ಅನು: ಶಿವಸುಂದರ್
Goolrukh Gupta
Goolrukh Gupta
ಧಾರ್ಮಿಕ ಸ್ವಾತಂತ್ರ್ಯವೆಂಬ ಮೂಲಭೂತ ಹಕ್ಕಿನ ಪರಿಧಿಯಲ್ಲಿ ಮಹಿಳೆಯ ಸ್ಥಾನಮಾನವೇನು?
ಪ್ರಚಲಿತದಲ್ಲಿರುವ ಧರ್ಮಗಳಲ್ಲಿನ ಹಲವಾರು ಆಚರಣೆಗಳು ಆ ಧರ್ಮವನ್ನು ಆಚರಿಸುವ ಮಹಿಳೆಯರನ್ನು ಅಸಮಾನವಾಗಿಯೂ ಮತ್ತು ತಾರತಮ್ಯದಿಂದಲೂ ಕಾಣುತ್ತವೆ. ಆದರೆ ಮತ್ತೊಂದು ಧರ್ಮೀಯನನ್ನು ಮದುವೆಯಾದ ಕಾರಣಕ್ಕೆ ಆ ಮಹಿಳೆಯು ಹಿಂದಿನಿಂದ ಆಚರಿಸುತ್ತಿದ್ದ ಧರ್ಮವನ್ನು ಅನುಸರಿಸುವ ಹಕ್ಕನ್ನು ಕಿತ್ತುಕೊಳ್ಳುವಂಥ ಮಹಿಳಾದ್ವೇಷೀ ಕ್ರಮವು ಮಹಿಳೆಗೆ ಸಮಾನತೆಯ ಹಕ್ಕನ್ನು ಮತ್ತು ಸ್ವಾಯತ್ತತೆಯನ್ನು ನೀಡುವ ಸಂವಿಧಾನದ ಆಶಯಗಳಿಗೆ ತದ್ವಿರುದ್ಧವಾದ ನಡೆಯೇ ಆಗಿರುತ್ತದೆ.
ಇಂಥ ಒಂದು ಪ್ರಕರಣವು ಗೂರ್ಲುಕ್ ಗುಪ್ತಾ ಎಂಬ ಪಾರ್ಸಿ ಮಹಿಳೆಯು ಒಬ್ಬ ಪಾರ್ಸಿಯಲ್ಲದ ಪುರುಷನನ್ನು ಮದುವೆಯಾದಾಗ ಸಂಭವಿಸಿದೆ. ಮದುವೆಯ ನಂತರವು ಪಾರ್ಸಿ ಶ್ರದ್ಧೆಯನ್ನು ಅನುಸರಿಸಲು ವಲ್ಸಾಡ್ನಲ್ಲಿರುವ ಧಾರ್ಮಿಕ ಸಂಸ್ಥೆಯು ಅಡ್ಡಿಪಡಿಸುತ್ತಿದೆಯೆಂದು ಆಕೆ ಗುಜರಾತಿನ ಹೈಕೋರ್ಟಿನಲ್ಲಿ ದಾವೆಯೊಂದನ್ನು ಸಲ್ಲಿಸಿದ್ದರು. ಅದನ್ನು ಗುಜರಾತಿನ ಹೈಕೋರ್ಟು ೨೦೧೨ರಲ್ಲಿ ವಜಾ ಮಾಡಿತು. ಆಕೆ ೧೯೫೪ರ ವಿಶೇಷ ವಿವಾಹ ಕಾಯಿದೆಯಡಿ ಒಬ್ಬ ಪಾರ್ಸಿಯೇತರ ಪುರುಷನನ್ನು ಮದುವೆಯಾಗಿರುವುದರಿಂದ ಆಕೆಯು ತನ್ನ ಗಂಡನ ಧರ್ಮದವಳೇ ಆಗಿರುತ್ತಾಳೆಂದು ಭಾವಿಸಲಾಗುತ್ತದೆ ಮತ್ತು ಹಾಗೆಯೇ ಪರಿಗಣಿಸಲಾಗುತ್ತದೆ ಎಂದು ನ್ಯಾಯಾಲಯವು ತನ್ನ ತೀರ್ಪಿನಲ್ಲಿ ಹೇಳಿತ್ತು. ಮತ್ತೊಂದು ರೀತಿಯಲ್ಲಿ ಹೇಳುವುದಾದರೆ ನ್ಯಾಯಾಲಯವು ಈ ಆದೇಶದ ಮೂಲಕ ಭಾರತದ ಸಂವಿಧಾನವು ಖಾತರಿಗೊಳಿಸಿರುವ ಧಾರ್ಮಿಕ ಸ್ವಾತಂತ್ರ್ಯದ ಮೂಲಭೂತ ಹಕ್ಕನು ಆಕೆಗೆ ನಿರಾಕರಿಸಿತು.
ಅಷ್ಟು ಮಾತ್ರವಲ್ಲದೆ ಎಲ್ಲಿಯತನಕ ಈಗಿರುವ ಕಾಯಿದೆಗೆ ವ್ಯತಿರಿಕ್ತವಾದ ಕಾಯಿದೆಯು ಜಾರಿಯಾಗುವುದಿಲ್ಲವೋ ಅಲ್ಲಿಯವರೆಗೆ ಮಹಿಳೆಯ ಧಾರ್ಮಿಕ ಅಸ್ಮಿತೆಯು ಆಕೆಯ ಗಂಡನ ಧಾರ್ಮಿಕ ಅಸ್ಮಿತೆಯಲ್ಲಿ ಲೀನವಾಗುತ್ತದೆ ಎಂದು ಪ್ರತಿಪಾದಿಸಿತ್ತು. ಹಾಗೂ ಸೂಕ್ತ ನ್ಯಾಯಾಲಯವೊಂದು ಆಕೆ ಮದುವೆಯಾದ ನಂತರವೂ ಪಾರ್ಸಿ ಧರ್ಮವನ್ನೇ ಅನುಸರಿಸುತ್ತಿದ್ದಳೆಂದು ನೀಡುವ ಧೃಢೀಕರಣದ ಮೂಲಕ ಮಾತ್ರ ಆಕೆಯು ಪಾರ್ಸಿ ಸ್ಥಾನಮಾನವನ್ನು ಅಗ್ರಹಿಸಬಹುದೆಂದು ಘೋಷಿಸಿತು. ೧೯೫೪ರ ವಿಶೇಷ ವಿವಾಹ ಕಾಯಿದೆ ಬಗ್ಗೆ ಹೈಕೋರ್ಟಿನ ಈ ಅಸಂಬದ್ಧ ವ್ಯಾಖ್ಯಾನವು ಈಗಾಗಲೇ ಹಳತಾಗಿರುವ ವಿಲೀನ ಸಿದ್ಧಾಂತದಿಂದ ಹುಟ್ಟಿಕೊಂಡಿದೆ. ಅದರ ಪ್ರಕಾರ ಮಹಿಳೆಯೊಬ್ಬಳು ಮದುವೆಯಾದ ನಂತರ ಆಕೆಯ ಕಾನೂನಾತ್ಮಕ ಅಸ್ಮಿತೆಯು ಆಕೆಯ ಗಂಡನ ಅಸ್ಮಿತೆಯಲ್ಲಿ ವಿಲೀನಗೊಳ್ಳುತ್ತದೆ. ಹೀಗಾಗಿ ಮದುವೆಯ ನಂತರ ಗಂಡ ಮತ್ತು ಹೆಂಡತಿಯನ್ನು ಒಂದೇ ವ್ಯಕ್ತಿಯಾಗಿ ಪರಿಗಣಿಸಲಾಗುತ್ತದೆ. (ಆದರೆ ಎಲ್ಲಾ ಉದ್ದೇಶಗಳಿಗೆ ಮತ್ತು ವ್ಯವಹಾರಗಳಿಗೆ ಪುರುಷನನ್ನೇ ವ್ಯಕ್ತಿಯಾಗಿ ಪರಿಗಣಿಸಲಾಗುತ್ತದೆ.)
ವಾಸ್ತವವಾಗಿ ೧೯೫೪ರ ವಿಶೇಷ ವಿವಾಹ ಕಾಯಿದೆ ಜಾರಿಗೆ ಬಂದದ್ದೇ ವಿವಿಧ ಧರ್ಮಗಳನ್ನು ಅನುಸರಿಸುವ ಗಂಡು ಮತ್ತು ಹೆಣ್ಣು ಮದುವೆಯಾದ ನಂತರವೂ ತಮ್ಮ ತಮ್ಮ ಧರ್ಮವನ್ನು ಬಿಟ್ಟು ಕೊಡದೆ ಅಥವಾ ಮತಾಂತರಗೊಳ್ಳದೆ ಕಾನೂನಾತ್ಮಕವಾಗಿ ಮದುವೆ ಮಾಡಿಕೊಳ್ಳಲು ಅನುವು ಮಾಡಿಕೊಡಲೆಂದು. ಇದು ೧೮೭೨ರ ಕಾಯಿದೆಗೆ ಬದಲಾಗಿ ಜಾರಿಯಾಗಿತ್ತು. ಏಕೆಂದರೆ ಹಳೆಯ ಕಾಯಿದೆಯು ವಿಭಿನ್ನ ಧರ್ಮೀಯರು ಮದುವೆಯಾಗಬೇಕೆಂದರೆ ಇಬ್ಬರೂ ತಮ್ಮ ತಮ್ಮ ಧರ್ಮಗಳನ್ನು ತೊರೆಯುವುದನ್ನು ಕಡ್ಡಾಯಗೊಳಿಸಿತ್ತು. ೧೯೫೪ರ ಕಾಯಿದೆಯು ವ್ಯಕ್ತಿಗೆ-ಮಹಿಳೆಗೆ-ತನ್ನ ಧಾರ್ಮಿಕ ಅನನ್ಯತೆಯನ್ನು ಉಳಿಸಿಕೊಳ್ಳುವ ಹಕ್ಕನ್ನು ನೀಡುತ್ತದೆ. ಈಗಾಗಲೇ ಹಲವಾರು ಪ್ರಕರಣಗಳಲ್ಲಿ ವ್ಯಾಖ್ಯಾನಿಸಲ್ಪಟ್ಟಿರುವ ಕಾನೂನುಗಳು ಸ್ಪಷ್ಟಪಡಿಸುವಂತೆ ಹೇಗೆ ಮತ್ತೊಂದು ಜಾತಿಗೆ ಸೇರಿದವರನ್ನು ಮದುವೆಯಾದ ಕೂಡಲೇ ಮಹಿಳೆಯ ಜಾತಿಯು ಬದಲಾಗುವುದಿಲ್ಲವೋ ಅದೇ ರೀತಿ ಮಹಿಳೆಯು ಸ್ವ ಇಚ್ಚೆಯಿಂದ ತನ್ನ ಧರ್ಮವನ್ನು ತೊರೆಯದ ಹೊರತು ಮದುವೆಯಾದ ಮಾತ್ರಕ್ಕೆ ಆಕೆಯ ಧಾರ್ಮಿಕ ಅನನ್ಯತೆ ಬದಲಾಗುವುದಿಲ್ಲ. ಸಂವಿಧಾನದಲ್ಲಿ ಉಲ್ಲೇಖಿಸಲ್ಪಟ್ಟಿರುವ ಧರ್ಮನಿರಪೇಕ್ಷತೆಯ ದ್ರವ್ಯವನ್ನು ಒಡಲಲ್ಲಿಟ್ಟುಕೊಂಡಿರುವ ಹಲವು ಕಾಯಿದೆಗಳಂತೆ ಈ ಕಾಯಿದೆಯೂ ಸಹ ವ್ಯಕ್ತಿಯ ಹಕ್ಕುಗಳನ್ನು ಎತ್ತಿಹಿಡಿಯಲು ಧರ್ಮ ಮತ್ತು ಮದುವೆಯೆಂಬ ಸಂಸ್ಥೆಗಳನ್ನು ಪ್ರತ್ಯೇಕಿಸಿ ಪರಿಗಣಿಸಲು ಅವಕಾಶಮಾಡಿಕೊಡುತ್ತದೆ. ಸನಾತನ ಕಾಲದ ವೈಯಕ್ತಿಕ ಕಾನೂನುಗಳ ಹಿನ್ನೆಲೆಯಲ್ಲಿ ಈ ಕಾಯಿದೆಗೆ ಮತ್ತಷ್ಟು ಮಹತ್ವವಿದೆ.
ಗುಪ್ತಾ ಅವರು ಈಗ ಸುಪ್ರೀಂ ಕೋರ್ಟಿನ ಮೊರೆ ಹೋಗಿದ್ದು ಬರಲಿರುವ ವಾರಗಳಲ್ಲಿ ಸುಪ್ರೀಂ ಕೋರ್ಟಿನ ಸಾಂವಿಧಾನಿಕ ಪೀಠ ಆಕೆಯ ವಾದವನ್ನು ಪರಾಮರ್ಶೆ ಮಾಡಲಿದೆ. ಒಂದು ಧಾರ್ಮಿಕ ಸಂಸ್ಥೆಯು ಒಬ್ಬ ವಿವಾಹಿತ ಮಹಿಳೆಯಾದ ಗೋರ್ಲುಕ್ ಗುಪ್ತಾ ಮೇಲೆ ದಂಡ ಮತ್ತು ನಿಷೇಧವನ್ನು ವಿಧಿಸಿರುವ ಈ ಪ್ರಕರಣವು, ಧರ್ಮ ಮತ್ತು ಮದುವೆಯೆಂಬ ಸಂಸ್ಥೆಗಳಲ್ಲಿ ಮಹಿಳೆಯು ಎದುರಿಸುವ ಅಸಮಾನತೆ, ಸ್ವಾತಂತ್ರ್ಯಹೀನತೆ ಮತ್ತು ಪೂರ್ವಗ್ರಹಗಳೆಷ್ಟೆಂಬುದರ ಸಣ್ಣ ಸೂಚನೆಯನ್ನಷ್ಟೇ ನೀಡಿದೆ.
ತ್ರಿವಳಿ ತಲಾಖ್ನಂಥ ಪ್ರಕರಣಗಳಲ್ಲಿ ಸುಪ್ರೀಂ ಕೋರ್ಟು ಮಹತ್ವದ ಮತ್ತು ಪ್ರಗತಿಪರವಾದ ನಿಲುವನ್ನು ತೆಗೆದುಕೊಳ್ಳುತ್ತ ವೈಯಕ್ತಿಕ ಕಾನೂನುಗಳಲ್ಲಿ ಸುಧಾರಣೆಗಳನ್ನು ತರುವೆಡೆ ಒತ್ತುನೀಡುತ್ತಿದ್ದರೂ (ಇಪಿಡಬ್ಲ್ಯೂ, ೨೬ ಆಗಸ್ಟ್ ೨೦೧೭), ಧರ್ಮ ಮತ್ತು ವಿವಾಹಿತ ಮಹಿಳೆಯರನ್ನು ಒಳಗೊಂಡ ಪ್ರಕರಣಗಳಲ್ಲಿ ಕೋರ್ಟುಗಳು ಮತ್ತೊಂದು ತುದಿಗೆ ವಾಲಿರುವುದೂ ಉಂಟು. ಕೇರಳದಲ್ಲಿ ಹಾದಿಯಾ ಎಂಬ ವಯಸ್ಕ ಮಹಿಳೆ ತನ್ನಿಚ್ಚೆಯಂತೆ ಮತ್ತೊಂದು ಧರ್ಮಕ್ಕೆ ಮತಾಂತರಗೊಂಡ ನಂತರ ತನ್ನಿಚ್ಚೆಯಂತೆ ಮದುವೆಯೂ ಆಗಿದ್ದಳು. ಆದರೂ ಕೇರಳ ಹೈಕೋರ್ಟು ಆ ಮದುವೆಯನ್ನು ರದ್ದುಗೊಳಿಸಿತಲ್ಲದೆ ವಯಸ್ಕಳಾಗಿದ್ದರೂ ಆ ಮಹಿಳೆಯನ್ನು ಬಲವಂತವಾಗಿ ಆಕೆಯ ಪೋಷಕರ ವಶಕ್ಕೆ ಒಪ್ಪಿಸಿದ್ದು (ಇಪಿಡಬ್ಲ್ಯೂ, ೨೬ ಆಗಸ್ಟ್ ೨೦೧೭) ನ್ಯಾಯಾಂಗದಲ್ಲಿರುವ ಪುರುಷಪ್ರಧಾನ ಮನೋಧರ್ಮಕ್ಕೆ ಕನ್ನಡಿ ಹಿಡಿದಿದೆ. ಗೋರ್ಲಕ್ ಗುಪ್ತ ಮತ್ತು ಹಾದಿಯ ಪ್ರಕರಣಗಳಲ್ಲಿ ನೀಡಲಾಗಿರುವ ಆದೇಶಗಳು ಮಹಿಳೆಯ ಸ್ವಾಯತ್ತತೆಯನ್ನು ಬುಡಮೇಲು ಮಾಡಿದೆ.
ಬಹಳ ಹಿಂದಿನಿಂದಲೂ ಮದುವೆ ಮತ್ತು ಧರ್ಮವೆಂಬ ಈ ಎರಡು ಸಂಸ್ಥೆಗಳೂ ಮಹಿಳೆಯರ ವಿಷಯದಲ್ಲಿ ವಿಶೇಷವಾಗಿ ದಮನಕಾರಿಯಾಗಿಯೇ ನಡೆದುಕೊಂಡುಬಂದಿದೆ. ಹೀಗಾಗಿ ತಮಗಾಗಿರುವ ಅನ್ಯಾಯವನ್ನು ಸರಿಪಡಿಸಲು ಮಹಿಳೆಯರು ನ್ಯಾಯಾಲಯದ ಮೊರೆಹೊಕ್ಕಾಗ ಲಿಂಗ ಸಮಾನತೆಯನ್ನು ರಕ್ಷಿಸುವುದು ನ್ಯಾಯಂಗದ ಕರ್ತವ್ಯವಾಗಬೇಕು.
ಮಹಿಳೆಯರ ಮತ್ತು ಅವರ ಸ್ವಾಯತ್ತತೆಯ ಪ್ರಶ್ನೆ ಎದುರಾದಾಗ ಯಾರೂ ವೈಯಕ್ತಿಕ ಕಾನೂನುಗಳನ್ನು ಮತ್ತು ಧಾರ್ಮಿಕ ಆದೇಶಗಳನ್ನು ಪ್ರಶ್ನಿಸುವುದಿಲ್ಲವೇಕೆ? ಹೀಗಾಗಿಯೇ ಗುಜರಾತ್ ಹೈಕೋರ್ಟು ಸಮಾಜದ ಒಟ್ಟಾರೆ ಹಿತಾಸಕ್ತಿಗಳ ದೃಷ್ಟಿಯಲ್ಲಿ ಮತ್ತು ಈ ಹಿಂದಿನಿಂದ ಬಂದ ಆಚರಣೆ ಮತ್ತು ಸಂಪ್ರದಾಯಗಳನ್ನು ಸರಿಯಾಗಿ ಪಾಲಿಸಿಕೊಂಡು ಹೋಗುವ ದೃಷ್ಟಿಯಿಂದಲೂ ಈ ಬಗೆಯ ಆದೇಶದ ಅಗತ್ಯವಿದೆಯೆಂದು ಹೇಳುತ್ತದೆ. ಧರ್ಮವು ಒಂದು ಸಾಮಾಜಿಕ ಸಂಸ್ಥೆಯೇ ಆಗಿದ್ದರೂ ಅದು ವ್ಯಕ್ತಿಗಳ ಆಳವಾದ ನಂಬಿಕೆ ಮತ್ತು ಶ್ರದ್ಧೆಗಳಿಗೆ ಸಂಬಂಧಪಟ್ಟ ವಿಷಯವೂ ಆಗಿದೆ. ಹೀಗಾಗಿ ಎಲ್ಲಿಯತನಕ ಮಹಿಳೆಯರ ಸ್ವಾಯತ್ತತೆಯು ಸಾರ್ವಜನಿಕ ಸುವ್ಯವಸ್ಥೆ, ನೈತಿಕತೆ ಮತ್ತು ಆರೋಗ್ಯಗಳಿಗೆ ಒಂದು ಆತಂಕ ಉಂಟು ಮಾಡುವುದಿಲ್ಲವೋ ಅಲ್ಲಿಯತನಕ ನಮ್ಮ ಸಂವಿಧಾನದ ೨೫ನೇ ಕಲಮು ಖಾತರಿಪಡಿಸುವಂತೆ ಎಲ್ಲಾ ವ್ಯಕ್ತಿಗಳೂ ಅಭಿವ್ಯಕ್ತಿಯ ಸ್ವಾತ್ಯಂತ್ರ್ಯವನ್ನೂ ಮತ್ತು ತಮ್ಮ ತಮ್ಮ ಧರ್ಮಗಳನ್ನು ಮುಕ್ತವಾಗಿ ಆಚರಿಸುವ, ಪ್ರತಿಪಾದಿಸುವ ಮತ್ತು ಪ್ರಚಾರ ಮಾಡುವ ಸ್ವಾತಂತ್ರ್ಯವನ್ನು ಸಮಾನವಾಗಿ ಹೊಂದಿರುತ್ತಾರೆ. ಮತ್ತು ಆ ಸ್ವಾತಂತ್ರ್ಯವೂ ಮಹಿಳೆಯರಿಗೂ ಅನ್ವಯವಾಗುತ್ತದೆ.
ಕೃಪೆ: Economic and Political Weekly,Oct 14, 2017.
Vol. 52. No. 41
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