ದೊಡ್ಡೋಳಾಗೋದಂದ್ರೆ ...
-ಚರಿತಾ


![]() |
| ಚಿತ್ರ - ಚರಿತಾ |
ಟೋಲ್ಗೇಟಲ್ಲಿ ಟಿಕೆಟ್ ಇಶ್ಯು ಮಾಡೋಕಂತ ನಿಂತಿದ್ದ ಬಸ್ಸಿನ ನೀರವತೆಯಲ್ಲಿ ಅನಿರೀಕ್ಷಿತವಾಗಿ 'ಫಟ್ಟ್...' ಅನ್ನೊ ರಭಸದ ಸದ್ದಾಗಿತ್ತು. ಅದರ ಹಿಂದೆಯೇ 'ಲೋಫ಼ರ್..!' ಅಂದಿದ್ದೂ ಕೇಳಿತ್ತು. ಅಲ್ಲಿಗೆ ಅದು ಯಾರು? ಯಾರಿಗೆ? ಯಾಕೆ? ಏನು? ... ಇತ್ಯಾದಿತ್ಯಾದಿ ಪ್ರಶ್ನೆಗಳಿಗೆಲ್ಲ ಥಟ್ಟಂತ ಉತ್ತರ ಹೊಳೆದುಬಿಟ್ಟಿತ್ತು ! ವಿಚಿತ್ರ ಸಿಟ್ಟು, ಖುಶಿ, ವೇದನೆ ಒಟ್ಟೊಟ್ಟಿಗೇ ಆಗಿತ್ತು ...
ಕಾಲಿಗೆ ಚಕ್ರ ಕಟ್ಟಿಕೊಂಡಹಾಗೆ ಊರೂರು ಸುತ್ತುತ್ತಿದ್ದವಳು ಈಗ ನೈಟ್ ಜರ್ನಿಗೆ ಸುತಾರಾಂ ರಾಜಿಯಿಲ್ಲ. ಒಬ್ಬಳೇ ಹಗಲುಹೊತ್ತು ಓಡಾಡೋದಾದ್ರು ಪಕ್ಕದ ಸೀಟಿಗೆ ಬ್ಯಾಗ್ ಇಟ್ಟು, ಕೇಳಿದವರಿಗೆಲ್ಲ "ಬರ್ತಾರೆ" ಅಂತಂದು, ಯಾವುದಾದ್ರು ಹೆಣ್ಣುಜೀವ ಬಂದು ಕೂರಬಾರದಿತ್ತಾ ಅಂತ ಹಲುಬುವ ಮನಸ್ಸು. (ಬಹುಷಃ 'ದೊಡ್ಡೋಳಾಗೋದಂದ್ರೆ' ಇದೇ ಇರ್ಬೇಕು - ಅಪಾಯಗಳನ್ನು ಎದುರಿಸಲು ಸಜ್ಜುಗೊಳ್ಳೋದು ಅಂತ!) ಪಕ್ಕ ಕೂರಲು ಹವಣಿಸುವವರ ಕಣ್ತಪ್ಪಿಸುತ್ತ, ಜಾಣಕಿವುಡಳಾಗಿ ಕೂತಾಗಲೂ ಭಂಡತನದಲ್ಲಿ ಒತ್ತರಿಸಿಕೊಳ್ಳುವ ಗಡವರೇ ಬಹುಪಾಲು. ಕಳ್ಳನಿದ್ದೆ ಮಾಡುತ್ತ ಮೈಮೇಲೆ ಬೀಳುವ, ಕುಂಟುನೆಪದಲ್ಲಿ ಮಾತಿಗೆಳಸುವ, ಮೈತಾಕಿಸುವ ಕೀಚಕರಿಗೆ ಬೈಗುಳದ ಟ್ರೀಟ್ಮೆಂಟ್ ರೆಡಿಯಾಗೇ ಇಟ್ಟಿರಬೇಕು. ಕನಿಷ್ಟಪಕ್ಷ ಹರಿತಗಣ್ಣಾದರೂ ಇರಲೇಬೇಕು. ಇನ್ನು, ಸೀಟ್ ಸಂದಿಯಲ್ಲಿ ನುಸುಳಿಬರುವ ಕೈಗಳಿಗೆ 'ಸೇಫ಼್ಟಿಪಿನ್' ಪ್ರಯೋಗ ಇದ್ದೇಇದೆ ! ಅಂತೂ ಆವತ್ತಿನ ಪ್ರಯಾಣದತುಂಬ ಮೈಯೆಲ್ಲ ಕಣ್ಣಾಗಿ-ಕಿವಿಯಾಗಿ(ಕೆಲವೊಮ್ಮೆ ಬಾಯಿಯೂ ಆಗಿ), ರೋಮರೋಮಕ್ಕು ಎಚ್ಚರವಾಗಿ, ಹಾದಿ ವಿಪರೀತ ದೂರವಾದಂತನಿಸುವುದು ಮಾಮೂಲು!
ಬಹುಶಃ ಯಾವ ಮೆಡಿಟೇಶನ್ ಕೋರ್ಸಲ್ಲೂ ಇಷ್ಟು ಎಚ್ಚರದ ಧ್ಯಾನ ಮಾಡಿರಲಿಕ್ಕಿಲ್ಲ ನಾನು! ಹಾಗಾಗಿ ಇಂಥ ಪ್ರಯಾಸಕರ ಪ್ರಯಾಣಗಳೇ ನನ್ನ ಪಾಲಿನ ನಿಜವಾದ 'ಧ್ಯಾನ ಕೇಂದ್ರಗಳು'!
