ಅನು: ಶಿವಸುಂದರ್
ಕೆಟಲೋನಿಯಾ ಬಿಕ್ಕಟ್ಟಿನಿಂದ ಇತರ ರಾಷ್ರಪ್ರಭುತ್ವಗಳು ಸಾಕಷ್ಟು ಪಾಠಗಳನ್ನು ಕಲಿಯುವುದಿದೆ.
ರಾಷ್ಟ್ರೀಯತಾ ಸಮಸ್ಯೆಯು ಯೂರೋಪಿನಲ್ಲಿ ಹೆಚ್ಚು ಕಡಿಮೆ ಸಂಪೂರ್ಣವಾಗಿ ಬಗೆಹರಿದಿದೆ ಎಂದೇ ಈವರೆಗೆ ಭಾವಿಸಲಾಗಿತ್ತು. ಯೂರೋಪೇತರ ಪ್ರಪಂಚದಲ್ಲಿ ಅದರಲ್ಲೂ ಯೂರೋಪಿನ ಮಾಜಿ ವಸಾಹತು ಮತ್ತು ಅರೆವಸಾಹತುಗಳಲ್ಲಿ ರಾಷ್ಟ್ರೀಯತೆಯ ಪ್ರಶ್ನೆಯು ಇನ್ನೂ ತೀವ್ರ ಹಿಂಸಾಚಾರ ಮತ್ತು ಸಂಘರ್ಷಗಳಿಗೆ ಕಾರಣವಾಗಿರುವುದು ಆ ದೇಶಗಳು ಹಿಂದುಳಿದಿರುವಿಕೆಗೆ ಸಾಕ್ಷ್ಯವೆಂಬಂತೆ ಅಂತರರಾಷ್ಟ್ರೀಯ ಮಾಧ್ಯಮಗಳು ಬಿತ್ತರಿಸುತ್ತಿದ್ದವು. ಸ್ಪೇನ್ ದೇಶದ ಈಶಾನ್ಯ ಪ್ರಾಂತ್ಯವಾದ ಕೆಟಲೋನಿಯಾದಲ್ಲಿ ನಡೆದ ಇತ್ತೀಚಿನ ಬೆಳವಣಿಗೆಗಳು ಈ ಐರೋಪ್ಯ ಮಿಥ್ಯೆಯನ್ನು ಸಂಪೂರ್ಣವಾಗಿ ನಾಶಗೊಳಿಸಿದೆ.
ಸ್ಪೇನಿನ ಸಾಂವಿಧಾನಿಕ ನ್ಯಾಯಾಲಯವನ್ನು ಮತ್ತು ಕೇಂದ್ರ ಸರ್ಕಾರವನ್ನು ಸಂಪೂರ್ಣವಾಗಿ ಉಲ್ಲಂಘಿಸಿ ಕೆಟಲೋನಿಯಾ ಪ್ರಾಂತ್ಯವು ೨೦೧೭ರ ಅಕ್ಟೋಬರ್ ೧ ರಂದು ತನ್ನ ಜನಕ್ಕೆ ಪ್ರತ್ಯೇಕ ರಾಷ್ಟ್ರ ಬೇಕೆ ಎಂಬ ಬಗ್ಗೆ ಜನಮತಗಣನೆ ನಡೆಸಿತು. ಕೂಡಲೇ ಸ್ಪೇನ್ ಪ್ರಭುತ್ವವು ಜನರ ಮೇಲೆ ದಮನ ಮಾಡಲು ಪ್ರಾರಂಭಿಸಿತು. ಹಾಗಿದ್ದರೂ ಅಸಂಖ್ಯಾತ ಜನ ತಮ್ಮ ಮತ ಚಲಾಯಿಸಲು ಮುಂದೆಬಂದರು. ಆದರೆ ಸ್ಪಾನಿಶ್ ಪೊಲೀಸರು ಶಾಂತಿಯುತವಾಗಿ ಮತದಾನ ನಡೆಸುತ್ತಿದ್ದ ಜನತೆಯ ಮೇಲೆ ದಾಳಿ ನಡೆಸಿ ನೂರಾರು ಜನರನ್ನು ಗಾಯಗೊಳಿಸಿದರು. ಇಷ್ಟಾದರೂ ಶೇ. ೪೨.೩ರಷ್ಟು ಜನ ಮತದಾನ ಮಾಡಿದರು ಮತ್ತು ಅವರಲ್ಲಿ ಶೇ.೯೦.೯ರಷ್ಟು ಜನ ಕೆಟಲೋನಿಯಾದ ಸ್ವಾತಂತ್ಯದ ಪರವಾಗಿ ಮತ ಚಲಾಯಿಸಿದ್ದರು. ಆದರೂ ಕೆಟಲೋನಿಯಾದೊಳಗಡೆಯೇ ಸ್ವತಂತ್ರ ಕೆಟಲೋನಿಯಾವನ್ನು ವಿರೋಧಿಸುವ ಜನರಿದ್ದು ಅವರು ಮತದಾನವನ್ನು ಬಹಿಷ್ಕರಿಸಿದ್ದರು. ಆದರೂ ಇದು ಕೆಟಲೋನಿಯಾ ರಾಷ್ಟ್ರೀಯತೆಗೆ ದಕ್ಕಿದ ಒಂದು ನೈತಿಕ ವಿಜಯವೇ ಆಗಿತ್ತು. ಮತ್ತೊಂದೆಡೆ ತನ್ನ ಹಿಂಸಾಚಾರಗಳ ಕಾರಣದಿಂದಾಗಿ ಸ್ಪೇನಿನ ಪ್ರಭುತ್ವ ಬಯಲುಗೊಂಡಿತ್ತು. ಈ ಹಿಂದೆ ವಸಾಹತು ವಿರೋಧಿ ರಾಷ್ಟ್ರೀಯತೆಗಳು ಅನುಸರಿಸಿದ್ದ ನಾಗರಿಕ ಅಸಹಕಾರಗಳ ಹಿಂದಿದ್ದ ತರ್ಕವೇ ಈಗಿನ ಸ್ಪೇನ್ ಸರ್ಕಾರವನ್ನು ತಲೆತಗ್ಗಿಸುವಂತೆ ಮಾಡಿತ್ತು. ತಮ್ಮ ವಸಾಹತು ಅಧಿಪತ್ಯವು ಹೇಗೆ ಕೊನೆಗೊಂಡಿತೆಂಬ ಇತಿಹಾಸವನ್ನೊಮ್ಮೆ ಐರೋಪ್ಯ ಪ್ರಭುತ್ವಗಳು ನೆನೆಸಿಕೊಳ್ಳುವುದು ಒಳಿತು.
ಸ್ಪೇನಿನ ಸರ್ವಾದಿಕಾರಿ ಫ್ರಾನ್ಸಿಸ್ಕೊ ಪ್ರಾನ್ಕೋನ ಫ್ಯಾಸಿಸ್ಟ್ ಆಳ್ವಿಕೆಯು ಜಾರಿಮಾಡಿದ್ದ ಭೀಕರ ದಮನಕಾಂಡಕ್ಕೆ ಪ್ರತಿಕ್ರಿಯೆಯಾಗಿ ಕೆಟಲೋನಿಯಾ ಜನರ ಸ್ವನಿರ್ಣಯಾಧಿಕಾರದ ಆಶೋತ್ತರಗಳು ಬಲಿಷ್ಠಗೊಂಡವು. ಫ್ರಾನ್ಕೋನ ಆಳ್ವಿಕೆಯು ಕೆಟಲಾನ್ ಭಾಷೆಯನ್ನು ನಿಷೇಧಿಸಿದ್ದು ಮಾತ್ರವಲ್ಲದೆ ಯಾವುದೇ ಬಗೆಯ ಕೆಟಲಾನ್ ಹೆಸರುಗಳನ್ನು ಬಳಸುವುದನ್ನೂ ಸಹ ನಿಷೇಧಿಸಿತ್ತು. ಆದರೆ ಆ ದಮನವೇ ಕೆಟಲನ್ನಿನ ಸಾಂಸ್ಕೃತಿಕ ಪುನರುತ್ಥಾನಕ್ಕೂ ದಾರಿಮಾಡಿಕೊಟ್ಟಿತು. ಸ್ಪಾನಿಷ್ ಭಾಷೆಯ ಹೇರಿಕೆಯನ್ನು ಪ್ರತಿರೋಧಿಸುತ್ತಾ ಕೆಟಲನ್ನರು ತಮ್ಮ ಭಾಷೆಯನ್ನು ಖಾಸಗಿಯಾಗಿ ಬಳಸುತ್ತಾ, ಬೆಳಸುತ್ತಾ ಒಂದು ಮಹಾನ್ ಸಾಂಸ್ಕೃತಿಕ ಮತ್ತು ಸಾಹಿತ್ಯಿಕ ಹಿರಿಮೆಗೆ ಕಾರಣರಾದರು. ಹೀಗಾಗಿ ಕಟೆಲನ್ ರಾಷ್ಟ್ರೀಯತೆಯು ಒಂದು ಪ್ರಬಲವಾದ ಸಾಂಸ್ಕೃತಿಕ ಮತ್ತು ಭಾಷಿಕ ರಾಷ್ಟ್ರೀಯತೆಯಾಗಿದೆ. ಫ್ರಾನ್ಕೋನ ಫ್ಯಾಸಿಸ್ಟ್ ಆಳ್ವಿಕೆಯಲ್ಲಿ ಕೆಟಲಾನ್ ಪ್ರಾಂತ್ಯವು ಅತ್ಯಂತ ಅಭಿವೃದ್ಧಿ ಹೊಂದಿ ಇಡೀ ಯೂರೋಪಿನಲ್ಲೇ ಸಂಪದ್ಭರಿತ ಪ್ರಾಂತ್ರ್ಯವಾಗಿ ಬೆಳೆದದ್ದೂ ಸಹ ನಿಜವೇ. ಫ್ಯಾಸಿಸ್ಟ್ ಆಳ್ವಿಕೆಯ ನಿಯಂತ್ರಣದಲ್ಲಿರುವ ಕೆಲವು ಪ್ರಾಂತ್ಯಗಳು ಹೀಗೆ ಅಭಿವೃದ್ಧಿ ಹೊಂದಿಬಿಡುವುದು ಒಮ್ಮೊಮ್ಮೆ ಸಂಭವಿಸಿಬಿಡುತ್ತದೆ. ಇದು ಕೆಟಲನ್ ರಾಷ್ಟ್ರೀಯವಾದಿಗಳಿಗೆ ತಾವು ಒಂದು ಸ್ವತಂತ್ರ ರಾಷ್ಟ್ರವಾಗಿ ಉಳಿದು ಬೆಳೆಯುವುದು ಸಾಧ್ಯವೆಂಬ ವಿಶ್ವಾಸವನ್ನು ಗಳಿಸಿಕೊಟ್ಟಿದೆ. ಆದರೆ ತಮ್ಮ ಪ್ರಾಂತ್ಯದ ಅಭಿವೃದ್ಧಿಯ ಫಲವನ್ನು ಸ್ಪೇನಿನ ಇತರ ಭಾಗಗಳೊಂದಿಗೆ ಹಂಚಿಕೊಳ್ಳಲು ತಯಾರಿಲ್ಲದ ಕೆಟಲನ್ನಿಗರ ಸ್ವಾರ್ಥವೇ ಕೆಟಲನ್ ರಾಷ್ಟ್ರೀಯತೆಯ ಹಿಂದಿರುವ ಏಕೈಕ ಪ್ರೇರಣೆಯೆಂಬ ಅಪಪ್ರಚಾರವೂ ಆ ಹೋರಾಟದ ಬಗ್ಗೆ ನಡೆಯುತ್ತಿದೆ. ಈ ಬಗೆಯ ಅಪಪ್ರಚಾರದಲ್ಲಿ ತೊಡಗಿರುವವರ ಹಿಂದಿನ ಉದ್ದೇಶವು ಅರ್ಥವಾಗುವಂಥದ್ದೇ. ಒಂದೆಡೆ ಕೆಟಲೋನಿಯಾವನ್ನು ಕಳೆದುಕೊಂಡರೆ ಸ್ಪೇನಿಗೆ ಬೃಹತ್ ಆರ್ಥಿಕ ಹಿನ್ನೆಡೆಯಾಗಲಿದೆ. ಮತ್ತೊಂದೆಡೆ ಐರೋಪ್ಯ ಒಕ್ಕೂಟ (ಇಯು)ದ ಇತರ ದೇಶಗಳಿಗಂತೂ ಕೆಟಲೋನಿನ ವಿಜಯ ತಮ್ಮ ತಮ್ಮ ದೇಶಗಳಲ್ಲಿ ಇದೇ ರೂಪದ ಹೋರಾಟಗಳನ್ನು ಹುಟ್ಟಿಹಾಕಿಬಿಡಬಹುದೆಂಬ ಆತಂಕವನ್ನೇ ಹುಟ್ಟುಹಾಕಿದೆ.
