ಶುಕ್ರವಾರ, ಜೂನ್ 27, 2014

ಕೊರಗರ ಬಳಿ ಇತ್ತು ಕಂಚಿನ ಡೋಲುಕೊರಗರ ಡೋಲಿನ (ಕೊರಗರು ಡೋಲಿಗೆ 'ಕಡ್ಡಾಯಿ' ಎನ್ನುತ್ತಾರೆ) ಕುರಿತು ಹಲವಾರು ಕಥೆಗಳು ಜನಪದರ ಬಾಯಿಯಲ್ಲಿ ಹರಿದಾಡುತ್ತಿತ್ತು. ಮನರಂಜನೆಗೋ ವಾಸ್ತವವೋ ಅಂತೂ ಬಾಯಿಯಲ್ಲಿ ಚಾಲ್ತಿಯಲ್ಲಿತ್ತು. ಒಂದು ಕಾಲದಲ್ಲಿ ಕೊರಗ ಜನಾಂಗವು ಲೋಹದ ಕಡ್ಡಾಯಿ ಬಳಸುತ್ತಿದ್ದರು ಎಂಬ ಇತಿಹಾಸಕ್ಕೆ ಪೂರಕವಾದ ಮೌಖಿಕ ಕಥೆಯೊಂದು ನಿಮಗಾಗಿ..

ಉಡುಪಿ ಜಿಲ್ಲೆಯ ಹಿರಿಯಡ್ಕ ಗ್ರಾಮದ, ಪಡ್ಡಂಬೂಡು ಜೈನ ಮನೆತನದ ವ್ಯಾಪ್ತಿಯಲ್ಲಿ ಅಜಲು ಚಾಕರಿ ಮಾಡುತ್ತಿದ್ದ ಕೊರಗರು 'ಕಂಚಿನ ಕಡ್ಡಾಯಿ' ಹೊಂದಿದ್ದರು. ಕ್ರಿ ಶ 1783 - 84 ರಲ್ಲಿ ಟಿಪ್ಪು ಸುಲ್ತಾನನ ಕಡೆಯವರು ಕರಾವಳಿ ಕರ್ನಾಟಕದತ್ತ ದಾಳಿ ನಡೆಸಿದರು. ಒಮ್ಮೆ ಸುಲ್ತಾನನ ದಂಡು ಹಿರಿಯಡ್ಕಕ್ಕೆ ಭಾಗದತ್ತ ಆಗಮಿಸಿ, ಲೋಹದ ಮೂರ್ತಿ, ಲೋಹದ ಸರಂಜಾಮುಗಳನ್ನು - ಮದ್ದು ಗುಂಡು ತಯಾರಿಸಲು ಬೆಳ್ತಂಗಡಿ ಸಮೀಪದ ಜಮಾಲಗಡ ಕೋಟೆಗೆ ಕೊಂಡೊಯ್ದಿದ್ದರು. ಇದನ್ನರಿತ ಜೈನ ಆಳ್ವಿಕೆಯ ಬೀಡಿನವರು ಕಂಚಿನ ಕಡ್ಡಾಯಿ ಸುಲ್ತಾನರ ಪಾಲಾಗಬಾರದೆಂಬ ಮುಂಜಾಗ್ರತೆಯಿಂದಾಗಿ - ಕೊರಗರಿಗೆ ಕಡ್ಡಾಯಿಯನ್ನು ಬೀಡಿನ ಬಾವಿಗೆ ಹಾಕುವಂತೆ ಹೇಳಿದರು. ಹೀಗೆ ಕೊರಗರ ಕಂಚಿನ ಕಡ್ಡಾಯಿ ನೀರು ಪಾಲಾಯ್ತು. ಕಳೆದುಕೊಂಡ ಕಂಚಿನ ಕಡ್ಡಾಯಿ ಮತ್ತೆಂದೂ ದಕ್ಕಿಸಿಕೊಳ್ಳಲಾಗಿಲ್ಲ. ಇದನ್ನು ಬಾಯ್ದೆರೆಯ ಕಥೆಯಾಗಿ ಕೊರಗ ಜನಾಂಗದವರು ಈಗಲೂ ನೆನಪಿಸಿಕೊಳ್ಳುತ್ತಾರೆ.

ಕಂಚಿನ ಕಡ್ಡಾಯಿ ಮಾತ್ರವಲ್ಲ, ಕಂಚಿನ ಪಾತ್ರೆಗಳೂ ಕೊರಗರಲ್ಲಿ ವ್ಯಾಪಕ ಬಳಕೆಯಲ್ಲಿತ್ತು. ಮಂಗಳೂರು ತಾಲೂಕಿನ ಕಡಂದಲೆ ಗ್ರಾಮದ ಸಚ್ಚೇರಿಪೇಟೆ ಕೊರಗರ ಕಾಲೋನಿಯ ಪ್ರತಿ ಕೊಟ್ಟ (ಮನೆ) ಕೊಟ್ಟದಲ್ಲೂ ಕಂಚಿನ ಬಟ್ಟಲು ಉಪಯೋಗಿಸುತ್ತಿದುದನ್ನು ಹಿರಿಯರು ಈಗಲೂ ನೆನಪಿಸಿಕೊಳ್ಳುತ್ತಾರೆ.
- ಹೃದಯ

ಕಾಮೆಂಟ್‌ಗಳಿಲ್ಲ: