ಸೋಮವಾರ, ನವೆಂಬರ್ 19, 2012

ನುಡಿಸಿರಿಯಲ್ಲಿ ಕರಾವಳಿಯ ಕೋಮುವಾದ ಸಹಜ ಜೀವನ ಶೈಲಿಯಾಗಿ ಬೆಳೀತಿರುವ ಅಪಾಯದ ಬಗ್ಗೆ ಡಾ.ವಿನಯಾ ಅವರ ಆತಂಕ ಮತ್ತು ಸ್ಪಂದನೆ:


ನುಡಿಸಿರಿಯಲ್ಲಿ ಕರಾವಳಿಯ ಕೋಮುವಾದ ಸಹಜ ಜೀವನ ಶೈಲಿಯಾಗಿ ಬೆಳೀತಿರುವ ಅಪಾಯದ ಬಗ್ಗೆ ಡಾ.ವಿನಯಾ ಅವರ ಆತಂಕ ಮತ್ತು ಸ್ಪಂದನೆ:
 

 
 
 ’ಗೌರಿ ಲಂಕೇಶ’ದಲ್ಲಿ ಜಿ. ರಾಜಶೇಖರ ಮತ್ತು ಕೆ. ಫಣಿರಾಜ್ ಅವರ ಲೇಖನಗಳನ್ನು ಓದಿದ ಮೇಲೆ ನುಡಿಸಿರಿಯ ಕವಿಗೋಷ್ಠಿಗೆ ಒಪ್ಪಿದ್ದ ನನಗೆ ದಿಗಿಲಾಯಿತು. ಎಲ್ಲ ಸಂದಿಗ್ಧಗಳಾಚೆ ಕೊನೆಗೂ ಭಾಗವಹಿಸಿದೆ. ಆ ವೇದಿಕೆ, ಆ ಶಿಸ್ತು, ಆ ಸಂಭ್ರಮ, ಎಲ್ಲ ಸುಖವೇ ಎಂಬ ಭಾವಮೂಡಿಸುವ ಪರಿಸರದಲ್ಲಿ ನನ್ನ ತಲೆಮಾರಿನ ಬರಹಗಾರರ ಎದುರಿಗಿರುವ ತಲ್ಲಣವನ್ನು ಅತ್ಯಂತ ಕಡಿಮೆ ಅವಧಿಯಲ್ಲಿ ಹೇಗೆ ನಿರೂಪಿಸಲಿ? ನೆಲ ಒಡೆದು ಬೀಜ ಮೊಳೆದೋರುವ ಸಂಕಟವನ್ನು ಅನುಭವಿಸಿದೆ. ವೇದಿಕೆಯ ಮೇಲಿದ್ದ ಅನಂತಮೂರ್ತಿಯವರನ್ನು ನಿಸಾರ್ ಅವರನ್ನು ಬರಗೆಟ್ಟು ನೋಡುತ್ತಿದ್ದೆ. ದೊಡ್ಡವರು ಒಂದು ಸುಳುವು ಕೊಟ್ಟರೆ ಆ ಸೂರುಹಿಡಿದು ಚಣಹೊತ್ತು ಸಂಭಾಳಿಸಿಯೇನು. ಅಂತಹ ಯಾವ ಸುಳುವೂ ಸಿಗಲಿಲ್ಲ. ಮತ್ತೆ ದಿಕ್ಕೆಡುವಿಕೆ. ಮತ್ತೊಮ್ಮೆ ಅನ್ನಿಸಿತು. ಎಲ್ಲ ಅವರೇ ಮಾಡಬೇಕೆ? ಈ ಇಳಿವಯದಲ್ಲೂ? ನಮಗೆಲ್ಲ ಏನಾಗಿದೆ? ನನ್ನೊಳಗೆ ಕಡಲ ಅಲೆಯಂತೆ ಏಳುವ ಬೀಳುವ ಅರಗುವ ಮತ್ತೆ ಏಳುವ ಪ್ರಶ್ನೆಗಳು, ಮಾತುಗಳು.

 ಕರಾವಳಿಯಲ್ಲಿ ಕೋಮುವಾದ ಸಹಜ ಜೀವನ ಶೈಲಿಯಾಗಿ ಬೆಳೀತಿರುವ ಅಪಾಯ ಮತ್ತು ಸಾಹಿತ್ಯ ಕಲೆಗಳನ್ನು ಜನಬದುಕಿನಿಂದ ಹೊರತೆಗೆದು ದೇವರ ಮೂರ್ತಿಯಂತೆ ಪವಿತ್ರಗೊಳಿಸಿ ಪ್ರತಿಷ್ಠಾಪಿಸುವ ಸಂಕಟವನ್ನು ಸಮೀಕರಿಸಿಕೊಳ್ಳಬೇಕಿತ್ತು. ಬಾಲ್ಯದಲ್ಲಿ ಕಂಡ ಕೂಡುಕಟ್ಟಿನ ಕಡಲ ಸಂಸ್ಕೃತಿ ಸ್ಮೃತಿಕೋಶದಲ್ಲಿ ಜೀವಂತವಾಗಿತ್ತು. ಕಾವ್ಯವು ವರ್ತಮಾನದಲ್ಲಿ ಪ್ರೇರಕಗೊಳ್ಳುವ ಎಳೆ ಹಿಡಿದು ಕರಾವಳಿಯಲ್ಲಿ ಕೋಮುವಾದ ಬೆಳೆಯಲು ನಾಗರಿಕ ಪ್ರಜ್ಞೆಯ ಸಭ್ಯತೆಯ ಪಾಲುದಾರಿಕೆಯನ್ನು ನೆನಪಿಸಿದೆ.

 ಜನ ಸ್ಪಂದಿಸಿದ ರೀತಿ ಅಚ್ಚರಿಯದಾಗಿತ್ತು. ವೇದಿಕೆಯಲ್ಲಿದ್ದ ಡಾ. ಮೋಹನ ಆಳ್ವ ಅವರು ’ಏನನ್ನಬೇಕೋ ತಿಳೀತಿಲ್ಲ’ ಅಂತ ವಾತ್ಸಲ್ಯ ಮತ್ತು ಗೌರವದಿಂದ ಹೇಳಿದರು. ವಿದ್ಯಾರ್ಥಿಗಳು ತುಂಬ ಭಾವೋದ್ವೇಗಗೊಂಡಿದ್ದರು. ಒಂದಿಬ್ಬರು ಬಿಕ್ಕಿ ಬಿಕ್ಕಿ ಅಳುತ್ತಿದ್ದರು. ಎಲ್ಲಿಂದಲೋ ಬಂದವರು ಅಲ್ಲಿಯವರು ಎಷ್ಟೆಲ್ಲ ಜನ ತುಂಬ ಡಿಸ್ಟರ್ಬ ಆಗಿದ್ದರು. ಮಾರನೇ ದಿನದ ಸಂವಾದದಲ್ಲಿ ಡಾ. ಮೋಹನ ಅಳ್ವ ಅವರು ಕೋಮುವಾದವನ್ನು ತಡೆವ ಪ್ರಯತ್ನದಲ್ಲಿ ನಿಮ್ಮೊಂದಿಗೆ ಪಾಲುದಾರ ಅಂತ ಖಚಿತವಾಗಿ ಹೇಳಿದರಂತೆ.

 ’ಎಂತಹ ಬಂಡವಾಳಶಾಹಿಯೂ ಒಂದು ಕ್ಷಣದ ಉದ್ವೇಗದಲ್ಲಿ ಕ್ರಾಂತಿಗೆ ಜಯವಾಗಲಿ ಎಂದುಬಿಡಬಲ್ಲ’ ಎಂಬ ಸುಡುಸತ್ಯವನ್ನು ನೆನಪಿಟ್ಟುಕೊಂಡೂ ಈ ಘಟನೆ ನನ್ನೊಳಗೊಂದು ಅಭಿಪ್ರಾಯವನ್ನು ರೂಪಿಸಿದೆ. ಜನ ನಾವಂದುಕೊಂಡಷ್ಟು ನಿರ್ದಯಿಗಳಲ್ಲ. ಮನುಷ್ಯನ ಸಾಮರಸ್ಯದ ತುಡಿತ ಅನಾದಿಯದ್ದು, ಸಜೀವವಾದದ್ದು. ಅದನ್ನು ಕೋಮುವಾದದ ಎಂತಹ ಹತಾರವೂ ನಿರ್ಮೂಲನ ಮಾಡಲಾರದು. ಬರಹಗಾರರಾದ ನಾವು ನಮ್ಮ ನಿಜತುಡಿತವನ್ನು ಜನರೊಂದಿಗೆ ಹಂಚಿಕೊಳ್ಳುತ್ತಿಲ್ಲ. ಸಾಹಿತ್ಯ-ಕಲೆಯ ಕುರಿತು ಮಾತನಾಡುವಾಗೆಲ್ಲ ನಮಗೂ ತಿಳಿಯದ ಅಮೂರ್ತ ಮಾತುಗಳನ್ನೇ ಆಡುತ್ತೇವೆ. ಆಗೆಲ್ಲ ಜನರಿಂದ ನಮ್ಮನ್ನು ಬೇರೆಯಾಗಿಸಿಕೊಳ್ಳುವ ಅಹಂಕಾರವು ಬುಸುಗುಡುತ್ತಿರುತ್ತದೇನೋ. ಯಾವ ಮಗುವೂ ಜಾತಿ-ಧರ್ಮದ ಸಂಕೋಲೆಯನ್ನು ಹೊತ್ತು ಜನಿಸಲಾರದು. ನಾವು ಉಸಿರಾಡುವ ಗಾಳಿ ಪ್ರತಿಯೊಂದು ಜೀವಿಯ ಒಳಹೊಕ್ಕು ಹೊರಬರುತ್ತದೆಂಬ ವಿಜ್ಞಾನದ ಮೊದಲ ಪಾಠವನ್ನು ನೆನಪಿಸಲು ನಮ್ಮ ಘನತೆ ಅಡ್ಡಬರುತ್ತದಲ್ಲವೇ? ಕಾರ್ನಾಡರು ನೈಪಾಲ್‌ರನ್ನು ಆಕ್ಷೇಪಿಸಿರುವುದು ಬರಹಗಾರನಿಗಿರಬೇಕಾದ ಕನಿಷ್ಠ ಬದ್ಧತೆಯ ಕುರಿತು. ಆದರೆ ಚರ್ಚೆಯ ಕೇಂದ್ರವನ್ನು ತಪ್ಪಿಸುವ, ಸಾಹಿತ್ಯ ಕ್ಷೇತ್ರದಲ್ಲಿ ಆಗಾಗ ನಡೆಯುವ ಸರಳ ಜಗಳದ ಮಟ್ಟಕ್ಕೆ ಇಳಿಸುವ ಪ್ರಯತ್ನಗಳು ಪೊಗದಸ್ತಾಗಿಯೇ ನಡೆಯುತ್ತಿವೆ. ಇಂತಹ ಸ್ಥಿತಿಯಲ್ಲಿ ಮೌನ ಎಂಬ ಮಹಾಪಾಪದಿಂದ ನಮ್ಮನ್ನು ಮೇಲೆತ್ತಿಕೊಳ್ಳುವುದು ಅಗತ್ಯ ಅಲ್ಲವೇ? ಚಾಮಸ್ಕಿ - ಮನುಷ್ಯರ ಬದುಕಿಗೆ ಸಂಬಂಧಿಸಿದ ವಾಸ್ತವಿಕ ಸತ್ಯಗಳನ್ನು ತಿಳಿಸುವ ಮಧ್ಯವರ್ತಿಯಾಗಿ ಕೆಲಸ ಮಾಡುವುದು ಬರಹಗಾರರ ನೈತಿಕ ಜವಾಬ್ದಾರಿ ಎಂದಿದ್ದು ನೆನಪಾಗ್ತಿದೆ.

 ಆವತ್ತು ನಾನೇನೂ ಮಹಾ ಹೇಳಿರಲಿಲ್ಲ. ಸೇರಿದ್ದ ಸಂವೇದನಾಶೀಲರು ತಮ್ಮ ತಮ್ಮ ಅನುಭವಗಳಲ್ಲಿ, ವರಸೆಗಳಲ್ಲಿ ಮಾತನ್ನು ಮರುಸೃಷ್ಟಿಸಿಕೊಂಡರು. ಆಡದೇ ಉಳಿದ ಎಲ್ಲವನ್ನೂ ಅವರು ತಮ್ಮೊಂದಿಗೆ ತಾವು ಮಾತಾಡಿಕೊಂಡರು. ನನ್ನ ಕವಿತೆಯ ಅರ್ಥಲಯವನ್ನು ಮಿದ್ದು ನಾದದ ಉಸಿರು ತುಂಬಿ ಹಾಡಿದ ಕಲಾವತಿ ದಯಾನಂದ್ ಮತ್ತು ತಂಡದವರು ಮಾತನ್ನು ಮುಂದುವರಿಸಿದ್ದೇ ಅಲ್ಲವೇ? ದೇವನೂರು ಹೇಳುವ ’ನನ್ನ ಕಿರುಬೆರಳಗಾತ್ರದ ಬರಹ...’ ಎಂಬ ಮಾತು ಆಯಾಚಿತವಾಗಿ ನೆನಪಾಗ್ತಿದೆ. ಕಿರುಬೆರಳ ಉಗುರಿನಷ್ಟೂ ಅಲ್ಲದ ಅಲ್ಪ ಮಾತು ಮನಸ್ಸುಗಳಾಳಕ್ಕಿಳಿದು ಮೀಟಬಲ್ಲುದಾದರೆ, ನಾವೆಲ್ಲ ಮಾತಾಡುವುದು, ಬರೆಯುವುದು ಯಾವ ಕಂಪನವನ್ನೂ ಉಂಟು ಮಾಡದು ಎನ್ನಬಹುದೆ?

ಡಾ. ವಿನಯಾ
---------

ಕವಿಸಮಯ - ಕವಿ ನಮನ

ನನ್ನ ಕಾವ್ಯ ಪ್ರೇರಣೆಗಳು
 
 ಬರಹ ನನಗೆ ಜೀವದ್ರವ್ಯ. ಈ ಜೀವದ್ರವ್ಯಕ್ಕೆ ಧಾತುವನ್ನು ಎರೆದ ಸಂಗತಿಗಳು ಅಗಣಿತ. ಆ ಅಸಂಖ್ಯ ಜೀವಸೆಲೆಗಳನ್ನು ನೆನೆಯುವುದು ಹೇಗೆ? ನೆನೆಯದಿರುವುದು ಹೇಗೆ? ನಾನು ಕಡಲ ದಂಡೆಯಲಿ ಬೆಳೆದವಳು. ಉಪ್ಪುನೀರ ಹೊಳೆಯ ದಡದಲ್ಲೇ ಸಿಹಿನೀರ ಬಾವಿಯನ್ನು ಕಂಡಿದ್ದೆ. ಗಜನಿ ಭೂಮಿಯ ಉಪ್ಪು ಉಂಡೇ ನೂರಾರು ತೆಂಗುಗಳನ್ನು ಹೆತ್ತ ಮರದ ನೆರಳಲ್ಲಿ ಬೆಳೆದಿದ್ದೆ. ಕರಾವಳಿಯ ಕೂಡು ಬದುಕಿನ ಅಸಂಖ್ಯ ನೆನಹುಗಳು ನನ್ನೊಳಗಿವೆ.

 ನನಗೆ ಓದಿನ ರುಚಿ ಹಚ್ಚಿ ಕಾವ್ಯ ಪರಂಪರೆಯೊಂದಿಗೆ ಸಂಬಂಧ ಹಚ್ಚಿದವ ನನ್ನ ಅಜ್ಜ. ತಿಳಿಯಲಾರದ ವಯದಲ್ಲಿಯೇ ಕುಮಾರವ್ಯಾಸ ಭಾರತ ಓದಲು ಹಚ್ಚಿದ್ದ. ನನ್ನ ಅಜ್ಜಿ ದೊಡ್ಡ ಜಮೀನ್ದಾರೀ ಕುಟುಂಬದಲ್ಲಿ ಹನ್ನೆರಡು ಮಕ್ಕಳ ತಾಯಿ, ತನ್ನ ಮಕ್ಕಳು ದೊಡ್ಡ ದೊಡ್ಡ ಕುಳಗಳಾಗಿದ್ದ ಕಾಲದಲ್ಲಿ ತನ್ನ ಹರಿದ ಸೀರೆಗೆ ತೇಪೆ ಹಚ್ಚುತ್ತಿದ್ದಳು. ಅಂಗಳದಲ್ಲಿ ಬೆಳೆಸಿದ್ದ ಅಬ್ಬಲಿಗೆ ಹೂದಂಡೆ ಕಟ್ಟಿ ಬುಟ್ಟಿಯಲ್ಲಿಟ್ಟು ಹೊರಗೆ ಕಟ್ಟೆಯ ಮೇಲಿಡುತ್ತಿದ್ದಳು. ರಸ್ತೇಲಿ ಹೋಗಿ ಬರೋರು ಒಂದು ದಂಡೆಗೆ ಹತ್ತು ಪೈಸೆಯಂತೆ ಬುಟ್ಟೀಲಿ ಹಾಕೋರು. ಎಂದೂ ಲೆಕ್ಕ ತಪ್ಪಿದ್ದಿಲ್ಲ! ಎಂಥ ನಿಯತ್ತಿತ್ತು ಬದುಕಿಗೆ. ಒಮ್ಮೆ ನಮ್ಮ ಮಾವಂದಿರೆಲ್ಲ ಸೇರಿ ಅಜ್ಜಿಯನ್ನು ’ಇಂಥ ಅಪಮಾನದ ಕೆಲಸ’ಕ್ಕಾಗಿ ತರಾಟೆಗೆ ತಗೊಂಡಿದ್ರು. ಅಜ್ಜಿ ಮಾತ್ರ ತಣ್ಣಗೆ ಹೇಳಿದಳು. ’ನಂಗೂ ಸಾಕಾಗಿದೆ. ನನ್ನ ಹೆಣಕ್ಕಾಕೋ ವಸ್ತ್ರ ಆದ್ರೂ ನನ್ನದಾಗಿರ‍್ಲಿ. ಪ್ರಾಯಶಃ ನಾ ಕೇಳಿದ ಸ್ತ್ರೀವಾದದ ಮೊದಲ ಪಾಠ ಅದು. ಇವೆಲ್ಲ ನನ್ನ ಭಾವಕೋಶವನ್ನು ರೂಪಿಸಿದ ಸಂಗತಿಗಳು.

 ಇವತ್ತು ನನ್ನ ಅಜ್ಜನ ಮನೆಯ ಕೋಳುಗಂಭವಷ್ಟೇ ಮುರಿದಿಲ್ಲ. ಬದುಕಿನಲ್ಲಿ ನಿಯತ್ತು ವಿಶ್ವಾಸಗಳು ಛಿದ್ರಗೊಂಡಿವೆ. ನೆಲ ಸುಡುಭೂಮಿಯಾಗಿದೆ. ಜಾತಿ, ಉಪಜಾತಿ, ಧರ್ಮಗಳು ಮನುಷ್ಯ ಸಂಬಂಧದ ಆಧಾರಗಳಾಗಿವೆ. ಕಳೆದೆರಡು ದಶಕಗಳಿಂದ ಬರಹದೊಂದಿಗೆ ಅನುಸಂಧಾನಿಸ್ತಿರೋ ನಮ್ಮ ತಲೆಮಾರಿಗೆ ತುಂಬ ಬಿಕ್ಕಟ್ಟಿನ ಕಾಲವಿದು. ಹಿಂಸೆಯ ಸೂಕ್ಷ್ಮ ಸ್ಥೂಲ ಸ್ವರೂಪಗಳು ಮೋಸದ ವಿವಿಧ ಚಹರೆಗಳು ನಮ್ಮ ಪ್ರಜ್ಞೆಯನ್ನು ಅಧೀರತೆಗೂ ಮರೆವಿನ ಮಹಾರೋಗಕ್ಕೂ ತಳ್ತಾ ಇದೆ. ಇಂತಹ ಹಿಂಸೆಯ, ಕ್ರೌರ‍್ಯದ ವರದಿಗಳಿಲ್ಲದ ದಿನ ಓದುವ ನೋಡುವ ವಾರ್ತೆ ಚಪ್ಪೆ ಅನ್ನಿಸುವಷ್ಟು ಹಿಂಸಾರತಿಯ ಕಡೆ ಚಲಿಸ್ತಾ ಇದ್ದೇವೆಯೇ? ಸೃಜನಶೀಲತೆಗಿದು ಬಿಕ್ಕಟ್ಟಿನ ಕಾಲ.

 ಜಗತ್ತು ಕೊಳ್ಳುವವ-ಮಾರುವವ ಎಂಬ ವರ್ಗೀಕರಣದಲ್ಲಿ ಕಳೆದು ಹೋಗುವ ಕೆಡುಕಾಲದಲ್ಲಿ ಬರಹಗಾರನಿಗೆ ತನ್ನ ಸಮುದಾಯ, ಭಾಷೆಗಳೊಂದಿಗೆ ಇರುವ, ಇರಬೇಕಾದ ಸಂಬಂಧದ ಸ್ವರೂಪವೇನು? ಎಂಬ ಪ್ರಶ್ನೆ ನನ್ನನ್ನು ತೀವ್ರವಾಗಿ ಕಾಡುತ್ತದೆ. ಬರಹಗಾರ ಕೂಡ ಬಳಕೆದಾರಿಕೆಯ ಅಸೂಕ್ಷ್ಮವನ್ನು ತನ್ನದಾಗಿಸಿಕೊಳ್ಳುವನೇ? ಬಂಡವಾಳಶಾಹಿ ಮತ್ತು ಪ್ರಭುತ್ವ ಕಲೆ-ಸಾಹಿತ್ಯಗಳಿಗೆ ಪೋಷಣೆಯನ್ನು ನೀಡ್ತಾ ಅದರ ನಿರ್ದೇಶಕ ಯಾಜಮಾನ್ಯವನ್ನು ಪ್ರಕಟಿಸುತ್ತಿರೋದನ್ನ ಕನ್ನಡ ಕಾವ್ಯ ಅನುಭವಿಸಿದೆ.

 ವಿರಾಮ ಕೊಡಿ ಕವಿಗಳಿಗೆ ಕವಿತೆ ಬರೆಯಲು
 ಆದೇಶಿಸುತ್ತಿದ್ದಾನೆ ಹಿಟ್ಲರು

 ಇತ್ತೀಚೆಗೆ ಗಿರೀಶ ಕಾರ್ನಾಡರು ಮುಂಬೈಯ ’ಲಿಟರೇಚರ್ ಅಲೈವ್’ ಎಂಬ ಸಂಸ್ಥೆಯಲ್ಲಿ ನೈಪಾಲ್ ಬಗ್ಗೆ ಎತ್ತಿದ ಪ್ರಶ್ನೆಯನ್ನು ಒತ್ತರಿಸಿ, ಲೇಖಕನು ವಿಷಯದಾಚೆ ಮಾತಾಡಿದ್ಯಾಕೆ? ಎಂಬ ಪ್ರಶ್ನೆಯು ಮುಖ್ಯವಾಗುತ್ತಿರೋದು ಕೂಡ ಇಂತಹದೇ ಬೆಳವಣಿಗೆಯಾಗಿದೆ.

 ಸಾಹಿತ್ಯ-ಕಲೆಯ ಸಂಗತಿಗಳು ಸಂಭ್ರಮದ, ಶುದ್ಧತೆಯ ಕಲಾತ್ಮಕ ವಿನ್ಯಾಸವನ್ನು ಪಡೆದುಕೊಂಡಷ್ಟೂ ಒಟ್ಟೂ ಜನಸಮುದಾಯದಿಂದ ಬೆನ್ನು ತಿರುಗಿಸುವುದು ವಿಪರ‍್ಯಾಸವಲ್ಲವೇ? ಇವತ್ತು ನಾನು ನನ್ನ ತಲೆಮಾರಿನ ಸಂವೇದನಾಶೀಲರ ವಕ್ತಾರಳಾಗಿ ಅವರ ತಲ್ಲಣಗಳನ್ನು ಉಡಿಯಲ್ಲಿ ಕಟ್ಟಿಕೊಂಡು ಬಂದು ನಿಂತಿದ್ದೇನೆ. ನೂರಾರು ನದಿಗಳನ್ನು ಒಡಲೊಳಗಿಟ್ಟುಕೊಂಡು ಕಡಲೆಂಬ ಮತ್ತೊಂದೇ ಘನತೆಯನ್ನು ಬಿತ್ತರಿಸುವ ಸಂಸ್ಕೃತಿಯ ಕೂಡ್ಲ ಇಂದು ಹೊರಜಗತ್ತಿಗೆ ಕೋಮುವಾದದ ಮತೀಯವಾದದ ಉನ್ಮಾದಗಳ ತಾಣವಾಗುತ್ತಿರೋದು ಅತ್ಯಂತ ನೋವಿನ, ಹೇಸಿಕೆಯ ಸಂಗತಿಯಾಗಿದೆ. ಯಾರು ಯಾರೊಂದಿಗೆ ಮಾತನಾಡಬೇಕು, ಯಾರು ಏನನ್ನು ಉಣ್ಣಬೇಕು? ಯಾರು ಏನು ತೊಡಬೇಕು, ಯಾರೊಂದಿಗೆ ಒಡನಾಡಬೇಕು, ಯಾವ ಆಚರಣೆಗಳು ಮೇಲ್ಪಂಕ್ತಿಗೆ ಬರಬೇಕು, ಯಾವುದು ರದ್ದಾಗಬೇಕು... ಇಂತಹ ಜನಬದುಕಿನ ಲಯವನ್ನೇ ತುಂಡರಿಸಿ ನಿಯಂತ್ರಿಸುವ ದಮನಕಾರಿ ಪ್ರವೃತ್ತಿ ಬೆಳೀತಿದೆ. ವಿಚಾರವಂತರೂ, ಪ್ರಜ್ಞಾವಂತರೂ ಆಗಿರುವ ನನ್ನ ಕರಾವಳಿಯ ಜನ ಹಿಟ್ಲರನ ಕಾಲದ ಪ್ರಜೆಗಳಂತೆ ಸಭ್ಯತೆಯ ಮೌನದ ಮಹಾಪಾಪವನ್ನು ಹೊರಬೇಕೆ? ಕೂಡುಕಟ್ಟಿನ ಈ ಬದುಕು ಹೀಗೆ ಧ್ವಂಸಗೊಳ್ಳಬೇಕೆ? ನಮ್ಮ ವರ್ತಮಾನದ ಇಂತಹ ಸವಾಲುಗಳು ಸಂವೇದನಾಶೀಲತೆಯ ಎದುರಿರಿರುವ ಬಿಕ್ಕಟ್ಟುಗಳೇ. ನನ್ನ ಕವಿತೆಯ ಒಂದು ಸಾಲು ;

 ರಸ್ತೆಯಲಿ ಚೆಲ್ಲಿದ ರಕ್ತ ಯಾರದೋ
 ನನಗೆ ಮಾತ್ರ ಹೆರಿಗೆ ಕೋಣೆಯದೇ ನೆನಪು.

 ಅಲ್ಲಮ ಹೇಳುವ ’ಹಿಂದಣ ಅನಂತವನು ಮುಂದಣ ಅನಂತವನು ಒಳಗೊಳ್ಳೋ ಅನ್ವೇಷಕತೆಯನ್ನು ಒಡಲುಗೊಳ್ಳುವುದೆಂತು? ಬೇಟೆಗಾರ ಬಾಣ ಹೂಡಿದ್ದಾನೆ. ಬಾಣ ನಾಟುವವರೆಗೂ ಹಾರುವ ರೆಕ್ಕೆ ಮುರಿದ ಹಕ್ಕಿ ಹಾಡಬೇಕು. ಆ ಹಾಡಿಗೆ ಯಾವ ಛಂದ? ಯಾವ ಲಯ? ಯಾವ ವ್ಯಾಕರಣ?

 ಕಳೆದೊಂದು ವಾರದಿಂದ ಆಳ್ವಾಸ್ ನುಡಿಸಿರಿಯ ಬಗ್ಗೆ ಎದ್ದ ಚರ್ಚೆಗಳು ನನ್ನಂತಹ ಕಿರಿಯಳನ್ನ ತುಂಬ ಡಿಸ್ಟರ್ಬ ಮಾಡಿದೆ. ಕಿರಿಯಳಾದ ನಾನು ಹಿರಿಯರಾದ ತಮ್ಮಲ್ಲಿ ಒಂದು ವಿಜ್ಞಾಪನೆಯನ್ನು ಸಲ್ಲಿಸ್ತಿದ್ದೇನೆ. ಇದು ನಾನು ನನ್ನ ತವರಿಗೆ ಮಾಡೋ ಹಕ್ಕೊತ್ತಾಯ. ಮಂಜುನಾಥನಂತಹ ಮಹಾಜ್ಞಾನಿ ನೆಲೆಯೂರಿದ ಈ ನೆಲದಲ್ಲಿ, ಅಬ್ಬಕ್ಕನ ವೀರಾಳ್ತನದ ಈ ಗಾಳಿಯಲ್ಲಿ, ಸಿರಿಯೆಂಬ ಧೀಮಂತೆಯ ಈ ಮಣ್ಣಲ್ಲಿ ಕೋಮುವಾದ ಹೆಣ್ಣಿನ ಬದುಕಿನ ಹಕ್ಕನ್ನೆಲ್ಲ ಕಸಿಯುತ್ತಿದೆ. ನಮಗೆ ಕೂಡ್ಲ ಎಂದರೆ ಕಾರಂತರು, ವೈದೇಹಿ ಸಾರಾ... ಆಗಿರಬೇಕೆ ವಿನಃ ದಿನಕ್ಕೊಂದು ವಿಪ್ಲವಗಳಿಂದಲ್ಲ. ಡಾ. ಮೋಹನ ಆಳ್ವ ಅವರು ಸಜ್ಜನರು, ಸದ್ವಿವೇಕಿಗಳು, ಸಂಘಟಕರು, ಕರ್ತೃತ್ವಶಾಲಿಗಳು. ಅವರು ಈ ನೆಲದಲ್ಲಿ ಬೆಳೀತಿರೋ ಕೋಮುವಾದವನ್ನು ತಡೆವ ತಡೆಗೋಡೆಯಾಗಬೇಕು. ಇಲ್ಲದಿದ್ದರೆ ನನ್ನಂತಹ ಸಾಮಾನ್ಯ ಕಿರಿಯ ಬರಹಗಾರರು ಈ ವೇದಿಕೆಯಲ್ಲಿ ಭಾಗವಹಿಸಿದ್ದೆ ಎನ್ನುವುದಕ್ಕೆ ಬದುಕಿರುವಷ್ಟು ಕಾಲವೂ ಪಶ್ಚಾತ್ತಾಪ ಪಡುವಂತಾದೀತು. ನಾಮ್‌ಚಾಮಸ್ಕಿಯಂತಹ ಚಿಂತಕ ಹೇಳ್ತಾನೆ. ಭಯೋತ್ಪಾದನೆಯನ್ನು ತಡೆಯುವುದು ಎಂದರೆ ಭಯೋತ್ಪಾದನೆಯಲ್ಲಿ ಭಾಗವಹಿಸುವುದನ್ನು ತಡೆಯುವುದು. ಇವತ್ತು ಭಯೋತ್ಪಾದನೆ ಹೊರ ಸತ್ಯವಾದರೆ ಅದನ್ನ ಎದುರಿಸಬಹುದು. ನಾವೇ ಭಯೋತ್ಪಾದಕರಾಗುವ ವಿಚಾರವನ್ನು ಎದುರಿಸುವುದು ಹೇಗೆ? ಸಾಹಿತ್ಯ ಇದರಿಂದ ಆಚೆಗಿನದಲ್ಲ ಅಂತ ನನ್ನ ನಂಬಿಕೆ. ನಮಸ್ಕಾರ.

-ಡಾ. ವಿನಯಾ

1 ಕಾಮೆಂಟ್‌:

H.S. Raghavendra Rao naadaleele ಹೇಳಿದರು...

ವಿನಯಾ ಅವರು ಹೇಳಿರುವ ಮಾತುಗಳು ಮತ್ತು ಹಾಗೆ ಹೇಳುವುದರ ಹಿಂದೆ ಇರುವ ವಿಷಾದ-ದಿಟ್ಟತನ ನನ್ನನ್ನು ತಲ್ಲಣಗೊಳಿಸಿದೆ. ಅವರಿಗೆ ಅಭಿನಂದನೆ ಹೇಳುವುದು ದೊಡ್ಡದಲ್ಲ. ನಮ್ಮನ್ನು ತಿದ್ದಿಕೊಳ್ಳಬೇಕು.
ಎಚ್.ಎಸ್. ರಾಘವೇಂದ್ರ ರಾವ್