ಗುರುತು ಬೇಕೆ ಗುರುತು
ದಿನ ಬೆಳಗಾದರೆ ಎಳೆಬಿಸಿಲಿನಲಿ ಮುತ್ತಿಟ್ಟು
ಬಿರುಬಿಸಿಲಿನಲಿ ಚುರುಕು ಮುಟ್ಟಿಸುವ ಸೂರ್ಯನಿಗೆ
ಹಾಲುಬೆಳದಿಂಗಳಲಿ ಒಲವ ಹಂಚುವ ಚಂದ್ರನಿಗೆ
ನನ್ನವರ ಪರಿಚಯವಿದೆ..
ಬೇಕಾದರೆ ಅವರಿಂದ ಗುರುತು ಪಡೆಯಿರಿ..
ನಾವು ಉಸಿರಾಡೋ ಗಾಳಿಯಲಿ
ಜಾತಿ ಧರ್ಮ ಲಿಂಗದೆಲ್ಲೆಯ ಮೀರಿ
ಎಲ್ಲರ ಉಸಿರೂ
ಬೆರೆತಿದೆ
ಗಾಳಿಯ ಕೊರಳಪಟ್ಟಿ ಹಿಡಿದು
ನನ್ನವರ ಗುರುತುಗಳ ಪತ್ತೆಹಚ್ಚಿರಿ..
ನಿಮ್ಮದೇ ಸಿಮೆಂಟ್ ಕಾಂಕ್ರೇಟಿನ ಹೈವೇ ಕೆಳಗೆ
ಅಜ್ಜಿ ಮುತ್ತಜ್ಜಿಯರು ನಡೆದಾಡಿದ
ಹೆಜ್ಜೆಗಳು ಅಪ್ಪಚ್ಚಿಯಾಗಿವೆ..
ನಮ್ಮ ಪೂರ್ವಜರ
ಗುರುತುಗಳಿಗಾಗಿ
ಹೈವೆಗಳನ್ನೆಲ್ಲ ಅಗೆಯುವ ಗುತ್ತಿಗೆ
ಯಾರಿಗೆ ಕೊಡುತ್ತೀರಿ?
ಮನೆಯ ಗೋಡೆಗೆ
ಕಾಲಕಾಲಕ್ಕೆ ಬಳಿದ ಸುಣ್ಣದ ಪದರುಗಳಲ್ಲಿ
ಅಚ್ಚಾದ ಚರಿತ್ರೆಯ ಪುಟಗಳ ನೀವು ಓದಬೇಕು..
ಮೊದಲು ಅವರದ್ದೇ ಭಾಷೆಯ
ಸಂಕೇತಗಳು ನಿಮಗೆ ತಿಳಿದಿರಬೇಕು.
ಭಾರತವೆಂಬ
ಬ್ಲಡ್ ಬ್ಯಾಂಕಿನ ರಕ್ತದ
ಕಣಕಣಗಳಲಿ
ಧರ್ಮದ ಗುರುತು ಪತ್ತೆಹಚ್ಚಲು ಸೋತ ನೀವು
ದೇಶದ ಗಡಿರೇಖೆಯಲ್ಲಿ ನಿಂತು
ಲೋಕದ ಜನರಿಗೆ ಪ್ರೀತಿ ಹಂಚುವ
ನಮ್ಮನ್ನು ದೇಶಬ್ರಷ್ಟರೆಂದಿರಿ..
ಕಡೆಯದಾಗಿ..
ನನ್ನವರ ಬೆವರಹನಿಗಳು ಹಾವಿಯಾಗಿ
ಮೋಡಕಟ್ಟಿ ಮಳೆಯಾಗಿ ಸುರಿದಿವೆ...
ಬಿದ್ದ ಮಳೆ ನೀರಲ್ಲಿ ಕಲಸಿಹೋದ
ಗುರುತುಗಳು ಬೇಕಿದ್ದರೆ ಹುಡುಕಿಕೊಳ್ಳಿ...
ಗುರುತು ಬೇಕೆ ಗುರುತು
-ಅರುಣ್ ಜೋಳದಕೂಡ್ಲಿಗಿ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