ಶನಿವಾರ, ನವೆಂಬರ್ 3, 2012

ವಡ್ಡರಹಳ್ಳಿ ಡೊಳ್ಳು ಮಾಸ್ಟ್ರು: ಇಮ್ರಾನ್


 

-ಡಾ.ಟಿ.ಎಮ್.ಉಷಾರಾಣಿ
(ಈ ಹಿಂದೆ ವಡ್ಡರಹಳ್ಳಿಮಕ್ಕಳ ಡೊಳ್ಳು ಪ್ರತಿಭೆ ಕುರಿತಂತೆ ಬ್ಲಾಗ್ ನಲ್ಲಿ ಬರೆದಿದ್ದೆ. ಅದೇ ಬರಹ ಸಂಯುಕ್ತ ಕರ್ನಾಟಕದಲ್ಲಿ ಪ್ರಕಟವಾಗಿ ಹೆಚ್ಚು ಸುದ್ದಿಯೂ ಆಗಿತ್ತು. ಈ ಮಕ್ಕಳಿಗೆ ಡೊಳ್ಳು ತರಬೇತಿ ನೀಡಿದ  ಇಮ್ರಾನ್ ಕುರಿತಂತೆ ಅದೇ ಶಾಲೆಯ ಸಹ ಶಿಕ್ಷಕಿಯಾಗಿರುವ ಕವಯಿತ್ರಿ, ಸಂಶೋಧಕಿ ಕೊಟ್ಟೂರಿನ ನಾವು ನಮ್ಮಲ್ಲಿ ಬಳಗದ ದಲ್ಲಿ ಕ್ರಿಯಾಶೀಲರಾದ ಟಿ.ಎಂ. ಉಷಾ ಅವರು ಆಪ್ತವಾಗಿ ಕಟ್ಟಿಕೊಟ್ಟಿದ್ದಾರೆ.-ಅರುಣ್ ) 
 
 

    ಬಳ್ಳಾರಿಗೆ ಹೋಗುವ ರಸ್ತೆಗಂಟಿಕೊಂಡಂತೆ ಹೊಸಪೇಟೆಯಿಂದ ೧೦ ಕಿ.ಮೀ. ಅಂತರದಲ್ಲಿ ವಡ್ಡರಹಳ್ಳಿ ಎಂಬ ಪುಟ್ಟ ಹಳ್ಳಿಯಿದೆ. ಪ್ರಶಾಂತ ವಾತಾವರಣವಿರುವ ಈ ಊರಿನ ಸರಕಾರಿ ಶಾಲೆಯಲ್ಲಿ ನಮ್ಮ ಸಹೋದ್ಯೋಗಿ - ಪಾಠ ಮಾಡುವ ಇಮ್ರಾನ್ ಮೇಷ್ಟ್ರು, ಡೊಳ್ಳು ಕಲಿಸುವ ಮಾಸ್ತರರಾದದ್ದೊಂದು ಕತೆಯಿದು. ಶಾಸ್ತ್ರೀಯವಾದ ತರಬೇತಿಯಿಲ್ಲದಿದ್ದರೂ, ಅಲ್ಲಿ ಇಲ್ಲಿ ಡೊಳ್ಳು ಕುಣಿತವನ್ನು ನೋಡಿದ್ದರು ಅಷ್ಟೆ. ಸಾಯಿಮಣಿ ಪ್ರಕಾಶನದ ಪ್ರೇರಣೆಯಿಂದ  ಶಾಲೆಯ ಮಕ್ಕಳನ್ನು ಕಟ್ಟಿಕೊಂಡು ಒಂದು ವರ್ಷದ ಪರಿಶ್ರಮದಲ್ಲಿ ಮಕ್ಕಳ ಡೊಳ್ಳು ತಂಡವನ್ನು ಕಟ್ಟಿದ್ದಾರೆ. 

ಡೊಳ್ಳು ಕುಣಿತ ಕಲಿಸುವುದಕ್ಕಾಗಿ ಇಂದು ಅನೇಕ ಶಿಬಿರಗಳು, ತರಬೇತಿ ಕೇಂದ್ರಗಳು ಅಲ್ಲಲ್ಲಿ ತೆರೆದುಕೊಂಡಿವೆ. ತರಬೇತಿ ಇಲ್ಲದೆ ಡೊಳ್ಳು ಕುಣಿತದಂತಹ ದೇಸಿ ಕಲೆಯನ್ನು ಒಲಿಸಿಕೊಳ್ಳುವುದು ಬಹಳ ಕಷ್ಟ. ಡೊಳ್ಳು ಕುಣಿತ ಬಲ್ಲ ಹಿರಿಯರೊಬ್ಬರನ್ನು ಮಕ್ಕಳಿಗೆ ಕಲಿಸಲು ತಿಳಿಸಲಾಗಿತ್ತು. ಅವರು ಒಂದೆರೆಡು ಬಾರಿ ಬಂದು ಹೋದರು. ಆದರೆ, ಬೇರೆ ಕೆಲಸದ ಒತ್ತಡದಿಂದಾಗಿ ಪೂರ್ತಿಯಾಗಿ ತೊಡಗಿಸಿಕೊಳ್ಳಲಾಗಲಿಲ್ಲ. ಆಗ ಇಮ್ರಾನ್ ತಾವೇ ಸ್ವತ: ಮಕ್ಕಳೊಂದಿಗೆ ಸೇರಿ ಹೆಜ್ಜೆ ಹಾಕುವುದನ್ನು; ತಾಳಕ್ಕೆ ತಕ್ಕಂತೆ ಡೊಳ್ಳು ಬಡಿಯುವ ಬೇರೆ ಬೇರೆ ಮಜಲುಗಳನ್ನು ಕಲಿಯತೊಡಗಿದರು. ೧೦-೧೨ ವರ್ಷದ ಪುಟ್ಟ ಮಕ್ಕಳಿಗೆ ಹೆಚ್ಚು ಭಾರವೆನಿಸುವ ಡೊಳ್ಳುಗಳನ್ನು ಕೊರಳಿಗೆ ಹಾಕಿ ಕುಣಿತ ಕಲಿಸುವುದು ಸವಾಲಿನ ಕೆಲಸವಾಗಿತ್ತು. ಜತೆಗೆ ಶಾಲೆಗೆ ರಜೆ ಇದ್ದಾಗ, ಪೋಷಕರು ತಮ್ಮ ಮಕ್ಕಳನ್ನು ಕೂಲಿ ಕೆಲಸಕ್ಕೆ, ಮತ್ತಿತರ ಕೆಲಸಗಳಿಗೆ ತಮ್ಮೊಂದಿಗೆ ಕರೆದೊಯ್ಯುತ್ತಾರೆ. ಹಾಗಾಗಿ ಶಾಲಾ ಕೆಲಸಕ್ಕೆ ಧಕ್ಕೆಯಾಗದಂತೆ, ಮಕ್ಕಳ ಮನೆಯವರಿಗೂ ತೊಂದರೆಯಾಗದಂತೆ ಶಾಲಾ ಅವಧಿ ಪ್ರಾರಂಭವಾಗುವುದಕ್ಕೂ ಮುಂಚೆ, ಊಟದ ವಿರಾಮದಲ್ಲಿ, ಸಂಜೆ ಹೊತ್ತು ಡೊಳ್ಳು ಕುಣಿತದ ತಾಲೀಮು ನಡೆಸುತ್ತಾರೆ.

   ೨೦೧೧ರಲ್ಲಿ ಸಾಯಿಮಣಿ ಪ್ರಕಾಶನದ ಕಾರ್ಯಕ್ರಮವೊಂದರಲ್ಲಿ ನೀಡಿದ ಮೊದಲ ಪ್ರದರ್ಶನ ಜನರ ಅಪಾರ ಮೆಚ್ಚುಗೆಗೆ ಪಾತ್ರವಾಯಿತು. ಹಲವಾರು ಸಂಘ ಸಂಸ್ಥೆಗಳಿಂದ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ವಡ್ಡರಹಳ್ಳಿ ಮಕ್ಕಳ ಡೊಳ್ಳು ಕುಣಿತದ ತಂಡಕ್ಕೆ ಆಹ್ವಾನಗಳು ಬಂದವು. ಬಂದ ಎಲ್ಲ ಆಹ್ವಾನಗಳನ್ನು ಸ್ವೀಕರಿಸದೆ, ಆಯ್ದ ಕಾರ್ಯಕ್ರಮಗಳಿಗೆ ಪ್ರದರ್ಶನ ನೀಡಲಾಯಿತು. ಕಾರಣ, ಮೆರವಣಿಗೆಯಂತಹ ಕಾರ್ಯಕ್ರಮಗಳಿಗೆ ಡೊಳ್ಳು ಕುಣಿತವನ್ನು ಬಳಸಿಕೊಳ್ಳುವುದು ಹೆಚ್ಚು. ಇದರಿಂದ ಸಣ್ಣ ವಯಸ್ಸಿನ ಮಕ್ಕಳು ದಣಿಯುತ್ತಾರಾದ್ದರಿಂದ, ಆಯ್ದ ಸ್ಥಿರವೇದಿಕೆ ಮೇಲಿನ ಕಾರ್ಯಕ್ರಮಗಳನ್ನು ಮಾತ್ರ ಆಯ್ದುಕೊಳ್ಳುತ್ತಾರೆ. ಇತ್ತೀಚೆಗೆ ನಡೆದ ಮಲಪನಗುಡಿ ಹತ್ತಿರವಿರುವ ವಿಜಯಶ್ರೀ ಹೆರಿಟೇಜ್ ವಿಲೇಜ್ ಪ್ರೈ.ಲಿಮಿಟೆಡ್‌ನ ಟ್ಯಾಲೆಂಟ್ ಷೋನಲ್ಲಿ ಪ್ರಥಮ ಆದ್ಯತೆಯನ್ನು ಪಡೆದುಕೊಂಡಿರುವ ವಡ್ಡರಹಳ್ಳಿ ಮಕ್ಕಳ ಡೊಳ್ಳು ತಂಡವು ಅಲ್ಲಿನ ಪ್ರದರ್ಶನಕ್ಕೆ ಒಪ್ಪಿಗೆ ನೀಡಿ, ಮನೋರಂಜನೆಗೆ ಆಗಮಿಸುವ ಪ್ರವಾಸಿಗರ ಕಣ್ಮನಗಳನ್ನು ಸೆಳೆಯುತ್ತಿದೆ. ಸುಪ್ತ ಮನಸ್ಸನ್ನು ಜಾಗೃತಗೊಳಿಸಿ, ಮುದಗೊಳಿಸುವ ಡೊಳ್ಳಿನ ಬಡಿತ; ಪುಟ್ಟ ಮಕ್ಕಳ ಗೆಜ್ಜೆಯ ಸದ್ದು; ಬಣ್ಣದ ದಿರಿಸು ಹಾಕಿಕೊಂಡು ಕುಣಿಯುವ ಪರಿ ಎಂತಹವರನ್ನೂ ಮಂತ್ರಮುಗ್ಧರನ್ನಾಗಿಸುತ್ತದೆ.
 

ಮಕ್ಕಳ ಡೊಳ್ಳು ತಂಡದ ಸೂತ್ರಧಾರರಾಗಿರುವ ಇಮ್ರಾನ್‌ರವರು ಮಕ್ಕಳೊಂದಿಗೆ ಸೇರಿ ನಾನೂ ವಿದ್ಯಾರ್ಥಿಯಾಗಿ ಡೊಳ್ಳು ಕುಣಿತವನ್ನು ಕಲಿಯತೊಡಗಿದ್ದೇನೆ. ಯಾವ ನಿರೀಕ್ಷೆಯನ್ನೂ ಇಟ್ಟುಕೊಳ್ಳದೆ ಕಟ್ಟಿದ ಮಕ್ಕಳ ಡೊಳ್ಳು ತಂಡ ಇಂದು ಇಷ್ಟೊಂದು ಜನಪ್ರಿಯವಾಗುತ್ತದೆ ಎಂದು ಭಾವಿಸಿರಲಿಲ್ಲ. ಶ್ರಮಪಟ್ಟಿದ್ದಕ್ಕೂ ಸಾರ್ಥಕವೆನಿಸಿದೆ. ಇಂತಹ ಪಠ್ಯೇತರ ಚಟುವಟಿಕೆಗಳು ಮಕ್ಕಳಿಗೆ ಹೊಸ ಉತ್ಸಾಹವನ್ನು ತುಂಬುತ್ತವೆಎನ್ನುತ್ತಾರೆ. ಬೇರೆ ಕಡೆಯಿಂದ ಡೊಳ್ಳುಗಳನ್ನು ಎರವಲು ತಂದು ಪ್ರದರ್ಶನಕ್ಕೆ ಸಿದ್ಧವಾಗುವುದು ಕಷ್ಟವಾಗುತ್ತಿತ್ತು. ಇದರಿಂದ ಊರಿನವರ ಸಹಕಾರ ಬಯಸಿದಾಗ, ಹಲವಾರು ಕೈಗಳು ಡೊಳ್ಳು ಕೊಡಿಸುವುದಕ್ಕೆ ಮುಂದಾದ್ದನ್ನು ಪ್ರೀತಿಯಿಂದ ಸ್ಮರಿಸುತ್ತಾರೆ. ಆಗಾಗ್ಗೆ ಡೊಳ್ಳಿಗೆ ಹದವಾದ ಚರ್ಮವನ್ನು ಬದಲಾಯಿಸಬೇಕಾದ್ದು ಅನಿವಾರ‍್ಯ. ಅದು ದುಬಾರಿ ಖರ್ಚಿನದಾದ್ದರಿಂದ ತಾವೇ ಕುರಿಚರ್ಮವನ್ನು ತಂದು ಹದಗೊಳಿಸಿ ಅಳವಡಿಸುವುದನ್ನೂ ಕಲಿತಿದ್ದಾರೆ.
ಪ್ರತಿದಿನ ಮಕ್ಕಳನ್ನು ಕಲಿಕಾ ಪ್ರಕ್ರಿಯೆಯಲ್ಲಿ ತೊಡಗಿಸುವ; ಪಠ್ಯಕ್ರಮವನ್ನು ಪೂರ್ತಿಗೊಳಿಸುವ; ಎಲ್ಲದ್ದಕ್ಕೂ ದಾಖಲೆಗಳನ್ನು ಇಡುವ ಧಾವಂತದಲ್ಲಿ ಶೈಕ್ಷಣಿಕ ವರ್ಷವೇ ಮುಗಿದು ಹೋಗಿರುತ್ತದೆ. ಮಕ್ಕಳನ್ನು ಸಹಪಠ್ಯ ಚಟುವಟಿಕೆಗಳಲ್ಲಿ ತೊಡಗಿಸುವುದು ಕಷ್ಟಸಾಧ್ಯವೆನ್ನುವುದು ಹೆಚ್ಚು ಶಿಕ್ಷಕರ ಅಭಿಪ್ರಾಯ. ಇಂತಹ ವಾತಾವರಣದಲ್ಲಿ ಶಾಲಾ ಕರ್ತವ್ಯವನ್ನು ಪ್ರಾಮಾಣಿಕತೆಯಿಂದ ಅಚ್ಚುಕಟ್ಟಾಗಿ ಮಾಡುವುದರೊಂದಿಗೆ ಡೊಳ್ಳು ಕುಣಿತದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಮಕ್ಕಳ ಡೊಳ್ಳು ತಂಡವನ್ನು ಕಟ್ಟಿಕೊಂಡು ಯಶಸ್ವೀ ಪ್ರದರ್ಶನದಲ್ಲಿ ತೊಡಗಿರುವ ಯುವ ಪ್ರತಿಭೆ ಇಮ್ರಾನ್ ಸರ್‌ಗೊಂದು ಹ್ಯಾಟ್ಸಾಫ್

ಕಾಮೆಂಟ್‌ಗಳಿಲ್ಲ: