು ಬಹುದೊಡ್ಡ ಅಪಾಯದ ಮುನ್ಸೂಚನೆಯಾಗಿದೆ.
ಜಾನಪದದ ವಿದ್ಯಾರ್ಥಿಗಳಾದ ನಾವು ಈಗ ಈ ಬಲಪಂಥೀಯರು ಅನುಸರಿಸುತ್ತಿರುವ ವಿಧಾನಗಳಬಗ್ಗೆ ಗಂಭೀರವಾಗಿ ಆಲೋಚನೆ ಮಾಡ ಬೇಕಾಗಿದೆ. ಹಲವು ಪಠ್ಯಗಳಿಂದ ಒಂದು ಪಠ್ಯವನ್ನು ಪ್ರತೀತಗೊಳಿಸುವುದು ಬಲಪಂಥೀಯರ ಇಂದಿನ ಅಗತ್ಯಗಳಲ್ಲಿ ಒಂದು. ಇದಕ್ಕೆ ವಿರುದ್ಧವಾಗಿ ನಾವೀಗ ಒಂದು ಪಠ್ಯದಿಂದ ಹಲವು ಪಠ್ಯಗಳು ಹೇಗೆ ನಿಷ್ಪನ್ನಗೊಳ್ಳುತ್ತವೆ ಎಂಬ ಪ್ರಶ್ನೆಯನ್ನು ಕೇಳಿಕೊಂಡು ಭಿನ್ನ ಪಠ್ಯಗಳನ್ನು ತೀವ್ರವಾಗಿ ಅಭ್ಯಸಿಸಬೇಕಾಗಿದೆ.ಈ ದೇಶದಲ್ಲಿ ವಿವಿಧ ಸಮುದಾಯಗಳು ಕಾವ್ಯವನ್ನು ತನಗೆ ಬೇಕಾದಂತೆ ಮತ್ತೆ ಮತ್ತೆ ಹೇಗೆ ಬರೆದುಕೊಳ್ಳುತ್ತವೆ. ತನ್ನ ಕಾಲದ ಅಗತ್ಯಗಳಿಗೆ ಅನುಗುಣವಾಗಿ ಹೇಗೆ ಪುನಾರಚಿಸಿಕೊಳ್ಳುತ್ತವೆ ಎಂಬ ಪ್ರಶ್ನೆಗಳನ್ನು ಕೇಳಿಕೊಳ್ಳುವುದರ ಮೂಲಕ ಜಾನಪದ ಅಧ್ಯಯನಕ್ಕೆ ಹೊಸ ಹಾದಿ ತೋರಿಸಬೇಕಾಗಿದೆ.
ನಮಗೆಲ್ಲಾ ತಿಳಿದಿರುವ ಹಾಗೆ, ನೆರೆಯ ತಮಿಳುನಾಡಿನಲ್ಲಿ ಕರಗವಿದೆ.ಅದು ದ್ರೌಪದಿಯನ್ನು ಆಧರಿಸಿದ ಆಚರಣೆ.ತಮಿಳರಿಗೆ ದ್ರೌಪದಿ ಮಹಾಭಾರತದ ಕೇವಲ ಒಂದು ಪಾತ್ರವಲ್ಲ, ಬದಲು ಆಕೆ ಅವರಿಗೆ ದೈವವೂ ಹೌದು. ಹಾಗಾಗಿ ತಮಿಳು ನಾಡಿನ ಮಹಾಭಾರತಗಳೆಲ್ಲ ದ್ರೌಪದಿ ಕೇಂದ್ರಿತವಾಗಿಯೇ ಬೆಳೆದವು. ಕೆಲವು ವರ್ಷಗಳ ಹಿಂದೆ ನಾನು ಮಧುರೈಯಲ್ಲಿ ತೆರುಕೂತ್ತು ನೋಡುತ್ತಿದ್ದೆ.ದ್ರೌಪದಿ ವಸ್ತ್ರಾಪಹಾರ ಅಂದಿನ ಪ್ರಸಂಗ.ದುಶ್ಯಾಸನ ಅಬ್ಬರದಿಂದಲೇ ರಂಗ ಪ್ರವೇಶ ಮಾಡಿದ.ದ್ರೌಪದಿ ಅಳುತ್ತಾ ರಂಗದ ನಡುವೆಯೇ ನಿಂತಿದ್ದಳು. ಇದ್ದಕ್ಕಿದ್ದಂತೆ ನನ್ನ ಊಹೆಗೂ ಮೀರಿ ದುಶ್ಯಾಸನನು ದ್ರೌಪದಿಯ ಕಾಲಿಗೆ ಧೊಪ್ಪನೆ ಬಿದ್ದು ಹೇಳಿದ-’ ಅಮ್ಮಾ ತಾಯಿ, ನೀನು ನಮ್ಮ ದೈವ, ನಿನ್ನನ್ನು ಮುಟ್ಟಬಾರದು, ನಿನ್ನ ಸೆರಗಿಗೆ ಕೈ ಹಾಕಬಾರದು, ಆದರೆ, ನಾನು ಒಬ್ಬ ನಟ, ಇದನ್ನು ಈಗ ಮಾಡಲೇ ಬೇಕಾಗಿದೆ, ನನ್ನ ತಪ್ಪನ್ನು ಮನ್ನಿಸು’ ಅಂದವನೇ ಆಕೆಯ ಕಾಲು ಮುಟ್ಟಿ ನಮಸ್ಕರಿಸಿ, ಮತ್ತೆ ಎದ್ದು ನಿಂತು ಆರ್ಭಟಿಸತೊಡಗಿದ. ಕನ್ನಡದ ಕುಮಾರವ್ಯಾಸನಿಗಾಗಲೀ, ಸಂಸ್ಕೃತದ ವ್ಯಾಸನಿಗಾಗಲೀ ಇಂಥ ಒಂದು ಸ್ಥಿತಿಯನ್ನು ಊಹಿಸಿಕೊಳ್ಳುವುದೂ ಕಷ್ಟ.ಆದರೆ ಜನ ಕಲ್ಪಿಸಿಕೊಂಡಿದ್ದಾರೆ.ಇಲ್ಲಿ ಕಾಫಿ ರೈಟಿನ ಪ್ರಶ್ನೆಯೇ ಇಲ್ಲ.
ತೆಲುಗು ಭಾಷೆಯಲ್ಲಿ ದೊರೆಯುವ ಅನೇಕ ಮಹಾಭಾರತಗಳಲ್ಲಿ ಪಾಂಡುವಿನ ಹೆಣವನ್ನು ಅವನ ಮಕ್ಕಳು ತಿನ್ನುವ ಪ್ರಸಂಗ ವಿಶೇಷವಾಗಿ ಬರುತ್ತದೆ. ಅಪ್ಪನ ಹೆಣವನ್ನು ಮಕ್ಕಳು ತಿಂದರೆ, ಮಕ್ಕಳು ಅಜರಾಮರವಾಗುತ್ತಾರೆ ಎಂಬ ನಂಬಿಕೆಯಲ್ಲಿ ಹಾಗೆ ಮಾಡಲಾಗುತ್ತದೆ. ಆದರೆ ಕೃಷ್ಣ ಅದನ್ನು ತಪ್ಪಿಸಿ ಪಾಂಡವರಿಗೂ ಮರಣಬರುವಂತೆ ಮಾಡುತ್ತಾನೆ. ಅದು ಹೇಗೋ ಪಾಂಡುವಿನ ಕಿರುಬೆರಳನ್ನು ತಿಂದ ಸಹದೇವನು ಭವಿಷ್ಯವನ್ನು ತಿಳಿಯಬಲ್ಲ ಮಹಾಜ್ಞಾನಿಯಾಗುತ್ತಾನೆ. ಕೌರವನೊಡನೆ ಕಾಲ ಬೆರಳಲ್ಲಿ ಪಗಡೆಯಡುವ ದ್ರೌಪದಿಯ ಕಲ್ಪನೆ ಮೂಲತಹ ತೆಲುಗು ಭಾಷೆಯದ್ದು.ಮಲೆಯಾಳಂ ಭಾಷೆಯಲ್ಲಿ ಲಭ್ಯವಿರುವ ಮಹಾಭಾರತಗಳಲ್ಲಿ ಕೌರವ ಪಾಂಡವರ ದ್ವೇಷವೇ ವಿಜೃಂಭಿಸಿದೆ. ನಿಶಾಲಕೂತ್ತುವಿನಲ್ಲ ಕೌರವರು ಪಾಂಡವರನ್ನು ಮಾಟದ ಮೂಲಕ ಕೊಲ್ಲಲು ಮಾಡುವ ಅಪೂರ್ವ ವಿವರಗಳಿವೆ.
