ಗುರುವಾರ, ಅಕ್ಟೋಬರ್ 31, 2013

ಜಾನಪದದ ಕನ್ನಡ ಮತ್ತು ಕರ್ನಾಟಕ

-ಅರುಣ್ ಜೋಳದಕೂಡ್ಲಿಗಿ
 ಮತ್ತೊಂದು ಕನ್ನಡ ರಾಜ್ಯೋತ್ಸವ ಬಂದಿದೆ. ಈ ನವೆಂಬರ್ ನಲ್ಲಿ ಕನ್ನಡದ ಬಗ್ಗೆ ಉಬ್ಬುಮಾತುಗಳು ಬಲೂನಿನಂತೆ ಆಕಾರ ಪಡೆಯುತ್ತವೆ. ಮತ್ತಾರದೋ ಸೂಜಿ ಚುಚ್ಚುವ ತನಕ ದುಂಡಗೆ ಬದುಕುತ್ತವೆ. ಕನ್ನಡ ಉಳಿಸುವ ಸಂಘಟನೆಗಳು ಬಾವುಟವನ್ನು ಎತ್ತಿ ಆಡಿಸುತ್ತಾರೆ. ಶಾಲೆಗಳಲ್ಲಿ ಉರುಹೊಡೆದ ಏಕೀಕರಣದ ಮಾತುಗಳನ್ನು ಪುನರುಚ್ಚರಿಸುತ್ತಾರೆ. ಎಲ್ಲಿಯೋ ಕಳೆದುಹೋಗಿದ್ದ ಕನ್ನಡಾಭಿಮಾನ ದಿಗ್ಗನೆದ್ದು ತಿಂಗಳು ಪೂರ್ತಿ ಎಚ್ಚರವನ್ನು ಕಾಯ್ದುಕೊಳ್ಳುತ್ತದೆ.
ಇಂತಹ ಸಂದರ್ಭದಲ್ಲಿ ಕರ್ನಾಟಕದಲ್ಲಿ ನಡೆದ ಜಾನಪದ ಅಧ್ಯಯನಗಳನ್ನು ಹಿನ್ನೆಲೆಯಾಗಿಟ್ಟುಕೊಂಡು, ಜಾನಪದದ ಕನ್ನಡ ಕರ್ನಾಟಕದ ಒಂದು ತಿಳಿವನ್ನು ಮಂಡಿಸುವುದು ಸೂಕ್ತ ಅನ್ನಿಸುತ್ತದೆ. ಇದು ಕರ್ನಾಟಕ, ಕನ್ನಡ ಎಂಬ ತಿಳಿವು ರೂಪುಗೊಂಡದ್ದರ ಒಂದಷ್ಟು ಎಳೆಗಳನ್ನು ಕಾಣಿಸಬಹುದು. ಅಥವಾ ನಮ್ಮ ಕನ್ನಡ ಕರ್ನಾಟಕ ಎಂಬ ತಿಳುವಳಿಕೆಗೆ ಹೆಚ್ಚುವರಿಯ ಒಂದೆರಡು ಸಂಗತಿಗಳನ್ನಾದರೂ ಜೋಡಿಸಬಹುದು. ಇಲ್ಲಿ ಅಂಕಣದ ಲಘುದಾಟಿ ಚೂರು ಗಂಭೀರವಾದಂತೆ ಅನ್ನಿಸಬಹುದು. ಇದನ್ನು ಹೀಗೆಯೇ ಹೇಳಬೆಕೆನ್ನಿಸಿದ್ದರ ಪರಿಣಾಮವಿದು.
ಕರ್ನಾಟಕದಲ್ಲಿ ನಡೆದ ಜಾನಪದ ಅಧ್ಯಯನಗಳನ್ನು ಕನ್ನಡ ಜಾನಪದ ಎಂತಲೂ, ಕರ್ನಾಟಕ ಜಾನಪದ ಎಂತಲೂ ಕರೆಯುತ್ತಾ ಬರಲಾಗಿದೆ. ಅಂದರೆ ಕನ್ನಡ ಭಾಷೆಯಲ್ಲಿ ದೊರೆಯುವ ಜನಪದ ಸಾಹಿತ್ಯಿಕ, ಆಚರಣಾತ್ಮಕ ಆಕರಗಳನ್ನು ಕುರಿತ ಅಧ್ಯಯನವೆಂತಲೂ, ಕರ್ನಾಟಕ ಗಡಿ ಪ್ರದೇಶದ ವ್ಯಾಪ್ತಿಯಲ್ಲಿ ಬರುವ ಜನ ಸಮುದಾಯದ ಲೋಕeನದ ತಿಳುವಳಿಕೆ ಕುರಿತ ಅಧ್ಯಯನ ಎಂತಲೂ ಅಂದುಕೊಳ್ಳಬಹುದು. ಅಂತೆಯೇ ಈ ಬಗೆಯ ಕಲ್ಪನೆಯೇ ಅಮೂರ್ತವಾದದ್ದು ಅಥವಾ ಭಾವನಾತ್ಮಕವಾಗಿ ಕಟ್ಟಲ್ಪಟ್ಟದ್ದು.
ಇದು ಭಾವನಾತ್ಮಕವಾಗಿ ಒಂದುಗೂಡಿಸುವ ಕೃತಕ ನಿರ್ಮಾಣ ಪ್ರಕ್ರಿಯೆಯ ಒಂದು ಭಾಗ. ಕನ್ನಡ ಮತ್ತು ಕರ್ನಾಟಕತ್ವವನ್ನು ಭಾಷಿಕ ನೆಲೆಯಲ್ಲಿ, ಭೌಗೋಳಿಕ ನೆಲೆಯಲ್ಲಿ ನಿರ್ವಚಿಸಿಕೊಳ್ಳುವ ಸಾಹಿತ್ಯದ ಹಲವು ಆಯಾಮಗಳಲ್ಲಿ ಜಾನಪದವೂ ಒಂದು. ಜಾನಪದ ಅಧ್ಯಯನಗಳನ್ನು ಕನ್ನಡದೊಂದಿಗೆ ಜೋಡಿಸುವುದು, ಕರ್ನಾಟಕದ ಭೌಗೋಳಿಕ ಎಲ್ಲೆಯ ಜೊತೆ ಸಮೀಕರಿಸುವುದು ಈಗಲೂ ನಡೆಯುತ್ತಿದೆ. ಈ ಬಗೆಯ ತಿಳುವಳಿಕೆಯು ಕನ್ನಡದಲ್ಲಿ ನಡೆದ ಜಾನಪದ ಅಧ್ಯಯನಗಳಲ್ಲಿ ಪ್ರಬಲವಾಗಿದೆ. ಈ ಕುರಿತ ಟಿಪ್ಪಣಿ ರೂಪದ ಬರಹವಿದು.
`ಕನ್ನಡ’ ಎನ್ನುವ ಭಾಷೆಯ ಅಂತಃಸತ್ವವನ್ನು ಅರಿಯಲು, ಕರ್ನಾಟಕ ಎನ್ನುವ ರಾಜ್ಯದ ಸಾಂಸ್ಕೃತಿಕ ವೈವಿಧ್ಯಗಳನ್ನು ಗುರುತಿಸಲು ಜಾನಪದ ಆಕರಗಳು ಮತ್ತೆ ಮತ್ತೆ ಬಳಕೆಯಾಗುತ್ತಿವೆ. ಇಲ್ಲಿ ಜಾನಪದ ಆಕರಗಳ ಮೂಲಕ ಹುಟ್ಟುವ ತಿಳುವಳಿಕೆ ಯನ್ನು ಆಧರಿಸಿ ’ಕನ್ನಡ’, ’ಕರ್ನಾಟಕ’ ಕಲ್ಪನೆ ರೂಪುಗೊಳ್ಳುವುದಕ್ಕಿಂತ, ಕನ್ನಡ ಮತ್ತು ಕರ್ನಾಟಕದ ಚೌಕಟ್ಟುಗಳಿಗೆ ಜಾನಪದ ಆಕರಗಳನ್ನು ಜೋಡಿಸುವ ಮಾದರಿ ಹೆಚ್ಚು ಬಳಕೆಯಾಗಿದೆ. ಕನ್ನಡ, ಕರ್ನಾಟಕತ್ವದ ಅನನ್ಯತೆಗಳು ಜಾನಪದ ಅಧ್ಯಯನಗಳಲ್ಲಿ ಹೇಗೆ ಬಿಂಬಿತವಾಗಿದೆ ಅಥವಾ ಈ ಬಗೆಯ ಅನನ್ಯತೆಯ ಹುಡುಕಾಟವೇ ಹೇಗೆ ಜಾನಪದ ಅಧ್ಯಯನಗಳ ತಿಳುವಳಿಕೆಯ ಮೇಲೆ ಸವಾರಿ ಮಾಡಿದೆ ಎನ್ನುವ ಕುರಿತು ಚರ್ಚಿಸುವ ಅಗತ್ಯವಿದೆ.
ಭಾಷಿಕ ನೆಲೆ
ಕರ್ನಾಟಕ ಏಕೀಕರಣದ ಸಂದರ್ಭದಲ್ಲಿ ’ಕನ್ನಡ’ ಭಾಷೆ ಮಾತನಾಡುವವರನ್ನು ’ಕರ್ನಾಟಕ’ ಎಂಬ ಭೌಗೋಳಿಕ ನೆಲೆಯಲ್ಲಿ ಒಂದುಗೂಡಿಸಲು ಮತ್ತು ಈ ಭೌಗೋಳಿಕ ಎಲ್ಲೆಯಲ್ಲಿದ್ದ ಭಿನ್ನತೆಗಳ ತೊಡೆದು ಹಾಕುವ ಸಮಾನ ಅಂಶಗಳಾಗಿ ಹುಡುಕಾಟ ನಡೆಯುತ್ತಿತ್ತು. ಆಗಿನ ಕಾಲಕ್ಕೆ ಇಡೀ ಕರ್ನಾಟಕವನ್ನು ತಲುಪುವ ಮಾಧ್ಯಮಗಳೆಂದರೆ ನಾಟಕ ಮತ್ತು ಸಿನಿಮಾ. ಇವನ್ನು ಹೊರತುಪಡಿಸಿದರೆ ಇಡಿಯಾಗಿ ಕರ್ನಾಟಕದ ಹಳ್ಳಿ ಹಳ್ಳಿಗಳಲ್ಲೂ ಇದ್ದ ಸಮಾನ ಅಂಶವೆಂದರೆ ಜಾನಪದ. ಜನಪದ ಕತೆ, ಗೀತೆ, ಗಾದೆ, ಒಗಟು, ಕಲೆ, ಆಚರಣೆ ಮುಂತಾದ ವಿಷಯಗಳಲ್ಲಿ ಪ್ರಾದೇಶಿಕ ಭಿನ್ನತೆಗಳಿದ್ದರೂ, ಸಾಮಾನ್ಯ ಜನರ ಅಭಿವ್ಯಕ್ತಿಯ ಪ್ರಧಾನಧಾರೆಯಂತೆ ’ಜಾನಪದ ಲೋಕ’ ಅಧ್ಯಯನಕಾರರಿಗೆ ಕಂಡಿತು. ಇದರಿಂದಾಗಿ ಕನ್ನಡವನ್ನು ಭಾಷಿಕವಾಗಿ ಕಟ್ಟಲು, ಕರ್ನಾಟಕವೆಂಬ ಭೌಗೋಳಿಕ ಏಕತೆಯನ್ನು ತರಲು ಜನಪದವನ್ನು ಒಂದು ಸಾಂಸ್ಕೃತಿಕ ಶಕ್ತಿಯನ್ನಾಗಿ ಬಳಸಿಕೊಳ್ಳಲಾಯಿತು. ಇದು ಜನಪದ ಕುರಿತ ಆಲೋಚನ ಮಾದರಿಗಳನ್ನು ಪ್ರಭಾವಿಸಿತು. ಹಾಗಾಗಿ ’ಕನ್ನಡ’ ’ಕರ್ನಾಟಕ’ವನ್ನು ಭಾವನಾತ್ಮಕವಾಗಿ ವೈಭವೀಕರಿಸುವ ನಿರ್ವಚನಗಳೇ ಜಾನಪದ ಅಧ್ಯಯನದ ವಿಶ್ಲೇಷಣೆಗಳಲ್ಲಿ ಬಳಕೆಯಾದವು.
ಎಚ್.ಎಂ.ಮಹೇಶ್ವರಯ್ಯ ಅವರು ಸಂಪಾದಿಸಿದ ’ಸಂಕ್ಷಿಪ್ತ ವಿವರಣಾತ್ಮಕ ಕನ್ನಡ ಜಾನಪದ ಗ್ರಂಥಸೂಚಿ’ಯನ್ನು ಅವಲೋಕಿಸಿದರೆ ೬೧ ಕೃತಿಗಳು ’ಕನ್ನಡ ಜಾನಪದ’ ಎನ್ನುವ ಶೀರ್ಷಿಕೆಯಲ್ಲಿ, ೫೧ ಕೃತಿಗಳು ’ಕರ್ನಾಟಕ ಜಾನಪದ’ ಎಂಬ ಶೀರ್ಷಿಕೆಯಲ್ಲಿ ಪ್ರಕಟವಾಗಿವೆ. ಈ ಕೃತಿಗಳಲ್ಲಿ ’ಕನ್ನಡ’, ’ಕರ್ನಾಟಕ’ ಎನ್ನುವುದಕ್ಕೆ ಸ್ಪಷ್ಟವಾದ ವ್ಯಾಖ್ಯಾನಗಳೇನಿಲ್ಲ, ಬದಲಾಗಿ ’ಕನ್ನಡ’ ಭಾಷೆಯನ್ನು ಪ್ರತಿನಿಧಿಸುವ, ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸುವ ಕೃತಿಗಳಿವು ಉದಾ: ನಂ. ತಪಸ್ವೀಕುಮಾರ್ ಅವರ ’ಕನ್ನಡ ಜನಪದ ಒಗಟುಗಳ ಸಾಂಸ್ಕೃತಿಕ ಅಧ್ಯಯನ’ (೧೯೭೯), ವೀರಣ್ಣ ದಂಡೆಯವರ ’ಕನ್ನಡ ಜಾನಪದ ಪ್ರಜ್ಞೆ’(೧೯೯೩), ಶ್ರೀಕಂಠ ಕೂಡಿಗೆ ಅವರ ’ಕನ್ನಡ ಲಾವಣಿಗಳು’(೧೯೯೯), ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರ ’ಕರ್ನಾಟಕದ ಜನತೆಯ ಸಂಸ್ಕೃತಿ’(೧೯೭೩), ಹಂಪ ನಾಗರಾಜಯ್ಯ ಅವರ ’ಕರ್ನಾಟಕದ ಜಾತ್ರೆಗಳು’(೧೯೮೧) ಇತ್ಯಾದಿ. ಇವುಗಳೆಲ್ಲವೂ ಕರ್ನಾಟಕದ, ಕನ್ನಡದ ಭಿನ್ನ ಚಹರೆಗಳನ್ನು ಹಲವು ನೆಲೆಗಳಲ್ಲಿ ಪರಿಚಯಿಸುತ್ತವೆ. ಬೇಂದ್ರೆಯವರು ’ಗರತಿ ಹಾಡು’(೧೯೩೧) ಸಂಕಲನಕ್ಕೆ ಮುನ್ನುಡಿ ಬರೆಯುತ್ತ ಭಾಷಿಕವಾಗಿ ಕನ್ನಡವನ್ನು ನಿರ್ವಚಿಸುವ ಬಗೆ ಹೀಗಿದೆ: “ಬೀದರ್ ಹೈದರಾಬಾದುಗಳ ಉತ್ತರದ ತುದಿಯಿಂದ ನೀಲಗಿರಿ, ಕೊಯಮತ್ತೂರಿನ ದಕ್ಷಿಣದ ತುದಿವರೆಗೆ ಹಬ್ಬಿರುವ ಕರ್ನಾಟಕವು ಒಂದೆಂಬುದಕ್ಕೆ ಒಂದು ನಿದರ್ಶವು ಈ ಹಾಡುಗಳಲ್ಲಿದೆ. ಅಲ್ಪಸ್ವಲ್ಪ ಪಾಠ ಭೇದದಿಂದ ಇವುಗಳಲ್ಲಿ ಅರ್ಧಕರ್ಧ ಹಾಡುಗಳು ಎಲ್ಲ ಕನ್ನಡ ಮನೆಗಳಲ್ಲಿ ಹರಡಿಕೊಂಡಿರಲು ಸಾಕು. ಈ ಜನಪದ ವೇದವೇ. ಎಲ್ಲ ಕನ್ನಡಿಗರಿಗೂ ತಾಯ ಮೊಲೆ ಹಾಲು ಎಂಬುದು ಇದನ್ನೋದಿದವರ ಅನುಭವಕ್ಕೆ ಬಾರದೆ ಇರದು, ಈ ಅನುಭವದಿಂದ ಉಂಟಾಗುವ ಐಕ್ಯಭಾವವು ಅಂತಿಂತಹದಲ್ಲ. ಪ್ರಜಾಪ್ರಭುತ್ವದ ಈ ಕಾಲದಲ್ಲಿ ಜನಸಾಮಾನ್ಯರ ಹೃದಯದೊಳಗಿನ ಸುಖದ ಕನಸೆಂತಹದೆಂಬುದನ್ನು ಕಂಡುಕೊಳ್ಳಲು ಇದರಂತಹ ಬೇರೆ ಕೈಗನ್ನಡಿಯಿಲ್ಲ (ಸುವರ್ಣ ಜಾನಪದ ಸಂ:೧, ಪು: ೧೦)ಎನ್ನುತ್ತಾರೆ.
