ಭಾನುವಾರ, ಆಗಸ್ಟ್ 3, 2014

ಜಾನಪದ ಜ್ಞಾನದಾರಿಯ ಹುಡುಕಾಟ

ಡಾ|| ರಾಜೇಗೌಡ ಹೊಸಹಳ್ಳಿ


ಜಾನಪದವೆಂಬುದು ಕೇವಲ ಜನಪದರ ಬದುಕೆ? ಹೌದಾಗಿದ್ದರೆ ಅದಾದರೂ ಸರಿಯಿದೆಯೆ? ಇಲ್ಲವಾದರೆ ಮಾನವ ಬದುಕುತ್ತಿರುವ ಪರಿಸರವನ್ನಾದರೂ ಅವನಿಗೆ ಸಹಕಾರವೆಂಬಂತೆ ಬಳಸಿಕೊಳ್ಳುತ್ತಿದ್ದಾನೆಯೇ? ಈ ಪ್ರಶ್ನೆಗಳಿಗೆದುರಾಗಿ ನಾವು ಇಂದು ಜಗದ ಜಾನಪದವನ್ನು ಹುಡುಕಬೇಕಾಗಿದೆ. ಇಂದು ಲಿಬಿಯಾದಲ್ಲಿ ಅಂದು ಪ್ಯಾಲೇಸ್ತೇನಿನಲ್ಲಿ ಆಧುನಿಕ ಮಾನವ ಏನು ಮಾಡಿದ್ದಾನೆ. ಮಾಡುತ್ತಿದ್ದಾನೆ. ಯಾತಕ್ಕಾಗಿ ಹೀಗೆ ಮಾಡುತ್ತಿದ್ದಾನೆ. ಪ್ರಕೃತಿ ಮೈಕೊಡವಿದರೆ ಹೊಟ್ಟಿನೋಪಾದಿಯಲ್ಲಿ ಉದುರುವ ಈಗಿನ ಜಪಾನ್ ನಮ್ಮ ಕಣ್ಣ ಮುಂದಿಲ್ಲವೆ! ಹೆನ್ರಿ ಡೇವಿಡ್ ಥೋರೋ ಹತ್ತೊಂಭತ್ತನೇ ಶತಮಾನದ ಅಮೇರಿಕಾದ ಮಹಾ ಮೇಧಾವಿ ಲೇಖಕ. ಮೆಕ್ಸಿಕನ್ನರ ಮೇಲಿನ ದೌರ್ಜನ್ಯದ ವಿರೋಧಕ್ಕಾಗಿ; ಬೇಕಂತಲೇ ತಾನು ಸುಂಕ ಕಟ್ಟದೆ ಒಂದು ದಿನ ಜೈಲನ್ನು ಸೇರಿದ. ಅವನನ್ನು ಪ್ರಿಯ ಮಿತ್ರನೊಬ್ಬ ನೋಡಿ:- Henry why are you here? ಎಂದು ಚಕಿತನಾದ. ಅದಕ್ಕೆ ಥೋರೋ Why are you not here? ಎಂದು ಕೇಳಿದ. ಇಂಥಾವನು ಬರೆದದ್ದು Essay on civil desobedience
ಕೃಷಿ ಮಾಡಿದ ಹೊಲಗಳನ್ನು ತಾನಾಗಿ ಬೆಳೆದ ಹುಲ್ಲುಗಾವಲು ಕಾಡುಗಳನ್ನು ಸೂರ್ಯನು ಭೇದ ಭಾವವಿಲ್ಲದೆ ನೋಡುತ್ತಾನೆ ಎಂಬುದನ್ನು ನಾವು ಮರೆತುಬಿಡುತ್ತೇವೆ.
ತನಗೆ ಹಸಿವಾದಾಗ ಹೋಗಿ ಸ್ವತಂತ್ರವಾಗಿ ಹಣ್ಣು ಕಿತ್ತುಕೊಳ್ಳುತ್ತಿದ್ದವನು ಇಂದು ರೈತನಾಗಿದ್ದಾನೆ. ನೆರಳಿಗಾಗಿ ಮರವನ್ನಾಶ್ರಯಿಸುತ್ತಿದ್ದವನು ಇಂದು ಗೃಹಸ್ಥನಾಗಿದ್ದಾನೆ. ಈ ಮೇಲಿನ ಥೋರೋ ಮಾತುಗಳಲ್ಲಿ ಎರಡು ಸಂಗತಿಗಳಿವೆ. ಮೊದಲನೆಯದು ನಾವು ಹರಿದು ತಿನ್ನುತ್ತಿರುವ ಪರಿಸರ ಜನಪದ. ಎರಡನೆಯದು ಕೃಷಿ ಜಾನಪದದಿಂದ ಯಜಮಾನಿಕೆ ಜಾನಪದದ ಕಡೆಗೆ ಒಲಿದ ಮಾದರಿ. ವಾಲ್ಡನ್ ಎಂಬ ಸರೋವರ ತೀರದಲ್ಲಿ ತಾನೇ ಗುಡಿಸಲು ಕಟ್ಟಿಕೊಂಡು ತನಗಾಗುವಷ್ಟು ಬೆಳೆದುಕೊಂಡು ಥೋರೋ ಸತ್ಯಾನ್ವೇಷಣೆಯಲ್ಲಿ ತೊಡಗಿದ್ದ. ಹೀಗೆಯೇ ಗಾಂಧಿ ಕೂಡ ಮಹಾತ್ಮನಾಗಿದ್ದು ಸಬರೀಮತಿ ತೀರದಲ್ಲಿ ಸತ್ಯಾನ್ವೇಷಣೆಗೆ ಸ್ಥಿರೀಕರಿಸಿಕೊಂಡಿದ್ದು ಇಂದು ಚಾರಿತ್ರಿಕ ಅಂಶಗಳು. ಚರಿತ್ರೆಯು ವರ್ತಮಾನಕ್ಕೆ ತಿಳಿವಳಿಕೆಯಾಗಬೇಕು. ಅದು ಬಿಟ್ಟು ಇಂದು ಆಧುನಿಕ ಆಶ್ರಮ ತೀರದಲ್ಲಿರುವ ಬಾಬಾಗಳು ಡೋಂಗಿಗಳು ಏನೇನು ಮಾಡುತ್ತಿದ್ದಾರೆ! ಶ್ರೀಕೃಷ್ಣನು ಹೆಣ್ಣನ್ನು ಗೌರವದಿಂದ ಕಂಡವನು ಎಂಬುದನ್ನು ಮರೆತು ಲಘುತ್ವಕ್ಕಿಳಿಸಿ ಹಾದರೋತ್ಸಾಹಕ್ಕೆ ಅವನ ಲೀಲೆಯನ್ನು ಬಳಸಿಕೊಳ್ಳುತ್ತಿದ್ದಾರೆ.

  ದಿನ ಬೆಳಗಾದರೆ ನಮ್ಮ ಗೊಂಬೆರಾಮರ ಪವಿತ್ರ ಸ್ಥಾನದಲ್ಲಿ, ದೆವ್ವನಂತಹ ಸಾಧು ಸನ್ಯಾಸಿಗಳು ಖಿ.ಗಿ ಮುಂದೆ ಕುಳಿತು ದೈತ್ಯಪುರಾಣ ಹೇಳುತ್ತಾರೆ. ಇವರೇ ದ್ವೈತ ಹೇಳುವ ನಿಜವಾದ ರಕ್ಕಸರು. ಇಲ್ಲದ ರಾಹುಕೇತು ತಂದು ಗುಮ್ಮನಾಟವಾಡಿಸುತ್ತಾರೆ. ನಿಜದ ನಾಗರ ಕಂಡರೆ ಬೆದರುವ ಇವರು ನಾಗರ ಕಲ್ಲುಗಳ ಮುಂದೆ ಪುಂಗಿ ಊದುತ್ತಾರೆ. ತಾವು ಉಂಡ ಎಲೆಗಳ ಮೇಲೆ ಮೂಢರ ಉರುಳಲು ಬಿಟ್ಟು ಎಣೆಯಾಟ ನೋಡುತ್ತಾರೆ. ಹೆಗ್ಗೋಡಿನ ಅಕ್ಷರನಂತವರೂ ವೈದೇಹಿಯಂತವರೂ ಇಂಥಾದನ್ನು ಮಾಧ್ಯಮದವರೂ ಸೇರಿದಂತೆ ಪೋಷಿಸುವುದು ಅಕ್ಷರಸ್ಥರಿಗೊದಗಿದ ದುರಂತ. ಗ್ರಾವಿಣ-ನಗರ ಸಮಾಜಗಳೆರಡೂ ಇಂಥ ಆಧುನಿಕ ಮನುಗಳಿಂದ ಎಚ್ಚರಿರಬೇಕು. ಯಾವಾಗಲೂ ಚರಿತ್ರೆ ಜನಪದೀಯ ಸಂಸ್ಕೃತಿಯ ಮೇಲೆ ಮನೆಕಟ್ಟಿಕೊಳ್ಳಬೇಕು. ಗವಿಯೊಳಗೆ ಹಕ್ಕಿಗಳು ಹಾಡುವುದಿಲ್ಲ. ಪಾರಿವಾಳಗಳು ಗೂಡುಗಳೊಳಗೆ ಕುಳಿತು ಶಾಂತಿ ಸಾರುವುದಿಲ್ಲ. ತಿಳಿವಳಿಕೆ ನೀಡುವವನು ವ್ಯಾಪಾರೀಕರಣಕ್ಕೆ ಇಳಿದರೆ ಏನು ಮಾಡಬೇಕು! ನಾವಾಗಲೀ ನಮ್ಮ ಪೂರ್ವಜರಾಗಲೀ ಅಸ್ತಿಪಂಜರಗಳಲ್ಲಿ ಬೇರೆ ಬೇರೆಯಲ್ಲ. ಅಂದು ಆರ್ಯಮೂಲದಲ್ಲಿ ಬಂದು ಅವತರಿಸಿ ಸಮಾಜವನ್ನು ಅದೋಗತಿಗಿಳಿಸಿದ ರೀತಿನೀತಿಗಳೇ ಇಂದು ಪುನಾರವತಾರ ತಾಳುತ್ತಿವೆ. ಜ್ಞಾನ ವಿಜ್ಞಾನ ಬೇರೆ ಬೇರೆಯಲ್ಲ. ವಿಜ್ಞಾನವು ಜ್ಞಾನದ ಮೇಲೆ ನಿಂತಿದೆ. ಜಾನಪದ ಜ್ಞಾನದಾರಿಯು ಇದೆಲ್ಲದರ ಮೇಲೆಯೇ ಸಾಗಬೇಕಿದೆ. 