ಸಂಸ್ಕೃತ ಓದಲಾಗದ ನನಗೆ ವೈಯಕ್ತಿಕವಾಗಿ ಗೊತ್ತಿರುವ ಮಹಾಭಾರತವು ಯಕ್ಷಗಾ, ತಾಳಮದ್ದಳೆ ಮತ್ತು ಹರಿಕತೆಗಳಿಂದ ತಿಳಿದದ್ದು. ಬಿಡಿ ಬಿಡಿಯಾಗಿ ಬೇರೆ ಬೇರೆ ಸಂದರ್ಭಗಳಲ್ಲಿ ಕೇಳಿದ ಅನೇಕ ಪ್ರಸಂಗಗಳಿಂದ ನಾನು ನನ್ನದೇ ಆದ ಮಹಾಭಾರತವೊಂದನ್ನು ಮನಸಿನಲ್ಲಿ ಕಂಡರಿಸಿಕೊಂಡಿದ್ದೇನೆ. ಆ ಮಹಾಭಾರತದಲ್ಲಿ, ಭದ್ರಗಿರಿ ಕೇಶವ ದಾಸರಿದ್ದಾರೆ, ಅಚ್ಯುತ ದಾಸರಿದ್ದಾರೆ, ಮಲ್ಪೆ ಶಂಕರನಾರಾಯಣ ಸಾಮಗರೋ, ಶ್ರೇಣಿ ಗೋಪಾಲಕೃಷ್ಣ ಭಟ್ಟರೋ ಇದ್ದಾರೆ. ನೂರಾರು ಯಕ್ಷಗಾನ ಕಲಾವಿದರು ಕಟ್ಟದ ಪಾತ್ರಗಳಿವೆ.ಎಲ್ಲೋ ಒಂದೆಡೆ ಕುಮಾರವ್ಯಾಸ ಕಾವ್ಯದ ಗಮಕವೂ ಇದೆ.ಕಲಾವಿದರು ಮಹಾಭಾರತದ ಕತೆಯನ್ನು ಎಲ್ಲಿಂದಲೇ ಸುರು ಮಾಡಲಿ, ಪೀಠಿಕಾ ರೂಪದ ಮಾತುಗಳಲ್ಲಿ ಹಿಂದಿನ ಕತೆಯನ್ನು ಹೇಳಿ, ಕತೆಯ ಎಳೆ ಕಡಿಯದಂತೆ ನೋಡಿಕೊಳ್ಳುತ್ತಾರೆ.ಎಳವೆಯಲ್ಲಿ ತಲೆ ಕೂದಲು ಕತ್ತರಿಸುವಾಗ ಪಂಜದ ಕೃಷ್ಣಪ್ಪ ಹೇಳುತ್ತಿದ್ದ ಮಹಾಭಾರತವೇ ಬೇರೆ.ಆತ ಅದನ್ನು ಯಾರಿಂದ, ಯಾವಾಗ ಕಲಿತನೋ ದೇವರೇ ಬಲ್ಲ. ಒಮ್ಮೆ ಪಂಜ ಜಾತ್ರೆಯಲ್ಲಿ ಅದೇ ಕೃಷ್ಣಪ್ಪ ಕೀಚಕನ ಪಾತ್ರ ಮಾಡಿದ್ದರು. ಅವರ ವೇಷ ರಂಗಪ್ರವೇಶವಾಗುವಾಗ ಮಧ್ಯರಾತ್ರಿ ಎರಡು ಗಂಟೆಯಾದರೂ ಆಗಿರಬೇಕು, ಕೃಷ್ಣಪ್ಪನವರು ಆ ದಿನ ಅತ್ಯುತ್ಸಾಹದಲ್ಲಿದ್ದರು.ಆದರೇನು ಮಾಡೋಣ? ಕೀಚಕ ರಂಗಪ್ರವೇಶಿಸಿ ಸೈರೇಂದ್ರಿಯನ್ನು ಕಂಡು ಇನ್ನೂ ಹೆಚ್ಚು ಮತ್ತೇರಿಸಿಕೊಳ್ಳಬೇಕು, ಅಷ್ಟರಲ್ಲಿ ರಂಗದ ಎರಡೂ ಬದಿಯಲ್ಲಿದ್ದ ಗ್ಯಾಸ್ಲೈಟ್ ಭಗ್.. ಭಗ್..ಅನ್ನ ತೊಡಗಿತು.ಅದರಲ್ಲಿ ಗ್ಯಾಸ್ ಕಡಿಮೆಯಾಗಿತ್ತು.ಆಗ ಯಾರಾದರೂ ಬಂದು ಅದನ್ನು ಸರಿ ಮಾಡಬೇಕು.ಆದರೆ ಯಾರೂ ಬರಲಿಲ್ಲ. ಸೈರೇಂದ್ರಿಯನ್ನು ಕಂಡ ಕೀಚPನ ಮತ್ತೇರುತ್ತಿತ್ತು.ಆದರೆ ಗ್ಯಾಸ್ ಲೈಟ್ನ ಬೆಳಕು ಕಡಿಮೆಯಾಗುತ್ತಿತ್ತು.ಕೀಚಕ ಥಟ್ಟನೆ, ’ಎಲೈ ಸೈರೇಂದ್ರಿಯೇ ಸ್ವಲ್ಪ ತಡೆ’ ಎಂದು ಸೈರೇಂದ್ರಿಯನ್ನು ನಿಲ್ಲಿಸಿದ, ಭಾಗವತರ ಬಳಿ ಸಿಂಹಾಸನವೆಂದು ಇರಿಸಲಾದ ಮರದ ಕುರ್ಚಿಯನ್ನು ಇದಿರು ತಂದು ಅದರ ಮೇಲೇರಿದ, ಗ್ಯಾಸ್ಲೈಟನ್ನು ಕೆಳಗಿಳಿಸಿ ಚೆನ್ನಾಗಿ ಪಂಪುಹೊಡೆದು ಮತ್ತೆ ಮೇಲೇರಿಸಿದ. ಕುರ್ಚಿಯನ್ನು ಮತ್ತೆ ಹಿಂದೆ ಇರಿಸಿ ’ಎಲೈ ಸೈರೇಂದ್ರಿಯೇ..’ಅಂತ ಪಾತ್ರ ಮುಂದವರಿಸಿದ.ನನ್ನ ನೆನಪಿನ ಮಹಾಭಾರತದಲ್ಲಿ ಗ್ಯಾಸ್ ಲೈಟಿಗೆ ಗಾಳಿ ಹಾಕಿದ ಕೀಚಕನೂ ಇದ್ದಾನೆ, ಬೀಡಿ ಸೇದುವ ಸುಯೋಧನನೂ ಇದ್ದಾನೆ.
ಕಳೆದ ಸುಮಾರು ೧೬ ವರ್ಷಗಳಿಂದ ನಾನು ಉತ್ತರ ಭಾರತದಲ್ಲಿ ಓಡಾಡುತ್ತಿದ್ದೇನೆ. ಅಲ್ಲಿನ ಮೌಖಿಕ ನಿರೂಪಣೆಗಳನ್ನು ಅರ್ಥ ಮಾಡಿಕೊಳ್ಳಲು ಹಿಂದಿ ಭಾಷೆಯ ಪ್ರಾದೇಶಿಕ ಪ್ರಬೇಧಗಳು ಒಂದು ದೊಡ್ಡ ತೊಡಕಾದರೂ ಪಂಡ್ವಾನಿ, ಪಾಂಡವಲೀಲಾ ಮೊದಲಾದ ಪ್ರದರ್ಶನಗಳನ್ನು ಕಂಡು ಸಂತಸ ಪಟ್ಟಿದ್ದೇನೆ. ಹಿಮಾಲಯದ ತಪ್ಪಲಿನಲ್ಲಿರುವ ಜನರಿಗೆ ಮಹಾಭಾರತ ಎಂದರೆ ಅದು ಹಿಡಿಂಬೆಯ ಕತೆ. ಹಿಮಾಚಲ ಪ್ರದೇಶದ ಮಂಡಿಯಲ್ಲಿ ಹಿಡಿಂಬಾ ದೇವಸ್ಥಾನವೂ ಇದೆ. ನನ್ನ ಅಮೇರಿಕನ್ ವಿದ್ಯಾರ್ಥಿಯೊಬ್ಬನ ಸಂಶೋಧನಾ ವಿಷಯವೇ ಹಿಡಿಂಬೆ. ಆತ ಆಕೆಯ ಬಗ್ಗೆ ಸಂಗ್ರಹಿಸಿದ ವಿವರಗಳು ನನ್ನ ಊಹೆಗೂ ನಿಲುಕದು ಈಗಿನ ಉತ್ತರಾ ಖಂಡದಾದ್ಯಂತ ಇರುವ ಗಡ್ಡಿ ಬುಡಕಟ್ಟಿನ ಜನರಿಗೆ ಜರಾಸಂಧನೇ ದೈವ. ಅವರ ನಂಬಿಕೆಯ ಪ್ರಕಾರ ಜರಾಸಂಧನು ಕಲಿಯುಗವನ್ನು ಬಂಧಿಸಿಟ್ಟು, ಜನರನ್ನು ಅನಾಹುತಗಳಿಂದ ರಕ್ಷಿಸಿದ್ದ, ಆದರೆ ಭೀಮನೆಂಬ ದ್ರೋಹಿಯು ಮೋಸದಿಂದ ಜರಾಸಂಧನನ್ನು ಕೊಂದು ಕಲಿಯುಗವನ್ನು ಸೆರೆಯಿಂದ ಬಿಡಿಸಿದ್ದರಿಂದ ಈಗ ಕೆಟ್ಟ ಘಟನೆಗಳೆಲ್ಲ ನಡೆಯುತ್ತಿವೆ. ಗಡ್ಡಿಗಳ ಪ್ರದರ್ಶನವೊಂದರಲ್ಲಿ, ಜರಾಸಂಧನ ದೂತನೊಬ್ಬ ಊರು ಸುತ್ತುವಾಗ ಅಟಲ ಬಿಹಾರಿ ವಾಜಪೇಯಿಯವರನ್ನು ಭೇಟಿ ಮಾಡಿ, ಪ್ರಶ್ನೆಯೊಂದನ್ನು ಕೇಳಿದಾಗ, ಅವರು ಉತ್ತರ ಕೊಡಲು ತೆರೆದ ಬಾಯಿ ಮುಚ್ಚುವುದರೊಳಗಾಗಿ ಆತ ಪಾರ್ಲಿಮೆಂಟ್ ಭವನವನ್ನೂ ನೋಡಿ ಬಂದಿದ್ದ. ಕಾಂಗ್ರಾ ಪ್ರದೇಶದಲ್ಲಿ ದೊರೆಯುವ ನಿರೂಪಣೆಗಳ ಪ್ರಕಾರ ಪಾಂಡು ಸತ್ತ ೧೨ ವರ್ಷಗಳ ಆನಂತರ ಕುಂತಿಗೆ ಮಾಂಸ ತಿನ್ನುವ ಬಯಕೆಯಾಗುತ್ತದೆ.ಆಗ ಭೀಮಾರ್ಜುನರು ಜೊತೆಯಾಗಿ ಬೇಟೆಯಾಡುತ್ತಾರೆ.ಕಥನದ ಮುಂದಿನ ವಿವರಗಳೆಲ್ಲ ಭೀಮಾರ್ಜುನರ ಬೇಟೆಗೇ ಸೀಮಿತವಾಗಿದೆ.