ಕೆಟಲನ್ ರಾಷ್ಟ್ರೀಯತೆಯ ಬಗೆಗಿನ ಜನಮತಗಣನೆಯನ್ನು ವಿರೋಧಿಸುತ್ತಿರುವವರು ಮಾಡುವ ಮುಖ್ಯವಾದ ಆರೋಪ ಅದು ಕಾನೂನು ಬಾಹಿರವೆಂಬುದು. ಇಂಥಾ ಜನಮತಗಣನೆಯನ್ನು ಒಂದು ರಾಷ್ಟ್ರೀಯ ಸರ್ಕಾರ ನಡೆಸಬಹುದೇ ವಿನಃ ಪ್ರಾದೇಶಿಕ ಸರ್ಕಾರಗಳಲ್ಲವೆಂಬ ತರ್ಕದ ಆಧಾರಲ್ಲಿ ಸ್ಪೇನಿನ ಸಾಂವಿಧಾನಿಕ ಕೋರ್ಟು ಈ ಜನಮತಗಣನೆಯನ್ನು ಕಾನೂನು ಬಾಹಿರವೆಂದು ಘೋಷಿಸಿತ್ತು. ಆದರೆ ಈ ವಾದಸರಣಿ ಮೇಲ್ನೋಟಕ್ಕೆ ಅತಾರ್ಕಿಕವಾಗಿಯೂ ಮತ್ತು ಹಾಸ್ಯಾಸ್ಪದವಾಗಿಯೂ ಇದೆ. ಈ ವಾದಸರಣಿ ಅತಾರ್ಕಿಕವೇಕೆಂದರೆ ಯಾವುದೇ ರಾಷ್ಟ್ರೀಯ ಪ್ರಭುತ್ವದ ಪ್ರಧಾನ ಲಕ್ಷ ಅದರ ಭೌಗೋಳಿಕ ಸಮಗ್ರತೆಯನ್ನು ಕಾಪಾಡಿಕೊಳ್ಳುವುದೇ ಆಗಿರುವಾಗ ಅಂಥ ಒಂದು ರಾಷ್ಟ್ರೀಯ ಸರ್ಕಾರ ತಾನೇ ವಿಘಟಿತಗೊಳ್ಳುವ ಕ್ರಮವನ್ನು ಕೈಗೊಳ್ಳುತ್ತದೆಂದು ನಿರೀಕ್ಷಿಸುವುದು ಮೂರ್ಖತನ. ಒಂದು ರಾಷ್ಟ್ರವಾಗಿ ರೂಪುಗೊಂಡು ಒಂದು ಪ್ರಭುತ್ವವನ್ನು ರೂಪಿಸಿಕೊಳ್ಳುವುದು ಜನತೆಯ ಪ್ರಾಥಮಿಕ ಹಕ್ಕು; ಅದು ಹಾಲಿ ಅಸ್ಥಿತ್ವದಲ್ಲಿರುವ ರಾಷ್ಟ್ರಪ್ರಭುತ್ವಗಳು ನೀಡುವುದಕ್ಕೆ ಮೊದಲಿಂದಲೂ ಅಸ್ಥಿತ್ವದಲ್ಲಿದ್ದು, ಯಾವ ಹಾಲೀ ರಾಷ್ಟ್ರಪ್ರಭುತ್ವಗಳು ಅಂಥ ಹಕ್ಕನ್ನು ಕೊಡುವುದಾಗಲೀ, ಕಿತ್ತುಕೊಳ್ಳುವುದಾಗಲೀ ಮಾಡಲು ಸಾಧ್ಯವಿಲ್ಲ.
ಈ ವಾದರಸರಣಿಯು ಹಾಸ್ಯಾಸ್ಪದವೇಕೆಂದರೆ ಅದು ರಾಷ್ಟ್ರೀಯ ಸರ್ಕಾರಗಳು ಸಂಘಟಿಸುವ ಎಲ್ಲಾ ಜನಮತಗಣನೆಗಳು ತನ್ನಂತೆ ತಾನೇ ಸರ್ವಮಾನ್ಯವೆಂಬ ತಿಳವಳಿಕೆಯನ್ನು ಹೊಂದಿದೆ. ಇತ್ತೀಚೆಗೆ ಬ್ರೆಕ್ಸಿಟ್ ವಿಷಯದಲ್ಲಿ ಯೂರೋಪ್ ಸ್ವತಃ ಎದುರಿಸಬೇಕಾದ ದ್ವಂದ್ವಗಳ ನಂತರವೂ ಈ ಮಾತುಗಳನ್ನಾಡುವುದು ಇನ್ನೂ ಹಾಸ್ಯಾಸ್ಪದವಾಗಿ ಕಾಣುತ್ತದೆ. ಬ್ರೆಕ್ಸಿಟ್ ಸಂದರ್ಭದಲ್ಲಿ, ಬ್ರಿಟನ್ನಿನ ಬಲಪಂಥೀಯ ಸರ್ಕಾರವು ಜನಮತಗಣನೆಗೆ ಮುನ್ನ ಹೊರದೇಶೀಯರ ಬಗ್ಗೆ ಸಾಕಷ್ಟು ಭೀತಿಯನ್ನು, ಜನಾಂಗೀಯವಾದವನ್ನೂ ಹುಟ್ಟುಹಾಕಿ. ಅದರ ಜೊತೆಜೊತೆಗೆ ಪ್ರತ್ಯೇಕಗೊಳ್ಳುವುದರ ಮೂಲಕ ಬ್ರಿಟನ್ ತನ್ನ ಹಳೆಯ ವೈಭವದ ವಸಾಹತುಶಾಹಿ ದಿನಗಳಿಗೆ ಮರಳಲಿದೆಯೆಂಬ ಉನ್ಮಾದವನ್ನು ಹುಟ್ಟುಹಾಕಿತು. ತದನಂತರ ಬ್ರಿಟನ್ ಪ್ರತ್ಯೇಕ ಸಾರ್ವಭೌಮಿ ರಾಷ್ಟ್ರವಾಗಬೇಕೋ ಅಥವಾ ಇತರ ಬಡ ಯೂರೋಪಿಯನ್ನರಿಂದ ಶೋಷಣೆಗೆ ತುತ್ತಾಗಬೇಕೋ ಎಂಬ ಬಗ್ಗೆ ಮತ ಚಲಾಯಿಸಲು ಕೇಳಲಾಯಿತು. ಒಂದು ಅತ್ಯಲ್ಪ ಬಹುಮತದದಿಂದ ಬ್ರಿಟನ್ ಬೇರೆಯಾಗಬೇಕು ಎಂಬ ತೀರ್ಪು ಬಂದ ತಕ್ಷಣ ಸರ್ಕಾರವು ಜನತೆಯ ಆಶಯವನ್ನು ಸಂಸತ್ತಿಗೆ ಕೂಡ ತೆಗೆದುಕೊಂಡುಹೋಗದೇ ಅಥವಾ ಒಂದು ಪ್ರಜಾತಾಂತ್ರಿಕ ತೀರ್ಮಾನ ಪ್ರಕ್ರಿಯೆಯಲ್ಲಿ ಅನುಸರಿಸಬೇಕಾದ ಯಾವುದೇ ಇತರ ಪರಿಶೀಲನೆಗೆ ಕಿಂಚಿತ್ತೂ ಒಳಪಡಿಸದೆ ನೇರವಾಗಿ ಜಾರಿಗೆ ತರಲು ತೀರ್ಮಾನಿಸಿತು. ಇದು ಈ ಇಡೀ ಪ್ರಕ್ರಿಯೆಯಲ್ಲಿ ಬ್ರಿಟನ್ನಿನಲ್ಲಿ ಕಾರ್ಯಶೀಲರಾಗಿದ್ದ ಇತರ ಯೂರೋಪಿಯನ್ನರು ಬ್ರಿಕ್ಸಿಟ್ ಅನ್ನು ನೋಡುವ ರೀತಿ. ಆದರೂ ಇವೆಲ್ಲವನ್ನು ಕಾನೂನುಬದ್ಧ ಮತ್ತು ಸರ್ವಮಾನ್ಯವೆಂದು ಪರಿಗಣಿಸಲಾಗುತ್ತದೆ. ಇದಕ್ಕೆ ಪ್ರತಿಯಾಗಿ, ಈ ಹಿಂದೆಯೇ ಹಲವಾರು ಬಾರಿ ಅನುಷ್ಠಾನವನ್ನು ಒತ್ತಾಯಿಸದ ಹಲವಾರು ಜನಮತಗಣನೆಗಳನ್ನು ನಡೆಸಿದ ನಂತರ ಕೆಟಲನ್ನರು ಈ ಬಾರಿಯ ಜನಮತಗಣನೆಯನ್ನು ನಡೆಸಿದರು. ಪೊಲೀಸ್ ದಮನದ ನಡುವೆಯೂ ಜನಮತಗಣನೆಯನ್ನು ಯಶಸ್ವಿಯಾಗಿ ನಡೆದರೂ ಅದನ್ನು ಕಾನೂನು ಬಾಹಿರವೆಂದು ನಗಣ್ಯಗೊಳಿಸಿರುವುದು ಮಾತ್ರವಲ್ಲದೆ ಯಾವುದೇ ಬಗೆಯ ರಾಜಕೀಯ ಮಾತುಕತೆಯನ್ನೂ ಸ್ಪೇನ್ ಸರ್ಕಾರ ನಿರಾಕರಿಸುತ್ತಿದೆ.
ಕೆಟಲೋನಿಯಾದ ಜನಮತಗಣನೆಯ ಸುತ್ತ ಹಲವು ವಿದ್ಯಮಾನಗಳು ಮುಂದುವರೆದಿವೆ. ಕೆಟಲಾನ್ ಸಂಸತ್ತು ಸ್ವಾತಂತ್ರ್ಯದ ಘೋಷಣೆಯನ್ನು ಅನುಮೋದಿಸಿದೆ. ಆದರೂ ಅದರ ಅಧ್ಯಕ್ಷ ಕಾರ್ಲ್ಸ್ ಪ್ಯೂಜ್ಡಿಮಾಂಟ್ ಅವರು ಸ್ಪೇನ್ ಆಡಳಿತದೊಂದಿಗೆ ಮಾತುಕತೆ ನಡೆಸಲೋಸುಗ ಸ್ವಾತಂತ್ರ್ಯ ಘೋಷಣೆಯ ತಾರ್ಕಿಕ ಮುನ್ನಡೆಗೆ ತಡೆಯೊಡ್ಡಿದ್ದಾರೆ. ಆದರೆ ಸ್ಪೇನಿನ ಪ್ರಧಾನಿ ಮಾರಿಯಾನೋ ರಜಯ್ ಅವರು ಕೆಟಲನ್ನರೊಂದಿಗೆ ಯಾವುದೇ ಮಾತುಕತೆಯನ್ನು ನಿರಾಕರಿಸಿರುವುದಲ್ಲದೆ ಸ್ಪೇನ್ ಸಂವಿಧಾನದ ೧೫೫ನೇ ಕಲಮನ್ನು ಬಳಸಿ ಕೆಟಲನ್ ಪ್ರದೇಶಿಕ ಸರ್ಕಾರವನ್ನು ರದ್ದುಗೊಳಿಸುವ ಬೆದರಿಕೆಯನ್ನೂ ಹಾಕಿದ್ದಾರೆ. ಸಂದರ್ಭವನ್ನು ಮುಂಜಾಗರೂಕತೆ ಮತ್ತು ಪ್ರಬುದ್ಧತೆಯಿಂದ ನಿಭಾಯಿಸದಿದ್ದರೆ ಬಿಕ್ಕಟ್ಟು ಉಲ್ಫಣಗೊಳ್ಳುವುದು ಖಂಡಿತ. ಐರೋಪ್ಯ ಒಕ್ಕೂಟವೂ ಸಹ ಈ ಜವಾಬ್ದಾರಿಯಿಂದ ಕೈತೊಳೆದುಕೊಳ್ಳುವುದು ಸಾಧ್ಯವಿಲ್ಲ. ತನ್ನ ಸದಸ್ಯರಾಷ್ಟ್ರಗಳ ಆಸಕ್ತಿ ಮತ್ತು ತೀರ್ಮಾನಗಳಿಗೆ ಮಾತ್ರ ಬದ್ಧವಾಗದೆ ತನ್ನ ಮುಂದೊಡಗನ್ನು ಮತ್ತು ಸ್ವಾಯತ್ತತೆಯನ್ನು ಈ ಸಂದರ್ಭದಲ್ಲಿ ಉಳಿಸಿಕೊಳ್ಳುವುದು ಐರೋಪ್ಯ ಒಕ್ಕೂಟಕ್ಕೆ ಅತ್ಯಗತ್ಯವಾಗಿದೆ.
ಕೆಟಲೋನಿಯಾ ಬಿಕ್ಕಟ್ಟು ಭಾರತದಂಥ ಯುವ ರಾಷ್ಟ್ರಗಳಿಗೆ ಒಂದು ಪ್ರಮುಖ ಪಾಠವನ್ನು ಕಲಿಸಿಕೊಡುತ್ತದೆ. ಒಂದು ರಾಷ್ಟ್ರೀಯ ಆಶೋತ್ತರಗಳನ್ನು ದಮನ ಮಾಡಿದ ಮಾತ್ರಕ್ಕೆ ಅವು ಕಣ್ಮರೆಯಾಗುವುದಿಲ್ಲ. ಯುರೋಪನ್ನು ಹಲವು ರಾಷ್ಟ್ರೀಯ ಎಲ್ಲೆಗಳಲ್ಲಿ ವಿಂಗಡಿಸಿ ಜನರನ್ನು ಆಯಾ ರಾಷ್ಟ್ರಗಳ ನಾಗರಿಕರೆಂದು ಗುಡ್ಡೆಹಾಕಿ ಶತಮಾನಗಳೇ ಕಳೆದರೂ ಜನತೆಯ ರಾಷ್ಟ್ರೀಯ ಆಶೋತ್ತರಗಳನ್ನು ಇನ್ನೂ ನಾಶಮಾಡಲಾಗಿಲ್ಲ; ಹಾಗೆಯೇ ಬೇರೆ ಕಡೆಗಳಲ್ಲೂ ಅದು ಸಾಧ್ಯವಾಗುವುದಿಲ್ಲ. ಹೀಗಾಗಿ ರಾಷ್ಟ್ರೀಯತೆಯೆಂಬುದು ಆಧುನಿಕ ರಾಷ್ಟ್ರಪ್ರಭುತ್ವಗಳ ಹುಟ್ಟಿಗೆ ಕಾರಣವಾಗುವ ಸಿದ್ಧಾಂತವಾಗಿರುವಷ್ಟು ಕಾಲ ಹಾಲಿ ಅಸ್ಥಿತ್ವದಲ್ಲಿರುವ ರಾಷ್ಟ್ರಪ್ರಭುತ್ವಗಳು ತಮ್ಮ ರಾಷ್ಟ್ರದೊಳಗೆ ಹುಟ್ಟುಕೊಳ್ಳುವ ರಾಷ್ಟ್ರೀಯವಾದಗಳನ್ನು ರಾಜಕೀಯವಾಗಿ ನಿಭಾಯಿಸಬೇಕೆ ವಿನಃ ಕಾನೂನು ಮತ್ತು ಸುವ್ಯವಸ್ಥೆಯ ಸಮಸ್ಯೆಗಳೆಂಬಂತೆ ಅಲ್ಲ.
ಕೃಪೆ: Economic and Political Weekly, Oct 17, 2017. Vol. 52. No. 41
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