ನಮ್ಮ ಗ್ರಾವಿಣರಾಗಲೀ ನಗರೀಕರಣಗೊಂಡವರಾಗಲೀ ಇಂದು ಸರಸರನೆ ಜಾರುತ್ತಿದ್ದಾರೆ. ಈ ಜಾರುವಿಕೆ ಎತ್ತ ಸಾಗುತ್ತಿದೆ ಎಂಬುದರ ಮೇಲೆ ನಮ್ಮ ಜನಪದರ ಬದುಕು ನಿಂತು ಅವಲೋಕಿಸಬೇಕಿದೆ. ಗಂಗಾಜಲ ಇಂದು ಪನ್ನೀರಲ್ಲ. ಬೆಂಗಳೂರಿನ ವೃಷಭಾವತಿಯಿರಲಿ, ಅರ್ಕಾವತಿಯಿರಲಿ ತಲಕಾವೇರಿಯೇ ಇಂದು ಅಂತಂತರಿಸಿ ಹೋಗುತ್ತಿದ್ದಾಳೆ. ಅಶೋಕನ ಕಾಲದ ಮರಗಳು ಉರುಳುತ್ತಿವೆ. ಬ್ರಿಟಿಷರ ಕಾಲದ ರೈಲುಗಳು ತಾರಾಡುತ್ತಿವೆ. ಪುಷ್ಟಕವಿಮಾನಗಳು ಸ್ವಿಸ್ ದೇಶದ ಕಡೆಗೆಲ್ಲಾ ಹಾರುತ್ತಿವೆ. ಜನಪದರ ಬದುಕು ’ಕದ್ದು ತಂದ ಕುರಿಬಾಡು ಊರಿಗೆಲ್ಲಾ ಪರೇವು’ ಎಂಬಂತಾಗಿದೆ. ಇದೆಲ್ಲದರ ನಡುವೆ ಅನಕ್ಷರಸ್ಥರು ಅಕ್ಷರಸ್ಥರೆಂಬ ಹುಡುಕಾಟದ ಪರಿಸ್ಥಿತಿ ಈಗಿಲ್ಲ. ಗ್ರಾವಿಣ ಕೃಷಿ ನಿಂತು ಹೋಗುತ್ತಿದೆ. ನಗರದ ಸೂರುಗಳು ಗಬ್ಬು ನಾರುತ್ತಿವೆ. ಇದರ ಸಾಮರಸ್ಯಕ್ಕಾಗಿ ಈಗ ಚಿಂತನೆಗಳಾಗಬೇಕಿವೆ.  

ಜನಪದ ಹಾಡು ಇಂದು ಕೇವಲ ಹಾಡಲ್ಲ. ಹಳ್ಳಿಯ ಹೆಣ್ಣುಮಗಳು ಹೇಳುವಂತೆ ’ಕಣ್ಣೀರ ಹನಿ’. ಹೆಣ ಸುಡಲಿಕ್ಕೆ ಸೌದೆಯಿಲ್ಲದ ಗ್ರಾಮೀಣ ಬದುಕು ಇಂದು ಎಲೆಕ್ಟ್ರಿಕ್ ಸುಡುಗಾಡಲ್ಲಿ ಸುಡುವ ವ್ಯವಸ್ಥೆಗೆ ಒಡ್ಡಿಕೊಳ್ಳುವಾಗ ಎಂಥಾ ಲಾಭ-ಲೋಭದ ಕತೆ ನಮ್ಮ ಮುಂದಿಲ್ಲ! ಇಂಥಾ ಅನುವಂಶೀಯ ಲಾಭ ಲೋಭ ಈ ದೇಶಕ್ಕೆ ಹೇಗೆ ಬಂತು. ಹಿಂದುಕುಶ್ ಪರ್ವತಗಳ ಸಾಲು ಮುಖಾಂತರ ಆರ್ಯತನ ಹಾಯ್ದು ಬಂತು. ನಮ್ಮ ಬಲಿಚಕ್ರವರ್ತಿಯನ್ನು ವಿಪ್ರನಾಯಕ ವಾಮನನೆಂಬ ಬ್ರಾಹ್ಮಣ ಪಾತಾಳಕ್ಕೆ ತುಳಿದುಬಿಡುತ್ತಾನಲ್ಲವೆ! ನಮ್ಮ ಗ್ರಾಮೀಣರು ಇಂದೂ ಸಹಾ ಬಲಿಯ ಆಗಮನಕ್ಕಾಗಿ ಪ್ರತೀ ವರ್ಷ ದೀಪಾವಳಿ ಆಚರಣೆ ಮೂಲಕ ಆಹ್ವಾನಿಸುತ್ತಲೇ ಇದ್ದಾರೆ. ಪರಶುರಾಮ ಎಂಥಾ ಕ್ರೂರಿ, ಅಲ್ಲದೆ ಮಾತೃಹಂತಕನಾಗಿದ್ದ. ಅವನು ಎಂಥಾ ಅಮಾನವೀಯತೆಯನ್ನು ಸ್ಥಳೀಯ ಕ್ಷತ್ರಿಯರ ಮೇಲೆ ತೋರಿದ.

  ಈ ದೇಶದ ಬ್ರಾಹ್ಮಣ್ಯವು ಎಂಥಾ ಹುಸಿ ಪುಸ್ತಕಗಳನ್ನು ಬರೆದು ಹೇಳಬೇಕಾದ್ದನ್ನೆಲ್ಲಾ ಮುಚ್ಚಿಟ್ಟು ಅದು ಹೇಗೆ ವಂಚಿಸಿತು. ಹೇಗೆ ನಂಬಿಕೆ ಮೂಢನಂಬಿಕೆಗಳನ್ನು ಗ್ರಾಮೀಣರ ಮೇಲೆ ಹೇರಿ ಶೂದ್ರರನ್ನು ಅತಿಶೂದ್ರರನ್ನು ಹದ್ದುಬಸ್ತಿನಲ್ಲಿಟ್ಟುಕೊಂಡು ಆಳಿತು. ಇದು ಬ್ರಿಟಿಷರು ಬಂದು ಇಂಥಾ ಸೆರೆವಾಸ ಬಿಡಿಸದಿದ್ದರೆ ಏನಾಗುತ್ತಿತ್ತು ಎಂಬುದನ್ನೆಲ್ಲಾ ಜ್ಯೋತಿರಾವ್‌ಪುಲೆ ಅವರು ತಮ್ಮ ’ಗುಲಾಂಗಿರಿ’ ಪುಸ್ತಕದಲ್ಲಿ ೧೯ನೇ ಶತಮಾನದಲ್ಲೆ ಹೇಳಿದ್ದಾರೆ. ಪುಲೆ, ಸಾಹುಮಹಾರಾಜನಿಗೆ ಅಂಬೇಡ್ಕರ್‌ಗೆ ತಳಹದಿ ಹಾಕಿಕೊಟ್ಟವರು. ಅಂಥಾ ತಿಳುವಳಿಕೆಯನ್ನು ನಾವು ಈ ಸಮಾಜದಲ್ಲಿ ಅರಿತು ವಿವೇಕಾನಂದ ಮಾದರಿಯಲ್ಲಿ ಕುವೆಂಪು ಮಾದರಿಯಲ್ಲಿ ರಾಮರಾವಣರನ್ನು ಐಕ್ಯಗೊಳಿಸುವ ಕ್ರಿಯಾವಿಧಾನವನ್ನು ಸೂಚಿಸಬೇಕಾಗುತ್ತದೆ. ಇದೇ ನಮ್ಮ ಗ್ರಾಮೀಣರಿಗೂ ನಗರದವರಿಗೂ ಬೇಕಾಗಿರುವ ಜನಪದ ಸಾಮಗ್ರಿ. ಎಂಥಾ ವಿಚಾರಗಳು ಬ್ರಾಹ್ಮಣ ಗ್ರಂಥದಲ್ಲಿ ಸಿಗುತ್ತವೆ!

 ಗರ್ಭಧರಿಸಿದ ಹೆಣ್ಣು ಗಂಡನನ್ನು ಕಳೆದುಕೊಂಡಾಗ ತನ್ನನ್ನು ತನ್ನ ಗರ್ಭವನ್ನು ರಕ್ಷಿಸಿಕೊಳ್ಳಲು ಗುಡ್ಡಗವಿಕಾಡಿಗೆ ಓಡುವ ವಿಚಾರ ಬರುತ್ತದೆ. ನೆರಳು ತಾಗಿಸದ, ನೆಲಕ್ಕೆ ಉಗುಳದ ಶೂದ್ರರ ಮುಟ್ಟುಚಿಟ್ಟು ವಿಚಾರ ಬರುತ್ತದೆ. ತಂದೆ ಮೇಲೆ ಮಗನ ಎತ್ತಿಕಟ್ಟಿದ ಪ್ರಹ್ಲಾದನ ಕತೆಯಾಗಲೀ; ಪರಶುರಾಮನನ್ನು ಬಗ್ಗಿಸಿದ ಶ್ರೀರಾಮನ ಕತೆಯಾಗಲೀ ಇವು ಕೇವಲ ಪುರಾಣಗಳಲ್ಲ. ನಮ್ಮ ವಂಶಪಾರಂಪರ‍್ಯದ ಜನಪದ ಚರಿತ್ರೆಗಳು. ’ವಿಶ್ವಾಮಿತ್ರನ ಥರಾ ನಾಯಿ ಮಾಂಸ ತಿನ್ನೋದು’ ಎಂದರೆ ಅತಿಶೂದ್ರನು ಹೊಟ್ಟೆಗಿಲ್ಲದೆ ಏನನ್ನಾದರೂ ತಿನ್ನುವ ವಿಧಾನ. ಸತ್ತ ಪ್ರಾಣಿಯ ಅಥವ ದನಾ ತಿನ್ನಲೇಬೇಕಾದ ಪ್ರಸಂಗ ಈ ದೇಶಕ್ಕೆ ಬಂದಿದ್ದು ಹೌದು. ಅದು ಆಳುವವರ ಕ್ರೂರ ವಿಧಾನದಿಂದ ಆಗಿದ್ದು. ಯಾರು ಸತ್ತರೇನು! ಯಾರು ಸತ್ತ ದನ ತಿಂದರೇನು! ನಾವು ಯಜ್ಞಯಾಗಾದಿಗಳ ಮೂಲಕ ಜೀವಂತ ರಾಸುಗಳನ್ನು ಕಡಿದು ತಿನ್ನಲು ಮಾತ್ರ ಯೋಗ್ಯರು ಎನ್ನುವ ಕಾಲ ಮತ್ತೊಂದು ರೂಪದಲ್ಲಿ ಪುನಃ ಅವತರಿಸುತ್ತಿದೆ. ಇಂದಿನ ರಾಜ ಐಭೋಗಕ್ಕೂ ಅಂದಿನ ಪರಶುರಾಮ, ವಾಮನ, ನರಸಿಂಹಾದಿಗಳ ಆರ್ಭಟಕ್ಕು ಯಾವ ವ್ಯತ್ಯಾಸವಿಲ್ಲ. ಹೀಗೆ ಬೆಳೆದುಬಂದ; ಅನೇಕ ತಿರುವುಗಳನ್ನು ಪಡೆಯುತ್ತಾ ಬಂದಿರುವ ನಮ್ಮ ಸಮಾಜದ ಅರಿವೇ ಇಂದಿನ ಜನಪದ. ಅಂದು ದೇವತಾ ಅಂತಃಪುರಕ್ಕೂ ಸಹಾ ಹೋಗಿ ಕಲಹ ಸೂಸುವ ಶಿಖಂಡಿ ಮೂಲದ ನಾರದನಿದ್ದ. ಅಂದು ಜ್ಞಾನ ಮಾರ್ಗದೆಡೆಗೆ ಒಯ್ಯುತ್ತಿದ್ದೇನೆಂದು ಬೌದ್ಧಮಂದಿರಗಳನ್ನು ನಿರ್ನಾಮ ಮಾಡಿದ ಶಂಕರ ಮೂಲಗಳಿದ್ದವು. ಇಂದು ಬಾಬ್ರಿ ಮೂಲದ ಶೋಭಾಯಾತ್ರಾ ಆಟಗಳಿವೆ.

  ಚರಿತ್ರೆ ಮರುಹುಟ್ಟು ಪಡೆಯುವಾಗ ಗತ ಇತಿಹಾಸವನ್ನು ವರ್ತಮಾನದಲ್ಲಿ ನಿಲ್ಲಿಸುತ್ತದೆ. ಇದೇ ನಾವು ಅರಿಯಬೇಕಾದ ಜನಪದ ವಸ್ತು. ಅಂದು ಚಾಣಕ್ಯನಂತಹ ತಂತ್ರಗಾರಿಕೆ ಅವನ ಆಸ್ಥಾನದಲ್ಲಿದ್ದ ಸಂಚುಗಾರಿಕೆ ಇಂದು ವಿಧಾನಸೌದದೊಳಗೆ, ಅಟಾರಕಛೇರಿಯೊಳಗೆ, ದಿಲ್ಲಿ ಗದ್ದುಗೆಯೊಳಗೆ ರಾರಾಜಿಸುತ್ತಿದೆ. ಕಪಟವೇಶದಲ್ಲಿ ಗುಲಾಂಗಿರಿಗೆ ನೂಕುತ್ತಿದೆ. ಪ್ರಾಣಿಪಕ್ಷಿಗಳನ್ನು ಕುತ್ತಿಗೆ ಕುಯ್ಯಲು ಮುಲಾನಿಗಳನ್ನು ನೇಮಿಸುವಂತೆ, ಗ್ರಾಮಗಳಲ್ಲಿ pen wieding buchers ಇದ್ದರು. ಅವರೇ ಕುಲಗಳ ಲೆಕ್ಕವಿಡುತ್ತಿದ್ದ ಕುಲಕರ್ಣಿಗಳು. ಕಾಲ ಬದಲಾಗಿದೆ. ದ್ವೈತವು ಅದ್ವೈತವಾಗಿದೆ. ದೈತ್ಯವು ದೇವತ್ವದ ಕಡೆ ಸಾಗಬೇಕಿದೆ. ಬಸವಣ್ಣನಾದಿಯಾಗಿ ಸಮಾಜಕ್ಕೆ ವಿನಾಶಕಾರಿಯಾಗುವ ಬ್ರಾಹ್ಮಣ್ಯವನ್ನು ತೊರೆದವರು. ಇಂತಾ ವಿಚಾರವನ್ನೆ ನಾರಾಯಣಗುರು, ಕುವೆಂಪು ಹೇಳಿರುವುದು. ಶ್ರೀರಾಮಾಯಣ ದರ್ಶನಂ ಎಂಬುದು ಇಂಥ ಮಾರ್ಗದರ್ಶನ ತೋರುವ ರಾಮಾಯಣ. ಇಂಥಾ ರಾಮಾಯಣಗಳು ಮಹಾಭಾರತಗಳು ಜನಪದ ಮೂಲದಲ್ಲಿವೆ. 

  ಶಿಖಂಡಿ ಮೂಲಕ್ಕೂ ಮರುಗುವ ಮನಸ್ಸುಗಳಿವೆ. ಸೀತೆಯು single parent  ಆದಾಗ ಜನಪದರು ಮರುಗುತ್ತಾರೆ. ಲವಕುಶರು ರಾಮನೊಡನೆ ಅಯೋದ್ಯೆಗೆ ಹೊರಟಾಗ ಅವಳು ’ಅಯ್ಯೋ ನನಗೆ ಒಂದು ಹೆಣ್ಣು ಮಗುವಾದರೂ ಇದ್ದಿದ್ದರೆ’ ಎಂದು ಹಾತೊರೆಯುತ್ತಾಳೆ. ಧರೆಗಿಳಿಯುತ್ತಾಳೆ. ಇಂಥಾ ರಾಮಾಯಣವನ್ನು ಜನಪದರು ಜನಪದೀಯ ತಜ್ಞ ಸಾಹಿತಿಗಳು ಮಾತ್ರ ಹೇಳಬಲ್ಲರು. ಈ ರೀತಿಯ ಶಿಷ್ಟ ಹಾಗೂ ಗ್ರಾವಿಣ ತೌಲನಿಕ ಜಾನಪದವನ್ನು ಅರಿಯುವ ಕ್ರಿಯೆ ಇಂದಾಗಬೇಕು. ಕುವೆಂಪು ರಾಮಾಯಣದಲ್ಲಿ ಮಂಥರೆ, ಅನಲೆ, ಹನುಮ, ರಾವಣ-ಕುಂಭಕರ್ಣರ ಶಿಶುತ್ವ, ಸೀತೆಯ ಮಾತೃಮೂಲ ಸರಣಿಗಳು ಇವು ಬೆಳೆದುಬಂದ ಸಮಾಜದ ಮಾತೃಸಮಾಜದ ವಿಚಾರಗಳು. ಶ್ರೀರಾಮನು ಪಿತೃಸಮಾಜದವನು ಹೌದು. ಅದನ್ನು ಕವಿ ಹೇಗೆ ಮಾತೃಮೂಲಕ್ಕೆ ಒಡ್ಡಿ ಕಥನಗೊಳಿಸುತ್ತಾರೆಂಬುದೇ ಶಿಷ್ಟ ಜಾನಪದ. ಕುವೆಂಪು ಕಾದಂಬರಿಗಳೆರಡರಲ್ಲಿ ಜನಪದೀಯ ಅಂಶಗಳನ್ನು ಬೇರೆಯಾಗಿಡುವುದು ಸಾಧ್ಯವೇ ಇಲ್ಲ. ಜನಪದ ಅಂಶಗಳನ್ನು ಬಿಡಿಸಿದರೆ ಅದು ಒಂದು ಸಪ್ಪೆ ಸಾಹಿತ್ಯ. ಸಹ್ಯಾದ್ರಿ ಮೂಲದ ಹಳ್ಳಿಗಳ ಅಂತರಂಗವನ್ನು ಜೋಡಿಸಿ ಹೇಳಿರುವುದರಿಂದಲೇ ಅವರ ಕಾದಂಬರಿ ಸಾಹಿತ್ಯವು ಶಿಷ್ಟನು ಬರೆದ ಜಾನಪದ ವಸ್ತು. ಗೊರೂರು ಸಾಹಿತ್ಯವು ಶಿಷ್ಟನು ಬರೆದ ಜನಪದೀಯ ಮಾದರಿ.

 ಕರೀಂಖಾನರು ಭಾಷಾಂತರಗೊಳಿಸಿ ನೀಡಿದ ’ನಿಹಾರ’ ಪುಸ್ತಕದ ಕಥನಗಳು ಭಾರತೀಯ ಮೂಲದ ಹಿಂದೂ ಮುಸಲ್ಮಾನ ಸಮರಸ ವಿಚಾರಧಾರೆಗಳು. ಇಂಥವೆಲ್ಲಾ ಶಿಷ್ಟಸಾಹಿತ್ಯದ ಜನಪದೀಯ ಅಂಶಗಳು. ಧಾತುಗಳು. ಕೀರಂ. ನಾಗರಾಜು ಅವರು ಶಿಷ್ಟ ವಿದ್ವಾಂಸರು ಹೌದು. ಅವರ ಆಲೋಚನೆಗಳು ಅವಧೂತ ಮಾದರಿಯವು. ನಮ್ಮ ಅಲ್ಲಮ, ಮಾದಪ್ಪ, ಮಂಟೇದಯ್ಯನ ಪರಂಪರೆ ಇಂಥಾ ಆಲೋಚನೆಗಳಲ್ಲಿವೆ. ಶಿಷ್ಠಮೂಲದಲ್ಲಿ ಜನಪದ ವಿಚಾರಗಳನ್ನು ಬೇರ್ಪಡಿಸಿದರೆ ಅದು ಸಪ್ಪೆಯಾಗುತ್ತದಷ್ಟೆ ಅಲ್ಲ, ಜನಪದವನ್ನು ಬಿಟ್ಟು ಶಿಷ್ಟರು ಕೂಡ ಬರೆಯಲು ಆಗುವುದೇ ಇಲ್ಲ. ಇದಕ್ಕೆ ಪಂಪನೇ ಸಾಕ್ಷಿ. ಪಂಪನ ನುಡಿ, ಪದ್ಯ, ಗದ್ಯ ಅಂದರೆ ಅವನ ಚಂಪೂ ಮಾದರಿ ಸಂಪೂರ್ಣ ಜನಪದೀಯ ಗುಣದ್ದು. ’ನಿಚ್ಚಂಪೆಸತು’ ಎಂಬ ಅವನ ಶೈಲಿಯ ಗುಣವು ಅಚ್ಚಗನ್ನಡದ ಜನಪದೀಯ ಮಾದರಿ. ಇಡೀ ಪಂಪನ ಕಾವ್ಯವು ಗಾದೆಗಳ ಒಗಟುಗಳ ಆಚರಣೆಗಳ ವಿವಿಧ ಜನಪದೀಯ ವಿಚಾರಗಳ ವೈಚಾರಿಕ ನೀತಿಗಳ ಕಣಜ. ಅದು ಪಂಪನೇ ಹೇಳುವಂತೆ ಮಾರ್ಗ ಮತ್ತು ದೇಶೀ ಬೆಡಗಿನದು. ಇದನ್ನೆ ಮುಂದಿನ ಕನ್ನಡ ಕವಿಗಳು ಸಹಾ ಮುಂದುವರಿಸಿಕೊಂಡು ಹೋಗಿದ್ದಾರೆ.

  ಕುಮಾರವ್ಯಾಸನಿರಲಿ, ರತ್ನಾಕರವರ್ಣಿಯಿರಲಿ, ದೇವಚಂದ್ರನಿರಲಿ ಎಲ್ಲರೂ ಜನಪದ ಕಣಜಕ್ಕೆ ಕೈಹಾಕಿದವರೇ ಹೌದು. ವಚನ ಸಾಹಿತ್ಯ ಹಾಗೂ ದಾಸ ಸಾಹಿತ್ಯವಂತೂ ಅರೆ ಶಿಷ್ಟ ಹಾಗೂ ಸಂಪೂರ್ಣ ಜನಪದ. ಅಂದರೇನಾಯಿತು! ಶಿಷ್ಟ ಮತ್ತು ಜನಪದ ಎಂಬುದು ಕೇವಲ ಅಧ್ಯಯನಕ್ಕೋಸ್ಕರ ಗೆರೆ ಎಳೆಯುವ ಒಂದು ಮಾದರಿ. ನಾವು ಜಾನಪದವನ್ನು ಬೇರೆ ಮಾಡುತ್ತಾ ಶಿಷ್ಟ ಮೂಲದಿಂದ ದೂರ ಹೋದರೆ ಪ್ರತಿಭೆ ಪಾಂಡಿತ್ಯವಿಲ್ಲದ ಜನಪದವನ್ನು ತಟ್ಟಿದಂತಾಗುತ್ತದೆ. ಶಿಶುನಾಳನ-ಸರ್ವಜ್ಞನ ಜ್ಞಾನ ವಿಜ್ಞಾನವು ಜನಪದರ ಮೂಲದವು. ಮಂಟೇದಯ್ಯ, ಮಾದಯ್ಯ ನಿರ್ವಾಣಯ್ಯನ ಪರಂಪರೆಯು ಅವಧೂತ ಪರಂಪರೆಯ ಜ್ಞಾನ ವಿಜ್ಞಾನದವು. ಅವು ಅಲ್ಲಮ ಅಕ್ಕನ ತೆಕ್ಕೆಯವು. ಕಾಶ್ಮೀರದ ಲಲ್ಲುದೇವಿ, ಕನ್ನಡದ ಅಕ್ಕ, ಜನಪದರ ಸಿರಿ ಇವರೆಲ್ಲವೂ ನಮ್ಮೂರ ನಿಮ್ಮೂರ ದೇವಿ ಮೂಲದವು. ಹೀಗೆ ಅನತಿಕಾಲದ ಆಗುಹೋಗುಗಳನ್ನು ಕನಸುನನಸುಗಳನ್ನು ವಿಧಿವಿಧಾನಗಳನ್ನು ಶಿಷ್ಟ-ಗ್ರಾವಿಣ ಮೂಲಗಳೆಲ್ಲವನ್ನು ತಡಕುತ್ತ ಜ್ಞಾನ ವಿಜ್ಞಾನದ ಕಡೆಗೆ ಸಾಗುವ ಮಾದರಿ ಜಾನಪದ ಅಧ್ಯಯನಕ್ಕೆ ತೆರೆದುಕೊಳ್ಳಬೇಕು.
  ಜನಪದೀಯ ಅಧ್ಯಯನದ ಪ್ರಾರಂಭದ ಹಂತದಲ್ಲಿ ಅನಕ್ಷರಸ್ಥರ ಭಂಡಾರವನ್ನು ಅಕ್ಷರಸ್ಥರಿಂದ ಬೇರ್ಪಡಿಸಿ ನೋಡಲಾಯಿತು. ಪಾಶ್ಚಾತ್ಯ ಥಿಯರಿಗಳನ್ನು ಅಳವಡಿಸಿ ವಿಂಗಡಿಸಲಾಯಿತು. ಸಂಗ್ರಹ ಮತ್ತು ವಿಶ್ಲೇಷಣೆಗಳನ್ನು ಮಾಡುವಾಗ ಈಗಾಗಲೇ ಶಿಷ್ಟಮೂಲದಲ್ಲಿದ್ದ ದೇಶೀ ವಿಧಾನವನ್ನು ತೆಕ್ಕೆಗೆ ಗಕ್ಕನೆ ತೆಗೆದುಕೊಳ್ಳಲಿಲ್ಲ. ಹಾಗಾಗಿ ಜನಪದೀಯ ಅಧ್ಯಯನ ಮಾದರಿ ಚರ್ವಿತಚರ್ವಣವಾಗಲಾರಂಭಿಸಿತು. ಇದೆಲ್ಲವನ್ನು ಮುರಿದು ಕಟ್ಟಿಕೊಳ್ಳುತ್ತಾ ಜನಪದೀಯ ಅಧ್ಯಯನ ಸಾಗಬೇಕು. ಅದು ತುಸು ಸಾಧ್ಯವಾಗುತ್ತಲಿದೆ. ದೇವಿಪ್ರಸಾದ ಚಟ್ಟೋಪಾಧ್ಯಾಯ, ಆ.ಆ.ಕೋಸಂಬಿ, ನಮ್ಮ ಕನ್ನಡದ ಶಂಬಾ.ಜೋಷಿ ಮಾದರಿಗಳೆಲ್ಲವೂ ಜನಪದೀಯ ಅಧ್ಯಯನದ ವಿಧಿವಿಧಾನಗಳು. ಥೋರಾನ ಗಾಂಧಿಯ ಕಾಯಕ, ದೇಶೀಯ ಬದುಕು ವರ‍್ಡ್ಸ್‌ವರ್ತನ ಪರಿಸರ ತತ್ವ ಇಂದು ಸಮಾಜಕ್ಕೆ ಬೇಕಿವೆ. ಇಂಥಾ ಅಧ್ಯಯನಗಳು ಅಕಾಡೆಮಿಗಳ, ವಿಶ್ವವಿದ್ಯಾನಿಲಯಗಳ, ಹಂತಕ್ಕೂ ಹೆಚ್ಚಾಗಿ ಆವರಿಸಬೇಕು. ಪಂಪನ ’ಮಾನವ ಜಾತಿ ವಂದೇವಲಂ’ ನಿಂದ ಹಿಡಿದು ಕುವೆಂಪುವಿನ ’ವಿಶ್ವಮಾನವ ತತ್ವ’ದ ವರೆಗೆ ಒರೆ ಹಚ್ಚುವ ರೀತಿಯೇ ಜಾನಪದೀಯ ತತ್ವವಾಗಬೇಕು. ಜಾನಪದೀಯ School of thoughts  ಬದಲಾಗಿವೆ. ಇಂಥಾ ಬದಲಾವಣೆಯೇ ಜಾನಪದ ಜ್ಞಾನದಾರಿಯ ಅರಿವು.



ಡಾ|| ರಾಜೇಗೌಡ ಹೊಸಹಳ್ಳಿ
 ೪೧೩. ೧ನೇ ತಿರುವು, ಐಸೆಕ್ ರಸ್ತೆ, 
ಟೀಚರ‍್ಸ್ ಕಾಲನಿ, 
ನಾಗರಬಾವಿ, ಬೆಂ-೭೨.
 ( ೯೯೮೦೦೬೬೦೭೦)

ಕಾಮೆಂಟ್‌ಗಳಿಲ್ಲ: