ಬುಧವಾರ, ನವೆಂಬರ್ 28, 2012

ವೀರಗಾಸೆ ವೀರರು

ಸುದೇಶ ದೊಡ್ಡಪಾಳ್ಯ   

-ಚಿತ್ರಗಳು-ಪವನ್ ಪಿ.ಶ್ರೀನಿವಾಸ್

ಕೃಪೆ: ಪ್ರಜಾವಾಣಿ,ಕಾಮನಬಿಲ್ಲು ಪುರವಣಿ, 29.11.2012
 


`ನಾವು ಕಲಾವಿದರು, ಆದರೂ ನಮ್ಮನ್ನು ಕೂಲಿ ಕಾರ್ಮಿಕರಂತೆ ನಡೆಸಿಕೊಳ್ಳಲಾಗುತ್ತದೆ. ನಾವು ಹಣಕ್ಕಾಗಿ ಕಲೆಯನ್ನು ಆರಿಸಿಕೊಂಡಿಲ್ಲ. ಕಲೆಗಾಗಿ, ಅದರ ಸೆಳೆತಕ್ಕಾಗಿ, ಸಂಪ್ರದಾಯವನ್ನು ಉಳಿಸುವ ಸಲುವಾಗಿ ಆಸೆಪಟ್ಟು ಆಯ್ಕೆ ಮಾಡಿಕೊಂಡಿದ್ದೇವೆ`- ಮೈಸೂರಿನ ಹೆಸರಾಂತ ವೀರಗಾಸೆ ಕಲಾವಿದ ಕಿರಾಳು ಮಹೇಶ್ ಬೇಸರದಿಂದಲೇ ಇಷ್ಟು ಹೇಳಿ ಸುಮ್ಮನಾದರು.

ಆದರೆ ಅವರ ಪಕ್ಕದಲ್ಲಿ ಕುಳಿತಿದ್ದ ಯುವ ಕಲಾವಿದ ರಮೇಶ್ ಸುಮ್ಮನೆ ಕುಳಿತುಕೊಳ್ಳಲಿಲ್ಲ. ತಮ್ಮ ಗುರುಗಳಾದ ಮಹೇಶ್ ಹೇಳದೇ ಉಳಿಸಿದ್ದ ಮಾತುಗಳನ್ನು ಹೇಳಿಬಿಡುವ ಧಾವಂತದಲ್ಲಿದ್ದರು. `ನಾವು ವೀರಗಾಸೆಯಿಂದ ನಾಲ್ಕು ಕಾಸು ಸಂಪಾದಿಸಿ, ಊರಲ್ಲಿ ಮನೆ, ಮೈಸೂರಲ್ಲಿ ಸೈಟು ತೆಗೆದುಕೊಳ್ಳಬೇಕು ಎನ್ನುವ ಆಸೆ ಇಲ್ಲ. ಇಂಥ ಆಸೆಯನ್ನು ನಮ್ಮಂಥ ಕಲಾವಿದರು ಇಟ್ಟುಕೊಳ್ಳುವುದು ಹಗಲುಗನಸಾಗುತ್ತದೆ.

ಎಷ್ಟೇ ನೋವುಗಳಿದ್ದರೂ ಅವುಗಳನ್ನು ನುಂಗಿಕೊಂಡು ವೀರಗಾಸೆ ಸಂಪ್ರದಾಯವನ್ನು ಉಳಿಸಿಕೊಂಡು ಬರುತ್ತಿದ್ದೇವೆ` ಎಂದು ಅಭಿಮಾನಪಟ್ಟರು.

ಕಿರಾಳು ಮಹೇಶ್ ಬೇಸರಕ್ಕೂ, ರಮೇಶ್ ಅವರ ವೀರಾವೇಷದ ಅಭಿಮಾನದ ನುಡಿಗೂ ಸಂಬಂಧವಿದೆ. ಜಾನಪದದಲ್ಲಿ ಗಂಡು ಕಲೆ ಎಂದು ಕರೆಸಿಕೊಳ್ಳುವ `ವೀರಗಾಸೆ` ನೃತ್ಯ ಪ್ರಕಾರವನ್ನು ಇವರೆಲ್ಲರೂ ಉಸಿರಾಗಿಸಿಕೊಂಡಿದ್ದಾರೆ.

ವೀರಗಾಸೆ ಸಂಪ್ರದಾಯವನ್ನು ತಲೆಯಿಂದ ತಲೆಗೆ ಜೋಪಾನವಾಗಿ ಕಾಪಾಡಿಕೊಂಡು ಬರುತ್ತಿದ್ದಾರೆ. ಒಂದು ವೇಳೆ ಮುತ್ತಾತ, ತಾತ, ತಂದೆಯವರಂತೆ ವೀರಗಾಸೆಗಾಗಿ ಇವರ ಮನಸ್ಸು ತುಡಿಯದೇ ಹೋಗಿದ್ದರೆ ವೀರಗಾಸೆ ಸಂಪ್ರದಾಯದ ಕಥೆ ಏನಾಗಬೇಕು? ವೀರಗಾಸೆ ಸೆಳೆತವೇ ಅಂಥದ್ದು, ಕರಡಿ ವಾದ್ಯದ ಸದ್ದು ಕಿವಿ ಮೇಲೆ ಬಿದ್ದರೆ ಸಾಕು, ಎ.ಆರ್.ರೆಹಮಾನ್ ಸಂಗೀತಕ್ಕೆ ಹೆಜ್ಜೆಹಾಕಲು ಹಿಂದೆ ಮುಂದೆ ನೋಡುವ ಮಂದಿಯೂ ನಿಂತಲ್ಲೇ ಹೆಜ್ಜೆ ಬದಲಿಸುವುದು ಗ್ಯಾರಂಟಿ.


ಅಂದಮೇಲೆ ನಿತ್ಯವೂ ಊರ ಗುಡಿಯ ಮುಂದೆ ಕರಡಿ ವಾದ್ಯದ ನಿನಾದ ಹೊಮ್ಮಿದರೆ ಪುಟ್ಟ ಮಕ್ಕಳಿಂದ ಹಿಡಿದು ವೃದ್ಧರ ತನಕ ಎಲ್ಲರೂ ನಾಲ್ಕು ಹೆಜ್ಜೆ ಹಾಕಿಯೇ ತೀರಬೇಕು. ಇಂತಹ ಒಳ ಸೆಳೆತವೇ ನೂರಾರು ಮಂದಿ ವೀರಗಾಸೆ ಕಲಾವಿದರನ್ನು ರೂಪಿಸಿದೆ.
ಕಿರಾಳು ಮಹೇಶ್ ವೀರಗಾಸೆ ನೃತ್ಯದಲ್ಲಿ ಅನುಭವಿ.

ಇವರು ಹೆಜ್ಜೆ ಹಾಕುವುದು, ವೀರಾವೇಷದಿಂದ ಕಣ್ಣುಗಳನ್ನು ಅರಳಿಸಿ ಗೋಲಿಯಂತೆ ಹೊರಳಿಸುವುದನ್ನು ನೋಡುವಾಗ ಭಯವಾಗುತ್ತದೆ. ಒಡಪುಗಳನ್ನು ಹೇಳುವುದನ್ನು ಕೇಳಬೇಕು ಎನಿಸುತ್ತದೆ. ಇಂತಹ ಮಹೇಶ್ `ಅಭಿನವಶ್ರೀ ವೀರಭದ್ರ ನೃತ್ಯ ತಂಡ` ಕಟ್ಟಿದ್ದಾರೆ. ಇವರ ತಂಡದಲ್ಲಿ 50ಕ್ಕೂ ಹೆಚ್ಚು ಯುವ ಕಲಾವಿದರು ಇದ್ದಾರೆ.

ರಮೇಶ್, ಬಿ.ಎಸ್.ಮಂಜುನಾಥ್, ಕೆ.ಎಂ.ಸೋಮಶೇಖರ್, ನಟರಾಜ, ರಾಜೇಶ್, ಮಹೇಶ್, ಕೆ.ಎಂ.ಭಾಸ್ಕರ್, ಎಂ.ಪ್ರಕಾಶ್, ಪ್ರಭು ಸೇರಿದಂತೆ ವೀರಗಾಸೆ ತಂಡದಲ್ಲಿರುವ ಎಲ್ಲ ಕಲಾವಿದರದೂ ಒಂದೇ ಕಥೆ. ಆದರೆ ಊರು, ಹೆಸರು, ವಯಸ್ಸು, ವಿದ್ಯಾಭ್ಯಾಸ ಮಾತ್ರ ಬೇರೆ ಬೇರೆ!

ರಮೇಶ್ ಮೈಸೂರು ಜಿಲ್ಲೆ ನಂಜನಗೂಡು ತಾಲ್ಲೂಕಿನ ಮೂಡಹಳ್ಳಿಯವರು. ಓದಿದ್ದು 9ನೇ ತರಗತಿ. ಮುಂದೆ ಕೈ ಬೀಸಿ ಕರೆದಿದ್ದು ವೀರಗಾಸೆ. ಹದಿನೈದನೇ ವಯಸ್ಸಿಗೆ ವೀರಗಾಸೆಗಾಗಿ ಮುಖಕ್ಕೆ ಬಣ್ಣ ಬಳಿದುಕೊಂಡು, ತಲೆ ಮೇಲೆ ಕಿರೀಟ ಇಟ್ಟುಕೊಂಡು ಕೈಯಲ್ಲಿ ಕತ್ತಿ ಹಿಡಿದು, ಕಾಲಿಗೆ ಗೆಜ್ಜೆ ಕಟ್ಟಿಕೊಂಡು ಕರಡಿ ವಾದ್ಯದ ತಾಳಕ್ಕೆ ತಕ್ಕಂತೆ ಹೆಜ್ಜೆ ಹಾಕುತ್ತಾ ವೀರಾವೇಷದಿಂದ ಕುಣಿಯತೊಡಗಿದರು. ಬಳಿಕ ಏನೇ ಮಾಡಿದರೂ ವೀರಗಾಸೆ ಇವರನ್ನು ಬಿಟ್ಟುಕೊಡಲಿಲ್ಲ. ತಲೆಯೊಳಗೆ ವೀರಗಾಸೆ ಕಲೆ ತುಂಬಿಕೊಂಡ ಮೇಲೆ ವಿದ್ಯೆಗೆ ಜಾಗ ಇಲ್ಲದಂತಾಯಿತು. ಹೀಗಾಗಿ ಹೆಚ್ಚು ಮಂದಿ ವೀರಗಾಸೆ ಕಲಾವಿದರು ಕಾಲೇಜು ಮುಖವನ್ನೇ ನೋಡಿಲ್ಲ.

ಇದು ಎಲ್ಲರ ಕಥೆಯೂ ಹೌದುರಮೇಶ್‌ಗೆ ಏಳೆಂಟು ವರ್ಷಗಳಿರಬೇಕು. ಹೊಲದಲ್ಲಿ ದನಕರುಗಳನ್ನು ಮೇಯಿಸಲು ಹೋಗುತ್ತಿದ್ದರು. ಅಲ್ಲಿ ಗೆಳೆಯರೊಂದಿಗೆ ಸೇರಿ ವೀರಗಾಸೆ ಆಟವಾಡುತ್ತಿದ್ದರು. ಹೆಗಲ ಮೇಲಿದ್ದ ಟವೆಲನ್ನು ಸೊಂಟಕ್ಕೆ ಸುತ್ತಿಕೊಂಡು, ದನ ಕಾಯುವ ಕೋಲನ್ನು ಕತ್ತಿಯಂತೆ ಹಿಡಿದು, ಧೂಳನ್ನೇ ವಿಭೂತಿಯಂತೆ ಹಣೆಗೆ ಹಚ್ಚಿಕೊಳ್ಳುತ್ತಿದ್ದರು.

ಕೆಲವರು ಪ್ಲಾಸ್ಟಿಕ್ ಬಿಂದಿಗೆಯನ್ನೇ ಕರಡಿ ವಾದ್ಯವನ್ನಾಗಿ ಮಾಡಿಕೊಂಡು ನುಡಿಸುತ್ತಿದ್ದರು. ಗದ್ದೆ ಬಯಲಿನಲ್ಲಿ ಸಿಗುವ ತರಗಲೆಯನ್ನು ಗುಡ್ಡೆ ಮಾಡಿ ಅದಕ್ಕೆ ಬೆಂಕಿ ಹಾಕುತ್ತಿದ್ದರು. ಆಗ ರಮೇಶ್ ವೀರಾವೇಷದಿಂದ ಹೆಜ್ಜೆ ಹಾಕುತ್ತಾ ಮೈಮರೆತು ಕುಣಿಯುತ್ತಿದ್ದರು. ಇಂಥ ಸಮಯದಲ್ಲಿ ಬೆಂಕಿಯನ್ನು ಕೊಂಡವೆಂದು ಭಾವಿಸಿ ಹಾಯುತ್ತಿದ್ದರು.

ಚಾಮರಾಜನಗರ ಜಿಲ್ಲೆಯ ಬಿಸಲವಾಡಿಯ ಬಿ.ಎಸ್.ಮಂಜುನಾಥ್ ತನ್ನ ಗೆಳೆಯ ರಮೇಶ್ ಅವರ ಕಥೆಯನ್ನು ಮುಂದುವರಿಸಿದಂತೆ ಹೇಳುತ್ತಿದ್ದರು. ಶಾಲೆ ಬಿಟ್ಟ ಕೂಡಲೇ ಮಂಜುನಾಥ್ ಮತ್ತು ಗೆಳೆಯರು ಊರ ಗುಡಿ ಹತ್ತಿರಕ್ಕೆ ಓಡುತ್ತಿದ್ದರು. ಅಲ್ಲಿ ಎಲ್ಲರೂ ಒಟ್ಟಿಗೆ ಸೇರುತ್ತಿದ್ದರು. ರಟ್ಟಿನ ಬಾಕ್ಸ್‌ಗೆ ದಾರ ಕಟ್ಟಿ ಕುತ್ತಿಗೆಗೆ ನೇತು ಹಾಕುತ್ತಿದ್ದರು. ಅವರು ಅದನ್ನೆ ಕರಡಿ ವಾದ್ಯದಂತೆ ಬಾರಿಸುತ್ತಿದ್ದರು.

ಉಳಿದವರು ವೀರಗಾಸೆ ವೇಷ ಹಾಕುತ್ತಿದ್ದರು. ಮದುವೆ ಸಂದರ್ಭದಲ್ಲಿ ಗಂಗೆ ತರುವ ಪದ್ಧತಿ ಇದೆ. ಕೊಡದಲ್ಲಿ ನೀರು ತುಂಬಿಸಿಕೊಂಡು ಮಹಿಳೆಯರು ಅವುಗಳನ್ನು ಹೊತ್ತುಕೊಂಡು ಬರುವಾಗ ಮಡಿ ಬಟ್ಟೆ ಹಾಸಲಾಗುತ್ತದೆ. ಆಮೇಲೆ ತೆಂಗಿನಕಾಯಿ ಒಡೆದ ನಂತರ ಮನೆಯೊಳಕ್ಕೆ ಓಡಿ ಹೋಗುವುದು ಸಂಪ್ರದಾಯ. ಗಂಗೆ ತರುವುದನ್ನು ಮಂಜುನಾಥ್ ಮತ್ತು ತಂಡ `ಅನುಕರಣೆ` ಮಾಡುತ್ತಿತ್ತು.

ಬಾಲ್ಯದಲ್ಲೇ ವೀರಗಾಸೆ ಮನಸ್ಸು ಹೊಕ್ಕ ಮೇಲೆ ಹೊರಕ್ಕೆ ಹಾಕುವುದಾದರೂ ಹೇಗೆ? ನೀನು ಒಲಿದಂತೆ ಹಾಡುವೆ ಎನ್ನುತ್ತಾ ವೀರಗಾಸೆಯೊಂದಿಗೇ ಮಿಳಿತಗೊಂಡಿದ್ದಾರೆ. ಮಂಜುನಾಥ್ ಮೈಸೂರಿನ ಮಹಾರಾಜ ಸಂಸ್ಕೃತ ಪಾಠಶಾಲೆಯಲ್ಲಿ ಆಗಮ ಕಲಿತು ಅರ್ಚಕರಾಗಿಯೂ ಕೆಲಸ ಮಾಡುತ್ತಿದ್ದಾರೆ.

ಹೆಚ್ಚಿನ ಕಲಾವಿದರು ಕೃಷಿಯನ್ನೇ ನಂಬಿದ್ದಾರೆ. ಊರಿನಲ್ಲಿರುವ ಹೊಲ, ಗದ್ದೆಗಳಲ್ಲಿ ಫಸಲು ತೆಗೆಯುತ್ತಾರೆ. ವೀರಗಾಸೆ ಸಂಪ್ರದಾಯ ಮತ್ತು ಕಲೆಗೆ ಒಲಿದಿರುವುದರಿಂದ ಕೃಷಿಯ ನಡುವೆಯೇ ವೀರಗಾಸೆ ವ್ಯವಸಾಯವನ್ನೂ ಮಾಡುತ್ತಿದ್ದಾರೆ. ವೀರಗಾಸೆಯನ್ನು ನಂಬಿ ಬದುಕುವುದು ಉಂಟೆ? ಏಕೆಂದರೆ ವರ್ಷಕ್ಕೆ ತುಂಬಾ ಬ್ಯುಸಿ ಕಲಾವಿದ ಎನಿಸಿಕೊಂಡವರೂ 50 ರಿಂದ 60 ಸಾವಿರ ಸಂಪಾದಿಸುವಲ್ಲಿ ಸುಸ್ತಾಗುತ್ತಾರೆ. ಅಂದರೆ ತಿಂಗಳಿಗೆ 5 ರಿಂದ 6 ಸಾವಿರ ಆದಾಯ! ಇದಕ್ಕಾಗಿ ಊರು, ರಾಜ್ಯದ ಮೂಲೆ ಮೂಲೆಗಳನ್ನು ಹಗಲು ರಾತ್ರಿ ಎನ್ನದೆ ಸುತ್ತಬೇಕು.

ಉತ್ಸವಗಳಲ್ಲಿ ಮುಂದೆವೀರಗಾಸೆ ನೃತ್ಯ ಮದುವೆ, ಗೃಹ ಪ್ರವೇಶಗಳಂತಹ ಶುಭ ಸಂದರ್ಭಗಳಲ್ಲಿ ಹೆಚ್ಚಾಗಿ ಪ್ರದರ್ಶನಗೊಳ್ಳುತ್ತಿತ್ತು. ವೀರಗಾಸೆಯವರು ಹೊಸ ಮನೆಗೆ ನುಗ್ಗಿದರೆ ಅಲ್ಲಿರುವ ದುಷ್ಟಶಕ್ತಿಗಳು ಓಡಿ ಹೋಗುತ್ತವೆ ಎನ್ನುವ ನಂಬಿಕೆ ಇದೆ. ಇಂಥ ನಂಬಿಕೆಯೇ ವೀರಗಾಸೆ ನೃತ್ಯ ಪ್ರಕಾರವನ್ನು ಇನ್ನೂ ಉಳಿಸಿಕೊಂಡು ಬರುತ್ತಿದೆ!

ಕೆಲವು ವರ್ಷಗಳಿಂದ ವೀರಗಾಸೆ ಹೆಚ್ಚಾಗಿ ಸಾರ್ವಜನಿಕವಾಗಿ ಪ್ರದರ್ಶನಗೊಳ್ಳುತ್ತಿದೆ. ಮೆರವಣಿಗೆ, ರಾಜ್ಯೋತ್ಸವ ಮತ್ತು ಧಾರ್ಮಿಕ ಸಮಾರಂಭಗಳೇ ಇರಲಿ, ಅಲ್ಲಿ ವೀರಗಾಸೆ ನೃತ್ಯ ಕಡ್ಡಾಯ ಎನ್ನುವಂತಾಗಿದೆ. ಹೀಗಾಗಿ ವೀರಗಾಸೆ ಕಲಾವಿದರು ನಾಲ್ಕು ಕಾಸಿನ ಮುಖ ನೋಡುವಂತಾಗಿದೆ. ಇಲ್ಲದೇ ಹೋದರೆ ಇವರು ಮದುವೆ, ಗೃಹ ಪ್ರವೇಶ ಮಾಡುವವರ ಕರೆಗಾಗಿ ಕಾಯುತ್ತಾ ಕೂರಬೇಕು.

ಗೌರವ, ಮನ್ನಣೆ ನೀಡಿಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಕಲಾವಿದರನ್ನು ಸರಿಯಾಗಿ ನಡೆಸಿ ಕೊಳ್ಳುವುದಿಲ್ಲ ಎನ್ನುವವರ ಪಟ್ಟಿಗೆ ವೀರಗಾಸೆ ಕಲಾವಿದರೂ ಸೇರುತ್ತಾರೆ. ಇನ್ನು ಸಂಘ, ಸಂಸ್ಥೆಗಳು ಹಬ್ಬ, ಜಾತ್ರೆ, ಉತ್ಸವ, ಸಮಾರಂಭಗಳ ಸಮಯದಲ್ಲಿ ಕರೆಸುತ್ತಾರೆ. ಕೆಲವರು ಪ್ರೀತಿಯಿಂದಲೇ ನಡೆಸಿಕೊಂಡರೆ, ಹಲವರು ದುಡ್ಡು ಕೊಟ್ಟಿಲ್ಲ ಎನ್ನುತ್ತಾರೆ. ಆದರೆ ನಮ್ಮ ಸ್ಥಿತಿಯನ್ನು ಯಾರೂ ಅರ್ಥ ಮಾಡಿಕೊಳ್ಳುವುದಿಲ್ಲ ಎಂದು ಕಲಾವಿದರು ಬೇಸರದಿಂದಲೇ ಹೇಳುತ್ತಾರೆ.

ಈ ತಂಡದಲ್ಲಿರುವ ಎಲ್ಲ ಕಲಾವಿದರೂ ಮೈಸೂರು ದಸರಾ ಉತ್ಸವದ ಜಂಬೂ ಸವಾರಿ ಮೆರವಣಿಗೆಯಲ್ಲಿ ಭಾಗವಹಿಸಿದ್ದಾರೆ. ಆರಂಭದಲ್ಲಿ ಜಂಬೂ ಸವಾರಿ ಮೆರವಣಿಗೆಯಲ್ಲಿ ವೀರಾವೇಷದಿಂದ ಹೆಜ್ಜೆಹಾಕಿ ಜನರಿಂದ `ಸೈ` ಎನಿಸಿಕೊಳ್ಳಲು ತುದಿಗಾಲ ಮೇಲೆ ನಿಲ್ಲುತ್ತಿದ್ದ ಕಲಾವಿದರು ಐದಾರು ದಸರಾ ಉತ್ಸವದಲ್ಲಿ ಪಾಲ್ಗೊಂಡ ಮೇಲೆ ಉತ್ಸಾಹವನ್ನೇ ಕಳೆದುಕೊಂಡುಬಿಟ್ಟಿದ್ದಾರೆ. ಇದಕ್ಕೆ ಕಾರಣ, ಸರ್ಕಾರ ಜಾನಪದ ಕಲಾವಿದರನ್ನು ನಿಕೃಷ್ಟವಾಗಿ ಕಾಣುವುದು.

`ಇಪ್ಪತೈದು ಕೆ.ಜಿ ತೂಕದ ವೇಷಭೂಷಣವನ್ನು ಹಾಕಿಕೊಂಡು ಬಿಸಿಲು, ಮಳೆಯನ್ನು ಲೆಕ್ಕಿಸದೆ ಆರೇಳು ಕಿಲೋಮೀಟರ್ ಪ್ರದರ್ಶನ ನೀಡುತ್ತೇವೆ. ಆದರೆ ಸವಲತ್ತು ಮತ್ತು ಸಂಭಾವನೆ ವಿಚಾರದಲ್ಲಿ ನಮ್ಮದು ಕೊನೆಯ ಸ್ಥಾನ` ಎಂದು ಕಿರಾಳು ಮಹೇಶ್ ಅಸಮಾಧಾನ ವ್ಯಕ್ತಪಡಿಸಿದರು.

ಕಷ್ಟ, ಸುಖ, ನೋವು, ನಲಿವು, ಅವಮಾನ, ಸನ್ಮಾನ ಯಾವ ಕ್ಷೇತ್ರವನ್ನು ಬಿಟ್ಟಿದೆ ಹೇಳಿ? ಅದೇ ರೀತಿ ವೀರಗಾಸೆಯನ್ನೂ ಬಿಟ್ಟಿಲ್ಲ. ಆದರೂ ಹಳ್ಳಿಗಾಡಿನ ಯುವ ಮನಸ್ಸುಗಳು ಮತ್ತೆ ಮತ್ತೆ ವೀರಗಾಸೆಯ ವೇಷವನ್ನು ತೊಟ್ಟು ವಚನಗಳನ್ನು ಹೇಳುತ್ತಾ, ವೀರಾವೇಷದಿಂದ ಕುಣಿದು, ಜನರಿಂದ ಸೈ ಎನಿಸಿಕೊಳ್ಳುವುದನ್ನು ಬಯಸುತ್ತಲೇ ಇವೆ. ಆದರೆ ಸಮಾಜ, ಸರ್ಕಾರ ಮಾತ್ರ ಜಾನಪದ ಕಲಾ ಪ್ರಕಾರ ಮತ್ತು ಕಲಾವಿದರನ್ನು `ಬಡವರು` `ಹಳ್ಳಿಗರ ಕಲೆ` ಎನ್ನುವಂತೆ ನೋಡುತ್ತಿವೆ.

ಪಂಡಿತರು, ವಿದ್ವಾಂಸರಿಗೆ ಲಕ್ಷ ಲಕ್ಷ ರೂಪಾಯಿ ಸಂಭಾವನೆ ಕೊಟ್ಟು ಐಷಾರಾಮಿ ಹೋಟೆಲ್‌ಗಳಲ್ಲಿ ಇಳಿಸಿ, ಹವಾನಿಯಂತ್ರಿತ ಕಾರುಗಳಲ್ಲಿ ಅವರನ್ನು ವೇದಿಕೆ ಬಳಿಗೆ ಕರೆ ತರುತ್ತಾರೆ. ಆದರೆ ಈ ನೆಲದ ಜನಪದರ ಬದುಕಿನಿಂದ ಹುಟ್ಟಿ ಬಂದಿರುವ ಜಾನಪದ ಕಲೆಯನ್ನು ಬದುಕಾಗಿಸಿಕೊಂಡಿರುವವರನ್ನು ನೋಡುವ ಮನೋಭಾವ ಬದಲಾಗಬೇಕು.

ಆಕರ್ಷಕ ವೇಷಭೂಷಣವೀರಗಾಸೆಗೆ ವೀರಭದ್ರ ಕುಣಿತ ಎನ್ನುವ ಹೆಸರೂ ಇದೆ. ಹೆಚ್ಚಾಗಿ ಶಿವಾರ್ಚಕರು ಈ ಕಲೆಯನ್ನು ವಂಶಪಾರಂಪರ್ಯವಾಗಿ ಮುಂದುವರೆಸಿಕೊಂಡು ಬರುತ್ತಿದ್ದಾರೆ. ಉತ್ತರ ಕರ್ನಾಟಕದಲ್ಲಿ ಪುರವಂತರು ಹೆಸರಿನಿಂದ ಕರೆಯಲಾಗುತ್ತದೆ.

ಮೈಸೂರು ಭಾಗದ ವೀರಗಾಸೆ ಕಲಾವಿದರು ಆಕರ್ಷಕ ವೇಷಭೂಷಣದೊಂದಿಗೆ ಪ್ರದರ್ಶನ ನೀಡುವುದರಿಂದ ಜನಮನವನ್ನು ಗೆಲ್ಲುತ್ತಿದ್ದಾರೆ. ಮುಖಕ್ಕೆ ಬಣ್ಣ ಹಚ್ಚಿಕೊಳ್ಳುತ್ತಾರೆ.

ತಲೆ ಮೇಲೆ ಕಿರೀಟ, ಕೊರಳಿಗೆ ರುದ್ರಾಕ್ಷಿ ಮಾಲೆ, ಎದೆಗೆ ವೀರಭದ್ರನ ಕವಚ, ರುಂಡ ಮಾಲೆ, ತೋಳಲ್ಲಿ ನಾಗಸರ್ಪ, ತಲೆಯ ಚಂಡಮೃಗದ ಬಾಲ, ಕೀರ್ತಮುಖಗಳು, ಹಣೆಗೆ ವಿಭೂತಿ, ಕಿವಿಗೆ ನಾಗಕೊಂಡಲಿ, ಮುಂಗೈಯಲ್ಲಿ ಅರಿದಾಳು ಕೀರ್ತಮುಖ, ಕೈಯಲ್ಲಿ ಕತ್ತಿ, ಬಾಕು, ಗುರಾಣಿ ಹಿಡಿದು ವೀರಭದ್ರನ ಒಡಪುಗಳನ್ನು ಹೇಳುತ್ತಾ, ದಕ್ಷಬ್ರಹ್ಮ, ರೇವಣ್ಣ ಸಿದ್ದೇಶ್ವರ, ಮಾರುತಿ ಲಿಂಗಧಾರಣೆ, ಮಲೈ ಮಹದೇಶ್ವರ, ಶರಬವತಾರದ ಕಥೆಗಳನ್ನು ಹೇಳುತ್ತಾರೆ.


ವೀರಗಾಸೆ ಹುಟ್ಟುದಕ್ಷಬ್ರಹ್ಮನ ಮಗಳು ದಾಕ್ಷಾಯಿಣಿ ಈಶ್ವರನ ಹೆಂಡತಿ. ಈಕೆ ತಂದೆಯ ಇಷ್ಟಕ್ಕೆ ವಿರುದ್ಧವಾಗಿ ಈಶ್ವರನನ್ನು ಮದುವೆಯಾಗಿರುತ್ತಾಳೆ. ಹೀಗಾಗಿ ದಕ್ಷಬ್ರಹ್ಮ ತಾನು ಮಾಡುವ ಯಜ್ಞಕ್ಕೆ ಮಗಳನ್ನು ಆಹ್ವಾನಿಸುವುದಿಲ್ಲ. ವಿಷಯ ತಿಳಿದ ದಾಕ್ಷಾಯಿಣಿ ತಂದೆ ನಡೆಸುತ್ತಿರುವ ಯಜ್ಞದಲ್ಲಿ ಪಾಲ್ಗೊಳ್ಳಲು ತೆರಳುತ್ತಾಳೆ.

ಅಲ್ಲಿ ದಕ್ಷಬ್ರಹ್ಮ ಮಗಳು ದಾಕ್ಷಾಯಿಣಿ ಮತ್ತು ಅಳಿಯ ಈಶ್ವರನನ್ನು ನಿಂದಿಸುತ್ತಾನೆ. ಪತಿ ನಿಂದನೆಗೆ ನೊಂದ ದಾಕ್ಷಾಯಿಣಿ ಯಜ್ಞಕುಂಡಕ್ಕೆ ಹಾರಿ ಪ್ರಾಣ ಕಳೆದುಕೊಳ್ಳುತ್ತಾಳೆ. ಈ ವಿಷಯ ತಿಳಿದ ಈಶ್ವರ ರುದ್ರಾವತಾರ ತಾಳುತ್ತಾನೆ. ತನ್ನ ಹಣೆಯಲ್ಲಿ ಮೂಡುವ ಬೆವರನ್ನು ತೆಗೆದು ಒಗೆಯುತ್ತಾನೆ. ಆ ಬೆವರಿನಲ್ಲಿ ಹುಟ್ಟುವವನೇ ವೀರಭದ್ರ. ಈತ ವೀರಾವೇಷದಿಂದ ಗಣಗಳ ಜೊತೆ ನುಗ್ಗಿ ಯಜ್ಞವನ್ನು ಹಾಳು ಮಾಡಿ ದಕ್ಷಬ್ರಹ್ಮನ ತಲೆಯನ್ನು ಕತ್ತರಿಸಿ ಯಜ್ಞ ಕುಂಡಕ್ಕೆ ಹಾಕುತ್ತಾನೆ. ಹೀಗೆ ವೀರಗಾಸೆ ನೃತ್ಯ ಹುಟ್ಟಿಕೊಂಡಿತು.

