ಮಂಗಳವಾರ, ಸೆಪ್ಟೆಂಬರ್ 6, 2011

ಜನಪದ ಲೋಕದ ಭ್ರಷ್ಟಾಚಾರ ವಿರೋಧಿ ನಾಯಕರುಗಳು

ಡಾ. ಅರುಣ್ ಜೋಳದಕೂಡ್ಲಿಗಿ



ಅಣ್ಣಾ ಹಜಾರೆಯವರು ಭ್ರಷ್ಟಾಚಾರದ ವಿರುದ್ಧ ದ್ವನಿ ಎತ್ತಿದ್ದು, ಹಜಾರೆಯವರ ಹೋರಾಟದ ಹಿಂದಣ ಅಪಾಯಗಳನ್ನು ವಿದ್ವತ್ ಲೋಕ ವಿಮರ್ಶೆಗೆ ಒಡ್ಡಿದ್ದು, ಸರಕಾರ ಅವರ ಬೇಡಿಕೆಗಳಿಗೆ ಒಪ್ಪಿಗೆ ಸೂಚಿಸಿ ಈಗ ಕಾರ್ಯಪ್ರವೃತ್ತವಾಗಿರುವುದೂ, ಎಲ್ಲವೂ ನಿಧಾನಕ್ಕೆ ನೆನಪಿನ ಪುಟ ಸೇರುತ್ತಿವೆ.

ನನಗೀಗ ಜನಪದ ಲೋಕದ ಅಣ್ಣಾ ಹಜಾರೆಗಳು ನೆನಪಾಗತೊಡಗಿದ್ದಾರೆ.ಅಂದರೆ ನಮ್ಮ ನಮ್ಮ ಹಳ್ಳಿಗಳಲ್ಲಿ, ನಮ್ಮ ನಡುವೆಯೇ ಇರುವ ಗ್ರಾಮೀಣ ಪ್ರದೇಶದ ಸಮಾನ್ಯ ಜನರು ಕೂಡ ಭ್ರಷ್ಟಾಚಾರವನ್ನು ವಿರೋಧಿಸಿ ತುಂಬಾ ಹಿಂದಿನಿಂದಲೂ ಹೋರಾಡುತ್ತಾ ಬಂದಿದ್ದಾರೆ. ಅವರುಗಳು ಭ್ರಷ್ಟಾಚಾರ ಎನ್ನುವ ದೊಡ್ಡ ಬ್ಯಾನರಿನಡಿ ಹೋರಾಡದಿದ್ದರೂ, ಲಂಚ ವಿರೋಧಿ ವ್ಯಕ್ತಿತ್ವವನ್ನಂತೂ ರೂಪಿಸಿಕೊಂಡವರು. ಆದರೆ ಅಂತವರನ್ನು ಬೆಂಬಲಿಸಿ ಎಷ್ಟು ಜನ ಹಿಂದೆ ನಿಂತರು ಎಂದು ಕೇಳಿಕೊಂಡರೆ ಅದು ಮಾತ್ರ ಶೂನ್ಯ.

ಹಳ್ಳಿ ಜನ ಅದೇನು ಭ್ರಷ್ಟಾಚಾರವನ್ನು ವಿರೋಧಿಸಿಯಾರು? ಎಂದು ಕೆಲವರು ಮೂಗಿಮುರಿಯುವ ಸಾಧ್ಯತೆಯಿದೆ. ಅಥವಾ ಜಾನಪದ ಮತ್ತು ಭ್ರಷ್ಟಾಚಾರ ಎಂಬ ವಿಷಯವೊಂದನ್ನು ಕುರಿತು ಮಾತನಾಡಲು ಹೊರಟರೆ ಸಾಂಪ್ರದಾಯಿಕ ಜಾನಪದ ವಿದ್ವಾಂಸರು ಇದೇನು ತಲೆ ಕೆಟ್ಟ ಯೋಚನೆ ಎಂದು ತಳ್ಳಿ ಹಾಕುವ ಸಾಧ್ಯತೆಯೂ ಇದೆ. ಇವೆರಡನ್ನೂ ಗಮನದಲ್ಲಿಟ್ಟುಕೊಂಡು ನನ್ನ ಕೆಲವು ಯೋಚನೆಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುವೆ.

ಹಳ್ಳಿ ಜನರ ಸಂಪರ್ಕಕ್ಕೆ ಬರುವ ಅಧಿಕಾರಿಗಳ ಸಮೂಹ ತೀರಾ ಚಿಕ್ಕದೇನಲ್ಲ. ವೃದ್ಧಾಪ್ಯ, ವಿಧವಾ ವೇತನ ಕೊಡುವ ಪೋಷ್ಟಮ್ಯಾನ್ ನಿಂದ ಇದು ಆರಂಭವಾಗುತ್ತದೆ. ಗ್ರಾಮ ಲೆಕ್ಕಾಧಿಕಾರಿ, ತಹಶೀಲ್ದಾರ ಕಛೇರಿ, ನೋಂದಣಿ ಇಲಾಖೆ, ರೈತ ಸಂಪರ್ಕ ಕೇಂದ್ರ, ಬ್ಯಾಂಕ್‌ಗಳು, ನೀರಾವರಿ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ತೋಟಗಾರಿಕೆ ಇಲಾಖೆ, ಆರೋಗ್ಯ ಇಲಾಖೆ, ಕೃಷಿ ಮಾರುಕಟ್ಟೆ, ಪೋಲಿಸ್ ಇಲಾಖೆ ಇನ್ನು ಮುಂತಾದ ಇಲಾಖೆಯ ಅಧಿಕಾರಿಗಳ ಜತೆ ಜನರು ಒಡನಾಡುವ ಪ್ರಸಂಗ ಬರುತ್ತದೆ. ನಾನಾ ಕಾರಣಗಳಿಗಾಗಿ ಈ ಇಲಾಖೆಯ ಅಧಿಕಾರಿಗಳು ರೈತರಲ್ಲಿ ಲಂಚ ಪಡೆದು ಅವರ ಕೆಲಸಗಳನ್ನು ಮಾಡಿಕೊಡುತ್ತಾರೆ. ಇದು ಈಚೆಗೆ ತೀರಾ ಸಾಮಾನ್ಯ ಸಂಗತಿ. ಕೆಲವರು ಈ ಅಧಿಕಾರಿಗಳನ್ನು ಎದುರು ಹಾಕಿಕೊಂಡರೆ ನಮ್ಮ ಕೆಲಸಗಳು ಆಗುವುದಿಲ್ಲ ಎಂದು ಹೆದರಿ ಸಾಲ ಮಾಡಿಯಾದರೂ ಲಂಚ ಕೊಟ್ಟು ಕೆಲಸಗಳನ್ನು ಮಾಡಿಸಿಕೊಳ್ಳುವ ಒಂದು ವರ್ಗವಿದೆ. ಇಂತಹ ವರ್ಗದಿಂದಾಗಿಯೇ ಭ್ರಷ್ಟಾಚಾರ ತನ್ನ ಬಾಹುಗಳನ್ನು ಚಾಚಿಕೊಳ್ಳಲು ಅನುವಾಗುತ್ತದೆ.

ಇದಕ್ಕಿಂತ ಭಿನ್ನವಾದ ಇನ್ನೊಂದು ವರ್ಗವಿದೆ. ಅದು ಇಂತಹ ಅಧಿಕಾರಿಗಳ ಜತೆ ಲಂಚಕೊಡದಿರುವ ಬಗ್ಗೆ ಸೆಣಸಾಡುವ ವರ್ಗ. ಅವರ ಸಾಮಾನ್ಯ ತಿಳುವಳಿಕೆಯೆಂದರೆ ಸರಕಾರ ಸಂಬಳ ಕೊಡುವಾಗ ನಾವೇಕೆ ಅವರಿಗೆ ಹಣಕೊಡಬೇಕು ಎನ್ನುವುದು ಅವರ ವಾದ. ಅದೇನೆ ಆಗಲಿ ಒಂದು ಪೈಸೆಯನ್ನೂ ಲಂಚ ಕೊಡದೆ ಕೆಲಸ ಮಾಡಿಕೊಳ್ಳುವೆ ಎಂದು ಅಲೆದಲೆದು ಕೆಲಸ ಮಾಡಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಅದಕ್ಕೂ ಜಗ್ಗದಿದ್ದಾಗ ಭಿನ್ನರೀತಿಯಲ್ಲಿ ಪ್ರತಿರೋಧ ಒಡ್ಡಿ ಅಧಿಕಾರಿಗಳಲ್ಲಿ ಭಯ ಹುಟ್ಟಿಸಿ ಕೆಲಸ ಮಾಡಿಸಿಕೊಳ್ಳುವುದೂ ಉಂಟು. ಇನ್ನೂ ಮುಂದುವರೆದು ಅವರದೇ ರೀತಿಯ ಹೋರಾಟವನ್ನೂ ಸಹ ಮಾಡುತ್ತಾರೆ. ಇಂತಹ ಹೋರಾಟಗಳು ಎಲ್ಲೂ ದಾಖಲಾಗುವುದಿಲ್ಲವಷ್ಟೆ. ಇವರುಗಳೆಲ್ಲಾ ನಮ್ಮ ನಮ್ಮ ಹಳ್ಳಿಗಳಲ್ಲೇ ನೆಲೆಸಿರುವ ಅಣ್ಣಾ ಹಜಾರೆಗಳು ಎಂದು ನನಗೀಗ ಅನ್ನಿಸತೊಡಗಿದೆ. ಹೀಗೆ ಸೆಣಸಾಡಿದ ಕೆಲವು ಕಥನಗಳು ಹೀಗಿವೆ.

ಕಥನ: ಒಂದು


ನಮ್ಮ ಊರಿನಲ್ಲಿ ಬರಮಜ್ಜಿ ಎನ್ನುವ ಅಜ್ಜಿ ಇದ್ದಾಳೆ. ಅವಳು ವೃದ್ಧಾಪ್ಯ ವೇತನ ಪಡೆಯುವಾಗ ಪೋಷ್ಟಮ್ಯಾನ್‌ಗೆ ಕಮಿಷನ್ ಕೊಡುತ್ತಿರಲಿಲ್ಲ. ಅಜ್ಜಿ ಕೇಳುವ ಪ್ರಶ್ನೆ ನಿನಗೆ ಸರಕಾರ ಸಂಬಳ ಕೊಡಲ್ಲೇನು, ಮತ್ಯಾಕ ನಾ ಕೊಡ್ಲಿ ಎನ್ನುವುದು. ಈ ಜಿದ್ದಿಗಾಗಿ ಪೋಷ್ಟಮ್ಯಾನ್ ನಾಲ್ಕು ತಿಂಗಳಾದರೂ ಸಂಬಳ ಕೊಡದಿದ್ದಾಗ ಅಜ್ಜಿ ಅಂಚೆ ಕಚೇರಿಗೆ ಹೋಗಿ ಕೇಳಿದಳು. ಆಗ ಪೋಷ್ಟಮಾಷ್ಟರ್ ನೀನು ಹಣ ಕೊಡಲು ಬಂದಾಗ ಇರಲಿಲ್ಲ ಎಂದು ಹಣ ವಾಪಸ್ ಕಳಿಸಲಾಗಿದೆ, ನೀನು ತಾಲೂಕು ಕಚೇರಿಗೆ ಹೋಗಿ ಮತ್ತೆ ಬಿಲ್ ಹಾಕಿಸಿಕೊಂಡು ಬಾ ಎಂದು ಹೇಳಿದ.
ಆಗ ಅಜ್ಜಿಗೆ ದಿಕ್ಕುತೋಚದೆ, ತಾಲೂಕು ಕಛೇರಿಗೆ ಅಲೆದಾಗ ಅಲ್ಲಿನ ಅಧಿಕಾರಿಗಳು ಅಜ್ಜಿಯನ್ನು ಲಂಚ ಕೇಳಿದರು. ಅಜ್ಜಿ ಅಲ್ಲಿಯೂ ಪೆಡಸಾಗಿಯೇ ಉತ್ತರಿಸಿತು. ಹೀಗಾಗಿ ಒಂದು ವಾರ ಅಜ್ಜಿಯನ್ನು ಅಲೆದಾಡಿಸಿದರು. ಅಜ್ಜಿಕೊನೆಗೆ ನಾನು ಸಾಯೋತನಕ ಈ ಕಚೇರಿ ಬಿಟ್ಟು ಹೋಗಲ್ಲ ಎಂದು ತಾಲೂಕು ಕಛೇರಿಯ ಮುಂದೆ ಕೂತಿತು. ಈ ಸುದ್ದಿ ಹೇಗೋ ತಹಶೀಲ್ದಾರರ ಕಿವಿಗೆ ಬಿದ್ದು, ಅವರೇ ಅಜ್ಜಿಯನ್ನು ಖುದ್ದಾಗಿ ವಿಚಾರಿಸಿ ಲಂಚ ಕೇಳಿದ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡು, ಅಜ್ಜಿಯ ವೇತನವನ್ನು ಬಿಡುಗಡೆಗೊಳಿಸಿದರು. ಆಗ ಪೋಷ್ಟಮ್ಯಾನ್ ಉದ್ದೇಶಪೂರ್ವಕವಾಗಿ ಅಜ್ಜಿಯ ವೇತನವನ್ನು ವಾಪಸ್ ಮರಳಿಸಿದ್ದಾರೆ ಎಂದು ತಿಳಿದು ತಹಶೀಲ್ದಾರ್ ಸಂಬಂದಿಸಿದ ಅಧಿಕಾರಿಗಳಿಂದ ಪೋಷ್ಟಮ್ಯಾನ್‌ನನ್ನು ತರಾಟೆಗೆ ತೆಗೆದುಕೊಳ್ಳುವಂತೆ ನೋಡಿಕೊಂಡರು. ಇದು ಮತ್ತೆ ಪುನರಾವರ್ತನೆ ಆಗಲಿಲ್ಲ.

ಕಥನ: ಎರಡು

ನಮ್ಮ ಭಾಗದಲ್ಲಿ ಬಿ.ಡ. ಗೌಡ ಎಂಬ ಗ್ರಾಮ ಲೆಕ್ಕಾಧಿಕಾರಿ ಇದ್ದ. ಈತನು ಹಣದಾಹಿ. ಜಾತಿ ಪ್ರಮಾಣ ಪತ್ರಕ್ಕೆ ಸಹಿ ಹಾಕಲು ಸಹಾ ಹಣ ಕೀಳುತ್ತಿದ್ದ. ಇದರಿಂದ ಜನ ಬೇಸತ್ತಿದ್ದರು. ಹಣಕ್ಕಾಗಿ ಅವರ ಹೊಲ ಇವರಿಗೆ, ಇವರ ಹೊಲ ಅವರಿಗೆ ಬದಲಾಯಿಸಿಬಿಡುವ ಮಟ್ಟಕ್ಕೂ ಇಳಿದಿದ್ದ. ಕರೆಮೂಗಜ್ಜ ಎಂಬ ಅಜ್ಜನಿದ್ದ. ಆತ ಕಡುಕೋಪಿಷ್ಟ. ತನ್ನ ಹೊಲದ ಪಹಣಿ ಕೊಡುವುದಾಗಿ ಬಿ.ಡ. ಗೌಡ ಅವರಲ್ಲಿ ಕೇಳಿದ. ಆತ ಎರಡು ಸಾವಿರ ಕೊಡುವುದಾಗಿ ಕೇಳಿದ್ದ. ಇದರಿಂದ ಕೆಂಡಾಮಂಡಲವಾದ ಮೂಗಜ್ಜ ನಾಳೆ ನಮ್ಮೂರಿಗೆ ಬನ್ನಿ ಕೊಡುತ್ತೇನೆಂದು ಹೇಳಿದನು.ಮರುದಿನ ಗೌಡರು ಹಳ್ಳಿಗೆ ಬಂದರು. ಊರ ಮುಂದೆ ನೆರೆದ ಜನರ ಎದುರು ಮೂಗಜ್ಜ ಗೌಡರ ಬಳಿ ಬಂದು, ಗೌಡ್ರೆ ನನ್ನತ್ರ ಅಷ್ಟು ಹಣ ಇಲ್ಲ, ಮುಂದಿನ ತಿಂಗಳು ಕೊಡ್ತಿನಿ ಈಗ ಪಹಣಿ ಕೊಡ್ರಿ ಎಂದ. ಅದಕ್ಕೆ ಗೌಡ ಮುಂದಿನ ತಿಂಗಳೇ ಪಹಣಿ ಕೊಡುವೆ ಬಿಡು ಎಂದನು. ಇದರಿಂದ ಕೋಪಗೊಂಡ ಮೂಗಜ್ಜ ಕಾಲಲ್ಲಿ ಇರುವ ಚಪ್ಪಲಿಯನ್ನು ಕಿತ್ತು ಮುಖ ಮೋರೆ ನೋಡದಂತೆ ಹೊಡೆದೇ ಬಿಟ್ಟ. ಜನ ಮೂಗಜ್ಜನನ್ನು ಬಿಡಿಸುವ ಹೊತ್ತಿಗೆ ಗೌಡರು ಹಣ್ಣುಗಾಯಿ ನೀರುಗಾಯಿ ಆಗಿ ಮೂಗು ಬಾಯಿಯಲ್ಲಿ ರಕ್ತ ಸೋರುತ್ತಿತ್ತು. ಆತ ಪಟ್ಟಣಕ್ಕೆ ಹೋಗಿ ಮೂಗಜ್ಜನ ಮೇಲೆ ಪೋಲಿಸ್ ಕಂಪ್ಲೇಟ್ ಕೊಟ್ಟನು. ಇದನ್ನು ಇಡೀ ಊರಿಗೆ ಊರೇ ಪೋಲಿಸ್ ಠಾಣೆ ಎದುರು ಧರಣಿ ಕೂತು, ಗೌಡರ ಬ್ರಷ್ಟಾಚಾರದ ವಿರುದ್ಧ ದ್ವನಿ ಎತ್ತಿದರು. ಇದರ ಪರಿಣಾಮ ಗೌಡರನ್ನು ಅಮಾನತ್ತಿನಲ್ಲಿಡಲಾಯಿತು. ಈ ಘಟನೆಯಿಂದಾಗಿ ಆ ಭಾಗದ ಗ್ರಾಮಲೆಕ್ಕಾಧಿಕಾರಿಗಳಿಗೆ ಒಂದು ಬಗೆಯ ಬಿಸಿ ತಟ್ಟಿದಂತಾಯಿತು.

ಕಥನ: ಮೂರು


ಕೂಡ್ಲಿಗಿ ತಾಲ್ಲೂಕು ಹಾರಕನಾಳಿನಲ್ಲಿ 1998ರಲ್ಲಿ ನಡೆದ ಒಂದು ಘಟನೆ. ಅಂದು ಊರಿಗೆ ಲೈನ್‌ಮ್ಯಾನ್ಗಳ ಗುಂಪೊಂದು ಬಂದಿತ್ತು (ಕೆ.ಇ.ಬಿ. ನೌಕರರು) ಬಾಕಿ ಉಳಿದ ಕರೆಂಟ್ (ಎಲೆಕ್ಟ್ರಿಕಲ್) ಬಿಲ್ಲುಗಳನ್ನು ವಸೂಲಿ ಮಾಡುವುದು ಆ ದಿನದ ಉದ್ದೇಶವಾಗಿತ್ತು. ಹಣಪಾವತಿ ಮಾಡದೆ ಬಾಕಿ ಇರುವ ಮನೆಗಳ ಕರೆಂಟ್ ಕನೆಕ್ಷನ್ ಕಟ್ ಮಾಡುತ್ತಿದ್ದರು. ಹಾರಕನಾಳಿನ ಭರಮನಗೌಡರದು ಐದು ತಿಂಗಳ ಬಿಲ್ ಬಾಕಿ ಇತ್ತು. ಅವರು ‘ಈಗ ದುಡ್ಡು ಇಲ್ಲ ಬೆಳೆ ಬಂದಿಂದೆ ಕಟ್ತೀವಿ’ ಎಂದರು. ಕೆ.ಇ.ಬಿ. ನೌಕರನೊಬ್ಬ ‘ಆಯ್ತು ನಾವು ಆವಾಗ್ಲೆ ಕನೆಕ್ಷನ್ ಕೊಡ್ತೀವಿ’ ಎಂದು, ಲೈನ್ ಕಟ್ ಮಾಡಲು ಕರೆಂಟ್ ಕಂಬವನ್ನು ಹತ್ತಿದ. ಭರಮನ ಗೌಡರಿಗೆ ಸಿಟ್ಟು ಅವಮಾನ ಎರಡೂ ಆಗಿ ಕಲ್ಲು ಹಿಡಿದು ‘ಲೇ ಲೈನ್ ಬಂದ್ ಕಟ್ ಮಾಡು ಕಲ್ಲಿಲೇ ಹೊಡಿತೀನಿ… ಸೊಂಡೂರು ರಾಜರದು ಕೋಟಿಗಟ್ಟಲೆ ಕರೆಂಟ್ ಬಿಲ್ಲು ಬಾಕಿ ಐತಿ ಅದನ್ನು ವಸೂಲಿ ಮಾಡು ನೋಡ್ತೀನಿ… ಬಂದ್ ಬಿಟ್ಟ ನಮ್ಮಂತ ಬಡವರತ್ರ,’ ಎಂದು ಹೊಡೆಯಲು ಸಜ್ಜಾಗಿ ನಿಂತನು. ಕಂಬದ ಮೇಲಿನ ಲೈನ್ ಮ್ಯಾನ್ ಹೆದರಿ ಲೈನ್ ಕಟ್ ಮಾಡದೆ ಇಳಿದ. ಆತನ ಮುಖದಲ್ಲಿ ಅವಮಾನದ ಛಾಯೆಯಿತ್ತು. ಈ ಭಾಗದಲ್ಲಿ ಕೆಇಬಿ ಯವರು ಸಾಮಾನ್ಯವಾಗಿ ಕೇಳುವ ಮಾತು ಇದಾಗಿತ್ತು. ಈ ಪ್ರಶ್ನೆಗೆ ಇಲಾಖೆಯವರು ಉತ್ತರ ನೀಡಲು ಅಸಹಾಯಕರಾಗಿರುತ್ತಿದ್ದರು. ಆ ನಂತರ ಸಂಡೂರು ಘೋರ್ಪಡೆ ಅವರ ಕಾರ್ಖಾನೆಯ ಸುಮಾರು ಮೂರ್ನಾಲಲ್ಕು ಕೋಟಿಯಷ್ಟು ಬಾಕಿ ಹಣವನ್ನು ಸಿಕ್ ಇಂಡಸ್ಟ್ರಿ ಎಂದು ಸರಕಾರ ಮನ್ನ ಮಾಡಿತು.
ಅಂದು ಭರಮನಗೌಡರು ಘೋರ್ಪಡೆ ಕಂಪನಿ ವಿರುದ್ಧ ಎತ್ತಿದ ಪ್ರಶ್ನೆಯನ್ನು ಜನರು ದೊಡ್ಡದಾಗಿ ಕೂಗು ಹಾಕಿದ್ದರೆ, ಅದೊಂದು ದೊಡ್ಡ ಸಂಗತಿಯೇ ಆಗುತ್ತಿತ್ತು. ಆದರೆ ಪ್ರತಿರೋಧದ ಬಿಡಿ ಬಿಡಿ ದ್ವನಿಗಳು ಒಟ್ಟುಗೂಡಲಿಲ್ಲ.

ಕಥನ: ನಾಲ್ಕು

ಕೂಡ್ಲಿಗಿ ತಾಲೂಕಿನ ಒಂದು ಹಳ್ಳಿಯಲ್ಲಿ ಶಾರದಮ್ಮ ಎನ್ನುವ ನಡು ವಯಸ್ಸಿನ ಹೆಣ್ಣುಮಗಳಿದ್ದಾಳೆ. ಆಯಮ್ಮ ಯಾವುದೇ ಪ್ರಜಾಪ್ರತಿನಿಧಿಗಳು ಬಂದರೆ ಯಾವ ಮುಲಾಜನ್ನೂ ನೋಡದೆ, ನಮ್ಮೂರಿಗೆ ಏನು ಕೆಲಸ ಮಾಡ್ಸೀರಿ ತೋರಿಸ್ರಿ? ಜನರ ಹೊಟ್ಟಿ ಮೇಲೆ ಹೊಡ್ದು ತಮ್ಮ ಹೊಟ್ಟಿ ತುಂಬ್ಸಿಕೊಳ್ಳೋ ಜನ ನೀವು ಎಂದು ತರಾಟೆಗೆ ತೆಗೆದುಕೊಳ್ಳುತ್ತಿದ್ದಳು. ಇದು ಆಯಮ್ಮ ತನ್ನ ಶಾಲಾ ದಿನಗಳಲ್ಲಿ ಪ್ರಜಾಪ್ರಭುತ್ವ ಮಾದರಿಯ ಬಗ್ಗೆ ಕಲಿತ ಪಾಠದಿಂದಾಗಿ ಬಂದ ತಿಳುವಳಿಕೆಯಾಗಿತ್ತು.
ಹಾಗಾಗಿ ಶಾರದಮ್ಮನ ಓಣಿಯಲ್ಲಿ ಗ್ರಾಮಪಂಚಾಯ್ತಿ ಸದಸ್ಯರು ಅಪ್ಪಿ ತಪ್ಪಿಯೂ ಸುಳಿಯುತ್ತಿರಲಿಲ್ಲ. ಇನ್ನು ಚುನಾವಣೆಯ ಸಮಯದಲ್ಲಿ ಶಾರದಮ್ಮ ಕೂಲಿಗೆ ಹೋಗದೆ, ಪ್ರಚಾರಕ್ಕೆ ಬರುವ ಸದ್ಯದ ಎಮ್ಮೆಲ್ಲೆಯನ್ನು ತರಾಟೆಗೆ ತೆಗೆದುಕೊಳ್ಳಲಿಕ್ಕಾಗಿಯೇ ಕಾದಿರುತ್ತಿದ್ದಳು. ಇನ್ನು ಯಾರೇ ಲಂಚ ಪಡೆಯುವ ಸುದ್ದಿ ತಿಳಿಯುತ್ತಲೂ ಅವರೊಂದಿಗೆ ತನ್ನದೇ ದಾಟಿಯಲ್ಲಿ ಜಗಳತೆಗೆದು ರಂಪಾಟ ಮಾಡುತ್ತಿದ್ದಳು. ಇದು ಸಿನಿಕತೆಯಂತೆ ಕಂಡರೂ ಶಾರದಮ್ಮನ ಒಳಗೆ ಒಂದು ನೈತಿಕವಾದ ಶಕ್ತಿ ಜಾಗೃತವಾಗುತ್ತಿದ್ದಂತೆ ಕಾಣುತ್ತದೆ. ಬರು ಬರುತ್ತಾ ಜನರು ಶಾರದಮ್ಮನ ಮಾತನ್ನು ಗೇಲಿ ಮಾಡಲು ಶುರು ಮಾಡಿದರು. ಇದರಿಂದ ಮನನೊಂದ ಶಾರದಮ್ಮ ಕಾಲನಂತರ ಮೌನಿಯೇ ಆದಳು. ಅಂದು ಶಾರದಮ್ಮನ ಜತೆ ಆ ಊರಿನವರು ದ್ವನಿ ಸೇರಿಸಿದ್ದರೆ ಆ ಹಳ್ಳಿಯೇ ಭ್ರಷ್ಟಾಚಾರ ವಿರೋಧಿ ಹಳ್ಳಿಯಾಗುವ ಸಾದ್ಯತೆಗಳೂ ಇದ್ದವು.

ಈ ಮೇಲಿನ ನಾಲ್ಕು ಕಥನಗಳು ಒಂದು ಮಾದರಿಯಷ್ಟೆ. ಇಂತಹ ನೂರಾರು ಕಥನಗಳನ್ನು ಆಯಾ ಭಾಗದಿಂದ ಸೇರಿಸುತ್ತಾ ಹೋಗಬಹುದು. ಆದರೆ ಅಂತಹ ಧೋರಣೆ ಇರುವವರನ್ನು ಹಾಸ್ಯಕ್ಕೆ ವಸ್ತುವಾಗಿಸಿಕೊಳ್ಳುವ ಘಟನೆಗಳೇ ಹೆಚ್ಚು. ಅಂದರೆ ತಲೆಕೆಟ್ಟವರೆಂದೂ, ಈ ಕಾಲದ ಜಾಯಮಾನ ತಿಳಿಯದ ಹಳೆ ಗಾಂಧಿ ಕಾಲದವರೆಂದು ಟೀಕಿಸಿ ಸುಮ್ಮನಾಗುತ್ತಾರೆ. ಇವರ ಅರ್ಥದಲ್ಲಿ ಲಂಚ ಕೊಟ್ಟು ಕೆಲಸ ಮಾಡಿಸಿಕೊಳ್ಳುವವ ಆಧುನಿಕ ಕಾಲಕ್ಕೆ ತೆರೆದುಕೊಂಡವನೆಂತಲೂ, ಅಂತವರು ಯಂಗ್ ಅಂತಲೂ ಆಗುತ್ತದೆ.

ಇಂದು ಅಣ್ಣಾ ಹಜಾರೆಗೆ ಬೆಂಬಲ ಸೂಚಿಸಿ ಘೆರಾವು ಮಾಡಿ ಕೂಗು ಹಾಕುವ ಅದೇ ಯುವಕರು ತಮ್ಮದೇ ಊರಿನ ಭ್ರಷ್ಟಾಚಾರಿ ವಿರೋಧಿಯೊಬ್ಬರನ್ನು ಬೆಂಬಲಿಸಿ, ತಮ್ಮ ತಮ್ಮ ವ್ಯಾಪ್ತಿಯಲ್ಲಿಯೇ ಭ್ರಷ್ಟಾಚಾರ ತೊಡೆದು ಹಾಕಲು, ಲಂಚ ವಿರೋಧಿ ಮನೋಭಾವ ಬೆಳೆಸಲು ಮುಂದಾಗುವುದಿಲ್ಲ. ಇದೊಂದು ಈ ಕಾಲದ ವಿಪರ್ಯಾಸ. ಹೀಗಾದಲ್ಲಿ ಇಡೀ ಭ್ರಷ್ಟಾಚಾರ ನಿರ್ಮೂಲನವಾಗುತ್ತದೆ ಎನ್ನುವುದು ನನ್ನ ನಿಲುವಲ್ಲ, ಆದರೆ ಬುಡಮಟ್ಟದಲ್ಲಿ ಒಂದು ಸಮಸ್ಯೆಯನ್ನು ಗುರುತಿಸುವಾಗ ಈ ಎಲ್ಲಾ ಅಂಶಗಳು ಮುಖ್ಯವಾಗುತ್ತದೆ ಎನ್ನುವುದಷ್ಟೆ ನನ್ನ ಆಶಯ.

ಈಗ ನಾವುಗಳು ದೂರ ಗುಡ್ಡದ ಹಜಾರೆಯವರನ್ನು ನುಣ್ಣಗೆಂಬತೆ ನೋಡುವ ಬದಲು, ಕಣ್ಣು ತೆರೆದು ನಮ್ಮ ನಮ್ಮ ಸುತ್ತಮುತ್ತಲ ಲಂಚ ವಿರೋಧಿ ಪ್ರಾಮಾಣಿಕ ವ್ಯಕ್ತಿತ್ವಗಳನ್ನು ಗುರುತಿಸಿ ಅಂತವರಿಗೆ ಬೆಂಬಲವಾಗಿ ನಿಲ್ಲುವ, ಅವರುಗಳ ಜತೆ ಸಹವರ್ತಿಗಳಾಗುವ ಅಗತ್ಯವಿದೆ. ಜಾನಪದ ಅಧ್ಯಯನಕಾರರೂ ಸಹ ಲಂಚ ವಿರೋಧಿ ಜನಪದ ನಾಯಕರುಗಳ ಬಗ್ಗೆ ಮಾಹಿತಿ ಕಲೆಹಾಕಿ ಅಧ್ಯಯನ ಮಾಡಿದರೆ ಹೊಸ ನೆಲೆಯೊಂದು ತೆರೆದುಕೊಳ್ಳುವ ಸಾದ್ಯತೆಯನ್ನು ತಳ್ಳಿಹಾಕುವಂತಿಲ್ಲ.

1 ಕಾಮೆಂಟ್‌:

siddha ಹೇಳಿದರು...

ಉತ್ತಮ ಲೇಖನ ಅರುಣ್, ನಮ್ಮ ಸುತ್ತಲೂ ಅಣ್ಣಾ ಹಜಾರೆಗಳಿದ್ದಾರೆ. ಗುರುತಿಸುತ್ತಿಲ್ಲ ಅಷ್ಟೆ.-ಸಿದ್ಧರಾಮ ಹಿರೇಮಠ.