ಶುಕ್ರವಾರ, ಜೂನ್ 20, 2014

ಈಗ ನಾವೇನು ಮಾಡಬೇಕು?

ಕೆ.ವಿ.ನಾರಾಯಣ
ಭಾಷಾ ತಜ್ಞ ಮತ್ತು ಕನ್ನಡ ಭಾಷಾ ಭಾರತಿ ಅಧ್ಯಕ್ಷ
ಈಗ ನಾವೇನು ಮಾಡಬೇಕು?: ಕೆ.ವಿ.ನಾರಾಯಣ


1. ಕನ್ನಡವನ್ನು ಒಂದು ಭಾಷೆಯಾಗಿ ಕಲಿಸಬೇಕೆಂಬುದಕ್ಕೆ ಈಗ ಯಾವ ಅಡ್ಡಿಯೂ ಇದ್ದಂತಿಲ್ಲ. 1989ರ ಕರ್ನಾಟಕ ಸರಕಾರದ ಆದೇಶ ಸಿಂಧುಗೊಂಡಿದೆ.

2. ಸುಪ್ರೀಂ ಕೋರ್ಟ್ ಎತ್ತಿಕೊಂಡ ಪ್ರಶ್ನೆಗಳಲ್ಲಿ 1994ರ ಕರ್ನಾಟಕ ಸರಕಾರದ ಆದೇಶದ 'ಮನ್ನಣೆ ಪಡೆದ ಶಾಲೆಗಳು ' ಎಂಬ ಮಾತಿನ ವ್ಯಾಪ್ತಿಯೊಳಗೆ ಅನುದಾನ ಪಡೆಯದ ಶಾಲೆಗಳೂ ಸೇರುತ್ತವೆಯೋ ಎಂಬುದೂ ಒಂದಾಗಿತ್ತು. ಈಗಿನ ದಾವೇದಾರರು ಅನುದಾನ ಪಡೆಯದ, ಆದರೆ ಸರಕಾರದ ಮನ್ನಣೆ ಪಡೆದ ಶಾಲೆಗಳ ಆಡಳಿತ ಮಂಡಲಿಯವರೇ ಇದ್ದಾರೆ. ಕರ್ನಾಟಕದ ಹೈಕೋರ್ಟ್ ಕೂಡ ಸರಕಾರ ಅನುದಾನ ನೀಡದಿದ್ದ ಮೇಲೆ ಆ ಶಾಲೆಗಳಲ್ಲಿ ಕಲಿಕೆ ಯಾವ ನುಡಿಯ ಮೂಲಕ ಆಗಬೇಕು ಎಂಬುದನ್ನು ಒತ್ತಾಯ ಮಾಡುವಂತಿಲ್ಲ ಎಂದೇ ಹೇಳಿತ್ತು. ಅಂದರೆ ಅನುದಾನ ಪಡೆಯದ ಶಾಲೆಗಳು ಎಂಬ ಒಂದು ಗುಂಪನ್ನು ಹುಟ್ಟು ಹಾಕಿದ್ದರಲ್ಲೇ ತಪ್ಪು ನಡೆದಿದೆ. ಇದನ್ನೀಗ ಸರಿಪಡಿಸಬೇಕು. ಮನ್ನಣೆ ಪಡೆಯ ಬೇಕೆಂದರೆ ಅನುದಾನ ಪಡೆಯಲೇಬೇಕೆಂದು ಷರತ್ತು ಹಾಕಬೇಕು. ಎಲ್ಲ ಶಾಲೆಗಳೂ ಸರಕಾರ ಮಾಡಬೇಕಾದ ಕೆಲಸವನ್ನು ಮಾಡುತ್ತಿವೆಯಾದ್ದರಿಂದ ತನ್ನ ಕೆಲಸವನ್ನು ಮಾಡುತ್ತಿರುವ ಎಲ್ಲ ಶಾಲೆಗಳಿಗೂ ತನ್ನ ಷರತ್ತಿನ ಮೇಲೆಯೇ ಅನುದಾನ ಪಡೆಯಲೇಬೇಕೆಂದು ಸರಕಾರ ಹೇಳಬೇಕಾಗಿದೆ. ಅಲ್ಲದೆ ಮನ್ನಣೆ ಪಡೆದ ಎಂಬ ಮಾತಿನೊಳಗೆ ಅನುದಾನ ಪಡೆಯದ ಶಾಲೆಗಳು ಬರುತ್ತವೆ ಎಂದೂ ಸುಪ್ರೀಂಕೋರ್ಟ್ ಇಂದಿನ ತೀರ್ಪಿನಲ್ಲಿ ಹೇಳಿದೆ.

3. ಈಗ ಏನು ಮಾಡಬೇಕು? ಒಂದು ಭಾಷೆಯನ್ನು ಹತ್ತು ವರ್ಷಗಳ ಕಾಲ ಕಲಿಸುತ್ತಲೇ ಹೋಗುವ ಇಂದಿನ ಕಲಿಕೆಯ ಬಗೆಯನ್ನು ಮೊದಲು ಕೈ ಬಿಡಬೇಕು. ಯಾವುದೇ ಭಾಷೆಯನ್ನು ಮಾತಾಡುವ, ಆಲಿಸುವ, ಓದುವ ಮತ್ತು ಬರೆಯುವ ಕೌಶಲಗಳನ್ನು ಬೇರೆ ಬೇರೆ ಹಂತಗಳಲ್ಲಿ ಕಲಿಸುವ ಬಗೆಯನ್ನು ಜಾರಿಗೆ ತರಬೇಕು. ಕನ್ನಡ ಮನೆ ಮಾತು ಅಲ್ಲದ ಮಕ್ಕಳಿಗೆ ಕನ್ನಡ ಮಾತಾಡುವುದನ್ನು ಮೊದಲು, ಬಳಿಕ ಓದುವುದನ್ನು ಕಲಿಸುವ ಮಾದರಿಯನ್ನು ಜಾರಿಗೆ ತರಬೇಕು. ಕನ್ನಡ ಮನೆ ಮಾತಾಗಿರುವ ಮಕ್ಕಳಿಗೆ ಕನ್ನಡ ಓದುವ ಮತ್ತು ಬರೆಯುವ ಕೌಶಲಗಳನ್ನು ಕಲಿಸುತ್ತಿರುವ ಇಂದಿನ ಮಾದರಿಯಲ್ಲಿ ಹಲವು ಬದಲಾವಣೆಗಳನ್ನು ತರಬೇಕಾಗಿದೆ.

4. ಕನ್ನಡ ಮನೆ ಮಾತು ಅಲ್ಲದ ಮಕ್ಕಳ ಹಕ್ಕುಗಳನ್ನು ಕುರಿತು ಸುಪ್ರೀಂಕೋರ್ಟ್ ಹೆಚ್ಚಿನ ಒತ್ತನ್ನು ನೀಡಿದೆ. ಸರಿಯೇ. ಯಾವ ಮಗುವೇ ಆಗಲಿ ಅದು ಮನೆ ಮಾತನ್ನು ಇಲ್ಲವೇ ಕನ್ನಡವನ್ನು ಕಲಿಯಬೇಕು ಎಂಬ ಸರಕಾರದ ನಿಲುವನ್ನು ಕೋರ್ಟ್‌ಗಳು ಒಪ್ಪಿಕೊಂಡಿವೆ. ಈಗ ಅದು ಯಾವ ಅಡ್ಡಿಯೂ ಇಲ್ಲದಂತೆ ಜಾರಿಗೊಳ್ಳಬೇಕಾದರೆ ತಕ್ಕ ಕಲಿಕೆ ಏರ್ಪಾಡುಗಳನ್ನು ಮಾಡಬೇಕಾಗುತ್ತದೆ. ಈಗಿನ ಬಗೆ ಕಲಿಕೆಗೆ ನೆರವಾಗುವಂತಿಲ್ಲ. ಹಾಗಾಗಿಯೇ ವಿರೋಧಿಗಳನ್ನು ಹುಟ್ಟಿಹಾಕುತ್ತಿದೆ.

6. ಕರ್ನಾಟಕ ಸರಕಾರ 1964ರ ತ್ರಿಭಾಷಾ ನೀತಿಯನ್ನು ಮರುಪರಿಶಿಲನೆ ಮಾಡಲು ಮುಂದಾಗಬೇಕು. ಕಲಿಕೆಯಲ್ಲಿ ಕನ್ನಡಕ್ಕೆ ಜಾಗವನ್ನು ಒದಗಿಸಲು ಅನುಕೂಲವಾಗುವ ರೀತಿಯಲ್ಲಿ ತನ್ನ ಭಾಷಾ ನೀತಿಯನ್ನು ರೂಪಿಸಬೇಕು. ಕನ್ನಡವನ್ನು ಹತ್ತು ವರ್ಷಗಳ ಶಾಲಾ ಕಲಿಕೆಯ ಯಾವ ಹಂತದಲ್ಲಿ ಮತ್ತು ಎಷ್ಟು ವರ್ಷಗಳ ಕಾಲ ಕಲಿಸಬೇಕು ಎಂಬುದನ್ನು ನಿಗದಿ ಮಾಡಬೇಕು. ಎಲ್ಲರೂ ಒಪ್ಪಿಕೊಳ್ಳುವ ಬಗೆಯಲ್ಲಿ ಈ ನೀತಿಯನ್ನು ಜಾರಿಗೆ ತರಬೇಕಾದರೆ ಅದಕ್ಕೆ ಕಲಿಕೆಯ ಮಾದರಿಗಳನ್ನು ರೂಪಿಸಬೇಕು.

7. ಕಲಿಕೆ ಯಾವ ಭಾಷೆಯ ಮೂಲಕ ನಡೆದರೆ ಸರಿ ಎಂಬ ಪ್ರಶ್ನೆಯನ್ನು ಕೋರ್ಟ್ ಎತ್ತಿಕೊಂಡಂತೆ ತೋರುವುದಿಲ್ಲ. ಇಂಥದೇ ಭಾಷೆಯ ಮೂಲಕ ಕಲಿಯಬೇಕು ಎಂಬ ಒತ್ತಾಯವನ್ನು ಹೇರುವುದು ಸರಿಯೇ ಎಂಬ ಪ್ರಶ್ನೆಯನ್ನು ಮಾತ್ರ ಎತ್ತಿಕೊಂಡು ಉತ್ತರಿಸಿದೆ. ಈಗ ತಾಯ್ನುಡಿಯ ಮೂಲಕವೇ ಕಲಿಕೆ ನಡೆದರೆ ಸರಿ ಮತ್ತು ಬೇರೆ ನುಡಿಯ ಮೂಲಕ ನಡೆಯುವ ಕಲಿಕೆ ಊನಗೊಳ್ಳುತ್ತದೆ ಎಂಬುದನ್ನು ಎತ್ತಿ ತೋರುವ ಅಧ್ಯಯನಗಳನ್ನು ಮಾಡಬೇಕಾಗಿದೆ. ಈಗ ಇವೆಲ್ಲವೂ ಕೇವಲ ಭಾವುಕ ನೆಲೆಯಲ್ಲಿ ಮತ್ತು ಹೇಳಿಕೆಗಳ ನೆಲೆಯಲ್ಲಿ ಮಾತ್ರ ನಿಂತು ಬಿಟ್ಟಿವೆ.

ಕಾಮೆಂಟ್‌ಗಳಿಲ್ಲ: