-ಅರುಣ್ ಜೋಳದಕೂಡ್ಲಿಗಿ
‘ದನದ ದೊಡ್ಡಿ’ ಎನ್ನುವ ಪದ ಒಂದು ನುಡಿಗಟ್ಟಾಗಿ ನಮ್ಮ ಮಾತುಗಳ ಮಧ್ಯೆ ತೂರಿ ಬರುವುದಿದೆ. ಹೀಗೆ ತೂರಿ ಅದು ಬಿಟ್ಟುಕೊಡುವ ಅರ್ಥದ ಕೆಲವು ಸಂಗತಿಗಳನ್ನು ನೋಡೋಣ. ಸಾಮಾನ್ಯವಾಗಿ ಖಾಸಗಿ ಶಾಲೆಯವರು ಸರಕಾರಿ ಶಾಲೆಗಳನ್ನು ದೊಡ್ಡಿ ಎಂದು ಕರೆಯುವುದಿದೆ. ‘ಅದೇನು ಶಾಲೆಯೇನ್ರಿ ದನದ ದೊಡ್ಡಿ ಕಣ್ರಿ’ ಎನ್ನುವ ಮಾತು ಕಾನ್ವೆಂಟ್ ಶಾಲೆಗೆ ತನ್ನ ಮಗಳೋ ಮಗನನ್ನೋ ಸೇರಿಸಿದ ಅಪ್ಪ ಅಮ್ಮ ತಮ್ಮ ಅಂತಸ್ತನ್ನು ಹೆಚ್ಚಿಸಿಕೊಳ್ಳಲು ಹೇಳುತ್ತಾರೆ. ಹಾಗೆ ಹೇಳುವಾಗ ಹುಡುಗರ ಸಂಖ್ಯೆ ಹೆಚ್ಚಿದ್ದು ಆ ಸಂಖ್ಯೆಗೆ ಸರಿಯಾದ ಸೌಲಭ್ಯಗಳು, ಶಿಕ್ಷಕರು ಇಲ್ಲ ಎನ್ನುವುದನ್ನು ಈ ನುಡಿಗಟ್ಟು ಧ್ವನಿಸುವಂತಿದೆ. ಅಂತೆಯೇ ‘ಇದನ್ನೇನು ದನದ ದೊಡ್ಡಿ ಮಾಡಿದ್ರೇನು? ಎಂದು ಶಿಕ್ಷಕ ಮಕ್ಕಳಿಗೆ ಬೈಯುವಾಗಲೂ ದನಗಳ ಅಶಿಸ್ತನ್ನು ಉದ್ದೇಶಿಸಿಯೇ ಹೇಳುತ್ತಿರುತ್ತಾರೆ. ದನದ ದೊಡ್ಡಿ ಎಂದರೆ ಅದು ಅಶಿಸ್ತಿನ ತಾಣ ಎನ್ನುವುದನ್ನು ಆಧರಿಸಿ ಬೈಗುಳ, ನಿಂದೆ, ಕೀಳಾಗಿ ಕಾಣುವ ಮಾತುಗಳು ಬಳಕೆಯಾಗುತ್ತವೆ.
ದನ ದೊಡ್ಡಿ ಎನ್ನುವುದು ಗ್ರಾಮೀಣ ಪ್ರದೇಶಗಳಲ್ಲಿ ಎರಡು ನೆಲೆಯಲ್ಲಿ ಬಳಕೆಯಾಗಿದೆ. ಒಂದು ದನಗಳನ್ನು ತರುಬಲು, ಕಟ್ಟಲು ಜಾನುವಾರು ಸಾಕುದಾರರು ಮಾಡಿರುವ ಸುತ್ತುಗೋಡೆಗಳಿರುವ ಪ್ರತ್ಯೇಕ ಸ್ಥಳವನ್ನು ದೊಡ್ಡಿ ಎನ್ನುವುದಿದೆ. ಎರಡನೆಯದು ದನಗಳು ಯಾರದೋ ಹೊಲ ಹೊಕ್ಕು ಮೇಯ್ದಾಗ ಆಯಾ ಹೊಲದವನು ಅಂತಹ ಜಾನುವಾರುಗಳನ್ನು ಕೂಡಿ ಹಾಕಲು ಇರುವ ಜೈಲಿನಂತಹ ಪ್ರದೇಶಕ್ಕೆ ದೊಡ್ಡಿ ಎಂದು ಕರೆಯುತ್ತಾರೆ. ದೊಡ್ಡಿ ಎನ್ನುವ ಕನ್ನಡ ಪದಕ್ಕೆ ವೇಶ್ಯೆ ಎಂಬ ಅರ್ಥವೂ ಇದೆ. ಇದು ಅವಳ ಮನೆ ದನದ ದೊಡ್ಡಿ ಇದ್ದಹಾಗೆ ಎನ್ನುವ ಹೀನಾರ್ಥದಲ್ಲಿ ಈ ಪದವನ್ನು ಬಳಕೆ ಮಾಡಿದಂತಿದೆ. ದೊಡ್ಡಿತು ಎಂದರೆ ದೊಡ್ಡದು, ವಿಶಾಲವಾದುದು, ವಿಸ್ತಾರವಾದುದು ಎಂಬಂತಹ ಅರ್ಥವೂ ಇದೆ. ಇನ್ನು ಮುಂದುವರೆದು ಪಶುಪಾಲನೆಯೆ ಮುಖ್ಯವಾಗಿರುವ ಕೆಲವು ಹಳ್ಳಿಗಳ ಹೆಸರಿನ ಜತೆಯೇ ದೊಡ್ಡಿ ಪದ ಸೇರಿರುವುದೂ ಇದೆ. ಹಾಗಾಗಿಯೆ ಕೋಲಾರ ಜಿಲ್ಲೆ ಒಳಗೊಂಡಂತೆ ಪಶುಪಾಲನೆ ಇರುವ ಕಡೆ ಊರುಗಳಿಗೆ ದೊಡ್ಡಿ ಎನ್ನುವ ಗುಣವಾಚಕವೂ ಸೇರಿ ಊರಿನ ಹೆಸರಾದದ್ದಿದೆ.
ರಾಯಚೂರು ಮೊದಲಾದ ಹೈದರಬಾದ ಕರ್ನಾಟಕದ ಕಡೆ ಮೇವಿನ ಗುಡ್ಡೆ ಹಾಕಿದ ಕಣಕ್ಕೆ ದೊಡ್ಡಿ ಎನ್ನುತ್ತಾರೆ. ಈ ಭಾಗದಲ್ಲಿ ದನ ಕೂಡಿಹಾಕುವ ಅಥವಾ ದನಗಳು ತಪ್ಪು ಮಾಡಿದಾಗ ಶಿಕ್ಷೆಗೆ ತಂದು ಹಾಕುವ ಜಾಗವನ್ನು ಕೊಂಡವಾಡ ಎಂದು ಕರೆಯುತ್ತಾರೆ. ಈ ಕಾರಣಕ್ಕೆ ಕೆಲವು ಗ್ರಾಮನಾಮಗಳಲ್ಲಿ ಕೊಂಡವಾಡವೂ ಸೇರಿದೆ. ನಾನು ಈ ಅಂಕಣದಲ್ಲಿ ಹೇಳ ಹೊರಟಿರುವುದೂ ಕೂಡ ಹೀಗೆ ಜಾನುವಾರುಗಳನ್ನು ಕೂಡಿ ಹಾಕುವ ಜೈಲುಗಳೆಂಬ ದೊಡ್ಡಿಗಳ ಬಗ್ಗೆ.
ದನ, ಕುರಿ, ಆಡು, ಮೇಕೆ ಮುಂತಾದವುಗಳು ಮನುಷ್ಯರ ಹಾಗೆ ಅಪರಾಧ ಮಾಡುತ್ತವೆಯೇ ಎನ್ನುವ ಪ್ರಶ್ನೆ ಬರುತ್ತದೆ. ಬಿತ್ತನೆ ಮಾಡಿದ ಹೊಲವನ್ನು ನುಗ್ಗಿ ಬೆಳೆಯನ್ನು ನಾಶ ಮಾಡುವುದು ಇವುಗಳು ಮಾಡುವ ಅಪರಾಧವಾಗಿದೆ. ಈ ಅಪರಾಧಕ್ಕೆ ಹೊಲದ ಒಡೆಯ ಸಿಟ್ಟಾಗಿ ಕಾನೂನನ್ನು ಕೈಗೆ ತೆಗೆದುಕೊಂಡು ದನಗಳನ್ನು ಒಡೆದು ಕಟ್ಟಿಹಾಕುವಂತಿಲ್ಲ. ಬದಲಾಗಿ ಊರಲ್ಲಿರುವ ದೊಡ್ಡಿಗೆ ತಂದು ಹಾಕಬೇಕು. ಇಂತಹ ದೊಡ್ಡಿಗಳು ಆಯಾ ಗ್ರಾಮ ಪಂಚಾಯತಿ, ಪಟ್ಟಣ ಪಂಚಾಯ್ತಿಯ ವ್ಯಾಪ್ತಿಗೆ ಒಳಪಟ್ಟಿರುತ್ತವೆ. ಈ ದೊಡ್ಡಿಗಳನ್ನು ಆಯಾ ಊರಿನವರಿಗೆ ಹರಾಜಿನಲ್ಲಿ ಇಂತಿಷ್ಟು ಅವಧಿಗೆ ಗುತ್ತಿಗೆ ಕೊಟ್ಟಿರುತ್ತಾರೆ. ಹೀಗೆ ಗುತ್ತಿಗೆ ಪಡೆದವರು ತಾತ್ಕಾಲಿಕವಾಗಿ ಈ ದೊಡ್ಡಿಗೆ ವಾರಸುದಾರರಾಗಿರುತ್ತಾರೆ. ಇಂತಹವರು ದೊಡ್ಡಿಗೆ ಬಿದ್ದ ದನಗಳಿಗೆ ಆಯಾ ದನಗಳ ಸಾಕುದಾರರಿಂದ ಒಂದು ದನಕ್ಕೆ ಇಂತಿಷ್ಟು ದಂಡ ಕಟ್ಟಿಸಿಕೊಂಡು, ದೊಡ್ಡಿಗೆ ಹಾಕಿದ ಬೀಗವನ್ನು ತೆಗೆದು ಹೊಡೆದು ಕಳಿಸುತ್ತಾರೆ.
ದೊಡ್ಡಿಗೆ ಬಿದ್ದ ಜಾನುವಾರುಗಳ ಸಾಕುದಾರರು ಬರದಿದ್ದರೆ, ದೊಡ್ಡಿಯ ಗುತ್ತಿಗೆದಾರ ಆ ದನಗಳಿಗೆ ಮೇವು ಹಾಕಿ ನೀರು ಕುಡಿಸಿ ಅವುಗಳ ಯೋಗಕ್ಷೇಮ ನೋಡಿಕೊಳ್ಳಬೇಕಾಗುತ್ತದೆ. ಹೀಗೆ ಯೋಗಕ್ಷೇಮ ನೋಡಿಕೊಳ್ಳುವ ಕಾರಣ ದಿನದಿಂದ ದಿನಕ್ಕೆ ದನಕ್ಕೆ ಕಟ್ಟುವ ದಂಡದ ಪ್ರಮಾಣ ಹೆಚ್ಚಾಗುತ್ತಾ ಹೋಗುತ್ತದೆ. ಒಂದು ವೇಳೆ ೨೧ ದಿನದ ತನಕ ದೊಡ್ಡಿಗೆ ಬಿದ್ದ ದನಕರುಗಳ ವಾರಸುದಾರರು ಬರದೇ ಇದ್ದಾಗ ಆಯಾ ದನದ ಬಗ್ಗೆ ಟಾಂ ಟಾಂ ಹೊಡೆಸಿ, ಕರಪತ್ರ ಹಂಚಿ ಹರಾಜು ಮಾಡಿ ಮಾರಲಾಗುತ್ತದೆ. ಇದಿಷ್ಟು ಈ ದೊಡ್ಡಿಯ ದಿನಚರಿ.
ನಮ್ಮಲ್ಲಿ ಮನುಷ್ಯ ಆರೋಪಿಗಳನ್ನು ಜೈಲಿಗೆ ಹಾಕುವ ಮುನ್ನವೆ ಜಾಮೀನು ಪಡೆದು ಜೈಲಿಗೆ ಚಳ್ಳೆಹಣ್ಣು ತಿನ್ನಿಸಿ ಹೊರಗುಳಿಯುತ್ತಾರೆ. ಆದರೆ ಹೀಗೆ ದೊಡ್ಡಿಗೆ ಹಾಕುವ ಮುನ್ನ ದನಗಳ ಪರವಾಗಿ ಬೇಲು ತರುವವರು ಯಾರೂ ಇರುವುದಿಲ್ಲ. ಅಷ್ಟಕ್ಕೂ ಅನಾರೋಗ್ಯದ ನೆಪ ಹೇಳಿ ದನದ ಆಸ್ಪತ್ರೆಯಲ್ಲಿ ದಾಖಲಾಗಿ ತಪ್ಪಿಸಿಕೊಳ್ಳುವಂತೆಯೂ ಇರುವುದಿಲ್ಲ. ಪಾಪ ದನಗಳ ಪರವಾಗಿ ವಾದಿಸುವ ಜಾನುವಾರು ವಕೀಲರಂತೂ ಇಲ್ಲವೆ ಇಲ್ಲ. ಇನ್ನು ಈ ದೊಡ್ಡಿಗಳಿಗೆ ಬಿದ್ದ ದನಗಳು ಆರೋಪಿಗಳಾಗಿದ್ದರೂ, ಆರೋಪವನ್ನು ಸಾಬೀತುಪಡಿಸಿ ಅಪರಾಧಿಗಳನ್ನಾಗಿ ಗುರುತಿಸುವ ಯಾವ ಪ್ರಕ್ರಿಯೆಯೂ ನಡೆಯದು. ಇದಕ್ಕಾಗಿ ಯಾವ ನ್ಯಾಯಾಲಯವೂ, ನ್ಯಾಯಾಧೀಶರುಗಳೂ ಇಲ್ಲ. ಒಮ್ಮೆ ದೊಡ್ಡಿಗೆ ಬಿದ್ದರೆ ಮುಗಿಯಿತು ಅಪರಾಧಿಯೆಂದೇ ತೀರ್ಮಾನವಾಗಿಬಿಟ್ಟಿರುತ್ತದೆ.
ಪಕ್ಕದ ಊರುಗಳಿಂದ ಪರ ಊರುಗಳಿಗೆ ಬಂದ ದನಕರುಗಳಿಗೆ ತಮ್ಮ ಸಾಕುದಾರರ ಮನೆ ಗೊತ್ತಾಗದೆ ಕಂಗಾಲಾಗಿ ಹೊಲಗಳಲ್ಲಿ ಅಲೆದಾಡುತ್ತವೆ. ಇಂತಹ ದನಕರುಗಳೂ ಒಮ್ಮೆಮ್ಮೆ ದಿಕ್ಕುತಪ್ಪಿ ದೊಡ್ಡಿಜೈಲು ಸೇರುತ್ತವೆ. ಗುತ್ತಿಗೆದಾರರು ಕೆಲ ಊರುಗಳಲ್ಲಿ ದೊಡ್ಡಿಗೆ ಬಿದ್ದ ದನಗಳಿಗೆ ಮೇವು ಹಾಕುವುದನ್ನು ನೀರು ಕುಡಿಸುವುದನ್ನು ಮರೆಯುವುದೂ ಇದೆ. ಇಂತಹ ಸಂದರ್ಭದಲ್ಲಿ, ಹಸಿವು ತಾಳದೆ ದನಗಳು ಕಾಂಪೋಂಡ್ ಹಾರಿ ಪರಾರಿಯಾಗುವುದೂ ಇದೆ. ಇಲ್ಲವೆ ಹಸಿವಿನಿಂದ ಕಂಗಾಲಾಗಿ ಅರಚುವುದು, ಕೂಗುವುದು ನಡೆಯುತ್ತದೆ. ಈ ಕೂಗನ್ನು ಕೇಳಿಸಿಕೊಂಡ ದೊಡ್ಡಿ ಪಕ್ಕದ ಮನೆಯವರು ಮೇವು ಹಾಕುವುದು ನೀರು ಕುಡಿಸುವುದು ಮಾಡುತ್ತಾರೆ. ಹೀಗೆ ದೊಡ್ಡಿಯಿಂದ ತಪ್ಪಿಸಿಕೊಂಡ ದನಕರುಗಳ ಸುದ್ದಿ ಜೈಲಿನಿಂದ ತಪ್ಪಿಸಿಕೊಂಡ ಕೈದಿಯಷ್ಟು ದೊಡ್ಡ ಸುದ್ದಿಯೇನೂ ಅಲ್ಲ. ಕೆಲವೊಮ್ಮೆ, ‘ಕಳ್ಳ ದನ ದೊಡ್ಡಿ ಹಾರಿ ಹೋಗೇತಿ ನೋಡು’ ಎನ್ನುವ ಜನರ ಮಾತುಕತೆಯಲ್ಲಿಯೇ ಈ ಸುದ್ದಿ ಮುಕ್ತಾಯವಾಗುತ್ತದೆ.
ಒಮ್ಮೊಮ್ಮೆ ಹಾಲು ಕೊಡುವ ಆಕಳು ಕರುಗಳು ದೊಡ್ಡಿ ಸೇರುವುದೂ ಇದೆ. ಇಂತಹ ಸಂದರ್ಭದಲ್ಲಿ ಆ ಆಕಳಿಗೆ ಮೇವು ಹಾಕಿ ನೀರು ಕುಡಿಸಿ ಹಾಲು ಕರೆದುಕೊಳ್ಳುವ ಸ್ಪರ್ಧೆ ಏರ್ಪಡುತ್ತದೆ. ಆಗ ಗುತ್ತಿಗೆದಾರನಿಗೆ ತಿಳಿಯದಂತೆ ದೊಡ್ಡಿಗೆ ಇಳಿದು ಮೇವು ಹಾಕಿ ಆಕಳನ್ನು ನೇವರಿಸಿ ಹಾಲು ಕರೆದುಕೊಳ್ಳುವುದಿದೆ. ಹೀಗೆ ಹಾಲು ಕೊಡುವ ಕಾರಣಕ್ಕೆ ಆಕಳು ದೊಡ್ಡಿಯಲ್ಲಿದ್ದರೂ ಮೃಷ್ಟಾನ್ನ ಭೋಜನ ಸಿಗುವ ಕಾರಣಕ್ಕೆ ಬಂಧನದ ಅನುಭವ ಆಗುವುದಿಲ್ಲ. ಆಕಳು ಎತ್ತುಗಳು ಒಂದೇ ಬಾರಿಗೆ ದೊಡ್ಡಿಗೆ ಬಿದ್ದರಂತೂ ಕೆಲವು ಕಿಲಾಡಿ ಎತ್ತುಗಳು ದೊಡ್ಡಿಯಲ್ಲಿಯೇ ಆಕಳಿಗೆ ಗರ್ಭಕಟ್ಟಿಸುವ ಪ್ರಕ್ರಿಯೆ ಆರಂಭಿಸಿಬಿಡುತ್ತವೆ. ಅಂತಹ ಹೊತ್ತಲ್ಲಿ ಸುತ್ತಮುತ್ತಲೆಲ್ಲಾ ಓಡಾಡಿ ತಪ್ಪಿಸಿಕೊಂಡರೂ ಎತ್ತಿನ ಆಕ್ರಮಣಕ್ಕೆ ಬಲಿಯಾಗಿ ಆಕಳು ಮೈಚೆಲ್ಲಿ ಸಹಕರಿಸುತ್ತದೆ. ಈ ಚಟುವಟಿಕೆ ಕೋಣ ಎಮ್ಮೆ, ಆಡು ಓತು, ಕುರಿ ಪಟ್ಲಿ ಬಿದ್ದಾಗಲೂ ನಡೆಯುತ್ತಿರುತ್ತದೆ. ಆಗೆಲ್ಲ ಜನರಿಗೆ ಪುಕ್ಕಟೆ ಮನರಂಜನೆ ದೊರೆಯುತ್ತದೆ. ಇಂತಹ ಸಂದರ್ಭಗಳಲ್ಲಿ ಆಡು, ಎಮ್ಮೆ, ಆಕಳು, ಕುರಿಗಳಿಗೆ ದೊಡ್ಡಿಯೇ ಗರ್ಭಸ್ಥಳವಾಗಿ ಮಾರ್ಪಡುತ್ತದೆ. ಇಂತಹ ಆಕ್ರಮಣದ ಸಂದರ್ಭದಲ್ಲಿ ಆಡು, ಎಮ್ಮೆ, ಆಕಳು, ಕುರಿಗಳ ಶೋಷಣೆಯನ್ನು ತಪ್ಪಿಸಲು ಯಾರೊಬ್ಬರೂ ಬರುವುದಿಲ್ಲ. ಸ್ವತಃ ದೊಡ್ಡಿಯ ಗುತ್ತಿಗೆದಾರನೂ ಕೂಡ.
ಕೆಲವೊಮ್ಮೆ ತುಂಬು ಗರ್ಭಿಣಿಯರಾದ ಆಡು, ಎಮ್ಮೆ, ಆಕಳು, ಕುರಿ ದೊಡ್ಡಿಗೆ ಬೀಳುವುದೂ ಇದೆ. ಇಂತಹ ಸಂದರ್ಭದಲ್ಲಿ ದೊಡ್ಡಿಯಲ್ಲಿಯೇ ಇವುಗಳ ಹೆರಿಗೆಯಾಗಿ ತಮ್ಮ ಕಂದಮ್ಮಗಳನ್ನು ಪಡೆಯುತ್ತವೆ. ಆಗ ಅಂತಹ ಸಂತಾನದಲ್ಲಿ ಹುಟ್ಟಿದ ಕರುವನ್ನೋ, ಮೇಕೆ ಮರಿಯನ್ನೋ, ಕುರಿ ಮರಿಯನ್ನೋ ದೊಡ್ಡಿಮರಿ ಎಂಬ ಅಡ್ಡಹೆಸರಿನಿಂದ ಮನೆಯವರು ಕರೆಯುವುದಿದೆ. ಹೀಗೆ ಸಂತಾನ ಅಭಿವೃದ್ಧಿ ಮಾಡಿಕೊಂಡ ದನಕರುಗಳನ್ನು ನಂತರ ಅವುಗಳ ವಾರಸುದಾರರು ದಂಡ ಕಟ್ಟಿ ಬಿಡಿಸಿಕೊಂಡು ಹೋಗುತ್ತಾರೆ.
ಗ್ರಾಮೀಣ ಭಾಗದಲ್ಲಿ ಜೈಲುಗಳ ಬಗ್ಗೆ ಕೆಡುಕೆಂಬ ಕಾರಣಕ್ಕೆ ಹುಟ್ಟಿದ ನಂಬಿಕೆಗಳಂತೆ ಈ ದೊಡ್ಡಿಗಳ ಬಗ್ಗೆಯೂ ಕೆಲವು ಮೂಡನಂಬಿಕೆಗಳಿವೆ. ಕೆಲವು ಭಾಗದಲ್ಲಿ ಒಮ್ಮೆ ದೊಡ್ಡಿಗೆ ಬಿದ್ದ ಎತ್ತನ್ನು ಮತ್ತೆ ಬೇಸಾಯಕ್ಕೆ ಹೂಡುವುದಿಲ್ಲ. ಅದು ಮುಕ್ಕಾಯಿತು, ಪೂಜೆ ಮಾಡಲು ಬರುವುದಿಲ್ಲ ಎಂದು ನಂಬುತ್ತಾರೆ. ಹಾಗಾಗಿ ಎತ್ತಿನ ಸಂತೆಯಲ್ಲಿ ಮಾರಾಟ ಮಾಡಿ ಬೇರೆ ಎತ್ತನ್ನು ತರುವ ಸಂಗತಿಗಳೂ ಇವೆ. ಅಂತೆಯೇ ಆಕಳು ಗೋಮಾತೆ ಎಂದು ನಂಬುವುದರಿಂದ ಆಕಳು ದೊಡ್ಡಿಗೆ ಬಿದ್ದರೂ ಕೆಡುಕಾಗುತ್ತದೆ ಎಂಬ ನಂಬಿಕೆ ಇದೆ. ಅಥವಾ ಆಕಳನ್ನು ದೊಡ್ಡಿಗೆ ಹಾಕಿದವರಿಗೆ ಒಳಿತಾಗುವುದಿಲ್ಲ ಎಂಬ ನಂಬಿಕೆಯೂ ಇದೆ.
ಅಂತೆಯೇ ಕುರಿಯನ್ನು ಕುರಿಗಾರರು ಲಕ್ಷ್ಮಿ ಎಂದು ಭಾವಿಸುವ ಕಾರಣಕ್ಕೆ ದೊಡ್ಡಿಗೆ ಕುರಿಗಳನ್ನು ಹಾಕುವುದನ್ನು ವಿರೋಧಿಸುತ್ತಾರೆ. ಅಂತೆಯೇ ಇಂತಹ ಸಂದರ್ಭದಲ್ಲಿ ಕುರಿ, ಎತ್ತು, ಆಕಳನ್ನು ದೊಡ್ಡಿಯ ಒಳಗೆ ಹಾಕದೆ ಹೊರಗೆ ಕಟ್ಟಿ ಹಾಕುವ ಪದ್ಧತಿಯೂ ಇದೆ. ಇಲ್ಲಿ ದೊಡ್ಡಿಗೆ ಬಿದ್ದ ದನಗಳನ್ನು ಬಿಡಿಸಿಕೊಂಡು ಮನೆಗೆ ಹೋಗುವಾಗಲೂ, ಆಯಾ ಎತ್ತು ಆಕಳದ ಬೆನ್ನಿಗೆ ಸುಟ್ಟು ದೊಡ್ಡಿ ದೋಷವನ್ನು ಪರಿಹಾರ ಮಾಡಿಕೊಳ್ಳುತ್ತಾರೆ. ದೇವಿಗೆ ಬಿಟ್ಟ ಬಲಿ ಕೋಣವನ್ನು, ದೇವರಿಗೆ ಬಿಟ್ಟ ಆಕಳು ಎತ್ತುಗಳನ್ನು ದೊಡ್ಡಿಗೆ ಹಾಕುವಂತಿರಲಿಲ್ಲ. ಇವು ದೇವರ ದನಗಳಾದ ಕಾರಣ ಇವುಗಳನ್ನು ಮೇಯುವ ಹೊಲದಿಂದ ಆಚೆ ಹೊಡೆಯಬಹುದಷ್ಟೆ. ಅಷ್ಟಕ್ಕೂ ಹೀಗೆ ದೇವರ ದನಗಳನ್ನು ದೊಡ್ಡಿಗೆ ಹಾಕಿದರೆ ಅವುಗಳನ್ನು ದಂಡ ಕಟ್ಟಿ ಬಿಡಿಸಿಕೊಳ್ಳುವವರಾದರೂ ಯಾರು? ದೇವರ ದನಗಳನ್ನು ದೊಡ್ಡಿಗೆ ಹಾಕಿದವರಿಗೆ ಒಳ್ಳೆಯದು ಆಗುವುದಿಲ್ಲ ಎಂಬ ನಂಬಿಕೆಯೂ ಇಂತವರನ್ನು ತಡೆಯುತ್ತಿರುತ್ತದೆ.
ಗ್ರಾಮ ಪಂಚಾಯ್ತಿ ಮತ್ತು ಪಟ್ಟಣ ಪಂಚಾಯ್ತಿ ವ್ಯವಸ್ಥೆ ಇರದಿದ್ದಾಗ ಆಯಾ ಊರಿನ ಗೌಡ ಶಾನುಭೋಗರ ವಶದಲ್ಲಿ ಇಂತಹ ದೊಡ್ಡಿಗಳು ಇರುತ್ತಿದ್ದವು. ಆಗ ಗೌಡ ಶಾನುಭೋಗರು ದೊಡ್ಡಿಗೆ ದನಗಳು ಬರುವಂತೆ ಆಕರ್ಷಿಸಲು, ಯಾರು ದೊಡ್ಡಿಗೆ ದನಕುರಿಗಳನ್ನು ತಂದು ಹಾಕುತ್ತಾರೋ ಅಂತವರಿಗೆ ಇಂತಿಷ್ಟು ಎಂದು ಕಮೀಷನ್ ಕೊಡುತ್ತಿದ್ದರು. ಈ ಕಮೀಷನ್ ಹಣದ ಆಸೆಗೆ ಹೊಲಗಳಲ್ಲಿ ಮೇಯುವ ದನ ಕುರಿಗಳನ್ನು ತಂದು ದೊಡ್ಡಿಗೆ ಹಾಕಿ ಕಮೀಷನ್ ಪಡೆಯುವುದೂ ಇತ್ತು.
ಇಂತಹ ಸಂದರ್ಭದಲ್ಲಿ ಕೆಲವು ಭಾಗದಲ್ಲಿ ದರ್ಪದ ಗೌಡ ಶಾನುಭೋಗರು ದೊಡ್ಡಿದನಗಳನ್ನು ತಮ್ಮ ಮನೆಯ ದನಗಳ ಜತೆ ಕೂಡಿಕೊಳ್ಳುವುದೂ ಇತ್ತು. ಹೀಗೆ ದೊಡ್ಡಿ ದನಗಳನ್ನು ತಮ್ಮವೆಂದೇ ದರ್ಪದಿಂದ ಮಾರಿಕೊಳ್ಳುವ ಪ್ರಸಂಗಗಳೂ ನಡೆಯುತ್ತಿದ್ದವು. ಆಯಾ ಊರಿನವರ ದನಗಳು ದೊಡ್ಡಿಗೆ ಬಿದ್ದಾಗ ಹೆಚ್ಚಿನ ದಂಡ ಕಟ್ಟಿಸಿಕೊಂಡ ಸಿಟ್ಟಿಗೆ ಜನರು ಗೌಡನ ಹೊಲಕ್ಕೆ ರಾತ್ರಿಯೆಲ್ಲ ದನ ಬಿಟ್ಟು ಮೇಯಿಸಿ ಸೇಡು ತೀರಿಸಿಕೊಳ್ಳುವ ಪ್ರಸಂಗಗಳೂ ನಡೆಯುತ್ತಿದ್ದವು. ಗೌಡರು ದೊಡ್ಡಿಗೆ ಬಿದ್ದ ದನಕರುಗಳನ್ನು ನೋಡಿಕೊಳ್ಳುವ ಜವಾಬ್ದಾರಿಯನ್ನು ಊರಿನ ತಳವಾರಗೆ ವಹಿಸುತ್ತಿದ್ದರು. ದೊಡ್ಡಿಯ ದನಕುರಿಗಳಿಗೆ ಕಟ್ಟಿಸಿಕೊಳ್ಳುವ ದಂಡದ ಹಣವನ್ನು ಗೌಡ ಶಾನುಭೋಗರೇ ತಮ್ಮ ಸ್ವಂತಕ್ಕೆ ಬಳಸಿಕೊಳ್ಳುತ್ತಿದ್ದರು.
ಗ್ರಾಮೀಣ ಭಾಗದಲ್ಲಿ ತಾವು ಸಾಕಿದ ದನ ಕರು ಆಡು ಮೇಕೆ ಸಂಜೆ ಮನೆಗೆ ಬರದಿದ್ದರೆ, ಅಂತವರು ಆಯಾ ಊರಿನ ದೊಡ್ಡಿಗೆ ಹೋಗಿ ತಮ್ಮ ದನಕರುಗಳು ಪರಿಶೀಲನೆ ಮಾಡುತ್ತಾರೆ. ದೊಡ್ಡಿಗೂ ಬೀಳದಿದ್ದಾಗ ದಿಗಿಲುಗೊಂಡು ಹುಡುಕಾಟ ಆರಂಭಿಸುತ್ತಾರೆ. ಕೆಲವೊಮ್ಮೆ ದೊಡ್ಡಿಗೆ ಕುರಿಗಳು ಬಿದ್ದರೆ ಅಂತಹ ಕುರಿಗಳು ಎರಡು ಮೂರು ದಿನಗಟ್ಟಲೆ ದೊಡ್ಡಿಯಲ್ಲಿದ್ದರೆ, ಅಂತಹ ಕುರಿಗಳನ್ನು ಕಳ್ಳತನ ಮಾಡುವ ಪ್ರಕರಣಗಳೂ ನಡೆಯುತ್ತಿದ್ದವು. ಅಂತಹ ಸಂದರ್ಭದಲ್ಲಿ ಗೌಡರೋ, ಗುತ್ತಿಗೆದಾರರೋ ದೊಡ್ಡಿಯ ಕುರಿಗಳು ಕಳ್ಳತನವಾಗಿರುವ ಬಗ್ಗೆ ಪೋಲಿಸ್ ಕಂಪ್ಲೇಟ್ ಕೊಡುತ್ತಿದ್ದರು.
ಇಂದು ಬಹುತೇಕ ದೊಡ್ಡಿಗಳು ಕಾಣೆಯಾಗಿವೆ. ಅಥವಾ ದೊಡ್ಡಿಗಳಿಗೆ ತುಂಬುವಷ್ಟು ದನಕರುಗಳ ಸಂಖ್ಯೆಯ ಪ್ರಮಾಣದಲ್ಲಿಯೂ ಇಳಿಮುಖವಾಗಿದೆ. ಸಾಮಾನ್ಯವಾಗಿ ಉಳುವ ಭೂಮಿಯ ಪ್ರಮಾಣ ಕಡಿಮೆಯಾಗಿರುವುದಕ್ಕೂ, ಜಾನುವಾರುಗಳು ಮೇಯುವ ಗೋಮಾಳಗಳು ಇಲ್ಲವಾಗಿರುವುದಕ್ಕೂ, ಗ್ರಾಮೀಣ ಭಾಗದ ಜನರು ನಗರಗಳತ್ತ ಉದ್ಯೋಗ ಅರಸಿ ವಲಸೆ ಹೋಗುತ್ತಿರುವುದಕ್ಕೂ, ಯಂತ್ರಗಳನ್ನಾಧರಿಸಿದ ಕೃಷಿ ಹೆಚ್ಚುತ್ತಿರುವುದಕ್ಕೂ, ಮಳೆಯ ಪ್ರಮಾಣ ಕಡಿಮೆಯಾಗುತ್ತಿರುವುದಕ್ಕೂ ಹೆಣಿಗೆಯಂತೆ ಒಂದಕ್ಕೊಂದು ಸಂಬಂಧವಿದ್ದಂತಿದೆ.
ಇಂದು ಅನೇಕ ದೊಡ್ಡಿಗಳು ಒತ್ತುವರಿಗೆ ಒಳಗಾಗಿ ಅವುಗಳ ಗುರುತು ಕೂಡ ಅಳಿಸಿ ಹೋಗಿವೆ. ಕೆಲವೆಡೆ ಗ್ರಾಮ ಪಂಚಾಯ್ತಿ, ಪಟ್ಟಣ ಪಂಚಾಯ್ತಿಗಳು ದೊಡ್ಡಿಗಳಿದ್ದ ಜಾಗಗಳನ್ನು ಶಾಪಿಂಗ್ ಕಾಂಪ್ಲೆಕ್ಸ್ ಇನ್ನಿತರೆ ಕಟ್ಟಡಗಳನ್ನು ಕಟ್ಟಿಸಿ ಬಾಡಿಗೆ ಕೊಟ್ಟಿವೆ. ಇನ್ನು ಕೆಲವೆಡೆ ಮುಳ್ಳು ಕಂಟಿ ಬೆಳೆಸಿಕೊಂಡು ಸಾರ್ವಜನಿಕ ಶೌಚಾಲಯಗಳಾಗಿಯೂ ದೊಡ್ಡಿಗಳು ಬದಲಾಗಿವೆ. ಮೇಲೆ ವಿವರಿಸಿದಂತಹ ಸಾಂಸ್ಕೃತಿಕ ನೆನಪುಗಳನ್ನು ಮಾತ್ರ ದೊಡ್ಡಿಗಳು ಈಗ ಉಳಿಸಿವೆ. ಮನುಷ್ಯರನ್ನು ಬಂಧಿಸುವ ಜೈಲುಗಳ ಸಂಖ್ಯೆ ಹೆಚ್ಚುತ್ತಿದೆ, ಜೈಲು ಭದ್ರತೆಯ ಕಾರಣಕ್ಕೆ ಹೆಚ್ಚು ಹಣ ವ್ಯಯವಾಗುತ್ತಿದೆ, ಅದೇ ದನಗಳ ಜೈಲುಗಳು ಕಾಣೆಯಾಗುತ್ತಿವೆ. ಈ ನಡಿಗೆಯೇ ಮನುಷ್ಯ, ಸುತ್ತಮುತ್ತಲ ಪ್ರಾಣಿ ಪರಿಸರದ ಪರಸ್ಪರ ಸಂಬಂಧದಲ್ಲಿ ಆಗುತ್ತಿರುವ ಪಲ್ಲಟಕ್ಕೆ ಸಾಕ್ಷಿಯೆಂಬಂತೆ ಗೋಚರವಾಗುತ್ತಿದೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