ಗುರು ಕಿರಾಳು ಮಹೇಶ್ಮೈಸೂರು, ಚಾಮರಾಜನಗರ ಮತ್ತು ಮಂಡ್ಯ ಜಿಲ್ಲೆಯಲ್ಲಿ ಇತ್ತೀಚಿನ ವರ್ಷಗಳಲ್ಲಿ ವೀರಗಾಸೆ ಕಲಾವಿದರ ಸಂಖ್ಯೆ ಹೆಚ್ಚಾಗಿದೆ. ಇದಕ್ಕೆ ಕಿರಾಳು ಮಹೇಶ್ ಕಾರಣ. ಇವರು ಬಿಡುವಿನ ವೇಳೆಯಲ್ಲಿ ಆಸಕ್ತ ಮತ್ತು ಉತ್ಸಾಹಿ ತರುಣರಿಗೆ ವೀರಗಾಸೆ ನೃತ್ಯವನ್ನು ಕಲಿಸುತ್ತಿದ್ದಾರೆ. ಸ್ವತಃ ತಂಡವನ್ನು ಕಟ್ಟಿಕೊಂಡು ಊರು-ಕೇರಿ, ರಾಜ್ಯ, ಹೊರ ರಾಜ್ಯಗಳಲ್ಲಿ ಪ್ರದರ್ಶನ ನೀಡುತ್ತಿದ್ದಾರೆ.

ಇವರು ಹಲವು ಬೇಸಿಗೆ ಶಿಬಿರಗಳಲ್ಲಿ ಎಳೆಯರಿಗೆ ವೀರಗಾಸೆ ನೃತ್ಯವನ್ನು ಹೇಳಿಕೊಡುತ್ತಿದ್ದಾರೆ. ಕಿರಾಳು ಮಹೇಶ್ ಅವರ ಪುತ್ರ ಕೆ.ಎಂ.ಭಾಸ್ಕರ್ ಜೆಎಸ್‌ಎಸ್ ಕಾಲೇಜಿನಲ್ಲಿ ಪ್ರಥಮ ಬಿ.ಕಾಂ. ಅಭ್ಯಾಸ ಮಾಡುತ್ತಿದ್ದಾರೆ. ಇವರೂ ಸಹ ವೀರಗಾಸೆ ನೃತ್ಯವನ್ನು ಕಲಿತಿದ್ದಾರೆ. ಮಹೇಶ್ ಗರಡಿಯಲ್ಲಿ 150 ಕ್ಕೂ ಹೆಚ್ಚು ಮಂದಿ ಪಳಗಿದ್ದಾರೆ.

ಸೋಮವಾರ, ನವೆಂಬರ್ 19, 2012

ನುಡಿಸಿರಿಯಲ್ಲಿ ಕರಾವಳಿಯ ಕೋಮುವಾದ ಸಹಜ ಜೀವನ ಶೈಲಿಯಾಗಿ ಬೆಳೀತಿರುವ ಅಪಾಯದ ಬಗ್ಗೆ ಡಾ.ವಿನಯಾ ಅವರ ಆತಂಕ ಮತ್ತು ಸ್ಪಂದನೆ:


ನುಡಿಸಿರಿಯಲ್ಲಿ ಕರಾವಳಿಯ ಕೋಮುವಾದ ಸಹಜ ಜೀವನ ಶೈಲಿಯಾಗಿ ಬೆಳೀತಿರುವ ಅಪಾಯದ ಬಗ್ಗೆ ಡಾ.ವಿನಯಾ ಅವರ ಆತಂಕ ಮತ್ತು ಸ್ಪಂದನೆ:
 

 
 
 ’ಗೌರಿ ಲಂಕೇಶ’ದಲ್ಲಿ ಜಿ. ರಾಜಶೇಖರ ಮತ್ತು ಕೆ. ಫಣಿರಾಜ್ ಅವರ ಲೇಖನಗಳನ್ನು ಓದಿದ ಮೇಲೆ ನುಡಿಸಿರಿಯ ಕವಿಗೋಷ್ಠಿಗೆ ಒಪ್ಪಿದ್ದ ನನಗೆ ದಿಗಿಲಾಯಿತು. ಎಲ್ಲ ಸಂದಿಗ್ಧಗಳಾಚೆ ಕೊನೆಗೂ ಭಾಗವಹಿಸಿದೆ. ಆ ವೇದಿಕೆ, ಆ ಶಿಸ್ತು, ಆ ಸಂಭ್ರಮ, ಎಲ್ಲ ಸುಖವೇ ಎಂಬ ಭಾವಮೂಡಿಸುವ ಪರಿಸರದಲ್ಲಿ ನನ್ನ ತಲೆಮಾರಿನ ಬರಹಗಾರರ ಎದುರಿಗಿರುವ ತಲ್ಲಣವನ್ನು ಅತ್ಯಂತ ಕಡಿಮೆ ಅವಧಿಯಲ್ಲಿ ಹೇಗೆ ನಿರೂಪಿಸಲಿ? ನೆಲ ಒಡೆದು ಬೀಜ ಮೊಳೆದೋರುವ ಸಂಕಟವನ್ನು ಅನುಭವಿಸಿದೆ. ವೇದಿಕೆಯ ಮೇಲಿದ್ದ ಅನಂತಮೂರ್ತಿಯವರನ್ನು ನಿಸಾರ್ ಅವರನ್ನು ಬರಗೆಟ್ಟು ನೋಡುತ್ತಿದ್ದೆ. ದೊಡ್ಡವರು ಒಂದು ಸುಳುವು ಕೊಟ್ಟರೆ ಆ ಸೂರುಹಿಡಿದು ಚಣಹೊತ್ತು ಸಂಭಾಳಿಸಿಯೇನು. ಅಂತಹ ಯಾವ ಸುಳುವೂ ಸಿಗಲಿಲ್ಲ. ಮತ್ತೆ ದಿಕ್ಕೆಡುವಿಕೆ. ಮತ್ತೊಮ್ಮೆ ಅನ್ನಿಸಿತು. ಎಲ್ಲ ಅವರೇ ಮಾಡಬೇಕೆ? ಈ ಇಳಿವಯದಲ್ಲೂ? ನಮಗೆಲ್ಲ ಏನಾಗಿದೆ? ನನ್ನೊಳಗೆ ಕಡಲ ಅಲೆಯಂತೆ ಏಳುವ ಬೀಳುವ ಅರಗುವ ಮತ್ತೆ ಏಳುವ ಪ್ರಶ್ನೆಗಳು, ಮಾತುಗಳು.

 ಕರಾವಳಿಯಲ್ಲಿ ಕೋಮುವಾದ ಸಹಜ ಜೀವನ ಶೈಲಿಯಾಗಿ ಬೆಳೀತಿರುವ ಅಪಾಯ ಮತ್ತು ಸಾಹಿತ್ಯ ಕಲೆಗಳನ್ನು ಜನಬದುಕಿನಿಂದ ಹೊರತೆಗೆದು ದೇವರ ಮೂರ್ತಿಯಂತೆ ಪವಿತ್ರಗೊಳಿಸಿ ಪ್ರತಿಷ್ಠಾಪಿಸುವ ಸಂಕಟವನ್ನು ಸಮೀಕರಿಸಿಕೊಳ್ಳಬೇಕಿತ್ತು. ಬಾಲ್ಯದಲ್ಲಿ ಕಂಡ ಕೂಡುಕಟ್ಟಿನ ಕಡಲ ಸಂಸ್ಕೃತಿ ಸ್ಮೃತಿಕೋಶದಲ್ಲಿ ಜೀವಂತವಾಗಿತ್ತು. ಕಾವ್ಯವು ವರ್ತಮಾನದಲ್ಲಿ ಪ್ರೇರಕಗೊಳ್ಳುವ ಎಳೆ ಹಿಡಿದು ಕರಾವಳಿಯಲ್ಲಿ ಕೋಮುವಾದ ಬೆಳೆಯಲು ನಾಗರಿಕ ಪ್ರಜ್ಞೆಯ ಸಭ್ಯತೆಯ ಪಾಲುದಾರಿಕೆಯನ್ನು ನೆನಪಿಸಿದೆ.

 ಜನ ಸ್ಪಂದಿಸಿದ ರೀತಿ ಅಚ್ಚರಿಯದಾಗಿತ್ತು. ವೇದಿಕೆಯಲ್ಲಿದ್ದ ಡಾ. ಮೋಹನ ಆಳ್ವ ಅವರು ’ಏನನ್ನಬೇಕೋ ತಿಳೀತಿಲ್ಲ’ ಅಂತ ವಾತ್ಸಲ್ಯ ಮತ್ತು ಗೌರವದಿಂದ ಹೇಳಿದರು. ವಿದ್ಯಾರ್ಥಿಗಳು ತುಂಬ ಭಾವೋದ್ವೇಗಗೊಂಡಿದ್ದರು. ಒಂದಿಬ್ಬರು ಬಿಕ್ಕಿ ಬಿಕ್ಕಿ ಅಳುತ್ತಿದ್ದರು. ಎಲ್ಲಿಂದಲೋ ಬಂದವರು ಅಲ್ಲಿಯವರು ಎಷ್ಟೆಲ್ಲ ಜನ ತುಂಬ ಡಿಸ್ಟರ್ಬ ಆಗಿದ್ದರು. ಮಾರನೇ ದಿನದ ಸಂವಾದದಲ್ಲಿ ಡಾ. ಮೋಹನ ಅಳ್ವ ಅವರು ಕೋಮುವಾದವನ್ನು ತಡೆವ ಪ್ರಯತ್ನದಲ್ಲಿ ನಿಮ್ಮೊಂದಿಗೆ ಪಾಲುದಾರ ಅಂತ ಖಚಿತವಾಗಿ ಹೇಳಿದರಂತೆ.

 ’ಎಂತಹ ಬಂಡವಾಳಶಾಹಿಯೂ ಒಂದು ಕ್ಷಣದ ಉದ್ವೇಗದಲ್ಲಿ ಕ್ರಾಂತಿಗೆ ಜಯವಾಗಲಿ ಎಂದುಬಿಡಬಲ್ಲ’ ಎಂಬ ಸುಡುಸತ್ಯವನ್ನು ನೆನಪಿಟ್ಟುಕೊಂಡೂ ಈ ಘಟನೆ ನನ್ನೊಳಗೊಂದು ಅಭಿಪ್ರಾಯವನ್ನು ರೂಪಿಸಿದೆ. ಜನ ನಾವಂದುಕೊಂಡಷ್ಟು ನಿರ್ದಯಿಗಳಲ್ಲ. ಮನುಷ್ಯನ ಸಾಮರಸ್ಯದ ತುಡಿತ ಅನಾದಿಯದ್ದು, ಸಜೀವವಾದದ್ದು. ಅದನ್ನು ಕೋಮುವಾದದ ಎಂತಹ ಹತಾರವೂ ನಿರ್ಮೂಲನ ಮಾಡಲಾರದು. ಬರಹಗಾರರಾದ ನಾವು ನಮ್ಮ ನಿಜತುಡಿತವನ್ನು ಜನರೊಂದಿಗೆ ಹಂಚಿಕೊಳ್ಳುತ್ತಿಲ್ಲ. ಸಾಹಿತ್ಯ-ಕಲೆಯ ಕುರಿತು ಮಾತನಾಡುವಾಗೆಲ್ಲ ನಮಗೂ ತಿಳಿಯದ ಅಮೂರ್ತ ಮಾತುಗಳನ್ನೇ ಆಡುತ್ತೇವೆ. ಆಗೆಲ್ಲ ಜನರಿಂದ ನಮ್ಮನ್ನು ಬೇರೆಯಾಗಿಸಿಕೊಳ್ಳುವ ಅಹಂಕಾರವು ಬುಸುಗುಡುತ್ತಿರುತ್ತದೇನೋ. ಯಾವ ಮಗುವೂ ಜಾತಿ-ಧರ್ಮದ ಸಂಕೋಲೆಯನ್ನು ಹೊತ್ತು ಜನಿಸಲಾರದು. ನಾವು ಉಸಿರಾಡುವ ಗಾಳಿ ಪ್ರತಿಯೊಂದು ಜೀವಿಯ ಒಳಹೊಕ್ಕು ಹೊರಬರುತ್ತದೆಂಬ ವಿಜ್ಞಾನದ ಮೊದಲ ಪಾಠವನ್ನು ನೆನಪಿಸಲು ನಮ್ಮ ಘನತೆ ಅಡ್ಡಬರುತ್ತದಲ್ಲವೇ? ಕಾರ್ನಾಡರು ನೈಪಾಲ್‌ರನ್ನು ಆಕ್ಷೇಪಿಸಿರುವುದು ಬರಹಗಾರನಿಗಿರಬೇಕಾದ ಕನಿಷ್ಠ ಬದ್ಧತೆಯ ಕುರಿತು. ಆದರೆ ಚರ್ಚೆಯ ಕೇಂದ್ರವನ್ನು ತಪ್ಪಿಸುವ, ಸಾಹಿತ್ಯ ಕ್ಷೇತ್ರದಲ್ಲಿ ಆಗಾಗ ನಡೆಯುವ ಸರಳ ಜಗಳದ ಮಟ್ಟಕ್ಕೆ ಇಳಿಸುವ ಪ್ರಯತ್ನಗಳು ಪೊಗದಸ್ತಾಗಿಯೇ ನಡೆಯುತ್ತಿವೆ. ಇಂತಹ ಸ್ಥಿತಿಯಲ್ಲಿ ಮೌನ ಎಂಬ ಮಹಾಪಾಪದಿಂದ ನಮ್ಮನ್ನು ಮೇಲೆತ್ತಿಕೊಳ್ಳುವುದು ಅಗತ್ಯ ಅಲ್ಲವೇ? ಚಾಮಸ್ಕಿ - ಮನುಷ್ಯರ ಬದುಕಿಗೆ ಸಂಬಂಧಿಸಿದ ವಾಸ್ತವಿಕ ಸತ್ಯಗಳನ್ನು ತಿಳಿಸುವ ಮಧ್ಯವರ್ತಿಯಾಗಿ ಕೆಲಸ ಮಾಡುವುದು ಬರಹಗಾರರ ನೈತಿಕ ಜವಾಬ್ದಾರಿ ಎಂದಿದ್ದು ನೆನಪಾಗ್ತಿದೆ.

 ಆವತ್ತು ನಾನೇನೂ ಮಹಾ ಹೇಳಿರಲಿಲ್ಲ. ಸೇರಿದ್ದ ಸಂವೇದನಾಶೀಲರು ತಮ್ಮ ತಮ್ಮ ಅನುಭವಗಳಲ್ಲಿ, ವರಸೆಗಳಲ್ಲಿ ಮಾತನ್ನು ಮರುಸೃಷ್ಟಿಸಿಕೊಂಡರು. ಆಡದೇ ಉಳಿದ ಎಲ್ಲವನ್ನೂ ಅವರು ತಮ್ಮೊಂದಿಗೆ ತಾವು ಮಾತಾಡಿಕೊಂಡರು. ನನ್ನ ಕವಿತೆಯ ಅರ್ಥಲಯವನ್ನು ಮಿದ್ದು ನಾದದ ಉಸಿರು ತುಂಬಿ ಹಾಡಿದ ಕಲಾವತಿ ದಯಾನಂದ್ ಮತ್ತು ತಂಡದವರು ಮಾತನ್ನು ಮುಂದುವರಿಸಿದ್ದೇ ಅಲ್ಲವೇ? ದೇವನೂರು ಹೇಳುವ ’ನನ್ನ ಕಿರುಬೆರಳಗಾತ್ರದ ಬರಹ...’ ಎಂಬ ಮಾತು ಆಯಾಚಿತವಾಗಿ ನೆನಪಾಗ್ತಿದೆ. ಕಿರುಬೆರಳ ಉಗುರಿನಷ್ಟೂ ಅಲ್ಲದ ಅಲ್ಪ ಮಾತು ಮನಸ್ಸುಗಳಾಳಕ್ಕಿಳಿದು ಮೀಟಬಲ್ಲುದಾದರೆ, ನಾವೆಲ್ಲ ಮಾತಾಡುವುದು, ಬರೆಯುವುದು ಯಾವ ಕಂಪನವನ್ನೂ ಉಂಟು ಮಾಡದು ಎನ್ನಬಹುದೆ?

ಡಾ. ವಿನಯಾ
---------

ಕವಿಸಮಯ - ಕವಿ ನಮನ

ನನ್ನ ಕಾವ್ಯ ಪ್ರೇರಣೆಗಳು
 
 ಬರಹ ನನಗೆ ಜೀವದ್ರವ್ಯ. ಈ ಜೀವದ್ರವ್ಯಕ್ಕೆ ಧಾತುವನ್ನು ಎರೆದ ಸಂಗತಿಗಳು ಅಗಣಿತ. ಆ ಅಸಂಖ್ಯ ಜೀವಸೆಲೆಗಳನ್ನು ನೆನೆಯುವುದು ಹೇಗೆ? ನೆನೆಯದಿರುವುದು ಹೇಗೆ? ನಾನು ಕಡಲ ದಂಡೆಯಲಿ ಬೆಳೆದವಳು. ಉಪ್ಪುನೀರ ಹೊಳೆಯ ದಡದಲ್ಲೇ ಸಿಹಿನೀರ ಬಾವಿಯನ್ನು ಕಂಡಿದ್ದೆ. ಗಜನಿ ಭೂಮಿಯ ಉಪ್ಪು ಉಂಡೇ ನೂರಾರು ತೆಂಗುಗಳನ್ನು ಹೆತ್ತ ಮರದ ನೆರಳಲ್ಲಿ ಬೆಳೆದಿದ್ದೆ. ಕರಾವಳಿಯ ಕೂಡು ಬದುಕಿನ ಅಸಂಖ್ಯ ನೆನಹುಗಳು ನನ್ನೊಳಗಿವೆ.

 ನನಗೆ ಓದಿನ ರುಚಿ ಹಚ್ಚಿ ಕಾವ್ಯ ಪರಂಪರೆಯೊಂದಿಗೆ ಸಂಬಂಧ ಹಚ್ಚಿದವ ನನ್ನ ಅಜ್ಜ. ತಿಳಿಯಲಾರದ ವಯದಲ್ಲಿಯೇ ಕುಮಾರವ್ಯಾಸ ಭಾರತ ಓದಲು ಹಚ್ಚಿದ್ದ. ನನ್ನ ಅಜ್ಜಿ ದೊಡ್ಡ ಜಮೀನ್ದಾರೀ ಕುಟುಂಬದಲ್ಲಿ ಹನ್ನೆರಡು ಮಕ್ಕಳ ತಾಯಿ, ತನ್ನ ಮಕ್ಕಳು ದೊಡ್ಡ ದೊಡ್ಡ ಕುಳಗಳಾಗಿದ್ದ ಕಾಲದಲ್ಲಿ ತನ್ನ ಹರಿದ ಸೀರೆಗೆ ತೇಪೆ ಹಚ್ಚುತ್ತಿದ್ದಳು. ಅಂಗಳದಲ್ಲಿ ಬೆಳೆಸಿದ್ದ ಅಬ್ಬಲಿಗೆ ಹೂದಂಡೆ ಕಟ್ಟಿ ಬುಟ್ಟಿಯಲ್ಲಿಟ್ಟು ಹೊರಗೆ ಕಟ್ಟೆಯ ಮೇಲಿಡುತ್ತಿದ್ದಳು. ರಸ್ತೇಲಿ ಹೋಗಿ ಬರೋರು ಒಂದು ದಂಡೆಗೆ ಹತ್ತು ಪೈಸೆಯಂತೆ ಬುಟ್ಟೀಲಿ ಹಾಕೋರು. ಎಂದೂ ಲೆಕ್ಕ ತಪ್ಪಿದ್ದಿಲ್ಲ! ಎಂಥ ನಿಯತ್ತಿತ್ತು ಬದುಕಿಗೆ. ಒಮ್ಮೆ ನಮ್ಮ ಮಾವಂದಿರೆಲ್ಲ ಸೇರಿ ಅಜ್ಜಿಯನ್ನು ’ಇಂಥ ಅಪಮಾನದ ಕೆಲಸ’ಕ್ಕಾಗಿ ತರಾಟೆಗೆ ತಗೊಂಡಿದ್ರು. ಅಜ್ಜಿ ಮಾತ್ರ ತಣ್ಣಗೆ ಹೇಳಿದಳು. ’ನಂಗೂ ಸಾಕಾಗಿದೆ. ನನ್ನ ಹೆಣಕ್ಕಾಕೋ ವಸ್ತ್ರ ಆದ್ರೂ ನನ್ನದಾಗಿರ‍್ಲಿ. ಪ್ರಾಯಶಃ ನಾ ಕೇಳಿದ ಸ್ತ್ರೀವಾದದ ಮೊದಲ ಪಾಠ ಅದು. ಇವೆಲ್ಲ ನನ್ನ ಭಾವಕೋಶವನ್ನು ರೂಪಿಸಿದ ಸಂಗತಿಗಳು.

 ಇವತ್ತು ನನ್ನ ಅಜ್ಜನ ಮನೆಯ ಕೋಳುಗಂಭವಷ್ಟೇ ಮುರಿದಿಲ್ಲ. ಬದುಕಿನಲ್ಲಿ ನಿಯತ್ತು ವಿಶ್ವಾಸಗಳು ಛಿದ್ರಗೊಂಡಿವೆ. ನೆಲ ಸುಡುಭೂಮಿಯಾಗಿದೆ. ಜಾತಿ, ಉಪಜಾತಿ, ಧರ್ಮಗಳು ಮನುಷ್ಯ ಸಂಬಂಧದ ಆಧಾರಗಳಾಗಿವೆ. ಕಳೆದೆರಡು ದಶಕಗಳಿಂದ ಬರಹದೊಂದಿಗೆ ಅನುಸಂಧಾನಿಸ್ತಿರೋ ನಮ್ಮ ತಲೆಮಾರಿಗೆ ತುಂಬ ಬಿಕ್ಕಟ್ಟಿನ ಕಾಲವಿದು. ಹಿಂಸೆಯ ಸೂಕ್ಷ್ಮ ಸ್ಥೂಲ ಸ್ವರೂಪಗಳು ಮೋಸದ ವಿವಿಧ ಚಹರೆಗಳು ನಮ್ಮ ಪ್ರಜ್ಞೆಯನ್ನು ಅಧೀರತೆಗೂ ಮರೆವಿನ ಮಹಾರೋಗಕ್ಕೂ ತಳ್ತಾ ಇದೆ. ಇಂತಹ ಹಿಂಸೆಯ, ಕ್ರೌರ‍್ಯದ ವರದಿಗಳಿಲ್ಲದ ದಿನ ಓದುವ ನೋಡುವ ವಾರ್ತೆ ಚಪ್ಪೆ ಅನ್ನಿಸುವಷ್ಟು ಹಿಂಸಾರತಿಯ ಕಡೆ ಚಲಿಸ್ತಾ ಇದ್ದೇವೆಯೇ? ಸೃಜನಶೀಲತೆಗಿದು ಬಿಕ್ಕಟ್ಟಿನ ಕಾಲ.

 ಜಗತ್ತು ಕೊಳ್ಳುವವ-ಮಾರುವವ ಎಂಬ ವರ್ಗೀಕರಣದಲ್ಲಿ ಕಳೆದು ಹೋಗುವ ಕೆಡುಕಾಲದಲ್ಲಿ ಬರಹಗಾರನಿಗೆ ತನ್ನ ಸಮುದಾಯ, ಭಾಷೆಗಳೊಂದಿಗೆ ಇರುವ, ಇರಬೇಕಾದ ಸಂಬಂಧದ ಸ್ವರೂಪವೇನು? ಎಂಬ ಪ್ರಶ್ನೆ ನನ್ನನ್ನು ತೀವ್ರವಾಗಿ ಕಾಡುತ್ತದೆ. ಬರಹಗಾರ ಕೂಡ ಬಳಕೆದಾರಿಕೆಯ ಅಸೂಕ್ಷ್ಮವನ್ನು ತನ್ನದಾಗಿಸಿಕೊಳ್ಳುವನೇ? ಬಂಡವಾಳಶಾಹಿ ಮತ್ತು ಪ್ರಭುತ್ವ ಕಲೆ-ಸಾಹಿತ್ಯಗಳಿಗೆ ಪೋಷಣೆಯನ್ನು ನೀಡ್ತಾ ಅದರ ನಿರ್ದೇಶಕ ಯಾಜಮಾನ್ಯವನ್ನು ಪ್ರಕಟಿಸುತ್ತಿರೋದನ್ನ ಕನ್ನಡ ಕಾವ್ಯ ಅನುಭವಿಸಿದೆ.

 ವಿರಾಮ ಕೊಡಿ ಕವಿಗಳಿಗೆ ಕವಿತೆ ಬರೆಯಲು
 ಆದೇಶಿಸುತ್ತಿದ್ದಾನೆ ಹಿಟ್ಲರು

 ಇತ್ತೀಚೆಗೆ ಗಿರೀಶ ಕಾರ್ನಾಡರು ಮುಂಬೈಯ ’ಲಿಟರೇಚರ್ ಅಲೈವ್’ ಎಂಬ ಸಂಸ್ಥೆಯಲ್ಲಿ ನೈಪಾಲ್ ಬಗ್ಗೆ ಎತ್ತಿದ ಪ್ರಶ್ನೆಯನ್ನು ಒತ್ತರಿಸಿ, ಲೇಖಕನು ವಿಷಯದಾಚೆ ಮಾತಾಡಿದ್ಯಾಕೆ? ಎಂಬ ಪ್ರಶ್ನೆಯು ಮುಖ್ಯವಾಗುತ್ತಿರೋದು ಕೂಡ ಇಂತಹದೇ ಬೆಳವಣಿಗೆಯಾಗಿದೆ.

 ಸಾಹಿತ್ಯ-ಕಲೆಯ ಸಂಗತಿಗಳು ಸಂಭ್ರಮದ, ಶುದ್ಧತೆಯ ಕಲಾತ್ಮಕ ವಿನ್ಯಾಸವನ್ನು ಪಡೆದುಕೊಂಡಷ್ಟೂ ಒಟ್ಟೂ ಜನಸಮುದಾಯದಿಂದ ಬೆನ್ನು ತಿರುಗಿಸುವುದು ವಿಪರ‍್ಯಾಸವಲ್ಲವೇ? ಇವತ್ತು ನಾನು ನನ್ನ ತಲೆಮಾರಿನ ಸಂವೇದನಾಶೀಲರ ವಕ್ತಾರಳಾಗಿ ಅವರ ತಲ್ಲಣಗಳನ್ನು ಉಡಿಯಲ್ಲಿ ಕಟ್ಟಿಕೊಂಡು ಬಂದು ನಿಂತಿದ್ದೇನೆ. ನೂರಾರು ನದಿಗಳನ್ನು ಒಡಲೊಳಗಿಟ್ಟುಕೊಂಡು ಕಡಲೆಂಬ ಮತ್ತೊಂದೇ ಘನತೆಯನ್ನು ಬಿತ್ತರಿಸುವ ಸಂಸ್ಕೃತಿಯ ಕೂಡ್ಲ ಇಂದು ಹೊರಜಗತ್ತಿಗೆ ಕೋಮುವಾದದ ಮತೀಯವಾದದ ಉನ್ಮಾದಗಳ ತಾಣವಾಗುತ್ತಿರೋದು ಅತ್ಯಂತ ನೋವಿನ, ಹೇಸಿಕೆಯ ಸಂಗತಿಯಾಗಿದೆ. ಯಾರು ಯಾರೊಂದಿಗೆ ಮಾತನಾಡಬೇಕು, ಯಾರು ಏನನ್ನು ಉಣ್ಣಬೇಕು? ಯಾರು ಏನು ತೊಡಬೇಕು, ಯಾರೊಂದಿಗೆ ಒಡನಾಡಬೇಕು, ಯಾವ ಆಚರಣೆಗಳು ಮೇಲ್ಪಂಕ್ತಿಗೆ ಬರಬೇಕು, ಯಾವುದು ರದ್ದಾಗಬೇಕು... ಇಂತಹ ಜನಬದುಕಿನ ಲಯವನ್ನೇ ತುಂಡರಿಸಿ ನಿಯಂತ್ರಿಸುವ ದಮನಕಾರಿ ಪ್ರವೃತ್ತಿ ಬೆಳೀತಿದೆ. ವಿಚಾರವಂತರೂ, ಪ್ರಜ್ಞಾವಂತರೂ ಆಗಿರುವ ನನ್ನ ಕರಾವಳಿಯ ಜನ ಹಿಟ್ಲರನ ಕಾಲದ ಪ್ರಜೆಗಳಂತೆ ಸಭ್ಯತೆಯ ಮೌನದ ಮಹಾಪಾಪವನ್ನು ಹೊರಬೇಕೆ? ಕೂಡುಕಟ್ಟಿನ ಈ ಬದುಕು ಹೀಗೆ ಧ್ವಂಸಗೊಳ್ಳಬೇಕೆ? ನಮ್ಮ ವರ್ತಮಾನದ ಇಂತಹ ಸವಾಲುಗಳು ಸಂವೇದನಾಶೀಲತೆಯ ಎದುರಿರಿರುವ ಬಿಕ್ಕಟ್ಟುಗಳೇ. ನನ್ನ ಕವಿತೆಯ ಒಂದು ಸಾಲು ;

 ರಸ್ತೆಯಲಿ ಚೆಲ್ಲಿದ ರಕ್ತ ಯಾರದೋ
 ನನಗೆ ಮಾತ್ರ ಹೆರಿಗೆ ಕೋಣೆಯದೇ ನೆನಪು.

 ಅಲ್ಲಮ ಹೇಳುವ ’ಹಿಂದಣ ಅನಂತವನು ಮುಂದಣ ಅನಂತವನು ಒಳಗೊಳ್ಳೋ ಅನ್ವೇಷಕತೆಯನ್ನು ಒಡಲುಗೊಳ್ಳುವುದೆಂತು? ಬೇಟೆಗಾರ ಬಾಣ ಹೂಡಿದ್ದಾನೆ. ಬಾಣ ನಾಟುವವರೆಗೂ ಹಾರುವ ರೆಕ್ಕೆ ಮುರಿದ ಹಕ್ಕಿ ಹಾಡಬೇಕು. ಆ ಹಾಡಿಗೆ ಯಾವ ಛಂದ? ಯಾವ ಲಯ? ಯಾವ ವ್ಯಾಕರಣ?

 ಕಳೆದೊಂದು ವಾರದಿಂದ ಆಳ್ವಾಸ್ ನುಡಿಸಿರಿಯ ಬಗ್ಗೆ ಎದ್ದ ಚರ್ಚೆಗಳು ನನ್ನಂತಹ ಕಿರಿಯಳನ್ನ ತುಂಬ ಡಿಸ್ಟರ್ಬ ಮಾಡಿದೆ. ಕಿರಿಯಳಾದ ನಾನು ಹಿರಿಯರಾದ ತಮ್ಮಲ್ಲಿ ಒಂದು ವಿಜ್ಞಾಪನೆಯನ್ನು ಸಲ್ಲಿಸ್ತಿದ್ದೇನೆ. ಇದು ನಾನು ನನ್ನ ತವರಿಗೆ ಮಾಡೋ ಹಕ್ಕೊತ್ತಾಯ. ಮಂಜುನಾಥನಂತಹ ಮಹಾಜ್ಞಾನಿ ನೆಲೆಯೂರಿದ ಈ ನೆಲದಲ್ಲಿ, ಅಬ್ಬಕ್ಕನ ವೀರಾಳ್ತನದ ಈ ಗಾಳಿಯಲ್ಲಿ, ಸಿರಿಯೆಂಬ ಧೀಮಂತೆಯ ಈ ಮಣ್ಣಲ್ಲಿ ಕೋಮುವಾದ ಹೆಣ್ಣಿನ ಬದುಕಿನ ಹಕ್ಕನ್ನೆಲ್ಲ ಕಸಿಯುತ್ತಿದೆ. ನಮಗೆ ಕೂಡ್ಲ ಎಂದರೆ ಕಾರಂತರು, ವೈದೇಹಿ ಸಾರಾ... ಆಗಿರಬೇಕೆ ವಿನಃ ದಿನಕ್ಕೊಂದು ವಿಪ್ಲವಗಳಿಂದಲ್ಲ. ಡಾ. ಮೋಹನ ಆಳ್ವ ಅವರು ಸಜ್ಜನರು, ಸದ್ವಿವೇಕಿಗಳು, ಸಂಘಟಕರು, ಕರ್ತೃತ್ವಶಾಲಿಗಳು. ಅವರು ಈ ನೆಲದಲ್ಲಿ ಬೆಳೀತಿರೋ ಕೋಮುವಾದವನ್ನು ತಡೆವ ತಡೆಗೋಡೆಯಾಗಬೇಕು. ಇಲ್ಲದಿದ್ದರೆ ನನ್ನಂತಹ ಸಾಮಾನ್ಯ ಕಿರಿಯ ಬರಹಗಾರರು ಈ ವೇದಿಕೆಯಲ್ಲಿ ಭಾಗವಹಿಸಿದ್ದೆ ಎನ್ನುವುದಕ್ಕೆ ಬದುಕಿರುವಷ್ಟು ಕಾಲವೂ ಪಶ್ಚಾತ್ತಾಪ ಪಡುವಂತಾದೀತು. ನಾಮ್‌ಚಾಮಸ್ಕಿಯಂತಹ ಚಿಂತಕ ಹೇಳ್ತಾನೆ. ಭಯೋತ್ಪಾದನೆಯನ್ನು ತಡೆಯುವುದು ಎಂದರೆ ಭಯೋತ್ಪಾದನೆಯಲ್ಲಿ ಭಾಗವಹಿಸುವುದನ್ನು ತಡೆಯುವುದು. ಇವತ್ತು ಭಯೋತ್ಪಾದನೆ ಹೊರ ಸತ್ಯವಾದರೆ ಅದನ್ನ ಎದುರಿಸಬಹುದು. ನಾವೇ ಭಯೋತ್ಪಾದಕರಾಗುವ ವಿಚಾರವನ್ನು ಎದುರಿಸುವುದು ಹೇಗೆ? ಸಾಹಿತ್ಯ ಇದರಿಂದ ಆಚೆಗಿನದಲ್ಲ ಅಂತ ನನ್ನ ನಂಬಿಕೆ. ನಮಸ್ಕಾರ.

-ಡಾ. ವಿನಯಾ

ಮಂಗಳವಾರ, ನವೆಂಬರ್ 13, 2012

ದೀಪಾವಳಿಗೆ ಲಂಕೇಶ್ ಮಾತುಗಳು…

ದೀಪಾವಳಿಗೆ ಲಂಕೇಶ್ ಮಾತುಗಳು…


ನಮ್ಮ ಹಳ್ಳಿಗಳಲ್ಲಿ ಮತ್ತೊಮ್ಮೆ ದೀಪಗಳು ವಿಶ್ವಾಸದಿಂದ ಪ್ರೀತಿಯಿಂದ ಉರಿಯಬೇಕಾಗಿದೆ. ನಮ್ಮ ಊರುಗಳು ಮತ್ತೆ ಜನಕ್ಕೆ ಸೇರಬೇಕಾಗಿದೆ. ಗ್ರಾಮದ ಮನುಷ್ಯನ ಎದೆಯಲ್ಲಿ ಮೂಡಿರುವ ಛಿದ್ರ ಮಾಯವಾಗಿ ಆತನ ದುಡಿಮೆಗೆ ಸ್ಪೂರ್ತಿ ಬಂದು ಆತನು ಗ್ರಾಮವನ್ನು ಪ್ರೀತಿಸುವಂತೆ ಆಗಬೇಕಾಗಿದೆ. ಈತ ಪಡೆಯುತ್ತಿರುವ ವ್ಯಂಗ್ಯ, ವೈಚಾರಿಕತೆ,ಯಾಂತ್ರಿಕತೆಯ ಜೊತೆಗೇ ಆತನಿಗೆ ಮತ್ತೊಮ್ಮೆ ಜೀವನದ ಗೂಢ ಮಾಂತ್ರಿಕತೆ ದಕ್ಕಿ, ಹೊಲಗದ್ದೆ ಹಿತ್ತಲುಮನೆ ಮತ್ತೊಮ್ಮೆ ಒಂದಾಗಿ ಪ್ರಕೃತಿಯ ಸಹಕಾರ ದೊರೆತು ಅವನ ಪರಿಸರದ ಬಗ್ಗೆ ಆತನಲ್ಲಿ ಹೆಮ್ಮೆ ಮೂಡಬೇಕಾಗಿದೆ.

ಈ ಹಬ್ಬದಂದು ಇದು ಮೊದಲ ಹಂತದ ಚಿಂತನೆ

-ಪಿ.ಲಂಕೇಶ್, ದೀಪಾವಳಿ ವಿಶೇಷಾಂಕ ಅಕ್ಟೋಬರ್ 1984

ಶನಿವಾರ, ನವೆಂಬರ್ 3, 2012

ವಡ್ಡರಹಳ್ಳಿ ಡೊಳ್ಳು ಮಾಸ್ಟ್ರು: ಇಮ್ರಾನ್


 

-ಡಾ.ಟಿ.ಎಮ್.ಉಷಾರಾಣಿ
(ಈ ಹಿಂದೆ ವಡ್ಡರಹಳ್ಳಿಮಕ್ಕಳ ಡೊಳ್ಳು ಪ್ರತಿಭೆ ಕುರಿತಂತೆ ಬ್ಲಾಗ್ ನಲ್ಲಿ ಬರೆದಿದ್ದೆ. ಅದೇ ಬರಹ ಸಂಯುಕ್ತ ಕರ್ನಾಟಕದಲ್ಲಿ ಪ್ರಕಟವಾಗಿ ಹೆಚ್ಚು ಸುದ್ದಿಯೂ ಆಗಿತ್ತು. ಈ ಮಕ್ಕಳಿಗೆ ಡೊಳ್ಳು ತರಬೇತಿ ನೀಡಿದ  ಇಮ್ರಾನ್ ಕುರಿತಂತೆ ಅದೇ ಶಾಲೆಯ ಸಹ ಶಿಕ್ಷಕಿಯಾಗಿರುವ ಕವಯಿತ್ರಿ, ಸಂಶೋಧಕಿ ಕೊಟ್ಟೂರಿನ ನಾವು ನಮ್ಮಲ್ಲಿ ಬಳಗದ ದಲ್ಲಿ ಕ್ರಿಯಾಶೀಲರಾದ ಟಿ.ಎಂ. ಉಷಾ ಅವರು ಆಪ್ತವಾಗಿ ಕಟ್ಟಿಕೊಟ್ಟಿದ್ದಾರೆ.-ಅರುಣ್ ) 
 
 

    ಬಳ್ಳಾರಿಗೆ ಹೋಗುವ ರಸ್ತೆಗಂಟಿಕೊಂಡಂತೆ ಹೊಸಪೇಟೆಯಿಂದ ೧೦ ಕಿ.ಮೀ. ಅಂತರದಲ್ಲಿ ವಡ್ಡರಹಳ್ಳಿ ಎಂಬ ಪುಟ್ಟ ಹಳ್ಳಿಯಿದೆ. ಪ್ರಶಾಂತ ವಾತಾವರಣವಿರುವ ಈ ಊರಿನ ಸರಕಾರಿ ಶಾಲೆಯಲ್ಲಿ ನಮ್ಮ ಸಹೋದ್ಯೋಗಿ - ಪಾಠ ಮಾಡುವ ಇಮ್ರಾನ್ ಮೇಷ್ಟ್ರು, ಡೊಳ್ಳು ಕಲಿಸುವ ಮಾಸ್ತರರಾದದ್ದೊಂದು ಕತೆಯಿದು. ಶಾಸ್ತ್ರೀಯವಾದ ತರಬೇತಿಯಿಲ್ಲದಿದ್ದರೂ, ಅಲ್ಲಿ ಇಲ್ಲಿ ಡೊಳ್ಳು ಕುಣಿತವನ್ನು ನೋಡಿದ್ದರು ಅಷ್ಟೆ. ಸಾಯಿಮಣಿ ಪ್ರಕಾಶನದ ಪ್ರೇರಣೆಯಿಂದ  ಶಾಲೆಯ ಮಕ್ಕಳನ್ನು ಕಟ್ಟಿಕೊಂಡು ಒಂದು ವರ್ಷದ ಪರಿಶ್ರಮದಲ್ಲಿ ಮಕ್ಕಳ ಡೊಳ್ಳು ತಂಡವನ್ನು ಕಟ್ಟಿದ್ದಾರೆ. 

ಡೊಳ್ಳು ಕುಣಿತ ಕಲಿಸುವುದಕ್ಕಾಗಿ ಇಂದು ಅನೇಕ ಶಿಬಿರಗಳು, ತರಬೇತಿ ಕೇಂದ್ರಗಳು ಅಲ್ಲಲ್ಲಿ ತೆರೆದುಕೊಂಡಿವೆ. ತರಬೇತಿ ಇಲ್ಲದೆ ಡೊಳ್ಳು ಕುಣಿತದಂತಹ ದೇಸಿ ಕಲೆಯನ್ನು ಒಲಿಸಿಕೊಳ್ಳುವುದು ಬಹಳ ಕಷ್ಟ. ಡೊಳ್ಳು ಕುಣಿತ ಬಲ್ಲ ಹಿರಿಯರೊಬ್ಬರನ್ನು ಮಕ್ಕಳಿಗೆ ಕಲಿಸಲು ತಿಳಿಸಲಾಗಿತ್ತು. ಅವರು ಒಂದೆರೆಡು ಬಾರಿ ಬಂದು ಹೋದರು. ಆದರೆ, ಬೇರೆ ಕೆಲಸದ ಒತ್ತಡದಿಂದಾಗಿ ಪೂರ್ತಿಯಾಗಿ ತೊಡಗಿಸಿಕೊಳ್ಳಲಾಗಲಿಲ್ಲ. ಆಗ ಇಮ್ರಾನ್ ತಾವೇ ಸ್ವತ: ಮಕ್ಕಳೊಂದಿಗೆ ಸೇರಿ ಹೆಜ್ಜೆ ಹಾಕುವುದನ್ನು; ತಾಳಕ್ಕೆ ತಕ್ಕಂತೆ ಡೊಳ್ಳು ಬಡಿಯುವ ಬೇರೆ ಬೇರೆ ಮಜಲುಗಳನ್ನು ಕಲಿಯತೊಡಗಿದರು. ೧೦-೧೨ ವರ್ಷದ ಪುಟ್ಟ ಮಕ್ಕಳಿಗೆ ಹೆಚ್ಚು ಭಾರವೆನಿಸುವ ಡೊಳ್ಳುಗಳನ್ನು ಕೊರಳಿಗೆ ಹಾಕಿ ಕುಣಿತ ಕಲಿಸುವುದು ಸವಾಲಿನ ಕೆಲಸವಾಗಿತ್ತು. ಜತೆಗೆ ಶಾಲೆಗೆ ರಜೆ ಇದ್ದಾಗ, ಪೋಷಕರು ತಮ್ಮ ಮಕ್ಕಳನ್ನು ಕೂಲಿ ಕೆಲಸಕ್ಕೆ, ಮತ್ತಿತರ ಕೆಲಸಗಳಿಗೆ ತಮ್ಮೊಂದಿಗೆ ಕರೆದೊಯ್ಯುತ್ತಾರೆ. ಹಾಗಾಗಿ ಶಾಲಾ ಕೆಲಸಕ್ಕೆ ಧಕ್ಕೆಯಾಗದಂತೆ, ಮಕ್ಕಳ ಮನೆಯವರಿಗೂ ತೊಂದರೆಯಾಗದಂತೆ ಶಾಲಾ ಅವಧಿ ಪ್ರಾರಂಭವಾಗುವುದಕ್ಕೂ ಮುಂಚೆ, ಊಟದ ವಿರಾಮದಲ್ಲಿ, ಸಂಜೆ ಹೊತ್ತು ಡೊಳ್ಳು ಕುಣಿತದ ತಾಲೀಮು ನಡೆಸುತ್ತಾರೆ.

   ೨೦೧೧ರಲ್ಲಿ ಸಾಯಿಮಣಿ ಪ್ರಕಾಶನದ ಕಾರ್ಯಕ್ರಮವೊಂದರಲ್ಲಿ ನೀಡಿದ ಮೊದಲ ಪ್ರದರ್ಶನ ಜನರ ಅಪಾರ ಮೆಚ್ಚುಗೆಗೆ ಪಾತ್ರವಾಯಿತು. ಹಲವಾರು ಸಂಘ ಸಂಸ್ಥೆಗಳಿಂದ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ವಡ್ಡರಹಳ್ಳಿ ಮಕ್ಕಳ ಡೊಳ್ಳು ಕುಣಿತದ ತಂಡಕ್ಕೆ ಆಹ್ವಾನಗಳು ಬಂದವು. ಬಂದ ಎಲ್ಲ ಆಹ್ವಾನಗಳನ್ನು ಸ್ವೀಕರಿಸದೆ, ಆಯ್ದ ಕಾರ್ಯಕ್ರಮಗಳಿಗೆ ಪ್ರದರ್ಶನ ನೀಡಲಾಯಿತು. ಕಾರಣ, ಮೆರವಣಿಗೆಯಂತಹ ಕಾರ್ಯಕ್ರಮಗಳಿಗೆ ಡೊಳ್ಳು ಕುಣಿತವನ್ನು ಬಳಸಿಕೊಳ್ಳುವುದು ಹೆಚ್ಚು. ಇದರಿಂದ ಸಣ್ಣ ವಯಸ್ಸಿನ ಮಕ್ಕಳು ದಣಿಯುತ್ತಾರಾದ್ದರಿಂದ, ಆಯ್ದ ಸ್ಥಿರವೇದಿಕೆ ಮೇಲಿನ ಕಾರ್ಯಕ್ರಮಗಳನ್ನು ಮಾತ್ರ ಆಯ್ದುಕೊಳ್ಳುತ್ತಾರೆ. ಇತ್ತೀಚೆಗೆ ನಡೆದ ಮಲಪನಗುಡಿ ಹತ್ತಿರವಿರುವ ವಿಜಯಶ್ರೀ ಹೆರಿಟೇಜ್ ವಿಲೇಜ್ ಪ್ರೈ.ಲಿಮಿಟೆಡ್‌ನ ಟ್ಯಾಲೆಂಟ್ ಷೋನಲ್ಲಿ ಪ್ರಥಮ ಆದ್ಯತೆಯನ್ನು ಪಡೆದುಕೊಂಡಿರುವ ವಡ್ಡರಹಳ್ಳಿ ಮಕ್ಕಳ ಡೊಳ್ಳು ತಂಡವು ಅಲ್ಲಿನ ಪ್ರದರ್ಶನಕ್ಕೆ ಒಪ್ಪಿಗೆ ನೀಡಿ, ಮನೋರಂಜನೆಗೆ ಆಗಮಿಸುವ ಪ್ರವಾಸಿಗರ ಕಣ್ಮನಗಳನ್ನು ಸೆಳೆಯುತ್ತಿದೆ. ಸುಪ್ತ ಮನಸ್ಸನ್ನು ಜಾಗೃತಗೊಳಿಸಿ, ಮುದಗೊಳಿಸುವ ಡೊಳ್ಳಿನ ಬಡಿತ; ಪುಟ್ಟ ಮಕ್ಕಳ ಗೆಜ್ಜೆಯ ಸದ್ದು; ಬಣ್ಣದ ದಿರಿಸು ಹಾಕಿಕೊಂಡು ಕುಣಿಯುವ ಪರಿ ಎಂತಹವರನ್ನೂ ಮಂತ್ರಮುಗ್ಧರನ್ನಾಗಿಸುತ್ತದೆ.
 

ಮಕ್ಕಳ ಡೊಳ್ಳು ತಂಡದ ಸೂತ್ರಧಾರರಾಗಿರುವ ಇಮ್ರಾನ್‌ರವರು ಮಕ್ಕಳೊಂದಿಗೆ ಸೇರಿ ನಾನೂ ವಿದ್ಯಾರ್ಥಿಯಾಗಿ ಡೊಳ್ಳು ಕುಣಿತವನ್ನು ಕಲಿಯತೊಡಗಿದ್ದೇನೆ. ಯಾವ ನಿರೀಕ್ಷೆಯನ್ನೂ ಇಟ್ಟುಕೊಳ್ಳದೆ ಕಟ್ಟಿದ ಮಕ್ಕಳ ಡೊಳ್ಳು ತಂಡ ಇಂದು ಇಷ್ಟೊಂದು ಜನಪ್ರಿಯವಾಗುತ್ತದೆ ಎಂದು ಭಾವಿಸಿರಲಿಲ್ಲ. ಶ್ರಮಪಟ್ಟಿದ್ದಕ್ಕೂ ಸಾರ್ಥಕವೆನಿಸಿದೆ. ಇಂತಹ ಪಠ್ಯೇತರ ಚಟುವಟಿಕೆಗಳು ಮಕ್ಕಳಿಗೆ ಹೊಸ ಉತ್ಸಾಹವನ್ನು ತುಂಬುತ್ತವೆಎನ್ನುತ್ತಾರೆ. ಬೇರೆ ಕಡೆಯಿಂದ ಡೊಳ್ಳುಗಳನ್ನು ಎರವಲು ತಂದು ಪ್ರದರ್ಶನಕ್ಕೆ ಸಿದ್ಧವಾಗುವುದು ಕಷ್ಟವಾಗುತ್ತಿತ್ತು. ಇದರಿಂದ ಊರಿನವರ ಸಹಕಾರ ಬಯಸಿದಾಗ, ಹಲವಾರು ಕೈಗಳು ಡೊಳ್ಳು ಕೊಡಿಸುವುದಕ್ಕೆ ಮುಂದಾದ್ದನ್ನು ಪ್ರೀತಿಯಿಂದ ಸ್ಮರಿಸುತ್ತಾರೆ. ಆಗಾಗ್ಗೆ ಡೊಳ್ಳಿಗೆ ಹದವಾದ ಚರ್ಮವನ್ನು ಬದಲಾಯಿಸಬೇಕಾದ್ದು ಅನಿವಾರ‍್ಯ. ಅದು ದುಬಾರಿ ಖರ್ಚಿನದಾದ್ದರಿಂದ ತಾವೇ ಕುರಿಚರ್ಮವನ್ನು ತಂದು ಹದಗೊಳಿಸಿ ಅಳವಡಿಸುವುದನ್ನೂ ಕಲಿತಿದ್ದಾರೆ.
ಪ್ರತಿದಿನ ಮಕ್ಕಳನ್ನು ಕಲಿಕಾ ಪ್ರಕ್ರಿಯೆಯಲ್ಲಿ ತೊಡಗಿಸುವ; ಪಠ್ಯಕ್ರಮವನ್ನು ಪೂರ್ತಿಗೊಳಿಸುವ; ಎಲ್ಲದ್ದಕ್ಕೂ ದಾಖಲೆಗಳನ್ನು ಇಡುವ ಧಾವಂತದಲ್ಲಿ ಶೈಕ್ಷಣಿಕ ವರ್ಷವೇ ಮುಗಿದು ಹೋಗಿರುತ್ತದೆ. ಮಕ್ಕಳನ್ನು ಸಹಪಠ್ಯ ಚಟುವಟಿಕೆಗಳಲ್ಲಿ ತೊಡಗಿಸುವುದು ಕಷ್ಟಸಾಧ್ಯವೆನ್ನುವುದು ಹೆಚ್ಚು ಶಿಕ್ಷಕರ ಅಭಿಪ್ರಾಯ. ಇಂತಹ ವಾತಾವರಣದಲ್ಲಿ ಶಾಲಾ ಕರ್ತವ್ಯವನ್ನು ಪ್ರಾಮಾಣಿಕತೆಯಿಂದ ಅಚ್ಚುಕಟ್ಟಾಗಿ ಮಾಡುವುದರೊಂದಿಗೆ ಡೊಳ್ಳು ಕುಣಿತದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಮಕ್ಕಳ ಡೊಳ್ಳು ತಂಡವನ್ನು ಕಟ್ಟಿಕೊಂಡು ಯಶಸ್ವೀ ಪ್ರದರ್ಶನದಲ್ಲಿ ತೊಡಗಿರುವ ಯುವ ಪ್ರತಿಭೆ ಇಮ್ರಾನ್ ಸರ್‌ಗೊಂದು ಹ್ಯಾಟ್ಸಾಫ್