ಈ ಜನ, ಈ ಪ್ರಯಾಣ ನನಗೆ ಕಲಿಸಿರುವ ಎಚ್ಚರ ಇಲ್ಲೀವರೆಗು ನನ್ನ ಕಾಯುತ್ತ ಬಂದಿದೆ. ಹಾಗೇ ಬದುಕನ್ನು ಮತ್ತಷ್ಟು ಸ್ಪಷ್ಟವಾಗಿ ನೋಡುವುದನ್ನು ಕಲಿಸಿದೆ. ನನ್ನ ಪಾಲಿಗಿರುವ ಸ್ವಾತಂತ್ರ್ಯದ ವ್ಯಾಖ್ಯಾನವೂ ಒಂದು ಮಿತಿಯಲ್ಲಿ ಮಾತ್ರ ಇರಬಹುದಾದ್ದು ಎಂಬುದನ್ನೂ ಮನವರಿಕೆ ಮಾಡಿಸಿದೆ. ಮುಂಜಾನೆ ಒಬ್ಬಳೇ ವಾಕಿಂಗ್ ಹೋಗೋಹಾಗಿಲ್ಲ... ನನಗಾಗಿಯೇ ಈ ಬೆಳಕಾಗಿದೆ ಎನಿಸುವ ಭಾವಕ್ಕೂ, ಪ್ರತೀಸಲದ ವಾಕ್ನಲ್ಲಿ ನಾನು ಕಂಡುಕೊಳ್ಳುತ್ತಿದ್ದ ಆ ಮುದಕ್ಕೂ ಕತ್ತರಿಬಿದ್ದಿದ್ದು ಕೆಲವು ವರ್ಷಗಳ ಹಿಂದೆ, ಒಂದು ಕೆಟ್ಟ ಆತಂಕಹುಟ್ಟಿಸುವ ಘಟನೆಯಿಂದಾಗಿ. ಕತ್ತಲಾದಮೇಲೆ ಬಸ್ಟಾಪಲ್ಲಿ ನಿಲ್ಲೋಹಾಗಿಲ್ಲ-ಒಂಟಿಯಾಗಿ ತಿರುಗೋಹಾಗಿಲ್ಲ . ಇನ್ನು, ಕಣ್ಣುಕುಕ್ಕುವ ಬೆಳ್ಳಂಬೆಳಕಲ್ಲು ಎಚ್ಚರತಪ್ಪೋಹಾಗಿಲ್ಲ,... ಈ 'ಇಲ್ಲ'ಗಳ ಲಿಸ್ಟು ಮಾತ್ರ ಎಲ್ಲೂ ಬದಲಾಗದೇ ಬೆಳೆಯುತ್ತಲೇ ಇದೆಯಲ್ಲ!
![]() |
| ಚಿತ್ರ - ಚರಿತಾ |
ನೈಟ್ ಲ್ಯಾಂಡ್ಸ್ಕೇಪ್ ಮಾಡ್ಬೇಕು, ರಾತ್ರಿಕತ್ತಲಲ್ಲಿ ಒಬ್ಬಳೇ ಊರೆಲ್ಲ ತಿರುಗಬೇಕು ಅನ್ನುವ ನನ್ನ ಹುಚ್ಚು ಆಸೆ ಇನ್ನೂ ಆಸೆಯಾಗೇ ಉಳಿದುಬಿಟ್ಟಿದೆ. ಹಾಗನಿಸಿದಾಗೆಲ್ಲ, ನನ್ನ ನಾನು 'ಮಾಯ' ಮಾಡಿಕೊಳ್ಳುವ ಯಾವುದಾದ್ರು ಮ್ಯಾಜಿಕ್ ನನಗೆ ಗೊತ್ತಿರಬೇಕಿತ್ತು ಅನಿಸ್ತಿತ್ತು! ಅಥವಾ ನಾನೊಬ್ಬ ಲೇಡಿ ಫ್ಯಾಂಟಮ್ ಥರ ಯಾರಿಗೂ ಅಂಜದೆ ಬೇಕಾದಲ್ಲಿ ತಿರುಗಾಡಿಕೊಂಡಿರೋಹಾಗಿದ್ರೆ ಎಷ್ಟ್ ಚೆಂದ ಅನಿಸ್ತಿತ್ತು. ಕೆಲವೊಮ್ಮೆ ಇದೇ ಕಾರಣಕ್ಕೆ ನಾನು ಹುಡುಗ ಆಗಿರ್ಬೇಕಿತ್ತು ಅಂತಲೂ ಅನಿಸಿತ್ತು! ಈಗ 'ದೊಡ್ಡೋಳಾಗಿದೀನಿ'.. ಫ್ಯಾಂಟಸಿಗಿಂತ ರಿಯಾಲಿಟಿಯಲ್ಲೆ ಬದುಕಲು ಕಲಿಯುತ್ತಿದ್ದೀನಿ! ಈಗ ನೈಟ್ ಲ್ಯಾಂಡ್ಸ್ಕೇಪ್ ಹಾಗಿರಲಿ, ಹಾಡಹಗಲಲ್ಲೂ ಫೀಲ್ಡ್ ವರ್ಕ್ ಮಾಡೋಕೆ ಲೇಡಿ ಫ್ಯಾಂಟಮ್ಮೇ ಆಗಬೇಕಾಗಿದೆ! ಆದ್ರೆ, ಫ್ಯಾಂಟಮ್ಗೇ ಜಾಸ್ತಿ ಕಷ್ಟ ಅಂತ ತಿಳಿಯೋಕೆ ಇಷ್ಟು ವರ್ಷ ಬೇಕಾಯ್ತು ನಂಗೆ!
ಆವತ್ತು ನಾನು ಹೊರಟಿದ್ದು ದೂರದ ಊರಿನ ಒಬ್ಬಜ್ಜೀನ ಮಾತಾಡಿಸೋದಕ್ಕೆ. ಅವರು ಜಾನಪದ ಹಾಡುಗಾತರ್ಿ. ಆಗಷ್ಟೆ ಒಂದು ವಿಶೇಷ ಪ್ರಶಸ್ತಿ ಸಂದಿದ್ದರಿಂದ ಅವರನ್ನು ಮಾತಾಡಿಸಿ, ಒಂದಷ್ಟು ಹೊತ್ತು ಕಣ್ತುಂಬಿ, ಮನದುಂಬಿಕೊಳ್ಳುವ ನೆಪ ಸಿಕ್ಕಿತ್ತು. ಮೈಸೂರಿಂದ ಬೆಳಗಿನ ಬಸ್ಸು ಹತ್ತಿದ್ದ ನನಗೆ ಸ್ವಲ್ಪಹೊತ್ತಿಗೆ ಬಸ್ಸಲ್ಲಿದ್ದದ್ದು ಬಹುಷಃ ನಾನೊಬ್ಬಳೇ ಮಹಿಳೆ ಅನಿಸಿ, ಒಂಥರದ ದುಗುಡ, ಆತಂಕ ಆವರಿಸಿಕೊಂಡಿತ್ತು. ಪಕ್ಕದ ಸೀಟಿಗೆ ನನ್ನ ದೊಡ್ಡ ಬ್ಯಾಗ್ ಇರಿಸಿ, ಹಿಂದಿನ ಸೀಟಲ್ಲಿ ಯಾರಿದಾರೆ ಅಂತ ಗಮನಿಸಿಕೊಂಡಿದ್ದೆ. ಆತ ಒಬ್ಬ ಮಧ್ಯವಯಸ್ಕ. ಒಮ್ಮೆ ನನ್ನ ಸೀಟಿನ ಕಡೆ ಬಾಗಿ ಕೂರೋದು, ಮತ್ತೊಮ್ಮೆ ಕಿಟಕಿ ಗಾಜನ್ನು ಆಚೀಚೆ ಎಳೆದಾಡೋದು ನಡೆದಿತ್ತು. ನನಗೋ ಆತನನ್ನೂ ಒಳಗೊಂಡು ಬಸ್ಸಲ್ಲಿದ್ದ ಆ ಎಲ್ಲಾ ಗಂಡಸರೂ ಎಡೆಬಿಡದೆ ನನ್ನನ್ನೇ ದಿಟ್ಟಿಸುತ್ತಿರೋಹಾಗೆ, ಅವರೆಲ್ಲರ ಕಣ್ಣ ಈಟಿಗಳು ಕಂಡಕಂಡಲ್ಲಿ ತಿವಿಯುತ್ತಿರೋಹಾಗೆ ಅನಿಸಿ, ದುಪಟ್ಟಾವನ್ನು ಮತ್ತಷ್ಟು ಅಗಲ ಮಾಡಿ, ನನ್ನ ಕತ್ತು, ಕೈಯನ್ನೂ ಮುಚ್ಚಿಕೊಂಡು ಕೂತೆ. ಎದೆಬಡಿತ ಮಾತ್ರ ನನಗೆ ಸ್ಪಷ್ಟವಾಗಿ ಕೇಳೋಹಾಗಿತ್ತು! ಆದರೂ ಆತಂಕ ತೋರಿಸುವಂತಿರಲಿಲ್ಲ. ಆರಾಮಾಗೇ ಇದೀನಿ ಅನ್ನೋಹಾಗೆ ಇಯರ್ ಫೋನ್ ಕಿವಿಗಿಟ್ಟುಕೊಂಡ್ರೆ, " ಕಾಂತಾನಿಲ್ಲದಮ್ಯಾಲೆ ಏಕಾಂತವ್ಯಾತಕೆ..." ಅಂತ ರತ್ನಮಾಲಾ ಪ್ರಕಾಶ್ ಹಾಡೋದಕ್ಕೆ ಶುರುಮಾಡಿದ್ರು. ಅವರನ್ನು ಮಧ್ಯದಲ್ಲೆ ತಡೆದು, ನನ್ನ ಕಷ್ಟ ಹೇಳಿಕೊಳ್ಳಬೇಕೆನಿಸಿತು. ಅವರೋ ಈ ಲೋಕದ ಗೊಡವೆಯೇ ತನಗಿಲ್ಲವೆಂಬಂತೆ ಹಾಡುತ್ತಲೇ ಇದ್ರು. ಆ ಹಾಡು ಬರೆದ ಕಂಬಾರರು ಅಲ್ಲೇನಾದ್ರು ಕಾಣಬಹುದಾಂತ ನೋಡಿದರೆ ಕಂಡಿದ್ದು ಆ ಕಂಡಕ್ಟರು. ಯಾಕೋ ಅವನೂ ಕೂಡ ನನ್ನ ಕಡೆಗೆ ಒಂಥರದ ಹುಳ್ಳನಗೆ ನಕ್ಕಂತಾಗಿ, ನನ್ನ ಆತಂಕ ಅವನಿಗೆ ಗೊತ್ತಾಗಿಹೋಯ್ತೇನೊ ಅನಿಸಿ ಮತ್ತಷ್ಟು ದಿಗಿಲಾಯ್ತು.
'ಎಲ್ಲಿಗೆ ?' ಅನ್ನೋಹಾಗೆ ಎದುರುಬಂದು ನಿಂತ.
ಇಂತಲ್ಲಿಗೆ ಅಂತ ಜೋರಾಗಿ ಹೇಳೋದು ಅಪಾಯ ಅನಿಸಿದ್ದರಿಂದ, ಅವನಿಗೆ ಮಾತ್ರ ಕೇಳೋಹಾಗೆ ಸಣ್ಣದನಿಯಲ್ಲಿ ಹೇಳಿದ್ದೆ...
" ದಾವಣ್ಗೆರೇಗಾ ?" ಅಂತ ಅಷ್ಟು ದೊಡ್ಡದಾಗಿ, ಇಡೀ ಬಸ್ಸಿಗೆ ನನ್ನ 'ಕೊನೆ ನಿಲ್ದಾಣ' ಅನೌನ್ಸ್ ಮಾಡಿದ್ದ ಆತ. ಆ ಕ್ಷಣ, ಯಮ ಅಂದ್ರೆ ಇವನೇ ಇರ್ಬೇಕು ಅನಿಸಿಬಿಟ್ಟಿತ್ತು! ಹೃದಯ ನೇರ ಬಾಯಿಗೇ ಬಂದಂಗಾಗಿತ್ತು! ಹಿಂದಿನ ಸೀಟಿನ ಆಸಾಮಿಗೂ ಈ ಕಂಡಕ್ಟರ್ಗೂ ಏನೊ ಡೀಲಿಂಗ್ ಇರ್ಬೇಕು ಅಂತೆಲ್ಲ ಅನಿಸತೊಡಗಿ ಬಾಯಿ ಮತ್ತಷ್ಟು ಒಣಗತೊಡಗಿತು..
"ಅರಸೀಕೆರೇಲಿ ಇಳ್ಕೊಂಡು ಅಲ್ಲಿಂದ ಟ್ರೇಯ್ನಲ್ಲಿ ಹೋಗಿ, ಒಬ್ರೆ ಬೇರೆ ಇದೀರಿ. ಈ ಬಸ್ಸು ತಲುಪೋದು ತುಂಬ ಲೇಟು" ಅಂತಂದು ಒಂಥರಾ ನಕ್ಕ. ಈಗ ನಿಜಕ್ಕು ದಿಗಿಲು, ಗೊಂದಲ ಒಟ್ಟೊಟ್ಟಿಗೆ ಆಗಿತ್ತು.
ಬಸ್ ಇಳಿದ ಕೂಡ್ಲೆ, ಹಿಂದೆಯೇ ಇಳಿದು ನನ್ನ ಹಿಂಬಾಲಿಸಿ ಬರಬಹುದಾದ ಮೂರ್ನಾಲ್ಕು ಗಂಡಸರು ನನ್ನ ಹಿಡಿದು ನಿಲ್ಲಿಸ್ಬೌದು,.. ಹೆದರಿಸಿ ಬ್ಯಾಗಲ್ಲಿರೋದೆಲ್ಲ ಕಿತ್ಕೋಬೌದು,.. ಮೈಮೇಲೆ ಕೈಹಾಕ್ಲುಬೌದು ...ಆಗ ನಾನೇನು ಮಾಡ್ಬೇಕು?? ...
ಆದಷ್ಟೂ ಗಾಬರಿಯಾಗದೆ, "ಯಾಕ್ರಪ್ಪ? ಏನು ನಿಮ್ ಪ್ರಾಬ್ಲಮ್ಮು ?" ಅಂತ ಗಂಭೀರವಾಗಿ ಕೇಳ್ಬೇಕು...
ಕ್ಯಾಮರ, ಆಡಿಯೋ ರೆಕಾರ್ಡರ್, ತಮ್ಮ ಕೊಡಿಸಿದ್ದ ರಿಸ್ಟ್ವಾಚು, ತುಂಬ ಇಷ್ಟಪಟ್ಟು ತಕೊಂಡಿದ್ದ ಲೆದರ್ ಪಸರ್ು, ಅದರಲ್ಲಿದ್ದ ಒಂದಷ್ಟು ದುಡ್ಡು-ಫೋಟೋಗಳು, ಬಾಯ್ಫ್ರೆಂಡ್ ಥರ ನನ್ನ ಜೊತೆಗಿರುವ ಮೊಬೈಲು, ಆಂಟಿಯೊಬ್ಬರು ಗಿಫ್ಟ್ ಮಾಡಿದ್ದ ಬಿಳಿಹರಳಿನ ಓಲೆ, ಇತ್ಯಾದಿತ್ಯಾದಿ ದೊಡ್ಡ-ಸಣ್ಣ ನೆನಪುಗಳೆಲ್ಲವನ್ನೂ ನಿರ್ಲಿಪ್ತವಾಗಿ, 'ಕಾಲಜ್ಞಾನಿ'ಯಹಾಗೆ ತೆಗೆದುಕೊಟ್ಟುಬಿಡಲು ತಯಾರಾಗ್ಬೇಕು,.. ಹಾಗೆ ಕೊಡುತ್ತ, "ಎಷ್ಟ್ ದಿನಾಂತ ಇಂಥ ಜೀವ್ನ ನಿಮ್ದು? ಯಾಕೆ ಹೀಗೆಲ್ಲ ತೊಂದ್ರೆ ಕೊಡ್ತೀರಿ?" ಅಂತ ನಿರಾಳವಾಗಿ ಕೇಳ್ಬೇಕು!! ...ಅಷ್ಟು ತಣ್ಣಗಿನ ನನ್ನ ಮಾತು ಕೇಳಿ ಅವರಿಗೆ ತಮ್ಮ ಪ್ಲ್ಯಾನ್ ಎಲ್ಲಾ ಮರೆತುಹೋಗ್ಬೇಕು,...!!
... ಅದ್ಸರಿ, ಅಷ್ಟು ತಣ್ಣಗೆ ನಟಿಸೋಕೆ ನನಗೆ ಸಾಧ್ಯ ಆಗ್ಬಹುದಾ?... ಅಂತೆಲ್ಲ ಯೋಚಿಸುವಷ್ಟರಲ್ಲಿ ಅರಸೀಕೆರೇಲಿ ಬಸ್ ನಿಂತಿತ್ತು.
ಬಸ್ ಇಳಿದು ಅಷ್ಟು ದೂರದವರೆಗೂ ಯಾರೂ ಹಿಂಬಾಲಿಸ್ತಾಯಿಲ್ಲ ಅನಿಸಿದಮೇಲಷ್ಟೆ ಆ ಕಂಡಕ್ಟರ್ ಬಗ್ಗೆ ಸ್ವಲ್ಪ ನಂಬಿಕೆ ಬಂದಿದ್ದು! ಆದ್ರೆ, ಹಿಂದಿನ ದಿನ ಟೀವೀಲಿ ಕಂಡಿದ್ದ ಆ ಕೇಡಿ ರೇಪಿಸ್ಟ್ ಈ ರೈಲ್ವೆ ಸ್ಟೇಷನ್ನಲ್ಲೆಲ್ಲಾದ್ರು ಹೊಂಚುಹಾಕೊಂಡಿರಬಹುದಾ? ಅನ್ನೋ ಆತಂಕ ಮತ್ತೆ ಬಿಗಿಯಾಗಿ ಉಸಿರುಗಟ್ಟಿಸುವಂತೆ ಆವರಿಸಿಕೊಳ್ಳತೊಡಗಿತ್ತು! ಅಂತೂ ಆ ಟ್ರೇಯ್ನು ನನ್ನನ್ನೂ, ನನ್ನ ಪ್ರೀತಿಯ ಬ್ಯಾಗನ್ನೂ, ನನ್ನ ದುಗುಡ, ಆತಂಕಗಳನ್ನೂ ಇಡಿಯಾಗಿ ದಾವಣಗೆರೆವರೆಗೂ ತಲುಪಿಸಿತು...
ಪ್ರಯಾಣ ಅನ್ನೋದು ಎಷ್ಟು ಚೇತೋಹಾರಿ! ಹೊಸಜನ, ಹೊಸಜಾಗ ಕಾಣೋದು-ತಿಳಿಯೋದು ಎಷ್ಟ್ ಚೆಂದ! ಅಂತೆಲ್ಲ ಹಾರಾಡುತ್ತಿದ್ದೋಳ ರೆಕ್ಕೆಗಳು ಎಲ್ಲಿ ಕಳೆದುಹೋದವು?! ಆ ಉತ್ಸಾಹದ ಬದಲು ಈ ಆತಂಕ ಜಾಗಪಡೆದಿದ್ದು ಹೇಗೆ? ದಾರಿಹೋಕರೆಲ್ಲ ಕಳ್ಳರಹಾಗೆ, ರೇಪಿಸ್ಟ್ ಗಳ ಹಾಗೆ ಕಾಣೋಕೆ ಶುರುವಾಗಿದ್ಯಾಕೆ? ಆಟೋ ಹತ್ತೋಕೆ ಮುಂಚೆ, ಎಟಿಎಮ್ ಹೊಕ್ಕೋಕೆ ಮುಂಚೆ ಇಪ್ಪತ್ತು ಸರ್ತಿ ಯೋಚಿಸೋಹಾಗೆ ಆಗಿರೋದ್ಯಾಕೆ? ರೆಕ್ಕೆಗಳನ್ನು ಕಳಚಿಟ್ಟು, ಮರೆತುಬಿಟ್ಟಂತೆ ಹೀಗೆಲ್ಲಾ ನಾನು ಬದಲಾದದ್ದಾದರೂ ಯಾಕೆ?...
ಸ್ವಾತಂತ್ರ್ಯ, ಐಡೆಂಟಿಟಿ, ಸೇಫ಼್ಟಿ - ಇವಕ್ಕೆಲ್ಲ ಇರಬಹುದಾದ ವ್ಯಾಖ್ಯಾನಗಳನ್ನು ಬಹುಷಃ ಇಂಥಾ ಆತಂಕ, ತಲ್ಲಣ, ದಿಗಿಲುಗಳ ಒಳಹರಿವಿನಲ್ಲೇ ಕಟ್ಟಿಕೊಳ್ಳಬೇಕಾಗಿದೆ! 'ನಾನು' ಅಂದರೆ ಕೇವಲ ಸುಂದರ ಕನಸುಗಳ ಮೂಟೆಯಷ್ಟೇ ಅಲ್ಲ ; ಆ ಕನಸುಗಳ ಸುತ್ತ ಕಾವಲುಪಡೆಯಂತೆ ನಿಲ್ಲಬೇಕಾದ ಎಚ್ಚರದ ವೇದನೆಯೂ ಆಗಬೇಕಿದೆ!