ಪ್ರಜಾಪ್ರಭುತ್ವದ ವ್ಯವಸ್ಥೆಯನ್ನು ಭದ್ರವಾಗಿಸಲು ಕನ್ನಡ ಭಾಷಿಕ ವಲಯವನ್ನು ಒಂದುಗೂಡಿಸುವ ಆಶಯವಾಗಿ ಜನಪದ ಸಾಹಿತ್ಯವನ್ನು ಬೇಂದ್ರೆಯವರು ನಿರ್ವಚಿಸುತ್ತಾರೆ. ದೇವುಡು, ಬೆಟಗೇರಿ ಕೃಷ್ಣಶರ್ಮ, ಅರ್ಚಕ ಬಿ.ರಂಗಸ್ವಾಮಿ, ಬಿ.ಎಸ್. ಗದ್ದಿಗಿಮಠ ಮುಂತಾದವರ ನಿಲುವೂ ಕೂಡ ಹೆಚ್ಚು ಕಡಿಮೆ ಇದೇ ಆಗಿತ್ತು. ಇಲ್ಲಿ ಬ್ರಿಟಿಷ್ ಆಡಳಿತದ ನಂತರ ನಮ್ಮದೇ ಆದ ಆಡಳಿತಾತ್ಮಕ ಸಂರಚನೆಗೆ ಹೀಗೆ ಭಾಷಿಕ ವಲಯವೊಂದು ಒಗ್ಗೂಡುವುದು ಆ ಕಾಲದ ಒತ್ತಡವೂ ಆದಂತಿದೆ.
ಕರ್ನಾಟಕದ ಹಲವು ಸಾಂಸ್ಕೃತಿಕ, ಭಾಷಿಕ ವೈವಿಧ್ಯಗಳನ್ನು ’ಕನ್ನಡ’ ಭಾಷೆಯಲ್ಲಿ ತಿಳಿಯಲು ಅನುಕೂಲವಾದಂತೆ, ಕರ್ನಾಟಕದ ಭೌಗೋಳಿಕ ವ್ಯಾಪ್ತಿಯಲ್ಲಿ ಬರುವ ಹಲವು ಭಿನ್ನ ಭಾಷೆಗಳನ್ನು ಕನ್ನಡೀಕರಿಸಿ ಅವುಗಳ ಅನನ್ಯತೆಗೆ ಧಕ್ಕೆ ಒದಗಿ ಅನಾನುಕೂಲವಾಗಿಯೂ ಪರಿಣಮಿಸಿದೆ. ’ಕನ್ನಡ ಜಾನಪದ’ ಎನ್ನುವಾಗ ಕಲ್ಪಿಸುವ ’ಕರ್ನಾಟಕ’ ಕನ್ನಡದ್ದು. ಆದರೆ ವಾಸ್ತವವಾಗಿ ಹಾಗಿಲ್ಲ, ಕರ್ನಾಟಕ ಬಹುಸಂಖ್ಯಾತ ಕನ್ನಡಿಗರಿಂದಲೂ ಅಲ್ಪಸಂಖ್ಯಾತ ತುಳು, ಕೊಂಕಣಿ, ಲಂಬಾಣಿ, ಹಿಂದಿ, ಮರಾಠಿ, ಉರ್ದು, ತೆಲುಗು, ತಮಿಳು, ಬುಡಕಟ್ಟುಗಳ ಭಾಷೆಗಳು ಹೀಗೆ ಇತರೇ ಹಲವು ಭಾಷೆಗಳನ್ನು ಮಾತನಾಡುವವರೂ ಕರ್ನಾಟಕದಲ್ಲಿದ್ದಾರೆ. ಆದರೆ ಈ ಬಗೆಯ ಎಲ್ಲಾ ಅಲ್ಪಸಂಖ್ಯಾತ ಉಪಭಾಷಿಕರನ್ನು ಕನ್ನಡದ ಪ್ರಮಾಣಿತ ಭಾಷೆಯಲ್ಲಿ ಪರಿಚಯಿಸುವ ಮತ್ತು ಅವರ ಜಾನಪದವನ್ನು ಕನ್ನಡದಲ್ಲೇ ನಿರ್ವಚಿಸುವ ಕ್ರಮ ಕರ್ನಾಟಕದಲ್ಲಿ ಹೆಚ್ಚು ಬಳಕೆಯಾಗಿದೆ. ಇದಕ್ಕೆ ಅಪವಾದವೆಂದರೆ ತುಳು ಭಾಷೆ. ಈ ಭಾಷೆಯ ಮೂಲಕವೇ ತುಳುವ ಸಂಸ್ಕೃತಿಯನ್ನು ಅಧ್ಯಯನ ಮಾಡುವ ಗಂಭೀರ ಸಂಶೋಧನೆಗಳು ನಡೆದಿವೆ. ಕಾರಣ ’ತುಳು’ ಭಾಷಿಕ ವಿದ್ವಾಂಸರೇ ಅಧ್ಯಯನ ಕೈಗೊಂಡಿರುವುದು ಮತ್ತು ಪಾಶ್ಚಿಮಾತ್ಯ ವಿದ್ವಾಂಸರು ’ತುಳು’ ಭಾಷೆಯ ಬಗೆಗೆ ಅಧ್ಯಯನ ಮಾಡಿರುವುದು.
ಹೀಗೆ ಬಹುಭಾಷಿಕತೆ, ಬಹು ಸಾಂಸ್ಕೃತಿಕ ವೈವಿಧ್ಯತೆಗಳನ್ನು ’ಕನ್ನಡ ಜಾನಪದ’ ಎನ್ನುವ ನೆಲೆಯಲ್ಲಿ ತಿಳಿಯಲಾಗಿದೆ. ಇಲ್ಲಿ ’ಭಾಷೆ’ಯೇ ಪ್ರಧಾನ ಅಂಶ ಎಂದು ಮೇಲುನೋಟಕ್ಕೆ ಕಂಡರೂ, ಈ ಭಾಷೆಯನ್ನು ಅರ್ಥೈಸಿಕೊಂಡಿರುವ ಬಗೆ ಮಾತ್ರ ಬಹು ಆಯಾಮದ ನೆಲೆಯಲ್ಲಿ. ಹಲವು ಭಾಷೆ ಮತ್ತು ಸಂಸ್ಕೃತಿಗಳು ಇರುವ ಕರ್ನಾಟಕದಲ್ಲೂ ಯಾವ ಒತ್ತಾಯವಿಲ್ಲದೆಯೂ ಕನ್ನಡ ಭಾಷೆ ಬಹುಪಾಲು ಎಲ್ಲರೂ ಮಾತನಾಡುವ ಭಾಷೆಯಾಗಿದೆ. ಕನ್ನಡ ಬಲ್ಲವ ಕೊಡವ, ತುಳು, ಕೊಂಕಣಿ, ಉರ್ದುಗಳನ್ನು ಮಾತನಾಡದಿದ್ದರೂ, ಈ ಭಾಷೆಗಳನ್ನು ಮಾತನಾಡುವ ಎಲ್ಲರೂ ಸಾಮಾನ್ಯವಾಗಿ ಕನ್ನಡವನ್ನು ಮಾತನಾಡುತ್ತಾರೆ. ಇದಕ್ಕೆ ಕಾರಣ ಈ ನಾಡಿನಲ್ಲಿ ಈ ಎಲ್ಲಾ ಜನರ ಬದುಕಿನ ಅಗತ್ಯಗಳ ಪೂರೈಕೆಗೆ ಕನ್ನಡ ಅಗತ್ಯವೆಂಬುದೇ ಆಗಿದೆ. ಹೀಗೆ ಭಾಷಿಕವಾಗಿ ’ಕನ್ನಡ’ದ ಅನನ್ಯತೆಯನ್ನು ಭಿನ್ನ ನೆಲೆಗಳಲ್ಲಿ ಗುರುತಿಸಬಹುದು.
ಜಾನಪದ ವಿದ್ವಾಂಸರಾದ ವಿಲಿಯಂ ಮಾಡ್ತ, ಎಸ್.ಎಸ್.ಅಂಗಡಿ, ಎಚ್.ಎಂ. ಮಹೇಶ್ವರಯ್ಯ, ಎ.ಮುರಿಗೆಪ್ಪ ಮುಂತಾದವರು ಜಾನಪದವನ್ನು ಭಾಷಿಕವಾಗಿ ಅಧ್ಯಯನ ಮಾಡಿದ್ದಾರೆ. ಆದರೆ ಇವು ಶಿಷ್ಟಭಾಷೆಯ ಅಧ್ಯಯನದ ಚೌಕಟ್ಟುಗಳಲ್ಲೇ ಇರುವುದು ತೊಡಕಾಗಿದೆ. ಚಂದ್ರಶೇಖರ ಕಂಬಾರ, ದ.ರಾ. ಬೇಂದ್ರೆ, ಗಿರೀಶ್ ಕಾರ್ನಾಡ್ ಅಂತಹವರು ಜಾನಪದವನ್ನು ತಮ್ಮ ಅಭಿವ್ಯಕ್ತಿಯ ’ಭಾಷೆ’ ಎಂದು ಕೊಂಡರು. ಆ ಮೂಲಕ ಜಾನಪದವನ್ನೇ ಒಂದು ’ಭಾಷೆ’ಯನ್ನಾಗಿ ವ್ಯಾಪಕಾರ್ಥದಲ್ಲಿ ಬಳಸಿದರು. ಇಂತಹ ಚಿಂತನೆಗಳು ಭಾಷಿಕವಾಗಿ ಕನ್ನಡದ ಅನನ್ಯತೆಯನ್ನು ಬಹುನೆಲೆಯಲ್ಲಿ ಕಟ್ಟಿಕೊಟ್ಟಿವೆ.
