ಗುರುವಾರ, ನವೆಂಬರ್ 11, 2010
ಪುರುಷೋತ್ತಮ ಬಿಳಿಮಲೆ ಅವರ ಬರಹ ‘ಕುಂಬಳೆ ಸುಂದರ ರಾವ್ ಮತ್ತು ಸೂರಿಕುಮೇರು ಗೋವಿಂದ ಭಟ್’
(ಪುರುಷೋತ್ತಮ ಬಿಳಿಮಲೆ ಅವರು ಕನ್ನಡ ಜಾನಪದ ಅಧ್ಯಯನದ ತಾತ್ವಿಕ ಚೌಕಟ್ಟನ್ನು ರೂಪಿಸಿದ ಕೆಲವೇ ಕೆಲವು ಜಾನಪದ ವಿದ್ವಾಂಸರಲ್ಲಿ ಒಬ್ಬರು. ಕರಾವಳಿ ಜಾನಪದ, ಕೂಡುಕಟ್ಟು ಅವರ ಮುಖ್ಯವಾದ ಕೃತಿಗಳು. ಅವರು ಕನ್ನಡ ಜಾನಪದ ಅಧ್ಯಯನಗಳ ವಿವರಣಾತ್ಮಕ ನೆಲೆಯಿಂದ ದೂರಸರಿದು, ಸಾಂಸ್ಕೃತಿಕ ರಾಜಕಾರಣದ ಒಳನೇಯ್ಗೆಯ ಸೂಕ್ಷ್ಮಗಳನ್ನು ಗುರುತಿಸುತ್ತಾ ಭಿನ್ನ ಆಯಾಮವನ್ನು ನೀಡಿದವರು. ಜಾನಪದದ ಬಹುಮುಖಿ ನೆಲೆಯ ಅಧ್ಯಯನಕ್ಕೆ ಒಳನೋಟಗಳನ್ನು ಕೊಟ್ಟವರು. ಅವರು ದೆಹಲಿಗೆ ತೆರಳಿದ ನಂತರ ಕನ್ನಡ ಜಾನಪದ ಕ್ಷೇತ್ರ ಅವರಿಂದ ತುಂಬಾ ಕಳೆದುಕೊಂಡಿದೆಯೆಂದೇ ನನ್ನ ಭಾವನೆ. ಅವರು ಮತ್ತೆ ಕನ್ನಡ ಜಾನಪದದ ಬಗ್ಗೆ ಹೊಸ ನೆಲೆಗಳಲ್ಲಿ ಬರೆಯಲು ತೊಡಗಲಿ ಎಂದು ಕನ್ನಡ ಜಾನಪದ ಬ್ಲಾಗ್ ಆಶಿಸುತ್ತದೆ. ಅವರು ತಮ್ಮ ಬಿಳಿಮಲೆ ಬ್ಲಾಗ್ ನಲ್ಲಿ ಬರೆದುಕೊಂಡಿದ್ದ ಯಕ್ಷಗಾನದ ಬಗೆಗಿನ ನುಡಿಚಿತ್ರದಂತಹ ಈ ಸೂಕ್ಷ್ಮ ಬರಹವನ್ನು ಇಲ್ಲಿ ಕೊಡಲಾಗಿದೆ. –ಅರುಣ್ )
ನಾನು ಯಕ್ಷಗಾನ ನೋಡಲು ಆರಂಭಿ ಸಿದ್ದು ಬಹುಮಟ್ಟಿಗೆ 1959-60ರ ಸುಮಾರಿ ನಲ್ಲಿ ಎಂದು ನನ್ನ ನೆನಪು. ಅಂದಿನಿಂದ ಇಂದಿನವರೆಗೆ ಕಳೆದ 50 ವರ್ಷಗಳಲ್ಲಿ ನಾನು ನೂರಾರು ಯಕ್ಷಗಾನಗಳನ್ನು ನೋಡಿದ್ದೇನೆ, ತಾಳಮದ್ದಳೆಗಳ ವಾದ ವಿವಾದಗಳಿಗೆ ಕಿವಿ ಗೊಟ್ಟಿದ್ದೇನೆ. ಹವ್ಯಾಸಿ ಕಲಾವಿದರೊಂದಿಗೆ ಅವಕಾಶ ಸಿಕ್ಕಿದಾಗಲೆಲ್ಲ ಗೆಜ್ಜೆ ಕಟ್ಟಿ, ಕುಣಿದು, ಅರ್ಥ ಹೇಳಲು ಹೆಣಗಿದ್ದೇನೆ. ಯಕ್ಷಗಾನದ ಬಗ್ಗೆ ದೇಶ-ವಿದೇಶ ಗಳ ವಿದ್ವಾಂಸರಿಗೆ ನನಗೆ ತಿಳಿದ ಮಾಹಿತಿ ನೀಡಿದ್ದೇನೆ, ಕಲಾವಿದ ರೊಂದಿಗೆ ವಿದೇಶ ಸುತ್ತಿದ್ದೇನೆ. ಈಗ 2010ರ ಕೊನೆಯಲ್ಲಿ ಒಂದು ಕ್ಷಣ ನಿಂತು ಹಿಂದಿರುಗಿ ನೋಡಿದರೆ, ನಾನು ಮತ್ತು ನನ್ನ ತಲೆಮಾರಿನ ಜನರು ಯಕ್ಷಗಾನ ನೋಡುತ್ತಿದ್ದ ಕಾಲವು ಯಕ್ಷಗಾನದ ಸುವರ್ಣ ಯುಗ ಆಗಿತ್ತೇ ಎಂಬ ಭಾವ ಬಲವಾಗಿ ಮೂಡುತ್ತಿದೆ.
ಏಕೆಂದರೆ ನಾವೆಲ್ಲ ದಾಮೋದರ ಮಂಡೆಚ್ಚ, ಕಡತೋಕ ಮಂಜುನಾಥ ಭಾಗವತ, ಬಲಿಪ ನಾರಾಯಣ ಭಾಗವತ, ಅಗರಿ, ಪುತ್ತಿಗೆ, ಪದ್ಯಾಣ, ಉಪ್ಪೂರು, ಕಾಳಿಂಗ ನಾವುಡ, ನೀಲಾವರ ಮೊದಲಾದ ಸಾರ್ವಕಾಲಿಕ ಮಹತ್ವದ ಭಾಗವತರ ಹಾಡುಗಳಿಗೆ ಕಿವಿ ಕೊಟ್ಟಿದ್ದೇವೆ. ನಿಡ್ಲೆ ನರಸಿಂಹ ಭಟ್, ದಿವಾಣ ಭೀಮ ಭಟ್, ಚಿಪ್ಪಾರು ಕೃಷ್ಣಯ್ಯ ಬಲ್ಲಾಳ್, ಕಾಸರಗೋಡು ವೆಂಕಟರಮಣ, ಕುದ್ರೆ ಕೂಡ್ಲು ರಾಮ ಭಟ್, ಪದ್ಯಾಣ ಶಂಕರ ನಾರಾಯಣ ಭಟ್, ಗೋಪಾಲಕೃಷ್ಣ ಕುರುಪ್, ಹಿರಿಯಡಕ ಗೋಪಾಲ ರಾವ್ ಮತ್ತಿತರ ಮಹಾನ್ ಕಲಾವಿದರ ಕೈಚಳಕ ಗಳಿಗೆ ಪುಳಕಗೊಂಡಿದ್ದೇವೆ. ರಂಗದ ಮೇಲೆ ಇನ್ನಿಲ್ಲದಂತೆ ಮೆರೆದ ಪಡ್ರೆ ಚಂದು, ಅಳಿಕೆ ರಾಮಯ್ಯ ರೈ, ಕುರಿಯ ವಿಠಲ ಶಾಸ್ತ್ರಿ, ಶೇಣಿ, ಸಾಮಗ, ಪುತ್ತೂರು ನಾರಾಯಣ ಹೆಗ್ಡೆ, ಕೋಳ್ಯೂರು, ಎಂಪೆಕಟ್ಟೆ, ಮಿಜಾರು, ವಿಟ್ಲ ಜೋಷಿ, ಬಂಟ್ವಾಳ ಜಯರಾಮ ಆಚಾರ್ಯ, ಕೆರೆಮನೆ ಗಜಾನನ, ಮಹಾಬಲ, ಶಂಭು ಹೆಗಡೆ, ಚಿಟ್ಟಾಣಿ, ಪ್ರಭಾಕರ ಜೋಷಿ, ಬಣ್ಣದ ಮಾಲಿಂಗ, ಕುಟ್ಯಪ್ಪು, ಅಂಬು, ಶ್ರೀಧರ ಭಂಡಾರಿ, ಅರುವ, ಕೊಂಡದಕುಳಿ, ಮೊದಲಾದ ಕಲಾವಿದರ ಭಿನ್ನ ಪಾತ್ರಾಭಿವ್ಯಕ್ತಿಗಳನ್ನು ನೋಡಿ ಸಂಭ್ರಮಿಸಿದ್ದೇವೆ. ಇರಾ, ಕರ್ನಾಟಕ, ಧರ್ಮಸ್ಥಳ, ಕಟೀಲು, ಕದ್ರಿ, ಸುರತ್ಕಲ್, ಮೇಳಗಳು ತಿರುಗಾಟದಲ್ಲಿ ಇತಿಹಾಸ ಸೃಷ್ಟಿಸಿದ್ದನ್ನು ನಾವು ಕಂಡಿದ್ದೇವೆ. ಅಮೃತ ಸೋಮೇಶ್ವರ, ರಾಘವ ನಂಬಿಯಾರ್, ಅನಂತರಾಮ ಬಂಗಾಡಿಯವರಂತಹವರು ರಂಗದ ಮೇಲೆ ಅಭೂತಪೂರ್ವ ಯಶಸ್ಸು ಸಾಧಿಸಿದ ಪ್ರಸಂಗಗಳನ್ನು ಬರೆದದ್ದು ಕೂಡಾ ನಮ್ಮ ಕಾಲದಲ್ಲಿಯೇ. ಡಾ ಶಿವರಾಮ ಕಾರಂತರು ಕುಣಿದಿದ್ದನ್ನು ನಾವು ಕಂಡಿದ್ದೇವೆ. ಗುಣಸುಂದರಿ-ಪಾಪಣ್ಣ, ಸಮುದ್ರ ಮಥನ. ರಂಭಾ ರೂಪರೇಖ, ಚಂದ್ರಾವಳಿ, ಬಪ್ಪ ನಾಡು, ಕೋಟಿ ಚೆನ್ನಯ, ಸಿರಿ, ದೇವು ಪೂಂಜ, ಪಟ್ಟದ ಪದ್ಮಲೆ, ಕಾಡಮಲ್ಲಿಗೆ, ಕಾಯಕಲ್ಪ, ಸಹಸ್ರಕವಚ ಮೋಕ್ಷ, ಅತಿ ಕಾಯ-ಇಂದ್ರಜಿತು, ಗದಾಯುದ್ಧ, ಅಭಿ ಮನ್ಯು, ತ್ರಿಪುರ ಮಥನ, ಕಾಂತಬಾರೆ- ಬೂದಾಬಾರೆ, ಕಡುಗಲಿ ಕುಮಾರ ರಾಮ, ಮಾನಿಷಾಧ, ನಳದಮಯಂತಿ, ದಕ್ಷಾಧ್ವರ, ಮಹಾಶೂರ ಭೌಮಾಸುರ, ಗೆಜ್ಜೆದ ಪೂಜೆ, ಮಹಾರಥಿ ಕರ್ಣ ಮೊದಲಾದ ನೂರಾರು ಪ್ರಸಂಗಗಳು ರಂಗದ ಮೇಲೆ ವಿಜೃಂಭಿಸಿದ್ದು ಕೂಡಾ ನಮ್ಮ ಕಾಲದಲ್ಲಿಯೇ. ಈ ಅರ್ಥದಲ್ಲಿ ನಾವು ಪುಣ್ಯವಂತರು. ಯಕ್ಷಗಾನದ ಸುವರ್ಣ ಯುಗಕ್ಕೆ ಸಾಕ್ಷಿಗಳಾದ ಭಾಗ್ಯ ನಮ್ಮದು.
ಇಂಥ ಕಾಲಘಟ್ಟದ ಎರಡು ಅಪೂರ್ವ ಪ್ರತಿಭೆಗಳೆಂದರೆ ಕುಂಬಳೆ ಸುಂದರ ರಾವ್ ಮತ್ತು ಸೂರಿಕುಮೇರು ಗೋವಿಂದ ಭಟ್. ತಮ್ಮ ಅಸಾಧಾರಣ ಪ್ರತಿಭೆಯಿಂದಾಗಿ ಈ ಇಬ್ಬರೂ ಕಲಾವಿದರೂ ಲಕ್ಷಾಂತರ ಯಕ್ಷಗಾನ ರಸಿಕರ ಮನಸೂರೆಗೊಂಡ ದ್ದಲ್ಲದೆ, ಯಕ್ಷಲೋಕದಲ್ಲಿ ತಮ್ಮದೇ ಛಾಪು ಮೂಡಿಸಿ ಇತಿಹಾಸ ಸೃಷ್ಟಿಸಿದವರು.
ನಮ್ಮ ಭಾಗ್ಯವೋ ಎಂಬಂತೆ, ಈ ಇಬ್ಬರು ಕಲಾವಿದರೂ ತಮ್ಮ ಆತ್ಮಚರಿತ್ರೆಗಳನ್ನು ಪ್ರಕಟಿಸಿ ಮಹದುಪಕಾರ ಮಾಡಿದ್ದಾರೆ. ಕುಂಬಳೆಯವರ ಸುಂದರಕಾಂಡ (ಸಂ. ಅಮೃತ ಸೋಮೇಶ್ವರ)ವು ಅವರ ಅಭಿನಂದನ ಕೃತಿಯೇ ಹೌದಾದರೂ, ಅದರ ಆರಂಭದ ಯಕ್ಷಪಥ ಯಾತ್ರಿಕ ಭಾಗದಲ್ಲಿ ಯಕ್ಷಪಥಯಾತ್ರಿಕ ಎಂಬ ಶೀರ್ಷಿಕೆಯಲ್ಲಿ 236 ಪುಟಗಳಷ್ಟು ದೀರ್ಘವಾದ ಜೀವನ ಸ್ಮೃತಿ ಸಂಚಯವಿದ್ದು, ಅದರಲ್ಲಿ ಕುಂಬಳೆಯವರು ತಮ್ಮ ಕಲಾ ಜೀವನದ ಏಳು-ಬೀಳುಗಳ ಬಗ್ಗೆ ತುಂಬಾ ಪ್ರಾಮಾಣಿಕವಾಗಿ ಬರೆದುಕೊಂಡಿ ದ್ದಾರೆ. ಕುಂಬಳೆ ಪರಿಸರದಲ್ಲಿ ನೇಯ್ಗೆ ಕುಲ ವೃತ್ತಿ ಮಾಡಿಕೊಂಡಿದ್ದ ಬಡಕುಟುಂಬದಲ್ಲಿ ಜನಿಸಿದ ಮಲೆಯಾಳಂ ಮಾತೃಭಾಷೆಯ ಸುಂದರ ಎಂಬ ಹೆಸರಿನ ಹುಡುಗ, ಅತ್ತ ನೇಯ್ಗೆಯನ್ನೂ ಕಲಿಯದೆ, ಇತ್ತ ಶಾಲೆಗೂ ಹೋಗದೆ, ಯಕ್ಷಗಾನ ಕಲಾವಿದನಾಗಿ ಹಂತ ಹಂತವಾಗಿ ಮೇಲೇರುತ್ತಾ ಹೋಗಿ, ಕುಂಬಳೆ ಸುಂದರ ರಾವ್ ಆಗಿ ರೂಪುಗೊಂಡ ಬಗೆಯ ಅತ್ಯಂತ ರೋಚಕ ವಿವರಗಳು ಇಲ್ಲಿವೆ. ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ಊರು ಬಿಡಬೇಕಾದ ಸಂದರ್ಭ ಬಂದದ್ದು, ಬಣ್ಣಹಚ್ಚಿ, ವೇಷ ಕಟ್ಟಿದರೂ, ರಂಗಸ್ಥಳ ಪ್ರವೇಶ ಮಾಡಲಾಗದೇ ವೇಷ ಬಿಚ್ಚಿ, ಬಣ್ಣ ಅಳಿಸದೇ ಮನೆ ಸೇರಿದ ಪ್ರಸಂಗ-ಇತ್ಯಾದಿ ಘಟನೆಗಳನ್ನು ಸುಂದರ ರಾಯರು ಒಂದು ಬಗೆಯ ಮುಗ್ಧತೆಯಲ್ಲಿ ವಿವರಿಸುವ ಸೊಗಸನ್ನು ಓದಿಯೇ ತಿಳಿದು ಕೊಳ್ಳಬೇಕು. ಇದೇ ರೀತಿ ಡಾ ಪ್ರಭಾಕರ ಶಿಶಿಲರು ಸೂರಿಕುಮೇರು ಗೋವಿಂದ ಭಟ್ಟರ ಆತ್ಮ ವೃತ್ತಾಂತವನ್ನು ಯಕ್ಷೊàಪಾಸನೆ ಎಂಬ ಹೆಸರಿನಲ್ಲಿ ನಿರೂಪಿಸಿದ್ದಾರೆ. ಹೃದಯ ವಿದ್ರಾವಕವಾದ ಬಡತನದಲ್ಲಿ ಬಾಲ್ಯವನ್ನು ಕಳೆದ ಗೋವಿಂದಣ್ಣ, ಮುಂದೆ ಮನೆ ತೊರೆಯಬೇಕಾದ ಪರಿಸ್ಥಿತಿ ಇದಿರಾದದ್ದು, ಬ್ರಾಹ್ಮಣನಾಗಿ ಹುಟ್ಟಿದರೂ, ಬ್ರಾಹ್ಮಣೇತರರ ಮನೆಯಲ್ಲಿ ಉಣ್ಣಬೇಕಾಗಿ ಬಂದ ದಯನೀಯ ಪರಿಸ್ಥಿತಿ, ಮಳೆಗಾಲದ ತಿರುಗಾಟ ಮುಗಿಸಿ ಹಿಂದಿರುಗಿ ಮನೆಗೆ ಬಂದಾಗ, ಬೆಂಕಿ ಬಿದ್ದು ಸುಟ್ಟು ಬೂದಿ ಯಾದ ಮನೆ ನೋಡಬೇಕಾಗಿ ಬಂದ ದಾರುಣ ಘಟನೆಗಳನ್ನು ಈ ಪುಸ್ತಕದಲ್ಲಿ ಕಾಣ ಬಹುದು. ಸಾಹಿತ್ಯದ ವಿದ್ಯಾರ್ಥಿಯಾದ ನನ್ನನ್ನು ಗಾಢವಾಗಿ ತಟ್ಟಿದ ಕನ್ನಡ ಕೃತಿಗಳಲ್ಲಿ ಕಾರಂತರ ಬೆಟ್ಟದ ಜೀವವೂ ಒಂದು.
ಕಾವ್ಯ ದಂಥ ಕಾದಂಬರಿಯದು. ಕುಂಬಳೆ- ಗೋವಿಂದ ಭಟ್ಟರ ಕೃತಿಗಳನ್ನು ಓದುವಾಗ ಅವು ಬೆಟ್ಟದ ಜೀವಕ್ಕೆ ಸಮನಾದ ಕೃತಿಗಳೆಂದು ನನಗೆ ಅನ್ನಿಸಿದ್ದುಂಟು. ಗೋಪಾಲಯ್ಯ ಬೆಟ್ಟದ ಜೀವವಾದರೆ, ಕುಂಬಳೆ- ಗೋವಿಂದಣ್ಣನವರು ಬಯಲ ಜೀವಗಳು-ಬಯಲಾಟದ ಜೀವಗಳು.
ಬಡತನದ ಬೇಗುದಿಯಲ್ಲಿ ಉರಿದು, ಅದರ ಬೂದಿಯಿಂದೆದ್ದು ಬಂದ ಈ ಇಬ್ಬರು ಮುಂದೆ ಸುಮಾರು 45 ವರ್ಷಗಳ ಕಾಲ ಯಕ್ಷಗಾನ ರಂಗಭೂಮಿಯ ಅದ್ವಿತೀಯ ಕಲಾವಿದರಾಗಿ ರಾರಾಜಿಸಿದ್ದನ್ನು ನಾವೆಲ್ಲ ಕಣ್ಣಾರೆ ಕಂಡಿದ್ದೇವೆ. ನಿರಂತರ ಅವಮಾನ ಕ್ಕೊಳಗಾದ "ಮಾಸ್ಟರ್ ಸುಂದರ' ಮುಂದೆ ಮಹಾರಥಿ ಕರ್ಣನಾಗಿ ಕೃಷ್ಣನೊಡನೆ "ದೇವಾ, ನೀನೋ ಪರ್ವತ, ನಾನು ಪ್ರಪಾತ, ನೀನು ಸಿಂಧು- ನಾನು ಅದರಿಂದ ಸಿಡಿದು ಬಿದ್ದ ಒಂದು ಬಿಂದು' ಎಂದು ಪ್ರಾಸ ಬದ್ಧ ವಾಗಿ ಭಾವುಕವಾಗಿ ಹೇಳುವಾಗ ಬದುಕು ಮತ್ತು ರಂಗಭೂಮಿ ಅನುಸಂಧಾನ ಗೊಂಡು, ನನ್ನಂಥ ಅನೇಕ ಪ್ರೇಕ್ಷಕರ ಕಣ್ಣು ತೇವಗೊಂಡದ್ದು ಸುಳ್ಳಲ್ಲ. ಕೂಡುÛ ಮೇಳ, ಸುರತ್ಕಲ್ ಮೇಳ, ಕುಂಡಾವು, ಧರ್ಮಸ್ಥಳ ಮೇಳಗಳಲ್ಲಿ ಕುಂಬಳೆಯವರು ವೇಷಧಾರಿ ಯಾಗಿ, ಊರೆಲ್ಲಾ ತಾಳಮದ್ದಳೆಯ ಅರ್ಥ ಧಾರಿಯಾಗಿ ಜನಮನ ಸೂರೆಗೊಂಡರು. ಈಗ ದಿಲ್ಲಿಯಲ್ಲಿ ಕುಳಿತಿರುವ ನನ್ನ ಕಣ್ಣ ಮುಂದೆ ಕುಂಬಳೆಯವರ ಚಂದ್ರಾವಳಿಯ ಕೃಷ್ಣ, ಸುಧನ್ವ ಮೋಕ್ಷದ ಸುಧನ್ವ, ಮಹಾಕಲಿ ಮಗಧೇಂದ್ರದ ಕೃಷ್ಣ, ಕೋಟಿ ಚೆನ್ನಯದ ಪೆರುಮಲೆ ಬಲ್ಲಾಳ, ಸಿರಿಮಹಾತೆ¾ಯ ಕಾಂತು ಪೂಂಜ, ಕಚದೇವಯಾನಿಯ ಕಚ, ಕಾಯಕಲ್ಪದ ಚ್ಯವನ, ಅಮರವಾಹಿನಿಯ ಭಗೀರಥ, ಪಾದುಕಾಪ್ರದಾನದ ಭರತ, ಭರತೇಶ ವೈಭವದ ಭರತ, ಮಹಾರಥಿ ಕರ್ಣದ ಕರ್ಣ, ತ್ರಿಪುರ ಮಥನದ ಚಾರ್ವಾಕ, ಗೋಗ್ರಹಣದ ಉತ್ತರ, ಚಕ್ರವರ್ತಿ ದಶರಥದ ದಶರಥ ಮೊದಲಾದ ಪಾತ್ರಗಳು ಜೀವಂತವಾಗಿ ಕಾಣುತ್ತಿವೆ. ಅವರ ಮಾತುಗಳಿಗೆ ಕ್ರಿಯೆಯಾಗುವ ಅಪೂರ್ವ ಗುಣವಿರುವುದರಿಂದಾಗಿ "ಕುಂಬಳೆಯವರಿಗೆ ಕುಣಿಯಲು ಬರುವುದಿಲ್ಲ' ಎಂಬ ಮಾತಿಗೆ ಅರ್ಥವೇ ಉಳಿಯುವುದಿಲ್ಲ.
ಸೂರಿಕುಮೇರು ಗೋವಿಂದ ಭಟ್ಟರು ನಾವೆಲ್ಲಾ ಸರಿಯಾಗಿಯೇ ಹೇಳಿಕೊಂಡು ಬರುತ್ತಿರುವಂತೆ ಪರಿಪೂರ್ಣ ಕಲಾವಿದ. ಬಾಲಗೋಪಾಲರಿಂದ ತೊಡಗಿ ಪುಂಡು ವೇಷ, ಸ್ತ್ರೀ ವೇಷ, ಕಿರೀಟ ವೇಷ, ಹಾಸ್ಯ, ಬಣ್ಣ-ಹೀಗೆ ಯಾವ ವೇಷವಾದರೂ ಸರಿ, ಗೋವಿಂದ ಭಟ್ಟರಿಗೆ ಅದೊಂದು ಸವಾಲೂ ಅಲ್ಲ, ಸಮಸ್ಯೆಯೂ ಅಲ್ಲ. ಮಾತು, ಕುಣಿತ, ವೇಷಗಳಲ್ಲಿ ಅಪೂರ್ವ ಸಾಮರಸ್ಯ ಸಾಧಿಸುವ ಅವರು, ಕಿರೀಟ ವೇಷದಲ್ಲಿ ಇನ್ನಿಲ್ಲದ ಪಕ್ವತೆ ಯನ್ನು ತೋರಿಸಿದ್ದಾರೆ. ನನ್ನ ಮನಸ್ಸಿನಲ್ಲಿ ಈಗಲೂ ಗಾಢವಾಗಿ ಉಳಿದಿರುವ ಅವರ ಪಾತ್ರಗಳೆಂದರೆ- ಕುಶಲವದ ರಾಮ, ಭಾರ್ಗವ ವಿಜಯದ ಕಾರ್ತವೀರ್ಯ, ಗದಾಯುದ್ಧದ ಕೌರವ, ರಾಜಸೂಯಾ ಧ್ವರದ ಶಿಶುಪಾಲ, ಮಾರಣಾಧ್ವರದ ಇಂದ್ರಜಿತು, ದಕ್ಷಾಧ್ವರದ ದಕ್ಷ, ಮಹಾಕಲಿ ಮಗಧೇಂದ್ರದ ಮಾಗಧ, ನಳ ದಮಯಂತಿಯ ಋತುಪರ್ಣ, ಸಹಸ್ರಕವಚದ ದಂಬೋದ್ಭವ, ಅಮರ ವಾಹಿನಿಯ ಅಸಮಂಜಸ, ಭರತಾ ಗಮನದ ರಾಮ, ಮಹಾಶೂರ ಭೌಮಾ ಸುರದ ಭೌಮಾಸುರ, ನರಕಾಸುರದ ನರಕ, ಭರತೇಶ ವೈಭವದ ಬಾಹುಬಲಿ ಮತ್ತು ತ್ರಿಪುರ ಮಥನದ ತಾಮ್ರಾಕ್ಷ. ಗೋವಿಂದಣ್ಣನ ಜೊತೆ ಜಪಾನ್ ಪ್ರವಾಸ ಮಾಡುವ ಅವಕಾಶ ದೊರೆತದ್ದು ನನ್ನ ಮರೆಯಲಾಗದ ನೆನಪು ಗಳಲ್ಲಿ ಒಂದು. ದುರಂತದ ಛಾಯೆ ಇರುವ ಪಾತ್ರಗಳನ್ನು ಗೋವಿಂದ ಭಟ್ಟರ ಹಾಗೆ ನಿರ್ವಹಿಸುವ ಕಲಾವಿದ ಯಕ್ಷಲೋಕದಲ್ಲಿ ಬೇರೊಬ್ಬರಿಲ್ಲ. ಹೀಗಾಗಿಯೇ ಅವರು ನಿರ್ವಹಿಸಿದ ಗದಾಯುದ್ಧದ ಕೌರವ, ಮಹಾಶೂರ ಭೌಮಾಸುರದ ಭೌಮಾಸುರ ಮೊದಲಾದ ಪಾತ್ರಗಳು ನನ್ನೊಳಗೆ ಗಾಢವಾಗಿ ಹೆಪ್ಪುಗೊಂಡು ಕುಳಿತುಬಿಟ್ಟಿವೆ
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
-
- ಡಾ. ಎಚ್.ಜೆ. ಲಕ್ಕಪ್ಪಗೌಡ ನಾಡು-ಮೊದಲ ನೋಟ ಹಸಿರು ವನಗಳ ನಾಡು, ಬೆಟ್ಟ ಘಟ್ಟಗಳ ಬೀಡು. ಶ್ರೀಗಂಧ ಬೀಟೆ ತೇಗ ಹೊನ್ನೆ ನಂದಿ ಮತ್ತಿ ಆಲ ಬೇಲ ಸಂಪಿಗೆ ನೇರಳೆ ಬ...
-
ಎ ಸಿಂಹದಂಥಾ ಸಂಗೊಳ್ಳಿ ರಾಯಾ ಭೂಮಿಗಿ ಬಿದ್ದಂಗ ಸೂರ್ಯನ ಛಾಯಾ ನೆತ್ತರ ಕಾವಲಿ ಹರಿಸಿದಾನೊ ಕಿತ್ತೂರ ನಾಡಾಗ ಭಾಳ ಬಂಟಸ್ತಾನ ಪದವಿ ಇತ್ತ ಅವನ ಹೊಟ್ಟೆಯೊಳಗ ಸೃ...
-
ಶಿಕ್ಷಣ! ಸಂಘಟನೆ!! ಹೋರಾಟ!!! ಎಂದು ಡಾ.ಅಂಬೇಡ್ಕರರು ಹೇಳಿದ್ದಾರೆಯೇ ??? -ಡಾ.ಶಿವಕುಮಾರ್ ಇಂದು ಬಹುತೇಕ ದಲಿತರು ತಾವು ಮಾಡುವ ಕಾರ್ಯಕ್ರಮಗಳಲ್ಲಿ ಶಿಕ್ಷಣ...
2 ಕಾಮೆಂಟ್ಗಳು:
bilimale avara baraha tumba chennagide, avara folk kurita barahagalu hosatanadinda kudive, nimma p.b kurita tippani chennagide.
dr.vekatesh, mysore
ಈ ಜಗದ ಜಾನಪದ ಕಲಾ ಲೋಕ ಗಳಲ್ಲಿ ಯಕ್ಷಗಾನ ಒಂದು " ಕುಬೇರ" ನಷ್ಟ್ರು ಶ್ರೀಮಂತ. ನಮ್ಮ ನಿಮ್ಮ ಕೊಡುಗೆ ಅದಕ್ಕೆ ಬೇಕಾಗಿಲ್ಲ.
ಒಂದು ಪ್ರಕಾರ ಕಲಿ ಯಲೇ ನಮ್ಮ ಜೀವಿತಾವಧಿ ಸಾಲದು, ನೋಡೆ ಆನಂದಿಸುವ ಭಾಗ್ಯ ನಮ್ಮದು. ಇನ್ನು ನೀವು ಹೇಳಿದ ಈ ಎರಡು ಪುಸ್ತಕ ಎರಡನೇ ಬಾರಿ ಓದಲು ಒಳ್ಳೆ ಕಟು ಮನಸ್ಸು ಬೇಕು.
ಕಾಮೆಂಟ್ ಪೋಸ್ಟ್ ಮಾಡಿ