....ಆ ಭೇಟಿಯ ನಂತರ ಮತ್ತೆ ಮೈಸೂರಿಗೆ ಮರಳುವ ಹಾದಿಯಲ್ಲಿ ನನ್ನ ಕಣ್ಣು-ಕಿವಿ-ಮನಸನ್ನೆಲ್ಲ ಇಡಿಯಾಗಿ ಆವರಿಸಿಕೊಂಡಿದ್ದುದು ಆ ಸುಂದರಿ ಅಜ್ಜಿಯ ಗುಂಗು... ನಗು, ಬೆರಗು, ಶುದ್ಧ ಸಂಭ್ರಮದ ಬೆಡಗು. ದೇವದಾಸಿಯಾಗಿದ್ದವಳು ಆಕೆ ... ನೋವು, ಸಂಕಟ, ರೋಷ, ಕಿಚ್ಚು , ಪ್ರೀತಿ - ಎಲ್ಲವನ್ನೂ ಬಸಿದು ಎದೆಯ ಹಾಡಾಗಿಸಿಕೊಂಡವಳು,... ಕಂಬನಿಯನೆಣ್ಣೆಯಾಗಿಸಿ ಕಣ್ಣದೊಂದಿ ಹೊತ್ತಿಸಿಕೊಂಡವಳು... ಅವಳೇ ನನ್ನೊಳಗಿಳಿದು ಕೂತಿದ್ದರಿಂದಲೋ ಏನೋ ನನಗೆ ಅಕ್ಕಪಕ್ಕದ ಸೀಟಿನ ಗಂಡಸರ್ಯಾರೂ ಕಾಣಲೇ ಇಲ್ಲ...!!
![]() |
| ಚಿತ್ರ - ಇಂಟರ್ನೆಟ್ ಮೂಲ |
('ಹೊಸ ಮನುಷ್ಯ' ಮಾಸ ಪತ್ರಿಕೆಯ 'ಸಮಾಜವಾದಿ ಯುವ ಚಿಂತನ ವೇದಿಕೆ'ಯಲ್ಲಿ ಪ್ರಕಟಿತ - ಡಿಸೆಂಬರ್, ೨೦೧೪ )







ಸೆಲೆಬ್ರಿಟಿಗಳೋ ಆದ ಅಸಾಮಾನ್ಯರು ಕೋಟು ತೊಟ್ಟೇ ಕಸ ಗುಡಿಸುತ್ತಿದ್ದಾರೆ! ಕೈಗವಚ ತೊಟ್ಟು, ಬಟ್ಟೆಯ ಇಸ್ತ್ರಿಕಳೆಯದ ಎಚ್ಚರದಲ್ಲಿ ಉದ್ದನೆ ಹಿಡಿಕೆಯ ಪೊರಕೆ ಹಿಡಿದು ರಸ್ತೆಬದಿಗೆ ನೆಟ್ಟಗೆನಿಂತು ಕಸಹೊಡೆಯುವ ಈ ಅಭಿನಯವಂತೂ ಮಾಧ್ಯಮ ಬಕಾಸುರರ ಹಸಿವಿಂಗಿಸುತ್ತಿದೆ. ಕೆಲವೊಂದೆಡೆ ಕಸವಿಲ್ಲದೆ ಪೇಚಿಗೆಬಿದ್ದವರು ಕಸವನ್ನೇ ಆಮದು ಮಾಡಿಕೊಂಡು, ಗುಡಿಸಿ ಮುಗಿಸಿದ್ದನ್ನೂ ಕೆಲವು ಕಳ್ಳಗಣ್ಣುಗಳು ಸಣ್ಣಗೆ ಸುದ್ದಿಮಾಡಿವೆ. ಹೀಗೆ ಈಗ ಎಲ್ಲೆಡೆ ಕಸದ ಕಾರುಬಾರು. ‘ಕೆರೆಯ ನೀರನು ಕೆರೆಗೆ ಚಲ್ಲಿ ವರವ ಪಡೆದವರಂತೆ ಕಾಣಿರೋ’ ಎಂಬಂತೆ ದೇಶದ ಕಸವನ್ನು ದೇಶದೊಳಕ್ಕೇ ಸುರಿದ ದೇಶಸೇವೆಯದೇ ಸುದ್ದಿ. ಈ ಜಾದೂ ನೋಡಿ ಸಹಸ್ರಮಾನಗಳಿಂದ ಕಸಹೊಡೆಯುತ್ತಿರುವ ತಾಯಂದಿರು, ಕುತ್ತಿಗೆಗೆ ಕಟ್ಟಿಕೊಂಡ ಕರಟದಲ್ಲೇ ತಮ್ಮ ಎಂಜಲು ಬಚ್ಚಿಟ್ಟುಕೊಂಡು ತಮ್ಮನ್ನು ನಿಷೇಧಿಸಿದ ಬೀದಿಯನ್ನೇ ಗುಡಿಸಿದ ಬಹಿಷ್ಕೃತರು, ತಲೆಹೆಗಲುಗಳಲ್ಲಿ ಹುಟ್ಟಿದವರ ’ತಳದ ಕೊಳಕ’ನ್ನು ತಲೆಮೇಲೆ ಹೊತ್ತು ಸಾಗಿಸಿದ ದಲಿತರು, ತಿಪ್ಪೆಗುಂಡಿಯಲ್ಲಿ ಕೊಳೆತ ಕಸವನ್ನೇ ನೆಲದ ಹಸಿವಿಂಗಿಸುವ ಗೊಬ್ಬರವೆಂದು ಸಂಭ್ರಮಿಸಿ ಹೊತ್ತು ಬದುಕಿದ ನೆಲದಮಕ್ಕಳು ಬೆರಗಾಗಿದ್ದಾರೆ! ಶತಮಾನಗಳ ಇತಿಹಾಸದಲ್ಲಿ ಸಮೂಹದ ಎದೆಯ ದಾರಿದ್ರ್ಯದಿಂದ ಅವರ ಮೈಮೇಲಿನ ಬಟ್ಟೆ, ಕೈಯಲ್ಲಿಯ ಪೊರಕೆಗಳು ಹೊಸಮೆರುಗು ಹೊಸಹೆಸರು ಕಂಡಿಲ್ಲ. ಅವರೆತ್ತಿದ ಕಸದಮೇಲೆ ದೇಶಸೇವೆಯ ಫಲಕ ಜೋತಾಡಿಲ್ಲ. ಆದರೆ ಈಗ ಶಿಕ್ಷೆಯನ್ನೇ ಕರ್ತವ್ಯವೆಂದು ಬದುಕಿದ ಈ ಕಸದ ಕರುಳುಬಳ್ಳಿಯ ಒಡನಾಡಿಗಳನ್ನೇ ಕಸದ ಜಾದೂ ಕಿಚಾಯಿಸುತ್ತಿದೆ. ಪಾಪದ ಜೋಳಿಗೆಯಲ್ಲಿ ಪುಣ್ಯದ ಪುತ್ಥಳಿಗಳ ಈ ಹೊಸಕುಣಿದಾಟ ಅವರ ಹಣೆಯೊಳಗಿನ ಹಣೆಬರಹವನ್ನೇ ತಡಕಾಡಿಕೊಳ್ಳುವಂತೆ ಮಾಡಿದೆ.
ಊರಬೀದಿಯ ಕಸ ಎತ್ತುವುದರಿಂದ ಹಿಡಿದು ಕಟ್ಟಿಕೊಂಡ ಬಚ್ಚಲುಗುಂಡಿಯ ಸ್ವಚ್ಚಕ್ಕೆ ಯಾರನ್ನು ಹುಡುಕುವುದೆಂಬ ಪ್ರಶ್ನೆಯನ್ನೇ ನಾಪತ್ತೆಗೊಳಿಸಿತ್ತು. ಹೀಗೆ ಹೊರಬೇಕಾದವರು ಹೊತ್ತು, ಹೊತ್ತವರ ನೆತ್ತಿಮೇಲೆ ಕೂರುವವರು ಗಡದ್ದಾಗಿ ಕೂತು ನಿದ್ರಿಸುವ ನಿರುಮ್ಮಳತೆ ಈ ಧರ್ಮಸಾಮ್ರಾಜ್ಯದ ಸತ್ಯವಾಗಿತ್ತು. ವ್ಯತ್ಯಾಸವಾದರೆ ತಾನೇ ಮತ್ತೆ ಮತ್ತೆ ಬಂದು’ ಇರಬೇಕಾದುದನ್ನು ಇರುವಂತೆಯೇ ವ್ಯವಸ್ಥೆ ಮಾಡುವುದಾಗಿ ಆ ’ಆಚಾರ್ಯ’ನೂ ಹೇಳಿಹೋಗಿದ್ದ! ಇಂತಹ ಧರ್ಮಪಾಲನೆಯಿಂದ ಕಸ-ರಸಗಳೆಲ್ಲ ಸಲ್ಲಬೇಕಾದ ಜಾಗಕ್ಕೆ ಸಂದಾಯವಾಗುತ್ತಾ ಬಂದಿವೆ. ಹಾಗಾಗಿ ಇಲ್ಲಿ ಕಸತೆಗೆಯುವುದು ಸುದ್ದಿಯಲ್ಲ. ಕಸ ತೆಗೆಯುತ್ತೇವೆ ಎನ್ನುವುದೇ ಸುದ್ದಿ. ಗುಡಿಸಬಾರದವರು ಗುಡಿಸುವುದೇ ಸುದ್ದಿ. ಅದು ನಮ್ಮ ಜನಕ್ಕೆ ಸಿಕ್ಕ ತರಬೇತಿ. ಇಲ್ಲಿ ಜನ ತಮ್ಮ ಕಷ್ಟಕ್ಕೆ ತಲೆ ಕೆಡಿಸಿಕೊಂಡವರಲ್ಲ. ರಾಜರಿಗೆ, ಮೇಲ್ಜಾತಿಗೆ ಬೆವರು ಮೂಡಿದರೆ ಜನಕ್ಕೆ ಅದು ತಮ್ಮ ಚಿಂತೆಯಾಗುತ್ತದೆ. ಉದಾಹರಣೆಗೆ ’ಹರಿಶ್ಚಂದ್ರಕಾವ್ಯ’ದಲ್ಲಿ ದಿನವೂ ತಾವು ನಡೆಯುತ್ತಿರುವುದಕ್ಕೆ ಕೊರಗದ ಜನ ವಿಶ್ವಾಮಿತ್ರನಿಗೆ ಎಲ್ಲವನ್ನೂ(ಕೊನೆಗೆ ತಮ್ಮನ್ನೂ) ಧಾರೆಯೆರೆದು ’ತನ್ನ ಸತ್ಯ’ ಉಳಿಸಿಕೊಳ್ಳಲು ಹೊರಟ ಹರಿಶ್ಚಂದ್ರ ಬರಿಗಾಲಿನಿಂದ ಹೇಗೆ ನಡೆದಾನು ಎಂದು ಚಿಂತೆಗೆ ಬೀಳುತ್ತದೆ. ’ಹೂವಿನಂತಹ ಕಾಲಿರುವ ನೀನು ಬರಿಗಾಲಿನಿಂದ ಹೇಗೆ ನಡೆಯುತ್ತೀ’ ಎನ್ನುವುದು ಅವರ ಸಂಕಟವಾಗುತ್ತದೆ. ಹಾಗಾಗಿ ರಾಜಕುಮಾರರು ಜನರ ನಡುವೆ ಬಂದರೆ, ಸಿನಿಮಾ ನಟಿಗೆ ಹೆರಿಗೆಯಾದರೆ, ನಟರು ಕೈಕುಲುಕಿದರೆ, ಯಾರೋ ಮಂತ್ರಿ, ಅಧಿಕಾರಿ ಗುದ್ದಲಿ, ಪೊರಕೆಹಿಡಿದರೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲೂ ನಾವು ಸಂಕಟ, ಸಂತೋಷಕ್ಕೆ ಬಿದ್ದುಬಿಡುತ್ತೇವೆ!
ದಿನಂಪ್ರತಿ ಪೊರಕೆ, ಗುದ್ದಲಿ ಹಿಡಿದವರನ್ನು ಮರೆತು ಬಿಡುತ್ತೇವೆ. ಪುರಾಣಕಾಲದ ನಮ್ಮೀ ಪ್ರವೃತ್ತಿಗೆ ಜನಾಡಳಿತದಲ್ಲೂ ಬಿಡುಗಡೆ ಸಿಕ್ಕಿಲ್ಲ. ಹೀಗಾಗಿ ಸೊಂಟದಿಂದ ಜಾರುವಂತಿರುವ ಜೀನ್ಸ್‌ಪ್ಯಾಂಟ್, ತೆಳುವಾದ ಟೀಶರ್ಟ್ ಹಾಕಿದ ಸುಶಿಕ್ಷಿತ(?) ಟೆಕ್ಕಿಗಳು ಕೈಬಾಯಿಗಳಿಗೆ ಮುಸುಕು ಹಾಕಿಕೊಂಡು ಕಪ್ಪನೆಯ ಪ್ಲಾಸ್ಟಿಕ್ ಬ್ಯಾಗ್‌ನಲ್ಲಿ ಕಸ ತುಂಬಿಸುವ ಆಟವೂ ನಮಗೆ ದೇಶೋದ್ಧಾರದ ಬ್ರೇಕಿಂಗ್ ನ್ಯೂಸ್‌ಗಳಾಗುತ್ತವೆ. ಆದರೆ ಮ್ಯಾನ್ ಹೋಲ್‌ಗಳಲ್ಲಿ ಇಳಿದು ಯಾರೋ ಮಾಡಿದ ಹೊಲಸು ಎತ್ತುವ ಕೈಗಳು ಮುನುಷ್ಯರದ್ದೇ ಅನ್ನುವುದನ್ನು ಖಾತರಿಪಡಿಸಲು ಸಂವಿಧಾನದ ಕಲಂ ಓದಬೇಕಾಗುತ್ತದೆ!?
ತೆರಿಗೆ ವಸೂಲಿಕಾರರ ಕೈವಶವಾಗುವುದನ್ನು ಕಾಣುತ್ತಾ ಬದುಕುತ್ತಿರುವ ಮಿಲಿಯಾಂತರ ಜನರ ಪ್ರತಿನಿಧಿಯಾದ ಭಾರತ. ಹೀಗೆ ಕರುಣೆತುಂಬಿದ ತಾಯ್ತನದಲ್ಲಿ ಆ ಗ್ರಾಮಬದುಕಿನ ಧಾರುಣತೆಯನ್ನು ಗಾಂಧಿ ಪರಿಚಯಿಸುತ್ತಿರುವ ಹೊತ್ತಲ್ಲಿಯೇ ನಡೆದ ಘಟನೆಯೊಂದು ಡಂಕನ್ ಪುಸ್ತಕದಲ್ಲಿದೆ. ಅಲ್ಲಿರುವ ಮಾಹಿತಿಯಂತೆ ಆ ಜೋಪಡಿಗಳಿಗೆಲ್ಲಾ ಇದ್ದುದು ಒಂದೇ ಬಾವಿ. ಅಂದು ಈ ಬಾವಿ ಪಕ್ಕದಲ್ಲೇ ನಾಲ್ಕೈದುಮಂದಿ ಕುಕ್ಕರುಗಾಲಲ್ಲಿ ಕೂತು ಬೆಳಗಿನ ದೇಹಬಾಧೆ ತೀರಿಸಿಕೊಳ್ಳುತ್ತಿದ್ದರು. ಅದಕ್ಕಿಂತ ಮುಂಚಿತವಾಗಿ ಹಾಗೆ ಮಾಡಿಟ್ಟುಹೋದವರ ಸಾಕ್ಷಿಗಳೂ ಅಲ್ಲಿದ್ದುವು. ಈ ದೃಶ್ಯದ ಎದುರಿಗೆ ನಿಂತ ಗಾಂಧಿ ಡಂಕನ್‌ಗೆ ಮಾಮೂಲಿ ಗಾಂಧೀ ಎನಿಸಲಿಲ್ಲ. ಅದನ್ನು ಡಂಕನ್ ಮಾತಿನಲ್ಲಿಯೇ ಹೇಳುವುದಾರೆ, “ಗಾಂಧೀಜಿ ಮಾತಿಲ್ಲದೆ ನಿಂತಿದ್ದರು. ಅವರ ಮುಖದಲ್ಲಿ ಅತೀವ ನಿರಾಸೆ, ಅನುಕಂಪ, ಯಾತನೆ. ಅವರು ಆ ಜನರಿಗೆ ಆರೋಗ್ಯಶಾಸ್ತ್ರದ ಬಗ್ಗೆ, ನೈರ್ಮಲ್ಯದ ಬಗ್ಗೆ ಲೆಕ್ಚರ್ ಕೊಡಲಿಲ್ಲ. ಈ ಜನರ ಹೀನಸ್ಥಿತಿಗೆ ತಾವೊಬ್ಬರೇ ಕಾರಣರೇನೋ ಎನ್ನುವಂತೆ ನಿಂತಿದ್ದವರು ಕೂಡಲೇ ಕೈಹಾಕಿದ್ದು ಇಂದು ನಾವು ನೀವು ಅಸಹ್ಯಪಡುವಂಥ ಕೆಲಸಕ್ಕೆ. ಅವರು ಆ ಹಳ್ಳಿಗರು ವಿಸರ್ಜಿಸಿದ್ದ ಮಲವನ್ನು ತಮ್ಮ ಕೈಯಿಂದಲೇ ತುಸು ದೂರ ಸರಿಸಿ ಮಣ್ಣಿನಿಂದ ಮುಚ್ಚಿದರು” (ಎಸ್. ದಿವಾಕರ, ಪ್ರಜಾವಾಣಿ ಸಾಪ್ತಾಹಿಕ ಪುರವಣಿ, ದಿನಾಂಕ:೨೬/೧/೨೦೧೪.ಪು.೨). ಹೀಗೆ ಇದ್ದಕ್ಕಿದ್ದಂತೆ ಗಾಂಧಿ ಕಾರ್ಯಾಚರಣೆಗೆ ಇಳಿದಿದ್ದರು! ಮಹಾತ್ಮರೇ ತೊಡಗಿಕೊಂಡದ್ದನ್ನು ನೋಡಿದ ಡಂಕನ್ ತಾನು ತೊಡಗಿಕೊಂಡ. ಜೊತೆಗಿದ್ದ ಮಿಕ್ಕವರೂ ಸೇರಿಕೊಂಡರು. ಮೂರು ದಿನಗಳ ತನಕ ದೂರದಿಂದಲೇ ನೋಡುತ್ತಿದ್ದ ಹಳ್ಳಿಗರೂ ಸೇರಿಕೊಳ್ಳುವ ಮೂಲಕ ನಾಲ್ಕನೆಯ ದಿನಕ್ಕೆ ಇಡಿಯ ಊರೇ ಭಾಗವಹಿಸುವಂತಾಯ್ತು. ಇದನ್ನು ಕುರಿತು, “ಗಾಂಧೀಜಿಯ ನಿಸ್ವಾರ್ಥ ಸೇವೆ ಒಂದು ಶತಮಾನ ಕಾಲದಲ್ಲಿ ಒತ್ತಾಯವಾಗಲೀ, ಬೋಧನೆಯಾಗಲೀ ಸಾಧಿಸಲಾಗದ್ದನ್ನು ಒಂದು ಕ್ಷಣದಲ್ಲಿ ಸಾಧಿಸಿಬಿಟ್ಟಿತ್ತು” (ಪ್ರಜಾವಾಣಿ ಸಾಪ್ತಾಹಿಕ ಪುರವಣಿ, ದಿನಾಂಕ: ೨೬-೧-೧೪, ಪು.೨) ಎಂದು ಬರೆಯುತ್ತಾನೆ ಡಂಕನ್. ಯಾರನ್ನೂ ಕರೆಯದೆ ಯಾವ ಘೋಷಣೆಯನ್ನೂ ಮಾಡದೆ ಗಾಂಧೀ ಪಾಪಕ್ಕೆ ಪ್ರಾಯಶ್ಚಿತ್ತವನ್ನಷ್ಟೇ ಮಾಡಿಕೊಂಡಿದ್ದರು. ಅಲ್ಲಿ ಅಧಿಕಾರವಾಣಿ ಇರಲಿಲ್ಲ. ತಾಯ್ತನದ ಕೊರಗಿತ್ತು. ಗ್ರಾಮ ಬದುಕನ್ನು ಸರಿಪಡಿಸುವ ಆ ಕಾಯಕದಲ್ಲಿ ಭಾರತವನ್ನು ಕುರಿತ ಗ್ರಹಿಕೆಯ ಸ್ಪಷ್ಟತೆಯೂ ಇತ್ತು. ಅದು ಪ್ರವಾಸಿಗಳನ್ನು, ವ್ಯಾಪಾರಿ ದರೋಡೆಕೋರರನ್ನು ಆಕರ್ಷಿಸುವ ವರಸೆಯಾಗಿರಲಿಲ್ಲ. ಕಸ ಅಲ್ಲಿ ಜಾಹೀರಾತಿನ ಸರಕೂ ಅಲ್ಲ. ಅಲ್ಲಿ ಮಡಿಭಾವದ ಜೀವವಿರೋಧಿತನವನ್ನು ದಾಟಿ ಪಾಪದ ಹೊಣೆಹೊತ್ತವನ ಒಳಸಂಕಟವಷ್ಟೇ ಇತ್ತು.
ಈ ಕಳಂಕವನ್ನು ಮರೆತು ಸ್ವಚ್ಛತೆಯ ಬಗೆಗೆ ಗಾಂಧಿ ಹೇಳಿದ ಮಾತಿನ ಮೇಲುಹೊದಿಕೆಯನ್ನಷ್ಟೇ ಬಳಸಿದರೆ ಗಾಂಧಿಯನ್ನೇ ನಾಪತ್ತೆ ಮಾಡಿದಂತಾಗುತ್ತದೆ. ಇನ್ನು ಗಾಂಧೀ ಕಲ್ಪನೆಯ ಸ್ವಚ್ಛಭಾರತ ಗ್ರಾಮಭಾರತವೂ ಹೌದು. ಆದರೆ ನಾವು ತೆರೆದುಕೊಂಡಿರುವುದು ಮುಕ್ತಮಾರುಕಟ್ಟೆಗೆ. ಕರೆಯುತ್ತಿರುವುದು ನಗರವೆಂಬ ಆಧುನಿಕ ನರಕನಿರ್ಮಾಣದ ಹಣದ ಥೈಲಿಕಾರರನ್ನು. ನಿರ್ಮಿಸಲು ಹೊರಟಿರುವುದು ಸ್ಮಾರ್ಟ್‌ಸಿಟಿಗಳನ್ನು. ಹಾಗಾಗಿ ನಗರವನ್ನೇ ಗುಡಿಸಿ ಒರೆಸುತ್ತಿರುವ ನಮಗೆ ನಾವು ಕಟ್ಟುವ ಭಾರತದ ಕುರಿತ ಸ್ಪಷ್ಟತೆ ಇದೆಯೇ ಎಂಬುದನ್ನೂ ಕೇಳಿಕೊಳ್ಳಬೇಕಿದೆ. ಇನ್ನು ಶತಮಾನಗಳಿಂದ ಊರಹೊಲಸು ಬಳಿದು ನಮ್ಮ ಉಸಿರು ಸರಾಗಗೊಳಿಸಿದವರು ಹೇಗಿದ್ದಾರೆ? ನ್ಯಾಯ ಕೇಳುವುದಕ್ಕೂ (ಸವಣೂರಿನ ಭಂಗಿ ಕಾರ್ಮಿಕರು)ಮೈಮೇಲೆ ಮಲಸುರಿದುಕೊಳ್ಳುವ ಅವರ ವರ್ತಮಾನದ ಬದುಕಿಗೆ ನಾವೇನು ಮಾಡಿದ್ದೇವೆ? ಈ ಕುರಿತ ಆತ್ಮವಂಚನೆಯಿಲ್ಲದ ತರ್ಕವೂ ನಮಗೆ ಬೇಕಿದೆ. ಆಗ ನಾವು ತೆಗೆಯುವ ಕಸವೂ ಕಸ್ತೂರಿ ನಾತವನ್ನು ಬೀರೀತು.




ನಾನು ನಿಮ್ಮನ್ನು ಪ್ರಚೋದಿಸಬೇಕು, ನಿಮ್ಮ ಆಲೋಚನೆಯನ್ನು ತಾಕಬೇಕು. ಹೀಗಾಗಿಯೇ ನಾನು ಇತ್ತೀಚೆಗೆ ರಮಣ ಮಹರ್ಷಿಗಳ ಬಗ್ಗೆ ನಿರಂತರವಾಗಿ ಹಾಗೂ ಪ್ರಜ್ಞಾ ಪೂರ್ವಕವಾಗಿ ಮಾತನಾಡುತ್ತಿದ್ದೇನೆ…’’
ಜೀವನ ಮೌಲ್ಯಗಳನ್ನು ಹಗುರವಾಗಿಯೂ ತೆಗೆದುಕೊಂಡಿಲ್ಲ. ಆದರೆ, ಏನಾದರೂ ಸಮಸ್ಯೆ ಅಂತ ಬಂದರೆ ಅವರಿಗೆ ತಕ್ಷಣ ನೆನಪಾಗುವುದು ಜ್ಯೋತಿಷ್ಯ ಮತ್ತು ದೇವಸ್ಥಾನಗಳು.
ಎಂಬುದನ್ನೂ ಗಮನಿಸಬೇಕಿದೆ.
ಮತ್ತು ಪೂರೈಕೆ ನೀತಿಗಳು ಕೆಲಸ ಮಾಡುತ್ತವೆ. ಗ್ರಾಹಕ ಮತ್ತೆ ಹೊಸ ಸರಕಿಗಾಗಿ ಮತ್ತು ಕಡಿಮೆ ಬೆಲೆಗಾಗಿ ಹಂಬಲಿಸುತ್ತಾನೆ. ಒಂದು ಹಂತ ದಾಟಿದ ನಂತರ ಜ್ಯೋತಿಷ್ಯೋದ್ಯಮಕ್ಕೂ ಸಂಕಷ್ಟ ಎದುರಾಗುತ್ತದೆ. ಅವತ್ತಿಗೆ ಇದಕ್ಕೊಂದು ಪರ್ಯಾಯ ಹುಡುಕಿ ಇಟ್ಟರೆ, ಖಂಡಿತಾ ಸಮಾಜದ ತಲ್ಲಣಗಳಿಗೆ ವೈಯುಕ್ತಿಕ ನೆಲೆಗಿಂತ ಸಾಮಾಜಿಕ ಆಯಾಮದ ಪರಿಹಾರ ಕಂಡುಕೊಳ್ಳಲು ಪ್ರತಿಯೊಬ್ಬರೂ ಆಲೋಚಿಸುವಷ್ಟು ಪ್ರಬುದ್ಧರಾಗುತ್ತಾರೆ ಎಂಬುದು ನಂಬಿಕೆ ಮತ್ತು ಆಶಯ.