ಗುರುವಾರ, ನವೆಂಬರ್ 18, 2010

ಪುರಂದರ ದಾಸರ ದೇಸಿ ಚಿಂತನೆಯ ಆಯಾಮಗಳು

ಅರುಣ್ ಜೋಳದಕೂಡ್ಲಿಗಿ -೧- ಪುರಂದರರ ಬಗೆಗೆ ಮಾತನಾಡುವಾಗ ನನಗೆ ಎರಡು ಸಂಗತಿಗಳು ನೆನಪಾಗುತ್ತವೆ. ಒಂದು ಹಂಪಿಯ ಪುರಂದರ ಮಂಟಪ. ಇನ್ನೊಂದು ಮೂಡುಮಾರ್ನಾಡು ಎಂಬ ಪುಟ್ಟ ಊರು. ಹಂಪಿಯಲ್ಲಿ ಪುರಂದರ ಮಂಟಪವಿದೆ. ವಿಜಯನಗರದ ಕಾಲದಲ್ಲಿ ಇದ್ದ ಅವರ ನೆನಪನ್ನು ಇದು ತರುತ್ತದೆ. ಇದು ಬಯಲು ಮಂಟಪ. ಇಲ್ಲಿಗೆ ಬರುವ ಪ್ರವಾಸಿಗರು ತಂದ ಬುತ್ತಿಯನ್ನು ಉಣ್ಣುತ್ತಾರೆ. ಊಟದ ಪಾಲುದಾರರಾಗಿ ನಾಯಿ, ಕಾಗೆ, ಗುಬ್ಬಿ ಇರುವೆ ಗೊದ್ದಗಳೂ ಇದರ ಸುತ್ತ ಮನೆಮಾಡಿಕೊಂಡಿವೆ. ಇದು ಮೀನು ಹಿಡಿಯುವವರಿಗೆ ಪ್ರಶಸ್ತ ತಾಣ. ಬಲೆ ಎತ್ತಿದಾದ ಮೀನು ಈ ಮಂಟಪದಲ್ಲಿ ಒದ್ದಾಡಿ ಪ್ರಾಣ ಬಿಡುತ್ತವೆ. ಮಂಟಪಕ್ಕೆ ಹೊಂದಿಕೊಂಡಂತೆ ಒಲೆಗುಂಡುಗಳೂ ಇವೆ. ಅಡುಗೆಯನ್ನೂ ಮಾಡುತ್ತಾರೆ. ಸಾದು ಸನ್ಯಾಸಿಗಳ ನೆಲೆ ಕೂಡ. ಹಂಪಿ ಉತ್ಸವದಲ್ಲಿ ಕೀರ್ತನೆ ನೃತ್ಯಾದಿಗಳಿಂದಾಗಿ ಮಂಟಪದಲ್ಲಿ ಪುರಂದರರು ಜೀವತಳೆದಂತಾಗುತ್ತದೆ. ಪುರಂದರ ಉತ್ಸವದಲ್ಲಿ ಈ ಮಂಟಪ ಭೂತ ವರ್ತಮಾನವನ್ನು ಬೆಸೆವ ಕೊಂಡಿ. ಮಕರ ಸಂಕ್ರಮಣದಲ್ಲಿ ಅನೇಕರು ಸ್ನಾನ ಮಾಡಿ ಬಟ್ಟೆ ಬದಲಿಸುವ ತಾಣವಿದು. ಆ ದಿನ ಹುಡುಗಿಯರು ಸ್ನಾನ ಮಾಡುವುದನ್ನು ನೋಡುವುದಕ್ಕಾಗಿ ಹುಡುಗರು ದೌಡಾಯಿಸುತ್ತಾರೆ. ಅಂತವರ ಮನದಲ್ಲಿ ಮಂಟಪವೊಂದು ರಮ್ಯ ನೆನಪು. ಇನ್ನೊಂದು ಉಡುಪಿ ಹತ್ತಿರದ ಪುಟ್ಟ ಊರು ಮೂಡು ಮಾರ್ನಾಡು. ಅಲ್ಲಿಗೆ ಯುವ ಬರಹಗಾರ್ತಿ ಭಾರತೀದೇವಿ ಅವರ ತಂದೆಯನ್ನು ನೋಡಲೆಂದು ಹೋಗಿದ್ದೆವು, ಅವರ ಮನೆಯ ಹೆಸರೇ ಪುರಂದರರ ಸೇವಾಶ್ರಮ. ಭಾರತಿಯವರ ತಂದೆ ಜಗದೀಶ ದಾಸರು ಪುರಾಣಗಳ ಪ್ರವಚನ ಮಾಡುತ್ತಾ, ಹರಿಕತೆಗಳನ್ನು ಹೇಳುತ್ತಾ, ಮಕ್ಕಳಿಗೆ ಪುರಂದರರ ರಚನೆಗಳನ್ನು ಬೋಧಿಸುತ್ತಾ, ಕೀರ್ತನೆಗಳನ್ನು ಹಾಡುತ್ತಾ ಈ ಪುಟ್ಟ ಊರಿನಲ್ಲಿ ಪುರಂದರರನ್ನು ಜೀವಂತಗೊಳಿಸಿದ್ದಾರೆ. ಹೀಗೆ ಪುರಂದರರು ಅನೇಕ ಕಡೆ ಜೀವಂತವಾಗಿರಬಹುದು. ಅಂದರೆ ಪುರಂದರರ ನೆನಪಿನ ಭೌತಿಕ ಸ್ಮಾರಕವೊಂದು ಪಡೆದ ಸಾಂಸ್ಕೃತಿಕ ಜೀವಂತಿಕೆ, ಮತ್ತು ಪುರಂದರರ ರಚನೆಗಳೇ ಜೀವಂತವಾಗಿರುವಿಕೆ ಇವೆರಡೂ ಪುರಂದರ ದೇಸಿ ಚಿಂತನೆಯನ್ನು ಭಿನ್ನವಾಗಿ ನಿರೂಪಿಸುತ್ತವೆ. ಅಥವಾ ಈ ಬಗೆಯ ಪುರಂದರ ಜೀವಂತಿಕೆ ಅವರ ಕುರಿತ ಅಕಾಡೆಮಿಕ್ ಅಧ್ಯಯನಗಳಲ್ಲಿ ಸಾದ್ಯವಾಗಿಲ್ಲದಿರುವುದನ್ನು ಗಮನಿಸಬಹುದು. ಹಾಗಾಗಿ ವರ್ತಮಾನದಲ್ಲಿ ಪುರಂದರರ ಜೀವಂತಿಕೆಯ ಆಯಾಮಗಳ ಮೂಲಕ ದೇಸಿ ಚಿಂತನೆಯನ್ನು ಇಲ್ಲಿ ಮಂಡಿಸಲು ಪ್ರಯತ್ನಿಸಲಾಗಿದೆ. ಈಗಾಗಲೆ ಪುರಂದರರ ಬಗೆಗೆ ಕನ್ನಡದಲ್ಲಿ ಹಲವು ಅಧ್ಯಯನಗಳು ಬಂದಿವೆ. ಈ ಅಧ್ಯಯನಗಳು ಪುರಂದರರ ಜತೆ ಕೆಲವು ಚಿತ್ರಗಳನ್ನು ಬಿಗಿಯಾಗಿ ಕಟ್ಟಿವೆ. ಅಥವಾ ಪುರಂದರ ಬಗೆಗೆ ಈಗಿರುವ ಪ್ರವೇಶಗಳು ಒಂದೋ ಮತೀಯ ಆಲೋಚನೆಯಿಂದ ರೂಪುಗೊಂಡವು, ಇನ್ನೊಂದು ಭಾವನಾತ್ಮಕ ನೆಲೆಯಲ್ಲಿ ನಿರೂಪಿತವಾದವು. ಈಗ ಹಂಪಿ ವಿವಿಯ ಪುರಂದರರ ಪೀಠದ ಅಧ್ಯಯನಗಳು ಸದ್ಯದ ಪುರಂದರರ ತಿಳುವಳಿಕೆಯನ್ನು ಹೇಗೆ ವಿಸ್ತರಿಸುತ್ತವೆ ಕಾಯ್ದು ನೋಡಬೇಕಷ್ಟೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಹೊರತಂದ ಪುರಂದರರ ಸಾಹಿತ್ಯ ದರ್ಶನದ ನಾಲ್ಕು ಸಂಪುಟಗಳನ್ನು ಸಂಪಾದಿಸಿದ ಸಾ.ಕೃ ರಾಮಚಂದ್ರರಾವ್ ಪುರಂದರರ ಬಗೆಗಿನ ತಿಳುವಳಿಕೆಯನ್ನು ಒಂದಷ್ಟು ಹಿಗ್ಗಿಸಿದ್ದಾರೆ. ರಹಮತ್ ತರೀಕೆರೆ ಅವರು ತಮ್ಮ ಪ್ರತಿ ಸಂಸ್ಕೃತಿ ಕೃತಿಯಲ್ಲಿ ಪರಂಪರೆಯನ್ನು ಅರ್ಥಮಾಡಿಕೊಳ್ಳುವ ವಿಧಾನ ಯಾವುದು ? ಎನ್ನುವ ಲೇಖನದಲ್ಲಿ ಒಟ್ಟು ದಾಸ ಪರಂಪರೆಯನ್ನು ಹೊಸದಾಗಿ ನೋಡುವ ಒಳನೋಟಗಳನ್ನು ಕೊಟ್ಟಿದ್ದಾರೆ. ಈಚೆಗೆ ಎಚ್. ಎನ್. ಮುರಳೀಧರ ಅವರ ತಂಬೂರಿ ಮೀಟಿದವ ಕೃತಿ ಪುರಂದರರ ಬಗ್ಗೆ ಭಿನ್ನ ದೃಷ್ಟಿಕೋನವನ್ನು ಹರಿಸಿದೆ. ಉಳಿದಂತೆ ಭಾವನಾತ್ಮಕ ನಿರೂಪಣೆಗಳ ಸಂಖ್ಯೆ ದೊಡ್ಡದಿದೆ. ಮೂಲತಃ ಜಾನಪದದಲ್ಲಿ ಆಸಕ್ತಿಯನ್ನಿಟ್ಟುಕೊಂಡು ಸಂಶೋಧನೆಯಲ್ಲಿ ತೊಡಗಿಕೊಂಡ ನಾನು ಪುರಂದರರ ದೇಸೀ ಚಿಂತನೆ ಕುರಿತು ಕೆಲವು ಮಾತುಗಳಿವು . ಪುರಂದರರ ದೇಸಿ ಚಿಂತನೆಗೆ ಹಲವು ಆಯಾಮಗಳಿವೆ. ಅವುಗಳಲ್ಲಿ ಕೆಲವನ್ನು ಹೀಗೆ ಪಟ್ಟಿ ಮಾಡಬಹುದು. ಒಂದು : ದಾಸ ಸಾಹಿತ್ಯದಲ್ಲಿ ಪುರಂದರರ ವಿಶಿಷ್ಟತೆ ಯಾವ ಬಗೆಯದು. ಎರಡು: ಪುರಂದರರ ಸಾಹಿತ್ಯದೊಳಗಿನ ದೇಸಿ ಜಗತ್ತು ಯಾವ ಬಗೆಯದು. ಮೂರು: ಪುರಂದರ ವರ್ತಮಾನದ ಜೀವಂತಿಕೆ ಮೂಲಕ ನಿರೂಪಿಸಬಹುದಾದ ದೇಸಿಯತೆ ಎಂಥಹದು ? ನಾಲ್ಕು: ಪುರಂದರರು ಪ್ರತಿಪಾದಿಸುವ ಅನ್ಯ ಮತ್ತು ಸ್ವಂತಿಕೆ ಯಾವುವು ? ಇಷ್ಟು ಆಯಾಮಗಳ ಮೂಲಕ ಪುರಂದರರನ್ನು ಅವಲೋಕಿಸುವುದು ಸೂಕ್ತ ಎನ್ನುವುದು ನನ್ನ ಭಾವನೆ. -೨- ಈ ಮೇಲಿನ ಪುರಂದರರ ದೇಸಿ ಚಿಂತನೆಯ ಆಯಾಮಗಳಿಗೆ ಮುಖ್ಯವಾಗಿ ಎರಡು ನೆಲೆಗಳಿವೆ. ಒಂದು ಅವರೇ ಮಂಡಿಸಿದ ತಿಳುವಳಿಕೆಯಲ್ಲಿ ಇರುವ ದೇಸಿಯತೆ ಮತ್ತೊಂದು ನಾವೀಗ ನಮ್ಮ ಕಾಲದ ದೇಸಿ ಚಿಂತನೆ ಮುಖೇನ ಪುರಂದರರನ್ನು ಎದುರುಗೊಳ್ಳಲು ಹೊರಟಾಗ ನಮಗೆ ಕಾಣಬಹುದಾದ ದೇಸಿಯತೆ. ಈ ಎರಡು ಬೆರೆತ ಆಲೋಚನ ವಿನ್ಯಾಸವನ್ನು ಈ ಲೇಖನದಲ್ಲಿ ಬಳಸಿಕೊಳ್ಳಲಾಗಿದೆ. ಹಾಗೆಯೇ ಪುರಂದರರಲ್ಲಿ ದೇಸಿ ಚಿಂತನೆ ಎಂದು ಹುಡುಕಹೊರಟಾಗ ಕೆಲವು ತೊಡಕುಗಳು ಎದುರಾಗುತ್ತವೆ. ಒಂದು: ಪುರಂದರರು ವಿಜಯನಗರದ ಅರಸರ ಆಶ್ರಯದಲ್ಲಿ ಜೀವನವನ್ನು ಕಳೆದವರು. ಇಂತವರು ಜನಸಾಮಾನ್ಯರ ಬಗೆಗೆ ತೋರುವ ಅಭಿಮಾನ ಏಕ ದೇವೋಪಾಸನೆಯ ನೆಲೆಯಲ್ಲಿ ಜನರ ನಂಬಿಕೆಗೆ ವಿಮುಖವಾದದ್ದು. ಎರಡು: ವೈದಿಕ ಪರಂಪರೆಗೆ ಜೀವತುಂಬುವುದು ದಾಸ ಪಂಥದ ನಿಜವಾದ ಧ್ಯೇಯವಾಗಿತ್ತು ಹಾಗಾಗಿ ಅವೈದಿಕ ದೇಸಿ ಪರಂಪರೆಯನ್ನು ಇವರು ಕಂಡ ಬಗೆ ಕೂಡ ಇದಕ್ಕೆ ಪೂರಕವಾದದ್ದಾಗಿದೆ. ಮೂರು: ನಮ್ಮಲ್ಲಿ ದೇಸಿ ಚಿಂತನೆಯೆ ಖಚಿತವಲ್ಲದ ಪರಿಭಾಷೆಯಲ್ಲಿ ಬಳಕೆಯಾಗುತ್ತಿದೆ. ಇಂತಹ ತಿಳುವಳಿಕೆಯನ್ನು ಆಧರಿಸಿ ಮಾಡ ಹೊರಡುವ ಚಿಂತನೆಗೂ ಅಂತದ್ದೇ ಮಿತಿ ಇರಲು ಸಾಧ್ಯವಿದೆ. ನಾಲ್ಕು: ಈಗ ನಮ್ಮ ಕಾಲದಲ್ಲಿ ಲಭ್ಯವಿರುವ ಜಾನಪದ ಸಂಗ್ರಹವನ್ನಿಟ್ಟುಕೊಂಡು ೧೪ ನೇ ಶತಮಾನದ ಪುರಂದರರ ಜಾನಪದೀಯತೆಯನ್ನು ಹುಡುಕಲು ಹೊರಡುತ್ತೇವೆ. ಇದೊಂದು ತೊಡಕು. ಅಂದರೆ ಪುರಂದರರು ಗಾದೆಯನ್ನು ಹೇಗೆ ಬಳಸಿದ್ದಾರೆ, ಒಗಟನ್ನು ಹೇಗೆ ಬಳಸಿದ್ದಾರೆ, ಜಾನಪದ ಕಥೆಯ ಮಾದರಿಗಳನ್ನು ಹೇಗೆ ಬಳಸಿದ್ದಾರೆ ಎನ್ನುವ ತರಹದ ಹುಡುಕಾಟ. ಈ ಹುಡುಕಾಟಕ್ಕೆ ಸದ್ಯದ ಜಾನಪದ ಸಂಗ್ರಹವನ್ನು ಗುರುತಾಗಿಟ್ಟುಕೊಳ್ಳಲಾಗುತ್ತದೆ. ಆದರೆ ಮಧ್ಯಕಾಲೀನ ಕರ್ನಾಟಕದಲ್ಲಿ ಇರಬಹುದಾಗಿದ್ದ ಜಾನಪದ ಸಂಗತಿಯ ಬಗ್ಗೆ ನಮಗೆ ಖಚಿತ ಮಾಹಿತಿಯಿಲ್ಲ. ಹಾಗಾಗಿ ಪುರಂದರರ ರಚನೆಯ ಒಳಗಿಂದಲೇ ಜಾನಪದ ಜಗತ್ತಿನ ವಿವರಗಳನ್ನು ಆಯ್ದುಕೊಳ್ಳಬೇಕಾಗುತ್ತದೆ. ಅಷ್ಟಕ್ಕೂ ಈ ಆಯ್ದ ವಿವರಗಳೇ ಪುರಂದರರು ಬದುಕಿದ್ದ ಕಾಲದ ಒಟ್ಟು ಜಾನಪದವನ್ನು ಪ್ರತಿನಿಧಿಸಲಾರದು ಕೂಡ. ನಾವೀಗ ಪುರಂದರರ ಕಾಲಘಟ್ಟದ ಆರೇಳು ಶತಕದ ಆಚೆ ನಿಂತು ಅವರ ದೇಸಿಯತೆ ಕುರಿತು ಮಾತನಾಡುತ್ತಿದ್ದೇವೆ, ಹಾಗಾಗಿ ಪುರಂದರರ ರಚನೆಗಳಿಂದಲೇ ಅನೇಕ ಸಂಗತಿಗಳು ಮೌಖಿಕ ಪರಂಪರೆಗೆ ಜಿಗಿದಿರಬಹುದಾದ ಸಾದ್ಯತೆಯನ್ನು ಅಲ್ಲಗೆಳೆಯುವಂತಿಲ್ಲ. ಕತ್ತೆ ಬಲ್ಲದೆ ಕಸ್ತೂರಿ ಪರಿಮಳವ ಎನ್ನುವ ಗಾದೆಯೊಂದಿದೆ, ಅಂತೆಯೇ ಪುರಂದರರ ಕೀರ್ತನೆಯಲ್ಲಿ ಕತ್ತೆ ಬಲ್ಲುದೆ ಹೊತ್ತ ಕತ್ತುರಿಯ ಪರಿಮಳವ ಎನ್ನುವ ತರಹದ ಒಂದು ಕೀರ್ತನೆಯೇ ಇದೆ. ಇದಕ್ಕೆ ಅನೇಕ ಉದಾಹರಣೆಯನ್ನು ಎಕ್ಕಬಹುದು ಕೂಡ. ಅದನ್ನು ಗುರುತಿಸಲು ಖಚಿತ ಅಳತೆಗೋಲು ಇಲ್ಲವಾದರೂ ಪುರಂದರರನ್ನು ಅದ್ಯಯನ ಮಾಡಹೊರಟವರಿಗೆ ಈ ಒಂದು ಸಾಧ್ಯತೆಯ ಅರಿವು ಇರಬೇಕಾಗುತ್ತದೆ. ಇದು ವಚನಕಾರರಲ್ಲಿ ದೇಸೀಯತೆ, ದಾಸ ಸಾಹಿತ್ಯದಲ್ಲಿ ದೇಸಿಯತೆ ಮುಂತಾಗಿ ಮಾತನಾಡುವಾಗಲೂ ಇರಬೇಕಾದ ಎಚ್ಚರ ಎನ್ನುವುದು ನನ್ನ ತಿಳುವಳಿಕೆ. ಮಾತನ್ನು ಒಂದು ಉದಾಹರಣೆಯ ಮೂಲಕ ಖಚಿತಪಡಿಸಲು ಪ್ರಯತ್ನಿಸುತ್ತೇನೆ. ಅದೆಂದರೆ ಫರ್ಡಿನಂಡ್ ಕಿಟ್ಟಲ್ ತನ್ನ ನಿಘಂಟಿನ ಮುನ್ನುಡಿಯಲ್ಲಿ ಈ ಕೋಶವನ್ನು ಸಿದ್ದಪಡಿಸಲು ದಾಸರನ್ನು, ವಚನಕಾರರನ್ನು, ಹಳೆಗನ್ನಡವನ್ನೂ ಜಾನಪದ ಲೋಕವನ್ನೂ ಒಟ್ಟಾಗಿ ಗಮನಿಸಿದ್ದೇನೆ ಎಂದು ಹೇಳಿಕೊಳ್ಳುತ್ತಾರೆ. ಅಂದರೆ ಈಗಿನ ಮೌಖಿಕ ಶಿಷ್ಟ ಎನ್ನುವ ಪರಿಭಾಷೆಯನ್ನು ಕಿಟ್ಟಲ್ ಮೀರಿದ್ದರು ಎಂದು ಗೊತ್ತಾಗುತ್ತದೆ. ಆದರೆ ನಾವಿಂದು ಕಿಟ್ಟಲ್ ಕೋಶದ ಗಾದೆಗಳನ್ನು ಜನಪದ ಗಾದೆಗಳು ಎಂದು ಅದ್ಯಯನ ಮಾಡುತ್ತೇವೆ. ಇದರಲ್ಲಿ ಕೆಲವು ದಾಸರ ಕೀರ್ತನೆಗಳಿಂದಲೂ, ವಚನಗಳಿಂದಲೂ, ಹಳೆಗನ್ನಡದಿಂದಲೂ ಆಯ್ದಿರುವ ಸಾದ್ಯತೆ ಇದೆ. ಅಂದರೆ ನಾವಿಂದು ಕಿಟ್ಟಲ್ ಕೋಶದ ಜನಪದ ಗಾದೆಗಳು ಎನ್ನುವುದು ಇವು ಬೆರೆತ ಗಾದೆಗಳೇ ಆಗಿವೆ. ಇನ್ನೊಂದು ಚಾರ್ಲ್ಸ್ ಇ. ಗೋವರ್ ಎನ್ನುವ ಪಾಶ್ಚ್ಯಾತ್ಯ ವಿದ್ವಾಂಸನ ಫೋಕ್ ಸಾಂಗ್ಸ ಇನ್ ಸದರನ್ ಇಂಡಿಯಾ ಎನ್ನುವ ಕೃತಿ. ಈ ಕೃತಿಯಲ್ಲಿ ಗೋವರನು ಕೆಲವು ದಾಸರ ಪದಗಳನ್ನೂ ಜನಪದ ಗೀತೆಗಳೆಂತಲೇ ಸಂಗ್ರಹಿಸಿದ್ದಾನೆ. ಆತನು ಕೊಡುವ ಸಮರ್ಥನೆಯೆಂದರೆ ದಾಸರು ಊರೂರು ಸುತ್ತುತ್ತಾ ಅಲೆಯುತ್ತಿದ್ದರು ಜನರ ಪದಗಳನ್ನೂ ತಾವೂ, ತಮ್ಮ ಹಾಡುಗಳನ್ನು ಜನರು ಒಕ್ಕುಬಳಸಿತ್ತಿದ್ದರಿಂದ ದಾಸರ ಪದಗಳನ್ನು ಜಾನಪದ ಹಾಡುಗಳೆಂತಲೇ ಸಂಗ್ರಹಿಸಿದ್ದೇನೆ ಎನ್ನುತ್ತಾರೆ. ಆದರೆ ಕನ್ನಡದ ಜಾನಪದ ವಿದ್ವಾಂಸರಾದ ಜಿ. ಶಂ. ಪರಮಶಿವಯ್ಯ ಮತ್ತು ಸೋಮಶೇಖರ ಇಮ್ರಾಪುರ ಅವರು ಜಾನಪದದ ಬಗ್ಗೆ ಶಿಷ್ಟದ ಎದುರಿನ ವ್ಯಾಖ್ಯಾನವನ್ನು ಆಧರಿಸಿ ಗೋವರ್ ಸಂಗ್ರಹಿಸಿದ್ದು ದಾಸರ ಪದಗಳೇ ಹೊರತು ಜಾನಪದ ಗೀತೆಗಳಲ್ಲ ಎಂದು ಕಟುವಾದ ವಿಮರ್ಶೆಗೆ ಒಳಗು ಮಾಡುತ್ತಾರೆ. ಹೀಗೆ ಜಾನಪದ ಶಿಷ್ಟದ ಬೆರೆತ ವ್ಯಾಖ್ಯಾನ ಸಾಧ್ಯವಾಗದ ಕಾರಣ ಈ ಕುರಿತ ಚಿಂತನೆಯು ಇಂತಹ ತೊಡಕನ್ನು ಬಿಡಿಸಿಕೊಳ್ಳಬೇಕಾಗುತ್ತದೆ. ಈ ನಾಲ್ಕು ತೊಡಕುಗಳನ್ನು ಗಮನದಲ್ಲಿರಿಸಿಕೊಂಡೇ ಪುರಂದರರ ದೇಸಿ ಚಿಂತನೆಯ ಆಯಾಮಗಳನ್ನು ರೂಪಿಸಿಕೊಳ್ಳಬೇಕಾಗುತ್ತದೆ. -೩- ದಾಸ ಸಾಹಿತ್ಯ ಎಂದ ಕೂಡಲೇ ನಮಗೆ ನೆನಪಾಗುವುದು ಪುರಂದರ ಮತ್ತು ಕನಕದಾಸರು. ಕಾರಣ ದಾಸ ಸಾಹಿತ್ಯದ ಮತೀಯ ಕಟ್ಟುಗಳನ್ನು ಮೀರಲು ಈ ಇಬ್ಬರಿಗೆ ಸಾಧ್ಯವಾದದ್ದು. ಪುರಂದರರನ್ನು ಕೇಂದ್ರವನ್ನಾಗಿಟ್ಟುಕೊಂಡು ಮಾತನಾಡುವುದಾದರೆ, ಕೇವಲ ಸ್ತೋತ್ರಗಳಾಗಿ ಪರಿಣಮಿಸಿ ಬಿಡಬಹುದಾಗಿದ್ದ ಕೀರ್ತನಾ ಪ್ರಕಾರವನ್ನು ಅದರಾಚೆಗೂ ತೆಗೆದುಕೊಂಡು ಹೋಗಿ ಸಾಧ್ಯತೆಗಳನ್ನು ವಿಸ್ತರಿಸಿದ್ದು ಪುರಂದರ ದಾಸರಂತವರ ಸಿದ್ಧಿಯೆನ್ನಬೇಕು. ಮುಖ್ಯವಾಗಿ ಅದನ್ನು ವೈಯಕ್ತಿಕವಾದ ಬೇಕು ಬೇಡಗಳ ನಿರೂಪಣೆಗೆ ವಾಹಕವನ್ನಾಗಿ ಪರಿವರ್ತಿಸಿಕೊಳ್ಳುವಲ್ಲಿ, ಸಂವಾದದ ನೆಲೆಗಳನ್ನು ನಿರ್ಮಿಸುವಲ್ಲಿ, ನಿರೂಪಣೆಯ ವಿಭಿನ್ನ ಧ್ವನಿಗಳನ್ನು ಕಂಡುಕೊಳ್ಳುವ ಮೂಲಕ ಈ ಪ್ರಕಾರಕ್ಕೆ ವಿವೃತತೆಯನ್ನು ದೊರಕಿಸಿಕೊಡುವಲ್ಲಿ ದಾಸರ ಸಾಧನೆ ದೂಡ್ಡದು. ಕೇವಲ ಸ್ತ್ರೋತ್ರಗಳ ಗುಂಪಿಗೆ ಸೇರಿಬಿಡಬಹುದಾದ ಕೀರ್ತನೆಗಳ ಸಂಖ್ಯೆ ದೊಡ್ಡದಾಗಿದೆ ಎಂಬ ಮಾತನ್ನು ಒಪ್ಪಿಕೊಳ್ಳುತ್ತಲೂ ಈ ಸಂಗತಿಯನ್ನು ಗುರುತಿಸಿಕೊಳ್ಳಬೇಕಾಗಿದೆ. (ಎಚ್.ಎನ್.ಮುರಳೀಧರ್,೨೦೦೫:೧೮) ಹೀಗೆ ಪುರಂದರರು ದಾಸ ಸಾಹಿತ್ಯದಲ್ಲಿಯೇ ತಮ್ಮದೊಂದು ಅನನ್ಯತೆಯನ್ನು ಕಾಪಾಡಿಕೊಂಡಿರುವುದನ್ನು ಗಮನಿಸಬಹುದಾಗಿದೆ. ಯಾವುದು ಹರಿಸ್ಮರಣೆಗೆ ಮಾತ್ರ ಸೀಮಿತವಾದ ಸಾಹಿತ್ಯವೋ ಅದರ ಕಣ್ಣೋಟದಿಂದಲೇ ಪುರಂದರರು ಜನಬದುಕಿನೊಳಗಿನ ಹರಿಯನ್ನೂ ಹುಡುಕಿದರೆನಿಸುತ್ತದೆ. ಪುರಂದರ ಕನಕರನ್ನು ಹೊರತು ಪಡಿಸಿದ ಬಹುಪಾಲು ದಾಸರಲ್ಲಿ ಹರಿಯ ಹುಡುಕಾಟ ಕೇವಲ ದೈವಿಕ ಮತ್ತು ಮತೀಯ ನೆಲೆಯದಾಗಿತ್ತು. ಆದರೆ ಅದು ಪುರಂದರ ಕನಕರಲ್ಲಿ ಸಾಮಾಜಿಕ ನೆಲೆಗೆ ವಿಸ್ತರಣೆಯಾಯಿತು. ಇದೊಂದು ದಾಸ ಸಾಹಿತ್ಯದಲ್ಲಿ ಘಟಿಸಿದ ದೊಡ್ಡ ಪಲ್ಲಟ. ಇದಕ್ಕೆ ವೈದಿಕ ಧರ್ಮವನ್ನು ಪ್ರಚಾರಮಾಡುವ ಉದ್ಯೇಶವಂತೂ ಇದ್ದೇ ಇದೆ. ಕೆಲವೊಮ್ಮೆ ಪುರಂದರರು ಜನಬದುಕಿನ ವಿವರದ ಒಳಗಿನ ಕೆಡುಕಗಳನ್ನು ಕೆದಕಿ ಅದರಿಂದ ಹೊರ ಬರಲು ಪರ್ಯಾಯವಾಗಿ ಹರಿಸ್ಮರಣೆಯನ್ನು ಸೂಚಿಸುತ್ತಾರೆ. ಈ ಕಾರಣಕ್ಕೇ ಅವರು ಜನಸಂಸ್ಕೃತಿಯ ಒಳಗೆ ಪ್ರವೇಶಿಸುತ್ತಾರೆನಿಸುತ್ತದೆ. ಆದರೆ ಈ ಪ್ರವೇಶ ಜನರ ಬದುಕನ್ನು ಪ್ರೇರೇಪಿಸಿತು, ಬದಲಾಯಿಸಿತು ಎನ್ನುವುದಕ್ಕಿಂತ ಜನಬದುಕಿನ ವಿವರ ಪುರಂದರರ ಕೀರ್ತನ ಸಾಹಿತ್ಯದ ದಿಕ್ಕನ್ನೇ ಬೇರೆಡೆ ಚಲಿಸುವುದಕ್ಕೆ ಪ್ರೇರಣೆಯಾಯಿತು ಎನ್ನುವುದೇ ಸರಿ. ಈ ಕಾರಣಕ್ಕಾಗಿಯೇ ಪುರಂದರರು ಹರಿಯನ್ನೇ ’ನೀನ್ಯಾಕೋ ನಿನ ಹಂಗ್ಯಾಕೋ’ ಎಂದು ಕೇಳಲು ಸಾಧ್ಯವಾಯಿತೆ? ಎಂದು ಪರಿಶೀಲಿಸಬೇಕಿದೆ. ಈ ನಿಟ್ಟಿನಲ್ಲಿ ಒಟ್ಟು ದಾಸ ಸಾಹಿತ್ಯದಲ್ಲಿ ಪುರಂದರರ ವಿಶಿಷ್ಟತೆಯನ್ನು ಅವರ ದೇಸಿಯತೆಯನ್ನು ಗಮನಿಸಲು ಸಾಧ್ಯವಿದೆ. ಎರಡನೆಯದಾಗಿ ಪುರಂದರರ ಸಾಹಿತ್ಯದೊಳಗಿನ ದೇಸಿ ಜಗತ್ತು ಯಾವ ಬಗೆಯದು ಎಂದು ನೋಡಬೇಕಾಗಿದೆ. ಪುರಂದರರ ಕೀರ್ತನ ಮುಂತಾದ ಪ್ರಾಕಾರಗಳಲ್ಲಿ ಜಾನಪದ ಜಗತ್ತಿನ ವಿವರಗಳು ಹೇರಳವಾಗಿ ಬರುತ್ತವೆ. ಆದರೆ ಈ ವಿವರಗಳ ಮೂಲಕ ಅವರು ಹೇಳ ಹೊರಡುವುದು ಏನು ಎನ್ನುವ ಪ್ರಶ್ನೆ ಎದುರು ನಿಲ್ಲುತ್ತದೆ. ಪುರಂದರರು ಜನಪದರ ಹಬ್ಬದ ಕಲ್ಪನೆಯನ್ನು ವಿಮರ್ಶಿಸುತ್ತಾ ಸಾಧು ಸಜ್ಜನರೊಳಗಿರುವುದೇ ಹಬ್ಬ/ ವೇದಾಂತದರ್ಥವ ತಿಳಿವುದೇ ಹಬ್ಬ/ ಬೇಧ ಬುದ್ಧಿಗಳೆಲ್ಲವ ಬಿಡುವುದೆ ಹಬ್ಬ/ ಭಾಗೀರಥಿಯಲಿ ಲೋಲಾಡುವುದೇ ಹಬ್ಬ ಎನ್ನುತ್ತಾರೆ. ಹೀಗಾಗಿ ಪುರಂದರರು ಬಳಸುವ ಜನಭಾಷೆ ಮತ್ತು ಅದು ಒಳಗೊಳ್ಳುವ ಆಶಯಗಳಲ್ಲಿ ಮೂಲಭೂತವಾಗಿ ವೈರುದ್ಧ್ಯಗಳಿರುವುದನ್ನು ಗಮನಿಸಬಹುದು. ನಾವು ಪುರಂದರರ ಭಾಷಿಕ ಲಯ ಮತ್ತು ಜನಪದ ವಿವರಗಳನ್ನು ಉಲ್ಲೇಖಿಸುತ್ತಾ ಅಪ್ಪಟ ದೇಸಿ ಎನ್ನುವ ಸಡಿಲ ನಿಲುವುಗಳನ್ನು ತಾಳುತ್ತೇವೆ. ಇಲ್ಲಿ ಗಮನಿಸಬಹುದಾದ ಅಂಶವೆಂದರೆ ತಮ್ಮ ಹರಿ ಸರ್ವೋತ್ತಮ ಎನ್ನುವ ಆಶಯವನ್ನು ಜನರಲ್ಲಿ ಬಿತ್ತುವ ಕಾರಣಕ್ಕಾಗಿ ಜಾನಪದ ಜಗತ್ತಿನ ಚೈತನ್ಯದಾಯಕ ಸಂಗತಿಗಳನ್ನು ನಿರಾಕರಿಸುತ್ತಾರೆ. ಆ ಸ್ಥಾನದಲ್ಲಿ ವೈದಿಕ ಧರ್ಮದ ತಾತ್ವಿಕತೆಯನ್ನು ಕೂರಿಸುತ್ತಾರೆ. ಅಂತೆಯೇ ಜಾನಪದ ಜಗತ್ತಿನ ವೈವಿಧ್ಯತೆಯನ್ನು ಉಲ್ಲೇಖಿಸಿ ಅದುವೇ ಜನಸಾಮಾನ್ಯರ ಕೆಡುಕು ಎನ್ನುವಂತೆ ಏಕದೇವೋಪಾಸನೆಯನ್ನು ಪರ್ಯಾಯವಾಗಿ ಸೂಚಿಸುತ್ತಾರೆ. ಹೀಗಾಗಿ ಹರಿಯನ್ನು ಕಂಡೆನೆಂದು ಉನ್ಮಾದದಿಂದ ಕೊಂಡಾಡುವ ಪುರಂದರರು ಜಾನಪದ ಜಗತ್ತಿನ ಚೈತನ್ಯವನ್ನು ಕಾಣುವಲ್ಲಿ ವಿಫಲರಾಗುತ್ತಾರೆ. ಅಥವಾ ಜಾನಪದ ಜಗತ್ತಿನ ಚೈತನ್ಯ ಪುರಂದರರಿಗೆ ಗೋಚರಿಸಿದ್ದೇ ಆಗಿದ್ದರೆ ಹರಿ ಸರ್ವೋತ್ತಮ ಎನ್ನುವ ನಿಲುವನ್ನು ಪುರಂದರರಿಂದ ನಿರೀಕ್ಷಿಸುವುದು ಕಷ್ಟವಾಗುತ್ತಿತ್ತು. ಪುರಂದರರ ದಾಸಪೂರ್ವ ಜೀವನದ ಕಥನಗಳು ನಿಜವೆಂದಾದಲ್ಲಿ ಹೀಗೊಂದು ಆಲೋಚನೆ ಸಾಧ್ಯವಿದೆ. ಪುರಂದರರು ತಮ್ಮ ಜೀವನದ ಅರ್ಧ ಭಾಗ ಸಮಾಜವನ್ನು ನೋಡಿದ್ದು ಅಂಗಡಿಯಲ್ಲಿ ಕೂತು. ಅದೂ ಒಬ್ಬ ತಿಮ್ಮಪ್ಪ ಶ್ರೇಷ್ಠಿಯಾಗಿ, ಒಬ್ಬ ಜಿಪುಣ ವ್ಯಾಪಾರಿಯಾಗಿ ಎನ್ನುವುದನ್ನು ಮರೆಯುವಂತಿಲ್ಲ. ಹಾಗಾಗಿ ಅವರ ದಾಸ ಪೂರ್ವ ಜೀವನದ ಸಾಮಾಜಿಕ ದೃಷ್ಟಿಕೋನ ದಾಸರಾದ ನಂತರ ಪೂರ್ಣ ಬದಲಾಯಿತು ಎಂದು ಹೇಳುವಂತಿಲ್ಲ. ಅವರ ದಾಸ ಜೀವನದಲ್ಲೂ ದಾಸಪೂರ್ವ ಜೀವನದ ವಿವರಗಳು ಮತ್ತು ಸಾಮಾಜಿಕ ದೃಷ್ಠಿಕೋನ ಮತ್ತೆ ಮತ್ತೆ ನುಗ್ಗಿ ಬರುವುದನ್ನು ಗಮನಿಸಬಹುದು. ಹಾಗಾಗಿ ಅನೇಕ ಕಡೆ ಪುರಂದರರು ಅಂಗಡಿಯಲ್ಲಿ ಕೂತುಕೊಂಡೆ ಸಮಾಜವನ್ನು ನೋಡಿದ್ದಾರೆ ಅನ್ನಿಸುತ್ತದೆ. ಈ ಮಾತು ಅವರ ರಚನೆಗಳಲ್ಲಿ ಕಾಣಬಹುದಾದ ದೇಸಿ ಜಗತ್ತಿನ ವಿವರಗಳಿಗೂ ಅನ್ವಯವಾಗುತ್ತದೆ. ಈ ಮಾತಿನ ತಾತ್ವಿಕತೆ ಪುರಂದರರ ದೇಸಿ ಚಿಂತನೆಯು ಒಳಗೊಳ್ಳುವ ಮಿತಿಗೂ ಸರಿ ಹೊಂದುತ್ತದೆ -೪- ಮೂರನೆಯದಾಗಿ ಪುರಂದರ ವರ್ತಮಾನದ ಜೀವಂತಿಕೆ ಮೂಲಕ ನಿರೂಪಿಸಬಹುದಾದ ದೇಸಿಯತೆ ಎಂಥಹದು ? ಎನ್ನುವುದನ್ನು ನೋಡಬೇಕಿದೆ. ಇದಕ್ಕೆ ನನ್ನ ಬಾಲ್ಯ ಕಾಲದ ನೆನಪೊಂದು ಬರುತ್ತಿದೆ. ನಾನು ಬಾಲ್ಯದಲ್ಲಿ ಭಜನೆ ಮಾಡಲು ಹಿರಿಯರೊಂದಿಗೆ ಹೋಗುತ್ತಿದ್ದೆ. ಆಗ ನಾನು ತಾಳ ಹಾಕುತ್ತಾ ಹಿನ್ನೆಲೆಯಾಗಿ ಗುನುಗುತ್ತಿದ್ದೆ. ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ, ತಾರಕ್ಕ ಬಿಂದಿಗೆಯ, ನೀನ್ಯಾಕೋ ನಿನ ಹಂಗ್ಯಾಕೋ, ಯಾರಿಗೆ ಯಾರುಂಟು ಎರವಿನ ಸಂಸಾರ ಮುಂತಾದ ಪುರಂದರರ ರಚನೆಗಳನ್ನು ಹಾಡುತ್ತಿದ್ದೆವು. ಆಗ ಯಾರಿಗೂ ಇವು ಪುರಂದರರ ರಚನೆಗಳು ಎಂದು ತಿಳಿದಿರಲಿಲ್ಲ. ತುಂಬಾ ದಿನದ ನಂತರ ಈ ರಚನೆಗಳು ಪುರಂದರ ದಾಸರವು ಎನ್ನುವುದು ತಿಳಿಯಿತು. ಈ ಹಾಡುಗಳನ್ನು ಪ್ರತಿ ಊರಿನ ಭಜನಾ ಮಂಡಳಿಗಳೂ ಹೆಚ್ಚುಕಡಿಮೆ ಹಾಡುತ್ತಿದ್ದವು. ನಾನು ಮೊದಲೇ ಪ್ರಸ್ತಾಪಿಸಿದಂತೆ ಮೂಡು ಮಾರ್ನಾಡಿನ ಜಗದೀಶ ದಾಸರಂಥವರು ಕರ್ನಾಟಕದ ಅನೇಕ ಕಡೆ ಪುರಂದರರನ್ನು ಜೀವಂತಗೊಳಿಸಿದ್ದಾರೆ. ಅನೇಕ ಕರ್ನಾಟಕ ಸಂಗೀತ ಪ್ರಿಯರು ಪುರಂದರರ ರಚನೆಗಳನ್ನು ಮೈದುಂಬಿ ಹಾಡುತ್ತಾರೆ. ಪುರಂದರರ ಹಾಡಿನ ಕ್ಯಾಸೆಟ್ಟು, ಡಿವಿಡಿ ಗಳು ಮಾರುಕಟ್ಟೆಯಲ್ಲಿ ದೊರೆಯುತ್ತವೆ. ಪುರಂದರರ ಹೆಸರಲ್ಲಿ ಅನೇಕ ಸಂಗೀತದ ಕೂಟಗಳಿವೆ. ಜನಪದರಲ್ಲಿ ತುಂಬಾ ವಿರಳವಾಗಿ ಎನ್ನುವಂತೆ ಪುರಂದರರ ರಚನೆಯ ತುಣುಕುಗಳು ಗಾದೆ ಒಗಟಿನ ರೂಪದಲ್ಲಿ ಬಳಕೆಯಾಗುತ್ತಿವೆ. ಇನ್ನು ಪುರಂದರರ ದಾಸಪೂರ್ವ ಜೀವನದ ಕಥೆಯಂತೂ ಜನಪದ ಕಥೆಯಂತೆ ಕರ್ನಾಟಕದಾದ್ಯಂತ ಮನೆ ಮಾತಾಗಿದೆ. ಹೀಗೆ ಅನೇಕ ವಿಧದಲ್ಲಿ ಪುರಂದರರು ವರ್ತಮಾನದಲ್ಲಿ ಜೀವಂತವಾಗಿರುವುದನ್ನು ನೋಡಬಹುದು. ಹಾಗೆಯೇ ಪುರಂದರರ ಬಗೆಗಿನ ಅಧ್ಯಯನಗಳು ಹೇರಳವಾಗಿವೆ. ಅಂತೆಯೇ ಪುರಂದರರ ರಚನೆಗಳು ವ್ಯಾಪಕವಾಗಿ ಪ್ರಕಟಣೆಯಾಗಿವೆ. ಮೇಲಿನ ಉಲ್ಲೇಖವನ್ನು ಇನ್ನೊಂದು ನಿಟ್ಟಿನಲ್ಲಿ ನೋಡಬಹುದು. ಈ ಮೇಲಿನ ಉದಾಹರಣೆಗಳು ಬಹುಪಾಲು ಸಮಾಜದ ಮೇಲ್ವರ್ಗದಲ್ಲಿ ಹೆಚ್ಚು ಪ್ರಚಲಿತದಲ್ಲಿರುವಂತಹವುಗಳು. ನಾನು ಉಲ್ಲೇಖಿಸಿದ ಭಜನೆಯೂ ಕೂಡ ಊರಿನ ಮೇಲ್ವರ್ಗದವರ ಕೂಟವೆ. ಇಂದು ಸಂಗೀತ ವಲಯದಲ್ಲಿ ಪುರಂದರರು ಜೀವಂತವಾಗಿದ್ದಾರೆಂದರೆ ಅದು ಹೆಚ್ಚಾಗಿ ಬ್ರಾಹ್ಮಣ ವರ್ಗದಲ್ಲಿ ಎನ್ನುವುದನ್ನು ಗಮನಿಸಬೇಕು. ಮೌಖಿಕ ಪರಂಪರೆಯಲ್ಲಿ ಇಂದು ಪುರಂದರರು ಹೆಚ್ಚು ಉಳಿಯಲಿಲ್ಲ ಇದಕ್ಕೆ ಅವರೂ ಸಹಾ ಮೇಲ್ವರ್ಗದಿಂದ ಬಂದದ್ದೇ ಕಾರಣವಿರಬೇಕು. ವಚನ ಸಾಹಿತ್ಯವನ್ನು ದಲಿತರು ಕೆಳಸಮುದಾಯಗಳು ಮುತ್ತಿಕೊಂಡಂತೆ ದಾಸ ಸಾಹಿತ್ಯವನ್ನು ಅದರಲ್ಲೂ ಪುರಂದರರ ಸಾಹಿತ್ಯವನ್ನು ಕೆಳಸಮುದಾಯಗಳು ಮುತ್ತಿಕೊಳ್ಳಲಿಲ್ಲ ಅಪ್ಪಿಕೊಳ್ಳಲಿಲ್ಲ. ಹೀಗೆ ಪುರಂದರರ ವರ್ತಮಾನದ ಜೀವಂತಿಕೆ ಕೂಡ ಅದು ಸಮಾಜದ ಮೇಲ್ವರ್ಗದ ಜತೆ ಆಯಿತು, ಬದಲಾಗಿ ಮೌಖಿಕ ಪರಂಪರೆಯ ಸಮುದಾಯಗಳಿಗಿಂತ ಶಿಷ್ಟ ಪರಂಪರೆಯ ಸಮುದಾಯಗಳಲ್ಲಿ ಪುರಂದರರು ಜೀವಂತವಾಗಿರುವುದನ್ನು ಗಮನಿಸಬೇಕು. ಹಾಗಾಗಿ ಪುರಂದರರ ವರ್ತಮಾನದ ಜೀವಂತಿಕೆಯ ಮೂಲಕ ನಿರೂಪಿಸಬಹುದಾದ ದೇಶೀಯತೆ ಕೂಡ ಅದು ಮೇಲ್ವರ್ಗದ ಜತೆ, ಶಿಷ್ಟ ಸಮುದಾಯದ ಜತೆ ತಳಕು ಹಾಕಿಕೊಳ್ಳುತ್ತದೆ. ನಾಲ್ಕನೆಯದಾಗಿ ಅನ್ಯ ಮತ್ತು ಸ್ವಂತಿಕೆಯ ದೇಸಿ ಚಿಂತನೆಯ ನೆಲೆಯಲ್ಲಿ ಪುರಂದರರ ಆಲೋಚನೆಯನ್ನು ಪರಿಶೀಲಿಸಬೇಕಿದೆ. ಮುಖ್ಯವಾಗಿ ಸ್ವಂತಿಕೆಯ ನೆಲೆಗಳ ಮೇಲೆ ಅನ್ಯ ಪ್ರಭಾವಗಳು ಹೆಚ್ಚಾಗಿ ಸ್ವಂತಿಕೆಯನ್ನು ಎತ್ತಿ ಹಿಡಿಯುವ ಮೂಲಕ ದೇಸಿಯನ್ನು ಸ್ಥಾಪಿಸುವ ಆಲೋಚನೆಯ ಕ್ರಮ ನಮ್ಮಲ್ಲಿದೆ. ಅದು ಮಾರ್ಗ ಮತ್ತು ದೇಸಿ ಎನ್ನುವಂತಹ ತಿಳುವಳಿಕೆಯಲ್ಲೂ ಇರುವ ಎಳೆ ಕೂಡ. ಸಂಸ್ಕೃತ ಭಾಷೆಯ ಯಾಜಮಾನಿಕೆಯಲ್ಲಿ ಕನ್ನಡ ಬಳಸುವಿಕೆಯೇ ದೇಸಿಯಾಯಿತು, ಅಂತೆಯೇ ಅದು ಬೇರೆ ಬೇರೆ ನೆಲೆಗಳನ್ನು ಪಡೆದುಕೊಂಡುದನ್ನು ನೋಡಬಹುದು. ದಾಸರು ಸಂಸ್ಕೃತಕ್ಕಿಂತ ಕನ್ನಡ ಬಳಸಿದ್ದು ದೇಸಿ ಅಂತಲೇ ಕಾಣುತ್ತದೆ. ಈ ಮಾತು ಒಟ್ಟು ದಾಸ ಪರಂಪರೆಗೆ ಸಲ್ಲುತ್ತದೆ. ದಾಸರು ಸಂಸ್ಕೃತವಾದಿಗಳಾಗಿದ್ದ ಪಂಡಿತ-ಪುರೋಹಿತರಿಂದ ವೈದಿಕ ಧರ್ಮವನ್ನು ಬಿಡಿಸಿ, ಕನ್ನಡದಲ್ಲಿ ಅಭಿವ್ಯಕ್ತಿಸಿದ್ದು ಮಹಾ ಬದಲಾವಣೆಯಂತೆ ಕಾಣುತ್ತದೆ. ಆದರೆ ಅದು ವೈದಿಕ ಧರ್ಮದ ಒಳಗಿನ ತುರ್ತಾಗಿತ್ತು. ಯಾಕೆಂದರೆ ಸಂಸ್ಕೃತವನ್ನು ತಿರಸ್ಕರಿಸಿ ಕನ್ನಡದಲ್ಲಿ ಮಾತಾಡಿ, ಜನರನ್ನು ಮೈದಡವಿದ ವಚನಕಾರರ ಸಾಧನೆ ದಾಸರೆದುರಂತೂ ಅದು ತೆರೆದ ಪುಸ್ತಕವಾಗಿ ಬಿದ್ದಿತ್ತು. ವೈದಿಕ ಭಕ್ತಿ ಪಂಥದ ಬಗ್ಗೆ ಒಳ ನೋಟಗಳುಳ್ಳ ಲೇಖನ ಬರೆದಿರುವ ನಾಗರಾಜಪ್ಪನವರು, ದಾಸರ ಕನ್ನಡ ಬಳಕೆಗೆ ಒತ್ತಡವಾಗಿದ್ದ ಮೂರು ಕಾರಣಗಳನ್ನು ಕೊಡುತ್ತಾರೆ: ೧. ಸಂಸ್ಕೃತಕ್ಕೆ ರಾಜಾಶ್ರಯ ಇಲ್ಲವಾದದ್ದು ೨. ವೀರಶೈವರೂ ಸಂಸ್ಕೃತದಲ್ಲಿ ಪರಿಣತಿ ಪಡೆದದ್ದು ೩. ಸಂಸ್ಕೃತದ ಗೂಡಲ್ಲಿದ್ದ ವೈದಿಕಕ್ಕೆ ಕನ್ನಡದ ಮೂಲಕ ವೀರಶೈವ-ಜೈನರು ಪ್ರಹಾರ ಮಾಡಿದ್ದು(ರಹಮತ್ ತರೀಕೆರೆ ೨೦೦೯:೨೩). ಹೀಗೆ ಪುರಂದರರು ಸಂಸ್ಕೃತದ ಜತೆ ಕನ್ನಡವನ್ನು ತಮ್ಮ ರಚನೆಗಳಲ್ಲಿ ಬಳಸಿದರು ಎನ್ನುವುದಕ್ಕೂ ಈ ಮೇಲಿನ ಮಾತಿನ ಮಿತಿ ಅನ್ವಯವಾಗುತ್ತದೆ. ಪುರಂದರರು ತಮ್ಮ ರಚನೆಗಳಲ್ಲಿ ಹರಿಸ್ಮರಣೆಯನ್ನು ಸ್ವಂತಿಕೆಯೆಂತಲೂ ಇತರ ದೈವಗಳನ್ನು ಅನ್ಯ ಎಂತಲೂ ಮಂಡನೆ ಮಾಡುತ್ತಾರೆ. ಈ ನೆಲೆಯಲ್ಲೇ ಅವರು ಜನಪದ ದೈವವನ್ನು ನಿರಾಕರಿಸುವ ಧೋರಣೆ ಇರುವುದು. ಹಾಗಾಗಿ ಪುರಂದರರು ಕಳ್ಳತನ, ಸುಳ್ಳುತನ, ವ್ಯಭಿಚಾರ ಮುಂತಾದ ಜೀವನದ ಅನೇಕ ಕೆಟ್ಟ ಎಂದು ಕರೆವ ಸಂಗತಿಗಳನ್ನು ವಿರೋಧಿಸುತ್ತಾರಾದರೂ, ಇವುಗಳಿಗೆ ಕಾರಣವಾದ ಸಾಮಾಜಿಕ ವ್ಯವಸ್ಥೆಯೊಳಗೇ ಇರುವ ಅಸಮಾನತೆಯನ್ನು ಪ್ರಶ್ನೆ ಮಾಡುವುದಿಲ್ಲ. ಅಥವಾ ಅಂತಹ ಕಾರಣಾನ್ವೇಷಣೆಗೆ ಇಳಿಯದೆ ಮೇಲುನೋಟದ ವಿಮರ್ಶೆ ಮಾಡುತ್ತಾರೆ. ಹೀಗಾಗಿ ಪುರಂದರರ ಬಹುಪಾಲು ರಚನೆಗಳಲ್ಲಿ ವ್ಯಕ್ತವಾಗುವ ಅನ್ಯ ಮತ್ತು ಸ್ವಂತಿಕೆ ಗುರುತಿಸುವಿಕೆಯ ಒಳಗೂ ವೈದಿಕ ಧರ್ಮವನ್ನು ಪುನರುಜ್ಜೀವನಗೊಳಿಸುವ ಆಶಯಗಳಿರುವುದನ್ನು ಅಲ್ಲಗಳೆಯುವಂತಿಲ್ಲ. -೫- ಈ ಮೇಲಿನ ಒಟ್ಟು ಚರ್ಚೆ ಪುರಂದರರ ದೇಸಿ ಚಿಂತನೆಯನ್ನು ಗುರುತಿಸುವ ನೆಲೆ ಮತ್ತು ಅದರ ಮಿತಿಯನ್ನು ಗುರುತಾಗಿಟ್ಟುಕೊಂಡೇ ಮಾತನಾಡಲಾಗಿದೆ. ಈ ಮಾತುಗಳಿಗೆ ಕೆಲವು ಮಿತಿ ಇರಬಹುದಾದರೂ ಇವು ನಮ್ಮ ಕಾಲದಲ್ಲಿ ಪುರಂದರರನ್ನು ಎದುರುಗೊಳ್ಳುವಾಗ ಇರಬೇಕಾದ ಒತ್ತಡಗಳೂ ಹೌದು. ಹಾಗಾಗಿ ಪುರಂದರರ ಕಾಲದ ರಾಜಕಾರಣವನ್ನು ಅರಿಯದೆ ಅವರೊಬ್ಬರನ್ನೇ ಕತ್ತರಿಸಿ ಮಾತನಾಡುವುದು ಕಷ್ಟದ ಕೆಲಸ. ಹಾಗಾದಲ್ಲಿ ಹೆಚ್ಚೆಂದರೆ ಅದು ಪುರಂದರರ ಭಜನೆಯಾಗಬಹುದು. ಇಲ್ಲಿನ ಮಾತುಗಳು ಪುರಂದರರನ್ನು ಪ್ರೀತಿಸುವವರಿಗೆ ನೋವಾಗುವ ಸಾಧ್ಯತೆಯಿದೆ. ಅಥವಾ ಈ ನಿಲುವುಗಳನ್ನೇ ಸಾರಾಸಗಟಾಗಿ ನಿರಾಕರಿಸುವ ಸಾಧ್ಯತೆಯೂ ಇಲ್ಲದಿಲ್ಲ. ಆದರೆ ಪುರಂದರರ ಬಗೆಗಿನ ಪ್ರೀತಿ ಅವರ ಕುರಿತಾದ ವಿಮರ್ಶೆಗೆ ತೊಡಕಾಗಬಾರದು ಎನ್ನುವುದು ನನ್ನ ನಂಬುಗೆ. ಅವರನ್ನು ನನ್ನ ಕಾಲದ ತಿಳುವಳಿಕೆಯ ಮೂಲಕ ಎದುರುಗೊಳ್ಳುವ ಅಗತ್ಯವಿದ್ದಾಗ ಅವರೊಂದಿಗೆ ಪ್ರೀತಿಯ ಜಗಳವೂ ಸಾಧ್ಯವಾಗಬೇಕು. ಬಹುಶಃ ಆ ತಿಳುವಳಿಕೆಯ ನೆಲೆಯಲ್ಲಿ ಮೇಲಿನ ಆಲೋಚನೆ ರೂಪುಗೊಂಡಿದೆ. ಹಾಗೆಯೇ ಅದು ನನ್ನ ಓದು ಮತ್ತು ಆಲೋಚನೆಯ ಮಿತಿಗೆ ಒಳಪಟ್ಟಿದೆ ಎಂದು ವಿನಮ್ರವಾಗಿ ತಿಳಿಸಲು ಇಚ್ಫಿಸುತ್ತೇನೆ. (ಕನ್ನಡ ವಿಶ್ವವಿದ್ಯಾಲಯ, ಹಂಪಿಯ ಪುರಂದರ ಅಧ್ಯಯನ ಪೀಠವು ಅಮರೇಶ ನುಗಡೋಣಿ ಅವರ ಸಂಚಾಲಕತ್ವದಲ್ಲಿ ದಾರವಾಡದಲ್ಲಿ ಆಯೋಜಿಸಿದ ಸೆಮಿನಾರಿನಲ್ಲಿ ಮಂಡಿಸಿದ ಪ್ರಬಂಧ)

2 ಕಾಮೆಂಟ್‌ಗಳು:

ಅನಾಮಧೇಯ ಹೇಳಿದರು...

purandarara bagegina nimma baraha churukagide,, fine
-jayaprakash,belagm

ಅನಾಮಧೇಯ ಹೇಳಿದರು...

ಪುರಂದರ ದಾಸರ ದೇಸಿ ಚಿಂತನೆಗಳ ಕುರಿತು ವಿಸ್ತ್ರತವಾದ ಬರವಣಿಗೆ. ಅಕಾಡೆಮಿಕ್ ಶಿಸ್ತು ನಿನ್ನ ಬರವಣಿಗೆಗೆ ನಿಧಾನವಾಗಿ ಒಗ್ಗುತ್ತದೆ. ದಾಸ ಸಾಹಿತ್ಯದಲ್ಲಿ ಇಬ್ಬರು ದಾಸರು ಪ್ರಮುಖರು. ಪುರಂದರ ದಾಸ ಹಾಗೂ ಕನಕ ದಾಸ ಇಬ್ಬರು ಬಿಟ್ಟರೆ ಉಳಿದವರೆಲ್ಲಾ ನಗಣ್ಯ. ಇಬ್ಬರೂ ಅಬ್ರಾಹ್ಮಣರು ಎನ್ನುವುದು ಇಲ್ಲಿ ಮುಖ್ಯ. ಇಬ್ಬರೂ ಬದುಕಿದ್ದು ೧೪ನೇ ಶತಮಾನದಲ್ಲಿ.
ಪುರಂದರ ದಾಸರು ಓಡಾಡಿದ್ದ ಪ್ರದೇಶವೆಲ್ಲಾ ವಿಜಯನಗರವೇ ಆಗಿತ್ತು. ವಿಜಯನಗರ ಸಾಮ್ರಾಜ್ಯವಾಗಿ ಶ್ರೀಕೃಷ್ಣದೇವರಾಯನ ಆಳ್ವಿಕೆಯ ಉನ್ನತ ಆಡಳಿತದ ಅವಧಿಯ ಕಾಲವೂ ಅದೇ ಆಗಿತ್ತು. ಅಷ್ಟದಿಗ್ಗಜ ಕವಿಗಳು ಆಸ್ಥಾನದಲ್ಲಿದ್ದರು. ಸಾಹಿತ್ಯ, ಸಂಗೀತಕ್ಕೆ ಆಪಾರ ಬೆಂಬಲ ನೀಡಿದ ಶ್ರೀಕೃಷ್ಣದೇವರಾಯ ಸ್ವತಃ ಕವಿಯೂ ಆಗಿದ್ದ.
ಶ್ರೀಕೃಷ್ಣದೇವರಾಯನ ಕಾಲದಲ್ಲಿ ಶೈವರನ್ನು ಮೂಲೆಗೆ ತಳ್ಳಿ ವೈಷ್ಣವರು ಮೇಲೆದ್ದು ನಿಂತಿದ್ದರು. ಶ್ರೀಕೃಷ್ಣದೇವರಾಯನೇ ವೈಷ್ಣವ ದೀಕ್ಷೆ ಪಡೆದಿದ್ದ. (ಪೇಜಾವರರ ದೀಕ್ಷೆ ನೆನಪಿಸಿಕೊಳ್ಳಬಹುದು.)
ಇಂತಹ ಕಾಲದಲ್ಲಿ ಅರಸರ ದಾಸನಾಗದೇ ಹರಿದಾಸರಾಗಿ, ಕನ್ನಡದಲ್ಲಿ ದಾಸರ ಪದಗಳನ್ನು ಹಾಡುತ್ತಾ ತಂಬೂರಿ ಮೀಟುತ್ತಾ ಸಂಚರಿಸುತ್ತಿದ್ದ ಪುರಂದರ ದಾಸರು ಆ ಕಾಲದ ಬಂಡಾಯ ಕವಿಗಳೇ ಆಗಿದ್ದಾರೆ. ಆ ಕಾಲದ ಗತಿಸ್ಥಿತಿಯನ್ನು ನಾವು ಅರ್ಥ ಮಾಡಿಕೊಳ್ಳಬೇಕು. ಅಲ್ಲಿರುವ ದ್ವಂದ್ವವನ್ನು ಸಹ.
ವಿಜಯನಗರದ ರಾಜಬೀದಿಯಲ್ಲಿ ನಿಂತು 'ಸತ್ಯವಂತರಿಗಿದು ಕಾಲವಲ್ಲೋ' ಎಂಬ ಹಾಡು ಹಾಡಲು ಪುರಂದರಗೆ ಹೇಗೆ ಸಾಧ್ಯವಾತು? ಹರಿಯನ್ನು ಒಂದು ಗುಡಿಯಲ್ಲಿ ಬಂಧಿಸಿ, ಅದನ್ನು ಕರ್ಮಠ ಬ್ರಾಹ್ಮಣರು ಕಾಯುವ ಕಾಲದಲ್ಲಿ 'ನೀ ನ್ಯಾಕೋ ನಿನ್ನ ಹಂಗ್ಯಾಕೋ ನಿನ್ನ ನಾಮದ ಬಲವೊಂದಿದ್ದರೆ ಸಾಕು' ಎಂದು ಹರಿಯನ್ನೇ ಕೈ ಬಿಟ್ಟು ಸ್ಮರಣೆ ಮಾತ್ರ ಸಾಲದೇ ಎಂದ ದಾಸರು ಎಲ್ಲವನ್ನೂ ಪಾಪ, ಪುಣ್ಯ, ಭಕ್ತಿ, ಶರಣಾಗತಿಗೆ ಒಪ್ಪಿಸಿದರೂ ಅದನ್ನೆಲ್ಲಾ ಬೀದಿಗೆ ತಂದು ಚೆಲ್ಲಿದರು ಎನ್ನುವುದು ನಮಗೆ ಇಲ್ಲಿ ಮುಖ್ಯವಾಗಬೇಕು.
ನಮ್ಮ ಕಾಲದಲ್ಲಿ ಪುರಂದರು ಎಲ್ಲಿದ್ದಾರೆ ಅಂತಹ ಹುಡುಕಿದರೆ ಅವರು ಸಿಗುವುದು ಅದೇ ಕರ್ಮಠ ಬ್ರಾಹ್ಮಣರ ಅಗ್ರಹಾರದಲ್ಲಿಯೇ. ವ್ಯಂಗ್ಯವೆಂದರೆ ಇದು.
ಇವತ್ತು ನಮ್ಮ ಗ್ರಾಮೀಣ ಪ್ರದೇಶದ ಜನಪದರು ಹಾಡುವ ಭಜನೆಗಳಲ್ಲಿ, ತತ್ವ ಪದಗಳಲ್ಲಿ ಪುರಂದರು ಸಿಗುತ್ತಾರೆ. ಹಂಪಿಗೆ ಬರುವ ಭಜನಾ ತಂಡಗಳು ದಾಸರ ಹಾಡುಗಳನ್ನು ಹಾಡುತ್ತಾರೆ. ದಾಸರನ್ನು ಜೀವಂತವಾಗಿಟ್ಟವರೇ ಈ ಜನಪದರೇ. ನಂತರ ಕೀರ್ತನಕಾರರು ದಾಸರನ್ನು ಮತ್ತೊಂದು ರೀತಿಯಲ್ಲಿ ಜೀವಂತವಾಗಿಸಿದರು. "ಹಿಂದೂಸ್ತಾನಿ, ಕರ್ನಾಟಕ ಸಂಗೀತಕಾರರು ದಾಸರ ಹಾಡುಗಳನ್ನು ನೆಚ್ಚಿಕೊಂಡರು.
ದಾಸರ ಹಾಡುಗಳನ್ನು ಹಾಡುವ ಈ ಸಂಗೀತ ಕಾರ್ಯಕ್ರಮಗಳನ್ನು ನಾನು ತುಂಬಾ ಸಲ ಕೇಳಿದ್ದೇನೆ. ಬಹುತೇಕರು 'ಭಾಗ್ಯದ ಲಕ್ಷ್ಮಿ ಬಾರಮ್ಮ' ಇಂತಹ ಜನಪ್ರಿಯ ಹಾಡುಗಳನ್ನೇ ಹಾಡುತ್ತಾರೆ. ನಿನ್ನ ನೀಚ ಬುದ್ದಿಯ ಬಿಡು ನಾಲಿಗೆ, ನಿಂದಕರಿರರಬೇಕು ಹಂದಿಯಂತಹ ಇಂತಹ ಹಾಡುಗಳನ್ನು ಹಾಡಿದ್ದು ನಾನು ಕೇಳಿಲ್ಲ. ನೀಚ, ಹಂದಿ ಇಂತಹ ಶಬ್ದಗಳು ಸಾಹಿತ್ಯದಲ್ಲಿ ಬಂದರೆ ಹೇಗೆ? ಇನ್ನೂ ಸತ್ಯವಂತರಿಗಿದು ಕಾಲವಲ್ಲೋ ಸಹ ಹಾಡುವುದಿಲ್ಲ. ಸತ್ಯವಂತರೇ ತಾನೇ ಸಂಗೀತಗ್ಠೋ ಏರ್ಪಡಿಸಿ, ಸನ್ಮಾನ ಮಾಡುವವವರು. 'ತುರುಕರ ನೆನಯಬೇಕಣ್ಣ' ಡೊಂಕು ಬಾಲದ ನಾಯಕರೇ ಇಂತಹ ಗೀತೆಯನ್ನು ಅಪ್ಪಿತಪ್ಪಿ ಉಸುರುವುದಿಲ್ಲ. ನಾನು ಅಬ್ರಾಹ್ಮಣ ಸಂಗೀತ ಗಾಯಕರೊಬ್ಬರ ಬಳಿ ಇದನ್ನು ಪ್ರಸ್ತಾಪಿಸಿ, ನೀವು ಯಾಕೇ ಇಂತಹ ಗೀತೆಯನ್ನು ಆಯ್ಕೆ ಮಾಡಿಕೊಂಡು ಸಂಗೀತ ಸಂಯೋಜಿಸಿ ಹಾಡಬಾರದು ಎಂದು ಕೇಳಿದೆ. ಅವರು ತಮ್ಮ ಶಾಲನ್ನು ಸರಿ ಮಾಡಿಕೊಂಡು ಯಾವುದೋ ಹಾಡು ಗುನಗುನಿಸಿದರೆ ಹೊರತು ಉತ್ತರ ಕೊಡಲಿಲ್ಲ. ಉತ್ತರ ಸ್ಪಷ್ಠ.
ಪುರಂದರ ದಾಸರು, ಕನಕದಾಸರು ಇವತ್ತು ಇದ್ದರೆ ಏನಾಗಿರುತ್ತಿದ್ದರೂ ನಮ್ಮ ನಿಮ್ಮಂತೆ ಬ್ಲಾಗಿನಲ್ಲಿ ಬರೆಯುತ್ತಿದ್ದರು. ನಾವು ೧೪ನೇ ಶತಮಾನದಲ್ಲಿ ಇದ್ದರೆ ಏನಾಗುತ್ತಿದ್ದೇವೋ ತಂಬೂರಿ ಹಾಕಿಕೊಂಡು ಯಡಿಯೂರಪ್ಪನ ವಿರುದ್ಧ ಡೊಂಕು ಬಾಲದ ನಾಯಕರೇ ನೀವೇನೂ ಊಟ ಮಾಡುವಿರೀ ಎಂದು ಕೇಳುತ್ತಿದ್ದೇವು. ಇದನ್ನು ಸರಳವಾಗಿ ಸುಮ್ಮನೆ ತಮಾಷೆಯಾಗಿ ಹೇಳುತ್ತಿರುವೆ.
ಕಾಲಮಾನ ಮತ್ತು ವಿಚಾರ ಇವುಗಳ ನಡುವೆ ಇರುವ ಅಂತರ್‌ಸಂಬಂಧವನ್ನು ಅತ್ಯಂತ ಸೂಕ್ಷ್ಮವಾಗಿ ನೋಡಬೇಕಿದೆ. ಏನೇ ಆಗಲಿ ನಿನ್ನ ಬರಹ ನನಗೆ ಇಷ್ಟವಾಯಿತು ಎಂದೇ ಈ ದೀರ್ಘ ಪ್ರತಿಕ್ರಿಯೆ ನೀಡಿರುವೆ.
- ಪರಶುರಾಮ ಕಲಾಲ್