-ಅರುಣ್ ಜೋಳದಕೂಡ್ಲಿಗಿ.
ಆ ಹುಡುಗ ಚಡಚಣದಲ್ಲಿ ಡಿಗ್ರಿ ಮುಗಿಸಿದ ನಂತರ ಬಿಜಾಪುರದ ಜಿಎಸ್‍ಎಸ್ ಕಾಲೇಜಿನಲ್ಲಿ ಬಿಎಡ್ ಪೂರೈಸಿ, ಬಿಜಾಪುರ ಜಿಲ್ಲೆಯ ಇಂಡಿ ತಾಲೂಕಿನ ತನ್ನ ಊರಾದ ಮೈಲಾರ ಎಂಬ ಚಿಕ್ಕ ಹಳ್ಳಿಯಲ್ಲಿದ್ದ. ಮನೆಯಲ್ಲಿ ಅಪ್ಪ ಕಕ್ಕಂದಿರು ಹಾಡಿಕಿ ಸಂಘದಲ್ಲಿದ್ದರು. ಡೊಳ್ಳಿನ ಪದ ಹಾಡತಿದ್ದರು. ಯಾರೋ ಮೊಬೈಲದಾಗ ಡೊಳ್ಳಿನ ಹಾಡ ಹಚ್ಚಿಕೊಟ್ಟರು. ಅಪ್ಪ ಮಗನಿಗೆ `ರೇವಣಸಿದ್ಧ ಈ ಮೊಬೈಲದಾಗ ಹಾಡ ಹೆಂಗ್ ಬಿಡತಾರು ನೋಡಿಕೋ’ ಎಂದರು. ಮಗನ ಗ್ಯಾನ ಮೊಬೈಲಿನ ಮ್ಯಾಲೆ ಬಿತ್ತು. ಹೀಗೆ ನೋಡ್ತಾ ನೋಡ್ತಾ ಪದಾನ ಮೊಬೈಲದಾಗ ಹೆಂಗ್ ಬಿಡ್ತಾರ ಅಂತ ತಿಳಕಂಡು ಆಗಷ್ಟ್ 6, 2017 ರಲ್ಲಿ ಯೂಟೂಬ್ ಅಕೌಂಟ್ ಕ್ರಿಯೇಟ್ ಮಾಡಿ, ತಾನೂ ತನ್ನ ಅಪ್ಪ ಕಕ್ಕರು ಹಾಡೋ ಹಾಡ ಮೊಬೈಲಿನ್ಯಾಗ ಬಿಡಾಕತ್ತಿದ.
ಇದೀಗ ಈ ಹುಡುಗ ಹೀಗೆ ಯೂಟೂಬಿಗೆ 1244 ವೀಡಿಯೋಗಳನ್ನು ಅಪ್ಲೋಡ್ ಮಾಡಿದ್ದಾನೆ, 86 ಸಾವಿರದಷ್ಟು ಚಂದಾದಾರರಿದ್ದಾರೆ, ಮೂರು ಕೋಟಿ ಮುವತ್ನಾಲ್ಕು ಲಕ್ಷದಷ್ಟು ವೀಕ್ಷಣೆ ಇದೆ. ಇದೀಗ ಜನಪದ ಹಾಡಿಕೆ ಮದ್ಯೆ ಜಾಹೀರಾತುಗಳು ಕಾಣಿಸಿಕೊಳ್ಳುತ್ತವೆ. ಯೂಟೂಬಿನಿಂದ ಪ್ರತಿ ತಿಂಗಳು ಕನಿಷ್ಠ ಹತ್ತು ಸಾವಿರ ಈ ಹುಡುಗನ ಅಕೌಂಟಿಗೆ ಜಮೆ ಆಗುತ್ತದೆ. ಇಂದು ಉತ್ತರ ಕರ್ನಾಟಕ ಹೈದರಬಾದ ಕರ್ನಾಟಕದ ಮುನ್ನೂರಕ್ಕಿಂತ ಹೆಚ್ಚು ಜನಪದ ಕವಿಗಳ ಹಾಡಿಕೆಯ, ಡೊಳ್ಳಿನ ಹಾಡು, ಭಜನೆ, ಮೊಹರಂ ಪದ, ಗೀಗೀ, ಸೋಬಾನೆ, ಚೌಡಕಿ ಪದ ಹೀಗೆ ಜನಪದ ಪ್ರಕಾರದ ಹಾಡುಗಳನ್ನು `ರೇವಣಸಿದ್ಧ ದ್ಯಾಮಗೋಳ್’ ಎನ್ನುವ ಯೂಟೂಬ್ ಚಾನಲ್ಲಿನಲ್ಲಿ ನೀವು ಕೇಳಬಹುದು.
ರೇವಣಸಿದ್ಧ ದ್ಯಾಮಗೋಳಗೆ ಈಗ 28 ವರ್ಷದ ಹರೆಯ. ಪುಟಿಯುವ ಉತ್ಸಾಹ. ಇಂಥ ಕಡೆ ಜನಪದ ಹಾಡಿಕೆ ಇದೆ ಎಂದು ಗೊತ್ತಾದರೆ, ಬೈಕಿಗೆ ಪೆಟ್ರೋಲ್ ತುಂಬಿಸಿ, ಟ್ರೈಪ್ಯಾಡ್ ತಗೊಂಡು ಹೊರಡುತ್ತಾನೆ. ಹಾಡಿಕೆ ಇರೋ ಕಡೆ ಹೋಗಿ, ಹಾಡಿಕೆ ಮಾಡುವ ಕಲಾವಿದರಿಗೆ ಕಾಣಿಕೆ ಸಲ್ಲಿಸಿ ಆಶೀರ್ವಾದ ತಗೊಳ್ತಾನೆ. ನನ್ನ ಬಗ್ಗೆ ಏನೂ ಹೇಳಬ್ಯಾಡ್ರಿ ಅಂದ್ರೂನು, ಹಾಡಿಕೆ ಆರಂಭಿಸುವ ಮುನ್ನ ಕಲಾವಿದರು `ರೇವಣಸಿದ್ಧ ದ್ಯಾಮಗೋಳ ಅವರು ತಮ್ಮ ಚಾನಲದಿಂದ ನಮ್ಮನ್ನ ಬೆಳಸ್ಯಾರ, ಬಾಳ ಪ್ರಚಾರ ಮಾಡ್ಯಾರ, ನಮಿಗೆ ಅವರ ಕಡೆಲಿಂದ ಬಾಳ ದುಡಿಮಿ ಆಗ್ಯಾತಿ, ಹಂಗಾಗಿ ಅವ್ರು ಬ್ಯಾಡ ಅಂದ್ರೂ ನಾವು ಅವರನ್ನ ನೆನಿಯೋದು ನಮ್ಮ ಧರ್ಮ ಐತಿ. ರೇವಣಸಿದ್ಧಪ್ಪರೋನ್ನ ದೇವರು ಆಯುಶ್ಯಾರೋಗ್ಯ ಕೊಟ್ ಚೆನ್ನಾಗಿ ಇಟ್ಟಿರಲಿ’ ಅಂತ ಹಾರೈಸುತ್ತಾರೆ. ಈ ಹುಡುಗ ನಾಚಿಕೆಯ ಮುದ್ದೆಯಾಗಿ ತಾನು ರೆಕಾರ್ಡ್ ಮಾಡುವುದರಲ್ಲಿ ತಲ್ಲೀನನಾಗುತ್ತಾನೆ.
ನಾನು ಗಮನಿಸಿದಂತೆ ಆಡಿಯೋ-ವೀಡಿಯೋ ಸಂಸ್ಥೆಗಳನ್ನು ಹೊರತುಪಡಿಸಿ ಹೀಗೆ ವಯಕ್ತಿಕ ನೆಲೆಯಲ್ಲಿ ಚಾನಲ್ ರೂಪಿಸಿ ಜನಪದ ಹಾಡಿಕೆ ವೀಡಿಯೋಗಳನ್ನು ಕೆಲವರು ಅಪ್ಲೋಡ್ ಮಾಡಿದ್ದಾರೆ. ಆದರೆ ಆ ಎಲ್ಲಾ ಚಾನಲ್ಲುಗಳಲ್ಲಿಯೇ ಅತಿಹೆಚ್ಚು ಚಂದಾದಾರಿಕೆ ಮತ್ತು ವೀಕ್ಷೆಣೆಯನ್ನು ದ್ಯಾಮಗೋಳ್ ಚಾನಲ್ ಹೊಂದಿದೆ. ಹಿಂದೆ ಆಡಿಯೋ ರೆಕಾರ್ಡ್ ಆಗಿದ್ದ ಕ್ಯಾಸೆಟ್‍ಗಳನ್ನು ತೆಗೆದುಕೊಂಡು, ಆ ಕ್ಯಾಸೆಟ್‍ನಲ್ಲಿ ಹಾಡಿದ ಕವಿಗಳ ಒಪ್ಪಿಗೆ ಪಡೆದು, ಕ್ಯಾಸೆಟ್ ಹಾಡಿಕೆಯನ್ನು ಎಂಪಿ-3 ಆಡಿಯೋ ಫೈಲನ್ನಾಗಿ ವರ್ಗಾಯಿಸಿಕೊಂಡು ಆ ನಂತರ, ಎಂ.ಪಿ-3 ಪೈಲನ್ನು ವೀಡಿಯೋವಾಗಿ ರೂಪಾಂತರಿಸಲಾಗುತ್ತದೆ. ಇಂತಹ ಸಂದರ್ಭದಲ್ಲಿ ಕೆಸೆಟ್ಟಿನ ಪೋಸ್ಟರ್‍ನ್ನೆ ವೀಡಿಯೋದ ಕವರ್ ಫೋಟೋವಾಗಿ ಬಳಸಲಾಗುತ್ತದೆ. ಆಗ ಕ್ಯಾಸೆಟ್ ಮೇಲಿನ ಮುಖ ಹೊದಿಕೆ, ಅದೇ ಹಾಡುಗಳ ವೀಡಿಯೋ ಮುಖಹೊದಿಕೆಯಾಗಿ ಬದಲಾಗುತ್ತದೆ.
ಹೀಗೆ ರೂಪಾಂತರಿಸುವಾಗ ಹಾಡಿಕೆ ಮಾಡಿದ ಕವಿಯ ಫೋಟೋ ಮತ್ತು ವೀಡಿಯೋದಲ್ಲಿಯೇ ಕವಿಯ ಮೊಬೈಲ್ ನಂಬರನ್ನು ಕೊಡಲಾಗುತ್ತದೆ. ಯೂಟೂಬಲ್ಲಿ ಈ ಹಾಡು ಕೇಳಿದವರು ಇಷ್ಟವಾದರೆ ಹಾಡಿಕೆ ತಂಡಕ್ಕೆ ಪೋನಚ್ಚಿ ಮಾತಾಡಿಸಿ ತಮ್ಮ ಊರಿನ ಕಾರ್ಯಕ್ರಮಕ್ಕೆ ಆಹ್ವಾನಿಸುತ್ತಾರೆ. `ಮೊದಲಾದರೆ ಹೀಗೆ ರೆಕಾರ್ಡ್ ಮಾಡಬೇಕಾದರೆ ಜನಪದ ಕಲಾವಿದರನ್ನೇ ರೆಕಾರ್ಡಿಂಗ್ ಸ್ಟುಡಿಯೋಕ್ಕೆ ಕರೆಯಿಸಬೇಕಿತ್ತು. ಹೀಗೆ ರೆಕಾರ್ಡ್ ಮಾಡಲು ಸ್ವತಃ ಜನಪದ ಕಲಾವಿದರೆ ರೆಕಾರ್ಡಿಂಗ್ ಕಂಪನಿಗಳಿಗೆ ಹಣ ಕೊಟ್ಟದ್ದೂ ಇದೆ. ಈಗ ಹಾಗಿಲ್ಲ. ನಾವೇ ಹಾಡುವಲ್ಲಿಗೆ ಹೋಗಿ ರೆಕಾರ್ಡ್ ಮಾಡಿಕೊಂಡು ಬಂದು ಯೂಟೂಬಿಗೆ ಹಾಕುತ್ತೇವೆ. ನಾನು ಅಪ್ಲೋಡ್ ಮಾಡಿದ್ದಕ್ಕಿಂತ ಒಳ್ಳೆಯ ಹಾಡುಗಳು ಇದಾವ್ ಸರ್, ಅಂತವುಗಳನ್ನೆಲ್ಲಾ ಸಂಗ್ರಹಿಸಬೇಕು ಅಂತ ಆಸೆ ಇದೆ’ ಎಂದು ರೇವಣಸಿದ್ಧ ಹೇಳುತ್ತಾರೆ.
ಮುಂದುವರಿದು `ನಮ್ಮ ಚಾನಲ್ ಫೇಮಸ್ ಆಗಿರೋದ್ರಿಂದ, ನಮ್ಮ ಚಾನಲದಾಗ ಹಾಡು ಹಾಕಿದ್ರೆ ಹೆಚ್ಚು ಪ್ರಚಾರ ಆಗಿ ಹಾಡಿಕಿ ಆರ್ಡರ್ ಸಿಗುತ್ತೆ ಅಂತೇಳಿ ಕೆಲವೊಮ್ಮೆ ಜನಪದ ಕಲಾವಿದರೆ ನಮ್ಮ ಹಾಡ ಯೂಟೂಬದಾಗ ಬಿಡರಿ ಅಂತೇಳಿ ಹಣ ಕೊಡೋಕೆ ಬರ್ತಾರೆ. ಆದರೆ ನಾನು ಯಾವ ಕಲಾವಿದರಿಂದಲೂ ಹಣ ಪಡೆಯೋಲ್ಲ. ಯೂಟೂಬಿಂದ ನನ್ನ ಕೆಲಸಕ್ಕೆ ಒಂದಷ್ಟು ಹಣ ಕೊಡ್ತಾರೆ. ಹಾಗಾಗಿ ನಿಮ್ಮಿಂದ ಹಣ ನಾನು ತಗೊಳ್ಳಲ್ಲ ಎಂದು ಹೇಳುತ್ತೇನೆ’ ಎಂದು ತನ್ನ ವೃತ್ತಿನಿಷ್ಠೆಯನ್ನು ವಿವರಿಸುತ್ತಾರೆ.
ಕಲ್ಬುರ್ಗಿ, ಅಫಜಲಫುರ, ಬೆಳಗಾವಿ, ಬಿಜಾಪುರ, ಬಾಗಲಕೋಟೆ, ಮಹರಾಷ್ಟ್ರದ ಸಾಂಗಲಿ, ಜತ್ತ ಮೊದಲಾದ ಕಡೆಗಳ ಸುಮಾರು ಇನ್ನೂರಕ್ಕಿಂತ ಹೆಚ್ಚು ಜನಪದ ಹಾಡಿಕೆ ತಂಡಗಳು ರೇವಣಸಿದ್ಧ ಅವರಿಗೆ ಸಂಪರ್ಕವಿದೆ. ಶಿವರಾಯ ಮಾಸ್ತರ್, ಕಲ್ಮೇಶ, ಕೇದಾರ ಮಾಸ್ತರ್, ಗುರುಲಿಂಗ ಮಾಸ್ತರ ಸಂಕನಾಳ, ನಾಗೂರು ಲಕ್ಷ್ಮಣ, ಸುಮಿತ್ರಾ ಮುಗಳಿಹಾಳ, ಸಾವಿತ್ರಿ ಕಿರಣಗಿ, ಆಕಾಶ ಮನಗುಳಿ ಮುಂತಾದ ಜನಪ್ರಿಯ ಜನಪದ ಕವಿಗಳು ಪದಕಟ್ಟುವ ಬಗ್ಗೆ, ಹಾಡಿಕೆ ಬಗ್ಗೆ ರೇವಣಸಿದ್ಧ ಅಭಿಮಾನ ಇಟ್ಟುಕೊಂಡಿದ್ದಾರೆ.
ರೇವಣಸಿದ್ಧ ದ್ಯಾಮಗೋಳ ಒಂದು ಸಂಸ್ಥೆ, ವಿಶ್ವವಿದ್ಯಾಲಯ ಮಾಡಲಾರದಷ್ಟು ಕೆಲಸವನ್ನು ತಾವೊಬ್ಬರೆ ಮಾಡಿದ್ದಾರೆ. ಆಫ್‍ಲೈನಲ್ಲಿದ್ದ ನೂರಾರು ಅಜ್ಞಾತ ಜನಪದ ಕಲಾವಿದರನ್ನು ಆನ್‍ಲೈನ್ ಲೋಕಕ್ಕೆ ಪರಿಚಯಿಸಿದ್ದಾರೆ. ಎಷ್ಟೋ ಜನಪದ ಕಲಾ ತಂಡಗಳಿಗೆ ತಮ್ಮ ಚಾನಲ್ ಮೂಲಕ ಹಾಡಿಕೆಯ ಅವಕಾಶಗಳನ್ನು ಕಲ್ಪಿಸಿಕೊಟ್ಟು ನೆರವಾಗಿದ್ದಾರೆ. ಜಾನಪದ ಸಂಶೋಧಕರಿಗೆ/ಅಧ್ಯಯನಕಾರರಿಗೆ ಆಕರ ಒದಗಿಸಿದ್ದಾರೆ. ನನ್ನ ಪೋಸ್ಟ್ ಡಾಕ್ಟರಲ್ ಸಂಶೋಧನೆಯ ಭಾಗವಾಗಿ ಜನಪದ ಹಾಡಿಕೆ ಕೇಳುವಾಗಲೆ ನನಗೂ ರೇವಣಸಿದ್ಧ ಅವರು ಪರಿಚಯವಾದದ್ದು. ರೇವಣಸಿದ್ಧ ಅವರ ನಿರಂತರ ಶ್ರಮದ ಫಲವಾಗಿ ಯೂಟೂಬಿನಿಂದ ಒಂದಷ್ಟು ಹಣ ಸಂದಾಯವಾದರೂ, ಅದು ಅವರ ಶ್ರಮಕ್ಕೆ ಕಡಿಮೆಯೆ. ಕರ್ನಾಟಕ ಜಾನಪದ ವಿಶ್ವವಿದ್ಯಾಲಯವಾಗಲಿ, ಕರ್ನಾಟಕದ ಜಾನಪದ ಪರಿಷತ್ತಾಗಲಿ, ಜಾನಪದ ಅಕಾಡೆಮಿಯಾಗಲಿ ಇಂಥವರನ್ನು ಗುರುತಿಸಬೇಕಿದೆ.
ರೇವಣಸಿದ್ಧ ದ್ಯಾಮಗೊಳ ಅವರ ಯೂಟೂಬ್ ಚಾನಲ್ ಲಿಂಕ್: https://www.youtube.com/channel/UCCTGAmLzxdii90ObnCJH3SQ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