ಈಗಿನ ಹಿಮಾಚಲ ಪ್ರದೇಶದ ಕಿನ್ನೂರ್ ಪ್ರದೇಶದಲ್ಲಿ ಜನಪ್ರಿಯವಾಗಿರುವ ನಿರೂಪಣೆಗಳ ಪ್ರಕಾರ ಮರಿಗಳೊಡನೆ ಆಡುವ ಮಂಗಗಳನ್ನು ನೋಡಿದ ಕುಂತಿಗೆ ಮಗುವಿನ ಬಯಕೆ ಮೂಡಿ, ೧೨ ವರ್ಷಗಳ ವರೆಗೆ ’ಋಷಿ ಮಾಮ’ನ ಸೇವೆ ಮಾಡಿ, ಮಕ್ಕಳನ್ನು ಪಡೆಯುತ್ತಾಳೆ.ಇಲ್ಲಿನ ದಲಿತರ ಪ್ರಕಾರ, ಪಾಂಡವರು ಬೆಟ್ಟದ ಮೇಲೆಯೂ, ಕೌರವರು ಅದೇ ಬೆಟ್ಟದ ಬುಡದಲ್ಲಿಯೂ ವಾಸಿಸುತ್ತಿದ್ದರು.ಪಾಂಡವರಿಗೆ ಒಬ್ಬಳು ತಂಗಿಯೂ ಇದ್ದಳು. ಅವಳೇ ಬೂರಾದೇವಿ.ನೀರಿನ ವಿಷಯದಲ್ಲಿ ಅವರ ನಡುವೆ ಜಗಳ ಬಂದಾಗ ಸೆಗಣಿಯ ಮನೆಮಾಡಿ ಪಾಂಡವರನ್ನು ಕೊಲ್ಲಲು ಕೌರವ ಪ್ರಯತ್ನಿಸುತ್ತಾನೆ. ಗಢವಾಲದ ಜನಪ್ರಿಯ ಪಾಂಡವ ಲೀಲಾದಲ್ಲಿ ಐವರು ಪಾತ್ರಧಾರಿಗಳ ಮೇಲೆ ಪಾಂಡವರು ಆವೇಶಿತರಾಗಿ ಜನರನ್ನು ಹರಸುತ್ತಾರೆ.ಜಮ್ಮು ಪ್ರದೇಶದ ಜನರು ತಮ್ಮನ್ನು ಶಲ್ಯ ಮಹಾರಾಜನ ವಂಶಸ್ಥರೆಂದು ಹೇಳಿಕೊಳ್ಳುತ್ತಾರೆ.ವನವಾಸದ ಸಂದರ್ಭದಲ್ಲಿ ಪಾಂಡವರು ಅಲ್ಲಯೇ ತಂಗಿದ್ದರಂತೆ.ಸ್ಥೂಲವಾಗಿ ಉತ್ತರ ಭಾರತೀಯ ಜನಪದರ ಪ್ರಕಾರ ಕೌರವರ ಒಟ್ಟು ಸಂಖ್ಯೆ ೬೦, ಪಾಂಡವರ ಸಂಖ್ಯೆ ಐದು. ಪಾಂಡವರ ತಾಯಿ ಕಾತಮ, ಕೌರವರ ತಾಯಿ ನಿತಿನಿ.
ಭಾರತದ ಈಶಾನ್ಯ ಭಾಗಗಳಿಗೆ ಹೋದರೆ ಅಲ್ಲಿ ಕೌರವನ ಪಕ್ಷದವರೇ ಹೆಚ್ಚು ಪ್ರಸಿದ್ಧರು. ಭಗದತ್ತ, ಬಾಣಾಸುರ, ರುಕ್ಮ, ಬಭ್ರುವಾಹನರನ್ನು ಅಸ್ಸಾಮಿನ ಜನರು ತಮ್ಮ ಪೂರ್ವಜರೆಂದು ಭಾವಿಸುತ್ತಾರೆ. ಬೋಡೋಗಳ ಪ್ರಕಾರ ಕೃಷ್ಣನ ಹೆಂಡತಿ ರುಕ್ಮಿಣಿಯು ಬೋಡೋ ಕನ್ಯೆ.
ಮಧ್ಯಬಾರತದ ಮಹಾಭಾರತ ಕಥನಗಳಲ್ಲಿ ಭೀಮನೇ ನಾಯಕ.ಕೊಂಡ ಬುದಕಟ್ಟಿನ ಜನರಲ್ಲಿ ಬಹಳ ಪ್ರಿದ್ಧವಾಗಿರುವ ’ಭೀಮ ಸಿದಿ’ ಎಂಬ ಕಥನ ಕಾವ್ಯದಲ್ಲಿ ಭೀಮನೇ ವಸ್ತ್ರಾಪಹಾರಕ.ಚೆಂದದ ಹುಡುಗಿಯರನ್ನು ನೋಡಿದಾಗ ಆತ ತನ್ನ ತಂದೆ ಪವನಾರ್ ದೇವನನ್ನು ಪ್ರಾರ್ಥಿಸುತ್ತಾನೆ. ಪವನಾರ್ನು ಜೋರಾಗಿ ಬೀಸಿ ಹುಡುಗಿಯರ ಬಟ್ಟೆ ಹಾರಿಸುತ್ತಾನೆ. ಭೀಮನು ಅಲ್ಲಿ ಮಳೆ ತರುವ ದೈವವೂ ಆಗಿರುವುದು ಇದಕ್ಕೆ ಪೂರಕವಾದ ವಿಚಾರ.ಕೊಂಡರಿಗೆ ಭೀಮನು ಫಲವಂತಿಕೆಯ ದೈವವೂ ಹೌದು.ಬಿಂಜಾಲ್ ಬುಡಕಟ್ಟಿನವರಿಗೆ ಕೀಚಕನೆಂದರೆ ಇಷ್ಟ.
ದ್ರೌಪದಿ ಮತ್ತು ಕೃಷ್ಣರ ನಡವಣ ಸಂಬಂಧವೂ ಬೇರೆ ಬೇರೆ ಭಾರತೀಯ ಭಾಷೆಗಳಲ್ಲಿ ಕುತೂಹಲ ಹುಟ್ಟಿಸುವ ರೀತಿಯಲ್ಲಿ ಪ್ರತೀತಗೊಂಡಿದೆ. ಚತ್ತೀಸಗಢ ಪರಿಸರದಲ್ಲಿ ಪ್ರಚಲಿತದಲ್ಲಿರುವ ಪುಟ್ಟ ಕಥನ ಕಾವ್ಯವೊಂದರಲ್ಲಿ ಬಾಣದ ಮೊನೆಯನ್ನು ಕೃಷ್ಣನು ಹರಿತಗೊಳಿಸುತ್ತಿರುವಾಗ ಕೈಗೆ ಗಾಯ ಮಾಡಿಕೊಳ್ಳುತ್ತಾನೆ. ಆಗ ದ್ರೌಪದಿಯು ತನ್ನ ಸೆರಗಿಂದ ಹರಿದ ಬಟ್ಟೆಯ ತುಂಡೊಂದನ್ನು ಕೃಷ್ಣನ ಬೆರಳಿಗೆ ಕಟ್ಟಿ, ರಕ್ತ ಒಸರುವುದನ್ನು ನಿಲ್ಲಿಸುತ್ತಾಳೆ.ಅದೇ ಪ್ರದೇಶದ ಇನ್ನೊಂದು ನಿರೂಪಣೆಯ ಪ್ರಕಾರ, ಒಮ್ಮೆ ಕೃಷ್ನನು ಪಾಂಡವರೊಡನೆ ಕೆರೆಯೊಂದರಲ್ಲಿ ಈಜುತ್ತಿರುವಾಗ ಆತ ಲಂಗೋಟಿ ಕಳೆದು ಹೋಗುತ್ತದೆ.ಪಾಂಡವರು ಸ್ನಾನದ ಆನಂತರ ಮೇಲೆ ಬಂದರೂ ಕೃಷ್ಣ ಬಾರದಾದ.ಆಗ ಪಕ್ಕದ ಕೆರೆಯಲ್ಲಿ ಗೆಳತಿಯರೊಂದಿಗೆ ಈಜಾಡುತ್ತದ್ದ ದ್ರೌಪದಿಗೆ ಅದು ಗೊತ್ತಾಗುತ್ತದೆ.ಅವಳು ಸೆರಗಿನಿಂದ ಹರಿದ ಸೀರೆಯ ತುಣುಕನ್ನು ಕೃಷ್ಣನೆಡೆಗೆ ಎಸೆಯುತ್ತಾಳೆ. ಅದನ್ನು ಲಂಗೋಟಿ ಮಾಡಿಕೊಂಡ ಕೃಷ್ನನು ಮೇಲೆ ಬಂದು-ನನ್ನ ಕಷ್ಟಕ್ಕೆ ಆದೆ, ನಿನ್ನ ಕಷ್ಟಕ್ಕೆ ಸಹಾಯ ಮಾಡುತ್ತೇನೆ ’ ಅನ್ನುತ್ತಾನೆ. ಹೀಗೆ ದ್ರೌಪದಿ ಕೊಟ್ಟ ಒಂದು ತುಂಡು ಬಟ್ಟೆಯನ್ನು ಮುಂದೆ ಕೃಷ್ಣನು ಅಕ್ಷಯಾಂಬರ ಮಾಡಿ ಕೃತಜ್ಞತೆ ಸಲ್ಲಿಸುತ್ತಾನೆ. ಏನಿದ್ದರೂ ಬೆರಳು, ರಕ್ತ, ಸೆರಗು ಮತ್ತು ಲಂಗೋಟಿಗಳ ಸುತ್ತ ಹೆಣೆಯಲಾದ ಈ ಕತೆಯು ಮತ್ತಷ್ಟು ವಿಶ್ಲೇಷಣೆಗೆ ಅರ್ಹವಾದುದು.
ಇಷ್ಟಿದ್ದರೂ ನಾವು ಈ ಬಗೆಯ, ಸಾಮುದಾಯಿಕ ರಚನೆಗಳತ್ತ ಹೆಚ್ಚು ಗಮನಹರಿಸಿಲ್ಲ. ಹಾಗೆ ಗಮನ ಹರಿಸದ್ದರಿಂದ ನಮ್ಮಲ್ಲಿ ಭಿನ್ನ ಪಠ್ಯಗಳ ಅಧ್ಯಯನ ಹೆಚ್ಚಾಗಿ ನಡೆಯಲೇ ಇಲ್ಲ. ನಮ್ಮಲ್ಲಿ ದೊರೆಯುವ ಜನಪದ ರಾಮಾಯಣಗಳಲ್ಲಿ ರಾಮ ಎಲ್ಲೆಲ್ಲೋ ಹುಟ್ಟಿದ್ದಾನೆ. ಆದರೆ ಬಲಪಂಥೀಯ ರಾಜಕಾರಣವು ಆತನನ್ನು ಅಯೋಧ್ಯೆಗೆ ಕಟ್ಟಿಹಾಕಿತು.ಕನ್ನಡಕ್ಕೆ ಬಹಳ ಅನನ್ಯವಾದ ವಚನಗಳನ್ನು ನಾವು ’ಸಾಮೂಹಿಕ ಸೃಷ್ಟಿ’ ಎಂದೇನೋ ಕರೆದಿದ್ದೇವೆ. ಆದರೆ ವಚನಗಳನ್ನು ಸಂಪಾದನೆ ಮಾಡುವಾಗ ’ಇದು ಬಸವಣ್ಣನ ವಚನ, ಅದು ಅಕ್ಕನ ವಚನ’ ಎಂಬಿತ್ಯಾದಿಯಾಗಿ ಗುರುತಿಸಿ, ಬೇರ್ಪಡಿಸಿ, ಸಂಕಲಿಸಿ ಪ್ರಕಟಿಸಿದ್ದೇವೆ; ಚರ್ಚಿಸಿದ್ದೇವೆ. ಅಂದರೆ ತಮ್ಮ ಪಠ್ಯಗಳ ಮೇಲೆ ಹಕ್ಕು ಸ್ಥಾಪಿಸಬಯಸದ ವಚನಕಾರರನ್ನು ಹಕ್ಕು ಸ್ಥಾಪಿಸಿಕೊಳ್ಳಲು ನಾವು ಒತ್ತಾಯಿಸಿದ್ದೇವೆ. ಬಸವಣ್ಣನವರ ಪ್ರಖ್ಯಾತ ವಚನವೊಂದು ಇಂತಿದೆ-
"ಉಳ್ಳವರು ಶಿವಾಲಯ ಮಾಡುವರು
ನಾನೇನ ಮಾಡುವೆ ಬಡವನಯ್ಯ
ಎನ್ನ ಕಾಲೇ ಕಂಬ ದೇಹವೆ ದೇಗುಲ
ಶಿರ ಹೊನ್ನ ಕಳಸವಯ್ಯ"
ಪ್ರಭು ದೇವರ ಈ ಕೆಳಗಿನ ವಚನವನ್ನು ಗಮನಿಸಿ :
"ಕಾಲೇ ಕಂಭಗಳಾದುವೆನ್ನ
ದೇಹವೇ ದೇಗುಳಾದುವೆನ್ನ
ದೇಹವೇ ದೇಗುಲವಾಯಿತ್ತಯ್ಯ
ಎನ್ನ ನಾಲಿಗೆಯೆ ಗಂಟೆ
ಶಿರ ಸುವರ್ಣದ ಕಲಶ-ಇದೇನಯ್ಯ
ಮೇಲಿನ ಎರಡೂ ವಚನಗಳಲ್ಲಿ ಅನೇಕ ಸಾಮ್ಯಗಳಿವೆ. ಈಗ ನಾವು ಇವನ್ನು ’ಇದು ಮೂಲತಃ ಯಾರದಿರಬಹುದು" ಎಂದು ಕೇಳಿಕೊಂಡು ಮುಂದುವರೆಯುವುದಕ್ಕಿಂತ, ಬೇರೆ ಬೇರೆಯವರ ವಚನಗಳನ್ನು ಜನರು ಹೇಗೆ ಸಂಮಿಶ್ರ ಮಾಡಿಕೊಂಡು ತಮಗೆ ಬೇಕಾದ ಪಠ್ಯಗಳನ್ನು ಸೃಷ್ಟಿ ಮಾಡಿಕೊಂಡರು ಎಂಬ ಅರಿವಿನಲ್ಲಿ ಮುಂದುವರೆದರೆ ನಮಗೆ ನಮ್ಮ ಸಮಾಜವನ್ನು ಇನ್ನಷ್ಟು ಚೆನ್ನಾಗಿ ಅರ್ಥ ಮಾಡಿಕೊಳ್ಳಲು ಸಾಧ್ಯ ಎಂದು ನಾನು ಭಾವಿಸುತ್ತೇನೆ. ಸರ್ವಜ್ಞನ ಜನಪ್ರಿಯ ವಚನಗಳಲ್ಲಿ ಒಂದಾದ "ಅನ್ನವನು ಇಕ್ಕುವುದು, ನನ್ನಿಯನು ನುಡಿಯುವುದು" ಎಂಬ ಸಾಲು ಪ್ರಭುದೇವರ ’ಅನ್ನವನಿಕ್ಕಿ ನನ್ನಿಯ ನುಡಿದು’ ಎಂಬ ಸಾಲನ್ನು ನೆನಪಿಗೆ ತರುತ್ತದೆ ಅಲ್ಲವೇ?
ನಾನು ಕನ್ನಡ ವಿಶ್ವವಿದ್ಯಾಲಯದಲ್ಲಿ ಕೆಲಸ ಮಾಡುತ್ತಿದ್ದಾಗ ಲಕ್ಷ್ಮಣದಾಸ ಎಂಬ ಹಾಡುಗಾರರೊಬ್ಬರು ಪರಿಚಯವಾಗಿದ್ದರು. ಹಂಪಿಯ ಬೀದಿಗಳಲ್ಲಿ ಹಾಡು ಹೇಳುತ್ತಾ ತಿರುಗಾಡುತ್ತಿದ್ದ ಅವರ ಕಂಠಶ್ರಿ ಅದ್ಬುತವಾಗಿತ್ತು. ಬಿಡುವಿದ್ದಾಗಲೆಲ್ಲ ಅವರು ನನ್ನ ಮನೆಗೆ ಬರುತ್ತಿದ್ದರು, ಹಾಡು ಹೇಳುತ್ತಿದ್ದರು.ಆದರೆ ಅವರ ಹಾಡು ಕೇಳಿದಾಗಲೆಲ್ಲ ನಾನು ಬೆಚ್ಚಿ ಬೀಳುತ್ತಿದ್ದೆ.ಏಕೆಂದರೆ ಅವರ ಎಷ್ಟೋ ಹಾಡುಗಳು ಶಿಶುನಾಳ ಶರೀಫರ ತತ್ವಪದಗಳಿಂದ ಆರಂಭವಾಗಿ, ಪುರಂದರದಾಸರ ಕೀರ್ತನೆಯ ಸಾಲಿನೊಂದಿಗೆ ಮುಂದುವರೆದು ’ಕೂಡಲ ಸಂಗಮದೇವಾ’ ಎಂದು ಕೊನೆಗೊಳ್ಳುತ್ತಿತ್ತು.ಸುಮಾರು ಏಳು ನೂರು ವರ್ಷಗಳ ಅವಧಿಯಲ್ಲಿ ರಚಿತವಾದ ಪಠ್ಯಗಳಿಂದ ತಮಗೆ ಬೇಕಾದ ಸಾಲುಗಳನ್ನು ಆರಿಸಿಕೊಂಡು ೨೦ನೇ ಶತಮಾನಕ್ಕೆ ಬೇಕಾದ ಪಠ್ಯವೊಂದನ್ನು ಅವರು ಸೃಜಿಸುತ್ತಿದ್ದರು. ನನ್ನ ವೈಯಕ್ತಿಕ ಸಂಗ್ರಹದಲ್ಲಿರುವ ಲಕ್ಷ್ಮಣ ದಾಸರ ಹಾಡೊಂದರ ಕೊನೆಯ ಸಾಲುಗಳು ಇಂತಿವೆ-
"ಹೀನ ಕೃತ್ಯಗಳ ಮಾಡುತ ನದಿಯಲಿ
ಸ್ನಾನವ ಮಾಡಿದರೇನು ಫಲ
ಶ್ರೀನಿಧಿ ಕೂಡಲ ಸಂಗನ ನೆನೆಯದೆ
ಮೌನದ ಮಾಡಿದರೇನು ಫಲ?"
ಪುರಂದರದಾಸ ’ಬೇವು ಬೆಲ್ಲದೊಡಲೇನು ಫಲ" ಕೀರ್ತನೆಯು ಬಸವಣ್ಣನ ಅಂಕಿತನಾಮದೊಂದಿಗೆ ಕೊನೆಯಾದಾಗ ನಾನು ಅವಕ್ಕಾಗಿದ್ದೆ.
ಉತ್ತರ ಕರ್ನಾಟಕದಾದ್ಯಂತ ಅತ್ಯಂತ ವೈಭವದಿಂದ ಜರುಗುವ ಹಂಪಿ ಜಾತ್ರೆ, ಮೈಲಾರನ ಜಾತ್ರೆ, ಕುಮಾರ ರಾಮನ ಜಾತ್ರೆ, ತಿಂಥಿಣಿ ಜಾತ್ರೆ, ಹುಲಿಗೆಮ್ಮನ ಜಾತ್ರೆ ಮೊದಲಾದೆಡೆಗಳಲ್ಲಿ ಲಕ್ಷ್ಮಣದಾಸರ ಹಾಗೆ ಹಾಡುವ ನೂರಾರು ಕಲಾವಿದರನ್ನು ನಾವು ಇಂದಿಗೂ ಕಾಣಬಹುದು.ಇವರುಗಳು ಹಾಡುವ ವಚನಗಳನ್ನು, ಕೀರ್ತನೆಗಳನ್ನು ಮತ್ತು ತತ್ವಪದಗಳನ್ನು ಇದೀಗ ನಾವು ಸಂಗ್ರಹಿಸಬೇಕು.ಅವು ೨೧ನೇ ಶತಮಾನದ ಆರಂಭದ ಕಾಲದ ಪಠ್ಯಗಳಾಗಿ ಕನ್ನಡ ಸಂಸ್ಕೃತಿಯ ಬಗೆಗಣ ನಮ್ಮ ತಿಳುವಳಿಕೆಯನ್ನು ಅಗಾಧವಾಗಿ ವಿಸ್ತರಿಸಬಲ್ಲುವು.ನಮ್ಮ ಸಾಹಿತ್ಯ ಪರಂಪರೆಯಲ್ಲಿ ಪಠ್ಯದ ಹಕ್ಕನ್ನು ಯಾರೋ ಕಾದಿರಿಸಿಲ್ಲ. ಹಾಗಾಗಿ ಪಠ್ಯಗಳೆಲ್ಲ ಒಂದರೊಡನೊಂದು ಸೇರಿಕೊಂಡು, ಒಬ್ಬರ ಸೃಷ್ಟಿ ಎಲ್ಲರ ಸೃಷ್ಟಿಯಾಗಿ ಮಾರ್ಪಟ್ಟು, ಕಾಲಾತೀತವಾದ ಪಠ್ಯಗಳು ನಿರ್ಮಾಣಗೊಂಡಿವೆ. ಇದರ ಕಡೆಗೆ ನಮ್ಮ ಗಮನಹರಿಯಬೇಕಾದ್ದು ಇಂದಿನ ಅಗತ್ಯಗಳಲ್ಲೊಂದಾಗಿದೆ.
ಜಾನಪದ ನಿರೂಪಣೆಗಳ ಅನನ್ಯತೆ:
ನಮ್ಮ ಜಾನಪದವೇ ನಮ್ಮ ಸಂಸ್ಕೃತಿ.ಇದು ಬಲಪಂಥೀಯರು ಹೇಳುವ, ಪ್ರತಿಪಾದಿಸುವ ಸಂಸ್ಕೃತಿಗಿಂತ ತುಂಬಾ ಭಿನ್ನ.ಮಲೆಯ ಮಾದೇಶ್ವರ, ಜುಂಜಪ್ಪ, ಸಿರಿ, ಕೋಟಿ-ಚೆನ್ನಯ, ಮೈಲಾರಲಿಂಗ, ದೇವನಾರಾಯಣ, ಧೋಲಾ, ಮೊದಲಾದುವು ನಮ್ಮ ಪ್ರಸಿದ್ಧ ಜನಪದ ಕಾವ್ಯಗಳು.ಜಾನಪದವನ್ನು ಒಬ್ಬ ಲೇಖಕ ಬರೆಯುವುದಿಲ್ಲ, ಬದಲು ಇಡೀ ಸಮುದಾಯವೇ ಮತ್ತೆ ಮತ್ತೆ ಇವುಗಳನ್ನು ಬರೆಯುತ್ತಿರುತ್ತದೆ. ಮೌಖಿಕವಾಗಿ ಇವು ಪ್ರಸರಣ ಹೊಂದುತ್ತಿರುತ್ತವೆ. ಹಾಗಾಗಿ ಇವುಗಳ ಒಡೆತನ ಇಡೀ ಸಮುದಾಯಕ್ಕೆ ಸೇರುತ್ತದೆ ಮತ್ತು ಇದರ ಪಠ್ಯಗಳು ಸ್ಥಿರವಾಗಿರದೆ ತುಂಬ ಚಲನಶೀಲವಾಗಿರುತ್ತವೆ.
ಜಾನಪದವು ಶಿಷ್ಟ ನಿರೂಪಣೆಗಳಿಗಿಂತ ತುಂಬಾ ಭಿನ್ನವಾಗಿರುತ್ತವೆ. ಕೆಲವೇ ಕೆಲವು ಅಪವಾದಗಳನ್ನು ಬಿಟ್ಟರೆ ಜನಪದ ನಿರೂಪಣೆಗಳಲ್ಲಿರುವ ನಾಯಕರು ತಮ್ಮ ಮಧ್ಯವಯಸ್ಸಿನಲ್ಲಿ ಮಹತ್ ಸಾಧನೆ ಮಾಡಿ ಸತ್ತು ಹೋಗಿರುತ್ತಾರೆ. ತುಳುನಾಡಿನ ಜನಪ್ರಿಯ ದೈವ ’ಕಲ್ಕುಡ’ನಿಗೆ ಸಂಬಂಧಿಸಿದ ಪುರಾಣವೊಂದರಲ್ಲಿ ಆತ ಗೊಮ್ಮಟನನ್ನು ಪ್ರತಿಷ್ಠಾಪಿಸಿ, ಅರಸನ ಅವಕೃಪೆಗೆ ತುತ್ತಾಗಿ ಸಾಯುತ್ತಾನೆ. ಕದರಿ ದೇವಸ್ಥಾನದ ಛಾವಣಿಯ ಮೇಲಿದ್ದ ಹಣ್ಣನ್ನು ತಿನ್ನಲು ಹೋದ ಅಸ್ಪೃಶ್ಯ ಕೊರಗ ತನಿಯನು, ಅದೇ ಕಾರಣಕ್ಕೆ ಮಾಯವಾಗುತ್ತಾನೆ. ಸ್ವಾಭಿಮಾನಿಗಳಾದ ಕೋಟಿ-ಚೆನ್ನಯರು ರಣರಂಗದಲ್ಲಿ ಹೋರಾಡಿ ಸಾಯುತ್ತಾರೆ. ಗಂಡಸರ ಅನ್ಯಾಯವನ್ನು ನಿರಂತರವಾಗಿ ಪ್ರತಿಭಟಿಸಿದ ಸಿರಿಯು ಸತ್ತು ದೈವವಾಗುತ್ತಾಳೆ.ವೈದಿಕಪಠ್ಯಗಳಲ್ಲಿ ನಾಯಕರು ಸಾಯಲಾರರು, ಸಾಯಬಾರದು.ಆದರೆ ಹೋರಾಟಗಳಲ್ಲಿ ಸತ್ತವರೇ ನಮ್ಮ ನಾಯಕರು.
ವಸ್ತುವಿನ ನಿರ್ವಹಣೆಯ ದೃಷ್ಟಿಯಿಂದ ಜನಪದ ನಿರೂಪಣೆಗಳಲ್ಲಿನ ನಾಯಕನು ತೋರುವ ವೀರತ್ವದಲ್ಲಿ ಒಂದು ಬಗೆಯ ಕ್ರಿಯಾತ್ಮಕ ಗುಣ ನೆಗೆದು ತೋರುತ್ತದೆ. ಇಲ್ಲಿಯ ವೀರರು, ವೀರರಾಗಲು ಕಾರಣ ಅವರು ದೈವದ ಅವತಾರವಾಗಿರುವುದು ಅಲ್ಲ. ಅವರಿಗೆ ಯಾವುದೇ ಪೂರ್ವ ಜನ್ಮದ ಪುಣ್ಯ ವಿಶೇಷಗಳಿಲ್ಲ. ಅವರ ತಾಯಂದಿರು ಗರ್ಭ ಧರಿಸುವಾಗ ಯಾವುದೇ ಶುಭ ಶಕುನಗಳು ಸಂಭವಿಸುವುದಿಲ್ಲ. ಅಥವಾ ಅವರು ಜನಿಸುವಾಗ ದೇವತೆಗಳು ಪುಷ್ಪವೃಷ್ಟಿ ಮಾಡುವುದಿಲ್ಲ. ಅವರ ಸಾಮಾಜಿಕ ಸ್ಥಾನಮಾನಗಳು (ಉದಾ: ಬ್ರಾಹ್ಮಣನಾಗಿರುವುದು, ಅರಸು ಕುಮಾರನಾಗಿರುವುದು) ಅವರ ವೀರತ್ವವನ್ನು ನಿರ್ಧರಿಸುವುದಿಲ್ಲ. ಜನಪದ ನಿರೂಪಣೆಗಳ ನಾಯಕನು ಎಲ್ಲರಂತೆ ಜನಿಸುತ್ತಾನೆ. ಆದರೆ ಬೆಳೆಯುತ್ತಾ ಬೆಳೆಯುತ್ತಾ ಬಗೆ ಬಗೆಯ ಸಾಮಾಜಿಕ ಒತ್ತಡಗಳಿಗೆ ಒಳಗಾಗುತ್ತಾನೆ. ತನ್ನ ಪ್ರಾಮಾಣಿಕತೆ, ಬುದ್ಧಿಮತ್ತೆ, ಮತ್ತು ಸಾಹಸಗಳಿಂದ ಜನಾನುರಾಗಿಯಾದ ನಾಯಕನು ಬದುಕಿನಲ್ಲಿ ಎದುರಾಗುವ ಸವಾಲುಗಳಿಗೆ ದಿಟ್ಟವಾಗಿ ಉತ್ತರಿಸುತ್ತಾನೆ. ಮತ್ತು ಅದೇ ಕಾರಣಕ್ಕೆ ಸಾಯುತ್ತಾನೆ. ಜೀವನದ ಅತ್ಯಂತ ಕ್ಲಿಷ್ಟಕರ ಸಂದರ್ಭಗಳಲ್ಲಿ ಈ ಬಗೆಯ ನಾಯಕರು ತೋರುವ ಕ್ರಿಯಾತ್ಮಕತೆಯೇ ಅವರನ್ನು ಜನರ ಕಣ್ಣಲ್ಲಿ ನಾಯಕರನ್ನಾಗಿ ಬೆಳೆಸುತ್ತದೆ. ಸಾಮಾನ್ಯ ಕಲ್ಲು ಕುಟಿಗನಾಗಿ ಹುಟ್ಟಿದ ವೀರು ಕಲ್ಕುಡನು ಗೊಮ್ಮಟನ ಪ್ರತಿಮೆ ಸ್ಥಾಪಿಸುವುದು, ಗೌಡರ ಗರ್ಭಿಣಿ ಸೊಸೆ ಊರಿನ ಒಳಿತಿಗಾಗಿ ತಾನೇ ಕೆರೆಗೆ ಬಲಿಯಾಗುವುದು ಇತ್ಯಾದಿಗಳು ಇವಕ್ಕೆ ಒಳ್ಳೆಯ ಉದಾಹರಣೆಗಳು. ಆದರೆ ಶಿಷ್ಟ ಪರಂಪರೆಯಲ್ಲಿ ನಾಯಕರು ಹುಟ್ಟುವಾಗಲೇ ಅಸಾಮಾನ್ಯ ಪರಾಕ್ರಮಿಗಳು. ಅವರು ತಾಯಿಯ ಗರ್ಭದಲ್ಲಿರುವಾಗಲೇ ಪುಷ್ಪ ವೃಷ್ಟಿಯಾಗುತ್ತದೆ.ಜೊತೆಗೆ ಶಿಷ್ಟ ಪರಂಪರೆಯು ಈಗಾಗಲೇ ಅಸ್ತಿತ್ವದಲ್ಲಿರುವ ಶ್ರೇಣೀಕೃತ ಸಾಮಾಜಿಕ ವ್ಯವಸ್ಥೆಯನ್ನು ಒಪ್ಪಿಕೊಂಡು ಅದನ್ನು ಕಾನೂನುಬದ್ಧಗೊಳಿಸುತ್ತದೆ. ಜಾತಿ-ವರ್ಣ ವ್ಯತ್ಯಾಸಗಳನ್ನು ಅವು ಬಹುಮಟ್ಟಿಗೆ ಸಮರ್ಥಿಸುತ್ತವೆ. ಹಾಗಾಗಿ ರಾಮನು ಶೂದ್ರ ಯೋನಿಯಲ್ಲಿ ಜನಿಸಿದ ಶಂಭೂಕನ್ನು ಕೊಲ್ಲುವಂಥ ಕಥೆ ರಾಮಾಯಣದೊಳಕ್ಕೆ ಸುಲಭವಾಗಿ ಸೇರಿಕೊಳ್ಳುತ್ತದೆ. ಆದರೆ ಜನಪದ ನಿರೂಪಣೆಗಳು ಜಾತಿ ಸಮಾಜದ ಒಳಗಿನ ಕೆಲವು ಸಂಘರ್ಷಗಳನ್ನು ಬಹಿರಂಗಕ್ಕೆ ತರುತ್ತವೆ. ಅದರ ಹುಳುಕುಗಳನ್ನು ಬಯಲಿಗೆಳೆಯುತ್ತವೆ. ಇದಕ್ಕೆ ಜನಪದ ನಿರೂಪಣೆಗಳಲ್ಲಿ ಅನುಸರಿಸಲಾಗುವ ವಿಧಾನವೂ ತುಂಬಾ ಕುತೂಹಲಕರವಾಗಿರುತ್ತದೆ. ಈ ಜನಪದ ನಾಯಕರು ಜಾತಿ ಸಮಾಜದ ವೈರುಧ್ಯಗಳಿಗೆ ಬಲಿಯಾಗುತ್ತಾರೆ ಹಾಗೆ ಬಲಿಯಾದಾಗಲೂ ಜನಪದರ ನಿರೂಪಣಾ ಪ್ರಜ್ಞೆ ನಾಯಕನ ಪರವಾಗಿ ನಿಲ್ಲುವುದರಿಂದಾಗಿ ಆತನನ್ನು ಬಲಿ ತೆಗೆದುಕೊಂಡ ಸಾಮಾಜಿಕ ವ್ಯವಸ್ಥೆಯ ಬಗೆಗೆ ಅಸಹನೆ ಹುಟ್ಟಿಸುತ್ತದೆ. ಈ ಅಸಹನೆ ತೀವ್ರಗೊಳ್ಳುವುದು ನಾಯಕನ ಅಕಾಲ ಮೃತ್ಯುವಿನಲ್ಲಿ.ದಲಿತ ಹುಡುಗನ್ನು ಸಂರಕ್ಷಿಸುವ ಬ್ರಾಹ್ಮಣ ಕನ್ಯೆಯರು, ಕ್ಷತ್ರಿಯರ ಅಹಂಕಾರವನ್ನು ಪ್ರಶ್ನಿಸುವ ಶೂದ್ರ ನಾಯಕರು, ವೈದಿಕ ದೇವರ ಆಜ್ಞೆಗಳನ್ನು ಧಿಕ್ಕರಿಸುವ ಸಾಮಾನ್ಯರು ಜಾನಪದದಲ್ಲಿ ಹೇರಳವಾಗಿ ಕಂಡು ಬರುತ್ತಾರೆ. ಮೈಲಾರ ಲಿಂಗನ ಕಥೆಯಲ್ಲಿ ಆತ ತಿರುಪತಿ ತಿಮ್ಮಪ್ಪನಿಗೆ ಚಳ್ಳೆ ಹಣ್ಣು ತಿನ್ನಿಸುವ ವಿವರ ತುಂಬ ಸೊಗಸಾಗಿ ಬರುತ್ತದೆ.ಜನಪದ ನಿರೂಪಣೆಗಳು ಅವುಗಳ ನಾಯಕನ ಸಾವಿನ ಅನಂತರವೂ ಸಾಕಷ್ಟು ದೀರ್ಘವಾಗಿ ಬೆಳೆಯುತ್ತವೆ. ಅಕಾಲ ಮರಣವನ್ನಪ್ಪುವ ನಾಯಕರು , ಸತ್ತ ಆನಂತರ ಅತಿಮಾನುಷ ವಲಯದಲ್ಲಿ ಉಗ್ರರೂಪಿಯಾಗಿ ಪರಿವರ್ತನೆ ಹೊಂದುತ್ತಾರೆ ಮತ್ತು ತನ್ನ ಸಾವಿಗೆ ಕಾರಣವಾದ ಶಕ್ತಿಗಳ ವಿರುದ್ದ ಹೋರಾಟ ನಡೆಸುತ್ತಾರೆ.ಪ್ರತಿವರ್ಷ ನಿಗದಿತ ದಿನದಂದು ನಡೆಯುವ ಆಚರಣೆಗಳಲ್ಲಿ ಈ ನಾಯಕರು ಪೂಜಾರಿಯೊಬ್ಬನ ಮೂಲಕ ಪ್ರತ್ಯಕ್ಷವಾಗಿ ಜನಗಳ ಕಷ್ಟಗಳಿಗೆ ಕಿವಿಗೊಡುತ್ತಾರೆ.
ಭಾರತದ ಶ್ರೇಣೀಕೃತ ಸಮಾಜದ ಕೆಳ ಹಂತದಲ್ಲಿರುವ ಜನ ವರ್ಗಗಳ ಪರಂಪರೆ, ಆಧುನಿಕತೆ ಮತ್ತು ಭವಿಷ್ಯಗಳೆಲ್ಲ ಬಹುತೇಕವಾಗಿ ಉಳಿದಿರುವುದು ಇಂಥ ಮೌಖಿಕ ರೂಪಗಳಲ್ಲಿ.ಆದರೆ ನಮ್ಮ ದೌರ್ಭಾಗ್ಯ ಎಂದರೆ ಜಾನಪದವನ್ನು ಇನ್ನು ಕೂಡಾ ನಾವು ಭಾರತೀಯ ಸಂಸ್ಕೃತಿಯ ಮುಖ್ಯಭಾಗವೆಂದು ಪರಿಗಣಿಸದಿರುವುದು. ಕಾರಣ ಸುಮಾರು ಶೇಕಡಾ ೯೫ ರಷ್ಟು ಜನರ ಸಂಸ್ಕೃತಿಯು ಇಂದಿಗೂ ಉಪೇಕ್ಷೆಗೆ ಗುರಿಯಾಗುತ್ತಿದೆ.ಇಂಥ ಅನ್ಯಾದ ವಿರುದ್ಧ ನಾವು ಇದೀಗ ಹೋರಾಡಬೇಕಾಗಿದೆ.
ಜಾನಪದದ ಮೂಲಕ ಹೊಸತಿಳುವಳಿಕೆ: ಸಾವಿನ ಆಚರಣೆಗಳು:
ಭಾರತದ ಜಾನಪದವನ್ನು ಅಭ್ಯಸಿಸುವ ಮೂಲಕ ನಮಗೆ ಭಾರೆತದ ಬಗೆಗಣ ತಿಳುವಳಿಕೆಗಳನ್ನು ಹೆಚ್ಚು ಮಾಡಿಕೊಳ್ಳಲು ಸಾಧ್ಯ.ಉದಾಹರಣೆಗೆ ಅಂತ್ಯ ಸಂಸ್ಕಾರದ ವಿಧಿಗಳನ್ನೇ ಗಮನಿಸೋಣ- ನಮಗೆಲ್ಲ ಗೊತ್ತಿರುವ ಹಾಗೆ ಹಿಂದೂ ಧರ್ಮದ ಅಂತ್ಯ ಸಂಸ್ಕಾರ ವಿಧಿಗಳ ಬಗೆಗೆ ಗೃಹ್ಯ ಸೂತ್ರವು ಮಾಹಿತಿಯನ್ನು ನೀಡುತ್ತದೆ.ಈ ಪಠ್ಯವನ್ನು ಆಧರಿಸಿ ಅನೇಕ ಸಂಶೋಧನಾ ಗೃಂಥಗಳೂ, ಲೇಖನಗಳೂ ಪ್ರಕಟವಾಗಿವೆ. ಭಾರತೀಯರು ಹೇಗೆ ಸತ್ತವರನ್ನು ಮರುಹುಟ್ಟಿಗೆ ಒಳ ಪಡಿಸುತ್ತಾರೆ ಎಂಬುದನ್ನು ಆ ಲೇಖನಗಳಲ್ಲಿ ಸಾಬೀತು ಪಡಿಸಲಾಗಿದೆ.ಆದರೆ ಈ ವಿಶ್ಲೇಷಣೆಗಳು ಭಾರತದಲ್ಲಿರುವ ಸಾವಿರಾರು ಬ್ರಾಹ್ಮಣೇತರ ಸಮುದಾಯಗಳಿಗೆ ಅನ್ವಯ ಆಗುವುದಿಲ್ಲ. ಮೂಲತಹ ಸಾವು ವ್ಯಕ್ತಿಯೊಬ್ಬನನ್ನು ಕಳಕೊಳ್ಳುವ ಪ್ರಕ್ರಿಯೆ.ಮನೆಯಲ್ಲಿ ಇದ್ದ ಮನುಷ್ಯನೊಬ್ಬ ಸಾವಿನಿಂದ ಇಲ್ಲವಾದಾಗ ಆ ಮನೆ ತನ್ನ ಸಮತೋಲವನ್ನು ಕಳೆದುಕೊಳ್ಳುತ್ತದೆ.ಆಗ ಉಂಟಾದ ಅಸಮತೋಲವನ್ನು ಶಮನಿಸಿಕೊಳ್ಳಲು ನಿರ್ದಿಷ್ಟ ಸಂಸ್ಕೃತಿಯೊಂದು ಕೆಲವು ಬಗೆಯ ಆಚರಣೆಗಳನ್ನು ರೂಪಿಸಿಕೊಳ್ಳುತ್ತದೆ.ಈ ಆಚರಣೆಗಳು ಕೆಳ ಸಮುದಾಯಗಳಲ್ಲಿ ಸಾವಿನ ಆನಂತರ ಸಾಮಾನ್ಯವಾಗಿ ೧೬ ದಿನಗಳ ವರೆಗೆ ಅಸ್ತಿತ್ವದಲ್ಲಿರುತ್ತದೆ ಈ ಅವಧಿಯಲ್ಲಿ ಸತ್ತವನನ್ನು ನಿಜವಾಗಿಯೂ ’ಇಲ್ಲ’ ಎಂದು ಜನರು ಭಾವಿಸುವುದಿಲ್ಲ.ಬದಲು ಮುಂದಿನ ಹದಿನಾರು ದಿವಸಗಳ ಕಾಲ ಮೃತನು ’ಕುಲೆ’ಯ ರೂಪದಲ್ಲಿ ತಮ್ಮೊಡನೆಯೇ ಇರುತ್ತಾನೆಂದು ಭಾವಿಸುತ್ತಾರೆ. ಹಾಗೆ ಭಾವಿಸುವುದರಿಂದಲೇ ಸತ್ತುಹೋದ ವ್ಯಕ್ತಿಗೆ ನೀರು, ಆಹಾರ ಮತ್ತು ಸ್ಥಳವೊಂದನ್ನು ಒದಗಿಸಿ ಕೊಡುತ್ತಾರೆ. ಹದಿನಾರನೇ ದಿನ ಒಟ್ಟು ಹದಿನಾರು ಬಾಳೆ ಎಲೆಗಳನ್ನು ಸಾಲಾಗಿ ಇರಿಸಿ, ಅದರಿಂದ ಒಂದನ್ನು ತೆಗೆದು, ಕೊನೆಗೆ ಹೊಸದಾದ ಇನ್ನೊಂದನ್ನು ಸೇರಿಸಿ, ಮತ್ತೆ ಹದಿನಾರು ಎಲೆಗಳನ್ನು ಉಳಿಸಿಕೊಳ್ಳುತ್ತಾರೆ. ಈ ಹದಿನಾರು ಕುಲೆಗಳೇ ಕೇರಳದಲ್ಲಿ ’ಕಾರಣವರ್’ ಎಂದು ಪ್ರಸಿದ್ಧ.ಗತಿಸಿದ ಹಿರಿಯರನ್ನು ಈ ಪದ ಸಂಕೇತಿಸುತ್ತದೆ. ಹದಿನಾರರ ಈ ಗುಂಪಿನಲ್ಲಿ ಗಂಡಸರಿಗೂ ಹೆಂಗಸರಿಗೂ ಸಮಾನ ಸ್ಥಾನ. ಇವನ್ನು ಇನ್ನೂ ಸರಿಯಾಗಿ ಅರ್ಥ ಮಾಡಿಕೊಳ್ಳಬೇಕಾದರೆ ನಮಗೆ ಸಮುದಾಯಗಳ ಜಾನಪದವೇ ಬೇಕು. ಹಿಂದೂ ಧರ್ಮದಲ್ಲಿ ಪುನರ್ ಜನ್ಮದ ಕಲ್ಪನೆ ಇದೆ ಎಂದು ಹೇಳಿಕೊಂಡು ತಿರುಗುವ ಪುರೋಹಿತರು ಯಾರ ಬಗ್ಗೆ ಮಾತಾಡುತ್ತಿದ್ದಾರೆ?
ಇತಿಹಾಸದ ಬರೆವಣಿಗೆಗಳು:
ಆಚರಣೆಗಳಿಂದ ಇತಿಹಾಸಕ್ಕೆ ಬರೋಣ.ವಿಜಯನಗರ ಸಾಮ್ರಾಜ್ಯದ ಮೊದಲ ಅರಸರಲ್ಲಿ ಕಂಪಿಲನೂ ಒಬ್ಬ. ಇವನ ಮಗ ಕುಮಾರರಾಮ ಚಾರಿತ್ರಿಕವಾಗಿ ಪ್ರಸಿದ್ಧ ಅರಸನೇನೂ ಅಲ್ಲ. ರಾಜಕೀಯವಾಗಿ ಆತನಿಗೆ ಮಹತ್ವದ ಸ್ಥಾನವೇನೂ ಇಲ್ಲ. ಏಕೆಂದರೆ ಆತ ರಾಜ್ಯ ವಿಸ್ತರಣೆ ಮಾಡಿಲ್ಲ. ಶಾಶ್ವತವಾಗಿ ನೆನಪಿಟ್ಟುಕೊಳ್ಳಬಲ್ಲಂಥ ಬೃಹತ್ ದೇವಾಲಯಗಳನ್ನು ಕಟ್ಟಿಲ್ಲ. ಧಾರ್ಮಿಕ ಆಂದೋಲನವನ್ನು ಹುಟ್ಟುಹಾಕಿಲ್ಲ. ಹೀಗಿದ್ದರೂ ಕರ್ನಾಟಕದ ಜನಸಾಮಾನ್ಯರ ನಡುವೆ ಮತ್ತು ಕನ್ನಡ ಜಾನಪದದಲ್ಲಿ ಇಂದಿಗೂ ಜನಪ್ರಿಯನಾಗಿರುವವನೆಂದರೆ ಕುಮಾರರಾಮನೇ ಆಗಿದ್ದಾನೆ.ಕನ್ನಡ ಸಾಹಿತ್ಯದಲ್ಲಿ ಆತನ ಬಗ್ಗೆ ಮೂರು ಮಹಾಕಾವ್ಯಗಳು ಸೃಷ್ಟಿಯಾಗಿವೆ. ೧೫೧೨ರಲ್ಲಿ ನಂಜುಂಡ ಕವಿ ಬರೆದ ’ಕುಮಾರರಾಮ ಚರಿತೆ’, ೧೬೫೦ರಲ್ಲಿ ಪಾಂಚಾಳಗಂಗ ಬರೆದ ’ಚೆನ್ನರಾಮನ ಸಾಂಗತ್ಯ’ ಮತ್ತು ೧೭೫೦ರಲ್ಲಿ ಮಹಲಿಂಗ ಸ್ವಾಮಿ ಬರೆದ ’ಬಾಲರಾಮನ ಸಾಂಗತ್ಯ’ ಕೃತಿಗಳು ನಮ್ಮೆದುರು ಇಂದಿಗೂ ಇವೆ. ನಂಜುಂಡನ ಕಾವ್ಯವು ವಿದ್ವಜ್ಜನ ಪ್ರಿಯವಾಗಿದೆ. ಆತ ಕುಮಾರರಾಮನನ್ನು ಶ್ರೀರಾಮನೊಡನೆ ಮತ್ತು ಅರ್ಜುನನೊಡನೆ ಸಮೀಕರಿಸಿ, ಅವನನ್ನು ಭಾರತೀಯ ಸಂಸ್ಕೃತ ಪರಂಪರೆಗೆ ಜೋಡಿಸಿದರೆ, ಪಾಂಚಾಳಗಂಗನು ಕುಮಾರರಾಮನನ್ನು ಜಾನಪದ ಲೋಕಕ್ಕೆ ಅನುಸಂಧಾನಗೊಳಿಸಿದ್ದಾನೆ. ಮಹಲಿಂಗಸ್ವಾಮಿಯ ಕಾವ್ಯ ಭಕ್ತಿಯುಗದಲ್ಲಿ ಹುಟ್ಟಿಕೊಂಡ ಹರಿಕಥೆ ಪರಂಪರೆಗೆ ಹತ್ತಿರವಾಗಿದ್ದು ಬಹುಜನರನ್ನು ತಲುಪುವ ಇರಾದೆಯನ್ನು ಪ್ರಕಟಪಡಿಸುತ್ತದೆ. ಇವುಗಳ ಜೊತೆಗೆ ಕನ್ನಡ ಜಾನಪದವನ್ನು ನೋಡಬೇಕು.ಬಿ.ಎಸ್. ಗದ್ದಗೀಮಠರು ಸಂಗ್ರಹಿಸಿದ ’ಕುಮಾರರಾಮನ ದುಂದುಮೆ, ಕ.ರಾ. ಕೃಷ್ಣಸ್ವಾಮಿಯವರು ಸಂಪಾದಿಸಿದ ’ಧೀರಕುಮಾರರಾಮ’, ಜೀ.ಶಂ ಪರಮಶಿವಯ್ಯನವರು ವಿವರಿಸಿದ ’ಚೆನ್ನಿಗರಾಮ’, ಡಿ. ಲಿಂಗಯ್ಯನವರು ಮರುಸೃಷ್ಟಿಸಿದ ’ಚೆನ್ನಿಗರಾಮ’, ಡಾ. ಕೆ.ಎಂ. ಮೈತ್ರಿಯವರು ಸಂಪಾದಿಸಿದ ’ಕೃಷ್ಣಗೊಲ್ಲರ ಕಾವ್ಯ’ ಮತ್ತಿತರ ಕೃತಿಗಳು ನೆನಪಿಗೆ ಬರುತ್ತವೆ. ಆತನ ಬಗ್ಗೆ ಯಕ್ಷಗಾನ ಲಭ್ಯವಿದೆ, ಗೊಂಬೆಯಾಟ ಲಭ್ಯವಿದೆ, ದುಂದುಮೆ ಪದ ಪ್ರಚಲಿತದಲ್ಲಿದೆ.ಎಲ್ಲಕ್ಕಿಂತ ಮೇಲಾಗಿ ಅವನ ಹೆಸರಿನ ಜಾತ್ರೆಯೊಂದು ಕುಮ್ಮಟ ದುರ್ಗದಲ್ಲಿ ನಡೆಯುತ್ತಿದ್ದು, ಅದನ್ನು ಕನ್ನಡ ಸಂಸ್ಕೃತಿಯ ಬಗೆಗೆ ಆಸಕ್ತಿಯುಳ್ಳವರೆಲ್ಲ ಹೋಗಿ ನೋಡಬೇಕು.ಕುಮಾರರಾಮ ವಾಸಿಸಿದ್ದ ಎನ್ನಲಾದ ಕುಮ್ಮಟದುರ್ಗದಲ್ಲಿ ಕುಮಾರರಾಮನು ’ರಾಮಸ್ವಾಮಿ’ಯಾಗಿ ಆರಾಧನೆಗೊಳ್ಳುತ್ತಿದ್ದಾನೆ.ಯುದ್ಧ, ಕೋಟೆ ನಿರ್ಮಾಣ, ದೇವಸ್ಥಾನಗಳನ್ನು ಕಟ್ಟುವುದು ಇತ್ಯಾದಿ ಕೆಲಸಗಳಿಗಿಂತ ಭಿನ್ನವಾಗಿ, ಮಳೆನೀರನ್ನು ಸಂಗ್ರಹಿಸಿ ಬಡವರಿಗೆ ಬದುಕುವ ಹಾದಿ ತೋರಿದ ಕುಮಾರ ರಾಮ ಇಂದು ಎಲ್ಲರಿಗೂ ಇಷ್ಟವಾಗಿದ್ದಾನೆ. ಜಾನಪದವನ್ನು ಆಧರಿಸಿ ಈ ಬಗೆಯ ಚರಿತ್ರೆಯನ್ನು ನಾವಿಂದು ಬರೆಯಬೇಕಾಗಿದೆ.ಈ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದ ಡಾ. ವಸು ಮಳಲಿಯವರನ್ನು ಕಳೆದುಕೊಂಡು ನಾವು ಅನಾಥರಾಗಿಬಿಟ್ಟೆವು
ಹೀಗೆ ಒಟ್ಟಿನಿಂದ ಜಾನೆಪದ ಆಧ್ಯಯನಗಳು ಇಂದು ಜನಪರ ಹೋರಾಟಗಳ ಭಾಗವಾಗಿ ಬೆಳೆಯಬೇಕು.ಅದು ಬಲಪಂಥೀಯ ವೈದಿಕ ಚಿಂತನಾಕ್ರಮಗಳನ್ನು ಪ್ರಶ್ನಿಸಬೇಕು ಮಾತ್ರವಲ್ಲ ಪರ್ಯಾಯ ಸಂಸ್ಕೃತಿಯ ಬಗೆಗೆ ಜನರಲ್ಲಿ ತಿಳುವಳಿಕೆ ಮೂಡಿಸಬೇಕು.ಭಾರತೀಯ ಸಂಸ್ಕೃತಿಗೆ ಏಕ ರೂಪ ನೀಡುವ ಪ್ರಯತ್ನಗಳನ್ನು ಅದು ಬಹುಪಠ್ಯಗಳ ಮೂಲಕ ನಿರಾಕರಿಸಬೇಕು.ಜನಪರ ಇತಿಹಾಸ ರಚನೆಗೆ ಅದು ಆಕರವಾಗಬೇಕು.
ಪುರುಷೋತ್ತಮ ಬಿಳಿಮಲೆ
ನಿರ್ದೇಶಕ,
ಭಾರತೀಯ ಅಧ್ಯಯನಗಳ ಅಮೇರಿಕಾ ಸಂಸ್ಥೆ,
ನವದೆಹಲಿ
1 ಕಾಮೆಂಟ್:
ಇದು ಸಹಯಾನ ಕೆರೆಕೋಣ ಸಂಘಟಿಸಿದ ಜಾನಪದ:ಹೊಸ ತಲೆಮಾರು ಕುರಿತ ಸಹಯಾನ ಸಾಹಿತ್ಯೋತ್ಸವ -೨೦೧೫ ರಲ್ಲಿ ಡಾ. ಬಿಳಿಮಲೆಯವರು ಮಾಡಬೇಕಾಗಿದ್ದ ಭಾಷಣದ ಬರಹರೂಪ ಇದು ....
ಕಾಮೆಂಟ್ ಪೋಸ್ಟ್ ಮಾಡಿ