ಸೋಮವಾರ, ಫೆಬ್ರವರಿ 27, 2017

ನಮ್ಮ ರಾಷ್ಟ್ರೀಯತೆ ಭಾರತೀಯ ಅಥವಾ ಹಿಂದೂ?


-ರಾಮ್ ಪುನಿಯಾನಿ


ram puniyani anti hindu ಗೆ ಚಿತ್ರದ ಫಲಿತಾಂಶಭಾರತವನ್ನು ಐತಿಹಾಸಿಕವಾಗಿ ಹಿಂದೂಸ್ಥಾನ ಎಂದು ಗುರುತಿಸಿರುವುದು ಒಂದು ಧರ್ಮದ ಸುತ್ತ ಅಲ್ಲ; ಬದಲಾಗಿ ಹಿಂದ್- ಹಿಂದೂ ಎಂಬ ಒಂದು ಭೌಗೋಳಿಕ ಪ್ರದೇಶದ ಸುತ್ತ. ಇಲ್ಲಿ ಗೊಂದಲಕ್ಕೆ ಮುಖ್ಯ ಕಾರಣವೆಂದರೆ, ಈ ಪದವನ್ನು ಮೊದಲು ಒಂದು ಪ್ರದೇಶಕ್ಕೆ ಸೀಮಿತವಾಗಿ ಬಳಸಿದರೆ, ಕಾಲಕ್ರಮದಲ್ಲಿ ಇದನ್ನು ಧಾರ್ಮಿಕ ಸಂಪ್ರದಾಯವಾಗಿ ಗುರುತಿಸಲಾಯಿತು. ಟಭಾರತದ ಸಂವಿಧಾನದಂತೆ ಅಥವಾ ಜಾಗತಿಕ ಮನ್ನಣೆಯಂತೆ ಇಂದು ಭಾರತ ಹಿಂದೂಸ್ಥಾನವಾಗಿ ಉಳಿದಿಲ್ಲ. ನಿಖರವಾಗಿ ಹೇಳಬೇಕೆಂದರೆ ಇಂಡಿಯಾ ಎಂದರೆ ಭಾರತ!

ಹಿಂದೂ, ಹಿಂದೂ ಸಿದ್ಧಾಂತ ಹಾಗೂ ಹಿಂದುತ್ವ ಸುತ್ತಲಿನ ಚರ್ಚೆ ಹೊಸದಲ್ಲ. ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕ ಮೋಹನ್ ಭಾಗವತ್ ಇತ್ತೀಚೆಗೆ, ಭಾರತದಲ್ಲಿ ನೆಲೆಸಿರುವ ಎಲ್ಲರೂ ಹಿಂದೂಗಳು ಎಂದು ವಿಶ್ಲೇಷಿಸಿದ್ದಾರೆ. ಮುಸ್ಲಿಮರು ಧರ್ಮದಿಂದ ಮುಸಲ್ಮಾನರಾಗಿರಬಹುದು. ಆದರೆ ರಾಷ್ಟ್ರೀಯತೆಯಿಂದ ಹಿಂದೂಗಳು ಎಂದು ಬಣ್ಣಿಸಿದ್ದಾರೆ. ಇದು ಹಿಂದೂ ಶಬ್ದದ ಬಗೆಗಿನ ಹೊಸ ವಿಶ್ಲೇಷಣೆ. ಇದು ಹಿಂದೂಸ್ಥಾನ. ಇಲ್ಲಿ ವಾಸಿಸುವ ಎಲ್ಲರೂ ಹಿಂದೂಗಳು ಎನ್ನುವುದು ಅವರ ಅಭಿಪ್ರಾಯ. ಹಿಂದೂ ಪದವನ್ನು ರಾಷ್ಟ್ರೀಯತೆಯ ಅರ್ಥದಲ್ಲಿ ಬಳಸುವುದು ಹಾಗೂ ಹಿಂದೂಸ್ಥಾನ ಎನ್ನುವ ಎರಡೂ ಪದಗಳನ್ನು ಪ್ರಸ್ತುತ ಸನ್ನಿವೇಶದಲ್ಲಿ ಭಾರತದ ಸಂವಿಧಾನದ ದೃಷ್ಟಿಕೋನದಿಂದ ಪರಿಶೀಲಿಸಬೇಕಾಗುತ್ತದೆ.

ಭಾಗವತ್ ಅಭಿಪ್ರಾಯದಂತೆ ಮುಸಲ್ಮಾನರ ಆರಾಧನಾ ವಿಧಾನ ಹಾಗೂ ನಂಬಿಕೆ ಬದಲಾಗಿರಬಹುದು. ಆದರೆ ಅವರ ರಾಷ್ಟ್ರೀಯತೆ ಹಿಂದೂ! ಸುಮಾರು ಎರಡು ದಶಕದಷ್ಟು ಹಿಂದೆ ಮುರಳಿ ಮನೋಹರ ಜೋಶಿ ಬಿಜೆಪಿ ಅಧ್ಯಕ್ಷರಾಗಿದ್ದಾಗ, ನಾವೆಲ್ಲರೂ ಹಿಂದೂಗಳು. ಮುಸ್ಲಿಮರು ಮುಹಮ್ಮದೀಯ ಹಿಂದೂಗಳು ಹಾಗೂ ಕ್ರಿಶ್ಚಿಯನ್ನರು ಕ್ರಿಸ್ಟಿ ಹಿಂದೂಗಳು ಎಂಬ ವ್ಯಾಖ್ಯಾನ ನೀಡಿದ್ದರು. ಈ ಹೇಳಿಕೆಗಳು ಇದೀಗ ಹೊಸ ಸ್ವರೂಪ ಪಡೆದಿದ್ದು, ಭಾರತವನ್ನು ಹಿಂದೂ ದೇಶ ಎಂದು ಪರಿಗಣಿಸುವ ಆರೆಸ್ಸೆಸ್ ಸಿದ್ಧಾಂತಕ್ಕೆ ಅನುಗುಣವಾಗಿದೆ. ಅವರ ಹಿಂದಿನ ಸಿದ್ಧಾಂತಗಳು ಈ ವಿಷಯದ ಬಗ್ಗೆ ಭಿನ್ನ ನಿಲುವು ಹೊಂದಿದ್ದವು.

ಅವರ ಹೊಸ ವರ್ಣನೆ ಹಿಂದೂಸ್ಥಾನ ಎಂಬ ಶಬ್ದದ ಬಗೆಗಿನ ಗೊಂದಲವನ್ನು ಆಧರಿಸಿದೆ. ಸರಳವಾಗಿ ಹೇಳಬೇಕೆಂದರೆ ಆರೆಸ್ಸೆಸ್ ಸಿದ್ಧಾಂತಿಗಳು ಭಾರತವನ್ನು ಹಿಂದೂಸ್ಥಾನ ಎಂದೂ, ಇಲ್ಲಿ ವಾಸಿಸುವ ಎಲ್ಲರನ್ನೂ ಹಿಂದೂಗಳು ಎಂದೂ ಪರಿಗಣಿಸುತ್ತಾರೆ. ಇದು ಸುತ್ತುಬಳಸುವ ವಾದ. ಹಲವು ಶಬ್ದಗಳ ಬಳಕೆ ಐತಿಹಾಸಿಕವಾಗಿ ಬದಲಾಗುತ್ತಿದ್ದು, ಪ್ರಸ್ತುತ ಸನ್ನಿವೇಶದಲ್ಲಿ ಹಿಂದೂಸ್ಥಾನ ಎಂಬ ಪದವನ್ನು ಮರುಪರಿಶೀಲಿಸಬೇಕಾದ ಅಗತ್ಯವಿದೆ. ಹಿಂದೂ ಎಂಬ ಪದ ಯಾವುದೇ ಪವಿತ್ರ ಹಿಂದೂ ಪುರಾಣಗಳಲ್ಲಿಲ್ಲ ಎನ್ನುವುದು ಸುಸ್ಪಷ್ಟ. ಪಶ್ಚಿಮ ಏಷ್ಯಾದಿಂದ ಬಂದವರು ರೂಪಿಸಿದ ಪದವೂ ಇದಲ್ಲ. ಈ ಭೂಭಾಗವನ್ನು ಅವರು ಸಿಂಧೂ ನದಿಯ ಹೆಸರಿನಲ್ಲಿ ಗುರುತಿಸಿದ್ದರು. ಅವರು ಸಾಮಾನ್ಯವಾಗಿ ಎಸ್ ಅಕ್ಷರದ ಬದಲು ಎಚ್ ಅಕ್ಷರವನ್ನು ಹೆಚ್ಚಾಗಿ ಬಳಸುತ್ತಾರೆ. ಆದ್ದರಿಂದ ಸಿಂಧೂ ಎನ್ನುವುದು ಹಿಂದೂ ಎಂದಾಗಿದೆ. ಆದ್ದರಿಂದ ಹಿಂದೂ ಎಂಬ ಪದ ಭೌಗೋಳಿಕ ವರ್ಗದಲ್ಲಿ ಬಳಕೆಯಾಗಿದೆ. ಇದರ ಸುತ್ತವೇ ನಿರ್ಮಿಸಲಾಗಿದೆ. ಹಿಂದೂಸ್ಥಾನ ಎಂಬ ಶಬ್ದ ಬಳಕೆಗೆ ಬಂದದ್ದು, ಸಿಂಧೂ ನದಿಯ ಪೂರ್ವದ ಭಾಗ ಎಂಬ ಅರ್ಥದಲ್ಲಿ.

ಈ ಭೂಭಾಗದಲ್ಲಿ ಹಲವು ಹಾಗೂ ವೈವಿಧ್ಯಮಯ ಧಾರ್ಮಿಕ ಆಚರಣೆಗಳು ರೂಢಿಯಲ್ಲಿದ್ದವು. ಇಸ್ಲಾಂ ಅಥವಾ ಕ್ರೈಸ್ತ ಧರ್ಮದಂತೆ ಹಿಂದೂಗಳಲ್ಲಿ ಪ್ರವಾದಿಗಳಿಲ್ಲ. ವಿಭಿನ್ನ ಸಂಪ್ರದಾಯಗಳು ಸ್ಥಳೀಯವಾಗಿಯೇ ಹುಟ್ಟಿಕೊಂಡಿವೆ. ಕಾಲಾಂತರದಲ್ಲಿ ಹಿಂದೂ ಎಂಬ ಪದವನ್ನು ಇಲ್ಲಿ ಬಳಕೆಯಲ್ಲಿದ್ದ ವೈವಿಧ್ಯಮಯ ಧಾರ್ಮಿಕ ಆಚರಣೆಗೆ ತದ್ರೂಪವಾಗಿ ಬಳಸಲು ಆರಂಭಿಸಲಾಯಿತು. ಈ ಸಂಪ್ರದಾಯಗಳನ್ನು ಒಟ್ಟಾಗಿ ಹಿಂದೂ ಸಿದ್ಧಾಂತ ಎಂದು ಪರಿಗಣಿಸಲಾಯಿತು. ಹಿಂದೂಸ್ಥಾನದ ಒಳಗೆಯೇ ಎರಡು ಪ್ರಮುಖ ಸಂಪ್ರದಾಯಗಳು ರೂಢಿಯಲ್ಲಿದ್ದವು. ಒಂದು ಪ್ರಬಲವಾದ ಬ್ರಾಹ್ಮಣ್ಯ ಸಂಪ್ರದಾಯ ಹಾಗೂ ಇನ್ನೊಂದು ನಾಥ, ತಂತ್ರ, ಭಕ್ತಿ, ಶೈವ ಹಾಗೂ ಸಿದ್ಧಾಂತ ಎಂಬ ವರ್ಗ. ಸಾಮ್ರಾಜ್ಯಶಾಹಿ ಆಡಳಿತದ ವೇಳೆ ಹಿಂದೂ ಸಿದ್ದಾಂತವನ್ನು ಬ್ರಾಹ್ಮಣ್ಯದ ಸಂಪ್ರದಾಯದ ಆಧಾರದಲ್ಲಿ ಗುರುತಿಸಲಾಯಿತು.

ಈ ಪ್ರದೇಶವನ್ನು ಐತಿಹಾಸಿಕವಾಗಿ ಹಿಂದೂಸ್ಥಾನ ಎಂದು ಗುರುತಿಸಿರುವುದು ಒಂದು ಧರ್ಮದ ಸುತ್ತ ಅಲ್ಲ; ಬದಲಾಗಿ ಹಿಂದ್- ಹಿಂದೂ ಎಂಬ ಒಂದು ಭೌಗೋಳಿಕ ಪ್ರದೇಶದ ಸುತ್ತ. ಇಲ್ಲಿ ಗೊಂದಲಕ್ಕೆ ಮುಖ್ಯ ಕಾರಣವೆಂದರೆ, ಈ ಪದವನ್ನು ಮೊದಲು ಒಂದು ಪ್ರದೇಶಕ್ಕೆ ಸೀಮಿತವಾಗಿ ಬಳಸಿದರೆ, ಕಾಲಕ್ರಮದಲ್ಲಿ ಇದನ್ನು ಧಾರ್ಮಿಕ ಸಂಪ್ರದಾಯವಾಗಿ ಗುರುತಿಸಲಾಯಿತು. ಆದರೆ ಇಂದು ಹಿಂದೂಸ್ಥಾನ ಎನ್ನುವುದು ಸಮರ್ಪಕವಾದ ಪದವಲ್ಲ. ಭಾರತದ ಸಂವಿಧಾನದಂತೆ ಅಥವಾ ಜಾಗತಿಕ ಮನ್ನಣೆಯಂತೆ ಇಂದು ಭಾರತ ಹಿಂದೂಸ್ಥಾನವಾಗಿ ಉಳಿದಿಲ್ಲ. ನಿಖರವಾಗಿ ಹೇಳಬೇಕೆಂದರೆ ಇಂಡಿಯಾ ಎಂದರೆ ಭಾರತ! ಇದನ್ನು ನಮ್ಮ ಸಂವಿಧಾನ ಕೂಡಾ ಸ್ಪಷ್ಟಪಡಿಸುತ್ತದೆ. ಆದ್ದರಿಂದ ನಮ್ಮ ರಾಷ್ಟ್ರೀಯತೆ ಭಾರತೀಯ ಎಂದಾಗುತ್ತದೆಯೇ ಅಥವಾ ಹಿಂದೂ ಎಂದಾಗುತ್ತದೆಯೇ? ಭಾರತವನ್ನು ರೂಪುಗೊಳಿಸುವಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಲು ಆರೆಸ್ಸೆಸ್ ನಿರಾಕರಿಸಿತ್ತು. ಅದು ಸ್ವಾತಂತ್ರ್ಯ ಚಳವಳಿಯಲ್ಲೂ ಪಾಲ್ಗೊಳ್ಳಲಿಲ್ಲ. ಆರೆಸ್ಸೆಸ್ ರಾಜಕೀಯ ಪ್ರವರ್ಧಮಾನಕ್ಕೆ ಬಂದದ್ದೇ ಭಾರತ ಎಂಬ ಪರಿಕಲ್ಪನೆಗೆ ವಿರುದ್ಧವಾಗಿ. ಭಾರತ ಎಂಬ ಪರಿಕಲ್ಪನೆಯನ್ನು ಪ್ರಚುರಪಡಿಸಿದವರು ಆಧುನಿಕ ಸಮಾಜದ ಮುಂಚೂಣಿಯಲ್ಲಿದ್ದವರು ಕೈಗಾರಿಕೋದ್ಯಮಿಗಳು, ಕಾರ್ಮಿಕರು ಹಾಗೂ ಆಧುನಿಕ ಭಾರತದ ಸುಶಿಕ್ಷಿತ ವರ್ಗದವರು. ಈ ಪರಿಕಲ್ಪನೆಯು ಮಹಿಳೆಯರು ಹಾಗೂ ದಲಿತರ ಆಶೋತ್ತರಗಳಿಗೆ ಪರ್ಯಾಯವಾಗಿತ್ತು ಹಾಗೂ ಅವುಗಳನ್ನು ಒಳಗೊಂಡಿತ್ತು. ಇಲ್ಲಿ ಮಹತ್ವದ ಅಂಶವೆಂದರೆ ಭಾರತ ಎಂದರೆ ವಿಮೋಚನೆ, ಸಮಾನತೆ ಹಾಗೂ ಭ್ರಾತೃತ್ವದ ಸಂಕೇತ. ಹಿಂದೂ ದೇಶ ಎನ್ನುವುದು ಆಧುನಿಕಪೂರ್ವ ಮೌಲ್ಯಗಳ ಸಂಕೇತ. ಭಾರತಕ್ಕೆ ತನ್ನದೇ ಆದ ಸಂವಿಧಾನವಿದ್ದು, ಅದು ಬಹುತ್ವ ಹಾಗೂ ವೈವಿಧ್ಯತೆಯನ್ನು ಗೌರವಿಸುತ್ತದೆ. ಆದರೆ ಹಿಂದೂ ದೇಶದ ಪರಿಕಲ್ಪನೆಯು ಕಾಲ್ಪನಿಕ ಗತವೈಭವದ ಸಂಕೇತವಾಗಿದ್ದು, ಪೂರ್ವಜನ್ಮದ ಕರ್ಮದ ಫಲವಾಗಿ ಜಾತಿ ಹಾಗೂ ಲಿಂಗದ ಶ್ರೇಣಿ ನಿರ್ಧಾರವಾಗುತ್ತದೆ ಎಂಬ ತತ್ವದ ಬಗ್ಗೆ ನಂಬಿಕೆ ಇಟ್ಟುಕೊಂಡಿದೆ. ಇಲ್ಲಿನ ಸಾಮಾಜಿಕ ಕಾನೂನುಗಳ ತಿರುಳು ಇಂಥ ಜಾತಿ ಹಾಗೂ ಲಿಂಗ ಭೇದ. ಈ ಕಾರಣಕ್ಕಾಗಿಯೇ ಆರೆಸ್ಸೆಸ್ ಸಿದ್ಧಾಂತಿಗಳಿಗೆ ಭಾರತದ ಸಂವಿಧಾನದ ಬಗ್ಗೆ ಅಸಮಾಧಾನ. ಆದ್ದರಿಂದಲೇ ಇಂದಿನ ಆಧುನಿಕ ಯುಗದಲ್ಲೂ ಮನುಸ್ಮತಿಯಂಥ ಪವಿತ್ರ ಗ್ರಂಥಗಳೇ ಮಾದರಿ ಸಂಹಿತೆ ಎಂದು ಪ್ರತಿಪಾದಿಸುತ್ತಾ ಬಂದಿದ್ದಾರೆ.

ಧಾರ್ಮಿಕ ಅಲ್ಪಸಂಖ್ಯಾತರಾದ ಮುಸ್ಲಿಂ ಮತ್ತು ಕ್ರಿಶ್ಚಿಯನ್ನರ ಕಥೆ ಏನು? ಹಿಂದುತ್ವ ಸಿದ್ದಾಂತ ಹುಟ್ಟುಹಾಕಿದ ವಿನಾಯಕ ದಾಮೋದರ ಸಾವರ್ಕರ್ ಅವರ ಪ್ರಕಾರ, ಸಿಂಧೂ ನದಿಯಿಂದ ಸಮುದ್ರದವರೆಗಿನ ಭೂಭಾಗದಲ್ಲಿ ವಾಸವಿರುವ ಈ ಭಾಗವನ್ನು ಪವಿತ್ರ ಭೂಮಿ ಎಂದು ನಂಬುವ ಜನಾಂಗ. ಹಿಂದೂ ಎಂಬ ಪದದ ಬಗೆಗಿನ ವ್ಯಾಖ್ಯೆಯಲ್ಲಿ, ಮುಸ್ಲಿಮರು ಹಾಗೂ ಕ್ರೈಸ್ತರನ್ನು ಹಿಂದೂಗಳೆಂದು ಕರೆದಿಲ್ಲ. ಅವರ ಪ್ರಕಾರ ಈ ಎರಡು ಜನಾಂಗ ವಿಭಿನ್ನ ರಾಷ್ಟ್ರೀಯತೆಯನ್ನು ಹೊಂದಿದೆ. ಎರಡನೆ ಪ್ರಮುಖ ಹಿಂದುತ್ವ ಪ್ರತಿಪಾದಕ ಗೋಳ್ವಾಲ್ಕರ್ ಕೂಡಾ ಇದನ್ನೇ ಪ್ರತಿಪಾದಿಸಿದ್ದಾರೆ. ತಮ್ಮ ಬಂಚ್ ಆಫ್ ಥಾಟ್ಸ್ ಎಂಬ ಕೃತಿಯಲ್ಲಿ ಅವರು, ಮುಸ್ಲಿಂ ಹಾಗೂ ಕ್ರೈಸ್ತರನ್ನು ಹಿಂದೂ ದೇಶಕ್ಕೆ ಅಪಾಯ ಎಂದು ಬಣ್ಣಿಸಿದ್ದಾರೆ. ಆ ಬಳಿಕ ಆರೆಸ್ಸೆಸ್ ರಾಜಕೀಯ ಬಲ ಪಡೆದುಕೊಂಡು, ಧಾರ್ಮಿಕ ಅಲ್ಪಸಂಖ್ಯಾತರನ್ನು ಹತ್ತಿಕ್ಕಲು ಹಾಗೂ ಹಿಂದೂ ಸಂಪ್ರದಾಯಗಳನ್ನು ಅಲ್ಪಸಂಖ್ಯಾತ ಸಮುದಾಯದ ಮೇಲೆ ಹೇರಲು ಯತ್ನಿಸುತ್ತಿದೆ. ಈ ಕಾರಣದಿಂದ ಅವರ ರಾಷ್ಟ್ರೀಯತೆ ಹಿಂದೂ ಎಂದು ಸಾಬೀತುಪಡಿಸಲು ಹೊರಟಿದೆ. ಭಾರತದ ಸಂವಿಧಾನದ ಪ್ರಕಾರ ನಮ್ಮ ರಾಷ್ಟ್ರೀಯತೆ ಭಾರತೀಯ ಎನ್ನುವುದು. ಆದ್ದರಿಂದ ಆರೆಸ್ಸೆಸ್ ಸಿದ್ಧಾಂತ ಹಾಗೂ ಗಾಂಧಿ, ನೆಹರೂ, ಅಂಬೇಡ್ಕರ್ ಅವರ ಸಿದ್ಧಾಂತ ಭಿನ್ನ. ಇವರೆಲ್ಲರೂ ಭಾರತೀಯ ಎಂಬ ರಾಷ್ಟ್ರೀಯತೆಯ ಪರವಾಗಿ ನಿಂತವರು. ಭಾರತೀಯ ಸಂವಿಧಾನವು ವಿಮೋಚನೆಯ ಸಂಕೇತವಾದ ನ್ಯಾಯ ಹಾಗೂ ಸಮಾನತೆಯನ್ನು ಹೊಂದಿದ್ದು, ಇದು ಹಿಂದೂಗಳ ಪವಿತ್ರ ಗ್ರಂಥ ಎನಿಸಿಕೊಂಡಿರುವ ಮನುಸ್ಮತಿಯಲ್ಲಿ ಅಂತರ್ಗತವಾಗಿರುವ ಅಸಮಾನತೆಯ ತತ್ವಕ್ಕೆ ವಿರುದ್ಧವಾದದ್ದು.

ಆದ್ದರಿಂದ ಮುಸ್ಲಿಮರು ಕೇವಲ ತಮ್ಮ ಆರಾಧನಾ ವಿಧಾನವನ್ನಷ್ಟೇ ಬದಲಿಸಿಕೊಂಡಿದ್ದಾರೆ ಎಂದು ಹೇಳುವ ಮೂಲಕ, ಅವರನ್ನು ಹಿಂದುತ್ವದ ತೆಕ್ಕೆಗೆ ಸೇರಿಸಿಕೊಳ್ಳುವ ಉದ್ದೇಶಪೂರ್ವಕ ಹುನ್ನಾರ ಇದಾಗಿದೆ. ಇಸ್ಲಾಂ ಧರ್ಮವನ್ನು ಸ್ವೀಕರಿಸುವುದು ಎಂದರೆ ಕೇವಲ ಪೂಜಾ ವಿಧಾನದ ಬದಲಾವಣೆಯಷ್ಟೇ ಅಲ್ಲ; ಇದು ವಿಭಿನ್ನ ಧರ್ಮದಲ್ಲಿ ಇರಿಸುವ ನಂಬಿಕೆ. ಇದು ಕ್ರೈಸ್ತಧರ್ಮಕ್ಕೂ ಅನ್ವಯವಾಗುತ್ತದೆ. ಆದ್ದರಿಂದ ಮುಸ್ಲಿಮರಿಗೆ ಇಸ್ಲಾಂ ಇದೆ; ಕ್ರಿಶ್ಚಿಯನ್ನರಿಗೆ ಕ್ರೈಸ್ತಧರ್ಮವಿದೆ. ಹಿಂದೂಗಳಿಗೆ ಹಿಂದೂ ಧರ್ಮ ಇದೆ. ಇವರೆಲ್ಲರ ರಾಷ್ಟ್ರೀಯತೆ ಭಾರತೀಯ ಎಂದಾಗುತ್ತದೆಯೇ ವಿನಃ ಹಿಂದೂ ಎಂದಲ್ಲ. ಮುಸ್ಲಿಮರು ಕೂಡಾ ಮಂತ್ರ ಹೇಳುತ್ತಾ ಭಾರತ ಮಾತಾ ಕೀ ಜೈ ಎಂದು ಘೋಷಿಸಬೇಕು ಎಂದು ನಿರೀಕ್ಷಿಸುವುದು ಸಂವಿಧಾನ ಬದ್ಧ ಕ್ರಮವಲ್ಲ. ಆರತಿ ಮಾಡುವುದು ಹಿಂದೂ ಸಂಪ್ರದಾಯ. ಇತರ ಧರ್ಮದವರು ಮತ್ತೊಂದು ಧರ್ಮದ ಪವಿತ್ರ ಆಚರಣೆಯನ್ನು ಅಳವಡಿಸಿಕೊಳ್ಳುವುದು ಅವರ ಆಯ್ಕೆಯ ವಿಚಾರ. ಅದು ಆರತಿ ಬೆಳಗುವುದು ಇರಬಹುದು; ಮಸೀದಿಯಲ್ಲಿ ನಮಾಝ್ ಮಾಡುವುದು ಇಲ್ಲವೇ ಚರ್ಚ್ನಲ್ಲಿ ಪ್ರಾರ್ಥನೆ ಮಾಡುವುದು ಇರಬಹುದು. ಆದರೆ ಅದನ್ನು ಇತರರು ಮಾಡಲೇಬೇಕು ಎಂದು ನಿರೀಕ್ಷಿಸುವುದು ಪ್ರಜಾಪ್ರಭುತ್ವ ವಿರೋಧಿ ಹಾಗೂ ಭಾರತೀಯ ಸಂವಿಧಾನದ ರೂಢಿಗಳಿಗೆ ವಿರುದ್ಧವಾದದ್ದು. ಬಹಳಷ್ಟು ಮಂದಿ ಮುಸ್ಲಿಮರು ಅಲ್ಲಾಹನಿಗಲ್ಲದೇ ಯಾರಿಗೂ ತಲೆಬಾಗುವುದಿಲ್ಲ ಎಂಬ ನಂಬಿಕೆ ಹೊಂದಿದ್ದಾರೆ. ಆದ್ದರಿಂದ ಬಹಳಷ್ಟು ಮಂದಿ ಭಾರತ್ ಮಾತಾ ಕೀ ಜೈ ಎಂಬ ಘೋಷಣೆಗೆ ವಿರೋಧಿಸಬಹುದು. ಅವರು ಹಾಗೇ ಇರಲಿ. ಅದು ಭಾರತೀಯ ಸಂವಿಧಾನದ ಮೌಲ್ಯಗಳಿಗೆ ಅನುಗುಣವಾಗಿಯೇ ಇದೆ.

ಸೌಜನ್ಯ : ವಾಭಾ ೨೭.೨.೨೦೧೭


ಕಾಮೆಂಟ್‌ಗಳಿಲ್ಲ: