ಅನು: ಶಿವಸುಂದರ್
ತಮಿಳುನಾಡಿನಲ್ಲಿ ಉಂಟಾಗಿರುವ ರಾಜಕೀಯ ಶೂನ್ಯವನ್ನು ತುಂಬಲು ಇಬ್ಬರು ಚಿತ್ರನಟರು ಮುಂದೆ ಬಂದಿದ್ದರೂ ಆ ರಾಜ್ಯದ ರಾಜಕೀಯ ಅನಿಶ್ಚತೆ ಮಾತ್ರ ಹಾಗೆಯೇ ಮುಂದುವರೆದಿದೆ.
ಅಖಿಲ ಭಾರತ ದ್ರಾವಿಡ ಮುನ್ನೇಟ್ರ ಕಳಗಂನ ನಾಯಕಿ ಮತ್ತು ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜೆ. ಜಯಲಲಿತಾ ಅವರ ನಿಧನದಿಂದಾಗಿ ಮತ್ತು ದ್ರಾವಿಡ ಮುನ್ನೇಟ್ರ ಕಳಗಂನ ಹಿರಿಯ ನಾಯಕ ೯೦ ವರ್ಷದ ಎಂ. ಕರುಣಾನಿಧಿಯವರು ನಿಧಾನಕ್ಕೆ ಹಿನ್ನೆಲೆಗೆ ಸರಿಯುತ್ತಿರುವುದರ ಪರಿಣಾಮದಿಂದಾಗಿ ಕಳೆದೆರಡು ವರ್ಷಗಳಿಂದ ತಮಿಳುನಾಡಿನ ರಾಜಕೀಯದಲ್ಲಿ ದೊಡ್ಡ ಕೋಲಾಹಲವೆದ್ದಿದೆ. ಇದು ತಮಿಳುನಾಡಿನ ರಾಜಕಿಯದಲ್ಲಿ ಒಂದು ನಿರ್ವಾತವನ್ನು ಉಂಟುಮಾಡಿದೆ. ಬಹಳಕಾಲದಿಂದಲೂ ಸಂಭವನೀಯ ರಾಜಕೀಯ ನಾಯಕರನ್ನು ಹುಟ್ಟುಹಾಕುವ ಒಂದು ಸಿನಿಮಾ ರಂಗವನ್ನು ಹೊಂದಿರುವ, ನೈಜ ಜೀವನ ಮತ್ತು ಸಿನಿಮಾ ಜೀವನದ ನಡುವಿನ ಅತ್ಯಂತ ತೆಳುವಾಗಿರುವ ಈ ರಾಜ್ಯದಲ್ಲಿ ಸಿನಿಮಾ ರಂಗದ ನಾಯಕರಾದ ರಜನೀಕಾಂತ್ ಮತ್ತು ಕಮಲ ಹಾಸನ್ ಅವರುಗಳು ಈ ಶೂನ್ಯವನ್ನು ತುಂಬುತ್ತೇವೆಂದು ಮುಂದೆಬಂದಿರುವ ವಿದ್ಯಮಾನ ಆಶರ್ಯಕರವಾಗಿಯೇನೂ ಕಾಣುತ್ತಿಲ್ಲ.
ಹಿಂದಿನಿಂದಲೂ ತಮಿಳುನಾಡಿನಲ್ಲಿ ಪ್ರಧಾನವಾಗಿ ಎರಡು ದ್ರಾವಿಡ ಪಕ್ಷಗಳ ನಡುವೆಯೇ ರಾಜಕೀಯ ಸ್ಪರ್ಧೆಯು ನಡೆಯುತ್ತಾ ಬಂದಿದೆ. ರಾಷ್ಟ್ರೀಯ ಪಕ್ಷಗಳು ಮತ್ತು ನಿರ್ದಿಷ್ಟ ಸಮುದಾಯಗಳ ಬೆಂಬಲ ಪಡೆದಿರುವ ಸ್ಥಳೀಯ ಪಕ್ಷಗಳು ಸಹ ಇವೆರೆಡರಲ್ಲಿ ಒಂದು ಪಕ್ಷದ ಬಾಲಂಗೋಚಿಯಾಗಿದ್ದುಕೊಂಡೇ ಚುನಾವಣೆಗಳನ್ನು ಎದುರಿಸಿವೆ. ಈ ದ್ರಾವಿಡ ಪಕ್ಷಗಳೂ ಅಪಾರ ಭ್ರಷ್ಟಾಚಾರದಿಂದ ಕೂಡಿದ ಹಲವು ಜನಪ್ರಿಯ ಯೋಜನೆಗಳ ಮೂಲಕ ಜನರ ಕೆಲವು ಅಗತ್ಯಗಳನ್ನು ಪೂರೈಸಿ ಜನತೆಯ ಪೋಷಕರೆಂಬ ಪಾತ್ರ ವಹಿಸುತ್ತಾ ತಮ್ಮ ಸ್ಥಾನವನ್ನು ಗಟ್ಟಿಗೊಳಿಸಿಕೊಳ್ಳುತ್ತ ಬಂದಿವೆ. ಕೇಂದ್ರದಲ್ಲಿ ಇವೆರಡು ಪಕ್ಷಗಳು ಕಾಂಗ್ರೆಸ್ಸನ್ನೋ ಅಥವಾ ಬಿಜೆಪಿಯನ್ನೋ ಬೆಂಬಲಿಸುತ್ತಾ ಬಂದರೂ ರಾಜ್ಯದಲ್ಲಿ ಮಾತ್ರ ಆ ರಾಷ್ಟ್ರೀಯ ಪಕ್ಷಗಳು ತಮ್ಮ ಅಧೀನವಾಗಿಯೇ ಉಳಿದುಕೊಳ್ಳುವಂತೆ ನೋಡಿಕೊಂಡಿವೆ. ಆದರೆ ಸರ್ಕಾರದಲ್ಲಿ ಯಾವುದೇ ದ್ರಾವಿಡ ಪಕ್ಷ ಅಧಿಕಾರಕ್ಕೆ ಬಂದರೂ ಅವರು ಮುಂದುವರೆಸಿಕೊಂಡುಬಂದ ಈ ಪೋಷಕ ಸರ್ಕಾರ-ಫಲಾನುಭವಿ ಪ್ರಜೆಯೆಂಬ ವ್ಯವಸ್ಥೆಯು ವಾಸ್ತವದಲ್ಲಿ ತನ್ನದೇ ಆದ ವೈರುಧ್ಯಗಳನ್ನೂ ಹೊಂದಿವೆ.
ಚಿತ್ರನಟರಾದ ವಿಜಯಕಾಂತ್ ಅವರು ೨೦೦೫ರಲ್ಲಿ ರಾಜಕೀಯವನ್ನು ಪ್ರವೇಶಿಸಿದರು. ಅವರ ದೇಸೀಯ ಮುರ್ಪೊಕ್ಕು ದ್ರವಿಡ ಕಳಗಂ ಪಕ್ಷವು ಮೊದಲ ಬಾರಿ ಚುನಾವಣೆಯಲ್ಲಿ ಸ್ಪರ್ಧಿಸಿದರೂ ಶಾಸನಸಭಾ ಮತ್ತು ಲೋಕಸಭಾ ಚುನಾವಣೆಗಳಲ್ಲಿ ಶೇ.೧೦ರಷ್ಟು ಮತಗಳನ್ನು ಪಡೆದುಕೊಂಡಿತ್ತು. ಇದು ದೊಡ್ಡ ಸಂಖ್ಯೆಯ ಮತದಾರರು ಬೇರೆ ಪರ್ಯಾಯವೊಂದನ್ನು ಅಪೇಕ್ಷಿಸುತ್ತಿದ್ದಾರೆಂಬುದನ್ನಂತೂ ಸೂಚಿಸುತ್ತದೆ. ತಮ್ಮ ಈ ಸಹಚರ ಒಂದು ದಶಕದ ಹಿಂದೆ ಸಾಧಿಸಿದ್ದನ್ನೇ ಈಗ ರಜನೀಕಾಂತ್ ಮತ್ತು ಕಮಲ ಹಾಸನ್ ಬೇರೆ ಮಾರ್ಗದ ಮೂಲಕ ಸಾಧಿಸಲು ಯತ್ನಿಸುತ್ತಿದ್ದಾರೆ. ರಜನೀಕಾಂತ್ ಅವರು ತಮಿಳು ಸಿನಿರಂಗದ ಸೂಪರ್ಸ್ಟಾರ್ ಆಗಿದ್ದು, ರಾಜ್ಯಾದ್ಯಾಂತ ದೊಡ್ಡ ಸಂಖ್ಯೆಯ ಅಭಿಮಾನಿಗಳ ಪಡೆಯನ್ನು ಹೊಂದಿದ್ದಾರೆ. ಅವರು ತಮ್ಮ ರಾಜಕೀಯ ಪ್ರವೇಶದ ಸಾಧ್ಯತೆಯನ್ನು ಉದ್ದಕ್ಕೂ ತೆರೆದೆರಿಸಿಕೊಂಡೇ ಬಂದಿದ್ದಾರೆ. ೧೯೯೬ರಲ್ಲಿ ಎಐಡಿಎಂಕೆಯ ಜಯಲಲಿತಾ ಅವರು ಮುಖ್ಯಮಂತ್ರಿಯಾಗಿ ಮೊದಲ ಅವಧಿ ಪೂರೈಸಿದ ಸಮಯದಲ್ಲಿ ಅವರ ಸರ್ಕಾರದ ಭ್ರಷ್ಟಾಚಾರ ಮತ್ತು ಅತಿರೇಕಗಳ ವಿರುದ್ಧ ರಜನೀಕಾಂತ್ ಅವರು ಬಹಿರಂಗವಾಗಿ ನಿಲುವು ತೆಗೆದುಕೊಂಡಿದ್ದರು. ಆದರೆ ಅವರೆಂದೂ ಔಪಚಾರಿಕವಾಗಿ ರಾಜಕಿಯಕ್ಕೆ ಧುಮುಕಲಿಲ್ಲ. ಇತ್ತೀಚಿನ ದಿನಗಳಲ್ಲಿ ತಮ್ಮ ಆಧ್ಯಾತ್ಮಿಕತೆ ಮತ್ತು ವೈಯಕ್ತಿಕ ಜನಪ್ರಿಯತೆಯನ್ನು ಆಧರಿಸಿ ರಾಜಕೀಯ ರಂಗಕ್ಕೆ ಹೊಸ ಆಯಾಮವನ್ನು ಕೊಡುವುದರ ಬಗ್ಗೆ ತೀವ್ರವಾದ ಆಸಕ್ತಿಯನ್ನು ಪ್ರದರ್ಶಿಸುತ್ತಿದ್ದಾರೆ. ಅವರ ಈ ವೈಯಕ್ತಿಕ ನೆಲೆಯ ಧಾರ್ಮಿಕ ನಿಲುವು ಮತ್ತು ನಾಯಕತ್ವದ ಗುಣಗಳು ಅವರನ್ನು ಬಲಪಂಥೀಯ ಶಕ್ತಿಗಳಿಗೆ ಆಪ್ಯಾಯಮಾನಗೊಳಿಸಿದೆ. ಆದ್ದರಿಂದಲೇ ಬಿಜೆಪಿಯು ಆವರನ್ನು ತಮ್ಮವರನ್ನಾಗಿಸಿಕೊಳ್ಳಲು ಹರಸಾಹಸ ಪಡುತ್ತಿದೆ. ಹಿಂದೂತ್ವ ರಾಜಕಾರಣಕ್ಕೆ ಹೆಚ್ಚು ಬೆಂಬಲಿಗರಿಲ್ಲದ ತಮಿಳುನಾಡಿನಲ್ಲಿ ಈ ಪ್ರಯತ್ನ ಹೆಚ್ಚೇನೂ ಯಶಸ್ವಿಯಾಗಿಲ್ಲ.
ಆದರೆ ರಜನೀಕಾಂತ್ ಅವರು ಬಿಜೆಪಿಯೊಡನೆ ಮೈತ್ರಿಯ ಬಗ್ಗೆಯಾಗಲಿ, ಅಥವಾ ರಾಜಕೀಯ ಸಾಮೀಪ್ಯದ ಬಗ್ಗೆಯಾಗಲೀ ಯಾವ ಸೂಚನೆಯನ್ನೂ ಕೊಡದೆ ತಮ್ಮ ಘೋಷಣೆಗಳನ್ನು ಕೇವಲ ಉತ್ತಮ ಆಡಳಿತ ವೆಂಬ ಒಣಪದಪುಂಜಗಳಿಗೆ ಮಾತ್ರ ಸೀಮಿತಗೊಳಿಸಿಕೊಂಡಿದ್ದಾರೆ. ಮತ್ತು ಬರಲಿರುವ ಚುನಾವಣೆಗಳಲ್ಲಿ ತಮ್ಮ ಪಕ್ಷವು ೨೩೪ ಕ್ಷೇತ್ರಗಳಲ್ಲೂ ಸ್ಪರ್ಧಿಸಲು ಶಕ್ಯವಾಗುವಂತೆ ತಮ್ಮೆಲ್ಲ ಬೆಂಬಲವನ್ನು ನೀಡಬೇಕೆಂದು ಅಭಿಮಾನಿಗಳನ್ನು ಕೇಳಿಕೊಂಡಿದ್ದಾರೆ. ಈವರೆಗೆ ಅವರು ಯಾವ ವಿಷಯಗಳ ಬಗ್ಗೆಯೂ ಬಹಿರಂಗವಾದ ನಿಲುವು ತೆಗೆದುಕೊಂಡಿಲ್ಲ. ಮಾತ್ರವಲ್ಲ ಯಾವುದೇ ಸಿದ್ಧಾಂತವನ್ನೂ ಪ್ರತಿಪಾದಿಸುತ್ತಿಲ್ಲ. ಆದರೆ ಹೇಗೆ ಯಾವ ಸೈದ್ಧಾಂತಿಕ ಹಿನ್ನೆಲೆಯನ್ನೂ ಹೊಂದಿರದ ಎಂಜಿ ರಾಮಚಂದ್ರನ್ ಅವರು ಡಿಎಂಕೆ ಯಿಂದ ಹೊರಬಂದು ಗಟ್ಟಿಯಾದ ಎಐಡಿಎಂಕೆ ಪಕ್ಷವನ್ನು ಯಶಸ್ವಿಯಾಗಿ ಕಟ್ಟಿದರೋ ಆ ಮೇಲ್ಪಂಕ್ತಿಯನ್ನು ತಾವೂ ಸಹ ಅನುಸರಿಸುವ ಮಾತುಗಳನ್ನಾಡುತ್ತಿದ್ದಾರೆ. ಆದರೆ ರಜನೀಕಾಂತ್ ಅವರು ವ್ಯಕ್ತಿಪೂಜೆಯ ಸಂಸ್ಕೃತಿಯನ್ನು ಹುಟ್ಟುಹಾಕುತ್ತಿದ್ದು ಅದು ರಾಜಕೀಯವಾಗಿ ಬಿಜೆಪಿಗೆ ಅವಕಾಶ ಮಾಡಿಕೊಡಬಹುದೆಂಬ ಗುಮಾನಿ ದಟ್ಟವಾಗಿದೆ.
ಮತ್ತೊಂದೆಡೆ ಕಮಲ್ ಹಾಸನ್ ಅವರು ಅಪಾರ ಪ್ರತಿಭಾಶಾಲಿ ನಟನೆಂಬ ಗೌರವ ಸರ್ವವ್ಯಾಪಿಯಾಗಿದೆ. ಮತ್ತು ತೆರೆಯ ಮೇಲೆ ವಿವಿಧ ಬಗೆಯ ಪಾತ್ರಗಳನ್ನು ನಿರ್ವಹಿಸಿರುವ ಜನಪ್ರಿಯತೆಯೂ ಅವರಿಗಿದೆ. ಅವರಿಗೆ ರಜನೀಕಾಂತ್ಗೆ ಇರುವಷ್ಟು ಸಾರ್ವಜನಿP ಮಾನ್ಯತೆಯಿಲ್ಲದಿದ್ದರೂ ಅತ್ಯುತ್ತಮ ನಟನೆಂಬ ಗೌರವವಿದೆ. ಆದರೆ ಇತ್ತೀಚಿನವರೆಗೆ ಅವರು ರಾಜಕೀಯವನ್ನು ಪ್ರವೇಶಿಸುವ ಬಯಕೆ ತೋರಿರಲಿಲ್ಲ. ಆದರೂ ಈ ಹಿಂದೆ ಅವರು ದ್ರಾವಿಡ ಚಳವಳಿಯ ಪ್ರಾರಂಭದ ದಿನಗಳ ವೈಚಾರಿಕತೆ ಮತ್ತು ಪ್ರಗತಿಪರ ರಾಜಕರಾಣದ ಬಗೆಗಿನ ಸೈದ್ಧಾಂತಿಕ ನಿಲುವುಗಳನ್ನು ಬಹಿರಂಗವಾಗಿ ಬೆಂಬಲಿಸಿದ್ದಾರೆ. ಕಳೆದೊಂದು ವರ್ಷದಲ್ಲಿ ಅವರು ರಾಜಕೀಯವನ್ನು ಪ್ರವೇಶಿಸುವ ಬಗ್ಗೆ ಖಚಿತವಾಗಿ ಹೇಳುತ್ತಿದ್ದು ತಮ್ಮನ್ನು ತಾವು ಆಚರಣಯೋಗ್ಯ ರಾಜಕಾರಣದಲ್ಲಿ ನಂಬಿಕೆಯಿಟ್ಟಿರುವ, ರಾಜಕೀಯವಾಗಿ ಎಡವೂ ಅಲ್ಲದ , ಬಲವೂ ಅಲ್ಲದ ಮಧ್ಯಸ್ಥ ರಾಜಕಾರಣಿಯಾಗಿ ಬಿಂಬಿಸಿಕೊಳ್ಳಲು ಯತ್ನಿಸುತ್ತಿದ್ದಾರೆ. ಹಾಗು ತಮ್ಮ ಪಕ್ಷಕ್ಕೆ ಮಕ್ಕಳ್ ನೀತಿ ಮಯ್ಯಂ (ಜನತೆಯ ನ್ಯಾಯ ಕೇಂದ್ರ) ಎಂದು ಹೆಸರಿಟ್ಟಿದ್ದಾರೆ. ಆದರೆ ರಜನೀಕಾಂತ್ಗಿಂತ ಭಿನ್ನವಾಗಿ ಕಮಲ್ ಹಾಸನ್ ಅವರು ಕೋಮುವಾದದ ವಿರುದ್ಧ ಸ್ಪಷ್ಟ ನಿಲುವನ್ನು ತೆಗೆದುಕೊಂಡಿದ್ದಾರಲ್ಲದೆ ಬಿಜೆಪಿಯನ್ನು ವಿರೋಧಿಸುವುದಾಗಿಯೂ ಸ್ಪಷ್ಟಪಡಿಸಿದ್ದಾರೆ. ಕೃಷಿ ಬಿಕ್ಕಟ್ಟು, ನೀರು ಹಂಚಿಕೆ, ಹಾಗೂ ಪರಿಸರ ಸಂಬಂಧೀ ವಿಷಯಗಳ ಬಗ್ಗೆ ಕಮಲ್ ಹಾಸನ್ ಅವರು ಬಹಿರಂಗವಾಗಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದರೂ ನಿರಂತರವಾಗಿ ಯಾವುದೇ ಒಂದು ಸೈದ್ಧಾಂತಿಕ ನಿಲುವನ್ನು ವ್ಯಕ್ತಪಡಿಸದಂತೆ ಎಚ್ಚರಿಕೆ ವಹಿಸುತ್ತಿದ್ದಾರೆ.
ಇವೆಲ್ಲ ಏನೇ ಇದ್ದರೂ, ಜಯಲಲಿತಾ ಅವರ ಸಾವಿನ ನಂತರ ಎಐಡಿಎಂಕೆ ಪಕ್ಷದಲ್ಲಿ ಉಂಟಾಗಿರುವ ಗೊಂದಲ-ಅರಾಜಕತೆ ಮತ್ತು ಆಳುವ ಸರ್ಕಾರದ ವಿರುದ್ಧ ಹೆಚ್ಚುತ್ತಿರುವ ಜನರ ಆಕ್ರೋಶಗಳೇ ಈ ಇಬ್ಬರು ಚಿತ್ರ ತಾರೆಯರ ರಾಜಕೀಯ ಪ್ರವೇಶಕ್ಕೆ ಕಾರಣವಾದ ಪ್ರಮುಖ ಅಂಶಗಳಾಗಿವೆ. ಕರುಣಾನಿಧಿಯವರ ವಿಸ್ತರಿತ ಕುಟುಂಬದಲ್ಲೇ ತನ್ನ ಮುಂದಿನ ನಾಯಕತ್ವವನ್ನು ಅರಸುತ್ತಿರುವುದರಿಂದ ಡಿಎಂಕೆಗೆ ಕಳೆಗುಂದುತ್ತಿರುವ ಎಐಡಿಎಂಕೆಗೆ ಏಕಮಾತ್ರ ಪರ್ಯಾಯವಾಗಬಲ್ಲ ಅವಕಾಶವ ಇಲ್ಲವಾಗಿದೆ. ರಜನೀಕಾಂತ್ ಮತ್ತು ಕಮಲ ಹಾಸನ್ ಅವರು ಖಾಸಗಿಯಾಗಿ ಸ್ನೇಹಿತರಾಗಿದ್ದರೂ ತಾರಾಪಟ್ಟವನ್ನು ಪಡೆಯಲು ವಿಭಿನ್ನ ದಾರಿಗಳನ್ನು ಕ್ರಮಿಸಿದ್ದಾರೆ. ರಜನೀಕಾಂತ್ ಅವರು ತಮ್ಮ ವ್ಯಕ್ತಿತ್ವ ಹಾಗೂ ನಟನಾ ವೈಚಿತ್ರಗಳಿಂದ ತಾರಾಗಿರಿಯನ್ನು ಸಂಪಾದಿಸಿದರೆ ಕಮಲಹಾಸನ್ ಅವರು ತಮ್ಮ ನಟನಾ ಕೌಶಲ್ಯದ ಮೂಲಕ ಗಂಭೀರ ಚಿತ್ರರಸಿಕರ ಮನಗೆದ್ದರು. ಬಹಳ ಬೇಗ ಒಂದು ಮಧ್ಯಮ ಆದಾಯದ ಆರ್ಥಿಕತೆಯಾಗುವತ್ತ ದಾಪುಗಾಲಿಡುತ್ತಾ ತನ್ನೆಲ್ಲಾ ಸಾಮರ್ಥ್ಯಗಳನ್ನು ದುಡಿಸಿಕೊಳ್ಳಲು ಅತ್ಯಗತ್ಯವಾಗಿ ಬೇಕಿರುವ ರಾಜಕೀಯ ದಿಕ್ಕನ್ನು ಪಡೆದುಕೊಳ್ಳಲು ಹಾತೊರೆಯುತ್ತಿರುವ ಈ ರಾಜ್ಯದಲ್ಲಿ ಯಾರು ಯಶಸ್ವಿಯಾಗಲಿದ್ದಾರೆ ಎಂಬುದನ್ನಂತೂ ಕಾದು ನೋಡಬೇಕಿದೆ.
ಕೃಪೆ: Economic and Political Weekly, Mar
17, 2018. Vol. 53. No.11
(EPW ಅನುವಾದ ಯೋಜನೆಯ ಹೆಚ್ಚಿನ ಮಾಹಿತಿಗಾಗಿ: http://www.epw.in/translation )