ಕರ್ನಾಟಕದ ಏಕೀಕರಣದ ಸಂದರ್ಭದಲ್ಲಿ ’ಕನ್ನಡ’ ಭಾಷೆ ಮತ್ತು ಕರ್ನಾಟಕದ ಗಡಿಗಳ ಉಲ್ಲೇಖಗಳನ್ನು ಸಾಹಿತ್ಯ ಕೃತಿಗಳಲ್ಲಿ ಹುಡುಕತೊಡಗಿದರು. ಅಂತೆಯೇ ಕನ್ನಡದ ಬಹುಪಾಲು ಸಾಹಿತಿಗಳು ಕನ್ನಡಿಗರ ಶೌರ್ಯ, ಹಿರಿಮೆ, ನಾಡಿನ ವಿಸ್ತಾರಗಳ ಉಲ್ಲೇಖ ಒಳಗೊಂಡ ನಾಡಾಬಿsಮಾನವನ್ನು ಹುಟ್ಟಿಸುವ ಗೀತೆಗಳನ್ನು ರಚಿಸ ತೊಡಗಿದರು. ಅದೇ ಹೊತ್ತಿಗೆ ಕನ್ನಡ ಭಾಷೆಯ ಅನನ್ಯತೆಯ ಬಿsನ್ನ ಮುಖವಾಗಿ ಜಾನಪದ ಸಾಹಿತ್ಯವನ್ನು ವಿಶ್ಲೇಷಿಸತೊಡಗಿದರು. ವಿಪರ್ಯಾಸವೆಂದರೆ ಜಾನಪದ ಸಂಗ್ರಹಗಳಲ್ಲಿ ಒಂದು ’ಕನ್ನಡ’ವಿರದೆ ಹಲವು ಕನ್ನಡಗಳಿದ್ದವು. ಇನ್ನು ಜನಪದ ಸಾಹಿತ್ಯದಲ್ಲಿ ’ಕನ್ನಡ’ವೆಂತಾಗಲಿ, ಕರ್ನಾಟಕವೆಂತಾಗಲಿ ಉಲ್ಲೇಖಗಳೇ ಇರಲಿಲ್ಲ. ಕಾರಣ ಜಾನಪದ ಸಾಹಿತ್ಯ ಪ್ರಾದೇಶಿಕ ಸತ್ವದ ನೆಲೆಯಲ್ಲಿ ಹುಟ್ಟಿದ್ದೇ ಹೊರತು, ಬೃಹತ್ ಕರ್ನಾಟಕದ ವ್ಯಾಪ್ತಿಯಲ್ಲಿ ಅಲ್ಲ. ಹೀಗೆ ಅನೇಕತೆಯನ್ನು ಒಳಗೊಂಡ ಜನಪದ ಭಾಷೆಯನ್ನು ’ಕನ್ನಡ’ ಎನ್ನುವ ಏಕಭಾಷೆಯನ್ನು ವಿವರಿಸಲು ಬಳಸಿಕೊಳ್ಳಲಾಯಿತು. ಈಚೆಗೆ ಪ್ರಕಟವಾದ ಕೆ.ವಿ ನಾರಾಯಣ ಅವರ ‘ತೊಂಡು ಮೇವು’ ಸಂಪುಟಗಳಲ್ಲಿ ಭಾಷೆ ಮತ್ತು ಜಾನಪದದ ಬಗೆಗಿನ ತಿಳುವಳಿಕೆಯನ್ನು ಭಿನ್ನವಾಗಿ ವಿಸ್ತರಿಸುವ ಒಳನೋಟಗಳ ವಿಶ್ಲೇಷಣೆಗಳಿವೆ. ಈ ವಿಶ್ಲೇಷಣೆಗಳು ಕನ್ನಡ ಜಾನಪದ ಅಧ್ಯಯನದ ಒಳ ಪ್ರವೇಶಿಸಬೇಕಿದೆ. ರಹಮತ್ ತರೀಕೆರೆ ಅವರು ನುಡಿಸಂಕರ ಸಾಹಿತ್ಯ ಕೃತಿಯಲ್ಲಿ ಜಾನಪದ ಗೀತೆ, ಹಾಡು, ನಾಟಕ ಮುಂತಾವುಗಳಲ್ಲಿ ನಡೆಯಬಹುದಾದ ನುಡಿಸಂಕರದ ಬಗ್ಗೆ ಹೊಸ ಆಲೋಚನೆಯನ್ನು ಮಂಡಿಸಿದ್ದಾರೆ. ಈ ತಿಳುವಳಿಕೆಯ ಮೂಲಕ ಜಾನಪದ ಸಾಹಿತ್ಯದಲ್ಲಿನ ನುಡಿಸಂಕರಗಳನ್ನು ಗುರುತಿಸುವ ಮೂಲಕ ಜಾನಪದ ಸಾಹಿತ್ಯದ ವಿಶ್ಲೇಷಣೆಗೆ ಬೇರೊಂದು ಮಗ್ಗಲನ್ನು ತೆರೆಯುವ ಸಾಧ್ಯತೆಗಳಿವೆ.
ಭೌಗೋಳಿಕ ನೆಲೆ
ರಾಜಕೀಯವಾಗಿ ನಿಗದಿಪಡಿಸಿದ ಕರ್ನಾಟಕದ ಗಡಿಯೊಳಗಿನ ಸಾಂಸ್ಕೃತಿಕ ವೈವಿಧ್ಯಗಳನ್ನು ಗುರುತಿಸುವ ನೆಲೆಯನ್ನು ಭೌಗೋಳಿಕ ಆಯಾಮ ಎಂದು ತಿಳಿಯಲಾಗಿದೆ. ಸಾಂಸ್ಕೃತಿಕವಾಗಿ ಇಂತಹ ಗಡಿಗಳ ಚೌಕಟ್ಟು ಇರುವುದಿಲ್ಲ. ಹಾಗಿದ್ದೂ ರಾಜಕೀಯ ಗಡಿಗಳ ಚೌಕಟ್ಟಿಗೆ ಸಾಂಸ್ಕೃತಿಕ ವಿವರಗಳನ್ನು ಜೋಡಿಸುವುದು ಬಹುದೊಡ್ಡ ತೊಡಕು. ಈ ತೊಡಕು ಕರ್ನಾಟಕ ಜಾನಪದ ಎಂದು ವಿವರಿಸ ಹೊರಟ ವಿಶ್ಲೇಷಣೆಗಳಲ್ಲಿಯೂ ಮುಂದುವರಿದಿದೆ. ಕರ್ನಾಟಕದ ಜನಪದ ಕಥೆಗಳು, ಕರ್ನಾಟಕದ ಗಾದೆಗಳು, ಕರ್ನಾಟಕದ ಜನಪದ ಮಹಾಕಾವ್ಯಗಳು, ಈ ಬಗೆಯ ಅಧ್ಯಯನಗಳು ಕರ್ನಾಟಕದ ಹಲವು ಭಿನ್ನತೆಗಳನ್ನು ಒಂದೆಡೆ ಕ್ರೋಡೀಕರಿಸಿಯೇ ’ಕರ್ನಾಟಕ’ದ ಅನನ್ಯತೆಯನ್ನು ಗಟ್ಟಿಗೊಳಿಸಲು ಪ್ರಯತ್ನ ನಡೆಯುತ್ತಿರುತ್ತದೆ. ಭೌಗೋಳಿಕ ಭಿನ್ನತೆಗಳನ್ನು ವಿವರಿಸುತ್ತಲೇ ’ಕರ್ನಾಟಕ’ದ ಕಲ್ಪನೆಯನ್ನು ಕಟ್ಟಿಕೊಳ್ಳುವ ಕ್ರಮ ಜಾನಪದ ಅಧ್ಯಯನಗಳಲ್ಲಿದೆ. ಆದರೆ ಜಾಗತೀಕರಣದ ಈ ಹೊತ್ತಲ್ಲಿ ಇಂತಹ ಭಿನ್ನತೆಗಳನ್ನು ಮರೆಮಾಚಿಸಿ ಏಕೀಕೃತ ಕರ್ನಾಟಕವನ್ನು ಕಟ್ಟಿಕೊಳ್ಳುವ ರಾಜಕಾರಣವೂ ನಡೆಯುತ್ತಿದೆ. ಯು.ಆರ್. ಅನಂತಮೂರ್ತಿಯವರು ಹೇಳುವಂತೆ: “ಭಾರತವು ಹಲವು ರಾಜ್ಯಗಳಂತೆ ಕರ್ನಾಟಕವೂ ಒಂದು ಪುಟ್ಟ ವಿಶ್ವವೇ. ಹಲವು ಭಾಷೆ ಹಲವು ಸಂಸ್ಕೃತಿಗಳ ಸಹಬಾಳ್ವೆಗೆ ಈ ನಾಡಿನಲ್ಲಿ ಅವಕಾಶವಿದೆ ಎಂಬ ದೃಷ್ಟಿಯಿದೆ. ಇದೊಂದು ವಿಶಿಷ್ಟ ತೊಡಕು ಎಂದು ಕಾಣುವ ಧೋರಣೆ ಸಾಮ್ರಾಜ್ಯವಾದಿಯದು. ಆದರೆ ಈ ಹಲವು ಭಾಷೆ, ಸಂಸ್ಕೃತಿಗಳ ಸಹಜೀವನವನ್ನು ಸಮೃದ್ಧಿಯ ವರವೆಂದು ಕಾಣುವ ದೃಷ್ಟಿ ಪ್ರಜಾಸತ್ತಾತ್ಮಕವಾದಿಯದು. ವೈವಿಧ್ಯವೆಂದರೆ ಸಾಮ್ರಾಜ್ಯ ಶಾಹಿಗಳು ಅಸಹನೆ ಪಡುತ್ತಾರೆ. ಒಂದರ ಅಧೀನದಲ್ಲಿ ಎಲ್ಲವೂ ಇರಬೇಕೆಂದು ಆಸೆ ಪಡುತ್ತಾರೆ. ಆದರೆ ಪ್ರಜಾಸತ್ತೆಯನ್ನು ನಂಬುವವರು ವಿಕೇಂದ್ರೀಕರಣವಾದಿಯಾಗಿರುತ್ತಾರೆ. ಜನಸಮುದಾಯದಲ್ಲಿ ವಿಶಿಷ್ಟ ವಾದದ್ದೆಲ್ಲವೂ ವಿಕಸನಗೊಳ್ಳುತ್ತಾ ಹೋಗುವುದನ್ನು ಸ್ವಾಗತಿಸುತ್ತಾರೆ” (ಪ್ರಜ್ಞೆ ಮತ್ತು ಪರಿಸರ, ಪು: ೩೪೧.ಅ).
ಬಹುಶಃ ಜನಪದ ಅಧ್ಯಯನಗಳಲ್ಲಿ ಕಟ್ಟಿಕೊಳ್ಳುವ ಕರ್ನಾಟಕದ ಭೌಗೋಳಿಕ ಎಲ್ಲೆಯ ವಿವರ ಕೂಡ ಪ್ರಜಾಸತ್ತಾತ್ಮಕ ನೆಲೆಯಲ್ಲಿಯೇ ಇದೆ. ಆದರೆ ಇಲ್ಲಿನ ವಿಶ್ಲೇಷಣೆಗಳು ಮಾತ್ರ ಹೆಚ್ಚು ಸೂಕ್ಷ್ಮವಾಗಿರದೆ ಒರಟಾಗಿವೆ. ಜನಪದ ವಿದ್ವಾಂಸರಾದ ಡಿ.ಕೆ. ರಾಜೇಂದ್ರ ಅವರು ಕರ್ನಾಟಕ ಜಾನಪದವನ್ನು ನಿರ್ವಚಿಸುವುದು ಹೀಗೆ: ಕರ್ನಾಟಕ ಜಾನಪದವನ್ನು ಈ ದೃಷ್ಟಿಯಿಂದ ಪರಿಶೀಲಿಸುವುದಾದರೆ, ಅದರ ಬಾಹುಳ್ಯ ಬಹು ವಿಸ್ತೃತವಾದದ್ದು, ವಿಭಿನ್ನ ಪ್ರಾದೇಶಿಕ ವೈಶಿಷ್ಟ್ಯಗಳಿಂದ ಕೂಡಿದ ಕರ್ನಾಟಕ ವಿವಿಧ ಬಗೆಯ ವೃತ್ತಿಯ, ಜಾತಿ ಮತಗಳ, ಸಂಪ್ರದಾಯ ಆಚರಣೆಗಳ, ಉಡುಗೆ ತೊಡುಗೆ, ಊಟೋಪಚಾರ ಗಳ ಹಾಗೂ ಸಾಹಿತ್ಯ ಮತ್ತು ಕಲಾ ಸಂಪ್ರದಾಯಗಳನ್ನು ಒಳಗೊಂಡು ಶ್ರೀಮಂತ ಗೊಂಡದ್ದು, ಪ್ರಾದೇಶಿಕವಾಗಿ ವಿಂಗಡಿಸಿಕೊಂಡು ಅದನ್ನು ಪರಿಶೀಲಿಸಬಹು ದಾದರೂ ಆಯಾ ಭಾಗದ ವೈಶಿಷ್ಟ್ಯ ಎದ್ದು ಕಾಣುತ್ತದೆ. ಸುಮಾರು ಒಂದು ಲಕ್ಷ ತೊಂಬತ್ತೆರಡು ಸಾವಿರ ಚದರ ಕಿ.ಮೀಟರ್ಗಳಷ್ಟು ಹರಹುಳ್ಳ ಈ ಪ್ರದೇಶದಲ್ಲಿ ವಾಸಿಸುವ ಜನರ ಸಂಖ್ಯೆ ಸುಮಾರು ನಾಲ್ಕು ಕೋಟಿಗೂ ಮಿಗಿಲು ಎಂದು ಗುರುತಿಸ ಲಾಗಿದೆ. ಇಷ್ಟೊಂದು ವ್ಯಾಪಕವಾದ ಹಾಗೂ ಬಹುಸಂಖ್ಯೆಯ ಪ್ರದೇಶದ ಜಾನಪದ ನಿಸ್ಸಂಶಯವಾಗಿ ಅಭೂತಪೂರ್ವವಾದುದು ಎಂಬುದರಲ್ಲಿ ಎರಡು ಮಾತಿಲ್ಲ(ಜಾನಪದ ಭಾರತಿ,(ಸಂ) ನಲ್ಲೂರು ಪ್ರಸಾದ್, ಪು: ೨.)ಎನ್ನುತ್ತಾರೆ. ಹೀಗೆ ಕರ್ನಾಟಕ ಜಾನಪದವನ್ನು ಅಖಂಡವಾಗಿ ನಿರ್ವಚಿಸುವ ಮಾದರಿ ಏಕೀಕರಣದ ೬೦ರ ದಶಕದ ನಂತರ ಹೆಚ್ಚಾಗಿತ್ತು. ಇದು ಕರ್ನಾಟಕದ ಜಾನಪದವನ್ನು ಬೇರೆ ಬೇರೆ ನೆಲೆಗಳಲ್ಲಿ ಅರ್ಥ ಮಾಡಿಕೊಳ್ಳಲು ಸಹಕಾರಿಯೂ ಆಯಿತು. ಹಾಗೆಯೇ ಈ ಮಾದರಿ ಆ ಹೊತ್ತಿನ ಅಗತ್ಯದಂತೆಯೂ ಕಾಣುತ್ತದೆ. ಇಂತಹ ಅಧ್ಯಯನಗಳು ಹೆಚ್ಚಾಗಿ ಬೀಸುಹೇಳಿಕೆಗಳಿಂದ ಕೂಡಿರುತ್ತಿದ್ದವು.
ಜೀಶಂಪ, ವಿಲಿಯಂ ಮಾಡ್ತ ಅವರು ಸಂಪಾದಿಸಿದ ’ಕರ್ನಾಟಕ ಜಾನಪದ’ (೧೯೮೯) ಕೃತಿಯೂ ಈ ಬಗೆಯ ಕರ್ನಾಟಕ ಭೂ ಪ್ರದೇಶದ ಜನಸಂಸ್ಕೃತಿಯ ಹಲವು ಆಯಾಮಗಳನ್ನು ಪರಿಚಯಿಸುತ್ತದೆ. ಕನ್ನಡ ವಿಶ್ವವಿದ್ಯಾಲಯದ ಜಾನಪದ ವಿಭಾಗವು ಹೊರತರುತ್ತಿರುವ ’ಜಾನಪದ ಕರ್ನಾಟಕ,’ ಜಾನಪದ ಅಧ್ಯಯನಕ್ಕೆಂದು ತೆರೆದ ’ಕರ್ನಾಟಕ ಜಾನಪದ ಅಕಾಡೆಮಿ’, ‘ಕರ್ನಾಟಕ ಜಾನಪದ ಪರಿಷತ್ತು’ ಹೀಗೆ ಕರ್ನಾಟಕದ ಭೂ ಪ್ರದೇಶವನ್ನು, ಅದರೊಳಗಿನ ಬಹು ಸಂಸ್ಕೃತಿಯನ್ನು ಪ್ರತಿನಿಧಿಸುವ ಮತ್ತು ಕರ್ನಾಟಕದ ಅನನ್ಯತೆಯನ್ನು ಗಟ್ಟಿಗೊಳಿಸುವ ನೆಲೆಯಲ್ಲಿ ಜಾನಪದ ಅಧ್ಯಯನಗಳು ನಡೆದವು. ಇನ್ನು ಕರ್ನಾಟಕವನ್ನು ಹೊರತುಪಡಿಸಿ ಬೇರೆ ಬೇರೆ ರಾಜ್ಯಗಳಿಗೆ, ವಿದೇಶಿ ಜಾನಪದ ವಿದ್ವಾಂಸರಿಗೆ ಕರ್ನಾಟಕದ ಸಾಂಸ್ಕೃತಿಕ ವೈವಿಧ್ಯವನ್ನು ಪರಿಚಯಿಸುವ ನೆಲೆಯೂ ’ಕರ್ನಾಟಕ ಜಾನಪದ’ ಎಂಬ ಚೌಕಟ್ಟಿನ ಅಧ್ಯಯನಗಳ ಹಿಂದಿನ ಪ್ರೇರಣೆಯಾಗಿತ್ತು. ಜೀಶಂಪ ಅವರು ಕರ್ನಾಟಕ ಜಾನಪದ ಕೃತಿಗೆ ಮುನ್ನುಡಿ ಬರೆಯುತ್ತ …ಇಷ್ಟೆಲ್ಲಾ ಜಾನಪದ ಚಟುವಟಿಕೆಗಳು ಕರ್ನಾಟಕದಲ್ಲಿ ನಡೆದಿದ್ದರೂ ಸರಿಯಾದ ರೀತಿಯಲ್ಲಿ ಇದರ ಪ್ರಚಾರ ಹೊರಜಗತ್ತಿನ ದೃಷ್ಟಿಯಿಂದ ನಡೆದಿಲ್ಲವೆಂದೇ ಹೇಳಬೇಕು. ಕರ್ನಾಟಕದಲ್ಲಿ ಏನು ನಡೆದಿದೆ ಎಂಬುದು ವಿಶ್ವ ಜಾನಪದ ವೇದಿಕೆಗೆ ತಿಳಿದರೆ ಜಗತ್ತಿನ ವಿದ್ವಾಂಸರ ದೃಷ್ಟಿ ಇತ್ತ ಹರಿಯುತ್ತದೆ(ಕರ್ನಾಟಕ ಜಾನಪದ, ಪು: xiii.)ಎನ್ನುತ್ತಾರೆ. ಇದರ ಭಾಗವಾಗಿಯೇ ಕರ್ನಾಟಕ ಜಾನಪದದ ಬಗ್ಗೆ ಕೃಷ್ಣಮೂರ್ತಿ ಹನೂರು ಇಂಗ್ಲಿಷಿನಲ್ಲಿ ಕೃತಿಯೊಂದನ್ನು ಸಂಪಾದಿಸಿದರು. ಹೀಗೆ ಬೇರೆ ರಾಜ್ಯಗಳಿಗೆ, ದೇಶಗಳಿಗೆ ಕರ್ನಾಟಕವನ್ನು ಪರಿಚಯಿಸಲು ಅಖಂಡ ಕರ್ನಾಟಕದ ಅನನ್ಯತೆಗಳನ್ನು ಜನಪ್ರಿಯಗೊಳಿಸುವ ಧೋರಣೆ ಇಂತಹ ಅಧ್ಯಯನಗಳ ಹಿಂದಿದೆ. ಇದರಲ್ಲೂ ಮೇಲ್ವರ್ಗದ ಜನಪದ ಕಲೆಗಳೇ ಕರ್ನಾಟಕದ ಅನನ್ಯತೆಯನ್ನು ಬಿಂಬಿಸಲು ಬಳಕೆಯಾದದ್ದೊಂದು ವಿಪರ್ಯಾಸ. ಯಕ್ಷಗಾನವನ್ನೂ ಕರ್ನಾಟಕದ ಅನನ್ಯ ಕಲೆ ಎಂದು ಬಿಂಬಿಸಲಾಯಿತು. ಶಿವರಾಮ ಕಾರಂತರು ಯಕ್ಷಗಾನವನ್ನು ಕುರಿತ ಪ್ರದರ್ಶನ ಮತ್ತು ಅಧ್ಯಯನದಲ್ಲಿ ಪಾಲ್ಗೊಂಡದ್ದೂ ಒಂದು ಕಾರಣವಾಯಿತು. ವೀರಗಾಸೆ, ಪೂಜಾಕುಣಿತ ಮುಂತಾದ ಮೇಲ್ವರ್ಗದ, ಉತ್ತಮ ಜಾತಿಯವರ ಜನಪದ ಕಲೆ ಸಂಪ್ರದಾಯಗಳು ಕರ್ನಾಟಕದ ಅನನ್ಯತೆಯನ್ನು ಬಿಂಬಿಸಲು ಬಳಕೆಯಾದವು. ದಲಿತರು ಬಳಸುವ ’ಹಲಗೆ’, ಮಾರಿಹಬ್ಬ ಮುಂತಾದವು ಕರ್ನಾಟಕದ ಅನನ್ಯತೆಯನ್ನು ಗುರುತಿಸುವಾಗ ಮೇಲ್ಮಟ್ಟದ ಚರ್ಚೆಗೆ ಬರಲಿಲ್ಲ.
ಕನ್ನಡತ್ವದ ಆಯಾಮ
ಕನ್ನಡ ಭಾಷೆ ಮತ್ತು ಕರ್ನಾಟಕದ ಭೌಗೋಳಿಕತೆ ಇವೆರಡನ್ನೂ ಒಳಗೊಂಡ ಕನ್ನಡತ್ವದ ನಿರ್ವಚನದ ಭಾಗವಾಗಿ ಜಾನಪದ ಅಧ್ಯಯನಗಳ ವಿಶ್ಲೇಷಣೆಗಳನ್ನು ಪರಿಶೀಲಿಸಬಹುದು. ಇದೊಂದು ಹೊಸ ವ್ಯಕ್ತಿತ್ವದ ಕೃತಕ ಚಹರೆ. ಇಲ್ಲಿ ಕನ್ನಡ, ಕರ್ನಾಟಕ ಮತ್ತು ಕನ್ನಡಿಗ ಎಂಬ ಮೂರು ಪರಿಕಲ್ಪನೆಗಳು ಬೆರೆತ ಒಂದು ವ್ಯಕ್ತಿತ್ವವನ್ನೇ ’ಕನ್ನಡತ್ವ’ ಜೊತೆ ಸಮೀಕರಿಸಲಾಯಿತು. ಹಾಗೆ ನೋಡಿದರೆ ಈ ಮೂರು ಬೆರೆಯುವುದು ಕಷ್ಟ. ಇದನ್ನು ಕೆ.ವಿ. ನಾರಾಯಣ ಅವರು ಸೂಕ್ಷ್ಮವಾಗಿ ಹೀಗೆ ವಿವರಿಸುತ್ತಾರೆ: ಕನ್ನಡ, ಕರ್ನಾಟಕ ಮತ್ತು ಕನ್ನಡಿಗ ಎಂಬ ಈ ಮೂರು ಪರಿಕಲ್ಪನೆಗಳು ಪರಸ್ಪರ ಬೆರೆತುಕೊಳ್ಳುವುದು ಕಷ್ಟವೇ. ಕನ್ನಡಿಗರು ಕನ್ನಡವಲ್ಲದೆ ಇತರ ಭಾಷೆಯನ್ನು ಕಲಿತು ಮಾತನಾಡಬಹುದು. ಅಲ್ಲದೆ ಬೇರೆ ದೇಶದಲ್ಲಿ ಪ್ರದೇಶದಲ್ಲಿ ವಾಸ ಮಾಡಬಹುದು. ಕನ್ನಡ ಮಾತ್ರ ಕರ್ನಾಟಕದ ಭಾಷೆಯಾಗಿ ಪರಿಗಣಿತವಾಗಲಾರದು. ಈಗಾಗಲೇ ಗಮನಿಸಿದಂತೆ ಆ ಭೂಪ್ರದೇಶದಲ್ಲಿ ಹಲವು ಭಾಷೆಗಳನ್ನು ಮಾತನಾಡುವ ಜನರು ಇರುತ್ತಾರೆ. ಸದ್ಯ ಮೇಲೆ ಹೇಳಿದ ರಾಜಕೀಯ ನಿರ್ಧಾರದಂತೆ ಹೆಚ್ಚು ಸ್ಥಿರವಾಗಿರುವುದು ಭೌಗೋಳಿಕವಾದ ಪರಿಕಲ್ಪನೆ. ಅದು ಕರ್ನಾಟಕದ ಉಳಿದೆರಡು ಪರಿಕಲ್ಪನೆಗಳು ಸದಾ ಚಲನಶೀಲ, ಅವು ದೇಶಬದ್ಧ ವಲ್ಲ(ಕನ್ನಡ ಜಗತ್ತು:ಅರ್ಧಶತಮಾನ,ಪು: ೭)ಹೀಗೆ ಕನ್ನಡತ್ವ ಎನ್ನುವ ಹೊಸ ಬಗೆಯ ವ್ಯಕ್ತಿತ್ವವೂ ಗಟ್ಟಿಯಾಗಿ ನಿಲ್ಲು ವಂತದ್ದಲ್ಲ. ಈ ವ್ಯಕ್ತಿತ್ವಕ್ಕೆ ಆರೋಪಿಸುವ ಜಾನಪದ ಲಕ್ಷಣಗಳಿಗೂ ಇಂತಹದ್ದೇ ಮಿತಿಯಿದೆ.
ಕನ್ನಡ ರಾಷ್ಟ್ರೀಯತೆಯ ಬಗ್ಗೆ ಸಂಶೋಧನೆ ಮಾಡಿದ ಬಂಜಗೆರೆ ಜಯಪ್ರಕಾಶ್ ಅವರು ಕನ್ನಡತ್ವವನ್ನು ನಿರೂಪಿಸುವ ಕ್ರಮದಲ್ಲಿಯೇ ಜಾನಪದದ ಅಂತರ್ಗತ ಸ್ಥಿತಿಯನ್ನು ಗುರುತಿಸಲು ಸಾಧ್ಯ. ಕನ್ನಡತ್ವವೆಂಬುದು ಕೇವಲ ಒಂದು ಸಾಮಾಜಿಕ ಅಂಶವಲ್ಲ, ಅಥವಾ ಸಾಂಸ್ಕೃತಿಕ ಚಿನ್ನೆ ಮಾತ್ರವಲ್ಲ. ಅದೊಂದು ಅಖಂಡವಾದ ಜನಜೀವನದ ಪ್ರತೀಕ, ಅದರೊಳಗೆ ರಾಜಕೀಯವಿದೆ, ಆರ್ಥಿಕತೆ ಇದೆ, ಇತಿಹಾಸವಿದೆ, ಸಾಹಿತ್ಯ, ಸಾಂಸ್ಕೃತಿಕತೆ ಇತ್ಯಾದಿ ಎಲ್ಲವೂ ಇದೆ. ಒಂದು ಸಮಾಜದ ಉತ್ಪಾದನಾ ವಿನ್ಯಾಸದೊಳಗೆ ಒಂದು ಪಂಗಡವಾಗಿ ಏರ್ಪಟ್ಟು ಕಡೆಗೆ ಒಂದು ಸಾಂಸ್ಕೃತಿಕ ಗುರುತಿಸಿಕೊಳ್ಳುವಿಕೆಯನ್ನು ರೂಢಿಸಿಕೊಂಡ ’ಜಾತಿ’ ಎಂಬುದು ಹೇಗೆ ಒಂದು ನಿರ್ದಿಷ್ಟ ಜನಸಮುದಾಯದ ಸಾಮಾಜಿಕ ಸಂಘಟೀಕರಣವೋ, ಕನ್ನಡತನವೆಂಬುದೂ ಹಾಗೆಯೇ ಒಂದು ಜನಸಮುದಾಯದ ಪಂಗಡೀಕರಣ. (ಕನ್ನಡ ರಾಷ್ಟ್ರೀಯತೆ, ಪು: ೩)ಹೀಗೆ ಜಾತಿಯ ’ಸಂಘಟೀಕರಣ’ ಕನ್ನಡತನದ ಜನಸಮುದಾಯದ ಪಂಗಡೀಕರಣ ಆಗುವಲ್ಲಿಯೂ ಜನಪದ ಸಾಂಸ್ಕೃತಿಕ ಲೋಕದ ಒಳಗೊಳ್ಳುವಿಕೆ ಬಹಳ ಮುಖ್ಯವಾದ ಸಂಗತಿ.
ಬೆಟಗೇರಿ ಕೃಷ್ಣಶರ್ಮರು ಹೇಳುವಂತೆ: ನಮ್ಮ ನಾಡಿನ ಜನತೆ ಸಂಪ್ರದಾಯ ನಿಷ್ಠೆ, ಮತಧರ್ಮ ನಿಷ್ಠೆ, ಜಾತಿ ಕುಲ ನಿಷ್ಠೆ, ಪ್ರಾದೇಶಿಕ ಅಭಿಮಾನ ಇವುಗಳ ಮೂಲಕ ಸಣ್ಣ ಸಣ್ಣ ವರ್ತುಲಗಳನ್ನು ಮಾಡಿಕೊಂಡಿದ್ದು ಆ ವರ್ತುಲಗಳನ್ನೇ ತಮ್ಮ ತಮ್ಮ ಲೋಕವೆಂದು ಭಾವಿಸಿ ಹೃದಯ, ಬುದ್ಧಿಯನ್ನು ಸಂಕುಚಿತಗೊಳಿಸಿ ಕೊಂಡಿತ್ತು. ಇಂದಿನ ರಾಜಕೀಯ ಪ್ರಜ್ಞೆ ಮತ್ತು ವಿಜ್ಞಾನ ಅಧ್ಯಯನದ ಮೂಲಕ ವಿಶಾಲ ದೃಷ್ಟಿ, ಮತ್ತು ಮನೋವೈಕಲ್ಯ ಬೆಳೆಸಿಕೊಳ್ಳಬೇಕಾಗಿದೆ(ಸುವರ್ಣ ಜಾನಪದ, ಸಂ-೧, ಪು: ೫೪)ಎನ್ನುತ್ತಾರೆ. ಬಹುಶಃ ಕೃಷ್ಣಶರ್ಮರ ಮಾತುಗಳು ’ಕನ್ನಡತ್ವದ’ದಂತಹ ಹೊಸ ಅನನ್ಯತೆ ಕಟ್ಟಿಕೊಳ್ಳುವ ಕಡೆಗೆ ಮುಖ ಮಾಡಿವೆ. ೬೦-೭೦ರ ದಶಕದ ಬಹುಪಾಲು ಜಾನಪದ ವಿಶ್ಲೇಷಣೆಗಳು ಹೀಗೆ ಕನ್ನಡತ್ವದ ಅನನ್ಯತೆಯನ್ನು ಕಟ್ಟಿಕೊಳ್ಳಲು ಪೂರಕವಾದ ಆಲೋಚನೆಗೆ ಕಾರಣವಾದವು. ಇವುಗಳಿಗೆ ಶಿಷ್ಟ ಸಾಹಿತ್ಯದ ’ಕನ್ನಡತ್ವ’ದ ಅನನ್ಯತೆಗಿಂತ ತೀರಾ ಭಿನ್ನವಾಗಿರುವುದನ್ನು ಗುರುತಿಸಲು ಸಾಧ್ಯವಾಗಿದೆ. ಒಟ್ಟಾರೆ ’ಕನ್ನಡತ್ವ’ವೆಂಬ ಹೊಸ ಅನನ್ಯತೆಯನ್ನು ಕಟ್ಟಿಕೊಳ್ಳುವ ಎಳೆಗಳು ೫೦ರ ದಶಕದ ನಂತರದ ಜಾನಪದ ಅಧ್ಯಯನಗಳಲ್ಲಿ ಸಿಗುತ್ತವೆ. ಈ ಬಗೆಯ ವಿಶ್ಲೇಷಣೆಗಳು ಒಂದು ಜನಪ್ರಿಯ ಆಲೋಚನ ಮಾದರಿ ಹುಟ್ಟಲು ಕಾರಣವಾದವು. ಅಂತೆಯೇ ಜನಪದ ಸಂಗತಿಗಳನ್ನು ಸೂಕ್ಷ್ಮವಾಗಿ ಮುಖಾಮುಖಿಯಾಗುವ ಮೊನಚನ್ನು ಮೊಂಡಾಗಿಸಿದವು.
ಕನ್ನಡ ರಾಷ್ಟ್ರೀಯತೆ
ಈ ಮೇಲಿನ ಅಷ್ಟೂ ಚರ್ಚೆ ಕನ್ನಡ ರಾಷ್ಟ್ರೀಯತೆಗೆ ಪೂರಕವಾದದ್ದೆ. ’ರಾಷ್ಟ್ರೀಯತೆ’ಯ ಕಲ್ಪನೆಯೇ ಹೇಗೆ ಆಲೋಚನ ವಿನ್ಯಾಸಗಳನ್ನು ರೂಪಿಸಿತು ಎನ್ನುವುದನ್ನು ಮತ್ತೊಂದು ನೆಲೆಯಲ್ಲಿ ವಿಶ್ಲೇಷಣೆಗೆ ಒಡ್ಡಬಹುದು. ಬಿ.ಎ. ವಿವೇಕರೈ ಅವರು ಎರಡು ಬಗೆಯ ಅನನ್ಯತೆಯನ್ನು ಗುರುತಿಸುತ್ತಾರೆ: ಸಮುದಾಯವೊಂದು ಗುರುತಿಸಿಕೊಂಡಿರದ ಆದರೆ ಹೊರಗಿನವರು ಕಂಡುಕೊಳ್ಳುವ ಅನನ್ಯತೆಯನ್ನು ಆ ಸಮುದಾಯದ ’ಸಹಜ ಅನನ್ಯತೆ’ ಎಂದು ತಿಳಿಯಬಹುದು ಮತ್ತು ’ಸಹಜ ಅನನ್ಯತೆ’ ಎಂದು ಹೇಳುವಾಗಲೂ ಅದು ಸಮುದಾಯವೊಂದು ಅಪ್ರಯತ್ನಪೂರ್ವಕವಾಗಿ ಅಭಿವ್ಯಕ್ತಿಸುವ ಬಳಸುವ ಅನನ್ಯತೆ ಎಂದು ಭಾವಿಸಬೇಕು. ನಿರ್ಮಿಸಿದ ಅಥವಾ ಸೃಷ್ಟಿಸಿದ ಅನನ್ಯತೆಗಳು (Constructed identity) ಆಧುನಿಕ ಸಮಾಜದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕಾಣಿಸುತ್ತವೆ. ಒಂದು ಕಾಲದ ನಿರ್ಮಿಸಿದ ಅನನ್ಯತೆ ಇನ್ನೊಂದು ಕಾಲದ ಸಹಜ ಅನನ್ಯತೆ ಆಗಬಹುದು. ಆಡಳಿತಕ್ಕಾಗಿ ಮಾಡಿಕೊಂಡ ನಿರ್ದಿಷ್ಟ ವ್ಯಾಪ್ತಿಯ ಭೌಗೋಳಿಕ ಪ್ರದೇಶದಲ್ಲಿ ಪ್ರಾದೇಶಿಕ ಅನನ್ಯತೆಯ ಕಲ್ಪನೆ ನಿಜವಾಗಿಯೂ ಇರುವುದಿಲ್ಲ. ರಾಜಕೀಯ ಉದ್ದೇಶಗಳಿಗಾಗಿ ತೋರಿಕೆಯ ಅನನ್ಯತೆಯನ್ನು ಸಾಮಾನ್ಯವಾಗಿ ಇಲ್ಲಿ ಹೇರಲಾಗುತ್ತದೆ. (ಗಿಳಿಸೂವೆ, ಪು: ೩೮) ಎನ್ನುವಲ್ಲಿಯೂ ರಾಷ್ಟ್ರೀಯತೆಯ ಕೃತಕ ನಿರ್ಮಿತಿಯ ಮಿತಿ ಇರುವ ಸೂಚನೆ ಇದೆ.
ಕನ್ನಡ ರಾಷ್ಟ್ರೀಯತೆಯ ಪರಿಕಲ್ಪನೆಯು ಅಂತಹ ಒಂದು ನಿರ್ಮಿಸಿದ ಅನನ್ಯತೆ. ಒಂದು ರಾಷ್ಟ್ರದ ಪರಿಕಲ್ಪನೆ ಕಾಲದಿಂದ ಕಾಲಕ್ಕೆ ಬದಲಾಗುತ್ತದೆ. ೧೯೫೬ರ ಬಳಿಕ ಕರ್ನಾಟಕ ಎಂಬ ರಾಜ್ಯದ ಪರಿಕಲ್ಪನೆ ರೂಪುಗೊಳ್ಳುತ್ತಾ ಹೋಯಿತು. ಈ ರಾಜ್ಯದ ಗಡಿರೇಖೆಗಳ ಒಳಗಿನ ಲಕ್ಷಾಂತರ ಮಂದಿಗೆ ರಾಜ್ಯ ಎನ್ನುವುದು ಒಂದು ಅನನ್ಯತೆ ಆಗಿರಲಿಲ್ಲ. ಅವರ ಗ್ರಾಮ, ಸೀಮೆ, ಪಟ್ಟಣ, ಊರು, ಇವಿಷ್ಟೇ ಅವರ ಪ್ರಾದೇಶಿಕ ಅನನ್ಯತೆಯನ್ನು ರೂಪಿಸಿದ್ದು. ಇಂತಹ ಸ್ಥಳೀಯ ಅನನ್ಯತೆ ಮಾತ್ರ ಇದ್ದ ಜನರಲ್ಲಿ ಕರ್ನಾಟಕ ಎನ್ನುವ ಬೃಹತ್ ರಾಜ್ಯದ ಕಲ್ಪನೆಯನ್ನು ಉಂಟುಮಾಡುವುದು ಸುಲಭದ ಕೆಲಸವಲ್ಲ. ಜಾನಪದ ಅಧ್ಯಯನವೆನ್ನುವುದೇ ಪ್ರಾದೇಶಿಕ ಅನನ್ಯತೆಗಳನ್ನು ಗಟ್ಟಿಗೊಳಿಸುವಂತದ್ದು. ಆದರೆ ಅದೇ ಜನಪದವನ್ನು ಪ್ರಾದೇಶಿಕ ಅನನ್ಯತೆಗಳ ಜೊತೆಯಲ್ಲಿಯೇ ಕನ್ನಡ ರಾಷ್ಟ್ರೀಯತೆಯ ಹೊಸ ಅನನ್ಯತೆಯನ್ನು ಕಟ್ಟಿಕೊಳ್ಳುವಂತೆ ಬಳಸಿಕೊಳ್ಳಲಾಯಿತು. ಹಾಗಾಗಿಯೇ ’ಕನ್ನಡ ಜನಪದ,’ ’ಕರ್ನಾಟಕ ಜಾನಪದ’ದಂತಹ ಶೀರ್ಷಿಕೆಯಲ್ಲಿ ಜನಪದ ಕೃತಿಗಳು ಪ್ರಕಟವಾದದ್ದು. ಯಾವುದೇ ರಾಷ್ಟ್ರೀಯ ಅನನ್ಯತೆ ಎನ್ನುವುದು ವಿಸ್ತೃತವಾದ ಪ್ರಾದೇಶಿಕ ಅನನ್ಯತೆಯೇ ಆಗಿರುತ್ತದೆ. ಈ ನೆಲೆಯಲ್ಲಿ ಕನ್ನಡ ರಾಷ್ಟ್ರೀಯತೆಯು ಕೂಡ ಜಾನಪದ ಅಧ್ಯಯನಗಳು ರೂಪಿಸಿದ ಪ್ರಾದೇಶಿಕ ಅನನ್ಯತೆಗಳಿಂದಲೇ ರೂಪುಗೊಂಡಿದೆ.
ಹೀಗೆ ಕನ್ನಡ ಮತ್ತು ಕರ್ನಾಟಕತ್ವದ ಅನನ್ಯತೆಯ ಅಧ್ಯಯನಗಳು ಅಂತಿಮವಾಗಿ ಬೃಹತ್ ವ್ಯಾಖ್ಯಾನಗಳೇ ಆಗಿವೆ. ಮೂರು ನಾಲ್ಕು ದಶಕದ ಕಾಲ ಜಾನಪದ ಅಧ್ಯಯನದ ದೃಷ್ಟಿಕೋನವೆಲ್ಲ ಕನ್ನಡ, ಕರ್ನಾಟಕದ ಅನನ್ಯತೆಯ ಜತೆ ಸಮೀಕರಿಸಿದ ಪರಿಣಾಮ, ಕರ್ನಾಟಕದಲ್ಲಿ ಜಾನಪದ ಅಧ್ಯಯನಗಳು ಬಹುಪಾಲು ಸೂಕ್ಷ್ಮತೆಯನ್ನು ಕಳೆದುಕೊಂಡವು. ಪ್ರಾದೇಶಿಕ ಅನನ್ಯತೆಯನ್ನು ಗುರುತಿಸುವ ತಿಳುವಳಿಕೆಯನ್ನು ಕೂಡ ಕನ್ನಡದ ಅನನ್ಯತೆಯನ್ನು ಗುರುತಿಸಿದ ಆಲೋಚನೆಗಳೇ ಪ್ರಭಾವಿಸಿದವು. ಕನ್ನಡ, ಕರ್ನಾಟಕತ್ವದ ಸಂಕೇತಗಳು ಹೆಚ್ಚಾಗಿ ಮೇಲ್ವರ್ಗದ ಕಲೆ ಮತ್ತು ಆಚರಣೆಯನ್ನೇ ಅವಲಂಬಿಸಿದವು. ’ಕನ್ನಡ’ ಭಾಷಿಕ ಅನನ್ಯತೆಯು ಕರ್ನಾಟಕದ ಇತರೆ ಹಲವಾರು ಭಾಷಿಕ ಅನನ್ಯತೆಯ ಮೇಲೆ ಸವಾರಿ ಮಾಡಿತು. ಅಂತೆಯೇ ಅನೇಕ ಕನ್ನಡದ ಉಪಭಾಷೆಗಳನ್ನು ಬಹುಜನ ಒಪ್ಪಿತ ಪ್ರಮಾಣಿತ ಕನ್ನಡದಲ್ಲಿ ಪರಿಚಯಿಸಿ, ಉಪಭಾಷೆಗಳ ಜೀವಂತಿಕೆಯನ್ನು ಮಂಕಾಗಿಸಿತು. ಕನ್ನಡ, ಕರ್ನಾಟಕದ ರಾಷ್ಟ್ರೀಯತೆಯ ಚಿಂತನೆಯೂ ಇವುಗಳ ಅನನ್ಯತೆಯನ್ನು ಗುರುತಿಸಲು ಪರೋಕ್ಷವಾಗಿ ಪ್ರಭಾವ ಬೀರಿತು.

ಕಾಮೆಂಟ್‌ಗಳಿಲ್ಲ: